Thursday, 16 October 2025

ಕಿಟಿಕಿಯಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದ ಕಾಲದ ಕಥಾನಕ

ಇದು ನಮ್ಮ ಊರಿನ ಹಳೆ ಮನೆಯ ಒಳಗಿನ ಹಜಾರದ ಚಿತ್ರ. ಚಿತ್ಪಾವನಿಯಲ್ಲಿ ಇದನ್ನು ಆಂತ್ಲಿ ಮಾಳಿ ಅನ್ನುವುದು. ನಾನು ಚಿಕ್ಕವನಾಗಿದ್ದಾಗ ಅಲ್ಲಿಯ ಕಿಟಿಕಿಯಲ್ಲಿ ಕುಳಿತು ಕಾಫಿ ಕುಡಿಯುತ್ತಿರುವುದನ್ನು ಈ AI ಚಿತ್ರದಲ್ಲಿ ನೋಡುತ್ತಿದ್ದೀರಿ. ಕಿಟಿಕಿಯಲ್ಲಿ ಕುಳಿತು? ಹೌದು, ಸರಿಯಾಗಿಯೇ ಓದಿದ್ದೀರಿ. ಒಂದು ಗಜ ದಪ್ಪದ ಮಣ್ಣಿನ ಗೋಡೆಯ ಮನೆಗಳ ಕಿಟಿಕಿಗಳು ಹೀಗೆಯೇ ಇರುತ್ತಿದ್ದುದು. ಅದರಲ್ಲಿ ಕುಳಿತು ಕಾಫಿ ಕುಡಿಯುವುದೇನು, ಒಂದು ಸಣ್ಣ ಎಲೆ ಹಾಕಿ ಊಟ ಮಾಡುವಷ್ಟು ಅಗಲದ ಜಾಗ ಇರುತ್ತಿತ್ತು. 1967ರಲ್ಲಿ ಆ ಮನೆಗೆ ವಿದ್ಯುತ್ತಿನ ವಯರಿಂಗ್ ಮಾಡುವಾಗ ಗೋಡೆಗೆ ತೂತು ಕೊರೆಯುವ ಪೈಪಿನ ಉದ್ದ ಸಾಕಾಗದೆ ಅರ್ಧ ಈ ಕಡೆಯಿಂದ , ಅರ್ಧ ಆ ಕಡೆಯಿಂದ ಕೊರೆಯಬೇಕಾಗಿ ಬಂದಿತ್ತು!
ಊಟದ ಮನೆಯೂ ಆಗಿದ್ದ ಇಲ್ಲಿ ಈ ಕಿಟಿಕಿಯ ಬುಡ ನಾನು ಊಟಕ್ಕೆ ಕುಳಿತುಕೊಳ್ಳುವ ಶಾಶ್ವತ ಜಾಗ ಆಗಿತ್ತು. ಆಗ ಚಿಕ್ಕವರು ಮಣೆಯ ಮೇಲೆ ಕೂತು ಉಣ್ಣುವ ಪರಿಪಾಠ ಇಲ್ಲದಿದ್ದರೂ ನನಗೆ ನಿತ್ಯವೂ ಮಣೆ ಬೇಕೇ ಬೇಕಿತ್ತು. ಕಿಟಿಕಿ ಬದಿಯ ಸಾಲಿನಲ್ಲಿ ಚಿಕ್ಕ ಮಕ್ಕಳು, ಎದುರುಗಡೆ ಸಾಲಿನಲ್ಲಿ ತಂದೆಯವರು, ಅಣ್ಣಂದಿರು ಕುಳಿತುಕೊಳ್ಳುತ್ತಿದ್ದರು. ಎಲ್ಲರಿಗೂ ಅವರವರ ನಿಶ್ಚಿತ ಜಾಗಗಳಿದ್ದವು.

ದೇವರ ಕೋಣೆಯೂ ಇದೇ ಆಗಿತ್ತು. ಎಡ ಮೂಲೆಯಲ್ಲಿ ಕಾಣಿಸುವ ಕಪ್ಪು ಬಣ್ಣದ ಕಪಾಟಿನ ಒಳಗೆ ದೇವರ ಮಂಟಪ. ಕೆಂಪು ಬಣ್ಣದ ಚೌಕಾಕಾರದ ಸಿಮೆಂಟೇ ದೇವರ ಕೋಣೆಯನ್ನು ಬೇರ್ಪಡಿಸುವ demarcation. ದೇವರ ಮಂಟಪದ ಮೇಲ್ಭಾಗದಲ್ಲೂ ಕಪಾಟು ಇತ್ತು. ಕೆಳಗೆ ಶಾಶ್ವತವಾಗಿ ನಂದಾದೀಪ ಉರಿಯುತ್ತಿದ್ದುದರಿಂದ ಅದರೊಳಗೆ ಇಟ್ಟಿರುವ ವಸ್ತುಗಳೆಲ್ಲ ಬೂಸ್ಟು ಹಿಡಿಯದೆ ಬೆಚ್ಚಗಾಗಿ ಇರುತ್ತಿದ್ದವು.

ನಮ್ಮಲ್ಲಿ ನಿತ್ಯ ನಡೆಯುತ್ತಿದ್ದ ಷೋಡಶೋಪಚಾರ ಪೂಜೆಯ ಜೊತೆಗೆ ಸೋಮವಾರಗಳಂದು ರುದ್ರಾಭಿಷೇಕವೂ ಇರುತ್ತಿತ್ತು. ಪೂಜೆಯ ಕೊನೆಯಲ್ಲಿ ನೈವೇದ್ಯದ ಸಮಯ ಊದುಬತ್ತಿ, ಕರ್ಪೂರಗಳ ಸುವಾಸನೆ, ಬಿಸಿ ಬಿಸಿ ಅನ್ನದ ಹಬೆ, ಅಡುಗೆಮನೆಯಿಂದ ಬರುವ ಒಗ್ಗರಣೆಯ ಘಮ ಇವೆಲ್ಲ ಸೇರಿ ಒಂದು ದೈವಿಕ ವಾತಾವರಣ ಸೃಷ್ಟಿಯಾಗುತ್ತಿತ್ತು.

ಪ್ರತೀ ಶುಕ್ರವಾರ ರಾತ್ರಿ ಲಕ್ಷ್ಮೀನಾರಾಯಣ ಹೃದಯ ಗ್ರಂಥದ ಪಾರಾಯಣ ಇರುತ್ತಿತ್ತು. ಅದರಲ್ಲಿ ಬರುವ ಫಟು ಕುರು ಕುರು ಸ್ವಾಹಾ ಎಂಬ ಸಾಲುಗಳು ನಮಗೆಲ್ಲರಿಗೂ ಕಂಠಪಾಠವಾಗಿದ್ದವು! ಆ ಪುಸ್ತಕದಲ್ಲಿ ದೇವಿಯು ಚಂಡ ಮುಂಡರನ್ನು ವಧಿಸುವ ಸುಂದರವಾದ ವರ್ಣ ಚಿತ್ರವೊಂದಿತ್ತು. ಅದನ್ನು ತೋರಿಸುವಂತೆ ನಾವು ತಂದೆಯವರನ್ನು ಕೇಳುವುದಿತ್ತು. ಪಾರಾಯಣದ ಒಂದು ಹಂತದಲ್ಲಿ ಚಿಟಿಕೆಯಷ್ಟು ಮಂತ್ರಿಸಿದ ಭಸ್ಮವನ್ನು ತಂದೆಯವರು ನಮ್ಮ ಬಾಯಿಗೆ ಹಾಕುತ್ತಿದ್ದರು. ಶುಕ್ರವಾರದ ಪಾರಾಯಣ, ಚೌತಿ, ನವರಾತ್ರಿ ಮತ್ತು ನವಾನ್ನ ಪೂಜೆಯ ದಿನ ಮಾತ್ರ ಮಂಗಳಾರತಿಯ ಸಮಯ ಜಾಗಟೆ ಬಾರಿಸುವುದು ನಮ್ಮಲ್ಲಿದ್ದ ಅಲಿಖಿತ ನಿಯಮ.

ಚೌತಿಯ ಗಣೇಶ ಹೊರಗಿನ ಹಜಾರದಲ್ಲಿ ಪೂಜಿಸಲ್ಪಡುತ್ತಿದ್ದರೂ ಸಣ್ಣ ಮಂಟಪವೊಂದರಲ್ಲಿ ಹರತಾಳಿಕಾ ಗೌರಿ ಪೂಜೆ ಇಲ್ಲೇ ನಡೆಯುತ್ತಿತ್ತು. ನವರಾತ್ರಿ ಪೂಜೆ ನಿತ್ಯದ ದೇವರ ಮಂಟಪದಲ್ಲೇ ನಡೆಯುತ್ತಿದ್ದುದು. ಆಗ ನೀಲಿ ನಾಮದ ಗೋರಟೆ, ಹಳದಿ ಮೈಸೂರು ಗೋರಟೆ ಮತ್ತು ಕೆಂಪು ಕೇಪುಳ ಹೂಗಳ ಮಾಲೆಗಳಿಂದ ಮಂಟಪವನ್ನು ಅಲಂಕರಿಸಲಾಗುತ್ತಿತ್ತು. ಮರದ ತುಂಡೊಂದನ್ನು ಕೆತ್ತಿ ಒಂದು ಬ್ಯಾಟರಿ ಬಾಕ್ಸು ಮತ್ತು ಗೆರಟೆ ಹಾಗೂ ಒಂದು ಹಳೆಯ ಸ್ಪ್ರಿಂಗ್ ಉಪಯೋಗಿಸಿ ಒಂದು ಟಾಗಲ್ ಸ್ವಿಚ್ಚು ತಯಾರಿಸಿ ನವರಾತ್ರಿ ಪೂಜೆಯ ಹೊತ್ತಲ್ಲಿ ದೇವರ ಮೇಲೆ ಬಲ್ಬಿನ ಬೆಳಕು ಬೀಳುವ ವ್ಯವಸ್ಥೆ ನಮ್ಮಣ್ಣ ಮಾಡಿದ್ದರು. ಅದಕ್ಕೆ ರೇಡಿಯೋದ ನಿರುಪಯೋಗಿ ಬ್ಯಾಟರಿಯನ್ನು ಒಡೆದು ಅದರೊಳಗೆ ಇರುವ ಸೆಲ್ಲುಗಳನ್ನು ಅವರು ಉಪಯೋಗಿಸುತ್ತಿದ್ದರು.

ನವರಾತ್ರಿಯಲ್ಲಿ ಸಪ್ತಶತಿ ಪಾರಾಯಣ ನಡೆಯುತ್ತಿದ್ದುದು ಕಿಟಿಕಿಯಿಂದ ಸ್ವಲ್ಪ ಈಚೆಗೆ. ಪೂಜೆಮಾಡುವವರನ್ನುಳಿದು ಉಳಿದವರು ನಿತ್ಯ ಸಂಧ್ಯಾವಂದನೆ ಮಾಡುವ ಜಾಗವೂ ಅದೇ ಆಗಿತ್ತು. ಸಂಧ್ಯಾವಂದನೆಗೆ ಮೊದಲು ಹಗಲಿನಲ್ಲಿ ಗಂಧ, ರಾತ್ರೆ ಭಸ್ಮ ಧರಿಸುವ ಸಂಪ್ರದಾಯ ನಮ್ಮಲ್ಲಿತ್ತು.

ಬಾಣಂತಿಯರು ಶುದ್ಧ ಆದ ದಿನ ದೇವರೆದುರು ಕೂತು ಮನೆಯ ಸಣ್ಣ ಮಕ್ಕಳೆಲ್ಲರ ತಲೆಗೆ ಎಣ್ಣೆ ಹಚ್ಚಿ, ತುಪ್ಪದಲ್ಲಿ ಕಲಸಿದ ಶುಂಠಿಬೆಲ್ಲ ತಿನ್ನಲು ಕೊಡುವ ಕ್ರಮ ಇತ್ತು. ದೀಪಾವಳಿ ಸಮಯದಲ್ಲಿ ತೈಲಾಭ್ಯಂಗದ ದಿನ ಸ್ನಾನಾರಂಭಕ್ಕೆ ಮೊದಲು ಮನೆಯ ಕಿರಿಯ ಬಾಲಕನು ದೇವರೆದುರು ಭೂಮಿಯ ಮೇಲೆ ಎಣ್ಣೆಯ ಬೊಟ್ಟುಗಳನ್ನು ಇಟ್ಟು ಅರಸಿನ ಕುಂಕುಮ, ಹೂಗಳನ್ನು ಏರಿಸಿ ಭೂಮಿ ಪೂಜೆ ಮಾಡುವ ಪದ್ಧತಿ ಇತ್ತು. ನಾನು ಕಿಶೋರನಾಗಿರುವಷ್ಟು ಸಮಯ ಈ ಅವಕಾಶ ನನ್ನ ಪಾಲಿಗೆ ಬರುತ್ತಿತ್ತು.

ದೇವರ ಮಂಟಪದ ಪಕ್ಕದಲ್ಲಿ ಬಲಬದಿಗೆ ಕುಡಿಯುವ ನೀರನ್ನು ತುಂಬಿಡುವ ರಾಂಧಣಿ ಎನ್ನುವ ಮಣ್ಣಿನ ದೊಡ್ಡ ಪಾತ್ರೆ ಇಡುವ ಜಾಗ. ಅದರ ಮೇಲ್ಗಡೆ ತಾಯಿಯವರು ಮಾಡುತ್ತಿದ್ದ ಕೆಲವು ವಿಶೇಷ ಪೂಜೆಗಳಿಗಾಗಿ ಒಂದು ಸಣ್ಣ ದೇವರ ಗೂಡು. ಅದರಿಂದಾಚೆ ಅಡುಗೆ ಮನೆಗೆ ಹೋಗುವ ಬಾಗಿಲು.

ಅಡುಗೆ ಮನೆಯ ಬಾಗಿಲ ಬಲಬದಿಯಲ್ಲೊಂದು ಸಣ್ಣ ಕಂಬ ನೆಟ್ಟದ್ದು ಕಾಣಿಸುತ್ತಿದೆಯಲ್ಲವೇ? ಚಿತ್ಪಾವನಿಯಲ್ಲಿ ಇದರ ಹೆಸರು ತಾಕ್ಕಮೀಠಿ. ಇದಕ್ಕೆ ಕಡಗೋಲು ಕಟ್ಟಿಯೇ ರಂಗನಾಯಕ ರಾಜೀವ ಲೋಚನ ಎಂದು ಹಾಡುತ್ತಾ ಮನೆಯ ಮಹಿಳೆಯರು ಭರಣಿಯಲ್ಲಿ ಮಜ್ಜಿಗೆ ಕಡೆಯುತ್ತಿದ್ದುದು. ಚಿಕ್ಕ ಮಕ್ಕಳ ತಿಂಗಳ ಹುಟ್ಟುಹಬ್ಬಗಳ ಆಚರಣೆ ಇದರ ಎದುರೇ ನಡೆಯುತ್ತಿದ್ದುದು. ಅದರ ಮೇಲ್ಗಡೆ ಕಾಣಿಸುತ್ತಿರುವ ಸಣ್ಣ ಗೂಡು, ಒಳಗಡೆ ಕನ್ನಡಿ ಅಳವಡಿಸಿದ ಅರಸಿನ ಕುಂಕುಮದ ಪೆಟ್ಟಿಗೆ ಇಡುವ ಜಾಗ.

ಈ ಫೋಟೊದಲ್ಲಿ ಕಾಣಿಸುವ ಭಾಗಕ್ಕಿಂತ ಸ್ವಲ್ಪ ಹಿಂದೆ ಗೋಡೆ ಬದಿಯಲ್ಲಿ ಹೆಚ್ಚುವರಿಯಾಗಿ ನಿಲ್ಲಿಸಿದ ಕಂಬವೊಂದು ಇತ್ತು. ಚಿಕ್ಕ ಮಕ್ಕಳು ಕಂಬ ಮತ್ತು ಗೋಡೆಯ ನಡುವಿನ ಸಂದಿಯಲ್ಲಿ ನುಸಿಯುವ ಆಟ ಆಡುವುದಿತ್ತು. ಆ ಕಂಬಕ್ಕೆ ಸ್ವಲ್ಪ ಬೆಣ್ಣೆಯನ್ನು ಮೆತ್ತಿಟ್ಟು ನೀರೆಲ್ಲ ಇಳಿದ ಮೇಲೆ ಅದರಲ್ಲಿ ಸಾಲಿಸಿಲಿಕ್ ಎಸಿಡ್ ಬೆರೆಸಿ ಫಂಗಸ್‌ನಿಂದ ಉಂಟಾಗುವ ಸಿಬ್ಬದಂಥ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತಿತ್ತು.

ಇನ್ನೂ ಹಿಂದಕ್ಕೆ ಹೋದರೆ ವೇದಮಂತ್ರಗಳ ಅಮೂಲ್ಯ ಗ್ರಂಥಗಳನ್ನು ಇಡುವ ಮರದ ಕಪಾಟು ಇತ್ತು. ಆಗಿನ ಗ್ರಂಥಗಳೆಂದರೆ ಹೊಲಿಗೆ ಹಾಕಿ ಬೈಂಡ್ ಮಾಡಿದ ಪುಸ್ತಕಗಳಲ್ಲ. ಬಿಡಿ ಹಾಳೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಮೇಲೊಂದು ಕೆಳಗೊಂದು ಹಾಳೆಗಳ ಆಕಾರದ್ದೇ ಮರದ ತೆಳ್ಳಗಿನ ಹಲಗೆಗಳನ್ನಿಟ್ಟು ನಾರು ಬಟ್ಟೆಯಿಂದ ಗಟ್ಟಿಯಾಗಿ ಸುತ್ತಿ ಹಗ್ಗದಿಂದ ಬಿಗಿದ ವೇಷ್ಟಣಗಳು ಅವು. ಪುಸ್ತಕದ ಹುಳಗಳು ಬರದಂತೆ ಹಾವಿನ ಪೊರೆಯನ್ನು ಪುಟಗಳ ಮಧ್ಯೆ ಇರಿಸುವ ಕ್ರಮ ಇತ್ತು.

ಈ ಕಪಾಟಿನ ಪಕ್ಕದಲ್ಲೇ ಪ್ರತಿಸಾಂವತ್ಸರಿಕ ಶ್ರಾದ್ಧ, ಮಹಾಲಯಗಳು ನಡೆಯುತ್ತಿದ್ದುದು.

ಇನ್ನೂ ಹಿಂದೆ ಹೋದರೆ ಪಾತ್ರೆಗಳ ಕೋಣೆಗೆ ಹೋಗುವ ಬಾಗಿಲು. ಹೆಸರೇ ಸೂಚಿಸುವಂತೆ ದಿನನಿತ್ಯದ ಅಗತ್ಯಕ್ಕೆ ಬೇಕಾಗದ ಪಾತ್ರೆಗಳನ್ನಿರಿಸುವ ಕೋಣೆ ಇದು. ತಂದೆಯವರು ವೀಳ್ಯಕ್ಕೆ ಉಪಯೋಗಿಸುತ್ತಿದ್ದ ಹೊಗೆಸೊಪ್ಪನ್ನು ಶೇಖರಿಸಿಡುವ ಭರಣಿ ಈ ಕೋಣೆಯಲ್ಲೇ ಇರುತ್ತಿದ್ದುದು. ಈ ಕೋಣೆಯಲ್ಲಿರುತ್ತಿದ್ದ ಮರದ ಪೆಟ್ಟಿಗೆಯೊಂದು ಚೌತಿಯ ಗಣಪನನ್ನು ಮಂಟಪದ ಹಿಂದೆ ಎತ್ತರದಲ್ಲಿ ಕೂರಿಸುವ ಪೀಠವಾಗಿ ಉಪಯೋಗಿಸಲ್ಪಡುತ್ತಿತ್ತು. ಬಾಹೆರ್ಲಿ ಮಾಳಿ ಈಗ ಆಂತ್ಲಿಮಾಳಿಯಿಂದ ಒಂದು ಬಾಗಿಲು ದಾಟಿ ಬಾಹೆರ್ಲಿಮಾಳಿಗೆ (ಹೊರಹಜಾರಕ್ಕೆ) ಬರೋಣ.

ಚಿತ್ರದಲ್ಲಿ ಕಾಣುತ್ತಿರುವುದು 1950ರ ದಶಕದಲ್ಲಿದ್ದ ಆ ಭಾಗದ ರೂಪ. ಅಲ್ಲಿರುವ ಬೃಹದಾಕಾರದ ಕಡೆಯುವ ಕಲ್ಲಿನಲ್ಲಿ ನಮ್ಮ ತಾಯಿಯವರು ದೀಪಾವಳಿಗೆ ದೋಸೆ ಹಿಟ್ಟು ರುಬ್ಬುತ್ತಿರುವ ದೃಶ್ಯ AIಯ ಸೃಷ್ಟಿ. ಇದೇನಿದು ದೀಪಾವಳಿಗೆ ದೋಸೆಹಿಟ್ಟು ಎಂದು ಕೆಲವರಿಗೆ ಅನುಮಾನ ಮೂಡಬಹುದು. ದಕ್ಷಿಣ ಕನ್ನಡದಲ್ಲಿ ದೀಪಾವಳಿ ಎಂದರೆ ದೋಸೆ ಹಬ್ಬವೇ. ನಮ್ಮ ಕರಾವಳಿ ಭಾಗದಲ್ಲಿ ದೀಪಾವಳಿಯಂದು ದೋಸೆ ಮಾಡುವ ಸಂಪ್ರದಾಯ ಬಲು ಹಿಂದಿನಿಂದಲೂ ಇದೆ. ದೀಪಾವಳಿಯ ಮುನ್ನಾ ದಿನ ಪ್ರತಿ ಮನೆಯಲ್ಲಿ ದೊಡ್ಡ ಹಂಡೆಯಲ್ಲಿ ಮೂರು ದಿನಕ್ಕೆ ಸಾಕಾಗುವಷ್ಟು ದೋಸೆಹಿಟ್ಟು ರುಬ್ಬಿಟ್ಟುಕೊಳ್ಳಲಾಗುತ್ತಿತ್ತು. ಹಬ್ಬದ ವಿಶೇಷವಾಗಿ ಅದಕ್ಕೆ ಸ್ವಲ್ಪ ಅರಸಿನವನ್ನೂ ಬೆರೆಸಲಾಗುತ್ತಿತ್ತು. ನರಕ ಚತುರ್ದಶಿಯಂದು ಬೆಳಗಿನ ಜಾವ ಎಲ್ಲರ ತೈಲಾಭ್ಯಂಗದ ನಂತರ ಬಾಳೆಹಣ್ಣಿನ ಸೀಕರಣೆಯ ಜೊತೆ ದೋಸೆ ಮತ್ತು ನೈವೇದ್ಯದ ಸಿಹಿ ಅವಲಕ್ಕಿ ಮೆಲ್ಲುವ ಕಾರ್ಯಕ್ರಮ. ಹಿರಿಯರು ಅಂದು ಮಧ್ಯಾಹ್ನ ಎಂದಿನಂತೆ ಅನ್ನ ಉಣ್ಣುತ್ತಿದ್ದರೂ ನಾನೂ ಸೇರಿದಂತೆ ಕಿರಿಯರೆಲ್ಲರಿಗೆ ಆ ದಿನ ಮೂರು ಹೊತ್ತೂ ದೋಸೆಯೇ! ಮುಂದಿನ ಮೂರು ದಿನವೂ ಬೆಳಗ್ಗೆಗೆ ದೋಸೆ. ದಿನದಿಂದ ದಿನಕ್ಕೆ ಹುಳಿ ಹೆಚ್ಚಾಗುತ್ತಾ ಹೋಗುತ್ತಿದ್ದ ಹಿಟ್ಟಿಗೆ ಕೊನೆಯ ದಿನ ಹಸಿ ಮೆಣಸು ಕೊಚ್ಚಿ ಹಾಕಿ ಮಾಡಿದ ದೋಸೆಗೆ ಅದ್ಭುತ ರುಚಿ. ಆಗ ನಮ್ಮಲ್ಲಿ ದೋಸೆಗೆ ಜೊತೆಯಾಗಿ ಚಟ್ಣಿ ಬಳಸುವ ಪರಿಪಾಠ ಇರಲಿಲ್ಲ. ಮನೆಯಲ್ಲಿ ಯಥೇಚ್ಛ ಜೇನುತುಪ್ಪ ಇರುತ್ತಿದ್ದುದರಿಂದ ಅದನ್ನೇ ತುಪ್ಪದ ಜೊತೆ ಬೆರೆಸಿ ಬಳಸುತ್ತಿದ್ದುದು. ಗೋಪೂಜೆಯ ದಿನ ದನಕರುಗಳಿಗೂ ಎರಡೆರಡು ದೋಸೆ ತಿನ್ನುವ ಭಾಗ್ಯ. ಪೂಜೆ ಇಲ್ಲದಿದ್ದರೂ ಎಮ್ಮೆಗಳಿಗೂ ದೋಸೆ ಸಿಗುತ್ತಿತ್ತು.

ನಾನು ಒಂದನೆಯ ಅಥವಾ ಎರಡನೆ ಕ್ಲಾಸಿನಲ್ಲಿ ಇರುವಾಗ ಕಡೆಯುವ ಕಲ್ಲು ಇದ್ದ ಜಾಗದಲ್ಲಿ ಹೊರಗಿನ ‘ಹೊಸ ಜಗಲಿ’ಗೆ ಹೋಗುವ ಬಾಗಿಲು ಬಂತು. ಕಡೆಯುವ ಕಲ್ಲು ಹೊಸ ಜಗಲಿಗೆ ಸ್ಥಳಾಂತರಗೊಂಡಿತು. ಆಣ್ಣಿ ಆಚಾರಿ ಹೊಸ ಜಗಲಿಗೆ ಮರದ ದಳಿ ಮತ್ತು ಇಲ್ಲಿ ಬಾಗಿಲು ಕೂರಿಸಿದ್ದು ನನಗೂ ನೆನಪಿದೆ. ಈ ಬಾಗಿಲಿನ ಒಳಬದಿಯ ಚಿಲಕಕ್ಕೆ ಆತ ರಹಸ್ಯ ಜಾಗದಲ್ಲಿ ಕಳ್ಳ ಕೀಲು ರಚಿಸಿ ಕೊಟ್ಟಿದ್ದ. ಮರದ ಬಾಗಿಲುಗಳಿಗೆ ಸಾಮಾನ್ಯವಾಗಿ ವಿರುದ್ಧ ದಿಕ್ಕಿಗೆ ಚಲಿಸುವ ಎರಡು ಚಿಲಕಗಳು ಇರುವುದು ವಾಡಿಕೆ. ಬಾಗಿಲು ಭದ್ರಪಡಿಸುವಾಗ ಒಂದೇ ಚಿಲಕ ಹಾಕಬೇಕೆಂದು ಅಣ್ಣಿ ಆಚಾರಿ ಹೇಳುತ್ತಿದ್ದ. ಹೀಗೆ ಮಾಡಿದರೆ ಯಾರಾದರು ಮಂತ್ರವಾದ ಮಾಡಿ ಚಿಲಕ ಸರಿಯಲಿ ಎಂದು ಹೇಳಿದ ಪಕ್ಷದಲ್ಲಿ ಒಂದು ಚಿಲಕ ತೆರೆದರೆ ಇನ್ನೊಂದು ಮುಚ್ಚುತ್ತದೆ ಎಂದು ಅವನ ಅಂಬೋಣ! ಕಡೆಯುವ ಕಲ್ಲು ಇದ್ದಲ್ಲಿ ಬಾಗಿಲು ಬಂದ ಮೇಲೆ.

ಮಕ್ಕಳ ತೊಟ್ಟಿಲು ಬಾಹೆರ್ಲಿ ಮಾಳಿಯಲ್ಲೇ ಇದ್ದದ್ದು. ಎಂದೋ ಎಂದೋ, ಎಂದೋ ನಿನ್ನ ದರುಶನ ಎಂದು ಹಾಡುತ್ತಾ ಅಂಬಕ್ಕ ನನ್ನನ್ನು ತೂಗಿದ್ದು ಇಲ್ಲೇ. ಹರಿಹರ ಅಣ್ಣ ಸಂಜೆ ನಮ್ಮನ್ನು ತೊಟ್ಟಿಲಲ್ಲಿ ಕೂರಿಸಿ ತೂಗುತ್ತಾ ಬಾಯಿಪಾಠ ಹೇಳಿಕೊಡುತ್ತಿದ್ದರು. ಇದು ಶುಭಂ ಕರೋತು ಕಲ್ಯಾಣಂ ಶ್ಲೋಕದಿಂದ ಆರಂಭವಾಗಿ ಆದಿತ್ಯವಾರ ಸೋಮವಾರ, ಪಾಡ್ಯ ಯುಗಾದಿ ಪಾಡ್ಯ ಬಿದಿಗೆ ಸೋಮನ ಬಿದಿಗೆ, ಚೈತ್ರ ವೈಶಾಖ, ವಸಂತ ಋತು ಗ್ರೀಷ್ಮ ಋತು, ಮೇಷ ವೃಷಭ, ಅಶ್ವಿನಿ ಭರಣಿ, ಬವ - ಸಿಂಹ, ಬಾಲವ - ಹುಲಿ, ಪ್ರಭವ ವಿಭವ ಇತ್ಯಾದಿ ಕಾಲ ಗಣನೆಯ ಎಲ್ಲ ಕೋಷ್ಟಕಗಳನ್ನು ಒಳಗೊಂಡಿರುತ್ತಿತ್ತು. ಕೊನೆಯಲ್ಲಿ ಸಂಡೆ ಮಂಡೆ ಹೇಳಿಕೊಡುತ್ತಿದ್ದ ನಮ್ಮಣ್ಣ ಸಾಟರ್‌ಡೇ ಆದ ಮೇಲೆ ಪ್ರಾಸಬದ್ಧವಾಗಿ ಪತ್ರೋಡೆಯನ್ನೂ ಸೇರಿಸುತ್ತಿದ್ದರು!

ಸ್ವಲ್ಪ ದೊಡ್ಡವರಾದ ಮೇಲೆ ನಾವು ತೊಟ್ಟಿಲಿನ ಆಚೀಚೆ ಅಂಚುಗಳ ಮೇಲೆ ಇಬ್ಬರು ಕುಳಿತು ಜೀಕುತ್ತಾ ಬಾರೊ ಬಾರೊ ಬಾರೊ ಗಣಪ, ಗೆಳೆಯನೆ ಪೇಳುವೆ ಕೇಳಣ್ಣ, ಝನ್ ಝನ್‌ಕ ಝನ್ಕರೊ ಇತ್ಯಾದಿ ಹಾಡು ಹೇಳುತ್ತಿದ್ದೆವು. 

ತೊಟ್ಟಿಲಿನ ಸಮೀಪ ಗೋಡೆಯಲ್ಲಿ ಇದ್ದ ಗೂಡು ಚಿಮಿಣಿ ದೀಪಗಳು ಮತ್ತು L ಆಕಾರದ outlet ಇದ್ದ ಹಸುರುಬಣ್ಣದ ಚಿಮಿಣಿ ಎಣ್ಣೆಯ ಕ್ಯಾನ್ ಇಡುವ ಜಾಗವಾಗಿತ್ತು. ಇನ್ನೊಂದು ಬದಿಯಲ್ಲಿದ್ದ ಗೂಡಿನಲ್ಲಿ ತೆಂಗಿನೆಣ್ಣೆಯ ಉರುಳಿ ಇಡುತ್ತಿದ್ದ ಜಾಗ.

ಹೊರಗಿನ ಚಾವಡಿಯಿಂದ ಇಲ್ಲಿಗೆ ಬರುವ ಬಾಗಿಲಿನ ಮೇಲ್ಭಾಗದಲ್ಲಿ ಆಣಿ, ಸ್ಕ್ರೂ, ಬೋಲ್ಟ್, ನಟ್ ಇತ್ಯಾದಿ ಸಕಲ ಗುಜರಿ ವಸ್ತುಗಳನ್ನು ಹಾಕಿಡುವ ನಳೊ ಎಂಬ ಹೆಸರಿನ, ಮೇಲ್ಭಾಗ ತೆರೆದಿರುವ ಬಿದಿರಿನ ಅಂಡೆ ತೂಗಾಡುತ್ತಿತ್ತು. ಅಲ್ಲೇ ಸಮೀಪದಲ್ಲಿ ಕೃಷಿ ಕೆಲಸದ ಕತ್ತಿಗಳನ್ನು park ಮಾಡುವ ಸೀಳು ಬಿದಿರು.

ಚೌತಿಯ ಮಂಟಪ ಇಲ್ಲೇ ಇರುತ್ತಿದ್ದುದು. ಮಂಟಪವನ್ನು ನಿಲ್ಲಿಸಲು ಬೇಕಾಗುವ ಎರಡು ಬಿದಿರುಗಳು ಬಚ್ಚಲುಮನೆಯ ಅಟ್ಟದ ಮೇಲಿರುತ್ತಿದ್ದವು. ಅವುಗಳನ್ನು ಕೆಳಗಿಳಿಸಿ ತೊಳೆದು ಮಧ್ಯಾಹ್ನದೊಳಗೆ ಸೂಕ್ತ ಜಾಗದಲ್ಲಿ ಕಟ್ಟಿ ಮಾಳಿಗೆಯ ಮೇಲಿರುತ್ತಿದ್ದ ಮರದ ಮಂಟಪವನ್ನು ತಂದು ಅಳವಡಿಸುವ ಕೆಲಸ ಮಧ್ಯಾಹ್ನದೊಳಗೆ ಮುಗಿಯುತ್ತಿತ್ತು. ಮನೆಯ ಆಳು ಕಾಳುಗಳಿಗೂ ಚೌತಿ ಗಣಪನ ದರ್ಶನ ಭಾಗ್ಯ ಸಿಗಲಿ ಎಂಬ ಉದ್ದೇಶದಿಂದ ಮಂಟಪಕ್ಕೆ ದೇವರ ಕೋಣೆ ಇದ್ದ ಆಂತ್ಲಿಮಾಳಿಯ ಬದಲು ಹೊರ ಚಾವಡಿಯಿಂದಲೂ ವೀಕ್ಷಿಸಲು ಸಾಧ್ಯವಾಗುವ ಈ ಸ್ಥಳವನ್ನು ನಿಗದಿ ಪಡಿಸಿರಬಹುದು.

ನಾವು ಮನೆಯಲ್ಲಿ ಬೆಳ್ತಿಗೆ ಅಕ್ಕಿ ಬಳಸುವುದು. ತೋಟಕ್ಕೆ ಮದ್ದು ಬಿಡುವವರಿಗೆ ಮತ್ತು ಅಡಿಕೆ ಕೊಯ್ಲು ಮಾಡುವವರಿಗೆ ಹೊರಗಡೆ ಕುಚ್ಚಲು ಅಕ್ಕಿಯ ಅನ್ನ ಮಾಡಿ ಬಡಿಸುವುದಿತ್ತು. ಕೊಟ್ಟಣದ ಕುಚ್ಚಲಕ್ಕಿಯ ಪರಿಮಳಕ್ಕೆ ಮನಸೋತ ನಮಗೂ ಅದನ್ನು ಉಣ್ಣಬೇಕೆಂದು ಆಸೆಯಾದರೆ ಹೊರ ಹಜಾರದಲ್ಲಿ ಕುಳಿತು ಉಣ್ಣುವ ಅನುಮತಿ ಸಿಗುತ್ತಿತ್ತು. ಜೊತೆಗೆ ದೀಗುಜ್ಜೆಯ ಹುಳಿ ಏನಾದರೂ ಇದ್ದರೆ ನಿತ್ಯದ ಎರಡರಷ್ಟು ಅನ್ನ ನಮ್ಮ ಹೊಟ್ಟೆ ಸೇರುತ್ತಿತ್ತು. ಆ ಕಾಲದಲ್ಲಿ ಕುಚ್ಚಲು ಅಕ್ಕಿಗೆ ಒಳಗೆ ಪ್ರವೇಶವಿರಲಿಲ್ಲ.

ಎದುರು ಭಾಗದಲ್ಲಿ ಕಾಣುವ ಮರದ ಕಪಾಟು ತೀರಾ ಹಳೆ ಕಾಲದ್ದಲ್ಲ. ನಮ್ಮ ನೆನಪಿನಲ್ಲೇ ಇನ್ನೊಬ್ಬ ಆಣ್ಣಿ ಆಚಾರಿ ಮಾಡಿದ್ದು. ಆತ ಹವ್ಯಾಸಿ ಯಕ್ಷಗಾನ ಹಲಾವಿದ ಕೂಡ. ಅನೇಕ ವರ್ಷಗಳ ನಂತರ ನಾನು ಮಂಗಳೂರಲ್ಲಿ ಮನೆ ನಿರ್ಮಿಸಿದಾಗ ಕಿಟಿಕಿ ಬಾಗಿಲುಗಳನ್ನು ಆತನೇ ನಿರ್ಮಿಸಿ ಕೊಟ್ಟದ್ದು. ಕಪಾಟುಗಳಿಗೆ, ಬಾಗಿಲುಗಳಿಗೆ ಕುಸುರಿ ಕೆತ್ತನೆ ಮಾಡುವ ಕೌಶಲವೂ ಅವನಲ್ಲಿತ್ತು. ನಮ್ಮ ಮನೆಯ ಮುಂಬಾಗಿಲಿಗೂ ಚಂದದ ಡಿಸೈನ್ ಮಾಡಿ ಕೊಟ್ಟಿದ್ದಾನೆ.

ಮುಂದುಗಡೆ ಕಾಣುವ ಮಾಳಿಗೆ ಮೆಟ್ಟಲಿರುವ ಜಂಕ್ಷನ್‌ನ ಎದುರುಗಡೆ ಮೂಲೆಯಲ್ಲಿ ಕಡಿದ ಬಾಳೆಗೊನೆ ಇಡುವ ಜಾಗ. ಅಲ್ಲೇ ಎಡಕ್ಕೆ ತಿರುಗಿದರೆ ಹಿತ್ತಲ ಜಗಲಿಗೆ ಹೋಗುವ, ಬಿಜಾಗಿರಿ ಬದಲಿಗೆ ಮೇಲೆ ಮತ್ತು ಕೆಳಗೆ ಮೊಳೆಕ್ಕುತ್ತಿ ಇರುವ ದಪ್ಪದ ಬಾಗಿಲಿನ ಹಿಂಭಾಗ ಹಲಸಿನ ಬೀಜಗಳನ್ನು ಹಸಿಮಣ್ಣಿನೊಡನೆ ಕಲಸಿ ಗುಡ್ದದಂತೆ ಮೆತ್ತಿಡುವ ಜಾಗ. ಹೀಗೆ ಸಂರಕ್ಷಿಸಿದ ಹಲಸಿನ ಬೀಜಗಳು ಎಷ್ಟು ಸಮಯವಾದರೂ ಕೆಡುವುದಿಲ್ಲ. ಬೇಕೆನಿಸಿದಾಗ ಆ ಗುಡ್ಡವನ್ನು ಅಗೆದು ಬೀಜಗಳನ್ನು ಗುದ್ದಿ ಬಳಸಿದರಾಯಿತು.




Sunday, 5 October 2025

ಕಣ್ತೆರೆದು ನೋಡು


1956ರ ಮುತ್ತೈದೆ ಭಾಗ್ಯ ಚಿತ್ರದಲ್ಲಿ ನಮ್ಮೂರೆ ಅಂದ ನಮ್ಮೋರೆ ಚಂದ ಅನ್ನುವ ನಾಡು ನುಡಿ ಕುರಿತಾದ ಹಾಡು ಇದ್ದರೂ ಮೊದಲು ಅಘೋಷಿತ ನಾಡಗೀತೆಯಾಗಿ ಜನಮನದಲ್ಲಿ ನೆಲೆಸಿದ್ದು 1961ರಲ್ಲಿ ಪ್ರದರ್ಶಿತವಾದ ಕಣ್ತೆರೆದು ನೋಡು ಚಿತ್ರದ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ  ಹಾಡು.  

ಆ ಸಿನಿಮಾದಲ್ಲಿ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಸ್ವತಃ ರೇಡಿಯೊ ನಿಲಯದಲ್ಲಿ  ಹಾಡುವ ಈ ಹಾಡು ಆಕಾಶವಾಣಿಯಲ್ಲೂ ಪದೇ ಪದೇ ಪ್ರಸಾರವಾಗುತ್ತಿದ್ದುದು ಇದಕ್ಕೆ ಇಷ್ಟೊಂದು ಜನಪ್ರಿಯತೆ ಸಿಗಲು ಕಾರಣವಾಗಿರಬಹುದು.  

ನಮ್ಮ ಮನೆಗೆ ಆಗಲೇ ರೇಡಿಯೋ ಬಂದಿದ್ದರೂ ಅದರಲ್ಲಿ ಕೇಳುವ ಮೊದಲೇ ನನಗೆ ಈ ಹಾಡಿನ ಪರಿಚಯವಾದದ್ದು ನಮ್ಮೂರಿನ ಪ್ರಸಿದ್ಧ ಕವಿ ರಾಮಚಂದ್ರಮಾಸ್ಟ್ರ  ಮಕ್ಕಳು ಅದನ್ನು ನಮ್ಮ ಶಾಲೆಯಲ್ಲಿ ಹಾಡಿದಾಗ.  ಏಕಪಾಠಿಗಳಾದ ಅವರು ಇದನ್ನು ಎಲ್ಲಿ ಕೇಳಿ ಕಲಿತುಕೊಂಡಿದ್ದರೋ ಏನೋ. 

ನಾನು ಜಿ.ಕೆ. ವೆಂಕಟೇಶ್ ಅನ್ನುವ ಹೆಸರು ಮೊದಲು ಕೇಳಿದ್ದೂ ಈ ಹಾಡಿನ ಜೊತೆಯಲ್ಲಿಯೇ.  ಆಗ ವಿವಿಧಭಾರತಿ ಹೊರತುಪಡಿಸಿ  ಇತರ ನಿಲಯಗಳಲ್ಲಿ ಸಿನಿಮಾ ಹಾಡುಗಳನ್ನು ಪ್ರಸಾರ ಮಾಡುವಾಗ ಗಾಯಕರು ಮತ್ತು ಕವಿಯ ಹೆಸರು ಮಾತ್ರ ಹೇಳುತ್ತಿದ್ದರೇ ಹೊರತು ಸಂಗೀತ ನಿರ್ದೇಶಕರ ಹೆಸರು ಹೇಳುತ್ತಿರಲಿಲ್ಲ. ಜಿ.ಕೆ. ವೆಂಕಟೇಶ್ ಎಂದು ಕೇಳಿದಾಗ ಬೆಳ್ತಂಗಡಿ ಬಸ್‌ಸ್ಟೇಂಡಿನಲ್ಲಿ  ಕಾಕಿ  ಚಡ್ಡಿ ಮತ್ತು ಶರ್ಟ್ ಧರಿಸಿ ಶರಬತ್ತು ತುಂಬಿದ ಗ್ಲಾಸುಗಳನ್ನು ತಟ್ಟೆಯಲ್ಲಿಟ್ಟುಕೊಂಡು ಮಾರುತ್ತಿದ್ದ ತೆಳ್ಳಗಿನ ವ್ಯಕ್ತಿಯ ಚಿತ್ರ ನನ್ನ  ಕಣ್ಣ ಮುಂದೆ ಬರುತ್ತಿದ್ದುದು! ಬೇಸಗೆ ರಜೆಯಲ್ಲಿ  ತಾಯಿಯೊಂದಿಗೆ ಅಜ್ಜಿಮನೆಗೆ ಹೋಗುವಾಗ  ಬೆಳ್ತಂಗಡಿಯಲ್ಲಿ ಹನುಮಾನ್ ಬಸ್ಸಿಗೆ ಕಾಯುವ ಸಮಯದಲ್ಲಿ ಈ ಹಾಡಿನ ಗುಂಗು ನನ್ನ ಮನಸ್ಸನ್ನು ಆವರಿಸಿದ್ದಾಗ ಆ ವ್ಯಕ್ತಿಯನ್ನು ಕಂಡದ್ದು ಇದಕ್ಕೆ ಕಾರಣವಾಗಿರಬಹುದು.

ನಾನು ಬಾಲ್ಯದಿಂದಲೂ ನೋಡಲು ಹಾತೊರೆಯುತ್ತಿದ್ದ, ಆದರೆ ನೋಡಲು ಅವಕಾಶ ಸಿಗದಿದ್ದ  ಚಿತ್ರ  ಕಣ್ತೆರೆದು ನೋಡು.  ಅನೇಕ ದಶಕಗಳ ನಂತರ TVಯಲ್ಲಿ ಕನ್ನಡ ಪ್ರಸಾರ ರಾಜ್ಯವ್ಯಾಪಿಯಾಗಿ  ವಾರಕ್ಕೊಂದು ಕನ್ನಡ ಚಿತ್ರ ಪ್ರಸಾರವಾಗತೊಡಗಿ ಈ ಚಿತ್ರದ ಸರದಿ ಬಂದಾಗಲಷ್ಟೇ ನನ್ನ ಕನಸು ಕೈಗೂಡಿದ್ದು. 

ಕಣ್ತೆರೆದು ನೋಡು ಚಿತ್ರದ ಕನ್ನಡದ ಮಕ್ಕಳೆಲ್ಲ ಹಾಡು ಅಘೋಷಿತ ನಾಡಗೀತೆ ಎನಿಸಿದರೂ  ಅದರ  ಉಳಿದೆಲ್ಲ ಹಾಡುಗಳೂ ಜನಪ್ರಿಯವೇ. ಭಕ್ತ ಕನಕದಾಸದ ನಂತರ ರಾಜಕುಮಾರ್ ಅವರ  ಎಲ್ಲ ಹಾಡುಗಳನ್ನು ಪಿ.ಬಿ.ಶ್ರೀನಿವಾಸ್ ಹಾಡಿದ ಮೊದಲ  ಸಾಮಾಜಿಕ ಚಿತ್ರ  ಇದು.  ಕನ್ನಡದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲು ಪಿ.ಬಿ.ಎಸ್ ಅವರಿಗೆ ಈ  ಚಿತ್ರ ಸಹಾಯ ಮಾಡಿತು.

ಅರುಣಾಚಲಮ್ ಸ್ಟುಡಿಯೋಸ್‌ನ  ಎ.ಕೆ. ವೇಲನ್ ನಿರ್ಮಿಸಿದ  ಈ ಚಿತ್ರದ ಪಾರಿಭಾಷಿಕ ವರ್ಗದ ವಿವರಗಳು ಹೀಗಿವೆ.
ಚಿತ್ರ ನಾಟಕ, ಸಂಭಾಷಣೆ : ಜಿ.ವಿ. ಅಯ್ಯರ್.
ಸಂಗೀತ : ಜಿ’ಕೆ. ವೆಂಕಟೇಶ್.
ಗೀತೆಗಳು : ಪುರಂದರದಾಸರು, ಜಿ.ವಿ. ಅಯ್ಯರ್.
ಹಿನ್ನೆಲೆ ಗಾಯಕರು : ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ, ಎಲ್.ಆರ್. ಈಶ್ವರಿ, ಬೆಂಗಳೂರು ಲತಾ.
ಛಾಯಾಗ್ರಹಣ : ಬಿ.ದೊರೈರಾಜ್.
ನಿರ್ದೇಶನ :  ಟಿ.ವಿ. ಸಿಂಗ್ ಠಾಕೂರ್.
ತಾರಾಗಣ: ರಾಜಕುಮಾರ್, ಎಂ. ಲೀಲಾವತಿ, ಬಾಲಕೃಷ್ಣ, ನರಸಿಂಹರಾಜು, ರಾಜಶ್ರೀ, ಜಿ.ವಿ. ಅಯ್ಯರ್, ರಮಾದೇವಿ, ಗಣಪತಿ ಭಟ್ ಮತ್ತಿತರರು.

ಬೌದ್ಧಿಕ ಆಸ್ತಿಯ ಒಡೆತನದ ಬಗ್ಗೆ (ಕಾಪಿ ರೈಟ್) ಅನೇಕ ದಶಕಗಳ ಹಿಂದೆ ಬಂದ ಕನ್ನಡ  ಚಿತ್ರ ಎಂಬುದು ಇದರ ಹೆಗ್ಗಳಿಕೆ.  ಆಗ ನಮ್ಮ ಮನೆಗೆ ಬರುತ್ತಿದ್ದ ವಿಕಟವಿನೋದಿನಿ ಎಂಬ ಮಾಸ ಪತ್ರಿಕೆಯಲ್ಲಿ  ಸರಳ ಕತೆ, ಪ್ರತಿಭಾಪೂರ್ಣ ಸಾಹಿತ್ಯ, ಮಧುರ ಸಂಗೀತ ಹಾಸ್ಯದ ಹೊನಲು ಕೂಡಿ ಬಹು ರಮ್ಯವಾಗಿ ಚಿತ್ರಿತವಾದ ಚಿತ್ರ ಎಂದು ಇದನ್ನು ಬಣ್ಣಿಸಲಾಗಿತ್ತು. 

ಈಗ ಒಂದೊಂದೇ ಹಾಡಿನ ವಿವರ ನೋಡುತ್ತಾ, ಚಿತ್ರದ  ಕಥೆ ತಿಳಿಯುತ್ತಾ ಹೋಗೋಣ.

ಶರಣು ಕಾವೇರಿ ತಾಯೆ
ಕಣ್ಣಿನ ಚಿಕಿತ್ಸೆಗಾಗಿ ಪಟ್ಟಣಕ್ಕೆ ಹೊರಟ ಚಿತ್ರದ ದೃಷ್ಟಿಹೀನ ನಾಯಕ  ಗೋಪು (ರಾಜಕುಮಾರ್) ದೋಣಿಯಲ್ಲಿ  ಕಾವೇರಿ ನದಿ ದಾಟುವಾಗಿನ ಪಿ.ಬಿ.ಎಸ್ ಹಾಡು ಇದು. ಹಾಡು ಮುಗಿಯುತ್ತಲೇ ದೋಣಿ ಸುಳಿಗೆ ಸಿಕ್ಕು ಗೋಪುವಿನ ತಂದೆ  ಮತ್ತು ತಂಗಿ ಇಂದು ದಿಕ್ಕಾಪಾಲಾಗುತ್ತಾರೆ. ಗೋಪು ಒಬ್ಬನೇ ಹೇಗೋ ದಡ ಸೇರುತ್ತಾನೆ.   

ಅಂತರ್ಜಾಲದಲ್ಲಿ  ಕಣ್ತೆರೆದು ನೋಡು ಸಿನಿಮಾ ಲಭ್ಯವಿದ್ದರೂ ಈ ಹಾಡಿನ ಭಾಗ ರಸಭಂಗವಾಗುವಷ್ಟು ಕ್ಷತಿಗ್ರಸ್ತವಾಗಿದೆ. ಆದರೆ  ಇಲ್ಲಿ ನಿಮಗೆ  ಪೂರ್ತಿಯಾಗಿ ಕೇಳಲು ಸಿಗುತ್ತದೆ. ಇದರಲ್ಲಿ ಕೋರಸ್ ಸ್ವರಗಳು ಹಾಡುವ ತೆರೆ ತೆರೆ ತೆರೆ ತೇಲಿ ಬರೆ, ಸರ ಸರ ಸರವಾಗಿ ನೊರೆ ರೀತಿಯ ಸಾಲುಗಳನ್ನು ಬಂಗಾರದ ಮನುಷ್ಯದ ಆಹಾ ಮೈಸೂರು ಮಲ್ಲಿಗೆಯಲ್ಲೂ ಬಳಸಲಾಗಿದೆ.  ಬೆಳ್ತಂಗಡಿಯ ಭಾರತ್ ಟಾಕೀಸಿನಲ್ಲಿ ದೀಪಗಳು ಆರಿ ತೆರೆಯ ಮೇಲೆ ಜಾಹೀರಾತುಗಳು ಬೀಳಲು ಆರಂಭವಾಗುವಾಗ ಈ ಹಾಡು ಹಾಕುತ್ತಿದ್ದರು. 

ಈ ಹಾಡಿನ ಆರ್ಕೆಸ್ಟ್ರೇಷನ್ ಅತಿ ಸುಂದರವಾಗಿದ್ದು, ಡೋಲು, ಢೋಲಕ್,  ಚೈನೀಸ್ ಟೆಂಪಲ್ ಬ್ಲಾಕ್, ಕೊಳಲು, ಗಿಟಾರ್, ಮ್ಯಾಂಡೊಲಿನ್, ವಯಲಿನ್ಸ್ ಇತ್ಯಾದಿ ವಾದ್ಯಗಳ ಹಾಗೂ ಕೋರಸ್ ಧ್ವನಿಗಳ ಸುಂದರ ಸಂಗಮವಿದೆ.

ಶರಣು ಕಾವೇರಿ ತಾಯೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ
ತೆರೆ ತೆರೆ ತೆರೆ ತೇಲಿಬರೆ ಸರ ಸರವಾಗಿ ನೊರೆ
ತುಂತುರು ತುಂತುರು ನೀರಹನಿ
ಕಲ ಕಲ ಮಾಡೆ ದನಿ

ಪುರದ ಪುಣ್ಯವತಿ ..........
ಪುರದ ಪುಣ್ಯವತಿ ಗಂಗೆ ತಾಯೆ
ಕರೆದು ಕಣ್ತೆರೆದು ನೋಡೆಲೆ ನೀಯೆ
ಓ ----
ಕರೆದು ಕಣ್ತೆರೆದು ನೋಡೆಲೆ ನೀಯೆ
ಕುರುಡು ಬಾಳಿನ ಸಾಗರಕೊಂದೆ
ಹರಿಯ ನಾಮ ಹರಿಗೋಲೆಂಬೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ

ಒಹೊ ಹೊ ...............
ಅಲೆಯ ಒಂದರಲಿ........
ಅಲೆಯ ಒಂದರಲಿ ಆಸೆಯು ಆರು
ಬಲೆಯ ತಾ ಬೀಸೆ ಬೀಳದೆ ಜಾರು
ಓ...........
ಬಲೆಯ ತಾ ಬೀಸೆ ಬೀಳದೆ ಜಾರು
ಮದವು ಮೋಹ ತುಂಬಿದ ಮೇಲೆ
ಬದುಕು ಬಾಳೆ ಬರಿ ಸಂಕೋಲೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ



ಕಲ್ಲು ಸಕ್ಕರೆ ಕೊಳ್ಳಿರೊ
ದೋಣಿ ಮಗುಚಿ ಮುಳುಗಿ ಹೋದರೂ ಹೇಗೋ ಬದುಕಿದ ಗೋಪು  ದಾಸಣ್ಣನೆಂಬ(ಬಾಲಕೃಷ್ಣ) ದಗಲ್ಬಾಜಿ ವ್ಯಕ್ತಿಯ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಗೋಪು ಒಳ್ಳೆಯ ಹಾಡುಗಾರನೆಂದು ಅರಿತ ಆತ ಇದರಿಂದ ಹಣ ಸಂಪಾದಿಸಬಹುದೆಂದು ಎಣಿಸಿ ಈ ದೇವರ ನಾಮ ಹಾಡಿಸುತ್ತಾನೆ.

ಕಲ್ಲು ಸಕ್ಕರೆ ಕೊಳ್ಳಿರೊ ನೀವೆಲ್ಲರು
ಕಲ್ಲು ಸಕ್ಕರೆ ಕೊಳ್ಳಿರೊ
ಕಲ್ಲು ಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀ ಕೃಷ್ಣ ನಾಮವೆಂಬ
ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯೊಳ್ ತುಂಬುವುದಲ್ಲ
ಎತ್ತ ಹೋದರೂ ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ತರುವಂಥ
ಕಲ್ಲು ಸಕ್ಕರೆ ಕೊಳ್ಳಿರೊ 
ಸಂತೆ ಕಂತೆಗೆ ಹೋಗಿ ಶ್ರಮ ಪಡಿಸುವುದಲ್ಲ
ಸಂತೆಯೊಳಗೆ ಇದು ಮಾರುವುದಲ್ಲ
ಸಂತತ ಭಕ್ತರ ನಾಲಿಗೆ ಸವಿಗೊಂಬ
ಕಾಂತ ಪುರಂದರ ವಿಠ್ಠಲ ನಾಮವೆಂಬ
ಕಲ್ಲು ಸಕ್ಕರೆ ಕೊಳ್ಳಿರೊ 


ಹಗಲೂ ಇರುಳು, ಸಿಗದಣ್ಣಾ ಇದು ನಾಳೆಗೆ ಸಿಗದು, ನಿನಗಿದು ನ್ಯಾಯವೇ



ದಾಸರ ಪದದಿಂದ ಸಾಕಷ್ಟು ದುಡ್ಡು ಸಂಗ್ರಹ ಆಗದಿದ್ದುದರಿಂದ  ದಾಸಣ್ಣನ ಕೋರಿಕೆಯಂತೆ ಗೋಪು ಹಾರ್ಮೋನಿಯಮ್ ನುಡಿಸುತ್ತಾ ತಾನೇ ರಚಿಸಿದ ಈ ಹಾಡುಗಳನ್ನು ಹಾಡುತ್ತಾನೆ.  ಮೆಚ್ಚಿದ ಜನರು ಕೊಟ್ಟ ಚಿಲ್ಲರೆ ಕಾಸನ್ನೆಲ್ಲ ದಾಸಣ್ಣ ಲಪಟಾಯಿಸುತ್ತಾನೆ. 

ಪಿ.ಬಿ.ಎಸ್ ಅವರ ಧ್ವನಿಯಲ್ಲಿರುವ ಆರ್ದ್ರತೆ ಈ ಕಿರು ಅವಧಿಯ ಹಾಡುಗಳನ್ನು ನೇರವಾಗಿ ಹೃದಯಕ್ಕಿಳಿಯುವಂತೆ ಮಾಡುತ್ತದೆ. ಬೀದಿ ಬದಿ ಹಾಡುಗಾರನನ್ನು ಪ್ರತಿನಿಧಿಸುವ ಹಾರ್ಮೋನಿಯಮ್ ಮತ್ತು ಢೋಲಕ್ ಸಂಗಮವಂತೂ ಹೃದಯಂಗಮ.  ಹಾಡುಗಳ  ನಡುವೆ ಬರುವ ಸಂಭಾಷಣೆಯ ತುಣುಕುಗಳಲ್ಲಿ ಒಂದು ಕಡೆ ರಫಿಯ ಉಲ್ಲೇಖ ಇರುವುದನ್ನು ಗಮನಿಸಿ. ನಿನಗಿದು ನ್ಯಾಯವೇ ಭಾಗದ ಆರಂಭದ ಆಲಾಪ ನಮ್ಮನ್ನು ಯಾವುದೋ ಲೋಕಕ್ಕೆ ಒಯ್ಯುತ್ತದೆ.  ಸಾಕ್ಷಾತ್ಕಾರ ಚಿತ್ರದ ಜನುಮ ಜನುಮದ ಅನುಬಂಧ ಹಾಡಿನ ಆರಂಭವೂ ಸುಮಾರಾಗಿ ಹೀಗೆಯೇ ಇದೆ.

ಹಗಲು ಇರುಳು ಕೊರಗೆ ಬರಿದೆ
ನಗುತಲಿ ನಲಿವ ದಿನವೇ ಇರದೆ

ಕರುಣೆಯ ನಗದ ಹೊಸ ವ್ಯಾಪಾರ
ಧಾರಣೆ ಮಾಡುವ ನೆಂಟರು ದೂರ
ಮಾಡಿದ ಪಾಪ ಭೋಗಿಸಲಾರೆ
ಎಂದರೆ ಕೇಳುವ ದೇವರು ಯಾರಾ
ಹಗಲು ಇರುಳು ಕೊರಗೆ 

ದಾಸಣ್ಣ: ಗೋಪು, ಇವತ್ತು ಯಾಕೋ ದೇವ್ರು ವರ ಕೊಡ್ಳಿಲ್ಲ ಕಣಯ್ಯ.  ನಾಳೆಯಿಂದ  ಈ ಪ್ರಾರ್ಥನೆ ರೀತಿನೇ ಬದ್ಲಾಯಿಸಿ ಬಿಡ್ಬೇಕು. ದಾಸರ ಪದಕ್ಕೆ ಸಲಾಮ್ ಹೊಡ್ದು ನಿನ್ನ ಸ್ವಂತದ್ದು ಯಾವ್ದಾದ್ರೂ ಲೈಟ್ ಸಾಂಗ್ ಹಾಡಯ್ಯಾ ನಾಳೆಯಿಂದ. 

ಸಿಗದಣ್ಣ ಇದು ನಾಳೆಗೆ ಸಿಗದು
ಸೊಗಸಿನ ನೋಟದ ಸಿರಿಯಣ್ಣ

ಧನಿಕನ ಸಾವಿರ ದಾನದ ಮೇಲೆ
ಬಡವನ ಒಡವೆ ಇದೆಯಣ್ಣ
ಸಿಗದಣ್ಣ ಇದು ನಾಳೆಗೆ ಸಿಗದು

ಕುರುಡನ ಕಣ್ಣಿಗೆ ಕಾಣುವುದಣ್ಣ
ಮುರಹರ ನಿನ್ನಯ ನಿಜ ಬಣ್ಣ
ಸಿಗದಣ್ಣ ಇದು ನಾಳೆಗೆ ಸಿಗದು

ದಾಸಣ್ಣ: ಅಪ್ಪಾ, ಗೋಪೂ, ನಿನ್ನ ಹಾಡೇ ಇಷ್ಟು ರಂಗು ಕಟ್ಟಿದೆ ಅಂದ ಮೇಲೆ ಆ ರಫಿ ಹಾಡುವಂಥಾದ್ದು ಒಂದನ್ನು ಎತ್ತಿ ನೋಡು. ದೇವ್ರು ತಬ್ಬಿಬ್ಬಾಗಿ ಬಗ್ಗಿಸಿ ಬಿಡ್ತಾನೆ ಭಂಡಾರಾನ. ಬಾ, ನಾಳೆ ಇನ್ನೊಂದು ಗುಡಿ ಇನ್ನೊಂದು ದೇವ್ರು. ನೋಡೋಣ.

ನಿನಗಿದು ನ್ಯಾಯವೇ ಮೋಸ
ದಾನಿಯಾಗಿ ಈ ವಂಚನೆ ವೇಷ
ನಿನಗಿದು ನ್ಯಾಯವೇ

ಮಾನಹೀನರ ಸಂಗವು ಸಾಕು
ಜ್ಞಾನ ಸಾಧನೆಯು ಎನಗಿರಬೇಕು
ದೀನಪಾಲಕ ನೀನಿರುವನಕ
ನಿನ್ನ ಸೇವೆಯ ನೀಡೋ ಸಾಕು

ಹಗಲೂ ಇರುಳೂ


ಸಿಗದಣ್ಣಾ, ನಿನಗಿದು ನ್ಯಾಯವೇ


ಬಂಗಾರದೊಡವೆ ಬೇಕೇ
ತನ್ನ ಹಾಡುಗಳಿಂದ ದೊರಕಿದ ಹಣವನ್ನು ದಾಸಣ್ಣ ಲಪಟಾಯಿಸಿದ್ದನ್ನು ತಿಳಿದು ಬೇಸರಗೊಂಡ ಗೋಫು ಆತನ ಸಹವಾಸ ತೊರೆಯುತ್ತಾನೆ . ಒಂದು ದಿನ ನದಿ ತೀರದಲ್ಲಿ ಕುಳಿತು ನದಿಯನ್ನು ಸ್ತ್ರೀಗೆ ಹೋಲಿಸಿ ಈ ಹಾಡು ಹಾಡುತ್ತಾನೆ.  ಅಲ್ಲಿ ಜಲಕ್ರೀಡೆಯಾಡುತ್ತಿದ್ದ ನಾಯಕಿ ಕಮಲ (ಲೀಲಾವತಿ) ಇದು ತನ್ನನ್ನು ಕುರಿತು ಹಾಡಿದ್ದೆಂದು ಭಾವಿಸಿ ಗೋಪುವಿನ ಕೆನ್ನೆಗೆ  ಬಾರಿಸುತ್ತಾಳೆ.  ಆ ಮೇಲೆ  ಗೋಪುವಿನ ಪ್ರೇಮಪಾಶಕ್ಕೆ ಸಿಲುಕಿ ಅವಳೇ ಬೆಂಗಳೂರು ಲತಾ ಧ್ವನಿಯಲ್ಲಿ  ಈ ಹಾಡು ಹಾಡುವ ಪ್ರಸಂಗವೂ ಬರುತ್ತದೆ.  

ಬಂಗಾರದೊಡವೆ ಬೇಕೆ ನೀರೆ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಬಂಗಾರದೊಡವೆ ಬೇಕೆ ನೀರೆ

ನಿಲ್ಲದೆ ನೀನೋಡಲೇಕೆ ನೀರೆ
ಕಣ್ಮನ ತಣಿಸುವ ಅಮೃತದ ಧಾರೆ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಬಂಗಾರದೊಡವೆ ಬೇಕೆ ನೀರೆ

ಸಂಜೆಯ ಹೊಂಬಿಸಿಲು ಸೂರ್ಯನ ಕೆಂಪೊಡಲು
ಅಂಗ ಸಂಗವ ಬಯಸಿ ನಿನ್ನ ಬಿಗಿದು ಅಪ್ಪಿರಲು
ಎಂಥ ರಮ್ಯದ ನೋಟ ನೋಡೆ
ನಿನ್ನಯ ಒಡಲು ನೀರೆ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಬಂಗಾರದೊಡವೆ ಬೇಕೆ ನೀರೆ

ಭಾಗ  2

ನೀರಡಿಕೆ ನಿನಗೆಂದು ನೀರೆ ನೀರನು ನೀಡೆ
ನೀನಿಂತು ನೋಡಲೇಕೆ ನೀರಾ
ಇನ್ನೇಕೆ ಬಾಯಾರಿಕೆ

ನೀರಡಿಕೆ ನೀರಿನದೆ ನೀನರಿಯೆಯಾ ಮುಗುದೆ
ಕಾರುಣ್ಯ ತೋರೆಯೇಕೆ ನೀರೇ
ಎನ್ನಾಸೆ ಈಡೇರದೇ
ಸೋತಿರುವ ಜೀವನಕೆ ಸಂಜೀವಿನಿಯಾಗೆ
ಅಮೃತವಾಹಿನಿ ಗಂಗೆ ಶರಣು ನಿನಗೆ
ಅಂಗನೆ ನಿನ್ನಂಗ ಸಿಂಗಾರಕೊಫ್ಫುವ 
ಬಂಗಾರದೊಡವೆ ಬೇಕೆ




ಹೆಣ್ಣಿನ ಮೇಲೆ ಕಣ್ಣಿಡುವಾಗ
ಅದೃಷ್ಟವಶಾತ್ ತಾನು ಹುಡುಕಿಕೊಂಡು ಬಂದಿದ್ದ ಕಣ್ಣಿನ  ಡಾಕ್ಟರ್ ಅಮೃತರಾಯರ (ಜಿ.ವಿ. ಅಯ್ಯರ್) ಭೇಟಿ  ಗೋಪುವಿಗೆ ಆಗುತ್ತದೆ.  ಅವರು ಆತನನ್ನು ತನ್ನ ಮನೆಯಲ್ಲಿರಿಸಿಕೊಂಡು ಚಿಕಿತ್ಸೆ ಪ್ರಾರಂಭಿಸುತ್ತಾರೆ. ಗೋಪುವಿನ ಹಾಡು ಕೇಳಿ ಕೆನ್ನೆಗೆ ಹೊಡೆದಿದ್ದ ಕಮಲಾ ಅಮೃತರಾಯರ ಪುತ್ರಿಯೇ  ಆಗಿರುತ್ತಾಳೆ.  ಅಮೃತರಾಯರ ಚಿಕಿತ್ಸೆಯಿಂದ ದೃಷ್ಟಿ ಮರಳಿ ಪಡೆದ ಗೋಪು ಮತ್ತು ಕಮಲಾ ಮಧ್ಯೆ ಪ್ರೇಮಾಂಕುರವಾಗಿ ಪಿ.ಬಿ.ಎಸ್ ಮತ್ತು ಎಸ್. ಜಾನಕಿ ಧ್ವನಿಯಲ್ಲಿ  ಈ ಹಾಡು ಹಾಡುತ್ತಾರೆ.  ಸಾರಂಗಿಯ ಸುಂದರ ಬಳಕೆ ಈ ಹಾಡಲ್ಲಿದೆ. ಹೊಸದಾಗಿ ಪ್ರೇಮಿಸತೊಡಗುವ ಗಂಡು ಹೆಣ್ಣುಗಳಿಗೆ ಒಂದು ರೀತಿಯ ನೀತಿಪಾಠವೂ ಇದರಲ್ಲಿದೆ.

ಈ ಹಾಡು ಮತ್ತು ಕರುಣೆಯೇ ಕುಟುಂಬದ ಕಣ್ಣು ಚಿತ್ರದ ನಿಜವೋ ಸುಳ್ಳೋ ನಿರ್ಧರಿಸಿ ಒಂದಕ್ಕೊಂದು ಸಂವಾದಿ ಎಂದೂ, ಇದು ಸ್ವಲ್ಪ ಮೇಲ್ದರ್ಜೆಗೆ ಸೇರಿದ್ದ್ದು ಅನ್ನುವ  ವಿಚಿತ್ರ ಭಾವನೆ ನನ್ನಲ್ಲಿತ್ತು!  ನಿಜವೋ ಸುಳ್ಳೋ ರೇಡಿಯೋದಲ್ಲಿ ಆಗಾಗ ಮತ್ತು ಈ ಹಾಡು  ಅಪರೂಪಕ್ಕೆ ಎಂದಾದರೊಮ್ಮೆ ಕೇಳಲು ಸಿಗುತ್ತಿದ್ದುದು ಇದಕ್ಕೆ ಕಾರಣವೋ ಏನೋ.  ಈ ಹಾಡಿನಲ್ಲಿ ನಾಟಕದಂತೆ ಜೀವನವಲ್ಲ ಎಂಬ ಸಾಲು ಇರುವುದರಿಂದ ಇದು ನಾಟಕ ರಂಗದ ಹಿನ್ನೆಲೆಯ ಕಥೆ ಇರುವ ಸಿನಿಮಾ ಆಗಿರಬಹುದೆಂದೂ ನನಗನ್ನಿಸಿತ್ತು.

ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಲ್ಲಿ ಇದರ ತುಣುಕನ್ನು ಬಳಸಲಾಗಿದೆ.

ಹೆಣ್ಣಿನ ಮೇಲೆ ಕಣ್ಣಿಡುವಾಗ ನಿಗಾ ತುಂಬ ಬೇಕು
ಕಣ್ಣಲ್ಲಿ ಕಣ್ಣಿರಬೇಕು ಛಲ ಬೇಕು
ಹೆಣ್ಣಾಸೆ ಏನದು ಎಂದು ತಿಳಿಬೇಕು

ನಾಟಕದಂತೆ ಜೀವನವಲ್ಲ ಇದೇ ಬೇರೆ ಆಟ
ಜೀವಂತ ಭಾವದ ಎಲ್ಲ ಜಂಜಾಟ
ಕಣ್ಣೀರ ಕಾಲುವೆಯಲ್ಲೇ ಈಜಾಟ

ಕಣ್ಣೀರ ಹಿಂದೆ ಕೈವಾಡವೇನು
ನಾವ್ಯಾರೂ ಕಾಣದಂಥ ನೋವೇನು
ಯಾರೋ ವಿರೋಧಿ ಇಂದು
ವಿಷ ಹಿಂಡಿ ಹೋದನೇನು
ಹೊನ್ನಾದ ನಮ್ಮೀ ಆಸೆ ಮಣ್ಣೇನು
ಹೆಣ್ಣಾಸೆ ಏನದು ಎಂದು ತಿಳಿಬೇಕು

ಹೂವೊಂದೇ ಬೇರೆ ನಾರೊಂದೇ ಬೇರೆ
ಹೂಮಾಲೆ ಆಗದಂತೆ ಕೈಯಾರೆ
ಏನೋ ವಿನೋದ ನೋಡೆ 
ವಿಧಿ ನಿಂತು ಮಣ್ಣು ತೂರೆ್
ಕಣ್ಣೀರ ನೀತಿ ನೋಡು ಕೈಯಾರೆ




ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ



ದೃಷ್ಟಿ ಬಂದ ಮೇಲೆ  ಗೋಪುವನ್ನು ಅಮೃತರಾಯರು ತನ್ನ ಮನೆಯಲ್ಲೇ ಇರಿಸಿಕೊಳ್ಳುತ್ತಾರೆ. ಆದರೆ ಕಮಲಳ ಮದುವೆ ಅಮೃತರಾಯರ ತಂಗಿ ಮಗ ಮಧುವಿನೊಂದಿಗೆ (ನರಸಿಂಹರಾಜು) ಮೊದಲೇ ನಿಶ್ಚಯವಾಗಿರುವುದನ್ನು ತಿಳಿದು ಮನ ನೊಂದ ಗೋಪು ಅವರ ಮನೆಯಿಂದ ಹೊರಬೀಳುತ್ತಾನೆ. ಹೋಟೆಲೊಂದರಲ್ಲಿ ತಂಗಿ ಕವನಗಳನ್ನು ರಚಿಸಿ ಅವುಗಳನ್ನು ಪ್ರಕಟಿಸಲು ಪ್ರಯತ್ನಿಸುತ್ತಾನೆ.  ಆದರೆ ಯಾರೂ ಆತನನ್ನು ಪ್ರೋತ್ಸಾಹಿಸುವುದಿಲ್ಲ. ಹೀಗಿರುವಾಗ  ಆತನ  ಕವಿತೆಗಳಿದ್ದ ಕಾಗದದ ಕಟ್ಟು ಕಳೆದು ಹೋಗಿ ದಾಸಣ್ಣನ ಕೈ ಸೇರುತ್ತದೆ.  ಆತ ತನ್ನ ಹೆಸರಿನಲ್ಲಿ ಅವುಗಳನ್ನು ಪ್ರಕಟಿಸಿ ದೊಡ್ಡ ಕವಿ ಎನಿಸಿಕೊಳ್ಳುತ್ತಾನೆ.  ಹತಾಶನಾದ ಗೋಪು ಅಂಡಲೆಯುತ್ತಿದ್ದಾಗ ತಾನು ಬರೆದ ಹಾಡು ದಾಸಣ್ಣನ  ಹೆಸರಿನೊಂದಿಗೆ ರೇಡಿಯೊ ಮೂಲಕ ಪ್ರಸಾರವಾಗುವುದನ್ನು ಕೇಳಿಸಿಕೊಳ್ಳುತ್ತಾನೆ.  ಅಂದಿನ ದಿನಗಳಲ್ಲಿ ಸಾಮಾನ್ಯವಾಗಿದ್ದ ಸಾರ್ವಜನಿಕ  ರೇಡಿಯೊ ಪೆವಿಲಿಯನ್ ಮತ್ತು ಜಿ. ಕೆ. ವೆಂಕಟೇಶ್ ಅವರು ಆಕಾಶವಾಣಿ ಸ್ಟುಡಿಯೊದಲ್ಲಿ ಆರ್ಕೆಷ್ಟ್ರಾದೊಂದಿಗೆ ಹಾಡುವ ದೃಶ್ಯ ಈ ಹಾಡಿನ ಸಂದರ್ಭದಲ್ಲಿ ನೋಡಲು ಸಿಗುತ್ತವೆ. ಆರಂಭದಲ್ಲಿ ಟೈಟಲ್ಸ್ ಹಿನ್ನೆಲೆಯಾಗಿಯೂ  ಈ ಹಾಡನ್ನು ಬಳಸಲಾಗಿದೆ.

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನ
ಗೆಳೆತನದ ವರದ ಹಸ್ತ ನೀಡಿ ಬನ್ನಿ
ಮೊಳೆತಿರುರುವ ಭೇದಗಳ ಬಿಟ್ಟು ಬನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ

ಒಂದು ತಾಯಿಯ ಮಡಿಲ ಮಕ್ಕಳೆನ್ನಿ
ಒಂದು ತಾಯಿಯ ನುಡಿಯ ನುಡಿವೆವೆನ್ನಿ
ಕೀಳು ನಾವೆಂಬುವರ ಕಣ್ತೆರೆಯಿರೆನ್ನಿ
ಬೀಳು ನಾವೆಂಬುವರ ಬಾಯ್ಮುಚ್ಚ ಬನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ
ಯಾದವ ಬಲ್ಲಾಳ ವಿಜಯನಗರ ವೀರರ
ಗತ ವೈಭವ ಕಾಣುವ
ನವಶಕ್ತಿಯ ತುಂಬುವ 
ಭುವನೇಶ್ವರಿ ನೀಡುವ
ಸಂದೇಶವ ಸಾರುವ


 

ಎಡವಿದರೆ ನಾಕುರುಳು
ಕೆಲವು ಸಜ್ಜನರಿಗೆ ದಾಸಣ್ಣನ ಮೋಸದ ಬಗ್ಗೆ ತಿಳಿಯುತ್ತದೆ. ಅವರ ಪ್ರಯತ್ನದಿಂದ  ಆತನ ಬಂಡವಾಳ ಬಯಲು ಮಾಡುವ ಸಲುವಾಗಿ ಹೂಡಿದ ತಂತ್ರದ ಭಾಗ ಈ ಹಾಡು. ಎಲ್.ಆರ್. ಈಶ್ವರಿ ಮತ್ತು  ಎಸ್. ಜಾನಕಿ ಧ್ವನಿಗಳಲ್ಲಿದೆ. ಸಾರಂಗಿ, ಮ್ಯಾಂಡೊಲಿನ್ ಮತ್ತು  ಮಹಾರಾಷ್ಟ್ರದ ಢೋಲಕಿಯ ಅದ್ಭುತ  ನುಡಿತ ಇದರಲ್ಲಿದೆ.  ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಲ್ಲಿ ಈ ಹಾಡಿನ ತುಣುಕೂ ಇದೆ.

ಎಡವಿದರೆ ನಾಕುರುಳು ನುಡಿ ಜಾರೆ ನೂರುರುಳು
ನಡೆ ಜಾರೆ ಹೆಣ್ಣಿನ ಕೊರಳಿಗೆ ಉರುಳು

ಕಂಕಣ ಕಾಲುಂಗುರ ಸಿಂಗಾರದ ಗೋಪುರ
ಸುಂದರಿಯಳ ವೈಯಾರ ಗಂಡಿಗೇಕೆ ಬೇಸರ

ಎಡವಿದರೆ ನಾಕುರುಳು ನುಡಿ ಜಾರೆ ನೂರುರುಳು
ನಡೆ ಜಾರೆ ಗಂಡಿಗೆ ನರಕವೇ ನೆರಳು
ಎಡವಿದರೆ ನಾಕುರುಳು 

ಜಾಣೆಯಂತೆ ಮಾತನಾಡಿ ಜಾರಿ ಜಾರಿ ಬೀಳಬೇಡ
ಜಾರಿ ನೀನು ಬಿದ್ದಾಗ ನಗುವೆ ಏಕೆ ಎನಬೇಡ
ಎಡವಿದರೆ ನಾಕುರುಳು 

ನೀತಿ ನೂರು ಪಾಠ ನೂರು ಹೇಳುವವರು ಸಾವಿರಾರು
ಮಾತಲೊಂದು ಗೋಪುರ ಕಟ್ಟಬೇಡ ನೀ ಚತುರ
ಎಡವಿದರೆ ನಾಕುರುಳು 




ಕೊನೆಗೆ ಒಂದಷ್ಟು ಡಿಶುಂ ಡಿಶುಂ ಇತ್ಯಾದಿ ಆಗಿ ದಾಸಣ್ಣ ಸೋಲೊಪ್ಪಿಕೊಳ್ಳುತ್ತಾನೆ. ಗೋಪುವಿಗೆ ನ್ಯಾಯ ಸಿಗುತ್ತದೆ. ಆಗಲೇ ನಿಶ್ಚಯವಾಗಿದ್ದ ಮದುವೆ  ಮಧುವಿಗೆ ಇಷ್ಟವಿಲ್ಲದ್ದರಿಂದ ಕಮಲಳೂ ಸಿಗುತ್ತಾಳೆ. ಕಳೆದು ಹೋಗಿದ್ದ ತಂಗಿ, ತಂದೆ ಎಲ್ಲರೂ ಒಟ್ಟಾಗಿ ಎಲ್ಲವೂ ಸುಖಾಂತ್ಯವಾಗುತ್ತದೆ.

ಎಲ್ಲ ವಿಭಾಗಗಳಲ್ಲೂ  ಉತ್ತಮವೇ ಆದ ಈ ಚಿತ್ರದ ಹೈಲೈಟ್ ಮೋಸಗಾರ ದಾಸಣ್ಣನಾಗಿ  ಬಾಲಕೃಷ್ಣ ಅವರ ನಟನೆ. ಅವರಷ್ಟು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದವರು ಕನ್ನಡ ಮಾತ್ರವಲ್ಲ,  ಯಾವ ಚಿತ್ರರಂಗದಲ್ಲೂ ಇರಲಾರರು.

 



 






Monday, 10 March 2025

ಸಮಾನ ಹಗಲು ರಾತ್ರಿ, ಶುದ್ಧ ಪೂರ್ವದಲ್ಲಿ ಸೂರ್ಯೋದಯ ಮತ್ತು ಶೂನ್ಯ ನೆರಳು.



ಮಾರ್ಚ್ 20ರ ವಸಂತ ವಿಷುವತ್ ಮತ್ತು
ಸಪ್ಟಂಬರ 22ರ ಶರದ್ ವಿಷುವತ್ ದಿನಗಳಂದು 23.5 ಡಿಗ್ರಿ ಬಾಗಿರುವ ಭೂಮಿಯ ಉತ್ತರ ಮತ್ತು ದಕ್ಷಿಣ ಭಾಗಗಳೆರಡೂ ಸೂರ್ಯನಿಂದ ಸಮಾನ ದೂರದಲ್ಲಿರುವುದರಿಂದ ಎಲ್ಲೆಡೆ ಅಂದು ಸಮಾನ ಅವಧಿಯ ಹಗಲು ಮತ್ತು ರಾತ್ರಿ ಇರಬೇಕು. ಆದರೆ ವಾತಾವರಣದಲ್ಲಿ ಕಿರಣಗಳ ವಕ್ರೀಭವನದಿಂದಾಗಿ ಸೂರ್ಯನು ನಿಜವಾಗಿ ಉದಯಿಸುವುದಕ್ಕಿಂತ ಮೊದಲೇ ಉದಯಿಸಿದಂತೆ ಭಾಸವಾಗುವುದು ಮತ್ತು ಸಂಜೆ ನಿಜವಾಗಿ ಅಸ್ತನಾದ ಮೇಲೂ ಇನ್ನೂ ಸ್ವಲ್ಪ ಹೊತ್ತು ಕಾಣಿಸುವುದು ಹಾಗೂ ಸೂರ್ಯ ಗೋಲದ ಮೇಲ್ಭಾಗ ಪೂರ್ವ ದಿಗಂತದಲ್ಲಿ ಕಾಣಿಸುವುದನ್ನು ಉದಯ ಎಂದು ಹಾಗೂ ಗೋಲದ ಕೆಳಭಾಗ ಸಂಜೆಗಾಗುವಾಗ ಮೇಲ್ಭಾಗ ಆಗಿ ಪಶ್ಚಿಮದಲ್ಲಿ ಮರೆಯಾದ ಮೇಲಷ್ಟೇ ಅಸ್ತ ಎಂದು ಅನಿಸಿಕೊಳ್ಳುವುದರಿಂದ ಪ್ರತೀ ಹಗಲು ವಾಸ್ತವಕ್ಕಿಂತ ಕೆಲವು ನಿಮಿಷ ಹೆಚ್ಚಿನ ಅವಧಿ ಹೊಂದಿರುವಂತೆ ನಮಗೆ ಭಾಸವಾಗುತ್ತದೆ. ಹೀಗಾಗಿ ಹಗಲು ಹಿರಿದಾಗುತ್ತಾ ಹೋಗುವಾಗ ವಸಂತ ವಿಷುವತ್‌ಗಿಂತ ಕೆಲವು ದಿನ ಮೊದಲು ಮತ್ತು ಹಗಲು ಕಿರಿದಾಗುತ್ತಾ ಹೋಗುವಾಗ ಶರದ್ ವಿಷುವತ್‌ಗಿಂತ ಕೆಲವು ದಿನ ನಂತರ ಸಮಾನ ಅವಧಿಯ ಹಗಲು ರಾತ್ರಿಯ ದಿನ ಇರುತ್ತದೆ. ಆಯಾ ಸ್ಥಳದ ಅಕ್ಷಾಂಶ ಹೊಂದಿಕೊಂಡು ಈ ದಿನಗಳು ಬೇರೆ ಬೇರೆ ಆಗಿರುತ್ತವೆ. ಉತ್ತರ ಮತ್ತು ದಕ್ಷಿಣ ಗೋಲಾರ್ಧಗಳ ಕೆಲವು ಅಕ್ಷಾಂಶಗಳಲ್ಲಿ ಸಮಾನ ಅವಧಿಯ ಹಗಲು ರಾತ್ರಿಗಳಿರುವ ದಿನಾಂಕಗಳು ಇಲ್ಲಿವೆ. 12.9 ಉತ್ತರ ಅಕ್ಷಾಂಶದಲ್ಲಿರುವ ಮಂಗಳೂರು ಮತ್ತಿತರ ಸ್ಥಳಗಳಲ್ಲಿ ಮಾರ್ಚ್ 11 ಮತ್ತು ಅಕ್ಟೋಬರ್ 2ರಂದು ಸಮಾನ ದಿನ ರಾತ್ರಿಗಳಿರುತ್ತವೆ.

ಭೂಮಧ್ಯರೇಖೆ ಪ್ರದೇಶದಲ್ಲಿರುವ ಸ್ಥಳಗಳಲ್ಲಿ ಸಮಾನ ಹಗಲು ರಾತ್ರಿಗಳ ದಿನವೇ ಇಲ್ಲ. ಅಲ್ಲಿ ವರ್ಷ ಪೂರ್ತಿ 12 ಗಂಟೆ 06 ನಿಮಿಷ ಅವಧಿಯ ಹಗಲು.
ಶುದ್ಧ ಪೂರ್ವದಲ್ಲಿ ಸೂರ್ಯೋದಯ ಮತ್ತು ಶೂನ್ಯ ನೆರಳು.
ವರ್ಷವಿಡಿ ಉತ್ತರದಿಂದ ದಕ್ಷಿಣಕ್ಕೆ ಮತ್ತು ದಕ್ಷಿಣದಿಂದ ಉತ್ತರಕ್ಕೆ ಚಲಿಸುವ ಸೂರ್ಯನು ವಸಂತ ವಿಷುವತ್ ಮತ್ತು ಶಿಶಿರ ವಿಷುವತ್ ದಿನಗಳಂದು ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಹೊರತುಪಡಿಸಿ ಭೂಮಿಯ ಎಲ್ಲೆಡೆ ಶುದ್ಧ ಪೂರ್ವದಲ್ಲಿ (90 ಡಿಗ್ರಿ) ಉದಯಿಸಿ ಶುದ್ಧ ಪಶ್ಚಿಮದಲ್ಲಿ (270 ಡಿಗ್ರಿ) ಅಸ್ತಮಿಸುತ್ತಾನೆ. ಹಾಗಿದ್ದರೆ ಆ ದಿನಗಳಂದು ನಡು ಮಧ್ಯಾಹ್ನ ಸೂರ್ಯ ನಡು ನೆತ್ತಿಯ ಮೇಲೆ ಬಂದು ಶೂನ್ಯ ನೆರಳು ಉಂಟಾಗುತ್ತದೆಯೇ ಎಂಬ ಪ್ರಶ್ನೆ ಬರುತ್ತದೆ. ಹಾಗಾಗುವುದಿಲ್ಲ ಎಂಬುದು ಇದಕ್ಕೆ ಉತ್ತರ. ಸೂರ್ಯ ಪೂರ್ವ ದಿಶೆಯಲ್ಲಿ ಉದಯಿಸಿ ನೂಲು ಹಿಡಿದಂತೆ ನೇರವಾಗಿ ಪಶ್ಚಿಮದತ್ತ ಸಾಗದೆ ಉತ್ತರ ಗೋಲಾರ್ಧದಲ್ಲಿ ದಕ್ಷಿಣದತ್ತ ಬಾಗಿರುವ, ದಕ್ಷಿಣ ಗೋಲಾರ್ಧದಲ್ಲಿ ಉತ್ತರದತ್ತ ಬಾಗಿರುವ ವಕ್ರ ದಾರಿಯಲ್ಲಿ ಸಾಗುವುದು ಇದಕ್ಕೆ ಕಾರಣ.

ಇಲ್ಲಿರುವ ಚಿತ್ರದಲ್ಲಿ 12.9 ಅಕ್ಷಾಂಶದ ಮಂಗಳೂರಿನಲ್ಲಿ ಮಾರ್ಚ್ 20ರಂದು ಸೂರ್ಯನು ಶುದ್ಧ ಪೂರ್ವದಲ್ಲಿ ಉದಯಿಸಿ ಶುದ್ಧ ಪಶ್ಚಿಮದಲ್ಲಿ ಅಸ್ತನಾದರೂ ನಡು ಮಧ್ಯಾಹ್ನ ದಕ್ಷಿಣದತ್ತ ಸರಿದಿರುವುದನ್ನು ಮತ್ತು ಎಪ್ರಿಲ್ 24ರಂದು ಶುದ್ಧ ಪೂರ್ವಕ್ಕಿಂತ ಉತ್ತರದಲ್ಲಿ ಉದಯಿಸಿ ಪಶ್ಚಿಮಕ್ಕಿಂತ ಉತ್ತರದಲ್ಲಿ ಅಸ್ತನಾದರೂ ಆತ ದಕ್ಷಿಣದತ್ತ ಬಾಗಿದ ಪಥದಲ್ಲಿ ಚಲಿಸಿ ನಡು ಮಧ್ಯಾಹ್ನ ನಡು ನೆತ್ತಿಯ ಮೇಲೆ ಬಂದು ಶೂನ್ಯ ನೆರಳು ಉಂಟಾಗುವುದನ್ನು ಕಾಣಬಹುದು. ಈ ವಿದ್ಯಮಾನ ವಿವಿಧ ದಿನಾಕಗಳಂದು ಮಕರ ವೃತ್ತ ಮತ್ತು ಕರ್ಕ ವೃತ್ತಗಳೊಳಗೆ ಇರುವ ಪ್ರದೇಶಗಳಲ್ಲಿ ಮಾತ್ರ ಘಟಿಸುತ್ತದೆ. ಶೂನ್ಯ ನೆರಳು ಉಂಟಾಗುವ ದಿನ ಆ ಸ್ಥಳದ ಅಕ್ಷಾಂಶ ಮತ್ತು ಭೂಮಧ್ಯ ರೇಖೆ ಹಾಗೂ ಸೂರ್ಯ ಕಿರಣಗಳ ನಡುವಿನ ಕೋನ (declination) ಒಂದೇ ಆಗಿರುತ್ತದೆ.

ಅಕ್ಷಾಂಶ ಹೆಚ್ಚಾದಂತೆ ಸೂರ್ಯನ ಪಥದ ಬಾಗು ಹೆಚ್ಚಾಗುವುದನ್ನು ದಕ್ಷಿಣದ ಸಿಡ್ನಿ ಮತ್ತು ಉತ್ತರದ ಮಾಸ್ಕೋಗೆ ಸಂಬಂಧಿಸಿದ ಚಿತ್ರಗಳಲ್ಲಿ ನೋಡಬಹುದು. ದಕ್ಷಿಣ ಗೋಲಾರ್ಧದ ಸಿಡ್ನಿಯಲ್ಲಿ ಸೂರ್ಯಪಥದ ಬಾಗು ಉತ್ತರಕ್ಕಿರುವುದನ್ನೂ ಗಮನಿಸಬಹುದು.


ಭೂಮಧ್ಯ ರೇಖೆಯ ಮೇಲೆ ಇರುವ ಪ್ರದೇಶಗಳಲ್ಲಿ ವಿಷುವತ್ ದಿನದಂದೇ ಶೂನ್ಯ ನೆರಳಿನ ದಿನ ಇರುತ್ತದೆ. ಏಕೆಂದರೆ ಅಲ್ಲಿ ಆ ದಿನ ಸೂರ್ಯ ಪೂರ್ವದಲ್ಲಿ ಉದಯಿಸಿ ನೇರ ದಾರಿಯಲ್ಲಿ ಪಶ್ಚಿಮಕ್ಕೆ ಸಾಗುತ್ತಾ ನಡು ಮಧ್ಯಾಹ್ನ ನೆತ್ತಿಯ ಮೇಲೆ ಬರುತ್ತಾನೆ.

- ಚಿದಂಬರ ಕಾಕತ್ಕರ್.


Saturday, 8 March 2025

ಮರೆಯಲ್ಲುಳಿದ ಮುದ ತುಂಬಿ ಮೆರೆವ ಮದುಮಗಳು



ಶಾರ್ಟ್ ವೇವ್ ವಿವಿಧಭಾರತಿಯಲ್ಲಿ ಅಪರಾಹ್ನ 4 ಗಂಟೆಯ ನಂತರ ಕರ್ನಾಟಕ್ ಸಂಗೀತ್ ಸಭಾದ  ಮಧುರ್ ಗೀತಂ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತೀಯ ಭಾಷೆಗಳ ಸಿನಿಮಾ ಹಾಡುಗಳು ಪ್ರಸಾರವಾಗುತ್ತಿದ್ದುದುದು ಹಳೆಯ ತಲೆಮಾರಿನವರಿಗೆ ಗೊತ್ತಿರುತ್ತದೆ. ಈ ಕಾರ್ಯಕ್ರಮ ಅಪರಾಹ್ನ 4 ಗಂಟೆಗೆ ಆರಂಭವಾಗಲು ಒಂದು ಕಾರಣ ಇದೆ. ರೇಡಿಯೋ ಸಿಲೋನಿನ ದಕ್ಷಿಣ ಭಾರತೀಯ ಕಾರ್ಯಕ್ರಮ ಆರಂಭವಾಗುತ್ತಿದ್ದುದು ಕೂಡ 4 ಗಂಟೆಗೆ. 1957ರಲ್ಲಿ ವಿವಿಧಭಾರತಿ ಜನ್ಮ ತಾಳಿದ್ದೇ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ರೇಡಿಯೋ ಸಿಲೋನನ್ನು counter  ಮಾಡುವುದಕ್ಕಾಗಿ! ಆದರೆ ಮುಂದಿನ ಅನೇಕ ದಶಕಗಳ ಕಾಲ ಇದು ಸಾಧ್ಯವಾಗಲಿಲ್ಲ ಅನ್ನುವುದು ಬೇರೆ ಮಾತು.

ಅದೇನೇ ಇರಲಿ.  ಈ ಕಾರ್ಯಕ್ರಮದಿಂದಾಗಿ  ನಮಗೆ ಕನ್ನಡ ಹಾಡುಗಳೊಂದಿಗೆ ಪಾಲುಂ ಪಳಮುಂ ಚಿತ್ರದ ನಾನ್  ಪೇಸ ನಿನೈಪದೆಲ್ಲಾಂ, ಕಲ್ಯಾಣ ಪರಿಸು ಚಿತ್ರದ ಉನ್ನೈ ಕಂಡು ನಾನಾಡ,  ಮಿಸ್ಸಿಯಮ್ಮ ಚಿತ್ರದ ಬೃಂದಾವನಮಿದಿ ಅಂದರಿದಿ ಗೋವಿಂದುಡು, ಚೆಮ್ಮೀನ್ ಚಿತ್ರದ ಕಡನಿಲಕ್ಕರೆ ಪೋಣೋರೆ ಮುಂತಾದ ತಮಿಳು, ತೆಲುಗು ಮತ್ತು ಮಲಯಾಳಂ ಹಾಡುಗಳ ಪರಿಚಯವೂ ಆಗುತ್ತಿತ್ತು. ಆಗ  ಎಲ್.ಆರ್.ಈಶ್ವರಿ ಹಾಡಿದ ವಾರಾಯನ್ ತೋಡಿ ವಾರಾಯೋ ಎಂಬ  ಪಾಶ ಮಲರ್ ತಮಿಳು ಚಿತ್ರದ  ಹಾಡು ನಮಗೆ ವಿಶೇಷ ಆಕರ್ಷಣೆ ಆಗಿತ್ತು.  ಇದಕ್ಕೆ ಕಾರಣ  ಆ ಹಾಡಿನ ಆಕರ್ಷಕ ನಡೆ ಮತ್ತು ಚರಣಗಳ ಮಧ್ಯೆ ಇದ್ದ ಶ್ರುತಿಬದ್ಧ ಮಂತ್ರಘೋಷ.  

1961ರ ಪಾಶ ಮಲರ್ 1965ರಲ್ಲಿ ವಾತ್ಸಲ್ಯ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ತಯಾರಾಯಿತು.  ಸಂಗೀತ ನಿರ್ದೇಶಕ ವಿಜಯಾ ಕೃಷ್ಣಮೂರ್ತಿ ಉಳಿದ ಹಾಡುಗಳಿಗೆ ಸ್ವಂತ ಧಾಟಿಗಳನ್ನು ಸಂಯೋಜಿಸಿದರೂ ವಾರಾಯನ್ ತೋಡಿ ವಾರಾಯೋ  ಸನ್ನಿವೇಶದ  ಮುದ ತುಂಬಿ ಮೆರೆವ ಮದುಮಗಳೇ ಹಾಡಿಗೆ ವಿಶ್ವನಾಥನ್ ರಾಮಮೂರ್ತಿ ಅವರ ಮೂಲ ಟ್ಯೂನನ್ನೇ ಉಳಿಸಿಕೊಂಡರು. ಸ್ವತಃ ಅರೇಂಜರ್ ಆಗಿದ್ದ ಅವರಿಗೆ ಹಾಡಿನ ಮರುಸೃಷ್ಟಿ  ಕಷ್ಟವೆನಿಸಲಿಲ್ಲ. ತಮಿಳು ಹಾಡನ್ನೂ ಮೀರಿಸುವಂತೆ ಕನ್ನಡದಲ್ಲೂ ಎಲ್.ಆರ್. ಈಶ್ವರಿಯೇ ಹಾಡಿದರು.  ಸೋರಟ್ ಅಶ್ವತ್ಥ್ ಅವರ ಅರ್ಥಪೂರ್ಣ, ಸರಳ, ಪ್ರಾಸಬದ್ಧ ಸಾಹಿತ್ಯ ಹಾಡಿಗೆ ಹೆಚ್ಚಿನ ಮೆರುಗು ನೀಡಿತು. 

ಗಿಟಾರಿನ ಝೇಂಕಾರದೊಡನೆ ಆರಂಭವಾಗುವ ಸುಮಾರು 30 ಸೆಕೆಂಡುಗಳ ತಾಳವಾದ್ಯ ರಹಿತ prelude ಮುಗಿದೊಡನೆ ಶ್ರುತಿಯಲ್ಲಿರುವ ಢೋಲಕಿನ ಎತ್ತುಗಡೆಯೊಂದಿಗೆ ಹಾಡಿನ ಪಲ್ಲವಿ ಆರಂಭವಾಗುತ್ತದೆ. ಕೋರಸ್ ಧ್ವನಿಯ  ಮೊದಲ ಎರಡು ಸಾಲು ಆದ ಮೇಲೆ ಎಲ್.ಆರ್. ಈಶ್ವರಿಯ ಕಂಚಿನ ಕಂಠದ ಪ್ರವೇಶವಾಗುತ್ತದೆ. ಪಲ್ಲವಿ ಮುಗಿಯುವ ಮೊದಲೇ ಹಿನ್ನೆಲೆಯಲ್ಲಿ ತವಿಲ್ ಮತ್ತು ನಾಗಸ್ವರ ನುಡಿಯತೊಡಗಿ ಪಲ್ಲವಿ ಮುಗಿಯುತ್ತಲೇ ಅದೇ ಹಿನ್ನೆಲೆಯೊಂದಿಗೆ ಮಂತ್ರಗಳು ಕೇಳಿಸುತ್ತವೆ. ನಂತರ ಗಿಟಾರ್ ಲಯದೊಂದಿಗೆ ಸಣ್ಣ BGM ಇದೆ.  ಚರಣ ಆರಂಭವಾಗುತ್ತಲೇ ಸಣ್ಣ ಉರುಳಿಕೆಯೊಂದಿಗೆ ಢೋಲಕ್ take over ಮಾಡುತ್ತದೆ. ಇಲ್ಲಿ ಪಲ್ಲವಿ ಭಾಗದ ದತ್ತು ಠೇಕಾ (ಹಿಂದಿಯ ದತ್ತಾರಾಂ ಪ್ರಚುರಪಡಿಸಿದ ಲಯ)  ಬೇರೆ ನಡೆಗೆ ಬದಲಾಗುತ್ತದೆ. ಚರಣದ ಕೊನೆಯ ಸಾಲುಗಳನ್ನು ಪುನರಾವರ್ತನೆ ಮಾಡಿದ ಕೋರಸ್ ದತ್ತು ಠೇಕಾದೊಂದಿಗೆ  ಪಲ್ಲವಿಯ ಮೊದಲ ಎರಡು ಸಾಲು ಹಾಡುತ್ತದೆ. ಪುನಃ ತವಿಲ್, ನಾಗಸ್ವರ ಹಿನ್ನೆಲೆಯ ಮಂತ್ರಗಳ ನಂತರ ಈ ಸಲ ಚಪ್ಪಾಳೆ ಲಯದೊಂದಿಗಿನ ಗಿಟಾರಿನೊಂದಿಗೆ ಸಖಿಯರ ನಗು ಮೇಳೈಸುತ್ತದೆ. ಮೊದಲ ಚರಣದಂತೆಯೇ ಎರಡನೆಯ ಚರಣ ಸಾಗುತ್ತದೆ. ಕೊನೆಗೆ ಗಟ್ಟಿ ಮೇಳದ ಜೊತೆಗೆ ಮಂತ್ರಗಳು ಮೊಳಗಿ ಮಾಂಗಲ್ಯಧಾರಣೆಯ ಚಿತ್ರ ಕಣ್ಣಮುಂದೆ ಮೂಡುತ್ತದೆ. 

ಮುದ ತುಂಬಿ ಮೆರೆವ ಮದುಮಗಳೇ ಮನದಾಸೆ ತೀರೆ ವೇಳೆ ಈ ವೇಳೆ ಎಂಬ ಪಲ್ಲವಿಯ ಮೊದಲ ಎರಡು ಸಾಲುಗಳನ್ನು ಮುಖ್ಯ ಗಾಯಕಿ ಒಮ್ಮೆಯೂ ಹಾಡುವುದಿಲ್ಲ!

ಆದರೆ ಈ ಚಂದದ ಹಾಡು  ಜನಸಾಮಾನ್ಯರನ್ನು ತಲುಪಲೇ ಇಲ್ಲ!  ಆಕಾಶವಾಣಿಯಲ್ಲಿ ಈ ಚಿತ್ರದ ಹಾಡುಗಳು ಪ್ರಸಾರವಾಗದೇ ಇದ್ದುದು ಇದಕ್ಕೆ ಕಾರಣ. ಈ ಹಾಡುಗಳ ಗ್ರಾಮಫೋನ್ ಡಿಸ್ಕುಗಳೇ ತಯಾರಾಗಿರಲಿಲ್ಲವೇನೋ ಎಂಬ ಅನುಮಾನ ನನ್ನಲ್ಲಿ ಮೂಡಿತ್ತು.  ಆದರೆ ಅನೇಕ ವರ್ಷಗಳ ನಂತರ ಮೈಸೂರಿನ ಚಂದ್ರು ಸೌಂಡ್ ಸಿಸ್ಟಂನವರಲ್ಲಿ ಈ ಹಾಡಿನ ಡಿಸ್ಕ್ ಇರುವುದು ತಿಳಿದು ಕ್ಯಾಸೆಟ್ಟಿನಲ್ಲಿ ರೆಕಾರ್ಡ್ ಮಾಡಿಸಿಕೊಂಡಿದ್ದೆ. ಬಹುಶಃ ಆಕಾಶವಾಣಿಗೆ ಹಾಡುಗಳ ಡಿಸ್ಕ್ ಒದಗಿಸುವ ಜವಾಬ್ದಾರಿ  ಹೊತ್ತಿದ್ದ ಮದರಾಸಿನ ಸರಸ್ವತಿ ಸ್ಟೋರ್‌ನವರ ಎಡವಟ್ಟಿನಿಂದ  ಹೀಗಾಗಿರಬಹುದು. ಲಾಯರ್ ಮಗಳು, ಬಂಗಾರಿ, ಬಾಲರಾಜನ ಕಥೆ ಮುಂತಾದ ಚಿತ್ರಗಳ ಹಾಡುಗಳು ಆಕಾಶವಾಣಿಯನ್ನು ತಲುಪದೇ ಇರಲೂ ಇದೇ ಕಾರಣ ಇರಬಹುದು.

ಮುದ ತುಂಬಿ ಬಂದ ಮದುಮಗಳೇ
ಚಿತ್ರ : ವಾತ್ಸಲ್ಯ.
ಗಾಯನ : ಎಲ್.ಆರ್. ಈಶ್ವರಿ ಮತ್ತು ಸಂಗಡಿಗರು.
ಸಂಗೀತ : ವಿಜಯಾ ಕೃಷ್ಣಮೂರ್ತಿ.
ಸಾಹಿತ್ಯ : ಸೋರಟ್ ಅಶ್ವತ್ಥ್.


ಹಾಡು ಕೇಳಲು ಬಾಣದ ಮೇಲೆ ಕ್ಲಿಕ್ಕಿಸಿ.





ಬಂಧುವರ್ಗದಲ್ಲಿ ನಡೆಯುವ ವಿವಾಹಗಳ ವೀಡಿಯೊದಲ್ಲಿ ಈ ಹಾಡನ್ನು ನಾನು ತಪ್ಪದೆ ಬಳಸುತ್ತೇನೆ.

ರಾಜಕುಮಾರ್ ಮತ್ತು ಲೀಲಾವತಿ ಅವರು ಅಣ್ಣ ತಂಗಿ ಪಾತ್ರಗಳಲ್ಲಿ ನಟಿಸಿದ ಏಕೈಕ ಚಿತ್ರ ವಾತ್ಸಲ್ಯ. ಅವರೊಂದಿಗೆ  ಉದಯಕುಮಾರ್, ಜಯಂತಿ, ನರಸಿಂಹರಾಜು ಮುಂತಾದವರು ಅಭಿನಯಿಸಿದ ವೈ.ಆರ್. ಸ್ವಾಮಿ ನಿರ್ದೇಶನವಿದ್ದ ಈ ಚಿತ್ರ ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು.  


- ಚಿದಂಬರ ಕಾಕತ್ಕರ್.



Monday, 17 February 2025

ಮಾಸ ಋತುಗಳ ತಪ್ಪಿದ ತಾಳ


ಚಾಂದ್ರಮಾನ ಪ್ರಕಾರ ಚೈತ್ರ ವೈಶಾಖಗಳೆಂದರೆ ವಸಂತ ಋತು. ಸೌರಮಾನ ಪ್ರಕಾರ ಮೇಷ ವೃಷಭ ಮಾಸಗಳು ವಸಂತ ಋತು. ಆದರೆ ಪ್ರಕೃತಿ ಚಾಂದ್ರಮಾನ ಪಂಚಾಂಗವನ್ನೂ ನೋಡುವುದಿಲ್ಲ, ಸೌರಮಾನ ಪಂಚಾಂಗವನ್ನೂ ನೋಡುವುದಿಲ್ಲ. ಅದು ನೋಡುವುದು ಸೂರ್ಯನ ಸುತ್ತ ವಾರ್ಷಿಕ ಚಲನೆಯ ಪಥದಲ್ಲಿ ಭೂಮಿ ಎಲ್ಲಿದೆ ಎಂದು, ಅಥವಾ ಭೂಮಿಯಲ್ಲಿರುವ ನಾವು ಗ್ರಹಿಸುವಂತೆ ಸೂರ್ಯ ತನ್ನ ವಾರ್ಷಿಕ 360 ಡಿಗ್ರಿ ಚಲನೆಯಲ್ಲಿ ಈಗ ಎಲ್ಲಿದ್ದಾನೆ ಎಂದು ಮಾತ್ರ.
ಸೂರ್ಯ ಕ್ರಾಂತಿವೃತ್ತದಲ್ಲಿ ತನ್ನ ವಾರ್ಷಿಕ ಪರಿಭ್ರಮಣೆ ಆರಂಭಿಸುವ ಶೂನ್ಯ ಡಿಗ್ರಿಯ ವಸಂತ ವಿಷುವತ್ ಬಿಂದುವಿನಿಂದ 30 ಡಿಗ್ರಿ ಹಿಂದಕ್ಕೆ ಅಂದರೆ 330 ಡಿಗ್ರಿಯಲ್ಲಿ ಇರುವಾಗ (360-30=330) ಪ್ರಕೃತಿಯಲ್ಲಿ ವಸಂತದ ಲಕ್ಷಣಗಳು ಕಾಣಿಸತೊಡಗುತ್ತವೆ. ಇಲ್ಲಿಂದ ಮುಂದೆ ಚಲಿಸುತ್ತಾ ವಸಂತ ವಿಷುವತ್ ದಾಟಿ ಎಪ್ರಿಲ್ 20ಕ್ಕೆ 30 ಡಿಗ್ರಿ ಬಿಂದುವನ್ನು ತಲುಪುವ ವರೆಗೆ ವಸಂತ ಋತು. ಮುಂದೆ ಜೂನ್ 21ರ ವರೆಗೆ ಅತಿಯಾದ ಸೆಕೆಯ ಗ್ರೀಷ್ಮ ಋತು. ಅಗಸ್ಟ್ 23ರ ವರೆಗೆ ಮಳೆಯು ಇಳೆಯನ್ನು ತಂಪಾಗಿಸುವ ವರ್ಷಾ ಋತು. ನಂತರ ಅಕ್ಟೋಬರ್ 23ರ ವರೆಗೆ ಸಮ ಶೀತೋಷ್ಣದ ಶರದೃತು. ಆ ಮೇಲೆ ಡಿಸೆಂಬರ್ 22ರ ವರೆಗೆ ವಾತಾವರಣ ತಂಪಾಗುತ್ತಾ ಹೋಗುವ ಹೇಮಂತ ಋತು. ಕೊನೆಯಲ್ಲಿ ಫೆಬ್ರವರಿ 18ರ ವರೆಗೆ ಮೈ ಕೊರೆಯುವ ಚಳಿ ಇರಬೇಕಾದ ಶಿಶಿರ ಋತು. ಸೂರ್ಯನ ಸುತ್ತ ಭೂಮಿಯ ಪರಿಭ್ರಮಣವನ್ನು ಪರಿಗಣಿಸುವುದರಿಂದ ಇದು ಸಾಯನ (ಚಲನೆಯಿಂದೊಡಗೂಡಿದ) ಪದ್ಧತಿಯ ಲೆಕ್ಕಾಚಾರ.
ಹಾಗಿದ್ದರೆ ಪಂಚಾಂಗಗಳೊಂದಿಗಿನ ಋತುಗಳ ತಾಳ ಮೇಳ ಏಕೆ ತಪ್ಪಿತು? ಒಂದು ಕಾಲದಲ್ಲಿ ಉತ್ತರಾಯಣಾರಂಭದಂದು ದಶಂಬರದಲ್ಲಿ ಇರುತ್ತಿದ್ದ ಮಕರ ಸಂಕ್ರಾಂತಿ ಈಗ ಜನವರಿ ಮಧ್ಯಭಾಗಕ್ಕೆ ತಲುಪಲು ಕಾರಣವಾದ ಭೂಮಿಯ ಓಲಾಡುವಿಕೆಯಿಂದ ಉಂಟಾಗುವ precession of equinoxes ವಿದ್ಯಮಾನವೇ ಇದಕ್ಕೂ ಕಾರಣ. ಏಕೆಂದರೆ ಸೂರ್ಯನ ಸುತ್ತ ಭೂಮಿಯ ಚಲನೆಯನ್ನು ಗಣನೆಗೆ ತೆಗೆದುಕೊಳ್ಳದ ನಿರಯನ ಪದ್ಧತಿಯ ಸೌರಮಾನದಲ್ಲಿ ಮೇಷ ವೃಷಭಾದಿ ಎರಡು ಮಾಸಗಳಿಗೊಂದರಂತೆ ವಸಂತ ಗ್ರೀಷ್ಮಾದಿ ಋತುಗಳಿರುತ್ತವೆ. ನಿರಯನ ಪದ್ಧತಿಯ ಸೌರಮಾನದಲ್ಲಿ ಸೂರ್ಯನ ವಾರ್ಷಿಕ ಚಲನೆಯನ್ನು ಮೇಷ ರಾಶಿಯಿಂದ ಲೆಕ್ಕ ಹಾಕಲಾಗುತ್ತಿದ್ದು ಕಾಂತಿವೃತ್ತದಲ್ಲಿ ಅದರ ಆರಂಭ ಬಿಂದುವನ್ನು ಮೇಷಾದಿ ಅನ್ನಲಾಗುತ್ತದೆ. ಈಗ ಇದು ವಸಂತ ವಿಶುವತ್ ಬಿಂದುವಿಗಿಂತ ಸುಮಾರು 24.2 ಡಿಗ್ರಿ ಹಿಂದಕ್ಕಿದೆ. ಈ ವ್ಯತ್ಯಾಸವನ್ನು ಅಯನಾಂಶ ಎನ್ನುತ್ತಾರೆ. ಅಯನಾಂಶ ಗಣನೆಯ ಲಾಹಿರಿ, ರಾಮನ್ ಮುಂತಾದ ಬೇರೆ ಬೇರೆ ಪದ್ಧತಿಗಳಲ್ಲಿ ಏಕ ರೂಪತೆ ಇಲ್ಲ. ಬಹುತೇಕ ಆನ್ ಲೈನ್ ಪಂಚಾಂಗಗಳು ಲಾಹಿರಿ ಪದ್ಧತಿಯನ್ನು ಅನುಸರಿಸುತ್ತವೆ. ಕ್ರಿಸ್ತ ಶಕ 285ರಲ್ಲಿ ವಸಂತ ವಿಷುವತ್ ಮತ್ತು ಮೇಷಾದಿ ಬಿಂದುಗಳು ಒಂದೇ ಆಗಿದ್ದವು. ಅಂದರೆ ಆಗ ಅಯನಾಂಶ ಶೂನ್ಯವಾಗಿತ್ತು. ಉತ್ತರಾಯಣ ಆರಂಭ ಮತ್ತು ಮಕರ ಮಾಸ ಆರಂಭ ಒಟ್ಟಿಗೆ ಆಗುತ್ತಿತ್ತು. ವೇದಗಳ ಕಾಲವೆನ್ನಲಾದ ಕ್ರಿಸ್ತ ಪೂರ್ವ 1893ರಲ್ಲಿ ಮೇಷಾದಿ ಬಿಂದು ಸಾಯನ ಪದ್ಧತಿ ಪ್ರಕಾರ ವಸಂತ ಋತು ಆರಂಭ ಆಗುವ 330 ಡಿಗ್ರಿಯಲ್ಲಿ ಇತ್ತು. ಅಂದರೆ ಆಗ ಅಯನಾಂಶ ಮೈನಸ್ 30 ಡಿಗ್ರಿ. ವಸಂತ ವಿಷುವತ್ ವಸಂತ ಋತುವಿನ ಮಧ್ಯದಲ್ಲಿ ಬರುತ್ತಿತ್ತು. ಚಾಂದ್ರಮಾನಕ್ಕೂ ಪ್ರಕೃತಿಯ ಬದಲಾವಣೆಗಳಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಚಾಂದ್ರ ಮಾಸಗಳು ಸೌರ ಸಂಕ್ರಾಂತಿಗಳಿಗೆ ತಳುಕು ಹಾಕಿಕೊಂಡಿರುವುದರಿಂದ ಚೈತ್ರ ವೈಶಾಖ ವಸಂತ ಋತು, ಜ್ಯೇಷ್ಠ ಆಷಾಢ ಗ್ರೀಷ್ಮ ಋತು ಎಂದು ನಾವು ಸಂಜೆಯ ಬಾಯಿಪಾಠದಲ್ಲಿ ಹೇಳುತ್ತೇವೆ. ಇಲ್ಲಿ ಇನ್ನೊಂದು ಸ್ವಾರಸ್ಯವೂ ಇದೆ. ಚಾಂದ್ರ ಮಾಸದಲ್ಲಿ ಕಮ್ಮಿ ದಿನಗಳಿರುವುದರಿಂದ ವಸಂತ ಮಾಸ ಆರಂಭವಾಗುವ ಯುಗಾದಿಯು ಹಿಂದೆ ಬರುತ್ತಾ ಮೂರನೆಯ ವರ್ಷಕ್ಕಾಗುವಾಗ ನಿಜವಾದ ವಸಂತ ಆರಂಭವಾಗುವ ಫೆಬ್ರವರಿ 18ಕ್ಕೆ ಸಾಕಷ್ಟು ಸಮೀಪ ಬರುತ್ತದೆ. ಆದರೆ ಆ ವರ್ಷ ಅಧಿಕ ಮಾಸವೊಂದನ್ನು ಸೇರಿಸಿ ಮತ್ತೆ ಅದನ್ನು ಮುಂದೆ ದೂಡಲಾಗುವುದರಿಂದ ಚಾಂದ್ರ ಚೈತ್ರ ಆರಂಭವಾಗುವಷ್ಟರಲ್ಲಿ ನಿಜವಾದ ಗ್ರೀಷ್ಮ ಋತು ಆರಂಭವಾಗಲು ಕೆಲವೇ ದಿನಗಳು ಉಳಿದಿರುತ್ತವೆ. ಚೈತ್ರ ವೈಶಾಖಗಳ ವಸಂತ ಮುಗಿಯಲಿಕ್ಕಾಗುವಾಗ ಕೊಡೈಕ್ಕನಾಲ್, ಊಟಿಗಳಂತಹ ತಂಪು ಪ್ರದೇಶಗಳ ಹೊರತು ಬೇರೆಡೆ ವಸಂತದ ಯಾವ ಲಕ್ಷಣವೂ ಇರುವುದಿಲ್ಲ. ಸೆಕೆಗಾಲ, ಮಳೆಗಾಲ, ಚಳಿಗಾಲಗಳೂ ಋತುಗಳ ಅನುಸಾರ ಇರುವುದಿಲ್ಲ. 2020ರಿಂದ 2029ರ ವರೆಗಿನ ವರ್ಷಗಳ ಯುಗಾದಿ ದಿನಾಂಕಗಳು ಸಾಯನ ವಸಂತಾರಂಭದ ಸಮೀಪಕ್ಕೆ ಹೋಗುತ್ತಿರುವ ಚಾಂದ್ರ ಯುಗಾದಿಯನ್ನು ಅಧಿಕ ಮಾಸ ಹೇಗೆ ಮತ್ತೆ ದೂರಕ್ಕೊಯ್ಯುತ್ತದೆ ಎಂದು ಇಲ್ಲಿ ನೋಡಬಹುದು.
ಹೆಚ್ಚಿನ online ಪಂಚಾಂಗಗಳು ಫೆಬ್ರವರಿ 18ರಿಂದಲೇ ವಸಂತ ಋತು ಎಂದು ತೋರಿಸುತ್ತವೆ. ಡಿಸೆಂಬರ್ 22ರಿಂದಲೇ ಉತ್ತರಾಯಣಾರಂಭ ಎಂದು ಉಲ್ಲೇಖಿಸುವ ಕೆಲವು ಮುದ್ರಿತ ಸಾಂಪ್ರದಾಯಿಕ ಪಂಚಾಂಗಗಳು ಇವೆಯಾದರೂ ಋತುಗಳನ್ನು ತಿಂಗಳುಗಳಿಂದ ಮತ್ತು ಸಂಕ್ರಾಂತಿಗಳಿಂದ ಬೇರ್ಪಡಿಸಿ ಸೂರ್ಯನ ಚಲನೆಗೆ ಹೊಂದಿಸುವ ಹೊಸತನಕ್ಕೆ ಅವು ಯಾಕೋ ಇನ್ನೂ ಮುಂದಾಗಿಲ್ಲ. 

ಕುತೂಹಲಕಾರಿ ಅಂಶಗಳು.

  1. ಕ್ರಾಂತಿ ವೃತ್ತದಲ್ಲಿ (ecliptical) ಸೂರ್ಯನ ವಾರ್ಷಿಕ ಪಯಣ ಭೂಮಿಯಿಂದ ನೋಡಿದಂತೆ ಪಶ್ಚಿಮದಿಂದ ಪೂರ್ವಕ್ಕೆ ದಿನಕ್ಕೆ ಸುಮಾರು ಒಂದು ಡಿಗ್ರಿ. 30 ಡಿಗ್ರಿಯ ರಾಶಿಯನ್ನು ಒಂದು ತಿಂಗಳಲ್ಲಿ ಹಾದುಹೋಗುತ್ತಾನೆ.  12 ರಾಶಿಗಳನ್ನು ಕ್ರಮಿಸಿ ಮತ್ತೆ ಮೂಲ ಸ್ಥಾನಕ್ಕೆ ಬರಲು ಒಟ್ಟು 12 ತಿಂಗಳು. 
  2. ಇದರಿಂದಾಗಿ  ಆತನ ದೈನಿಕ ಪೂರ್ವ ಪಶ್ಚಿಮ ಪಯಣ ಕೊಂಚ ನಿಧಾನವಾದಂತೆನಿಸಿ ದಿನದ ಅವಧಿ 4 ನಿಮಿಷ ಹೆಚ್ಚಾಗುತ್ತದೆ. ಇದು ಪೂರ್ವದಿಂದ ಪಶ್ಚಿಮಕ್ಕೆ ವೇಗವಾಗಿ ಚಲಿಸುತ್ತಿರುವ ಟ್ರೈನಿನಲ್ಲಿ ಚಹಾ ಮಾರುವವನು ಪಶ್ಚಿಮದಿಂದ ಪೂರ್ವಕ್ಕೆ ನಡೆದುಕೊಂಡು ಹೋದಂತೆ! ಒಂದು ವೇಳೆ ಭೂಮಿ ಸೂರ್ಯನ ಸುತ್ತ ಚಲಿಸದಿರುತ್ತಿದ್ದರೆ ಅಂದರೆ ಪಶ್ಚಿಮದಿಂದ ಪೂರ್ವಕ್ಕೆ ಸೂರ್ಯನ ವಾರ್ಷಿಕ ಚಲನೆ ಇರದಿರುತ್ತಿದ್ದರೆ ದಿನದ ಅವಧಿ 23 ಗಂಟೆ  56 ನಿಮಿಷ ಆಗಿರುತ್ತಿತ್ತು.
  3. ಭೂಮಿ ತನ್ನ ಅಕ್ಷದಲ್ಲಿ ತಿರುಗದಿರುತ್ತಿದ್ದರೆ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ 6 ತಿಂಗಳಲ್ಲಿ ಪೂರ್ವದಲ್ಲಿ ಅಸ್ತನಾಗುತ್ತಿದ್ದ.
  4. ಭೂಮಿ ಸೂರ್ಯನ ಸುತ್ತ ತಿರುಗುವುದರಿಂದ ನಾವು ದಿನವೂ ಆಕಾಶದ ಬೇರೆ ಬೇರೆ ಭಾಗಗಳನ್ನು ನೋಡುವುದು. ಒಮ್ಮೆ ನೋಡಿದ ಭಾಗ ಮತ್ತೆ  ಕಾಣಿಸುವುದು ಒಂದು ವರ್ಷದ ನಂತರ.



- ಚಿದಂಬರ ಕಾಕತ್ಕರ್.

Friday, 14 February 2025

ಮನೆಯಲ್ಲಿ ಕಾರ್ ಸ್ಟೀರಿಯೊ

ಈಗ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಮಾದರಿಯ ರೇಡಿಯೋಗಳು ವೈವಿಧ್ಯಮಯ ದರಗಳಲ್ಲಿ ದೊರೆಯುತ್ತವೆ. ಆದರೆ ನಮ್ಮ ಅಭಿರುಚಿಯ ಕಾರ್ಯಕ್ರಮಗಳು ರೇಡಿಯೋದಲ್ಲಿ ಕೇಳಲು ಸಿಗುವುದು ಕಮ್ಮಿ. ನಮ್ಮಲ್ಲಿರುವ ಇತರ ಮೂಲಗಳ ಮನೋರಂಜನೆಯನ್ನೂ ರೇಡಿಯೋದಲ್ಲಿ ಕೇಳಲು ಆಗುವಂತಿರಬೇಕು. ಧ್ವನಿಯ ಗುಣಮಟ್ಟವೂ ಉತ್ತಮವಾಗಿರಬೇಕು. ಇದಕ್ಕೆ ನಾನು ಕಂಡು ಕೊಂಡ ಪರ್ಯಾಯ ಕಾರ್ ಸ್ಟೀರಿಯೊ.

12 ವೋಲ್ಟ್ ಬ್ಯಾಟರಿಯಲ್ಲಿ ಕಾರ್ಯಾಚರಿಸುವ ಕಾರ್ ಸ್ಟೀರಿಯೋವನ್ನು ಮನೆಯಲ್ಲೂ ಬಳಸಿ ಅದು ಒದಗಿಸುವ 20 watt ಶಕ್ತಿಯ ನಾಲ್ಕು ಸ್ಪೀಕರುಗಳ ಶಕ್ತಿಶಾಲಿ ಧ್ವನಿಯನ್ನು ಆನಂದಿಸಬಹುದು. ಬಾಹ್ಯ antenna ಜೋಡಿಸುವ ವ್ಯವಸ್ಥೆ ಇರುವುದರಿಂದ ಇದರ ರೇಡಿಯೋ ರಿಸೆಪ್ಷನ್ ಸಾಮರ್ಥ್ಯ ಅಧಿಕವಾಗಿರುತ್ತದೆ. ಉದ್ದ ವೈರೊಂದನ್ನು antenna ಆಗಿ ಬಳಸಿದರೆ ದೂರ ದೂರದ ನಿಲಯಗಳೂ ಕೇಳಿಸುತ್ತವೆ. ಹಳ್ಳಿ ಊರುಗಳಲ್ಲಿ electronic emission ಕಮ್ಮಿ ಇರುವುದರಿಂದ ಇನ್ನಷ್ಟು ಚೆನ್ನಾಗಿ ಕೇಳಿಸಬಹುದು. Bluetooth ಮತ್ತು Aux ಅನುಕೂಲವೂ ಇರುವುದರಿದ ಮೊಬೈಲಿನ ಶುಷ್ಕ ಧ್ವನಿಯನ್ನು ಶ್ರೀಮಂತಗೊಳಿಸಲು ಇದನ್ನು ಬಳಸಬಹುದು. USB ಇರುವುದರಿಂದ ಪೆನ್ ಡ್ರೈವಲ್ಲಿರುವ ಹಾಡುಗಳನ್ನೂ  ಆಲಿಸಬಹುದು. ಹಳೆಯ ಸೆಟ್ಟುಗಳಲ್ಲಿ CD ಪ್ಲೇಯರ್ ಕೂಡ ಇರುತ್ತಿತ್ತು. ಆದರೆ ಈಗ CDಗಳ ಕಾಲ ಮುಗಿಯುತ್ತಾ ಬಂದಿದೆ.

ಹಳೆ ಕಾರು ಮಾರುವಾಗ ಅದರ ಸ್ಟೀರಿಯೋ ತೆಗೆದಿಟ್ಟುಕೊಳ್ಳಬಹುದು. ಇಲ್ಲವಾದರೆ ಒಂದೆರಡು ಸಾವಿರ ರೂಪಾಯಿ ಅಂದಾಜಿಗೆ online ಮಾರ್ಕೆಟಲ್ಲಿ ಒಳ್ಳೆಯ ಸೆಟ್ ಸಿಗುತ್ತದೆ.

ಆದರೆ ಇದು plug and play; ಅಂದರೆ ತಂದ, ಕನೆಕ್ಟ್ ಮಾಡಿದ, ಕೇಳಿದ ಮಾದರಿಯದ್ದಲ್ಲ. ವಯರುಗಳ ಕಲರ್ ಕೋಡ್ ಪ್ರಕಾರ ಸ್ಪೀಕರುಗಳನ್ನು  ಮತ್ತು 12 volt ಪವರನ್ನು ನಾವೇ ಕನೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ. 

ಸ್ಪೀಕರ್ ಜೋಡಣೆ. ಕಾರಿನಲ್ಲಿ ಬಳಸುವ ಸ್ಪೀಕರುಗಳೇ ಆದರೆ ಅವುಗಳನ್ನು ಇರಿಸಲು ಮರದ ಪೆಟ್ಟಿಗೆಯೋ ಅಥವಾ ಸೂಕ್ತವಾದ ಬೇರೆ ವ್ಯವಸ್ಥೆಯೋ ಮಾಡಿಕೊಳ್ಳಬೇಕು. ಮಡಕೆಯ ಬಾಯಿಯ ಮೇಲೆ ಸ್ಪೀಕರನ್ನು ಇರಿಸಿದರೆ ಹೆಚ್ಚಿನ ಬಾಸ್ ಎಫೆಕ್ಟ್ ಸಿಗುತ್ತದೆ. ಮನೆಯಲ್ಲಿದ್ದ ಸೌಂಡ್ ಸಿಸ್ಟಮಿನ ಹಳೆಯ ಸ್ಪೀಕರುಗಳಾದರೆ ನೇರವಾಗಿ ಬಳಸಬಹುದು. 20 watt / 8 ohm ಸಾಮರ್ಥ್ಯದವುಗಳಾದರೆ ಒಳ್ಳೆಯದು. ನಾನು ಕಾರ್ ಸ್ಪೀಕರ್ ಮತ್ತು ಹಳೆಯ Sony ಸೌಂಡ್ ಸಿಸ್ಟಮಿನ ಸ್ಪೀಕರುಗಳನ್ನು ಬಳಸಿದ್ದೇನೆ. ಕಲರ್ ಕೋಡ್ ಪ್ರಕಾರ ವಯರ್ ಜೋಡಿಸಿ ಇನ್ಸುಲೇಶನ್ ಟೇಪ್ ಸುತ್ತಬೇಕು. ಇಲ್ಲಿ ಹಿಂದೆ, ಮುಂದೆ, ಎಡ , ಬಲ ಎಂದೆಲ್ಲ ಉಲ್ಲೇಖಿಸಿದ್ದರೂ ನಮ್ಮ ಅನುಕೂಲದ ಪ್ರಕಾರ ಸ್ಪೀಕರುಗಳನ್ನು ಎಲ್ಲೂ ಇರಿಸಬಹುದು. ಅಷ್ಟೂ ಸ್ಪೀಕರುಗಳು ಬೇಕೆಂದೇನೂ ಇಲ್ಲ ಒಂದು ಇದ್ದರೂ ಸಾಕಾಗುತ್ತೆದೆ.

ಪವರ್ ಜೋಡಣೆ. ಇಲ್ಲಿ ಎಚ್ಚರಿಕೆಯಿಂದ ವಯರುಗಳ ಬಣ್ಣ ಗಮನಿಸಿ ಜೋಡಿಸುವುದು ಬಲು ಮುಖ್ಯ.
12 volt ಪವರಿಗೆ 3 ಆಯ್ಕೆಗಳಿವೆ.

1. ಮನೆಯ ಇನ್ವರ್ಟರ್ ಬ್ಯಾಟರಿ ಬಳಸುವುದು. ಮನೆಯ inverter ಬಳಿಯಲ್ಲೇ  ಇದನ್ನು ಇರಿಸುವ ಅನುಕೂಲ ಇದ್ದರೆ ಅದರ ಬ್ಯಾಟರಿಯನ್ನೇ ಬಳಸಬಹುದು. ಕೆಂಪು ವಯರನ್ನು ಬೆಡ್ ಸ್ವಿಚ್ ಮೂಲಕ ಜೋಡಿಸಬೇಕು. ಇದನ್ನು ಬೇಕಿದ್ದಾಗ ಮಾತ್ರ ಆನ್ ಮಾಡಿಕೊಂಡು ಉಪಕರಣವನ್ನು ಬಳಸದಿರುವಾಗ ಆಫ್ ಮಾಡಬೇಕು.

2. 12 volts DC adapter ಬಳಸುವುದು. ಬೇರೆಡೆ ಬೇಕೆಂದಾದರೆ 10 amps ಸಾಮರ್ಥ್ಯದ 12 volts DC adapter ಬಳಸಬಹುದು. ಕೆಂಪು ಮತ್ತು ಹಳದಿ ವಯರುಗಳನ್ನು ಒಟ್ಟಿಗೆ ಸೇರಿಸಿ Adapterನ ಪೊಸಿಟಿವ್‌ಗೆ ಜೋಡಿಸಬೇಕು. ಬೇಕಿದ್ದಾಗ ಮಾತ್ರ ಎಡಾಪ್ಟರ್ ಆನ್ ಮಾಡಿ ಉಪಯೋಗಿಸದಿರುವಾಗ ಆಫ್ ಮಾಡಬೇಕು. ಈ ಪದ್ಧತಿಯಲ್ಲಿ ಸೆಟ್ಟಿಂಗ್ಸ್ ಮೆಮೊರಿ ಉಳಿಯುವುದಿಲ್ಲ.

3. ಬ್ಯಾಟರಿ backupನೊಂದಿಗೆ 12 volts DC adapter ಬಳಸುವುದು.
Adapter ಸ್ವಿಚ್ ಆಫ್ ಮಾಡಿದರೂ memory settings  ಉಳಿಯಬೇಕಾದರೆ ಸಣ್ಣ 12 volt chargeable ಬ್ಯಾಟರಿಯನ್ನು parallel ಆಗಿ  ಕನೆಕ್ಟ್ ಮಾಡಬೇಕು. ಚಿತ್ರದಲ್ಲಿ ತೋರಿಸಿದಂತೆ 10 Ohm 5 Watt Resitance ಮತ್ತು IN 5408 ಡಯೋಡುಗಳನ್ನೂ ಬಳಸಬೇಕು. ಇವನ್ನೆಲ್ಲ solder ಮಾಡಿ ಜೋಡಿಸಬೇಕೆಂದಿಲ್ಲ. ವಯರುಗಳೊಂದಿಗೆ twist ಮಾಡಿ ಇನ್ಸುಲೇಷನ್ ಟೇಪ್ ಬಳಸಿ ಭದ್ರಗೊಳಿಸಿದರೆ ಸಾಕು. ಕೆಂಪು ವಯರಿಗೆ ಕನೆಕ್ಟ್ ಮಾಡಿದ ಬೆಡ್ ಸ್ವಿಚ್ಚನ್ನು ಬೇಕಿದ್ದಾಗ ಮಾತ್ರ ಆನ್ ಮಾಡಬೇಕು. ಈ ಸ್ವಿಚ್ ಮತ್ತು adapterನ ಸಪ್ಲೈ ಆಫ್ ಮಾಡಿದರೂ ಸಣ್ಣ ಬ್ಯಾಟರಿಯು ಹಳದಿ ವಯರಿನ ಮೂಲಕ ಪವರ್ ಒದಗಿಸುವುದರಿಂದ ಸೆಟ್ಟಿಂಗ್ಸ್ ಮೆಮೊರಿ ಉಳಿಯುತ್ತದೆ. ಆದರೆ ಎಡಾಪ್ಟರ್ ಆಫ್ ಇರುವಾಗ ಕೆಂಪು ವಯರಿನ ಬೆಡ್ ಸ್ವಿಚ್ಚನ್ನು ಆನ್ ಮಾಡಬಾರದು. ಹಾಗೆ ಮಾಡಿದ್ದೇ ಆದರೆ ಸಣ್ಣ ಬ್ಯಾಟರಿಯು drain ಆಗಿ ಹೋದೀತು.

ನಾನು ಹಳೆಯ ಕಾರಿನಲ್ಲಿದ್ದ Pioneer ಸೆಟ್ಟನ್ನು ಮನೆಯ hallನಲ್ಲಿ ರೇಡಿಯೊ ನಿಲಯಗಳನ್ನಾಲಿಸಲು, DD Free Dishನ ಆಡಿಯೊ ಕೇಳಲು ಹಾಗೂ bluetooth ಮೂಲಕ ಮೊಬೈಲ್ ಕನೆಕ್ಟ್ ಮಾಡಿಕೊಳ್ಳಲು ಬಳಸುತ್ತೇನೆ. ಇದಕ್ಕೆ ನಂಬರ್ 3 ರೀತಿಯ ಪವರ್ ವ್ಯವಸ್ಥೆ ಮಾಡಿದ್ದೇನೆ.

ಹೊಸದಾಗಿ ಖರೀದಿಸಿದ Blaupunkt ಸೆಟ್ಟೊಂದನ್ನು bedroomನಲ್ಲಿ ಮಧ್ಯಾಹ್ನ ಊಟದ ನಂತರ ಕೊಂಚ ಹೊತ್ತು ವಿರಮಿಸುವಾಗ ಮೊಬೈಲಿಗೆ ಅಳವಡಿಸಿದ FM Transmitter ಮೂಲಕ ಮುಂಬಯಿ ವಿವಧ ಭಾರತಿ ಆಲಿಸಲು ಬಳಸುತ್ತಿದ್ದೇನೆ. ಎರಡು ಗಂಟೆಗೆ ಎಲ್ಲ ನಿಲಯಗಳಿಗೆ ಹಿಂದಿ ಮತ್ತು ಇಂಗ್ಲಿಷ್ ವಾರ್ತೆಗಳ ಸಮೂಹ ಸನ್ನಿಯ attack ಆಗುತ್ತದೆ. ಆಗ ರೆಕಾರ್ಡೆಡ್ ಹಾಡುಗಳನ್ನು ಕೇಳುತ್ತೇನೆ. ಇಲ್ಲಿ ನಾನು ಬಳಸುವುದು ನಂಬರ್ 1 ಮಾದರಿಯ inverter ಬ್ಯಾಟರಿ ಪವರ್.

ಮನೆಯಲ್ಲಿ ಕಾರ್ ಸ್ಟೀರಿಯೊ ಬಳಸುವವರು ಇನ್ನೂ ಅನೇಕರಿರಬಹುದು. ಆದರೆ ಎರಡು ಸೆಟ್ ಬಳಸುವುದು ನಾನೊಬ್ಬನೆಯೋ ಏನೋ!

ಒಟ್ಟಿನಲ್ಲಿ 50-60 ಸಾವಿರ ಬೆಲೆ ಬಾಳುವ ಆಧುನಿಕ ಸೌಂಡ್ ಸಿಸ್ಟಂಗಳಿಗೆ ಹೋಲಿಸಿದರೆ ಇದರಲ್ಲಿ  ಹಿಂದಿನ ಕಾಲದ ಅನಲಾಗ್ ಧ್ವನಿ ಮತ್ತು ಈಗಿನ ಡಿಜಿಟಲ್ ಧ್ವನಿ ಎರಡೂ  ತುಂಬಾ ಚೆನ್ನಾಗಿ ಕೇಳಿಸುತ್ತದೆ  ಎಂದು ನನ್ನ ಅನುಭವ.


- ಚಿದಂಬರ ಕಾಕತ್ಕರ್.





Saturday, 8 February 2025

ಭೀಷ್ಮ ನಿರ್ಯಾಣ ಮತ್ತು ಉತ್ತರಾಯಣ

 

ಅರ್ಜುನ ಪ್ರಯೋಗಿಸಿದ ಬಾಣಗಳಿಂದ ಜರ್ಜರಿತರಾದ ಭೀಷ್ಮಾಚಾರ್ಯರು ಉತ್ತರಾಯಣದ ನಿರೀಕ್ಷೆಯಲ್ಲಿ ಶರಶಯ್ಯೆಯ ಮೇಲೆ ಪವಡಿಸಿದ್ದರು ಎಂದು ಕಥೆಗಳಲ್ಲಿ ಓದಿ ಗೊತ್ತಿತ್ತು. ಮಾಘ ಶುಕ್ಲ ಅಷ್ಟಮಿ ತಿಥಿಯು ಭೀಷ್ಮಾಷ್ಟಮಿ ಎಂದು ಕರೆಯಲ್ಪಡುತ್ತದೆ, ಆ ದಿನವೇ ಅವರು ದೇಹತ್ಯಾಗ ಮಾಡಿದ್ದು ಎಂಬ ವಿಚಾರದತ್ತ ನಾನು ಗಮನ ಹರಿಸಿರಲಿಲ್ಲ. ಬಲ್ಲವರಲ್ಲಿ ಈ ಬಗ್ಗೆ ವಿಚಾರಿಸಿದಾಗ ಅನುಶಾಸನ ಪರ್ವದಲ್ಲಿ ಹೀಗೊಂದು ಶ್ಲೋಕ ಇರುವುದು ತಿಳಿಯಿತು..
ದಿಷ್ಟ್ಯಾ ಪ್ರಾಪ್ತೋsಸಿ ಕೌಂತೇಯ ಸಹಾಮಾತ್ಯೋ ಯುಧಿಷ್ಠಿರ l
ಪರಿವೃತ್ತೋ ಹಿ ಭಗವಾನ್ ಸಹಸ್ರಾಂಶುರ್ದಿವಾಕರ:ll
ಅಷ್ಟಪಂಚಾಶತಂ ರಾತ್ರ್ಯ: ಶಯಾನಸ್ಯಾಧ್ಯ ಮೇ ಗತಾ:l
ಶರೇಷು ನಿಶಿತಾಗ್ರೇಷು ಯಥಾ ವರ್ಷ ಶತಂ ತಥಾ ll
ಮಾಘೋsಯಂ ಸಮನುಪ್ರಾಪ್ತೋ ಮಾಸ: ಸೌಮ್ಯೋ(ಪುಣ್ಯೇ) ಯುಧಿಷ್ಠಿರ: l
ತ್ರಿಭಾಗ ಶೇಷ ಪಕ್ಷೋsಯಂ ಶುಕ್ಲೋ ಭವಿತು ಮರ್ಹತಿ ll
"ನಾನು ಶರಶಯ್ಯೆಯಲ್ಲಿ ಮಲಗಿ ಐವತ್ತೆಂಟು ದಿವಸಗಳಾಯಿತು. ಈಗ ಸೂರ್ಯನು ಉತ್ತರಕ್ಕೆ ತಿರುಗಲು ಆರಂಭಿಸಿದ್ದಾನೆ. (ಉತ್ತರಾಯಣ ಆರಂಭವಾಗಿದೆ.) ಮಾಘ ಮಾಸದ ನಾಲ್ಕು ಭಾಗಗಳಲ್ಲಿ ಮೂರು ಭಾಗ ಉಳಿದಿದೆ. (ಇದು ಮಾಘಶುಕ್ಲದ ಅಷ್ಟಮಿಯ ತಿಥಿಯಾಗಿದೆ.) ನನ್ನ ಸಂಕಲ್ಪದ ಪ್ರಕಾರ ಈಗ ನಾನು ದೇಹತ್ಯಾಗ ಮಾಡುತ್ತೇನೆ." ಎಂದು ಇದರ ಭಾವಾರ್ಥವಂತೆ.

ಇದನ್ನು ನೋಡಿದಾಗ ಉತ್ತರಾಯಣ ಆರಂಭವಾಗಿ ಎಷ್ಟೊ ಸಮಯದ ನಂತರ ಬರುವ ಮಾಘ ಶುಕ್ಲ ಅಷ್ಟಮಿ ತನಕ ಭೀಷ್ಮಾಚಾರ್ಯರು ಏಕೆ ಶರಶಯ್ಯೆಯಲ್ಲೇ ಇದ್ದರು ಎಂಬ ಪ್ರಶ್ನೆ ನನ್ನಲ್ಲಿ ಉದ್ಭವಿಸಿತು. ಒಂದು ಕಾಲಕ್ಕೆ ಉತ್ತರಾಯಣ ಆರಂಭದಂದೇ ಇರುತ್ತಿದ್ದ ಮಕರ ಸಂಕ್ರಾಂತಿ ಕ್ರಮೇಣ ಮುಂದೆ ಜರಗುತ್ತಾ ಬಂದುದು ನನಗೆ ಗೊತ್ತಿತ್ತು. ಈ ಬಗ್ಗೆ ಮತ್ತಷ್ಟು ಯೋಚಿಸಿದಾಗ ಚಾಂದ್ರ ಮಾಸಗಳೊಂದಿಗೆ ಸೌರಮಾಸಗಳು ತಳಕು ಹಾಕಿಕೊಂಡಿರುವ ಚಾಂದ್ರಸೌರ ಸಂಯುಕ್ತ ಪದ್ಧತಿಯನ್ನು ನಾವು ಅನುಸರಿಸುತ್ತಿರುವ ವಿಚಾರ ಹೊಳೆಯಿತು.

ಪ್ರತೀ ಚಾಂದ್ರ ಮಾಸದಲ್ಲೂ ಒಂದು ಸಂಕ್ರಾಂತಿ ಇರಬೇಕು. ಅಷ್ಟೇ ಅಲ್ಲ, ಚೈತ್ರದಲ್ಲಿ ಮೇಷ ಸಂಕ್ರಾಂತಿ, ವೈಶಾಖದಲ್ಲಿ ವೃಷಭ ಸಂಕ್ರಾಂತಿ, ಈ ರೀತಿ ಮುಂದುವರಿಯುತ್ತಾ ಫಾಲ್ಗುಣದಲ್ಲಿ ಮೀನ ಸಂಕ್ರಾಂತಿಯೇ ಇರಬೇಕು ಎಂಬ ನಿಯಮವೂ ಪಾಲಿಸಲ್ಪಡುತ್ತಿದೆ. ಈ ತಾಳ ಮೇಳ ತಪ್ಪಿದರೆ ಅಧಿಕ ಮಾಸ, ಕ್ಷಯ ಮಾಸಗಳ ಮೂಲಕ ಅದನ್ನು ಸರಿಪಡಿಸಲಾಗುತ್ತದೆ. ಹೀಗಾಗಿ ಭೂಮಿಯ ಓಲಾಡುವಿಕೆಯಿಂದಾಗಿ ಮಕರ ಸಂಕ್ರಾಂತಿ ಮತ್ತು ಇತರ ಸಂಕ್ರಾಂತಿಗಳು ಮುಂದಕ್ಕೆ ಜರಗುವಾಗ ಅವುಗಳೊಂದಿಗೆ ಸಂಬಂಧ ಕಲ್ಪಿಸಲಾಗಿರುವ ಚಾಂದ್ರ ಮಾಸಗಳೂ ಮುಂದೆ ಜರಗುತ್ತಿವೆ. ಇದೇ ಕಾರಣಕ್ಕೆ ಉತ್ತರಾಯಣ ಈಗ ಮಾರ್ಗಶಿರ / ಪುಷ್ಯ ಮಾಸಗಳಲ್ಲಿ ಆರಂಭವಾಗುವುದಾದರೂ ಸಾವಿರಾರು ವರ್ಷ ಹಿಂದೆ ಮಾಘ / ಫಾಲ್ಗುಣ ಮಾಸಗಳಲ್ಲೂ ಆರಂಭವಾಗುತ್ತಿತ್ತು. ಸಂಕ್ರಾಂತಿಗಳು ಋತುಮಾನಗಳಿಗೆ ಕಾರಣವಾದ ಸೂರ್ಯನ ಉತ್ತರ ದಕ್ಷಿಣ ಚಲನೆಯನ್ನು ಅನುಸರಿಸದೆ ಮೇಷಾದಿ ರಾಶಿಗಳಲ್ಲಿ ಅವನ ಚಲನೆಯನ್ನು ಹೊಂದಿಕೊಂಡಿರುವುದರಿಂದ ಅವುಗಳೊಂದಿಗೆ ತಳುಕು ಹಾಕಿಕೊಂಡಿರುವ ಚಾಂದ್ರ ಮಾಸಗಳೂ ಋತುಗಳ ಸಂಬಂಧ ಕಳೆದುಕೊಂಡಿವೆ ಈಗಿರುವಂತೆ ಮೇಷ ಸಂಕ್ರಾಂತಿಗಿಂತ ಮುಂಚಿನ ಅಮಾವಾಸ್ಯೆಯ ನಂತರ ಚೈತ್ರಮಾಸ ಆರಂಭವಾಗುವ ಬದಲು ವಸಂತ ವಿಷುವತ್ ದಿನವಾದ ಮಾರ್ಚ್ 21ಕ್ಕಿಂತ ಮುಂಚಿನ ಅಮಾವಾಸ್ಯೆಯ ನಂತರ ಚೈತ್ರ ಆರಂಭವಾಗುವಂತಾದರಷ್ಟೇ ಚೈತ್ರ ವೈಶಾಖಗಳು ನಿಜವಾದ ವಸಂತ ಋತು ಎನಿಸಿಯಾವು.




ಕ್ರಿಸ್ತ ಪೂರ್ವ 3000 ಇಸವಿಯಿಂದ ಮುಂದಿನ ಕೆಲವು ಶತಮಾನಗಳ ವರೆಗಿನ ವಿವಿಧ ಘಟ್ಟಗಳಲ್ಲಿ ಯಾವಾಗ ಮಕರ ಸಂಕ್ರಾಂತಿ ಇತ್ತು, ಉತ್ತರಾಯಣ ಯಾವ ತಿಂಗಳಲ್ಲಿ ಆರಂಭವಾಯಿತು, ಋತುಗಳಿಗೆ ಪ್ರಾತಿನಿಧಿಕವಾದ ಯುಗಾದಿಯೂ ಹೇಗೆ ಮುಂದಕ್ಕೆ ಸಾಗುತ್ತಿದೆ ಎಂಬ ವಿವರಗಳನ್ನು ಇಲ್ಲಿರುವ tableನಲ್ಲಿ ನೋಡಬಹುದು. ಅಂತರ್ಜಾಲದಲ್ಲಿರುವ ದೃಕ್ ಪಂಚಾಂಗದ ತಂತ್ರಾಂಶ ಬಳಸಿ ಕಾಲವನ್ನು ಹಿಂದಕ್ಕೆ project ಮಾಡಿ ಈ ಮಾಹಿತಿಯನ್ನು ಕ್ರೋಢೀಕರಿಸಲು ನನಗೆ ಸಾಧ್ಯವಾಯಿತು. ಕ್ರಿಸ್ತಪೂರ್ವದಲ್ಲಿ ಗ್ರೆಗೊರಿಯನ್ ಕ್ಯಾಲೆಂಡರ್ ಇಲ್ಲದಿದ್ದರೂ ಒಂದು ವೇಳೆ ಇದ್ದಿದ್ದರೆ ಹೀಗಿರುತ್ತಿತ್ತು ಎಂಬುದು ಇಲ್ಲಿಯ logic. ಇದನ್ನು ನೋಡಿದರೆ ಕ್ರಿ.ಶ. 300ರ ಸುಮಾರಿಗೆ ಡಿಸೆಂಬರ್ 22ರ ಉತ್ತರಾಯಣಾರಂಭದ ದಿನವೇ ಮಕರ ಸಂಕ್ರಮಣ ಇದ್ದದ್ದು, ಕ್ರಿ.ಪೂ. 3000ದಲ್ಲಿ ಜನವರಿಯಲ್ಲಿ ಇರುತ್ತಿದ್ದ ಯುಗಾದಿ ಮುಂದೆ ಸರಿಯುತ್ತಾ ಈಗ ಎಪ್ರಿಲ್ ತಿಂಗಳಿಗೆ ಬಂದಿರುವುದು ಮುಂತಾದ ವಿಚಾರಗಳು ತಿಳಿಯುತ್ತವೆ.

ಭೀಷ್ಮಾಚಾರ್ಯರು ದೇಹ ತ್ಯಾಗ ಮಾಡಿದ್ದು ಎನ್ನಲಾಗುವ ಕ್ರಿಸ್ತ ಪೂರ್ವ 2448, 3066, 3102, 3140 ಇತ್ಯಾದಿ ವರ್ಷಗಳ ಉಲ್ಲೇಖ ಅಂತರ್ಜಾಲದಲ್ಲಿ ಕಾಣಸಿಗುತ್ತದೆ. ಇಲ್ಲಿ tabulate ಮಾಡಿದ ಶತಮಾನಗಳ ಅಂಕಿ ಅಂಶಗಳ ಪ್ರಕಾರ ಕ್ರಿ.ಪೂ 2700ರಿಂದ ಕ್ರಿ.ಪೂ. 500ರ ವರೆಗೆ ಮಾಘ ಮಾಸದಲ್ಲಿ ಉತ್ತರಾಯಣ ಆರಂಭವಾಗಿದೆ. ಆದರೆ ಮಹಾಭಾರತದ ಶ್ಲೋಕದಲ್ಲಿ ಉಕ್ತವಾದ ಮಾಘ ಶುದ್ಧ ಅಷ್ಟಮಿಯ ಆಸುಪಾಸಿನಲ್ಲಿ ಡಿಸೆಂಬರ 22ರ ಉತ್ತರಾಯಣ ಆರಂಭವಾಗಿರುವುದು ಕ್ರಿ.ಪೂ. 500 ಇಸವಿಯಲ್ಲಿ ಎಂದು ಮೊದಲ ಹಂತದಲ್ಲಿ ಗೊತ್ತಾಯಿತು. ಆ ವರ್ಷ ಮಾಘ ಶುಕ್ಲ ಪಪ್ಠಿಯಂದು ಉತ್ತರಾಯಣ ಆರಂಭವಾಗಿತ್ತು. ಅದರ ಹಿಂದಿನ ಮತ್ತು ಮುಂದಿನ ವರ್ಷಗಳಲ್ಲಿ ಒಂದೊಂದಾಗಿ ಹುಡುಕಿದಾಗ ಕ್ರಿ.ಪೂ. 508 ಇಸವಿಯಲ್ಲಿ ಸರಿಯಾಗಿ ಮಾಘ ಶುಕ್ಲ ಅಷ್ಟಮಿಯಂದೇ ಉತ್ತರಾಯಣ ಆರಂಭವಾದದ್ದು ತಿಳಿಯಿತು. ಆದರೆ ಈ ಇಸವಿಗೂ ಮಹಾಭಾರತ ನಡೆದ ವರ್ಷಗಳೆಂದು ಊಹಿಸಲಾದ ಇಸವಿಗಳಿಗೂ ತುಂಬಾ ಅಂತರ ಇರುವುದರಿಂದ ಬೇರೆ ಕೆಲವು ವರ್ಷಗಳಲ್ಲೂ ಡಿಸೆಂಬರ್ 22ರಂದು ಮಾಘ ಶುಕ್ಲ ಅಷ್ಟಮಿ ಇದ್ದಿರಬಹುದು ಅನ್ನಿಸಿತು. ಕೆಲವು ವರ್ಷಗಳಿಗೊಮ್ಮೆ ನಮ್ಮ ಹುಟ್ಟುಹಬ್ಬ ಪಂಚಾಂಗ ಮತ್ತು ತಾರೀಕು ಪ್ರಕಾರ ಒಂದೇ ದಿನ ಬರುವುದು ಕೂಡ ನೆನಪಿತ್ತು. ಆ ದಿಸೆಯಲ್ಲಿ ಯೋಚಿಸಿ random ಆಗಿ ಹುಡುಕಿದಾಗ ಕ್ರಿ.ಪೂ. 527, 1013, 1977, 1996, 2042, 2061 ಇಸವಿಗಳಲ್ಲೂ ಡಿಸೆಂಬರ್ 22 ತಾರೀಕಿನಂದೇ ಮಾಘ ಶುಕ್ಲ ಅಷ್ಟಮಿ ಇದ್ದುದು ಗೊತ್ತಾಯಿತು. ಇವುಗಳನ್ನು ಪಟ್ಟಿಗೆ ಆ ಮೇಲೆ ಸೇರಿಸಿದ್ದು. ಹುಡುಕಿದರೆ ಇನ್ನಷ್ಟು ವರ್ಷಗಳು ಸಿಗಬಹುದು. ಇಷ್ಟೆಲ್ಲ ಮಾಘ ಶುಕ್ಲ ಅಷ್ಟಮಿಗಳ ಪೈಕಿ ಭೀಷ್ಮಾಚಾರ್ಯರು ದೇಹತ್ಯಾಗ ಮಾಡಿದ ವರ್ಷ ಯಾವುದೆಂಬ ವಿಷಯ ಒಗಟಾಗಿಯೇ ಉಳಿಯಿತು!
ಏನೇ ಇರಲಿ, ಈ ನೆವದಲ್ಲಿ ಹೊಸ ವಿಷಯಗಳು ಕಲಿಯಲು ಸಿಕ್ಕಿದ್ದಂತೂ ಹೌದು. - ಚಿದಂಬರ ಕಾಕತ್ಕರ್.

Saturday, 1 February 2025

ಮಂದ ಮಂದ ಮನದೇ ಮನೋಲ್ಲಾಸ ಮೋಹ


ನನಗೆ ಸುಮಾರು 60 ವರ್ಷಗಳ ನಂತರ ಈಗ ಕೇಳಲು ಸಿಕ್ಕಿರುವ, ನಿಮ್ಮಲ್ಲಿ ಹೆಚ್ಚಿನವರು ಇದುವರೆಗೆ ಕೇಳಿಯೇ ಇರಲಾರದ, ವರ್ಣರಂಜಿತ ಕನ್ನಡ ಚಿತ್ರ ಸಂಪೂರ್ಣ ರಾಮಾಯಣದ ಹಾಡು ಇದು. ಹೋಮಿವಾಡಿಯಾ ಅವರು 1961ರಲ್ಲಿ ನಿರ್ಮಿಸಿದ್ದ ಹಿಂದಿ ಸಂಪೂರ್ಣ ರಾಮಾಯಣವನ್ನು ಕನ್ನಡ  ಭಾಷೆಗೆ ಡಬ್ ಮಾಡಲಾಗಿತ್ತು. ಮಹಿಪಾಲ್ ರಾಮನಾಗಿ, ಅನಿತಾ ಗುಹಾ ಸೀತೆಯಾಗಿ,  ಅಚಲಾ ಸಚ್‌ದೇವ್ (ಸಂಗಮ್‌ನಲ್ಲಿ ವೈಜಯಂತಿ ಮಾಲಾ ತಾಯಿ) ಕೌಸಲ್ಯೆಯಾಗಿ, ಬಿ.ಎಮ್. ವ್ಯಾಸ್ ರಾವಣನಾಗಿ, ಸುಲೋಚನಾ (ಜಾನಿ ಮೇರಾ ನಾಮ್‌ನಲ್ಲಿ ದೇವ್ ಆನಂದ್  ತಾಯಿ) ಕೈಕೇಯಿಯಾಗಿ,  ಲಲಿತಾ ಪವಾರ್ (ಶ್ರೀ 420ನ ಲೇಡಿ ಕೇಲೇವಾಲಿ) ಮಂಥರೆಯಾಗಿ, ಹೆಲನ್ ಮಾಯಾ ಶೂರ್ಪನಖಿಯಾಗಿ ಕಾಣಿಸಿಕೊಂಡಿದ್ದ ಪ್ರಮುಖರು. ಹಿಂದಿ ಚಿತ್ರದ ಮೂಲ ಸಂಗೀತ ನಿರ್ದೇಶಕರು ವಸಂತ್ ದೇಸಾಯಿ. ವಿಜಯಭಾಸ್ಕರ್ ಕನ್ನಡ ಅವತರಣಿಕೆಯ ಸಂಗೀತದ ಹೊಣೆ ಹೊತ್ತಿದ್ದರು. ಕನ್ನಡದಲ್ಲಿ ಗೀತೆಗಳನ್ನು ಬರೆದವರು ಗೀತಪ್ರಿಯ. ಪಿ.ಸುಶೀಲ, ಪಿ.ಬಿ.ಶ್ರೀನಿವಾಸ್, ಎಲ್.ಆರ್. ಈಶ್ವರಿ ಮತ್ತಿತರರು ಕನ್ನಡ ಹಾಡುಗಳನ್ನು ಹಾಡಿದ್ದರು.  ಆದರೆ ಡಬ್ ಆದ ಚಿತ್ರಗಳಲ್ಲಿ ಬೇರೆ ಭಾಷೆಯ ಸಂಭಾಷಣೆಯ ತುಟಿ ಚಲನೆಗೆ ಸರಿ ಹೊಂದುವಂತೆ ಕನ್ನಡ ಧ್ವನಿಯಾದ ಕಲಾವಿದರ ಹೆಸರುಗಳು ಗೋಪ್ಯವಾಗಿಯೆ ಉಳಿಯುತ್ತವೆ.

ಆ ಕಾಲದಲ್ಲಿ  ಸಾಮಾನ್ಯವಾಗಿ ತೆಲುಗು ಚಿತ್ರಗಳು ಕನ್ನಡಕ್ಕೆ ಡಬ್ ಆಗುತ್ತಿದ್ದುದು. ಕನ್ನಡದಲ್ಲಿ ಅವುಗಳ ಸಂಗೀತ ನಿರ್ವಹಣೆ ಮೂಲ ಸಂಗೀತ ನಿರ್ದೇಶಕರದ್ದೇ ಇರುತ್ತಿತ್ತು.  ಆದರೆ ವೀರ ಜಬಕ್, ಜಿಂಬೊ ನಗರ ಪ್ರವೇಶ ಮತ್ತು  ಸಂಪೂರ್ಣ ರಾಮಾಯಣ ಹಿಂದಿಯಿಂದ ಡಬ್ ಆದ ಚಿತ್ರಗಳು. ಮೂಲದಲ್ಲಿ ಚಿತ್ರಗುಪ್ತ ಮತ್ತು ವಸಂತ ದೇಸಾಯಿ ಸಂಗೀತವಿದ್ದ ಈ ಮೂರಕ್ಕೂ ವಿಜಯ ಭಾಸ್ಕರ್ ಅವರ ಸಂಗೀತ ನಿರ್ವಹಣೆ ಇದ್ದದ್ದು ಗಮನಿಸಬೇಕಾದ ಅಂಶ.

1962ರಲ್ಲಿ ನಾನು 5ನೇ ತರಗತಿಯಲ್ಲಿರುವಾಗ  ರಾಮಕಾಂತಿ ಟಾಕೀಸಿನಲ್ಲಿ ಪ್ರದರ್ಶಿತವಾಗಿದ್ದ ಈ ವರ್ಣರಂಜಿತ ಕನ್ನಡ ಸಂಪೂರ್ಣ ರಾಮಾಯಣ ಸಿನಿಮಾ ನೋಡಲೆಂದೇ  ನಮ್ಮ ತಾಯಿ, ಅಣ್ಣಂದಿರು ಮುಂತಾಗಿ ಆರೇಳು ಮಂದಿ ಮಂಗಳೂರಿಗೆ ಹೋಗಿದ್ದರು. ರಜೆಯ ಸಮಯವಾಗಿದ್ದರೆ ಖಂಡಿತ ನಾನೂ ಅವರೊಡನೆ ಸೇರಿಕೊಳ್ಳುತ್ತಿದ್ದೆ. vAstavya hUDidda ಗಣೇಶ ಭವನದ ರೂಮಿನಲ್ಲಿ ಎಲ್ಲರಿಗೂ ಮಲಗಲು ಸ್ಥಳಾವಕಾಶ ಸಾಕಾಗದೆ ನಮ್ಮ ಅಣ್ಣ ಈಸಿ ಚೇರಿನಲ್ಲಿ ಕುಳಿತೇ ರಾತ್ರೆ ಕಳೆದಿದ್ದರಂತೆ! ಮಂಗಳೂರಿಂದ ಬರುವಾಗ ನಾವು ಅದು ವರೆಗೆ ನೋಡಿರದಿದ್ದ ಮಿಠಾಯಿಯ ಮುಕುಟ ಇದ್ದ ಬಿಸ್ಕತ್ತುಗಳು, ಕುಂಬಳಕಾಯಿಯ ಪೆಟ್ಠಾ ಇತ್ಯಾದಿ ತಂದಿದ್ದರು. ಸಿನಿಮಾದ ಹಾಡಿನ ಪುಸ್ತಕವನ್ನೂ ತಂದಿದ್ದರು. ಪಂಚಾಂಗದಂತೆ ಉದ್ದವಾಗಿದ್ದ ಆ ಪುಸ್ತಕ ಅನೇಕ ವರ್ಷ ಮನೆಯಲ್ಲಿದ್ದದ್ದು ಈಗ ಕಳೆದು ಹೋಗಿದೆ. 



ಚಿತ್ರದಲ್ಲಿದ್ದ ಹತ್ತಾರು ಹಾಡುಗಳ ಪೈಕಿ ಪ್ರಿಯ ಜೀವನದ ಪರ್ಣ ಕುಟಿಯೊಳ್ ಮತ್ತು ನಾವೀಗ ಚರ್ಚಿಸುತ್ತಿರುವ ಮಂದ ಮಂದ ಮನದೇ ಹಾಡುಗಳು ರೇಡಿಯೋ ನಿಲಯಗಳಿಂದ, ಅದರಲ್ಲೂ ಧಾರವಾಡದಿಂದ ಆಗಾಗ ಪ್ರಸಾರವಾಗುತ್ತಿದ್ದವು. ಮಧ್ಯದಲ್ಲಿ ತೋರೈ ಸನ್ಮಾರ್ಗ ಶ್ರೀ ರಾಮನೇ ಎಂಬ ಸಾಲು ಇರುವ ಪಿ.ಬಿ.ಶ್ರೀನಿವಾಸ್ ಮತ್ತು ಸಂಗಡಿಗರು ಹಾಡಿರುವ ಗೀತೆ ಕೂಡ ಕೆಲವೊಮ್ಮೆ ಪ್ರಸಾರವಾಗುತ್ತಿತ್ತು.   70ರ ದಶಕ ಬರುತ್ತಿದ್ದಂತೆ ಇವು ಹಿನ್ನೆಲೆಗೆ ಸರಿದು ಕಾಲಗರ್ಭದಲ್ಲಿ ಮರೆಯಾದವು. ಅವುಗಳ ಪೈಕಿ ಪ್ರಿಯ ಜೀವನದ ಪರ್ಣ ಕುಟಿಯೊಳ್ ಕೆಲವು ವರ್ಷ ಹಿಂದೆ ದೊರಕಿದರೂ ಮಂದ ಮಂದ ಮನದೇ ಮಾತ್ರ ಎಲ್ಲೂ ಸಿಕ್ಕಿರಲಿಲ್ಲ. ಚಿತ್ರದ ಕನ್ನಡ ಅವತರಣಿಕೆ ಇಲ್ಲದಿದ್ದರೂ ಮೂಲ ಹಿಂದಿ ಸಂಪೂರ್ಣ ರಾಮಾಯಣ ಅಂತರ್ಜಾಲದಲ್ಲಿ  ಲಭ್ಯವಿದ್ದು ಅದರಲ್ಲಿ ಸೀತೆ ಹಾಡುವ ಮೇರೆ ಜೀವನ್‌ ಕೀ ಪರ್ಣಕುಟೀ ಮೆಂ ಹಾಡು ಯಾಕೋ ಇಲ್ಲ. ಆದರೆ ಮಂದ ಮಂದ ಮನದೇ ಹಾಡಿನ ಹಿಂದೀ ರೂಪ ಬಾರ್ ಬಾರ್ ಬಗಿಯಾ ಮೆಂ ಕೋಯಲ್ ನ ಬೋಲೆ  ಇದೆ. ಅದನ್ನು ನೋಡಿ ‘ಛೇ, ಕನ್ನಡ ಹಾಡು ಇದ್ದಿದ್ದರೆ ಹಿಂದಿ ವೀಡಿಯೊ ಮೇಲೆ  ಸೂಪರ್ ಇಂಪೋಸ್ ಮಾಡಬಹುದಿತ್ತಲ್ಲ’  ಅಂದುಕೊಳ್ಳುತ್ತಿದ್ದೆ.  

ಸಮಾನಮನಸ್ಕರಾದ ಅನೇಕರಲ್ಲಿ ಈ ಹಾಡಿನ ಬಗ್ಗೆ ವಿಚಾರಿಸುತ್ತಲೇ ಇದ್ದೆ. ಮಣ್ಣಿಗೆಸೆದ ಬೀಜ ಎಂದೋ ಒಂದು ದಿನ ಮೊಳಕೆ ಒಡೆಯುವಂತೆ ಮೊನ್ನೆ ಇಂಥ ಹಳೇ ಹಾಡುಗಳ ಅಭಿಮಾನಿ ಶ್ರೀನಾಥ್ ಮಲ್ಯ ಈ ಹಾಡು ಸಿಕ್ಕಿರುವ ಶುಭ ಸಮಾಚಾರವನ್ನು ತಿಳಿಸಿದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸಿದ್ದು ಸುಳ್ಳಲ್ಲ!

ಇನ್ನೇನು,  ಕ್ಯಾಬರೆ ನಟಿಯೆಂದೇ ಗುರುತಿಸಲ್ಪಡುವ ಹೆಲನ್ ಮಾಯಾ ಶೂರ್ಪನಖಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡ  ಹಿಂದಿ  ವೀಡಿಯೋಗೆ ಕ್ಯಾಬರೆ ಗಾಯಕಿಯೆಂದು ಖ್ಯಾತಿ ಪಡೆದ ಎಲ್.ಆರ್. ಈಶ್ವರಿ ಹಾಡಿರುವ ಮಂದ ಮಂದ ಮನದೇ  ಹಾಡನ್ನು ತಡ ಮಾಡದೆ   ಕಸಿ ಕಟ್ಟಿಯೇ ಬಿಟ್ಟೆ. ಹಿಂದಿ ಪದಗಳ ತುಟಿ ಚಲನೆಗೆ  ಕರಾರುವಾಕ್ಕಾಗಿ ಸರಿಹೊಂದುವಂಥ ಕನ್ನಡ ಪದಗಳನ್ನು ಹೆಣೆದು ಅರ್ಥಪೂರ್ಣವಾದ ಹಾಡು ರಚಿಸಿದ ಗೀತಪ್ರಿಯ ಮತ್ತು ಮೂಲ ಗಾಯಕಿ ಆಶಾ ಭೋಸ್ಲೆ ಅವರಿಗಿಂತ ಒಂದು ಕೈ ಮೇಲೆಯೇ ಅನ್ನುವಂತೆ ಹಾಡಿದ ಎಲ್.ಆರ್. ಈಶ್ವರಿ ಅವರ ಪ್ರತಿಭೆಗೆ  ಮಾರು ಹೋದೆ. 

ಹಿಂದಿ, ಕನ್ನಡ  ಎರಡೂ ಹಾಡುಗಳನ್ನು ಆಲಿಸಿದಾಗ ಎರಡರ ಶ್ರುತಿ, ಬಳಸಿದ  ವಾದ್ಯಗಳು, ಅವುಗಳ ನಾದ, ನುಡಿಸಿದ ಶೈಲಿ ಎಲ್ಲವೂ ತದ್ರೂಪವಾಗಿರುವುದು ತಿಳಿಯುತ್ತದೆ. ವಿಜಯಭಾಸ್ಕರ್ ಅವರಿಗೆ ಮುಂಬಯಿ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ದುಡಿದ ಅನುಭವ ಇದ್ದುದರಿಂದ ಮೂಲದಲ್ಲಿ ನುಡಿಸಿದ ವಾದ್ಯಗಳು ಮತ್ತು ವಾದ್ಯಗಾರರನ್ನೇ ಬಳಸಿ ಹಾಡುಗಳ ಮರುಸೃಷ್ಟಿ ಮಾಡಲು ಸಾಧ್ಯವಾಗಿರಬಹುದು. ಹಿಂದಿ ಹಾಡುಗಳನ್ನು ರೆಕಾರ್ಡ್ ಮಾಡುವಾಗ ಹಿನ್ನೆಲೆ ಸಂಗೀತದ ಟ್ರಾಕ್‌ಗಳನ್ನು  ಟೇಪುಗಳಲ್ಲಿ ಬೇರೆಯಾಗಿಯೇ ಸಿದ್ಧಪಡಿಸಿಟ್ಟುಕೊಂಡು ಅವುಗಳನ್ನೇ ಇಲ್ಲಿ ಬಳಸಿರಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

********

ಚಿತ್ರ : ಸಂಪೂರ್ಣ ರಾಮಾಯಣ.
ಗಾಯಕಿ : ಎಲ್.ಆರ್. ಈಶ್ವರಿ.
ಸಾಹಿತ್ಯ : ಗೀತಪ್ರಿಯ.
ಸಂಗೀತ : ಮೂಲ ಹಿಂದಿ - ವಸಂತ ದೇಸಾಯಿ, ಕನ್ನಡದಲ್ಲಿ - ವಿಜಯಭಾಸ್ಕರ್.

ಮಂದ ಮಂದ ಮನದೆ ಮನೋಲ್ಲಾಸ ಮೋಹ
ಮಂದ ಮಂದ ಉತ್ಸಾಹವು
ಎನ್ನ ಪ್ರಿಯ ಜೀವನವೆ ಆಡೇ ವಸಂತದೆ
ಎನ್ನ ಪ್ರಾಣ ನಲಿದಾಡಲು

ಹಾ ಪ್ರಿಯ ನಿನ್ನ ನಗೆ
ಆಡೆ ಕಣ್ಪಟದೊಳಗೆ
ಅಭಿನವ ಶೋಭೆ ಕಂಡೆ
ಕಂಡು ಕಂಡು ಮುಖದೆಡೆಗೆ

ಮಧುಮಯ ಈ ಕ್ಷಣವೆ
ರೂಪಿಸಿರೆ ಪಾಶವನೆ
ಎನ್ನ ಈ ಮಂದ ನಗೆ
ಮೆರೆಯುತ ನೋಟದಲಿ
ಸಾರಿದೆ ಪ್ರಿತಿಯನೆ ಪ್ರೀತಿಯನೆ ಪ್ರೀತಿಯನೆ

ಸೋತೆ ನಾನೀಗ ಪ್ರಿಯಾ
ಕಣ್ಣುಗಳ ಆಟದಲಿ
ನಿನ್ನ ನೋಟ ಬಾಧಿಸಿರೆ
ರೂಪಸುಮ ವರ್ಧಿಸಿರೆ
ಸಖ ಈ ಕೋಮಲೆಯ
ಈಗ ದೂರ ದೂಡದಿರು
ರುಮ ಝುಮ ನಾಟ್ಯದಲಿ
ಎನ್ನ ಪ್ರಿಯ ಪ್ರಾಣದಲಿ
ಸಾರಿಹೆ ಪ್ರೀತಿಯನೆ ಪ್ರೀತಿಯನೆ ಪ್ರೀತಿಯನೆ

******

ಈಗ ಮಾಯಾ ಶೂರ್ಪನಖಿ ರೂಪದ ಹೆಲನ್  ಎಲ್.ಆರ್. ಈಶ್ವರಿಯ ಧ್ವನಿ ಬಳಸಿ ಕನ್ನಡದಲ್ಲಿ ಹಾಡುವ ವೀಡಿಯೊ  ವೀಕ್ಷಿಸಿ ಆನಂದಿಸಿ.  ಅನುಕೂಲ ಇದ್ದರೆ ಹೆಡ್‌ಫೋನ್ ಬಳಸಿ.




ಅಡಿಯೋ ಮಾತ್ರ ಕೇಳಲು ಬಾಣದ ಮೇಲೆ ಕ್ಲಿಕ್ಕಿಸಿ.



ಹೋಲಿಕೆಗಾಗಿ ಹಿಂದಿ ಹಾಡು ಇಲ್ಲಿದೆ.



******

ಶೋಭನ್ ಬಾಬು ರಾಮನಾಗಿ ಮತ್ತು ಚಂದ್ರಕಲಾ ಸೀತೆಯಾಗಿ ಕಾಣಿಸಿಕೊಂಡಿದ್ದ  1971ರ ತೆಲುಗು ಸಂಪೂರ್ಣ ರಾಮಾಯಣವೂ ಕನ್ನಡಕ್ಕೆ ಡಬ್ ಆಗಿದ್ದು ಅಂತರ್ಜಾಲದಲ್ಲಿ ಲಭ್ಯವಿದೆ.  

- ಚಿದಂಬರ ಕಾಕತ್ಕರ್.



Wednesday, 15 January 2025

ಸಂಕ್ರಾಂತಿ, ಕರ್ಕ ಮತ್ತು ಮಕರ ವೃತ್ತ ವೃತ್ತಾಂತ


ಸಂಕ್ರಾಂತಿ ಏಕೆ ಮುಂದೆ ಸಾಗುತ್ತಿದೆ?
ಪಂಚಾಂಗ ರಚನೆ ಆರಂಭವಾದ ಕ್ರಿಸ್ತಶಕದ ಮೊದಲ ಶತಮಾನಗಳ ಕಾಲದಲ್ಲಿ ಉತ್ತರಾಯಣ ಆರಂಭ ಮತ್ತು ಮಕರ ಸಂಕ್ರಾಂತಿ ಡಿಸೆಂಬರ್ 22 ರಂದೇ ಇರುತ್ತಿತ್ತು. ಹೀಗಾಗಿ ಮಕರ ಸಂಕ್ರಾಂತಿ ಅಂದರೆ ಉತ್ತರಾಯಣಾರಂಭ ಎಂಬ ಭಾವನೆ ಜನಮಾನಸದಲ್ಲಿ ಬೇರೂರಿದೆ. ಆದರೆ ವಾಸ್ತವ ಸ್ಥಿತಿ ಹೀಗಿಲ್ಲ. ಭೂಮಿಯಿಂದ ನೋಡಿದಂತೆ ಸೂರ್ಯನ ಸಮೀಪವಿರುವ ನಕ್ಷತ್ರದ ಆಧಾರದ ಮೇಲೆ ರಾಶಿ ಮತ್ತು ಸೂರ್ಯನ ಸುತ್ತ ಭೂಮಿಯ ಚಲನೆಯಿಂದ ಉತ್ತರಾಯಣ ದಕ್ಷಿಣಾಯನ ಕಲ್ಪನೆ ಇರುವುದರಿಂದ ಮಕರ ಸಂಕ್ರಾಂತಿ ಮತ್ತು ಉತ್ತರಾಯಣಾರಂಭಕ್ಕೆ ನೇರ ಸಂಬಂಧ ಇಲ್ಲ. ಹೀಗಾಗಿ ಉತ್ತರಾಯಣಾರಂಭ ಈಗಲೂ ಡಿಸೆಂಬರ್ 22ಕ್ಕೇ ಇದ್ದರೂ ಮಕರ ಸಂಕ್ರಾಂತಿ ಮುಂದೆ ಸಾಗುತ್ತಾ ಈಗ ಜನವರಿ 14ಕ್ಕೆ ತಲುಪಿದೆ. ಹೀಗೇಕಾಗುತ್ತದೆ ಎಂದು ತಿಳಿಯಬೇಕಾದರೆ ಭೂಮಿಯ ವಿವಿಧ ಚಲನೆಗಳ ಬಗ್ಗೆ ಅರಿಯಬೇಕು.


ಭೂಮಿಗೆ ಸೂರ್ಯನ ಸುತ್ತ ವರ್ಷಕ್ಕೊಮ್ಮೆ ಸುತ್ತುವ ಚಲನೆ, ತನ್ನ ಅಕ್ಷದಲ್ಲಿ ದಿನಕ್ಕೊಮ್ಮೆ ತಿರುಗುವ ಚಲನೆ ಅಲ್ಲದೆ 26000 ವರ್ಷ ಸಮಯ ತೆಗೆದುಕೊಳ್ಳುವ ಇನ್ನೊಂದು ಚಲನೆಯೂ ಇದೆ. ಅದೇ ತಿರುಗುತ್ತಿರುವ ಬುಗರಿಯ ತಲೆಯು ಸ್ವಲ್ಪ ಓಲಾಡುವಂತೆ ಭೂಮಿಯು ಓಲಾಡುವ (wobbling) ಚಲನೆ. ಈ ಕಾರಣದಿಂದ ಮನುಷ್ಯನು ಭೂಮಿಯಿಂದ ನಿಂತು ನೋಡುವ ಸ್ಥಾನದಲ್ಲಿ ಅಲ್ಪ ಬದಲಾವಣೆ ಆಗಿ ಸೂರ್ಯನ ಜತೆ ಇರುವಂತೆ ಕಾಣುವ ಸಹಸ್ರಾರು ಜ್ಯೋತಿರ್ವರ್ಷಗಳಷ್ಟು ದೂರ ಇರುವ ನಕ್ಷತ್ರ ಗುರುತಿಸುವುದರಲ್ಲಿ ಕಾಲಕ್ರಮೇಣ ವ್ಯತ್ಯಾಸ ಉಂಟಾಗುತ್ತದೆ. ಹೀಗಾಗಿಯೇ ಸೂರ್‍ಯನು ನಿರ್ದಿಷ್ಟ ರಾಶಿಯನ್ನು ಪ್ರವೇಶಿಸುವ ಕಾಲ ಸುಮಾರು 70 ವರ್ಷಕ್ಕೆ ಒಂದು ದಿನ ಮುಂದೆ ಹೋಗುತ್ತದೆ. ಆದರೆ ನಕ್ಷತ್ರಗಳಿರುವ ದೂರಕ್ಕೆ ಹೋಲಿಸಿದರೆ ಭೂಮಿ ಮತ್ತು ಸೂರ್ಯನ ನಡುವಿನ ದೂರ ನಗಣ್ಯ ಆದುದರಿಂದ ಭೂಮಿಯಿಂದ ಸೂರ್ಯನ ಚಲನೆಯನ್ನು ಗಮನಿಸುವಲ್ಲಿ ಈ ಓಲಾಡುವಿಕೆಯ ಪರಿಣಾಮವೂ ನಗಣ್ಯ. ಹೀಗಾಗಿ ಉತ್ತರಾಯಣ ಮತ್ತು ದಕ್ಷಿಣಾಯನ ಆರಂಭದ ದಿನಗಳಲ್ಲಿ ವ್ಯತ್ಯಾಸ ಉಂಟಾಗುವುದಿಲ್ಲ. ಮೊಬೈಲಲ್ಲಿ ವೀಡಿಯೋ ಮಾಡುವಾಗ ಕೈ ಅಲ್ಲಾಡಿದರೆ ಹತ್ತಿರದ ವಸ್ತುಗಳ ಮೇಲೆ ಅಷ್ಟೇನೂ ಪರಿಣಾಮ ಆಗದಿದ್ದರೂ ದೂರದ ವಸ್ತುಗಳು ಹೆಚ್ಚು ಅತ್ತಿತ್ತ ಸರಿದಂತಾಗುವುದನ್ನು ನಾವು ಗಮನಿಸಿರುತ್ತೇವೆ.


ಈ ಕಾರಣದಿಂದಾಗಿ ಸುಮಾರು ಮೂರು ಮೂರೂವರೆ ಸಾವಿರ ವರ್ಷಗಳ ಹಿಂದೆ ವೇದಾಂಗ ಜ್ಯೋತಿಷ್ಯದ ಕಾಲದಲ್ಲಿ ಧನಿಷ್ಠೆಯನ್ನು ಸೂರ್ಯ ಪ್ರವೇಶಿಸುತ್ತಿದ್ದಾಗ (ಮಕರ ರಾಶಿಯ ಕೊನೆಯ ಹಂತದಲ್ಲಿ) ಘಟಿಸುತ್ತಿದ್ದ ಉತ್ತರಾಯಣಾರಂಭ ಬಹುಕಾಲಾಂತರದಲ್ಲಿ ವರಾಹಮಿಹಿರಾಚಾರ್ಯರ ಕಾಲದಲ್ಲಿ ಉತ್ತರಾಷಾಢದ ಎರಡನೆಯ ಪಾದದಲ್ಲಿ ಕಾಲಿಟ್ಟಾಗ (ಮಕರ ರಾಶಿಯ ಆರಂಭದ ಹಂತದಲ್ಲಿ) ಘಟಿಸುತ್ತಿತ್ತು. ಈಗ ಉತ್ತರಾಯಣ ಆರಂಭವಾಗುವಾಗ ಸೂರ್ಯ ಇನ್ನೂ ಮೂಲಾ ನಕ್ಷತ್ರದ 3ನೆಯ ಪಾದದಲ್ಲಿ ಅಂದರೆ ಧನು ರಾಶಿಯಲ್ಲಿ ಇರುತ್ತಾನೆ.

ವೆಬ್ ಪಂಚಾಂಗಗಳಲ್ಲಿ ಹಿಮ್ಮುಖವಾಗಿ ಚಲಿಸಿದಾಗ ಕ್ರಿಸ್ತ ಶಕ 299ರಿಂದ ಕ್ರಿಸ್ತ ಶಕ 345ರ ವರೆಗೆ ಡಿಸೆಂಬರ್ 22ರಂದೇ ಮಕರ ಸಂಕ್ರಾಂತಿ ಇತ್ತು ಎಂಬ ಮಾಹಿತಿ ದೊರಕುತ್ತದೆ. ಅದು ಮುಂದೆ ಮುಂದೆ ಸಾಗುತ್ತಾ ಈಗ ಜನವರಿ 14ಕ್ಕೆ ತಲುಪಿದ್ದು ವರ್ಷಗಳು ಉರುಳಿದಂತೆ ಇನ್ನೂ ಮುಂದೆ ಸಾಗುತ್ತಾ ಮಕರ ಸಂಕ್ರಾಂತಿಯ ದಿನ ದಕ್ಷಿಣಾಯನ ಆರಂಭವಾಗುವ ಸಮಯವೂ ಬರುತ್ತದೆ! ಭೂಮಿಯ ಓಲಾಡುವಿಕೆಯನ್ನು ಅನುಸರಿಸಿ ಈ ಚಕ್ರ ಸಾಗುತ್ತಲೇ ಇರುತ್ತದೆ. ಜನಸಾಮಾನ್ಯರ ನಂಬಿಕೆಗೆ ಇಂಬು.
ಮಕರ ಸಂಕ್ರಾಂತಿಯಂದೇ ಉತ್ತರಾಯಣಾರಂಭ ಎಂದು ಭಾವಿಸುವ ಜನಸಾಮಾನ್ಯರ ತಪ್ಪು ನಂಬಿಕೆಗೆ ಇಂಬು ಕೊಡುವಂತೆ ಸೂರ್ಯನ ಮಕರ/ಕರ್ಕ ರಾಶಿ ಪ್ರವೇಶವು ಉತ್ತರ/ದಕ್ಷಿಣ ಆಯನಾರಂಭದೊಂದಿಗಿನ ಸಂಬಂಧ ಕಳೆದುಕೊಂಡು ಶತಮಾನಗಳೇ ಕಳೆದರೂ ಈಗಲೂ ಸೂರ್ಯನ ನೇರ ಕಿರಣಗಳು ಬೀಳುವ ಅತ್ಯಂತ ದಕ್ಷಿಣದ ಭಾಗವನ್ನು(23 ಡಿಗ್ರಿ 27' ದಕ್ಷಿಣ ಅಕ್ಷಾಂಶ) ಮಕರ ಸಂಕ್ರಾಂತಿ ವೃತ್ತ ಅಥವಾ ಮಕರ ವೃತ್ತ ಮತ್ತು ಅಂತಹ ಉತ್ತರದ ಭಾಗವನ್ನು (23 ಡಿಗ್ರಿ 27' ಉತ್ತರ ಅಕ್ಷಾಂಶ) ಕರ್ಕಾಟಕ ಸಂಕ್ರಾಂತಿ ವೃತ್ತ ಅಥವಾ ಕರ್ಕ ವೃತ್ತವೆಂದು ಭೂಪಟಗಳಲ್ಲಿ ಈಗಲೂ ಗುರುತಿಸಲಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯವಾಗಿಯೂ ಇವು ಕ್ರಮವಾಗಿ Tropic of Capricorn (ಮಕರದ ಸಂವಾದಿ) ಮತ್ತು Tropic of Cancer (ಕರ್ಕದ ಸಂವಾದಿ) ಎಂದೇ ಈಗಲೂ ಗುರುತಿಸಲ್ಪಡುವುದು.

ವಾಸ್ತವವಾಗಿ ಈಗ ಸೂರ್ಯನು ಅತ್ಯಂತ ದಕ್ಷಿಣ ಭಾಗದಲ್ಲಿ ನೇರ ಕಿರಣಗಳನ್ನು ಬೀರುವಾಗ ಆತ ಧನು ರಾಶಿಯಲ್ಲಿರುವುದರಿಂದ ಅದನ್ನು ಧನುರ್‌ವೃತ್ತ (Tropic of Saggitarious) ಎಂದೂ, ಅತ್ಯಂತ ಉತ್ತರ ಭಾಗದಲ್ಲಿ ನೇರ ಕಿರಣಗಳನ್ನು ಬೀರುವಾಗ ಮಿಥುನ ರಾಶಿಯಲ್ಲಿರುವುದರಿಂದ ಮಿಥುನ ವೃತ್ತ (Tropic of Gemini) ಎಂದೂ ತಿಳಿದುಕೊಳ್ಳಬೇಕಾಗುತ್ತದೆ!