Tuesday 12 September 2023

ಬಣ್ಣಗಳ ಬಣ್ಣನೆ



"700 ನ್ಯಾನೊ ಮೀಟರ್ ಅಥವಾ 430 ಟೆರಾ ಹರ್ಟ್ಜ್ ತರಂಗಾಂತರದಲ್ಲಿ ಇದು ಕೆಂಪು ಬಣ್ಣ."

"580 ನ್ಯಾನೊ ಮೀಟರ್ ಅಥವಾ 515 ಟೆರಾ ಹರ್ಟ್ಜ್ ತರಂಗಾಂತರದಲ್ಲಿ  ಇದು ಹಳದಿ ಬಣ್ಣ."

ಇದೇನಿದು, "275.5 ಮೀಟರ್ ಅಥವಾ 1089 ಕಿಲೋಹರ್ಟ್ಜ್ ತರಂಗಾಂತರದಲ್ಲಿ ಇದು ಆಕಾಶವಾಣಿ ಮಂಗಳೂರು ಕೇಂದ್ರ" ಅಂದಂತಿದೆಯಲ್ಲ ಎಂದು ನಿಮಗನ್ನಿಸಬಹುದು.  ಒಂದು ವೇಳೆ ಕಾಮನಬಿಲ್ಲಿಗೆ ಮಾತನಾಡಲು ಬರುತ್ತಿದ್ದರೆ ಅದು ತನ್ನ ಬಣ್ಣಗಳನ್ನು ಹೀಗೆಯೇ ಪರಿಚಯಿಸುತ್ತಿತ್ತು. ಏಕೆಂದರೆ ನಮಗೆ ಕಾಣುವ ಬಣ್ಣಗಳನ್ನೊಳಗೊಂಡ ಬೆಳಕು ಕೂಡ ರೇಡಿಯೋ ತರಂಗಗಳಂತೆ ಸೆಕೆಂಡಿಗೆ 186000  ಮೈಲುಗಳ ವೇಗದಲ್ಲಿ ನಿರ್ವಾತ ಪ್ರದೇಶದಲ್ಲೂ ಚಲಿಸಬಲ್ಲ  ಇಲೆಕ್ಟ್ರೊ ಮ್ಯಾಗ್ನೆಟಿಕ್ ಸ್ಪೆಕ್ಟ್ರಂನ ಭಾಗವೇ ಆಗಿದೆ. 



ರೇಡಿಯೋ ವೇವ್, ಮೈಕ್ರೊವೇವ್, ಎಕ್ಸ್ ರೇ, ಗಾಮಾ ರೇ, ಇನ್ಫ್ರಾ ರೆಡ್, ಅಲ್ಟ್ರಾ ವಯಲೆಟ್  ಮುಂತಾದವುಗಳನ್ನೊಳಗೊಂಡ ವಿಶಾಲ ವ್ಯಾಪ್ತಿಯ ಎಲೆಕ್ಟ್ರೊಮ್ಯಾಗ್ನೆಟಿಕ್ ಸ್ಪೆಕ್ಟ್ರಮಿನ ಒಂದು ಅತಿ ಚಿಕ್ಕ ಭಾಗವೇ ನಮ್ಮ ಕಣ್ಣು ಗುರುತಿಸಬಹುದಾದ ಬಣ್ಣಗಳನ್ನೊಳಗೊಂಡ ಬೆಳಕು. ಈ ಭಾಗದಲ್ಲಿ ಇರುವ ತರಂಗಾಂತರಗಳು  ಕೆಂಪು, ಕಿತ್ತಳೆ, ಹಳದಿ, ಹಸುರು, ನೀಲ, ನೀಲಿ, ನೇರಳೆ ಮತ್ತು ಅವುಗಳ ಸಂಯೋಗದಿಂದ ಉತ್ಪತ್ತಿಯಾಗುವ ಇತರ ಬಣ್ಣಗಳಿಗೆ ಸಂಬಂಧಿಸಿದ ಪ್ರಭೆಯನ್ನು ಹೊರ ಸೂಸುತ್ತವೆ. ಇದು ವಸ್ತುಗಳ ಮೇಲೆ ಬಿದ್ದಾಗ ಅವು ತಮ್ಮ ಗುಣಧರ್ಮಕ್ಕನುಗುಣವಾಗಿ ಕೆಲವು ತರಂಗಗಳನ್ನು ಹೀರಿಕೊಂಡು ಇನ್ನುಳಿದ ತರಂಗಗಳನ್ನು ಪ್ರತಿಫಲಿಸುತ್ತವೆ. ಹೀಗೆ ಅಸ್ವೀಕೃತವಾದ ತರಂಗಗಳು ನಮ್ಮ ಕಣ್ಣನ್ನು ಪ್ರವೇಶಿಸಿದಾಗ  ಆಯಾ ತರಂಗಕ್ಕೆ  ಅನುಸಾರವಾಗಿ ನಮ್ಮ ಕಣ್ಣಿನ ರೆಟೀನಾದಲ್ಲಿ ಇರುವ coneಗಳೆಂಬ ಅಂಗಾಂಶಗಳು ಆ  ಬಣ್ಣವನ್ನು ಗುರುತಿಸಿ ಮೆದುಳಿಗೆ ರವಾನಿಸುತ್ತವೆ.  ಎಲ್ಲ ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯ ಇಲ್ಲದೆ ಬಣ್ಣಗುರುಡು ಅನುಭವಿಸುವ ನತದೃಷ್ಟರೂ ಇರುತ್ತಾರೆ.  ಪ್ರಾಣಿಗಳು ನಮ್ಮಂತೆ ಎಲ್ಲ ಬಣ್ಣಗಳನ್ನು ಗುರುತಿಸಲಾರವಂತೆ. 

ಕಾಮನ ಬಿಲ್ಲಿನ ಏಳು ಬಣ್ಣಗಳಿಗೆ ಸಂಬಂಧಿಸಿದ ತರಂಗಾಂತರಗಳನ್ನು ಇಲ್ಲಿ ನೋಡಬಹುದು.


 

ಇಲ್ಲಿ wavelengthನ್ನು 1/1000000 ಮಿಲಿಮೀಟರಿಗೆ ಸಮನಾದ ನ್ಯಾನೊ ಮೀಟರ್  ಮತ್ತು frequencyಯನ್ನು 1000 ಮೆಗಾ ಹರ್ಟ್ಜ್‌ಗೆ ಸಮನಾದ ಟೆರಾ ಹರ್ಟ್ಜ್‌ಗಳಲ್ಲಿ ತೋರಿಸಲಾಗಿದೆ.  ಕೊನೆಯ ಕಾಲಂನಲ್ಲಿರುವುದು ಇಲೆಕ್ಟ್ರಾನ್ ವೋಲ್ಟುಗಳಲ್ಲಿ ತೋರಿಸಿದ  ಈ ತರಂಗಗಳ ಶಕ್ತಿ.  ಸೂರ್ಯನಿಂದ ಬರುವ ಸ್ಪೆಕ್ಟ್ರಮ್‌ನಲ್ಲಿ ನಮಗೆ ಗೋಚರವಾಗುವ ಈ ಭಾಗದ ತರಂಗಗಳ ಶಕ್ತಿಯೇ ಅತ್ಯಂತ ಹೆಚ್ಚು.  

ತರಂಗಾಂತರಗಳು ಭಿನ್ನವಾಗಿರುವುದರಿಂದಲೇ ಬಿಳಿ ಬೆಳಕನ್ನು ಗಾಜಿನ ಪ್ರಿಸಂ ಮೂಲಕ ಹಾಯಿಸಿದಾಗ ಬಣ್ಣಗಳು ಬೇರೆ ಬೇರೆಯಾಗಿ ಕಾಣುವುದು.  ಕೆಲವೊಮ್ಮೆ ಆಕಾಶದಲ್ಲಿ ಮಳೆ ಹನಿಗಳು ಪ್ರಿಸಂನಂತೆ ಮತ್ತು ಎದುರುಗಡೆಯ ಮೋಡಗಳು ಪರದೆಯಂತೆ ವರ್ತಿಸಿ ಕಾಮನಬಿಲ್ಲು ಕಾಣಿಸುತ್ತದೆ.



ಪ್ರಕೃತಿಯಲ್ಲಿರುವ ಅಸಂಖ್ಯ ಬಣ್ಣಗಳನ್ನು ನೋಡಿ ಆನಂದಿಸಿದ ಮನುಷ್ಯ ಮೊದಲು ಹೂ, ಎಲೆ, ತೊಗಟೆ, ಮಣ್ಣು ಮುಂತಾದ ಪ್ರಕೃತಿಜನ್ಯ ವಸ್ತುಗಳನ್ನು, ಆ ಮೇಲೆ ರಾಸಾಯನಿಕಗಳನ್ನು  ಬಳಸಿ ತಾನೇ ಬಣ್ಣಗಳನ್ನು ತಯಾರಿಸಲು ಕಲಿತ. ಕೆಂಪು, ನೀಲಿ, ಹಳದಿ ಬಣ್ಣಗಳನ್ನು ವಿವಿಧ ಅನುಪಾತಗಳಲ್ಲಿ ಮಿಶ್ರ ಮಾಡಿ ಬೇರೆ ಬೇರೆ ಬಣ್ಣಗಳನ್ನು ಪಡೆಯಬಹುದು ಎಂದೂ ಆತನಿಗೆ ಗೊತ್ತಾಯಿತು.

ಉದಾ:
ಹಳದಿ + ನೀಲಿ = ಹಸುರು
ಕೆಂಪು + ನೀಲಿ = ನೇರಳೆ
ಹಳದಿ + ಕೆಂಪು = ಕಿತ್ತಳೆ
ಇತ್ಯಾದಿ.

RYB ಪದ್ಧತಿ
ಕೆಂಪು, ಹಳದಿ ಮತ್ತು ನೀಲಿ ಬಣ್ಣಗಳನ್ನು ಮತ್ತು ಕತ್ತಲು ಹಾಗೂ ಬೆಳಕಿನ ಪ್ರತೀಕಗಳಾದ ಕಪ್ಪು ಮತ್ತು ಬಿಳಿಯನ್ನು ವಿವಿಧ ಪ್ರಮಾಣಗಳಲ್ಲಿ ಬೆರೆಸಿ ಕಲ್ಪನಾತೀತ ಸಂಖ್ಯೆಯ ವರ್ಣ ಛಾಯೆಗಳನ್ನು ಸೃಷ್ಟಿಸಬಹುದು.  ಈ  ಪರಂಪರಾಗತ ತಂತ್ರವನ್ನು ಆಧುನಿಕ ಪರಿಭಾಷೆಯಲ್ಲಿ  RYB ಪದ್ಧತಿ ಅನ್ನಲಾಗುತ್ತದೆ. ಇದರಲ್ಲಿ ಎಲ್ಲ ಮೂಲ ಬಣ್ಣಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿದಾಗ ಕಪ್ಪಿಗೆ ಸಮೀಪವಾದ ಕಡು ಕಂದು ಬಣ್ಣ ಸೃಷ್ಟಿಯಾಗುವುದನ್ನು ಈ ಚಿತ್ರದಲ್ಲಿ ನೋಡಬಹುದು. ಇಲ್ಲಿ ಬಣ್ಣಗಳನ್ನು ಮಿಶ್ರ ಮಾಡಿದಾಗ ಒಂದು ಬಣ್ಣವು ಇನ್ನೊಂದರಿಂದ ಕಳೆಯಲ್ಪಡುವುದರಿಂದ ಇದನ್ನು subtractive ಮಿಶ್ರಣ ಅನ್ನಲಾಗುತ್ತದೆ.  ಕನ್ನಡದಲ್ಲಿ ಇದನ್ನು ಋಣಾತ್ಮಕ ವರ್ಣ ಮಿಶ್ರಣ ಅನ್ನಬಹುದು.



ಯಾವ ಬಣ್ಣಕ್ಕೆ ಯಾವುದನ್ನು ಬೆರೆಸಿದರೆ ಯಾವ ಹೊಸ ಬಣ್ಣ ಸಿಗುತ್ತದೆ ಎಂದು ನನಗೆ ತಿಳಿದದ್ದು ಮನೆಯಲ್ಲಿ ತಯಾರಿಸುತ್ತಿದ್ದ ಚೌತಿ ಗಣಪನಿಗೆ ಬಳಿಯುತ್ತಿದ್ದ ಬಣ್ಣಗಳನ್ನು ನೋಡಿ.  ಆ ಮೇಲೆ ಹೈಸ್ಕೂಲಿನ ಡ್ರಾಯಿಂಗ್ ಕ್ಲಾಸಿನಲ್ಲಿ ಇನ್ನಷ್ಟು ಮಾಹಿತಿ ದೊರಕಿತು.  ಯಾವುದೇ ಬಣ್ಣಕ್ಕೆ ಸ್ವಲ್ಪ ಬಿಳಿ ಬಣ್ಣವನ್ನು ಸೇರಿಸಿದರೆ ಅದು ಸಮವಾಗಿ ಹರಡಿಕೊಳ್ಳುತ್ತದೆ ಎಂಬ ರಹಸ್ಯ ಹೇಳಿಕೊಟ್ಟದ್ದು ನಮ್ಮ ಡ್ರಾಯಿಂಗ್ ಮಾಸ್ಟರಾಗಿದ್ದ ಶ್ರೀನಿವಾಸ ರಾಯರು. ಇದರಿಂದಾಗಿ ನಾವು ಬಳಸುತ್ತಿದ್ದ ಗಿಟಾರ್ ಬ್ರಾಂಡಿನ ಬಣ್ಣಗಳ ಪೆಟ್ಟಿಗೆಯ ಬಿಳಿ ಬಣ್ಣದ ಟ್ಯೂಬು ಬೇಗ ಬರಿದಾಗುತ್ತಿತ್ತು!  

RGB ಪದ್ಧತಿ
1860ರ ಸುಮಾರಿಗೆ ಕಲರ್ ಫೋಟೊಗ್ರಫಿಯ ಪ್ರಯತ್ನಗಳು ಆರಂಭವಾದಾಗ ಕೆಂಪು, ಹಸುರು, ನೀಲಿಗಳನ್ನು ಮೂಲ ಬಣ್ಣಗಳಾಗಿಸಬೇಕಾಗುತ್ತದೆ ಎಂಬ ವಿಚಾರ ಬೆಳಕಿಗೆ ಬಂತು. ಇದನ್ನು RGB ಪದ್ಧತಿ ಅನ್ನಲಾಗುತ್ತದೆ. ಬಣ್ಣಗಳ ಬೆಳಕನ್ನು ಬಳಸುವ  ಟಿ.ವಿ, ಡಿಜಿಟಲ್ ಕ್ಯಾಮರಾ, ಸ್ಮಾರ್ಟ್ ಫೋನ್ ಮುಂತಾದ  ಉಪಕರಣಗಳಲ್ಲೂ ಈ ಪದ್ಧತಿಯನ್ನೇ ಬಳಸಲಾಗುತ್ತದೆ.  ಇಂಥ ಉಪಕರಣಗಳ ಪರದೆಯಲ್ಲಿ ಒತ್ತೊತ್ತಾಗಿರುವ ಹಸುರು, ಕೆಂಪು, ನೀಲಿ ಬಣ್ಣದ ಬೆಳಕನ್ನು ಸೂಸುವ ಚುಕ್ಕೆಗಳನ್ನು ಅಗತ್ಯಕ್ಕೆ ತಕ್ಕಂತೆ ಉದ್ದೀಪನಗೊಳಿಸಿ ಬೇಕಿದ್ದ ವರ್ಣದ ಛಾಯೆಯನ್ನು ಪಡೆಯಲಾಗುತ್ತದೆ.   ಈ ಪದ್ಧತಿಯಲ್ಲಿ  ಮೂಲ ಬಣ್ಣಗಳ ಬೆಳಕನ್ನು ಸಮಪ್ರಮಾಣದಲ್ಲಿ  ಮಿಶ್ರ ಮಾಡಿದಾಗ ಬಿಳಿ ಬಣ್ಣ ಉಂಟಾಗುತ್ತದೆ. ಇಲ್ಲಿ ಬಣ್ಣಗಳ ಬೆಳಕನ್ನು ಮಿಶ್ರ ಮಾಡಿದಾಗ ಒಂದು ಬಣ್ಣವು ಇನ್ನೊಂದಕ್ಕೆ ಕೂಡಲ್ಪಡುವುದರಿಂದ ಇದನ್ನು additive ಮಿಶ್ರಣ ಅನ್ನಲಾಗುತ್ತದೆ.  ಕನ್ನಡದಲ್ಲಿ ಇದನ್ನು ಧನಾತ್ಮಕ  ವರ್ಣ ಮಿಶ್ರಣ ಅನ್ನಬಹುದು.




ಬಣ್ಣದ ಪಿಗ್ಮೆಂಟುಗಳ RYB ಪದ್ಧತಿ ಮತ್ತು  ಬಣ್ಣದ ಬೆಳಕಿನ RGB ಪದ್ಧತಿ ಏಕೆ ಭಿನ್ನವಾಗಿ ವರ್ತಿಸುತ್ತವೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆಗಲೇ ನೋಡಿದಂತೆ  ಭೌತಿಕ ವಸ್ತುಗಳಾದ ಬಣ್ಣದ pigmentಗಳು ಯಾವ ಬಣ್ಣವನ್ನು ಹೀರದೆ ಪ್ರತಿಫಲಿಸುತ್ತವೋ ಆ ಬಣ್ಣದವಾಗಿ ಕಾಣಿಸುತ್ತವೆ. ಒಂದು ರೀತಿ ಇದು ಫೊಟೊದ negative ಇದ್ದಂತೆ. ಅಂದರೆ ನಮಗೆ ಹಳದಿಯಾಗಿ ಕಾಣುವ ಪೈಂಟಿನಲ್ಲಿ ಹಳದಿ ಹೊರತು ಉಳಿದೆಲ್ಲ ಬಣ್ಣಗಳಿರುತ್ತವೆ. ಇದು subtractive ಅಂದರೆ ಋಣಾತ್ಮಕ ತತ್ತ್ವ. ಆದರೆ ಬಣ್ಣದ ಬೆಳಕಿನ ಸಂದರ್ಭದಲ್ಲಿ ಆ ಬೆಳಕು ಯಾವ ಬಣ್ಣದ್ದೋ ಅದೇ ಬಣ್ಣದ್ದಾಗಿ ಕಾಣಿಸುವುದು (Positive). ಇದು additive ಅಂದರೆ ಧನಾತ್ಮಕ ತತ್ತ್ವ. ಹೀಗಾಗಿ ಎರಡು ಬಣ್ಣದ pigment(ಋಣಾತ್ಮಕ) ಮತ್ತು ಎರಡು ಬಣ್ಣದ ಬೆಳಕು ( ಧನಾತ್ಮಕ) ಮಿಶ್ರ ಮಾಡಿದಾಗ ಪರಿಣಾಮಗಳು ಬೇರೆ ಬೇರೆ ಎಂದು ಸ್ಥೂಲವಾಗಿ ತರ್ಕಿಸಬಹುದು.

ಏಳು ಬಣ್ಣ ಸೇರಿ ಬಿಳಿಯ ಬಣ್ಣ?
ಈ ಹೇಳಿಕೆ ಸಂಪೂರ್ಣ ಸತ್ಯವಲ್ಲ.  ಧನಾತ್ಮಕ ಮಿಶ್ರಣ ಪದ್ಧತಿ ಅನುಸರಿಸುವ ಬಣ್ಣಗಳ ಬೆಳಕು ಮಿಶ್ರವಾದಾಗ ಮಾತ್ರ ಬಿಳಿಯ ಬಣ್ಣ ಉಂಟಾಗುವುದು.  ಋಣಾತ್ಮಕ ಮಿಶ್ರಣ ತತ್ತ್ವವನ್ನು ಅನುಸರಿಸುವ ಭೌತಿಕ ಬಣ್ಣಗಳನ್ನು ಬೆರೆಸಿದರೆ ಸಿಗುವುದು ಕಪ್ಪು ಬಣ್ಣ.  ಈ ಚಿತ್ರ ನೋಡಿ.
 

 

CMYK ಪದ್ಧತಿ
ಆಧುನಿಕ ಮುದ್ರಣ ಮಾಧ್ಯಮದಲ್ಲಿ ವರ್ಣಗಳನ್ನು ಮೂಡಿಸಲು subtractive ಮಾಡೆಲ್  RYBಯನ್ನೇ ಹೋಲುವ ಆದರೆ  ಹಳದಿ, ಕೆಂಪಿಗೆ ಸಮೀಪವಾದ Megenta, ಮತ್ತು ನೀಲಿಗೆ ಸಮೀಪವಾದ Cyan ಗಳು ಮುಖ್ಯ ಬಣ್ಣಗಳಾಗಿ ಉಳ್ಳ  CMYK  ಪದ್ಧತಿಯನ್ನು ಕಪ್ಪು ಬಣ್ಣದ ಜೊತೆ ಬಳಸುತ್ತಾರೆ.  ಹೀಗಾಗಿ ಡಿಜಿಟಲ್ ಉಪಕರಣಗಳ ಸ್ಕ್ರೀನಿನಲ್ಲಿ ಕಾಣುವ RGB additive ಪದ್ಧತಿಯ ಚಿತ್ರಗಳನ್ನು CMYK subtractive ಪದ್ಧತಿ ಬಳಸುವ ಪ್ರಿಂಟರ್ ಬಳಸಿ ಮುದ್ರಿಸಿದಾಗ ಬಣ್ಣಗಳು ಕೊಂಚ ಭಿನ್ನವಾಗಿ ಕಾಣಿಸುವುದನ್ನು ಗಮನಿಸಬಹುದು.



ಹಿಂದಿನ ಕಾಲದ ಪತ್ರಿಕೆಗಳಲ್ಲಿ ಒಂದೇ ಚಿತ್ರವನ್ನು ಮೂರು ಬಣ್ಣದ ಫಿಲ್ಟರುಗಳೊಂದಿಗೆ ಮೂರು ಸಲ ಮುದ್ರಿಸಿ ವರ್ಣಗಳ ಛಾಯೆಗಳನ್ನು ಹೊಮ್ಮಿಸುತ್ತಿದ್ದರಂತೆ. ಅದಕ್ಕಾಗಿ ಇದನ್ನು ತ್ರಿವರ್ಣ ಚಿತ್ರಗಳು ಅನ್ನುತ್ತಿದ್ದರು.  ಹಳೆ ಚಂದಮಾಮದ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ವರ್ಣದ ಮೇಲೆ ಇನ್ನೊಂದು ವರ್ಣದ  ಗೆರೆ ಮತ್ತು ಚುಕ್ಕೆಗಳನ್ನು ಮೂಡಿಸಿ ಬೇರೆ ಬೇರೆ ಛಾಯೆಗಳನ್ನು ಮೂಡಿಸುತ್ತಿದ್ದುದು ತಿಳಿಯುತ್ತದೆ.





ಬೆಳಕಿನಂತೆ ಶಬ್ದ ಕೂಡ ಇಲೆಕ್ಟ್ರೊಮ್ಯಾಗ್ನೆಟಿಕ್ ಸ್ಪೆಕ್ಟ್ರಂನ ಭಾಗವೇ ಎಂಬ ಪ್ರಶ್ನೆ ಮೂಡಬಹುದು.  ಅಲ್ಲ ಎಂಬುದು ಇದರ ಉತ್ತರ. ಮಾನವನ ಕಿವಿಗಳು ಗುರುತಿಸಬಹುದಾದ  20ರಿಂದ 20000 ಹರ್ಟ್ಜ್ ಫ್ರೀಕ್ವೆನ್ಸಿ ಹೊಂದಿರುವ ಶಬ್ದದ ಅಲೆಗಳು ಬೆಳಕಿನಂತೆ ನಿರ್ವಾತ ಪ್ರದೇಶದಲ್ಲಿ ಸೆಕೆಂಡಿಗೆ 186000 ಮೈಲುಗಳ ವೇಗದಲ್ಲಿ ಚಲಿಸಲಾರವು. ಸೆಕೆಂಡಿಗೆ ಸುಮಾರು 350 ಮೀಟರುಗಳ ವೇಗದಲ್ಲಿ ಚಲಿಸಲು ಅವುಗಳಿಗೆ ಯಾವುದಾದರೂ ಮಾಧ್ಯಮದ ಅಗತ್ಯವಿರುತ್ತದೆ.   ಯಾವುದಾದರೂ ವಸ್ತುವು ಕಂಪಿಸಿದಾಗ ಅದರಿಂದ ಹೊರಟ ಅಲೆಗಳನ್ನು ನಡುವಿನ ಮಾಧ್ಯಮವು ರಿಲೇ ಮಾಡುತ್ತಾ ನಮ್ಮ ಕಿವಿಗಳಿಗೆ ಮುಟ್ಟಿಸಿದಾಗ ನಾವು ಅದನ್ನು ಆಲಿಸಿದ ಅನುಭವ ಹೊಂದುತ್ತೇವೆ.


- ಚಿದಂಬರ ಕಾಕತ್ಕರ್.












Thursday 7 September 2023

ಇತಿಹಾಸದ ಗರ್ಭಕ್ಕೆ ಸೇರಿದ ಮುಂಡಾಜೆ ಸೇತುವೆ.



1919ರ ಸುಮಾರಿಗೆ ಬ್ರಿಟಿಷರು ಸುಲಲಿತ ರಸ್ತೆ ಸಂಪರ್ಕಕ್ಕಾಗಿ ದಕ್ಷಿಣ ಕನ್ನಡದಲ್ಲಿ ಅನೇಕ ಸೇತುವೆಗಳನ್ನು ನಿರ್ಮಿಸಿದ್ದರು. ಪಾಣೆಮಂಗಳೂರು, ಉಪ್ಪಿನಂಗಡಿ, ನಿಡಿಗಲ್ ಇತ್ಯಾದಿ ಸೇತುವೆಗಳ ಜೊತೆ ಮೃತ್ಯುಂಜಯಾ ನದಿಗಡ್ಡವಾಗಿ ಮುಂಡಾಜೆಯ ಸೇತುವೆಯೂ ಅದೇ ಸಮಯದಲ್ಲಿ ನಿರ್ಮಿಸಲ್ಪಟ್ಟಿರಬಹುದು ಎಂದು ನನ್ನ ಅಂದಾಜು. ಇಲ್ಲಿ ಕೆಲವರ್ಷಗಳ ಹಿಂದೆ ಹೊಸ ಸೇತುವೆ ನಿರ್ಮಾಣವಾಗಿದ್ದರೂ ಸಾಕಷ್ಟು ಗಟ್ಟಿಮುಟ್ಟಾಗಿದ್ದ ಹಳೇ ಸೇತುವೆ ಹಾಗೆಯೇ ಇತ್ತು. ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ರಸ್ತೆ ಅಭಿವೃದ್ಧಿಯ ಕಾರ್ಯ ನಡೆಯುತ್ತಿರುವುದರಿಂದ ಇನ್ನೊಂದು ಹೊಸ ಸೇತುವೆ ನಿರ್ಮಾಣಕ್ಕಾಗಿ ಈ ಹಳೆ ಸೇತುವೆಯನ್ನು ಈಗ ತೆರವುಗೊಳಿಸಲಾಗಿದೆಯಂತೆ.

ನಮ್ಮ ಬಾಲ್ಯಕಾಲದ ಅನೇಕ ನೆನಪುಗಳು ಈ ಸೇತುವೆಯೊಂದಿಗೆ ಬೆಸೆಯಲ್ಪಟ್ಟಿವೆ. ನಾವು ಮುಂಡಾಜೆ ಶಾಲೆಯಲ್ಲಿ ಓದುತ್ತಿದ್ದಾಗ ಮೃತ್ಯುಂಜಯಾ ನದಿ ದಾಟಿ ಹೋಗಲು ಹತ್ತಿರದ ದಾರಿ ಇತ್ತು. ಮಳೆಗಾಲದ ಆರಂಭ ಮತ್ತು ಕೊನೆಯಲ್ಲಿ  ನೀರು ಸ್ವಲ್ಪ  ಹೆಚ್ಚಾದರೂ ಎಚ್ಚರ ವಹಿಸಿ ನದಿ ದಾಟಲು ಆಗುತ್ತಿತ್ತು. ನಾವು ಹುಡುಗರು ಕೌಪೀನ ಧಾರಿಗಳಾಗಿ, ಹುಡುಗಿಯರು ಸೊಂಟಕ್ಕೊಂದು  ಬಟ್ಟೆ ಸುತ್ತಿಕೊಂಡು ಪುಸ್ತಕಗಳ ಚೀಲ ಎತ್ತಿ ಹಿಡಿದು, ಸಹಾಯಕ್ಕೆ ಬರುತ್ತಿದ್ದ ನಮ್ಮ ದೊಡ್ಡಣ್ಣ ಅಥವಾ ಅನಂತ ಭಟ್ಟರ ಕೈ ಹಿಡಿದು ಮೆಲ್ಲ ಮೆಲ್ಲನೆ ಒಬ್ಬೊಬ್ಬರಾಗಿ ಆಚೆ ದಡ ಸೇರುತ್ತಿದ್ದೆವು. ನೀರಿನ ರಭಸ ಕಂಡರೆ ತಲೆ ತಿರುಗುವಂತಾಗುವುದರಿಂದ ನೇರವಾಗಿ ಮುಂದಕ್ಕೆ ನೋಡುತ್ತಾ ಸಾಗಬೇಕೆಂದು ನಮಗೆ ಹೇಳುತ್ತಿದ್ದರು. ಸಂಜೆ ಹಿಂತಿರುಗುವಾಗ ನದಿ ದಡದಿಂದ  ಕೂಕುಳು ಹಾಕಿದರೆ ಅಣ್ಣ ಅಥವಾ ಅನಂತ ಭಟ್ಟರು ಮತ್ತೆ ಸಹಾಯಕ್ಕೆ ಬರುತ್ತಿದ್ದರು.

ಕೆಲವರು ಸಂಜೆ ಹಿಂತಿರುಗುವಾಗ ಕಮ್ಮಿ ನೀರಿರಬಹುದೆಂದು ನದಿ ವರೆಗೆ ಬಂದು ನಿರಾಶರಾಗಿ ಮತ್ತೆ ಮುಂಡಾಜೆ ವರೆಗೆ ನಡೆದು ಸೇತುವೆಯ ಮೇಲಿಂದ ಬರಬೇಕಾದ ಪ್ರಸಂಗವೂ ಬರುತ್ತಿತ್ತು. ಆದರೆ ನಾನು ಒಮ್ಮೆಯೂ ಹೀಗೆ ಹಿಂದೆ ಹೋದದ್ದಿಲ್ಲ. ಅಪಾಯಕಾರಿ ಮಟ್ಟದ ನೀರಿನಲ್ಲಿ ಯಾರಾದರೂ ದಾಟುವ ಸಾಹಸ ಮಾಡಿದರೆ ಹಿರಿಯರಿಂದ ಬೈಸಿಕೊಳ್ಳಬೇಕಾಗುತ್ತಿತ್ತು.  ಹೀಗೆ ಬೈದುದಕ್ಕೆ ಉಡಾಫೆ ಹುಡುಗನೊಬ್ಬ ‘ನಮಗೇನಾದರೂ ಆದರೆ ನಿಮಗೇನು?’  ಎಂದು ನಮ್ಮಣ್ಣನಿಗೆ  ಎದುರುತ್ತರ ಕೊಟ್ಟಿದ್ದನಂತೆ.  ಹಾಗೆಂದು ಅವರು  ನದಿ ದಾಟಿಸುವ ಕಾಯಕವನ್ನೇನೂ ನಿಲ್ಲಿಸಲಿಲ್ಲ. 

ಆದರೆ ಅನೇಕ ವರ್ಷಗಳ ನಂತರ  ಒಂದು ಸಲ ನಮ್ಮ ಇನ್ನೊಬ್ಬ ಅಣ್ಣನ ಮಗಳು ನದಿ ದಾಟುವಾಗ ನೀರಿನ ಸೆಳೆತಕ್ಕೆ ಬ್ಯಾಲೆನ್ಸ್ ತಪ್ಪಿ  ಬಿದ್ದು  ಹತ್ತು ಹದಿನೈದು ಮೀಟರ್ ಕೊಚ್ಚಿಕೊಂಡು ಹೋಗಿದ್ದಳು. ಜೊತೆಗಿದ್ದವರು ಬೊಬ್ಬೆ ಹೊಡೆದಾಗ ಅಲ್ಲೇ ಇದ್ದ  ಕೆಲಸದ ಆಳೊಬ್ಬ ಆಕೆಯನ್ನು ಅಂದು ರಕ್ಷಿಸಿದ್ದ.

ಮಳೆ ಜೋರಾಗಿ ನದಿ ತುಂಬಿ ಹರಿಯತೊಡಗಿದ ಮೇಲೆ  ಮೂರು ತಿಂಗಳು ಮುಂಡಾಜೆ ಪೇಟೆಗೆ ಬಂದು ಈ ಸೇತುವೆ ಮೇಲಿಂದ ಸುತ್ತು ಬಳಸು ದಾರಿಯಲ್ಲಿ ಶಾಲೆಗೆ ಹೋಗುವುದು ನಿತ್ಯದ ಕಾಯಕವಾಗುತ್ತಿತ್ತು.  ಎರಡು ವರ್ಷಗಳ ಅವಧಿಯಲ್ಲಿ ಸುಮಾರು ಆರು ತಿಂಗಳು ದಿನಕ್ಕೆರಡು ಬಾರಿಯಂತೆ ನಾನು ಈ ಸೇತುವೆ ಮೇಲಿನಿಂದ ನಡೆದು ಹೋಗಿದ್ದೇನೆ.

ಈ ಸೇತುವೆಯಲ್ಲಿ ಒಂದು ವಿಶೇಷವಿತ್ತು. ಸಂಪೂರ್ಣವಾಗಿ ಕಬ್ಬಿಣವನ್ನು ಬಳಸಿ ರಚಿಸಲ್ಪಟ್ಟುದರಿಂದ ಬಸ್ಸು ಲಾರಿಗಳು ಸಂಚರಿಸುವಾಗ ಇದು ಗಡ ಗಡ ನಡುಗುತ್ತಿತ್ತು! ಆ ಕಂಪನವನ್ನು ಅನುಭವಿಸಲು ಒಂದೆರಡು ಘನ ವಾಹನಗಳು ಬರುವ ವರೆಗೆ ನಾವು ಸೇತುವೆ ಮೇಲೆ ನಿಂತು ಕಾಯುವುದಿತ್ತು. ಇದರ ಕುಂದಗಳು ಸೇತುವೆಯಿಂದ ಎರಡೆರಡು ಮೀಟರ್ ಹೊರ ಚಾಚಿದ್ದುದು ಇನ್ನೊಂದು ವಿಶೇಷ.

ಅಲ್ಲಿ ಸಿಗುತ್ತಿದ್ದ ಸುಮಾರು ಒಂದು ಕಿಲೊಮೀಟರ್ ರಾಜ ರಸ್ತೆಯಲ್ಲಿ ಸಾಗುತ್ತಿದ್ದ ಬಸ್ಸು ಲಾರಿಗಳನ್ನು ನೋಡುವುದೇ ನಮಗೊಂದು ಥ್ರಿಲ್! ಅವುಗಳ ಬೆನ್ನಮೇಲೆ ಬರೆಯಲಾಗಿರುತ್ತಿದ್ದ Sound Horn Please ಎಂಬ ವಾಕ್ಯದಲ್ಲಿ ಈ Sound Horn ಎಂದರೇನೆಂದು ನನಗೆ ಅರ್ಥವಾಗುತ್ತಿರಲ್ಲಿಲ್ಲ. ಈ Sound Horn Please ಎಂಬಲ್ಲಿ Sound ಕ್ರಿಯಾಪದವೆಂದು ನನಗೆ ತಿಳಿದದ್ದು ಒಮ್ಮೆ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದಾಗ ಅಲ್ಲಿಯ ಲಾರಿಯೊಂದರ ಹಿಂದೆ ಬರೆದಿದ್ದ ಕೃಪಯಾ ಹಾರನ್ ಬಜಾಯಿಯೇ ಎಂಬ ವಾಕ್ಯ ನೋಡಿದ ಮೇಲೆಯೇ!

ಬಸ್ಸುಗಳು ಟಾಟಾ ಮರ್ಸಿಡಿಸ್ ಬೆಂಜ್ ಅಥವಾ ಫಾರ್ಗೋ ಮತ್ತು ಲಾರಿಗಳು ಬೆಂಜ್, ಫಾರ್ಗೊ, ಫೋರ್ಡ್ ಅಥವಾ ಬೆಡ್‌ಫೋರ್ಡ್ ಎಂಜಿನ್ ಹೊಂದಿರುತ್ತವೆ ಎಂದು ನಮಗೆ ತಿಳಿದದ್ದು ಆ ಸಮಯದಲ್ಲೇ.  ಆಗ ಲೇಲ್ಯಾಂಡ್ ಎಂಜಿನಿನ ಬಸ್ಸುಗಳಾಗಲಿ ಲಾರಿಗಳಾಗಲಿ ಇರಲಿಲ್ಲ.

ಹೇರು ತುಂಬಿದ ಲಾರಿಗಳು ಸೋಮಂತಡ್ಕ ತಿರುವಿನ ಏರಿನಲ್ಲಿ ಏದುಸಿರು ಬಿಡುತ್ತಾ ಸಾಗುವಾಗ ಕೆರೆ ದೇವಸ್ಥಾನದ ಪಕ್ಕದ ಒಳದಾರಿಯಿಂದ  ನಡೆದು ಹೋಗುವ ನಾವು ಅವುಗಳಿಂದ ಮೊದಲು ಸೋಮಂತಡ್ಕ ಸೇರಿ ವಿಜಯದ ನಗೆ ಬೀರುವುದಿತ್ತು.

ಶಂಕರ್ ವಿಟ್ಠಲ್, CPC, PV, ಹನುಮಾನ್, ಆಂಜನೇಯ, ಜಯಪದ್ಮ, ಶಾರದಾಂಬಾ, CKMS, ಕೃಷ್ಣಾ, ಭಾರತ್, ಶೆಟ್ಟಿ ಬಸ್ ಅದೆಷ್ಟು ಸಲ ಈ ಸೇತುವೆಯ ಮೇಲೆ ಸಂಚರಿಸಿರಬಹುದೋ ಏನೋ.  ಸೇತುವೆಗೆ ಪ್ರವೇಶಿಸುವಲ್ಲಿ ಕಡಿದಾದ ತಿರುವೊಂದಿತ್ತು.  ಏಕ ಕಾಲಕ್ಕೆ ಎರಡು ವಾಹನಗಳು ಹಾದು ಹೋಗುವಷ್ಟು ಅಗಲವಿಲ್ಲದ ಸೇತುವೆಯಾದ್ದರಿಂದ  ಆ ತಿರುವಿನ ಬಳಿ ಬಂದೊಡನೆ ಶಾರದಾಂಬಾ ಬಸ್ಸಿನ  ಚಂದು ಎಂಬ ಡ್ರೈವರ್ ಆಗ  ಆ ಬಸ್ಸಿನಲ್ಲಿ ಮಾತ್ರ ಇದ್ದ ವ್ಯಾಕ್ಯೂಮ್ ಹಾರ್ನ್ ಬಾರಿಸುತ್ತಿದ್ದ. ಆ ಹಾರ್ನನ್ನು ಆತ ಬೇರೆಲ್ಲೂ ಉಪಯೋಗಿಸದಿದ್ದುದೂ ವಿಶೇಷವೇ. ಆಗ ಉಳಿದ ಬಸ್ಸುಗಳಿಗೆ ಪೋಂ ಪೋಂ ಸದ್ದಿನ  ಬಲ್ಬ್ ಹಾರ್ನ್ ಮತ್ತು ಬೆಂಜ್ ಬಸ್ಸುಗಳಾದರೆ ಸ್ಟೇರಿಂಗಿನ ಮಧ್ಯದಲ್ಲಿ ಇರುತ್ತಿದ್ದ ಗುಂಡಿ ಒತ್ತಿ ಬಾರಿಸುವ ಎಲೆಕ್ಟ್ರಿಕ್ ಹಾರ್ನ್ ಮಾತ್ರ ಇರುತ್ತಿದ್ದುದು.   ವಾಹನಗಳ ವೇಗ ತಾನಾಗಿ ಕಡಿಮೆಯಾಗಲಿ ಎಂದು ಸೇತುವೆ ಸಮೀಪ ತಿರುವು ಇರುವಂತೆ ರಸ್ತೆಗಳನ್ನು ರಚಿಸುತ್ತಿದ್ದರು ಎಂದು ಕೆಲವರು ಹೇಳುವುದಿದೆ.

ನಾನು ಉಜಿರೆ ಕಾಲೇಜಿಗೆ ಮುಂಡಾಜೆಯಿಂದ up and down ಮಾಡುತ್ತಿದ್ದ ಕಾಲದಲ್ಲಿ ಒಮ್ಮೆ ಈ ಸೇತುವೆ ದುರಸ್ತಿಗೆಂದು ಮುಚ್ಚಲ್ಪಟ್ಟಾಗ ಒಂದು ವಾರ ಕಾಲ ಶೆಟ್ಟಿ ಬಸ್ಸು ಸೇರಿದಂತೆ ಎಲ್ಲ ವಾಹನಗಳು  ಪಂಚಾಯತು   ರಸ್ತೆ ಮೂಲಕ    ಗುಂಡಿ    ದೇವಸ್ಥಾನದ ಎದುರಿಂದ ಹಾದು ಮೃತ್ಯುಂಜಯಾ ನದಿಗಿಳಿದು ದಾಟಿ ಚಲಿಸುತ್ತಿದ್ದುದು ಇನ್ನೊಂದು ಮರೆಯಲಾಗದ ಅನುಭವ. ಯಾವಾಗಲೂ ಎರಡು ಕಿಲೋಮೀಟರ್ ನಡೆದು ಬಸ್ ಹಿಡಿಯಬೇಕಾಗಿದ್ದ ನಮಗೆ ಆ ಒಂದು ವಾರ ಮನೆಯೆದುರೇ ಬಸ್ಸನ್ನೇರಿ ಸಂಜೆ ಮನೆ ಮುಂದೆಯೇ ಇಳಿಯುವ ಸಂಭ್ರಮ! ಈಗ ಅಲ್ಲಿ ಅಗಲ ಕಿರಿದಾದ ಬಂಡಿ ಸೇತುವೆಯೊಂದು ನಿರ್ಮಾಣವಾಗಿದ್ದು ಘನ ವಾಹನಗಳೆಂದೂ ಆ ದಾರಿಯಲ್ಲಿ ಹೋಗದಂತಾಗಿದೆ.

ಕೆಲವರ್ಷಗಳ ಹಿಂದೆ ಈ ಸೇತುವೆಯ ಫೋಟೊ ಒಂದು ತೆಗೆದಿಟ್ಟುಕೊಂಡಿದ್ದೆ. ಈಗ ನನ್ನ ಕಲ್ಪನೆಯ ಶೆಟ್ಟಿ ಬಸ್ಸೂ ಅಲ್ಲಿ ಕಾಣಿಸಿಕೊಂಡು ನನ್ನನ್ನು ನೇರವಾಗಿ 1960ರ ದಶಕಕ್ಕೆ ಒಯ್ದು ಇಷ್ಟೆಲ್ಲಾ ನೆನಪುಗಳನ್ನು ಹೊರ ಹೊಮ್ಮಿಸಿತು.

ಇಲ್ಲಿ ಕಾಣುವಂತೆ ಅದು ಆವರಣ ರಹಿತ ಮುಳುಗು ಸೇತುವೆ ಆಗಿರಲಿಲ್ಲ.  ಕಬ್ಬಿಣದ  ಪೈಪುಗಳ ಸಧೃಡ ತಡೆಬೇಲಿ ಅದಕ್ಕಿತ್ತು.  ಹೊಸ ಸೇತುವೆ ಆಗಿ ಇದು ನಿರುಪಯುಕ್ತ  ಅನಿಸಿದ ಮೇಲೆ ಸಂಬಂಧಿಸಿದ ಇಲಾಖೆಯವರು ಅದನ್ನು ತೆಗೆದರೋ ಅಥವಾ ಪೈಪುಗಳು ಕಳ್ಳರ ಪಾಲಾದವೋ ಗೊತ್ತಿಲ್ಲ.