Sunday, 5 October 2025

ಕಣ್ತೆರೆದು ನೋಡು


1956ರ ಮುತ್ತೈದೆ ಭಾಗ್ಯ ಚಿತ್ರದಲ್ಲಿ ನಮ್ಮೂರೆ ಅಂದ ನಮ್ಮೋರೆ ಚಂದ ಅನ್ನುವ ನಾಡು ನುಡಿ ಕುರಿತಾದ ಹಾಡು ಇದ್ದರೂ ಮೊದಲು ಅಘೋಷಿತ ನಾಡಗೀತೆಯಾಗಿ ಜನಮನದಲ್ಲಿ ನೆಲೆಸಿದ್ದು 1961ರಲ್ಲಿ ಪ್ರದರ್ಶಿತವಾದ ಕಣ್ತೆರೆದು ನೋಡು ಚಿತ್ರದ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ  ಹಾಡು.  

ಆ ಸಿನಿಮಾದಲ್ಲಿ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಸ್ವತಃ ರೇಡಿಯೊ ನಿಲಯದಲ್ಲಿ  ಹಾಡುವ ಈ ಹಾಡು ಆಕಾಶವಾಣಿಯಲ್ಲೂ ಪದೇ ಪದೇ ಪ್ರಸಾರವಾಗುತ್ತಿದ್ದುದು ಇದಕ್ಕೆ ಇಷ್ಟೊಂದು ಜನಪ್ರಿಯತೆ ಸಿಗಲು ಕಾರಣವಾಗಿರಬಹುದು.  

ನಮ್ಮ ಮನೆಗೆ ಆಗಲೇ ರೇಡಿಯೋ ಬಂದಿದ್ದರೂ ಅದರಲ್ಲಿ ಕೇಳುವ ಮೊದಲೇ ನನಗೆ ಈ ಹಾಡಿನ ಪರಿಚಯವಾದದ್ದು ನಮ್ಮೂರಿನ ಪ್ರಸಿದ್ಧ ಕವಿ ರಾಮಚಂದ್ರಮಾಸ್ಟ್ರ  ಮಕ್ಕಳು ಅದನ್ನು ನಮ್ಮ ಶಾಲೆಯಲ್ಲಿ ಹಾಡಿದಾಗ.  ಏಕಪಾಠಿಗಳಾದ ಅವರು ಇದನ್ನು ಎಲ್ಲಿ ಕೇಳಿ ಕಲಿತುಕೊಂಡಿದ್ದರೋ ಏನೋ. 

ನಾನು ಜಿ.ಕೆ. ವೆಂಕಟೇಶ್ ಅನ್ನುವ ಹೆಸರು ಮೊದಲು ಕೇಳಿದ್ದೂ ಈ ಹಾಡಿನ ಜೊತೆಯಲ್ಲಿಯೇ.  ಆಗ ವಿವಿಧಭಾರತಿ ಹೊರತುಪಡಿಸಿ  ಇತರ ನಿಲಯಗಳಲ್ಲಿ ಸಿನಿಮಾ ಹಾಡುಗಳನ್ನು ಪ್ರಸಾರ ಮಾಡುವಾಗ ಗಾಯಕರು ಮತ್ತು ಕವಿಯ ಹೆಸರು ಮಾತ್ರ ಹೇಳುತ್ತಿದ್ದರೇ ಹೊರತು ಸಂಗೀತ ನಿರ್ದೇಶಕರ ಹೆಸರು ಹೇಳುತ್ತಿರಲಿಲ್ಲ. ಜಿ.ಕೆ. ವೆಂಕಟೇಶ್ ಎಂದು ಕೇಳಿದಾಗ ಬೆಳ್ತಂಗಡಿ ಬಸ್‌ಸ್ಟೇಂಡಿನಲ್ಲಿ  ಕಾಕಿ  ಚಡ್ಡಿ ಮತ್ತು ಶರ್ಟ್ ಧರಿಸಿ ಶರಬತ್ತು ತುಂಬಿದ ಗ್ಲಾಸುಗಳನ್ನು ತಟ್ಟೆಯಲ್ಲಿಟ್ಟುಕೊಂಡು ಮಾರುತ್ತಿದ್ದ ತೆಳ್ಳಗಿನ ವ್ಯಕ್ತಿಯ ಚಿತ್ರ ನನ್ನ  ಕಣ್ಣ ಮುಂದೆ ಬರುತ್ತಿದ್ದುದು! ಬೇಸಗೆ ರಜೆಯಲ್ಲಿ  ತಾಯಿಯೊಂದಿಗೆ ಅಜ್ಜಿಮನೆಗೆ ಹೋಗುವಾಗ  ಬೆಳ್ತಂಗಡಿಯಲ್ಲಿ ಹನುಮಾನ್ ಬಸ್ಸಿಗೆ ಕಾಯುವ ಸಮಯದಲ್ಲಿ ಈ ಹಾಡಿನ ಗುಂಗು ನನ್ನ ಮನಸ್ಸನ್ನು ಆವರಿಸಿದ್ದಾಗ ಆ ವ್ಯಕ್ತಿಯನ್ನು ಕಂಡದ್ದು ಇದಕ್ಕೆ ಕಾರಣವಾಗಿರಬಹುದು.

ನಾನು ಬಾಲ್ಯದಿಂದಲೂ ನೋಡಲು ಹಾತೊರೆಯುತ್ತಿದ್ದ, ಆದರೆ ನೋಡಲು ಅವಕಾಶ ಸಿಗದಿದ್ದ  ಚಿತ್ರ  ಕಣ್ತೆರೆದು ನೋಡು.  ಅನೇಕ ದಶಕಗಳ ನಂತರ TVಯಲ್ಲಿ ಕನ್ನಡ ಪ್ರಸಾರ ರಾಜ್ಯವ್ಯಾಪಿಯಾಗಿ  ವಾರಕ್ಕೊಂದು ಕನ್ನಡ ಚಿತ್ರ ಪ್ರಸಾರವಾಗತೊಡಗಿ ಈ ಚಿತ್ರದ ಸರದಿ ಬಂದಾಗಲಷ್ಟೇ ನನ್ನ ಕನಸು ಕೈಗೂಡಿದ್ದು. 

ಕಣ್ತೆರೆದು ನೋಡು ಚಿತ್ರದ ಕನ್ನಡದ ಮಕ್ಕಳೆಲ್ಲ ಹಾಡು ಅಘೋಷಿತ ನಾಡಗೀತೆ ಎನಿಸಿದರೂ  ಅದರ  ಉಳಿದೆಲ್ಲ ಹಾಡುಗಳೂ ಜನಪ್ರಿಯವೇ. ಭಕ್ತ ಕನಕದಾಸದ ನಂತರ ರಾಜಕುಮಾರ್ ಅವರ  ಎಲ್ಲ ಹಾಡುಗಳನ್ನು ಪಿ.ಬಿ.ಶ್ರೀನಿವಾಸ್ ಹಾಡಿದ ಮೊದಲ  ಸಾಮಾಜಿಕ ಚಿತ್ರ  ಇದು.  ಕನ್ನಡದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲು ಪಿ.ಬಿ.ಎಸ್ ಅವರಿಗೆ ಈ  ಚಿತ್ರ ಸಹಾಯ ಮಾಡಿತು.

ಅರುಣಾಚಲಮ್ ಸ್ಟುಡಿಯೋಸ್‌ನ  ಎ.ಕೆ. ವೇಲನ್ ನಿರ್ಮಿಸಿದ  ಈ ಚಿತ್ರದ ಪಾರಿಭಾಷಿಕ ವರ್ಗದ ವಿವರಗಳು ಹೀಗಿವೆ.
ಚಿತ್ರ ನಾಟಕ, ಸಂಭಾಷಣೆ : ಜಿ.ವಿ. ಅಯ್ಯರ್.
ಸಂಗೀತ : ಜಿ’ಕೆ. ವೆಂಕಟೇಶ್.
ಗೀತೆಗಳು : ಪುರಂದರದಾಸರು, ಜಿ.ವಿ. ಅಯ್ಯರ್.
ಛಾಯಾಗ್ರಹಣ : ಬಿ.ದೊರೈರಾಜ್.
ನಿರ್ದೇಶನ :  ಟಿ.ವಿ. ಸಿಂಗ್ ಠಾಕೂರ್.
ತಾರಾಗಣ: ರಾಜಕುಮಾರ್, ಎಂ. ಲೀಲಾವತಿ, ಬಾಲಕೃಷ್ಣ, ನರಸಿಂಹರಾಜು, ರಾಜಶ್ರೀ, ಜಿ.ವಿ. ಅಯ್ಯರ್, ರಮಾದೇವಿ, ಗಣಪತಿ ಭಟ್ ಮತ್ತಿತರರು.

ಬೌದ್ಧಿಕ ಆಸ್ತಿಯ ಒಡೆತನದ ಬಗ್ಗೆ (ಕಾಪಿ ರೈಟ್) ಅನೇಕ ದಶಕಗಳ ಹಿಂದೆ ಬಂದ ಕನ್ನಡ  ಚಿತ್ರ ಎಂಬುದು ಇದರ ಹೆಗ್ಗಳಿಕೆ.  ಆಗ ನಮ್ಮ ಮನೆಗೆ ಬರುತ್ತಿದ್ದ ವಿಕಟವಿನೋದಿನಿ ಎಂಬ ಮಾಸ ಪತ್ರಿಕೆಯಲ್ಲಿ  ಸರಳ ಕತೆ, ಪ್ರತಿಭಾಪೂರ್ಣ ಸಾಹಿತ್ಯ, ಮಧುರ ಸಂಗೀತ ಹಾಸ್ಯದ ಹೊನಲು ಕೂಡಿ ಬಹು ರಮ್ಯವಾಗಿ ಚಿತ್ರಿತವಾದ ಚಿತ್ರ ಎಂದು ಇದನ್ನು ಬಣ್ಣಿಸಲಾಗಿತ್ತು. 

ಈಗ ಒಂದೊಂದೇ ಹಾಡಿನ ವಿವರ ನೋಡುತ್ತಾ, ಚಿತ್ರದ  ಕಥೆ ತಿಳಿಯುತ್ತಾ ಹೋಗೋಣ.

ಶರಣು ಕಾವೇರಿ ತಾಯೆ
ಕಣ್ಣಿನ ಚಿಕಿತ್ಸೆಗಾಗಿ ಪಟ್ಟಣಕ್ಕೆ ಹೊರಟ ಚಿತ್ರದ ದೃಷ್ಟಿಹೀನ ನಾಯಕ  ಗೋಪು (ರಾಜಕುಮಾರ್) ದೋಣಿಯಲ್ಲಿ  ಕಾವೇರಿ ನದಿ ದಾಟುವಾಗಿನ ಪಿ.ಬಿ.ಎಸ್ ಹಾಡು ಇದು. ಹಾಡು ಮುಗಿಯುತ್ತಲೇ ದೋಣಿ ಸುಳಿಗೆ ಸಿಕ್ಕು ಗೋಪುವಿನ ತಂದೆ  ಮತ್ತು ತಂಗಿ ಇಂದು ದಿಕ್ಕಾಪಾಲಾಗುತ್ತಾರೆ. ಗೋಪು ಒಬ್ಬನೇ ಹೇಗೋ ದಡ ಸೇರುತ್ತಾನೆ.   

ಅಂತರ್ಜಾಲದಲ್ಲಿ  ಕಣ್ತೆರೆದು ನೋಡು ಸಿನಿಮಾ ಲಭ್ಯವಿದ್ದರೂ ಈ ಹಾಡಿನ ಭಾಗ ರಸಭಂಗವಾಗುವಷ್ಟು ಕ್ಷತಿಗ್ರಸ್ತವಾಗಿದೆ. ಆದರೆ  ಇಲ್ಲಿ ನಿಮಗೆ  ಪೂರ್ತಿಯಾಗಿ ಕೇಳಲು ಸಿಗುತ್ತದೆ. ಇದರಲ್ಲಿ ಕೋರಸ್ ಸ್ವರಗಳು ಹಾಡುವ ತೆರೆ ತೆರೆ ತೆರೆ ತೇಲಿ ಬರೆ, ಸರ ಸರ ಸರವಾಗಿ ನೊರೆ ರೀತಿಯ ಸಾಲುಗಳನ್ನು ಬಂಗಾರದ ಮನುಷ್ಯದ ಆಹಾ ಮೈಸೂರು ಮಲ್ಲಿಗೆಯಲ್ಲೂ ಬಳಸಲಾಗಿದೆ.  ಬೆಳ್ತಂಗಡಿಯ ಭಾರತ್ ಟಾಕೀಸಿನಲ್ಲಿ ದೀಪಗಳು ಆರಿ ತೆರೆಯ ಮೇಲೆ ಜಾಹೀರಾತುಗಳು ಬೀಳಲು ಆರಂಭವಾಗುವಾಗ ಈ ಹಾಡು ಹಾಕುತ್ತಿದ್ದರು. 

ಈ ಹಾಡಿನ ಆರ್ಕೆಸ್ಟ್ರೇಷನ್ ಅತಿ ಸುಂದರವಾಗಿದ್ದು, ಡೋಲು, ಢೋಲಕ್,  ಚೈನೀಸ್ ಟೆಂಪಲ್ ಬೆಲ್, ಗಿಟಾರ್, ಮ್ಯಾಂಡೊಲಿನ್, ವಯಲಿನ್ಸ್ ಇತ್ಯಾದಿ ವಾದ್ಯಗಳ ಹಾಗೂ ಕೋರಸ್ ಧ್ವನಿಗಳ ಸುಂದರ ಸಂಗಮವಿದೆ.



ಕಲ್ಲು ಸಕ್ಕರೆ ಕೊಳ್ಳಿರೊ
ದೋಣಿ ಮಗುಚಿ ಮುಳುಗಿ ಹೋದರೂ ಹೇಗೋ ಬದುಕಿದ ಗೋಪು  ದಾಸಣ್ಣನೆಂಬ(ಬಾಲಕೃಷ್ಣ) ದಗಲ್ಬಾಜಿ ವ್ಯಕ್ತಿಯ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಗೋಪು ಒಳ್ಳೆಯ ಹಾಡುಗಾರನೆಂದು ಅರಿತ ಆತ ಇದರಿಂದ ಹಣ ಸಂಪಾದಿಸಬಹುದೆಂದು ಎಣಿಸಿ ಈ ದೇವರ ನಾಮ ಹಾಡಿಸುತ್ತಾನೆ.


ಹಗಲೂ ಇರುಳು, ಸಿಗದಣ್ಣಾ ಇದು ನಾಳೆಗೆ ಸಿಗದು, ನಿನಗಿದು ನ್ಯಾಯವೇ
ದಾಸರ ಪದದಿಂದ ಸಾಕಷ್ಟು ದುಡ್ಡು ಸಂಗ್ರಹ ಆಗದಿದ್ದುದರಿಂದ  ದಾಸಣ್ಣನ ಕೋರಿಕೆಯಂತೆ ಗೋಪು ಹಾರ್ಮೋನಿಯಮ್ ನುಡಿಸುತ್ತಾ ತಾನೇ ರಚಿಸಿದ ಈ ಹಾಡುಗಳನ್ನು ಹಾಡುತ್ತಾನೆ.  ಮೆಚ್ಚಿದ ಜನರು ಕೊಟ್ಟ ಚಿಲ್ಲರೆ ಕಾಸನ್ನೆಲ್ಲ ದಾಸಣ್ಣ ಲಪಟಾಯಿಸುತ್ತಾನೆ. 

ಪಿ.ಬಿ.ಎಸ್ ಅವರ ಧ್ವನಿಯಲ್ಲಿರುವ ಆರ್ದ್ರತೆ ಈ ಕಿರು ಅವಧಿಯ ಹಾಡುಗಳನ್ನು ನೇರವಾಗಿ ಹೃದಯಕ್ಕಿಳಿಯುವಂತೆ ಮಾಡುತ್ತದೆ. ಬೀದಿ ಬದಿ ಹಾಡುಗಾರನನ್ನು ಪ್ರತಿನಿಧಿಸುವ ಹಾರ್ಮೋನಿಯಮ್ ಮತ್ತು ಢೋಲಕ್ ಸಂಗಮವಂತೂ ಹೃದಯಂಗಮ.  ಹಾಡುಗಳ  ನಡುವೆ ಬರುವ ಸಂಭಾಷಣೆಯ ತುಣುಕುಗಳಲ್ಲಿ ಒಂದು ಕಡೆ ರಫಿಯ ಉಲ್ಲೇಖ ಇರುವುದನ್ನು ಗಮನಿಸಿ. ನಿನಗಿದು ನ್ಯಾಯವೇ ಭಾಗದ ಆರಂಭದ ಆಲಾಪ ನಮ್ಮನ್ನು ಯಾವುದೋ ಲೋಕಕ್ಕೆ ಒಯ್ಯುತ್ತದೆ.  ಸಾಕ್ಷಾತ್ಕಾರ ಚಿತ್ರದ ಜನುಮ ಜನುಮದ ಅನುಬಂಧ ಹಾಡಿನ ಆರಂಭವೂ ಸುಮಾರಾಗಿ ಹೀಗೆಯೇ ಇದೆ.

ಹಗಲೂ ಇರುಳೂ


ಸಿಗದಣ್ಣಾ, ನಿನಗಿದು ನ್ಯಾಯವೇ


ಬಂಗಾರದೊಡವೆ ಬೇಕೇ
ತನ್ನ ಹಾಡುಗಳಿಂದ ದೊರಕಿದ ಹಣವನ್ನು ದಾಸಣ್ಣ ಲಪಟಾಯಿಸಿದ್ದನ್ನು ತಿಳಿದು ಬೇಸರಗೊಂಡ ಗೋಫು ಆತನ ಸಹವಾಸ ತೊರೆಯುತ್ತಾನೆ . ಒಂದು ದಿನ ನದಿ ತೀರದಲ್ಲಿ ಕುಳಿತು ನದಿಯನ್ನು ಸ್ತ್ರೀಗೆ ಹೋಲಿಸಿ ಈ ಹಾಡು ಹಾಡುತ್ತಾನೆ.  ಅಲ್ಲಿ ಜಲಕ್ರೀಡೆಯಾಡುತ್ತಿದ್ದ ನಾಯಕಿ ಕಮಲ (ಲೀಲಾವತಿ) ಇದು ತನ್ನನ್ನು ಕುರಿತು ಹಾಡಿದ್ದೆಂದು ಭಾವಿಸಿ ಗೋಪುವಿನ ಕೆನ್ನೆಗೆ  ಬಾರಿಸುತ್ತಾಳೆ.  ಆ ಮೇಲೆ  ಗೋಪುವಿನ ಪ್ರೇಮಪಾಶಕ್ಕೆ ಸಿಲುಕಿ ಅವಳೇ ಬೆಂಗಳೂರು ಲತಾ ಧ್ವನಿಯಲ್ಲಿ  ಈ ಹಾಡು ಹಾಡುವ ಪ್ರಸಂಗವೂ ಬರುತ್ತದೆ. 




ಹೆಣ್ಣಿನ ಮೇಲೆ ಕಣ್ಣಿಡುವಾಗ
ಅದೃಷ್ಟವಶಾತ್ ತಾನು ಹುಡುಕಿಕೊಂಡು ಬಂದಿದ್ದ ಕಣ್ಣಿನ  ಡಾಕ್ಟರ್ ಅಮೃತರಾಯರ (ಜಿ.ವಿ. ಅಯ್ಯರ್) ಭೇಟಿ  ಗೋಪುವಿಗೆ ಆಗುತ್ತದೆ.  ಅವರು ಆತನನ್ನು ತನ್ನ ಮನೆಯಲ್ಲಿರಿಸಿಕೊಂಡು ಚಿಕಿತ್ಸೆ ಪ್ರಾರಂಭಿಸುತ್ತಾರೆ. ಗೋಪುವಿನ ಹಾಡು ಕೇಳಿ ಕೆನ್ನೆಗೆ ಹೊಡೆದಿದ್ದ ಕಮಲಾ ಅಮೃತರಾಯರ ಪುತ್ರಿಯೇ  ಆಗಿರುತ್ತಾಳೆ.  ಅಮೃತರಾಯರ ಚಿಕಿತ್ಸೆಯಿಂದ ದೃಷ್ಟಿ ಮರಳಿ ಪಡೆದ ಗೋಪು ಮತ್ತು ಕಮಲಾ ಮಧ್ಯೆ ಪ್ರೇಮಾಂಕುರವಾಗಿ ಪಿ.ಬಿ.ಎಸ್ ಮತ್ತು ಎಸ್. ಜಾನಕಿ ಧ್ವನಿಯಲ್ಲಿ  ಈ ಹಾಡು ಹಾಡುತ್ತಾರೆ.  ಸಾರಂಗಿಯ ಸುಂದರ ಬಳಕೆ ಈ ಹಾಡಲ್ಲಿದೆ.

ಈ ಹಾಡು ಮತ್ತು ಕರುಣೆಯೇ ಕುಟುಂಬದ ಕಣ್ಣು ಚಿತ್ರದ ನಿಜವೋ ಸುಳ್ಳೋ ನಿರ್ಧರಿಸಿ ಒಂದಕ್ಕೊಂದು ಸಂವಾದಿ ಎಂದೂ, ಇದು ಸ್ವಲ್ಪ ಮೇಲ್ದರ್ಜೆಗೆ ಸೇರಿದ್ದ್ದು ಅನ್ನುವ  ವಿಚಿತ್ರ ಭಾವನೆ ನನ್ನಲ್ಲಿತ್ತು!  ನಿಜವೋ ಸುಳ್ಳೋ ರೇಡಿಯೋದಲ್ಲಿ ಆಗಾಗ ಮತ್ತು ಈ ಹಾಡು  ಅಪರೂಪಕ್ಕೆ ಎಂದಾದರೊಮ್ಮೆ ಕೇಳಲು ಸಿಗುತ್ತಿದ್ದುದು ಇದಕ್ಕೆ ಕಾರಣವೋ ಏನೋ.  ಈ ಹಾಡಿನಲ್ಲಿ ನಾಟಕದಂತೆ ಜೀವನವಲ್ಲ ಎಂಬ ಸಾಲು ಇರುವುದರಿಂದ ಇದು ನಾಟಕ ರಂಗದ ಹಿನ್ನೆಲೆಯ ಕಥೆ ಇರುವ ಸಿನಿಮಾ ಆಗಿರಬಹುದೆಂದೂ ನನಗನ್ನಿಸಿತ್ತು.



ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ದೃಷ್ಟಿ ಬಂದ ಮೇಲೆ  ಗೋಪುವನ್ನು ಅಮೃತರಾಯರು ತನ್ನ ಮನೆಯಲ್ಲೇ ಇರಿಸಿಕೊಳ್ಳುತ್ತಾರೆ. ಆದರೆ ಕಮಲಳ ಮದುವೆ ಅಮೃತರಾಯರ ತಂಗಿ ಮಗ ಮಧುವಿನೊಂದಿಗೆ (ನರಸಿಂಹರಾಜು) ಮೊದಲೇ ನಿಶ್ಚಯವಾಗಿರುವುದನ್ನು ತಿಳಿದು ಮನ ನೊಂದ ಗೋಪು ಅವರ ಮನೆಯಿಂದ ಹೊರಬೀಳುತ್ತಾನೆ. ಹೋಟೆಲೊಂದರಲ್ಲಿ ತಂಗಿ ಕವನಗಳನ್ನು ರಚಿಸಿ ಅವುಗಳನ್ನು ಪ್ರಕಟಿಸಲು ಪ್ರಯತ್ನಿಸುತ್ತಾನೆ.  ಆದರೆ ಯಾರೂ ಆತನನ್ನು ಪ್ರೋತ್ಸಾಹಿಸುವುದಿಲ್ಲ. ಹೀಗಿರುವಾಗ  ಆತನ  ಕವಿತೆಗಳಿದ್ದ ಕಾಗದದ ಕಟ್ಟು ಕಳೆದು ಹೋಗಿ ದಾಸಣ್ಣನ ಕೈ ಸೇರುತ್ತದೆ.  ಆತ ತನ್ನ ಹೆಸರಿನಲ್ಲಿ ಅವುಗಳನ್ನು ಪ್ರಕಟಿಸಿ ದೊಡ್ಡ ಕವಿ ಎನಿಸಿಕೊಳ್ಳುತ್ತಾನೆ.  ಹತಾಶನಾದ ಗೋಪು ಅಂಡಲೆಯುತ್ತಿದ್ದಾಗ ತಾನು ಬರೆದ ಹಾಡು ದಾಸಣ್ಣನ  ಹೆಸರಿನೊಂದಿಗೆ ರೇಡಿಯೊ ಮೂಲಕ ಪ್ರಸಾರವಾಗುವುದನ್ನು ಕೇಳಿಸಿಕೊಳ್ಳುತ್ತಾನೆ.  ಅಂದಿನ ದಿನಗಳಲ್ಲಿ ಸಾಮಾನ್ಯವಾಗಿದ್ದ ಸಾರ್ವಜನಿಕ  ರೇಡಿಯೊ ಪೆವಿಲಿಯನ್ ಮತ್ತು ಜಿ. ಕೆ. ವೆಂಕಟೇಶ್ ಅವರು ಆಕಾಶವಾಣಿ ಸ್ಟುಡಿಯೊದಲ್ಲಿ ಆರ್ಕೆಷ್ಟ್ರಾದೊಂದಿಗೆ ಹಾಡುವ ದೃಶ್ಯ ಈ ಹಾಡಿನ ಸಂದರ್ಭದಲ್ಲಿ ನೋಡಲು ಸಿಗುತ್ತವೆ. ಆರಂಭದಲ್ಲಿ ಟೈಟಲ್ಸ್ ಹಿನ್ನೆಲೆಯಾಗಿಯೂ  ಈ ಹಾಡನ್ನು ಬಳಸಲಾಗಿದೆ.

 

ಎಡವಿದರೆ ನಾಕುರುಳು
ಕೆಲವು ಸಜ್ಜನರಿಗೆ ದಾಸಣ್ಣನ ಮೋಸದ ಬಗ್ಗೆ ತಿಳಿಯುತ್ತದೆ. ಅವರ ಪ್ರಯತ್ನದಿಂದ  ಆತನ ಬಂಡವಾಳ ಬಯಲು ಮಾಡುವ ಸಲುವಾಗಿ ಹೂಡಿದ ತಂತ್ರದ ಭಾಗ ಈ ಹಾಡು. ಎಲ್.ಆರ್. ಈಶ್ವರಿ ಮತ್ತು  ಎಸ್. ಜಾನಕಿ ಧ್ವನಿಗಳಲ್ಲಿದೆ. ಸಾರಂಗಿ, ಮ್ಯಾಂಡೊಲಿನ್ ಮತ್ತು  ಮಹಾರಾಷ್ಟ್ರದ ಢೋಲಕಿಯ ಅದ್ಭುತ  ನುಡಿತ ಇದರಲ್ಲಿದೆ.



ಕೊನೆಗೆ ಒಂದಷ್ಟು ಡಿಶುಂ ಡಿಶುಂ ಇತ್ಯಾದಿ ಆಗಿ ದಾಸಣ್ಣ ಸೋಲೊಪ್ಪಿಕೊಳ್ಳುತ್ತಾನೆ. ಗೋಪುವಿಗೆ ನ್ಯಾಯ ಸಿಗುತ್ತದೆ. ಆಗಲೇ ನಿಶ್ಚಯವಾಗಿದ್ದ ಮದುವೆ  ಮಧುವಿಗೆ ಇಷ್ಟವಿಲ್ಲದ್ದರಿಂದ ಕಮಲಳೂ ಸಿಗುತ್ತಾಳೆ. ಕಳೆದು ಹೋಗಿದ್ದ ತಂಗಿ, ತಂದೆ ಎಲ್ಲರೂ ಒಟ್ಟಾಗಿ ಎಲ್ಲವೂ ಸುಖಾಂತ್ಯವಾಗುತ್ತದೆ.

ಎಲ್ಲ ವಿಭಾಗಗಳಲ್ಲೂ  ಉತ್ತಮವೇ ಆದ ಈ ಚಿತ್ರದ ಹೈಲೈಟ್ ಮೋಸಗಾರ ದಾಸಣ್ಣನಾಗಿ  ಬಾಲಕೃಷ್ಣ ಅವರ ನಟನೆ. ಅವರಷ್ಟು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದವರು ಕನ್ನಡ ಮಾತ್ರವಲ್ಲ,  ಯಾವ ಚಿತ್ರರಂಗದಲ್ಲೂ ಇರಲಾರರು.

 



 






1 comment:

  1. ಈ ಎಲ್ಲ ಹಾಡುಗಳೂ ನನಗಿಷ್ಟವಾದವುಗಳು. ನಿಮ್ಮ ಈ ವಿವರಣೆಗೆ ಧನ್ಯವಾದಗಳು

    ReplyDelete

Your valuable comments/suggestions are welcome