Friday 23 December 2016

ಅಲ್ಪಾಯುಷಿಯ ಅಂತಿಮ ಆಲ್ಬಂ - ಜೀವನ ತರಂಗ


ಇವು ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ, ಆದರೆ ದುರದೃಷ್ಟವಶಾತ್ ಅಲ್ಪಾಯುಷಿಯಾಗಿದ್ದ ಸಂಗೀತ ನಿರ್ದೇಶಕ ಎಂ. ವೆಂಕಟರಾಜು ಅವರ ಕೊನೆಯ ಚಿತ್ರ ಜೀವನ ತರಂಗದ ಹಾಡುಗಳು. ಅವರ ಮೆಚ್ಚಿನ ಎಸ್.ಕೆ.ಕರೀಂಖಾನ್ ರಚಿಸಿದ್ದ ಒಂದೊಂದು ಹಾಡೂ ಜೇನಿನಲ್ಲಿ ಅದ್ದಿ ತೆಗೆದಿದೆಯೇನೋ ಅನ್ನಿಸುವಂಥದ್ದು.  ಈ ಚಿತ್ರ 1963ರಲ್ಲಿ ಬಿಡುಗಡೆಯಾಗುವುದರೊಳಗೆ ಅವರು ಇಹಲೋಕ ತ್ಯಜಿಸಿದ್ದರು.  ಆಗಲೇ ಸಂಯೋಜಿಸಿ ಇಟ್ಟಿದ್ದ ಒಂದೆರಡು ಹಾಡುಗಳನ್ನು ಆ ಮೇಲೆ ಚಂದ್ರಕುಮಾರ ಚಿತ್ರದಲ್ಲಿ ಅವರ ಗುರು ಟಿ. ಚಲಪತಿ ರಾವ್  ಬಳಸಿಕೊಂಡರು.  ನಿಮ್ಮ ವಿರಾಮದ ವೇಳೆಯಲ್ಲಿ ಶಾಂತ ಮನಸ್ಸಿನಿಂದ  ಒಂದೊಂದಾಗಿ ಈ ಹಾಡುಗಳನ್ನು ಆಲಿಸಿ.  ಸಾಧ್ಯವಾದರೆ ಹೆಡ್ ಫೋನ್ ಬಳಸಿ. ಇವುಗಳಲ್ಲಿರುವ presence of voice and instruments ಅಂದರೆ ಧ್ವನಿ ಮತ್ತು ವಾದ್ಯಗಳ ಸ್ಪಷ್ಟತೆಯನ್ನು ಅನುಭವಿಸಿ.

ಬಾರಾ ಮಂದಾರ
ಕರಿಂಖಾನ್ ಅವರ ಪ್ರಾಸಬದ್ಧ ಪದಪುಂಜಗಳನ್ನೊಳಗೊಂಡ ಆನಂದಮಯ ಹಾಡು.  ಪದಗಳ ಅರ್ಥಕ್ಕೆ ಇಲ್ಲಿ ಹೆಚ್ಚು ಒತ್ತು ಇಲ್ಲ.  ಉಕ್ಕುವ ಉಲ್ಲಾಸಕ್ಕೆ ಪ್ರಾಮುಖ್ಯ.  ಮಧ್ಯದಲ್ಲಿ ಒಂದೆಡೆ ಬರುವ ಮಂದ್ರ ಕ್ಲಾರಿನೆಟ್ ಮತ್ತು ತಾರ ಕೊಳಲಿನ ಮೇಳ ಗಾಢ ಸಕ್ಕರೆ ಪಾಕದಲ್ಲಿ ನಿಂಬೆಯ ರಸವನ್ನು ಸೇರಿಸಿದಂತಿದ್ದು  ಎಸ್.ಜಾನಕಿ ಅವರ ಜೇನದನಿಗೆ ಸಂವಾದಿಯೇನೋ ಅನ್ನಿಸುವಂತಿದೆ!  ಬೋಲ್ ಗಳನ್ನು ಅನುಸರಿಸುವ ಶ್ರುತಿಬದ್ಧ ಢೋಲಕ್,  ವಯಲಿನ್ಸ್, ಮ್ಯಾಂಡೊಲಿನ್ ಇತ್ಯಾದಿ ವಾದ್ಯಗಳು ಹಾಡಿಗೆ ಮೆರುಗು ನೀಡಿವೆ.




ಹೆಣ್ಣಾಗಿ ಬಂದ ಮೇಲೆ
ಮೊದಲ ಹಾಡಿನ ಉಲ್ಲಾಸಕ್ಕೆ contrast ರೂಪದಲ್ಲಿರುವ ವಿಷಾದ ಭಾವದ ಹಾಡಿದು. ಜಾನಕಿ ಅವರದ್ದೇ ಧ್ವನಿ.  ಇದರಲ್ಲಿ ಆ ಕಾಲದಲ್ಲಿ ಜನಪ್ರಿಯವಾಗಿದ್ದ ಸೋಲೊವಾಕ್ಸ್ ಎಂಬ  ಸಂಗೀತೋಪಕರಣ ಬಳಕೆಯಾಗಿದೆ.  ಅದು ಈಗಿನ ಕೀಬೋರ್ಡುಗಳಂತೆ ಕರ್ಕಶವಾಗಿರದೆ ಇತರ ವಾದ್ಯಗಳ ಜೊತೆ ಶ್ರುತಿಶುದ್ಧವಾಗಿ ಮಿಳಿತವಾಗುತ್ತಿದ್ದುದನ್ನು ಗಮನಿಸಬಹುದು.  ಕನ್ನಡದ ಹಾಸ್ಯ ನಟ ಹನುಮಂತಾಚಾರ್ ಇದರ ನುಡಿಸುವಿಕೆಯಲ್ಲಿ ಪ್ರಾವೀಣ್ಯ ಹೊಂದಿದ್ದರು. 60ರ ದಶಕದಲ್ಲಿ ಬೆಂಗಳೂರು ಆಕಾಶವಾಣಿಯ ಕಾರ್ಮಿಕರ ಕಾರ್ಯಕ್ರಮದಲ್ಲಿ ಬರುತ್ತಿದ್ದ ಚಿತ್ರಗೀತೆಗಳನ್ನಾಧರಿಸಿದ ಗೀತ ರೂಪಕದಲ್ಲಿ ಈ ಹಾಡು ಹೆಚ್ಚಾಗಿ ಸೇರ್ಪಡೆಗೊಳ್ಳುತ್ತಿತ್ತು.  ರಾಜನ್ ನಾಗೇಂದ್ರ ಅವರು ನೀ ನಡೆವ ಹಾದಿಯಲ್ಲಿ ಹಾಡಿಗೆ ಇದರಿಂದ ಸ್ಪೂರ್ತಿ ಪಡೆದಿರಬಹುದು!




ಬಂತಮ್ಮ ಮದುವೆ ಬಂತಮ್ಮ
ಇದೂ ಜಾನಕಿ ಅವರದೇ ಧ್ವನಿಯಲ್ಲಿರುವ, ಸೋದರ ಸೊಸೆಯೊಬ್ಬಳು ತನ್ನ ಅತ್ತೆಯನ್ನು ಛೇಡಿಸುವ ಹಾಡು.  ಸನ್ನಿವೇಶಕ್ಕೆ ತಕ್ಕಂತೆ ನಮ್ಮತ್ತೆ ರಾಣಿ,  ಚಂದದ ಚಿಕ್ಕಪ್ಪ,  ನೋಟಿನ ಕಟ್ಟು, ಮೂರೆಳೆ ಚೈನು ಇತ್ಯಾದಿ ಪದಗಳನ್ನು ಬಳಸಲಾಗಿದೆ.  ಮದುಮಗನನ್ನು ಮದುವಣ್ಣನೆಂದು ಸಂಬೋಧಿಸಿರುವುದು ಗಮನಾರ್ಹ.  ಕರೀಂಖಾನ್ ಅವರು ಮನೆ ಅಳಿಯ ಚಿತ್ರಕ್ಕಾಗಿ ರಚಿಸಿದ ಗೊಲ್ಲರು ಬಾಲೆ ಹಾಡಲ್ಲೂ ಈ ಪದ ಬಳಸಿದ್ದಾರೆ.




ಮನದೆ ಮುನಿದೆ
ಇದು ಪಿ.ಬಿ.ಶ್ರೀನಿವಾಸ್ ಮತ್ತು ಜಾನಕಿ ಅವರ ಧ್ವನಿಯಲ್ಲಿರುವ ಯುಗಳ ಗೀತೆ.  ಇವರಿಬ್ಬರು ಭಕ್ತ ಕನಕದಾಸದ ಕಾಲದಿಂದಲೂ ವೆಂಕಟರಾಜು ಅವರ ನೆಚ್ಚಿನ ಗಾಯಕರಾಗಿದ್ದವರು.  ಹಾಡಿನ ಮೂಡಿಗೆ ತಕ್ಕಂತೆ ವೇಗದ ಲಯ ಇದೆ.  ಕಪ್ಪು ಎರಡರ ಶ್ರುತಿಯಲ್ಲಿ ಮಧ್ಯ ಮತ್ತು ತಾರ ಸಪ್ತಕಗಳಲ್ಲೇ  ಸಂಚರಿಸಿ ಮೇಲಿನ ಮಧ್ಯಮವನ್ನು ಸ್ಪರ್ಶಿಸುವ ಈ ಹಾಡಿನಲ್ಲಿ  ಪಿ.ಬಿ.ಎಸ್ ಅವರು ಕೆಲವೆಡೆ ಫಾಲ್ಸ್ ವಾಯ್ಸ್ ಬಳಸಿದ್ದಾರೆ.  ಬಹಳಷ್ಟು ಜಂಪಿಂಗ್ ನೋಟ್ಸ್ ಇರುವ ಈ ರಚನೆ ಹಾಡಲು ನುಡಿಸಲು ಅಷ್ಟೊಂದು ಸುಲಭವಲ್ಲ.  ಆದರೆ ಆಲಿಸಲು ಬಲು ಆಪ್ಯಾಯಮಾನ.




ಆನಂದ ತುಂಬಿ ತಂದೆ
ಪಿ.ಬಿ.ಎಸ್ ಮತ್ತು ಜಾನಕಿ ಅವರ ಯುಗಳ ಸ್ವರಗಳಲ್ಲಿರುವ ಇದು ರಾಧಾ-ಕೃಷ್ಣ ಸಂವಾದ ರೂಪದಲ್ಲಿದ್ದು ದರ್ಬಾರಿ ಕಾನಡಾ ರಾಗಾಧಾರಿತವಾಗಿದೆ.  ಕೃಷ್ಣನ ಹಾಡಾದರೂ ಆರಂಭದಲ್ಲಿ ಮಾತ್ರ ಕೊಳಲಿನ ತಾನವಿದ್ದು ತಬ್ಲಾದ ಚಿಕ್ಕ ಸೋಲೋದ ನಂತರ  ಹಾಡು ಆರಂಭವಾದ ಮೇಲೆ ಸಿತಾರ್, ವಯಲಿನ್ಸ್ ಮತ್ತು  ತಾರ್ ಶಹನಾಯಿ ಬಳಕೆಯಾಗಿವೆ. ಕೊನೆಯಲ್ಲಿ ಚುಟುಕಾದ ಚಿಟ್ಟೆಸ್ವರಗಳೂ ಇವೆ. ಈ ಹಾಡಿಗೆ ತಬ್ಲಾ ನುಡಿಸಿದ ಕಲಾವಿದರಿಗೆ ನೂರಕ್ಕೆ ನೂರು ಅಂಕ ಕೊಡಲೇ ಬೇಕು.  ಎಸ್.ಕೆ. ಕರೀಂಖಾನ್ ಅವರಂಥ ಅನ್ಯ ಧರ್ಮೀಯ ಕವಿಯೊಬ್ಬರು ಇಂತಹ ಕೃಷ್ಣನ ಗೀತೆಗಳನ್ನು ರಚಿಸುವುದು ಆಗ ವಿಶೇಷ ಸುದ್ದಿಯಾಗುತ್ತಿರಲಿಲ್ಲ.  ಇವರೇ ರಚಿಸಿದ ನಟವರ ಗಂಗಾಧರ ಅಥವಾ ಶಕೀಲ್ ಬದಾಯೂನಿ ರಚಿಸಿದ ಮನ್ ತಡಪತ್ ಹರಿ ದರುಶನ್ ಕೊ ಆಜ್ ಮುಂತಾದ ಹಾಡುಗಳು ಆಗ ಚಿತ್ರರಂಗದ ಸರ್ವಧರ್ಮ ಸಮನ್ವಯದ ಕುರುಹೆಂಬಂತೆ ಸ್ವೀಕರಿಸಲ್ಪಡುತ್ತಿದ್ದವು!




ಬಂತು ನವ ಜೀವನ
ಪ್ರಸಿದ್ಧ ಗಾಯಕರು, ದೊಡ್ಡ ಆರ್ಕೆಷ್ಟ್ರಾ ಯಾವುದೂ ಇಲ್ಲದೆಯೂ ಒಂದು ಉತ್ಕೃಷ್ಟ ಹಾಡನ್ನು  ಸಂಯೋಜಿಸಬಹುದೆಂದು ವೆಂಕಟರಾಜು ಇಲ್ಲಿ ತೋರಿಸಿಕೊಟ್ಟಿದ್ದಾರೆ.  ಕವ್ವಾಲಿ ಶೈಲಿಯ ಈ ಹಾಡಿನಲ್ಲಿ ಬಳಕೆಯಾಗಿರುವುದು ತಬ್ಲಾ, ಹಾರ್ಮೋನಿಯಮ್ ಮತ್ತು ಕ್ಲಾರಿನೆಟ್ ಮಾತ್ರ .  ಇದನ್ನು ಹಾಡಿದವರು  ಸತ್ಯ ರಾವ್ ಮತ್ತು ಸೌಮಿತ್ರಿ ಎಂಬ ಹೆಸರೇ ಕೇಳಿರದ ಕಲಾವಿದರು! ಚಿತ್ರದ ನಾಮಾವಳಿಯಲ್ಲೂ ಇವರ ಉಲ್ಲೇಖವೇ ಇಲ್ಲ! ಆದರೂ ಅದೆಂತಹ ಧ್ವನಿಭಾರ, ಅದೆಂತಹ voice throw, ಅದೆಂತಹ ಶ್ರುತಿ ಶುದ್ಧತೆ, ಅದೆಂತಹ ವೃತ್ತಿಪರತೆ!  ಈ ಗಾಯಕರು ಬಹುಶಃ ನಾಟಕರಂಗದಲ್ಲಿ ಪಳಗಿದವರಿರಬೇಕು.  ವೆಂಕಟರಾಜು ಅವರೂ ನಾಟಕದ ಹಿನ್ನೆಲೆಯಿಂದ ಬಂದವರೇ ಆಗಿದ್ದರಿಂದ ಈ ಪ್ರಯೋಗ ಮಾಡಿರಬಹುದು.  ನಿಮ್ಮಲ್ಲಿ ಹೆಚ್ಚಿನವರು ಖಂಡಿತವಾಗಿಯೂ ಈ ಹಾಡನ್ನು (ಇತ್ತೀಚೆಗೆ) ಕೇಳಿರಲಿಕ್ಕಿಲ್ಲ.  ಆ ಕಾಲದಲ್ಲಿ ಆಕಾಶವಾಣಿ ಬೆಂಗಳೂರು, ಧಾರವಾಡ, ಭದ್ರಾವತಿಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು . 




ಜೀವನ ತರಂಗದ ಹಾಡುಗಳ ವೀಡಿಯೊ ಮಾತ್ರವಲ್ಲ, ಆ ಪೂರ್ತಿ ಚಿತ್ರವೇ ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು. ಈ ಪೋಸ್ಟ್ ಓದಿದ ನಂತರ ವೀಕ್ಷಿಸಿದರೆ ಹೆಚ್ಚಿನ ಆನಂದ ದೊರೆಯಬಹುದು!


Friday 16 December 2016

ಚಂದಮಾಮದ ಜಾಹೀರಾತುಗಳು


    ಈಗ ಟಿವಿಯಲ್ಲಿ ಜಾಹೀರಾತುಗಳು ಆರಂಭವಾದೊಡನೆ ಮನದಲ್ಲೇ ಹಿಡಿಶಾಪ ಹಾಕುತ್ತಾ ರಿಮೋಟ್ ಕೈಗೆತ್ತಿಕೊಳ್ಳುವವರೇ ಜಾಸ್ತಿ.  ಆದರೆ ಹಿಂದಿನ ಕಾಲದಲ್ಲಿ ರೇಡಿಯೋ ಸಿಲೋನ್ ಮತ್ತು ಚಂದಮಾಮದ ಜಾಹೀರಾತುಗಳನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದರು.  ಅವು ಮಿತಿ ಮೀರಿದ ಸಂಖ್ಯೆಯಲ್ಲಿರದೆ ಮನಸ್ಸನ್ನು ಮುದಗೊಳಿಸುವಂತಿರುತ್ತಿದ್ದುದೇ ಇದಕ್ಕೆ ಕಾರಣ. ಜಾಹೀರಾತುದಾರರ ಅವಗಣನೆಗೊಳಗಾದ ರೇಡಿಯೋ ಸಿಲೋನ್ ಈಗ ತನ್ನ ವೈಭವವನ್ನೆಲ್ಲ ಕಳಕೊಂಡು  ಕುಟುಕು ಜೀವ ಹಿಡಿದುಕೊಂಡಿದೆ.  ಪ್ರಕಟಣೆಯನ್ನು ನಿಲ್ಲಿಸಿದ್ದ ಚಂದಮಾಮ ಕೆಲ ವರ್ಷಗಳ ಹಿಂದೆ ಅಂತರ್ಜಾಲದಲ್ಲಿ ಅವತಾರವೆತ್ತಿದಾಗ ಹಳೆಯ ಸಂಚಿಕೆಗಳೊಡನೆ ಹಳೆ ಜಾಹೀರಾತುಗಳದ್ದೇ ಒಂದು ವಿಭಾಗವನ್ನೂ ಅಳವಡಿಸಿಕೊಂಡಿತ್ತು. ಆದರೇಕೋ ಕೆಲ ಕಾಲದ ನಂತರ ಚಂದಮಾಮದ ಜಾಲತಾಣ ನೆನಪುಗಳನ್ನು ಮಾತ್ರ ಉಳಿಸಿ ಅಂತರ್ಜಾಲದಿಂದ ಅಂತರ್ಧಾನವಾಯಿತು. ಆದರೆ ಅಷ್ಟರೊಳಗೆ ಕೆಲವು ನೆನಪುಗಳನ್ನು ಬಾಚಿಕೊಳ್ಳಲು ನನಗೆ ಸಾಧ್ಯವಾಗಿತ್ತು. ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. 


     ಸಿನಿಮಾ ಜಾಹೀರಾತುಗಳಿಗೂ ಚಂದಮಾಮಕ್ಕೂ 40ರ ದಶಕದಲ್ಲಿ ಅದು ಆರಂಭವಾದಾಗಿನಿಂದಲೇ ನಂಟು ಬೆಳೆದಿತ್ತು.  ಚಂದಮಾಮದ ವಿಜಯಾ ಸಂಸ್ಥೆ ಸ್ವತಃ ಚಿತ್ರಗಳನ್ನು ನಿರ್ಮಿಸುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು. ಆಗ ಹೆಚ್ಚಾಗಿ ತಮಿಳು ಚಿತ್ರಗಳೇ  ತಯಾರಾಗುತ್ತಿದ್ದುದರಿಂದ ಸಹಜವಾಗಿಯೇ ಅವುಗಳ ಜಾಹೀರಾತುಗಳು ಹೆಚ್ಚಾಗಿರುತ್ತಿದ್ದವು.  ಆ ಮೇಲೆ ಕ್ರಮೇಣ ತೆಲುಗು, ಕನ್ನಡ, ಹಿಂದಿ ಸಿನಿಮಾ ಜಾಹೀರಾತುಗಳು ಬರತೊಡಗಿದವು.   ಇವುಗಳಿಂದಾಗಿ ಯಾವ ಯಾವ ಊರಿನಲ್ಲಿ ಯಾವ ಯಾವ ಸಿನಿಮಾ ಟಾಕೀಸುಗಳು ಆ ಕಾಲದಲ್ಲಿ ಇದ್ದವು ಎಂಬ ಚಿತ್ರಣವೂ ನಮಗೆ ದೊರೆಯುತ್ತದೆ.  ಮೇಲಿನ ಮೂರು ಜಾಹೀರಾತುಗಳಿಂದ ಮಂಗಳೂರಿನ  ನ್ಯೂ ಚಿತ್ರಾ ಟಾಕೀಸು 51ನೇ ಇಸವಿಗಿಂತಲೂ ಹಿಂದಿನಿಂದ ಇತ್ತೆಂದೂ, ರೂಪವಾಣಿ ಟಾಕೀಸು 1953 ಮತ್ತು ಜ್ಯೋತಿ ಚಿತ್ರಮಂದಿರ  55ರ ಸುಮಾರಿಗೆ ಆರಂಭವಾದವೆಂದು ತಿಳಿಯುತ್ತದೆ.  ನಿಮ್ಮೂರಿನ ಯಾವುದಾದರೂ ಟಾಕೀಸು ಕಾಣಿಸುತ್ತಿದೆಯೇ ನೋಡಿ.  ಮಂಗಳೂರಿನ ಈ ಮೂರೂ ಟಾಕೀಸುಗಳು ಈಗಲೂ ಇದ್ದು ಆಗ ತಮಿಳು, ಕನ್ನಡ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ನ್ಯೂ ಚಿತ್ರಾ  ನಂತರ ಇಂಗ್ಲಿಷ್ ಚಿತ್ರಗಳಿಗೆ ಮುಡಿಪಾಯಿತು. ನಾನು 70ರ ದಶಕದಲ್ಲಿ  ನೌಕರಿಗಾಗಿ ಮಂಗಳೂರಿಗೆ ಬಂದಾಗ ರೂಪವಾಣಿ ಟಾಕೀಸು ನನಗೆ ಅಚ್ಚುಮೆಚ್ಚಿನದಾಗಿತ್ತು.  ಅದುವರೆಗೆ ನಾನು ರೇಡಿಯೋದಲ್ಲಿ ಹಾಡುಗಳನ್ನು ಕೇಳುತ್ತಾ ನೋಡಬೇಕೆಂದು ಆಸೆಪಟ್ಟಿದ್ದ ಅದೆಷ್ಟೋ ಹಳೆಯ ಚಿತ್ರಗಳು ಇಳಿಸಿದ ದರಗಳ ಬೆಳಗ್ಗಿನ ದೇಖಾವೆಯಾಗಿ ನನಗೆ ಅಲ್ಲಿ ನೋಡಲು ಸಿಕ್ಕಿದ್ದೇ ಇದಕ್ಕೆ ಕಾರಣ.  ಆ ಟಾಕೀಸಿಗೆ  ವಾರಾಂತ್ಯದಲ್ಲಿ ಬರಲಿರುವ ಹಳೇ ಸಿನಿಮಾದ ಪೋಸ್ಟರನ್ನು  ನಿರ್ದಿಷ್ಟ ಜಾಗವೊಂದರಲ್ಲಿ ಒಂದು ವಾರ ಮೊದಲೇ ಹಚ್ಚಿಟ್ಟಿರುತ್ತಿದ್ದರು.  ಅದನ್ನು ನೋಡಿಕೊಂಡು ಬಂದು ಆ ಚಿತ್ರ ನೋಡುವ ಕನಸು ಕಾಣುತ್ತಾ ಒಂದು ವಾರವನ್ನು ಕಳೆಯುವುದು ನಿಜವಾಗಿ ಚಿತ್ರ ನೋಡಿದ್ದಕ್ಕಿಂತಲೂ ಹೆಚ್ಚಿನ ಖುಶಿ ನೀಡುತ್ತಿತ್ತು!

ಚಂದಮಾಮದ ಜಾಹೀರಾತಿನ ಬಹುತೇಕ ಚಿತ್ರಗಳು ‘ಶರವೇಗ’ದಲ್ಲಿ ಬರುತ್ತಿದ್ದವು!  ಮಾಯಾ ಬಜಾರ್, ಹಮ್ ಪಂಛೀ ಏಕ್ ಡಾಲ್ ಕೆ ಮುಂತಾದ ಚಿತ್ರಗಳ  ಜಾಹೀರಾತಿನೊಂದಿಗೆ ಇಡೀ ಕಥೆಯನ್ನೂ ಹಲವು ಪುಟಗಳಲ್ಲಿ ಪ್ರಕಟಿಸಲಾಗಿತ್ತು. ಕೆಲವು ಸಲ ಬೇರೆ ಭಾಷೆಯ ಸಿನಿಮಾ ಹೆಸರನ್ನು ಕನ್ನಡಕ್ಕೆ ಭಾಷಾಂತರಿಸುವುದೂ ಇತ್ತು. ಉದಾಹರಣೆಗೆ ಸೆಂಗೋಟ್ಟೈ ಸಿಂಗಂ ಎಂಬ ತಮಿಳು ಸಿನಿಮಾ ಕನ್ನಡ ಜಾಹೀರಾತಿನಲ್ಲಿ ಶಂಕೋಟೆ ಸಿಂಹ ಎಂದಿತ್ತು.  ತೆಲುಗಿನ ಅಪ್ಪುಚೇಸಿ ಪಪ್ಪು ಕೂಡು ಸಿನಿಮಾದ  ಹೆಸರಿನ ಅರ್ಥ ಗೊತ್ತಿಲ್ಲದಿದ್ದರೂ ಪ್ರಾಸಬದ್ಧವಾಗಿ ಆಕರ್ಷಕ ಎನ್ನಿಸುತ್ತಿತ್ತು. ಮುಂದೊಮ್ಮೆ ನಮ್ಮ ಇಲಾಖಾ ತರಬೇತಿಗಾಗಿ ಮದರಾಸಿಗೆ ಹೋದಾಗ ಅಲ್ಲಿ ತೆಲುಗು ಬಲ್ಲ ಸಹೋದ್ಯೋಗಿಯೊಬ್ಬರು  ಪಪ್ಪು ಎಂದರೆ ಒಂದು ವ್ಯಂಜನ ವಿಶೇಷವೆಂದೂ, ಋಣಂ ಕೃತ್ವಾ ಘೃತಂ ಪಿಬೇತ್  ಎಂಬಂತೆ ಸಾಲ ಮಾಡಿಯಾದರೂ ಮೃಷ್ಟಾನ್ನ ಉಣ್ಣು ಎಂದು ಇದರರ್ಥವೆಂದೂ ತಿಳಿಸಿ ಒಂದು ಒಳ್ಳೆಯ ಆಂಧ್ರ ಹೋಟಲಿಗೆ ಕರೆದೊಯ್ದು  ಪಪ್ಪುವಿನ ರುಚಿಯನ್ನೂ ಸವಿಯುವಂತೆ ಮಾಡಿದ್ದರು!


     ಚಂದಮಾಮದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದ ಇನ್ನೊಂದು ಜಾಹೀರಾತು ಗ್ರಾಮಫೋನ್ ರೆಕಾರ್ಡುಗಳ ಡೀಲರ್ ಆಗಿದ್ದ ಸೀತಾ ಫೋನ್ ಕಂಪನಿದ್ದು.  30ರ ದಶಕದಿಂದ ಸಕ್ರಿಯವಾಗಿದ್ದ ಅದು ಈಗಲೂ ಬೆಂಗಳೂರಲ್ಲಿ ಇದೆ.  ಆ ಕಾಲದಲ್ಲಿ ಸಿನಿಮಾ ಹಾಡುಗಳ ಜೊತೆ ನಾಟಕ, ಶಾಸ್ತ್ರೀಯ ಸಂಗೀತ  ಇತ್ಯಾದಿಗಳ ರೆಕಾರ್ಡುಗಳು ಹೆಚ್ಚು ಮಾರಾಟವಾಗುತ್ತಿದ್ದಿರಬೇಕು.  ಈ ಚಿತ್ರದಲ್ಲಿ ಕಾಣುವ ‘ನಕಲಿ’ಗಳು ಎಂದರೆ ಪ್ರಸಿದ್ಧ ಹಾಡುಗಳ version songs ಇರಬಹುದೇನೋ. ಅವೆಲ್ಲ ಎಲ್ಲಿ ಹೋದವೋ.  ಜಗನ್ಮೋಹಿನಿ ಸಿನಿಮಾದ ಹಾಡುಗಳ ಜಾಹೀರಾತಂತೂ ಪ್ರತೀ ತಿಂಗಳು ಎಂಬಂತೆ ಕೆಲವು ವರ್ಷ ಬರುತ್ತಿತ್ತು.  ಆದರೆ ದುರದೃಷ್ಟವಶಾತ್  ಆ ಹಾಡುಗಳೂ ಈಗ ಎಲ್ಲೂ ಲಭ್ಯವಿಲ್ಲ.  ಇದ್ದುದೇ ಆದರೆ ಯಾರಾದರೂ ಇಷ್ಟರಲ್ಲಿ ಅಂತರ್ಜಾಲಕ್ಕೇರಿಸುತ್ತಿದ್ದರು.  ಬೆಂಗಳೂರಿನಲ್ಲಿರುವ ಯಾರಾದರೂ ಸೀತಾ ಫೋನ್ ಕಂಪನಿಯಲ್ಲೇ ಈ ಬಗ್ಗೆ ವಿಚಾರಿಸಬಹುದು. ಮಹಾತ್ಮಾ ಫಿಲಂಸ್ ಕುಟುಂಬದ ರಾಜೇಂದ್ರ ಸಿಂಗ್ ಬಾಬು ಅವರ ಪರಿಚಯವಿರುವವರು ಪ್ರಯತ್ನ ಪಟ್ಟರೆ ಈ ಹಾಡುಗಳು ಸಿಗಲೂಬಹುದು. ನಾನೂ ಆ ದಿಸೆಯಲ್ಲಿ ಪ್ರಯತ್ನ ಮುಂದುವರಿಸುತ್ತಿದ್ದೇನೆ.


     ವೀರ ಕಿಟ್ಟು ಮತ್ತು ಬಾಯಿಬಡುಕ ಪುಟ್ಟು ಎಂಬ ಡಾಲ್ಡಾದ ಜಾಹೀರಾತು ಒಂದು ಪುಟ್ಟ ಕಥೆಯ ರೂಪದಲ್ಲಿ ಇರುತ್ತಿತ್ತು.  ಬಾಯಿಬಡುಕ ಪುಟ್ಟು ಎನೋ ಒಂದು ಸಾಹಸ ಮಾಡಲು ಹೋಗಿ ಸೋತಾಗ ಕಿಟ್ಟು ಆತನಿಗೆ ವ್ಯಾಯಾಮ ಮಾಡಿ, ಹಾಲು ಕುಡಿದು, ಡಾಲ್ಡಾದಿಂದ ತಯಾರಿಸಿದ ಆಹಾರ ಸೇವಿಸಿ ಶಕ್ತಿವಂತನಾಗುವಂತೆ ಸಲಹೆ ನೀಡುತ್ತಿದ್ದ!  ಈ ಸಾಹಸಗಳು ಸಂಚಿಕೆಯಿಂದ ಸಂಚಿಕೆಗೆ ಬದಲಾಗುತ್ತಿದ್ದವು.  ಪ್ಯಾರೀಯವರ ಚಾಕೋಲೇಟುಗಳ ಜಾಹೀರಾತು ಬಲು ಮಜವಾಗಿರುತ್ತಿತ್ತು.  ವೈದ್ಯರೆಲ್ಲ ಸಿದ್ಧರಾಗಿ ಆಪರೇಶನ್ ಮಾಡಲು ಬಂದಾಗ ರೋಗಿ ಪ್ಯಾರಿ ಮಿಠಾಯಿ ಕೊಳ್ಳಲು ಹೋಗಿರುತ್ತಿದ್ದ.  ಕೆಲವು ಸಲ ಪೋಲೀಸ್ ಅಧಿಕಾರಿ  ಜೈಲು ಪರಿವೀಕ್ಷಣೆಗೆ ಬಂದಾಗ ಕೈದಿ, ವಿಕ್ಟರಿ ಸ್ಟಾಂಡಲ್ಲಿ ನಿಂತಿರಬೇಕಾಗಿದ್ದ ಬಹುಮಾನ ವಿಜೇತ ಪ್ಯಾರಿ ಮಿಠಾಯಿ ಕೊಳ್ಳಲು ಹೋಗಿರುತ್ತಿದ್ದರು!


     ಕೆಲವು ಸ್ಪರ್ಧಾರೂಪದ ಜಾಹೀರಾತುಗಳೂ ಇರುತ್ತಿದ್ದವು.  ಗಿಬ್ಸ್ ಡೆಂಟಿಫ್ರಿಸ್ ಎಂಬ ವಿಕ್ಸ್ ವೆಪೋರಬ್ ತರಹದ ಡಬ್ಬಿಯಲ್ಲಿ ಬರುತ್ತಿದ್ದ ದಂತಮಂಜನದ್ದು ಬಣ್ಣ ಬಳಿಯುವ ಸ್ಪರ್ಧೆಯೊಂದಿತ್ತು. 1962ರಲ್ಲಿ  7 ನೇ ತರಗತಿಯಲ್ಲಿದ್ದಾಗ ನನಗೆ ಸಿಕ್ಕಿದ ಅಣ್ಣನ ಹಳೆ Rives ವಾಟರ್ ಕಲರ್ ಉಪಯೋಗಿಸಿ ನಾನು ಮೊತ್ತ ಮೊದಲ ಕುಂಚ ಪ್ರಯೋಗ ಮಾಡಿದ್ದು ಈ 1958ರ ಚಂದಮಾಮದ ಮೇಲೆ.  ನನ್ನ ಆಗಿನ ಕೈ ಬರಹವನ್ನೂ ಅದರಲ್ಲಿ ನೋಡಬಹುದು! ಬಲಭಾಗದಲ್ಲಿ C B K ಎಂಬ ಮೊಹರು ಕಾಣುತ್ತಿದೆಯಲ್ಲ, ಅದು ಕಾವಟೆ ಎಂಬ ಮೆದು ಮರದ ಮುಳ್ಳನ್ನು ಕೆತ್ತಿ ತಯಾರಿಸಿದ ಅಚ್ಚಿನ ಗುರುತು.  ಈ ಕುರಿತು ನವೋಲ್ಲಾಸದ ನವರಾತ್ರಿಯಲ್ಲಿ ವಿವರಣೆ ಇದೆ.  ಇಲ್ಲಿ ತಪ್ಪು ಹುಡುಕುವ ಸ್ಪರ್ಧೆ ಆಯೋಜಿಸಿದ್ದ ಬಿನಾಕಾ ಅಂತೂ ಆಗಿನಿಂದಲೂ ಜಾಹೀರಾತಿನ ವಿಷಯದಲ್ಲಿ ಮುಂಚೂಣಿಯಲ್ಲೇ ಇತ್ತು.  ಬಿನಾಕಾ ಗೀತ್ ಮಾಲಾ ಆಗಲೇ ಜನಪ್ರಿಯತೆಯ ತುತ್ತ ತುದಿಯಲ್ಲಿತ್ತು.   ಗ್ರೀನ್, ರೋಸ್, ಟಾಪ್ ಮತ್ತು ಫ್ಲೋರೈಡ್ ಎಂಬ ನಾಲ್ಕು ವಿಧಗಳಲ್ಲಿ ದೊರೆಯುತ್ತಿದ್ದ ಪೇಸ್ಟು ಅದೊಂದೇ.  ಬಿನಾಕಾ ಪೇಸ್ಟುಗಳೊಡನೆ  ಬರುತ್ತಿದ್ದ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಬೊಂಬೆಗಳು ಮತ್ತು ಸ್ಟಿಕ್ಕರುಗಳು ಅನೇಕರಿಗೆ ನೆನಪಿರಬಹುದು. ಆಗಿನ ಕಾಲದ ಜನಪ್ರಿಯ ಕ್ಲಿಕ್ III ಕ್ಯಾಮರಾದ್ದೂ ಒಂದು ಫೋಟೋ ಸ್ಪರ್ಧೆ ಇತ್ತು.    60ರ ದಶಕದಲ್ಲಿ  ಆ ಕ್ಯಾಮರಾ ರೂ 46.50 ಕ್ಕೆ ದೊರಕುತ್ತಿತ್ತು. ಈ ಮೂರೂ ಉತ್ಪನ್ನಗಳು ಈಗ ಕಾಲನ ಹೊಡೆತಕ್ಕೆ ಸಿಕ್ಕಿ ಮರೆಯಾಗಿವೆ.  ಗಿಬ್ಸ್ ದಂತಮಂಜನವನ್ನಂತೂ ನಾನೂ ಈ ಜಾಹೀರಾತಲ್ಲಷ್ಟೇ ನೋಡಿದ್ದು.  ಬಿನಾಕಾ ಇದ್ದದ್ದು ಸಿಬಾಕಾ ಆಗಿ ಕೊನೆಗೆ ತನ್ನ ಪ್ರತಿಸ್ಪರ್ಧಿ ಕೋಲ್ಗೇಟಿನಲ್ಲಿ ವಿಲೀನವಾಯಿತು. ಕ್ಲಿಕ್ III ಕ್ಯಾಮರಾ ಡಿಜಿಟಲ್ ಕ್ರಾಂತಿಗೆ ಶರಣಾಯಿತು. ಕಾಲವನ್ನು ತಡೆಯೋರು ಯಾರೂ ಇಲ್ಲ ಅಲ್ಲವೇ?


     ಈ ಆಟಿಕೆಗಳ  ಜಾಹೀರಾತು ನೋಡಿ ನನ್ನಲ್ಲೂ ಇಂಥದ್ದೊಂದಿದ್ದಿದ್ದರೆ ಎಂದು ಆಸೆ ಹುಟ್ಟಿದ್ದುಂಟು.  ಒಮ್ಮೆ ಇಂತಹ ಬೋಟ್ ಧರ್ಮಸ್ಥಳ ಜಾತ್ರೆಯಲ್ಲಿ  ಕೊಳ್ಳಲು ಸಿಕ್ಕಿದಾಗ  ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸಿತ್ತು.  ಆದರೆ ಮನೆಗೆ ಬಂದು  ಅದನ್ನು ನೀರಿಗಿಳಿಸಿದಾಗ ಬಕೆಟ್ಟಿನಲ್ಲಿ ಎರಡು ಸುತ್ತು ಹೊಡೆದು ಶಾಶ್ವತ ಮುಷ್ಕರ ಹೂಡಿತು.  ಯಾರಲ್ಲೂ ಸುದ್ದಿ ಹೇಳದೆ ಅದನ್ನು ಮೂಲೆ ಸೇರಿಸಿದೆ.  ಈ ವ್ಯೂ ಮಾಸ್ಟರ್ ಇತ್ಯಾದಿ ಕೊಳ್ಳುವ  ಆರ್ಥಿಕ ಶಕ್ತಿ ಆಗ ನಮಗಿರಲಿಲ್ಲ.  ಆದರೆ ಇದನ್ನೇ ಹೋಲುವ ಚಿಕ್ಕ ಬಯೋಸ್ಕೋಪ್  ಕೆಲವು ಆಣೆಗಳಿಗೆ ಜಾತ್ರೆಯಲ್ಲಿ ಸಿಗುತ್ತಿತ್ತು. ಜೊತೆಗೆ ಸಿಗುತ್ತಿದ್ದ ಹಳೆ ಸಿನಿಮಾ ರೀಲಿನ ತುಂಡುಗಳನ್ನು ಅದರಲ್ಲಿಟ್ಟು ಒಂದು ಕಣ್ಣಿಂದ ನೋಡಿದಾಗ ಸಿಗುತ್ತಿದ್ದ ಖುಶಿ ಈಗ HD ಟಿವಿ ನೋಡಿದರೂ ಸಿಗದು.   ಕಿಟಿಕಿಯಿಂದ ಮನೆಯೊಳಗೆ  ಬೀಳುತ್ತಿದ್ದ ಬಿಸಿಲು ಕೋಲಿನ ಎದುರು ಆ ರೀಲಿನ ತುಂಡುಗಳನ್ನು ಹಿಡಿದು ಮನೆಯಲ್ಲಿದ್ದ ಭೂತಕನ್ನಡಿಯ ಸಹಾಯದಿಂದ ಎದುರಿನ ಗೋಡೆಯ ಮೇಲೆ ದೊಡ್ಡ ಚಿತ್ರ ಬೀಳುವಂತೆಯೂ ನಾನು ಮಾಡುತ್ತಿದ್ದೆ.


     ಚಿತ್ರಗಳೇ ಎಲ್ಲವನ್ನೂ ಹೇಳುವ ನ್ಯೂಟ್ರಿನ್ ಮಿಠಾಯಿಯ ಈ ಜಾಹೀರಾತು ಬಲು ಸುಂದರ.  ಯಾರಾದರೂ ಕೊಟ್ಟಾಗ ತಿನ್ನುವುದಕ್ಕಿಂತ ಯಾರಿಗೂ ತಿಳಿಯದೆ ಇಟ್ಟಲ್ಲಿಂದ ಹಾರಿಸಿ ತಿನ್ನುವ ಮಿಠಾಯಿಯ ರುಚಿ ಹೆಚ್ಚು ಎನ್ನುವ ಅನುಭವ ನಿಮಗೂ ಆಗಿರಬಹುದು!  ಪಕ್ಕದ ಟಿನೋಪಾಲ್ ಅಂದರೆ ಆಗಿನ ಉಜಾಲಾ. ತಿಳಿ ಹಳದಿ ಬಣ್ಣದ ಪೌಡರ್ ರೂಪದಲ್ಲಿದ್ದ ಅದು ಚಿಕ್ಕ ಆಕರ್ಷಕ ಡಬ್ಬಿಯಲ್ಲಿ ದೊರಕುತ್ತಿತ್ತು. ನಾವೆಲ್ಲ ಉಜಿರೆ ಕಾಲೇಜಿಗೆ ಹೋಗುವಾಗ  ಪಂಚೆ ಉಡುತ್ತಿದ್ದೆವು.  ಬೆರಳೆಣಿಕೆಯಷ್ಟು ಪ್ಯಾಂಟುಧಾರಿಗಳಿದ್ದರೋ ಏನೋ.  ಸಂಜೆ ಬಂದೊಡನೆ ಪಂಚೆಯನ್ನು ಶುಭ್ರವಾಗಿ ಒಗೆದು ನೀಲಿ ಮತ್ತು  ಟಿನೋಪಾಲ್ ಮಿಶ್ರಣದಲ್ಲಿ ಅದ್ದಿದರೆ  ಅದು ಕೊಕ್ಕರೆ ಗರಿಯಂತೆ ಬೆಳ್ಳಗಾಗುತ್ತಿತ್ತು.  ರೇಡಿಯೋ ಸಿಲೋನಿನಲ್ಲಿ
Now what is it that whitens best of all
Tinopal
Now what is it that whitens best of all
Tinopal
What is it that whitens best
What is it that whitens best
Tinopal is that  whitens best of all
ಎಂಬ  ಉಷಾ ಉತ್ತುಪ್ ಹಾಡಿದ್ದ ಜಿಂಗಲ್ ಕೂಡ ಬರುತ್ತಿತ್ತು.


     ಬಟ್ಟೆ ಒಗೆಯುವ ವಿವಿಧ ಸೋಪುಗಳ  ಪೈಕಿ ನಮ್ಮೂರಲ್ಲಿ ಹೆಚ್ಚು ಜನಪ್ರಿಯವಾಗಿದ್ದದ್ದು ಕಸ್ತೂರಿ ಬಾರ್ ಸೋಪ್.  ಜನರು ಅಂಗಡಿಗೆ ಹೋಗಿ ‘ಒಂದು ಕಸ್ತೂರಿ ಬಾರ್ ಸೋಪ್ ಸಾಬೂನು ಕೊಡಿ’ ಅನ್ನುತ್ತಾರೆಂಬ ಜೋಕ್ ಕೂಡ ಅಷ್ಟೇ ಜನಪ್ರಿಯವಾಗಿತ್ತು.  ನಮ್ಮ ಮನೆ ಬಳಕೆಗೆ ವರ್ಷವಿಡೀ ಸಾಕಾಗುವಷ್ಟು ಬಾರುಗಳಿರುವ ಒಂದು ಇಡೀ ಪೆಟ್ಟಿಗೆಯನ್ನೇ ಖರೀದಿಸಿ ತಂದಿಟ್ಟಿರುತ್ತಿದ್ದರು. ಬಾರುಗಳನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಲೆಂದೇ  ಉದ್ದವಾದ ಚೂರಿಯೊಂದಿತ್ತು.  ಅಂಗಡಿಯವರು ಸೆಣಬಿನ ದಾರದಿಂದಲೇ ಬಾರನ್ನು ಸುಲಭವಾಗಿ ತುಂಡರಿಸುವುದು ನೋಡಿ ನಮಗೆ ಅಚ್ಚರಿಯಾಗುತ್ತಿತ್ತು. ಈಗ ಇಂತಹ ಸೋಪುಗಳು ಡಿಟರ್ಜೆಂಟುಗಳಿಗೆ ದಾರಿಮಾಡಿಕೊಟ್ಟು  ಬದಿಗೆ ಸರಿದಿವೆ.

      ಆಗಿನ್ನೂ ಬೈಕು, ಕಾರುಗಳು ಸಾಮಾನ್ಯ ಜನರ ಕೈಗೆಟಕುತ್ತಿರಲಿಲ್ಲ. ಹೀಗಾಗಿ ಸೈಕಲ್ ಜಾಹೀರಾತುಗಳು ಹೆಚ್ಚು ಕಾಣಿಸಿಕೊಳ್ಳುತ್ತಿದ್ದವು. ಆದರೆ ಮಗು ನಡೆಯಲು ಕಲಿಯುವುದಕ್ಕೂ ಮುನ್ನ ಮನೆಗೆ ಟ್ರೈಸಿಕಲ್ ಬರುವ ಕಾಲವೂ ಅದಾಗಿರಲಿಲ್ಲ.  ಸೈಕಲ್ ಸವಾರಿಯ ಅನುಭವ ಪಡೆಯಲು ಸಾಮಾನ್ಯವಾಗಿ ಹೈಸ್ಕೂಲ್ ಮೇಟ್ಟಲೇರಿದ ಮೇಲಷ್ಟೇ ಸಾಧ್ಯವಾಗುತ್ತಿತ್ತು. ಗಂಟೆಗೆ ಕೆಲವು ಪೈಸೆಗಳ ಬಾಡಿಗೆಗೆ ಆಗ ಸೈಕಲುಗಳು ದೊರೆಯುತ್ತಿದ್ದವು. ಆಗಲೇ expert ಆಗಿರುತ್ತಿದ್ದ ಅಣ್ಣನನ್ನೋ, ಸ್ನೇಹಿತನನ್ನೋ ಜೊತೆಗಿಟ್ಟುಕೊಂಡು ಊರಿನ ಮೈದಾನಿನಲ್ಲಿ ಸೈಕಲ್ ಸವಾರಿ ಕಲಿಯುವಿಕೆ  ಆರಂಭವಾಗುತ್ತಿತ್ತು.  ಒಂದು ರೂಪಾಯಿ ಬಾಡಿಗೆಗೆ ಇಡೀ ಒಂದು ದಿನಕ್ಕೆ ದೊರೆಯುತ್ತಿದ್ದ ಸೈಕಲನ್ನು ಮನೆಗೆ ತಂದು ಊರ ದೇವಸ್ಥಾನದ ಮಾಡಿನ ನಾಲ್ಕೂ ಮೂಲೆಗಳಿಗೆ ಲಾಟೀನು ತೂಗಾಡಿಸಿ ಸ್ನೇಹಿತರೊಂದಿಗೆ ರಾತ್ರಿಯಿಡೀ ಸರದಿಯಂತೆ ದೇವರಿಗೆ ಪ್ರದಕ್ಷಿಣೆ ಹೊಡೆದದ್ದೂ ಇದೆ. ‘ಹಿಂದಿನ ಚಕ್ರ ತಿರುಗುತ್ತಾ ಇದೆ ನೋಡೋ’ ಎಂದು ಹೊಸತಾಗಿ ಸವಾರಿ ಕಲಿತವರ ಏಕಾಗ್ರತೆ ಭಂಗಗೊಳಿಸಿ ಅವರು ಬ್ಯಾಲನ್ಸ್ ತಪ್ಪಿ ಸೈಕಲ್ ಸಮೇತ ಧೊಪ್ಪನೆ ಬೀಳುವುದನ್ನು ನೋಡಿ ಸಂತೋಷ ಪಡುವುದು ಆಗಿನ ದಿನಗಳಲ್ಲಿ ಸಾಮಾನ್ಯವಾಗಿತ್ತು! ಎಷ್ಟು ಸಲ ಬಿದ್ದು ಎದ್ದರೂ ಸೈಕಲ್ ಮೇಲಿನ ಮೋಹ ಮಾತ್ರ ಕಮ್ಮಿ ಆಗುತ್ತಿರಲಿಲ್ಲ.   ಭಾರತೀಯರ ಮಟ್ಟಿಗೆ ಆಗಿನ ಸಾಮಾನ್ಯ ಸೈಕಲುಗಳ ಎತ್ತರ ಕೊಂಚ ಜಾಸ್ತಿಯೇ ಆಗಿತ್ತು ಅನ್ನಬೇಕು.  ಎಂತಹ ಆಜಾನುಬಾಹುವಾದರೂ ಸೀಟ್ ಮೇಲೆ ಕುಳಿತಾಗ ಕಾಲು ನೆಲಕ್ಕೆ ಎಟಕುತ್ತಿರಲಿಲ್ಲ.  ಹೀಗಾಗಿ ಹುಡುಗರು ಮೊದಲು ಪೆಡಲ್ ಬ್ಯಾಲನ್ಸ್, ಆ ಮೇಲೆ ರೋಲಿನ ಒಳಗಿಂದ ಕಾಲು ತೂರಿಸಿ ಪೆಡಲನ್ನು ತಿರುಗಿಸುವುದು,  ನಂತರ ಸೀಟಾರೋಹಣ ಹೀಗೆ ಹಂತ ಹಂತವಾಗಿ ಪ್ರಾವೀಣ್ಯ ಸಾಧಿಸಬೇಕಾಗುತ್ತಿತ್ತು. ಪೆಡಲ್ ಮೇಲೆ ಪೂರ್ತಿ ದೇಹದ ಭಾರಹಾಕಿ ಸೀಟನ್ನೇರುವ ಪದ್ಧತಿ ನಮ್ಮ ದೇಶದ ಸಾಂಪ್ರದಾಯಿಕ ಸೈಕಲ್ ಸವಾರರು ಮಾತ್ರ ಅನುಸರಿಸುತ್ತಿರುವುದೇನೋ.  ಸೀಟ್  ಮೇಲೆ ಕುಳಿತು ಕಾಲಿಂದ ತಿರುಗಿಸುವ ಉದ್ದೇಶಕ್ಕಾಗಿಯಷ್ಟೇ ಇರುವ ಪೆಡಲ್ ‘ಈ ಭಾರವ ತಾಳೆನು ಬೇರೇನೂ ದಾರಿಯ ಕಾಣೆನು’ ಎಂದು ಅಳಲಾರದೇ ಎಂದು ನನಗೆ ಅನ್ನಿಸುವುದಿದೆ!  ನಾನು ಡಿಗ್ರಿಯ ಎರಡನೇ ವರ್ಷದಲ್ಲಿರುವಾಗ ನಮ್ಮ ಮನೆಗೆ ಸೈಕಲ್ ಬಂತು.  ಆ ಮೇಲೆ ನೌಕರಿಗಾಗಿ ಊರು ಬಿಡುವ ವರೆಗೂ ಅದು ನನ್ನ ನೆಚ್ಚಿನ ಸಂಗಾತಿಯಾಗಿ  ಸವಾರಿಯ ಸುಖ; ಪಂಕ್ಚರ್, ರಿಪೇರಿ  ಇತ್ಯಾದಿಗಳ ಕಷ್ಟ ಎಲ್ಲದರ ಪರಿಚಯ ಮಾಡಿಸಿತು.


     ಟೇಪ್ ರೆಕಾರ್ಡರು ಏನೋ ಬಲು ಸುಂದರವೇ. ಆದರೆ ಚಿನ್ನದ ಬೆಲೆ 10 ಗ್ರಾಮಿಗೆ ಸುಮಾರು 100 ರೂಪಾಯಿ ಆಗಿದ್ದ 50ರ ದಶಕದಲ್ಲಿ 1000ರೂ ಬೆಲೆಬಾಳುವ ಈ ಟೇಪ್ ರೆಕಾರ್ಡರ್ ಕೊಳ್ಳುವ ಸಾಮರ್ಥ್ಯವಿದ್ದ ಚಂದಮಾಮ ಓದುಗರು ಎಷ್ಟಿದ್ದಿರಬಹುದು?

     ಚಂದಮಾಮ ಜಾಹೀರಾತುಗಳ ಮೇಲೆ ಒಂದು ಪಕ್ಷಿ ನೋಟ ಬೀರಿದೆವಲ್ಲ.  ನಾನು ವಾರಕ್ಕೊಂದರಂತೆ ಹಂಚಿಕೊಳ್ಳುತ್ತಿರುವ ಹಳೆ ಸಂಚಿಕೆಗಳನ್ನು ಓದುವಾಗ ಇನ್ನು ನೀವು ಕೂಡ ಎಲ್ಲ ಜಾಹೀರಾತುಗಳನ್ನು  ಗಮನವಿಟ್ಟು ನೋಡುತ್ತೀರಿ ಅಂದುಕೊಂಡಿದ್ದೇನೆ.



      


Sunday 11 December 2016

ಅಬ್ಬಾ! ಆ ಹಾಡುಗಳು!!


     ಪಿ.ಕಾಳಿಂಗರಾಯರ ಚಿತ್ರ ಮತ್ತು ಈ ಉದ್ಗಾರ ನೋಡಿದೊಡನೆ ಈ ಬರಹ ಅವರ ಪ್ರಸಿದ್ಧ ಭಕ್ತಿ ಗೀತೆ, ಭಾವ ಗೀತೆ, ಜಾನಪದ ಗೀತೆಗಳ  ಬಗ್ಗೆ ಇರಬಹುದೆಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು.  ಅವುಗಳೆಲ್ಲವು ಕೂಡ ಈ ಉದ್ಗಾರಕ್ಕೆ ಅರ್ಹವೇ ಆಗಿದ್ದರೂ ಇಲ್ಲಿ ನಾನು ಹೇಳ ಹೊರಟಿರುವುದು ಅವರ ಸಂಗೀತ ನಿರ್ದೇಶನವಿದ್ದ ಸಿನಿಮಾ ಒಂದರ ಹಾಡುಗಳ ಬಗ್ಗೆ.  ಹೌದು, ತಾಯಿ ದೇವಿಯನು ಕಾಣೆ ಹಂಬಲಿಸಿ, ಅಂಥಿಂಥ ಹೆಣ್ಣು ನೀನಲ್ಲ ಮುಂತಾದ ಹಾಡುಗಳನ್ನು ಸಿನಿಮಾಗಳಿಗಾಗಿ ಹಾಡಿದ ಅವರು ಕೆಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದರು.  ಅವುಗಳ ಪೈಕಿ 1959ರಲ್ಲಿ ಬಿಡುಗಡೆ ಆದ William Shakespeare ಅವರ  Taming of the shrew  ಆಧಾರಿತ ಹೆಚ್.ಎಲ್.ಎನ್.ಸಿಂಹ ಅವರ ನಿರ್ದೇಶನದ ಅಬ್ಬಾ ಆ ಹುಡುಗಿಯೂ  ಒಂದು.  ರಾಜಕುಮಾರ್, ನರಸಿಂಹರಾಜು, ಮೈನಾವತಿ, ಪಂಢರಿ ಬಾಯಿ ಮುಂತಾದವರ ತಾರಾಗಣವಿದ್ದ ಈ ಚಿತ್ರದಲ್ಲಿ ರಾಜಾ ಶಂಕರ್ ಮೊತ್ತ ಮೊದಲ ಬಾರಿ ಕಾಣಿಸಿಕೊಂಡಿದ್ದರು. ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ ಅವರ ಸುಮಧುರ ಯುಗಳ ಗೀತೆಗಳ ಶುಭಾರಂಭವಾದದ್ದೂ ಈ ಚಿತ್ರದಿಂದಲೇ.


     ಈ ಚಿತ್ರದಲ್ಲಿ ಕಾಳಿಂಗ ರಾವ್ ಅವರಿಗೆ ಅರೇಂಜರ್ ರೂಪದಲ್ಲಿ ಸಹಾಯ ಮಾಡಲು ಹಿಂದಿಯ ಪ್ರಸಿದ್ಧ ಸಂಗೀತ ನಿರ್ದೇಶಕ ಹಾಗೂ ಮ್ಯಾಂಡೊಲಿನ್ ವಾದಕ ಸಜ್ಜಾದ್ ಹುಸೇನ್ ಅವರನ್ನು ವಿಶೇಷವಾಗಿ ಕರೆಸಲಾಗಿತ್ತು. ಸಂಗೀತ ನಿರ್ದೇಶಕರು ಹಾಡುಗಳಿಗೆ ರಾಗ ಸಂಯೋಜಿಸಿದ  ಮೇಲೆ ಅಗತ್ಯವಿರುವ notations ಇತ್ಯಾದಿ ಮಾಡಿಕೊಂಡು ಸೂಕ್ತ ವಾದ್ಯಗಾರರನ್ನು ಆಯ್ಕೆ ಮಾಡಿ ಆರ್ಕೆಷ್ಟ್ರಾವನ್ನು ಹೊಂದಿಸಿ ಹಾಡನ್ನು ಅಲಂಕರಿಸುವುದು ಅರೇಂಜರ್ ಕೆಲಸವಾಗಿರುತ್ತದೆ. ಒಂದು ರೀತಿಯಲ್ಲಿ ಅರೇಂಜರ್ ಅಂದರೆ  ಸಂಗೀತ ನಿರ್ದೇಶಕರ ಬಲಗೈ ಇದ್ದ ಹಾಗೆ. ಹಿಂದಿಯಲ್ಲಿ ಶಂಕರ್ ಜೈಕಿಶನ್, ಓ.ಪಿ.ನಯ್ಯರ್, ಸಲಿಲ್ ಚೌಧರಿ ಮುಂತಾದವರಿಗೆ ಸೆಬಾಸ್ಟಿಯನ್; ಎಸ್.ಡಿ.ಬರ್ಮನ್, ಆರ್.ಡಿ.ಬರ್ಮನ್ ಅವರಿಗೆ ಮಾರುತಿ ರಾವ್ ಮತ್ತು ಬಾಸು-ಮನೋಹಾರಿ ಅರೇಂಜರ್ ಆಗಿದ್ದರು. ದಕ್ಷಿಣ ಭಾರತದಲ್ಲಿ ಆರ್. ಸುದರ್ಶನಂ, ವಿಜಯಾ ಕೃಷ್ಣಮೂರ್ತಿ, ಎಲ್.ವೈದ್ಯನಾಥನ್ ಮುಂತಾದವರು ಪ್ರಸಿದ್ಧ ಅರೇಂಜರ್ಸ್.  ಇಳಯ ರಾಜಾ ಕೂಡ ಮೊದಲು ಜಿ.ಕೆ.ವೆಂಕಟೇಶ್ ಅವರಿಗೆ ಅರೇಂಜರ್ ಆಗಿ ಕೆಲಸ ಮಾಡಿದ್ದರು.  ಲಕ್ಷ್ಮೀಕಾಂತ್ ಪ್ಯಾರೇಲಾಲ್ ಜೋಡಿಯಲ್ಲಿ ಪ್ಯಾರೇಲಾಲ್ ಸ್ವತಃ ಅರೇಂಜರ್ ಆಗಿದ್ದರು.  ಹಾಗೆಯೇ ಕಾಳಿಂಗ ರಾವ್ ಅವರಿಗೆ ಸಹಾಯಕರಾಗಿ ಬಂದ ಸಜ್ಜಾದ್ ಹುಸೇನ್ ಕೂಡ ಸಂಗೀತ ನಿರ್ದೇಶಕ ಮತ್ತು ಅರೇಂಜರ್ ಎರಡೂ ಆಗಿದ್ದವರು. ಅವರ ಸಹಕಾರದೊಂದಿಗೆ ಕಾಳಿಂಗರಾಯರು ಅಬ್ಬಾ ಆ ಹುಡುಗಿ ಚಿತ್ರದಲ್ಲಿ ನೀಡಿದ ಹಾಡುಗಳನ್ನು ಕೇಳಿದರೆ FM ರೇಡಿಯೋ, ಟಿ.ವಿ, mp3ಗಳಲ್ಲಿ ಕೇಳಿದ ಹಾಡುಗಳನ್ನೇ ಮತ್ತೆ ಮತ್ತೆ ಕೇಳಿ ಬೇಸತ್ತಿರಬಹುದಾದ ನಿಮಗೆ ಖಂಡಿತವಾಗಿಯೂ ತಾಜಾತನದ ಅನುಭವವಾಗಬಹುದು.  ಇವು ಚಿತ್ರಗೀತೆಗಳ ಸಿದ್ಧ ಮಾದರಿಗಿಂತ ಕೊಂಚ ಭಿನ್ನ.




ಆಸೆಯ ಗೋಪುರ ನಿರ್ಮಿಸಿಕೊಂಡು

      ತಾನೇ ಹಾಡಬಹುದಾಗಿತ್ತಾದರೂ   ಪಿ.ಬಿ.ಶ್ರೀನಿವಾಸ್ ಅವರಿಗೆ ಹೃದಯ ದೇವಿಯೆ ಮತ್ತು ಈ ಹಾಡನ್ನು ಎಸ್.ಜಾನಕಿ ಅವರೊಂದಿಗೆ ಹಾಡಲು ಅವಕಾಶ ಮಾಡಿಕೊಟ್ಟು  ಅವರಿಬ್ಬರ ಯುಗಳ ಗಾಯನದ ಮೊದಲ ಚಿತ್ರ ಎಂಬ ದಾಖಲೆ ನಿರ್ಮಾಣವಾಗಲು  ಪಿ.ಕಾಳಿಂಗ ರಾವ್ ಕಾರಣರಾದರು.  ಈ ಹಾಡಿನಲ್ಲಿ ಅತಿ ತಾರ ಸ್ಥಾಯಿಯಲ್ಲಿ ಆರಂಭವಾಗುವ   ಜಾನಕಿ ಅವರ ಧ್ವನಿಯನ್ನು ಆಲಿಸಿದರೆ ವಯಲಿನ್ ನುಡಿಯುತ್ತಿದೆಯೇನೋ ಎಂದು ಭಾಸವಾಗುತ್ತದೆ!  ಇದು ಖಂಡಿತವಾಗಿಯೂ ಸಜ್ಜಾದ್ ಹುಸೇನ್ ಅವರದೇ ಪ್ರಯೋಗ ಆಗಿರಬಹುದು. ಹಿಂದಿಯಲ್ಲಿ ಅವರು ರುಸ್ತುಂ ಸೊಹ್ರಾಬ್ ಚಿತ್ರದ ಫಿರ್ ತುಮ್ಹಾರೀ ಯಾದ್ ಆಯೀ ಏ ಸನಮ್ ಹಾಡಿನ ಆರಂಭವನ್ನು ರಫಿ ಅವರ ಅತಿ ತಾರ ಸ್ಥಾಯಿಯ  ಆಲಾಪದಿಂದಲೇ ಮಾಡಿರುವುದು ಇದಕ್ಕೆ ಸಾಕ್ಷಿ.  ನಾಲ್ಕಕ್ಷರದ ಢೋಲಕ್ ನಡೆಯೊಂದಿಗೆ ಆರಂಭವಾಗುವ ಈ ಹಾಡು  ಮಧ್ಯದಲ್ಲಿ ತಬಲಾದ ಐದು ಅಕ್ಷರಕ್ಕೆ ಬದಲಾಗಿ ಮತ್ತೆ ನಾಲ್ಕಕ್ಷರಕ್ಕೆ ಮರಳುವುದು ಒಂದು ಅಪರೂಪದ ಪ್ರಯೋಗ. ವಿಷಾದ ಭಾವದ ಗೀತೆಯಾದರೂ ಗ್ರೂಪ್ ವಯಲಿನ್ಸ್, ಮ್ಯಾಂಡೊಲಿನ್, ಹವಾಯಿಯನ್ ಗಿಟಾರ್, ಟ್ರಂಪೆಟ್, ಕೊಳಲುಗಳ ಸಮರ್ಥ ಬಳಕೆಯಿಂದ ಅದಕ್ಕೊಂದು ಉಠಾವ್ ದೊರೆತಿದೆ. ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿರುವ ಸದಯೇ ಬಾರೆಯಾ ಸಾಲು ಮತ್ತು ಆ ಸಾಲಿನ ಕೊನೆಯಲ್ಲಿ ಬರುವ ಕೊಳಲಿನ ಚೀತ್ಕಾರ ನೇರವಾಗಿ ಎದೆಯನ್ನಿರಿಯುವಂಥದ್ದು. ಈ ಸದಯೇ ಪದದ ಎತ್ತುಗಡೆಯು ಆಹ್ ಚಿತ್ರದ ಆಜಾರೇ ಅಬ್ ಮೇರಾ ದಿಲ್ ಪುಕಾರಾವನ್ನು ಹೋಲುತ್ತದೆ. ಢೋಲಕ್ ನಡೆಯೂ ಅದರಂತೆಯೇ ಇರುವುದು ಈ ಹೋಲಿಕೆಗೆ ಸಮರ್ಥನೆ ನೀಡುತ್ತದೆ.  Interludeನ ಒಂದು ತುಣುಕು ಮಾಯಾ ಬಜಾರ್ ಚಿತ್ರದ ಹಾಡನ್ನು ನೆನಪಿಸುತ್ತದೆ.




ಆನಂದದಾಯಕವು

     ಎಸ್.ಜಾನಕಿ ಧ್ವನಿಯಲ್ಲಿರುವ ಈ ಹಾಡಿನಲ್ಲಿ ಸಜ್ಜಾದ್ ಹುಸೇನ್ ಅವರ ಮ್ಯಾಂಡೊಲಿನಿನದೇ ಪ್ರಾಬಲ್ಯ.  ಗಿಟಾರಿನೊಂದಿಗೆ ಆರಂಭವಾಗುವ ಹಾಡು ಬೊಂಗೋ ರಿದಂ ಜೊತೆಗಿನ ಚಿಕ್ಕ ಆಲಾಪವೊಂದರ ನಂತರ ದೀರ್ಘ ಮ್ಯಾಂಡೊಲಿನ್ prelude ಹೊಂದಿದೆ.  ಚಿಕ್ಕ ಉರುಳಿಕೆಯೊಂದಿಗೆ ಎತ್ತುಗಡೆಯಾಗುವ ಢೋಲಕ್ ರಿದಂ ಜೊತೆ ಎಕಾರ್ಡಿಯನ್ನಿನ ಚಿಕ್ಕ link piece ಹೊಂದಿದ ಪಲ್ಲವಿ ಮುಗಿಯುತ್ತಲೇ ಹಿಂದಿಯ ಜಿ.ಎಸ್.ಕೊಹ್ಲಿ ಶೈಲಿಯ ಚಿಕ್ಕ full weight ತುಣುಕಿನೊಂದಿಗೆ ಮೊದಲ BGM ಆರಂಭವಾಗಿ ಕೊಳಲು, ಕ್ಲಾರಿನೆಟ್, ಗ್ರೂಪ್ ವಯಲಿನ್ಸ್ ಆದಮೇಲೆ ಮತ್ತೆ ಮ್ಯಾಂಡೊಲಿನ್ ಬರುತ್ತದೆ. ಚರಣ ಭಾಗದಲ್ಲಿ ಜಾನಕಿ ಅವರ ತಾರ ಸ್ಥಾಯಿ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗಿದ್ದು ಅಕಾರ್ಡಿಯನ್ ಮತ್ತು ಕೊಳಲು-ಕ್ಲಾರಿನೆಟ್ ಗಳ link pieceಗಳಿವೆ.  ಚರಣದ ಕೊನೆಯ ಭಾಗದಲ್ಲಿ ಅಮರ ಸಂದೇಶ ಎಂಬ ಸಾಲಿಗೆ ಢೋಲಕ್ ಬದಲಿಗೆ ಬೊಂಗೋ ರಿದಮ್ ಇದೆ.  ಎರಡನೆಯ BGM ಮ್ಯಾಂಡೊಲಿನ್ pieceನಿಂದ ಆರಂಭವಾಗಿ ಗ್ರೂಪ್ ವಯಲಿನ್ಸ್ ನೊಂದಿಗೆ ಮುಕ್ತಾಯವಾಗುತ್ತದೆ.  ಎರಡನೆಯ ಚರಣವೂ ಢೋಲಕ್ ಉರುಳಿಕೆಯೊಂದಿಗೆ ಎತ್ತುಗಡೆಯಾಗಿ ಮುಂದುವರೆಯುತ್ತದೆ.ಕೊನೆಯಲ್ಲಿ ಪಲ್ಲವಿ ಭಾಗ ಪೂರ್ತಿ ಪುನರಾವರ್ತನೆಯಾಗಿ ಬೊಂಗೋ ರಿದಂ ಜೊತೆಗಿನ ವಯಲಿನ್ಸ್, ಕ್ಲಾರಿನೆಟ್, ಕೊಳಲುಗಳ climaxನೊಂದಿಗೆ ಮುಗಿಯುತ್ತದೆ.  ಹಿಂದಿಯಲ್ಲಿ ಆರ್ ಪಾರ್ ಎಂಬ ಜೋಡಿ ಪದಗಳನ್ನು ಕಹೀಂ ಆರ್ ಕಹೀಂ ಪಾರ್ ಲಾಗಾ ತೀರೇ ನಜರ್ ಎಂದು ವಿಂಗಡಿಸಿ ಬಳಸಿದಂತೆ ಇಲ್ಲಿ ಹಾವ ಭಾವ ಜೋಡಿ ಪದಗಳನ್ನು ಏನೇನೋ ಹಾವ ಏನೇನೋ ಭಾವ ಎಂದು ವಿಂಗಡಿಸಲಾಗಿದೆ.   ಈ ಹಾಡಿನ ಮೊದಲ ಸಾಲಿನ ಧಾಟಿ ದಿಲ್ ಲೇಕೆ ಜಾತೆ ಹೊ ಕಹಾಂ ಎಂಬ ಹಾಡನ್ನು ಹೋಲುತ್ತದೆ.




ಕಣ್ಣುಮುಚ್ಚಾಲೆ ಆಡುವ

     ಜಿಕ್ಕಿ, ಮೋಹನ್ ಕುಮಾರಿ, ಸೋಹನ್ ಕುಮಾರಿ ಮತ್ತಿತರರು ಹಾಡಿರುವ ಇದು ಸರಳ ಜಾನಪದ ಶೈಲಿಯಲ್ಲಿದ್ದು ಸುಂದರವಾದ ಢೋಲಕ್ ಹಿನ್ನೆಲೆಯಲ್ಲಿ ಮುಂದುವರೆಯುತ್ತದೆ. ಢೋಲಕ್ ‘ಎಡ’ದ ಕೆಲಸ ಗಮನ ಸೆಳೆಯುತ್ತದೆ.  interludeಗೆ ಕ್ಲಾರಿನೆಟ್ - ಕೊಳಲು ಜೋಡಿಯನ್ನು ಮುಖ್ಯವಾಗಿ ಬಳಸಲಾಗಿದೆ. ಹಾಡಿನ ಪೂರ್ವಾರ್ಧದಲ್ಲಿ ಇದ್ದ ತಿಶ್ರ ಢೋಲಕ್ ನಡೆ ಆ ಮೇಲೆ ಚತುರಶ್ರಕ್ಕೆ ಬದಲಾಗುತ್ತದೆ.  ಹಿನ್ನೆಲೆಗೆ ಮ್ಯಾಂಡೊಲಿನ್ ಸೇರಿಕೊಳ್ಳುತ್ತದೆ. ಹೆಣ್ಣುಮಕ್ಕಳ ಆಟದ ಸಂದರ್ಭದ ಹಾಡಾದ್ದರಿಂದ ಅಲ್ಲಲ್ಲಿ ವಿಶೇಷ effects ಬಳಸಿಕೊಳ್ಳಲಾಗಿದೆ.




ಎನಿತು ಮನೋಹರವೀ ನಾಮ

     ಇದು ನರಸಿಂಹರಾಜು ಮೇಲೆ ಚಿತ್ರೀಕರಿಸಿದ ಕಾಮಿಡಿ ಹಾಡಾಗಿದ್ದು ಭಾರತೀಯ ಮತ್ತು ಪಾಶಾತ್ಯ ಶೈಲಿಯ ಮಿಶ್ರಣ ಹೊಂದಿದೆ.  ಮೋಹನ್ ಕುಮಾರಿ ಮತ್ತು ಪಿ. ಕಾಳಿಂಗ ರಾವ್ ಧ್ವನಿ ನೀಡಿದ್ದಾರೆ.  ಮಧ್ಯಭಾಗದಲ್ಲಿ ಬರುವ ಮ್ಯಾಂಡೊಲಿನ್ special effect ಆಕರ್ಷಕವಾಗಿದೆ.  ನಾಲ್ಕಕ್ಷರದ ತಾಳ ಐದಕ್ಷರಕ್ಕೆ ಬದಲಾಗುವ ತಂತ್ರ ಇಲ್ಲೂ ಬಳಸಲಾಗಿದೆ.  ತನ್ನ ಉಬ್ಬುಹಲ್ಲುಗಳನ್ನೇ ಬಂಡವಾಳವಾಗಿಸಿ ಗೆದ್ದ ನರಸಿಂಹರಾಜುವಿಗೆ ದಂತವಕ್ರ ಮತ್ತು ವಕ್ರದಂತ ಎಂಬೆರಡು ಬಿರುದುಗಳು ಹಾಡಿನ ಕೊನೆಯಲ್ಲಿ ಸಿಗುತ್ತವೆ!




ಬಾ ಚಿನ್ನ ಮೋಹನ ನೋಡೆನ್ನ



     ಪಕ್ಕಾ ಕಾಳಿಂಗ ರಾವ್ ಶೈಲಿಯ ಈ ಹಾಡನ್ನು ಅವರು ಮೋಹನ್ ಕುಮಾರಿ ಅವರೊಂದಿಗೆ ಹಾಡಿದ್ದಾರೆ.  ಮ್ಯಾಂಡೊಲಿನ್ ಜೊತೆಗಿನ ಅರೇಬಿಯನ್ ಶೈಲಿಯ ಆಲಾಪದೊಂದಿಗೆ ಆರಂಭವಾಗುವ ಈ ಹಾಡು ಢೋಲಕ್  ತಿಶ್ರ ನಡೆಯಲ್ಲಿ ಮುಂದುವರೆಯುತ್ತದೆ.  ಮೊದಲ ಚರಣ ಮುಗಿಯುತ್ತಲೇ ಚತುರಶ್ರ ನಡೆಯಲ್ಲಿ ವಯಲಿನ್ಸ್, ಕ್ಲಾರಿನೆಟ್, ಕೊಳಲು ಹಾಗೂ ಮ್ಯಾಂಡೊಲಿನ್ interlude ಮುಗಿದೊಡನೆ ಕಾಳಿಂಗರಾವ್ ಪ್ರವೇಶವಾಗುತ್ತದೆ.  ಸಾಲುಗಳ ಮಧ್ಯದ ತಾರ ಸ್ಥಾಯಿ ಕ್ಲಾರಿನೆಟ್  interludeಗೆ ಕೈ ಚಪ್ಪಾಳೆ ತಾಳದ ಜೊತೆ ಇದೆ.  ಮತ್ತೆ ತಿಶ್ರದಲ್ಲಿ ಪಲ್ಲವಿ ಆದೊಡನೆ ಚತುರಶ್ರದಲ್ಲಿ ಮ್ಯಾಂಡೊಲಿನ್ piece ಮುಗಿಯುತ್ತಲೇ ತಿಶ್ರ ನಡೆಯಲ್ಲಿದ್ದ  ಮೊದಲ ಚರಣದ ಸ್ವಲ್ಪ ಭಾಗ ಈಗ  ಚತುರಶ್ರದಲ್ಲಿ ಪುನರಾವರ್ತನೆಯಾಗುತ್ತದೆ. ಕೊನೆಗೆ ತಿಶ್ರನಡೆಯ ಪಲ್ಲವಿಗೆ ಮರಳುವ ಹಾಡು ಇಬ್ಬರ ಆಲಾಪದೊಂದಿಗೆ ಮುಕ್ತಾಯವಾಗುತ್ತದೆ. ಸಮದಲ್ಲಿ ಎತ್ತುಗಡೆಯಾಗುವ ಬಾ ಚಿನ್ನ ಮೋಹನ ನೋಡೆನ್ನ ಸಾಲನ್ನು ಒಂದೆರಡು ಕಡೆ  ಬಾ ಅಕ್ಷರವನ್ನು ಮೊದಲೇ ಎತ್ತಿಕೊಂಡು ಚಿನ್ನ ಮೋಹನ ನೋಡೆನ್ನ ಭಾಗವನ್ನು ಸಮಕ್ಕೆ ಹೊಂದಿಸಿ ಹಾಡುವ ಚಾಕಚಕ್ಯತೆ ಪ್ರದರ್ಶಿಸಲಾಗಿದೆ. ಈ ಹಾಡಿನ  ಗಾಯಕಿಯ voice throw ಅತ್ಯುನ್ನತ ಮಟ್ಟದ್ದು. ಅವರ ಪ್ರತಿಭೆಯನ್ನು ಇತರ ಸಂಗೀತ ನಿರ್ದೇಶಕರು ಏಕೆ ಬಳಸಿಕೊಳ್ಳಲಿಲ್ಲವೋ ತಿಳಿಯದು.




ಹೃದಯ ದೇವಿಯೆ ನಿನ್ನ

     ಪಿ.ಬಿ.ಎಸ್ - ಜಾನಕಿ all time hitsನಲ್ಲಿ ಒಂದಾದ ಇದು  ಈಗಲೂ ಕೆಲವೊಮ್ಮೆ ರೇಡಿಯೋದಲ್ಲಿ ಕೇಳಿ ಬರುವುದಿದೆ. ಉಳಿದ ಹಾಡುಗಳಂತೆ ಇದರಲ್ಲಿ ಆರ್ಕೆಷ್ಟ್ರಾದ ಅಬ್ಬರವಿಲ್ಲ.  ಢೋಲಕ್ ತಬ್ಲಾದಂತಹ ತಾಳ ವಾದ್ಯಗಳೂ ಇಲ್ಲ. ಸುರ್ ಬಹಾರ್ ರೀತಿಯ ತಂತಿ ವಾದ್ಯ, vibro phone, ಮರದ ಎರಡು ತುಂಡುಗಳ castanetsಗಳ ಅತಿ ಸೌಮ್ಯ ಹಿನ್ನೆಲೆ. Interludeಗೆ ಮಾತ್ರ ಇತರ ವಾದ್ಯಗಳ ಸಮೂಹ ಬಳಸಲಾಗಿದೆ.  ಪಿ.ಬಿ.ಎಸ್ ಮತ್ತು ಜಾನಕಿ ಅವರ ಧ್ವನಿ ಹಾಗೂ ಪಹಾಡಿ ರಾಗಾಧಾರಿತ  ಧಾಟಿ ಇವೇ ಹಾಡಿನ ಜೀವಾಳ. ಮರು ವರ್ಷ ಇದೇ ಶೈಲಿಯ ಚೌದವಿಂ ಕಾ ಚಾಂದ್ ಹೋ ಬಂತು!  ಕೊನೆಯ ಚರಣದಲ್ಲಿ ಒಬ್ಬರು ಒಂದು ಧಾಟಿಯಲ್ಲಿ ಹಾಡುವಾಗ ಇನ್ನೊಬ್ಬರು ಅದಕ್ಕೆ ಪೂರಕವಾದ ಬೇರೊಂದು ಧಾಟಿಯಲ್ಲಿ ಹಾಡುವ counter melody ತಂತ್ರವನ್ನು ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ಈ ಹಾಡಿನಲ್ಲಿ ಉಪಯೋಗಿಸಲಾಗಿದೆ.  ಹಾಡುಗಳ Interludeಗಳಲ್ಲಿ ಹಾಗೂ ಹಾಡಿನ ಜೊತೆ ಜೊತೆಗೆ ಹಿನ್ನೆಲೆಯಲ್ಲಿ ಚೇಲೊದಂತಹ ವಾದ್ಯಗಳನ್ನು ನುಡಿಸುವಾಗ ಹೆಚ್ಚಾಗಿ  ಈ ತಂತ್ರ ಬಳಸಲಾಗುತ್ತದೆ. 1959ರಲ್ಲಿ ನಿಂತು ನಾವು ಯೋಚಿಸುವುದಾದರೆ ಕನ್ನಡದ ಮಟ್ಟಿಗೆ ಈ ಹಾಡು ತುಂಬಾ ahead of time.




ಬಾರೆನ್ ಮನೋಹರ
ಪಾಶ್ಚಾತ್ಯ ಶೈಲಿಯ ಹಾಡು. ಪ್ರಸಿದ್ಧರನ್ನು ಹೊರತು ಪಡಿಸಿ ಗಾಯಕಿಯರ ಧ್ವನಿ ಕೇಳಿ ಗುರುತಿಸುವುದು ಬಲು ಕಷ್ಟ.  ಪದ್ಯಾವಳಿ ಅಥವಾ ಗ್ರಾಮಫೋನ್ ತಟ್ಟೆಯ ಮೊರೆಹೋಗಬೇಕಾಗುತ್ತದೆ. ಹೀಗಾಗಿ ಇದನ್ನು ಹಾಡಿದವರು ಯಾರೆಂದು ಖಚಿತವಾಗಿ ಗೊತ್ತಿಲ್ಲ. Prelude ಮತ್ತು interludeಗಳಿಗೆ ಟ್ರಂಪೆಟ್, ಮ್ಯಾಡೊಲಿನ್, ಬೊಂಗೊ ಇತ್ಯಾದಿಗಳನ್ನು  ಬಳಸಲಾಗಿದೆ.  ಹಾಡಿನ ಭಾಗದಲ್ಲಿ ಢೋಲಕ್ ಇದೆ. ಹೆಡ್ ಫೋನಿನಲ್ಲಿ ಆಲಿಸಿದರೆ ಅದರ ಎಡದ ಗುಂಕಿ ನುಡಿತವನ್ನು ಆಸ್ವಾದಿಸಬಹುದು.




ಅಬ್ಬಾ ಆ ಹುಡುಗಿ
ಯ ಹಾಡುಗಳನ್ನು ಕೇಳಿದ ಮೇಲೆ ಅಬ್ಬಾ! ಆ ಹಾಡುಗಳು!! ಎಂದು ನಿಮಗೂ ಅನ್ನಿಸಿತೇ?

Saturday 3 December 2016

ಒಂದು ಗ್ರೂಪ್ ಫೋಟೊದ ಸುತ್ತ



ಯಾವುದಾದರೂ ಸಮಾರಂಭದಲ್ಲಿ ಕುಟುಂಬದ ಎಲ್ಲರನ್ನೂ ಒಂದು ಗ್ರೂಪ್ ಫೋಟೊಗಾಗಿ ಒಟ್ಟುಗೂಡಿಸುವುದು ಎಷ್ಟು ಕಷ್ಟ ಎಂದು ಎಲ್ಲರಿಗೂ ಗೊತ್ತಿದೆ.  ಹಾಗಿರುವಾಗ ಇಲ್ಲದಿರುವವರೂ ಇರುವ ಒಂದು ಗ್ರೂಪ್ ಫೋಟೊ ಬೇಕೆಂದಾದರೆ?  ಇಲ್ಲಿ ಆದದ್ದು ಹಾಗೆಯೇ. ನಾವು ಐದು ಜನ ಅಣ್ಣ ತಮ್ಮಂದಿರು ಮತ್ತು ಐದು ಜನ ಅಕ್ಕ ತಂಗಿಯರು ತಂದೆ ತಾಯಿಗಳೊಟ್ಟಿಗಿರುವ ಫೋಟೊ ತೆಗೆಸಿಟ್ಟುಕೊಳ್ಳುವ  ಸಂದರ್ಭ ಮತ್ತು ಸೌಲಭ್ಯ ನಮಗೆ ಒದಗಿರಲಿಲ್ಲ.  ಈಗ ತಂದೆ-ತಾಯಿ, ಮೂವರು ಹಿರಿ ಅಣ್ಣಂದಿರು ಮತ್ತು ಇಬ್ಬರು ಹಿರಿ ಅಕ್ಕಂದಿರು ನಮ್ಮೊಂದಿಗಿಲ್ಲ. ಹೀಗಾಗಿ ಈ ಒಂದು ಆಸೆ ಕನಸಿನ ಗಂಟಾಗಿಯೇ ಉಳಿದಿತ್ತು.  ಆದರೆ ಮನಸ್ಸಿದ್ದರೆ ಮಾರ್ಗವಿದೆಯಲ್ಲವೇ.  ಪೂನಾದಲ್ಲಿರುವ ನಮ್ಮಣ್ಣ ಮತ್ತು ನಾನು  ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಸಂಯುಕ್ತ ಪ್ರಯತ್ನದಿಂದ 7 ಬೇರೆ ಬೇರೆ ಫೋಟೊಗಳನ್ನು ಸಂಯೋಜಿಸಿ ಕೊನೆಗೂ ನಮ್ಮದೊಂದು ಗ್ರೂಪ್ ಫೋಟೊ ತಯಾರಿಸಿಯೇ ಬಿಟ್ಟೆವು!  ಇದನ್ನು ನೋಡಿದಾಗ ಕೂಡು ಕುಟುಂಬದ ಭಾಗವಾಗಿ ಕಳೆದ ಆ ದಿನಗಳ ನೆನಪುಗಳು ಸಿನಿಮಾ ರೀಲಿನಂತೆ ಬಿಚ್ಚಿಕೊಳ್ಳತೊಡಗುತ್ತವೆ.  ಫೋಟೊದಲ್ಲಿರುವ ಒಬ್ಬೊಬ್ಬರ ಪರಿಚಯದ ಮೂಲಕ ರೀಲಿನ ಕೆಲವು ದೃಶ್ಯಗಳನ್ನು ನೋಡೋಣ.

ಕುಳಿತವರಲ್ಲಿ ಎಡದಿಂದ ಮೊದಲನೆಯವರು ನಮ್ಮ ದೊಡ್ಡ ಅಕ್ಕ ಕಮಲಾ.  ನಾನು ಹುಟ್ಟುವ ಮೊದಲೇ ಅವರು ವಿವಾಹವಾಗಿ ಹೋಗಿದ್ದರಿಂದ ನನಗೆ ಅವರಿಗಿಂತ ನನ್ನ ಸಮಕಾಲೀನರಾದ ಅವರ ಮಕ್ಕಳ ಒಡನಾಟವೇ ಜಾಸ್ತಿ. ಆದರೂ ನನ್ನ ಮೇಲೆ ಅವರಿಗೆ ವಿಶೇಷ ಅಭಿಮಾನ ಕೊನೆ ವರೆಗೂ ಇತ್ತು.   ನಿಂತವರಲ್ಲಿ ಬಲಗಡೆಯಿಂದ ಮೊದಲನೆಯವರು ನಮ್ಮ ದೊಡ್ಡ ಅಣ್ಣ ನಾರಾಯಣ.  ಅವರೂ ನಾನು ಜನಿಸುವ ಮೊದಲೇ ಕಾರ್ಯ ನಿಮಿತ್ತ ಬೇರೆ ಬಿಡಾರ ಹೂಡಿದ್ದರಿಂದ ಮುಂದೆ ಕಾಲೇಜು ದಿನಗಳಲ್ಲಿ ಅವರೊಂದಿಗಿದ್ದರೂ ಬಾಲ್ಯದಲ್ಲಿ ಆಗೊಮ್ಮೆ ಈಗೊಮ್ಮೆ ಮಾತ್ರ ಅವರ ಸಂಪರ್ಕ ಇರುತ್ತಿತ್ತು. ತಮ್ಮ ತಾರುಣ್ಯದಲ್ಲಿ ವಜ್ರಾದಪಿ ಕಠೋರಾಣಿ ಎಂದು  ನಮಗೆ ಅನ್ನಿಸಿದರೂ ನಾವು ಬೆಳೆದಂತೆ ಅವರೂ ಮೃದೂನಿ ಕುಸುಮಾದಪಿ ಆಗಿದ್ದರು. ಇನ್ನುಳಿದವರೆಲ್ಲರೂ ನನ್ನ ಕಾಲದಲ್ಲಿ ಬಹಳ ವರ್ಷ ಒಂದೇ ಸೂರಿನಡಿ ಇದ್ದವರು.  ಅಂಥಿಂಥ ಸೂರಲ್ಲ ಅದು.  14ಕ್ಕೂ ಹೆಚ್ಚು ನಿರ್ದಿಷ್ಟ ಹೆಸರು ಹೊಂದಿದ್ದ ಹಜಾರ, ಕೋಣೆ, ಜಗಲಿಗಳನ್ನು ಒಳಗೊಂಡ ಮೂರಂಕಣದ ಬೃಹತ್ ಮಹಡಿ ಸಂಕೀರ್ಣ. ಮಣ್ಣಿನ ದಪ್ಪ ಗೋಡೆಗಳು, ಅಡಿಕೆ ಸೋಗೆ ಹೊಚ್ಚಿದ ಬೆಚ್ಚಗಿನ ಮಾಡು. ಹುಡುಗರ ಪೈಕಿ ಎಲ್ಲರಿಗಿಂತ ಚಿಕ್ಕವನಾದ ನನಗೆ ಈ ಸೂರಿನಡಿಯಲ್ಲಿ ತಂದೆ ತಾಯಿ ಮಾತ್ರವಲ್ಲ,  ಅಣ್ಣ ಅತ್ತಿಗೆಯಂದಿರು ಹಾಗೂ ಅಕ್ಕಂದಿರ ಛತ್ರ ಛಾಯೆಯಲ್ಲಿ ಬಾಲ್ಯವನ್ನು ಕಳೆಯುವ ಅವಕಾಶ  ಪ್ರಾಪ್ತವಾಗಿತ್ತು. 

ಕುಳಿತವರಲ್ಲಿ ಎಡದಿಂದ ಎರಡನೆಯವರಾದ ನಮ್ಮ ತಂದೆ ಬಾಲಕೃಷ್ಣ ನಾರಾಯಣ ಕಾಕತ್ಕರ್  ಈ ಮನೆಯ ಜನರಲ್ ಮ್ಯಾನೇಜರ್ .  ಅವರಿಗೆ ಕೃಷಿ, ಹೈನುಗಾರಿಕೆ, ಪೌರೋಹಿತ್ಯಗಳಲ್ಲಿ ಸಮಾನ ಪರಿಣಿತಿ ಇತ್ತು.  ಹೈನುಗಾರಿಕೆ ಅವರಿಗೆ ಚೆನ್ನಾಗಿ ಕೂಡಿಯೂ ಬರುತ್ತಿತ್ತು. ಅವರ ಕಾಲದಲ್ಲಿ ಹಟ್ಟಿ ತುಂಬ ಎಮ್ಮೆ, ದನ, ಕರುಗಳು ಇರುತ್ತಿದ್ದು  ಕೆಲಸದಾಳುಗಳು ಬಾಯಾರಿಕೆಗಾಗಿ ನೀರು ಕೇಳಿದರೆ ಮಜ್ಜಿಗೆ ಕೊಡುವಷ್ಟು ಹೈನುತ್ಪನ್ನಗಳು ಯಥೇಚ್ಛವಾಗಿರುತ್ತಿದ್ದವು. ಅಗತ್ಯವಿದ್ದರೆ ಘಟ್ಟದಿಂದ ಇಳಿಯುತ್ತಿದ್ದ ಪೈರಿನಿಂದ ಹೊಸ ಎಮ್ಮೆ ಖರೀದಿಸುತ್ತಿದ್ದರು. ಶ್ರಮದ ಕೆಲಸದಲ್ಲಿ ಎತ್ತಿದ ಕೈ. ಅಕ್ಕಿ ಮುಡಿ, ಅಡಿಕೆ ಗೋಣಿಗಳನ್ನು ಹೊತ್ತುಕೊಂಡು ಸರಸರನೆ ಅಟ್ಟವೇರುತ್ತಿದ್ದರು. ಅಚ್ಚಿನಲ್ಲಿ ಎರಕ ಹೊಯ್ದಂತೆ ಪ್ರತಿ ವರ್ಷ ಒಂದೇ ರೀತಿ ಕಾಣಿಸುವ ಸುಂದರವಾದ ಚೌತಿ ಗಣಪನನ್ನು ತಯಾರಿಸುತ್ತಿದ್ದರು. ಅವರು ಹಂತ ಹಂತವಾಗಿ ತಯಾರಿಸುತ್ತಿದ್ದ ಗಣಪನಿಗೆ ಸೊಂಡಿಲು ಇಡುವ ದಿನ ನಮಗೆಲ್ಲ ವಿಶೇಷ ಸಂಭ್ರಮದ್ದಾಗಿರುತ್ತಿತ್ತು. ಬಣ್ಣ ಹಚ್ಚುವ ದಿನವಂತೂ ಹೆಚ್ಚಿನ ಸಂಭ್ರಮ. ಮೊದಮೊದಲು  ಗಣಪನ ಬೆನ್ನಿಗೆ ಮಾತ್ರ ಮತ್ತು ಸ್ವಲ್ಪ ದೊಡ್ಡವನಾದ ಮೇಲೆ ಇತರ ಭಾಗಗಳಿಗೆ  ಬಣ್ಣ ಹಚ್ಚಲು ನನಗೂ ಅನುಮತಿ ಕೊಡುತ್ತಿದ್ದರು. ಗಣಪ ತಯಾರಿಸಿ ಉಳಿದ ಮಣ್ಣಿನಲ್ಲಿ ಚಿಕ್ಕ ಚಿಕ್ಕ ಬೊಂಬೆಗಳನ್ನು ಮಾಡಿ ಬಣ್ಣ ಹಚ್ಚುವ ಸ್ವಾತಂತ್ರ್ಯವೂ ನಮಗಿತ್ತು.  ಆದರೆ ಮರು ವರ್ಷ ಗಣಪನಿಗಾಗಿ ಕುಂಬಾರ ತಂದುಕೊಡುತ್ತಿದ್ದ  ಮಣ್ಣು ಕಡಿಮೆ ಬಿದ್ದರೆ ಆ ಬೊಂಬೆಗಳು ಹುಡಿಯಾಗುವುದೂ ಇತ್ತು!  ರಾತ್ರಿ ಪಕ್ಕದಲ್ಲಿ  ಮಲಗಿಸಿಕೊಂಡು ಮಕ್ಕಳಿಗೆ ಕಥೆಗಳನ್ನು ಹೇಳುತ್ತಿದ್ದರೂ   ಸ್ವಭಾವದಲ್ಲಿ ಅವರು ಸ್ವಲ್ಪ ಖಡಕ್. ಸಣ್ಣ ತಪ್ಪುಗಳಿಗೆ ‘ಹೂಂ’ ಎಂದು ಗದರಿಸಿ ಸುಮ್ಮನಾಗುತ್ತಿದ್ದವರು ಕೆಲವು ಸಲ ಮಕ್ಕಳು, ಸಾಕು ಪ್ರಾಣಿಗಳನ್ನು ಬೆತ್ತದಿಂದ ಸದೆಯುತ್ತಿದ್ದರು. ಮೊದಲ ದಿನ ಶಾಲೆಗೆ ಹೋಗುವುದಿಲ್ಲ ಎಂದು ಹಟ ಹಿಡಿದಿದ್ದ ನಾನೂ ಅವರ ಬೆತ್ತದ ರುಚಿ ನೋಡಿದ್ದುಂಟು!

ಕುಳಿತವರಲ್ಲಿ ಎಡದಿಂದ ಮೂರನೆಯವರು ನಮ್ಮ ತಾಯಿ ಸರಸ್ವತಿ. ಅತ್ತಿಗೆ, ಅಕ್ಕಂದಿರ ಸಹಕಾರದೊಂದಿಗೆ ಮನೆಯೊಳಹೊರಗಿನ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದ ಚೀಫ್ ಹೋಮ್ ಮಿನಿಸ್ಟರ್.  ಗಂಡುಮಕ್ಕಳು, ಹೆಣ್ಣುಮಕ್ಕಳು ಅಥವಾ ಮೊಮ್ಮಕ್ಕಳು  ಎಂದು ಎಂದೂ  ಭೇದ ಮಾಡಿದವರಲ್ಲ. ವ್ರತ ನೇಮಗಳನ್ನು ಕಟ್ಟುನಿಟ್ಟಾಗಿ ಆಚರಿಸುತ್ತಿದ್ದರು.  ಇಂತಿಂತಹ ದಿನ ಇಂತಿಂತಹ ಹಬ್ಬವೋ ನೇಮವೋ ಇದೆ ಎಂದು ಮೊದಲೇ ಗೊತ್ತುಪಡಿಸಿಕೊಂಡು ಅದಕ್ಕೆ ಬೇಕಾದ ಬಾಳೆಗೊನೆ ಇತ್ಯಾದಿಗಳನ್ನು ಗಂಡು ಮಕ್ಕಳಿಗೆ ಹೇಳಿ  ಸಿದ್ಧಮಾಡಿ ಇಟ್ಟುಕೊಳ್ಳುತ್ತಿದ್ದರು. ಅವರು ಆಚರಿಸುವ ಪ್ರತೀ ನೇಮದ ದಿನ ದೇವರೊಂದಿಗೆ ನಮಗೂ ಏನಾದರೂ ವಿಶೇಷ ನೈವೇದ್ಯ ಅರ್ಪಣೆಯಾಗುತ್ತಿತ್ತು. ದಿನಾ ಬೆಳಗ್ಗೆ ಗಂಜಿ ಊಟದ ಪರಿಪಾಠವಿದ್ದರೂ ವಾರದಲ್ಲಿ ಒಂದೆರಡು ದಿನ ವೈವಿಧ್ಯಮಯ ದೋಸೆ ಇತ್ಯಾದಿಗಳು ಇರುತ್ತಿದ್ದವು. ಮರದ ಒತ್ತುಮಣೆಯಲ್ಲಿ ಶ್ಯಾವಿಗೆ ತಯಾರಿ ಹಮ್ಮಿಕೊಂಡ ದಿನ ನಮಗೆಲ್ಲರಿಗೂ ಉದ್ದದ ಸಲಾಕೆಯನ್ನು ಒತ್ತುವ ಕೆಲಸ ಇರುತ್ತಿತ್ತು.   ಮರಾಠಿ ಸಾಹಿತ್ಯದಲ್ಲಿ ಅವರಿಗೆ ಹೆಚ್ಚು ಆಸಕ್ತಿ.  ಅಪರಾಹ್ನ ಬಿಡುವಿನ ವೇಳೆಯಲ್ಲಿ ಯಾವುದಾದರೂ ಆಧ್ಯಾತ್ಮಿಕ ಪುಸ್ತಕ ಓದುತ್ತಲೇ ಇರುತ್ತಿದ್ದರು. ಮನೆಗೆ ರೇಡಿಯೋ ಬಂದ ಮೇಲಂತೂ ಗುರುವಾರ ಮತ್ತು ಭಾನುವಾರ ಆಕಾಶವಾಣಿ ಮುಂಬಯಿಯಿಂದ ಪ್ರಸಾರವಾಗುತ್ತಿದ್ದ ಮರಾಠಿ ಹರಿಕಥೆಗಳನ್ನು ತಪ್ಪದೆ ಆಲಿಸುತ್ತಿದ್ದರು.  ಆ ದಿನಗಳಂದು ನನ್ನ ಸಿಲೋನ್, ವಿವಿಧ ಭಾರತಿಗಳಿಗೂ ಬಿಡುವು! ಸಮಯ ಸಿಕ್ಕಾಗ ತೋಟಕ್ಕೆ ಹೋಗಿ ಸೋಗೆಗಳನ್ನು ಒಟ್ಟುಮಾಡಿ ಹಾಳೆಗಳನ್ನು ಕಡಿದು ಸಿಪ್ಪೆ ಸುಲಿದು ಒಣಗಿಸಿ ಅಚ್ಚುಕಟ್ಟಾಗಿ ಕಟ್ಟಿ ಇಡುತ್ತಿದ್ದರು.  ಆ ಕಾಲದಲ್ಲಿ ಬೆಳಗಿನ ಗಂಜಿ ಊಟಕ್ಕೆ ಹಾಳೆಗಳನ್ನು ಉಪಯೋಗಿಸುವ ಪರಿಪಾಠವಿತ್ತು. ಕೆಲ ವರ್ಷಗಳ ನಂತರ ಧರ್ಮಸ್ಥಳದಿಂದಲೂ ಹಾಳೆಗಳಿಗೆ ಬೇಡಿಕೆ ಬರತೊಡಗಿದ ಮೇಲೆ ಈ ಮೂಲಕ ಕೊಂಚ ಆರ್ಥಿಕ ಸಂಪನ್ಮೂಲವೂ ಹರಿದು ಬರತೊಡಗಿತ್ತು.  ಶಾಲೆಗೆ ರಜೆ ಸಿಕ್ಕಿದ ಮೇಲೆ ವರ್ಷಕ್ಕೊಮ್ಮೆ ನನ್ನನ್ನೂ ಕರೆದುಕೊಂಡು ತವರು ಮನೆಗೆ ಹೋಗುವ ಅವರ ಪರಿಪಾಠ ನಾನು ಹೈಸ್ಕೂಲು ಸೇರುವ ವರೆಗೂ ಮುಂದುವರೆದಿತ್ತು. ಮುಂದೆ ಕಾಲೇಜು ಮುಗಿಸಿ  ಉದ್ಯೋಗಕ್ಕೆ ಆಯ್ಕೆಯಾಗಿ ಮನೆ ಬಿಟ್ಟು ಹೊರಟು ನಿಂತ ನನಗೆ ನಾನು ಯಾವಾಗಲೂ ಊಟ ಮಾಡುತ್ತಿದ್ದ ಸ್ಟೀಲ್ ತಟ್ಟೆಯನ್ನು ಜೊತೆಗೊಯ್ಯುವಂತೆ ಹೇಳಿದ್ದರು. ಧರ್ಮಸ್ಥಳದಿಂದ 50ರ ದಶಕದಲ್ಲಿ ಖರೀದಿಸಿದ್ದ, ಈಗಿನ ಕಾಲದ ನಾಲ್ಕು ತಟ್ಟೆಗಳಷ್ಟು ದಪ್ಪಗಿರುವ ಅದರಲ್ಲೇ ನಾನೂ ಈಗಲೂ ಉಣ್ಣುವುದು.  ನಾನು ಅವರಿಗಾಗಿ ಒಳಗೆ ಬನ್ನಿ ಎಂಬ ಬೋರ್ಡಿನ ಕಾಲ್ ಬೆಲ್ ಮಾಡಿದ್ದು,  ಪಾತ್ರೆಯಲ್ಲಿ ಇಸ್ತ್ರಿ ಹಾಕಲು ಹೋಗಿ ಅವರ ಹೊಸ ಸಿಲ್ಕ್ ರವಕೆಯನ್ನು ಸುಟ್ಟದ್ದು ಇತ್ಯಾದಿ ಇನ್ನೊಂದೆಡೆ ಈಗಾಗಲೇ ಹೇಳಿದ್ದೇನೆ.  ಅವರಿಗೊಮ್ಮೆ ವಿಮಾನ ಯಾತ್ರೆ ಮಾಡಿಸುವ ಅವಕಾಶ ನಾನು ಉದ್ಯೋಗ ಮಾಡುತ್ತಿದ್ದ ದೂರವಾಣಿ ಇಲಾಖೆಯ ಎಲ್.ಟಿ.ಸಿ ಸೌಲಭ್ಯದ ಮೂಲಕ ನನಗೆ ದೊರಕಿತ್ತು.

ನಿಂತವರಲ್ಲಿ ಎಡದಿಂದ ಮೂರನೆಯವರು ನಮ್ಮ ಎರಡನೆಯ ಅಣ್ಣ ಹರಿಹರ  - ಮನೆಯ ಎಕ್ಸಿಕ್ಯೂಟಿವ್ ಆಫೀಸರ್.  ಏಕೆಂದರೆ ತಂದೆಯವರ ನಿರ್ದೇಶನದಂತೆ ಮನೆಯ ಹೊರಗಿನ ವ್ಯವಹಾರಗಳನ್ನೆಲ್ಲ ಅವರೇ ನೋಡಿಕೊಳ್ಳುತ್ತಿದ್ದುದು. ಪ್ರಗತಿಪರ ಕೃಷಿಯಲ್ಲೂ ಅವರಿಗೆ ಬಹಳ ಆಸಕ್ತಿ.  ವೈವಿಧ್ಯಮಯ ಹಣ್ಣು ಹೂವಿನ ಗಿಡಗಳನ್ನು ಬೆಳೆಸಿದ್ದರು. ಗಿಡಗಳನ್ನು ಕಸಿಮಾಡುವುದರಲ್ಲೂ ಪರಿಣತಿ ಹೊಂದಿದ್ದು ಇದಕ್ಕಾಗಿ ಧರ್ಮಸ್ಥಳದಲ್ಲಿ ವಿಶೇಷ ತರಬೇತಿಯನ್ನೂ ಪಡೆದಿದ್ದರು. ಜೇನುಸಾಕಣೆಯಲ್ಲೂ ತೊಡಗಿಸಿಕೊಂಡಿದ್ದರು.  ಲೆಮನ್ ಗ್ರಾಸ್ ಬೆಳೆಸಿ ಎಣ್ಣೆ  ತಯಾರಿಸಲು ಹೋಗಿ ಕೈ ಸುಟ್ಟುಕೊಂಡದ್ದೂ ಇದೆ. ಮಕ್ಕಳೆಂದರೆ ಅವರಿಗೆ ಅಚ್ಚು ಮೆಚ್ಚು. ಚಿಕ್ಕ ಮಕ್ಕಳನ್ನು ತೊಟ್ಟಿಲಲ್ಲಿ ಕೂರಿಸಿ ತೂಗುತ್ತಾ ‘ಬಾಯಿಪಾಠ’ ಹೇಳಿಕೊಡುತ್ತಿದ್ದರು. ಯಾವತ್ತು ಪೇಟೆಗೆ ಹೋದರೂ ಬರುವಾಗ ಮಕ್ಕಳಿಗೆ ಪೆಪ್ಪರಮಿಂಟು ಕಟ್ಟಿಸಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಮನೆ ಮಂದಿಗೆ ಕಾಯಿಲೆ ಕಸಾಲೆ ಬಂದಾಗ ಔಷಧೋಪಚಾರ ಇವರದೇ ಜವಾಬ್ದಾರಿಯಾಗಿತ್ತು. ಪ್ರಥಮ ಸುತ್ತಿನ ಚಿಕಿತ್ಸೆಗೆ ಬೇಕಾದ ಔಷಧಿಗಳೆಲ್ಲವನ್ನೂ ಸಂಗ್ರಹಿಸಿ ಇಟ್ಟಿರುತ್ತಿದ್ದರು. ಅವರಿಗೆ ಗಿಳಿ ಸಾಕುವ ಹವ್ಯಾಸವಿತ್ತು. ‘ನೆಂಟ್ರು ಬಂದ್ರು ಚಾಪೆ ಹಾಕಿ ಬೆಲ್ಲ ಕೊಡಿ ನೀರು ಕೊಡಿ’ ಅನ್ನುತ್ತಿದ್ದ ಅದು ಮನೆಗೆ ಬಂದವರಿಗೆಲ್ಲ ಆಕರ್ಷಣೆಯ ಕೇಂದ್ರವಾಗಿತ್ತು. ಪುಸ್ತಕ ಸಂಗ್ರಹದಲ್ಲೂ ಅಪಾರ ಆಸಕ್ತಿ ಇತ್ತವರಿಗೆ.  ಪ್ರತೀ ವರ್ಷ ಧರ್ಮಸ್ಥಳ ದೀಪೋತ್ಸವಕ್ಕೆ ಹೋದಾಗ ಒಂದಾದರೂ ಪುಸ್ತಕ ಕೊಳ್ಳುತ್ತಿದ್ದರು. ತಮ್ಮ ಶಾಲಾ ಪಠ್ಯ ಪುಸ್ತಕಗಳನ್ನೂ ಕೊನೆವರೆಗೂ ಜೋಪಾನವಾಗಿ ಕಾಯ್ದಿಟ್ಟುಕೊಂಡಿದ್ದರು. ಪುಸ್ತಕಗಳಿಗೆ ಭದ್ರವಾದ ಬೈಂಡ್ ಹಾಕುವುದನ್ನು ನಮಗೆಲ್ಲ ಕಲಿಸಿ ಕೊಟ್ಟದ್ದು ಅವರೇ. ಊರ ಪರವೂರ ಸಮಾಚಾರಗಳನ್ನು ಒಂದಷ್ಟು ಮಸಾಲೆ ಸೇರಿಸಿ ವರ್ಣರಂಜಿತವಾಗಿ ವಿವರಿಸುವುದರಲ್ಲಿ ಅವರಿಗೆ ಅವರೇ ಸಾಟಿ. ಅವರು ಹೇಳಿದ್ದಕ್ಕೆ 10ರಿಂದ ಭಾಗಿಸಿದಾಗ ಸಿಗುವುದು ವಾಸ್ತವ ಸಂಗತಿಯಾಗಿರುತ್ತದೆ ಎಂದು ನಾವು ಗುಟ್ಟಿನಲ್ಲಿ ಮಾತಾಡಿಕೊಳ್ಳುವುದಿತ್ತು! ಕೆಲವೊಮ್ಮೆ ದಿಟ್ಟ ನಿರ್ಧಾರಗಳನ್ನೂ ಕೈಗೊಳ್ಳುತ್ತಿದ್ದರು. ಆರ್ಥಿಕ ಸ್ಥಿತಿ ಅಷ್ಟೊಂದು ಉತ್ತಮವಾಗಿರದ ಆ ಕಾಲದಲ್ಲೇ  ಮನೆಗೊಂದು ರೇಡಿಯೋ ತಂದದ್ದು  ಇವುಗಳಲ್ಲೊಂದು.  ಅವರ ಈ ನಿರ್ಧಾರವಲ್ಲದಿದ್ದರೆ ನನಗೆ  ರೇಡಿಯೋದೊಂದಿಗೆ  ನಂಟು ಬೆಳೆಯುತ್ತಲೇ ಇರಲಿಲ್ಲ. ಊರಿಗೆ ವಿದ್ಯುತ್ ಸೌಲಭ್ಯ ಬಂದಾಗ ಸಂಪರ್ಕ ಪಡೆದುಕೊಂಡ ಮೊದಲ ಕೆಲವು ಮನೆಗಳಲ್ಲಿ ನಮ್ಮದೂ ಒಂದಾಗಲೂ ಅವರ ನಿರ್ಧಾರವೇ ಕಾರಣ. ತಂದೆಯವರು ತೀರಿದ ಮೇಲೆ ತಮ್ಮಂದಿರು ತಂಗಿಯರೆಂದು ತಾತ್ಸಾರ ಮಾಡದೆ  ನಮಗೆಲ್ಲ ಶಿಕ್ಷಣ  ಕೊಡಿಸಿ ಮದುವೆ ಮಾಡಿಸಿ ಜವಾಬ್ದಾರಿ ನಿಭಾಯಿಸಿದರು.

ನಿಂತವರಲ್ಲಿ ಬಲದಿಂದ ಎರಡನೆಯವರಾದ ನಮ್ಮ ಮೂರನೇ ಅಣ್ಣ ಗಣಪತಿ - ಮನೆಯ ಎಕ್ಸಿಕೂಟಿವ್ ಇಂಜಿನಿಯರ್. ಸಾಂಪ್ರದಾಯಿಕ ಶಿಕ್ಷಣದಲ್ಲಿ ಅಷ್ಟೊಂದು ಆಸಕ್ತಿ ತೋರದಿದ್ದರೂ ಜನ್ಮಜಾತ ಪ್ರತಿಭೆಯ ಅದ್ಭುತ ತಾಂತ್ರಿಕ ತಜ್ಞ. ರೇಡಿಯೋದ ಹಳೆ ಬ್ಯಾಟರಿ, ಗೆರಟೆ ಮತ್ತು ಟೂತ್ ಪೇಸ್ಟಿನ ಮುಚ್ಚಳದ ಸ್ವಿಚ್ ಇತ್ಯಾದಿ ಬಳಸಿ ವಿದ್ಯುತ್ ಬರುವ ಮೊದಲೇ ಚೌತಿ, ನವರಾತ್ರಿ ಸಂದರ್ಭಗಳಲ್ಲಿ ದೇವರ ಮಂಟಪಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿದ್ದವರು.  ಬಡಗಿ ಕೆಲಸವೂ ಬರುತ್ತಿತ್ತು. ಮುಟ್ಟಾಳೆ ಧರಿಸಿ ತೋಟದಲ್ಲಿ ಆಳುಗಳೊಂದಿಗೆ ದುಡಿಯುತ್ತಿದ್ದರು. ಏನನ್ನಾದರೂ ಮಾಡಿದರೆ ಅತ್ಯುತ್ತಮವಾಗಿ, ಇತರರಿಗಿಂತ ಚೆನ್ನಾಗಿ ಮಾಡಬೇಕೆಂಬ ಹಂಬಲವುಳ್ಳವರು.  ಮನೆಗೆ ರೇಡಿಯೋ ಬಂದಾಗ ಅತ್ಯಂತ ಎತ್ತರದ ಬಿದಿರಿಗೆ ಏರಿಯಲ್ ಜೋಡಿಸಿ ಎತ್ತರವಾದ ದಿಬ್ಬದ ಮೇಲೆ ಅದನ್ನು ಸ್ಥಾಪಿಸಿ ಹಗಲು ಹೊತ್ತು ಕೂಡ ದೂರದ ಧಾರವಾಡದಂತಹ ಮೀಡಿಯಂ ವೇವ್ ನಿಲಯಗಳು ಸುಸ್ಪಷ್ಟವಾಗಿ ಕೇಳಿಸುವಂತೆ ಮಾಡಿದ್ದರು.  ದೀಪಾವಳಿ ಸಮಯ ಎತ್ತರವಾದ ಮರವೊಂದಕ್ಕೆ ಇನ್ನೂ ಎತ್ತರವಾದ ಗಳು ಕಟ್ಟಿ ತಮ್ಮ ಗೂಡುದೀಪ ಇತರೆಲ್ಲವುಗಳಿಂದ ಮೇಲಿರುವಂತೆ ನೋಡಿಕೊಳ್ಳುತ್ತಿದ್ದರು. ಸರಸರನೆ ಮರಗಳನ್ನೇರಿ ಅಡ್ಡ ಗೆಲ್ಲುಗಳ ಮೇಲೂ ನಡೆಯಬಲ್ಲವರಾಗಿದ್ದರು.  ಹಲಸಿನ ಹಣ್ಣುಗಳನ್ನು ಕೊಯ್ದು ಹಗ್ಗ ಕಟ್ಟಿ ಇಳಿಸಿ ತೊಳೆ ಬಿಡಿಸುವಲ್ಲಿಯವರೆಗಿನ ಜವಾಬ್ದಾರಿ ಇವರದೇ ಆಗಿರುತ್ತಿತ್ತು.  ಅವರು ತೊಳೆ ಬಿಡಿಸಿ ಹಾಕಿದಂತೆಲ್ಲ ಸುತ್ತಲೂ ಕೂತ ಮಕ್ಕಳಾದ ನಾವು ಅವುಗಳನ್ನು ಮಾಯ ಮಾಡುತ್ತಿದ್ದೆವು!  ವಿವಿಧ ಜಾತಿಯ ಹಲಸು ಮಾವುಗಳ ತಳಿ ಬೆಳೆಸುವಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಜೇನು ಸಾಕಣೆಯಲ್ಲೂ ಅವರು ಎತ್ತಿದ ಕೈ. ನಾನು ಕಾಲೇಜು ಮುಗಿಸುವಷ್ಟರಲ್ಲಿ ಅವರೂ ಬೇರೆ ಜಮೀನಿನಲ್ಲಿ ವಾಸ್ತವ್ಯ ಹೂಡಿ ಸ್ವಂತ ದುಡಿಮೆಯಿಂದ ಅಲ್ಲಿ ನಂದನವನವನ್ನೇ ಸೃಷ್ಟಿಸಿದರು. ಒಂದು ಸಲ ರೇಶ್ಮೆ ಕೃಷಿಯಲ್ಲೂ ಕೈ ಆಡಿಸಿದ್ದುಂಟು. 

ಕುಳಿತವರಲ್ಲಿ ಬಲದಿಂದ ಮೊದಲನೆಯವರು ನನ್ನ ಎರಡನೇ ಅಕ್ಕ ಅಂಬಾ. ಬಾಲ್ಯದಲ್ಲಿ ನನ್ನ ಗವರ್ನೆಸ್ ಆಗಿದ್ದವರು. ಚಿಕ್ಕಂದಿನಿಂದಲೂ ತಾಯಿಗಿಂತ ನನಗೆ ಅವರ ಒಡನಾಟವೇ ಜಾಸ್ತಿ ಇದ್ದುದಂತೆ.  ಎಲ್ಲಿ ಹೋಗುವಾಗಲೂ ನನ್ನನ್ನು ಹೊತ್ತುಕೊಂಡೇ ಹೋಗುತ್ತಿದ್ದರು. ‘ಅಂಬಾ ಹೋದರೆ ನಾನೂ...’ ಎಂಬುದು ನನ್ನ ಬೀಜಾಕ್ಷರಿ ಮಂತ್ರವಾಗಿರುತ್ತಿತ್ತಂತೆ. ಸ್ವಲ್ಪ ಸಂಗೀತಾಭ್ಯಾಸವನ್ನೂ ಮಾಡಿದ್ದ ಅವರು ಅನೇಕ ಮರಾಠಿ,ಕನ್ನಡ ಹಾಡುಗಳನ್ನು ಹಾಡುತ್ತಾ ನನ್ನನ್ನು ತೊಟ್ಟಿಲಲ್ಲಿ ತೂಗುತ್ತಿದ್ದರಂತೆ.  ಹಾಡು ನಿಲ್ಲಿಸಿದರೆ ಮತ್ತೆ ಹಾಡುವಂತೆ ನಾನು ಹಠ ಮಾಡುವುದೂ ಇತ್ತಂತೆ. ಅವರು ಹಾಡುತ್ತಿದ್ದ ಜಗನ್ಮೋಹಿನಿ ಚಿತ್ರದ ಎಂದೋ ಎಂದೋ ಹಾಡಿನ ಬಗ್ಗೆ ತಿಳಿಯಲು ಎಲ್ಲೂ ಇಲ್ಲದ ಹಾಡು ನೋಡಬಹುದು.  ನಾನು ಯಾವಾಗಲೂ ಅವರೊಂದಿಗೇ ಇರುವುದನ್ನು ಕಂಡು ನಮ್ಮ ತಂದೆ ‘ಇವಳ ಮದುವೆಯಾಗುವಾಗ ಈತನನ್ನೂ ವರದಕ್ಷಿಣೆಯಾಗಿ ಕೊಟ್ಟುಬಿಡೋಣ’ ಎಂದು ತಮಾಷೆ ಮಾಡುತ್ತಿದ್ದರಂತೆ!  ಅವರು ಮದುವೆಯಾಗಿ ಇನ್ನೊಂದು ಮನೆಗೆ ಹೋಗುತ್ತಾರೆ ಎಂದು ಯಾರಾದರೂ ಅಂದಾಗ ಹೀಗೆ ಒಬ್ಬೊಬ್ಬರೇ ಹೆಣ್ಣು ಮಕ್ಕಳು ಮದುವೆಯಾಗಿ ಮನೆ ಬಿಟ್ಟು ಹೋದರೆ ನಮಗೆ ಅಡುಗೆ ಮಾಡಿ ಬಡಿಸುವವರು ಯಾರು ಎಂದು ನನಗೆ ದಿಗಿಲಾಗುತ್ತಿತ್ತು!   ಅದ್ಭುತ ಜ್ಜಾಪಕ ಶಕ್ತಿ ಹೊಂದಿದ್ದ ಅವರಿಗೆ ತಮ್ಮ ಮಕ್ಕಳದ್ದು ಮಾತ್ರವಲ್ಲ, ಬಂಧು ಬಳಗದ ಎಲ್ಲರ ಮಕ್ಕಳ ಜನ್ಮ ದಿನಗಳೂ ಕಂಠಪಾಠವಾಗಿದ್ದವು.  ಚಿಕ್ಕಂದಿನಲ್ಲಿ ಕಲಿತ ಎಲ್ಲ ಹಾಡುಗಳನ್ನೂ ಕೊನೆ ವರೆಗೂ ನೆನಪಿಟ್ಟುಕೊಂಡಿದ್ದರು.

ನಿಂತವರಲ್ಲಿ ಎಡದಿಂದ ಎರಡನೆಯವರು ಈಗ ಪೂನಾದಲ್ಲಿರುವ ಈ ಗ್ರೂಪ್ ಫೋಟೊ ತಯಾರಿಯಲ್ಲಿ ಮುಖ್ಯ ಪಾತ್ರ ವಹಿಸಿರುವ ನನ್ನ ನಾಲ್ಕನೇ ಅಣ್ಣ ಪದ್ಮನಾಭ.  ಬಾಲ್ಯದಿಂದಲೂ ಇವರು ನನ್ನ ಟೆಕ್ನಿಕಲ್ ಎಡ್ವೈಸರ್.  ಬಹುಪಾಲು ಪ್ರಪಂಚ ಜ್ಞಾನವನ್ನು ನಾನು ಇವರಿಂದಲೇ ಸಂಪಾದಿಸಿದ್ದು.   ವಯಸ್ಸಿನಲ್ಲಿ  ಹೆಚ್ಚು ಅಂತರ ಇಲ್ಲದೆ ಇದ್ದುದರಿಂದ ನಾವು ಬಾಲ್ಯದಲ್ಲಿ ಚರ್ಚಿಸದಿರುವ ವಿಷಯಗಳೇ ಇಲ್ಲ ಎಂದರೆ ತಪ್ಪಾಗಲಾರದು.  ಈಗಲೂ ಇದು ಮುಂದುವರೆದಿದ್ದು ವಿಷಯಗಳ ಆದಾನ ಪ್ರದಾನ ನಡೆಯುತ್ತಲೇ ಇರುತ್ತದೆ.

ಕುಳಿತವರಲ್ಲಿ ಬಲದಿಂದ ಎರಡನೆಯವರು ಮೂರನೆಯ ಅಕ್ಕ. 9-6-2022ರಂದು ಅಲ್ಪ ಕಾಲದ ಅಸ್ವಾಸ್ಥ್ಯದಿಂದ 74ರ ವಯಸ್ಸಿನಲ್ಲಿ ನಿಧನರಾದರು.  ಸುಧಾ ಕಾಕತ್ಕರ್ ಆಗಿದ್ದ ಅವರು ಮದುವೆಯ ನಂತರ ನಮ್ಮ ಸಂಪ್ರದಾಯದಂತೆ ಸೀತಾ ದಾಮ್ಲೆ ಆಗಿದ್ದರು.  ನಾನು ಅವರ ಬೆನ್ನಿಗೆ ಹುಟ್ಟಿದ ತಮ್ಮ.  ಡಾನ್ಸ್ ಎಂಬ ಪದವನ್ನು ಮೊತ್ತಮೊದಲು ನಮಗೆ ಪರಿಚಯಿಸಿದ್ದು ಅವರೇ.  ಬಾರೊ ಶ್ರೀ ಕೃಷ್ಣ ಬೇಗ ಕೊಳಲನೂದುತ ಎಂಬ ನೃತ್ಯವನ್ನು ಯಾರೋ ಅವರಿಗೆ ಕಲಿಸಿದ್ದರು.  ‘ಒಮ್ಮೆ ಡಾನ್ಸ್ ಮಾಡು’ ಎಂದು ಯಾರಾದರೂ ಹೇಳಿದರೆ ಯಾವ ಅಳುಕೂ ಇಲ್ಲದೆ ಹಾಡುತ್ತಾ ನರ್ತಿಸಿ  ತೋರಿಸುತ್ತಿದ್ದರು. ‘ಶಿಕ್ಕದಲ್ಲಿ ಇದ್ದ ಬೆಣ್ಣೆ ಹಾರಿ ತೆಗೆದ’ ಎಂಬ ಸಾಲಿಗೆ ಅವರು ಮೇಲಕ್ಕೆ ಹಾರಿ ಅಭಿನಯಿಸುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ. ನಾನು ಎರಡನೇ ಕ್ಲಾಸು ಇರುವಾಗ ಅವರು 5ನೇ.  ಹೀಗಾಗಿ ಎರಡು ವರ್ಷ ನಾವು ಒಟ್ಟಿಗೆ ಸಿದ್‌ಬೈಲು ಶಾಲೆಗೆ ಹೋದದ್ದು.    ಒಂದು ಸಲ ಶಾಲೆಯಿಂದ ಬರುವಾಗ ಸುಧಕ್ಕ ತೋಡಿನ ಬದಿಯಲ್ಲಿದ್ದ ಮರದ ಟೊಂಗೆಯೊಂದಕ್ಕೆ ಪುಸ್ತಕದ ಚೀಲ ಸಿಕ್ಕಿಸಿ ಅಲ್ಲಿ ಬೀಳುತ್ತಿದ್ದ ರೆಂಜೆ ಹಣ್ಣು ಹೆಕ್ಕಲೆಂದು ಹೋದರು. ಅಷ್ಟರಲ್ಲಿ ಆ ಟೊಂಗೆ ಮುರಿದು ಅದಕ್ಕೆ ಸಿಕ್ಕಿಸಿದ್ದ ಚೀಲ ಧೊಪ್ಪೆಂದು ತೋಡಿನ ನೀರೊಳಗೆ ಬಿತ್ತು!  ಆ ಮೇಲೆ ಹತ್ತಿರದ ಮನೆಯವರು ಕಷ್ಟಪಟ್ಟು ದೋಟಿಯಿಂದ ಚೀಲ ಎತ್ತಿ ಕೊಟ್ಟರು.  ಪುಸ್ತಕಗಳೆಲ್ಲ ಚಂಡಿಪುಂಡಿ ಆಗಿದ್ದವು. 6ನೇ ತರಗತಿ ಮುಗಿಸಿದಮೇಲೆ ಅವರ ಸಹಪಾಠಿ ಹುಡುಗಿಯರೆಲ್ಲ ಮಾತಾಡಿಕೊಂಡು ತಮಗೆ ಶಾಲಾ ಶಿಕ್ಷಣ ಅಷ್ಟು ಸಾಕು ಎಂದು ಸಾಮೂಹಿಕ ಠರಾವು ಪಾಸು ಮಾಡಿಕೊಂಡರು.  ಮನೆಯವರೂ ಅದಕ್ಕೆ ಸಮ್ಮತಿಯ ಮುದ್ರೆ ಒತ್ತಿದರು. ನಮ್ಮ ಮನೆಯ ಹೆಣ್ಣು ಮಕ್ಕಳ ಪೈಕಿ ಅತ್ಯಂತ ಉದ್ದ ಕೂದಲು ಹೊಂದಿದ್ದ ಅವರು ನೀಳವೇಣಿ ಅನ್ನಿಸಿಕೊಂಡಿದ್ದರು.  ನಮ್ಮ ಅಣ್ಣ ಅವರಿಗೆ ಕೇಶವರ್ಧಿನಿ ಎಂಬ ಸುವಾಸಿತ ತೈಲ ತಂದು ಕೊಡುತ್ತಿದ್ದರು. 1966ರ ಸುಮಾರಿಗೆ ಯಾವುದೋ ಸರ್ಕಾರಿ ಸ್ಕೀಮಿನ ಭಾಗವಾಗಿ ನಡೆಯುತ್ತಿದ್ದ ಹೊಲಿಗೆ ತರಬೇತಿಗೆ ಸೇರಿ ಕಟ್ಟಿಂಗ್ ಮತ್ತು ಹೊಲಿಗೆ ಕಲಿತರು. 1967ರಲ್ಲಿ ಅವರಿಗೆ ಸಬ್ಸಿಡಿ ದರದಲ್ಲಿ ಒಂದೊಂದು  ಉಷಾ ಹೊಲಿಗೆ   ಮೆಷೀನು ದೊರಕಿತು. ಅದೇ ವರ್ಷ ಅವರ ಮದುವೆ ಆಯಿತು. ಆ ಮೆಷೀನನ್ನು ಅವರು ಜೊತೆಗೆ ಕೊಂಡೊಯ್ಯುವುದೆಂದಾಗಿತ್ತು.  ಆದರೆ ಗಂಡನ ಮನೆಯವರು ಬೇರೆ ಮಷೀನು ಖರೀದಿಸುವುದಾಗಿ ನಿರ್ಧರಿಸಿದ್ದರಿಂದ ಅದು ನಮ್ಮಲ್ಲೇ ಉಳಿದು ಅದನ್ನು ತಂಗಿ ಬಳಸತೊಡಗಿ ಹೊಲಿಗೆಯಲ್ಲಿ ಪರಿಣಿತಿ ಸಾಧಿಸಿದಳು.  ಅವರು ಸೇರಿದ ಮನೆ ತುಂಬಾ ಜನರಿದ್ದ ಕೂಡುಕುಟುಂಬವಾಗಿದ್ದು ನಮ್ಮ ಮನೆಯೂ ಹಾಗೇ ಇದ್ದುದರಿಂದ ಹೊಂದಿಕೊಳ್ಳುವುದು ಅವರಿಗೇನೂ ಕಷ್ಟ ಆಗಲಿಲ್ಲ. ಮದುವೆಯಾದ ಹೆಣ್ಣು ಮಕ್ಕಳು ನಿತ್ಯವೂ 18  ಮೊಳದ ಕಚ್ಚೆ ಸೀರೆ ಉಡುವುದು ನಮ್ಮ ಸಮುದಾಯದ ಆಗಿನ ಸಂಪ್ರದಾಯವಾಗಿತ್ತು.  ಕೆಲವು ವರ್ಷ ಅವರೂ ಅದನ್ನು ಪಾಲಿಸಿದರು.  ನಂತರ ಈ ಸಂಪ್ರದಾಯಕ್ಕೆ ಸಾರ್ವತ್ರಿಕ ವಿನಾಯಿತಿ ದೊರಕಿತು. ಈಗ ಮದುವೆ ಮುಂಜಿಯಂತಹ ಸಮಾರಂಭಗಳಂದು ಮಾತ್ರ ಹೆಣ್ಣು ಮಕ್ಕಳು ಇಂಥ ಸೀರೆ ಉಡುತ್ತಾರೆ. ನಮ್ಮ ತಂದೆಯವರಂತೆ ಹೈನುಗಾರಿಕೆ ಅವರಿಗೂ ಕೂಡಿ ಬರುತ್ತಿದ್ದು ಕೊನೆಯ ವರೆಗೂ ಒಂದಾದರೂ ಕರೆಯುವ ದನ ಅವರ ಮನೆಯ ಹಟ್ಟಿಯಲ್ಲಿ ಇರುತ್ತಿತ್ತಂತೆ. ಅವರು ಮೃದು ಭಾಷಿಯಾಗಿದ್ದು ಗಟ್ಟಿ ದನಿಯಲ್ಲಿ ಮಾತಾಡಿದ್ದನ್ನಾಗಲೀ, ಯಾರನ್ನಾದರೂ ಗದರಿಸಿದ್ದನ್ನಾಗಲೀ ನಾನು ನೋಡಿಲ್ಲ.  ಇತರರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವ ಅಭ್ಯಾಸವೂ ಅವರಿಗಿರಲಿಲ್ಲ.  ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ ಇದ್ದರು.   

ಮೂರನೇ ಮತ್ತು ನಾಲ್ಕನೆಯವರಾದ ಇಬ್ಬರು ತಂಗಿಯಂದಿರು ಹೇಮಲತಾ ಮತ್ತು ಮನೋರಮಾ ತಮ್ಮ ತಮ್ಮ ಕುಟುಂಬದೊಂದಿಗೆ ಸಂತೃಪ್ತ ಜೀವನ ನಡೆಸುತ್ತಿರುವವರು.  ಅವರು ಹೆಚ್ಚು ಕಮ್ಮಿ ನನ್ನ ಓರಗೆಯವರೇ ಆದ್ದರಿಂದ ನನ್ನ ಅನುಭವಗಳೇ ಅವರ ಅನುಭವಗಳು. ಹೀಗಾಗಿ ಹೆಚ್ಚು ಹೇಳುವುದೇನೂ ಇಲ್ಲ.

ನಮ್ಮ ಕೂಡು ಕುಟುಂಬದ ಆ ಮನೆ ಈಗ ಶಿಥಿಲಾವಸ್ಥೆ ತಾಳಿದೆ.  ಈಗಲೂ ಊರಿಗೆ ಹೋದಾಗ ಅದರ ಎಲ್ಲ ಕೋಣೆಗಳೊಳಗೂ ಒಮ್ಮೆ ಹೊಕ್ಕು ಹಳೆ ನೆನಪುಗಳನ್ನು ನವೀಕರಣಗೊಳಿಸಿಕೊಳ್ಳುವುದಿದೆ.  ಈ ಚಿತ್ರದಲ್ಲಿ ಕಾಣುತ್ತಿರುವ ಕಿಟಿಕಿಯ ಬುಡ ಆ ಮನೆಯಲ್ಲಿ  ಇರುವಷ್ಟು ಕಾಲ ನಾನು ಊಟಕ್ಕೆ ಕುಳಿತುಕೊಳ್ಳುತ್ತಿದ್ದ ಸ್ಥಳವಾಗಿತ್ತು.