Wednesday, 21 August 2024

ಬೇತಾಳ ಕಥೆಗಳ ಕಥೆ



ನಮಗೆಲ್ಲ ಬೇತಾಳ ಕಥೆಗಳ ಪರಿಚಯವಾದದ್ದು ಚಂದಮಾಮದಿಂದಲೇ ಆದರೂ ಮೂಲ ಬೇತಾಳ ಪಂಚವಿಂಶತಿ ಇರುವುದು ಕ್ರಿ.ಶ. 1080ರ ಆಸುಪಾಸು ಮಹಾಕವಿ ಸೋಮದೇವ ಭಟ್ಟನಿಂದ ರಚಿಸಲ್ಪಟ್ಟ ಕಥಾಸರಿತ್ಸಾಗರದಲ್ಲಿ. ಆದರೆ ಇದು ಕೂಡ ಮೂಲ ಗ್ರಂಥ ಅಲ್ಲ, ಮಹಾಕವಿ ಗುಣಾಡ್ಯ ಎಂಬವನು ಪೈಶಾಚ ಭಾಷೆಯಲ್ಲಿ ಬರೆದ ಬೃಹತ್ಕಥಾ ಎಂಬ ಗ್ರಂಥದ ಸಂಕ್ಷಿಪ್ತ ಸಂಸ್ಕೃತ ರೂಪ.

ಪಾರ್ವತಿಗೆ ದಿನವೂ ಶಿವನಿಂದ ಹೊಸ ಹೊಸ ಕಥೆಗಳನ್ನು ಕೇಳುವ ಹವ್ಯಾಸ. ಒಮ್ಮೆ ಶಿವ  ಹೊಸದೊಂದು ಕಥೆ ಹೇಳುವಾಗ ಗಣಗಳಲ್ಲೊಬ್ಬನಾದ ಪುಷ್ಪದಂತ ರಹಸ್ಯವಾಗಿ ಕೇಳಿಸಿಕೊಂಡ. ಮನೆಗೆ ಹೋಗಿ ತನ್ನ ಪತ್ನಿಗೆ ಆ ಕಥೆ ಹೇಳಿದ.  ಆಕೆ ಮರುದಿನ ಪಾರ್ವತಿಗೆ ಅದೇ ಕಥೆ ಹೇಳಿದಳು. ಶಿವ ಹೇಳಿದ ಕಥೆ ಮೊದಲೇ ಬೇರೆಯವರಿಗೆ ಗೊತ್ತಿತ್ತೆಂದು ಪಾರ್ವತಿ ಕೋಪಿಸಿಕೊಂಡಳು.  ಕೊನೆಗೆ ಇದು ಪುಷ್ಪದಂತನ ಕಾರುಬಾರು ಎಂದು ಗೊತ್ತಾಗಿ ಆತನಿಗೆ ಭೂಮಿಯಲ್ಲಿ ನರ ರೂಪದಲ್ಲಿ ಜನಿಸುವಂತೆ ಶಾಪ ನೀಡಿದಳು. ಆತನ ಪರವಾಗಿ ವಾದಿಸಿದ ಸಹಚರ ಮಾಲ್ಯವಾನ ಎಂಬ ಗಣಕ್ಕೂ ಇದೇ ಶಾಪ ಕೊಟ್ಟಳು.  ಅವರು ಪರಿಪರಿಯಾಗಿ ಕ್ಷಮಿಸುವಂತೆ ಬೇಡಿಕೊಂಡಾಗ ವಿಂಧ್ಯಾಚಲ ಪರ್ವತದಲ್ಲಿರುವ ಕಾಣಭೂತಿ ಎಂಬ ಪಿಶಾಚಿಗೆ ಎಲ್ಲ ಕಥೆಗಳನ್ನು ಹೇಳಿದಾಗ ಶಾಪ ವಿಮುಕ್ತಿ ಎಂದು ಪರಿಹಾರ ಸೂಚಿಸಿದಳು.

ಪುಷ್ಪದಂತನು  ವರರುಚಿ ಎಂಬ ಹೆಸರಿನಲ್ಲಿ ಮತ್ತು ಮಾಲ್ಯವಾನನು ಗುಣಾಢ್ಯ ಎಂಬ ಹೆಸರಿನಲ್ಲಿ ಭೂಮಿಯಲ್ಲಿ ಜನಿಸಿದರು. ವರರುಚಿಯು ಕಾಣಭೂತಿಗೆ ಹೇಳಿದ ಕಥೆಗಳನ್ನು ಆತ ತಿರುಗಿ ಗುಣಾಢ್ಯನಿಗೆ ಹೇಳಿದ. . ಗುಣಾಢ್ಯನು ಕಾಣಭೂತಿಯಿಂದ ಕೇಳಿದ ಕಥೆಗಳನ್ನು ಏಳು ಲಕ್ಷ ಶ್ಲೋಕಗಳಲ್ಲಿ ಬರೆದ. ಈ ಕಾರ್ಯಕ್ಕೆ ಆತನಿಗೆ ಏಳು ವರ್ಷಗಳು ತಗಲಿದವು. ಇವುಗಳನ್ನು ಪ್ರಕಟಿಸುವಂತೆ ಸಾತವಾಹನನೆಂಬ ರಾಜನನ್ನು ಕೇಳಿಕೊಂಡ.  ಆದರೆ ಆತ ಆಸಕ್ತಿ ತೋರಲಿಲ್ಲ.  ಇದರಿಂದ ಮನನೊಂದ ಗುಣಾಢ್ಯನು ಕಾಡಿಗೆ ಹೋಗಿ ಒಂದೊಂದೇ ಪುಟಗಳನ್ನು ಬೆಂಕಿಯಲ್ಲಿ ಸುಡತೊಡಗಿದ.  ವಿಷಯ ತಿಳಿದ ಸಾತವಾಹನನು  ಅಲ್ಲಿಗೆ ತೆರಳಿ ಕಥೆಗಳನ್ನು ತಾನು ಪ್ರಕಟಿಸಲು ಸಿದ್ಧನಿರುವುದಾಗಿ ತಿಳಿಸಿದಾಗ ಕೇವಲ ಒಂದು ಲಕ್ಷ ಶ್ಲೋಕಗಳಷ್ಟೇ ಉಳಿದಿದ್ದವು. ಆತ ಪ್ರಚುರಪಡಿಸಿದ ಈ ಸಂಗ್ರಹವೇ ಕಥಾಸರಿತ್ಸಾಗರ. ಇದರಲ್ಲಿ 18 ಖಂಡಗಳಿದ್ದು ಪಂಚತಂತ್ರ, ಅರೇಬಿಯನ್ ನೈಟ್ಸ್‌ಗಳಂತೆ ಕಥೆಗಳೊಳಗೆ ಕಥೆಗಳೊಳಗೆ ಕಥೆಗಳಿವೆ. 12ನೇ ಖಂಡದ  8ರಿಂದ 32ರ ವರೆಗಿನ 25 ಕಥೆಗಳೇ ಬೇತಾಳ ಪಂಚವಿಂಶತಿ. ಮೃಗಾಂಕದತ್ತನೆಂಬ ರಾಜನ ಮಂತ್ರಿ ವಿಕ್ರಮಕೇಸರಿಗೆ ಬ್ರಾಹ್ಮಣನೊಬ್ಬನು ಈ ಕಥೆಗಳನ್ನು ಹೇಳುತ್ತಾನೆ. ಇವುಗಳಿಗೆ ಸ್ವತಂತ್ರ ಶೀರ್ಷಿಕೆಗಳಿಲ್ಲದಿದ್ದು ಒಂದನೇ ಬೇತಾಳ, ಎರಡನೇ ಬೇತಾಳ ಹೀಗೆ ಹೆಸರಿಸಲಾಗಿದೆ. ಕೆಲವು ಕಥೆಗಳೊಳಗೆ ಕಥೆಗಳಿವೆ.  ಇತರ ಖಂಡಗಳಲ್ಲಿ ಬಂದ ಕೆಲವು ಕಥೆಗಳ ಪುನರಾವೃತ್ತಿಯೂ ಬೇತಾಳ ಕಥೆ ರೂಪದಲ್ಲಿ ಕಾಣಿಸಿಕೊಂಡಿದೆ.  ಬೇತಾಳನನ್ನು ಹೊತ್ತು ತರುವ ರಾಜನ ಹೆಸರು ತ್ರಿವಿಕ್ರಮಸೇನ ಎಂದಾಗಿದ್ದು ಅನೇಕರು ವಿಕ್ರಮ, ವಿಕ್ರಮಾದಿತ್ಯ ಎಂದೆಲ್ಲ ತಪ್ಪಾಗಿ ಉಲ್ಲೇಖಿಸುವುದಿದೆ.

ಮೊದಲನೆ ಕಂತಿನಲ್ಲಿ ತ್ರಿವಿಕ್ರಮನು ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಬೇಕಾದ ಪ್ರಮೇಯ ಏಕೆ ಬಂತು ಎಂಬ ವಿವರಗಳೊಂದಿಗೆ ಬೇತಾಳ ಹೇಳುವ ಮೊದಲನೆ ಕಥೆ ಇದೆ.  23 ಕಥೆಗಳ ಕೊನೆಯಲ್ಲಿ ಕೇಳುವ ಪ್ರಶ್ನೆಗೆ ತ್ರಿವಿಕ್ರಮನಿಗೆ ಉತ್ತರ ಗೊತ್ತಿದ್ದು ಆತ ಮೌನ ಮುರಿದುದರಿಂದ ಬೇತಾಳ ಶವದೊಂದಿಗೆ ಮತ್ತೆ ಮರದಲ್ಲಿ ತೂಗಾಡುತ್ತದೆ. 24ನೇ ಕಥೆಯಲ್ಲಿ ಓರ್ವ ವರ್ತಕ ಮತ್ತು ಆತನ ಪುತ್ರ ಅನುಕ್ರಮವಾಗಿ ಓರ್ವ ಮಗಳು ಮತ್ತು ಆಕೆಯ ತಾಯಿಯನ್ನು ವಿವಾಹವಾಗಬೇಕಾಗಿ ಬಂದು ಆ ದಂಪತಿಗಳಿಗೆ ಜನಿಸಿದ ಮಕ್ಕಳ ಪರಸ್ಪರ ಸಂಬಂಧ ಏನು ಎಂಬ ಪ್ರಶ್ನೆಗೆ ತ್ರಿವಿಕ್ರಮ ನಿರುತ್ತರನಾಗುತ್ತಾನೆ.  ಆಗ  ತ್ರಿವಿಕ್ರಮನ ತಾಳ್ಮೆ ಮತ್ತು ಶೌರ್ಯಕ್ಕೆ ಮೆಚ್ಚಿದ ಬೇತಾಳವು  ಶವ ತರಲು ಹೇಳಿದ ಭಿಕ್ಷುವು  ಆತನನ್ನು ಬಲಿಕೊಡಲಿದ್ದಾನೆಂದೂ, ಆತ ನಮಸ್ಕಾರ ಮಾಡಲು ಹೇಳಿದಾಗ ಮೊದಲು ನೀನೇ ಮಾಡಿ ತೋರಿಸು ಅನ್ನಬೇಕೆಂದೂ, ಆತ ನಮಸ್ಕಾರ ಮಾಡಿದಾಗ ಆತನ ಶಿರಚ್ಛೇದ ಮಾಡಬೇಕೆಂದೂ ಹೇಳುತ್ತದೆ.  ಉಪಸಂಹಾರ ರೂಪದ 25ನೇ ಕಂತಿನಲ್ಲಿ ತ್ರಿವಿಕ್ರಮನು ಹಾಗೆಯೇ ಮಾಡಿ ಅಖಂಡ ಸಾಮ್ರಾಜ್ಯದ ಒಡೆಯನಾಗುತ್ತಾನೆ.

ಕಥಾಸರಿತ್ಸಾಗರದಲ್ಲಿ ಬೇತಾಳ ಪಂಚವಿಂಶತಿ ಅಲ್ಲದೆ ನಾವು ಚಂದಮಾಮ ಮತ್ತು ಇತರೆಡೆ ಓದಿರುವ, ನಾಟಕ, ಸಿನಿಮಾಗಳಲ್ಲಿ ನೋಡಿರುವ  ನೂರಾರು ಕಥೆಗಳಿವೆ.  ನಮಗೆ ಸಸೇಮಿರಾ ಎಂಬ ಹೆಸರಿನಿಂದ ಗೊತ್ತಿರುವ, ರಾಜಕುಮಾರನು ಕರಡಿಯನ್ನು ಮರದಿಂದ ಕೆಳಗೆ ತಳ್ಳುವ ಕಥೆಯೂ ಇದೆ.  ಆದರೆ ಅದರಲ್ಲಿ ಕರಡಿಯು ರಾಜಕುಮಾರನ ನಾಲಗೆಯ ಮೇಲೆ ಸಸೇಮಿರಾ ಎಂದು ಬರೆಯುವುದಿಲ್ಲ ಮತ್ತು ಮತಿಭ್ರಮಣೆಯಾದಾಗ ಆತ ಅದನ್ನು ಉಚ್ಚರಿಸುವುದೂ ಇಲ್ಲ.

ತೆಲುಗು ಚಂದಮಾಮದಲ್ಲಿ ಸಪ್ಟಂಬರ್ 1955ರ ಸಪ್ಟಂಬರ್‌ನಲ್ಲಿ ಹಾಗೂ ಕನ್ನಡ ಮತ್ತು ಇತರ ಭಾಷೆಗಳಲ್ಲಿ ಆ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಬೇತಾಳ ಕಥೆಗಳ ಪ್ರಕಟಣೆ ಆರಂಭವಾಯಿತು. ತೆಲುಗಿನ ಕಥೆಗಳೇ ಇತರ ಭಾಷೆಗಳಲ್ಲಿ ಬರುತ್ತಿದ್ದುದರಿಂದ ಹೀಗೆ ಒಂದು ತಿಂಗಳ ಅಂತರ ಇರುತ್ತಿತ್ತು. ಮೊದಲ ಕಥೆಗೆ ಚಿತ್ರಾ ಅವರ ಚಿತ್ರಗಳಿದ್ದವು. ತ್ರಿವಿಕ್ರಮನು ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಶೀರ್ಷಿಕೆ ಚಿತ್ರವನ್ನು  1960 ಮತ್ತು 62ರಲ್ಲಿ ಅವರು ಹೊಸದಾಗಿ ಬರೆದರು. 1964ರಲ್ಲಿ ಶಂಕರ್ ಬೇರೆ ಶೀರ್ಷಿಕೆ ಚಿತ್ರ ರಚಿಸಿದರು. ಚಂದಮಾಮ ಜೀವಂತ ಇರುವವರೆಗೂ ವರ್ಣಮಯ ಅವತಾರದೊಂದಿಗೆ ಈ ಚಿತ್ರವೇ ಮುಂದುವರೆಯಿತು. ಇಲ್ಲಿ ಕಾಣಿಸುವ ಚಿತ್ರಗಳಲ್ಲಿ ಎಡಗಡೆಯ ಮೂರು ಚಿತ್ರಾ ಚಿತ್ರಿಸಿದವು.  ಉಳಿದೆರಡು ಶಂಕರ್ ರಚನೆಗಳು.



ಸ್ವಾರಸ್ಯವೆಂದರೆ  ಚಂದಮಾಮದಲ್ಲಿ  ಮೊದಲ ಕಂತಿನಲ್ಲಿ ಕಾಣಿಸಿಕೊಂಡದ್ದು ಬೇತಾಳ ಪಂಚವಿಂಶತಿಯ ಮೊದಲ ಕಥೆ ಆಗಿರದೆ 12ನೆಯದಾಗಿತ್ತು!  ನಂತರ ಪ್ರಕಟವಾದ ಬೇತಾಳ ಕಥೆಗಳಲ್ಲಿ ಕೂಡ ಕೆಲವು ಮಾತ್ರ ಮೂಲ ಪಂಚವಿಂಶತಿಯಿಂದ ಆಯ್ದವುಗಳು.  ಉಳಿದವೆಲ್ಲ ಕಲ್ಪಿತ ಕಥೆಗಳು. ಪಂಚವಿಂಶತಿಯ ಕೆಲವು ಕಥೆಗಳು ತುಂಬಾ ದೀರ್ಘ ಮತ್ತು ಕೆಲವು ತುಂಬಾ ಚುಟುಕಾಗಿರುವುದು ಇದಕ್ಕೆ ಕಾರಣವಾಗಿರಬಹುದು. ಇದನ್ನು ಚಂದಮಾಮ ಹೇಳಿಕೊಂಡಿತ್ತು ಕೂಡ.  ಕೆಲವು ವರ್ಷಗಳ ನಂತರ ಬೇತಾಳ ಕಥೆಗಳು ಎಂಬ ಉಪಶೀರ್ಷಿಕೆಯ ಮುಂದೆ ಪ್ರಶ್ನ ಚಿಹ್ನೆ ಇರುತ್ತಿದ್ದುದನ್ನೂ ಅನೇಕರು ಗಮನಿಸಿರಬಹುದು.

ಕನ್ನಡದಲ್ಲಿ ಬೇತಾಳ ಕಥೆ ಆರಂಭವಾದ 1955ರ ಅಕ್ಟೋಬರ್ ತಿಂಗಳ  ಚಂದಮಾಮ ಲಭ್ಯವಿಲ್ಲ.  ಆದರೆ ಸುದೈವವಶಾತ್  ಆ ಸಂಚಿಕೆಯ ಬೇತಾಳ ಕಥೆಯ ಭಾಗ ನನ್ನ ಸಂಗ್ರಹದಲ್ಲಿದ್ದು  ಅದನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.  ಇದರಲ್ಲಿ ತ್ರಿವಿಕ್ರಮನು ಬೇತಾಳನನ್ನು ಹೊತ್ತು ತರಬೇಕಾಗಿ ಬಂದ ಸಂದರ್ಭದ ವಿವರಗಳು ಮತ್ತು ಮೊದಲ ಕಥೆ ಇವೆ. ತ್ರಿವಿಕ್ರಮನು ಶವವನ್ನು ಹೊತ್ತುಕೊಂಡು ಹೋಗುವ  ಚಿತ್ರ ಮತ್ತು ಕೆಲವೊಮ್ಮೆ ಕಥೆಯ ಕೊನೇ ಪುಟದಲ್ಲಿ  ಮತ್ತೆ ಮರವನ್ನೇರಿದ ಬೇತಾಳನ ಹಿಂದೆ ಆತ ಓಡುತ್ತಿರುವ  silhoutte ಶೈಲಿಯ ಚಿತ್ರಗಳನ್ನು ಮಾತ್ರ ನಾವು ನೋಡಿರುತ್ತೇವೆ. ಈ ಸಂಚಿಕೆಯಲ್ಲಿ ಆತ ಭಿಕ್ಷುವಿನ ಮುಂದೆ ನಿಂತಿರುವ ಅಪರೂಪದ ಒಂದು ಚಿತ್ರವೂ ನೋಡಲು ಸಿಗುತ್ತದೆ. ಆದರೆ ಕಲ್ಪಿತ ಬೇತಾಳ ಕಥೆಗಳು ನಿರಂತರವಾಗಿ ಮುಂದುವರೆದುದರಿಂದ ಉಪಸಂಹಾರದಲ್ಲಿ ಆತನ ಇನ್ನಷ್ಟು ಚಿತ್ರಗಳನ್ನು ಬರೆಯುವ ಅವಕಾಶ ಚಂದಮಾಮದ ಚಿತ್ರಕಾರರಿಗೆ ಮತ್ತು ನೋಡುವ ಅವಕಾಶ  ನಮಗೆ  ಸಿಗದೇ ಹೋಯಿತು.

 




















8 comments:

  1. ನಿಮ್ಮ ಶ್ರಮಕ್ಕೆ, ತಾಳ್ಮೆಗೆ, ಅಧ್ಯಯನಕ್ಕೆ ಅನಂತ ಧನ್ಯವಾದಗಳು. ಬಹಳ ಸೊಗಸಾದ ಕತೆ. ಬಹಳ ಖುಷಿಯಾಯಿತು.

    ReplyDelete
  2. ಬಹಳ ಅಪರೂಪದ, ರೋಚಕವಾದ ಮಾಹಿತಿ. ನಾನೂ 'ಚಂದಮಾಮ' ಓದುತ್ತಲೇ ಬೆಳೆದವನಾದರೂ, ಈ ಬೇತಾಳದ ವಿಚಾರ ಗೊತ್ತಿರಲಿಲ್ಲ. ತಿಳಿಯಪಡಿಸಿದ್ದಕ್ಕೆ, ಮತ್ತು ಆ ಸುಂದರ ಕಲ್ಪನಾ ಲೋಕಕ್ಕೆ ಮತ್ತೆ ನಮ್ಮನ್ನು ಕರೆದೊಯ್ದದ್ದಕ್ಕೆ ಧನ್ಯವಾದಗಳು.

    Srinath K (FB)

    ReplyDelete
  3. ರಾಜಾ ವಿಕ್ರಮಾದಿತ್ಯ ಯಾಕೆ ಇಷ್ಟೊಂದು ಬಾರಿ ಮೌನ ಮುರಿದು ಮತ್ತೆ ಮತ್ತೆ ಶವವನ್ನು ಹೆಗಲಿಗೆ ಏರಿಸುತ್ತಾನೆ,ಈ ಬೇತಾಳ ಕಥೆಗಳು ಆರಂಭ ಆದದ್ದು ಹೇಗೆ ಎಂದು ಬಾಲ್ಯದಿಂದಲೂ ಕಾಡಿದ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿವೆ,ಧನ್ಯವಾದಗಳು

    Jayalakshmi Shekhar (FB)

    ReplyDelete
  4. ಚಂದಮಾಮ ಪತ್ರಿಕೆ ಹಾಗೂ ಅದರ ಕಲಾವಿದರಾದ ಚಿತ್ರ ಮತ್ತು ಶಂಕರ್ ಅವರ ಬಗೆಗಿನ ನಿಮ್ಮ ಬ್ಲಾಗ್ ಲೇಖನ ಚೆನ್ನಾಗಿದೆ. ಯಾವತ್ತೂ ಕಾಟಾಚಾರದ ಚಿತ್ರ ರಚಿಸದೆ ಪ್ರತಿ ವಿವರಕ್ಕೂ ಗಮನ ನೀಡುವ ಅವರ ರೇಖೆಗಳ ಬಗ್ಗೆ ವಿವರಣೆ ನೀಡಿದ್ದೀರಿ. ಈ ಅಚ್ಚುಕಟ್ಟು ಮತ್ತು ಸಿಂಗಾರ ಆ ಕಥೆಗಳಿಗೆ ಒಂದು ಮೆರುಗು ನೀಡುತ್ತಿದ್ದವು. ಅವುಗಳ ಓದುವಿಕೆ ಒಂದು ರಸದೌತಣ ಸೇವಿಸಿದಂತಿರುತ್ತಿತ್ತು. ಬೇತಾಳ ಕಥೆಗಳು ಒಗಟು ಬಿಡಿಸುವ ಕಥೆಗಳು. ಅವುಗಳಿಗೆ ಬೇತಾಳ, ಶವ, ರುದ್ರ ರಮಣೀಯ ಹಿನ್ನೆಲೆ ಇವುಗಳು ಒಂದು ರೀತಿಯ ಸಿಂಗಾರ.

    Baleyada Subhash (FB)

    ReplyDelete
  5. ರಾಜ ತ್ರಿವಿಕ್ರಮ ಬೇತಾಳವನ್ನು ಮರದ ಮೇಲಿಂದ ಹೆಗಲ ಮೇಲೆ ಏರಿಸಿಕೊಂಡು ಕೆಳಗೆ ಇಳಿಸುತ್ತಿರುವ ಚಿತ್ರವನ್ನು ಹಿಂದೆ ಎಂದೂ ನೋಡಿರಲಿಲ್ಲ, ತಮ್ಮ ಈ ಲೇಖನದಲ್ಲಿಯೇ ಮೊದಲ ಬಾರಿಗೆ ಅದನ್ನು ನೋಡುತ್ತಿದ್ದೇನೆ , ಮಾಹಿತಿಗೆ ಧನ್ಯವಾದಗಳು.

    ReplyDelete
  6. Paishache bhaashe andarenu? (gunaadyanu bareda bhaashe), adu nijavaagiyu iruvude? Swalpa vivara thilisuvira?

    ReplyDelete
    Replies
    1. ಪಿಶಾಚ ಪ್ರದೇಶ ಎಂದು ಗುರುತಿಸಲ್ಪಡುತ್ತಿದ್ದ ಪಂಜಾಬದ ಉತ್ತರ ಭಾಗ ಮತ್ತು ಕಾಶ್ಮೀರದಲ್ಲಿ ಪ್ರಚಲಿತವಾಗಿದ್ದ ಪ್ರಾಕೃತ ಭಾಷೆಗೆ ಪೈಶಾಚ ಭಾಷೆ ಅನ್ನುವ ಹೆಸರಿತ್ತು ಅನ್ನಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ನನ್ನಲ್ಲಿಲ್ಲ.

      Delete

Your valuable comments/suggestions are welcome