Friday 25 October 2019

ಹೂವು ಚೆಲುವೆಲ್ಲ ನಂದೆಂದಿತು


ಪ್ರಸಿದ್ಧ ಸಂಗೀತ ನಿರ್ದೇಶಕ ಕಲ್ಯಾಣ್‍ಜೀ ಅವರ ಪ್ರಕಾರ ಸಿನಿಮಾ ಹಾಡುಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು. ಮೊದಲನೆಯದು ಅಲೋಪೆತಿಕ್. ಈ ಗುಂಪಿನ ಹಾಡುಗಳು ಒಮ್ಮೆಲೇ ಗೋಲಿ ಸೋಡದಂತೆ ಭುಸ್ಸನೆ ನೊರೆಯುಕ್ಕಿಸಿ ಕಾಲಕ್ರಮೇಣ ಹೇಳ ಹೆಸರಿಲ್ಲದಂತೆ ಮಾಯವಾಗುತ್ತವೆ.  ಎರಡನೆಯ ಗುಂಪು ಹೋಮಿಯೊಪೆತಿಕ್ ಹಾಡುಗಳದ್ದು.  ಈ ಹಾಡುಗಳು ಜನ್ಮ ತಾಳುತ್ತಲೇ ಜನಪ್ರಿಯವಾಗಿ  ಆರಕ್ಕೇರದೆ ಮೂರಕ್ಕಿಳಿಯದೆ  ಚಿರಕಾಲ ಬಾಳುತ್ತವೆ.  ಮೂರನೆಯದು ಆಯುರ್ವೇದಿಕ್ ಗುಂಪು. ಇದಕ್ಕೆ ಸೇರಿದ ಹಾಡುಗಳು ಆರಂಭದಲ್ಲಿ ಸಪ್ಪೆ ಅನ್ನಿಸುತ್ತವೆ.  ಆದರೆ ಕಾಲ ಕಳೆದಂತೆ ಇವುಗಳ ಜನಪ್ರಿಯತೆ ವೃದ್ಧಿಸುತ್ತಾ ಹೋಗುತ್ತದೆ. ನನ್ನ ಮಟ್ಟಿಗೆ ಹಣ್ಣೆಲೆ ಚಿಗುರಿದಾಗ ಚಿತ್ರದ ಹೂವು ಚೆಲುವೆಲ್ಲ ನಂದೆಂದಿತು ಒಂದು ಆಯುರ್ವೇದಿಕ್ ಹಾಡು.  ಇದು ಆರಂಭದಲ್ಲಿ ನನಗೆ ಅಷ್ಟೊಂದು ಇಷ್ಟವಾಗದಿರಲು  ಕಾರಣಗಳು ಎರಡು.  ಆಗ ನಾನು ಪಿ.ಯು.ಸಿ ಓದುತ್ತಿದ್ದು ಚಂದಮಾಮದಿಂದ ಓದಿನ ರುಚಿ ಹತ್ತಿ ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳನ್ನು ದಾಟಿ ತ್ರಿವೇಣಿಯವರ ಎಲ್ಲ ಕಾದಂಬರಿಗಳನ್ನು ಓದಿ ಮುಗಿಸಿದ್ದೆ. ರೇಡಿಯೋದಿಂದ ತಾತ್ಕಾಲಿಕವಾಗಿ ದೂರವಾಗಿದ್ದುದರಿಂದ  ಅವರ ಕಾದಂಬರಿ ಆಧಾರಿತ ಹಣ್ಣೆಲೆ ಚಿಗುರಿದಾಗ ಸಿನಿಮಾದಲ್ಲಿ ಹೂವು ಚೆಲುವೆಲ್ಲ ಎಂಬ ಚಂದದ ಹಾಡೊಂದಿದೆ ಎಂದು  ಸ್ನೇಹಿತನೊಬ್ಬನ ಮೂಲಕ ತಿಳಿಯಬೇಕಾಗಿ ಬಂತು. ನಾನೇ ಅದನ್ನು ಮೊದಲು ರೇಡಿಯೊದಲ್ಲಿ ಕೇಳಲಿಲ್ಲವಲ್ಲ ಎಂಬುದು ಅದು ಇಷ್ಟವಾಗದಿರಲು ಮೊದಲ ಕಾರಣ. ಅದು ಪಿ.ಬಿ. ಶ್ರೀನಿವಾಸ್ ಹಾಡಿರುವುದೇ ಎಂದು ನಾನು ಕೇಳಿದಾಗ ಆತ ಅಲ್ಲ ಎಂದು ಉತ್ತರಿಸಿದ್ದು ಎರಡನೆಯ ಕಾರಣ.  ಆಗ ನನಗೆ ರಫಿ ಮತ್ತು ಪಿ.ಬಿ.ಎಸ್ ಬಿಟ್ಟರೆ ಇತರರ ಹಾಡುಗಳು ಸುಲಭದಲ್ಲಿ ಇಷ್ಟ ಆಗುತ್ತಿರಲಿಲ್ಲ. ಅಷ್ಟರಲ್ಲೇ ನಾನು ಕೊಳಲು ನುಡಿಸಲು ಆರಂಬಿಸಿದ್ದು ಈ ಹಾಡನ್ನು  ನುಡಿಸಲು ಪ್ರಯತ್ನಿಸಬೇಕೆಂದು ಎಂದೂ ಅನಿಸಿರಲಿಲ್ಲ.  ಆದರೆ ಕಾಲ ಕಳೆದಂತೆ ಇದು  ಯಾವಾಗ ಇಷ್ಟವಾಗತೊಡಗಿತೆಂದು ನನಗೇ ಗೊತ್ತಿಲ್ಲ! ಈಗ ಈ ಹಾಡಿಲ್ಲದೆ ನನ್ನ ಯಾವ ಕಾರ್ಯಕ್ರಮವೂ ಇಲ್ಲ.


1967ರಲ್ಲಿ ಸಂಗೀತ ನಿರ್ದೇಶನ ಕ್ಷೇತ್ರಕ್ಕೆ ಕಾಲಿರಿಸಿ  ನಕ್ಕರೆ ಅದೇ ಸ್ವರ್ಗ ಮತ್ತು ಮನಸ್ಸಿದ್ದರೆ ಮಾರ್ಗ ಚಿತ್ರಗಳಲ್ಲಿ  ಒಳ್ಳೆಯ ಹಾಡುಗಳನ್ನು ನೀಡಿದ್ದರೂ ಎಂ.ರಂಗರಾವ್ ಅವರನ್ನು ಸ್ಟಾರ್ ಪದವಿಗೇರಿಸಿದ್ದು 1968ರ ಹಣ್ಣೆಲೆ ಚಿಗುರಿದಾಗ ಚಿತ್ರದ ಹೂವು ಚೆಲುವೆಲ್ಲ ಹಾಡು. ಸಾಮಾನ್ಯವಾಗಿ ಪ್ರಸಿದ್ಧ ಸಿನಿಮಾ ಹಾಡುಗಳನ್ನು  ಗಮನಿಸಿದಾಗ  ಸಾಹಿತ್ಯಕ್ಕಿಂತಲೂ ಹೆಚ್ಚಾಗಿ ಹಾಡಿನ ಸರಳವಾದ ಧಾಟಿ  ಅವು ಜನಪ್ರಿಯವಾಗುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಕಂಡು ಬರುತ್ತದೆ.  ಹಿಂದಿ ಹಾಡುಗಳಿಗಂತೂ  ಈ ಮಾತು  ಹೆಚ್ಚು ಅನ್ವಯವಾಗುತ್ತದೆ. ಆದರೆ ಜನಮನ ಗೆದ್ದ ಈ ಹಾಡಿನ ಮಟ್ಟಿಗೆ ಆರ್.ಎನ್ ಜಯಗೋಪಾಲ್ ಅವರ ಸಾಹಿತ್ಯ ಮೇಲೋ ರಂಗರಾವ್ ಅವರ ಟ್ಯೂನ್ ಮೇಲೋ ಎಂದು ನಿರ್ಧರಿಸುವುದು ಕಷ್ಟ.  ಭೀಮ್‌ಪಲಾಸ್ ರಾಗಾಧಾರಿತ ಈ ಟ್ಯೂನ್  ಅಷ್ಟು ಸುಲಭದ್ದೇನೂ ಅಲ್ಲ. ತಾಳಕ್ಕಿಂತ ಪದ್ಯ ಮೊದಲು ಶುರುವಾಗುವ ಅದೀತ ಪದ್ಧತಿಯಲ್ಲಿ ಪಲ್ಲವಿ ಇದ್ದರೆ ಚರಣ ತಾಳದ ನಂತರ ಸಾಹಿತ್ಯದ ಸಾಲು ಆರಂಭವಾಗುವ ಅನಾಗತದಲ್ಲಿದೆ.  ಕೆಲವು ಸಾಲುಗಳು ಸಮದಲ್ಲೂ ಇವೆ. ನಡುನಡುವೆ pauseಗಳು ಬೇರೆ. ಸಿನಿಮಾ ಭಾಷೆಯಲ್ಲಿ ಹೇಳುವುದಾದರೆ ಈ  ಹಾಡಿನ ‘ಮೀಟರ್’ ಬಲು ಕ್ಲಿಷ್ಟಕರವಾದದ್ದು. ಇದಕ್ಕೆ ಸರಿಹೊಂದುವಂತೆ ಇಂತಹ ಸರಳ ಸಾಲುಗಳನ್ನು ಜಯಗೋಪಾಲ್ ಹೇಗೆ ಬರೆದರೆಂಬುದೇ ಸೋಜಿಗದ ವಿಚಾರ.  ಅವರು ಮೊದಲೇ ಬರೆದಿದ್ದ ಹಾಡಿಗೆ ರಂಗರಾವ್ ಆ ಮೇಲೆ ರಾಗ ಸಂಯೋಜಿಸಿರುವ ಸಾಧ್ಯತೆಯೂ ಕಮ್ಮಿ.  ಪಲ್ಲವಿಯ ಸಾಲುಗಳಲ್ಲಿ 14 ಮತ್ತು 19 ಮಾತ್ರೆಗಳು ಹಾಗೂ ಚರಣದ ಸಾಲುಗಳಲ್ಲಿ 21, 21 ಮತ್ತು 20 ಮಾತ್ರೆಗಳಿರುವುದು ಇದಕ್ಕೆ ಕಾರಣ.  ಜಯಗೋಪಾಲ್ ಸಂಗೀತವನ್ನೂ ಬಲ್ಲವರಾಗಿದ್ದರಿಂದ ಮೊದಲೇ ಸಿದ್ಧ ಪಡಿಸಿದ ಕ್ಲಿಷ್ಟ ಟ್ಯೂನಿಗೆ ಸರಿ ಹೊಂದುವಂತೆ ಸರಳ ಸಾಹಿತ್ಯದ ಹಾಡು ಬರೆದಿರಬಹುದೆಂದು ಊಹಿಸಬೇಕಾಗುತ್ತದೆ.

ಹೂವು ಚೆಲುವೆಲ್ಲ ನಂದೆಂದಿತು -14
ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು -19

ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು -21
ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು - 21
ಹೆಣ್ಣು  ವೀಣೆ ಹಿಡಿದ ಶಾರದೆಯೆ ಹೆಣ್ಣೆಂದಿತು - 20

ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು
ಕೆದರುತೆ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು
ಹೆಣ್ಣು ನಾಟ್ಯದರಸಿ ಪಾರ್ವತಿಯೆ ಹೆಣ್ಣೆಂದಿತು

ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು
ಸುರಿಸುವೆ ಮಳೆ ತೊಳೆಯುವೆ ಕೊಳೆ ಸಮನಾರೆನಗೆಂತು
ಹೆಣ್ಣು ಪಾಪ ತೊಳೆವ ಸುರಗಂಗೆ ಹೆಣ್ಣೆಂದಿತು

ಇದರ ಸಾಹಿತ್ಯದಲ್ಲೊಂದು ಸೂಕ್ಷ್ಮವಿದೆ.  ಮೊದಲ ಸಾಲಲ್ಲಿ ಹೂವಿನ ಹೇಳಿಕೆ ನಂದೆಂದಿತು ಎಂದು ಪ್ರತ್ಯಕ್ಷ ವಚನ(direct speech)ನಲ್ಲಿದ್ದರೆ ಎರಡನೇ ಸಾಲಿನ ಹೆಣ್ಣಿನ ಹೇಳಿಕೆ ಚೆಲುವೇ ತಾನೆಂದಿತು ಎಂದು ಪರೋಕ್ಷ ವಚನ(indirect speech)ನಲ್ಲಿದೆ. ಹಾಗೆಯೇ ಮೊದಲ ಚರಣದಲ್ಲಿ ಕೋಗಿಲೆ ನಾನೇ ದೊರೆ ಎಂದು ಪ್ರತ್ಯಕ್ಷ ವಚನದಲ್ಲಿ ಹೇಳುತ್ತದೆ. 2 ಮತ್ತು  3ನೇ ಚರಣಗಳಲ್ಲಿ ನವಿಲು ಮತ್ತು ಮುಗಿಲುಗಳ ನಿರೂಪಣೆ ತಾನೇ ಎಂದು ಪರೋಕ್ಷ ವಚನದಲ್ಲಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವುದೇ ಅಥವಾ ಕಣ್ತಪ್ಪಿನಿಂದ ಆದುದೇ ತಿಳಿಯದು.

ಪಿ.ಸುಶೀಲಾ ಅವರು 8 ಅಕ್ಷರ ಕಾಲದ ಏಕತಾಳದಲ್ಲಿರುವ ಈ ಹಾಡನ್ನು ಕಪ್ಪು ಎರಡರ ಹಿತವಾದ ಶ್ರುತಿಯಲ್ಲಿ ಅತಿ ಸುಂದರವಾಗಿ ಹಾಡಿ ಅಮರಗೊಳಿಸಿದ್ದಾರೆ.  ಆದರೆ ಒಂದೆಡೆ  ಶಾರದೆಯೆ ಪದದ ಉಚ್ಚಾರ  ಶಾರದಯೆ ಎಂದು ಕೇಳಿಸುತ್ತದೆ.  ತೆಲುಗಿನಲ್ಲಿ ಬರೆದುಕೊಂಡು ಹಾಡುವಾಗ  ಹೀಗಾಗಿರಬಹುದು.  ರೆಕಾರ್ಡಿಂಗ್ ಆದ ಮೇಲೆ ಯಾರೂ ಗಮನವಿಟ್ಟು ಆಲಿಸಿಲ್ಲವೋ ಅಥವಾ ಅಷ್ಟು ದೊಡ್ಡ ಕಲಾವಿದೆಗೆ ಹೇಗೆ ಹೇಳುವುದು ಎಂದು ಸುಮ್ಮನಾದರೋ ಗೊತ್ತಿಲ್ಲ. ಅಥವಾ ಹೂವ ಮುಡಿದು ಚೆಲುವೇ ತಾನೆಂದ ಹೆಣ್ಣಿಗೆ ಇದು ದೃಷ್ಟಿ ಬೊಟ್ಟಿನಂತಿರಲಿ ಅಂದುಕೊಂಡಿರಲೂಬಹುದು! ಒಲವೆ ಜೀವನ ಸಾಕ್ಷಾತ್ಕಾರ ಹಾಡಿನಲ್ಲೂ ಕೆಲವೆಡೆ ಮರಯದ ಎಂದು ಕೇಳಿಸುವುದನ್ನು ಅನೇಕರು ಗಮನಿಸಿರಬಹುದು.  ವೀರಕೇಸರಿ ಚಿತ್ರದ ಸ್ವಾಭಿಮಾನದ ನಲ್ಲೆ ಹಾಡಿನಲ್ಲಿ ಒಂದೆಡೆ ಘಂಟಸಾಲ ಅವರು ಏಕೆ ಸುಮ್ಮನೆ ಬದಲು ಏಕಿ ಸುಮ್ಮನೆ ಅಂದಿರುವುದೂ ಉಂಟು. ಆದರೆ ಕನ್ನಡ ನಾಡಿನಲ್ಲೇ ಹುಟ್ಟಿ ಬೆಳೆದವರೊಬ್ಬರು ಬೇಧ ತೋರದು ಎಂದು ಉಚ್ಚರಿಸಿರುವುದರ ಮುಂದೆ ಇವು ಏನೂ ಅಲ್ಲ!

ಈ ಹಾಡಿನ ಮಧ್ಯಂತರ ಸಂಗೀತ ಅಂದರೆ interludeಗಳು ಶಂಕರ್ ಜೈಕಿಶನ್ ಹಾಡುಗಳಲ್ಲಿದ್ದಂತೆ ಸುಲಭವಾಗಿ ನೆನಪಿಟ್ಟುಕೊಳ್ಳುವಂಥವೇನೂ ಅಲ್ಲ. ಆದರೆ ಚರಣದ ಮಧ್ಯದಲ್ಲಿ ಬರುವ bridge music ಹಾಡಿನ ಅವಿಭಾಜ್ಯ ಅಂಗವಾಗಿ ಹೋಗಿದೆ.  ಅದಿಲ್ಲದೆ ಹಾಡನ್ನು ನುಡಿಸಲೇ ಆಗುವುದಿಲ್ಲ!  ಗ್ರಾಮಫೋನ್ ತಟ್ಟೆಯ ಹಾಡಿನಲ್ಲಿ ಎರಡನೇ ಚರಣದಲ್ಲಿ ಈ bridge music ಮತ್ತು ಸಾಲುಗಳ ಪುನರಾವರ್ತನೆ ಇಲ್ಲ.  ಚಿತ್ರದಲ್ಲಿರುವ ಹಾಡಿನ ಎರಡನೇ ಚರಣಕ್ಕೆ bridge music ಬದಲಿಗೆ ಗೆಜ್ಜೆಯ ಸದ್ದು ಬಳಸಲಾಗಿದೆ.  ಅಲ್ಲದೆ ಒಂದು ಮತ್ತು ಮೂರನೆ ಚರಣದಲ್ಲಿ ಪುನರಾವರ್ತಿತವಾಗುವ ಸಾಲು ಗಮಕದೊಂದಿಗೆ ಕೊನೆಯಾದರೆ  ಎರಡನೆ ಚರಣದಲ್ಲಿ ಮೊದಲ ಸಲ ಗಮಕ ಇದ್ದು ಪುನರಾವರ್ತನೆ ಸರಳವಾಗಿ ಕೊನೆಗೊಳ್ಳುತ್ತದೆ.  ಹಾಡಿನ ಕೊನೆಯಲ್ಲಿ ಬರುವ ಸಾಮಗಪಮಪಾನೀದಾಪಮದನೀಪಾ ಎಂಬ ಆಲಾಪ ಬಲು ಚಂದ.

ಇಲ್ಲಿ ಹಾಡಿನ ಗ್ರಾಮಫೋನ್ ವರ್ಷನ್ ಆಲಿಸಬಹುದು.


ಇದು ಸಿನಿಮಾದಲ್ಲಿದ್ದ  ವರ್ಷನ್.


ಈ ಹಾಡಿಗೆ ಸಂಬಂಧಿಸಿದ  ಇನ್ನೊಂದು ಘಟನೆ ನನಗೆ ನೆನಪಿದೆ.  ನಮ್ಮ ಊರಿನ ಗುಂಡಿ ಲಕ್ಷ್ಮೀನಾರಾಯಣ ದೇವಸ್ಥಾನದ ದೀಪೋತ್ಸವದ ಸಂದರ್ಭದಲ್ಲಿ  ನಡೆಯುತ್ತಿದ್ದ ಅಷ್ಟಸೇವೆಗಳಲ್ಲಿ ಸಂಗೀತವೂ ಒಂದು. ಆ ವಿಭಾಗದ ಜವಾಬ್ದಾರಿಯನ್ನು ಹೆಚ್ಚಾಗಿ ನಿಭಾಯಿಸುತ್ತಿದ್ದುದು ಬತ್ರಬೈಲು ತಾಮ್ಹಣ್‌ಕರ್ ಕುಟುಂಬದ ಪ್ರಸಿದ್ಧ ಕವಿ ಮತ್ತು ಸಂಗೀತ ಕಲಾವಿದರಾಗಿ ಉಪಾಧ್ಯಾಯ ವೃತ್ತಿಯನ್ನೂ ಮಾಡುತ್ತಿದ್ದ ಬಿ.ರಾಮಚಂದ್ರ ಭಟ್ ಅರ್ಥಾತ್ ನಮ್ಮೆಲ್ಲರ ರಾಮಚಂದ್ರ ಮಾಸ್ಟ್ರು.  ಸಾಮಾನ್ಯವಾಗಿ ಅಷ್ಟಸೇವೆಯಲ್ಲಿ ದಾಸರ ಪದ ಅಥವಾ ಕೀರ್ತನೆಗಳನ್ನು ಹಾಡುವುದು ರೂಢಿಯಾದರೂ ಅವರು ಒಮ್ಮೊಮ್ಮೆ ಅರಳಿದ ನಗುಮೊಗದಾ ಸುಮ ಚಂದ ಮುಂತಾದ ತಮ್ಮ ಸ್ವಂತ ರಚನೆಗಳನ್ನೂ ಹಾಡುವುದಿತ್ತು. ಆದರೆ  1968ರಲ್ಲಿ ಅವರು ಹೂವು ಚೆಲುವೆಲ್ಲ ನಂದೆಂದಿತು ಹಾಡನ್ನು ತಮ್ಮ ಮಕ್ಕಳಿಂದ ದೇವರ ಮುಂದೆ ಅಷ್ಟಸೇವೆಯ ಭಾಗವಾಗಿ ಹಾಡಿಸಿದ್ದರು! ಇದು ಅನೇಕ ಸಂಪ್ರದಾಯಸ್ಥರ ಕಣ್ಣು ಕೆಂಪಗಾಗುವಂತೆ ಮಾಡಿತ್ತು.  ಆದರೆ  ತಾವು ಬೋಧಿಸುತ್ತಿದ್ದ ಶಾಲೆಯಲ್ಲಿ ಸಿನಿಮಾ ಹಾಡುಗಳಿಗೆ ಕಟ್ಟುನಿಟ್ಟಿನ ನಿಷೇಧ ಹೇರಿದ್ದ  ಅವರು ಓರ್ವ ಸಿನಿಮಾ ಕವಿಯ ರಚನೆಯನ್ನು ದೇವರ ಮುಂದೆ ಹಾಡಲು ಯೋಗ್ಯವೆಂದು ಭಾವಿಸಿದ್ದು ಆ ಗೀತೆಗೆ ಸಂದ ವಿಶೇಷ ಗೌರವವೇ ಸೈ.


ಸಮಾರಂಭವೊಂದರಲ್ಲಿ ನಾನು ನುಡಿಸಿದ ಈ ಹಾಡಿನ ವೀಡಿಯೊ sub titles ರೂಪದ ಸ್ವರಲಿಪಿ ಸಮೇತ ಇಲ್ಲಿದೆ.