ಸುಮಾರು 1970ಕ್ಕಿಂತ ಮೊದಲು ಜನಿಸಿದವರಲ್ಲಿ ಚಂದಮಾಮದ ಚಿತ್ರಗಳನ್ನು ಇಷ್ಟಪಡದಿರುವವರು ಯಾರೂ ಇರಲಾರರು. ಹಳೆಯ ಸಂಚಿಕೆಯೊಂದು ಸಿಕ್ಕಿದರೆ ಮೊದಲು ಮುಖಪುಟದ ಚಿತ್ರವನ್ನು ಆಸ್ವಾದಿಸಿ ಹಳೆಯ ನೆನಪುಗಳನ್ನು ಕೆದಕುವ ಜಾಹೀರಾತುಗಳನ್ನೆಲ್ಲ ನೋಡಿ ಒಳಗಿನ ಪುಟಗಳಲ್ಲಿರುವ ಚಿತ್ರಗಳ ಮೇಲೆ ಕಣ್ಣಾಡಿಸುತ್ತಾ ಕಥೆಗಳನ್ನು ಓದುವುದು ಅನೇಕರಿಗೆ ಇಂದಿಗೂ ಒಂದು ಆನಂದದಾಯಕ ಅನುಭವ.
ಜುಲೈ 1947ರಲ್ಲಿ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಚಂದಮಾಮ ಆರಂಭವಾದಾಗ ನಮಗೆಲ್ಲ ಚಿತ್ರಾ ಎಂದೇ ಪರಿಚಿತರಾಗಿರುವ ಟಿ.ವಿ. ರಾಘವುಲು ಒಬ್ಬರೇ ಚಿತ್ರಗಳನ್ನು ಬರೆಯುತ್ತಿದ್ದರು. ಈ ಚಿತ್ರಾ ಅಂದರೆ ಯಾರೋ ಹುಡುಗಿ ಇರಬೇಕು ಎಂದು ಮೋಸ ಹೋದವರೂ ಅನೇಕರಿದ್ದಾರೆ. ಮುಂದೆ ಒಂದು ವರ್ಷದಲ್ಲಿ ಅಂದರೆ ಜುಲೈ 1948ರಲ್ಲಿ ಚಂದಮಾಮದ ಕನ್ನಡ ಆವೃತ್ತಿ ಆರಂಭವಾಗುವಷ್ಟರಲ್ಲಿ ಕನ್ನಡಿಗ ಕಲಾವಿದ ಎಂ.ಟಿ.ವಿ. ಆಚಾರ್ಯ ಕೂಡ ಆ ಸಂಸ್ಥೆಗೆ ಸೇರ್ಪಡೆಯಾಗಿದ್ದರು. ಅವರು ಚಿತ್ರಾ ಅವರೊಂದಿಗೆ ಚಿತ್ರಗಳನ್ನು ಬರೆಯುವುದಲ್ಲದೆ ಮುಂದಿನ ಅನೇಕ ವರ್ಷಗಳ ಕಾಲ ಕನ್ನಡ ಆವೃತ್ತಿಯ ಸಂಪಾದಕತ್ವವನ್ನೂ ವಹಿಸಿದರು. ಮೊದಲ ಕೆಲವು ವರ್ಷಗಳು ಎಂ.ಟಿ.ವಿ. ಆಚಾರ್ಯ ಅವರು ತ್ರಿವರ್ಣ ಮುಖಚಿತ್ರ ಮತ್ತು ಚಿತ್ರಾ ಅವರು ಒಳಗಿನ ಏಕ ವರ್ಣದ ರೇಖಾಚಿತ್ರಗಳು ಹಾಗೂ ಹಿಂಬದಿಯ ತ್ರಿವರ್ಣ ಚಿತ್ರ ರಚಿಸುತ್ತಿದ್ದರು. ಈ ಕಾಲಘಟ್ಟದಲ್ಲಿ ಒಳಗಿನ ಚಿತ್ರಗಳಿಗೆ ಯಾವುದೇ ನಿರ್ದಿಷ್ಟ ವಿನ್ಯಾಸವೇನೂ ಇರಲಿಲ್ಲ.
1953ರಲ್ಲಿ ಕೆ.ಸಿ.ಶಿವಶಂಕರನ್ ಅರ್ಥಾತ್ ಶಂಕರ್ ಅವರ ಪ್ರವೇಶವಾಯಿತು. ಆ ನಂತರ ಚಿತ್ರಾ ಅವರೊಂದಿಗೆ ಒಳಗಿನ ಚಿತ್ರಗಳನ್ನು ಬರೆಯುವುದಲ್ಲದೆ 1956ರ ವರೆಗೆ ಮುಖಚಿತ್ರ ಬರೆಯುವ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದರು. ಶಂಕರ್ - ಜೈಕಿಶನ್ ಜೋಡಿ ದಶಕಗಳ ಕಾಲ ಸಿನಿಮಾ ಸಂಗೀತ ರಂಗವನ್ನು ಆಳಿದಂತೆ ಇಲ್ಲಿ ಶಂಕರ್ ಮತ್ತು ಚಿತ್ರಾ ಅವರ ಜೋಡಿ ಚಂದಮಾಮದ ಸುದೀರ್ಘ ಸುವರ್ಣಯುಗವೊಂದನ್ನು ಸೃಷ್ಟಿಸಿತು. ಶಂಕರ್ ಮತ್ತು ಚಿತ್ರಾ ಅವರ ಶೈಲಿ ಎಷ್ಟು ಏಕರೂಪವಾಗಿತ್ತೆಂದರೆ ಅನೇಕ ಸಲ ಮೂಲೆಯಲ್ಲಿ ಚಿಕ್ಕ ಅಕ್ಷರದಲ್ಲಿರುತ್ತಿದ್ದ ಹೆಸರು ನೋಡದಿದ್ದರೆ ಯಾರ ಚಿತ್ರವೆಂದು ಗುರುತಿಸುವುದು ಕಷ್ಟವಾಗುತ್ತಿತ್ತು. ಈ ಸಮಯದಲ್ಲಿ ಕೆಲವು ಅಲಿಖಿತ ನಿಯಮಗಳೂ ರೂಪುಗೊಂಡವು.
ತ್ರಿವರ್ಣ ಮುಖಚಿತ್ರದ ರಚನೆ ಶಂಕರ್ ಮತ್ತು ಹಿಂಬದಿಯ ವರ್ಣಚಿತ್ರದ ರಚನೆ ಚಿತ್ರಾ ಅವರ ಜವಾಬ್ದಾರಿಯಾಯಿತು. ಮುಖಚಿತ್ರ ಮಹಾಭಾರತದ ಯಾವುದಾದರೊಂದು ಸಂದರ್ಭಕ್ಕೆ ಸಂಬಂಧಿಸಿದ್ದಾಗಿರುತ್ತಿತ್ತು. ಒಳಗಿನ ಒಂದು ಪುಟದಲ್ಲಿ ಈ ಕುರಿತ ಕಿರು ವಿವರಗಳಿರುತ್ತಿದ್ದವು. ಹಿಂಬದಿಯ ಚಿತ್ರ ಯಾವುದಾದರೊಂದು ಧಾರಾವಾಹಿ ಕಥೆಯ ಸಂದರ್ಭದ್ದಾಗಿರುತ್ತಿತ್ತು. ಒಳಗಿನ ಕಥಾಚಿತ್ರಗಳಿಗೂ ನಿರ್ದಿಷ್ಟ ವಿನ್ಯಾಸ ನಿರ್ಧರಿಸಲ್ಪಟ್ಟಿತು. ಅಲ್ಲಿವರೆಗೆ ಚಿತ್ರಗಳು ಹೊಂದಿರುತ್ತಿದ್ದ ಮಸುಕಾದ ಬಣ್ಣದ ಬದಲಿಗೆ ವ್ಯಕ್ತಿಗಳ ಉಡುಪು, ಮರ ಗಿಡ ಮುಂತಾದ ಭಾಗಗಳಿಗೆ ಕಡು ಬಣ್ಣದ ಬಳಕೆ ಆರಂಭವಾಯಿತು. ಚಿತ್ರಗಳ ಸುತ್ತಲೂ ಬಣ್ಣದ ಚೌಕಟ್ಟು ಕಾಣಿಸಿಕೊಂಡು ಸೊಬಗು ಹೆಚ್ಚಿತು. ಹಳದಿ, ನೀಲಿ, ತಿಳಿಗೆಂಪು, ಹಸಿರು ಮುಂತಾದ ಬಣ್ಣಗಳನ್ನು ಈ ಚಿತ್ರಗಳಿಗೆ ಬಳಸಲಾಗುತ್ತಿತ್ತು. ಬಣ್ಣವನ್ನು ಬೇರೆ ಬೇರೆ ಸಾಂಧ್ರತೆಯಲ್ಲಿ ಮುದ್ರಿಸುವ ಸೌಲಭ್ಯವಿಲ್ಲದ್ದರಿಂದ ಕಡು ಬಣ್ಣದ ಸಮಾನಾಂತರ ರೇಖೆಗಳನ್ನು ಬಳಸಿ ತೆಳು ಛಾಯೆಯ ಭ್ರಮೆ ಉಂಟುಮಾಡಲಾಗುತ್ತಿತ್ತು. ಕಪ್ಪು ಬಣ್ಣದ ಸಪುರ ರೇಖೆಗಳ ವಿನ್ಯಾಸದಿಂದ ಚಿತ್ರಗಳಲ್ಲಿ ಜೀವಂತಿಕೆ ತುಂಬಲಾಗುತ್ತಿತ್ತು. ಮಾನವಾಕೃತಿಗಳ ಅಂಗಾಂಗಗಳು ಪ್ರಮಾಣಬದ್ಧವಾಗಿರುತ್ತಿದ್ದು ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನೂ ಚಿತ್ರಿಸಲಾಗುತ್ತಿತ್ತು. Perspective vision ತಂತ್ರವನ್ನು ಅನುಸರಿಸುತ್ತಿದ್ದುದರಿಂದ ಚಿತ್ರಗಳು ಮೂರು ಆಯಾಮಗಳ ಅನುಭವ ನೀಡುತ್ತಿದ್ದವು. ಅಶ್ವಗಳು, ಇತರ ಪ್ರಾಣಿ ಪಕ್ಷಿಗಳ ಚಿತ್ರಗಳು life like ಆಗಿರುತ್ತಿದ್ದು ಅವು ಜೀವಂತವಾಗಿ ಎದ್ದು ಬರುತ್ತವೇನೋ ಅನ್ನಿಸುವಂತಿರುತ್ತಿದ್ದವು. ಪದ್ಯರೂಪದಲ್ಲಿ ಪ್ರಕಟವಾಗುತ್ತಿದ್ದ ಪಂಚತಂತ್ರದ ಕಥೆಗಳನ್ನು ನಾವು ಅಷ್ಟಿಷ್ಟು ಅರ್ಥ ಮಾಡಿಕೊಳ್ಳುತ್ತಿದ್ದುದು ಚಿತ್ರಗಳನ್ನು ನೋಡಿಯೇ.
ಪ್ರತೀ ಕಥೆಗೆ ಚಿಕ್ಕ ಶೀರ್ಷಿಕೆ ಚಿತ್ರವೊಂದು ಇರುತ್ತಿದ್ದು ಶೀರ್ಷಿಕೆಯನ್ನು ಸಾಮಾನ್ಯವಾಗಿ ಚಿತ್ರದ ಕೆಳಭಾಗದಲ್ಲಿ ಬರೆಯಲಾಗುತ್ತಿತ್ತು. ಕೆಲವೊಮ್ಮೆ ಇದು ಚಿತ್ರದ ಮಧ್ಯದಲ್ಲೂ ಇರುವುದಿತ್ತು. ನಾವಿಕ ಸಿಂದಬಾದ್ ಮತ್ತು ಬೇತಾಳ ಕಥೆಗಳ ಶೀರ್ಷಿಕೆ ಚಿತ್ರ ಪುಟವಿಡೀ ವ್ಯಾಪಿಸಿರುತ್ತಿದ್ದು ಕಥೆಯ ಆರಂಭ ಚಿತ್ರದ ಒಂದು ಭಾಗವೇ ಆಗಿರುತ್ತಿತ್ತು. ಕಥೆಯ ಹರಹು ಇರುವ ಪುಟಗಳ ಕೆಳಭಾಗದಲ್ಲಿ ಪುಟದ ಮೂರನೇ ಒಂದಂಶ ಅಳತೆಯ ಚಿತ್ರ, ಅಥವಾ ಎಡಪುಟವಾದರೆ ಬಲ ಮೇಲ್ಮೂಲೆಯಲ್ಲಿ, ಬಲ ಪುಟವಾದರೆ ಎಡ ಮೇಲ್ಮೂಲೆಯಲ್ಲಿ ಕಾಲಂಶ ಅಳತೆಯ ಚಿತ್ರವಿರುತ್ತಿತ್ತು. ಕೆಲವೊಮ್ಮೆ ಇಡೀ ಪುಟವನ್ನಾವರಿಸಿದ ಚಿತ್ರವೂ ಇರುತ್ತಿತ್ತು. ಕಥೆಯ ಕೊನೆಗೆ ಪುಟದ ಕೆಳಭಾಗದಲ್ಲಿ ಎಂಟನೇ ಒಂದಂಶ ಅಳತೆಯ ಚಿತ್ರ ಇರುತ್ತಿತ್ತು. ಹೆಚ್ಚಾಗಿ ಇದು ಕಪ್ಪು ಬಣ್ಣ ಪ್ರಧಾನವಾಗುಳ್ಳ silhouette ಶೈಲಿಯದ್ದಾಗಿರುತ್ತಿತ್ತು.
ಶಂಕರ್ ಮತ್ತು ಚಿತ್ರಾ ಈರ್ವರೂ ಕಥಾ ಪಾತ್ರಗಳ ಉಡುಪುಗಳತ್ತ ವಿಶೇಷ ಗಮನ ಹರಿಸುತ್ತಿದ್ದರು. ಪುರಾಣ, ಜಾನಪದ, ಅರೇಬಿಯನ್ , ಗ್ರೀಕ್ ಕಥೆಗಳ ಚಿತ್ರಗಳಲ್ಲಿ ಪಾತ್ರಗಳ ಉಡುಪುಗಳು ಆಯಾ ದೇಶ ಕಾಲಕ್ಕೆ ಸರಿಹೊಂದುವಂತಹವು ಇರುತ್ತಿದ್ದವು. ಜಾನಪದ ಕಥೆಗಳ ರಾಜರು, ಮಂತ್ರಿಗಳು, ರಾಜಕುಮಾರರು, ಅಧಿಕಾರಿಗಳು ಇತ್ಯಾದಿ ಲೆಗ್ ಇನ್ ಧರಿಸಿ ಉದ್ದ ತೋಳಿನ ಮೊಣಕಾಲುವರೆಗಿನ ಗೌನ್ ಧರಿಸುತ್ತಿದ್ದರು. ನಡುವಿಗೆ ಖಡ್ಗದ ಒರೆಯುಳ್ಳ ಪಟ್ಟಿ ಇರುತ್ತಿತ್ತು. ಜನ ಸಾಮಾನ್ಯರು ಹೆಚ್ಚಾಗಿ ಕಚ್ಚೆ ಪಂಚೆ ಧರಿಸಿ ಮೇಲಂಗಿ ತೊಡುತ್ತಿದ್ದರು. ಅವರು ಚಿತ್ರಿಸುತ್ತಿದ್ದ ಲಲನೆಯರು ಅಪೂರ್ವ ಲಾವಣ್ಯವತಿಯರಾಗಿರುತ್ತಿದ್ದರು. ಆದರೆ ಬೆಡಗಿನ ಹೆಸರಲ್ಲಿ ಎಲ್ಲೂ ವಿಕಾರಕ್ಕೆ ಆಸ್ಪದ ಇರಲಿಲ್ಲ. ಎನ್.ಟಿ. ರಾಮರಾವ್ ಸೇರಿದಂತೆ ತೆಲುಗು ಚಿತ್ರರಂಗದ ಪ್ರಮುಖರು ಜಾನಪದ ಸಿನಿಮಾ ವಿಷಯದಲ್ಲಿ ಚಂದಮಾಮದ ಚಿತ್ರಗಳನ್ನು ಆಧಾರವಾಗಿಟ್ಟುಕೊಳ್ಳುತ್ತಿದ್ದರು ಎಂದು ಕೇಳಿದ್ದೇನೆ. ಇತ್ತೀಚಿನ ಬಾಹುಬಲಿ ಚಿತ್ರದಲ್ಲೂ ಚಂದಮಾಮದ ಪ್ರಭಾವ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ.
‘ಶಂಕರ್ ಮತ್ತು ಚಿತ್ರಾ ಚಂದಮಾಮವೆಂಬ ಚಕ್ಕಡಿಯ ಎರಡು ಎತ್ತುಗಳು. ಇವರಿಲ್ಲದಿರುತ್ತಿದ್ದರೆ ಈ ಗಾಡಿ ಹಳ್ಳಿ ಹಳ್ಳಿಗಳನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಚಂದಮಾಮದ ಒಡೆಯ ಬಿ. ನಾಗಿ ರೆಡ್ಡಿ ಹೇಳುತ್ತಿದ್ದರಂತೆ. ಇವರಿಬ್ಬರೂ ಫೋಟೋಗ್ರಾಫಿಯಲ್ಲೂ ಆಸಕ್ತಿ ಹೊಂದಿದ್ದು ಆಗಾಗ ಪಾಶ್ಚಾತ್ಯ ಸಿನಿಮಾಗಳನ್ನು ವೀಕ್ಷಿಸಿ ಅವುಗಳಲ್ಲಿ ಕಂಡ ಉತ್ತಮ ಅಂಶಗಳನ್ನು ತಮ್ಮ ಚಿತ್ರಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಫೋಟೋಗ್ರಾಫಿ ತಂತ್ರಗಳಾದ close up, long shot, birds eye shot ಇತ್ಯಾದಿಗಳನ್ನೂ ತಮ್ಮ ಚಿತ್ರಗಳಲ್ಲಿ ಪ್ರಯೋಗಿಸುತ್ತಿದ್ದರು. ಕೆಲವು ಚಿತ್ರಗಳಲ್ಲಿ ಫ್ರೇಮಿನ ಹೊರಗಿರುವ ವ್ಯಕ್ತಿಯ ನೆರಳನ್ನೂ ಚಿತ್ರಿಸುತ್ತಿದ್ದುದು ಅವರು ನೈಜತೆಗೆ ಕೊಡುತ್ತಿದ್ದ ಪ್ರಾಧಾನ್ಯದ ದ್ಯೋತಕವಾಗಿದೆ. ಚಿತ್ರಾ ಅವರು ಬ್ಲಾಕ್ ತಯಾರಿಯಲ್ಲೂ ಪರಿಣತಿ ಹೊಂದಿದ್ದರಂತೆ.
ಹೆಚ್ಚಾಗಿ ದೀರ್ಘ ಧಾರಾವಾಹಿ ಕಥೆಗಳ ಚಿತ್ರಗಳನ್ನು ಚಿತ್ರಾ ಅವರೇ ಬರೆಯುತ್ತಿದ್ದರು. ಫೆಬ್ರವರಿ 1954ರಲ್ಲಿ ಧೂಮಕೇತುವಿನೊಂದಿಗೆ ತ್ರಿವರ್ಣ ಚಿತ್ರಗಳೊಂದಿಗಿನ ಧಾರಾವಾಹಿಗಳ ಯುಗ ಆರಂಭವಾಯಿತು. ತ್ರಿವರ್ಣ ಚಿತ್ರಗಳ ಸುತ್ತ ಬಣ್ಣದ ಪಟ್ಟಿ ಇರುತ್ತಿರಲಿಲ್ಲ. ತೆಳು ವರ್ಣದ ಪರಿಣಾಮ ಉಂಟುಮಾಡಲು ಸಮಾನಾಂತರ ಗೆರೆಗಳ ಬದಲಿಗೆ ಚುಕ್ಕಿಗಳನ್ನು ಬಳಸಲಾಗುತ್ತಿತ್ತು. ಈ ಧಾರಾವಾಹಿಗಳ ಅಕ್ಷರಗಳು ನೀಲಿ ಬಣ್ಣದಲ್ಲಿರುತ್ತಿದ್ದವು. ಶಂಕರ್ ಅವರು ಧಾರಾವಾಹಿಗಳಿಗೆ ಬಣ್ಣದ ಚಿತ್ರ ಬರೆಯಲು 70ರ ದಶಕದಲ್ಲಿ ರಾಮಾಯಣ ಸರಣಿ ಆರಂಭವಾಗುವ ವರೆಗೆ ಕಾಯಬೇಕಾಯಿತು. ಆದರೆ ಕೀಲುಕುದುರೆ, ಆಲೀಬಾಬ, ತಾಯಿಮಗಳು ಮುಂತಾದ ಧಾರಾವಾಹಿಗಳಿಗೆ ಏಕವರ್ಣದ ಚಿತ್ರಗಳನ್ನು ಶಂಕರ್ ಅವರೇ ಬರೆದರು. 1956ರ ಮಧ್ಯಭಾಗದಲ್ಲಿ ಮುಖಚಿತ್ರಗಳ ಜವಾಬ್ದಾರಿಯನ್ನು ಮತ್ತೆ ಎಂ.ಟಿ.ವಿ. ಆಚಾರ್ಯ ವಹಿಸಿಕೊಂಡರು.
ಸಪ್ಟಂಬರ್ 1955ರಲ್ಲಿ ಬೇತಾಳ ಕಥೆಗಳು ಆರಂಭವಾದಾಗ ತ್ರಿವಿಕ್ರಮನು ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಶೀರ್ಷಿಕೆ ಚಿತ್ರವನ್ನು ಚಿತ್ರಾ ಅವರು ರಚಿಸಿದರು. 1960 ಮತ್ತು 62ರಲ್ಲಿ ಅವರೇ ಬದಲಿಸಿದರು. ವಾಸ್ತವವಾಗಿ ಮೂಲದಲ್ಲಿ ಬೇತಾಳ ಪಂಚವಿಂಶತಿ ಎಂಬ ಹೆಸರಲ್ಲಿ ಬರೇ 25 ಕಥೆಗಳಿದ್ದರೂ ಚಂದಮಾಮದಲ್ಲಿ ಕಾಲ್ಪನಿಕ ಕಥೆಗಳೊಂದಿಗೆ ಈ ಸರಣಿ ಅನಿರ್ದಿಷ್ಟವಾಗಿ ಮುಂದುವರೆಯಿತು. 1964ರಲ್ಲಿ ಶಂಕರ್ ಬೇರೆ ಶೀರ್ಷಿಕೆ ಚಿತ್ರ ರಚಿಸಿದರು. ಚಂದಮಾಮ ಜೀವಂತ ಇರುವವರೆಗೂ ವರ್ಣಮಯ ಅವತಾರದೊಂದಿಗೆ ಈ ಚಿತ್ರವೇ ಮುಂದುವರೆಯಿತು.
ಇತ್ತೀಚೆಗೆ ಅನೇಕ ಕಪ್ಪು ಬಿಳುಪು ಚಲನಚಿತ್ರಗಳು ಬಣ್ಣ ಬಳಿದುಕೊಂಡು ಮತ್ತೆ ಬಿಡುಗಡೆಯಾಗುತ್ತಿವೆಯಲ್ಲವೇ. ಮೊದಲ ಧಾರಾವಾಹಿ ಅವಳಿ ಮಕ್ಕಳ ಕಥೆಯನ್ನು ವರ್ಣಚಿತ್ರಗಳೊಂದಿಗೆ 1974ರಲ್ಲಿ ಮತ್ತೆ ಪ್ರಕಟಿಸುವ ಮೂಲಕ ಚಂದಮಾಮ ಈ ಪ್ರಯೋಗವನ್ನು ಮೊದಲೇ ಮಾಡಿತ್ತು. ಆದರೆ ಇಲ್ಲಿ ಚಿತ್ರಾ ಅವರು ಹಳೆ ಚಿತ್ರಗಳಿಗೆ ಬಣ್ಣ ಬಳಿಯದೆ ಅದೇ ಸನ್ನಿವೇಶಗಳಿಗೆ ಹೊಸದಾಗಿ ವರ್ಣಚಿತ್ರಗಳನ್ನು ಬರೆದಿದ್ದರು. ಹಳೆಯ ಮತ್ತು ಹೊಸ ಚಿತ್ರಗಳು ಹೋಲಿಕೆಗಾಗಿ ಇಲ್ಲಿವೆ.
1960 ನವಂಬರಲ್ಲಿ ವಪಾ ಎಂದು ಸಹಿ ಮಾಡುತ್ತಿದ್ದ ವಡ್ಡಾದಿ ಪಾಪಯ್ಯ ಚಿತ್ರಕಾರರ ಬಳಗವನ್ನು ಸೇರಿಕೊಂಡರು. ಅವರು ರಚಿಸಿದ ಮೊದಲ ಮುಖಪುಟ ಚಿತ್ರ ತೆಲುಗಿನಲ್ಲಿ ಜನವರಿ 1961 ಹಾಗೂ ಇತರ ಭಾಷೆಗಳಲ್ಲಿ ಫೆಬ್ರವರಿ 1961 ಸಂಚಿಕೆಗಳಲ್ಲಿ ಕಾಣಿಸಿಕೊಂಡಿತು. ಅಲ್ಲಿಂದ ಅವರ ಜೀವಿತದ ಕೊನೆಯವರೆಗೂ ಮುಖಪುಟದಲ್ಲಿ ಅವರ ವರ್ಣಮಯ ಚಿತ್ರಗಳೇ ರಾರಾಜಿಸಿದವು. ಅನೇಕ ಕಥೆ, ಧಾರಾವಾಹಿಗಳನ್ನೂ ತನ್ನ ವಿಶಿಷ್ಟ ಶೈಲಿಯ ಚಿತ್ರಗಳಿಂದ ಅಲಂಕರಿಸಿದರು. ಅದುವರೆಗೆ ಒಳಪುಟಗಳಲ್ಲಿ ವರ್ಣಚಿತ್ರಗಳೂ ಸೇರಿದಂತೆ ಇಂಡಿಯನ್ ಇಂಕ್ ಆಧಾರಿತ ರೇಖಾಚಿತ್ರಗಳೇ ಇರುತ್ತಿದ್ದ ಚಂದಮಾಮಕ್ಕೆ ವಾಟರ್ ಕಲರಿನ ವೈಭವವನ್ನು ಪರಿಚಯಿಸಿದವರು ಇವರು. ಆದರೆ ಎಂ.ಟಿ.ವಿ. ಆಚಾರ್ಯ, ಶಂಕರ್ ಮತ್ತು ಚಿತ್ರಾ ನೈಜತೆಗೆ ಒತ್ತು ಕೊಡುತ್ತಿದ್ದರೆ ಇವರ ಚಿತ್ರಗಳಲ್ಲಿ ಉಜ್ವಲ ವರ್ಣಗಳು ಮತ್ತು ಅತಿರಂಜಕತೆ ಇರುತ್ತಿತ್ತು ಎನ್ನಬೇಕಾಗುತ್ತದೆ.. ಮುಖಪುಟ ಇವರ ಪಾಲಾದೊಡನೆ ಎಂ.ಟಿ.ವಿ. ಆಚಾರ್ಯ ಅವರ ಮಹಾಭಾರತ ಸರಣಿಯ ತೈಲವರ್ಣ ಚಿತ್ರಗಳು ಹಿಂಬದಿಯ ಪುಟಕ್ಕೆ ಸ್ಥಳಾಂತರಗೊಂಡವು. ಕೊನೆಗೆ 1963ರಲ್ಲಿ ಆಚಾರ್ಯರು ಚಂದಮಾಮ ಸಂಸ್ಥೆಯನ್ನು ತ್ಯಜಿಸಿದರು. ಮಹಾಭಾರತ ಕೃತಿಗಳ ಸ್ವಾಮ್ಯದ ಬಗ್ಗೆ ಉಂಟಾಗಿದ್ದ ಮನಸ್ತಾಪವೂ ಇದಕ್ಕೆ ಕಾರಣ ಎಂದು ಹೇಳುತ್ತಾರೆ.
ಶಂಕರ್ ಮತ್ತು ಚಿತ್ರಾ ಅವರ ಮೂರು ದಶಕಗಳ ಚಿತ್ರ ಯಾತ್ರೆಯನ್ನು ಇಲ್ಲಿ scroll ಮಾಡುತ್ತಾ chronological orderನಲ್ಲಿ ವೀಕ್ಷಿಸಬಹುದು. ಯಾವ ವರ್ಷದಲ್ಲಿ ಅವರ ಕಲೆ ಉತ್ತುಂಗದಲ್ಲಿತ್ತು ಎಂದು ನೀವೇ ನಿರ್ಧರಿಸಿ.
ಆರಂಭದ ವರ್ಷಗಳಲ್ಲಿ ಶಂಕರ್ ಮತ್ತು ಚಿತ್ರಾ ಅವರದೇ ಶೈಲಿಯಲ್ಲಿ ಕೇಶವ ಎಂಬವರೂ ಕೆಲವೊಮ್ಮೆ ಚಿತ್ರ ರಚಿಸುತ್ತಿದ್ದರು. 1960ರ ಆಸುಪಾಸಿನ ಕೆಲ ಸಂಚಿಕೆಗಳಿಗೆ ಪ್ರಸಿದ್ಧ ತೆಲುಗು ಚಲನಚಿತ್ರ ನಿರ್ದೇಶಕ ಬಾಪು ಕೂಡ ವಿಶಿಷ್ಟ ಶೈಲಿಯ ಚಿತ್ರಗಳನ್ನು ರಚಿಸಿದ್ದರು. ಕೊನೆಯ ಪುಟದಲ್ಲಿರುತ್ತಿದ್ದ ವಾಸು,ಗೋಪಿ ಮತ್ತು ಟೈಗರ್ ಕಾಣಿಸಿಕೊಳ್ಳುತ್ತಿದ್ದ ಚಿತ್ರ ಕಥೆಯಲ್ಲಿ ಸತ್ಯಮ್ ಮತ್ತು ಗೋಪಿ ಎಂಬವರು ಬರೆದ ಚಿತ್ರಗಳಿರುತ್ತಿದ್ದವು. ಮುಂದಿನ ದಿನಗಳಲ್ಲಿ ಜಯಾ, ರಾಜಿ, ಗಾಂಧಿ ಅಯ್ಯ ಮುಂತಾದ ಯುವ ಕಲಾವಿದರು ಶಂಕರ್-ಚಿತ್ರಾ ಅವರ ಪರಂಪರೆಯನ್ನು ಮುಂದುವರಿಸುವ ಪ್ರಯತ್ನ ಮಾಡಿದರು.
ಬಾಪು ಅವರು ಚಂದಮಾಮದ ಸಿದ್ಧಶೈಲಿಗೆ ಹೊರತಾಗಿ ಬರೆಯುತ್ತಿದ್ದ ಚಿತ್ರಗಳಲ್ಲಿ ಒಂದು.
ಇದು ಅಂದಿನ ಚಂದಮಾಮ ಟೀಮಿನ ಚಿತ್ರ. ಇದರಲ್ಲಿ ನಮ್ಮ ಚಿತ್ರಕಾರರೂ ಇರಬಹುದು. ಆದರೆ ಹುಡುಕುವುದು ಕಷ್ಟ.
ಇದು 50ರ ದಶಕದ ಚಿತ್ರಕಾರರು ಚಂದಮಾಮ ಕಾರ್ಯಾಲಯದಲ್ಲಿ ಕಾರ್ಯನಿರತರಾಗಿರುವ ಚಿತ್ರ. ಹೀಗಾಗಿ ಇವರು ಎಂ.ಟಿ.ವಿ. ಆಚಾರ್ಯ, ಚಿತ್ರಾ, ಶಂಕರ್ ಮತ್ತು ಕೇಶವ ಇರಬಹುದು.
ಚಿತ್ರಾ 1978ರಲ್ಲಿ, ಎಂ.ಟಿ.ವಿ. ಆಚಾರ್ಯ ಹಾಗೂ ವಪಾ 1992ರಲ್ಲಿ ಇಹಲೋಕ ತ್ಯಜಿಸಿದರು. ಚಿತ್ರಾ ಅವರ ನೆನಪಿನಲ್ಲಿ ಅವರ ಹಳೆಯ ಚಿತ್ರಗಳೊಂದಿಗೆ ಧಾರಾವಾಹಿಗಳಾದ ಧೂಮಕೇತು, ರೂಪಧರನ ಯಾತ್ರೆಗಳು, ರಕ್ಕಸಕೊಳ್ಳ ಇತ್ಯಾದಿ ಮತ್ತೆ ಪ್ರಕಟವಾಗಿದ್ದವು. 2012ರ ವರೆಗೂ ಪ್ರಕಟವಾಗುತ್ತಿದ್ದ ಚಂದಮಾಮದ ಕೊನೆಯ ಸಂಚಿಕೆಯಲ್ಲೂ ಚಿತ್ರ ಬರೆದ ಶಂಕರ್ ಈಗಲೂ ನಮ್ಮೊಂದಿಗಿದ್ದಾರೆ. (ಈ ಲೇಖನ ಬರೆಯುವಾಗ ನಮ್ಮೊಂದಿಗಿದ್ದ ಶಂಕರ್ 29-9-2020ರಂದು ತನ್ನ 96ರ ವಯಸ್ಸಿನಲ್ಲಿ ನಿಧನರಾದರು.)
* * * *
20-May-2018ರ ಕನ್ನಡಪ್ರಭ ವಾರಪತ್ರಿಕೆಯ ಭಾನುಪ್ರಭ ಪುರವಣಿಯಲ್ಲಿ cover story ಆಗಿ ಪ್ರಕಟವಾದ ಈ ಲೇಖನದ ರೂಪವನ್ನು ಇಲ್ಲಿ ನೋಡಬಹುದು. ಒಂದು ಪತ್ರಿಕೆಯ ಉಲ್ಲೇಖವೂ ಇನ್ನೊಂದು ಪತ್ರಿಕೆಯಲ್ಲಿ ಕಾಣಸಿಗುವುದು ಅಪರೂಪವಾಗಿರುವಾಗ ಚಂದಮಾಮದ ವಿಶೇಷತೆಗಳ ಬಗ್ಗೆ ಪೂರ್ಣ ಪುಟದ ಸಚಿತ್ರ ಲೇಖನವನ್ನು ಕನ್ನಡಪ್ರಭ ಪ್ರಕಟಿಸಿರುವುದು ವಿಶೇಷವೇ. ಇದು ರೇಡಿಯೋ ಸಿಲೋನ್ ಬಗ್ಗೆ ವಿವಿಧಭಾರತಿಯಲ್ಲಿ ಕಾರ್ಯಕ್ರಮ ಪ್ರಸಾರವಾದಂತೆ!
ಲೇಖನವನ್ನು ಮೆಚ್ಚಿ ಕನ್ನಡಪ್ರಭ ಓದುಗರು ಬರೆದ ಪತ್ರಗಳು.
29-9-2020ರಂದು ತನ್ನ 96ರ ವಯಸ್ಸಿನಲ್ಲಿ ನಿಧನರಾದ
ಚಿತ್ರಕಾರ ಶಂಕರ್ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಈ ಲೇಖನದ ಆಯ್ದ ಭಾಗ 4-Oct-2020ರ ಭಾನುಪ್ರಭದಲ್ಲಿ ಮತ್ತೆ ಪ್ರಕಟವಾಯಿತು.
ನನ್ನ ಬಾಲ್ಯದಲ್ಲಿ ಓದಿದ ಚಂದಾಮಾಮಾ, ಬೊಂಬೆಮನೆ, ಬಾಲಮಿತ್ರಗಳು ನನ್ನ ಕಲ್ಪನೆಯ ವ್ಯಾಪ್ತಿಯನ್ನು ಬಹುದೂರಕ್ಕೆ ವಿಸ್ತರಿಸಿದವು. ಚಂದಾಮಾಮಾ ಪುರಾಣ ಕಥೆಗಳಿಗೆ ಜೀವ ತುಂಬಿದರೇ, ಬೊಂಬೆಮನೆ ವಾಸ್ತವಕಕ್ಕೆ ಒತ್ತು ನೀಡುತ್ತಿತ್ತು. ನನ್ನ ಬಾಲ್ಯವನ್ನು ವರ್ಣರಂಜಿತವಾಗುವಂತೆ ಮಾಡಿದ ಆ ಎಲ್ಲಾ ತೆರೆಮರೆಯ ವೀರರಿಗೂ ನನ್ನ ಪ್ರಣಾಮಗಳು. ಅಂದ ಹಾಗೆ ನಾನೂ ತೆರೆಮರೆಯ ವೀರನೇ(ಉಪ ಸಂಪಾದಕ).
ReplyDeleteಪ್ರತಿಕ್ರಿಯೆಗೆ ಧನ್ಯವಾದ. ತಮ್ಮ ಪರಿಚಯ ತಿಳಿಸಿದರೆ ಸಂತೋಷವಾಗುತ್ತದೆ.
ReplyDeleteಚಂದಮಾಮನ ಚಂದದ ಚಿತ್ರಗಳಿಗೆ ಮಾರುಹೋದವರಲ್ಲಿ ನಾನೂ ಒಬ್ಬ. ಅವುಗಳ ಹಿನ್ನೆಲೆಯ ವಿವರಗಳು ಬಲು ಅಪರೂಪ, ವಿಶೇಷ. ಇವನ್ನು ಒದಗಿಸಿದ ನಿಮಗೆ ನನ್ನ ಅನಂತ ಧನ್ಯವಾದಗಳು.
ReplyDeleteSrinath(FB)
ಅಬ್ಬಾ! ಚಂದಮಾಮನ ಚಿತ್ರ ಪರಂಪರೆ ಬಗ್ಗೆ ದೊಡ್ಡ ಸಂಶೋಧನೆ ಮಾಡಿ ಅತ್ಯುತ್ತಮ ಪ್ರಬಂಧವನ್ನೇ ಬರೆದಿದ್ದಿರಲ್ಲಾ ಸರ್. ನಿಜಕ್ಕೂ ಇದೊಂದು ಸಂಗ್ರಹಯೋಗ್ಯ ಲೇಖನ . ಕನ್ನಡ ಓದಲು ಶುರು ಮಾಡಿದುದೇ ಚಂದಮಾಮನ ಓದಿ ಎನ್ನಲು ಅಡ್ಡಿಯಿಲ್ಲ. ಶಂಕರ್ ಚಿತ್ರ ಹಾಗು ಆಚಾರ್ಯ ಅವರ ಚಿತ್ರ ಗಳನ್ನೂ ನೋಡಿ ಆಶ್ಚರ್ಯ ಆನಂದ ಪಟ್ಟಿದ್ದೇವೆ . ಆದರೆ ಅವರ ಬಗ್ಗೆ ತಿಳಿದುಕೊಳ್ಳುವ ವಯಸ್ಸಾಗಲಿ ಜ್ಞಾನವಾಗಲಿ ಇರಲಿಲ್ಲ. ನಿಮ್ಮ ಲೇಖನಗಳನ್ನು ಓದಿದಮೇಲೆ ಇಷ್ಟೆಲ್ಲಾ ಗೊತ್ತಾಗಿದ್ದು. ನಿಜವಾಗಿಯೂ ಇಷ್ಟೊಂದು ವಿಷಯ ಸಂಗ್ರಹ ಅಭಿನಂದನೀಯ . ಧನ್ಯವಾದಗಳು .
ReplyDeleteLaxmi GN (FB)
ಇಂತಹ ಸ೦ಶೋಧನೆ ಸ್ವತಹ ಚ೦ದಮಾಮ ಸ೦ಸ್ಥೆಯವರೇ ಮಾಡಿರಲಿಕ್ಕಿಲ್ಲ !! ಅದೆಷ್ಟು ಸೂಕ್ಷ್ಮವಾಗಿ ಗಮನಿಸಿದ್ದಿರಾ!! ಪಾತ್ರಗಳ ಉಡುಗೆ-ತೊಡುಗೆ, ಉಪಯೋಗಿಸುತ್ತಿದ್ದ ಬಣ್ಣಗಳು, ಕಪ್ಪು ಬಿಳುಪುನಿ೦ದ ವರ್ಣಕ್ಕೆ ಬದಲಾದ ಪುಟಗಳು... ಹೀಗೆ ಒಂದೇ ಎರಡೇ.. ಮತ್ತು ,ನಿಮ್ಮಿ೦ದ,ಮರೆಯಾಗುತ್ತಿರುವ ಕನ್ನಡ ಪದಗಳ ಬಳಕೆ..ಉದಾ: ಚಕ್ಕಡಿ ಮತ್ತು ಇನ್ನು ಕೆಲವು... ನಿಜ ಹೇಳಬೇಕೆಂದರೆ , ಚಿಕ್ಕವರಿದ್ದಾಗ, ಚ೦ದಮಾಮ ಒಂದೇ ಗುಕ್ಕಿನಲ್ಲಿ ಓದಿ, ಎಲ್ಲೋತೆಗೆದಿಡುತ್ತಿದ್ದೆ. ವಿಕ್ರಮ-ಬೇತಾಳದ ಕಥೆಯ ರಾಜನ ಸೌ೦ದರ್ಯ, ಅವನ ಚಿಗುರು ಮೀಸೆ, ಪೋಷಾಕು ನೋಡಿ ಬಹಳ ಮೆಚ್ಚಿದ್ದೆ. ಚ೦ದಮಾಮ ಅವಸಾನದ ಅ೦ಚನ್ನು ತಲುಪಬಹುದು ಎಂಬ ಕಲ್ಪನೆಯೂ ಬ೦ದಿರಲಿಲ್ಲ. ಈಗ ಒಂದು ರೀತಿ ಬಾಲ್ಯವನ್ನೇ ಕಳೆದುಕೊಂಡ ಅನುಭವ. ಒಂದೇ ಒಂದು ಸಮಾಧಾನದ ಸ೦ಗತಿಯೆ೦ದರೆ, ಸುಮಾರು ಏಳು ವರ್ಷಗಳ ಸ೦ಸ್ಕ್ರತದ ಆವೃತ್ತಿಗಳನ್ನು ಬಹಳ ಜೋಪಾನವಾಗಿ ಕಾಪಾಡಿಕೊಂಡು ಬ೦ದಿದ್ದೇನೆ. ಬೆ೦ಗಳೂರಿನ ಮನೆಯ ಅಟ್ಟದ ಮೇಲೆ ಬಹಳ ಭದ್ರವಾಗಿ ಕಾಪಾಡಿದ್ದೆನೆ. ಮುಂದಿನ ದಿನಗಳಲ್ಲಿ ತರಬೇಕು. ಎಷ್ಟೆ internet edition ಬ೦ದರೂ, ಕೈಯಲ್ಲಿ ಪುಸ್ತಕ ಹಿಡಿದುಕೊ೦ಡು ಓದುವ ಮಜಾನೆ ಬೇರೆ. ಅತ್ಯುತ್ತಮ ಲೇಖನ. ಬಹಳ ಇಷ್ಟವಾಯಿತು.
ReplyDeleteSaraswathi Vattam (FB)
ಸರ್ ಸಂಸೃತ ಆವೃತ್ತಿಗಳನ್ನು ಸಾಫ್ಟ್ ಪ್ರತಿಗಳನ್ನಾಗಿ ಪರಿವರ್ತಿಸಿ ದಯವಿಟ್ಟು ಪಬ್ಲಿಕ್ ಡೂಮೆನ್ ನಲ್ಲಿ ಹಾಕಿದರೆ ಉಳಿದ ಓದುಗರಿಗೆ ಅನಕೂಲ ಧನ್ಯವಾದಗಳು.
Deleteಕೆಲವು ಸಂಸ್ಕೃತ ಸಂಚಿಕೆಗಳು ಈ ತಾಣದಲ್ಲಿ ಲಭ್ಯವಿವೆ.
Deletehttps://www.chandamama.in/sanskrit/
Very good article. Thank you.
ReplyDeleteOnce Chandamama issues were available in the net. Now it is not there. What happened?
Panduranga Vittal
ಈಗ ಚಂದಮಾಮದ ಅಧಿಕೃತ ತಾಣ ಇಲ್ಲ. ಆದರೆ chandamama.in ಎಂಬ ಬೇರೊಂದು ತಾಣದಲ್ಲಿ ವಿವಿಧ ಭಾಷೆಗಳ ಬಹಳಷ್ಟು ಹಳೆಯ ಸಂಚಿಕೆಗಳು ಲಭ್ಯವಿವೆ.
ReplyDeleteಚಂದಮಾಮ ಓದುವುದೇ ಒಂದು ಅದ್ಭುತ ಅನುಭವ, ನಾನು ಪಿಯುಸಿ ವರೆಗೂ ಪ್ರತಿ ತಿಂಗಳು ಓದುತ್ತಲೇ ಇದ್ದೆ
ReplyDeleteಮುಂದೆ ಪತ್ರಿಕೆ ಪ್ರಕಟಣೆ ನಿಂತು ಹೋಯಿತು.ಚಂದಮಾಮ ಎರಡು ಭಾಷೆಯಲ್ಲಿ ನಮ್ಮ ಮನೆಗೆ ಬರುತ್ತಿತ್ತು, ಕನ್ನಡ ಹಾಗೂ ಮರಾಠಿ, ಜೊತೆಗೆ ಕೆಲವು ದಿನ ಬೊಂಬೆಮನೆ ಎನ್ನುವ ಪತ್ರಿಕೆ ಹೊರಬಂತು, ಚಂದಮಾಮ ದಲ್ಲಿನ ರೇಖಾ ಚಿತ್ರ ವಡ್ಡಾದಿ ಪಾಪಯ್ಯ,ಶಂಕರ್ ,ಚಿತ್ರ ಇತ್ಯಾದಿ ಆಗಿನ ವೇಳೆ ಇಂದಿನ ಕಲರ್ ಟಿವಿ ತರಾ ಇರುತಿತ್ತು, ನನ್ನ ಸಣ್ಣ ತಮ್ಮ ನಾನು ಚಂದಮಾಮ ಗೋಸ್ಕರ ಜಗಳ ಆಡಿದ್ದು ಇದೆ.
Very awesome moments of childhood.
ಅಬ್ಬಾ ಬಹಳ ವಿಷಯಗಳ ಸಂಗ್ರಹಿಸಿ ಬರೆದಿರುವಿರಿ. ಚೆಂದಮಾಮ ಇಷ್ಟಪಟ್ಟು ಬಾಲ್ಯದಲ್ಲಿ ಓದಿದ್ದರೂ, ಇಷ್ಟೊಂದು ವಿಷಯಗಳ ಅರಿವಿರಲಿಲ್ಲ.ಧನ್ಯವಾದಗಳು ಸರ್.
ReplyDeleteಅದ್ಭುತ ಮತ್ತು ಅತ್ಯುತ್ತಮ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ.
ReplyDeleteಬಹಳ ಅದ್ಭುತವಾದ ಲೇಖನ, ಚಂದಮಾಮ ಪತ್ರಿಕೆ ಬಗ್ಗೆ ತಿಳಿಯದ ವಿಷಯಗಳು ಬಹಳ ಇದ್ದವು, ತಿಳಿಸಿದ್ದಕ್ಕೆ ಧ್ಯವಾದಗಳು
ReplyDeleteಪ್ರತಿಕ್ರಿಯೆಗಾಗಿ ಧನ್ಯವಾದಗಳು.
Deleteits wonderful to see the journey of the chandamama and very very interesting in reading at my childhood days even it is very nice rapper. it is very hard and heavy work to publish a book like chandamama to the editor and their staff.... i very much thanks to them really it is worth to know all the purana's and its characters
ReplyDeleteಒಂದು ಒಳ್ಳೆಯ ಲೇಖನಕ್ಕಾಗಿ ಧನ್ಯವಾದಗಳು.
ReplyDeleteಚಂದಮಾಮದ 'ಭುವನ ಸುಂದರಿ ' ಹಾಗೂ 'ರೂಪಧರನ ಸಾಹಸ ಯಾತ್ರೆಗಳು ' ಎಲ್ಲಿಯಾದರೂ ಸಿಗಬಹುದೇ ?
ಪ್ರತಿಕ್ರಿಯೆಗೆ thanks.ಭುವನಸುಂದರಿ ಮತ್ತು ರೂಪಧರನ ಯಾತ್ರೆಗಳು 1956-57ರಲ್ಲಿ ಪ್ರಕಟವಾದದ್ದು. 80ರ ದಶಕದಲ್ಲಿ ಮರುಪ್ರಕಟವೂ ಆಗಿತ್ತು. ಈ ಬ್ಲಾಗಿನ ಹಳೆ ಚಂದಮಾಮ ಪುಟದಲ್ಲಿ ಈಗ 1957ರ ಸಂಚಿಕೆಗಳು ಕಾಣಿಸಿಕೊಳ್ಳುತ್ತಿದ್ದು ಅವುಗಳಲ್ಲಿ ರೂಪಧರನ ಯಾತ್ರೆ ಸಾಗುತ್ತಿದೆ. ಅದು ಪುಸ್ತಕರೂಪದಲ್ಲಿ ಪ್ರಕಟವಾಗಿಲ್ಲ ಅನಿಸುತ್ತಿದೆ.
ReplyDeleteಸರ್ ಸೂಪರ್
ReplyDeleteಲೇಖನ ತುಂಬಾ ಖುಷಿ ಕೊಟ್ಟಿತು..
ReplyDeleteಚಂದಾ ಮಾಮನ ಚಿತ್ರ ಶಿಲ್ಪಿ ಶ್ರೀಯುತರು ತೀರಿದರು ಅಂತ ಗೊತ್ತಾಗಿದ್ದು ಅವರು ಕಾಲವಾದ ಮೇಲಷ್ಟೆ ಇದುವರೆಗೂ ಆ ಹಿರಿಯ ಶಿಲ್ಪಿ ಪರಿಚಯವಾದದ್ದು. ಮಹಾನ್ ಚಿತ್ರ ಕಲಾವಿದರು ಕಿಶೋರ ಸಾಹಿತ್ಯಕ್ಕೆ ಅವರು ಸೇವೆ ಅನನ್ಯ. ಚಿತ್ರ ಕಲೆಯ ಮೂಲಕ ಆ ಬರಹವನ್ನು ನೆನಪಿನಲ್ಲಿಡುವಂತೆ ಮಾಡುತ್ತಿದ್ದ ಚಿತ್ರ ಬರಹಗಾರರು ಇವರ ನಿಧನ ಚಿತ್ರ ಲೋಕ ತುಂಬಲಾರದ ನಷ್ಟ. ಚಂದಾ ಮಾಮನಲ್ಲಿರುವ ಒಂದಾಗಿರುವ ಶ್ರೀಯತರು ಚಂದ್ರಮ ಇರುವವರೆಗೂ ಮಾನ್ಯರು.
ReplyDeleteಮುರಳಿಧರ ಜೋಷಿ, ಗಂಗಾವತಿ
ಸೂಪರ್ ರಾಘವೇಂದ್ರ
ReplyDelete