Tuesday 7 April 2020

ಬಂಗಾರಿ ಹಾಡು - ಸಿಗದಣ್ಣಾ ಇದು ಎಂದಿಗೂ ಸಿಗದು


ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು

ಗುರುತಿಸೊಳಿತಿರುವುದನು ಕೇಡುಗಳ ನಡುವೆ
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು
ಹರುಷಕದೆ ದಾರಿಯೆಲೊ  ಮಂಕುತಿಮ್ಮ
ಎಂದು ಡಿ.ವಿ.ಜಿ ಹೇಳಿರುವರಾದರೂ ಇಲ್ಲದಿರುವುದರ ಮೇಲೆ ನಮಗೆ ಯಾವಾಗಲೂ ವ್ಯಾಮೋಹ ಜಾಸ್ತಿ. ಹಳೆ ಹಾಡುಗಳು, ಹಳೆ ಸಿನಿಮಾಗಳ ವಿಷಯದಲ್ಲಿ ಇದು ಹೆಚ್ಚು ಅನ್ವಯವಾಗುತ್ತದೆ.  ಎಂದೂ ಸಿಗಲಾರದ ಎಂದೋ ಎಂದೋ ಎಂದೋ ಎಂಬ ಜಗನ್ಮೋಹಿನಿ ಚಿತ್ರದ ಹಾಡಿನಂಥವುಗಳ ಹುಡುಕಾಟದಲ್ಲಿ ವ್ಯಸ್ತರಾಗಿ ನಮ್ಮ ಸಂಗ್ರಹದಲ್ಲಿರುವ ಇತರ ಸಾವಿರಾರು ಅತ್ಯಮೂಲ್ಯ ಹಾಡುಗಳನ್ನು ನಾವು  ನಿಶ್ಚಿಂತೆಯಿಂದ ಆನಂದಿಸುವುದಿಲ್ಲ. ಇಲ್ಲದಿರುವ ಕೆಲವು ಹಳೆ ಚಿತ್ರಗಳ  ಕೊರಗಿನಲ್ಲಿ ಇರುವ ಅಂತರ್ಜಾಲದ ಖಜಾನೆಯನ್ನು ಮನಸೋ ಇಚ್ಛೆ ಸೂರೆಗೈಯಲು ನಮ್ಮಿಂದ ಆಗುವುದಿಲ್ಲ. ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಇಂಥ ಇಲ್ಲದ ಹಾಡು, ಸಿನಿಮಾಗಳ ಸಂಖ್ಯೆ ಜಾಸ್ತಿ. ಕೆಲವು ಸಲ ಸಿನಿಮಾ ಲಭ್ಯ ಇಲ್ಲದಿದ್ದರೂ ಹಾಡುಗಳು ರೇಡಿಯೋ ಮತ್ತು ಇತರೆಡೆ ಕೇಳಲು ಸಿಗುತ್ತವೆ. ಇನ್ನು ಕೆಲವು ಸಲ ಒಂದು ಕಾಲದಲ್ಲಿ ಕೇಳಲು ಸಿಗುತ್ತಿದ್ದ ಹಾಡುಗಳು ಈಗೆಲ್ಲೋ ಮರೆಯಾಗಿರುತ್ತವೆ. ಧ್ವನಿಮುದ್ರಿಕೆಗಳೇ ತಯಾರಾಗದಿರುವುದೋ ಅಥವಾ ಇನ್ಯಾವುದೋ ಕಾರಣದಿಂದ  ಅಪರೂಪದ ಕೆಲವು ಸಂದರ್ಭಗಳಲ್ಲಿ ಥಿಯೇಟರಿನಲ್ಲಿ ಸಿನಿಮಾ ನೋಡಿದವರನ್ನು ಹೊರತು ಪಡಿಸಿ ಇನ್ಯಾರಿಗೂ ಕೆಲವು ಚಿತ್ರಗಳ ಹಾಡುಗಳನ್ನು ಕೇಳುವ ಅವಕಾಶವೇ ಸಿಗುವುದಿಲ್ಲ.  60ರ ದಶಕದ ಕಲಿತರೂ ಹೆಣ್ಣೇ, ಲಾಯರ್ ಮಗಳು ಮುಂತಾದವು ಈ ವಿಭಾಗಕ್ಕೆ ಸೇರುತ್ತವೆ. 1963ರಲ್ಲಿ ಬಿಡುಗಡೆಯಾದ ಬಂಗಾರಿ ಇಂಥ ಇನ್ನೊಂದು ಚಿತ್ರ.


ಒಂದು ಕಾಲದಲ್ಲಿ ಪದ್ಯಾವಳಿ ಅಥವಾ ಹಾಡುಗಳ ಪುಸ್ತಕ ಖರೀದಿ ಸಿನಿಮಾ ನೋಡುವ ಸಂಭ್ರಮದ ಅವಿಭಾಜ್ಯ ಅಂಗವಾಗಿರುತ್ತಿತ್ತು.   10-15 ಪೈಸೆ ಬೆಲೆ ಬಾಳುವ  ಅವುಗಳನ್ನು ಟಿಕೆಟ್ ಕೌಂಟರಿನಿಂದಲೋ,  ಬಿಸ್ಕೆಟ್  ಮಾರುವ ಹುಡುಗರಿಂದಲೋ ಬಹುತೇಕ ಎಲ್ಲರೂ ಕೊಳ್ಳುತ್ತಿದ್ದರು. ಹಿಂದಿಯಲ್ಲಾದರೆ ಚಿತ್ರ ಬಿಡುಗಡೆಯಾಗುವ ಎಷ್ಟೊ ಸಮಯ ಮೊದಲೇ ಹಾಡುಗಳು ರೇಡಿಯೋದಲ್ಲಿ ಬರಲಾರಂಭಿಸುತ್ತಿದ್ದವು.  ಆದರೆ ಕನ್ನಡದಲ್ಲಿ ಕೆಲವು ತಿಂಗಳ ನಂತರವಷ್ಟೇ ಧ್ವನಿಮುದ್ರಿಕೆಗಳು ತಯಾರಾಗುತ್ತಿದ್ದುದು. ಹೀಗಾಗಿ ಟಿಕೆಟ್ ಪಡೆದು ಥಿಯೇಟರಿನಲ್ಲಿ ಕೂತು ಸಿನಿಮಾ ಪ್ರಾರಂಭವಾಗುವ ವರೆಗೆ ಪದ್ಯಾವಳಿಯಲ್ಲಿ ಕಥಾ ಸಾರಾಂಶ ಓದಿ ಹಾಡುಗಳ ಮೇಲೆ ಕಣ್ಣಾಡಿಸುತ್ತಾ ಅವುಗಳ ಧಾಟಿ ಹೇಗಿರಬಹುದು ಎಂದು ಊಹಿಸುವುದು ರೋಮಾಂಚಕಾರಿ ಅನುಭವವಾಗಿರುತ್ತಿತ್ತು.  ಇನ್ಯಾರೋ ನೋಡಿದ ಸಿನಿಮಾದ ಪದ್ಯಾವಳಿ ನಮಗೆ ಸಿಕ್ಕಿದರೆ  ರೇಡಿಯೋದಲ್ಲಿ ಆ ಹಾಡುಗಳು ಬರಲಾರಂಭಿಸುವ ವರೆಗೆ ಈ ಊಹಿಸುವ ಅವಧಿ ವಿಸ್ತರಿಸುತ್ತಿತ್ತು. ಎಂದೋ ಮಂಗಳೂರಿಗೆ ಹೋಗಿದ್ದ ನಮ್ಮ ಅಣ್ಣ ಬಂಗಾರಿ ಚಿತ್ರವನ್ನು ವೀಕ್ಷಿಸಿದ್ದು ಮಾಮೂಲಿನಂತೆ ಪದ್ಯಾವಳಿಯನ್ನೂ ತಂದಿದ್ದರು. ಆದರೆ ವರ್ಷಗಳುರುಳಿದರೂ ಅದರ ಹಾಡುಗಳು ರೇಡಿಯೋದಲ್ಲಾಗಲೀ, ಧ್ವನಿವರ್ಧಕಗಳಲ್ಲಾಗಲೀ ಕೇಳಲು ಸಿಗದೆ ಪದ್ಯಾವಳಿಯಲ್ಲೇ ಭದ್ರವಾಗಿ ಉಳಿದವು.


ಬಂಗಾರಿ ಚಿತ್ರದ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ನಾನು ನಿರತನಾಗಿದ್ದಾಗ ಹಳೆ ವಿಕಟವಿನೋದಿನಿ ಮಾಸಪತ್ರಿಕೆಯಲ್ಲಿ ಪ್ರಕಟವಾದ ಈ ಚಿತ್ರದ ವಿಸ್ತೃತ ವಿಮರ್ಶೆಯೊಂದು ನನ್ನ ಕಣ್ಣಿಗೆ ಬಿತ್ತು.  ವಿಕಟವಿನೋದಿನಿ ಪತ್ರಿಕೆಯ ಬಗ್ಗೆ ಅನೇಕರು ಕೇಳಿರಲಾರರು.  1911ರಲ್ಲಿ ಆರಂಭವಾದ ಈ ಪತ್ರಿಕೆ 1961, 62 ಮತ್ತು 63ರಲ್ಲಿ ನಮ್ಮ ಮನೆಗೆ ಬರುತ್ತಿತ್ತು.  ಆ ಕಾಲದಲ್ಲಿ ನಿರಂತರವಾಗಿ ಪ್ರಕಟವಾಗುತ್ತಿರುವ ಕನ್ನಡದ ಅತ್ಯಂತ ಹಳೆಯ ಪತ್ರಿಕೆ ಎಂಬ ಹೆಗ್ಗಳಿಕೆ ಇದಕ್ಕಿತ್ತು. ಸರ್ವಂ ವಿಕಟಮಯಂ ಜಗತ್ ಎಂಬ ಟ್ಯಾಗ್ ಲೈನ್ ಹೊಂದಿದ್ದ 40 ಪುಟಗಳಿದ್ದ ಬಿಡಿ ಸಂಚಿಕೆಯ ಬೆಲೆ 15 ನ.ಪೈ ಆಗಿದ್ದು ವಾರ್ಷಿಕ ಚಂದಾ 2 ರೂ ಆಗಿತ್ತು.  ಚಂದಾದಾರರಿಗೆ ನವಂಬರಿನಲ್ಲಿ ಹೆಚ್ಚು ಪುಟಗಳ  ವಿಶೇಷ ಸಂಚಿಕೆ  ಉಚಿತವಾಗಿ ದೊರೆಯುತ್ತಿತ್ತು. ಹಾಸ್ಯ ಪತ್ರಿಕೆಯೆಂದೆನಿಸಿದ್ದರೂ  ವಿವಿಧ ರೀತಿಯ ಲೇಖನಗಳಿರುತ್ತಿದ್ದವು.  ಮುಖಪುಟ ಯಾವುದಾದರೂ ಸಿನಿಮಾ ದೃಶ್ಯ ಹೊಂದಿರುತ್ತಿದ್ದು ಒಂದೆರಡು ಪುಟಗಳು ಸಿನಿಮಾ ವಿಚಾರಗಳಿಗೆ ಮೀಸಲಾಗಿರುತ್ತಿದ್ದವು. ‘ಕೋರಿದ್ದು ಹೇಳಿದ್ದು’ ಎಂಬ ಪ್ರಶ್ನೋತ್ತರ ವಿಭಾಗ ಬಲು ಜನಪ್ರಿಯವಾಗಿತ್ತು. ಕಲ್ಪತರು ಜ್ಯೋತಿಷ್ಯಾಲಯದ ದೈವಜ್ಞ ಭಾಸ್ಕರ ಶರ್ಮ ಎಂಬವರು ಪ್ರಶ್ನೆಯನ್ನು ಪ್ರಕಟಿಸದೆ ಒಂದು ಪದದಲ್ಲಿ ಉತ್ತರ ಕೊಡುತ್ತಿದ್ದ ಜೋತಿಷ್ಯ ಪ್ರಶ್ನೆ ವಿಭಾಗವನ್ನೂ ಅನೇಕರು ಮೆಚ್ಚುತ್ತಿದ್ದರು. ಅಲ್ಲಿ ಪ್ರಶ್ನೆ ಕೇಳಿದವರ ವಿವರಗಳನ್ನು ನೋಡುವಾಗ ಪತ್ರಿಕೆಯನ್ನು ಯಾವೆಲ್ಲ ಊರಿನವರು ಓದುತ್ತಾರೆ ಎಂಬ ಸ್ಥೂಲ ಮಾಹಿತಿ ದೊರೆಯುತ್ತಿತ್ತು. ಶ್ರೀಕರ ಕಸ್ತೂರಿ ಮಾತ್ರೆ, ನಂಜನಗೂಡು ಟೂತ್ ಪೌಡರ್ ಮತ್ತು ಇತರ ಆಯುರ್ವೇದಿಕ್ ಔಷಧಗಳನ್ನು  ತಯಾರಿಸುತ್ತಿದ್ದ ದಿ ಸದ್ವೈದ್ಯಶಾಲಾ ಪ್ರೈ. ಲಿ. ಇದರ ಜಾಹೀರಾತು ಹಿಂಬದಿಯ ಪುಟದಲ್ಲಿ ಕಾಯಂ ಆಗಿ ಇರುತ್ತಿತ್ತು. 1964ರಲ್ಲಿ ಇದರ ಪ್ರಕಟಣೆ ನಿಂತು ಹೋಯಿತು.  ಬಂಗಾರಿ ಚಿತ್ರವನ್ನು ನಾವೇ ನೋಡಿದ ಅನುಭವ ಕೊಡುವ ನವಂಬರ್ 1963ರ ಸಂಚಿಕೆಯ ಆ ಬರಹ ಇಲ್ಲಿದೆ.

 
 

ಕಥಾಸಾರಾಂಶದಲ್ಲಿ ಕಾಣಿಸುವ ಕಾಲಚಕ್ರದ ಉರುಳಿಗೆ ಸಿಲುಕಿದವರೆಲ್ಲರೂ ಮಣ್ಣು ಮುಕ್ಕಲೇ ಬೇಕು. ಅಂತೆಯೇ ಬಂಗಾರಿಯೂ ಮಣ್ಣು ಮುಕ್ಕಿದಳು  ಎಂಬ ಚತುರೋಕ್ತಿಯ ಸಾಲುಗಳು ಗಮನ ಸೆಳೆಯುತ್ತವೆ.  ಬಹುಶಃ ಕೃಷ್ಣಮೂರ್ತಿ ಪುರಾಣಿಕರ ಮೂಲ ಕಥೆಯಲ್ಲಿ ಆ ಸಾಲುಗಳು ಇದ್ದಿರಬಹುದು. ಈ ಚಿತ್ರ ಅವರ ಯಾವ ಕಾದಂಬರಿ / ಕಥೆಯಾಧಾರಿತ ಎಂಬುದರ ಬಗ್ಗೆ  ಮಾಹಿತಿ ಲಭ್ಯವಿಲ್ಲ. 

ಈ ಚಿತ್ರದಲ್ಲಿ ನಿರ್ಮಾಪಕ ನಿರ್ದೇಶಕ ಜಿ.ವಿ.ಅಯ್ಯರ್ ಅವರೇ ಬರೆದ ಒಟ್ಟು 5 ಹಾಡುಗಳಿವೆ. ಅವುಗಳ ಪೈಕಿ ಎರಡು ಇತ್ತೀಚೆಗೆ ಅಂತರ್ಜಾಲದಿಂದ ಹೆಕ್ಕಲು ಸಿಕ್ಕಿದವು.

1. ಸ್ವತಃ ಜಿ.ಕೆ. ವೆಂಕಟೇಶ್ ಹಾಡಿದ ನಾ ಹುಟ್ಟಿ ಬೆಳೆದುದು ಕನ್ನಡ ನಾಡು.


2. ರಾಧಾ ಜಯಲಕ್ಷ್ಮಿ ಮತ್ತು ಸಂಗಡಿಗರು ಹಾಡಿದ ಕನ್ನಡದಾ ಮಗಳೆ ಬಾರೇ.
ಇದರ ತುಣುಕು  ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಲ್ಲಿ ಇದೆ.  ಒಂದರಿಂದ ಇಪ್ಪತ್ತು....  ಬರಹ ನೋಡಿ.


ಮತ್ತುಳಿದ ಮೂರು ಮನದಲ್ಲೆ ಮೆಲ್ಲಬೇಕಾದ ಮಂಡಿಗೆಗಳು.

3. ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ  - ನಿನ್ನ ಕೈಬಳೆ ಝಣ್ ಝಣ್.

4. ರಘುನಾಥ ಪಾಣಿಗ್ರಾಹಿ - ಯಾರೇನ ಮಾಡುವರೋ.

5. ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ -  ತಾಯ ತಿಂದ ತಬ್ಬಲಿ ನೀನೆಂದು.

ಎಂದೂ ಕೇಳುವ ಸಾಧ್ಯತೆ ಇರದ ಇಂಥ ಹಾಡುಗಳು ನಾವು  ಇದುವರೆಗೆ ಕೇಳಿದ, ಕೇಳುತ್ತಿರುವ  ಎಷ್ಟೋ ಮಾಧುರ್ಯಭರಿತ ಹಾಡುಗಳಿಗಿಂತಲೂ ಹೆಚ್ಚು ಮಧುರವಾಗಿರಬಹುದು.  ಏಕೆಂದರೆ Ode on a Grecian Urn ಕವನದಲ್ಲಿ ಜೋನ್ ಕೀಟ್ಸ್ ಹೇಳುವಂತೆ Heard Melodies Are Sweet, but Those Unheard Are Sweeter.

ಕಥಾಸಾರಾಂಶ, ತಾರಾಗಣ, ಪಾರಿಭಾಷಿಕ ವರ್ಗ, ಹಾಡುಗಳ ಸಾಹಿತ್ಯ ಒಳಗೊಂಡ ಬಂಗಾರಿ ಪದ್ಯಾವಳಿಯನ್ನು scroll ಮಾಡುತ್ತಾ ನೋಡಿ. ಈ ಚಿತ್ರದ ಸಂಪೂರ್ಣ ಹಕ್ಕುದಾರರು ಬೆಂಗಳೂರಿನ ವಿಜಯಾ ಪಿಕ್ಚರ್ಸ್ ಸರ್ಕ್ಯೂಟ್ ಎಂಬ  ಉಲ್ಲೇಖ ಅದರಲ್ಲಿದೆ.  ಅವರ ಗೋದಾಮಿನಲ್ಲಿ ಈ ಚಿತ್ರದ ಪ್ರಿಂಟ್ ಇರಲೂಬಹುದೇನೋ.