Tuesday 13 December 2011

ವಿವಿಧ ಸಂಗೀತ ನಿರ್ದೇಶಕರ ಒಡನಾಟದಲ್ಲಿ ಪಿ.ಬಿ.ಎಸ್ Top Ten




ಹಿನ್ನೆಲೆ ಗಾಯಕ ಪಿ.ಬಿ.ಶ್ರೀನಿವಾಸ್ ವೃತ್ತಿ ಜೀವನದಲ್ಲಿ ಹಿನ್ನೆಲೆಗೆ ಸರಿದು ದಶಕಗಳೇ ಸಂದಿರಬಹುದು, ಅವರ ಹೊಸ ಹಾಡುಗಳು ಬರದೇ ಇರಬಹುದು. ಆದರೆ ಚಿತ್ರ ಸಂಗೀತದ ಸ್ವರ್ಣಯುಗದಲ್ಲಿ ಅವರು ಹಾಡಿದ್ದ ಹಾಡುಗಳು ಪ್ರತಿಸಲ ಕೇಳುವಾಗಲೂ ಹೊಸ ಹಾಡುಗಳೇ. ವಿವಿಧ ಸಂಗೀತ ನಿರ್ದೇಶಕರ ಒಡನಾಟದಲ್ಲಿ ಅವರು ಹಾಡಿದ ಒಂದಷ್ಟು ಹಾಡುಗಳನ್ನು ನೆನಪಿಸಿಕೊಳ್ಳುವ ಪ್ರಯತ್ನವೊಂದು ಇಲ್ಲಿದೆ.

1.  ಜಿ.ಕೆ. ವೆಂಕಟೇಶ್ - ದಶಾವತಾರ ಚಿತ್ರದ ವೈದೇಹಿ ಏನಾದಳು
ಹಕ್ಕಿಗಳ ಚಿಲಿಪಿಲಿ, ಅರಣ್ಯದ ಮೌನ, ಜಾನಪದ ತಾಳವಾದ್ಯಗಳು, ವೈಬ್ರೊಫೋನ್ ಇತ್ಯಾದಿಗಳನ್ನೊಳಗೊಂಡ ವಿಶಿಷ್ಟ ಸಂಗೀತ ಸಂಯೋಜನೆಯುಳ್ಳ ಈ ಹಾಡಿಗೆ ಪಿ.ಬಿ.ಎಸ್ ತಮ್ಮ ಪೂರ್ಣ ಪ್ರತಿಭೆಯನ್ನು ಧಾರೆಯೆರೆದಿದ್ದಾರೆ.  ಜಿ.ವಿ ಅಯ್ಯರ್ ಅವರ ಈ ರಚನೆಯು  5 ಅಕ್ಷರಗಳ ಜಂಪೆ ತಾಳದಲ್ಲಿದ್ದು ಆಲಿಸಲು ಎಷ್ಟು ಮಧುರವೋ ಹಾಡಲು, ನುಡಿಸಲು ಅಷ್ಟೇ ಕಠಿಣ. (ಪಿ.ಬಿ.ಎಸ್ ಅವರು ಹಾಡಿದ ಬಾಗಿಲನು ತೆರೆದು, ಬಾ ತಾಯಿ ಭಾರತಿಯೆಕನ್ನಡದ ಕುಲದೇವಿ ಕಾಪಾಡು ಬಾ ತಾಯಿ, ನಿನ್ನೊಲುಮೆ ನಮಗಿರಲಿ ತಂದೆ ಇಂದು ಎನಗೆ ಗೋವಿಂದ ಮುಂತಾಗಿ ಬಹಳಷ್ಟು ಹಾಡುಗಳು 5 ಅಕ್ಷರಗಳ ಜಂಪೆ ತಾಳದಲ್ಲಿರುವುದು ವಿಶೇಷ).  ಜಿ.ಕೆ. ವೆಂಕಟೇಶ್ ನೀಡಿದಷ್ಟು PBS Hits ಇನ್ಯಾವ ಸಂಗೀತ ನಿರ್ದೇಶಕರೂ ನೀಡಿರಲಾರರು. ಇವರ ಕನ್ಯಾರತ್ನಬಿಂಕದ ಸಿಂಗಾರಿಯಂತೂ ಪ್ರೇಮಗೀತೆಗಳ ರಾಜ  ಓಹಿಲೇಶ್ವರದಲ್ಲಿ ರಾಜ್ ಅವರೊಡನೆ ಪಿ.ಬಿ.ಎಸ್ ನಂಟು ಬೆಸೆದ ಇವರದ್ದೇ ಎಮ್ಮೆ ಹಾಡು ಈ ನಂಟನ್ನು ಶಿಥಿಲಗೊಳಿಸಿದ್ದು ಮಾತ್ರ ವಿಪರ್ಯಾಸ.  ಆದರೂ ಮುಂದೆ ಸನಾದಿ ಅಪ್ಪಣ್ಣನಾನೆ ತಾಯಿ ನಾನೆ ತಂದೆ ಯಂತಹ ಕೆಲವು ಮಧುರ ಹಾಡುಗಳನ್ನು ನೀಡಲು ಇವರಿಗೆ ಸಾಧ್ಯವಾಯಿತು.



2.  ಎಂ. ವೆಂಕಟರಾಜು - ಭಕ್ತ ಕನಕದಾಸ ಚಿತ್ರದ ಬಾಗಿಲನು ತೆರೆದು.
ದಾಸರ ಪದವೊಂದಕ್ಕೆ ಇಷ್ಟು ಆಕರ್ಷಕವಾಗಿ ರಾಗ ಸಂಯೋಜನೆ ಮಾಡಬಹುದೆಂಬ ಕಲ್ಪನೆಯಾದರೂ ಆ ಪುಣ್ಯಾತ್ಮ ವೆಂಕಟರಾಜು ಅವರಿಗೆ  ಹೇಗೆ ಬಂತೆಂದು ಅಚ್ಚರಿಯೆನಿಸುತ್ತದೆ. ಈ  ಚಿತ್ರದ ಉಳಿದ  ಹಾಡುಗಳೂ ತಮಗೆ ತಾವೇ ಸಾಟಿ.  ಇದರ ನಂತರ ಅಥವಾ ಮೊದಲು ಬಂದ ಯಾವುದೆ ದಾಸರ ಬಗೆಗಿನ ಚಿತ್ರಗಳಲ್ಲಿ ಇಂತಹ ಸಂಗೀತ  ಸಂಯೋಜನೆ ಕಾಣಸಿಗದು.  ಇದರಲ್ಲಿ ಪಿ.ಬಿ.ಎಸ್ ದನಿಯ ಆರ್ದ್ರತೆ ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಹುದು.  ಚಲನ ಚಿತ್ರಗಳನ್ನು ಇಷ್ಟ ಪಡದ ಅದೆಷ್ಟೋ ಹಿರಿಯರು ಸಹ ಈ ಹಾಡು ಕೇಳಿ ಕಣ್ಣೀರು ಸುರಿಸುತ್ತಿದ್ದರಂತೆ.  ಮೊದಲು ಈ ಚಿತ್ರದ ಎಲ್ಲ ಹಾಡುಗಳನ್ನು ರಘುನಾಥ ಪಾಣಿಗ್ರಾಹಿ(ಖ್ಯಾತ ಒಡಿಸ್ಸಿ ಪಟು ಸಂಯುಕ್ತಾ ಪಾಣಿಗ್ರಾಹಿಯವರ ಪತಿ) ಅವರು ಹಾಡುವುದೆಂದಿತ್ತಂತೆ.  ಕೊನೆಗೆ ಪಿ.ಬಿ.ಎಸ್ ಪಾಲಿಗೆ ಬಂದ ಈ ಅವಕಾಶ ಈ ಮೊದಲೇ ಓಹಿಲೇಶ್ವರ ಚಿತ್ರದಲ್ಲಿ ನಾ ಪಾಪವದೇನಾ ಮಾಡಿದೆನೋ ಎಂದು ರಾಜ್ ಕುಮಾರ್ ಅವರಿಗಾಗಿ ಒಂದು ಹಾಡು ಹಾಡಿದ್ದರೂ  ಅವರಿಗಾಗಿ ಎಲ್ಲ ಹಾಡುಗಳನ್ನು ಹಾಡಿದ ಮೊದಲ ಚಿತ್ರ ಎಂಬ ದಾಖಲೆ ಬರೆಯಿತು.



3.  ಟಿ.ಜಿ.ಲಿಂಗಪ್ಪ - ಬೆಟ್ಟದ ಹುಲಿ ಚಿತ್ರದ ಆಡುತಿರುವ ಮೋಡಗಳೆ
ತಾವೇ ಸ್ವತಃ ಗಾಯಕರಾದ ಇವರು ಹಾಡಿದ ಸ್ಕೂಲ್ ಮಾಸ್ಟರ್ ಚಿತ್ರದ ರಾಧಾ ಮಾಧವ ವಿನೋದ ಹಾ, ಸ್ವಾಮಿ ದೇವನೆ ಲೋಕ ಪಾಲನೆ  ಹಾಗೂ ಸೊಂಪಾದ ಸಂಜೆ ವೇಳೆ ಹಾಡುಗಳು ಬಲು ಪ್ರಸಿದ್ಧ.  ಆದರೂ ಮುಂದೆ ಬಹಳಷ್ಟು ವರ್ಷ ಪಿ.ಬಿ.ಎಸ್ ಇವರ ಮುಖ್ಯ ಗಾಯಕರಾಗಿ ಉಳಿದರು. ಪಂತುಲು ಅವರ ಅಷ್ಟೂ ಚಿತ್ರಗಳು  ಮಧುರ ಹಾಡುಗಳನ್ನೇ ನೀಡಿವೆ. ಬೆಟ್ಟದ ಹುಲಿ ಚಿತ್ರದ ಈ ಹಾಡಿನಲ್ಲಿ ಕನ್ನಡದಲ್ಲಿ ಅಪರೂಪವಾದ ಮೌತ್ ಆರ್ಗನ್ ಬಳಕೆ  ಉಲ್ಲೇಖನೀಯ. (ಮುಂದೆ  ದೇವರ ಗುಡಿ ಚಿತ್ರದ ಹಾಡುಗಳಲ್ಲಿ ರಾಜನ್ ನಾಗೇಂದ್ರ ಅವರು ಮೌತ್ ಆರ್ಗನ್ ಬಳಸಿದ್ದಾರೆ.)  ರಾಜ್ ಗಾಯನ ಯುಗ ಆರಂಭದ ನಂತರವೂ ಆಗೊಮ್ಮೆ ಈಗೊಮ್ಮೆ ಇವರು ಪಿ.ಬಿ.ಎಸ್ ಅವರನ್ನು ಬಳಸಿದ್ದುಂಟು.  ಬಬ್ರುವಾಹನಯಾರು ತಿಳಿಯರು ನಿನ್ನ ಹಾಡನ್ನು ಮರೆಯಲುಂಟೆ?



4.  ವಿಜಯ ಭಾಸ್ಕರ್ - ತೂಗು ದೀಪ    ಚಿತ್ರದ ಮೌನವೇ ಆಭರಣ
ಫಿರ್ ವಹೀ ದಿಲ್ ಲಾಯಾ ಹೂಂ ಚಿತ್ರದ ಅಂಖೊಂಸೆ ಜೊ ಉತರೀ ಹೈ ದಿಲ್ ಮೆಂ ಹಾಡಿನ ಆರಂಭದ ಹಮ್ಮಿಂಗ್ ಈ ಹಾಡಿನ ಮೊದಲ ಸಾಲಿಗೆ ಸ್ಪೂರ್ತಿ.  ಪಿ.ಬಿ.ಎಸ್ ಅವರ ವೈಶಿಷ್ಟ್ಯವಾದ ಮುರ್ಕಿಗಳು ಅರ್ಥಾತ್ ಸಾಲಿನ ಕೊನೆಗೆ  ಬರುವ ದನಿಯ ತಿರುವುಗಳು ಈ ಹಾಡಿನ ವಿಶೇಷ.  ಇದೇ ಚಿತ್ರದ ಇನ್ನೊಂದು ಹಾಡು ನಿಮ್ಮ ಮುದ್ದಿನ ಕಂದ ನಾವು - ಇದರಲ್ಲಿ ಪಿ.ಬಿ.ಎಸ್ ಮೀಸೆ ಧರಿಸಿ ಸ್ವತಃ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.  ಇದರದ್ದು ಒಂದು ಕಥೆ ಇದೆ.  ಪಿ.ಬಿ.ಎಸ್ ಅವರಿಗೆ ಮೀಸೆ ಬಿಡಬೇಕೆಂಬ ಆಸೆ ಬಹಳ ಇತ್ತಂತೆ.  ಆದರೆ ತೀರಾ ಸಂಪ್ರದಾಯಸ್ಥರಾದ ಅವರ ಕುಟುಂಬದಲ್ಲಿ ಇದಕ್ಕೆ ಅವಕಾಶವಿರಲಿಲ್ಲವಂತೆ.  ಹಾಗಾಗಿ ಆ ಚಿತ್ರದ ನಿರ್ಮಾಪಕರಾದ ಪಿ.ಬಿ.ಎಸ್ ಅವರ ಆಪ್ತ ಮಿತ್ರ ಕೆ.ಎಸ್.ಎಲ್. ಸ್ವಾಮಿ(ರವಿ) ಅವರು ವಿಶೇಷವಾಗಿ ಈ ಹಾಡಿನ ಸನ್ನಿವೇಶ ಸೃಸ್ಟಿಸಿದರಂತೆ.  ಚಿತ್ರೀಕರಣ ಮುಗಿದ ಮೇಲೆ  ಅದೇ ಗೆಟ್ ಅಪ್ ನಲ್ಲಿ ಮನೆಗೆ ಹೋಗಿ ಎಲ್ಲರಿಗೂ ಮೀಸೆ ತೋರಿಸಿ ಪಿ.ಬಿ.ಎಸ್ ತಮ್ಮ ಆಸೆ ಪೂರೈಸಿಕೊಂಡರಂತೆ.  

     ವಿಜಯ  ಭಾಸ್ಕರ್ ಅವರ ಹಿಂದಿ ಹಾಡುಗಳ ನಂಟಿಗೆ ಇನ್ನೂ ಕೆಲವು ಉದಾಹರಣೆಗಳಿವೆ.  ಕೋಟಿ ಚೆನ್ನಯದ ಕೆಮ್ಮಲೆತ ಬ್ರಹ್ಮ, ಬೆಳ್ಳಿ ಮೋಡದ ಒಡೆಯಿತು ಒಲವಿನ ಕನ್ನಡಿ, ಉಯ್ಯಾಲೆಯ ನಗುತ ಹಾಡಲೆ, ಲಕ್ಶ್ಮಿ ಸರಸ್ವತಿ ಯ ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹಾಗೂ ನಮ್ಮ ಮಕ್ಕಳು ಚಿತ್ರದ ತಾರೆಗಳ ತೋಟದಿಂದ ಹಾಡುಗಳ interlude ಸಂಗೀತದಲ್ಲಿ ಕ್ರಮವಾಗಿ ಮಧುಮತಿಯ ಟೂಟೆ ಹುವೆ ಖ್ವಾಬೊನೆ,  ತೀಸ್ರೀ ಕಸಂನ ದುನಿಯಾ ಬನಾನೆವಾಲೆ,  ಖಾನ್ ದಾನ್ ನ ತುಮ್ಹೀ ಮೇರೆ ಮಂದಿರ್, ಸರಸ್ವತಿ ಚಂದ್ರದ ಫೂಲ್ ತುಮ್ಹೆ ಭೇಜಾ ಹೈ ಖತ್ ಮೆ ಹಾಗೂ ಸಂಗಂನ ಪ್ರೇಮ್ ಪತ್ರ ಪಢ್ ಕರ್ ಹಾಡುಗಳ ಛಾಯೆಯನ್ನು ಸ್ಪಷ್ಟವಾಗಿ ಗುರುತಿಸಬಹುದು.  ಕೋಟಿ ಚೆನ್ನಯದ  ಜೋಡು ನಂದಾ ದೀಪ ಹಾಡಂತೂ ಗೈಡ್ ರಾತ್ ಕೊ ಜಬ್ ಚಂದ್ ಚಮಕೆಯ ನೇರ ಎತ್ತುಗಡೆ.

     ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ಒತ್ತಾಸೆಯಂತೆ ಪುಟ್ಟಣ್ಣ ಅವರ ಬಹುತೇಕ ಚಿತ್ರಗಳಲ್ಲಿ  ಒಂದಾದರೂ ಪಿ.ಬಿಎಸ್ ಹಾಡು ಇರುತ್ತಿತ್ತು.  ಮಾನಸ ಸರೋವರವೇದಾಂತಿ ಹೇಳಿದನು ಹಾಡಿನಲ್ಲಿ ಪಿ.ಬಿ.ಎಸ್ ಮಂದ್ರಸ್ಥಾಯಿಯ ಮಾಂತ್ರಿಕತೆ ನಾವು ಎಂತೆಂತಹ ಸಂಭಾವ್ಯ ಹಾಡುಗಳನ್ನು ಮಿಸ್ ಮಾಡಿಕೊಂಡೆವು ಎನ್ನುವುದಕ್ಕೆ ಒಂದು ಉದಾಹರಣೆ.

     ಇರಲಿ,  ಈಗ ಮೌನವೇ ಆಭರಣ ಕೇಳೋಣ.



5.  ರಾಜನ್ ನಾಗೇಂದ್ರ - ಅನ್ನಪೂರ್ಣ ಚಿತ್ರದ ಹೃದಯ ವೀಣೆ ಮಿಡಿಯೆ ತಾನೆ
ಇದೊಂದು ಅಷ್ಟೊಂದು ಪ್ರಸಿದ್ಧವಾಗದ ಆದರೆ ಬಲು ಮಧುರವಾದ ಗಜಲ್ ಶೈಲಿಯ ಹಾಡು.  ಬಿದಿರಿನ ಕೊಳಲು ಗಾನದ ಹೊನಲು ಹರಿಸದೆ ಕೃಷ್ಣನ ಕರ ಸೋಕಲು ದಂತಹ ಸುಂದರ ಸಾಲುಗಳು ಈ ಉದಯ ಶಂಕರ್ ರಚನೆಯಲ್ಲಿವೆ.  ಪಿ.ಬಿ.ಎಸ್ ನಿರ್ವಹಣೆ ಎಂದಿನಂತೆ   ಸೂಪರ್.  ಸ್ಪಷ್ಟ ಉಚ್ಚಾರ,  ಎಷ್ಟೇ ಉದ್ದದ ಸಾಲು ಹಾಡಿದರೂ ಒಂದಿನಿತೂ ಕೇಳಿಸದ ಉಸಿರಿನ ಸದ್ದು - ಇವು ಪಿ.ಬಿ.ಎಸ್ ವಿಶೇಷತೆಗಳು.  ಈಗಿನ ಪೀಳಿಗೆಯ ಹಾಡುಗಾರರ ಹಾಡುಗಳಲ್ಲಿ ಹಾಡಿಗಿಂತಲೂ ಉಸಿರೆಳೆದುಕೊಳ್ಳುವ ಸದ್ದೇ ಜೋರಾಗಿ ಕೇಳಿಸುವುದನ್ನು ಗಮನಿಸಬಹುದು.  ಪಿ.ಬಿ.ಎಸ್ ಅವರು ಫಾರ್ಮ್ ನಲ್ಲಿ ಇರುವಾಗಲೇ ವಿವಿಧ ಕಾರಣಗಳಿಂದ ಹಿನ್ನೆಲೆಗೆ ಸರಿಯುವಂತಾಗದಿದ್ದರೆ  ನಾವಾಡುವ ನುಡಿಯೆ ಕನ್ನಡ ನುಡಿ, ಎಂದೆಂದೂ ನಿನ್ನನು ಮರೆತು ಅಂತಹ ಇನ್ನೂ ಅದೆಷ್ಟೋ ಹಾಡುಗಳು ನಮಗೆ ಸಿಗುತ್ತಿದ್ದವೋ ಏನೋ.  ನಂತರವೂ ಇವರು ಕಾಲಜಯಿ ಗೀತೆ ನಾನೇ ಎಂಬ ಭಾವ ನಾಶವಾಯಿತು ಗೆ ಪಿ.ಬಿ.ಎಸ್ ಅವರನ್ನೇ ಬಳಸಿಕೊಂಡದ್ದು ಗಮನಾರ್ಹ.



6.  ವಿಜಯಾ ಕೃಷ್ಣಮೂರ್ತಿ -  ಮುರಿಯದ ಮನೆ ಚಿತ್ರದ ಮತಿಹೀನ ನಾನಾಗೆ ತಂದೆ
ವಿಜಯಾ ಸ್ಟುಡಿಯೊದ ಕಾಯಂ ಮ್ಯೂಸಿಕ್ ಅರೇಂಜರ್ ಆದ ಇವರು ಸಂಗೀತ ಒದಗಿಸಿದ ಚಿತ್ರಗಳು ಜೇನು ಗೂಡು, ಮುರಿಯದ ಮನೆ ಹಾಗೂ ವಾತ್ಸಲ್ಯ -  ಈ ಮೂರೇ ಆದರೂ ತಮ್ಮ ಶ್ರೀಮಂತ ಸಂಗೀತದಿಂದ  ಚಿರಸ್ಥಾಯಿಯಾಗಿ ಉಳಿದರು.  ಮೇಲ್ನೋಟಕ್ಕೆ ಈ ಹಾಡು ನಾಂದಿಹಾಡೊಂದ ಹಾಡುವೆ ಶೈಲಿಯದ್ದೇ ಅನಿಸಿದರೂ ಇಲ್ಲಿ ಶಂಕರ್ ಜೈಕಿಶನ್ ಮೈಂ ಗಾವೂಂ ತುಂ ಸೋ ಜಾವೊ ಹಾಡಿನಲ್ಲಿ ಮಾಡಿದಂತೆ ದೊಡ್ಡ ಆರ್ಕೆಷ್ಟ್ರಾ ಬಳಸಿಯೂ ಹೇಗೆ ರಾತ್ರಿಯ ನೀರವತೆಯನ್ನು ಸೃಷ್ಟಿಸಬಹುದು ಎಂದು ತೋರಿಸಲಾಗಿದೆ.  ಈ ಚಿತ್ರದ ಹಿಂದಿ ಅವತರಣಿಕೆ ಖಾನ್ ದಾನ್ ನಲ್ಲಿ ಈ ಸಂದರ್ಭಕ್ಕೆ  ರಫಿಯ ತೂ ಹೋಕೆ ಬಡಾ ಬನ್ ಜಾನಾ ಇತ್ತು.



7.  ಎಂ.ರಂಗ ರಾವ್ -  ಸಾಕ್ಷಾತ್ಕಾರ ಚಿತ್ರದ ಜನುಮ ಜನುಮದ ಅನುಬಂಧ
ಇವರು ಪಿ.ಬಿ.ಎಸ್ ಅವರ ಸಮೀಪ ಬಂಧು.  ಎಸ್.ಪಿ.ಬಿ ಯವರನ್ನು ನಕ್ಕರೆ ಅದೇ ಸ್ವರ್ಗ ಮೂಲಕ ಕನ್ನಡಕ್ಕೆ ತಂದವರೂ ಇವರೇ.   ಆರಂಭದ ಆಲಾಪ್ ಸಾಕ್ಷಾತ್ಕಾರ ಚಿತ್ರದ ಈ ಹಾಡಿನ ಹೈ ಲೈಟ್.  ಇಲ್ಲಿ ಪಿ.ಬಿ.ಎಸ್ ದನಿಯಲ್ಲಿ ಒಂದು ವಿಶಿಷ್ಟ ಜೀರು ಇದೆ.  ಇದೇ ಚಿತ್ರದ ಒಲವೆ ಜೀವನ ಸಾಕ್ಶಾತ್ಕಾರ ಹಾಡಿನ ಒಂದು ವಿಶೇಷ ಇದೆ.  ಒಂದೇ ಹಾಡಿನ ಒಂದು happy ಹಾಗೂ ಒಂದು sad ವರ್ಷನ್ ಗಳು ಇದ್ದರೆ ಸಾಮಾನ್ಯವಾಗಿ happy ವರ್ಷನ್ ಹೆಚ್ಚು ಜನಪ್ರಿಯವಾಗುತ್ತದೆ.  ಆದರೆ ಇಲ್ಲಿ ಪಿ,ಬಿ.ಎಸ್ ಅವರ sad ವರ್ಷನ್ ಗೆದ್ದಿದೆ.  ಸೀತಾ ಚಿತ್ರದ ಬರೆದೆ ನೀನು ನಿನ್ನ ಹೆಸ ಹಾಡಿನಲ್ಲೂ ಹೀಗೆಯೇ ಆಗಿದೆ.



8.  ಉಪೇಂದ್ರ ಕುಮಾರ್ - ವನಸುಮ ಚಿತ್ರದ ಚಂದ್ರ ಮಂಚಕೆ ಬಾ 
ಚಿತ್ರ ಬೆಳಕೇ ಕಾಣದಿದ್ದರೂ ಈ ಹಾಡು ಮಾತ್ರ ಅಮರ.  ಎಸ್.ಡಿ.ಬರ್ಮನ್ ಬಂಗಾಳಿ ಸಂಗೀತದ ಛಾಯೆಯನ್ನು ಇಲ್ಲಿ ಗುರುತಿಸಬಹುದು.  ಸಂಸ್ಕೃತಭೂಯಿಷ್ಟ ಸಾಹಿತ್ಯದ ಈ ಕುವೆಂಪು ಹಾಡಿಗೆ ಪಿ.ಬಿ.ಎಸ್ ಅಲ್ಲದೆ ಇನ್ಯಾರು ನ್ಯಾಯ ಒದಗಿಸಬಲ್ಲರು? ತಮ್ಮ ಮೊದಲ ಚಿತ್ರ ಕಠಾರಿವೀರ ದಿಂದ ಮೊದಲ್ಗೊಂಡು ಪರೋಪಕಾರಿ, ಹಸಿರು ತೋರ, ಸಿಪಾಯಿ ರಾಮು ಮುಂತಾದ ಚಿತ್ರಗಳಲ್ಲೂ ಇವರು ಉತ್ತಮ ಪಿ.ಬಿ.ಎಸ್ ಹಾಡುಗಳನ್ನು ನೀಡಿದರು.



9.  ಪೆಂಡ್ಯಾಲ ನಾಗೇಶ್ವರ ರಾವ್ - ಕೃಷ್ಣ ಗಾರುಡಿ ಚಿತ್ರದ ಬೊಂಬೆ ಆಟವಯ್ಯ
ಇವರ ನಿರ್ದೇಶನದಲ್ಲಿ ಪಿ.ಬಿ.ಎಸ್ ಹಾಡು ಇದೊಂದೇ. ಉಳಿದಂತೆ ಇವರು ಯಾವಾಗಲೂ ಘಂಟಸಾಲ ಅವರನ್ನೇ ಬಳಸಿಕೊಂಡವರು. ಈ ಹಾಡು ದರ್ಬಾರಿ ಕಾನಡಾ ರಾಗಾಧಾರಿತ.  ಬಹುಶಃ ಈ ರಾಗ ಪೆಂಡ್ಯಾಲ ಅವರಿಗೆ ಅಚ್ಚು ಮೆಚ್ಚು ಎಂದು ತೋರುತ್ತದೆ. ಹೀಗಾಗಿ ಜಗದೇಕವೀರನ ಕಥೆಯ  ಶಿವಶಂಕರಿ ಹಾಗೂ ಸತ್ಯ ಹರಿಶ್ಚಂದ್ರನಮೋ ಭೂತನಾಥ ಇದೇ ರಾಗದಲ್ಲಿ ಮೂಡಿ ಬಂದವು.  



10.  ಎಸ್.ರಾಜೇಶ್ವರ ರಾವ್ - ಅಮರ ಶಿಲ್ಪಿ ಜಕ್ಕಣ್ಣ ಚಿತ್ರದ ನಿಲ್ಲು ನೀ ನೀಲವೇಣಿ
ಕನ್ನಡದ ಮೊದಲ ವರ್ಣ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಚಿತ್ರದ ಏಕೈಕ ಪಿ.ಬಿ.ಎಸ್ ಹಾಡು ಇದು.  ಉಳಿದ ಹಾಡುಗಳನ್ನು ಘಂಟಸಾಲ ಹಾಡಿದ್ದಾರೆ.  ಹೆಣ್ಣುದನಿಯ ಆಲಾಪದೊಡನೆ ಇರುವ ಈ  ಹಾಡಿನ ಜಾಡಿನಲ್ಲೇ ಮುಂದೆ ಗೌರಿ ಚಿತ್ರದ ಇವಳು ಯಾರು ಬಲ್ಲೆಯೇನು ಹಾಗೂ ಸೊಸೆ ತಂದ ಸೌಭಾಗ್ಯರವಿವರ್ಮನ ಕುಂಚದ  ಕಲೆ ಹಾಡುಗಳು ರೂಪುಗೊಂಡವು.  ಏಕ ಕಾಲಕ್ಕೆ ಕನ್ನಡ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾದ ಈ ಚಿತ್ರದ ತೆಲುಗು ಅವತರಣಿಕೆಯಲ್ಲಿ ಈ ಹಾಡನ್ನು ನಿಲುವುಮಾ ನಿಲುವುಮಾ ನೀಲವೇಣಿ ಎಂದು ಘಂಟಸಾಲ ಅವರು ಹಾಡಿದ್ದಾರೆ. ಅಂದಿನ ಕಾಲದಲ್ಲಿ ಹಿಂದಿ ಚಿತ್ರಗಳ ಹಾಡುಗಳು ಚಿತ್ರ ತೆರೆಕಾಣುವುದಕ್ಕೆ  ಮುನ್ನವೇ  ರೇಡಿಯೊದಲ್ಲಿ ಪ್ರಸಾರವಾಗುತ್ತಿದ್ದರೂ  ಕನ್ನಡ ಹಾಡುಗಳ  ಧ್ವನಿಮುದ್ರಿಕೆಗಳು  ಮಾತ್ರ ಚಿತ್ರ ತೆರೆಕಂಡು ಎಷ್ಟೋ ಸಮಯದ ನಂತರವೇ ಬಿಡುಗಡೆಯಾಗುತ್ತಿದ್ದವು.  ಹಾಗಾಗಿ  ಅಂದಿನ ಕನ್ನಡ ಚಿತ್ರ ಪ್ರೇಕ್ಷಕರಿಗೆ ಚಿತ್ರದಲ್ಲಿ ಯಾವ್ಯಾವ ಹಾಡುಗಳಿವೆ ಎಂದು ತಿಳಿಯುತ್ತಿದ್ದುದು 10 ಪೈಸೆ ಕೊಟ್ಟು ಪದ್ಯಾವಳಿ ಕೊಂಡಾಗಲೇ!  ಆದರೆ ಅಮರ ಶಿಲ್ಪಿ ಜಕ್ಕಣ್ಣದ ಹಾಡುಗಳು ಚಿತ್ರ ಬಿಡುಗಡೆಯ ಕೆಲವು ತಿಂಗಳು ಮೊದಲೇ ರೇಡಿಯೋದಲ್ಲಿ ಪ್ರಸಾರವಾಗತೊಡಗಿ ಎಲ್ಲರಿಗೂ ಕಂಠಪಾಠವಾಗಿದ್ದವು.  ಹಾಗಾಗಿ ಪ್ರೇಕ್ಷಕರಿಗೆ  ಚಿತ್ರದಲ್ಲಿ ಹಾಡುಗಳ ವೀಕ್ಷಣೆ ಹೊಸ ಅನುಭವ ನೀಡಿತ್ತು.



Sunday 4 December 2011

ದೇವ್ ಆನಂದ್ Top Ten

"मां, बंबइ से दिल्ली से कल्कत्ता से मद्रास से, सिंगापुर हांकांग लंडन से, न्यूयार्क  रॊम पैरिस से जो भी टूरिस्ट आता है, स्टॆशन पे उतर के क्या पूछता है - राजू गाइड कहां है  राजू गाइड "

ಗೆಲುವಿಗೆ ಹಿಗ್ಗದೆ ಸೋಲಿಗೆ ಕುಗ್ಗದೆ ಹರ್ ಫಿಕ್ರ್ ಕೊ ಧುವೆಂ ಮೆ ಉಡಾತಾ ಚಲಾ ಗಯಾ ಎನ್ನುತ್ತಾ  ಬದುಕಿಗೆ ಬೈ ಬೈ ಹೇಳಿದ  ದೇವ್ ಆನಂದ್ ತೆರೆಯ ಮೇಲೆ ಸಾಕಾರಗೊಳಿಸಿದ ಅನೇಕ ರಫಿ - ಕಿಶೋರ್ ಹಾಡುಗಳಲ್ಲಿ  ನನ್ನ ಮೆಚ್ಚಿನ ಹತ್ತು ಇಲ್ಲಿವೆ.






1. ಕಭಿ ಖುದ್ ಪೆ - ಹಮ್ ದೊನೊ

                                         

2. ಅಕೇಲಾ ಹೂಂ ಮೈಂ - ಬಾತ್  ಏಕ್ ರಾತ್ ಕೀ

                                         


3. ತೆರೀ ಜುಲ್ಫೊಂ ಸೆ - ಜಬ್ ಪ್ಯಾರ್ ಕಿಸೀ ಸೆ ಹೊತಾ ಹೈ

                                        

4.  ಮಾನಾ ಜನಾಬ್ ನೆ ಪುಕಾರಾ ನಹೀಂ - ಪೇಯಿಂಗ್ ಗೆಸ್ಟ್
     
                                       
5. ದುಖಿ ಮನ್ ಮೆರೆ - ಫಂಟೂಶ್

                                      

6. ದಿಲ್ ಕಾ ಭಂವರ್ ಕರೆ ಪುಕಾರ್ -  ತೇರೆ ಘರ್ ಕೆ ಸಾಮ್ನೆ
                               
                                     

7. ತೆರೆ ಮೆರೆ ಸಪ್ನೆ - ಗೈಡ್

                                    

8.  ಛೇಡಾ ಮೇರೆ ದಿಲ್ ನೆ ತರಾನಾ ತೆರೆ ಪ್ಯಾರ್ ಕಾ - ಅಸಲೀ ನಕಲೀ

                                   

9.  ಜೀವನ್ ಕೀ ಬಗಿಯಾ ಮಹಕೇಗೀ - ತೇರೇ ಮೇರೇ  ಸಪ್ನೆ

                                  

10. ಪಲ್ ಭರ್ ಕೆ ಲಿಯೆ ಕೋಯಿ ಹಮೆ - ಜೋನಿ ಮೇರಾ ನಾಮ್