Saturday, 20 February 2021

ಓಹೋ ಅನಿಸುವ ಓಹಿಲೇಶ್ವರ ಆಲ್ಬಂ


1956ರಲ್ಲಿ ತೆರೆಕಂಡ ಓಹಿಲೇಶ್ವರ ಚಿತ್ರದ ಆಲಿಸಿದರೆ ಓಹೋ ಅನ್ನಿಸುವ  ಒಂದು ಡಜನ್ ವೈವಿಧ್ಯಮಯ ಹಾಡುಗಳ ಪೈಕಿ  ಆಲ್ ಟೈಮ್ ಹಿಟ್ ಅನ್ನಿಸಿದ್ದು ಘಂಟಸಾಲ ಅವರ ಈ ದೇಹದಿಂದ ದೂರನಾದೆ ಮಾತ್ರ. ಈಗಿನ ಅಂತರ್ಜಾಲ ಯುಗದಲ್ಲಿ  ರಾಜ್‌ಕುಮಾರ್ ಸ್ವತಃ ಹಾಡಿದ ಮೊದಲ ಹಾಡು ಎನ್ನುವ ನೆಲೆಯಲ್ಲಿ ಶರಣು ಶಂಭೋ ಮತ್ತು ಅವರಿಗಾಗಿ ಪಿ.ಬಿ.ಶ್ರೀನಿವಾಸ್ ಮೊದಲ ಬಾರಿ ಹಾಡಿದ್ದು ಎಂದು  ನಾ ಪಾಪವದೇನಾ ಮಾಡಿದೆನೋ ಸ್ವಲ್ಪ ಮುಂಚೂಣಿಗೆ ಬಂದಿರುವುದು ಬಿಟ್ಟರೆ ಉಳಿದವು ಅಲಭ್ಯ ಅಲ್ಲದಿದ್ದರೂ ಅಲಕ್ಷಕ್ಕೊಳಗಾಗಿವೆ ಎಂದೇ ಹೇಳಬೇಕಾಗುತ್ತದೆ. ಆಗಿನ ಕಾಲದಲ್ಲೂ ನೀನೆಮ್ಮ ಜೀವ ಶರಣು ಮಹಾದೇವ ಮತ್ತು ದೇಹದಿಂದ ದೂರನಾದೆ ಬಿಟ್ಟರೆ ಬೇರೆ ಹಾಡುಗಳು ರೆಡಿಯೋದಲ್ಲಿ ಕೇಳಲು ಸಿಗುತ್ತಿದ್ದುದು ಅಪರೂಪ. ಈಗ ಎಂದೋ ಒಮ್ಮೆ ಬೆಂಗಳೂರು ವಿವಿಧಭಾರತಿಯಲ್ಲೋ, ಎಫ್.ಎಂ. ರೇನ್‌ಬೋದಲ್ಲೋ  ಇನ್ನುಳಿದ ಯಾವುದಾದರೂ ಹಾಡು ಪ್ರಸಾರವಾದರೂ ಈಗಿನ ಬಹುತೇಕ ಕ್ಯಾಶುವಲ್ ಉದ್ಘೋಷಕರಿಗೆ ಹಾಡುಗಳ ವಿವರ ತಿಳಿಸುವ ಅಭ್ಯಾಸವೇ ಇಲ್ಲದ್ದರಿಂದ ಅದು ಯಾರ ಗಮನಕ್ಕೂ ಬರುವುದಿಲ್ಲ.

ಓಹಿಲೇಶ್ವರ ರಾಜ್‌ಕುಮಾರ್ ಅವರ  4ನೇ ಚಿತ್ರ.  1954ರ ಬೇಡರ ಕಣ್ಣಪ್ಪ ಬಿಟ್ಟರೆ 1955ರ ಸೋದರಿ ಮತ್ತು 1956ರಲ್ಲೇ ತೆರೆ ಕಂಡ ಹರಿಭಕ್ತ ಚಿತ್ರಗಳು ಓಹಿಲೇಶ್ವರ ನಿರ್ಮಿಸಿದ ಟಿ. ವಿಶ್ವನಾಥ ಶೆಟ್ಟಿ ಅವರ  ವಿಶ್ವಕಲಾ ಸಂಸ್ಥೆಯ ಕಾಣಿಕೆಗಳೇ ಆಗಿವೆ ಎಂಬುದು ಗಮನಾರ್ಹ. ಆದರೆ ಮೂರಕ್ಕೆ ಮುಕ್ತಾಯ ಎಂಬಂತೆ ಈ ಸಂಸ್ಥೆ ಆ ಮೇಲೆ ಯಾವ ಚಿತ್ರವನ್ನೂ ನಿರ್ಮಿಸಿದಂತಿಲ್ಲ.  ಈ ಮೂರೂ ಚಿತ್ರಗಳನ್ನು ನಿರ್ದೇಶಿಸಿದವರು ಟಿ.ವಿ. ಸಿಂಗ್ ಠಾಕೂರ್. ಮೂರು ಚಿತ್ರಗಳಿಗೂ ಸಂಗೀತ ನಿರ್ದೇಶನ ಮಾಡಿದವರು ಜಿ.ಕೆ. ವೆಂಕಟೇಶ್.  ಆದರೆ ಮೊದಲ ಚಿತ್ರ ಸೋದರಿಯಲ್ಲಿ ಪದ್ಮನಾಭ ಶಾಸ್ತ್ರಿ ಕೂಡ ಅವರ ಜೊತೆಗಿದ್ದರು.  ತ್ರಿಭುವನ ಜನನಿ ಜಗನ್ಮೋಹಿನಿ ಹಾಡಿನ ಪ್ರೇಮದ ಪುತ್ರಿ ಚಿತ್ರಕ್ಕೂ ಪದ್ಮನಾಭ ಶಾಸ್ತ್ರಿಗಳದ್ದೇ ಸಂಗೀತ ಇದ್ದದ್ದು. ಆ ಮೇಲೆ ಸಂಗೀತ ನಿರ್ದೇಶನ ಕ್ಷೇತ್ರದಿಂದ ಅವರೇಕೆ ಮರೆಯಾದರೋ ತಿಳಿಯದು.

ಈ ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಬರೆಯುವ ಮೂಲಕ  ವಿಜಯನಾರಸಿಂಹ  ಅವರು ಗೀತರಚನಕಾರರಾಗಿ ಚಿತ್ರರಂಗ ಪ್ರವೇಶಿಸಿದರು. ಈ  ದೇಹದಿಂದ ದೂರನಾದೆ ಹಾಡಿನ ಜನಪ್ರಿಯತೆ ಅವರನ್ನು ದಿನ ಬೆಳಗಾಗುವುದರೊಳಗೆ ಪ್ರಸಿದ್ಧರನ್ನಾಗಿಸಿತು.  ಉಳಿದ  ಹಾಡುಗಳನ್ನು ಕು.ರ. ಸೀತಾರಾಮ ಶಾಸ್ತ್ರಿ ಬರೆದಿದ್ದರು.

ಈ ಚಿತ್ರದಲ್ಲಿ ನಟರು ಪರಿಚಿತರಾದವರೇ ಇದ್ದರೂ  ಮುಖ್ಯ ನಟಿಯರಾದ ಶ್ರೀರಂಜಿನಿ ಮತ್ತು ಮೀನಾಕ್ಷಿ ಮೊದಲ ಬಾರಿ ಕಾಣಿಸಿಕೊಂಡವರು.  ಇವರು ರಂಗಭೂಮಿಯಿಂದ ಬಂದವರಿರಬಹುದೇನೋ.  ಆ ಮೇಲೆ ಯಾವ ಚಿತ್ರದಲ್ಲೂ ಇವರನ್ನು ಕಂಡ ನೆನಪಾಗುವುದಿಲ್ಲ. ಕಲ್ಯಾಣ್‌ಕುಮಾರ್  ಆಗಲೇ ನಟಶೇಖರ ಮತ್ತು ಭಾಗ್ಯಚಕ್ರ ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದರೂ ಈ ಚಿತ್ರದಲ್ಲಿ ಪೋಷಕ ಪಾತ್ರವೊಂದರಲ್ಲಿ ಕಾಣಿಸಿಕೊಂಡರು.

ಇದರಲ್ಲಿ ಜಿ.ಕೆ. ವೆಂಕಟೇಶ್ ಅವರು ಒಟ್ಟು 12 ಮಂದಿ ಹಿನ್ನೆಲೆ ಗಾಯಕ ಗಾಯಕಿಯರನ್ನು ಬಳಸಿಕೊಂಡದ್ದು  ವಿಶೇಷ.  ರಾಜ್ ಅವರಿಗೆ ಘಂಟಸಾಲ, ಟಿ.ಎಮ್. ಸೌಂದರರಾಜನ್, ಪಿ.ಬಿ.ಶ್ರೀನಿವಾಸ್ ಮತ್ತು ಸ್ವತಃ ರಾಜ್ ಅವರ ಧ್ವನಿಗಳನ್ನು ಬಳಸಿದ್ದು ಇನ್ನೂ ವಿಶೇಷ. ಈ ರೀತಿ ಒಬ್ಬ ನಟನಿಗೆ ನಾಲ್ವರು ಹಿನ್ನೆಲೆ ಹಾಡು ಹಾಡಿರುವ ಉದಾಹರಣೆ ಬೇರೆ ಇರಲಾರದು. ಈ ಚಿತ್ರದಲ್ಲಿ ಒಂದೂ ಯುಗಳ ಗೀತೆ ಇಲ್ಲದಿರುವುದು ಗಮನಿಸಬೇಕಾದ ಅಂಶ.

ಈ ಚಿತ್ರದ ನಂತರ ಪಿ.ಬಿ.ಶ್ರೀನಿವಾಸ್ ಅವರು ಪಿ.ಕಾಳಿಂಗ ರಾವ್ ಸಂಗೀತವಿದ್ದ ಅಬ್ಬಾ ಆ ಹುಡುಗಿ, ವಿಜಯಭಾಸ್ಕರ್ ಸಂಗೀತದ ರಾಣಿ ಹೊನ್ನಮ್ಮ ಮತ್ತು ದಕ್ಷಿಣಾಮೂರ್ತಿ ಸಂಗೀತದ ಆಶಾಸುಂದರಿ ಚಿತ್ರಗಳಲ್ಲಿ ರಾಜ್ ಅವರಿಗೆ ಹಾಡಿದರು. ಎಂ. ವೆಂಕಟರಾಜು ಸಂಗೀತದಲ್ಲಿ ಭಕ್ತ ಕನಕದಾಸದ ಎಲ್ಲ ಹಾಡುಗಳನ್ನು ಹಾಡಿದ ನಂತರ ಪಿ.ಬಿ.ಎಸ್ ರಾಜ್ ಅವರ ಕಾಯಂ ಧ್ವನಿಯಾದರು.  ಆದರೆ ಈ ನಡುವೆ ಬಂದ ಜಿ.ಕೆ.ವೆಂಕಟೇಶ್ ಸಂಗೀತವಿದ್ದ ರಾಜ್‌ಕುಮಾರ್ ಅಭಿನಯದ ಅಣ್ಣ ತಂಗಿ, ಮಹಿಷಾಸುರಮರ್ದಿನಿ, ರಣಧೀರ ಕಂಠೀರವ, ದಶಾವತಾರ ಮುಂತಾದ  ಚಿತ್ರಗಳಲ್ಲಿ ಪಿ.ಬಿ.ಎಸ್ ಇದ್ದರೂ ಅವರು ರಾಜ್  ಧ್ವನಿ ಆಗಿರಲಿಲ್ಲ. ಜಿ.ಕೆ. ವೆಂಕಟೇಶ್ ಸಂಗೀತದಲ್ಲಿ ಪಿ.ಬಿ.ಶ್ರೀನಿವಾಸ್ ಮತ್ತೆ ರಾಜ್ ಅವರಿಗಾಗಿ ಹಾಡಲು 1961ರ ಕಣ್ತೆರೆದು ನೋಡು ವರೆಗೆ ಕಾಯಬೇಕಾಯಿತು. 

ಓಹಿಲನ ಕಥೆ  ಹರಿಹರನ ಓಹಿಲಯ್ಯನ ರಗಳೆ ಮತ್ತು ಸೋಮದೇವನ ಉದ್ಭಟಕಾವ್ಯದಲ್ಲಿ ಇದೆ ಎನ್ನಲಾಗಿದೆ. ಓಹಿಲ  ಒಬ್ಬ ರಾಜಕುಮಾರ.  ಆದರೆ ಆತನಿಗೆ ಬಾಲ್ಯದಿಂದಲೂ ಆಧ್ಯಾತ್ಮದತ್ತಲೇ ಒಲವು.  ಗೌತಮ ಬುದ್ಧನಿಗಾದಂತೆ ಓಹಿಲನಿಗೂ ಹೊರಗೆ ತಿರುಗಾಡಲು ಹೋದಾಗ ಸಾವು ನೋವುಗಳ ಪರಿಚಯವಾಗುತ್ತದೆ. ಬುದ್ಧನ ಕಥೆಯಲ್ಲಿದ್ದಂತೆಯೇ  ಸಾವಿಲ್ಲದ ಮನೆಯಿಂದ ಅಕ್ಕಿ ತರಲು ಪ್ರಯತ್ನಿಸುವ  ಪ್ರಸಂಗವೂ ಕಥೆಯಲ್ಲಿ ಇದೆ. ಜಾತಿ ಮತಗಳ ನಡುವಿನ ತಾರತಮ್ಯವನ್ನು ವಿರೋಧಿಸುವ ಆತ ಅರಮನೆಯಲ್ಲಿ ಬಾಲ್ಯದಿಂದಲೂ ತನ್ನೊಡನೆ ಆಡಿ ಬೆಳೆದ ಉಮೆಯನ್ನು ಮದುವೆಯಾಗಲೊಪ್ಪದೆ ತಾನು ಆಶ್ರಯಕೊಟ್ಟಿದ್ದ ಗೌರಿ ಎಂಬ ಸಮಾಜದ ನಿಮ್ನವರ್ಗಕ್ಕೆ ಸೇರಿದ ಅಂಧ ಹುಡುಗಿಯ ಕೈ ಹಿಡಿಯಬಯಸುತ್ತಾನೆ.  ಇದಕ್ಕೆ ರಾಜಗುರು ಆಕ್ಷೇಪ ವ್ಯಕ್ತ ಪಡಿಸಿದಾಗ ತನಗೆ ಸಂಸಾರ ಬಂಧನವೇ ಬೇಡ ಎಂಬ ನಿರ್ಧಾರ ತಳೆದು ಗೌರಿಯನ್ನು ತನ್ನ ಆಧ್ಯಾತ್ಮಿಕ ಗುರು ಎಂದು ಭಾವಿಸಿ ಅವಳ ಜೊತೆ ಸೌರಾಷ್ಟ್ರದ ಸೋಮನಾಥ ಕ್ಷೇತ್ರಕ್ಕೆ ಹೋಗುತ್ತಾನೆ. ಹದಿನೆಂಟು ತುಂಬುವುದರೊಳಗೆ ಮಗನ ವಿವಾಹವಾಗದಿದ್ದರೆ ಸಾವು ಎಂಬ ಶಾಪ ಇದ್ದುದರಿಂದ ಓಹಿಲನ ತಂದೆ ತಾಯಿಗಳು ಮರಣ ಹೊಂದುತ್ತಾರೆ. ಅವರ ಅಂತ್ಯ ಸಂಸ್ಕಾರ ಮಾಡದೆ ಕರ್ಮಚಂಡಾಲನಾದದ್ದು ಮಾತ್ರವಲ್ಲದೆ ಹೀನಕುಲದ ಗೌರಿಯನ್ನು ಜತೆಗೆ ಕರೆದೊಯ್ದು ಧರ್ಮಭ್ರಷ್ಟನಾಗಿದ್ದಾನೆಂಬ ಆರೋಪ ಹೊರಿಸಿದ ರಾಜಗುರು ಆತನಿಗೆ ಎಲ್ಲೆಡೆ ಬಹಿಷ್ಕಾರ ಹಾಕಿಸುತ್ತಾನೆ.  ಧರ್ಮಾಂಧರ ಉಪಟಳದಿಂದ  ಸೋಮನಾಥೇಶ್ವರನ ಸೇವೆಗೆ ಧೂಪವೂ ಸಿಗದಂತಾದಾಗ ತನ್ನನ್ನೇ ಬೆಂಕಿಯಲ್ಲಿ ಉರಿಸಿ ಶಿವನ ಸಾನ್ನಿಧ್ಯ ಸೇರಿ ಓಹಿಲೇಶ್ವರನೆನ್ನಿಸುತ್ತಾನೆ.

ಚಿತ್ರದಲ್ಲಿ ಗುರುವಿನ ಶಾಪದಿಂದ ಗಿಳಿಯಾಗಿ ಚಂದ್ರೋದಯದಿಂದ ಕೆಲವು ಗಳಿಗೆ ಮಾತ್ರ ಮನುಷ್ಯ ರೂಪ ತಾಳುವ  ಶುಕ ಮುನಿಯ ಪ್ರಸಂಗವನ್ನೂ ಸೇರಿಸಿಕೊಳ್ಳಲಾಗಿದೆ.  ಆತ ಉದ್ಭಟನೆಂಬ ರಾಜಕುಮಾರನನ್ನು ಕರೆತಂದು ರಾಜಕುಮಾರಿ ಉಮೆಯೊಂದಿಗೆ ವಿವಾಹ ಮಾಡಿಸಿ ಶಾಪವಿಮುಕ್ತನಾಗುತ್ತಾನೆ.  ಓಹಿಲನಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡುವ ಸಖನಾಗಿಯೂ ಇರುತ್ತಾನೆ.

ಓಹಿಲೇಶ್ವರ ಚಿತ್ರದ ಎರಡು ಪ್ರತಿಗಳು ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು.

ಚಿತ್ರದ ಪಾರಿಭಾಷಿಕ ವಿವರಗಳು
.

ಬ್ಯಾನರ್ : ವಿಶ್ವಕಲಾ ಚಿತ್ರ
ನಿರ್ಮಾಪಕರು : ಟಿ.ವಿಶ್ವನಾಥ ಶೆಟ್ಟಿ, ಟಿ.ವಿ. ಸಿಂಗ್ ಠಾಕೂರ್.
ನಿರ್ದೇಶನ: T.V. ಸಿಂಗ್ ಠಾಕೂರ್.
ತಾರಾಗಣ :
ಶ್ರೀರಂಜಿನಿ, ಮೀನಾಕ್ಷಿ, ರಾಜಕುಮಾರ್, ಕಲ್ಯಾಣಕುಮಾರ್, ಹೆಚ್. ರಾಮಚಂದ್ರ. ಶಾಸ್ತ್ರಿ, ನರಸಿಂಹರಾಜು, ಜಿ.ವಿ.ಅಯ್ಯರ್, ಬೇಬಿ ಉಮಾ ಮತ್ತು ಮಾಸ್ಟರ್ ಆನಂದ್, ಹೆಚ್. ಕೃಷ್ಣ ಶಾಸ್ತ್ರಿ, ಸಿದ್ದಯ್ಯಸ್ವಾಮಿ, ಗಣಪತಿ ಭಟ್, ಬಸವರಾಜ್, ಬಿ.ಶಾಂತಮ್ಮ, ಗುಗ್ಗು ಮತ್ತಿತರರು.
ಹಿನ್ನೆಲೆ ಗಾಯಕರು :
ಪಿ.ಲೀಲಾ, ಪಿ.ಶುಶೀಲಾ, ಎ.ಪಿ. ಕೋಮಲಾ, ಜಮುನಾರಾಣಿ, ಸತ್ಯವತಿ, ಸರೋಜಿನಿ, ಘಂಟಸಾಲ, T.M. ಸೌಂದರರಾಜನ್, ಪಿ.ಬಿ. ಶ್ರೀನಿವಾಸ್, ರಘುನಾಥ ಪಾಣಿಗ್ರಾಹಿ, ರಾಜಕುಮಾರ್, ಜಿ.ಕೆ. ವೆಂಕಟೇಶ್.
ಸಂಭಾಷಣೆ, ಸಹನಿರ್ದೇಶನ : ಜಿ.ವಿ.ಅಯ್ಯರ್.
ಗೀತೆಗಳು : ಕು.ರ. ಸೀತಾರಾಮ ಶಾಸ್ತ್ರಿ, ವಿಜಯನಾರಸಿಂಹ.
ಛಾಯಾ ನಿರ್ದೇಶನ : ಬಿ. ದೊರೈರಾಜ್. ಸಹಾಯಕರು : P.N. ಸುಂದರಂ ಮತ್ತು ಯತೀಂದ್ರನ್
ಶಬ್ದ ನಿರ್ದೇಶನ : ಎ. ಕೃಷ್ಣನ್.
ಶಬ್ದಗ್ರಹಣ :ಈ. ವೆಂಕಟಾಚಲಂ.
ಎಡಿಟಿಂಗ್ : ರಾಜನ್ ಮತ್ತು ವೆಂಕಟರಾಮ್
ಸಂಗೀತ : ಜಿ.ಕೆ. ವೆಂಕಟೇಶ್.
ನೃತ್ಯ : ಪಿ.ಎಸ್. ಗೋಪಾಲಕೃಷ್ಣನ್.
ಲ್ಯಾಬೊರೇಟರಿ : ವಿಜಯಾ.
ಪ್ರೊಸೆಸಿಂಗ್ : S.V. ವೆಂಕಟರಾಮನ್.
ಸ್ಟುಡಿಯೊ : ವಾಹಿನಿ.
ಧ್ವನಿಮುದ್ರಣ : Westrex
ಪಬ್ಲಿಸಿಟಿ : ಕಟಕ.
ಹಂಚಿಕೆ : ಕರ್ನಾಟಕ ಫಿಲಂಸ್ ಮತ್ತು ಶ್ರೀನಿವಾಸ ಪಿಕ್ಚರ್ಸ್

ಹಾಡುಗಳು

01. ಬನ್ನಿ ಬಾಲೆಯರೆ
ರಚನೆ : ಕುರಸೀ
ಹಾಡಿದವರು : ಎ.ಪಿ. ಕೋಮಲಾ, ಸತ್ಯವತಿ, ಸರೋಜಿನಿ ಮತ್ತು ಸಂಗಡಿಗರು.

ಹರಿಕಾಂಬೋಜಿ ರಾಗದ ಸ್ವರಗಳನ್ನು ಹೊಂದಿರುವ ಈ ಸಮೂಹಗಾನ ನೌಷಾದ್ ಅವರ ಆನ್ ಮತ್ತು ಮದರ್ ಇಂಡಿಯಾ ಚಿತ್ರದ ಹಾಡುಗಳನ್ನು ನೆನಪಿಸುತ್ತದೆ.  ಮೊದಲ ಚರಣದ ವರೆಗೆ ಆದಿತಾಳದಲ್ಲಿ ಸಾಗುವ ಈ ಹಾಡಿನ ನಡೆ ನಂತರ 7 ಅಕ್ಷರಗಳ ತ್ರಿಪುಟ ತಾಳಕ್ಕೆ ಬದಲಾಗುತ್ತದೆ. ಬೂತಯ್ಯನ ಮಗ ಅಯ್ಯು ಚಿತ್ರದ ಸೋಬಾನ ಸೋಬಾನ ಹಾಡು ಇದೇ ನಡೆಯಲ್ಲಿರುವುದನ್ನು ನೆನಪು ಮಾಡಿಕೊಳ್ಳಬಹುದು. ಈ ಹಾಡಿನಲ್ಲಿ ಅನೇಕ ಗಾಯಕಿಯರ ಧ್ವನಿಯಿದ್ದು ಪಟ್ಟಿಯಲ್ಲ್ಲಿ ಹೆಸರಿಲ್ಲದಿದ್ದರೂ ಒಂದೆರಡು ಸಾಲುಗಳಲ್ಲಿ ಎಲ್.ಆರ್. ಈಶ್ವರಿ ಧ್ವನಿ ಕೇಳಿದ ಅನುಭವವಾಗುತ್ತದೆ. ಅವರು ಕೋರಸ್ ಭಾಗವಾಗಿ ಹಾಡಿರುವ ಸಾಧ್ಯತೆಯೂ ಇದೆ. ರಾಜೇಶ್ವರಿ ಎಂಬ ಹೆಸರಿನಿಂದ ಅವರು ಕನ್ನಡದಲ್ಲಿ ಮೊದಲು ಹಾಡಿದ್ದು 1958ರ ಅಣ್ಣ ತಂಗಿ ಚಿತ್ರದ ಕಂಡರೂ ಕಾಣದ್‌ಹಾಂಗೆ ಹಾಡು.
 
ಬನ್ನಿ ಬಾಲೆಯರೆ ಹೊನ್ನಿನಾರತಿಯ
ತನ್ನಿ ನಮ್ಮ ಯುವರಾಜನಿಗೆ
ಕೋಟಿಸೂರ್ಯ ಸಮ ತೇಜನಿಗೆ
ಕೋಮಲಾಂಗ ಸುಮಬಾಲನಿಗೆ

ಯುವರಾಜನ ಶುಭ ಯೋಗ
ಭುವಿಗೀಯಲಿ ಸಂಪದವೀಗ
ಆನಂದದ ಭಾವಾವೇಗ
ಮೊರೆಯಲಿ ಹರುಷದ ರಾಗ
ಅನುರಾಗ ಅದೇ ಯೋಗ ಯಾಗ ಭೋಗ
ಸರ್ವಧರ್ಮಗಳ ಸನ್ಮಾರ್ಗ

ಊರು ಹೆಂಗಳ ದೃಷ್ಟಿಯ
ನೂರಾರು ಕಂಗಳ ದೃಷ್ಟಿಯ
ತೆಗೆದು ನೀವಾಳಿಸಲು ಬನ್ನಿರೆ
ಅರಸು ಕುವರನಿಗಾರತಿ ಈ
ಸೊಗಸು ಮೂರುತಿಗಾರತಿ

ಚೆಲುವರಾಯಗೆ ಒಲವಿನಾರತಿ
ಬೆಳಗಿ ನಲವ ತನ್ನಿರೇ
ನಿರುತ ನಿರ್ಮಲ ಹರುಷ ಜೀವನ
ಹರಸಿ ಮೆರೆವ ಬನ್ನಿರೆ


02. ನೀ ಎಮ್ಮ ಜೀವ
ರಚನೆ : ವಿಜಯನಾರಸಿಂಹ
ಹಾಡಿದವರು :ಎ.ಪಿ. ಕೋಮಲಾ, ಸತ್ಯವತಿ


ಶಂಕರಾಭರಣ ಮತ್ತು ಹರಿಕಾಂಬೋಜಿ ಮಿಶ್ರ ಸ್ವರಗಳನ್ನು ಹೊಂದಿದ ಈ ಹಾಡು ತಿಶ್ರ ನಡೆಯಲ್ಲಿದೆ.  ಬಾಲಕ ಓಹಿಲ ಮತ್ತು ಆತನ ಒಡನಾಡಿ ಉಮಾ ದೇವರನ್ನು ಪೂಜಿಸುತ್ತಾ ಹಾಡುವ ಇದರ ಸಾಹಿತ್ಯ ಮಕ್ಕಳಿಗೆ ಸಹಜವಾದ ಸರಳ ಪದಗಳನ್ನು ಹೊಂದಿದೆ.  ಸಿತಾರ್, ಕೊಳಲು, ತಬ್ಲಾಗಳ ಸರಳ ಹಿಮ್ಮೇಳ ಹೊಂದಿದ ಧಾಟಿಯೂ ಸರಳವಾಗಿಯೇ ಇದೆ.  ಚಿತ್ರದಲ್ಲಿ ಈ ಹಾಡು ಸಂದರ್ಭಕ್ಕೆ ತಕ್ಕಂತೆ ಅರ್ಧಕ್ಕೆ ಕೊನೆಗೊಳ್ಳುತ್ತದೆ.  ಸುಗಮ ಕೇಳುವಿಕೆಗಾಗಿ ಅದನ್ನು ಇಲ್ಲಿ ಸರಿಪಡಿಸಿದ್ದೇನೆ.
 
ನೀನೆಮ್ಮ ಜೀವ ಶರಣು ಮಹಾದೇವ
ಶಂಕರನೇ ಕಾಯುವುದೈ ಕರುಣಾಂತರಂಗ
ನೀನೆಮ್ಮ ಜೀವ ಶರಣು ಮಹಾದೇವ

ಅತ್ತಾಗ ಕಣ್ಣೊರಸಿ ತುತ್ತಿಡುವೆಯಂತೆ
ಕತ್ತಲಲಿ ಹೆದರಿದರೆ ನೀ ಕಾಯುವಂತೆ
ಹತ್ತಿರವೇ ಬಾ ಗೌರಿ ಶಿವನೊಡನೆ ತಾಯೇ
ಮುತ್ತಂತೆ ನಮ್ಮನ್ನ ಚೆನ್ನಾಗಿ ಕಾಯೇ

ನೋಡಿದೆನಲ್ಲ ಲೋಕದ ನೋವ
ಬೇಡುವ ಕೈಯ ಮುಪ್ಪಿನ ಮೈಯ
ಕೋಪವಿದೇಕೆ ದೀನರ ಮೇಲೆ
ಸರಿಯೇನೋ ಈ ನೀತಿ ನಿನಗೆ ಮಹೇಶ

ತಂದೆಯೂ ನೀನೇ ತಾಯಿಯು ನೀನೆ
ವಂದಿಸಿ ನಲಿವ ಬಾಲರ ನೋಡು
ನಂದದ ಜ್ಯೋತಿಯ ಬೆಳಗಿಸು ದೇವ
ಸರಿಯೇನೋ ಈ ನೀತಿ ನಿನಗೆ ಮಹೇಶ


03. ಪಾವನ ಪರಶಿವ
ರಚನೆ : ಕುರಸೀ
ಹಾಡಿದವರು : ಸಿ.ಎಸ್. ಸರೋಜಿನಿ, ಪಿ.ಲೀಲಾ.


ಬಾಲಕಿ ಗೌರಿ ಸಿ.ಎಸ್. ಸರೋಜಿನಿಯ ಧ್ವನಿಯಲ್ಲಿ ಶಂಕರಾಭರಣ ಸ್ವರಗಳಲ್ಲಿ ತಬ್ಲಾದ ಮಧ್ಯ ಲಯದ ಲಘು ಶೈಲಿಯಲ್ಲಿ ಹಾಡಲು ಆರಂಭಿಸಿ ಹಾಡಿನ ಮಧ್ಯದಲ್ಲಿ ತರುಣಿಯಾಗಿ ಮಾರ್ಪಟ್ಟು  ವಲಚಿ ರಾಗ ಛಾಯೆಯ ಶಾಸ್ತ್ರೀಯ ಶೈಲಿಯಲ್ಲಿ ದ್ರುತ ಲಯದೊಂದಿಗೆ ಪಿ.ಲೀಲಾ ಅವರ ಧ್ವನಿಯಲ್ಲಿ ಮುಂದುವರಿಸುತ್ತಾಳೆ.  ಪಿ.ಲೀಲಾ ಅವರಿಗೆ ಇಡೀ ಚಿತ್ರದಲ್ಲಿ ಈ ಅರ್ಧ ಹಾಡು ಮಾತ್ರ ಇರುವುದು. ಮಹೇಂದ್ರ ಕಪೂರ್ ಅವರಿಗೆ ಸಂಗಂ ಚಿತ್ರದ ಹರ್ ದಿಲ್ ಜೊ ಪ್ಯಾರ್ ಕರೇಗಾ ಹಾಡಿನ ಒಂದು ಚರಣದಲ್ಲಿ ಮಾತ್ರ ಅವಕಾಶವಿದ್ದಂತೆ.
 
ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಕಣ್ಣು ಕಾಣದೆ ಮಾಡಿದ ತಪ್ಪನು
ಮನ್ನಿಸಿ ಕಾಯೋ ಮಹದೇವ
ದೀನರ ಪಾಲಿನ ಪರದೈವ
ಮನ್ನಿಸಿ ಕಾಯೋ ಮಹದೇವ

ಏನು ಬೇಡಲೂ ತೋರದು ನನಗೆ
ನೀನಿರು ಜತೆಗೆ ಶಂಕರನೇ
ಕಾಣೆನು ದೇವನೆ ದಾರಿಯನೇ
ನೀನಿರು ಜತೆಗೆ ಶಂಕರನೇ

ಕಣ್ಣು ಕಾಣದೆ ಮಾಡಿದ ತಪ್ಪನು
ಮನ್ನಿಸಿ ಕಾಯೋ ಮಹದೇವ
ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ

ಕಾಡುಹೂವಲಿ ಪರಿಮಳ ಬೆರಸಿ
ಬಾಡುವ ಮೊದಲೇ ಮುಡಿಯೊಳಗಿರಿಸಿ
ಮೂರು ಗಳಿಗೆಯ ಬಾಳನು ಮೆರೆಸಿ
ಪಾರುಗಾಣಿಸೋ ಕರುಣೆಯನಿರಿಸಿ

04. ನಿಧಿಯೊಂದ ನಿನಗಾಗಿ
ರಚನೆ : ಕುರಸೀ
ಹಾಡಿದವರು : ಪಿ.ಸುಶೀಲಾ


ಇದು ಶಿವಭಕ್ತನ ಕಥೆಯಾದ್ದರಿಂದ ಬಹುಶಃ ಜಿ.ಕೆ. ವೆಂಕಟೇಶ್ ಅವರು ಶಂಕರಾಭರಣ ಸ್ವರಗಳನ್ನೇ ಹೆಚ್ಚು ಹಾಡುಗಳಲ್ಲಿ ಬಳಸಿದ್ದಾರೆ. ಈ ಹಾಡು ಕೂಡ ನಿಷಾದವನ್ನು ಬದಲಾಯಿಸುತ್ತಾ  ಶಂಕರಾಭರಣ - ಹರಿಕಾಂಬೋಜಿ ಸ್ವರಗಳಲ್ಲೇ ಸಾಗುತ್ತದೆ. ಉಮಾ ಮತ್ತು ಓಹಿಲರ ವಿವಾಹ ನೆರವೇರುತ್ತದೆಂಬ ಕಲ್ಪನೆಯಿಂದ ಗೌರಿಯು ಗೆಳತಿಯನ್ನು ಛೇಡಿಸುವ ಹಾಡಿದು.  ಜಾನಪದ ಸ್ವಾದ ಇರುವ ತಿಶ್ರ ನಡೆಯ ಈ ಹಾಡಲ್ಲಿ ಢೋಲಕ್, ಮ್ಯಾಂಡೊಲಿನ್ ಮುಖ್ಯವಾಗಿ ಕೇಳಿಸುತ್ತವೆ. Interludeನಲ್ಲಿ ಬಾಸ್ ಗಿಟಾರ್, ಕೊಳಲು, ವಯಲಿನ್ಸ್,  ಮ್ಯಾಂಡೊಲಿನ್ ಇವೆ.  ಚರಣಗಳು ಸಾಮಾನ್ಯ ಹಾಡುಗಳಂತೆ 2-3 ಸಾಲು ಇರದೆ ಒಂದಕ್ಕೊಂದು ಜೋಡಿಸಿದ ದಾರದಂತೆ ಉದ್ದವಾಗಿವೆ.  ಹಾಡಿನುದ್ದಕ್ಕೂ ಕುರಸೀ ಅವರ ವೈಶಿಷ್ಟ್ಯವಾದ ಒಳ ಪ್ರಾಸದ ಪದಗಳಿವೆ.  ನಾನು ಈ ಹಾಡು ಮೊದಲು ಕೇಳಿದ್ದು ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಿನ ಭಾಗವಾಗಿ.
 
ನಿಧಿಯೊಂದ ನಿನಗಾಗಿ ವಿಧಿರಾಯ ಕರೆತಂದ
ತುಂಬಾ ದೂರದಿಂದ ಬಂಗಾರ
ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ
ನಿನ್ನ ಜೋಡಿ ಅವ ಸಿಂಗಾರ

ಮನವನ್ನೇ ಸೂರೆಗೈವ ಮಾಯ ಮಂತ್ರಗಾರ
ಈ ನರ ನವ ಕಿನ್ನರ
ವನ ಸುತ್ತಿ ವಿಹರಿಸುತ್ತ
ಚಿತ್ತ ಕೆಡುವ ಮತ್ತು
ಮಂತ್ರವನೂದಿದ್ದ ಈ ಚೋರ
ಬಂದು ನೀನಲ್ಲಿ ಬೀರಿದೆ ವೈಯಾರ
ವಾರೆ ನೋಟ ನೂರು ಬಗೆ ಕಣ್ಣಾರ
ಮೂರು ಲೋಕ ನಾಚಿಸುವ ಸಿಂಗಾರ

ಕಣ್ಣ ಕಿರಣದಲ್ಲೆ ಕಳ್ಳ ಗೆಳೆತನವ
ತೋರಿದ ಮೋಹ ತೂರಿದ
ಮೋಹ ಮಲ್ಲೆ ಮಲರುವಲ್ಲೆ
ಸ್ನೇಹ ಮಧುವ ಹೊರ
ನೂಕುವ ಕಾಲ ಓಡಿ ಬಂದಿದೆ
ನಿನ್ನ ಸೌಭಾಗ್ಯ ಮಾಲೆ ಕಾದು ನಿಂತಿದೆ
ನೂರು ಹಾಸ ಭಾಸಗಳ ತಂದಿದೆ
ನಿನ್ನ ಹಾವಭಾವದಲಿ ಒಂದಿದೆ


05. ಹರಿಯಲಿ ವಸಂತ ಧಾರೆ
ರಚನೆ : ಕುರಸೀ
ಹಾಡಿದವರು : ಜಮುನಾರಾಣಿ ಮತ್ತು ಸಂಗಡಿಗರು.


ಅಲ್ಲಿ ಇಲ್ಲಿ ಬೇರೆ ಸ್ವರಗಳನ್ನು ಸ್ಪರ್ಷಿಸುತ್ತಾ ಭೈರವಿ ರಾಗದಲ್ಲಿ ವಿಹರಿಸುವ ಈ ಆನಂದೋಲ್ಲಾಸದ ಹಾಡು  ರಾಜಕುಮಾರಿ ಉಮಾ ಮತ್ತು ಉದ್ಭಟ ರಾಜನ ಮದುವೆಯ ಸಂಭ್ರಮ ಸಂದರ್ಭದ್ದು. ತೆಲುಗಿನ ರಾಜೇಶ್ವರ ರಾವ್, ಪೆಂಡ್ಯಾಲ, ಘಂಟಸಾಲ ಮುಂತಾದವರ ಶೈಲಿಯಲ್ಲಿದೆ. ಇದರಲ್ಲಿ ಬರುವ ಬಿಗುಮಾನ ಸಾಕೆ ತಾವರೆ ಸಾಲು ಅಲೌಕಿಕ ಅನುಭೂತಿ ಉಂಟು ಮಾಡುತ್ತದೆ.  ಶ್ರುತಿಯಲ್ಲಿರುವ ಢೋಲಕ್ ಲಯ ಹಾಡಿಗೆ ಉತ್ತಮ ಉಠಾವ್ ಒದಗಿಸಿದೆ.
 
ಹೊಳೆ ಹರಿಯಲಿ ವಸಂತ ಧಾರೆ
ಕಿರುನಗೆಯ ಬೀರುತ ಬಾರೆ
ರವಿ ಬಂದ ನೋಡೆ ಚದುರೆ
ಬಿಗುಮಾನ ಸಾಕೆ ತಾವರೆ

ಹಗಲು ಬರುವ ಮೊದಲು ಏಕೆ
ಮುಗಿಲು ಕೆಂಪಿನ ಸಾಲು
ರವಿರಾಯನ ರಥದಲ್ಲೂ
ಹೊರ ಚೆಲ್ಲುವ ಕೆಂಧೂಳು
ಸುಳ್ಳು ಸುದ್ದಿ ಪೊಳ್ಳು ಕಥೆ ಬೇಡ
ಜನ ನಂಬದಂಥ ಮಾತ ಹೇಳ ಬೇಡ
ಬಲು ಜಾಣೆ ನೀನೇ ಪೇಳೆ
ಸುರಲೋಕದ ಕೆನ್ನೀರೇ
ಶುಭ ರಾಣಿ ತಂದು ಚೆಲ್ಲಿರೆ
ಕೆಂಪಾದದು ಸೂರ್ಯನ ಮೋರೆ

ಹರೆಯ ಬಂದ ಸಮಯ ಇವ
ಗೆಳೆಯ ಕೋಮಲರಾಯ
ಇವನಾರೇ ಈವಯ್ಯ
ಇದು ಯಾರೋ ಪರಕೀಯ
ಅಲ್ಲಿ ಇಲ್ಲಿ ಸುತ್ತಿ ಬಂದ ಧೀರ ಇವ
ಳಂತರಂಗ ಸೂರೆಗೈದು ಪೂರ
ಭಲೇ ಶೂರ ಭಾರೀ ಚೋರ
ಸರಿ ತನ್ನಿರೆ ಕೆನ್ನೀರ
ಪಿಚಕಾರಿ ತುಂಬಿ ಚೆಲ್ಲಿರೇ
ಕೆಂಪಾಗಲಿ ಈತನ ಮೋರೆ


06. ಓ ಸುರ ಸುಂದರಿ
ರಚನೆ : ಕುರಸೀ
ಹಾಡಿದವರು : ಜಮುನಾರಾಣಿ ಮತ್ತು ಸಂಗಡಿಗರು.


ತನ್ನ ಗುರು ತಪೋಶಕ್ತಿಯಿಂದ  ಸ್ವರ್ಗಲೋಕದ ಅಪ್ಸರೆಯರೊಂದಿಗೆ ಮದಿರಾಪಾನ ಮಾಡುತ್ತಾ ನರ್ತಿಸಿದಂತೆ ಶುಕನಿಗೆ ಭಾಸವಾಗುವ  ಸಂದರ್ಭದ ಹಾಡಿದು. ಆರಂಭ ಸಲಿಲ್ ಚೌಧುರಿ ಅವರ ಯಾವುದೋ ಹಾಡು ಕೇಳುತ್ತಿದ್ದೇವೇನೋ ಎಂಬ ಭ್ರಮೆ ಉಂಟು ಮಾಡುತ್ತದೆ. ತಿಶ್ರ ನಡೆಯಲ್ಲಿದೆ.  ಅನುಮಾನವೇನು ಪದದ ನಂತರ ಚೇಲೋದಲ್ಲಿ ನುಡಿಸುವ ಒಂದು ಸಣ್ಣ ಬ್ರಿಜ್ ಪೀಸ್ ವಿಶೇಷ ಪರಿಣಾಮ ಉಂಟು ಮಾಡಿದೆ.  ಕಥೆಯಲ್ಲಿ ಕಾಲ್ಪನಿಕ ಸಂದರ್ಭವಾದ್ದರಿಂದ ಗಿಟಾರ್, ಕ್ಲಾರಿನೆಟ್ ಇತ್ಯಾದಿಗಳನ್ನು ಬಳಸಿ ಮೆಲೊಡಿ ಕೌಂಟರ್ ಮೆಲೊಡಿಗಳ interlude  ಬಳಸಲಾಗಿದೆ. ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ಋಷಿ ಮುನಿಗಳ ಸುತ್ತ ಅಪ್ಸರೆಯರು ನರ್ತಿಸುವುದುಂಟು.  ಆದರೆ ಇಲ್ಲಿ ಮುನಿಯೂ ನೃತ್ಯದಲ್ಲಿ ಭಾಗಿಯಾಗಿರುವುದು ವಿಶೇಷ.
 
ಓ ಸುರಸುಂದರಿ ಬಾರೆಂದೆಯಾ ಸುಖ ತಾರೆಂದೆಯಾ
ನಾನೂ ನೀನು ಹಾಲು ಜೇನು ಅನುಮಾನವೇನು

ಕೈಲಾಸ ವಾಸ ನೀ ಕೋರಿದಂದು
ನೀ ಕೋರಿದಂದು
ಈ ಪಾನಕಾನೇ ತಂದೀವುದು
ಇದೇ ಸಾಕೇನು ಸದಾ ಬೇಕೇನು
ನಾನೂ ನೀನು ಹಾಲು ಜೇನು ಅನುಮಾನವೇನು

ವೇದಾಂತ ಸಾರ ಈ ನೃತ್ಯ ಗೀತ
ಈ ನೃತ್ಯ ಗೀತ
ಭಾವಾನುರಾಗ  ಧ್ಯಾನಾಮೃತ
ಭಲೇ ಚಾತುರ್ಯ  ಅತಿ ಮಾಧುರ್ಯ
ಏನೀ ಧೈರ್ಯ ಏನಾಶ್ಚರ್ಯ
ಅಪರೂಪ ನ್ಯಾಯ


07. ಕೋ ಜನ್ಮದಾತಾ
ರಚನೆ : ವಿಜಯನಾರಸಿಂಹ
ಹಾಡಿದವರು : ಪಿ.ಸುಶೀಲಾ


ಇದು ಟೈಪಿಂಗ್ ಮಿಸ್ಟೇಕ್ ಅಂದುಕೊಂಡಿರಾ?  ಖಂಡಿತ ಅಲ್ಲ.  ಎಲ್ಲರೂ ಸಹಜವಾಗಿಯೇ ಅಂದುಕೊಳ್ಳುವಂತೆ   ಈ ಹಾಡಿನ ಮೊದಲ ಸಾಲು  ‘ಓ ಜನ್ಮದಾತಾ’ ಅಲ್ಲ. ಅದು  ‘ಕೋ ಜನ್ಮದಾತಾ’.  ಅಂದರೆ ನಾನು ಬೇರೇನೂ ನೀಡಲಾರೆ, ಕಣ್ಣೀರ ಧಾರೆಯನ್ನೇ ಕೋ ಅಂದರೆ ತೆಗೆದು ಕೋ ಎಂದರ್ಥ.  ಅರಮನೆಯನ್ನು ತ್ಯಜಿಸಿ ಬಂದ ಗೌರಿಗೆ ತನ್ನ ತಂದೆಯ ಸಾವಿನ ಸುದ್ದಿ ತಿಳಿದಾಗ ತನ್ನ ದುರ್ವಿಧಿಯನ್ನು ನೆನೆದು ಆಕೆ ಶೋಕಿಸುವ ಸಂದರ್ಭದ ಹಾಡಿದು. 22ನೇ ಮೇಳಕರ್ತ ಖರಹರಪ್ರಿಯ ಜನ್ಯ ಸ್ವರಗಳನ್ನು ಹೊಂದಿದೆ. 5 ಅಕ್ಷರಗಳ ಜಂಪೆ ತಾಳದಲ್ಲಿದೆ. ಚರಣದ ಮಧ್ಯದಲ್ಲಿ ಕ್ಲಿಷ್ಟಕರವಾದ ಆಲಾಪ ಇದೆ.
 
ಕೋ ಜನ್ಮದಾತಾ ಆಜನ್ಮ ಪೂರ್ತ
ಕಣ್ಣೀರ ಧಾರೆ
ಇನ್ನೇನು ಬೇರೆ ನಾ ನೀಡಲಾರೆ

ಹೊರಹೊಮ್ಮಿ ಎದೆಯಿಂದ ಕಣ್ಣಾರೆ ಬಂದ
ಗಂಗೋದಕ
ಹಾರೈಸಿ ಮರೆಯಾದ ನಿನ್ನಾತ್ಮ ತಣಿಸೆ
ಹಾರೈಸಿ ನಾ ತಂದ ಈ ಶೋಕ ಧಾರೆ
ಈ ಅಂತ್ಯ ಧಾರೆ

ಕೈಲಾಸ ನಿನಗಾಗಿ ಕೈ ಚಾಚಿ ಕರೆದು
ಬಾ ಎಂದಿತೇ
ನಿನ್ನಾಯು ಇಂತೇ ಹಣ್ಣಾಯಿತೇಕೆ
ಓ ನನ್ನ ತಂದೆ ನಾ ನೀವುದೊಂದೇ
ಈ ಅಂತ್ಯ ಧಾರೆ

08. ಯಾರಿಗೆ ಯಾರಿಹರೋ
ರಚನೆ : ಕುರಸೀ
ಹಾಡಿದವರು : ರಘುನಾಥ ಪಾಣಿಗ್ರಾಹಿ.


ಮಾಯಾಮಾಳವಗೌಳದಲ್ಲಿ ಅನ್ಯ ಸ್ವರವಾಗಿ  ಗ2 ಅಂದರೆ ಸಾಧಾರಣ ಗಾಂಧಾರ(ಹಿಂದುಸ್ಠಾನಿಯಲ್ಲಿ ಕೋಮಲ ಗಾಂಧಾರ) ಬಳಸಿದ ಶೋಕ ಛಾಯೆಯ ಈ ಹಿನ್ನೆಲೆ ಹಾಡಿನ ಒಂದೇ ಚರಣ ಲಭ್ಯವಿರುವುದು.  ಪ್ರಖ್ಯಾತ ನೃತ್ಯಾಂಗನೆ ಸಂಯುಕ್ತಾ ಪಾಣಿಗ್ರಾಹಿಯ ಪತಿ ರಘುನಾಥ ಪಾಣಿಗ್ರಾಹಿ ಹಿನ್ನೆಲೆಯ ಹಾಡುಗಳಿಗೇ ಸೀಮಿತವಾಗಿದ್ದವರು.  ಪ್ರೇಮದ ಪುತ್ರಿಯ ಪ್ರೇಮವೇ ದೈವ ಇವರ ಪ್ರಸಿದ್ಧ ಹಾಡು.
 
ಯಾರಿಗೆ ಯಾರಿಹರೋ
ಬಾಳಿನ ಜಾತ್ರೆಯು ಸೇರಿಹುದೋ

ಜಾತ್ರೆಯಲಿರುವ ನೆರೆಹೊರೆ ಎಲ್ಲ
ನೆಂಟರು ನಿನಗೆ ಎಲ್ಲಿಯ ವರೆಗೆ
ಆಸೆಯ ಹೂಮಾಲೆ ಮೋಹದ ಲೀಲೆ
ಮೋಸದ ಬಲೆಯೇ ಆ ಮೇಲೆ
ಯಾರಿಗೆ ಯಾರಿಹರೋ
ಬಾಳಿನ ಜಾತ್ರೆಯು ಸೇರಿಹುದೋ

09. ಶರಣು ಶಂಭೋ
ರಚನೆ : ಕುರಸೀ
ಹಾಡಿದವರು : ರಾಜ್‌ಕುಮಾರ್.


ಪಂತುವರಾಳಿ ಮಿಶ್ರ ಸ್ವರಗಳಿರುವ ಈ ಹಾಡನ್ನು ರಾಜ್‌ಕುಮಾರ್ ಅವರು ವೃತ್ತಿಪರ ಗಾಯಕರಿಗೆ ಕಮ್ಮಿ ಇಲ್ಲದಂತೆ ಹಾಡಿದ್ದಾರೆ.  ಅವರ ಮೊದಲ ಹಾಡೆಂದು ಇದಕ್ಕೆ ಚಾರಿತ್ರಿಕ ಮಹತ್ವ. ಮೊದಲ ಚಿತ್ರ ಬೇಡರ ಕಣ್ಣಪ್ಪದಲ್ಲಿ ಅವರಿಗಾಗಿ ಹಾಡಿದ ಸಿ.ಎಸ್. ಜಯರಾಮನ್ ಶೈಲಿಯ ಪ್ರಭಾವ ಕೆಲವು ಸಾಲುಗಳಲ್ಲಿ ಗೋಚರಿಸುತ್ತದೆ. ಆದರೆ ಆ ಕಾಲದಲ್ಲಿ ಈ ಹಾಡಿಗೆ ಸಿಗಬೇಕಾದಷ್ಟು ಮಾನ್ಯತೆ ಸಿಕ್ಕಿಲ್ಲ ಎಂದೇ ಹೇಳಬೇಕು.  ನನಗಿದನ್ನು ರೇಡಿಯೋದಲ್ಲಿ ಎಂದೂ ಕೇಳಿದ ನೆನಪಿಲ್ಲ.  ಇದರ ಗ್ರಾಮಫೋನ್ ತಟ್ಟೆಯೇ ತಯಾರಾಗಿರಲಿಲ್ಲವೇನೋ ಎಂಬ ಅನುಮಾನ ನನಗಿತ್ತು.  ಆದರೆ ಆಗಿತ್ತು ಎಂದು ಈಗ ಗೊತ್ತಾಯಿತು.  ಡಿಸ್ಕ್ ಲೇಬಲ್‌ನಲ್ಲಿ ಅವರ ಹೆಸರು S.P. Rajakumar ಎಂದಿರುವುದನ್ನು ಗಮನಿಸಬಹುದು.


 
ಓಂ ನಮಃ ಶಿವಾಯ  ಓಂ ನಮಃ ಶಿವಾಯ
ಶರಣು ಶಂಭೋ ಶಿವ ಶರಣು ಶಂಭೋ
ಎನ್ನ ಗುರು ತೋರಿದ ಸೋಮೇಶ ಪ್ರಭು

ದಿನ ನೂರು ನೋವು
ಕೊನೆಗೊಂದು ಸಾವು
ದೇಹಕೆ ಬರಲೇಕೆ ಪರಮೇಶ
ಈ ಸ್ಥಿರ ನಾಶ
ಗುರುಚಿರ ಮೋಕ್ಷ
ಒಂದೇ ಅವಿನಾಶ
ಅದನೇ ಪಡೆದೇನೇ ಪ್ರಭು

ಆದಿಮೂಲ ಕರುಣಾಲವಾಲ
ಪರಿಪೂರ್ಣ ಶಾಂತಗುಣ ಸುಶೀಲ
ನೀಲಕಂಠ ನಿಗಮಾಂತಸಾರ
ಸ್ವಾಪಾಂಚಕೇಶನಿವ ನಿವಾಲ

ಸತಿಸೌಖ್ಯದಿಂದ ಮತಿಗೇಡಿಯಾದೆ
ಜಾಡಿಗೆ ಬರುವಲ್ಲಿ ತಡವಾದೆ
ನಾ ತಡವಾದೆ
ಶರಣರು ನಿಂತ ನಿನ್ನ ಹೊಸಿಲಲ್ಲಿ
ಕಸವಾಗಿಸಿ ಕಾಯೋ ಪ್ರಭು

10. ನಾ ಪಾಪವದೇನಾ ಮಾಡಿದೆನೋ
ರಚನೆ : ವಿಜಯನಾರಸಿಂಹ
ಹಾಡಿದವರು: ಪಿ.ಬಿ.ಶ್ರೀನಿವಾಸ್.


ಹರಿಕಾಂಭೋಜಿ ಸ್ವರಗಳ ಈ ಹಾಡು ರಾಜ್‌ಕುಮಾರ್ ಅವರಿಗಾಗಿ ಪಿ.ಬಿ.ಎಸ್ ಪ್ರಥಮವಾಗಿ ಧ್ವನಿ ನೀಡಿದ್ದೆಂಬ ಚಾರಿತ್ರಿಕ ಮಹತ್ವದ್ದು. 1953ರ ಜಾತಕ ಫಲದಲ್ಲಿ ಈ ಮೂಢತನವಿದೇಕೆ  ಮತ್ತು ಚಿಂತಿಸದಿರು ರಮಣಿ ಹಾಡುಗಳ ನಂತರ 1955ರ ಆದರ್ಶ ಸತಿಯ ಪಾಪಿಯ ಜೀವನ ಪಾವನಗೊಳಿಸುವ ಪರಶಿವ ಲಿಂಗ ನಮೋ ಸೂಪರ್ ಹಿಟ್ ಆಗಿ ಪಿ.ಬಿ.ಶ್ರೀನಿವಾಸ್ ಕನ್ನಡದಲ್ಲಿ ಮನೆ ಮಾತಾಗಿದ್ದರು.  ನಂತರ ಬಂದದ್ದೇ ಈ ಹಾಡು. ರಾಜ್‌ಕುಮಾರ್ ಅವರು D Sharp ಶ್ರುತಿಯಲ್ಲಿ ಶರಣು ಶಂಭೋ ಹಾಡಿದ್ದರೆ ಅದಕ್ಕಿಂತ ಒಂದು ಪಟ್ಟಿ ಕೆಳಗೆ  C Sharpನಲ್ಲಿ ಈ ಹಾಡಿತ್ತು.  ಪಿ.ಬಿ.ಎಸ್ ಪ್ರತಿಭೆ ಪೂರ್ಣ ಹೊರ ಹೊಮ್ಮುವುದು ಮಧ್ಯ ಮತ್ತು ಮಂದ್ರ ಸಪ್ತಕಗಳಲ್ಲಿ.  ಈ ಹಾಡಿನ ಬಹುತೇಕ ಭಾಗ   ಮಂದ್ರ ಪಂಚಮದಿಂದ ಆರಂಭಿಸಿ ಅವರಿಗೆ ಅನುಕೂಲವಾದ ಮಧ್ಯ ಸಪ್ತಕದಲ್ಲೇ ಸಂಚರಿಸುತ್ತದೆ. ಆದರೆ  ಕೊನೆಯ ಭಾಗದ ಸಾಲುಗಳು  ತಾರ ಸಪ್ತಕದ ಮಧ್ಯಮದ ವರೆಗೆ ಹೋಗುವುದು ಅವರಿಗೆ ಸ್ವಲ್ಪ ಅನಾನುಕೂಲವಾಯಿತೇನೋ ಎಂದೆನ್ನಿಸುತ್ತದೆ.  ರಫಿಯವರ ಓ ದುನಿಯಾ ಕೇ ರಖ್‌ವಾಲೇಯ ನಂತರ ಹಾಡುಗಳನ್ನು ತಾರ ಸ್ಥಾಯಿಗೊಯ್ಯುವ ಪರಿಪಾಠ ಆರಂಭವಾಗಿತ್ತು.  ಈ ಹಾಡಿನ ತುಣುಕು  ಕೂಡ ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಿನ ಭಾಗವಾಗಿತ್ತು.
 
ನಾ ಪಾಪವದೇನಾ ಮಾಡಿದೆನೋ
ನಿನ್ನ ಪಾದಕೆ ದೂರ ಆಗಿಹೆನೋ
ನಾ ಪಾಪವದೇನಾ ಮಾಡಿದೆನೋ

ಮೋಕ್ಷದ ಮೂಲ ನೀನೆಂದೇ ನಾ
ಧಾವಿಸಿ ಬಂದೆ ಓ ತಂದೆ
ತೀರದ ತಾಪ ಏರುತಿದೆ
ನಿನ್ನ ಕಾಣದೆ ಜೀವ ಬೇಯುತಿದೆ

ನಿನ್ನಡಿಯೊಂದು ತೃಣವಾದರೂ ನಾ
ಎನ್ನನು ಯಾರೋ ನೂಕುವರು
ಹೊನ್ನಿನ ಬಾಳು ಹೂ ಪತ್ರೆಯದೋ
ನಿನ್ನಯ ಪಾದ ಸೇರುವುದೋ
ಪಾಪಿಯ ಜನ್ಮ ಏತಕೊ ಕಾಣೆ
ಭೂಮಿಗೆ ಭಾರ ಆಗಿಹೆನೇ
ಭೂಮಿಗೆ ಭಾರ ಆಗಿಹೆನೇ

ಜಯಜಯ ಮಂಗಳಮಯ ಮಹಿಮೋದಯ
ಸಾಂಬಸದಾಶಿವನೇ
ಜಯಜಯ ನಿತ್ಯ ನಿರಾಕುಳನಿರ್ಮಲ
ಜಯಜಯ ಶಂಕರನೇ
ಸಾಂಬಸದಾಶಿವನೇ


11. ದೇಹದಿಂದ ದೂರನಾದೆ
ರಚನೆ : ವಿಜಯನಾರಸಿಂಹ
ಹಾಡಿದವರು : ಘಂಟಸಾಲ


ಒಂದೆರಡು ಕಡೆ  ಧೈವತವನ್ನು ಸ್ಪರ್ಶಿಸುವುದರಿಂದ ಈ ಹಾಡು ಭೀಮ್‌ಪಲಾಸ್‌ನಲ್ಲಿದೆ ಅನ್ನಬಹುದಾದರೂ  ಶುದ್ಧ ಧನ್ಯಾಸಿ ನಡೆಯೇ ಇದರಲ್ಲಿ ಹೆಚ್ಚು ಇದೆ. ಆದಿಪ್ರಾಸ, ಅಂತ್ಯಪ್ರಾಸಗಳ ಬಂಧವಿಲ್ಲದ ಅರ್ಥಪೂರ್ಣ ಸಾಹಿತ್ಯ  ತಿಶ್ರ ನಡೆಗೆ ಅಚ್ಚುಕಟ್ಟಾಗಿ ಹೊಂದುವ ಸುಲಭವಾಗಿ ಅರ್ಥವಾಗುವ ಸರಳ ಪದಗಳನ್ನು ಹೊಂದಿರುವುದು ಈ ಹಾಡಿನ ಅಪಾರ  ಜನಪ್ರಿಯತೆಗೆ  ಕಾರಣವಾಗಿರಬಹುದು.  ನಮ್ಮ ಮನೆಗೆ 1962ರಲ್ಲಿ ನ್ಯಾಶನಲ್ ಎಕ್ಕೋ ಸೆಕೆಂಡ್ ಹ್ಯಾಂಡ್ ವಾಲ್ವ್ ರೇಡಿಯೋ ಬಂದಾಗ ಆಗ ಬೆಂಗಳೂರು ಕೇಂದ್ರದಿಂದ ಸೋಮವಾರ ರಾತ್ರೆ 8ಗಂಟೆಗೆ ಪ್ರಸಾರವಾಗುತ್ತಿದ್ದ ನೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ನಾನು ಮೊತ್ತ ಮೊದಲು ಕೇಳಿದ ಹಾಡು ಕೂಡ ಇದೇ. ಆದರೆ ಈ ಚಾರ್ಟ್ ಬಸ್ಟರ್ ಹಾಡಿನ  ನಂತರ ಜಿ.ಕೆ. ವೆಂಕಟೇಶ್ ಅವರು ಘಂಟಸಾಲ ಅವರ ಧ್ವನಿಯನ್ನೂ ಒಮ್ಮೆಯೂ ಬಳಸಿಕೊಳ್ಳದಿರುವುದು ಅಚ್ಚರಿಯ ವಿಚಾರ.
 
ಹೇ ಶಂಕರಾ ದಯಾನಿಧೇ

ಈ ದೇಹದಿಂದ ದೂರನಾದೆ ಏಕೆ ಆತ್ಮನೇ
ಈ ಸಾವು ನ್ಯಾಯವೇ
ಆಧಾರ ನೀನೆಂದು ಈ ಲೋಕ ನಂಬಿದೆ
ಈ ದೇಹದಿಂದ ದೂರನಾದೆ ಏಕೆ ಆತ್ಮನೇ

ತಾಯಿಹಾಲು ವಿಷವದಾಗೆ ನ್ಯಾಯವೆಲ್ಲಿದೆ
ಕಾವ ದೇವ ಸಾವು ತರಲು ಎಲ್ಲಿ ರಕ್ಷಣೆ
ಯಾವ ಪಾಪಕೆ ಸಾವು ಕಾಡಿತೋ
ಪರಮಾತ್ಮ ನ್ಯಾಯ ಬೇಡವೇ
ಈ ಸಾವು ನ್ಯಾಯವೇ

ಸೇವೆಗಾಗಿ ಕಾದ ಹೂವು ಕಸವ ಸೇರಿತೇ
ಬಾಳಿನಾಸೆ ಚಿಗುರಿನಲ್ಲೆ ಬಾಡಿ ಹೋಯಿತೇ
ಏನು ತಪ್ಪಿದೆ ಹೇಳಬಾರದೆ
ಸರಿಯೇನು ಮೌನವೇಕಿದು
ಈ ಸಾವು ನ್ಯಾಯವೇ

ಶಿವನಾಮ ಮಂತ್ರವೊಂದೇ ಅಮರ ದೀವಿಗೆ
ಪರಮೇಶ ಪ್ರಾಣಜ್ಯೋತಿ ಮರಳಿ ತಾರೆಯಾ
ಈ ದೇಹದಿಂದ ದೂರನಾದೆ ಏಕೆ ಆತ್ಮನೇ
ಈ ಸಾವು ನ್ಯಾಯವೇ


12. ಪಾತಕಿ ನಾನಾದೆ
ರಚನೆ : ವಿಜಯನಾರಸಿಂಹ
ಹಾಡಿದವರು : ಟಿ.ಎಂ. ಸೌಂದರರಾಜನ್.


ಬಿಳಿ ಮೂರರ ಏರು ಶ್ರುತಿಯಲ್ಲಿ ತಾರ ಸಪ್ತಕದ ಪ್ರತಿ ಮಧ್ಯಮವನ್ನು ಸ್ಪರ್ಶಿಸುವ ಹಂಸಾನಂದಿ ರಾಗದ  ಈ ಶುದ್ಧ ಶಾಸ್ತ್ರೀಯ ಧಾಟಿಯ ಹತಾಶ ಭಾವದ ಪತಾಕಾ ಗೀತೆಗೆ ಸ್ವಲ್ಪ ಒರಟುತನವೂ ಅಗತ್ಯವಿದೆ ಅನಿಸಿದ್ದರಿಂದ ಟಿ.ಎಂ. ಸೌಂದರರಾಜನ್ ಅವರ ಧ್ವನಿಯನ್ನು ಆಯ್ಕೆ ಮಾಡಿರಬಹುದು. ನಾಭಿಯಿಂದ ಹೊರಡುವ ಧ್ವನಿ ಮತ್ತು ವಾಯ್ಸ್ ಥ್ರೋ ಮಟ್ಟಿಗೆ ದಕ್ಷಿಣ ಭಾರತದಲ್ಲಿ ಟಿ.ಎಂ. ಸೌಂದರರಾಜನ್ ಮತ್ತು ಎಲ್.ಆರ್. ಈಶ್ವರಿ ಹಾಗೂ ಹಿಂದಿಯಲ್ಲಿ ಕಿಶೋರ್ ಕುಮಾರ್ ಮತ್ತು ಶಂಶಾದ್ ಬೇಗಂ ಅವರಿಗೆ ಸರ್ಸಾಟಿ ಯಾರೂ ಇಲ್ಲ.  ಟಿ.ಎಂ. ಸೌಂದರರಾಜನ್ ಧ್ವನಿಯನ್ನು ಜಿ.ಕೆ. ವೆಂಕಟೇಶ್ ಕನ್ನಡ ಚಿತ್ರಗಳಲ್ಲಿ ಆ ಮೇಲೆ ಎಂದೂ ಬಳಸಿದ್ದಿಲ್ಲ.
 
ಪಾತಕಿ ನಾನಾದೆ ಪರಮ
ಪಾರ್ವತಿನಾಥನ ವಿಧಿ ಮೀರಿದ ಪರಮ
ಪಾತಕಿ ನಾನಾದೆ

ಪಾಪವ ಸುಡಲೊಂದು ಧೂಪವೆ ಸಾಕೆಂದು
ಆಣತಿ ನೀಗೈದೆ ಅದ ಮುರಿದ ಪರಮ
ಪಾತಕಿ ನಾನಾದೆ

ಅಲಸಿಕೆ ಇಲ್ಲದೆ ಸುಲಭದ ಸೇವೆಯ
ಸಲಿಸದೆ ನಾ ಬಂದೆನೋ
ನಿನ್ನ ಒಲವಿಗೆ ಹೇರಾದೆನೋ
ಕ್ಷುಲ್ಲಕ ಈ ಜನ್ಮ ನೀಗುವುದೇ ಕ್ಷೇಮ
ವರ ನೀಡಿದ ದೊರೆಯ ಸಿರಿಯ
ದೂರ್ಜಟಿಯ ವಂಚಿಸಿ ಪರಮ
ಪಾತಕಿ ನಾನಾದೆ

ಮಾತನು ನಡೆಸದ ಘಾತುಕನೆಂಬುವ
ಯಾತನೆಯ ತೀರಿಸೋ ಎನ್ನ
ಚೇತನವ ಆರಿಸೋ
ಈ ತನು ಇನ್ನೇಕೆ  ಈ ತರ ಬದುಕೇಕೆ
ರೀತಿ ನೀತಿಯಲಿ  ಪಾಪಗೈದ ಕಡು
ಪಾತಕಿ ಜೀವನ ಕೊನೆಗೊಳಿಸೊ
ಹಣೆಯ ಕಣ್ಣಿನ ಕಿಡಿಯ ಸಿಡಿಸೊ
ದಣಿದ ಪಾಪಿಯ ತನು ದಹಿಸೊ
ದೇಹ ಧೂಪಾಗ್ನಿ ಸೇವೆ ಕೈಗೊಂಡು
ದೋಷವ ಪರಿಹರಿಸೊ
ಪಾಪಿಯ ತನು ಉರಿಸೊ

13. ವಚನಗಳು
ಹಾಡಿದವರು : ರಾಜ್‌ಕುಮಾರ್.


ಈ ಚಿತ್ರದಲ್ಲಿ ಸೋಮನಾಥ ಅಂಕಿತದೊಂದಿಗೆ ಬಸವಣ್ಣ ಮುಂತಾದವರ ಅನೇಕ ವಚನಗಳನ್ನು ಬಳಸಿಕೊಳ್ಳಲಾಗಿದ್ದು ಸ್ವತಃ ರಾಜ್‌ಕುಮಾರ್ ಅವುಗಳನ್ನು ಬಲು ಸುಶ್ರಾವ್ಯವಾಗಿ ಹಾಡಿದ್ದಾರೆ.  ಚಿತ್ರದುದ್ದಕ್ಕೂ ಅಲ್ಲಲ್ಲಿ ಇರುವ ಅವುಗಳನ್ನು ಕೇಳುವವರ ಅನುಕೂಲಕ್ಕಾಗಿ ಇಲ್ಲಿ ಒಟ್ಟಿಗೆ ಸೇರಿಸಲಾಗಿದೆ. ಮಂಕುತಿಮ್ಮನ ಕಗ್ಗದ  ಸಾಲುಗಳನ್ನೂ ಬಳಸಲಾಗಿರುವುದು ವಿಶೇಷ.
 
ಹುಲ್ಲಾಗು ಬೆಟ್ಟದಲಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ
ಎಲ್ಲರೊಳು ಒಂದಾಗಿ ಬಾಳಿ ನೀವು

ವಚನದಲಿ ನಿಮ್ಮ ನಾಮಾಮೃತ ತುಂಬಿ
ನಯನದಲಿ ನಿಮ್ಮ ಮೂರುತಿಯ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿಯ ತುಂಬಿ
ಸೋಮನಾಥೇಶ ನಿಮ್ಮ 
ಚರಣ ಕಮಲದೊಳಗಾನು ತುಂಬಿ

ಅಯ್ಯಾ ಅಯ್ಯಾ ಎಂದು ಕರೆವುತ್ತಲಿದ್ದೇನೆ
ಅಯ್ಯಾ ಅಯ್ಯಾ ಎಂದು  ಒರಲುತ್ತಲಿದ್ದೇನೆ
ಓ ಎನ್ನಲಾಗದೇ ಅಯ್ಯಾ
ಆವಾಗಲೂ ನಿಮ್ಮ ಕರೆವುತ್ತಲಿದ್ದೇನೆ
ಮೌನವೇಕೋ ಸೋಮನಾಥೇಶ

ಅಕಟಕಟಾ ಶಿವ ನಿನಗಿನಿತು ಕರುಣವಿಲ್ಲ
ಅಕಟಕಟಾ ಶಿವ ನಿನಗಿನಿತು ಕೃಪೆಯಿಲ್ಲ
ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ
ಪರಲೋಕ ದೂರನ ಏಕೆ ಹುಟ್ಟಿಸಿದೆ
ಸೋಮನಾಥೇಶ ಹೇಳಯ್ಯ
ಎನಗಾಗಿ ಮತ್ತೊಂದು ತರುಮರಾದಿಗಳಿದ್ದಿಲ್ಲವೇ
ಹೇಳಯ್ಯ ಸೋಮನಾಥೇಶ

ಕಾಗೆ ಒಂದಗಳ ಕಂಡರೆ
ಕರೆಯದೇ ತನ್ನ ಬಳಗವನ್ನು
ಕೋಳಿ ಒಂದು ಕುಟುಕ ಕಂಡರೆ
ಹೋಗಿ ಕರೆಯದೇ ತನ್ನ ಕುಲವೆಲ್ಲವ
ಶಿವಭಕ್ತನಾಗಿ ಶಿವಭಕ್ತಿ ಪಕ್ಷವಿಲ್ಲದಿದ್ದರೆ
ಆ ಕಾಗೆ ಕೋಳಿಗಿಂತ ಕರ ಕಷ್ಟ

ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ ನೆಲವೊಂದೇ
ಜಲವೊಂದೇ ಶೌಚ ಆಚಮನಕ್ಕೆ ಜಲವೊಂದೇ
ಕುಲವೊಂದೇ ತನ್ನ ತಾನರಿತಂಗೆ
ಫಲವೊಂದೇ ಸದ್ದರ್ಶನ ಮುಕ್ತಿಗೆ
ನಿಲೆವೊಂದೇ ನಮ್ಮ ಸೋಮನಾಥೇಶನ ಅರಿತವಂಗೆ

ಹಾಲೆಂಜಲು ಮಗುವಿನ
ಉದಕವೆಂಜಲು ಮೀನಿನ
ಪುಷ್ಪವೆಂಜಲು ತುಂಬಿಯ
ಎಂತು ಪೂಜಿಸುವೆನಯ್ಯ ಶಿವ ಶಿವ
ತಂದುದಕ ಇಕೋ ಸೋಮನಾಥೇಶ

ಮೊರನ ಗೊಟ್ಟಿಗೆ ಬಪ್ಪ
ಕಿರುಕುಳದ ದೈವಕ್ಕೆ
ಕುರಿಯನಿತ್ತಿಹೆನೆಂದು ನಲಿನಲಿದಾಡುವಿರೇ
ಕುರಿ ಸತ್ತು ಕಾಯುವುದೇ ಹರ ಮುಳಿದವರ
ಕುರಿ ಬೇಡ ಮರಿ ಬೇಡ ಬರಿ ಪತ್ರೆ ತಂದು
ಮರೆಯದೇ ಪೂಜಿಸಿದರೆ ಸಾಲದೇ
ನಮ್ಮ ಸೋಮನಾಥೇಶನ

14. ಬೇರೆ ಪಾತ್ರಧಾರಿಗೆ ಹಿನ್ನೆಲೆ ಧ್ವನಿ



ರಾಜ್‍ಕುಮಾರ್ ಅವರು ಮುದ್ದಿನ ಮಾವ ಚಿತ್ರದಲ್ಲಿ ಎಸ್.ಪಿ. ಬಾಲಸುಬ್ರಹ್ಮಣಿಯಂ ಅವರಿಗೆ ಹಿನ್ನೆಲೆ ಹಾಡಿದ್ದು ವಿಶೇಷ ಸುದ್ದಿಯಾಗಿತ್ತು.  ಆದರೆ ಅದಕ್ಕಿಂತಲೂ ಮುಂಚೆ ಈ ಚಿತ್ರದಲ್ಲಿ ಉಧ್ಭಟ ಮಹಾರಾಜನ ಪಾತ್ರ ವಹಿಸಿದ್ದ ಸಿದ್ದಯ್ಯ ಸ್ವಾಮಿ ಅವರಿಗಾಗಿ ರಾಜ್ ಅವರು ಶಂಕರಾಚಾರ್ಯ ವಿರಚಿತ ಶಿವಾಪರಾಧ ಕ್ಷಮಾಪಣಾ ಸ್ತೋತ್ರದ 10ನೇ ಶ್ಲೋಕ ಹಾಡಿದ್ದನ್ನು ಯಾರೂ ಗಮನಿಸಿದಂತಿಲ್ಲ.
 

ಸ್ಥಿತ್ವಾ ಸ್ಥಾನೇ ಸರೋಜ ಪ್ರಣವಮಯಮರುತ್ಕುಂಭಿತೇ ಸೂಕ್ಷ್ಮಮಾರ್ಗೇ
ಶಾಂತೇ ದಾಂತೇ ಪ್ರಲೀನೇ ಪ್ರಕಟಿತದಹನೇ ದಿವ್ಯರೂಪೇ ಶಿವಾಖ್ಯೇ
ಲಿಂಗಾಗ್ರೇ ಬ್ರಹ್ಮವಾಕ್ಯೇ ಸಕಲಗತತನೌ ಶಂಕರಂ ನ ಸ್ಮರಾಮಿ
ಕ್ಷಂತವ್ಯೋ ಮೇಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ

15. ಜ್ಯೋತಿ ಬೆಳಗುತಿದೆ.
ಸಂಗೀತ ನಿರ್ದೇಶಕ  ಜಿ.ಕೆ. ವೆಂಕಟೇಶ್ ಈ ಹಿಂದಿನ ಹರಿಭಕ್ತ ಚಿತ್ರದಲ್ಲಿ ಹರಿಯ ವಿಲಾಸದಾ ಮಹಿಮೆ ಎಂಬ ಒಂದು ಹಾಡು ಹಾಡಿದ್ದರು. ಈ ಚಿತ್ರದಲ್ಲೂ ಎರಡು ಸಾಲು ಹಾಡಿದ್ದಾರೆ.  ಹಾಡುವ ಉತ್ಸಾಹ ಇದ್ದರೂ ಅವರಲ್ಲಿ ಸಾಕಷ್ಟು stamina ಇರಲಿಲ್ಲ ಎಂದು ಓರ್ವ ಹಿರಿಯ ನಿರ್ದೇಶಕರು ಹೇಳಿದ್ದನ್ನು ಕೇಳಿದ್ದೇನೆ. ಹೀಗಾಗಿ ಅವರು ಕೆಲವೇ ಗೀತೆಗಳನ್ನು ಹಾಡಿದರು.  ಅವೆಲ್ಲವೂ ಜನಪ್ರಿಯವೂ ಆದವು.


ಕೆಳಗಿನ ಪಟ್ಟಿಯನ್ನು Scroll  ಮಾಡುತ್ತಾ ಹಾಡುಗಳನ್ನು ಆರಿಸಿ ಆಲಿಸಿ.






2 comments:

  1. ಈ ಚಿತ್ರದಲ್ಲಿ ಇಷ್ಟೊಂದು ಸುಂದರ ಹಾಡುಗಳಿದ್ದರೂ ಒಂದೆರಡನ್ನು ಬಿಟ್ಟರೆ ಉಳಿದವು ಏಕೆ ಪ್ರಸಿದ್ಧಿ ಪಡೆಯಲಿಲ್ಲ ಎಂದು ಗೊತ್ತಾಗುತ್ತಿಲ್ಲ.

    ReplyDelete
  2. "ಓಹಿಲೇಶ್ವರ ' ಸಿನಿಮಾದ ಬಗ್ಗೆ ಅದೆಷ್ಟು ವಿಸ್ತೃತವಾಗಿ ಬರೆದಿದ್ದೀರಾ !! ಈ ಸಿನೇಮಾ ಅದೆಷ್ಟು ವಿಶೇಷಣಗಳಿಗೆ ಕಾರಣವಾಗಿದೆ!! ಬಹುಷಃ ಇಂದಿನ ತಲೆಮಾರಿನವರು ಇದ್ಯಾವುದು ಅರ್ಥವಾಗುವುದಿಲ್ಲ. ಹಾಗೆ ನೋಡಲು ಹೋದರೆ, ಈ ಸಿನೆಮಾ ಬಿಡುಗಡೆಯಾಗಿ 11 ವರ್ಷಗಳ ನಂತರ ನನ್ನ ಹುಟ್ಟಿದ್ದು!! ಆದರೂ ಕೂಡ ಇಲ್ಲಿ ಹೇಳಿರುವ ಅನೇಕ ಹಾಡುಗಳನ್ನು ಕೇಳಿದ್ದೇನೆ . " ತ್ರಿಭುವನ ಜನನಿ ಜಗನ್ಮೋಹಿನಿ" ಹಾಡನ್ನು ನನ್ನ ಅಮ್ಮ , ಅಪ್ಪನನ್ನು ನೋಡಲು ಬಂದಾಗ ಹಾಡಿದ ಹಾಡು. ಈ ಹಾಡು ಕೇಳಿಯೇ ಅಪ್ಪ , ಅಮ್ಮನನ್ನು ವರಿಸಿದ್ದು ಕೂಡ !! 😀😀ಪಿ ಲೀಲಾ ಹಾಡಿರುವ ಹಾಡು ಈಗಲೂ ನಾವು ಹಾಡುತ್ತಾ ಇರ್ತೇವೆ. ಒಂದೇ ನಾಯಕನಿಗೆ 4 ಗಾಯಕರು ಎಂದು ಕೇಳಿ ಆಶ್ಚರ್ಯವಾಯಿತು. ಪದ್ಮನಾಭ ಶಾಸ್ತ್ರಿಗಳು ಹಾಗು ವೆಂಕಟರಾಜು ಬದುಕಿದ್ದರೆ , ಅದಿನ್ನೂ ಎಷ್ಟು ಸುಮಧುರ ಹಾಡುಗಳು ಕನ್ನಡ ಚಿತ್ರರಂಗಕ್ಕೆ ಸಿಗುತ್ತಿತ್ತೋ ಏನೋ ? ರಾಜ್ಕುಮಾರ್ ಹಾಡನ್ನು ಮತ್ತೆ 1961 ರಲ್ಲಿ ಹಾಡಿದರು ಎಂದು ತಿಳಿಸಿದ್ದೀರಾ !! ಯಾವ ಹಾಡು ಗೊತ್ತಾಗಲಿಲ್ಲ. ಇನ್ನು ಓಹಿಲೇಶ್ವರ ಕಥೆ ಕೇಳಿದರೆ, ಚಂದಮಾಮ ಪುಸ್ತಕದಲ್ಲಿ ಪ್ರಕಟವಾಗುತ್ತಿದ್ದ ಕಥೆಯಂತಿದೆ. ಪುಸುಸೊತ್ತು ಆದಾಗ ಖಂಡಿತ ನೋಡುತ್ತೇನೆ . ಈ ಸಿನೆಮಾದಲ್ಲಿ ಯುಗಳ ಗೀತೆ ಇಲ್ಲದಿರುವುದು ಕೇಳಿ ಆಶ್ಚರ್ಯವಾಯಿತು . ರಘುನಾಥ ಪಾಣಿಗ್ರಾಹಿ ಎನ್ನುವ ಒಬ್ಬ ಗಾಯಕ ಇದ್ದರು ಅಂತ ಇವತ್ತೇ ಗೊತ್ತಾಗಿದ್ದು. ಈ ಚಿತ್ರಕ್ಕೆ ಜಿ ವೀ ಅಯ್ಯರ್ ಅವರ ಸಹ ನಿರ್ದೇಶನವೂ ಇದೆ !!🤔ಒಟ್ಟಿನಲ್ಲಿ ಇಷ್ಟೊಂದು ವಿಶೇಷಣಗಳು ಬರೆಯಬೇಕಾದರೆ , ಬರಹಗಾರನಿಗೆ " ಒಳಗಣ್ಣು " ಹಾಗು ಕುತೂಹಲವಿದ್ದರೆ ಮಾತ್ರ ಸಾಧ್ಯ. ಆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಾ !! ಇಷ್ಟೊಂದು ಮಾಹಿತಿಯ ಖಣಜ ಕೊಟ್ಟಿರುವುದಕ್ಕೆ ತಮಗೆ ಧನ್ಯವಾದಗಳು 🙏🙏🙏

    ReplyDelete

Your valuable comments/suggestions are welcome