
ಇದು ನಮ್ಮ ಊರಿನ ಹಳೆ ಮನೆಯ ಒಳಗಿನ ಹಜಾರದ ಚಿತ್ರ. ಚಿತ್ಪಾವನಿಯಲ್ಲಿ ಇದನ್ನು ಆಂತ್ಲಿ ಮಾಳಿ ಅನ್ನುವುದು. ನಾನು ಚಿಕ್ಕವನಾಗಿದ್ದಾಗ ಅಲ್ಲಿಯ ಕಿಟಿಕಿಯಲ್ಲಿ ಕುಳಿತು ಕಾಫಿ ಕುಡಿಯುತ್ತಿರುವುದನ್ನು ಈ AI ಚಿತ್ರದಲ್ಲಿ ನೋಡುತ್ತಿದ್ದೀರಿ. ಕಿಟಿಕಿಯಲ್ಲಿ ಕುಳಿತು? ಹೌದು, ಸರಿಯಾಗಿಯೇ ಓದಿದ್ದೀರಿ. ಒಂದು ಗಜ ದಪ್ಪದ ಮಣ್ಣಿನ ಗೋಡೆಯ ಮನೆಗಳ ಕಿಟಿಕಿಗಳು ಹೀಗೆಯೇ ಇರುತ್ತಿದ್ದುದು. ಅದರಲ್ಲಿ ಕುಳಿತು ಕಾಫಿ ಕುಡಿಯುವುದೇನು, ಒಂದು ಸಣ್ಣ ಎಲೆ ಹಾಕಿ ಊಟ ಮಾಡುವಷ್ಟು ಅಗಲದ ಜಾಗ ಇರುತ್ತಿತ್ತು. 1967ರಲ್ಲಿ ಆ ಮನೆಗೆ ವಿದ್ಯುತ್ತಿನ ವಯರಿಂಗ್ ಮಾಡುವಾಗ ಗೋಡೆಗೆ ತೂತು ಕೊರೆಯುವ ಪೈಪಿನ ಉದ್ದ ಸಾಕಾಗದೆ ಅರ್ಧ ಈ ಕಡೆಯಿಂದ , ಅರ್ಧ ಆ ಕಡೆಯಿಂದ ಕೊರೆಯಬೇಕಾಗಿ ಬಂದಿತ್ತು!
ಊಟದ ಮನೆಯೂ ಆಗಿದ್ದ ಇಲ್ಲಿ ಈ ಕಿಟಿಕಿಯ ಬುಡ ನಾನು ಊಟಕ್ಕೆ ಕುಳಿತುಕೊಳ್ಳುವ ಶಾಶ್ವತ ಜಾಗ ಆಗಿತ್ತು. ಆಗ ಚಿಕ್ಕವರು ಮಣೆಯ ಮೇಲೆ ಕೂತು ಉಣ್ಣುವ ಪರಿಪಾಠ ಇಲ್ಲದಿದ್ದರೂ ನನಗೆ ನಿತ್ಯವೂ ಮಣೆ ಬೇಕೇ ಬೇಕಿತ್ತು. ಕಿಟಿಕಿ ಬದಿಯ ಸಾಲಿನಲ್ಲಿ ಚಿಕ್ಕ ಮಕ್ಕಳು, ಎದುರುಗಡೆ ಸಾಲಿನಲ್ಲಿ ತಂದೆಯವರು, ಅಣ್ಣಂದಿರು ಕುಳಿತುಕೊಳ್ಳುತ್ತಿದ್ದರು. ಎಲ್ಲರಿಗೂ ಅವರವರ ನಿಶ್ಚಿತ ಜಾಗಗಳಿದ್ದವು.
ದೇವರ ಕೋಣೆಯೂ ಇದೇ ಆಗಿತ್ತು. ಎಡ ಮೂಲೆಯಲ್ಲಿ ಕಾಣಿಸುವ ಕಪ್ಪು ಬಣ್ಣದ ಕಪಾಟಿನ ಒಳಗೆ ದೇವರ ಮಂಟಪ. ಕೆಂಪು ಬಣ್ಣದ ಚೌಕಾಕಾರದ ಸಿಮೆಂಟೇ ದೇವರ ಕೋಣೆಯನ್ನು ಬೇರ್ಪಡಿಸುವ demarcation. ದೇವರ ಮಂಟಪದ ಮೇಲ್ಭಾಗದಲ್ಲೂ ಕಪಾಟು ಇತ್ತು. ಕೆಳಗೆ ಶಾಶ್ವತವಾಗಿ ನಂದಾದೀಪ ಉರಿಯುತ್ತಿದ್ದುದರಿಂದ ಅದರೊಳಗೆ ಇಟ್ಟಿರುವ ವಸ್ತುಗಳೆಲ್ಲ ಬೂಸ್ಟು ಹಿಡಿಯದೆ ಬೆಚ್ಚಗಾಗಿ ಇರುತ್ತಿದ್ದವು.
ನಮ್ಮಲ್ಲಿ ನಿತ್ಯ ನಡೆಯುತ್ತಿದ್ದ ಷೋಡಶೋಪಚಾರ ಪೂಜೆಯ ಜೊತೆಗೆ ಸೋಮವಾರಗಳಂದು ರುದ್ರಾಭಿಷೇಕವೂ ಇರುತ್ತಿತ್ತು. ಪೂಜೆಯ ಕೊನೆಯಲ್ಲಿ ನೈವೇದ್ಯದ ಸಮಯ ಊದುಬತ್ತಿ, ಕರ್ಪೂರಗಳ ಸುವಾಸನೆ, ಬಿಸಿ ಬಿಸಿ ಅನ್ನದ ಹಬೆ, ಅಡುಗೆಮನೆಯಿಂದ ಬರುವ ಒಗ್ಗರಣೆಯ ಘಮ ಇವೆಲ್ಲ ಸೇರಿ ಒಂದು ದೈವಿಕ ವಾತಾವರಣ ಸೃಷ್ಟಿಯಾಗುತ್ತಿತ್ತು.
ಪ್ರತೀ ಶುಕ್ರವಾರ ರಾತ್ರಿ ಲಕ್ಷ್ಮೀನಾರಾಯಣ ಹೃದಯ ಗ್ರಂಥದ ಪಾರಾಯಣ ಇರುತ್ತಿತ್ತು. ಅದರಲ್ಲಿ ಬರುವ ಫಟು ಕುರು ಕುರು ಸ್ವಾಹಾ ಎಂಬ ಸಾಲುಗಳು ನಮಗೆಲ್ಲರಿಗೂ ಕಂಠಪಾಠವಾಗಿದ್ದವು! ಆ ಪುಸ್ತಕದಲ್ಲಿ ದೇವಿಯು ಚಂಡ ಮುಂಡರನ್ನು ವಧಿಸುವ ಸುಂದರವಾದ ವರ್ಣ ಚಿತ್ರವೊಂದಿತ್ತು. ಅದನ್ನು ತೋರಿಸುವಂತೆ ನಾವು ತಂದೆಯವರನ್ನು ಕೇಳುವುದಿತ್ತು. ಪಾರಾಯಣದ ಒಂದು ಹಂತದಲ್ಲಿ ಚಿಟಿಕೆಯಷ್ಟು ಮಂತ್ರಿಸಿದ ಭಸ್ಮವನ್ನು ತಂದೆಯವರು ನಮ್ಮ ಬಾಯಿಗೆ ಹಾಕುತ್ತಿದ್ದರು. ಶುಕ್ರವಾರದ ಪಾರಾಯಣ, ಚೌತಿ, ನವರಾತ್ರಿ ಮತ್ತು ನವಾನ್ನ ಪೂಜೆಯ ದಿನ ಮಾತ್ರ ಮಂಗಳಾರತಿಯ ಸಮಯ ಜಾಗಟೆ ಬಾರಿಸುವುದು ನಮ್ಮಲ್ಲಿದ್ದ ಅಲಿಖಿತ ನಿಯಮ.
ಚೌತಿಯ ಗಣೇಶ ಹೊರಗಿನ ಹಜಾರದಲ್ಲಿ ಪೂಜಿಸಲ್ಪಡುತ್ತಿದ್ದರೂ ಸಣ್ಣ ಮಂಟಪವೊಂದರಲ್ಲಿ ಹರತಾಳಿಕಾ ಗೌರಿ ಪೂಜೆ ಇಲ್ಲೇ ನಡೆಯುತ್ತಿತ್ತು. ನವರಾತ್ರಿ ಪೂಜೆ ನಿತ್ಯದ ದೇವರ ಮಂಟಪದಲ್ಲೇ ನಡೆಯುತ್ತಿದ್ದುದು. ಆಗ ನೀಲಿ ನಾಮದ ಗೋರಟೆ, ಹಳದಿ ಮೈಸೂರು ಗೋರಟೆ ಮತ್ತು ಕೆಂಪು ಕೇಪುಳ ಹೂಗಳ ಮಾಲೆಗಳಿಂದ ಮಂಟಪವನ್ನು ಅಲಂಕರಿಸಲಾಗುತ್ತಿತ್ತು. ಮರದ ತುಂಡೊಂದನ್ನು ಕೆತ್ತಿ ಒಂದು ಬ್ಯಾಟರಿ ಬಾಕ್ಸು ಮತ್ತು ಗೆರಟೆ ಹಾಗೂ ಒಂದು ಹಳೆಯ ಸ್ಪ್ರಿಂಗ್ ಉಪಯೋಗಿಸಿ ಒಂದು ಟಾಗಲ್ ಸ್ವಿಚ್ಚು ತಯಾರಿಸಿ ನವರಾತ್ರಿ ಪೂಜೆಯ ಹೊತ್ತಲ್ಲಿ ದೇವರ ಮೇಲೆ ಬಲ್ಬಿನ ಬೆಳಕು ಬೀಳುವ ವ್ಯವಸ್ಥೆ ನಮ್ಮಣ್ಣ ಮಾಡಿದ್ದರು. ಅದಕ್ಕೆ ರೇಡಿಯೋದ ನಿರುಪಯೋಗಿ ಬ್ಯಾಟರಿಯನ್ನು ಒಡೆದು ಅದರೊಳಗೆ ಇರುವ ಸೆಲ್ಲುಗಳನ್ನು ಅವರು ಉಪಯೋಗಿಸುತ್ತಿದ್ದರು.
ನವರಾತ್ರಿಯಲ್ಲಿ ಸಪ್ತಶತಿ ಪಾರಾಯಣ ನಡೆಯುತ್ತಿದ್ದುದು ಕಿಟಿಕಿಯಿಂದ ಸ್ವಲ್ಪ ಈಚೆಗೆ. ಪೂಜೆಮಾಡುವವರನ್ನುಳಿದು ಉಳಿದವರು ನಿತ್ಯ ಸಂಧ್ಯಾವಂದನೆ ಮಾಡುವ ಜಾಗವೂ ಅದೇ ಆಗಿತ್ತು. ಸಂಧ್ಯಾವಂದನೆಗೆ ಮೊದಲು ಹಗಲಿನಲ್ಲಿ ಗಂಧ, ರಾತ್ರೆ ಭಸ್ಮ ಧರಿಸುವ ಸಂಪ್ರದಾಯ ನಮ್ಮಲ್ಲಿತ್ತು.
ಬಾಣಂತಿಯರು ಶುದ್ಧ ಆದ ದಿನ ದೇವರೆದುರು ಕೂತು ಮನೆಯ ಸಣ್ಣ ಮಕ್ಕಳೆಲ್ಲರ ತಲೆಗೆ ಎಣ್ಣೆ ಹಚ್ಚಿ, ತುಪ್ಪದಲ್ಲಿ ಕಲಸಿದ ಶುಂಠಿಬೆಲ್ಲ ತಿನ್ನಲು ಕೊಡುವ ಕ್ರಮ ಇತ್ತು. ದೀಪಾವಳಿ ಸಮಯದಲ್ಲಿ ತೈಲಾಭ್ಯಂಗದ ದಿನ ಸ್ನಾನಾರಂಭಕ್ಕೆ ಮೊದಲು ಮನೆಯ ಕಿರಿಯ ಬಾಲಕನು ದೇವರೆದುರು ಭೂಮಿಯ ಮೇಲೆ ಎಣ್ಣೆಯ ಬೊಟ್ಟುಗಳನ್ನು ಇಟ್ಟು ಅರಸಿನ ಕುಂಕುಮ, ಹೂಗಳನ್ನು ಏರಿಸಿ ಭೂಮಿ ಪೂಜೆ ಮಾಡುವ ಪದ್ಧತಿ ಇತ್ತು. ನಾನು ಕಿಶೋರನಾಗಿರುವಷ್ಟು ಸಮಯ ಈ ಅವಕಾಶ ನನ್ನ ಪಾಲಿಗೆ ಬರುತ್ತಿತ್ತು.
ದೇವರ ಮಂಟಪದ ಪಕ್ಕದಲ್ಲಿ ಬಲಬದಿಗೆ ಕುಡಿಯುವ ನೀರನ್ನು ತುಂಬಿಡುವ ರಾಂಧಣಿ ಎನ್ನುವ ಮಣ್ಣಿನ ದೊಡ್ಡ ಪಾತ್ರೆ ಇಡುವ ಜಾಗ. ಅದರ ಮೇಲ್ಗಡೆ ತಾಯಿಯವರು ಮಾಡುತ್ತಿದ್ದ ಕೆಲವು ವಿಶೇಷ ಪೂಜೆಗಳಿಗಾಗಿ ಒಂದು ಸಣ್ಣ ದೇವರ ಗೂಡು. ಅದರಿಂದಾಚೆ ಅಡುಗೆ ಮನೆಗೆ ಹೋಗುವ ಬಾಗಿಲು.
ಅಡುಗೆ ಮನೆಯ ಬಾಗಿಲ ಬಲಬದಿಯಲ್ಲೊಂದು ಸಣ್ಣ ಕಂಬ ನೆಟ್ಟದ್ದು ಕಾಣಿಸುತ್ತಿದೆಯಲ್ಲವೇ? ಚಿತ್ಪಾವನಿಯಲ್ಲಿ ಇದರ ಹೆಸರು ತಾಕ್ಕಮೀಠಿ. ಇದಕ್ಕೆ ಕಡಗೋಲು ಕಟ್ಟಿಯೇ ರಂಗನಾಯಕ ರಾಜೀವ ಲೋಚನ ಎಂದು ಹಾಡುತ್ತಾ ಮನೆಯ ಮಹಿಳೆಯರು ಭರಣಿಯಲ್ಲಿ ಮಜ್ಜಿಗೆ ಕಡೆಯುತ್ತಿದ್ದುದು. ಚಿಕ್ಕ ಮಕ್ಕಳ ತಿಂಗಳ ಹುಟ್ಟುಹಬ್ಬಗಳ ಆಚರಣೆ ಇದರ ಎದುರೇ ನಡೆಯುತ್ತಿದ್ದುದು. ಅದರ ಮೇಲ್ಗಡೆ ಕಾಣಿಸುತ್ತಿರುವ ಸಣ್ಣ ಗೂಡು, ಒಳಗಡೆ ಕನ್ನಡಿ ಅಳವಡಿಸಿದ ಅರಸಿನ ಕುಂಕುಮದ ಪೆಟ್ಟಿಗೆ ಇಡುವ ಜಾಗ.
ಈ ಫೋಟೊದಲ್ಲಿ ಕಾಣಿಸುವ ಭಾಗಕ್ಕಿಂತ ಸ್ವಲ್ಪ ಹಿಂದೆ ಗೋಡೆ ಬದಿಯಲ್ಲಿ ಹೆಚ್ಚುವರಿಯಾಗಿ ನಿಲ್ಲಿಸಿದ ಕಂಬವೊಂದು ಇತ್ತು. ಚಿಕ್ಕ ಮಕ್ಕಳು ಕಂಬ ಮತ್ತು ಗೋಡೆಯ ನಡುವಿನ ಸಂದಿಯಲ್ಲಿ ನುಸಿಯುವ ಆಟ ಆಡುವುದಿತ್ತು. ಆ ಕಂಬಕ್ಕೆ ಸ್ವಲ್ಪ ಬೆಣ್ಣೆಯನ್ನು ಮೆತ್ತಿಟ್ಟು ನೀರೆಲ್ಲ ಇಳಿದ ಮೇಲೆ ಅದರಲ್ಲಿ ಸಾಲಿಸಿಲಿಕ್ ಎಸಿಡ್ ಬೆರೆಸಿ ಫಂಗಸ್‌ನಿಂದ ಉಂಟಾಗುವ ಸಿಬ್ಬದಂಥ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತಿತ್ತು.
ಇನ್ನೂ ಹಿಂದಕ್ಕೆ ಹೋದರೆ ವೇದಮಂತ್ರಗಳ ಅಮೂಲ್ಯ ಗ್ರಂಥಗಳನ್ನು ಇಡುವ ಮರದ ಕಪಾಟು ಇತ್ತು. ಆಗಿನ ಗ್ರಂಥಗಳೆಂದರೆ ಹೊಲಿಗೆ ಹಾಕಿ ಬೈಂಡ್ ಮಾಡಿದ ಪುಸ್ತಕಗಳಲ್ಲ. ಬಿಡಿ ಹಾಳೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಮೇಲೊಂದು ಕೆಳಗೊಂದು ಹಾಳೆಗಳ ಆಕಾರದ್ದೇ ಮರದ ತೆಳ್ಳಗಿನ ಹಲಗೆಗಳನ್ನಿಟ್ಟು ನಾರು ಬಟ್ಟೆಯಿಂದ ಗಟ್ಟಿಯಾಗಿ ಸುತ್ತಿ ಹಗ್ಗದಿಂದ ಬಿಗಿದ ವೇಷ್ಟಣಗಳು ಅವು. ಪುಸ್ತಕದ ಹುಳಗಳು ಬರದಂತೆ ಹಾವಿನ ಪೊರೆಯನ್ನು ಪುಟಗಳ ಮಧ್ಯೆ ಇರಿಸುವ ಕ್ರಮ ಇತ್ತು.
ಈ ಕಪಾಟಿನ ಪಕ್ಕದಲ್ಲೇ ಪ್ರತಿಸಾಂವತ್ಸರಿಕ ಶ್ರಾದ್ಧ, ಮಹಾಲಯಗಳು ನಡೆಯುತ್ತಿದ್ದುದು.
ಇನ್ನೂ ಹಿಂದೆ ಹೋದರೆ ಪಾತ್ರೆಗಳ ಕೋಣೆಗೆ ಹೋಗುವ ಬಾಗಿಲು. ಹೆಸರೇ ಸೂಚಿಸುವಂತೆ ದಿನನಿತ್ಯದ ಅಗತ್ಯಕ್ಕೆ ಬೇಕಾಗದ ಪಾತ್ರೆಗಳನ್ನಿರಿಸುವ ಕೋಣೆ ಇದು. ತಂದೆಯವರು ವೀಳ್ಯಕ್ಕೆ ಉಪಯೋಗಿಸುತ್ತಿದ್ದ ಹೊಗೆಸೊಪ್ಪನ್ನು ಶೇಖರಿಸಿಡುವ ಭರಣಿ ಈ ಕೋಣೆಯಲ್ಲೇ ಇರುತ್ತಿದ್ದುದು. ಈ ಕೋಣೆಯಲ್ಲಿರುತ್ತಿದ್ದ ಮರದ ಪೆಟ್ಟಿಗೆಯೊಂದು ಚೌತಿಯ ಗಣಪನನ್ನು ಮಂಟಪದ ಹಿಂದೆ ಎತ್ತರದಲ್ಲಿ ಕೂರಿಸುವ ಪೀಠವಾಗಿ ಉಪಯೋಗಿಸಲ್ಪಡುತ್ತಿತ್ತು.
No comments:
Post a Comment
Your valuable comments/suggestions are welcome