Monday 7 January 2019

ಅಮರ ಮಧುರ ಪ್ರೇಮ




ಹಿಂದಿ ಮಾತ್ರವಲ್ಲ, ದಕ್ಷಿಣದ ತಮಿಳು ತೆಲುಗು ಭಾಷೆಗಳಿಗಿಂತಲೂ ಕನ್ನಡ ಚಿತ್ರರಂಗ ಬೆಳವಣಿಗೆಯಲ್ಲಿ ಹಲವು ವರ್ಷ ಹಿಂದಿದ್ದ ಕಾಲ ಅದು. ತಯಾರಾಗುತ್ತಿದ್ದ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಹೆಚ್ಚಾಗಿ ಹಿಂದಿ ಧಾಟಿಯ ಹಾಡುಗಳನ್ನೇ ಬಳಸಿಕೊಳ್ಳಲಾಗುತ್ತಿತ್ತು.  ಅಂಥ ಸಮಯದಲ್ಲಿ ಧೀಮಂತ ನಿರ್ಮಾಪಕರೊಬ್ಬರು ಕನ್ನಡದಲ್ಲಿ ಭವ್ಯ ಚಿತ್ರವೊಂದನ್ನು ನಿರ್ಮಿಸಿ ಅದನ್ನು ಏಕ ಕಾಲದಲ್ಲಿ ತಮಿಳು, ತೆಲುಗು ಮತ್ತು ಹಿಂದಿಯಲ್ಲೂ ಬಿಡುಗಡೆ ಮಾಡಿದರು. ಅಷ್ಟೇ ಅಲ್ಲ.   ಕನ್ನಡ ಮೂಲದ 1೦ಕ್ಕೂ ಹೆಚ್ಚು ಧಾಟಿಗಳು ಆ ಎಲ್ಲ ಭಾಷೆಗಳಲ್ಲೂ ಮೊಳಗುವಂತೆ ಮಾಡಿದರು. ಅವುಗಳ ಪೈಕಿ ಒಂದು  ಅಂದು ಇಂದು ಎಂದೆಂದಿಗೂ ಮಾಧುರ್ಯಪ್ರಿಯರ ಮನದಾಗಸದ  ಪೂರ್ಣೇಂದು ಆಯಿತು. ಆ ನಿರ್ಮಾಪಕರೇ ಬಿ.ಆರ್. ಪಂತುಲು. 1957ರಲ್ಲಿ ತೆರೆಕಂಡ ಆ ಚಿತ್ರಗಳೇ ಕನ್ನಡದ ರತ್ನಗಿರಿ ರಹಸ್ಯ, ತೆಲುಗಿನ ರತ್ನಗಿರಿ ರಹಸ್ಯಮ್, ತಮಿಳಿನ ತಂಗಮಲೈ ರಗಸಿಯಮ್ ಮತ್ತು ಹಿಂದಿಯ ಸುಹಾಗ್.   ಇಂದಿಗೂ ಕೇಳುಗರ ಕರ್ಣಾನಂದಕ್ಕೆ ಕಾರಣವಾಗಿರುವ ಚಂದಮಾಮನಷ್ಟು ಚಂದದ  ಆ ಹಾಡೇ ಕನ್ನಡದಲ್ಲಿ ಅಮರ ಮಧುರ ಪ್ರೇಮವಾಗಿ ಹುಟ್ಟಿ ತೆಲುಗಿನಲ್ಲಿ   ಯಮುನಾ ಮುಖಮುಮ್ ಕನವೇ ಆದ,  ತಮಿಳಿನಲ್ಲಿ ಅಮುದೈ ಪೊಳಿಯುಂ ನಿಲವೇ ಎಂಬ ರೂಪ ತಾಳಿದ, ಹಿಂದಿಯಲ್ಲಿ ಚಮ್‌ಕೊ ಪೂನಮ್ ಚಂದಾ ಎಂದು ಕಾಣಿಸಿಕೊಂಡ ಕನ್ನಡದ ಹೆಮ್ಮೆಯ ಸಂಗೀತ ನಿರ್ದೇಶಕ ಟಿ.ಜಿ. ಲಿಂಗಪ್ಪ ಅವರ ಸಂಗೀತ ಸಂಯೋಜನೆ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪಿ.ಸುಶೀಲಾ ಹಾಡಿದ ಈ ಹಾಡಿನ ಹಿಂದಿ ಅವತರಣಿಕೆಗೆ ಆಶಾ ಭೋಸ್ಲೆ ಧ್ವನಿ ನೀಡಿದ್ದರು. 


ಇತ್ತೀಚಿನ ಬಾಹುಬಲಿ ಚಿತ್ರದಲ್ಲಿ ನಾಯಕನು ಬೃಹದಾಕಾರದ  ಶಿವಲಿಂಗ ಹೊತ್ತಂತೆ  ದಶಕಗಳ ಹಿಂದೆಯೇ ಈ ಚಿತ್ರದ ನಾಯಕನು ಅದೇ ರೀತಿಯ ಪ್ಲಾಸ್ಟರ್ ಆಫ್ ಪ್ಯಾರೀಸಿನ ಬಂಡೆ ಹೊತ್ತಿರುವುದನ್ನು ಈ ಪೋಸ್ಟರಿನಲ್ಲಿ ಕಾಣಬಹುದು!

ಆಗಲೇ ಪಿ.ಸುಶೀಲಾ ಗಂಧರ್ವ ಕನ್ಯೆ, ಮಾಡಿದ್ದುಣ್ಣೋ ಮಹರಾಯ, ಹರಿಭಕ್ತ,  ಆದರ್ಶ ಸತಿ ಮುಂತಾದ ಚಿತ್ರಗಳಲ್ಲಿ ಹಾಡಿದ್ದು  ಹರಿಭಕ್ತದ ಹರಿಯೆ ನಿನ್ನ ವಿರಸ ಭಾವ ಮತ್ತು ಆದರ್ಶ ಸತಿಯ ಪ್ರಭು ನನ್ನೆದೆಯೇ ನಿನ್ನಯ ಮಹಾ ಮಂದಿರ ಹಾಡುಗಳು ಸಾಕಷ್ಟು ಜನಪ್ರಿಯವಾಗಿದ್ದವು.  ಆದರೆ ಅವರ ಧ್ವನಿಯನ್ನು ಗಲ್ಲಿ ಗಲ್ಲಿಗೆ, ಮನೆ ಮನೆಗೆ ತಲುಪಿಸಿದ್ದು ಈ ಅಮರ ಮಧುರ ಪ್ರೇಮ ಹಾಡು.  ಆ ಚಿತ್ರದ ಉಳಿದ ಹಾಡುಗಳನ್ನು ಆಗ ಮುಂಚೂಣಿಯಲ್ಲಿದ್ದ ಗಾಯಕಿಯರಾದ ಪಿ.ಲೀಲ, ಜಿಕ್ಕಿ, ರಾಣಿ, ಎ.ಪಿ. ಕೋಮಲ ಮತ್ತು ಸೂಲಮಂಗಲಂ ರಾಜಲಕ್ಷ್ಮಿ ಹಾಡಿದ್ದು ಈ ಒಂದು ಹಾಡು ಮಾತ್ರ ಸುಶೀಲಾ ಅವರ ಧ್ವನಿಯಲ್ಲಿತ್ತು.  ತಾರೆ ಸಾವಿರ ಸೇರಿ ಚಂದಿರಗೆ ಸಾಟಿಯೇ ಎಂಬಂತೆ ಚಂದಿರನ ಉಲ್ಲೇಖವಿದ್ದ ಈ ಒಂದು ಹಾಡಿನಿಂದಲೇ ಅವರು ಬಾಜಿ ಹೊಡೆದು ಬಿಟ್ಟರು.   ಚೆನ್ನಾಗಿಯೇ  ಇದ್ದ ಆ ಚಿತ್ರದ ಉಳಿದೆಲ್ಲ  ಹಾಡುಗಳು ಇದರ ಪ್ರಭೆಯ ಮುಂದೆ ಮಂಕಾಗಿ ಹೋದವು.



ಯಮನ್ ಕಲ್ಯಾಣ್ ರಾಗವನ್ನು ಹೋಲುತ್ತಿದ್ದರೂ ಅಲ್ಲಲ್ಲಿ ಅನ್ಯ ಸ್ವರಗಳ ಸ್ಪರ್ಶದೊಂದಿಗೆ  ಪಹಾಡಿ ರಾಗದ ಚಲನೆಯುಳ್ಳ   ಈ ಹಾಡಿನ ಜನಪ್ರಿಯತೆಗೆ ನಿಖರವಾದ ಕಾರಣ ಹುಡುಕುವುದು ಕಷ್ಟ.  ಹಾಡಿನ ಹೆಚ್ಚಿನ ಸಾಲುಗಳು ಸುಲಭ ಗ್ರಾಹ್ಯವಾಗಿದ್ದರೂ ಆರಂಭದ ಉಗಾಭೋಗ ಶೈಲಿಯ ಸಾಕಿ ಭಾಗ ಮತ್ತು ಚರಣದಲ್ಲಿ ಬರುವ ‘ಆ’ಕಾರಗಳು ಪಂಜಾಬಿನ ಹೀರ್ ಶೈಲಿಯ ಕ್ಲಿಷ್ಟಕರ ಮುರ್ಕಿಗಳನ್ನು ಹೊಂದಿವೆ. ಆದರೆ ಇವುಗಳ ಹೊರತಾಗಿ ಉಳಿದ ಅಂಶಗಳನ್ನು ಮಾತ್ರ ಹಾಡಿದರೂ ಹಾಡು ಅಪೂರ್ಣ ಅನ್ನಿಸದೇ ಇರುವುದು ಈ ರಚನೆಯ ವೈಶಿಷ್ಟ್ಯ. ಈ ಹಾಡನ್ನು ತಮ್ಮದಾಗಿಸಿಕೊಂಡ ಜನಸಾಮಾನ್ಯರು ಇದನ್ನೇ ಮಾಡಿದ್ದು.  ಆದರೆ ಪಲ್ಲವಿ ಭಾಗದ ಬಾ ಬೇಗ ಚಂದಮಾಮ ಸಾಲಿನ ನಂತರ ಬರುವ   ಸ ರಿ ಗಾ...ಪ ರೀ..ಗ ಗರಿಸಾ ಗರಿಸಾ ಸಾ ಎಂಬ ಟ್ರಂಪ್ ಕಾರ್ಡ್ bridge music ಇಲ್ಲದೆ ಈ ಹಾಡು ಹಾಡಲು ನುಡಿಸಲು ಸಾಧ್ಯವೇ ಇಲ್ಲ. ಆವಾರಾ ಹೂಂ ನಂತರ ಅನಿವಾರ್ಯವಾಗಿ ಬರಲೇ ಬೇಕಾದ ಮಾ.. ಗರಿ ಸಾರಿಸನೀ ತುಣುಕಿನಂತೆ!  

ಒಂದನೇ ಮತ್ತು ಎರಡನೇ ಚರಣದ ಮೊದಲಿನ 7.5 ಸೆಕೆಂಡುಗಳ ಅತಿ ಚಿಕ್ಕ  interludeಗಳು ಬೇರೆಬೇರೆಯಾಗಿದ್ದು  ಗಿಟಾರ್ ರಿದಂ ಜತೆಗೆ ಮೊದಲನೆಯದರಲ್ಲಿ ಸೊಲೊವೋಕ್ಸ್ ಮತ್ತು ಎರಡನೆಯದ್ದರಲ್ಲಿ ಗ್ರೂಪ್ ವಯಲಿನ್ಸ್ ಬಳಸಲಾಗಿದೆ.  ಚರಣಗಳ ಮಧ್ಯದಲ್ಲಿ ಬರುವ bridge ತುಣುಕುಗಳಿಗೂ  ಸೊಲೊವೋಕ್ಸ್ ಬಳಸಲಾಗಿದೆ.  ಮೊದಲ ಮತ್ತು ಎರಡನೆಯ ಚರಣಗಳು ವಿಭಿನ್ನ ಸ್ಥಾಯಿಯಲ್ಲಿವೆ. ಚರಣಗಳ ಮಧ್ಯೆ ಬರುವ ಆಲಾಪ ಬ್ರಿಡ್ಜ್ ಮತ್ತು instrumental ಬ್ರಿಡ್ಜ್ ಕೂಡ ಬೇರೆ ಬೇರೆಯಾಗಿವೆ. ಪಲ್ಲವಿ ಮತ್ತು ಚರಣಗಳಿಗೆ ಮುಖ್ಯ ತಾಳವಾದ್ಯವಾಗಿ ತಬ್ಲಾ ಬಳಸಲಾಗಿದೆ.  ಅಂದಿನ ರಚನೆಗಳಲ್ಲಿ ಸಾಮಾನ್ಯವಾಗಿದ್ದಂತೆ ‘ಎಡ’ದ ಗುಮ್ಕಿಗಳು ಆಕರ್ಷಕವಾಗಿವೆ.  ಬಾರದದೇನೋ ನೀ ಬಳಿ ಸಾರಿ ಮತ್ತು ಕನಸೋ ಕಥೆಯೋ ಆಗುವ ಮುನ್ನ ಸಾಲುಗಳು ಬರುವಾಗ ಮಾತ್ರ ತಬ್ಲಾ ರಿದಂ ಬ್ರೇಕ್ ಮಾಡಿ  counter melody ಬಳಸಲಾಗಿದೆ. ಇಲ್ಲಿ ಕಥೆಯು ‘ಕಧೆ’ಎಂದು ಉಚ್ಚರಿಸಲ್ಪಟ್ಟದ್ದು ಇಡೀ ಹಾಡಿನ ಓಘದಲ್ಲಿ ದೊಡ್ಡ ಕೊರತೆ ಎಂದೆನ್ನಿಸುವುದಿಲ್ಲ.  ದೊಡ್ಡ ತಾಟೊಂದು ಬೀಳುವ ಸದ್ದು ಮತ್ತು ಕಿರಿಚುವಿಕೆ ಹೊಂದಿದ ಹಾಡಿನ ಕೊನೆ ಮಾತ್ರ ವಿಶಿಷ್ಟವಾಗಿದೆ.  ಸಿನಿಮಾದಲ್ಲಿ ಮಾತ್ರವಲ್ಲದೆ ಧ್ವನಿಮುದ್ರಿಕೆಯಲ್ಲೂ ಹೀಗೆಯೇ ಇರುವುದು ಈ ಹಾಡಿನ ವಿಶೇಷ.  ಹೀಗಾಗಿ ವೇದಿಕೆಗಳಲ್ಲಿ ಈ ಹಾಡನ್ನು ಪ್ರಸ್ತುತ ಪಡಿಸುವಾಗ ಕೊನೆ ಹೇಗಿರಬೇಕೆಂಬ ಗೊಂದಲ ಉಂಟಾಗುತ್ತದೆ!  ರತ್ನಗಿರಿ ರಹಸ್ಯದ ಮೂಲಕ ಸಹ ನಿರ್ದೇಶಕರಾಗಿ ಸಿನಿಮಾ ಲೋಕಕ್ಕೆ ಕಾಲಿರಿಸಿದ ಪುಟ್ಟಣ್ಣ ಕಣಗಾಲ್ ಅವರು ‘ಈ ಹಾಡನ್ನು ತಗಡಿನ ಶೆಡ್ಡೊಂದರಲ್ಲಿ ಧ್ವನಿಮುದ್ರಿಸಲಾಗಿತ್ತು’ ಎಂಬ ರಹಸ್ಯವನ್ನು ರೇಡಿಯೋ ಕಾರ್ಯಕ್ರಮವೊಂದರಲ್ಲಿ ಬಿಚ್ಚಿಟ್ಟಿದ್ದರು.
 
ಯಾವುದೇ ವಿಭಕ್ತಿ ಪ್ರತ್ಯಯ, ಕ್ರಿಯಾಪದಗಳಿಲ್ಲದ ರಚನೆಗಳಿಗೆ ಪ್ರಸಿದ್ಧರಾದ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಲೇಖನಿಯಿಂದ ಮೂಡಿದ ಈ ಹಾಡಿನ  ಪಲ್ಲವಿಯ ಮೊದಲ ಸಾಲಿನ ಅಮರ ಮಧುರ ಪ್ರೇಮ  ಎಂಬ ಮೂರು ಪದಗಳಲ್ಲಿರುವ  ಮೂರು ಮಕಾರಗಳು ಈ ಹಾಡಿನ ಬಗ್ಗೆ ಜನಮನದಲ್ಲಿ ಮಮಕಾರ ಮೊಳೆಯಲು ಕಾರಣವಾದವು ಎಂದರೆ ತಪ್ಪಾಗಲಾರದೇನೋ.  ಉಳಿದಂತೆ ಆದಿ ಪ್ರಾಸಕ್ಕಾಗಲಿ, ಅಂತ್ಯಪ್ರಾಸಕ್ಕಾಗಲೀ ಈ ರಚನೆಯಲ್ಲಿ ಪ್ರಾಶಸ್ತ್ಯ ನೀಡಲಾಗಿಲ್ಲ.  ಒಟ್ಟೊಟ್ಟಿಗೆ  ಬರುವ ಒಲವು ನೆನವು ನಲವು ಚೆಲವು ಪದಗಳನ್ನು ಅರ್ಥೈಸುವುದು ಕಷ್ಟವಾದರೂ ಕೇಳಲು ಹಿತವೆನ್ನಿಸುತ್ತವೆ.  ಸಾಮಾನ್ಯವಾಗಿ ಮಕ್ಕಳನ್ನು ರಂಜಿಸಲು  ಚಂದ್ರಮನನ್ನು ಚಂದಮಾಮನೆಂದು ಬಣ್ಣಿಸುವುದು ವಾಡಿಕೆ.  ಪ್ರಿಯಕರನಿಗೆ ಚಂದಮಾಮ ಪದದ ಬಳಕೆ ತೆಲುಗಿನ ಪ್ರಭಾವದಿಂದ ಬಂದಿರಬಹುದು ಅನ್ನಿಸುತ್ತದೆ.

ನನ್ನ ಕಾಲ್ಪನಿಕ ಕನ್ನಡ ಬಿನಾಕಾ ಗೀತ್ ಮಾಲಾ ಕಾರ್ಯಕ್ರಮದಲ್ಲಿ ಈ ಹಾಡು 1957ರ  ಚೋಟಿ ಕಾ ಸರ್ತಾಜ್ ಗೀತ್ ಆಗಿತ್ತು.  ಇದರ ಜನಪ್ರಿಯತೆ ಎಷ್ಟಿತ್ತೆಂದರೆ ಜನ್ಮದಲ್ಲಿ ಸಿನಿಮಾ ನೋಡದವರಿಗೆ, ರೇಡಿಯೊ ಕೇಳದವರಿಗೂ ಈ ಹಾಡು ಗೊತ್ತಿತ್ತು.  ಹಾರ್ಮೋನಿಯಮ್ ನುಡಿಸುತ್ತಾ ಹಾಡುವ ಬೀದಿ ಬದಿ ಹಾಡುಗಾರರಿಗಂತೂ ಇದು ಬಲು ನೆಚ್ಚಿನ ಹಾಡು.  ಆದರೆ ಅವರು ಈ ಟ್ಯೂನಿನಲ್ಲಿ ಹಾಡುತ್ತಿದ್ದುದು ‘ದೇವಾ ಜಗದೋದ್ಧಾರಾ ಹರಿ ನಿನ್ನ ಮಾಯವೇನೋ ’ ಎಂಬ ಅವರದೇ ಸಾಹಿತ್ಯವನ್ನು. ‘ಅಂಗರ ಮುದರ ಚೋಮ ಈ ಬಲ್ಲ ಬೇಗ ಬಂಡಿ ಭೀಮ’ ಎಂಬ ತುಳು ಹಾಡೊಂದು ನಮ್ಮ ಶಾಲಾ ದಿನಗಳ ನಾಟಕಗಳಲ್ಲಿರುತ್ತಿತ್ತು.  ಈ ರೀತಿ ಅದೆಷ್ಟು ಭಜನೆಗಳು ಈ ಧಾಟಿಯಲ್ಲಿ ಹಾಡಲ್ಪಟ್ಟಿವೆಯೋ, ಎಷ್ಟು ನಾಟಕಗಳಲ್ಲಿ ಈ ಟ್ಯೂನನ್ನು ಬಳಸಿಕೊಳ್ಳಲಾಗಿದೆಯೋ ದೇವರಿಗೇ ಗೊತ್ತು. ಇಷ್ಟು ವರ್ಷಗಳಾದರೂ ಇನ್ನೂ  ಅದೇ ಆಕರ್ಷಣೆಯನ್ನು ಉಳಿಸಿಕೊಂಡಿರುವ ಈ ಹಾಡಿನ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಅವತರಣಿಕೆಗಳನ್ನು ಈಗ ಆಲಿಸಿ.



ರಚನೆ : ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ : ಟಿ.ಜಿ. ಲಿಂಗಪ್ಪ
ಗಾಯಕಿ : ಪಿ.ಸುಶೀಲಾ

ಅಮರ ಮಧುರ ಪ್ರೇಮ
ನೀ ಬಾ ಬೇಗ ಚಂದಮಾಮ
ಬಾ ಬೇಗ ಚಂದಮಾಮ

ಸದಾನುರಾಗದಿ ತಾ ನಿನಗಾಗಿ
ಕಾದಿದೆ ಈ ಸುಮರಾಜಿ
ಸುಮ ಯೌವನವು ಬಾಡುವ ಮೊದಲೇ
ಬಾರದದೇನೋ ನೀ ಬಳಿ ಸಾರಿ
ಬಾ ಬೇಗ ಚಂದಮಾಮ

ಮನದಲಿ ಆಸೆಯ ತುಂಬಿದ ಮೇಲೆ
ಮರೆತೇ ಓಡಲು ಬಹುದೇ
ಒಲವು ನೆನವು ನಲವು ಚೆಲವು
ಕನಸೋ ಕಥೆಯೋ ಆಗುವ ಮುನ್ನ
ಬಾ ಬೇಗ ಚಂದಮಾಮ

ಕನ್ನಡ


ತಮಿಳು



ತೆಲುಗು



ಹಿಂದಿ



ಉದಯ ಕುಮಾರ್ ನಾಯಕ ಮತ್ತು ಜಮುನಾ ನಾಯಕಿಯಾಗಿದ್ದ ಈ ಚಿತ್ರದಲ್ಲಿ ಸಾಹುಕಾರ್ ಜಾನಕಿ ನೆಗೆಟಿವ್ ರೋಲ್ ನಿರ್ವಹಿಸಿದ್ದರು.  ಯೌವನವೇ ಈ ಯೌವನವೇ ಎಂದು  ಹಾಡುವ ಯೌವನ ಮೋಹಿನಿಯ ಪುಟ್ಟ ಪಾತ್ರವೊಂದರಲ್ಲಿ ಬಿ. ಸರೋಜಾದೇವಿ ಕಾಣಿಸಿಕೊಂಡಿದ್ದರು. ಪಂತುಲು ಅವರ ಮುಂದಿನ   ಸ್ಕೂಲ್ ಮಾಸ್ಟರ್ ಮತ್ತು ಕಿತ್ತೂರು ಚೆನ್ನಮ್ಮ ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಲು ಇದು ನಾಂದಿಯಾಯಿತು. ಚಿತ್ರದ ಒಂದು ಭಾಗದಲ್ಲಿ ಬರುವ  ರಾಜನ್ ಕಿವಿ ಕತ್ತೆ ಕಿವಿ ಪ್ರಹಸನವು ಚಂದಮಾಮದ ಕಥೆಯಂತಿದ್ದು ಬಲು ತಮಾಷೆಯಾಗಿದೆ. ಈ ಭಾಗದಲ್ಲಿ ಬಾಲಕೃಷ್ಣ ಮತ್ತು ಎಂ.ಎನ್. ಲಕ್ಷ್ಮೀದೇವಿ ನಟಿಸಿದ್ದರು. ಆಗಿನ ಪ್ರತೀ ಚಿತ್ರಕ್ಕೂ ಅನಿವಾರ್ಯ ಆಗಿದ್ದ ನರಸಿಂಹರಾಜು ಇದರಲ್ಲೇಕಿರಲಿಲ್ಲ ಎಂಬುದೂ ಒಂದು ರಹಸ್ಯ.  ಈ ಚಿತ್ರವನ್ನು    ಶಿವಾಜಿ ಗಣೇಶನ್ ಅವರನ್ನು ನಾಯಕನನ್ನಾಗಿಸಿ ಭಿನ್ನ ತಾರಾಗಣದೊಂದಿಗೆ ತಮಿಳಿನಲ್ಲಿ ಮರು ನಿರ್ಮಿಸಿ ತೆಲುಗಿಗೆ ಮತ್ತು ಹಿಂದಿಗೆ ಡಬ್ ಮಾಡಲಾಗಿತ್ತು.  ತಮಿಳು ಅವತರಣಿಕೆಯಲ್ಲಿ ಕೆಲವು ದೃಶ್ಯಗಳನ್ನು ವರ್ಣದಲ್ಲಿ ಚಿತ್ರೀಕರಿಸಲಾಗಿತ್ತು ಎಂದು ಹೇಳಲಾಗಿದೆ. ತಮಿಳಿನಿಂದ ತೆಲುಗಿಗೆ ಡಬ್ ಆದ  ಚಿತ್ರದ ಪೋಸ್ಟರಿನಲ್ಲಿ ಮನೋಹರಮಗು ಪಂಚರಂಗುಲ ದೃಶ್ಯಮುಲತೋ (ಮನೋಹರವಾದ ಪಂಚರಂಗೀ ದೃಶ್ಯಗಳೊಂದಿಗೆ) ಎಂಬ ಉಲ್ಲೇಖ ಇರುವುದನ್ನು ಗಮನಿಸಬಹುದು. ಕನ್ನಡ ಮಾರುಕಟ್ಟೆ ಸೀಮಿತವಾಗಿದ್ದುದರಿಂದ ಪಂತುಲು ಅವರು ಕನ್ನಡದಲ್ಲಿ ಬಣ್ಣದ ಮೇಲೆ ಹಣ ಹಾಕಲು ಆ ಕಾಲದಲ್ಲಿ ಹಿಂಜರಿದಿರಬಹುದು.  ಕನ್ನಡದಲ್ಲಿ ಟಿ.ಎಂ. ಸೌಂದರರಾಜನ್ ಹಾಡಿದ್ದ ಹಾಡುಗಳನ್ನು ತೆಲುಗಿನಲ್ಲಿ ಘಂಟಸಾಲ ಹಾಡಿದ್ದರು. ತೆಲುಗಿನಲ್ಲಿ ಯಮುನಾ ಮುಖಮುಮ್ ಕನವೇ ಅಲ್ಲದೆ ಬೇರೆ ಕೆಲವು ಹಾಡುಗಳನ್ನೂ ಪಿ.ಸುಶೀಲಾ ಅವರೇ ಹಾಡಿದ್ದರು. ಎಲ್ಲ ಭಾಷೆಗಳಲ್ಲೂ ಕನ್ನಡದ ಟ್ಯೂನ್‌ಗಳನ್ನೇ ಉಳಿಸಿಕೊಳ್ಳಲಾಗಿತ್ತು. ಕನ್ನಡ ರತ್ನಗಿರಿ ರಹಸ್ಯ ಮತ್ತು ತಮಿಳು ತಂಗಮಲೈ ರಗಸಿಯಮ್ ಅಂತರ್ಜಾಲದಲ್ಲಿ ವೀಕ್ಷಣೆಗೆ ಲಭ್ಯವಿವೆ.

- ಚಿದಂಬರ ಕಾಕತ್ಕರ್.