Monday 16 November 2015

Mr ಸಂಪತ್ ಪರಿಚಯಿಸಿದ ಸ್ವರಸಂಪತ್ತಿನೊಡೆಯ ಪಿ ಬಿ ಎಸ್

    
     ಈ ಸ್ವರಸಂಪತ್ತಿನೊಡೆಯ  ಎಂದರೆ ಪಿ.ಬಿ.ಶ್ರೀನಿವಾಸ್ ಎಂದು ಬೇರೆ ಹೇಳಬೇಕಾಗಿಲ್ಲ ಏಕೆಂದರೆ  ತಾನು ಮೊತ್ತ ಮೊದಲು  ಹಾಡಿದ್ದು ಮಿಸ್ಟರ್ ಸಂಪತ್ ಎಂಬ ಹಿಂದಿ ಚಿತ್ರಕ್ಕಾಗಿ ಎಂದು ಪ್ರತೀ ಸಂದರ್ಶನದಲ್ಲೂ ಅವರು ಹೇಳುತ್ತಿದ್ದರು.  ಪ್ರಸಿದ್ಧ ಲೇಖಕ ಆರ್.ಕೆ.ನಾರಾಯಣ್ ಕೃತಿ ಆಧಾರಿತ ಈ ಮಿಸ್ಟರ್ ಸಂಪತ್ ಚಿತ್ರ ಜೆಮಿನಿ ಸಂಸ್ಥೆಯ 1952ರ ನಿರ್ಮಾಣ.  ಬಾಲಕೃಷ್ಣ ಕಲ್ಲಾ ಎಂಬವರ ಸಹಯೋಗದೊಡನೆ  ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದವರು ಜೆಮಿನಿಯ ‘ಆಸ್ಥಾನ ವಿದ್ವಾನ್’ ಪ್ರಸಿದ್ಧ ವೈಣಿಕ ವಿದ್ವಾಂಸ ಈಮನಿ ಶಂಕರ ಶಾಸ್ತ್ರಿ ಅವರು.  ಶಾಸ್ತ್ರಿಯವರ  ಆಪ್ತ ಶಿಷ್ಯ ಆಗ ತಾನೆ ಬಿ.ಕಾಂ ಮುಗಿಸಿದ್ದ  ಯುವಕ ಪಿ.ಬಿ.ಶ್ರೀನಿವಾಸ್ .  ಹೀಗಾಗಿ ಈ ಚಿತ್ರದಲ್ಲಿ  ರಾಮಾಯಣದ ಒಂದು ದ್ವಿಪದಿ  ಹಾಗೂ ಶಂಶಾದ್ ಬೇಗಂ ಅವರೊಂದಿಗೆ ಒಂದು ಜಿಪ್ಸಿ ಹಾಡು ಮತ್ತು ಗೀತಾ ದತ್ತ್ ಅವರೊಂದಿಗೆ ಒಂದೆರಡು ಹಾಡುಗಳ ಕೆಲವು ಸಾಲುಗಳಿಗೆ  ಧ್ವನಿಯಾಗುವ ಅವಕಾಶ ಪಿ.ಬಿ.ಎಸ್ ಅವರಿಗೆ ಒದಗಿತು.  ಧ್ವನಿಮುದ್ರಣವಾದ ತಕ್ಷಣ ಆ ದ್ವಿಪದಿಯನ್ನು ತದೇಕಚಿತ್ತದಿಂದ ಪದೇ ಪದೇ ಆಲಿಸಿದ ಜೆಮಿನಿಯ ಒಡೆಯ ಎಸ್.ಎಸ್.ವಾಸನ್ ಅವರು "ಶಾಸ್ತ್ರಿಯವರೇ,  ನೀವು ಅದ್ಭುತ ದ್ವನಿಯೊಂದನ್ನು ಪರಿಚಯಿಸಿದ್ದೀರಿ.  ಅವರು ಕೇವಲ ಗುಣುಗುಣಿಸಿದರೂ ಸಾಕು.  ಕಲ್ಲುಗಳೂ ಕರಗುತ್ತವೆ" ಅಂದರಂತೆ!

     ಆ ದ್ವಿಪದಿ, ಜಿಪ್ಸಿ ಹಾಡು  ಹಾಗೂ ಇತ್‌ನಿ ಲಂಬಿ ಚೌಡಿ ದುನಿಯಾ  ಫಿರ್ ಭೀ ಇಸ್ ಮೆಂ ಜಗಾ ನಹೀಂ ಎಂಬ ಹಾಸ್ಯ ಶೈಲಿಯ ಹಾಡಿನ ಅಂಶಗಳು ಸಂಯೋಜಿತ ರೂಪದಲ್ಲಿ ಇಲ್ಲಿವೆ.



     ಇವುಗಳನ್ನಾಲಿಸಿದರೆ ಇದನ್ನು ಹಾಡಿದವರು  ದಕ್ಷಿಣ ಭಾರತದ ಓರ್ವ ಹೊಸ ಗಾಯಕ ಎಂದು ಯಾರಿಗೂ ಅನ್ನಿಸದು.  ಒಂದಿನಿತೂ ದಕ್ಷಿಣದ accent ಇಲ್ಲದ ಸುಸ್ಪಷ್ಟ ಹಿಂದಿ ಉಚ್ಚಾರ.   ಎಲ್ಲವೂ ಸರಿಯಾಗಿದ್ದರೆ ಮುಂದೆ ಕನಿಷ್ಠ ದಕ್ಷಿಣದಲ್ಲಿ ತಯಾರಾಗುವ ಎಲ್ಲ ಹಿಂದಿ ಚಿತ್ರಗಳ ಹಾಡುಗಳನ್ನು ಅವರೇ ಹಾಡಬೇಕಿತ್ತು. ಆ ಚಿತ್ರಕ್ಕೆ ಹಾಡುಗಳನ್ನು ಬರೆದ ಪಂ||ಇಂದ್ರ ಅನ್ನುವವರು  " ಶ್ರೀನಿವಾಸ್ , ಎಲ್ಲ ಕಡೆ ಇರುವಂತೆ ಹಿಂದಿ ಚಿತ್ರರಂಗದಲ್ಲೂ ಬಹಳ ರಾಜಕೀಯ ಇದೆ. ನನಗೆ ನಿಮ್ಮ ಸಾಮರ್ಥ್ಯ ಗೊತ್ತು.  ಆದರೇನು ಮಾಡೋಣ. ನೀವು ಪಂಜಾಬ್, ಬಂಗಾಳ ಅಥವಾ ಉತ್ತರ ಪ್ರದೇಶದಲ್ಲಿ ಹುಟ್ಟಲಿಲ್ಲವಲ್ಲ. ಅಲ್ಲಿಯವರು ಓರ್ವ ‘ಮದರಾಸೀ’ಯನ್ನು ಎಂದೂ ಒಪ್ಪಿಕೊಳ್ಳಲಾರರು" ಅಂದಿದ್ದರಂತೆ. ವಾಸ್ತವದಲ್ಲಿಯೂ ಮುಂದೆ ಅನೇಕ ವರ್ಷಗಳ ವರೆಗೆ ಅದೇ ಪರಿಸ್ಥಿತಿ ಇತ್ತು. ಹಿಂದಿ ವಲಯದಲ್ಲಿ  ಹೀರೊಯಿನ್‌ಗಳನ್ನು ಹೊರತುಪಡಿಸಿ ದಕ್ಷಿಣದ ಇನ್ಯಾರೂ ಹೆಸರು ಮಾಡಲು ಸಾಧ್ಯವಾಗಲಿಲ್ಲ.  ಕೆಲ ವರ್ಷಗಳ ನಂತರ ಸಂಗೀತ ನಿರ್ದೇಶಕ ಚಿತ್ರಗುಪ್ತ ಅವರು ಮೈ ಭೀ ಲಡಕೀ ಹೂಂ ಚಿತ್ರದಲ್ಲಿ ಪಿ.ಬಿ.ಎಸ್ ಅವರಿಗೆ ಲತಾ ಮಂಗೇಶ್ಕರ್ ಜೊತೆಗೆ  ಚಂದಾ ಸೆ ಹೋಗಾ ವೊ ಪ್ಯಾರಾ ಹಾಡುವ ಅವಕಾಶ ನೀಡಿದಾಗ ಸ್ಥಾಪಿತ ಹಿಂದಿ ಗಾಯಕರು "ಒಬ್ಬ ಮದರಾಸಿಯಿಂದ ಹಾಡಿಸಿದರಲ್ಲ.  ನಾವಿರಲಿಲ್ಲವೇ" ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದರಂತೆ.  ಹೀಗಾಗಿ ಪಿ.ಬಿ.ಎಸ್ ಅವರು ದಕ್ಷಿಣದಲ್ಲಿ ಅದ್ವಿತೀಯರಾಗಿ ಮೆರೆದರೂ ಹಿಂದಿಯ ಮಟ್ಟಿಗೆ ಡಬ್ ಆದ ಮತ್ತು ಕೆಲ ಲೊ ಬಜಟ್ ಚಿತ್ರಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಬೇಕಾಯಿತು.  ಮುಂದೆ ಈ ಧೋರಣೆ ಸ್ವಲ್ಪ ಬದಲಾಗಿ ಎಸ್.ಪಿ.ಬಿ, ಜೇಸುದಾಸ್ ಮುಂತಾದವರು ಹಿಂದಿಯಲ್ಲಿ ಕೊಂಚ ಮಿಂಚಿದ್ದು ಎಲ್ಲರಿಗೂ ಗೊತ್ತೇ ಇದೆ.

     Mr ಸಂಪತ್ ಚಿತ್ರದ ಎಲ್ಲ ಹಾಡುಗಳ ವಿವರಗಳುಳ್ಳ ಹಿಂದಿ ಫಿಲ್ಮ್ ಗೀತ್ ಕೋಶ್ ಪುಸ್ತಕದ ಪುಟವನ್ನು ಇಲ್ಲಿ ನೋಡಬಹುದು. (ಆಗಿನ ಕಾಲದಲ್ಲೂ "ಅಚ್ಛೇ ದಿನ್"ಗಳ ನಿರೀಕ್ಷೆ ಇದ್ದುದನ್ನು ನಾಲ್ಕನೇ ಹಾಡಿನಲ್ಲಿ ಗಮನಿಸಬಹುದು!)


      ಈ ಹಾಡುಗಳನ್ನು ರೇಡಿಯೊ ಸಿಲೋನ್ ಸೇರಿದಂತೆ ಯಾವುದೇ ಸ್ಟೇಶನ್‌ನಿಂದ ಕೇಳಿದ ನೆನಪಿಲ್ಲ.  youtubeನಲ್ಲಿ ಪೂರ್ತಿ ಚಿತ್ರ  ಹಾಗೂ ಕೆಲ ಹಾಡುಗಳ ವಿಡಿಯೊ ಲಭ್ಯ ಇದೆ.  ಆಸಕ್ತರು ವೀಕ್ಷಿಸಬಹುದು.

ಪಿ.ಬಿ.ಎಸ್ ಹಾಡಿದ ಇನ್ನಷ್ಟು ಹಿಂದಿ/ಹಿಂದಿ ಧಾಟಿಯ ಹಾಡುಗಳು

ಅವರು ಕನ್ನಡದಲ್ಲಿ ಪ್ರಥಮವಾಗಿ ಹಾಡಿದ ಜಾತಕ ಫಲ ಚಿತ್ರದ ಈ ಮೂಢತನವಿದೇಕೆ ಹಾಡು.  ಇದು ಹಿಂದಿಯ ಮೇಲಾ ಚಿತ್ರದಲ್ಲಿ ರಫಿ ಹಾಡಿದ್ದ  ಯೆ ಜಿಂದಗಿ ಕೆ ಮೇಲೆ ಧಾಟಿಯಲ್ಲಿದೆ.
    

ಡಾಕು ಭೂಪತ್ ಎಂಬ ಕಮ್ಮಿ ಬಜಟ್ಟಿನ ಚಿತ್ರವೊಂದಕ್ಕಾಗಿ ಪಿ. ಸುಶೀಲ ಜೊತೆ ಹಾಡಿದ ಹಿಂದಿ ಹಾಡು.


ತೆಲುಗು ಚಿತ್ರವೊಂದಕ್ಕಾಗಿ ಚೌದವಿ ಕಾ ಚಾಂದ್ ಹೊ ಧಾಟಿಯಲ್ಲಿ ರಫಿಗೆ ಸರಿ ಸಾಟಿಯಾಗಿ ಹಾಡಿದ ಹಾಡು. ಧ್ವನಿಯನ್ನು ನಕಲು ಮಾಡಲು ಯತ್ನಿಸದೆ, improvisation ನೆವದಲ್ಲಿ ಮೂಲ ಧಾಟಿಯನ್ನು ಕೆಡಿಸದೆ, ಆರಂಭದ humming ಸೇರಿದಂತೆ ಎಲ್ಲ ಸಂಗತಿಗಳನ್ನು, ಮುರ್ಕಿಗಳನ್ನು ಯಥಾವತ್ ಪ್ರಸ್ತುತ ಪಡಿಸಿರುವುದು ಇಲ್ಲಿಯ ವಿಶೇಷ.  ಧ್ವನಿಯ ಅಂತರ್ಗತ ಮಾಧುರ್ಯ ಕಬ್ಬಿನ ಮೇಲಿನ ಜೇನು.

.
ಹಿಂದಿಗೆ ಡಬ್ ಆದ ಭಕ್ತ ಕುಂಬಾರ ಚಿತ್ರಕ್ಕಾಗಿ ಹಾಡಿದ ಕಂಡೆ ಹರಿಯ ಕಂಡೆ ಹಿಂದಿಯಲ್ಲಿ.




Wednesday 21 October 2015

ಗುರುವಾರ ಬಂತಮ್ಮ

   
     ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ-  ಇದು ಡಾ|| ರಾಜ್ ಹಾಡಿರುವ ಅತ್ಯಂತ ಜನಪ್ರಿಯ  ಗೀತೆಗಳಲ್ಲೊಂದು. ಚಿ.ಉದಯಶಂಕರ್ ಬರೆದು ಎಂ. ರಂಗರಾವ್ ಅವರು ರಾಗ ಸಂಯೋಜನೆ ಮಾಡಿದ್ದ ಈ ಹಾಡು ಆ  ಮೇಲೆ ಟಿ. ಜಿ. ಲಿಂಗಪ್ಪ ಸಂಗೀತವಿದ್ದ ಭಾಗ್ಯವಂತ ಚಿತ್ರದಲ್ಲಿ ಯಥಾವತ್ ಬಳಕೆಯಾಗಿತ್ತು.

     ಇದು ಮೇಲ್ನೋಟಕ್ಕೆ ಇತರ ಭಕ್ತಿ ಗೀತೆಗಳಂತೆಯೇ ಭಾಸವಾದರೂ ಇದರ ರಾಗ ಸಂಯೋಜನೆಯಲ್ಲೊಂದು ವಿಶೇಷವಿದೆ.  ಸಾಮಾನ್ಯವಾಗಿ 4 ಚರಣಗಳುಳ್ಳ ಹಾಡುಗಳ 1 ಮತ್ತು 3ನೇ ಚರಣಗಳು ಒಂದು ರೀತಿ ಇದ್ದರೆ 2 ಮತ್ತು   4ನೇ ಚರಣಗಳು ಇನ್ನೊಂದು ರೀತಿ ಇರುವುದು ವಾಡಿಕೆ.  ಆದರೆ ಮಧ್ಯಮಾವತಿ ರಾಗಾಧಾರಿತ ಈ ಹಾಡಿನ ಒಂದೊಂದು ಚರಣವೂ ಒಂದೊಂದು ರೀತಿ ಇರುವುದು ವಿಶೇಷ.  ಒಂದನೆ ಚರಣವು ಮಧ್ಯ ಸಪ್ತಕದ ಷಡ್ಜದಿಂದ, ಎರಡನೆ ಚರಣ  ಪಂಚಮದಿಂದ, ಮೂರನೆ ಚರಣ ನಿಷಾದದಿಂದ ಆರಂಭವಾಗುತ್ತವೆ ಮತ್ತು ಕೊನೆಯ ಚರಣವು ತಾರ ಸಪ್ತಕದ ಷಡ್ಜದಿಂದ ಎತ್ತುಗಡೆಯಾಗಿ  ತಾರ ಮಧ್ಯಮವನ್ನು ಸ್ಪರ್ಶಿಸುತ್ತದೆ.  ಭಕ್ತಿಮಾರ್ಗದಲ್ಲಿ ಅತ್ಯಂತ ಕೆಳಮಟ್ಟದಿಂದ ಆರಂಭಿಸಿ ಹಂತ ಹಂತವಾಗಿ ಮೇಲೇರುತ್ತಾ ಉತ್ತುಂಗವನ್ನು ತಲುಪಬೇಕು ಎಂಬ ಸಂದೇಶವನ್ನು ಇದರಿಂದ ಪಡೆಯಬಹುದೇನೋ.

     ಇತ್ತೀಚೆಗೆ ಮಂಗಳಾದೇವಿ ದೇವಸ್ಥಾನದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನು ಕೊಳಲಿನಲ್ಲಿ ನುಡಿಸಿದ ಈ ಹಾಡು ಇಲ್ಲಿದೆ.  ಜೊತೆಯಲ್ಲಿ ಹಾಡಿಕೊಳ್ಳಲು ಸಾಹಿತ್ಯವೂ ಇದೆ.





ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ
ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ
ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ
ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ

ಯೋಗಿ ಬರುವನಮ್ಮ ಶುಭ ಯೋಗ ಬರುವುದಮ್ಮ
ರಾಘವೇಂದ್ರ ಗುರುರಾಯ ಬಂದು ಭವ ರೋಗ ಕಳೆವನಮ್ಮ

ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ

ಮನವ ತೊಳೆಯಿರಮ್ಮ ಭಕ್ತಿಯ ಮಣೆಯ ಹಾಕಿರಮ್ಮ
ಧ್ಯಾನದಿಂದ ಕರೆದಾಗ ಬಂದು ಒಳಗಣ್ಣ ತೆರೆವನಮ್ಮ

ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ

ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ
ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ

ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ

ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ
ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ

ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ
ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ


ಮೂಲ ಹಾಡನ್ನು ಇಲ್ಲಿ ಕೇಳಬಹುದು

 
 
ನುಡಿಸಲು,ಹಾಡಲು ಕಲಿಯಬಯಸುವವರಿಗಾಗಿ ಹಾಡಿನ ಸಂಪೂರ್ಣ ಸ್ವರಲಿಪಿ ಇಲ್ಲಿದೆ.

Sunday 6 September 2015

ಮನದಾಳದಲ್ಲುಳಿದಿರುವ ಶೆಟ್ಟಿ ಬಸ್


ಬೇರೆ ಬೇರೆ ಕಂಪೆನಿಗಳ  ಅನೇಕ ಬಸ್ಸುಗಳು ಓಡಾಡುತ್ತಿದ್ದರೂ ಮುಂಡಾಜೆ, ಉಜಿರೆ, ಬೆಳ್ತಂಗಡಿ ಭಾಗದ ಜನಜೀವನದ ಅವಿಭಾಜ್ಯ ಅಂಗವಾಗಿದ್ದದ್ದು ಬಾಬು ಶೆಟ್ರ ಶಂಕರ್ ವಿಠಲ್‌ ಮತ್ತು   "ಶೆಟ್ಟಿ ಬಸ್".   ಹೌದು, ಎಲ್ಲರಿಗೂ ಅದು "ಶೆಟ್ಟಿ ಬಸ್". "ನಾನು ಶಂಕರ್ ವಿಠಲ್‌ನಲ್ಲಿ ಬಂದೆ",  "ಹನುಮಾನ್‌ನಲ್ಲಿ ಬಂದೆ" ಅಥವಾ "ಸಿ.ಪಿ.ಸಿಯಲ್ಲಿ ಬಂದೆ" ಅಂದಂತೆ  ನಾನು "ಶೆಟ್ಟಿಯಲ್ಲಿ ಬಂದೆ" ಅಥವಾ "ಶೆಟ್ಟಿ ಮೋಟರ್ ಸರ್ವಿಸಲ್ಲಿ ಬಂದೆ" ಎಂದು ಯಾರೂ ಅನ್ನುತ್ತಿರಲಿಲ್ಲ.  "ಶೆಟ್ಟಿ ಬಸ್ಸಲ್ಲಿ ಬಂದೆ" ಎಂದೇ ಎಲ್ಲರೂ ಅನ್ನುತ್ತಿದ್ದುದು. ಊರಲ್ಲೆಲ್ಲೂ ಹೈಸ್ಕೂಲ್ ಇಲ್ಲದಿದ್ದ ಅಂದು ಮಕ್ಕಳನ್ನು 15 ಪೈಸೆಯ ರಿಯಾಯಿತಿ ದರದಲ್ಲಿ  ಉಜಿರೆಗೆ   ಕೊಂಡೊಯ್ಯುತ್ತಿದ್ದ ಇದು ಅಂದಿನ ಸ್ಕೂಲ್ ಬಸ್ಸೂ ಆಗಿತ್ತು.  ಊರವರು ಉಜಿರೆ ಬೆಳ್ತಂಗಡಿ ಕಡೆಗೆ ಹೋಗಲು ಅವಲಂಬಿಸುತ್ತಿದ್ದುದೂ ಈ ಬಸ್ಸನ್ನೇ. ಬೆಳ್ತಂಗಡಿಯಿಂದ ಬೆಳಗ್ಗೆ ಚಾರ್ಮಾಡಿಗೆ ಹೋಗಿ ಹಿಂತಿರುಗುತ್ತಾ ಶಾಲಾ ಸಮಯಕ್ಕೆ ಸರಿಯಾಗಿ ಉಜಿರೆ ತಲುಪಿ ಮುಂದೆ ಮಂಗಳೂರಿಗೆ ಇದರ ಪ್ರಯಾಣ.  ಸಾಮಾನ್ಯವಾಗಿ ಮಂಗಳೂರಿಗೆ ಹೋಗುವವರು ಉಜಿರೆ ವರೆಗೆ ಇದರಲ್ಲಿ ಹೋಗಿ  ಸುಮಾರು ಇದೇ ಹೊತ್ತಿಗೆ ಬರುತ್ತಿದ್ದ ಕಡೂರು ಮಂಗಳೂರು ಕೃಷ್ಣಾ ಎಕ್ಸ್‌ಪ್ರೆಸ್‌ನಲ್ಲಿ ಅಲ್ಲಿಂದ ಪ್ರಯಾಣ ಮುಂದುವರಿಸುತ್ತಿದ್ದರು. ಏಕೆಂದರೆ ಶಟಲ್ ಸರ್ವಿಸ್ ಆದ ಇದು ಮಂಗಳೂರು ತಲುಪುವಾಗ 12 ಗಂಟೆ ಕಳೆಯುತ್ತಿತ್ತು.  ಅಲ್ಲಿಂದ ಸಾಯಂಕಾಲ ಬೆಳ್ತಂಗಡಿಗೆ ಬಂದು ಅಲ್ಲಿ ಇದರ ಹಾಲ್ಟ್.

ಆಗ ಸಿ.ಪಿ.ಸಿ, ಪಿ.ವಿ. ಮೋಟರ್ಸ್ ಇತ್ಯಾದಿ ಬಸ್ಸುಗಳು ಫಾರ್ಗೊ ಅಥವಾ ಡಾಜ್ ಎಂಜಿನ್ ಹೊಂದಿದ್ದರೆ ಹನುಮಾನ್, ಶಂಕರ್ ವಿಠಲ್, ಭಾರತ್ ಮುಂತಾದವುಗಳಂತೆ ಶೆಟ್ಟಿ ಬಸ್ ಕೂಡ ಟಾಟಾ ಮರ್ಸಿಡಿಸ್ ಬೆಂಜ್ ಎಂಜಿನ್ ಉಳ್ಳದ್ದಾಗಿತ್ತು.  ಬೆಂಜ್ ಬಸ್ಸುಗಳೆಂದರೆ ಉಳಿದವುಗಳಿಗಿಂತ ಒಂದು ಕೈ ಮೇಲು ಎಂದು ಆಗ ನಮ್ಮ ಅಭಿಪ್ರಾಯ.  ಸ್ಟೇರಿಂಗಿನ ಮಧ್ಯದಲ್ಲಿ ಬೆಂಜ್ ಚಿಹ್ನೆಯ ಸ್ವಿಚ್ಚುಳ್ಳ ಎಲೆಕ್ಟ್ರಿಕ್ ಹಾರ್ನ್ ಇವುಗಳ ವಿಶೇಷ ಆಕರ್ಷಣೆ. ಬೆಂಜ್ ಬಸ್ಸುಗಳು ಉಳಿದವುಗಳಿಗಿಂತ ಹೆಚ್ಚು ವೇಗವಾಗಿ ಚಲಿಸುತ್ತವೆ ಎಂಬುದೂ ನಮ್ಮ ಆಗಿನ ಅನಿಸಿಕೆ. ಅದಕ್ಕೆ ತಕ್ಕಂತೆ  ಸಾಕಷ್ಟು ವೇಗವಾಗಿಯೇ ಚಲಾಯಿಸುತ್ತಿದ್ದ  ಶೆಟ್ಟಿ ಬಸ್ಸಿನ  ಡ್ರೈವರ್ ನಮಗೆಲ್ಲ ಅಚ್ಚು ಮೆಚ್ಚು. ಹೆಚ್ಚು ತಿರುವುಗಳಿಲ್ಲದ ಕಡೆ  ಸ್ಟೇರಿಂಗ್‌ನೊಳಗೆ ಎರಡೂ ಕೈಗಳನ್ನು ತೂರಿಸಿ ಮೊಣಕೈಗಳಿಂದ ಕಂಟ್ರೋಲ್ ಮಾಡುತ್ತಾ  ಬಸ್ಸು ಚಲಾಯಿಸುವುದು ಅವರ ಸ್ಪೆಷಲ್ ಸ್ಟೈಲ್ ಆಗಿತ್ತು. ಶಂಕರ್ ವಿಠಲಿನ ಬಾಬು ಶೆಟ್ರು, ಹನುಮಾನಿನ ರಾಮಣ್ಣ ಮುಂತಾದವರು ಪೋಲಿಸ್ ಚಡ್ಡಿ ಧರಿಸುತ್ತಿದ್ದರೆ ಇವರು ಖಾಕಿ ಪ್ಯಾಂಟ್ ತೊಟ್ಟು ರೈಸುತ್ತಿದ್ದರು.  ಸುಮಾರು ಅದೇ ಸಮಯಕ್ಕೆ ಘಟ್ಟದ ಮೇಲಿನಿಂದ ಬರುತ್ತಿದ್ದ "ಶಾರದಾಂಬಾ"  ಏನಾದರೂ ಹಿಂದಿನಿಂದ ಬರುವುದು ಕಂಡರೆ ಬಸ್ಸಿನ ಮೈಯೆಲ್ಲ ನಡುಗುವಂತೆ ಆವೇಶಭರಿತವಾಗಿ ಎಷ್ಟು ಸಾಧ್ಯವೋ ಅಷ್ಟು ವೇಗದಲ್ಲಿ ಚಲಿಸಿ ಉಜಿರೆ ಮುಟ್ಟಿದ ಮೇಲೆಯೇ ಹಿಂತಿರುಗಿ ನೋಡುತ್ತಿದ್ದುದು. ನಿತ್ಯದ ಕಂಡಕ್ಟರ್ ರಜೆ ಮಾಡಿದಂದು ಡ್ರೈವರ್  ಸ್ಥಾನಕ್ಕೆ ಇನ್ಯಾರನ್ನೋ ನಿಯೋಜಿಸಿ ಅವರು ಕಂಡಕ್ಟರ್ ಕೆಲಸ ಮಾಡುವುದೂ ಇತ್ತು. ಮಂದವಾಗಿ ಉರಿಯುವ ಬಲ್ಬ್ ಹೊಂದಿದ್ದ ಏಸು ಕ್ರಿಸ್ತನ ಫೋಟೊ ಒಂದು ಬಸ್ಸಿನ ಮುಂಭಾಗದಲ್ಲಿ ಇದ್ದುದರಿಂದ ಅವರು ಕ್ರಿಶ್ಚಿಯನ್ ಎಂದು ತಿಳಿದಿತ್ತು.   "ಸೇರಿ ಸೇರಿ" ಎಂದು ಎಷ್ಟು ಜನರನ್ನೂ ಕೂರಿಸಬಹುದಾಗಿದ್ದ ಉದ್ದ ಸೀಟು ಹೊಂದಿದ್ದ ಇದರಲ್ಲಿ  ಮುಂಬದಿಯಿಂದ 3ನೇ ಸ್ಥಾನ ನಮ್ಮ ಪ್ರಥಮ ಆಯ್ಕೆ. ಇಲ್ಲಿಂದ  ಡ್ರೈವರನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕ್ಲಚ್ಚು, ಬ್ರೇಕ್, ಎಕ್ಸಲರೇಟರ್, ಗೇರು ಇತ್ಯಾದಿಗಳನ್ನು  ನೋಡಲು ಸಾಧ್ಯವಾಗುತ್ತಿದ್ದುದು ಇದಕ್ಕೆ ಕಾರಣ. ಬಸ್ಸು ಆಗಾಗ "ಸೀನು"ವುದನ್ನು ಗಮನಿಸಲೂ ಅದೇ ಪ್ರಶಸ್ತ ಜಾಗವಾಗಿತ್ತು.  ಆಗಿನ ಬಸ್ಸುಗಳಲ್ಲಿ ಧೂಮ್ರಪಾನ ಮಾಡಬಾರದು ಅಥವಾ ಬೀಡಿ ಸಿಗರೇಟು ಸೇದಬಾರದು ಎಂಬರ್ಥದಲ್ಲಿ ಹೊಗೆಬತ್ತಿ ಸೇದಬಾರದು ಎಂಬ ಬರಹ ಇರುತ್ತಿತ್ತು. ಇದನ್ನು ನೋಡಿದಾಗ ನನಗೆ  ಊದುಬತ್ತಿ ನೆನಪಾಗುತ್ತಿತ್ತು!

ಉಜಿರೆಯಲ್ಲಿ ತಾಮ್ರದ ಅಂಗಡಿಯ ಪಾಂಡುರಂಗರು ಇದರ ಏಜಂಟ್.  ಉಜಿರೆ ತಲುಪಿದ ಶೆಟ್ಟಿ ಬಸ್ಸು ಒಮ್ಮೆ ಎಂಜಿನ್ ರೇಸ್ ಮಾಡಿ ನಿಲ್ಲುತ್ತಿದ್ದಂತೆ ಅತ್ತ ಬರುತ್ತಾ "ಮಂಗಳೂರ್ ಯಾರು ಮಂಗಳೂರ್" ಎಂದು ಒಂದು ಸಲ ಮಾತ್ರ  ಜೋರಾಗಿ ಕೂಗುವುದು ಅವರ ಕ್ರಮ.   ಎರಡನೆಯ ಸಲ ಅವರು ಇದನ್ನು ಹೇಳಿದ್ದು ಯಾರೂ ಕೇಳಿಲ್ಲ!  ಎಲ್ಲ ಪ್ರಯಾಣಿಕರೂ ಊರವರೇ ಆಗಿರುತ್ತಿದ್ದುದರಿಂದ ಗುಣಸಾಗರಿ ರಸಾಯನದ ಲೈಟ್ ಭಟ್ರು ಈ ಬಸ್ಸಿನತ್ತ ಬರುತ್ತಿರಲಿಲ್ಲ ಎಂದು ನನ್ನ ನೆನಪು.

1968ರ ಸುಮಾರಿಗೆ ಈ ಭಾಗದ ಮಾರ್ಗಗಳು ರಾಷ್ಟ್ರೀಕೃತವಾದ ಮೇಲೂ ಒಂದೆರಡು ತಿಂಗಳು ಖಾಸಗಿ ಬಸ್ಸುಗಳಿಗೆ ಅವಕಾಶ ಇತ್ತು.  KSRTCಯ ರಿಯಾಯಿತಿ ಪಾಸುಗಳನ್ನು ಪಡೆದು ವಿದ್ಯಾರ್ಥಿಗಳನೇಕರು ಅವುಗಳಲ್ಲಿ ಪ್ರಯಾಣಿಸತೊಡಗಿದರು.  ಕೆಲವು ದಿನ KSRTC ಕೈ ಕೊಟ್ಟಾಗ  ಅವರನ್ನೂ 15 ಪೈಸೆಯ  ರಿಯಾಯಿತಿ ದರದಲ್ಲೇ ಕರೆದೊಯ್ಯುತ್ತಿತ್ತು ಶೆಟ್ಟಿ ಬಸ್.

ಒಮ್ಮೆ ಮುಂಡಾಜೆ ಸೇತುವೆ ದುರಸ್ತಿಗೆಂದು ಮುಚ್ಚಲ್ಪಟ್ಟಾಗ ಒಂದು  ವಾರ ಕಾಲ  ಶೆಟ್ಟಿ ಬಸ್ಸು ಸೇರಿದಂತೆ ಎಲ್ಲ ವಾಹನಗಳು ಪಂಚಾಯತು ರಸ್ತೆ ಮೂಲಕ ಗುಂಡಿ ದೇವಸ್ಥಾನದ ಎದುರಿಂದ ಹಾದು ಮೃತ್ಯುಂಜಯಾ ಹೊಳೆ ದಾಟಿ ಚಲಿಸುತ್ತಿದ್ದುದು ಇನ್ನೊಂದು ಮರೆಯಲಾಗದ ಅನುಭವ.  ಯಾವಾಗಲೂ ಎರಡು ಕಿಲೋಮೀಟರ್ ನಡೆದು ಬಸ್ ಹಿಡಿಯಬೇಕಾಗಿದ್ದ ನಮಗೆ ಆ ಒಂದು ವಾರ  ಮನೆಯೆದುರೇ ಬಸ್ಸನ್ನೇರಿ ಸಂಜೆ  ಮನೆ ಮುಂದೆಯೇ ಇಳಿಯುವ ಸಂಭ್ರಮ!

ಮೇಲಿನ ಚಿತ್ರದಲ್ಲಿ ಕಾಣಿಸುತ್ತಿರುವುದು ನಿಜವಾದ ಶೆಟ್ಟಿ ಬಸ್ಸೇನೂ ಅಲ್ಲ.   ಅಂತರ್ಜಾಲದಲ್ಲಿ  ದೊರಕಿದ  ಸರಿ ಸುಮಾರು ಅದನ್ನೇ ಹೋಲುವ ಬಸ್ಸಿನ ಚಿತ್ರವೊಂದನ್ನು ಒಂದಷ್ಟು ಮಾರ್ಪಡಿಸಿ ಶೆಟ್ಟಿ ಬಸ್ಸಿನ ಪ್ರತಿರೂಪವನ್ನಾಗಿಸಿದ್ದೇನೆ! ಶೆಟ್ಟಿ ಬಸ್ ಈಗ ಇರುವುದು ಮನದಾಳದಲ್ಲಿ ಮಾತ್ರ.

ಶೆಟ್ಟಿ ಬಸ್ಸಿನಷ್ಟೇ ಜನಪ್ರಿಯವಾಗಿದ್ದ ಇನ್ನೊಂದು ಬಸ್  ಬಾಬು ಶೆಟ್ರ ಶಂಕರ್ ವಿಠಲ್.  ಚಾರ್ಮಾಡಿ- ಮುಂಡಾಜೆ ಕಡೆಯವರಿಗೆ  ಪೇಟೆಗೆ ಬರಲು ದಿನದ ಮೊದಲ ಮತ್ತು ಮನೆಗೆ ಹಿಂತಿರುಗಲು ಕೊನೆಯ ಬಸ್ಸು ಅದೇ ಆಗಿತ್ತು.  ಚಾರ್ಮಾಡಿಯಲ್ಲಿ  ರಾತ್ರೆ ತಂಗುತ್ತಿದ್ದ ಅದು ಬೆಳಗ್ಗೆ ಸುಮಾರು 6 ಗಂಟೆಗೆ ಹೊರಟು 11 ಗಂಟೆ ಹೊತ್ತಿಗೆ ಮಂಗಳೂರು ತಲುಪುತ್ತಿತ್ತು.  ಅಲ್ಲಿಂದ ಕುಳೂರಿಗೆ ಒಂದು ಕಟ್ ಟ್ರಿಪ್ ಮಾಡಿ ಬಂದು ಮಂಗಳೂರಿಂದ 3 ಗಂಟೆಗೆ ಹೊರಟು ಸಂಜೆ 7ರ ಹೊತ್ತಿಗೆ ಮತ್ತೆ ಚಾರ್ಮಾಡಿ ಸೇರುತ್ತಿತ್ತು.  ಬಾಬು ಶೆಟ್ರು ಅಂದರೆ ಅಂದಿನವರಿಗೆ ಒಂದು free courier ಇದ್ದಂತೆ.  ಶೆಟ್ರೆ, ಈ ಕೆಲವು ತೆಂಗಿನ ಕಾಯಿಗಳನ್ನು ಬಂಟ್ವಾಳಕ್ಕೆ ತಲುಪಿಸಿ ಬಿಡಿ ಎಂದೋ, ಬರುವಾಗ ಮಂಗಳೂರಿಂದ ಒಂದು 10 ರೂಪಾಯಿಯ ಮಲ್ಲಿಗೆ ತನ್ನಿ ಎಂದೋ, ಈ ಮಕ್ಕಳನ್ನು  ಪುಂಜಾಲಕಟ್ಟೆಯಲ್ಲಿ ಇಳಿಸಿ ಶೆಟ್ರೇ ಎಂದೋ ಒಂದಲ್ಲ ಒಂದು ಕೋರಿಕೆ ಇಲ್ಲದ ದಿನವೇ ಇದ್ದಿರಲಾರದು.  ಎಲ್ಲರ ಕೋರಿಕೆಗಳನ್ನು ನಗುಮೊಗದಿಂದಲೇ ಪೂರೈಸುತ್ತಿದ್ದ ಬಾಬು ಶೆಟ್ಟರು ಜನಾನುರಾಗಿಯಾಗಿದ್ದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.  ಅವರ ಬಸ್ಸಿನ speedo meterನ ಮುಳ್ಳು 30 MPHನ್ನು ಎಂದೂ ದಾಟಿರಲಾರದು.  ಅದರ ಕಂಡಕ್ಟರ್ "ಬೇಗ ಬೇಗ ಬೇಗ" ಎಂದು ಹತ್ತುವವರನ್ನಾಗಲೀ ಇಳಿಯುವವರನ್ನಾಗಲಿ ಅವಸರಪಡಿಸಿದ್ದೂ ಇರಲಾರದು.

Dodge ಎಂಜಿನ್ ಹೊಂದಿದ್ದು"ಗುಡುಗುಡುಗುಡು" ಎಂಬ ವಿಶಿಷ್ಟ ಸದ್ದಿನೊಡನೆ ದ.ಕ. ಜಿಲ್ಲೆಯಲ್ಲಿ ಓಡಾಡುತ್ತಿದ್ದ C P C "ಮೆಡೋಸ್" ಬಸ್ಸಿನ ನೆನಪು ಕೂಡ ನಮ್ಮನ್ನು ಗತಕಾಲಕ್ಕೆ ಕರೆದೊಯ್ಯುವಂಥದ್ದೆ.  ಆ ಕಾಲಕ್ಕೆ ಹೊಸ ಮಾದರಿಯದಾಗಿದ್ದ ಇದಕ್ಕೆ "ಮೆಡೋಸ್" ಬಸ್ಸು ಎಂಬ ಹೆಸರೂ ಇತ್ತು. ಆಗ ಕಿಟಿಕಿಯ ಗಾಜು ಇದ್ದುದು ಭಾರತ್ ಮೋಟರ್ಸ್ ಮತ್ತು ಈ ಮಾದರಿಯ CPC ಬಸ್ಸುಗಳಿಗೆ ಮಾತ್ರ. ಉಳಿದ ಬಸ್ಸುಗಳಲ್ಲಿ ಮಳೆ ಬಂದಾಗಲಷ್ಟೇ ಬಿಡಿಸಿ ಕೆಳಗಿಳಿಸಲ್ಪಡುವ ಸುತ್ತಿಟ್ಟ ಟರ್ಪಾಲ್ ಇರುತ್ತಿತ್ತು. ಅದನ್ನು ಮಳೆ ಬಂದಾಗ ಬಿಡಿಸಿ ಮಳೆ ನಿಂತೊಡನೆ ಹಿಂದಿನ ಮತ್ತು ಮುಂದಿನವರೊಡನೆ ಸಮನ್ವಯ ಸಾಧಿಸಿ ಮತ್ತೆ ಸುತ್ತಿ ಕಟ್ಟುವ ವಿಶೇಷ duty ಕಿಟಿಕಿ ಪಕ್ಕ ಕುಳಿತವರದಾಗಿರುತ್ತಿತ್ತು. CPCಯಂತೆಯೇ ಶಂಕರ್ ವಿಟ್ಠಲ್, ಕೆನರಾ, PV ಮೋಟರ್ಸ್, ಹನುಮಾನ್(ಇದಕ್ಕೆ ಹೆಸರಿನ ದೊಡ್ಡ ಬೋರ್ಡು ಇರುತ್ತಿರಲಿಲ್ಲ. ಸಣ್ಣ ಅಕ್ಷರಗಳಲ್ಲಿ HT Co Ltd ಎಂದು ಮಾತ್ರ ಬರೆದಿರುತ್ತಿತ್ತು.), ಮಂಜುನಾಥ್, ಭಾರತ್ ಇವು ಆ ಕಾಲದಲ್ಲಿ ಹೆಚ್ಚು ಸಂಖ್ಯೆಯ ಬಸ್ಸುಗಳೊಂದಿಗೆ ನಮ್ಮ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದ ಕಂಪನಿಗಳು. ಒಂದೆರಡು ಬಸ್ಸುಗಳನ್ನು ಹೊಂದಿದ್ದ ಜಯಪದ್ಮಾ, ಆಂಜನೇಯ, ಶಾರದಾಂಬಾ, ಕೃಷ್ಣಾ, ವೆಸ್ಟ್ ಕೋಸ್ಟ್, CKMS(ಇದರ ನಿಜ ಹೆಸರು ಗೊತ್ತಿರಲಿಲ್ಲ. ನಾವು ಚಾಡಿಖೋರ ಮೋಟರ್ ಸರ್ವೀಸ್ ಅನ್ನುತ್ತಿದ್ದೆವು!), ವೆಂಕಟೇಶ್ ಮೋಟರ್ ಮುಂತಾದವೂ ಇದ್ದವು. ಆ ಮೇಲೆ ಬಲ್ಲಾಳ್ ಕಂಪನಿಯ ಬಸ್ಸುಗಳೂ ಆರಂಭವಾದವು. ಮಂಗಳೂರು - ಹಾಸನ, ಕುಂದಾಪುರ - ಬೆಂಗಳೂರು ರೂಟಿನ ST ಬಸ್ಸುಗಳೂ ನಮ್ಮೂರನ್ನು ಹಾದು ಹೋಗುತ್ತಿದ್ದವು.

ಬೆಳಗ್ಗೆ ಸುಮಾರು 11ಕ್ಕೆ ಮಂಗಳೂರಿನಿಂದ ಹೊರಟು 12-30ಕ್ಕೆ ಉಜಿರೆ ತಲುಪಿ ಚಾರ್ಮಾಡಿ ಘಾಟಿಯ ಮಧ್ಯ ಭಾಗದಲ್ಲಿರುವ ಗಡಿ ವರೆಗೆ ತಲುಪುತ್ತಿದ್ದ ತಿಳಿ ನೀಲಿ ಬಣ್ಣದ ಭಾರತ್ ಬಸ್ಸು ತಾರಾನಾಥ ಎಂಬ ಡ್ರೈವರನ ವೇಗದ ಚಾಲನೆಗೆ ಪ್ರಸಿದ್ಧವಾಗಿತ್ತು. ಚಾರ್ಮಾಡಿ ಗಡಿಯಿಂದ ಕಡೂರು ಕಡೆಗೆ ಈ ಸಮಯಕ್ಕೆ ಹೊಂದುವಂತೆ ಬೇರೆ ಕನೆಕ್ಷನ್ ಬಸ್ಸು ಇರುತ್ತಿತ್ತು. ಭಾಷಾವಾರು ಪ್ರಾಂತ ರಚನೆಗೆ ಮೊದಲು ಕರಾವಳಿ ಮದರಾಸು ಪ್ರೆಸಿಡೆನ್ಸಿಗೂ ಘಟ್ಟದ ಭಾಗ ಮೈಸೂರು ಸಂಸ್ಥಾನಕ್ಕೂ ಸೇರಿದ್ದುದರಿಂದ ಆಗ ಆಯಾ ಭಾಗದ ಬಸ್ಸುಗಳಿಗೆ  ಚಾರ್ಮಾಡಿ ಗಡಿ ವರೆಗೆ ಮಾತ್ರ ಪರ್ಮಿಟ್  ಇರುತ್ತಿತ್ತು. ಅಲ್ಲಿ ಪ್ರಯಾಣಿಕರು ಈಚೆ ಬಸ್ಸಿನಿಂದಿಳಿದು ಆಚೆ ಬಸ್ಸಿಗೆ ಏರಬೇಕಾಗಿತ್ತು. ಲಗೇಜನ್ನು ಬಸ್ಸಿನ ಸಿಬ್ಬಂದಿಯೇ ಸ್ಥಳಾಂತರಿಸುತ್ತಿದ್ದರಂತೆ. ಘಾಟಿಯ ಇಕ್ಕಟ್ಟಿನ ಗಡಿ ಪ್ರದೇಶದಲ್ಲಿ ಒಂದೆರಡು ಬಸ್ಸುಗಳು ಅಕ್ಕ ಪಕ್ಕ ನಿಲ್ಲುವಷ್ಟು ಸಮತಟ್ಟು ಜಾಗ ನಿರ್ಮಿಸಿದ್ದರಂತೆ.  ನಂತರ ಈ ಪರ್ಮಿಟ್ ಅಡಚಣೆ ನಿವಾರಣೆಯಾದರೂ ಭಾರತ್ ಬಸ್ಸು ಮಾತ್ರ ಕೊನೆ ವರೆಗೂ ಚಾರ್ಮಾಡಿ ಗಡಿ ವರೆಗೆ ಮಾತ್ರ ಚಲಿಸುತ್ತಿತ್ತು. 

ಈಗಲೂ ಚಾರ್ಮಾಡಿ ಮಂಗಳೂರು ಹೆದ್ದಾರಿಯಲ್ಲಿ ಸಾಗುವಾಗ ತಿರುವುಗಳನ್ನು ನೇರಗೊಳಿಸಿದಲ್ಲಿ ಉಳಿದಿರುವ ಹಳೆ ರಸ್ತೆಯ ಪಳೆಯುಳಿಕೆಗಳನ್ನು ಕಂಡಾಗ ಅವುಗಳ ಮೇಲೆ ಸಾವಿರಾರು ಬಾರಿ ಚಲಿಸಿರಬಹುದಾದ ಇಂತಹ ಹಳೆ ಬಸ್ಸುಗಳ ನೆನಪಾಗುವುದಿದೆ.

ಆ ಕಾಲದ ಒಂದು ಕಾಲ್ಪನಿಕ ಬಸ್ ಸ್ಟೇಂಡಿನ ಚಿತ್ರ.


ಅಂದಿನ ಪಿ.ವಿ. ಮೋಟರ್ ಸರ್ವಿಸ್ ಬಸ್ ಹೀಗಿರುತ್ತಿತ್ತು.



1933ರಲ್ಲಿ ಚಾರ್ಮಾಡಿ ಘಾಟಿ ತಿರುವಿನಲ್ಲಿ ಇಳಿಯುತ್ತಿರುವ ಹಳೆಯ ಕಾಲದ ಬಸ್ಸಿನ ಚಿತ್ರ.


ಇದು ಕಡೂರಿನಿಂದ ಮುಲ್ಕಿ ಅಥವಾ ಮಂಗಳೂರು ರೂಟಿನ ಕನೆಕ್ಟಿಂಗ್ ಬಸ್ ಆಗಿ ಚಾರ್ಮಾಡಿ ಗಡಿಯಿಂದ ಹೊರಟಿದ್ದು ಇದ್ದಲಿನ ಎಂಜಿನ್ ಹೊಂದಿರಬಹುದು. ನಮ್ಮ ಅಣ್ಣ ಉಜಿರೆ ಕಾರ್ಕಳ ಮಧ್ಯೆ ಇಂಥ ಇದ್ದಲಿನ  ಬಸ್ಸಲ್ಲಿ ಅನೇಕ ಸಲ ಓಡಾಡಿದ್ದರಂತೆ. ಬಸ್ಸಿನಿಂದಿಳಿಯುವಷ್ಟರಲ್ಲಿ ಇದ್ದಲಿನ ಪುಡಿ ಮೈಕೈಗೆ ಮೆತ್ತಿ ಬಸ್ಸಿನಿಂದಿಳಿಯುವವರ ಸ್ವರೂಪವೇ ಬದಲಾಗಿ ಯಾರೆಂದೇ ಗೊತ್ತಾಗುತ್ತಿರಲಿಲ್ಲವಂತೆ! ಶಿವರಾಮ ಕಾರಂತರ ಚಿತ್ರಮಯ ದಕ್ಷಿಣ ಕನ್ನಡ ಪುಸ್ತಕದಲ್ಲಿ ಈ ಫೋಟೊ ದೊರೆಯಿತು. ಅದನ್ನು ನಾನು ವರ್ಣರಂಜಿತಗೊಳಿಸಿದೆ.




   

     

Tuesday 25 August 2015

ಸಿರಿವಂತನಾದರೂ ಕನ್ನಡ ಹಾಡನ್ನಾಲಿಸುವೆ



      ಸಿನಿಮಾದಿಂದಾಗಿ ಜನಪ್ರಿಯವಾಗಿರುವ ಹಾಡುಗಳು, ಹಾಡಿನಿಂದ ಜನಪ್ರಿಯವಾಗಿರುವ ಸಿನಿಮಾಗಳು, ಸಿನಿಮಾದೊಳಗೆ ಸೇರಿ ಜನಪ್ರಿಯತೆ ಗಳಿಸಿದ ಹಾಡುಗಳು,  ಹಾಡುಗಳೇ ಇಲ್ಲದ ಸಿನಿಮಾಗಳು  ಅನೇಕ ಇವೆ.  ಜನಪ್ರಿಯವಾದರೂ ಸಿನಿಮಾದಲ್ಲಿ ಇಲ್ಲದ ಹಾಡುಗಳೂ ಇವೆ. (ಗೆಜ್ಜೆ ಪೂಜೆ ಚಿತ್ರಕ್ಕಾಗಿ ರಚಿಸಲಾದ ಒಂದಿ ದಿನ ರಾತ್ರಿಯಲಿ ಕಂಡೆ ಕನಸೊಂದ ಇದಕ್ಕೆ ಒಂದು ಉದಾಹರಣೆ.)  ಆದರೆ ಈ ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಸಿನಿಮಾವೇ ಇಲ್ಲದ ಅತಿ ಜನಪ್ರಿಯ ಹಾಡು. ಈ ಹಾಡನ್ನು ಒಳಗೊಂಡಿರಬೇಕಾಗಿದ್ದ ಸಿ.ವಿ.ಶಿವಶಂಕರ್ ಅವರ ಕಲ್ಪನೆಯ ಸಂಗಮ ಚಿತ್ರವು  ಮೂರ್ತರೂಪ ಪಡೆಯಲೇ ಇಲ್ಲ. ಆದರೆ ಈ ಹಾಡಿನಲ್ಲಿ ಅವರ  ಉತ್ಕೃಷ್ಟ ಸಾಹಿತ್ಯ, ಕೆ.ಪಿ.ಸುಖದೇವ್ ಎಂಬ ಹೊಸಬರ ಆಕರ್ಷಕ ಸಂಗೀತ ನಿರ್ದೇಶನ ಮತ್ತು ಪಿ.ಬಿ.ಶ್ರೀನಿವಾಸ್ ಮತ್ತು ಹೊಸ ಗಾಯಕಿ ಸಿ.ಕೆ.ರಮಾ ಅವರ  ಮಧುರ ಧ್ವನಿಗಳ ಸಂಗಮ ಆದದ್ದಂತೂ ನಿಜ. ಬಡವ ಸಿರಿವಂತ ಎಂಬ ಭೇದವಿಲ್ಲದೆ ಎಲ್ಲರೂ ಈ ಚಿತ್ರ(ರಹಿತ)ಗೀತೆಯನ್ನು ಮೆಚ್ಚುತ್ತಾರೆ.  (ಈ ಹಾಡಿಗೆ ಹೇಳಲಾದರೂ ಒಂದು ಚಿತ್ರದ ಹೆಸರಿದೆ. ಆದರೆ ಕವಿ ಪ್ರದೀಪ್ ವಿರಚಿತ ಹಿಂದಿಯ ಏ ಮೇರೆ ವತನ್ ಕೆ ಲೊಗೋ  ಚಿತ್ರದ ಹೆಸರಿನ ಹಂಗೂ ಇಲ್ಲದೆ ಜನಪ್ರಿಯತೆಯ ಶಿಖರವನ್ನೇರಿದ ಗೀತೆ.)


     ಯಾವುದೇ ಎಲೆಕ್ಟ್ರಾನಿಕ್ ವಾದ್ಯಗಳನ್ನು ಬಳಸದೆ ಕೊಳಲು, ವೀಣೆ, ಕ್ಲಾರಿನೆಟ್, ಸಿತಾರ್, ಎಕಾರ್ಡಿಯನ್,  ವಯಲಿನ್ಸ್,  ಢೋಲಕ್, ತಬ್ಲಾ ಮುಂತಾದವುಗಳನ್ನಷ್ಟೇ  ಉಪಯೋಗಿಸಿದ ವಾದ್ಯವೃಂದ ಸಿ.ವಿ.ಶಿವಶಂಕರ್ ಅವರ  ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕ  ಆರ್.ರತ್ನ  ಅವರ ಮೇಲ್ವಿಚಾರಣೆಯದ್ದೇ ಆಗಿರಬಹುದು ಎಂದು ನನ್ನ ಊಹೆ.  ಹಿಂದೋಳಕ್ಕೆ ಪಂಚಮ ಸೇರಿಸಿದಾಗ ಉಂಟಾಗುವ ಪಂಚಮ್ ಮಾಲಕೌಂಸ್(ಕರ್ನಾಟಕ ಸಂಗೀತದ ಜಯಂತಶ್ರೀ) ರಾಗಾಧಾರಿತವಾಗಿದೆ ಈ ಹಾಡು. ಬಿಳಿ 5ರ ಏರು ಶ್ರುತಿಯ ಆಯ್ಕೆ ಹಾಡಿನ ಮೂಡಿಗೆ ತಕ್ಕ ಉಠಾವ್ ಒದಗಿಸಿದೆ. ಅಲ್ಲದೆ ಈ ಏರು ಶ್ರುತಿಯಿಂದಾಗಿ  ವಾಸ್ತವವಾಗಿ ತಾರ ಷಡ್ಜವನ್ನಷ್ಟೇ ಮುಟ್ಟಿರುವ ಕೊನೆಯಲ್ಲಿ ಪುನರಾವರ್ತನೆಗೊಳ್ಳುವ ಮಣ್ಣಾಗಿ ನಿಲುವೆ ಎಂಬ ಸಾಲು ತಾರ ಪಂಚಮವನ್ನು ಸ್ಪರ್ಶಿಸಿತೇನೋ ಎಂಬ ಭ್ರಮೆಯುಂಟಾಗುತ್ತದೆ! ಅಂದಿನ RCA Sound System ನ ವಿಶೇಷತೆಯಾದ  ಗಾಯಕರ ಧ್ವನಿಯನ್ನು ಎತ್ತಿಕೊಡುವುದರ ಜೊತೆಗೆ  ಪ್ರತಿಯೊಂದು ವಾದ್ಯವನ್ನು ನಿಖರವಾಗಿ ಆಲಿಸಲು ಸಾಧ್ಯವಾಗಿಸುವ presence of instruments ಇದರಲ್ಲೂ ಇದೆ. ಉಸಿರಿನ ಸದ್ದು ಒಂದಿನಿತೂ ಕೇಳಿಸದಿರುವುದು recordist ಮತ್ತು ಗಾಯಕರ ವೃತ್ತಿಪರತೆಗೆ ಪುರಾವೆ.  ಇಂದಿನ ಮಲ್ಟಿ ಚಾನಲ್ ಕಂಪ್ಯೂಟರ್ ರೆಕಾರ್ಡಿಂಗ್ ಯುಗದಲ್ಲಿ ಇಂತಹ ಸ್ಪಷ್ಟತೆ ಎಂದೂ ಕಾಣ ಸಿಗದು.

     ಅಂದಿನ ದಿನಗಳಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾಗಿ ಕೆಲವು ತಿಂಗಳುಗಳು ಕಳೆದ ಮೇಲಷ್ಟೇ ಹಾಡುಗಳ ಧ್ವನಿಮುದ್ರಿಕೆಗಳು ಬಿಡುಗಡೆಗೊಂಡು ರೇಡಿಯೊ ಮತ್ತಿತರ ಕಡೆ ಕೇಳಿಸತೊಡಗುತ್ತಿದ್ದವು.  ಆದರೆ ಚಿತ್ರವು ಸೆಟ್ಟೇರದೇ ಇದ್ದರೂ 6 ನಿಮಿಷಗಳ ಈ ಹಾಡಿನ double sided ಧ್ವನಿಮುದ್ರಿಕೆ ತಯಾರಾದದ್ದು ಒಂದು ವಿಶೇಷ.  70ರ ದಶಕದಲ್ಲಿ TV, ಕಂಪ್ಯೂಟರ್, ಮುಂತಾದವುಗಳಿಂದ ಹೊರಡುವ  ವಿಕಿರಣಗಳ ಅಡ್ಡ ಪರಿಣಾಮ ಇಲ್ಲದ್ದರಿಂದ ದೂರದ ಮೀಡಿಯಂ ವೇವ್ ಸ್ಟೇಶನ್ನುಗಳೂ ಸ್ಪಷ್ಟವಾಗಿ ಕೇಳಿಸುತ್ತಿದ್ದವು.  ಧಾರವಾಡ ಮತ್ತು ಗುಲ್ಬರ್ಗಾ ನಿಲಯಗಳಿಂದ  ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ಗ್ರಾಮೀಣ ಯುವಜನರ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಈ ಹಾಡು ಇದ್ದೇ ಇರುತ್ತಿತ್ತು.  ಮಧ್ಯಾಹ್ನ ಪ್ರಸಾರವಾಗುತ್ತಿದ್ದ ರೇಡಿಯೋ ಸಿಲೋನಿನ ಕನ್ನಡ ಕಾರ್ಯಕ್ರಮದಲ್ಲೂ ಇದು ಆಗಾಗ ಕೇಳಿ ಬರುತ್ತಿತ್ತು.  ಈಗಲೂ ಕೆಲವು ರೇಡಿಯೊ ನಿಲಯಗಳಿಂದ ಆಗೊಮ್ಮೆ ಈಗೊಮ್ಮೆ ಧ್ವನಿಮುದ್ರಿಕೆಯ ಒಂದು ಬದಿಯ ಒಂದು  ಚರಣ ಮಾತ್ರ ಕೇಳಿ ಬರುವುದುಂಟು. 

      ಎಲ್ಲ ಚರಣಗಳನ್ನೊಳಗೊಂಡ ಸಂಪೂರ್ಣ ಹಾಡು ಸಾಹಿತ್ಯದೊಂದಿಗೆ ನಿಮಗಾಗಿ ಇಲ್ಲಿದೆ.  ವಿರಾಮದ ವೇಳೆಯಲ್ಲಿ ಸಾಹಿತ್ಯ ಓದುತ್ತಾ ಆಲಿಸಿ. Box Player ಕೆಲಸ ಮಾಡದಿದ್ದರೆ  ಪಕ್ಕದ ಗ್ರಾಮಫೋನಿನಲ್ಲಿ ಪ್ರಯತ್ನಿಸಬಹುದು.

     ಒಂದು ರಸಪ್ರಶ್ನೆ : ಈ ಹಾಡಿನ 41 ಸೆಕೆಂಡು ಮತ್ತು  50 ಸೆಕೆಂಡುಗಳ ಮಧ್ಯ ಬರುವ  interlude ತುಣುಕಿನಲ್ಲಿ ಆ ದಿನಗಳಲ್ಲಿ ಪ್ರಸಿದ್ಧವಾಗಿದ್ದು ಈಗಲೂ ಜನಪ್ರಿಯವಾಗಿರುವ ಶಂಕರ್ ಜೈಕಿಶನ್ ಹಾಡೊಂದರ preludeನ ಝಲಕ್ ಗುರುತಿಸಬಹುದು. ಯಾವ ಹಾಡೆಂದು ಹೇಳಬಲ್ಲಿರಾ?

    


ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ
ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ

ಸಂಗೀತ ಕಲೆ ಮೆಚ್ಚಿ ವೀಣೆಯ ಪಿಡಿದೊಡೆ
ಶೃಂಗೇರಿ ಶಾರದೆ ಮಡಿಲಲ್ಲಿ ನಲಿವೆ
ವೀರ ಖಡ್ಗವ ಝಳಪಿಸುವ ವೀರ ನಾನಾದೊಡೆ
ಚಾಮುಂಡಾಂಬೆಯ ಕರದಲ್ಲಿ ಹೊಳೆವೆ

ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ
ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ


ಶರಣಗೆ ವಂದಿಪ ಶರಣೆ ನಾನಾದೊಡೆ
ವಚನವೆ ಬದುಕಿನ ಮಂತ್ರವೆನುವೆ
ವೀರಗೆ ವಂದಿಪ ಶೂರ ನಾನಾದೊಡೆ
ಕಲ್ಲಾಗಿ ಹಂಪೆಯಲಿ ಬಹುಕಾಲ ನಿಲುವೆ

ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ
ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ

ದಾಸರಿಗೆ ವಂದಿಪ ಅಭಿಮಾನಿಯಾದೊಡೆ
ಕನ್ನಡ ಸಾಹಿತ್ಯ ನನ್ನಾಸ್ತಿ ಎನುವೆ
ಪುಣ್ಯನದಿಯಲಿ ಮೀಯುವೆನಾದೊಡೆ
ಕಾವೇರಿ ತುಂಗೆಯರ ಮಡಿಲಲ್ಲೆ ಮೀಯುವೆ
ಇನ್ನೊಮ್ಮೆ ಮರುಜನ್ಮ ಪಡೆಯುವೆನಾದೊಡೆ
ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲುವೆ.
ಮಣ್ಣಾಗಿ ನಿಲುವೆ ಮಣ್ಣಾಗಿ ನಿಲುವೆ

Thursday 20 August 2015

ಚಂದಮಾಮದ ಚಿತ್ತಾಕರ್ಷಕ ಚಿತ್ರ ಮಾಯಾಬಜಾರ್

ಇದು ಚಂದಮಾಮದಲ್ಲಿರುತ್ತಿದ್ದ ಚಿತ್ರಾ ಅಥವಾ ಶಂಕರ್ ಅವರ ಚಿತ್ತಾಕರ್ಷಕ ಚಿತ್ರಗಳ ಬಗ್ಗೆ ಅಲ್ಲ. ನಾನು ಹೇಳುತ್ತಿರುವುದು ಚೊಕ್ಕತನದ ಬಗ್ಗೆ ಹೆಸರಾದ ಚಂದಮಾಮದ ರೂವಾರಿಗಳಾದ ನಾಗಿರೆಡ್ಡಿ ಮತ್ತು ಚಕ್ರಪಾಣಿ ಅವರು ಅಷ್ಟೇ ಚೊಕ್ಕವಾಗಿ ನಿರ್ಮಿಸಿ 1957ರಲ್ಲಿ ತೆರೆಗರ್ಪಿಸಿದ ಮಾಯಾಬಜಾರ್ ಚಿತ್ರದ ಬಗ್ಗೆ. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕ ಕಾಲಕ್ಕೆ ತಯಾರಾಗಿದ್ದ ಇದು ತೆಲುಗಿನಿಂದ ಕನ್ನಡಕ್ಕೆ ಡಬ್ ಆಗಿತ್ತು.  ತೆಲುಗು ಮತ್ತು ಕನ್ನಡ ಪದಗಳನ್ನು ಉಚ್ಚರಿಸುವಾಗಿನ ತುಟಿಚಲನೆ ಬಹುತೇಕ ಒಂದನ್ನೊಂದು ಹೋಲುವುದು ಇದಕ್ಕೆ ಕಾರಣವಾಗಿರಬಹುದು. ತೆಲುಗು ಅವತರಣಿಕೆ ಮಾರ್ಚ್ ತಿಂಗಳಲ್ಲಿ, ತಮಿಳು ಎಪ್ರಿಲ್ ಹಾಗೂ ಕನ್ನಡ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿದ್ದವು. ತಾಂತ್ರಿಕತೆಯಲ್ಲಿ ಸಮಯಕ್ಕಿಂತ ಬಹಳ ಮುಂದಿದ್ದ ಮಾಯಾಬಜಾರ್ ಎಲ್ಲ ಭಾಷೆಗಳಲ್ಲೂ ಜಯಭೇರಿ ಬಾರಿಸಿತ್ತು. ಮುಂದೆ ಇವರೇ ನಿರ್ಮಿಸಿದ ಜಗದೇಕವೀರನ ಕಥೆ, ಕೃಷ್ಣಾರ್ಜುನ ಯುದ್ಧ ಕೂಡ ಇದೇ ರೀತಿ ಕನ್ನಡಕ್ಕೆ ಡಬ್ ಆಗಿದ್ದವು. ಆದರೆ ಡಬ್ಬಿಂಗಿಗೆ ವ್ಯಾಪಕ ವಿರೋಧ ವ್ಯಕ್ತವಾಗತೊಡಗಿದ ಕಾರಣ  ಆ ಮೇಲಿನ ಸತ್ಯ ಹರಿಶ್ಚಂದ್ರ ಮಾತ್ರ ಈ ರೀತಿ ಡಬ್ ಆಗದೆ ಕನ್ನಡ ಮತ್ತು ತೆಲುಗಿನಲ್ಲಿ ಬೇರೆ ಬೇರೆಯಾಗಿ ತಯಾರಾಗಿ ಡಾ|| ರಾಜ್ ಅಭಿನಯದ ಕನ್ನಡ ಅವತರಣಿಕೆ ಇನ್ನೊಂದು ಮೇರು ಕೃತಿಯಾಗಿ ಮೂಡಿ ಬಂದದ್ದು ಎಲ್ಲರಿಗೂ ತಿಳಿದಿರುವ ವಿಷಯ.

ಮಾಯಾಬಜಾರ್ ಚಿತ್ರಕ್ಕೆ ವರ್ಧಿಸುವೆ ಮಹಾತಾಯಿ ವರ್ಧಿಸೆಮ್ಮಮ್ಮ,ನೋಟವು ಕಲೆತಿಹ ಶುಭವೇಳೆ, ಸಾಗಲಿ ತೇಲಿ ತರಂಗದೊಳು ಮತ್ತು ನಿನಗೋಸುಗವೇ ಜೀವಿಸಿರುವೆ ನಾ ಹಾಡುಗಳನ್ನು ಸಂಯೋಜನೆ ಮಾಡಿದ ಎಸ್. ರಾಜೇಶ್ವರ ರಾವ್ ಅವರು ಆ ಮೇಲೆ ಏಕೋ ಹಿಂದೆ ಸರಿದರೆಂದು ಕೆಲವರು ಹೇಳುತ್ತಾರೆ. ನಂತರ ಘಂಟಸಾಲ(ವೆಂಕಟೇಶ್ವರ ರಾವ್) ಸಂಗೀತದ ಹೊಣೆ ಹೊತ್ತರು. ಎಲ್ಲರಿಗೂ ಗೊತ್ತಿರುವ ವಿವಾಹ ಭೋಜನವಿದು ಮತ್ತು ಆಹಾ ನನ್ ಮದ್ವೆಯಂತೆ ಸೇರಿದಂತೆ ಈ ಚಿತ್ರದ ಹಾಡುಗಳೆಲ್ಲವೂ ಅತಿ ಮಧುರ. ಈ ಎಲ್ಲ ಹಾಡುಗಳ ವಾದ್ಯವೃಂದ ಸಂಯೋಜಕರು ವಿಜಯಾ ಸ್ಟುಡಿಯೋದ ಕಾಯಂ arranger ಆಗಿದ್ದ ಎ. ಕೃಷ್ಣಮೂರ್ತಿ. ಮುಂದೆ ಇವರು ವಿಜಯಾ ಕೃಷ್ಣಮೂರ್ತಿ ಎಂಬ ಹೆಸರಿನಲ್ಲಿ ಜೇನುಗೂಡು, ಮುರಿಯದ ಮನೆ, ವಾತ್ಸಲ್ಯ ಮುಂತಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದರು.

ಚಿತ್ರವೊಂದು ಬಿಡುಗಡೆ ಆಗುವಾಗ ಪತ್ರಿಕೆಗಳಲ್ಲಿ ಜಾಹೀರಾತು ಇರುವುದು  ಸಾಮಾನ್ಯ. ಆದರೆ ಮಾಯಾಬಜಾರ್  ಚಿತ್ರದ  ಜಾಹೀರಾತಿನೊಡನೆ ಇಡೀ ಕಥಾಹಂದರವೇ ಚಂದಮಾಮದ 1957 ಎಪ್ರಿಲ್ ಸಂಚಿಕೆಯ 7 ಪುಟಗಳಲ್ಲಿವಿಸ್ತಾರವಾಗಿ ಪ್ರಕಟವಾಗಿತ್ತು!  ಪತ್ರಿಕೆಯೂ ಚಿತ್ರ ನಿರ್ಮಾಪರದ್ದೇ ಆಗಿರುವುದು ಇದಕ್ಕೆ ಕಾರಣವಾಗಿರಬಹುದು.

ಚಂದಮಾಮದ ಪ್ರತಿ ಪುಟದಲ್ಲೂ ಆ ಪುಟದಲ್ಲಿರುವ ಕಥಾಭಾಗಕ್ಕೆ ಸಂಬಂಧಿಸಿದ ಒಂದು ಚಿತ್ರವಿರುತ್ತಿತ್ತಲ್ಲವೇ. ಅಂತಹುದೇ ಅನುಭವಕ್ಕಾಗಿ ಮಾಯಾ ಬಜಾರ್ ಕತೆಯ 7 ಪುಟಗಳ ಕೆಳಗೆ ಆ ಪುಟಕ್ಕೆ ಸಂಬಂಧಿಸಿದಂತೆ ಒಂದೊಂದು ಕಿರು ವಿಡಿಯೋ ಕಿಂಡಿ ಅಳವಡಿಸಿದ್ದೇನೆ.  ಕತೆ ಓದುತ್ತಾ ದೃಶ್ಯರೂಪದಲ್ಲಿ ನೋಡಿ ಆನಂದಿಸಿ.  ತೆಲುಗು ಕಲರ್ ವೀಡಿಯೊಗೆ ಕನ್ನಡ ಸಂಭಾಷಣೆ ಸಂಯೋಜಿಸಿದ ದೃಶ್ಯಗಳವು.

  
   ಪ್ರಿಯದರ್ಶಿನಿ ವೀಕ್ಷಣೆ


  
   ಕೃಷ್ಣನಿಗೆ ಗೋಚರಿಸಿದ ವಸ್ತ್ರಾಪಹಾರ.


  
   ನೌಕಾವಿಹಾರ - ಸಾಗಲಿ ತೇಲಿ.


  
   ಘಟೋತ್ಗಜ ಪ್ರವೇಶ.


  
   ಘಟೋತ್ಗಜನನ್ನು ಸತಾಯಿಸುತ್ತಿರುವ ವೃದ್ಧನ ರೂಪದ ಕೃಷ್ಣ.


  
   ಕಂಭ್ಳಿ ಗಿಂಭ್ಳಿ.


  
   ವಿಶ್ವರೂಪ ದರ್ಶನ.

ಇತ್ತೀಚೆಗೆ ವರ್ಣಲೇಪನದೊಂದಿಗೆ ತೆಲುಗಿನಲ್ಲಿ ಈ ಚಿತ್ರ ಮರುಬಿಡುಗಡೆಗೊಂಡಿತ್ತು. ಆದರೆ ಹೀಗೆ ಹಳೆಯ ಚಿತ್ರಗಳು ಹೊಸ ಅವತಾರದಲ್ಲಿ ಬಂದಾಗ ಬಣ್ಣಗಳು ಕಣ್ಣಿಗೆ ಹಿತವೆನ್ನಿಸಿದರೂ improvisation ಹೆಸರಿನಲ್ಲಿ ಮೂಲ ಸಂಗೀತವನ್ನು ಹಾಳುಗೆಡವುತ್ತಾರೆ ಎಂದು ಅನೇಕರ ಆರೋಪ ಇದೆ. ಕನ್ನಡದ ಸತ್ಯ ಹರಿಶ್ಚಂದ್ರ ಬಣ್ಣದಲ್ಲಿ ಬಂದಾಗ ನನಗೂ ಹಾಗೆಯೇ ಅನ್ನಿಸಿತ್ತು. ಹೀಗಾಗಿ ತೆಲುಗಿನ ಬಣ್ಣಕ್ಕೆ ಕನ್ನಡದ original  ಹಾಡುಗಳನ್ನು ಕಸಿ ಕಟ್ಟಿ ನಾನು ತಯಾರಿಸಿದ ಇನ್ನಷ್ಟು ವಿಡಿಯೋಗಳು ಇಲ್ಲಿವೆ.

ನೀನೋ ನನ್ನನು ನೆನೆಸುತಿಹೆ
ಈ ಹಾಡಿನಲ್ಲಿ ಆ ಕಾಲದ ಪ್ರಿಯದರ್ಶಿನಿ ಎಂಬ lap top ಹಾಗೂ video chat ನೋಡಬಹುದು. ಹಾಡಿನ ಕೊನೆ ಭಾಗದಲ್ಲಿ ಶಶಿರೇಖೆಯು  ಈಗಿನವರಂತೆಯೇ logout ಆಗಿ ತಕ್ಷಣ ಮತ್ತೆ login ಆಗುವುದನ್ನು ಗಮನಿಸಬಹುದು! ಘಂಟಸಾಲ ಮತ್ತು ಪಿ.ಲೀಲ ಧ್ವನಿಯಲ್ಲಿರುವ ಈ ಹಾಡು ಅಭೇರಿ ರಾಗದಲ್ಲಿದೆ. 



ನೋಟವು ಕಲೆತಿಹ ಶುಭ ವೇಳೆ 
ವೃಂದಾವನಿ ಸಾರಂಗ್ ರಾಗಾಧಾರಿತ ಇನ್ನೊಂದು ಹಾಡು.  ಇದರ ಸ್ವರ ಸಂಯೋಜನೆ ಎಸ್.ರಾಜೇಶ್ವರ ರಾವ್ ಅವರದ್ದಂತೆ. ಧ್ವನಿಗಳು  ಘಂಟಸಾಲ  ಮತ್ತು ಪಿ.ಲೀಲ.



ಆಹಾ ನನ್ ಮದ್ವೆಯಂತೆ 
ಇದು ಘಟೋತ್ಗಜನು ಶಶಿರೇಖೆಯ ರೂಪ ತಾಳಿ ಹಾಡುವ ಹಾಡು.  ನಡುವೆ ಒಮ್ಮೆ ಮರೆತು ಗಂಡುದನಿಯಲ್ಲಿ ಹಾಡುತ್ತಾನೆ!
ಗಾಯಕರು ಸ್ವರ್ಣಲತಾ ಮತ್ತು ಘಂಟಸಾಲಸತ್ಯಹರಿಶ್ಚಂದ್ರ ಚಿತ್ರದ ನನ್ನ ನೀನು ನಿನ್ನ ನಾನು ಹಾಡು ಕೂಡ ಸ್ವರ್ಣಲತಾ ಅವರೇ ಹಾಡಿದ್ದು.  ಹಿಂದಿಯ ಶಂಶಾದ್ ಬೇಗಂ ಅವರಂತೆ ಕಂಚಿನ ಕಂಠ ಇದ್ದ ಈ ಗಾಯಕಿಗೆ ಹೆಚ್ಚಿನ ಅವಕಾಶಗಳು ಯಾಕೆ ಸಿಗಲಿಲ್ಲ ಎಂದು ತಿಳಿಯದು.  ಈ ಹಾಡಿನ ಕನ್ನಡ, ತೆಲುಗು ಮತ್ತು ತಮಿಳು ಅವತರಣಿಕೆಗಳನ್ನು ಒಂದೇ ವೀಡಿಯೊದಲ್ಲಿ ನೋಡಲು ಇಲ್ಲಿ  ಕ್ಲಿಕ್ಕಿಸಿ.



ವಿವಾಹ ಭೋಜನವಿದು
ಮಾಯಾಬಜಾರ್ ಚಿತ್ರದ ಸದಾ ಬಹಾರ್ ಟ್ರಂಪ್ ಕಾರ್ಡ್  ಹಾಡಿದು. ಇದನ್ನು ಹಾಡಿದ ಮಾಧವಪೆದ್ದಿ ಸತ್ಯಂ ಅವರು ಈ ಚಿತ್ರದಲ್ಲಿ  ಸುಭದ್ರೆ ಮತ್ತು ಅಭಿಮನ್ಯುವನ್ನು ಹಿಡಿಂಬಿಯ ಆಶ್ರಮಕ್ಕೆ  ಗಾಡಿಯಲ್ಲಿ  ಕೊಂಡೊಯ್ಯುವ  ದಾರುಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.



ಸತ್ಯ ಪೀಠ
ಶಕುನಿಯ ಬಾಯಿಯಿಂದ ನಿಜವನ್ನೇ ನುಡಿಸಿದ ಸತ್ಯಪೀಠದಂಥಾದ್ದು ಈಗಲೂ ಇರುತ್ತಿದ್ದರೆ ಮಂಪರು ಪರೀಕ್ಷೆ ಇತ್ಯಾದಿಗಳ ಅಗತ್ಯವೇ ಇರುತ್ತಿರಲಿಲ್ಲ!

ಕನ್ನಡದ ಪ್ರಸಿದ್ಧ ಕಲಾವಿದರು ಆಗ ಡಬ್ಬಿಂಗ್ ಚಿತ್ರಗಳಿಗೆ ಧ್ವನಿ ದಾನ ಮಾಡುತ್ತಿದ್ದಿರಬೇಕು.  ಈ ಬಗ್ಗೆ ಅಧಿಕೃತ ದಾಖಲೆ ಇಲ್ಲದಿದ್ದರೂ ಈ ತುಣುಕಿನಲ್ಲಿ ಕೇಳಿಸುವ  ಕೃಷ್ಣನ ಧ್ವನಿ ಕೆ.ಎಸ್. ಅಶ್ವತ್ಥ್  ಅವರದ್ದೆಂದು ಅನಿಸುತ್ತದೆ.

  

ಚಿತ್ರದ ಒಂದು ಜಾಹೀರಾತು.


ಮಾಯಾ ಬಜಾರ್ ಶೂಟಿಂಗ್ ಸಮಯದ ಒಂದು ಅಪರೂಪದ ಚಿತ್ರ.  ಇದರಲ್ಲಿ ಶಶಿರೇಖೆ ಪಾತ್ರ ವಹಿಸಿದ ನಟಿ ಸಾವಿತ್ರಿ ಪ್ರಿಯದರ್ಶಿನಿ ಎಂಬ ಮಹಾಭಾರತ ಕಾಲದ laptop ವೀಕ್ಷಿಸುವುದನ್ನು ಕಾಣಬಹುದು!  ಅವರ ಬಯೋಪಿಕ್ ಮಹಾನಟಿಯಲ್ಲಿ ಮಾಯಾ ಬಜಾರ್ ನಿರ್ಮಾಣಕ್ಕೆ ಸಂಬಂಧಿಸಿದ ಕೆಲವು ದೃಶ್ಯಗಳಿವೆ.



ಆಡಿಯೊ ರೂಪದಲ್ಲಿ ಹಾಡುಗಳನ್ನು ಕೇಳುವ ಇಚ್ಛೆ ಇದ್ದರೆ ಕೆಳಗಿನ ಲಿಸ್ಟಿನಿಂದ ಒಂದೊಂದಾಗಿ  ಆರಿಸಿ ಆಲಿಸಬಹುದು.

Sunday 5 July 2015

ಈ ಹಾಡು ನಮ್ಮದು



ಈ ಹಾಡು ಧ್ವನಿ ಮುದ್ರಣಗೊಂಡದ್ದು ಆಕಾಶವಾಣಿ ಮದರಾಸು ಕೇಂದ್ರದಲ್ಲಿ.  ಹಾಡಿದವರು Madras AIR Choral Group ನವರು. ಸಂಗೀತ ನೀಡಿದವರು ಆಂಧ್ರದಲ್ಲಿ ಹುಟ್ಟಿ, ತಮಿಳುನಾಡಲ್ಲಿ ಬೆಳೆದು, ಮಲಯಾಳಂ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಪ್ರಸಿದ್ಧರಾದ  ಎಂ. ಬಿ. ಶ್ರೀನಿವಾಸನ್. ಆದರೂ ನಮ್ಮ ಆರ್. ಎನ್. ಜಯಗೋಪಾಲ್ ಬರೆದ ಈ ಹಾಡು ಅಂದೂ, ಇಂದೂ, ಎಂದೆಂದೂ ನಮ್ಮದು.

ಸ್ವಾತಂತ್ರ್ಯ ದಿನಾಚರಣೆ, ರಾಜ್ಯೋತ್ಸವ, ಗಣರಾಜ್ಯೋತ್ಸವ ಮೊದಲಾದ ಸಂದರ್ಭಗಳಲ್ಲಿ ಕನ್ನಡನಾಡಿನ ಆಕಾಶವಾಣಿ ಕೇಂದ್ರಗಳಲ್ಲಿ ಬೆಳಗಾಗುತ್ತಿದ್ದುದೇ ಈ ಹಾಡಿನ ಮೂಲಕ. ಕೇಳಿದೊಡನೆ ಪರಿಶುದ್ಧ ತಿಳಿನೀರ ತೊರೆಯಲ್ಲಿ ಕಾಲಾಡಿಸಿದಂಥ ಅನುಭವ ನೀಡುವ ಇದು ಉಳಿದೆಲ್ಲ ಹಾಡುಗಳಿಗಿಂತ ಭಿನ್ನ.  ಸರಳ ಪದಗಳನ್ನೇ ಬಳಸಿದ ಸಾಹಿತ್ಯ,  ವೈಶಿಷ್ಟ್ಯಪೂರ್ಣ ರಾಗ ಸಂಯೋಜನೆ,  ಗಿಟಾರ್, ವೀಣೆ, ಕೊಳಲು ಹಾಗೂ ತಬ್ಲಾ ಇವಿಷ್ಟನ್ನೇ ಒಳಗೊಂಡ  ಹಿತ ಮಿತವಾದ ವಾದ್ಯವೃಂದ,  ಹೆಸರು ತಿಳಿಯದ (ಬಹುಶಃ ಕನ್ನಡವೂ ತಿಳಿಯದ) ಗಾಯಕ ಗಾಯಕಿಯರ ಶ್ರೀಮಂತ  ಧ್ವನಿ,  ಹುಟ್ಟು ಕನ್ನಡಿಗರನ್ನೂ  ನಾಚಿಸುವಂತಹ ಸುಸ್ಪಷ್ಟ   ಉಚ್ಚಾರ   (ವಿಶೇಷವಾಗಿ ವಿಜ್ಞಾನ, ಅಜ್ಞಾನಗಳಲ್ಲಿನ  ಜ್ಞ ಅಕ್ಷರ), ಉತ್ಕೃಷ್ಟ ಗುಣಮಟ್ಟದ ಧ್ವನಿಮುದ್ರಣ ಪ್ರಾಯಶಃ  ಇದನ್ನು ಗುಂಪಿನಿಂದ ಹೊರಗೆ ನಿಲ್ಲಿಸುತ್ತವೆ.

ಇದರ ಅನೇಕ ಪ್ರತಿರೂಪಗಳು ಲಭ್ಯವಿದ್ದರೂ ಆಕಾಶವಾಣಿಯಿಂದ ಪ್ರಸಾರವಾಗುತ್ತಿದ್ದ ಮೂಲ ಹಾಡು ಬೇಕೆಂದು ಬಹು ಕಾಲ ಬಹಳ ಪ್ರಯತ್ನಿಸಿ ಕೊನೆಗೆ ಸುಮಾರು ಆರು ವರ್ಷಗಳ ಹಿಂದೆ ಮಂಗಳೂರು ಆಕಾಶವಾಣಿಯ ನಾರಾಯಣೀ ದಾಮೋದರ್ ಅವರ ಸಹಕಾರದಿಂದ ಪಡೆಯುವಲ್ಲಿ ಯಶಸ್ವಿಯೂ ಆದೆ.  2009 ಅಂದರೆ ಅಂತರ್ಜಾಲ ಜನಸಾಮಾನ್ಯರಿಗೆ ತೆರೆದುಕೊಳ್ಳುತ್ತಿದ್ದು ನಾನು ಆಡಿಯೊ, ವಿಡಿಯೊಗಳಲ್ಲಿ  ಕೈಯಾಡಿಸತೊಡಗಿದ್ದ ಕಾಲ.  ಲಭ್ಯವಿದ್ದ ತಂತ್ರಾಂಶಗಳನ್ನು ಬಳಸಿಕೊಂಡು sing along ಸಾಹಿತ್ಯದೊಡನೆ ಈ ಹಾಡಿನ ಒಂದು ಸರಳ ವೀಡಿಯೊ ತಯಾರಿಸುವಲ್ಲಿ ಸಫಲನಾಗಿ youtubeಗೆ ಏರಿಸಿಯೂ ಬಿಟ್ಟೆ. ಚಲನಚಿತ್ರ ಗೀತೆಗಳಂತೆ ದಿಢೀರ್ ಜನಪ್ರಿಯತೆ ಗಳಿಸದಿದ್ದರೂ  ಕ್ರಮೇಣ ಜನ ಗಮನಿಸಿದರು, ಮೆಚ್ಚಿದರು.  ಇಷ್ಟು ವರ್ಷಗಳಲ್ಲಿ 6,50,000ಕ್ಕಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಎಂದು youtube ದಾಖಲೆ ಹೇಳುತ್ತದೆ.  ಅನೇಕರ ಪ್ರತಿಕ್ರಿಯೆಗಳೂ ದಾಖಲಾಗಿವೆ.   ಇಷ್ಟು ವರ್ಷಗಳ ನಂತರವೂ ಹೊಸ ಪ್ರತಿಕ್ರಿಯೆಗಳು ಬರುತ್ತಲೇ ಇರುತ್ತವೆ.  ಯಾರೋ ಒಂದಷ್ಟು ಮಂದಿ ಇದನ್ನು unlike ಮಾಡಿದವರೂ ಇದ್ದಾರೆ !


ಈಗ ಆ ಪರಿಶುದ್ಧ ಹಾಡಿನ ಪರಿಶುದ್ಧ ಮೂಲ ಆವೃತ್ತಿಯನ್ನೊಳಗೊಂಡ ಅದೇ  sing along ವೀಡಿಯೊ ನಿಮಗಾಗಿ ಇಲ್ಲಿದೆ.  ಆಲಿಸಿ,  ಹಾಡಿ, ಮನೆಯಲ್ಲಿ ಮಕ್ಕಳಿದ್ದರೆ ಅವರಿಗೂ ಕಲಿಸಿ.



ಈ ಮಣ್ಣು ನಮ್ಮದು ಈ ಗಾಳಿ ನಮ್ಮದು
ಕಲಕಲನೆ ಹರಿಯುತಿಹ ನೀರು ನಮ್ಮದು
ಕಣಕಣದಲು ಭಾರತೀಯ ರಕ್ತ ನಮ್ಮದು 

ನಮ್ಮ ಕಾಯ್ವ ಹಿಮಾಲಯವೆ ತಂದೆ ಸಮಾನ
ಗಂಗೆ ತುಂಗೆ ಕಾವೇರಿಯು ತಾಯಿ ಸಮಾನ
ಈ ದೇಶದ ಜನರೆಲ್ಲರೂ ಸೋದರ ಸಮಾನ,
ಈ ನಾಡಿನ ಹೃದಯವದು ದೈವ ಸನ್ನಿಧಾನ

ಅಜಂತ ಎಲ್ಲೋರ ಹಳೆಬೀಡು ಬೇಲೂರ
ಶಿಲೆಗಳಿವು ಕಲೆಯ ಆಗರ
ಹಿಂದು, ಬುದ್ಧ, ಜೈನ, ಕ್ರೈಸ್ತ, ಮುಸಲ್ಮಾನ ಧರ್ಮಗಳ
ಮಹಾಸಾಗರ

ನಡೆದು ಹೋದ ಚರಿತೆಯು
ನಾಳೆ ಎನುವ ಕವಿತೆಯು
ಈ ನಾಡ ಮಣ್ಣಿನಲ್ಲಿದೆ ಜೀವನ ಸಾರ ಜೀವನ ಸಾರ

ತಂಗಾಳಿಗೆ ತಲೆಯ ತೂಗೊ ಪೈರಿನ ಹಾಡು
ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು
ವಿಜ್ಞಾನವು ಅಜ್ಞಾನವ ಗೆಲ್ಲುವ ಪಾಡು
ಹೊಸ ಭಾರತ ನಿರ್ಮಾಣವು ಸಾಗಿದೆ ನೋಡು

Friday 19 June 2015

ತಾಯಿಯ ಹಾಡು ಒಂದಲ್ಲ ಎರಡು

       


     ಕನ್ನಡ ಸಿನಿಮಾಗಳಲ್ಲಿ ತಾಯಿಯ ಬಗ್ಗೆ ಅನೇಕ ಹಾಡುಗಳು ಬಂದಿವೆ.  ತಾಯಿ ದೇವರನು ಕಾಣೆ ಹಂಬಲಿಸಿ, ಅಮ್ಮ ಎಂದರೆ ಏನೋ ಹರುಷವುಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ ಮುಂತಾದವು ಆಗಾಗ ಕೇಳಲೂ ಸಿಗುತ್ತವೆ.  ಆದರೆ ನಾನಿಲ್ಲಿ ಕೇಳಿಸಹೊರಟಿರುವ ಕಾಣದ ದೇವರು ಊರಿಗೆ ನೂರು ಹಾಡು ಅಪರೂಪದ್ದು ಹಾಗೂ ಕೊಂಚ ಭಿನ್ನವಾದದ್ದು.  ಪಿ.ಬಿ.ಶ್ರೀನಿವಾಸ್ ಮತ್ತು ಕೆ.ಜೆ.ಜೇಸುದಾಸ್  ಜೊತೆಯಾಗಿ ಹಾಡಿರುವ ಏಕೈಕ ಹಾಡಿದು ಎಂಬುದು ಒಂದು ವಿಶೇಷವಾದರೆ  ಎಸ್.ಜಾನಕಿ ಮತ್ತು ಬಿ.ಕೆ.ಸುಮಿತ್ರಾ ಧ್ವನಿಗಳಲ್ಲಿ ಇದರ ಇನ್ನೊಂದು ವರ್ಶನ್ ಇರುವುದು ಇನ್ನೊಂದು ವಿಶೇಷ.  ಪಂಚಮ ವೇದ ಪ್ರೇಮದ ನಾದ, ಬರೆದೆ ನೀನು ನಿನ್ನ ಹೆಸರ, ಇಲ್ಲೂ ಇರುವೆ ಅಲ್ಲೂ ಇರುವೆ, ಆಸೆಯ ಭಾವ ಒಲವಿನ ಜೀವ, ನಿನ್ನ ನೀನು ಮರೆತರೇನು ಸುಖವಿದೆ ಮುಂತಾದವುಗಳಂತೆ ಸೊಲೊ ಹಾಡುಗಳ ಇಂತಹ ವರ್ಶನ್‍ ಇರುವುದು ಸಾಮಾನ್ಯವಾದರೂ ಡ್ಯುಯೆಟ್‍ ಈ ರೀತಿ ಇರುವುದು ಕಮ್ಮಿ.  ಇದೇ ರೀತಿ ಹಿಂದಿಯಲ್ಲಿ ಜಬ್ ಸೆ ಹಮ್ ತುಮ್ ಬಹಾರೊ ಮೆಂ ಎಂಬ ಒಂದು ಡ್ಯುಯೆಟ್ ಬೇರೆ ಬೇರೆಯಾಗಿ ರಫಿ-ಸುಮನ್ ಕಲ್ಯಾಣ್‍ಪುರ್ ಮತ್ತು ಮುಕೇಶ್-ಕಮಲ್ ಬಾರೋಟ್ ಧ್ವನಿಗಳಲ್ಲಿದೆ.

    1969ರಲ್ಲಿ ತೆರೆಕಂಡ  ಸುವರ್ಣ ಭೂಮಿ ಚಿತ್ರಕ್ಕಾಗಿ ಕು.ರ.ಸೀ ಅವರು ಬರೆದು ವಿಜಯ ಭಾಸ್ಕರ್ ಸಂಗೀತ ನೀಡಿರುವ ಹಾಡಿನ ಎರಡೂ ವರ್ಶನ್‍ಗಳು ಇಲ್ಲಿವೆ.  ಎರಡರ ಚರಣಗಳ ಸಾಹಿತ್ಯ ಬೇರೆ ಬೇರೆ ಇರುವುದನ್ನು ಗಮನಿಸಿ. ಜಾನಕಿ-ಸುಮಿತ್ರಾ ವರ್ಶನ್‍ನಲ್ಲಿ ಹೆಚ್ಚಿನ ಸಾಲುಗಳು ಇರುವುದನ್ನು ನೋಡಿದರೆ ಪಿ.ಬಿ.ಎಸ್-ಜೇಸುದಾಸ್ ವರ್ಶನ್ ಆ ಮೇಲಿನ ಸೇರ್ಪಡೆ ಇರಬಹುದೇನೋ ಅನ್ನಿಸುತ್ತದೆ.  ವಿವಿಧಭಾರತಿಯ ಮಧುರಗೀತಂ ಕಾರ್ಯಕ್ರಮದಲ್ಲಿ ಬಹಳ ಸಮಯ ಈ ಚಿತ್ರದ ಹಾಡುಗಳು ಕೇಳಿಬರುತ್ತಿದ್ದವು.


 
ಗಾಯಕರು  : ಪಿ.ಬಿ.ಶ್ರೀನಿವಾಸ್ ಮತ್ತು ಕೆ.ಜೆ.ಜೇಸುದಾಸ್

ಕಾಣದ ದೇವರು ಊರಿಗೆ ನೂರು
ಹುಡುಕುವರಾರು
ಕಾಣುವ ತಾಯೇ ಪರಮ ಗುರು

ಸಾವಿರ ಕಾಳಗ ಕಾದುವ ಧೀರ
ನಾಡನು ನಡುಗಿಪ ದರೋಡೆಕೋರ
ಗಂಡರಗಂಡ ರಣಭೇರುಂಡ
ಹಾಕಬೇಕು ಪಾದಕೆ ದಂಡ

ಬೆತ್ಲೆಹೇಮಿನ ಏಸುಕ್ರಿಸ್ತ
ಮಕ್ಕಾ ನಗರದ ಗುರು ಪೈಗಂಬರ್
ರಾಘವ ಯಾದವ ಎಲ್ಲ ದೈವ
ತಾಯ ಮುಂದೆ ಬಾಲಕರವ್ವ



   

 
ಗಾಯಕಿಯರು : ಎಸ್.ಜಾನಕಿ ಮತ್ತು ಬಿ.ಕೆ.ಸುಮಿತ್ರಾ

ಕಾಣದ ದೇವರು ಊರಿಗೆ ನೂರು
ಹುಡುಕುವರಾರು
ಕಾಣುವ ತಾಯೇ ಪರಮ ಗುರು


ಹೇಳಲು ಬಾರದ ಹಸುಳೆಯ ಆಸೆ
ಊಹಿಸಿ ತರುವಳು ಹಾಲಿನ ಶೀಸೆ
ಅಮ್ಮ ಎನ್ನುತ ಅಪ್ಪಿದ ಕೂಡಲೆ
ಹಿಗ್ಗುತ ಸುರಿವಳು ಮುತ್ತಿನ ಸುರಿಮಳೆ
ಬೇಡಿದುದೆಲ್ಲ ನೀಡಲು ಬಲ್ಲ
ತಾಯಿಗಿಂತ ದೇವರೆ ಇಲ್ಲ


ಆರಿದ ಬಾಯಿಗೆ ಹೀರುವ ಹಾಲು
ಸಂಜೆಯ ಜೋಲಿಗೆ ಜೋಗುಳ ಹಾಡು
ಓದುವ ಮಗುವಿಗ ಶ್ರೀ ಓನಾಮ
ಹಾಡುವ ಹೈದಗೆ ದೇವರ ನಾಮ
ಕೋರಿದ ವರವ ತೀರಿಸಿ ಬಿಡುವ
ತಾಯಿಗಿಂತ ದೇವರೆ ಇಲ್ಲ

ಈ ಹಾಡಿನ ಧ್ವನಿಮುದ್ರಣ ಸಮಯದ ಫೊಟೊ




Monday 25 May 2015

ಸಾರಂಗ ಸಂವಾದ


ಇತ್ತೀಚೆಗೆ ರೇಡಿಯೋ ಸಾರಂಗ್ 107.8 FM ವತಿಯಿಂದ ವಿ.ಕೆ.ಕಡಬ ಅವರು ತುಳು ಭಾಷೆಯಲ್ಲಿ ನನ್ನ ಸಂದರ್ಶನ ನಡೆಸಿದ್ದು ಅದು 24-5-2015ರಂದು ಪ್ರಸಾರವಾಗಿತ್ತು.   ತುಳುವೇತರರ ಅನುಕೂಲಕ್ಕೋಸ್ಕರ ಅದರ ಲಿಖಿತ ಕನ್ನಡ ಭಾವಾನುವಾದವನ್ನು ಇಲ್ಲಿ ನೀಡುತ್ತಿದ್ದೇನೆ. ತುಳುವಿನಲ್ಲಿ ಆಲಿಸುತ್ತಾ ಕನ್ನಡದಲ್ಲಿ ಓದುವ ವಿಶಿಷ್ಟ ಅನುಭವ ಪಡೆಯಿರಿ.



ಈ ವಾರದ ಬಿನ್ಯೆರೆ ಪಾತೆರ್ ಕತೆ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಪ್ರೀತಿಪೂರ್ವಕ ನಮಸ್ಕಾರ. ಪ್ರತಿ ವಾರವೂ ನಮ್ಮ ಊರಿನ ಬೇರೆ ಬೇರೆ ಕಲಾವಿದರು ಈ ಕಾರ್ಯಕ್ರಮದಲ್ಲಿ ಇರುತ್ತಾರೆ. ಇಂದೂ ಓರ್ವ ಹೊಸ ಅತಿಥಿ ಇದ್ದಾರೆ.  ಇವರು BSNLನಲ್ಲಿ ಸುಮಾರು 38 ವರ್ಷ ದುಡಿದವರು. ಕೊಳಲನ್ನೂದಿ ಮನಸ್ಸುಗಳಿಗೆ ರಂಗು ತುಂಬಿದವರು.  ಅಂತರ್ಜಾಲದತ್ತ ನೋಡಿದರೆ "ವಿರಾಮದ ವೇಳೆಗಾಗಿ" ಎಂಬ ಬ್ಲಾಗ್ ಮೂಲಕವೂ ರಂಜನೆ ನೀಡುತ್ತಿರುವವರು. ಒಟ್ಟಲ್ಲಿ ಹೇಳುವುದಾದರೆ ಸಕಲ ಕಲಾ ವಲ್ಲಭ ಎಂದೆನಿಸಿಕೊಳ್ಳಬಹುದಾದವರು.  ಅವರೇ ಚಿದಂಬರ ಕಾಕತ್ಕರ್.  ಸರ್, ನಿಮ್ಮನ್ನು ಈ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಸ್ವಾಗತಿಸುತ್ತಿದ್ದೇನೆ.

ಎಲ್ಲರಿಗೂ ನಮಸ್ಕಾರ.

ನಾನು ಮೊದಲು ಕೇಳುವುದೇನೆಂದರೆ ಕಾಕತ್ಕರ್ ಎಂದರೆ ಎಲ್ಲಿ ಮತ್ತು ಏನು. (ಈ ಕಡೆ ಹೆಸರುಗಳ ಜೊತೆಗೆ ಊರನ್ನೂ ಸೇರಿಸಿ ಹೇಳುವ ವಾಡಿಕೆ ಇರುವುದರಿಂದ ಈ ಪ್ರಶ್ನೆ ಇರಬಹುದು.)

ಕಾಕತ್ಕರ್ ಅಂದರೆ ಅದು ನಮ್ಮ surname. ನಾವು ಮೂಲತಃ ಮಹಾರಾಷ್ಟ್ರದ ರತ್ನಾಗಿರಿಯವರು, ಸುಮಾರು 300-400 ವರ್ಷಗಳಿಗೂ ಹಿಂದೆ ಅಂದರೆ  ಪೇಶ್ವೆಗಳ ಕಾಲದಲ್ಲಿ ನಮ್ಮವರು ಈ ಕಡೆ ವಲಸೆ ಬಂದರಂತೆ. ನಮ್ಮ ಚಿತ್ಪಾವನ ಸಮುದಾಯದವರು ಮುಂಡಾಜೆ, ಶಿಶಿಲ, ಮಾಳ, ದುರ್ಗ ಮುಂತಾದೆಡೆ ನೆಲೆ ಕಂಡುಕೊಂಡಿದ್ದಾರೆ.  ನಮ್ಮ ಹಿರಿಯರು ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮವನ್ನು ಆಯ್ದುಕೊಂಡರು.  ನಾನು ಅಲ್ಲೇ ಹುಟ್ಟಿ ಬೆಳೆದವನು.

ನಿಮಗೆ ಈ ಕೊಳಲೂದುವ ಕಲೆ ಒಲಿದದ್ದು ಹೇಗೆ.

ಅದು ಹೇಗೆಂದರೆ ಮೊದಲಿನಿಂದಲೂ ಯಾವುದೇ ವಾದ್ಯ ಕಂಡರೆ ನನಗೆ ಬಲು ಇಷ್ಟ. ನಮ್ಮ ಮನೆಗೆ ವಾದ್ಯ ನುಡಿಸುವವರು ಯಾರಾದರೂ ಬಂದರೆ ನಾನು ಆಸಕ್ತಿಯಿಂದ ಅವರನ್ನು ಗಮನಿಸುತ್ತಿದ್ದೆ. ವಾದ್ಯಗಳ ಪೈಕಿ ಅತಿ ಅಗ್ಗ ಮತ್ತು ಸುಲಭದಲ್ಲಿ ಸಿಗುವಂಥದ್ದು ಕೊಳಲಲ್ಲವೇ.  ಹಾರ್ಮೋನಿಯಮ್, ಸ್ಯಾಕ್ಸೊಫೋನ್, ನಾಗಸ್ವರ, ಕೀ ಬೋರ್ಡ್ ಮುಂತಾದವುಗಳು ಸಾವಿರಾರು ರೂಪಾಯಿ ಬೆಲೆ ಬಾಳುವಂಥವು.  ನಾವು ಚಿಕ್ಕವರಿರುವಾಗ ಪ್ರತಿ ವರ್ಷ ಧರ್ಮಸ್ಥಳ ದೀಪೋತ್ಸವಕ್ಕೆ ತಪ್ಪದೆ ಹೋಗುತ್ತಿದ್ದೆವು.  ನಿಮಗೆಲ್ಲ ಗೊತ್ತಿರುವಂತೆ ಜಾತ್ರೆಗಳಲ್ಲಿ ಸ್ಟೇರಿಂಗಿನಂಥ  ಸ್ಟೇಂಡ್ ಹೊಂದಿದ್ದು ಕೊಳಲು, ಬಲೂನ್ ಇತ್ಯಾದಿ ಮಾರುವ ಅಂಗಡಿಗಳಿರುತ್ತವಲ್ಲವೇ.  ನಾನು ಯಾವಾಗಲೂ ಮೊದಲು ಹುಡುಕುತ್ತಿದ್ದುದು ಅಂಥ ಅಂಗಡಿಗಳನ್ನು.  ಅಲ್ಲಿ ನಾಲ್ಕಾಣೆ ಕೊಟ್ಟು ಒಂದು ಕೊಳಲು ಖರೀದಿಸುತ್ತಿದ್ದೆ.  ನಾನು ಬೇರೆ ಏನನ್ನೂ ಕೊಳ್ಳುತ್ತಿರಲಿಲ್ಲ, ಬೇರೆ ಯಾವುದರಲ್ಲೂ ನನಗೆ ಆಸಕ್ತಿಯೂ ಇರಲಿಲ್ಲ. ಕೊಳಲನ್ನು ಕೊಂಡು ಮನೆಗೆ ಬರುತ್ತಿದ್ದೆ.  ಕೊಳಲನ್ನು ಹೇಗೆ ನುಡಿಸುವುದೆಂದು ಆಗ ನನಗೇನೂ ಗೊತ್ತಿರಲಿಲ್ಲ.  ಮನಸ್ಸಿಗೆ ಬಂದಂತೆ ಪೀ ಪೀ ಎಂದು ಊದಿ  "ಬೊಗಳಿ ಬೊಗಳಿ ರಾಗ ನರಳಿ ನರಳಿ ರೋಗ" ಎಂಬಂತೆ ಒಂದೊಂದೇ ಹಾಡು ನಾನಾಗಿಯೇ ನುಡಿಸುವುದನ್ನು ಕಲಿತೆ.  ನಮ್ಮದು ಹಳ್ಳಿಯಾದ್ದರಿಂದ ಅಲ್ಲಿ ಗುರು ಮುಖೇನ ಸಂಗೀತ ಕಲಿಯುವ ಸೌಲಭ್ಯ ಇರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಈ ರೀತಿ ನಾನೇ ಕಲಿಯಬೇಕಾಯಿತು.  ಇದು ನಾನು ಕೊಳಲು ಕಲಿತ ಕತೆ. (ಹಿನ್ನೆಲೆಯಲ್ಲಿ ವೇ ವೇಲ ಗೋಪೆಮ್ಮಾಲ ಹಾಡಿನ intro music).

BSNLನಲ್ಲಿ ನಿಮ್ಮದು ಸುದೀರ್ಘ ಸೇವೆ.  ಅಲ್ಲಿಯ ಅನುಭವ ಏನು.

ನಾನು ಸೇರುವಾಗ ಅದು Post & Telegraphs Department ಆಗಿತ್ತು. ಮುಂದೆ Department of Telecom  ಆಯ್ತು. ಈಗ ನಾನು ನಿವೃತ್ತನಾಗುವಾಗ BSNL  ಆಗಿದೆ.  ನಾನು ಸೇರುವಾಗ ಅದು ಏನೆಂದೇ ನನಗೆ ಗೊತ್ತಿರಲಿಲ್ಲ.  ಉಜಿರೆ SDM ಕಾಲೇಜಲ್ಲಿ B.Sc ಮುಗಿಸಿದ್ದೆ.  ನಮಗೆ ಬೇರೆ ಆಯ್ಕೆಯೂ ಇರಲಿಲ್ಲ. ಒಂದೇ ಕಾಲೇಜು.  ಅಲ್ಲಿಗೇ ಹೋಗಬೇಕು. ಮುಂದೆ ಪತ್ರಿಕೆಗಳ wanted column ನೋಡುತ್ತಾ ಪ್ರತಿಯೊಂದಕ್ಕೂ ಅರ್ಜಿ ಗುಜರಾಯಿಸುತ್ತಿದ್ದೆ.  ಆ ಕಾಲದಲ್ಲಿ campus interview ಇತ್ಯಾದಿ ಇರಲಿಲ್ಲ. ಕೊನೆಗೆ 1973ರಲ್ಲಿ ಮಂಗಳೂರಿನಲ್ಲಿ P&T ಇಲಾಖೆಗೆ ಸೇರ್ಪಡೆಗೊಂಡೆ.

ನೀವು ಕೊಳಲು ಊದುವುದಕ್ಕೆ ಇಂಥದ್ದೇ ವೇಳೆ ಎಂದೇನಾದರೂ ಇದೆಯೆ.

ಅದಕ್ಕೆ ಹೊತ್ತು ಎಂದೇನೂ ಇಲ್ಲ.  ನಾನು ಮನೆಯಲ್ಲೇ ಇದ್ದರೆ ನನಗೆ ಮನ ಬಂದಾಗ ನುಡಿಸುತ್ತೇನೆ.  ನಾನು ನನ್ನದೇ ಕಾರ್ಯಕ್ರಮಗಳನ್ನೂ ನೀಡುತ್ತೇನೆ.  ನನ್ನದೇ ತಂಡದೊಟ್ಟಿಗೆ ಮಧುರ ಗೀತೆಗಳ ಕಾರ್ಯಕ್ರಮ.  (ಹಿನ್ನೆಲೆಯಲ್ಲಿ ಮಂಗಳದ ಈ ಸುದಿನ ಹಾಡಿನ ತುಣುಕು.)  ಮಂಗಳೂರು ಆಸುಪಾಸಿನ ಬಹುತೇಕ ಎಲ್ಲ ಭರತ ನಾಟ್ಯ ತಂಡಗಳಲ್ಲೂ ಕೊಳಲುವಾದಕನಾಗಿ ಭಾಗವಹಿಸಿದ್ದೇನೆ. (ಹಿನ್ನೆಲೆಯಲ್ಲಿ ಧನಾಶ್ರೀ ತಿಲ್ಲಾನ.) ಉಡುಪಿಯ ಪ್ರೊ|| ಶಂಕರ್ ಮತ್ತು ಜೂ|| ಶಂಕರ್ ಅವರ ಗಿಲಿ ಗಿಲಿ ಮ್ಯಾಜಿಕ್  ಹೆಸರು ನೀವೆಲ್ಲರೂ ಕೇಳಿರಬಹುದು. ಸುಮಾರು ಮೂವತ್ತು ವರ್ಷಗಳಿಂದಲೂ ಅವರ ತಂಡದ ಕೊಳಲು ವಾದಕ ನಾನು.  ಅವರ ಜೊತೆ ಶ್ರೀ ಲಂಕಾ ಮತ್ತು ಕೊಲ್ಲಿ ದೇಶಗಳ ಪ್ರವಾಸ ಮಾಡುವ ಅವಕಾಶವೂ ನನಗೆ ಸಿಕ್ಕಿತ್ತು. (ಹಿನ್ನೆಲೆಯಲ್ಲಿ ಓ ಮುಝೆ ಕಿಸೀಸೆ ಪ್ಯಾರ್ ಹೋಗಯಾ).

ಅಂತರ್ಜಾಲದತ್ತ ಕಣ್ಣು ಹಾಯಿಸಿದಾಗ ಯುವ ಪೀಳಿಗೆ ಹಾಗೂ ಆ ಬಗ್ಗೆ ಮಾಹಿತಿಯುಳ್ಳ ಇತರರಿಗೆ ಇಷ್ಟವಾಗಬಹುದಾದ "ವಿರಾಮದ ವೇಳೆಗಾಗಿ" ಎಂಬ ಬ್ಲಾಗ್ ಇತ್ಯಾದಿ ನೀವು ಬರೆಯುವುದು ಕಂಡು ಬರುತ್ತದೆ..  ನಿಮ್ಮ ಕಂಪ್ಯೂಟರ್ ಅನುಭವದ ಬಗ್ಗೆ ಏನು ಹೇಳುತ್ತೀರಿ.

ನಾನು BSNLನಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದೆನಲ್ಲವೇ.  ನಮ್ಮ ಇಲಾಖೆಗೆ ಸುಮಾರು 20-25 ವರ್ಷ ಹಿಂದೆಯೇ ಒಂದು ಕಂಪ್ಯೂಟರ್ ಬಂದಿತ್ತು.  ಬಹುಶಃ ಮಂಗಳೂರಿಗೆ ಬಂದ ಮೊದಲ ಕಂಪ್ಯೂಟರ್ ಅದಾಗಿತ್ತೋ ಏನೋ. ಅದನ್ನು ಒದಗಿಸಿದ ಕಂಪೆನಿಯವರು ಒಂದೆರಡು ತಿಂಗಳಾದರೂ install  ಮಾಡಲು ಬಂದಿರಲಿಲ್ಲ.  ನಮ್ಮ ಇಲಾಖೆ ಲಕ್ಷಗಟ್ಟಲೆ ಖರ್ಚು ಮಾಡಿ ತರಿಸಿದ ಇದು ಹೀಗೆ ಹಾಳು ಬಿದ್ದಿದೆಯಲ್ಲ ಎಂದು ನಾನು ಯೋಚಿಸಿದೆ.  ನಾನೇ ಅದರಲ್ಲಿ ಏನಾದರೂ ಮಾಡಲು ಆಗುತ್ತದೆಯೇ ಎಂದು ಪ್ರಯೋಗ ನಡೆಸಲು ಪ್ರಯತ್ನಿಸಿದೆ.  ಮೊದ ಮೊದಲು ನನಗೆ ಏನೂ ಗೊತ್ತಾಗಲಿಲ್ಲ.  ನಾನು ಆಗಲೇ "ಬೊಗಳಿ ಬೊಗಳಿ ರಾಗ ನರಳಿ ನರಳಿ ರೋಗ"  ಎಂದು ಹೇಳಿದಂತೆ ಪ್ರಯತ್ನ ಪಡುತ್ತಾ ಚಿಕ್ಕ ಪುಟ್ಟ programs ಮಾಡುವುದನ್ನು ಕಲಿತೆ.  Duty chart, ಉಪಕರಣಗಳ history sheet ಇತ್ಯಾದಿಗಳನ್ನು ದಾಖಲಿಸಲು ಕೆಲವು  applications ಅಭಿವೃದ್ಧಿಪಡಿಸಿದೆ. ಅದು ತುಂಬಾ ಯಶಸ್ವಿಯಾಯಿತು.  ಇತರ ಕಡೆಗಳಲ್ಲೂ ಅವುಗಳನ್ನು ಉಪಯೋಗಿಸತೊಡಗಿದರು.  ಮುಂದೆ computerisation ಜಾಸ್ತಿ ಆಗತೊಡಗಿದಂತೆ ನನ್ನ programming ಕೂಡ ಹೆಚ್ಚಾಯಿತು.  ಮುಂದೆ ಬಂದ E-10-B, OCB, DOTSOFT, CDR  ಮುಂತಾದ ತಾಂತ್ರಿಕತೆಗಳಿಗೆ ಸಂಬಂಧಪಟ್ಟು ನಾನು ರೂಪಿಸಿದ programಗಳು ತುಂಬಾ ಪ್ರಸಿದ್ಧವಾದವು.  ನಾನು ನಿವೃತ್ತಿಹೊಂದಿ ಮೂರು ವರ್ಷ ಕಳೆದರೂ ಅವುಗಳಲ್ಲಿ ಕೆಲವು ಈಗಲೂ ಉಪಯೋಗವಾಗುತ್ತಿವೆ.  ಇದು ತಾಂತ್ರಿಕ ವಿಷಯದ ಬಗ್ಗೆ ಆಯಿತು. ನನಗೆ ಸಂಗೀತವೆಂದರೆ ಆಸಕ್ತಿಯ ಕ್ಷೇತ್ರವಲ್ಲವೇ.  ಅಂತರ್ಜಾಲ ಯುಗ ಆರಂಭವಾದ ಮೇಲೆ "ವಿರಾಮದ ವೇಳೆಗಾಗಿ" ಎಂಬ ಬ್ಲಾಗ್ ಇತ್ಯಾದಿ ರೂಪಿಸಿದೆ. ನನ್ನ ವಿವಿಧ ಹವ್ಯಾಸಗಳು ಅದರಲ್ಲಿ ಪ್ರತಿಫಲಿಸುತ್ತಿರುತ್ತವೆ.. (ಹಿನ್ನೆಲೆಯಲ್ಲಿ ವೇ ವೇಲ ಗೋಪೆಮ್ಮಾಲ).

ನಿಮಗೆ ಹಳೆ ಹಾಡುಗಳ ಸಂಗ್ರಹದ ಹವ್ಯಾಸವೂ ಇದೆಯಲ್ಲವೇ.

ಹೌದು,  ನನಗೆ ಹಿಂದಿನಿಂದಲೂ ರೇಡಿಯೋ ಕೇಳುವುದೆಂದರೆ ಬಲು ಇಷ್ಟ.  ನಾನು ಆರನೇ ಕ್ಲಾಸಲ್ಲಿರುವಾಗ ನಮ್ಮ ಮನೆಗೆ ಹಳೆಯ ನ್ಯಾಷನಲ್ ಎಕ್ಕೊ ರೇಡಿಯೊದ ಪ್ರವೇಶವಾಯಿತು.   ಅದು ವಾಲ್ವ್ ರೇಡಿಯೊ.  ಅದಕ್ಕೊಂದು ಗಜ ಗಾತ್ರದ ಬ್ಯಾಟರಿ.  ಆಗಲೇ ಆ ಬ್ಯಾಟರಿಯ ಬೆಲೆ 50 ರೂಪಾಯಿ.  ಈಗ ಅದು ಸುಮಾರು 5000 ರೂಪಾಯಿಗೆ ಸಮವೋ ಏನೋ.  ಆ ರೇಡಿಯೊದಲ್ಲಿ ಹಾಡು ಕೇಳಿ ಕೇಳಿಯೇ ನನಗೆ ಸಂಗೀತದಲ್ಲಿ ಆಸಕ್ತಿ ಮೂಡಿದ್ದು.  ಆಗ ಟೇಪ್ ರೆಕಾರ್ಡರ್ ಇತ್ಯಾದಿ ಇಲ್ಲದ್ದರಿಂದ ಸಂಗ್ರಹದ ಪ್ರಶ್ನೆ ಇರಲಿಲ್ಲ.  ಆಗ ಏನಿದ್ದರೂ ಕೇಳಿ ಕೇಳಿ ಮನಸ್ಸಿನಲ್ಲೇ ರೆಕಾರ್ಡಿಂಗ್.  ಈಗಲೂ ಆ ಕಾಲದ ಎಲ್ಲ ಹಾಡು ಹಾಗೂ ಅವುಗಳ ಸಾಹಿತ್ಯ ನನಗೆ ನೆನಪಿದೆ.  ಆ ಕಾಲದಲ್ಲಿ ಸಿನೆಮ ನೋಡುವಾಗ 10 ಪೈಸೆ ಕೊಟ್ಟರೆ ಹಾಡುಗಳ ಪದ್ಯಾವಳಿಗಳು ಸಿಗುತ್ತಿದ್ದವು. ಆಗ ನಮಗೆಲ್ಲ ಸಿನೆಮ ನೊಡುವ ಅವಕಾಶ ಕಮ್ಮಿ.  ರಜೆಯಲ್ಲಿ ಯಾವತ್ತಾದರೂ ಕಾರ್ಕಳ ಅಥವಾ ಮಂಗಳೂರಿಗೆ ಹೋದರೆ ಆಗ ಒಂದು ಸಿನೆಮ ನೋಡುವುದು.  ಮರೆಯದೆ ಅದರ ಪದ್ಯಾವಳಿ ಕೊಳ್ಳುವುದು.  ಮತ್ತೆ ರೇಡಿಯೊದಲ್ಲಿ ಆ ಸಿನೆಮದ ಹಾಡು ಬರುವಾಗ ಪದ್ಯಾವಳಿ ಎದುರಿಗೆ ಇಟ್ಟುಕೊಂಡು ಜೊತೆಗೆ ಹಾಡುವುದು. ಹೀಗೆ ಹಾಡುಗಳ ಹುಚ್ಚು ಬೆಳೆಯುತ್ತಾ ಹೋಯಿತು.  ಮುಂದೆ ಟೇಪ್ ರೆಕಾರ್ಡರ್ ಯುಗ ಬಂದ ಮೇಲೆ ನನ್ನ ಸಂಗ್ರಹ ಅಭಿಯಾನ ಆರಂಭವಾಯಿತು.   ಸಂಗ್ರಹ ಮಾಡುತ್ತ ಮಾಡುತ್ತ  ಈಗ ನನ್ನಲ್ಲಿ 2000 ಕ್ಕೂ ಮಿಕ್ಕಿ ಹಿಂದಿ ಹಾಗೂ 1000ಕ್ಕೂ ಮಿಕ್ಕಿ ಕನ್ನಡ ಹಾಡುಗಳು ಇರಬಹುದು.  ತುಳು ಹಾಡುಗಳೂ ಬಹಳ ಇವೆ ನನ್ನಲ್ಲಿ.  ಕಂಪ್ಯೂಟರ್ ಯುಗ ಆರಂಭವಾದ ಮೇಲೆ ಹಾಡುಗಳಲ್ಲೂ ನಾನು ಪ್ರಯೋಗ ನಡೆಸತೊಡಗಿದೆ.  ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ ಬೇರೆ ಬೇರೆಯಾಗಿ ಹಾಡಿದ ಬೊಳ್ಳಿ ತೋಟ ಚಿತ್ರದ ದಾನೆ ಪೊಣ್ಣೆ/ದಾನೆ ಪನ್ಲೆ ಹಾಡುಗಳನ್ನು ಯುಗಳ ಗೀತೆಯಾಗಿ ಪರಿವರ್ತಿಸಿದ್ದು ತುಂಬಾ ಜನಪ್ರಿಯವಾಗಿದೆ.(ಹಿನ್ನೆಲೆಯಲ್ಲಿ ಇದರ ತುಣುಕು).

ವೃತ್ತಿ ಜೀವನ, ನಿಜ ಜೀವನ ಎರಡರಲ್ಲೂ ನಿರಂತರ ಪ್ರಯೋಗಶೀಲತೆಯನ್ನು ರೂಢಿಸಿಕೊಂಡವರು ನೀವು.

ಹೌದು,   ನನ್ನ ಪ್ರಯೋಗಶೀಲತೆ ಮೊದಲಿಂದಲೂ ಇದೆ.  ನಾನು ಇನ್ನೊಂದು ಉದಾಹರಣೆ ಕೊಡುತ್ತೇನೆ.  ನಾವು 9ನೇ ಕ್ಲಾಸ್ ಇರುವಾಗ ನಮ್ಮ ಮನೆಗೆ ವಿದ್ಯುತ್ತು ಬಂತು.  ಅಲ್ಲಿ ವರೆಗೆ  ಚಿಮಿಣಿ ದೀಪ, ಲಾಟೀನುಗಳ ಬೆಳಕಲ್ಲೇ ಓದಿದವರು ನಾವು.  ನಮ್ಮದು ಹಳ್ಳಿಯ ದೊಡ್ಡ ಮನೆ.  10-15 ಕೋಣೆಗಳಿದ್ದವು.   ಕೂಡು ಕುಟುಂಬವಾದ್ದರಿಂದ ಅಣ್ಣ ತಮ್ಮಂದಿರ ಮಕ್ಕಳು ಇತ್ಯಾದಿ ಸೇರಿ ದಿನವೂ ಊಟಕ್ಕೆ 10-20 ಮಂದಿ ಇರುತ್ತಿದ್ದೆವು.  ಒಂದು ರೀತಿಯಲ್ಲಿ ನಿತ್ಯವೂ ಸಮಾರಾಧನೆಯೇ.  ನಮ್ಮ ತಾಯಿ, ಅತ್ತಿಗೆ ಮೊದಲಾದವರಿಗೆ ಊಟಕ್ಕೆ ಸಿದ್ಧವಾದೊಡನೆ ಗಂಡಸರನ್ನು ಕರೆಯುವುದು ಒಂದು ಸಮಸ್ಯೆಯಾಗುತ್ತಿತ್ತು.  ಒಳಗಿಂದ ಕರೆದರೆ ಹೊರಗೆ ಕೇಳುತ್ತಿರಲಿಲ್ಲ.  ಒಂದು ವೇಳೆ ಕೇಳಿಸಿದರೂ ಗಂಡಸರು ಕೂಡಲೇ ಒಳಗೆ ಬರುತ್ತಿರಲಿಲ್ಲ. ಅದಕ್ಕೆ ನಾನೊಂದು ಉಪಾಯ ಮಾಡಿದೆ.  ಒಂದು ಕಾಲ್ ಬೆಲ್ ಅಳವಡಿಸಿದೆ. ಆ ಕಾಲ್ ಬೆಲ್ ಜೊತೆಗೆ  ಟಿ.ವಿ.ತರಹ ಒಂದು screen ಮಾಡಿ ಅದರಲ್ಲಿ  "ಒಳಗೆ ಬನ್ನಿ" ಎಂಬ ಕೆಂಪು ಅಕ್ಷರಗಳು ಮೂಡುವಂತೆ ಮಾಡಿದೆ.  ಅಡಿಗೆ ತಯಾರಾಗಿ ಊಟಕ್ಕೆ ತಟ್ಟೆಗಳನ್ನು ಇರಿಸಿದೊಡನೆ ಒಳಗಿಂದ ಒಂದು ಗುಂಡಿ ಅದುಮಿದರಾಯಿತು.  ಹೊರಗಡೆ buzzer  ಸದ್ದಿನ ಜೊತೆಗೆ ಬೆಳಗುವ ಈ display ಕಂಡೊಡನೆ ಹೊರಗಿದ್ದವರೆಲ್ಲರೂ ಕೂಡಲೇ ಒಳಗೆ ಬರತೊಡಗಿದರು.  ಮತ್ತೆ ಮತ್ತೆ ಕರೆಯುವ ಬವಣೆಯಿಂದ ಮುಕ್ತಿ ದೊರೆಯಿತು.  ಅಂದಿನ ದಿನಗಳಲ್ಲಿ ನಮ್ಮ ಮನೆಗೆ ಬರುವ ಅತಿಥಿಗಳಿಗೆಲ್ಲ ಇದೊಂದು  ಪ್ರಮುಖ ಆಕರ್ಷಣೆಯಾಗಿತ್ತು.  ಇದರ ರೂವಾರಿಯಾದ ನನಗೂ ಪ್ರಶಂಸೆ ಸಲ್ಲುತ್ತಿತ್ತು.

ನಿಮಗೆ ವೀಡಿಯೊಗ್ರಾಫಿ ಹವ್ಯಾಸವೂ ಇದೆ ಎಂದು ಹೇಳಿದಿರಿ.  ಈ ಸಂಬಂಧ ಎಲ್ಲಿಗೆಲ್ಲ ಹೋಗಿದ್ದೀರಿ.

ನಾನು ವೀಡಿಯೊಗ್ರಾಫಿ ಮಾಡಲೆಂದೇ ಎಲ್ಲಿಗೂ ಹೋಗುವುದಿಲ್ಲ.  ಎಲ್ಲಿ ಹೋಗುವಾಗಲೂ ಸಾಧಾರಣವಾಗಿ ಕ್ಯಾಮರಾ ನನ್ನ ಜೊತೆಗೇ ಇರುತ್ತದೆ.  ವಿಶೇಷ ದೃಶ್ಯವೇನಾದರೂ ಕಣ್ಣಿಗೆ ಬಿದ್ದರೆ ಕೂಡಲೇ ಸೆರೆ ಹಿಡಿಯುತ್ತೇನೆ.  ನಮ್ಮ ಕುಟುಂಬದ ಸಮಾರಂಭಗಳಲ್ಲೂ ನಾನು ವಿಶೇಷ ರೀತಿಯ ವೀಡಿಯೊಗ್ರಾಫಿ ಮಾಡುತ್ತೇನೆ. ನನ್ನ ಶೈಲಿ ವೃತ್ತಿಪರರಿಗಿಂತ ಕೊಂಚ ಭಿನ್ನ.  ಉದಾಹರಣೆಗೆ ಮದುವೆ ಸಮಾರಂಭಗಳಲ್ಲಿ ವೃತ್ತಿಪರರು ವರನ ದಿಬ್ಬಣ, ವಧುವಿನ ದಿಬ್ಬಣ, ಧಾರೆ,  ಊಟ ಇತ್ಯಾದಿಗಳ ಕಡೆಗೆ ಹೆಚ್ಚು ಗಮನ ಹರಿಸಿದರೆ ನಾನು ಮೆಲ್ಲನೆ ಅಡಿಗೆ ಮನೆ ಹೊಕ್ಕೇನು.  ಅಲ್ಲಿ ಜಿಲೇಬಿಯೋ ಹೋಳಿಗೆಯೋ ಮಾಡುತ್ತಿದ್ದರೆ ವಿವಿಧ ಕೋನಗಳಲ್ಲಿ ಅದರ ವೀಡಿಯೋ ಮಾಡಿಯೇನು. ಮೊನ್ನೆ ಮೊನ್ನೆ ನಮ್ಮ ಕುಟುಂಬದಲ್ಲೊಂದು ಉಪನಯನವಿತ್ತು.  ಅಂದು ನಾನು ಇದೇ ರೀತಿ ಜಿಲೇಬಿ ತಯಾರಿಯ ಒಂದು ಕಿರು ವೀಡಿಯೋ ಮಾಡಿ ಅದಕ್ಕೆ ಸೂಕ್ತ ಹಿನ್ನೆಲೆ ಸಂಗೀತ ಅಳವಡಿಸಿ ಅಂತರ್ಜಾಲದಲ್ಲಿ ತೇಲಿ ಬಿಟ್ಟಿದ್ದೆ.  ಅದು ತುಂಬಾ ಜನಪ್ರಿಯವಾಯಿತು.

ನೀವು ಕೊಳಲಲ್ಲಿ ಹೆಚ್ಚಾಗಿ ಏನನ್ನು ನುಡಿಸುತ್ತೀರಿ.

ನಾನು ಶಾಸ್ತ್ರೀಯ ಸಂಗೀತವನ್ನೂ ಕಲಿತಿದ್ದೇನೆ.  ಆದರೆ ನಾನು ವಿದ್ವಾಂಸನೇನೂ ಅಲ್ಲ.  ಸಂಗೀತದ ವ್ಯಾಕರಣ ತಿಳಿಯಲು ಮಂಗಳೂರು ಕಲಾನಿಕೇತನದ ಶ್ರೀ ಗೋಪಾಲಕೃಷ್ಣ ಅಯ್ಯರ್  ಅವರ ಬಳಿ ಸತತ 5-6 ವರ್ಷ ಸಂಗೀತ ಅಭ್ಯಾಸ ಮಾಡಿದ್ದೇನೆ.  ಭರತ ನಾಟ್ಯದ ಸಂದರ್ಭದಲ್ಲಿ ಶಾಸ್ತ್ರೀಯ ತರಬೇತಿ ತುಂಬಾ ಉಪಯೋಗವಾಗುತ್ತದೆ.  ವೇಣುಗಾನ ಮಂಜರಿ ಎಂಬ ನನ್ನದೇ ಕಾರ್ಯಕ್ರಮಗಳನ್ನೂ ನಾನು ನೀಡುತ್ತೇನೆ. ಮದುವೆ ರಿಸೆಪ್ಷನ್, ಉಪನಯನ, ಶುಭ ಸಮಾರಂಭಗಳು ಇತ್ಯಾದಿಗಳಲ್ಲಿ ಈ ಕಾರ್ಯಕ್ರಮಗಳು ಇರುತ್ತವೆ. ಈ ಕಾರ್ಯಕ್ರಮ ಕೇಳುಗರ ಕಿವಿಗಿಂಪಾಗುವಂತಹ  ಹಳೆಯ ಚಿತ್ರ ಗೀತೆಗಳು, ಭಕ್ತಿ ಗೀತೆಗಳು, ಜಾನಪದ ಗೀತೆಗಳು ಇತ್ಯಾದಿಗಳನ್ನೊಳಗೊಂಡಿರುತ್ತದೆ. ಆಧುನಿಕ orchestraಗಳ ಹಾಗೆ ಇದರಲ್ಲಿ ಅಬ್ಬರವಿಲ್ಲ.  ಇನ್ನೊಂದೆರಡು ಇಂತಹ ಹಾಡುಗಳು ಬೇಕಿದ್ದವು ಎಂದು ಅನ್ನಿಸುವಂತಹ ಆಯ್ಕೆ.  ಅನೇಕರು ಇದನ್ನು ಇಷ್ಟ ಪಡುತ್ತಾರೆ.  ನಾನು ವಿದ್ವಾಂಸನೇನೂ ಅಲ್ಲವೆಂದು ಮೊದಲೇ ಹೇಳಿದ್ದೇನೆ.  ಆದರೂ ನಾನು ಕೊಳಲು ನುಡಿಸುವ ಶೈಲಿಯಲ್ಲಿ ಏನೋ ಆಕರ್ಷಣೆ ಇದೆ ಎಂದು ಅನೇಕರು ಹೇಳುತ್ತಾರೆ.(ಹಿನ್ನೆಲೆಯಲ್ಲಿ ದೋಣಿ ಸಾಗಲಿ ಹಾಡಿನ prelude).

ನೀವು ಎಲ್ಲೆಲ್ಲ ಕಾರ್ಯಕ್ರಮ ನೀಡಿದ್ದೀರಿ.

ಹೆಚ್ಚು ಕಾರ್ಯಕ್ರಮಗಳನ್ನು ಮಂಗಳೂರಲ್ಲೇ ನೀಡಿದ್ದೇನೆ.  ದಕ್ಷಿಣ ಕನ್ನಡದ ವಿವಿಧ ಕಡೆಗಳಲ್ಲೂ ನೀಡಿದ್ದೇನೆ. ಬೆಂಗಳೂರು, ಹಾಸನ ಮುಂತಾದೆಡೆಯೂ ಕೆಲವು ಕಾರ್ಯಕ್ರಮಗಳು ನಡೆದಿವೆ.  ನನ್ನ ಕಾರ್ಯಕ್ರಮ ಅವಶ್ಯಕತೆಗೆ ತಕ್ಕಂತೆ ಅರ್ಧ, ಒಂದು, ಎರದು, ಮೂರು, ಕೆಲವು ಸಲ  ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ನಡೆಯುವುದೂ ಇದೆ.  ಕೊಳಲು, ರಿದಂ ಪ್ಯಾಡ್ ,ಕೀ ಬೋರ್ಡ್ ಮತ್ತು ತಬ್ಲಾಗಳನ್ನಷ್ಟೇ ಹೊಂದಿರುವ ನಮ್ಮದು ಚಿಕ್ಕ ತಂಡ.

ಈಗ ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಅಬ್ಬರದ DJ ಸಂಗೀತ ಇತ್ಯಾದಿಗಳನ್ನು ನಾವು ಹೆಚ್ಚಾಗಿ ನೋಡುತ್ತೇವೆ.  ಇದರ ನಡುವೆ ನಿಮ್ಮ ಮಧುರ ಸಂಗೀತದ ಸ್ಥಾನ ಏನು.

ಆ ಕೇಳುಗರೇ ಬೇರೆ, ಈ ಕೇಳುಗರೇ ಬೇರೆ.  DJ ಸಂಗೀತಕ್ಕೆ ಹೊಂದಿಕೊಂಡವರಿಗೆ ನನ್ನ ಶೈಲಿ ರುಚಿಸಲಾರದೋ ಏನೋ.  ಆದರೆ ನನ್ನ ಕಾರ್ಯಕ್ರಮಗಳನ್ನು ಇಷ್ಟ ಪಡುವವರಿಗೆ ಅವರದ್ದು ಕಿವಿ ಬಿರಿಯುವ ಗದ್ದಲ ಎಂದೆನ್ನಿಸಬಹುದು. ಅದು ಅವರವರ ಇಷ್ಟ.  ಲೊಕೋ ಭಿನ್ನ ರುಚಿಃ ಎಂಬ ಉಕ್ತಿಯೇ ಇದೆಯಲ್ಲ.  ಕೆಲವರಿಗೆ  ಅದು ಇಷ್ಟವಾದರೆ ಉಳಿದವರಿಗೆ ಇದು ಇಷ್ಟ.  ನನ್ನ ಶೈಲಿಯನ್ನೂ ಮನಸಾರೆ ಮೆಚ್ಚುವವರು ಅನೇಕರಿದ್ದಾರೆ.(ಹಿನ್ನೆಲೆಯಲ್ಲಿ ಪಹಾಡಿ ಧುನ್).

ನೀವು ಅನೇಕ ಹಾಡುಗಳನ್ನು ಕೊಳಲಿನಲ್ಲಿ ನುಡಿಸುತ್ತೀರಿ.  ನಿಮ್ಮದೇ ರಚನೆಗಳನ್ನೇನಾದರೂ ಪ್ರಸ್ತುತ ಪಡಿಸುವುದಿದೆಯೇ.

ಇಲ್ಲ.  ವಾದ್ಯಗಳನ್ನು ನುಡಿಸುವವರಿಗೆ ಅದೊಂದು minus point.  ನನ್ನದೇ ಒಂದು ರಚನೆಯನ್ನು ನಾನು ಕೊಳಲಿನಲ್ಲಿ ನುಡಿಸಿದರೆ ಕೇಳುಗರಿಗೆ ಅದು ಏನು ಎಂದು ತಿಳಿಯುವುದು ಹೇಗೆ.  ವಾದ್ಯಗಳಲ್ಲಿ ಪ್ರಸಿದ್ಧ ರಚನೆಗಳನ್ನೇ ನುಡಿಸಬೇಕಾಗುತ್ತದೆ.  ಒಹೋ, ಈ ಹಾಡು ನುಡಿಸಿದರು ಎಂದು ಆಗಲೇ ಜನರಿಗೆ ತಿಳಿಯುವುದು.  ಓರ್ವ ಗಾಯಕನಾದರೆ ತಾನೇ ಒಂದು ಹಾಡು ರಚಿಸಿ ರಾಗ ಸಂಯೋಜನೆ ಮಾಡಿ  ಪ್ರಸ್ತುತ ಪಡಿಸಬಹುದು.  ನಾನೇನಾದರೂ ನನ್ನದೇ ಒಂದು ರಾಗವನ್ನು ಉದ್ದಕ್ಕೆ ನುಡಿಸುತ್ತಾ ಹೋದರೆ ಕೇಳುಗರಿಗೆ ಬೋರಾದೀತು.  ನನ್ನ ನಂಬಿಕೆ ಏನೆಂದರೆ ನಾನು ನುಡಿಸುವ ಹಾಡು ಕೇಳುಗರಿಗೆ ಗೊತ್ತಿರಲಿ ಇಲ್ಲದಿರಲಿ, ಇದನ್ನು ಎಲ್ಲೋ ಕೇಳಿದಂತಿದೆಯಲ್ಲ ಎನ್ನುವ ಭಾವನೆಯಾದರೂ ಅವರ ಮನಸ್ಸಿನಲ್ಲಿ ಬರಬೇಕು.  ಆಗಲೇ ಕಾರ್ಯಕ್ರಮ ಯಶಸ್ವಿ ಆಗುವುದು.  ನನ್ನ ಆಯ್ಕೆ ಯಾವಾಗಲೂ ಹೀಗೆಯೇ.(ಹಿನ್ನೆಲೆಯಲ್ಲಿ ಆಧಾ ಹೈ ಚಂದ್ರಮಾ).

ಜನಪ್ರಿಯ ಹಾಡುಗಳ ಧಾಟಿಯಲ್ಲಿ ನೀವು ಕೆಲವು ಕವನಗಳನ್ನು ರಚಿಸಿದ್ದೀರಿ.  ಇದರ ಬಗ್ಗೆ ಏನು ಹೇಳುತ್ತೀರಿ.

ಹೌದು,  ಶಾಲಾ ಕಾಲೇಜಿನ ದಿನಗಳಲ್ಲಿ ನನಗೆ ಆ ಹುಚ್ಚೂ ಇತ್ತು.  ಆಗಿನ ಜನಪ್ರಿಯ ಹಾಡುಗಳ ಧಾಟಿಯಲ್ಲಿ ನಾನು ಕೆಲವು ಕವಿತೆಗಳನ್ನು ರಚಿಸಿದ್ದಿದೆ.  ನಮ್ಮ ಊರಿಗೂ ಒಂದು ಬಸ್ಸು ಬರಬೇಕೇಂದು ನನಗೆ ಭಾರೀ ಆಸೆ.  ಆಗ "ಏಕ್ ಖಬರ್ ಆಯೀ ಸುನೋ ಏಕ್ ಖಬರ್ ಆಯೀ" ಎಂಬ ಕಿಶೋರ್ ಕುಮಾರನ ಹಾಡೊಂದು ಪ್ರಸಿದ್ಧವಾಗಿತ್ತು.  ಆ ಧಾಟಿಯಲ್ಲಿ "ಅದೋ ಅಲ್ಲಿ ನಮ್ಮ ಊರ ಬಸ್ಸು ಬಂತು ನೋಡಿ ನಿಮಗೂ ಸಹ ಹೋಗಬೇಕೆ ಬೇಗ ಬೇಗ ಓಡಿ" ಎಂಬ ಕವನ ಬರೆದಿದ್ದೆ.  ಆದರೆ ಇಂದಿಗೂ ಅದು ಕವನ ಆಗಿಯೇ ಉಳಿದಿದೆ.  ಇವತ್ತಿನ ವರೆಗೂ ನಮ್ಮ ಕಲ್ಮಂಜ ಗ್ರಾಮಕ್ಕೆ ಬಸ್ಸಿನ ಮುಖ ಕಾಣುವ ಭಾಗ್ಯ ಬಂದಿಲ್ಲ!

ನಿಮಗೆ ತುಳು ಹಾಡುಗಳು ಗೊತ್ತಿವೆಯೇ.

ಈಗಿನ ಹೊಸ ತುಳು ಸಿನಿಮಾಗಳ ಒಂದೂ ಹಾಡು ನನಗೆ ಗೊತ್ತಿಲ್ಲ.  ಆ ಮಟ್ಟಿಗೆ ನನ್ನನ್ನು ಕ್ಷಮಿಸಿ.  ಆದರೆ 70ರ ದಶಕದಲ್ಲಿ ಬಂದ ಪ್ರತೀ ತುಳು ಸಿನೆಮಾದ ಪ್ರತೀ ಪದ್ಯವೂ ನನಗೆ ಗೊತ್ತಿದೆ ಮತ್ತು ಅವೆಲ್ಲ ನನ್ನ ಸಂಗ್ರಹದಲ್ಲೂ ಇವೆ. ಅವುಗಳಲ್ಲೆಲ್ಲ ನನಗೆ ಅತ್ಯಂತ ಹೆಚ್ಚು ಖುಶಿ ಕೊಟ್ಟದ್ದು ದಾನೆ ಪೊಣ್ಣೆ.  ಮಂಗಳೂರು ಆಸುಪಾಸಿನಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲೂ ಈ ಹಾಡನ್ನು ತಪ್ಪದೇ ನುಡಿಸುತ್ತೇನೆ.  ಕೋಟಿ ಚೆನ್ನಯದ ಎಕ್ಕ ಸಕ ಹಾಡೂ ಪ್ರತಿ ಕಾರ್ಯಕ್ರಮದಲ್ಲಿ ಇರುತ್ತದೆ.(ಹಿನ್ನೆಲೆಯಲ್ಲಿ ದಾನೆ ಪೊಣ್ಣೆ).

ನಿಮಗೆ ಪೈಂಟಿಂಗ್ ಹವ್ಯಾಸವೂ ಇದೆ ಎಂದು ಹೇಳಿದಿರಿ.  ಯಾವ ರೀತಿಯ ಪೈಂಟಿಂಗ್ ಮಾಡುತ್ತೀರಿ.

ಶಾಲಾ ದಿನಗಳಲ್ಲಿ ವಾಟರ್ ಕಲರ್ ಪೈಂಟಿಂಗ್ ಮಾಡುತ್ತಿದ್ದೆ.  ಈಗ ಈ ಹವ್ಯಾಸ ಕೊಂಚ ಹಿಂದೆ ಬಿದ್ದಿದೆ.  ಆಗಿನ ಪೈಂಟಿಂಗ್ ಈಗಲೂ ನನ್ನಲ್ಲಿವೆ.  ಕೆಲವನ್ನು "ವಿರಾಮದ ವೇಳೆಗಾಗಿ"ಯಲ್ಲಿ ನೋಡಬಹುದು.

ದೊಡ್ಡ ದೊಡ್ಡ ಕಲಾವಿದರೊಡನೆ ಕಾರ್ಯಕ್ರಮಗಳನ್ನೇನಾದರೂ ನೀಡಿದ್ದೀರಾ.

ದೊಡ್ಡ ದೊಡ್ದ ಕಲಾವಿದರ ಸಮ್ಮುಖದಲ್ಲೂ ನಾನು ಕಾರ್ಯಕ್ರಮ ನೀಡಿದ್ದೇನೆ. ನನ್ನ ಸ್ವಂತ ಕಾರ್ಯಕ್ರಮಗಳಿಗಾದರೆ ನನ್ನದೇ ತಂಡವಿದೆ.  ಭರತ ನಾಟ್ಯದ ಸಂದರ್ಭದಲ್ಲಿ ಬೇರೆ ಬೇರೆ ವಿದ್ವಾಂಸರ ಒಡನಾಟ ಸಿಕ್ಕುತ್ತಿರುತ್ತದೆ.  ನನ್ನ ವೃತ್ತಿ ಜೀವನದ ಆರಂಭದ ವರ್ಷಗಳಲ್ಲಿ ಕಲಾ ನಿಕೇತನದಲ್ಲಿ ಶಾಸ್ತ್ರೀಯ ತರಬೇತಿ ಪಡೆಯುತ್ತಿದ್ದಾಗ ಆಕಾಶವಾಣಿಯ ಯುವವಾಣಿಯಲ್ಲಿ ನಾನು ಕೊಳಲು ನುಡಿಸಿದ್ದಿದೆ.  ಆಗ ಕೆ.ಹರಿಶ್ಚಂದ್ರನ್, ಎ.ಆರ್.ಕೃಷ್ಣಮೂರ್ತಿ ಮೊದಲಾದ ವಿದ್ವಾಂಸರು ನನಗೆ ಪಕ್ಕ ವಾದ್ಯ ನುಡಿಸಿದ್ದಾರೆ.(ಹಿನ್ನೆಲೆಯಲ್ಲಿ ಯುವವಾಣಿಯ ಮಹಾ ಗಣಪತಿಂ).

ಕೊಳಲು ಕಲಿಯುವುದಕ್ಕೆ, ನುಡಿಸುವುದಕ್ಕೆ ವಿಶೇಷ ಕ್ರಮ, ನಿಯಮ ಅಂತೇನಾದರೂ ಇದೆಯಾ.

ನಿಯಮ ಅಂತೇನೂ ಇಲ್ಲ.  ಮುಖ್ಯವಾಗಿ ಆಸಕ್ತಿ ಬೇಕು. ಮನಸ್ಸಿನೊಳಗಿಂದ ಆಸಕ್ತಿ ಬೇಕು.  ಅಪ್ಪ ಹೇಳಿದ್ದಾರೆ, ಅಮ್ಮ ಹೇಳಿದ್ದಾರೆ ಎಂದು ಕೊಳಲು ಕಲಿಯಲು ಹೊರಟರೆ ಆಗದು.  ಒಳಗಿನಿಂದ ಆಸಕ್ತಿ ಹುಟ್ಟಿದರೆ ಯಾರೂ ಕೊಳಲು ಕಲಿಯಬಹುದು.   ಕೊಳಲಲ್ಲಿ ನುಡಿಸುವ ಹಾಡು ನಮ್ಮ ಮನಸ್ಸಿನಲ್ಲಿರಬೇಕು ಮತ್ತು ಹಾಡಲೂ ಬರಬೇಕು. ಧ್ವನಿಯೇನೂ ಚೆನ್ನಾಗಿರಬೇಕಾಗಿಲ್ಲ. ಬಾಯಲ್ಲಿ ಹಾಡಲು ಬಂದರೆ ಕೊಳಲಲ್ಲೂ ಹಾಗೆಯೇ ನುಡಿಸಬಹುದು.  ನನ್ನ ನುಡಿಸುವಿಕೆಯಲ್ಲಿ ಇದನ್ನು ಅಳವಡಿಸಿಕೊಂಡಿದ್ದೇನೆ.  ಸಿನೆಮ ಹಾಡೇ ಇರಲಿ, ಜಾನಪದ ಗೀತೆಯೇ ಇರಲಿ ಅದರ ಸಾಹಿತ್ಯ ಕೇಳುಗರ ಮನಸ್ಸಿನಲ್ಲಿ ಮೂಡುವಂತೆ ನಾನು ನುಡಿಸುತ್ತೇನೆ.  ಬರೇ ಸ್ವರಗಳನ್ನು ಬರೆದುಕೊಂಡು ನುಡಿಸಿದರೆ ಈ ಪರಿಣಾಮ ಉಂಟಾಗದು.(ಹಿನ್ನೆಲೆಯಲ್ಲಿ  ಭಾಗ್ಯದ ಬಳೆಗಾರ).

ರೇಡಿಯೋ ಸಾರಂಗ್ ಬಗ್ಗೆ ಏನು ಹೇಳುತ್ತೀರಿ.

ಸಾರಂಗ್ ಸರಿಯಾಗಿ ಕೇಳಿಸುವುದಿಲ್ಲ ಎಂದು ಕೆಲವರ ದೂರು ಇದೆ.  ನಾನು ಹೇಳುವುದೆಂದರೆ ರೇಡಿಯೊಗೆ ಯಾವಾಗಲೂ ಒಂದು antenna ಬೇಕು.  ಮಾಡಿನ ಮೇಲೆ ಅಳವಡಿಸುವ ದೊಡ್ಡ antenna ಆಗಬೇಕೆಂದೇನೂ ಇಲ್ಲ. ಒಂದು ಚಿಕ್ಕ ತಂತಿಯೂ ಸಾಕು. ಮತ್ತೆ FM ಸ್ವಲ್ಪ ಹಠಮಾರಿ ಇದ್ದಂತೆ.  ಇಲ್ಲಿ ಕೇಳಿಸಿದರೆ ಎರಡು ಅಡಿ ಆಚೆ ಕೇಳಿಸದು.  ಯಾವ positionನಲ್ಲಿ ಸರಿಯಾಗಿ ಕೇಳಿಸುತ್ತದೆ ಎಂದು ಸ್ವಲ್ಪ ಅನ್ವೇಷಣೆ ನಡೆಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.  ನನ್ನ FM Sterioದಲ್ಲಿ 200 ಕಿ.ಮೀ. ಗಿಂತಲೂ ಹೆಚ್ಚು ದೂರದ ಹಾಸನ , ಮಡಿಕೇರಿ FMಗಳೂ ಸ್ಪಷ್ಟವಾಗಿ ಕೇಳಿಸುತ್ತವೆ.

ನಿಮ್ಮ ವೃತ್ತಿ ಜೀವನ, ಕಲಾಜೀವನದ ಅನುಭವಗಳನ್ನು ಹಂಚಿಕೊಂಡಿದ್ದೀರಿ.  ರೇಡಿಯೋ ಸಾರಂಗ್ ವತಿಯಿಂದ ನಿಮಗೆ ವಂದನೆಗಳು.

ನಿಮಗೂ ವಂದನೆಗಳು.

ಕೇಳುಗರು ಏನಂದ್ರು

29-5-2015ರಂದು ಸಾರಂಗ ಸಂಗಮದಲ್ಲಿ ಪ್ರಸಾರವಾದ  ರೇಡಿಯೊ ಕೇಳುಗರ ಕೆಲವು ಅನಿಸಿಕೆಗಳು ಇಲ್ಲಿವೆ.





Thursday 21 May 2015

ಮೋಜಿನ ಮೋಟರು ಗಾಡಿ


     
ಆರ್.ಎನ್.ಜಯಗೋಪಾಲ್ ಅವರು ಯೌವನವನ್ನು ಮೋಜಿನ ಮೋಟರು ಗಾಡಿಗೆ ಹೋಲಿಸಿ ಬರೆದಿರುವ ಈ ಹಾಡು 1963ರಲ್ಲಿ ತಮ್ಮ ತಂದೆ ಆರ್. ನಾಗೇಂದ್ರ ರಾವ್ ನಿರ್ಮಿಸಿದ  ಆನಂದ ಬಾಷ್ಪ ಚಿತ್ರದ್ದು. ಹಾಡಿದವರು ಪಿ.ಬಿ.ಶ್ರೀನಿವಾಸ್ ಮತ್ತು ಸಂಗಡಿಗರು. ಒಂದೆರಡು ಕಡೆ ಪೀಠಾಪುರಂ ನಾಗೇಶ್ವರ ರಾವ್ ಧ್ವನಿಯನ್ನೂ ಕೇಳಿದಂತಾಗುತ್ತದೆ. ಕಣ್ಣು ಮುಚ್ಚಿ ಕೇಳಿದರೂ ಚಲಿಸುವ ಮೋಟರು ಗಾಡಿಯ ದೃಶ್ಯವನ್ನು ಕಣ್ಣೆದುರಿಗೆ ತರುವಂತಹ ಲವಲವಿಕೆಯ ಸಂಗೀತ ಸಂಯೋಜಿಸಿದವರು ಜಿ.ಕೆ.ವೆಂಕಟೇಶ್.  ಟ್ರಂಪೆಟ್, ಮ್ಯಾಂಡೊಲಿನ್, ಪಿಕೊಲೊ ಫ್ಲೂಟ್, ಕ್ಲಾರಿನೆಟ್, ಗಿಟಾರ್, ವಯೊಲಿನ್ಸ್, ಕೋರಸ್, ಬೊಂಗೊಗಳ ಅದೆಂತಹ crisp combination, ಧ್ವನಿಮುದ್ರಣದಲ್ಲಿ ಅದೆಂತಹ ಸ್ಪಷ್ಟತೆ! ವೇಗದ ಹಾಡು. ಆದರೆ ಅಬ್ಬರ ಇಲ್ಲ, ಕಿರಿಚಾಟ ಇಲ್ಲ.  ಒಂದು ಕಾಲದಲ್ಲಿ ರೇಡಿಯೊದಲ್ಲಿ ಆಗಾಗ ಕೇಳಿ ಬರುತ್ತಿದ್ದ ಈ ಹಾಡು ಈಗ ಯಾಕೋ ಅಜ್ಞಾತ ವಾಸ ಅನುಭವಿಸುತ್ತಿರುವಂತಿದೆ.

ಸೂಕ್ಷ್ಮವಾಗಿ ಸಾಹಿತ್ಯವನ್ನು ಗಮನಿಸಿದರೆ ಜಯಗೋಪಾಲ್ ಅವರು ಎಷ್ಟು ಚೆನ್ನಾಗಿ ಯೌವನವನ್ನು ಮೋಟರಿನೊಂದಿಗೆ ಸಮೀಕರಿಸಿದ್ದಾರೆ ಅನ್ನಿಸದಿರದು. ಪಲ್ಲವಿಯಲ್ಲಿ ವಿವರಿಸಿದಂತೆ ಯೌವನವು ಒಮ್ಮೆ ಅತ್ತ ಒಮ್ಮೆ ಇತ್ತ ವಾಲುತ್ತಲಿರುವ ಚಂಚಲತೆಯ ಪ್ರತೀಕವೇ ಅಲ್ಲವೇ.  ಹೆತ್ತವರು, ಗುರು ಹಿರಿಯರು ಸೂಕ್ತ ಮಾರ್ಗದರ್ಶನ ನೀಡಿ ನೂಕಿದರೆ ಮಾತ್ರ ಯೌವನದ ತೇರು ಸರಿಯಾದ ದಾರಿಯಲ್ಲಿ ಸಾಗೀತು, ಕೆಲವೊಮ್ಮೆ ಹುಚ್ಚು ಹುಮ್ಮಸ್ಸಿನ  ಗೇರು ಕೈಕೊಟ್ಟರೂ ಛಲದಿಂದ ಮುನ್ನಡೆದರೆ ಕಷ್ಟ ಕಾರ್ಪಣ್ಯಗಳ ಏರು ಪೇರು ಲೆಕ್ಕಿಸದೆ ಯಶಸ್ಸೆಂಬ ಊರು ಸೇರೀತು ಅನ್ನುತ್ತದೆ ಮೊದಲ ಚರಣ.  ಎರಡನೆ ಚರಣದಲ್ಲಿ  ಸರಿ ತಪ್ಪುಗಳನ್ನು ಅರಿತು ನೇರ ದಾರಿಯಲ್ಲಿ ಸಾಗಿದರೆ ಇದು ಉಲ್ಲಾಸಮಯ ಪಯಣವಾದೀತು, ಯೌವನಕ್ಕೆ ಯಾವುದೇ ಬ್ರೇಕು ಇಲ್ಲ, ಹುಚ್ಚು ಕುದುರೆಯಂಥ ಓಟವನ್ನು ವಿವೇಕಯುತ ಕೌಶಲ್ಯ ಉಪಯೋಗಿಸಿ ನಿಯಂತ್ರಿಸದಿದ್ದರೆ ಪ್ರಪಾತಕ್ಕೆ ಬೀಳಬೇಕಾದೀತು ಎಂಬ ಎಚ್ಚರಿಕೆ ಇದೆ.  



ನಿಜದೆ ಯೌವನ ಮೋಜಿನ ಮೋಟರು ಗಾಡಿ
ಅದರ ಗಾಲಿಯು ಉರುಳೊ ರೀತಿಯ ನೋಡಿ
ಈ ಕಡೆ ಆ ಕಡೆ ವಾಲುತೆ ಓಡಿದೆ

ನೂಕಿದರೆ ತಾ ಸಾಗುವ ತೇರು
ಸಮಯದಲಿ ಕೈ ಕೊಡುವುದು ಗೇರು
ಲೆಕ್ಕಿಸದು ಇದು ಏರು ಪೇರು
ಸೇರುವುದು ಊರು
ನೀರು ನೀರು ನೀರು

ಬಲ್ಲವಗೆ ಈ ಓಟವೆ ಜೋಕು
ನಿಲ್ಲಿಸಲು ಇದಕಿಲ್ಲ ಬ್ರೇಕು
ಓಡಿಸಲು ಇರಬೇಕು knackಉ
ಇಲ್ಲದಿರೆ shockಉ
ಸಾಕು ಸಾಕು ಸಾಕು


ಈ ಹಾಡಿನ ವೀಡಿಯೊ ಎಲ್ಲೂ ಲಭ್ಯವಿಲ್ಲ.  ಹಾಗಾಗಿ ಹಿಂದಿಯ ಹಾಡೊಂದರ  ವಿಡಿಯೊಗೆ super impose ಮಾಡಿದ ನನ್ನ ಪ್ರಯೋಗವೊಂದು ಇಲ್ಲಿದೆ. 



Saturday 3 January 2015

ಹೂಮಳೆಯ ಹಿಂದಿ ಹಾಡು


  • ನಾನು 6ನೇ ಕ್ಲಾಸಲ್ಲಿ ಓದುತ್ತಿರುವಾಗ  ನಮ್ಮ ಮನೆಗೆ ರೇಡಿಯೊ ಆಗಮನವಾಯಿತು.  ಅಂದಿನಿಂದಲೇ ಹಾಡುಗಳೊಂದಿಗಿನ ನನ್ನ ನಂಟೂ ಗಾಢವಾಗುತ್ತ ಸಾಗಿತು. ಆಗ ವಾರಕ್ಕೆ ಏಳೆಂಟಾದರೂ ಹೊಸ ಕನ್ನಡ-ಹಿಂದಿ ಹಾಡುಗಳು ಕಿವಿಗೆ ಬೀಳುತ್ತಿದ್ದವು.   ದಿನವೂ ಮತ್ತೆ ಮತ್ತೆ ಕೇಳುತ್ತ ಅವುಗಳಲ್ಲಿ ಒಂದಷ್ಟು ಒಳ್ಳೆಯ ಹಾಡುಗಳ ಪಟ್ಟಿಗೆ ಸೇರಿದರೆ ಇನ್ನು ಕೆಲವು ಸುಮಾರಾದ ಹಾಡುಗಳೆನ್ನಿಸಿಕೊಳ್ಳುತ್ತಿದ್ದವು. ಮೊದಲ ಸಾರಿ ಕೇಳುತ್ತಲೇ ನನ್ನ ಒಳ್ಳೆಯ ಹಾಡುಗಳ ಪಟ್ಟಿಯಲ್ಲಿ ಉನ್ನತ ಸ್ಥಾನ ಗಳಿಸಿದ  ಮತ್ತು ಇವತ್ತಿಗೂ ಅದೇ ಸ್ಥಾನವನ್ನು ಉಳಿಸಿಕೊಂಡಿರುವ ಹಾಡುಗಳು ಇದು ವರೆಗೆ ಎರಡು ಮಾತ್ರ. ಒಂದು ತಾಜ್  ಮಹಲ್ ಚಿತ್ರದ ಜೊ ವಾದಾ ಕಿಯಾ ವೊ ನಿಭಾನಾ ಪಡೇಗಾ ಮತ್ತು ಇನ್ನೊಂದು ಈಗ ನಾನು ಉಲ್ಲೇಖಿಸಲು ಹೊರಟಿರುವ ಸೂರಜ್ ಚಿತ್ರದ ಬಹಾರೊ ಫೂಲ್ ಬರಸಾವೊ ಹಾಡು. 

  • ಸೂರಜ್ ಚಿತ್ರ ಬಂದದ್ದು ನಾವು ಹತ್ತನೇ ತರಗತಿಯಲ್ಲಿದ್ದಾಗ.  ಇದರ ಹಾಡುಗಳೆಲ್ಲವೂ ನಮ್ಮ ಗೆಳೆಯರ ಬಳಗದಲ್ಲಿ ಅತಿ ಜನಪ್ರಿಯ.  ರೇಡಿಯೊ ಸಿಲೋನಿನಲ್ಲಿ ಚಲನ ಚಿತ್ರಗಳ ಪ್ರಚಾರಕ್ಕಾಗಿ 15 ನಿಮಿಷಗಳ ರೇಡಿಯೋ ಪ್ರೋಗ್ರಾಂಗಳು ಪ್ರಸಾರವಾಗುತ್ತಿದ್ದುದು ಅನೇಕರಿಗೆ ನೆನಪಿರಬಹುದು.  ಸಾಮಾನ್ಯವಾಗಿ ಅವುಗಳಲ್ಲಿ ಚಿತ್ರದ ಇತರ ವಿವರಗಳಿಗೆ ಪ್ರಾಧಾನ್ಯ ನೀಡಿ ಹಾಡುಗಳ ತುಣುಕುಗಳನ್ನು ಮಾತ್ರ ಕೇಳಿಸುವುದು ವಾಡಿಕೆಯಾಗಿತ್ತು. ಆದರೆ ಸೂರಜ್ ಚಿತ್ರದ ಹಾಡುಗಳು ಎಷ್ಟು ಪ್ರಭಾವಶಾಲಿಯಾಗಿದ್ದವು ಅಂದರೆ ಅದರ ರೇಡಿಯೋ ಪ್ರೋಗ್ರಾಂನಲ್ಲಿ ಬೇರೇನೂ ಹೇಳದೆ "ಆಪ್ ಸೂರಜ್ ಕಾ ಸಂಗೀತ್ ಸುನ್ ರಹೇ ಹೈಂ" ಎಂದು ಮಾತ್ರ ಹೇಳಿ ಬರೀ ಹಾಡುಗಳನ್ನು ಮಾತ್ರ ಕೇಳಿಸುತ್ತಿದ್ದರು!  ಈ ಚಿತ್ರದ ಪದ್ಯಾವಳಿಯು ಹಾಲು ಕಾಗದದಲ್ಲಿ ಮುದ್ರಣಗೊಂಡು ಪಂಚವರ್ಣ ಚಿತ್ರಗಳನ್ನು ಹೊಂದಿತ್ತು.  ಅದರಲ್ಲಿದ್ದಂತೆ ನಾವು ಈ ಹಾಡನ್ನು ಬಹಾರೊಂ ಫೂಲ್ ಬರ್‍ಸಾವೊ ಎಂದೇ ಹಾಡಿಕೊಳ್ಳುತ್ತಿದ್ದೆವು.  ಅನೇಕ ವರ್ಷಗಳ ನಂತರ ಯಾವುದೋ ಸಂದರ್ಭದಲ್ಲಿ ಅಮೀನ್ ಸಯಾನಿ  "ಬರೆಯುವಾಗ ಬಹಾರೊಂ ಎಂದಿದ್ದರೂ ಅದನ್ನು ಬಹಾರೊ ಎಂದೇ ಉಚ್ಚರಿಸಬೇಕು" ಎಂದು ಹೇಳಿದ ಮೇಲೆಯೇ ನಾನು ಹಾಡಿನಲ್ಲಿ ಆ ಶಬ್ದದ ಉಚ್ಚಾರವನ್ನು ಗಮನವಿಟ್ಟು ಕೇಳಿ ತಪ್ಪನ್ನು ಸರಿಪಡಿಸಿಕೊಂಡದ್ದು.

  • ಸಾಮಾನ್ಯವಾಗಿ ವಿಷಾದದ ಛಾಯೆಯ ಹಾಡುಗಳಿಗೆ ಹೇಳಿಸಿದಂತಿರುವ ಮಿಶ್ರ ಶಿವರಂಜಿನಿ ರಾಗಾಧಾರಿತ ಬಹಾರೊ ಫೂಲ್ ಬರಸಾವೊ ಹಾಡು ಶಂಕರ್ ಜೈಕಿಶನ್ ಕೈ ಚಳಕದಿಂದ ಒಂದು ರೊಮ್ಯಾಂಟಿಕ್  ಗೀತೆಯಾಗಿ ಹೊರ ಹೊಮ್ಮಿದ ಪರಿ ಅದ್ಭುತ.  ಸಂದರ್ಭೋಚಿತ ವಾದ್ಯಗಳನ್ನೊಳಗೊಂಡ ಅವರ massive orchestra, ಸೂಕ್ತ ಲಯ, ಹಸರತ್ ಜೈಪುರಿ ಅವರ ಸರಳ ಸಾಹಿತ್ಯ ಹಾಗೂ ಕಪ್ಪು 4ರ ಏರು ಶ್ರುತಿಯಲ್ಲಿ ರಫಿಯ ಶ್ರೇಷ್ಠ ಗಾಯನ ಇದನ್ನು ಸಾಧ್ಯವಾಗಿಸಿದವು.  ದೋಸ್ತ್ ದೋಸ್ತ್ ನ ರಹಾ, ದಿಲ್ ಕೆ ಝರೋಖೆ ಮೆ ತುಝ್ ಕೊ ಬಿಠಾಕರ್, ಜಾನೆ ಕಹಾಂ ಗಯೇ ವೊ ದಿನ್ ಮುಂತಾದ ಹಾಡುಗಳಲ್ಲೂ ಶಂಕರ್ ಜೈಕಿಶನ್ ಅವರು ಶಿವರಂಜಿನಿಯನ್ನೇ  ಬಳಸಿದ್ದರೂ ಈ ಹಾಡುಗಳ ಬಣ್ಣಗಳು ವಿಭಿನ್ನ.  ಯಾವುದೇ ರಾಗವನ್ನು ಯಾವುದೇ ಮೂಡಿನ ಹಾಡಿಗೆ ಹೊಂದಿಸಿಕೊಳ್ಳುವ ಚಾಕಚಕ್ಯತೆ ಶಂಕರ್ ಜೈಕಿಶನ್ ಅವರಲ್ಲಿತ್ತು.  ಅವರ ಮೊದಲ ಚಿತ್ರ ಬರ್‍ಸಾತ್‍ನ ಒಂದೆರಡು ಹಾಡು ಹೊರತು ಪಡಿಸಿ ಎಲ್ಲವೂ  ಭೈರವಿ ರಾಗವನ್ನೇ ಆಧರಿಸಿದ್ದರೂ  ಒಂದರಂತೆ ಇನ್ನೊಂದು ಇರದೇ ಇದ್ದುದು ಅವರ ಪ್ರತಿಭೆಗೆ ಸಾಕ್ಷಿ.

  • ಹಳೆಯ ಜನಪ್ರಿಯ ಸಿನಿಮಾ ಗೀತೆಗಳನ್ನು ಹೇಗೆ ಹಾಡಿದರೂ ಅವುಗಳನ್ನು ಇಷ್ಟ ಪಡುವವರಿಗೆ ಚೆನ್ನಾಗಿಯೇ ಕೇಳಿಸುತ್ತವೆ.  ನಮ್ಮ ಮನಸ್ಸು ಅವುಗಳನ್ನು auto correction ಮಾಡಿಕೊಂಡು ಮೂಲ ಹಾಡಿಗೆ ಸಮೀಕರಿಸಿಕೊಳ್ಳುವುದು ಇದಕ್ಕೆ ಕಾರಣ ಇರಬಹುದು. ಆದರೆ ಶಂಕರ್ ಜೈಕಿಶನ್ ಅವರ ಸ್ಟುಡಿಯೊ ಆರ್ಕೆಸ್ಟ್ರಾದ ಉಠಾವ್ ಇಲ್ಲದೆ ಈ ಬಹಾರೊ ಫೂಲ್ ಬರಸಾವೊ ಹಾಡನ್ನು  ಸ್ವತಃ ರಫಿಯೇ  ಹಾಡಿದರೂ  ಅದು ಶಿವರಂಜಿನಿಯ ವಿಷಾದದ ಛಾಯೆಯನ್ನಷ್ಟೇ ಹೊಮ್ಮಿಸುತ್ತದೆಯೇ ಹೊರತು ಮೂಲ ಹಾಡಿನ ಹತ್ತಿರವೂ ಬರುವುದಿಲ್ಲ!  ನಿಧಾನ ಗತಿಯ ಲಯವಿದ್ದರಂತೂ ಇದು ಶೋಕ ಗೀತೆಯೇ ಆಗಿ ಬಿಡುತ್ತದೆ. ಇದಕ್ಕೆ ಪುರಾವೆಯಾಗಿ youtubeನಲ್ಲಿ ಲಭ್ಯವಿರುವ ಅವರ ಸ್ಟೇಜ್ ಕಾರ್ಯಕ್ರಮಗಳ ತುಣುಕುಗಳನ್ನು ಗಮನಿಸಬಹುದು.  ಹೀಗಿರುವಾಗ ಬೇರೆಯವರ ಪಾಡೇನು? ಆದರೂ ಅನೇಕರು ತಮಗೆ ಸರಿ ಎನ್ನಿಸಿದಂತೆ ಹಾಡಿ/ನುಡಿಸಿ ಈ ಹಾಡನ್ನು ಕೆಡಿಸಿದ ವೀಡಿಯೊಗಳೂ youtubeನಲ್ಲಿ ತುಂಬಾ ಇವೆ. ಬಹುಶಃ ಅತ್ಯಂತ ಹೆಚ್ಚು ಜನರಿಂದ ಕೆಡಿಸಲ್ಪಟ್ಟ  ಹಾಡು ಇದೇ ಇರಬಹುದು.

  • 1966ರ ಬಿನಾಕಾ ಗೀತ್ ಮಾಲಾ ವಾರ್ಷಿಕ ಕಾರ್ಯಕ್ರಮದಲ್ಲಿ ಚೋಟೀ ಕೀ ಪಾಯದಾನ್ ಅಂದರೆ ನಂಬರ್ ವನ್ ಸ್ಥಾನದಲ್ಲಿದ್ದ ಹಾಗೂ ರಫಿಗೆ ಶ್ರೇಷ್ಠ ಗಾಯಕ, ಶಂಕರ್-ಜೈಕಿಶನ್ ಅವರಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ಮತ್ತು ಹಸರತ್ ಜೈಪುರಿಗೆ ಶ್ರೇಷ್ಠ ಗೀತ ರಚನೆಕಾರ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು  ಕೊಡಿಸಿದ "ಹೂಮಳೆಗರೆ, ನನ್ನ ಪ್ರಿಯತಮೆ ಬಂದಿದ್ದಾಳೆ" ಎಂದು ಪ್ರಕೃತಿಗೆ ಆದೇಶ ನೀಡುವ ಈ ಹಾಡಿನ ಸಾಹಿತ್ಯ ಹಾಗೂ original ರಫಿ version ಇಲ್ಲಿವೆ.


ಬಹಾರೊ ಫೂಲ್ ಬರಸಾವೊ
ಮೆರಾ ಮೆಹಬೂಬ್ ಆಯಾ ಹೈ
ಮೆರಾ ಮೆಹಬೂಬ್ ಆಯಾ ಹೈ
ಹವಾವೊ ರಾಗನೀ ಗಾವೊ
ಮೆರಾ ಮೆಹಬೂಬ್ ಆಯಾ ಹೈ
ಮೆರಾ ಮೆಹಬೂಬ್ ಆಯಾ ಹೈ
ಬಹಾರೊ ಫೂಲ್ ಬರಸಾವೊ
ಮೆರಾ ಮೆಹಬೂಬ್ ಆಯಾ ಹೈ

ಓ  ಲಾಲಿ ಫೂಲ್ ಕಿ ಮೆಹೆಂದಿ
ಲಗಾ ಇನ್ ಗೋರೆ ಹಾಥೊಂ ಮೆ
ಉತರ್ ಆ ಎ ಘಟಾ ಕಾಜಲ್
ಲಗಾ ಇನ್ ಪ್ಯಾರಿ ಆಂಖೊ ಮೆ
ಸಿತಾರೊ ಮಾಂಗ್ ಭರ್ ಜಾವೊ
ಮೆರಾ ಮೆಹಬೂಬ್ ಆಯಾ ಹೈ
ಮೆರಾ ಮೆಹಬೂಬ್ ಆಯಾ ಹೈ

ನಜಾರೊ ಹರ್ ತರಫ್ ಅಬ್
ತಾನ್ ದೊ ಎಕ್ ನೂರ್ ಕೀ ಚಾದರ್
ಬಡಾ ಶರ್ಮೀಲಾ ದಿಲಬರ್ ಹೈ
ಚಲಾ ಜಾಯೆ ನ ಶರಮಾ ಕರ್
ಜರಾ ತುಮ್ ದಿಲ್ ಕೊ ಬಹಲಾವೊ
ಮೆರಾ ಮೆಹಬೂಬ್ ಆಯಾ ಹೈ
ಮೆರಾ ಮೆಹಬೂಬ್ ಆಯಾ ಹೈ

ಸಜಾಯೀ ಹೈ ಜವಾಂ ಕಲಿಯೊ ನೆ
ಅಬ್ ಯೆ ಸೇಜ್ ಉಲ್ಫತ್ ಕೀ
ಇನ್ಹೆ ಮಾಲೂಮ್ ಥಾ ಆಯೇಗಿ
ಎಕ್ ದಿನ್ ಋತು ಮೊಹಬ್ಬತ್ ಕೀ
ಫಜಾವೊ ರಂಗ್ ಬಿಖರಾವೊ
ಮೆರಾ ಮೆಹಬೂಬ್ ಆಯಾ ಹೈ
ಮೆರಾ ಮೆಹಬೂಬ್ ಆಯಾ ಹೈ
ಬಹಾರೊ ಫೂಲ್ ಬರಸಾವೊ
ಮೆರಾ ಮೆಹಬೂಬ್ ಆಯಾ ಹೈ





ಎಷ್ಟೋ ಜನರು ಈಗಾಗಲೆ ಅನೇಕ ಬಾರಿ ಕೆಡಿಸಿರುವ ಈ ಹಾಡನ್ನು ನಾನೂ ಯಾಕೆ ಒಮ್ಮೆ ಕೆಡಿಸಬಾರದೆಂದು ಸಿದ್ಧ ಟ್ರಾಕ್‍ ಮತ್ತು ಶಂಕರ್ ಜೈಕಿಶನ್ ಅವರ ಮೂಲ ಆರ್ಕೆಸ್ಟ್ರಾ ತುಣುಕುಗಳ ಸಂಯೋಜನೆಯೊಂದಿಗೆ ಕೊಳಲಿನಲ್ಲಿ ನುಡಿಸಿರುವ ವರ್ಷನ್ ಒಂದು ಇಲ್ಲಿದೆ. 

 

ಇದೇ ಧಾಟಿಯಲ್ಲಿ ಇಂಗ್ಲಿಷ್ ಹಾಡೊಂದಿದ್ದರೆ ಹೇಗಿರಬಹುದೆಂಬ ಕುತೂಹಲವಿದೆಯೇ .   ಹಾಗಿದ್ದರೆ ಇದನ್ನು ಆಲಿಸಿ. ಯಾರು ಹಾಡಿದ್ದೆಂದು ಗುರುತಿಸಿ.  ಇಂಗ್ಲಿಷ್ ಸಾಹಿತ್ಯ ರಚಿಸಿದವರು ಬಾವರ್ಚಿಯ ಬಾಬೂಜಿ ಹರೀಂದ್ರನಾಥ ಚಟ್ಟೋಪಾಧ್ಯಾಯ.