Wednesday 11 April 2018

ತಾಯಿ ಕರುಳು : ಕಥೆ ವ್ಯಥೆ


ಒಂದೂರಿನಲ್ಲಿ ಒಬ್ಬ ರೈತ ಇದ್ದ.  ಆತನಿಗೆ ವಿವಿಧ ರೀತಿಯ ಗಿಡಗಳನ್ನು ನೆಟ್ಟು ಬೆಳೆಸುವುದೆಂದರೆ ಎಲ್ಲಿಲ್ಲದ ಆನಂದ.  ಒಂದು ದಿನ ಆತನ ಮನೆಗೆ ಸನ್ಯಾಸಿಯೊಬ್ಬ ಬಂದ.  ರೈತನು ಆತನನ್ನು ಉಪಚರಿಸಿ ಯಥಾ ಶಕ್ತಿ ಸತ್ಕರಿಸಿದ.  ಆತನ ಸತ್ಕಾರದಿಂದ ಪ್ರಸನ್ನನಾದ ಸನ್ಯಾಸಿಯು ಆತನಿಗೆ ಒಂಭತ್ತು  ಬೀಜಗಳನ್ನು ಕೊಟ್ಟು ‘ಇವುಗಳನ್ನು ನಿನ್ನ ತೋಟದಲ್ಲಿ ಬಿತ್ತಿ ಬೆಳೆಸು.  ಇವುಗಳ ಪೈಕಿ ಎರಡು  ಮೊಳೆತು ದೊಡ್ಡ ಮರಗಳಾಗಿ ಬೆಳೆದು ನಿರಂತರ ಫಲಗಳನ್ನು ನೀಡುವವು.  ಇನ್ನೊಂದು ಬೀಜವು ಕೆಲ ಕಾಲವಷ್ಟೇ ಬಾಳುವ ಹೂ ಗಿಡವಾಗುವುದು.  ಉಳಿದವು ಮೊಳಕೆಯೊಡೆದಂತೆ ಕಂಡು ಅಲ್ಲಿಯೇ ಒಣಗಿ ಹೋಗುವವು. ಕಾಲ ಕ್ರಮೇಣ ನಿನ್ನ ತೋಟವೇ ನಾಶವಾಗಿ ಹೋದರೂ ಆ ಎರಡು ಮರಗಳು ಫಲಗಳನ್ನು ನೀಡುತ್ತಲೇ ಇರುವವು’ ಎಂದು ಹೇಳಿ ತನ್ನ ದಾರಿ ಹಿಡಿದು ಹೋದನು.


ಚಂದಮಾಮದ ಕಥೆಗಳು ಹೀಗೆಯೇ ಇರುತ್ತಿದ್ದುದಲ್ಲವೇ.  1962ರಲ್ಲಿ ಜಿ.ವಿ ಅಯ್ಯರ್ ಅವರು ನಿರ್ಮಿಸಿ ನಿರ್ದೇಶಿಸಿದ ತಾಯಿ ಕರುಳು ಚಿತ್ರದ ಹಾಡುಗಳ ಕಥೆಯೂ ಇದನ್ನೇ ಹೋಲುತ್ತದೆ!  ಈಗ ಆ ಚಿತ್ರವೇ ನಾಶವಾಗಿ ಹೋಗಿದ್ದರೂ ಬಾ ತಾಯಿ ಭಾರತಿಯೆ ಮತ್ತು ದೂರದಿಂದ ಬಂದವರೆ ಹಾಡುಗಳು ನಿರಂತರ ಫಲ ನೀಡುವ ವೃಕ್ಷಗಳಾಗಿ ಈಗಲೂ ಕೇಳುಗರ ಮನ ತಣಿಸುತ್ತಿವೆ .  ತಾಯಿ ತಂದೆ ಇಬ್ಬರೂ ಎಂಬ ಹಾಡೊಂದು ಕೆಲ ಕಾಲ ಬಾಳಿದ ಹೂ ಗಿಡವಾಗಿ ಈಗ ಕಾಲಗರ್ಭ ಸೇರಿದೆ.  ಚಿತ್ರದಲ್ಲಿದ್ದ ಇನ್ನುಳಿದ ಆರು ಹಾಡುಗಳಾದ ಹೂವ ತರುವರ ಮನೆಗೆ, ಮನಸು ಮನಸು ಕಲೆತರೇನೆ, ನೆನ್ನೆಯಿಂದಿನ ನೆನಪಂತೆ, ಹೆಣ್ಣು ಹೊನ್ನು ಮಣ್ಣು, ನಸೀಬು ಖೋಟಾ ಆದ ಮೇಲೆ ಮತ್ತು ಶೃಂಗಾರ ಯಾರಿಗೆಂದು ಹೇಳಲೇನೆ - ಇವು  ಹೊರಗಿನ ಬೆಳಕನ್ನೇ ಕಾಣಲಿಲ್ಲ.  ಈ ಆರು ಹಾಡುಗಳ ಗಾನತಟ್ಟೆಗಳಾದರೂ ತಯಾರಾಗಿದ್ದವೋ ಇಲ್ಲವೋ ಎಂಬ ಸಂದೇಹ ನನಗಿದೆ. ಥಿಯೇಟರಿನಲ್ಲಿ ಚಿತ್ರ ನೋಡಿದ್ದವರ ಕಿವಿಗಷ್ಟೇ ಇವು ಬಿದ್ದಿರಬಹುದು.



ತಾಯಿ ಕರುಳು ಚಿತ್ರವು ಪ್ರಸಿದ್ಧ ಬಂಗಾಳಿ ಸಾಹಿತಿ ಹಾಗೂ ಚರ್ಮರೋಗ ತಜ್ಞ  ಡಾ|| ನಿಹಾರ್ ರಂಜನ್ ಗುಪ್ತಾ ಅವರ ಉಲ್ಕಾ ಎಂಬ ಕಾದಂಬರಿಯನ್ನಾಧರಿಸಿತ್ತು.  ಸಿರಿವಂತ ದಂಪತಿಗಳಿಬ್ಬರಿಗೆ ಬಹುಕಾಲದ ನಂತರ ಸಂತಾನವನ್ನು ಪಡೆಯುವ ಭಾಗ್ಯ ಒದಗಿ ಬರುತ್ತದೆ.  ತನ್ನಲ್ಲಿರುವುದೆಲ್ಲವೂ ಸುಂದರವಾಗಿಯೇ ಇರಬೇಕೆಂದು ಬಯಸುವ ಪತಿಗೆ ತಮಗೆ ಹುಟ್ಟಲಿರುವ ಮಗುವೂ ದಂತದ ಗೊಂಬೆಯಂತಿರಬೇಕೆಂಬ ಆಸೆ.  ಆದರೆ ದೈವೇಚ್ಛೆಯಂತೆ ವಿಕಾರ ಮುಖದ ಗಂಡು ಮಗು ಜನಿಸುತ್ತದೆ.  ಹೆರಿಗೆ ಬೇನೆಯಿಂದ ಬಸವಳಿದ ಪತ್ನಿ  ಎಚ್ಚರ ತಪ್ಪಿದ್ದ ವೇಳೆಯಲ್ಲಿ  ಕುಟುಂಬ ವೈದ್ಯನ ಆಕ್ಷೇಪವನ್ನು ನಿರ್ಲಕ್ಷಿಸಿ ಮಗುವನ್ನೆತ್ತಿಕೊಂಡು ಪತಿ ಹೊರ ನಡೆಯುತ್ತಾನೆ.  ಮಗುವನ್ನು ತ್ಯಜಿಸುವುದೇ ಆತನ ಉದ್ದೇಶವೆಂದು ಅರಿತ ಮನೆಯ ಕೆಲಸದಾಕೆ  ಆತನನ್ನು ತಡೆದು ಅದನ್ನು ತಾನು ಸಾಕುವುದಾಗಿ ಹೇಳುತ್ತಾಳೆ.  ಈ ರಹಸ್ಯ ಎಂದಿಗೂ ಬಯಲಾಗದಂತೆ ನೋಡಿಕೊಳ್ಳಬೇಕೆಂಬ ಷರತ್ತಿನ ಮೇಲೆ ಪತಿ ಇದಕ್ಕೊಪ್ಪುತ್ತಾನೆ. ಪತ್ನಿ ಎಚ್ಚರಗೊಂಡಾಗ ಮಗು ಹೊಟ್ಟೆಯಲ್ಲೇ ಸತ್ತು ಹುಟ್ಟಿತ್ತು ಎಂದು ಸುಳ್ಳು ಹೇಳುತ್ತಾನೆ.   ಆ ಮಗು ಬೆಳೆದು ದೊಡ್ಡವನಾಗಿ ಗಾಯನ, ವಾದನ, ಚಿತ್ರಕಲೆ, ಶಿಲ್ಪಕಲೆ ಎಲ್ಲವೂ ಮೇಳೈಸಿದ ಬಹುಮುಖಿ ಕಲಾವಿದನಾದ ಚಿತ್ರದ ನಾಯಕನಾಗಿ ರೂಪುಗೊಳ್ಳುತ್ತಾನೆ.  ಆತನ ಕಲೆಗೆ ಮಾರು ಹೋದ ವೈದ್ಯನ ಪುತ್ರಿ ಆತನಲ್ಲಿ ಅನುರಕ್ತಳಾಗುತ್ತಾಳೆ.  ಆ ಸಿರಿವಂತ ದಂಪತಿಗಳಿಗೆ ಹುಟ್ಟಿದ ಇನ್ನೊಬ್ಬ ಮಗ ದುಶ್ಚಟಗಳ ದಾಸನಾಗಿ ಬೆಳೆಯುತ್ತಾನೆ.  ಈ ರೀತಿ ಕಥೆ ಸಾಗಿ ಕೊನೆಗೆ ತ್ಯಜಿಸಲ್ಪಟ್ಟ ಮಗ ಮತ್ತು ತಂದೆ ತಾಯಿಗಳ ಮಿಲನವಾಗುತ್ತದೆ.  ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಮಾತಿನಂತೆ ತಾಯಿ ಕುರೂಪಿ ಮಗನನ್ನು ಸಂತೋಷದಿಂದ ಸ್ವಾಗತಿಸುತ್ತಾಳೆ.  ತಂದೆಯೂ ತಾನು ಅಂದು ಎಸಗಿದ ತಪ್ಪಿಗಾಗಿ ಪಶ್ಚಾತ್ತಾಪ ಪಡುತ್ತಾನೆ.  ಆರಂಭದಿಂದಲೂ ಒಡನಾಟವಿದ್ದ  ಕುಟುಂಬ ವೈದ್ಯನ    ಕೈಚಳಕದ ಪ್ಲಾಸ್ಟಿಕ್ ಸರ್ಜರಿ ಮೂಲಕ ಮುಖದ ವಿಕಾರವನ್ನು ಹೋಗಲಾಡಿಸಿಕೊಂಡ ನಾಯಕ ಆತನ ಮಗಳನ್ನು ಮದುವೆಯಾಗಿ ಎಲ್ಲರೂ ನೂರ್ಕಾಲ ಸುಖವಾಗಿ ಬಾಳುತ್ತಾರೆ. 

ಕಲ್ಯಾಣ್ ಕುಮಾರ್, ಉದಯ ಕುಮಾರ್,  ಅಶ್ವಥ್, ಬಾಲಕೃಷ್ಣ, ನರಸಿಂಹರಾಜು,  ವಂದನಾ, ಲೀಲಾವತಿ, ಎಂ.ವಿ.ರಾಜಮ್ಮ, ಪಾಪಮ್ಮ ಮುಂತಾದವರ ತಾರಾಗಣವಿದ್ದು ಜಿ.ಕೆ.ವೆಂಕಟೇಶ್ ಸಂಗೀತವಿದ್ದ ತಾಯಿ ಕರುಳು ಚಿತ್ರವು ತಾಯಿನ್ ಕರುಣೈ ಎಂಬ ಹೆಸರಲ್ಲಿ ತಮಿಳಲ್ಲಿಯೂ ತಯಾರಾಗಿತ್ತು.  ಕಲ್ಯಾಣ್ ಕುಮಾರ್, ಉದಯ ಕುಮಾರ್, ಎಂ.ವಿ.ರಾಜಮ್ಮ ತಮಿಳು ಅವತರಣಿಕೆಯಲ್ಲೂ ಇದ್ದರು. ಚಿತ್ರದಲ್ಲಿಡೀ ವಿರೂಪಗೊಂಡ ಮುಖದೊಂದಿಗೆ ಕಾಣಿಸಿಕೊಳ್ಳಲು ಸುಂದರಾಂಗ ನಟ ಕಲ್ಯಾಣ್ ಕುಮಾರ್ ಒಪ್ಪಿದ್ದು ವಿಶೇಷವೇ.  ಆದರೆ ಪ್ರೇಕ್ಷಕರಿಗೆ ಇರುಸು ಮುರುಸಾಗಬಾರದೆಂಬ ಉದ್ದೇಶದಿಂದ ಬಹುತೇಕ ದೃಶ್ಯಗಳಲ್ಲಿ ಪ್ಲಾಸ್ಟರ್ ಹಚ್ಚುವ ಮೂಲಕ ಮುಖದ ವಿರೂಪವನ್ನು ಮರೆಮಾಚಲಾಗಿದೆ.  ಸಿರಿವಂತ ದಂಪತಿಗಳ ಮನೆಯ ಅಡುಗೆಯವನಾಗಿ ನರಸಿಂಹರಾಜು ಮತ್ತು ಖಾರಾ ಬೂಂದಿ ಮಾರುತ್ತಾ   ಸಿರಿವಂತನಾಗಿ ಹೋಟೇಲ್ ಮಾಲೀಕನಾಗುವ ವ್ಯಕ್ತಿಯ ಪಾತ್ರದಲ್ಲಿ ಬಾಲಕೃಷ್ಣ ರಂಜನೀಯವಾಗಿ ಅಭಿನಯಿಸಿದ್ದರು ಎಂದು ಪತ್ರಿಕೆಯೊಂದರಲ್ಲಿ ಓದಿದ ನೆನಪಿದೆ.  ತಮಿಳು ಅವತರಣಿಕೆಯಲ್ಲಿ ಈ ಪಾತ್ರಗಳನ್ನು ಬೇರೆಯವರು ನಿರ್ವಹಿಸಿದ್ದಾರೆ. ತಾಯಿ ಕರುಳು ಚಿತ್ರದ ಪ್ರಿಂಟ್ ಆಗಲೀ ವೀಡಿಯೋ ಆಗಲಿ ಇಲ್ಲದಿದ್ದರೂ ಸಾಕಷ್ಟು ಉತ್ತಮ ಸ್ಥಿತಿಯಲ್ಲಿರುವ ತಾಯಿನ್ ಕರುಣೈ ವಿಡಿಯೋ ವೀಕ್ಷಣೆಗೆ ಲಭ್ಯವಿದೆ.  ಹಳತನ್ನು ಕಾಪಿಟ್ಟುಕೊಳ್ಳುವುದರಲ್ಲಿ ನಮಗಿಂತ ಇತರ ಭಾಷೆಗಳವರು ತುಂಬಾ ಮುಂದಿದ್ದಾರೆ ಅನ್ನುವುದಕ್ಕೆ ಇದು ಒಂದು ಸಾಕ್ಷಿ. ಇದೇ ರೀತಿ ಕನ್ನಡದಲ್ಲಿಲ್ಲದ ಸ್ಕೂಲ್ ಮಾಸ್ಟರ್ ಪ್ರಿಂಟ್ ಹಿಂದಿಯಲ್ಲಿ ಇದೆ, ಆದರ್ಶ ಸತಿ ಚಿತ್ರ ನಾಗುಲ ಚವಿತಿ ಹೆಸರಲ್ಲಿ ತೆಲುಗಿನಲ್ಲಿದೆ.    ಪ್ರಿಂಟ್ ಲಭ್ಯವಿಲ್ಲದಿದ್ದರೂ ಈ ತಾಯಿ ಕರುಳು, ಆನಂದ ಬಾಷ್ಪ, ಪತಿಯೇ ದೈವ, ಅಮರಜೀವಿ  ಇತ್ಯಾದಿ ಚಿತ್ರಗಳ ಕೆಲವು ಹಾಡುಗಳಾದರೂ ಆಲಿಸಲು ಸಿಗುತ್ತವೆ. ಆದರೆ 60ರ ದಶಕದ ಕೆಲ ಚಿತ್ರಗಳಾದ ಬಂಗಾರಿ, ಲಾಯರ್ ಮಗಳು, ಕಲಿತರೂ ಹೆಣ್ಣೇ, ಮಂಗಳ ಮುಹೂರ್ತ ಮುಂತಾದ ಎಷ್ಟೋ ಚಿತ್ರಗಳ ಪ್ರಿಂಟೂ ಇಲ್ಲ ಹಾಡುಗಳೂ ಇಲ್ಲ.

1963ರಲ್ಲಿ ನಿಹಾರ್ ರಂಜನ್ ಗುಪ್ತಾ ಅವರ ಇದೇ ಕಥೆಯನ್ನಾಧರಿಸಿ ಹಿಂದಿಯಲ್ಲಿ ಮೇರಿ ಸೂರತ್ ತೇರಿ ಆಂಖೆಂ ತಯಾರಾಯಿತು.  ಅಲ್ಲಿ ದಂಪತಿಗಳು ತ್ಯಜಿಸಿದ ಕುರೂಪಿ ಮಗುವನ್ನು ಕೆಲಸದಾಕೆಯ ಬದಲು ಬಡ ಮುಸ್ಲಿಂ ದಂಪತಿಗಳು ಸಾಕಿಕೊಳ್ಳುತ್ತಾರೆ.  ಆ ಚಿತ್ರದ ಪೂಛೋನ ಕೈಸೆ ಮೈನೆ ರೈನ್ ಬಿತಾಯಿ ಹಾಡು ಇಂದಿಗೂ ಬಲು ಜನಪ್ರಿಯ.  ರಾಜ್ ಕಪೂರ್ ನಿರ್ಮಿಸಿದ  ಪ್ರಥಮ ಚಿತ್ರ ಆಗ್ ಮತ್ತು 70ರ ದಶಕದಲ್ಲಿ ನಿರ್ಮಿಸಿದ ಸತ್ಯಂ ಶಿವಂ ಸುಂದರಂ ಕೂಡ ವಿರೂಪಗೊಂಡ ಮುಖದ ಸುತ್ತ ಹೆಣೆದ ಕಥೆ ಹೊಂದಿದ್ದವು.  

ತಾಯಿ ಕರುಳು ಚಿತ್ರದ ಎರಡು ಚಿರಂಜೀವಿ ಹಾಡುಗಳ ಪೈಕಿ ಪಿ.ಬಿ.ಎಸ್ ಅವರ ever green hit  ಬಾ ತಾಯಿ ಭಾರತಿಯೆ  ಬಗ್ಗೆ ಏನೂ ಹೇಳಬೇಕಾದ ಅಗತ್ಯವೇ ಇಲ್ಲ.  ಅದನ್ನು ನಾನಿಲ್ಲಿ ಕೇಳಿಸಬೇಕಾಗಿಯೂ ಇಲ್ಲ.  ಸಾಮಾನ್ಯವಾಗಿ ಇಂತಹ ಕ್ಲಾಸಿಕ್ ಹಾಡುಗಳು ಮೊದಲು ಅಷ್ಟೊಂದು ಸದ್ದು ಮಾಡದೆ ಕಾಲ ಕ್ರಮೇಣ ಜನಮನವನ್ನು ಆಕ್ರಮಿಸಿ ಶಾಶ್ವತವಾಗಿ ನೆಲೆಗೊಳ್ಳುತ್ತವೆ.  ಆದರೆ ಇದು ಅದಕ್ಕೆ ಅಪವಾದ.  1962ರಲ್ಲಿ ಬಿಡುಗಡೆಯಾದ ತಕ್ಷಣವೇ ಜನರ ನಾಲಗೆಯಲ್ಲಿ ನಲಿದಾಡತೊಡಗಿ ಜನಪ್ರಿಯತೆಯ ತುತ್ತತುದಿಗೇರಿಬಿಟ್ಟಿತ್ತು.  ಆ ಸಲ ವಾರ್ಷಿಕ ರಜೆಯಲ್ಲಿ ನಾನು ಅಜ್ಜನ ಊರಿಗೆ ಹೋದಾಗ ಅಲ್ಲಿಯ ಜಾತ್ರೆಯ ಸಂದರ್ಭದಲ್ಲಿ ಆ ಹಳ್ಳಿಯ ವಾಲಗದವರು ಈ ಹಾಡು ನುಡಿಸುತ್ತಿದ್ದುದೇ ಇದಕ್ಕೆ ಪುರಾವೆ.  ಬಾ ತಾಯಿ ಭಾರತಿಯೆ ಹಾಡನ್ನು ನಾವೆಲ್ಲರೂ ಸಾವಿರಾರು ಬಾರಿ ಕೇಳಿರುವುದರಿಂದ ಒಂದು ಬದಲಾವಣೆಗಾಗಿ  ಪಿ.ಬಿ.ಎಸ್ ಅವರೇ ಹಾಡಿರುವ ಅದರ ತಮಿಳು ಅವತರಣಿಕೆಯನ್ನು ಈಗ ಕೇಳೋಣ.  ಕೊನೆಯಲ್ಲಿ ಎಸ್.ಜಾನಕಿ ಅವರೂ ಕೆಲವು ಸಾಲು ಹಾಡಿದ್ದಾರೆ.  ಕನ್ನಡ ಚಿತ್ರದಲ್ಲೂ ಅವರ ಧ್ವನಿಯ ಸಾಲುಗಳು ಇದ್ದಿರಬಹುದು.


ಎರಡನೇ ಅಮರ ಹಾಡು ದೂರದಿಂದ ಬಂದವರೇ.  ಇದು ಆಗಿನ್ನೂ ಕ್ಯಾಬರೆ ಗಾಯಕಿ ಎಂದು brand ಆಗಿರದ ಎಲ್.ಆರ್.ಈಶ್ವರಿ ಅವರ ಮೊದಲ super hit ಹಾಡು ಎಂದರೆ ತಪ್ಪಾಗಲಾರದು. ನೀವಿಲ್ಲಿ ಬರುವ ಮೊದಲು ಇವರೆನ್ನ ಗೆಳತಿಯರು ನೀವು ಬಂದೊಡನಿವರು ಆಗಿಹರು ಸವತಿಯರು ಇತ್ಯಾದಿ ಸಾಲುಗಳುಳ್ಳ ಈ ಹಾಡಿನ ಸನ್ನಿವೇಶ ಚಿತ್ರದಲ್ಲಿ ಏನಿದ್ದಿರಬಹುದೆಂಬ ಕುತೂಹಲ ನನಗಿತ್ತು. ಥಿಯೇಟರಲ್ಲಿ ಈ ಚಿತ್ರ ನೋಡುವ ಅವಕಾಶ ನನಗೆ ದೊರೆತಿರಲಿಲ್ಲ.  ಈಗ ನೋಡೋಣವೆಂದರೆ ವೀಡಿಯೊ ಇಲ್ಲ.  ಕೊನೆಗೆ ಈ  ಚಿತ್ರದ ತಮಿಳು ಅವತರಣಿಕೆಯ ಬಗ್ಗೆ ಸುಳಿವು ದೊರೆತು ಅದನ್ನು ನೋಡಿದಾಗ ಅಲ್ಲೂ ಇದನ್ನು ಹೋಲುವ ಹಾಡಿರುವುದು ತಿಳಿಯಿತು.  ಆ ವಿಡಿಯೋಗೆ ಕನ್ನಡ ಹಾಡು ಅಳವಡಿಸಿದಾಗ ಬಲು ಚೆನ್ನಾಗಿ ಹೊಂದಿಕೆಯಾಯಿತು.  ನಿಮಗಾಗಿ ಆ ಸಂಯೋಜಿತ ವೀಡಿಯೊ ಇಲ್ಲಿದೆ.

ದೂರದಿಂದ ಬಂದವರೇ ಬಾಗಿಲಲಿ ನಿಂದವರೇ
ಮಂದಿರವು ಚೆನ್ನಿದೆಯೇ ಆರಾಮವಾಗಿದೆಯೇ

ಯಾವುದು ಎಲ್ಲಿದೆ ಎಂಬುದ ತಿಳಿಯದೆ
ಯೋಚಿಸಬೇಡಿ ಬರುವೆನು ಓಡೋಡಿ
ಕವಿತೆ ಇಲ್ಲಿಹಳು ಕಲೆಗಾತಿ ಎದುರಿಹಳು
ಗಾನಕೋಕಿಲೆ ಇಲ್ಲಿ ಅವಿತುಕೊಂಡಿರುವಳು

ನಿಮ್ಮ ಕಂಡು ಒಬ್ಬರೂ ಹೊಸಬರೆಂದು ನಾಚರು
ಕರೆಯದೆ ಬರುವರು ನಿಮ್ಮೊಡನಾಡುವರು
ನೀವಿಲ್ಲಿ ಬರುವ ಮೊದಲು ಇವರೆನ್ನ ಗೆಳತಿಯರು
ನೀವು ಬಂದೊಡನಿವರು ಆಗಿಹರು ಸವತಿಯರು



ಇನ್ನು ಆ ಚಿತ್ರದ ಅಲ್ಪ ಕಾಲ ಬಾಳಿ ಅಳಿದ ಹಾಡು ಎಸ್. ಜಾನಕಿ ಮತ್ತು ಎ.ಪಿ. ಕೋಮಲ ಧ್ವನಿಗಳಲ್ಲಿರುವ ತಾಯಿ ತಂದೆ ಇಬ್ಬರೂ.  1963ರಲ್ಲಿ ನಮ್ಮ ಮನೆಗೆ ರೇಡಿಯೊ ಬಂದಾಗ ಹಿಂದಿ ವಿವಿಧಭಾರತಿಯ ದಕ್ಷಿಣ ಭಾರತೀಯ ಭಾಷಾ ಹಾಡುಗಳ ಮಧುರ್ ಗೀತಂ ಕಾರ್ಯಕ್ರಮದಲ್ಲಿ ದಿನನಿತ್ಯವೆಂಬಂತೆ  ಈ ಹಾಡು ಕೇಳಲು ಸಿಗುತ್ತಿತ್ತು.  ಗಾನ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದು ಸುದೀರ್ಘವಾಗಿರುವ ಇದನ್ನು ಹಾಗೆಯೇ ಆಲಿಸುವುದಕ್ಕಿಂತ ‘ದೇವಕಿ’ ಮತ್ತು ‘ಯಶೋದೆ’ಯರು ತಮ್ಮ ತಮ್ಮ ಮಕ್ಕಳನ್ನು ಬೆಳೆಸುವ ಪರಿಯನ್ನು ವಿಡಿಯೋ ರೂಪದಲ್ಲಿ ನೋಡುವುದು ಹೆಚ್ಚು ಖುಶಿ ನೀಡಬಹುದು ಎನ್ನಿಸಿತು. ಹೀಗಾಗಿ ನನ್ನ ಸಂಗ್ರಹದಲ್ಲಿದ್ದ ಆ ಹಾಡನ್ನೂ ಲಭ್ಯ ವಿಡಿಯೋಗೆ ಸಂಯೋಜಿಸಿದ್ದು ಹೀಗೆ.  ಸನಾದಿ ಅಪ್ಪಣ್ಣ ಚಿತ್ರದ ನಾನೆ ತಾಯಿ ನಾನೆ ತಂದೆ ಹಾಡಿನಲ್ಲಿ  ಇದರ ಛಾಯೆ ಸ್ವಲ್ಪ ಇದೆ ಅನ್ನಿಸುತ್ತದೆ.

ತಾಯಿ ತಂದೆ ಇಬ್ಬರೂ ಪಾಪ ನಿನ್ನ ದೇವರು
ನಿನ್ನ ಆಟ ಪಾಠಕೆ ಎನ್ನ ಪುಟ್ಟ ಕಾಣಿಕೆ

ಎನ್ನ ಚೆಲುವ ಗುಡಿಯೋ ನೀ ಮನೆಯ ಸಿಂಗಾರವೋ
ತಾಯ ಕರುಳ ಕುಡಿಯೋ ನೀ ಎನ್ನ ಜೀವ ನಿಧಿಯೋ

ಹೆತ್ತೊಡನೆ ಕಾಣುವೆ ನೀ ತಾಯ ಮೊಗವನು
ಅದ ಕಂಡು ಮನದಿ ಕಡೆವರೆಗೂ ಕಾಪಿಡೊ ಕಂದ
ತೆರೆದ ಮನವು ಹಿರಿದು ಅರಿವು ನಿನಗಿರೆ ಚಂದ
ನೀನರಸುತಿರುವ ದಾರಿಯಲ್ಲಿ ನಿಜ ಹಿಡಿ ಕಂದ

ಓದತಂದ ಪುಸ್ತಕವ ಹರಿಯಕೂಡದು
ಒಳ್ಳೆ ದಾರಿ ಬಿಟ್ಟು ಅಡ್ಡ ದಾರಿ ಹಿಡಿಯಕೂಡದು
ಗೆಳೆಯರ ನೀ ಒದೆವ ಆಟ ಆಡಬಾರದು
ತಾಯ ಕಣ್ಣ ಚುಚ್ಚುವಾಟ ಆಡಕೂಡದು

ನೊಂದೆದೆಯ ಮನುಜರ ನೋವಾರಿಸೆ ಚಂದ
ನೆರಳನೀವ ಮರವಾಗಿ ಬಾಳೆಲೊ ಕಂದ
ಎದೆಯೊಳಗೆ ತುಂಬ ಕರುಣೆ ನೆಲೆಸಿರಬೇಕು
ಕಣ್ಣಿನಲಿ ನಿಜದ ಬೆಳಕು ತುಂಬಿರಬೇಕು



ಮರೆಯಾದ 6 ಹಾಡುಗಳ ಪೈಕಿ ಮನಸು ಮನಸು ಕಲೆತರೇನೆ  ಎಂಬುದರ ಸಾಹಿತ್ಯ ಹಳೆ ಪುಸ್ತಕವೊಂದರಲ್ಲಿ ನನಗೆ ದೊರಕಿತು. ಸ ರಿ ಗ ಮ ಪ ದ ನಿ ಸ್ವರಗಳನ್ನು ವಿವಿಧ ವೃತ್ತಿಗಳಿಗೆ ಜೋಡಿಸಿದ ಇದು ಕೆಲವು ಅರ್ಥ ಹೀನ ಪದಗಳನ್ನು ಹೊಂದಿದ್ದು  ಏನೋ ಒಂದು ರೀತಿ ವಿಚಿತ್ರವಾಗಿದೆ ಅನ್ನಿಸಿತು.  ಕೇಳಲು  ಹೇಗಿತ್ತೋ ಏನೋ!  John Keats ಹೇಳಿದಂತೆ Heard melodies are sweet, but those unheard are sweeterಹೀಗಾಗಿ ಅನೇಕ ಸಲ ಕಲ್ಪನೆಯೇ ವಾಸ್ತವಕ್ಕಿಂತ ರಮ್ಯ.


ಮನಸು ಮನಸು ಕಲೆತರೇನೆ
ಮನಸು ಮನಸು ಕಲೆತರೇನೆ ಮನುಜ ಬಾಳು ಸುಖವು ತಾನೆ
ಸ್ವರಕೆ ಸ್ವರವು ಬೆರೆತರೇನೆ ಸಂಗೀತದ ಸವಿಯು ಶಾನೆ

ಸಾಗುವ ನೇಗಿಲಲಿ ಸಾ ಸಾ ಸಾ ಎಂಬ ಸ್ವರ
ರೂಪ ಕೊಡುವ ಗಾಲಿಯಲಿ ರೀ ರೀ ರೀ ಸ್ವರ
ಗಾರೆಗಾರ ಕರಣೆಯಲಿ ಗರ ಗರ ಗರ ಗಾ ಸ್ವರ
ಮಟ್ಟೆ ತಟ್ಟೆ ಕಮ್ಮಾರನ ಮಕಾರದೇ ಡಂಕಾರ

ಪಾಲು ಮಾರದಂತೆ ಕೊಯ್ವ ಗರಗಸದ ಪರ್ರಾಸರ
ದಾರ ಸೂಜಿ ಚಿಪ್ಪಿಗನ ಕೈ ಸೇರೆ ದರ್ರಾದರಾ
ನೀಡೆ ಜೋಡೆ ಚಮ್ಮಾರ ನಿರಂತರ ನಿರ್ರಾನಿರಾ

ಹಾಡು ಕೆಲವು ಆದರೇನು ಇರುವುದು ಏಳೇ ಸ್ವರ
ಭಾರತೀಯ ಕರುಳ ಕೂಗಲಿರುವುದು ಒಂದೇ ಸ್ವರ

* * *