Monday, 10 March 2025

ಸಮಾನ ಹಗಲು ರಾತ್ರಿ, ಶುದ್ಧ ಪೂರ್ವದಲ್ಲಿ ಸೂರ್ಯೋದಯ ಮತ್ತು ಶೂನ್ಯ ನೆರಳು.



ಮಾರ್ಚ್ 20ರ ವಸಂತ ವಿಷುವತ್ ಮತ್ತು
ಸಪ್ಟಂಬರ 22ರ ಶರದ್ ವಿಷುವತ್ ದಿನಗಳಂದು 23.5 ಡಿಗ್ರಿ ಬಾಗಿರುವ ಭೂಮಿಯ ಉತ್ತರ ಮತ್ತು ದಕ್ಷಿಣ ಭಾಗಗಳೆರಡೂ ಸೂರ್ಯನಿಂದ ಸಮಾನ ದೂರದಲ್ಲಿರುವುದರಿಂದ ಎಲ್ಲೆಡೆ ಅಂದು ಸಮಾನ ಅವಧಿಯ ಹಗಲು ಮತ್ತು ರಾತ್ರಿ ಇರಬೇಕು. ಆದರೆ ವಾತಾವರಣದಲ್ಲಿ ಕಿರಣಗಳ ವಕ್ರೀಭವನದಿಂದಾಗಿ ಸೂರ್ಯನು ನಿಜವಾಗಿ ಉದಯಿಸುವುದಕ್ಕಿಂತ ಮೊದಲೇ ಉದಯಿಸಿದಂತೆ ಭಾಸವಾಗುವುದು ಮತ್ತು ಸಂಜೆ ನಿಜವಾಗಿ ಅಸ್ತನಾದ ಮೇಲೂ ಇನ್ನೂ ಸ್ವಲ್ಪ ಹೊತ್ತು ಕಾಣಿಸುವುದು ಹಾಗೂ ಸೂರ್ಯ ಗೋಲದ ಮೇಲ್ಭಾಗ ಪೂರ್ವ ದಿಗಂತದಲ್ಲಿ ಕಾಣಿಸುವುದನ್ನು ಉದಯ ಎಂದು ಹಾಗೂ ಗೋಲದ ಕೆಳಭಾಗ ಸಂಜೆಗಾಗುವಾಗ ಮೇಲ್ಭಾಗ ಆಗಿ ಪಶ್ಚಿಮದಲ್ಲಿ ಮರೆಯಾದ ಮೇಲಷ್ಟೇ ಅಸ್ತ ಎಂದು ಅನಿಸಿಕೊಳ್ಳುವುದರಿಂದ ಪ್ರತೀ ಹಗಲು ವಾಸ್ತವಕ್ಕಿಂತ ಕೆಲವು ನಿಮಿಷ ಹೆಚ್ಚಿನ ಅವಧಿ ಹೊಂದಿರುವಂತೆ ನಮಗೆ ಭಾಸವಾಗುತ್ತದೆ. ಹೀಗಾಗಿ ಹಗಲು ಹಿರಿದಾಗುತ್ತಾ ಹೋಗುವಾಗ ವಸಂತ ವಿಷುವತ್‌ಗಿಂತ ಕೆಲವು ದಿನ ಮೊದಲು ಮತ್ತು ಹಗಲು ಕಿರಿದಾಗುತ್ತಾ ಹೋಗುವಾಗ ಶರದ್ ವಿಷುವತ್‌ಗಿಂತ ಕೆಲವು ದಿನ ನಂತರ ಸಮಾನ ಅವಧಿಯ ಹಗಲು ರಾತ್ರಿಯ ದಿನ ಇರುತ್ತದೆ. ಆಯಾ ಸ್ಥಳದ ಅಕ್ಷಾಂಶ ಹೊಂದಿಕೊಂಡು ಈ ದಿನಗಳು ಬೇರೆ ಬೇರೆ ಆಗಿರುತ್ತವೆ. ಉತ್ತರ ಮತ್ತು ದಕ್ಷಿಣ ಗೋಲಾರ್ಧಗಳ ಕೆಲವು ಅಕ್ಷಾಂಶಗಳಲ್ಲಿ ಸಮಾನ ಅವಧಿಯ ಹಗಲು ರಾತ್ರಿಗಳಿರುವ ದಿನಾಂಕಗಳು ಇಲ್ಲಿವೆ. 12.9 ಉತ್ತರ ಅಕ್ಷಾಂಶದಲ್ಲಿರುವ ಮಂಗಳೂರು ಮತ್ತಿತರ ಸ್ಥಳಗಳಲ್ಲಿ ಮಾರ್ಚ್ 11 ಮತ್ತು ಅಕ್ಟೋಬರ್ 2ರಂದು ಸಮಾನ ದಿನ ರಾತ್ರಿಗಳಿರುತ್ತವೆ.

ಭೂಮಧ್ಯರೇಖೆ ಪ್ರದೇಶದಲ್ಲಿರುವ ಸ್ಥಳಗಳಲ್ಲಿ ಸಮಾನ ಹಗಲು ರಾತ್ರಿಗಳ ದಿನವೇ ಇಲ್ಲ. ಅಲ್ಲಿ ವರ್ಷ ಪೂರ್ತಿ 12 ಗಂಟೆ 06 ನಿಮಿಷ ಅವಧಿಯ ಹಗಲು.
ಶುದ್ಧ ಪೂರ್ವದಲ್ಲಿ ಸೂರ್ಯೋದಯ ಮತ್ತು ಶೂನ್ಯ ನೆರಳು.
ವರ್ಷವಿಡಿ ಉತ್ತರದಿಂದ ದಕ್ಷಿಣಕ್ಕೆ ಮತ್ತು ದಕ್ಷಿಣದಿಂದ ಉತ್ತರಕ್ಕೆ ಚಲಿಸುವ ಸೂರ್ಯನು ವಸಂತ ವಿಷುವತ್ ಮತ್ತು ಶಿಶಿರ ವಿಷುವತ್ ದಿನಗಳಂದು ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಹೊರತುಪಡಿಸಿ ಭೂಮಿಯ ಎಲ್ಲೆಡೆ ಶುದ್ಧ ಪೂರ್ವದಲ್ಲಿ (90 ಡಿಗ್ರಿ) ಉದಯಿಸಿ ಶುದ್ಧ ಪಶ್ಚಿಮದಲ್ಲಿ (270 ಡಿಗ್ರಿ) ಅಸ್ತಮಿಸುತ್ತಾನೆ. ಹಾಗಿದ್ದರೆ ಆ ದಿನಗಳಂದು ನಡು ಮಧ್ಯಾಹ್ನ ಸೂರ್ಯ ನಡು ನೆತ್ತಿಯ ಮೇಲೆ ಬಂದು ಶೂನ್ಯ ನೆರಳು ಉಂಟಾಗುತ್ತದೆಯೇ ಎಂಬ ಪ್ರಶ್ನೆ ಬರುತ್ತದೆ. ಹಾಗಾಗುವುದಿಲ್ಲ ಎಂಬುದು ಇದಕ್ಕೆ ಉತ್ತರ. ಸೂರ್ಯ ಪೂರ್ವ ದಿಶೆಯಲ್ಲಿ ಉದಯಿಸಿ ನೂಲು ಹಿಡಿದಂತೆ ನೇರವಾಗಿ ಪಶ್ಚಿಮದತ್ತ ಸಾಗದೆ ಉತ್ತರ ಗೋಲಾರ್ಧದಲ್ಲಿ ದಕ್ಷಿಣದತ್ತ ಬಾಗಿರುವ, ದಕ್ಷಿಣ ಗೋಲಾರ್ಧದಲ್ಲಿ ಉತ್ತರದತ್ತ ಬಾಗಿರುವ ವಕ್ರ ದಾರಿಯಲ್ಲಿ ಸಾಗುವುದು ಇದಕ್ಕೆ ಕಾರಣ.

ಇಲ್ಲಿರುವ ಚಿತ್ರದಲ್ಲಿ 12.9 ಅಕ್ಷಾಂಶದ ಮಂಗಳೂರಿನಲ್ಲಿ ಮಾರ್ಚ್ 20ರಂದು ಸೂರ್ಯನು ಶುದ್ಧ ಪೂರ್ವದಲ್ಲಿ ಉದಯಿಸಿ ಶುದ್ಧ ಪಶ್ಚಿಮದಲ್ಲಿ ಅಸ್ತನಾದರೂ ನಡು ಮಧ್ಯಾಹ್ನ ದಕ್ಷಿಣದತ್ತ ಸರಿದಿರುವುದನ್ನು ಮತ್ತು ಎಪ್ರಿಲ್ 24ರಂದು ಶುದ್ಧ ಪೂರ್ವಕ್ಕಿಂತ ಉತ್ತರದಲ್ಲಿ ಉದಯಿಸಿ ಪಶ್ಚಿಮಕ್ಕಿಂತ ಉತ್ತರದಲ್ಲಿ ಅಸ್ತನಾದರೂ ಆತ ದಕ್ಷಿಣದತ್ತ ಬಾಗಿದ ಪಥದಲ್ಲಿ ಚಲಿಸಿ ನಡು ಮಧ್ಯಾಹ್ನ ನಡು ನೆತ್ತಿಯ ಮೇಲೆ ಬಂದು ಶೂನ್ಯ ನೆರಳು ಉಂಟಾಗುವುದನ್ನು ಕಾಣಬಹುದು. ಈ ವಿದ್ಯಮಾನ ವಿವಿಧ ದಿನಾಕಗಳಂದು ಮಕರ ವೃತ್ತ ಮತ್ತು ಕರ್ಕ ವೃತ್ತಗಳೊಳಗೆ ಇರುವ ಪ್ರದೇಶಗಳಲ್ಲಿ ಮಾತ್ರ ಘಟಿಸುತ್ತದೆ. ಶೂನ್ಯ ನೆರಳು ಉಂಟಾಗುವ ದಿನ ಆ ಸ್ಥಳದ ಅಕ್ಷಾಂಶ ಮತ್ತು ಭೂಮಧ್ಯ ರೇಖೆ ಹಾಗೂ ಸೂರ್ಯ ಕಿರಣಗಳ ನಡುವಿನ ಕೋನ (declination) ಒಂದೇ ಆಗಿರುತ್ತದೆ.

ಅಕ್ಷಾಂಶ ಹೆಚ್ಚಾದಂತೆ ಸೂರ್ಯನ ಪಥದ ಬಾಗು ಹೆಚ್ಚಾಗುವುದನ್ನು ದಕ್ಷಿಣದ ಸಿಡ್ನಿ ಮತ್ತು ಉತ್ತರದ ಮಾಸ್ಕೋಗೆ ಸಂಬಂಧಿಸಿದ ಚಿತ್ರಗಳಲ್ಲಿ ನೋಡಬಹುದು. ದಕ್ಷಿಣ ಗೋಲಾರ್ಧದ ಸಿಡ್ನಿಯಲ್ಲಿ ಸೂರ್ಯಪಥದ ಬಾಗು ಉತ್ತರಕ್ಕಿರುವುದನ್ನೂ ಗಮನಿಸಬಹುದು.


ಭೂಮಧ್ಯ ರೇಖೆಯ ಮೇಲೆ ಇರುವ ಪ್ರದೇಶಗಳಲ್ಲಿ ವಿಷುವತ್ ದಿನದಂದೇ ಶೂನ್ಯ ನೆರಳಿನ ದಿನ ಇರುತ್ತದೆ. ಏಕೆಂದರೆ ಅಲ್ಲಿ ಆ ದಿನ ಸೂರ್ಯ ಪೂರ್ವದಲ್ಲಿ ಉದಯಿಸಿ ನೇರ ದಾರಿಯಲ್ಲಿ ಪಶ್ಚಿಮಕ್ಕೆ ಸಾಗುತ್ತಾ ನಡು ಮಧ್ಯಾಹ್ನ ನೆತ್ತಿಯ ಮೇಲೆ ಬರುತ್ತಾನೆ.

- ಚಿದಂಬರ ಕಾಕತ್ಕರ್.


1 comment:

Your valuable comments/suggestions are welcome