Wednesday, 21 February 2018

ಒಂದರಿಂದ ಇಪ್ಪತ್ತು ಹೀಗಿತ್ತು



ಹಳೆಯ ಜನಪ್ರಿಯ ಚಿತ್ರಗೀತೆಗಳ ತುಣುಕುಗಳನ್ನು    ಒಟ್ಟುಗೂಡಿಸಿ ಚಿತ್ರದ ಸನ್ನಿವೇಶವೊಂದರಲ್ಲಿ ಬಳಸುವ ಪದ್ಧತಿ ಹಿಂದಿ ಚಿತ್ರರಂಗದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.  ಅಂತಹ ಕೆಲವು ರಚನೆಗಳು  ಅಣಕವಾಡುಗಳ ಫ್ರುಟ್ ಸಲಾದ್ ಲೇಖನದಲ್ಲಿವೆ.  ಸಾಮಾನ್ಯವಾಗಿ ಇಂಥ ಅಣಕವಾಡುಗಳಲ್ಲಿ ಹತ್ತರಿಂದ ಹನ್ನೆರಡು ತುಣುಕುಗಳನ್ನು ಬಳಸಲಾಗುತ್ತವೆ.  ತಾನು ಸ್ವತಃ ನಿರ್ಮಿಸಿದ ತುಂಬಿದ ಕೊಡ ಚಿತ್ರದಲ್ಲಿ 20 ಗೀತೆಗಳನ್ನು  ಸಂಯೋಜಿಸಿದ  ಚೌ ಚೌ ಹಾಡೊಂದನ್ನು ಅಳವಡಿಸಿ ಕನ್ನಡದಲ್ಲಿ ಮೊತ್ತಮೊದಲು ಇಂತಹ ಪ್ರಯತ್ನ ಮಾಡಿದವರು ಎಂಬ  ಕೀರ್ತಿಗೆ ಜಿ.ಕೆ.ವೆಂಕಟೇಶ್ ಪಾತ್ರರಾದರು.

ಈ ಚಿತ್ರದಲ್ಲಿ ರಾಜ್‌ಕುಮಾರ್ ಮತ್ತು ಲೀಲಾವತಿ ನಾಯಕ ನಾಯಕಿಯಾಗಿದ್ದರೂ ಅವರಿಬ್ಬರಿಗೂ ಒಂದೇ ಒಂದು ಹಾಡು ಇಲ್ಲದಿರುವುದು ಗಮನಾರ್ಹ.  ಈ ಪಿಕ್ನಿಕ್ ಹಾಡೂ ನರಸಿಂಹರಾಜು ಮತ್ತಿತರರ ಮೇಲೆ ಕೇಂದ್ರೀಕೃತವಾಗಿದ್ದು ಕೊನೆಯಲ್ಲಿ ಮಾತ್ರ ರಾಜ್‌ಕುಮಾರ್ ಕಾಣಿಸಿಕೊಳ್ಳುತ್ತಾರೆ.  ಸಾಮಾನ್ಯವಾಗಿ ಇಂತಹ ಸಂಯೋಜನೆಗಳಲ್ಲಿ ಅತಿ ಜನಪ್ರಿಯ ಹಾಡುಗಳನ್ನೇ ಬಳಸಿಕೊಳ್ಳಲಾಗುತ್ತದಾದರೂ ಇಲ್ಲಿ ಬೇರೆಲ್ಲೂ ಕೇಳಸಿಗದ ಕೆಲವು rare ಹಾಡುಗಳೂ ಇರುವುದು ವಿಶೇಷ. ಒಂದೆರಡು ಕಡೆ ಮಾಡಿರುವ ಸಣ್ಣಪುಟ್ಟ ಬದಲಾವಣೆ ಹೊರತುಪಡಿಸಿದರೆ ಮೂಲ ಸಾಹಿತ್ಯವನ್ನು ಹಾಗೆಯೇ ಉಳಿಸಿಕೊಂಡಿರುವುದೂ ಗಮನಿಸಬೇಕಾದ ಅಂಶವೇ.  ಸುಮಾರು 9 ನಿಮಿಷ ಅವಧಿಯ ಈ ಪಿಕ್ನಿಕ್ ಹಾಡನ್ನು ರೇಡಿಯೋದಲ್ಲಿ ಕೇಳಿದ್ದು ನನಗೆ ನೆನಪಿಲ್ಲ.  ಈಗಂತೂ ವಟವಟ ಮತ್ತು ಪದೇ ಪದೇ ಪ್ರಸಾರವಾಗುವ ತಮ್ಮದೇ promoಗಳಲ್ಲಿ ಕಾಲಹರಣ ಮಾಡುತ್ತಿರುವ ರೇಡಿಯೋ ನಿಲಯಗಳಿಂದ ಇಷ್ಟು ದೀರ್ಘ ಹಾಡನ್ನು ನಿರೀಕ್ಷಿಸುವುದೇ ತಪ್ಪಾದೀತು.  ಆದರೆ ಇದರ ಗ್ರಾಮೊಫೋನ್ ರೆಕಾರ್ಡುಗಳು ತಯಾರಾಗಿದ್ದವು.  ಮೈಸೂರಿನ ಚಂದ್ರು ಸೌಂಡ್ ಸಿಸ್ಟಂನವರು ನನಗಿದನ್ನು ಕ್ಯಾಸೆಟ್ಟಲ್ಲಿ ಧ್ವನಿಮುದ್ರಿಸಿ ಕೊಟ್ಟಿದ್ದರು.




ಈಗ ಈ  20 ಹಾಡುಗಳನ್ನು ಒಂದೊಂದಾಗಿ ಗಮನಿಸೋಣ. 

1. ಕಂಡರೂ ಕಾಣದ್‌ಹಾಂಗ್ ನಡಿತಿದ್ದಿ
ಅಣ್ಣ ತಂಗಿ ಚಿತ್ರದಲ್ಲಿ ರಾಜ್‌ಕುಮಾರ್ ಮತ್ತು ಸರೋಜಾದೇವಿ ಅವರಿಗಾಗಿ ಪೀಠಾಪುರಂ ನಾಗೇಶ್ವರ ರಾವ್ ಮತ್ತು ಎಲ್.ಆರ್. ಈಶ್ವರಿ ಹಾಡಿದ್ದ ಇದು ಇಲ್ಲಿ ಕೇಳಿಬರುವುದು   ಪಿ.ಬಿ.ಎಸ್ ಧ್ವನಿಯಲ್ಲಿ.  ಅಣ್ಣತಂಗಿ ಚಿತ್ರದಲ್ಲಿ ಪಿ.ಬಿ.ಎಸ್ ಅವರು ಕೆ.ಎಸ್.ಅಶ್ವಥ್ ಅವರಿಗಾಗಿ ಒಂದು ಇಂಗ್ಲಿಷ್ ಹಾಡು ಹಾಡಿದ್ದರು ಎಂದು ಗೊತ್ತೇ?  ಕೇಳಬೇಕೆನಿಸಿದರೆ ಅಂತರ್ಜಾಲದಲ್ಲಿ ಲಭ್ಯವಿರುವ ಆ ಚಿತ್ರ ನೋಡಬಹುದು.

2. ನಾಗರೀಕನೆ ನಿನ್ನ
ಕನ್ನಡದ ಮೊತ್ತ ಮೊದಲ ಕಾದಂಬರಿ ಆಧಾರಿತ ಚಿತ್ರ ಎಂಬ ಖ್ಯಾತಿಗೊಳಗಾದ ಕರುಣೆಯೇ ಕುಟುಂಬದ ಕಣ್ಣು ಚಿತ್ರದಲ್ಲಿ ತನ್ನದೇ ಧ್ವನಿಯಲ್ಲಿದ್ದ ಇದನ್ನು ಇಲ್ಲಿಯೂ ಎಸ್.ಜಾನಕಿಯೇ ಹಾಡಿದ್ದಾರೆ. ಕೃಷ್ಣಮೂರ್ತಿ ಪುರಾಣಿಕರ ಧರ್ಮದೇವತೆ ಕಾದಂಬರಿಯನ್ನು ಆಧರಿಸಿ ಆ ಚಿತ್ರ ತಯಾರಾಗಿತ್ತು.

3. ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬೇಟಿ ಬಚಾವೋ ಬೇಟಿ ಪಢಾವೋ ಆಂದೋಲನ ಆರಂಭವಾಗುವ ಎಷ್ಟೋ ದಶಕಗಳಷ್ಟು ಹಿಂದೆಯೆ ಹೆಣ್ಣು ಮಕ್ಕಳ ಪ್ರಾಮುಖ್ಯವನ್ನು ಎತ್ತಿ ತೋರಿಸಿದ ಕು.ರ.ಸೀ ವಿರಚಿತ ಈ ಗೀತೆ ಗೌರಿ ಚಿತ್ರದ್ದು.  ಅಲ್ಲಿ ಪಿ.ಬಿ.ಎಸ್, ಜಾನಕಿ ಮತ್ತು ಬೇಬಿ ಲತಾ ,  ಇಲ್ಲಿ ಟಿ.ಎ. ಮೋತಿ ಹಾಡಿದ್ದಾರೆ.

4. ನಾ ಪಾಪವದೇನಾ ಮಾಡಿದೆನೊ
ರಾಜ್‌ಕುಮಾರ್ ಅವರ ಶರೀರಕ್ಕೆ ಮೊದಲ ಬಾರಿ ಪಿ.ಬಿ.ಎಸ್ ಅವರು ಶಾರೀರವಾದ ಈ ಗೀತೆ ಓಹಿಲೇಶ್ವರ ಚಿತ್ರದ್ದು. ಇಲ್ಲಿಯೂ ಪಿ.ಬಿ.ಎಸ್ ಅವರೇ ಹಾಡಿದ್ದಾರೆ.  ಓಹಿಲೇಶ್ವರ ಚಿತ್ರದಲ್ಲಿ ಅತಿ ಜನಪ್ರಿಯ ದೇಹದಿಂದ ದೂರನಾದೆ ಏಕೆ ಆತ್ಮನೇ ಸೇರಿದಂತೆ ಕೆಲವು ಗೀತೆಗಳನ್ನು ರಾಜ್ ಅವರಿಗಾಗಿ ಘಂಟಸಾಲ ಕೂಡ ಹಾಡಿದ್ದರು.  ನನಗೆ ನೆನಪಿರುವಂತೆ ಪಿ.ಬಿ.ಎಸ್ ಮತ್ತು ಘಂಟಸಾಲ ಇಬ್ಬರೂ ರಾಜ್ ಅವರಿಗಾಗಿ ಹಾಡಿದ ಇನ್ನೊಂದು ಚಿತ್ರ ಮುರಿಯದ ಮನೆ.


5. ಎಲ್ಲಿ ಏನು ಹೇಗೆ ಎನ್ನುವ ಮಾತೇ ಬೇಕಿಲ್ಲ
ಇಲ್ಲಿ ಎಸ್. ಜಾನಕಿ ಧ್ವನಿಯಲ್ಲಿರುವ ಇದು  ಮೂಲತಃ  ಜಿ.ವಿ. ಅಯ್ಯರ್ ನಿರ್ಮಿಸಿ ನಿರ್ದೇಶಿಸಿದ್ದ ಲಾಯರ್ ಮಗಳು ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಜೊತೆ ಅವರು ಹಾಡಿದ್ದ ಯುಗಳಗೀತೆ. 


6. ಗಾನ ನಾಟ್ಯ ರಸಧಾರೆ
ಕಲಾವತಿ ಚಿತ್ರದ ಈ ಜನಪ್ರಿಯ ಮಧುರ ಗೀತೆಯನ್ನು ಇಲ್ಲಿಯೂ ಟಿ.ಎ. ಮೋತಿಯೇ ಹಾಡಿದ್ದಾರೆ.  ಅಲ್ಲಿ ಜಾನಕಿಯೂ ಜೊತೆಗಿದ್ದರು.  ಕಲಾವತಿ ಚಿತ್ರಕ್ಕೆ ಇಬ್ಬರು ಸಂಗೀತ ನಿರ್ದೇಶಕರಿದ್ದರು.  ದಕ್ಷಿಣದ ಗಾಯಕರ ಹಾಡುಗಳನ್ನು ಜಿ.ಕೆ.ವೆಂಕಟೇಶ್ ಸಂಯೋಜಿಸಿದ್ದರೆ ಮನ್ನಾಡೆ ಮತ್ತು ಸುಮನ್ ಕಲ್ಯಾಣ್‌ಪುರ್ ಅವರ ಹಾಡುಗಳ ಸಂಗೀತ ನಿರ್ದೇಶನ ಲಕ್ಸ್ಮಣ್ ಬೇರ್ಲೇಕರ್ ಅವರದಾಗಿತ್ತು.

7. ಹಾರುತ ದೂರ ದೂರ
ಉಳಿದೆಲ್ಲ ಹಾಡುಗಳು ತನ್ನ ನಿರ್ದೇಶನದವೇ ಆಗಿದ್ದರೂ ರಾಣಿ ಹೊನ್ನಮ್ಮ ಚಿತ್ರದ ಈ ಒಂದು ಗೀತೆಯನ್ನು ಆಯ್ದುಕೊಂಡು ತನ್ನ ಸಮಕಾಲೀನ ವಿಜಯಭಾಸ್ಕರ್ ಅವರಿಗೆ ಜಿ.ಕೆ. ವೆಂಕಟೇಶ್ ಗೌರವ ತೋರಿದ್ದಾರೆ. ಹಿಂದಿಯ ಇಂಥ mixture ಹಾಡುಗಳಲ್ಲೂ ಇತರ ಸಂಗೀತ ನಿರ್ದೇಶಕರ ರಚನೆಗಳನ್ನು ಸೇರಿಸಿ  ಔದಾರ್ಯ ಮೆರೆಯುವುದು ಸಾಮಾನ್ಯವಾಗಿತ್ತು.  ಮೂಲದಲ್ಲಿ ಪಿ.ಬಿ.ಎಸ್, ಸುಶೀಲ ದನಿಗೂಡಿಸಿದ್ದರೆ ಇಲ್ಲಿ ಎಂ.ಎಸ್.ಪದ್ಮ ಎಂಬ ಹುಡುಗಿ ಹಾಡಿದ್ದಾಳೆ.  ಹೆಡ್‌ಫೋನ್‌ನಲ್ಲಿ ಆಲಿಸಿದಾಗ ಆಕೆಯ ಧ್ವನಿ ಎಷ್ಟು ಮುದ್ದಾಗಿ ಕೇಳಿಸುತ್ತದೆ ಎಂದು ನೋಡಿ.    ಆಕೆ ಕಲಾವತಿ ಚಿತ್ರದಲ್ಲಿ ಹಾಡಿದ ಸಲ್ಲದೆಲೇ ಶಾಮನೆ ಈ ಸರಸ ಎಂಬ ಹಾಡನ್ನು ಅನೇಕರು ಕೇಳಿರಬಹುದು.

8. ಗೋದಾವರಿ ದೇವಿ ಮೌನವಾಂತಿಹೆ ಏಕೆ
ದಶಾವತಾರ ಚಿತ್ರದ ಈ ಗೀತಕಾವ್ಯದ ತುಣುಕೊಂದನ್ನು ಇಲ್ಲಿಯೂ ಪಿ.ಬಿ.ಎಸ್ ಅವರು ಅಷ್ಟೇ ಆರ್ದ್ರವಾಗಿ ಹಾಡಿದ್ದಾರೆ. ಈ ಹಾಡಿನ ಕುರಿತು ಹೆಚ್ಚಿನ ವಿವರಗಳಿಗೆ ರಾಮ ಗಾನ ಗಾಯನಕ್ಕೆ ಪಿ.ಬಿ. ದನಿಯ ಸಕ್ಕರೆ ನೋಡಬಹುದು.

9. ಸಂಚಾರಿ ಮನ ಸೋತೆ
ರಣಧೀರ ಕಂಠೀರವ ಚಿತ್ರದ ಗೀತೆ ಎ. ಜಾನಕಿ ಧ್ವನಿಯಲ್ಲಿದೆ. ಮೂಲದಲ್ಲೂ ಅವರೇ ಹಾಡಿದ್ದ ಪೂರ್ತಿ ಹಾಡು  ಅಂತರ್ಜಾಲದಲ್ಲಿ ಈಗ ಲಭ್ಯವಿರುವ ಚಿತ್ರದ ಪ್ರತಿಯಲ್ಲಿ ಇದ್ದಂತಿಲ್ಲ.  ಕೆಲ ವರ್ಷಗಳ ಹಿಂದೆ ದೂರದರ್ಶನದಲ್ಲಿ ಆ ಚಿತ್ರ ಪ್ರಸಾರವಾಗಿದ್ದಾಗ ಈ ಗೀತೆಯ ಈ ಒಂದು ಸಾಲಷ್ಟೇ  ಅಲ್ಲಿಯೂ ಕೇಳಲು ಸಿಕ್ಕಿತ್ತು.

10. ನಗುವೆ ನಾಕ ಅಳುವೆ ನರಕ
ತಮಿಳಿನಲ್ಲಿ ವೇಲೈಕ್ಕಾರಿ ಎಂಬ ಹೆಸರಲ್ಲಿ ಬಂದಿದ್ದ  ಚಿತ್ರವನ್ನಾಧರಿಸಿದ ಮಲ್ಲಿ ಮದುವೆಯ ಹಾಡಿದು.  ಜಿ.ಕೆ. ವೆಂಕಟೇಶ್ ಸ್ವತಃ ಹಾಡಿದ್ದಾರೆ.  ಅಲ್ಲಿ ಪಿ.ಬಿ.ಎಸ್ ಅವರೂ ಜೊತೆಗಿದ್ದರು. ವೈಯುಕ್ತಿಕವಾಗಿ ನನಗೆ ಇದು ಅಷ್ಟೊಂದು ಇಷ್ಟದ ಹಾಡಲ್ಲ.

11. ಹೆಣ್ಣಿನ ಮೇಲೆ ಕಣ್ಣಿಡುವಾಗ
ಕಣ್ತೆರೆದು ನೋಡು ಚಿತ್ರದಲ್ಲಿ ಪಿ.ಬಿ.ಎಸ್ ಜೊತೆಗೆ ಯುಗಳ ಗಾನ ರೂಪದಲ್ಲಿದ್ದ ಇದನ್ನು ಇಲ್ಲಿ ಜಾನಕಿ ಒಬ್ಬರೇ ಹಾಡಿದ್ದಾರೆ.  ಜಿ.ವಿ. ಅಯ್ಯರ್ ಅವರ  ಸಾಹಿತ್ಯ  ಬಲು ಅರ್ಥಪೂರ್ಣ.  ಅಂತರ್ಜಾಲದಲ್ಲಿರುವ ಚಿತ್ರದಲ್ಲಿ ಈ ಹಾಡು ಇದ್ದರೂ ಅಲ್ಲಲ್ಲಿ ತುಂಡರಿಸಲ್ಪಟ್ಟಿದೆ.

12. ಕನ್ನಡದಾ ಮಗಳೆ ಬಾರೆ
ಜಿ.ವಿ.ಅಯ್ಯರ್ ನಿರ್ಮಿಸಿ ನಿರ್ದೇಶಿಸಿದ್ದ ಬಂಗಾರಿ  ಚಿತ್ರದ ಈ ಹಾಡನ್ನು ಮೂಲದಲ್ಲಿ ರಾಧಾಜಯಲಕ್ಷ್ಮಿ ಹಾಡಿದ್ದರು.  ಇಲ್ಲಿ ಬೆಂಗಳೂರು ಲತಾ ಸಂಗಡಿಗರೊಂದಿಗೆ ಹಾಡಿದ್ದಾರೆ.  ಮೂಲ ಹಾಡನ್ನು ನಾನು ಇದುವರೆಗೆ ಕೇಳಿಲ್ಲ.


13. ಓದಿ ಓದಿ ಮರುಳಾದ ಕೂಚು ಭಟ್ಟ
ಟಿ.ಎನ್.ಬಾಲಕೃಷ್ಣ ಅರ್ಥಾತ್ ಬಾಲಣ್ಣ ನಿರ್ಮಿಸಿದ್ದ ಕಲಿತರೂ ಹೆಣ್ಣೆ ಚಿತ್ರದ ಹಾಡಿದು. ಜಿ.ಕೆ. ವೆಂಕಟೇಶ್ ಹಾಡಿದ್ದಾರೆ.  ಆ ಚಿತ್ರವನ್ನು ಟಾಕೀಸಿನಲ್ಲಿ ನೋಡಿದ್ದವರು ಇದರ ಹಾಡುಗಳನ್ನು ಆಲಿಸಿರಬಹುದೇ ಹೊರತು ಬೇರೆಲ್ಲೂ ಇವು ಲಭ್ಯವಿಲ್ಲ.  ರೇಡಿಯೋದಲ್ಲೂ ನಾನು ಇದುವರೆಗೆ ಕೇಳಿಲ್ಲ. ಕಲಿತರೂ ಹೆಣ್ಣೆ, ಬಂಗಾರಿ, ಲಾಯರ್ ಮಗಳು ಮುಂತಾದ ಕೆಲವು ಚಿತ್ರಗಳ ಗ್ರಾಮೊಫೋನ್ ರೆಕಾರ್ಡುಗಳೇ ತಯಾರಾಗಿರಲಿಲ್ಲವೇನೋ ಎಂಬ ಅನುಮಾನ ನನಗಿದೆ.  ಆ ಚಿತ್ರಗಳ ನೆಗೆಟಿವ್ ಅಥವಾ ಪ್ರಿಂಟುಗಳೂ ಇದ್ದಂತಿಲ್ಲ.


14. ನಿಧಿಯೊಂದ ವಿಧಿರಾಯ ನಿನಗಾಗಿ  ಕರೆತಂದ
ಓಹಿಲೇಶ್ವರ ಚಿತ್ರದಲ್ಲಿದ್ದ ಅನೇಕ ಸುಂದರ, ಆದರೆ ಹೆಚ್ಚು ಕೇಳಿ ಬರದ  ಹಾಡುಗಳ ಪೈಕಿ ಇದೂ ಒಂದು. ಮೂಲದಲ್ಲಿ ಪಿ.ಸುಶೀಲ, ಇಲ್ಲಿ ಎಸ್. ಜಾನಕಿ ಹಾಡಿದ್ದಾರೆ.

15. ಬಾ ಬಾ ಬಾರೆ ಬಾರೆ ವೈಯಾರೆ
ಈ ಒಂದು ತುಣುಕು ಮಾತ್ರ ರಾಜ್‌ಕುಮಾರ್ ಮೇಲೆ ಚಿತ್ರೀಕೃತವಾಗಿದೆ. ಇಲ್ಲಿ ಜಿ.ಕೆ.ವಿ ಹಾಡಿರುವ ಇದು ಹರಿಭಕ್ತ ಚಿತ್ರದ್ದು. ಮೂಲ ಗಾಯಕರ ಹೆಸರು ಗೊತ್ತಿಲ್ಲ.  

16. ಆಡೋಣ ಬಾ ಬಾ ಗೋಪಾಲ
ಮಲ್ಲಿ ಮದುವೆ ಚಿತ್ರದ  ಶುದ್ಧ ಧನ್ಯಾಸಿ ರಾಗಾಧಾರಿತ ಈ ಅತೀ ಜನಪ್ರಿಯ ಹಾಡು ಇಲ್ಲಿ ಸಮೂಹಗಾನ ರೂಪದಲ್ಲಿದೆ.  ಬಾಲ್ಯದಲ್ಲಿ ನಾನು ಹೆಚ್ಚು ಇಷ್ಟ ಪಡುತ್ತಿದ್ದುದು ಈ ಚಿತ್ರದ ಮಂಗನ ಮೋರೆಯ ಮುದಿ ಮೂಸಂಗಿ ಎಂಬ ಮೂದಲ ಹಾಡು.   ಅದರ ಪ್ರಾಸ ಬದ್ಧ ಪದಗಳು, ಅತಿ ವೇಗದ ತಬಲಾ ನಡೆ ನನ್ನನ್ನು  ಆಕರ್ಷಿಸುತ್ತಿತ್ತು. ಚಿತ್ರದಲ್ಲಿರುವ ಹಾಡಿಗೂ ರೇಡಿಯೋದಲ್ಲಿ ಕೇಳಿಬರುತ್ತಿದ್ದ ಗ್ರಾಮೊಫೋನ್ ರೆಕಾರ್ಡಿನ ಹಾಡಿಗೂ ಸ್ವಲ್ಪ ವ್ಯತ್ಯಾಸ ಇದೆ. 

17. ಮೈಸೂರ್ ದಸರಾ ಬೊಂಬೆ
ಕನ್ಯಾರತ್ನ ಚಿತ್ರದಲ್ಲಿ ಹಾಸ್ಯನಟ ರತ್ನಾಕರ್ ಅವರಿಗಾಗಿ  ಟಿ.ಎ. ಮೋತಿ ಹಾಡಿದ್ದರು. ಇಲ್ಲೂ ಅವರದೇ ಧ್ವನಿಯಲ್ಲಿದೆ.  ವೈವಿಧ್ಯಮಯ ವಾದ್ಯಗಳ ಬಳಕೆ, ಶಾಸ್ತ್ರೀಯ ಮತ್ತು ಅರೇಬಿಕ್ ಶೈಲಿಗಳ ಸಮ್ಮಿಲನ, ಕೊನೆಯಲ್ಲಿ ತಿಶ್ರದಿಂದ ಚತುರಶ್ರಕ್ಕೆ ಬದಲಾಗುವ ನಡೆ ಮುಂತಾದ   ವಿಶೇಷತೆಗಳಿಂದ ಅಂದಿನ ದಿನಗಳಲ್ಲಿ ಈ ಹಾಡು ನನಗೆ ಬಿಂಕದ ಸಿಂಗಾರಿ ಮತ್ತು ಸುವ್ವಿ ಸುವ್ವಿ ಸುವ್ವಾಲೆಗಳಿಗಿಂತಲೂ  ಹೆಚ್ಚು ಆಪ್ತವೆನಿಸುತ್ತಿತ್ತು.

18. ಎಡವಿದರೆ ನಾಕುರುಳು
ಇದು ಕಣ್ತೆರೆದು ನೋಡು ಚಿತ್ರದ ಇನ್ನೊಂದು ಹಾಡು.  ಅಲ್ಲೂ ಇಲ್ಲೂ ಜಾನಕಿಯೇ ಹಾಡಿದ್ದಾರೆ.  ಮೂಲದಲ್ಲಿ ಇನ್ನೊಬ್ಬ ಗಾಯಕಿಯೂ ಜತೆಗಿದ್ದರು ಎಂದು ನೆನಪು.

19. ನಿಜವೋ ಸುಳ್ಳೊ ನಿರ್ಧರಿಸಿ
ಕರುಣೆಯೇ ಕುಟುಂಬದ ಕಣ್ಣು ಚಿತ್ರದ ಕವ್ವಾಲಿ ಶೈಲಿಯ ಹಾಡಿದು.  ಮೂಲದಲ್ಲಿ ಮತ್ತು ಇಲ್ಲಿ ಹಾಡಿರುವುದು ಪಿ.ಬಿ.ಎಸ್ ಮತ್ತು ಜಾನಕಿ.  ಶಾಲೆಗಳಲ್ಲಿರುತ್ತಿದ್ದ ಹಳ್ಳಿ ಮೇಲೋ ಪಟ್ಟಣ ಮೇಲೋ ಎಂಬ ಚರ್ಚಾ ಸ್ಪರ್ಧೆಯಂತೆ ಹೆಣ್ಣು ಮೇಲೋ ಗಂಡು ಮೇಲೋ ಎಂದು ಪರಸ್ಪರರು ವಾದಿಸುವ ಈ ಹಾಡು ಕೂಡ ಚಿತ್ರ  ಮತ್ತು ಗ್ರಾಮೊಫೋನ್ ರೆಕಾರ್ಡುಗಳಲ್ಲಿ ಭಿನ್ನವಾಗಿದೆ.  ಇಲ್ಲಿ ಸೂಚ್ಯವಾಗಿ ಮಂಡಿಸಲಾದ ಇವೇ ವಿಚಾರಗಳು ಆ ಮೇಲೆ ಸ್ವಲ್ಪ ವಾಚ್ಯವಾಗಿ ಲಗ್ನ ಪತ್ರಿಕೆ ಚಿತ್ರದ  ಥಳುಕು ಮೋರೆ ಹೆಣ್ಣಿಗೆ ಹೆದರ ಬೇಡಿ ಸೋತು ಎಂಬ ಹಾಡಿನಲ್ಲಿ ಮರುಬಳಕೆಯಾದವು. ಇದೇ ರೀತಿ ಪ್ರಣಯದ ಉತ್ಕಟತೆಯನ್ನು ಬಿಂಬಿಸುವ ಅಮರ ಶಿಲ್ಪಿ ಜಕ್ಕಣ್ಣದ ಏನೋ ಎಂತೋ ಜುಮ್ಮೆಂದಿತು ತನುವು ಮತ್ತು ಬೋರೆ ಗೌಡ ಬೆಂಗಳೂರಿಗೆ ಬಂದ ಚಿತ್ರದ ಅಲ್ಲಿ ಇಲ್ಲಿ ಹುಡುಕುತ ಕಣ್ಣು ಹಾಡುಗಳು ಸೂಚ್ಯ ಮತ್ತು ವಾಚ್ಯಕ್ಕೆ ಉದಾಹರಣೆಯಾಗಿ ನನಗೆ ಯಾವಾಗಲೂ ನೆನಪಾಗುತ್ತಿರುತ್ತವೆ.

20. ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ಜಿ.ವಿ.ಅಯ್ಯರ್ ರಚಿಸಿ ಜಿ.ಕೆ. ವೆಂಕಟೇಶ್ ತೆರೆಯ ಮೇಲೆ ಕಾಣಿಸಿಕೊಂಡು ಹಾಡಿದ, ಜನಮಾನಸದಲ್ಲಿ ನಾಡಗೀತೆಯ ಸ್ಥಾನ ಪಡೆದಿರುವ ಕಣ್ತೆರೆದು ನೋಡು ಚಿತ್ರದ ಈ ಹಾಡನ್ನು  ಈ ಸಂಕಲನದ ಸಮಾಪನದಲ್ಲಿ ಬಳಸಿಕೊಳ್ಳಲಾಗಿದೆ. ಇಲ್ಲೂ ಜಿ.ಕೆ.ವೆಂಕಟೇಶ್ ಅವರೇ ಹಾಡಿದ್ದಾರೆ.



ಆ ಮೇಲೆ ಅನೇಕ ಚಿತ್ರಗಳಲ್ಲಿ ಇಂತಹ ಪ್ರಯೋಗಗಳು ನಡೆದವಾದರೂ ಕಲ್ಯಾಣ್‌ಕುಮಾರ್ ನಿರ್ಮಿಸಿದ್ದ ಎಂದೂ ನಿನ್ನವನೇ ಚಿತ್ರದ ಈ ಒಂದು ಗೀತ ಗುಚ್ಛ ನನಗೆ ಸ್ವಾರಸ್ಯಕರವೆನಿಸಿತು.  ಅದರಲ್ಲಿ ಸ್ವತಃ ಕಲ್ಯಾಣ್‌ಕುಮಾರ್ ಮತ್ತು ರಾಜನ್ ಅವರು ಹಾಡಿದ್ದುದು ವಿಶೇಷ.  ಆದರೆ ಇದು ಕಲ್ಪಿಸಿಕೊಳ್ಳಲು ಮಾತ್ರ ಏಕೆಂದರೆ ಆಲಿಸಲು ಲಭ್ಯವಿಲ್ಲ.  ಇಲ್ಲಿ ಒಳಗೊಂಡ ಹಾಡುಗಳು ಯಾವ ಧಾಟಿ ಹೊಂದಿದ್ದವು ಎಂದೂ ಗೊತ್ತಿಲ್ಲ.  ಚಾಹೆ ಕೊಯಿ ಮುಝೆ ಜಂಗ್ಲಿ ಕಹೆ ಮತ್ತು ಕ್ಯಾ ಕರೂಂ ರಾಮ್ ಮುಝೆ ಬುಡ್ಢಾ ಮಿಲ್ ಗಯಾ  ಧಾಟಿಗಳೆರಡನ್ನು ನಾನು ಊಹಿಸಿದ್ದೇನೆ.  ಈ ಚಿತ್ರ ನೋಡಿದವರು ಯಾರಾದರೂ ಇದ್ದು ಧಾಟಿಗಳು ನೆನಪಿದ್ದರೆ ತಿಳಿಸಿ.


7 comments:

  1. ನಮೋ ನಮಃ ಸರ್! ಅದೆಲ್ಲಿಂದ ಸಂಗ್ರಹಿಸುತ್ತೀರಿ ಸರ್ ಇಷ್ಟೊಂದು ಮಾಹಿತಿಯನ್ನ? ಜೊತೆಗೆ ಪೂರಕವಾಗಿ ಅಷ್ಟು ಹಳೆಯ ಸ್ಟಿಲ್ಸ್‌ಗಳನ್ನ? ನಿಜಕ್ಕೂ ನೀವೊಂದು ಅತ್ಯಪರೂಪದ ಮಾಹಿತಿ ಕಣಜ ಸರ್!

    Krisha Prasad(FB)

    ReplyDelete
  2. ಸರ್...ನೀವು ಒಂದು ನಡೆದಾಡುವ ವಿಶ್ವಕೋಶ... ಅಭಿನಂದನೆಗಳು

    AG Venkatesh(FB)

    ReplyDelete
  3. ನಿಮ್ಮ ಸಂಗ್ರಹ ಅದ್ಭುತ. ನಮ್ಮ ಭಾಷೆಯ Music ಹಾಗೂ ಚಿತ್ರ ಮಾಧ್ಯಮಗಳು ಹಳೆಯಹಾಡುಗಳಿಗೆ ಪ್ರಾಧಾನ್ಯತೆ ನೀಡಿಲ್ಲ. ತಮಿಳಿನ 'ಮುರಸು' ಮಾಧ್ಯಮ ಒಂದು ಅತ್ಯುತ್ತಮ ಉದಾಹರಣೆ. ತೆಲುಗು ಮಾಧ್ಯಮದ ಬಗ್ಗೆ ತಿಳಿದಿಲ್ಲ. ಆ ಭಾಷೆಯ ಹಳೆಯ ಹಾಡುಗಳೂ ಕೇಳಲು ಸುಶ್ರಾವ್ಯ.

    Narendranath Manjunath(FB)

    ReplyDelete
  4. ಕಡೆಗೂ..ಒಂದು ಹಾಡನ್ನು ಪತ್ತೆ ಹಚ್ಚಿದೆ..! ಎಲ್ಲಿ ಏನು ಹೇಗೆ....ಹಾಡು ಲಾಯರಮಗಳು ಚಿತ್ರದ್ದು! ಮೊನ್ನೆ ಮೊನ್ನೆ ತಾನೇ ನೀವೇ ಈ ಚಿತ್ರದ ಬಗ್ಗೆ ಪ್ರಸ್ತಾಪಿಸಿದ್ದರಲ್ಲವೇ? ಈ ಚಿತ್ರಕ್ಕೂ ಜಿಕೆವಿ ಯವರದೇ ಸಂಗೀತವಿದೆ!

    Krishna Prasad(FB)

    ReplyDelete
    Replies
    1. ಅರುಣಕುಮಾರ್ ಬೆಂಗಳೂರು2 March 2018 at 12:02

      ಕೆಪಿ ಸರ್ ಎಂಪಿತ್ರಿ ಗಳೂ ಇವೆಯಾ ?

      Delete
  5. ಅರುಣಕುಮಾರ್ ಬೆಂಗಳೂರು2 March 2018 at 12:01

    ಸಲ್ಲದೆಲೇ ಶಾಮನೆ ಈ ಸರಸ ... ಈ ಹಾಡಿನ ಗಾಯಕಿ ಯಾರು ಅಂತ ಗೊತ್ತಿರಲಿಲ್ಲ ... ಆ ಮಾಹಿತಿಗೂ ಧನ್ಯವಾದಗಳು

    ReplyDelete
  6. ನಿಮ್ಮ ಮಾಹಿತಿ ಕಣಜ ನಿಜಕ್ಕೂ ಒಂದು ವಿಶ್ವಕೋಶ. ವಂದನೆಗಳು.

    ReplyDelete

Your valuable comments/suggestions are welcome