Wednesday 25 January 2017

ಜೇನಹಾಡುಗಳ ಜೇನುಗೂಡು



ಎಲ್ಲ ಹಾಡುಗಳು ಸುಮಧುರವಾಗಿರುವ ಸದಭಿರುಚಿಯ ಕನ್ನಡ ಚಿತ್ರಕ್ಕೊಂದು ಉದಾಹರಣೆ ಕೊಡಿ ಎಂದು ಯಾರಾದರೂ ಕೇಳಿದರೆ 1963ರಲ್ಲಿ ಬಿಡುಗಡೆಯಾದ ಜೇನುಗೂಡು ಎಂದು ಥಟ್ಟಂತ ಹೇಳಬಹುದು.  ಹಾಗಂತ ಇದು ಮೂಲ ಕನ್ನಡ ಚಿತ್ರವಲ್ಲ.  ಬಂಗಾಲಿ ಭಾಷೆಯ ಬಂಗ ಕೋರ ಎಂಬ ಸಿನಿಮಾದ ಈ ಕಥೆಯನ್ನಾಧರಿಸಿ 1956ರಲ್ಲಿ  ತಮಿಳು ಭಾಷೆಯ ಕುಲದೈವಂ, 1957ರಲ್ಲಿ ಹಿಂದಿಯ ಭಾಭಿ ಹಾಗೂ  1960ರಲ್ಲಿ ತೆಲುಗಿನ ಕುಲದೈವಂ ಚಿತ್ರಗಳು ತಯಾರಾಗಿ ಜಯಭೇರಿ ಬಾರಿಸಿದ್ದವು.  ಆದರೆ ರೀಮೇಕ್ ಎಂಬ ಭಾವನೆ ಒಂದಿನಿತೂ ಬಾರದಂತೆ ಕನ್ನಡೀಕರಣಗೊಂಡದ್ದು Y.R.ಸ್ವಾಮಿ ನಿರ್ದೇಶನದ ಜೇನುಗೂಡು ಚಿತ್ರದ ಹೆಗ್ಗಳಿಕೆ.  ಇದು ನಾಯಕ ನಾಯಕಿ ಡ್ಯುಯೆಟ್ ಹಾಡುತ್ತಾ ಮರ ಸುತ್ತುವ ಶೈಲಿಯ ಚಿತ್ರವಲ್ಲ.  ಮಧ್ಯವಯಸ್ಸಿನ ರಘು ಎಂಬ ಗೃಹಸ್ಥನ ಪಾತ್ರ ವಹಿಸಿದ್ದ ಕೆ.ಎಸ್. ಅಶ್ವಥ್ ನಿಜ ಅರ್ಥದಲ್ಲಿ ಈ ಸಿನಿಮಾದ ಹೀರೊ.  ಅಶ್ವಥ್ ಅವರು ಅತ್ಯಂತ ಶ್ರೇಷ್ಠ ನಿರ್ವಹಣೆ ತೋರಿದ್ದು  ನಾಗರಹಾವು ಚಿತ್ರದ ಚಾಮಯ್ಯ ಮೇಸ್ಟ್ರ ಪಾತ್ರದಲ್ಲಿ ಎಂದು ಅನೇಕರು ಹೇಳುವುದಿದೆ. ಆದರೆ ನನ್ನ ಪ್ರಕಾರ ಜೇನುಗೂಡಿನಲ್ಲಿ ಅವರು ನಿರ್ವಹಿಸಿದ ಪಾತ್ರಕ್ಕೆ ಸರಿಸಾಟಿಯಾದದ್ದು ಯಾವುದೂ ಇಲ್ಲ.  ರಘುವಿನ ಪತ್ನಿ ಶಾಂತಾ ಆಗಿ ಪಂಢರಿಬಾಯಿ ಅವರ ಅಭಿನಯವೂ ಅತ್ಯುತ್ತಮ.  ತಮಿಳಿನ ಕುಲದೈವಂ ಮತ್ತು ಹಿಂದಿಯ ಭಾಭಿಯಲ್ಲಿ ಈ ಪಾತ್ರವನ್ನು  ಅವರೇ ನಿರ್ವಹಿಸಿದ್ದು ವಿಶೇಷ.  ಇನ್ನುಳಿದ ಕಲಾವಿದರೆಲ್ಲರೂ ಪಾತ್ರಗಳಿಗೆ ತಕ್ಕಂತೆ ಉತ್ತಮವಾಗಿಯೇ ಅಭಿನಯಿಸಿದ್ದಾರೆ.  ತಮಿಳು ಕುಲದೈವಂ ಚಿತ್ರದಲ್ಲಿ ಆರ್.ಸುದರ್ಶನಂ ಅವರ ಸಂಗೀತ ನಿರ್ದೇಶನದಲ್ಲಿ  ವಿಂಟೇಜ್ ಶೈಲಿಯ ಹಾಡುಗಳಿದ್ದವು.  ಆದರೆ ಹಿಂದಿಯ ಭಾಭಿಯಲ್ಲಿ ಅದುವರೆಗೆ ಪೌರಾಣಿಕ ಚಿತ್ರಗಳಿಗೆ ಸೀಮಿತವಾಗಿದ್ದ ಚಿತ್ರಗುಪ್ತ ಅವರು ನೀಡಿದ ಸಂಗೀತ ಸೂಪರ್ ಹಿಟ್ ಆಗಿ ಅವರನ್ನು ಸಂಗೀತ ನಿರ್ದೇಶಕರ ಮೊದಲ ಸಾಲಿನಲ್ಲಿ ತಂದು ನಿಲ್ಲಿಸಿತ್ತು.  ಚಲ್ ಉಡ್ ಜಾರೇ ಪಂಛಿ, ಚಲಿ ಚಲಿರೆ ಪತಂಗ್ ಮೇರಿ ಚಲಿರೆ, ಛುಪಾಕರ್ ಮೇರಿ ಆಂಖೊಂ ಕೊ ಮುಂತಾದ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಮುಂದೆ ಈ ಚಿತ್ರ ತೆಲುಗಿನಲ್ಲಿ ತಯಾರಾದಾಗ ಸಂಗೀತ ನಿರ್ದೇಶಕ ಮಾಸ್ಟರ್ ವೇಣು ಅವರು ಚಲ್ ಉಡ್ ಜಾರೇ ಪಂಛಿ ಮತ್ತು ಚಲಿ ಚಲಿ ರೆ ಪತಂಗ್ ಹಾಡುಗಳ ಧಾಟಿಗಳನ್ನು ಯಥಾವತ್ ಬಳಸಿಕೊಂಡರು.  ಆದರೆ ಜೇನುಗೂಡು ಚಿತ್ರಕ್ಕೆ ಸಂಗೀತ ಸಂಯೋಜಿಸಿದ ವಿಜಯಾ ಕೃಷ್ಣಮೂರ್ತಿ ಅವರು ತಮಿಳು, ಹಿಂದಿ, ತೆಲುಗು ಅವತರಣಿಕೆಗಳ ಯಾವ ಧಾಟಿಯನ್ನೂ ಬಳಸದೆ ಸ್ವಂತಿಕೆ ಮೆರೆದು ಇಡೀ ಆಲ್ಬಂ ಜನಪ್ರಿಯತೆಯ ತುತ್ತತುದಿಗೇರುವಂತೆ ಮಾಡಿ ಗೆದ್ದರು. ಇವರು ವಿಜಯಾ ಸ್ಟುಡಿಯೋದ ಕಾಯಂ ಮ್ಯೂಸಿಕ್ ಎರೇಂಜರ್ ಆಗಿದ್ದುದರಿಂದ  ವಿಜಯಾ ಪದವನ್ನು ತಮ್ಮ ಹೆಸರಿಗೆ ಪ್ರಿ ಫಿಕ್ಸ್ ಮಾಡಿಕೊಂಡಿದ್ದರಂತೆ.  ಕನ್ನಡದಲ್ಲಿ ಇದು ಅವರ ಮೊದಲ ಚಿತ್ರ.  ಆ ಮೇಲೆ ಮುರಿಯದ ಮನೆ , ವಾತ್ಸಲ್ಯ ಚಿತ್ರಗಳಲ್ಲೂ ಉತ್ತಮ ಹಾಡುಗಳನ್ನು ನೀಡಿದರು.

 ವಿಜಯಾ ಕೃಷ್ಣಮೂರ್ತಿ

ಆ ಕಾಲದಲ್ಲಿ ನನಗೆ ರೇಡಿಯೊದಲ್ಲಿ ಹಾಡುಗಳನ್ನು ಕೇಳುತ್ತಾ ಸಿನಿಮಾಗಳನ್ನು ಕನಸಿನ ಲೋಕದಲ್ಲಿ ಕಾಣುವ ಅವಕಾಶ ಮಾತ್ರ ಸಿಗುತ್ತಿದ್ದುದು.  ಆದರೆ ಬೇಸಿಗೆ ರಜೆಯಲ್ಲಿ ಕಾರ್ಕಳದ ಸಮೀಪವಿದ್ದ ಅಕ್ಕಂದಿರ ಮನೆಗಳಿಗೆ ಹೋಗುವಾಗ ಅಲ್ಲಿಯ ಜೈಹಿಂದ್ ಟಾಕೀಸಿನಲ್ಲಿ ಒಮ್ಮೊಮ್ಮೆ ಸಿನಿಮಾ ನೋಡುವುದಿತ್ತು.  ಬರಸಾತ್ ಕೀ ರಾತ್, ಕಿತ್ತೂರು ಚೆನ್ನಮ್ಮ, ಕನ್ಯಾರತ್ನ ಮುಂತಾದ ಚಿತ್ರಗಳನ್ನು ಅಲ್ಲಿ ನೋಡಿದ್ದೆ.  ಈ ಚಿತ್ರವನ್ನೂ ಜೈಹಿಂದ್ ಟಾಕೀಸಿನಲ್ಲಿಯೇ ನೋಡುವ ಅವಕಾಶ ನನಗೆ ಒದಗಿ ಬಂತು.  ಆದರೆ ಅಕ್ಕಂದಿರ ಮನೆಗೆ ಹೋಗುವಾಗ ಅಲ್ಲ.  ನಮ್ಮ ಅಣ್ಣ ಕಾರ್ಕಳದಿಂದ ಕಲ್ಲುಕಂಬಗಳನ್ನು  ತಂದು ಊರಿನಲ್ಲಿ ಅಗತ್ಯವಿದ್ದವರಿಗೆ ಸರಬರಾಜು ಮಾಡುವ ವ್ಯವಹಾರವನ್ನು ಕೆಲಕಾಲ ನಡೆಸಿದ್ದರು. ಆ ಒಂದು ಸಲ ಶಾಲೆಗೆ ರಜೆ ಇದ್ದುದರಿಂದ ನನ್ನನ್ನೂ ಜೊತೆಗೆ ಕರಕೊಂಡು  ಹೋಗಿದ್ದರು.  ಮುನ್ನಾದಿನ ಸಂಜೆಯೊಳಗೆ ಕಾರ್ಕಳ ತಲುಪಿ ಪರಿಚಯದವರ ಅಂಗಡಿಯಲ್ಲಿ ಕೂತಿದ್ದಾಗ  ಜೇನುಗೂಡು ಚಿತ್ರದ ಪೋಸ್ಟರುಗಳನ್ನು ಹಚ್ಚಿಕೊಂಡ  ಪ್ರಚಾರದ ಎತ್ತಿನ ಗಾಡಿ ಎದುರಿಂದ ಹಾದು ಹೋಯಿತು. ಆ ಕಾಲದಲ್ಲಿ ಸಣ್ಣ ಪಟ್ಟಣಗಳ ಟಾಕೀಸುಗಳಲ್ಲಿ  ಚಿತ್ರ ಬದಲಾದುದನ್ನು ಜನರಿಗೆ ತಿಳಿಯಪಡಿಸುವ ವಿಧಾನ ಇದೇ ಆಗಿತ್ತು.  ಅಂಗಡಿಗೆ ಬಂದು ಹೋಗುವವರೆಲ್ಲರೂ ಜೇನುಗೂಡಿನ ಬಗ್ಗೆಯೇ ಮಾತನಾಡುತ್ತಿದ್ದರು. ನೋಡಲೇ ಬೇಕಾದ ಚಿತ್ರವೆಂದು ಅಂಗಡಿಯವರೂ ಶಿಫಾರಸು ಮಾಡಿದರು. ಈ ಶಿಫಾರಸು ಇಲ್ಲದಿದ್ದರೂ ನಾವು ಅದನ್ನು ನೋಡದೆ ಏನೂ ಇರುತ್ತಿರಲಿಲ್ಲವೆನ್ನಿ.  ಅಂತೂ ಜೈಹಿಂದ್ ಟಾಕೀಸಿಗೆ ಭೇಟಿ ನೀಡಿ ಜೇನುಗೂಡಿನ ಜೇನಸವಿಯನ್ನು ಹೀರಿದೆವು. ಎಂದಿನಂತೆ ಪದ್ಯಾವಳಿ ಖರೀದಿಸುವುದನ್ನು ಮರೆಯಲಿಲ್ಲ.  ರಾತ್ರೆ ಆ ಅಂಗಡಿಯವರ ಮನೆಯಲ್ಲೇ ಹಾಲ್ಟ್ ಮಾಡಿ ಮರುದಿನ ಕಲ್ಲಿನ ಲೋಡು ತುಂಬಿದ ಲಾರಿಯಲ್ಲಿ ಊರಿಗೆ ಹಿಂತಿರುಗಿದೆವು. ಈ ಕಾರ್ಕಳ ಯಾತ್ರೆಯಲ್ಲಿ ನಮ್ಮಣ್ಣ ನನಗೆ ನೀಲಿ ಬಣ್ಣದ ಕ್ಯಾನ್‌ವಾಸ್ ಶೂಗಳನ್ನು ಕೊಡಿಸಿದ್ದರು. ಚಪ್ಪಲಿ ಧರಿಸುವುದೇ ಅಪರೂಪವಾಗಿದ್ದ ಆ ಕಾಲದಲ್ಲಿ ಶೂ ಸಿಕ್ಕಿದ್ದಕ್ಕೆ ನಾನು ಬಹಳ ಸಂಭ್ರಮ ಪಟ್ಟಿದ್ದೆ.



ಇಷ್ಟೆಲ್ಲ ನೆನಪುಗಳನ್ನು ಮರುಕಳಿಸುವಂತೆ ಮಾಡಿದ ಆ ಚಿತ್ರದ ಹಾಡುಗಳನ್ನು ಈಗ ಒಂದೊಂದಾಗಿ ಆಲಿಸೋಣ. ಒಂದು ಹಾಡನ್ನು ಸೋರಟ್ ಅಶ್ವಥ್ ಹಾಗೂ ಇನ್ನುಳಿದ ಹಾಡುಗಳನ್ನು ಕು.ರ.ಸೀ ರಚಿಸಿದ್ದಾರೆ.  ಕಥೆ ಇತ್ಯಾದಿ ಇತರ ವಿವರಗಳೆಲ್ಲವೂ ಪದ್ಯಾವಳಿಯಲ್ಲಿ ಲಭ್ಯವಿರುವುದರಿಂದ ನಾನು  ಇಲ್ಲಿ ಹೇಳಹೋಗುವುದಿಲ್ಲ. ಮೊದಲು ಅದರ ಮೇಲೊಮ್ಮೆ ಕ್ಲಿಕ್ಕಿಸಿ scroll ಮಾಡುತ್ತಾ ಕಣ್ಣಾಡಿಸಿ.  ಆ ಮೇಲೆ ಒಂದೊಂದೇ ಹಾಡಿನ ಸಾಹಿತ್ಯ ನೋಡುತ್ತಾ  ಆಲಿಸಿದರೆ ಖುಶಿ ದ್ವಿಗುಣಗೊಂಡೀತು.

ಪದ್ಯಾವಳಿ




ಒಂದಾಗಿ ಬಾಳುವ ಒಲವಿಂದ ಆಳುವ
ಚಿತ್ರದ ಟೈಟಲ್ಸ್ ಜೊತೆಗೆ ಹಿನ್ನೆಲೆಯಲ್ಲಿ ಕೇಳಿಸುವ ಹಾಡಿದು. ಚಿತ್ರದ ನಾಯಕ ರಘು ಮರಣ ಶಯ್ಯೆಯಲ್ಲಿರುವ ತಂದೆಗೆ ಔಷಧಿ ಹಿಡಿದುಕೊಂಡು ಓಡುತ್ತಿರುವ ದೃಶ್ಯ ಹಿನ್ನೆಲೆಯಲ್ಲಿ ಕಾಣುತ್ತಿರುತ್ತದೆ. ಎಳೆ ಪ್ರಾಯದ ರಘು ಆಗಿ ರತ್ನಾಕರ್ ಕಾಣಿಸಿಕೊಂಡಿದ್ದಾರೆ. ಬಾಳು ನಂದನವಾಗಬೇಕಾದರೆ ಸ್ವಾರ್ಥವಿಲ್ಲದ ಸಹಜೀವನದ ಹೊರತು ಅನ್ಯ ಮಾರ್ಗವಿಲ್ಲ ಎಂದು ಸಾರುತ್ತದೆ ಈ ಗೀತೆ.  ವಿಜಯಾ ಕೃಷ್ಣಮೂರ್ತಿ ಅವರು ತನ್ನ music arrangementನ ಅನುಭವವನ್ನೆಲ್ಲ ಧಾರೆ ಎರೆದು ಸಿದ್ಧಪಡಿಸಿದಂತಿದೆ ಈ ಸಂಯೋಜನೆ. ಹಾಡಿನುದ್ದಕೂ melody, counter melodyಗಳ ಸಮತೋಲನವಿದೆ.  ಈ ಹಾಡಿನ ಮೂರು versionಗಳಿದ್ದು ಘಂಟಸಾಲ ಅವರು ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಭಾವ ತುಂಬಿ ಹಾಡಿದ್ದಾರೆ.



ಜೇನಿರುಳು ಜೊತೆಗೂಡಿರಲು


ರಘುವಿನ ತಮ್ಮ ರಮೇಶ್ ಮತ್ತು ಆತನ ಪತ್ನಿ ತಾರಾ ಮದುವೆಯಾದೊಡನೆ ಹಾಡುವ ಗೀತೆಯಿದು. ನವ ದಂಪತಿಗಳಲ್ಲಿರಬಹುದಾದ ಕುತೂಹಲ, ಅಜ್ಞಾನ, ಅಂಜಿಕೆ, ಭವಿಷ್ಯದ ಕನಸುಗಳು ಎಲ್ಲದರ ಸುಂದರ ನಿರೂಪಣೆ ಇದೆ ಇದರಲ್ಲಿ.  ಸೂರ್ಯಕುಮಾರ್ ಎಂಬ ಅಷ್ಟೊಂದು ಹೆಸರುವಾಸಿಯಲ್ಲದ ನಟ ಮತ್ತು ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಜಯಂತಿ ಅವರ ಅಭಿನಯವಿದೆ. ಇವರ ಸಿಹಿ ದಾಂಪತ್ಯದ ಜೊತೆಗೆ  ರಾಜಾ(ಉದಯ ಕುಮಾರ್) ಮತ್ತು ಮಂಗಳ(ಲಕ್ಷ್ಮಿ ದೇವಿ) ಅವರ  ಕಹಿ ದಾಂಪತ್ಯದ   ದೃಶ್ಯಗಳೂ ಕಾಣಿಸುತ್ತವೆ.



ಹೆಸರಿಗೆ ರಂಗ


ತಾನು ಬಾಲವಿಧವೆಯೆಂದು ಗೊತ್ತಿಲ್ಲದ ಲತಾ, ರಘುವಿನ ಕಿರಿಯ ತಮ್ಮ ರಂಗನನ್ನು ಛೇಡಿಸುವ ತುಂಟತನದ ಹಾಡು..  ಹಿಂದಿಯಲ್ಲಿ ಈ ಸಂದರ್ಭಕ್ಕೆ ಟೈ ಲಗಾಕೆ ಮಾನಾ ಬನ್ ಗಯೆ ಜನಾಬ್ ಹೀರೊ ಹಾಡಿತ್ತು. ರಂಗನ ಪಾತ್ರ ನಿರ್ವಹಿಸಿದ್ದ ಜಿ.ವಿ.ಶಿವರಾಜ್ ಈ ಚಿತ್ರ ಮುಗಿಯುವಷ್ಟರಲ್ಲಿ ಎಳೆ ಪ್ರಾಯದಲ್ಲೇ ನಿಧನರಾದರು.



ಜಿಗಿಜಿಗಿಯುತ ನಲಿ


ಕೀಟಲೆಯು ವಯೋಸಹಜ ಒಲವಾಗಿ ಪರಿವರ್ತನೆಗೊಂಡು  ಒಬ್ಬರಿಗೊಬ್ಬರು ಸಮೀಪವಾಗುತ್ತಾ ಹೋದ ಲತಾ ಮತ್ತು ರಂಗ ಗಾಳಿಪಟ ಹಾರಿಸುವ ಸನ್ನಿವೇಶದ ಸೋರಟ್ ಅಶ್ವಥ್ ರಚಿಸಿದ ಹಾಡು. ಜೆ.ವಿ. ರಾಘವುಲು ಮತ್ತು ಎಲ್.ಆರ್. ಈಶ್ವರಿ ಹಾಡಿದ್ದಾರೆ.  ಹಾಡಿನ ಧ್ವನಿಮುದ್ರಿಕೆಯಲ್ಲಿ ಎರಡು ಚರಣಗಳು ಮಾತ್ರವಿದ್ದು ಚಿತ್ರದಲ್ಲಿ ಒಂದು ಹೆಚ್ಚುವರಿ ಚರಣವಿದೆ.  ಆದರೆ ಅಂತರ್ಜಾಲದಲ್ಲಿ ಲಭ್ಯವಿರುವ ಚಿತ್ರದ ಪ್ರಿಂಟು  ಅಲ್ಲಲ್ಲಿ ಕ್ಷತಿಗೊಂಡಿರುವುದರಿಂದ   ಹಾಡು ಕೇಳುವಾಗ ರಸಭಂಗವಾಗುತ್ತದೆ.  ಇದು ನಾನು ವಿಶೇಷವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿ ಸಿದ್ಧಪಡಿಸಿದ  ಮೂರು ಚರಣದ ವರ್ಷನ್.  ಈ ಹಾಡಿನ ಬಗ್ಗೆ ಹೆಚ್ಚಿನ ಮಾಹಿತಿ ಜಿಗಿಜಿಗಿಯುವ ಹಾಡು ಲೇಖನದಲ್ಲಿ ಲಭ್ಯವಿದೆ. ಭಾಭಿಯಲ್ಲಿ ಚಲಿ ಚಲಿ ರೆ ಪತಂಗ್ ಮೇರಿ ಚಲಿರೆ ಈ ಸನ್ನಿವೇಶದ ಹಾಡಾಗಿತ್ತು.



ಬಾಳೊಂದು ನಂದನ 1


ಸೊಸೆಯರ ಕಾರಸ್ಥಾನದಿಂದ ಅಣ್ಣ ತಮ್ಮಂದಿರ ನಡುವೆ ವಿರಸದ ಬೀಜ ಮೊಳೆತು ಮನನೊಂದ ರಘು ಎಲ್ಲವನ್ನೂ ಬಿಟ್ಟು ಹಳ್ಳಿಯ ಮನೆಗೆ ಹೊರಟು ನಿಂತಾಗ ಹಿನ್ನೆಲೆಯಲ್ಲಿ ಕೇಳಿಸುವ ಹಾಡು. ಒಂದಾಗಿ ಬಾಳುವ ಹಾಡಿನದೇ ಟ್ಯೂನ್ ಆದರೆ ಮೂಡ್ ಬೇರೆ.  ಪಲ್ಲವಿ ಮತ್ತು ಚರಣಗಳ ಸಾಹಿತ್ಯ ಸಂಪೂರ್ಣ ಭಿನ್ನ. ಹಾಡಿನ ಮೂಡಿಗೆ ಹೊಂದುವ ಆರ್ಕೆಸ್ಟ್ರೇಶನ್.  ಹಿಂದಿಯ ಚಲ್ ಉಡ್ ಜಾರೆ ಪಂಛಿ ಹಾಡಿನ ಹಕ್ಕಿಯ ಉಪಮೆ ಅಥವಾ ಅದರ ಟ್ಯೂನ್ ಯಾವುದನ್ನೂ ಬಳಸದೇ ಇರುವುದು ಇಲ್ಲಿಯ ವಿಶೇಷ.



ನಾಗವೇಣಿ ರಜತಗಿರಿಗೆ


ಆ ಕಾಲದಲ್ಲಿ  ನಾಯಕ, ನಾಯಕಿ, ಇತರ ನಟರು ಯಾರೇ ಆಗಿರಲಿ;  ಪ್ರತಿ ಸಿನಿಮಾದಲ್ಲಿ ಬಾಲಕೃಷ್ಣ ಮತ್ತು ನರಸಿಂಹರಾಜು ಇರಲೇ ಬೇಕಿತ್ತು.  ಇಲ್ಲವಾದರೆ ಚಿತ್ರಗಳಿಗೆ ಹಂಚಿಕೆದಾರರೇ ದೊರೆಯುತ್ತಿರಲಿಲ್ಲ.  ಇದು ಬಾಲಣ್ಣ ಮನ್ಮಥನಾಗಿ ಮತ್ತು ನರಸಿಂಹರಾಜು ರತಿಯಾಗಿ ಅಭಿನಯಿಸಿದ ಕಾಮದಹನ ನಾಟಕ ಸನ್ನಿವೇಶದ ಹಾಡು. ಇದರಲ್ಲಿ ರಾಜನ್-ನಾಗೇಂದ್ರ ಜೋಡಿಯ ನಾಗೇಂದ್ರ ಅವರ ಧ್ವನಿಯಿರುವುದು ವಿಶೇಷ.  ಸತ್ಯ ಹರಿಶ್ಚಂದ್ರ ಚಿತ್ರದ ಕಾಲ ಕೌಶಿಕನ ಮುಂದೆ ಅವರು ಹಾಡಿದ ತಮ್ಮದಲ್ಲದ ಇನ್ನೊಂದು ಹಾಡು.  ಗ್ರಾಮೀಣ ಪ್ರದೇಶದ ಉತ್ಸಾಹಿಗಳು ಅಭಿನಯಿಸುವ ನಾಟಕಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅನಗತ್ಯ ಮಹಾಪ್ರಾಣ ಇತ್ಯಾದಿಗಳನ್ನು ಇಲ್ಲಿ ಬೇಕೆಂದೇ  ಅಳವಡಿಸಿಕೊಳ್ಳಲಾಗಿದೆ.   ಸ್ಮೃತಿ ತಪ್ಪಿ ಬಿದ್ದ ರತಿ ಪ್ರೇಕ್ಷಕರ ಒನ್ಸ್ ಮೋರ್ ಕೇಳಿ ಮೇಲೆದ್ದು ಮತ್ತೆ ಹಾಡು ಹೇಳುತ್ತಾಳೆ! ಕಂಪನಿ ನಾಟಕಗಳಲ್ಲಿ ಇಂತಹ ಪ್ರಸಂಗಗಳು ನಡೆಯುತ್ತಿದ್ದುವಂತೆ. ಈ ಹಾಡಿನ ಧ್ವನಿಮುದ್ರಿಕೆ ತಯಾರಾಗಿರಲಿಲ್ಲ.  ಹೀಗಾಗಿ ಚಿತ್ರದ ಹೊರಗೆ  ಈ ಹಾಡು ಕೇಳುವಂತೆಯೇ ಇರಲಿಲ್ಲ.



ಬಾಳೊಂದು ನಂದನ 2


ತಾನು ವಿಧವೆಯೆಂದು ತಿಳಿದ ಲತಾ ತನ್ನ ಗಂಡನ ಸಂಬಂಧಿಗಳ ಜೊತೆ ಇರಲು ತೆರಳುವಾಗ ಮರುಕಳಿಸುವ ಹಾಡು.  ಆದರೆ ಸನ್ನಿವೇಶಕ್ಕೆ ತಕ್ಕಂತೆ ಭಿನ್ನ ಚರಣಗಳು. ಹೊಮ್ಮುವ ಭಾವಗಳೂ ಬೇರೆ.  ಒಂದು ಚರಣದಲ್ಲಿ  ರಂಗನ ಮನದಾಶೆಯ ಮಹದಾಶಯ ಮಣ್ಣಾಗಿ ಹೋದ ಬೇಗುದಿಯೂ ಪ್ರತಿಫಲಿತವಾಗಿದೆ.



ಈಗ ಇಂತಹ ಹಳೆಯ  ಹಾಡುಗಳು ವಿವಿಧ ಮಾಧ್ಯಮಗಳಲ್ಲಿ ಸುಲಭವಾಗಿ ಲಭ್ಯವಿವೆ.  ಆದರೆ 80 ಮತ್ತು  90ರ ದಶಕಗಳು ಹಳೆ ಹಾಡುಗಳ ಬರಗಾಲ ಬಾಧಿಸಿದ್ದ ಕಾಲ.  ಆಗ ಏಕೈಕ ಮಾಧ್ಯಮವಾಗಿದ್ದ ರೇಡಿಯೊದಲ್ಲಿ ತತ್ಕಾಲೀನ ಹಾಡುಗಳು ಮಾತ್ರ ಪದೇ ಪದೇ ಪ್ರಸಾರವಾಗುತ್ತಿದ್ದವು.  ಬೆಂಗಳೂರು ಮತ್ತು ಧಾರವಾಡ ವಿವಿಧಭಾರತಿಗಳಲ್ಲಿ ಹಳೆ ಹಾಡುಗಳು ಬರುತ್ತಿದ್ದರೂ ಅವುಗಳ ಪ್ರಸಾರ ವ್ಯಾಪ್ತಿ  ನಮ್ಮನ್ನು ತಲುಪುವಷ್ಟಿರಲಿಲ್ಲ.  ಹೀಗಾಗಿ ನಾನು ಯಾವತ್ತಾದರೂ ತರಬೇತಿ ಇತ್ಯಾದಿಗಳಿಗೆ ಬೆಂಗಳೂರಿಗೆ ಹೋಗುವ ಸಂದರ್ಭ ಬಂದರೆ ಟೇಪ್ ರೆಕಾರ್ಡರ್ ಜೊತೆಗೇ ಕೊಂಡೊಯ್ಯುತ್ತಿದ್ದೆ.  ಆದರೆ ಹಳೆ ಹಾಡುಗಳು ಬರುತ್ತವೆಂದು ನಾನು ಕಾದು ಕುಳಿತಾಗ ತತ್ಕಾಲೀನ ಹಾಡುಗಳ ಚರ್ವಿತ ಚರ್ವಣವೇ ಕೇಳಿ ಬರುತ್ತಿದ್ದುದು ಹೆಚ್ಚು.  ಆದರೂ ಕೆಲ ಹಾಡುಗಳನ್ನು ಈ ರೀತಿ capture ಮಾಡಲು ನನಗೆ ಸಾಧ್ಯವಾಗಿತ್ತು. ಕ್ಯಾಸೆಟ್ ಯುಗ ಆರಂಭವಾದ ಮೇಲೂ ನಮಗೆ ಬೇಕಿದ್ದ ಹಾಡುಗಳು ಸಿಗುತ್ತಿದ್ದುದು ಕಮ್ಮಿ.  ಹಳೆ ಹಾಡುಗಳಿಗಾಗಿ ನಾನು ಎಡತಾಕದ ಕ್ಯಾಸೆಟ್ ಅಂಗಡಿಗಳಿಲ್ಲ.  ನಾನು ಮೊತ್ತಮೊದಲು ಕೇಳುತ್ತಿದ್ದುದು ಜೇನುಗೂಡು ಕ್ಯಾಸೆಟ್ ಇದೆಯೇ ಎಂದು.  ಕೆಲವೆಡೆ ಇದೆ ಎಂದುತ್ತರಿಸಿ ಆ ಹೆಸರಿನ ಯಾವುದೋ ಜಾನಪದ ಹಾಡುಗಳ ಕ್ಯಾಸೆಟ್ ತೋರಿಸುತ್ತಿದ್ದರು.  ಕನ್ನಡ ದೂರದರ್ಶನ ರಾಜ್ಯವ್ಯಾಪಿಯಾದ ಮೇಲೆ ಅಲ್ಲಿಂದ ಪ್ರಸಾರವಾಗುತ್ತಿದ್ದ ಹಳೇ ಸಿನಿಮಾಗಳು ಮತ್ತು ಬೆಳ್ಳಿ ಬೆಡಗು ಕಾರ್ಯಕ್ರಮಗಳಿಂದ ಎಷ್ಟೋ ಹಾಡುಗಳನ್ನು ಧ್ವನಿಮುದ್ರಿಸಿಕೊಂಡಿದ್ದೇನೆ.  ಈಗ ಅಂತರ್ಜಾಲ ಕ್ರಾಂತಿಯಿಂದಾಗಿ ಬಹು ಕಾಲದಿಂದ ಬಯಸಿದ್ದ ಎಷ್ಟೋ ಅಪರೂಪದ ಹಾಡುಗಳು  ಕೈ ಬೆರಳ ತುದಿಯಲ್ಲೇ ಸಿಗುವುದು ನಮ್ಮೆಲ್ಲರ ಭಾಗ್ಯವೇ ಸರಿ.

ಜೇನುಗೂಡು  ಚಿತ್ರವು ಅಂತರ್ಜಾಲದಲ್ಲಿ ಲಭ್ಯವಿದ್ದು ಇಲ್ಲಿ ನೋಡಬಹುದು.



Wednesday 18 January 2017

ರೇಡಿಯೊ ಟೈಮ್ ಟೇಬಲ್




ಈ ಟೈಮ್ ಟೇಬಲ್ ಯಾವುದೇ ರೇಡಿಯೋ ಸ್ಟೇಶನ್, ಹಾಸ್ಟೆಲ್ ಅಥವಾ ರೇಡಿಯೊ ಪೆವಿಲಿಯನ್ನಿಗೆ ಸಂಬಂಧಿಸಿದ್ದಲ್ಲ.  60ರ ದಶಕದ ಆದಿ ಭಾಗದಲ್ಲಿ ನಮ್ಮ ಮನೆಗೆ ರೇಡಿಯೊ ಆಗಮನವಾದ ಮೇಲೆ ತಾನಾಗಿ ರೂಪುಗೊಂಡಿದ್ದ  ಅಲಿಖಿತ ಟೈಮ್ ಟೇಬಲ್. ಆಗ ನಾನು ಆರನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯಾಗಿದ್ದರೂ ಕೆಲವೇ ದಿನಗಳಲ್ಲಿ ರೇಡಿಯೋದ ನಿಯಂತ್ರಣವನ್ನು ಕೈವಶ ಮಾಡಿಕೊಂಡು  ಒಂದೆರಡು ತಿಂಗಳೊಳಗೆ ಸಾಕಷ್ಟು R&D ಮಾಡಿ ಯಾವ ಭಾಷೆಯ ಯಾವ ಸ್ಟೇಶನ್ನಿನಿಂದ ಎಷ್ಟು ಹೊತ್ತಿಗೆ ಯಾವ ಉತ್ತಮ ಕಾರ್ಯಕ್ರಮ ಬರುತ್ತದೆಂಬ ಮಾಹಿತಿ ಕಲೆ ಹಾಕಿ ಮನೆ ಮಂದಿಯೆಲ್ಲ ಮೆಚ್ಚುವ ರೇಡಿಯೋ ಆಪರೇಟರ್ ಅನ್ನಿಸಿಕೊಂಡಿದ್ದೆ!  ಕೂಡು ಕುಟುಂಬದ ಮನೆಯಲ್ಲಿ ವಿವಿಧ ವಯೋಮಾನದ ವಿವಿಧ ಅಭಿರುಚಿಯ ಕೇಳುಗರಿರುವುದು ಸಹಜ.  ಸಾಮಾನ್ಯವಾಗಿ ಕನ್ನಡ ಚಿತ್ರಗೀತೆ ಹಾಗೂ ಇತರ ಕನ್ನಡ ಕಾರ್ಯಕ್ರಮಗಳನ್ನು ಎಲ್ಲರೂ ಇಷ್ಟ ಪಡುತ್ತಿದ್ದರು. ನಮ್ಮ ತಾಯಿಯವರಿಗೆ ಮರಾಠಿ ಕಾರ್ಯಕ್ರಮಗಳೆಂದರೆ  ಅಚ್ಚುಮೆಚ್ಚು. ಹಿರಿಯ ಅಣ್ಣಂದಿರಿಗೆ ಶಾಸ್ತ್ರೀಯ ಸಂಗೀತದತ್ತ ಹೆಚ್ಚು ಒಲವು.   ಕಿರಿಯ ಅಣ್ಣ ಮತ್ತು ನನ್ನ ಮೊದಲ ಆಯ್ಕೆ ಸಿಲೋನ್ ಮತ್ತು ವಿವಿಧಭಾರತಿ.

ವಿದ್ಯುತ್ ಸಂಪರ್ಕ ಇರದ ಹಳ್ಳಿಯ  ನಮ್ಮ ಮನೆಯಲ್ಲಿ ಇದ್ದುದು 6 ಟಾರ್ಚ್ ಸೆಲ್ಲುಗಳಿಂದ ನಡೆಯುವ ಅತ್ಯಂತ ಶಕ್ತಿಶಾಲಿಯಾದ 4  ಬ್ಯಾಂಡಿನ ನ್ಯಾಶನಲ್ ಎಕ್ಕೊ ಟೇಬಲ್ ಟ್ರಾನ್ಸಿಸ್ಟರ್. ಅದಕ್ಕೆ ನಮ್ಮಣ್ಣ ಅತ್ಯಂತ ಎತ್ತರದ ಏರಿಯಲ್ ಅಳವಡಿಸಿದ್ದರಿಂದ ಶಾರ್ಟ್ ವೇವ್ ಸ್ಟೇಶನ್ನುಗಳ ಜೊತೆಗೆ  ದೂರ ದೂರದ  ಮೀಡಿಯಂ ವೇವ್ ನಿಲಯಗಳನ್ನೂ ಸುಸ್ಪಷ್ಟವಾಗಿ  ಕೇಳಲು ಸಾಧ್ಯವಾಗುತ್ತಿತ್ತು.  ಆಗ ನಮ್ಮ ರಾಜ್ಯದಲ್ಲಿ ಇದ್ದ ಆಕಾಶವಾಣಿ ನಿಲಯಗಳು ಬೆಂಗಳೂರು ಮತ್ತು ಧಾರವಾಡ ಮಾತ್ರ. ಕೆಲ ಕಾಲದ ನಂತರ ಬೆಂಗಳೂರಿನ ಕಾರ್ಯಕ್ರಮಗಳನ್ನು ಮರುಪ್ರಸಾರ ಮಾಡಲು   ಭದ್ರಾವತಿ ಮತ್ತು ಧಾರವಾಡದ ಮರುಪ್ರಸಾರಕ್ಕೆ ಗುಲ್ಬರ್ಗ ಕೇಂದ್ರಗಳು ಆರಂಭಗೊಂಡವು. ಕೆಲ ವರ್ಷಗಳ ನಂತರವಷ್ಟೇ ಇವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸತೊಡಗಿದವು.  ಈ ಎಲ್ಲ  ಮೀಡಿಯಂ ವೇವ್ ನಿಲಯಗಳು  ಆಗಿನ ಕಾಲದಲ್ಲಿ ಹಗಲು ಹೊತ್ತಿನಲ್ಲೂ ಈಗಿನ FM ಪ್ರಸಾರಕ್ಕಿಂತಲೂ ಚೆನ್ನಾಗಿ ಕೇಳಿಸುತ್ತಿದ್ದವು. ಒಂದಿನಿತೂ ಹಿಸ್ಸಿಂಗ್ ಸದ್ದಿರುತ್ತಿರಲಿಲ್ಲ.  ಮನೆಗೆ ಬಂದ ಬಂದು ಬಾಂಧವರು ಈ ಸ್ಪಷ್ಟತೆ ಕಂಡು ಬೆರಗಾಗುತ್ತಿದ್ದರು.   ರಾತ್ರಿವೇಳೆಯಂತೂ  ಮೀಡಿಯಂ ವೇವ್ ಬ್ಯಾಂಡ್ ಲೆಕ್ಕವಿಲ್ಲದಷ್ಟು ವಿವಿಧ ಭಾಷೆಗಳ ನಿಲಯಗಳಿಂದ ತುಂಬಿಹೋಗುತ್ತಿತ್ತು. 

ದಿನದ ಆರಂಭವಾಗುತ್ತಿದ್ದುದು ಮುಂಬಯಿ ಅಥವಾ ಪುಣೆ ಕೇಂದ್ರದಿಂದ ಪ್ರಸಾರವಾಗುತ್ತಿದ್ದ ಮರಾಠಿ ಅಭಂಗ ಹಾಗೂ ಭಕ್ತಿ ಗೀತೆಗಳೊಂದಿಗೆ. ಈ ನಿಲಯಗಳು ಸುಮಾರು 6-30ರ ವರೆಗೆ ಸ್ಪಷ್ಟವಾಗಿ ಕೇಳುತ್ತಿದ್ದವು. ಮುಂದೆ ಬೆಂಗಳೂರು ಕೇಂದ್ರದಿಂದ ಗೀತಾರಾಧನ. 7 ಗಂಟೆಗೆ ರೇಡಿಯೊ ಸಿಲೋನಿನಿಂದ ವಾದ್ಯ ಸಂಗೀತ್.  7-15ಕ್ಕೆ ಏಕ್ ಹೀ ಫಿಲ್ಮ್ ಕೇ ಗೀತ್.  7-30 ಕ್ಕೆ ಬೆಂಗಳೂರಿನತ್ತ ಮರಳಿ ವಾರ್ತಾ ಪ್ರಸಾರ ಮತ್ತು 7-45ರ ಕನ್ನಡ ಚಿತ್ರಗೀತೆಗಳು. ಧಾರವಾಡ, ಭದ್ರಾವತಿ, ಗುಲ್ಬರ್ಗ ಕೇಂದ್ರಗಳಿಂದಲೂ ಅದೇ ಹೊತ್ತಿಗೆ ಚಿತ್ರಗೀತೆಗಳ ಪ್ರಸಾರವಿರುತ್ತಿದ್ದುದರಿಂದ ಉತ್ತಮ ಹಾಡಿನ ನಿರೀಕ್ಷೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಮೂಲಕ  ಈ ಎಲ್ಲ ನಿಲಯಗಳ ಮಧ್ಯೆ ಆಗಾಗ ಮುಳ್ಳು ತಿರುಗಿಸುತ್ತಿರಬೇಕಾಗುತ್ತಿತ್ತು. 8 ಗಂಟೆಗೆ ಆಪ್ ಹೀ ಕೆ ಗೀತ್ ಕಾರ್ಯಕ್ರಮಕ್ಕಾಗಿ ಮತ್ತೆ ರೇಡಿಯೋ ಸಿಲೋನ್.  ಈ ಕಾರ್ಯಕ್ರಮದ ಪ್ರಥಮ ಅರ್ಧ ಗಂಟೆಯೊಳಗೆ ಉತ್ತಮ ಹಾಡುಗಳು ಮುಗಿಯುತ್ತಿದ್ದುದರಿಂದ ಸಾಮಾನ್ಯವಾಗಿ ಅಲ್ಲಿಗೆ ಬೆಳಗ್ಗಿನ ಆಲಿಸುವಿಕೆ ಮುಕ್ತಾಯವಾಗುತ್ತಿತ್ತು. ವಾರದ ಕಾರ್ಯಕ್ರಮಗಳ ಮೇಲೆ ಮುನ್ನೋಟ ಬೀರುವ ಭಾನುವಾರ ಬೆಳಗ್ಗಿನ ಪಕ್ಷಿನೋಟದ ಬಗ್ಗೆ ಬಂಧುವೊಬ್ಬರು ಮಾಹಿತಿ ನೀಡಿದ ಮೇಲೆ  ಅದನ್ನೆಂದೂ ತಪ್ಪಿಸಲಿಲ್ಲ.  ಆದರೆ ಅದನ್ನು ಪ್ರಸ್ತುತಪಡಿಸುವಾಗ ಸುಮಾರು ಬುಧವಾರದ ವರೆಗೆ ವಿವರವಾಗಿ ಹೇಳಿ ಕೊನೆ ಕೊನೆಗೆ ಸಮಯ ಸಾಲದೆ ನಂತರದ ಮುಖ್ಯ ಕಾರ್ಯಕ್ರಮಗಳನ್ನು ಬಿಟ್ಟು ಬಿಡುವುದು ಪ್ರತಿ ವಾರ ಸಂಭವಿಸುತ್ತಿದ್ದ ವಿದ್ಯಮಾನವಾಗಿತ್ತು!

ಬೆಳಗ್ಗೆ ಹನ್ನೊಂದು ಗಂಟೆಯಿಂದ ಶಾರ್ಟ್ ವೇವ್ ವಿವಿಧಭಾರತಿಯ ಹಿಂದಿ ಹಾಡುಗಳು. ಮಧ್ಯಾಹ್ನ 12 ಗಂಟೆಗೆ   ಬೆಂಗಳೂರು ಕೇಂದ್ರದಿಂದ ಕಾರ್ಮಿಕರ  ಕಾರ್ಯಕ್ರಮ. ಇದರಲ್ಲಿ ಆಗಾಗ ಚಿತ್ರಗೀತೆಗಳನ್ನಾಧರಿಸಿದ ರೂಪಕಗಳು ಪ್ರಸಾರವಾಗುತ್ತಿದ್ದವು. 12-30 ಕ್ಕೆ ವನಿತಾ ವಿಹಾರ, ಹಕ್ಕಿಯ ಬಳಗ ಇತ್ಯಾದಿ.  ಮಧ್ಯಾಹ್ನದ ಕನ್ನಡ ವಾರ್ತೆಗಳ ನಂತರ ಧಾರವಾಡ ಕೇಂದ್ರದಿಂದ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ ಅಭಿಲಾಷಾ.  70ರ ದಶಕದಲ್ಲಿ ರೇಡಿಯೊ ಸಿಲೋನ್ ಮಧ್ಯಾಹ್ನದ ಪ್ರಸಾರ ಆರಂಭಿಸಿದ ಮೇಲೆ ಇವೆಲ್ಲವುಗಳ ಸ್ಥಾನವನ್ನು ಅಲ್ಲಿಯ ಬಹನೋಂ ಕೀ ಪಸಂದ್ ಮತ್ತು ಜಾನೆ ಪಹಚಾನೆ ಗೀತ್ ಆಕ್ರಮಿಸಿಕೊಂಡವು. ಮಧ್ಯಾಹ್ನ ಊಟದ ನಂತರ ತುಂಬಿದ ಹೊಟ್ಟೆಗೆ ಒಗ್ಗರಣೆಯಂತೆ ರೇಡಿಯೊ ಸಿಲೋನಿನ ಕನ್ನಡ ಹಾಡುಗಳು. 60ರ ದಶಕದಲ್ಲಿ ವಾರಕ್ಕೊಂದು ದಿನ ಕಾಲು ಗಂಟೆ ಇದ್ದ ಕನ್ನಡ ಹಾಡುಗಳ ಪ್ರಸಾರ 70ರ ದಶಕದಲ್ಲಿ ದಿನಾ ಅರ್ಧ ಗಂಟೆಗೆ ಬಡ್ತಿ ಹೊಂದಿತ್ತು.  ಆರಂಭದ ಕೆಲ ವರುಷ announcements ತಮಿಳು ಭಾಷೆಯಲ್ಲೇ ಇರುತ್ತಿತ್ತು. ಹೀಗಾಗಿ `ಇದ್ ಇಲಂಗ ವಾನುಲಿ ವರ್ತಗ ಒಲಿಪರಪ್ಪು. ಇಪ್ಪುಡುದು ನೇರಂ ಎರಂಡ್ ಮಣಿ.  ಎರಂಡ್ ಮುಪ್ಪದ್ ವರೈ ಕನ್ನಡ ಪಾಡಲ್' ಎಂಬಿತ್ಯಾದಿ ಕೆಲ ತಮಿಳು ವಾಕ್ಯಗಳನ್ನು ಕಲಿಯಲು ಸಾಧ್ಯವಾಗಿತ್ತು.  ಕೆಲ ಕಾಲದ ನಂತರ ಗೌರಿ ಮುನಿರತ್ನಂ, ಮೀನಾಕ್ಷಿ ಪೊಣ್ಣುದೊರೈ, ತುಲಸಿ ಸಮೀರ್ ಮುಂತಾದವರು ಕನ್ನಡದಲ್ಲಿ ನಿರೂಪಣೆ ಮಾಡುತ್ತಿದ್ದರು. ಆ ಮೇಲೆ ವಿವಿಧಭಾರತಿಯಿಂದ ಹಿಂದಿ ಫರ್ಮಾಯಿಷೀ ಹಾಡುಗಳ ಮನೋರಂಜನ್. ಭಾನುವಾರ ಬೆಂಗಳೂರು ಕೇಂದ್ರದಿಂದ ಪ್ರಸಾರವಾಗುತ್ತಿದ್ದ ಚಲನಚಿತ್ರ ಧ್ವನಿವಾಹಿನಿಯನ್ನು ಯಾವತ್ತೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಭಾನುವಾರದ ಪೂರ್ವಾಹ್ನವಿಡೀ ರೇಡಿಯೋ ಸಿಲೋನಿಗೆ ಮೀಸಲಾಗಿರುತ್ತಿತ್ತು. ಈ ಬಗ್ಗೆ ರೇಡಿಯೋ ಸಿಲೋನ್ ವಾರಾಂತ್ಯ ಲೇಖನದಲ್ಲಿ ವಿವರಗಳಿವೆ.   ಅಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಮದರಾಸು ಕೇಂದ್ರದಿಂದ ಹೂಮಳೆ ಎಂಬ ಕನ್ನಡ ಸಾಪ್ತಾಹಿಕ ಕಾರ್ಯಕ್ರಮ ಇರುತ್ತಿತ್ತು.  ಅದರಲ್ಲಿ ಅನೇಕ ಸಲ ರಾಜಕುಮಾರ್ ಅವರು ಭಕ್ತ ಕನಕದಾಸ ಚಿತ್ರದ ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು ಹಾಡಿದ್ದನ್ನು ಕೇಳಿದ್ದೇನೆ.

3 ಗಂಟೆಯಿಂದ 4 ಗಂಟೆ ವರೆಗೆ ಒಂದೋ AIR ಉರ್ದು ಸರ್ವಿಸ್ ಇಲ್ಲವೇ ಮಾಲ್ದಿವ್ಸ್ ದ್ವೀಪರಾಷ್ಟ್ರದ ಮಾಲೈ ರೇಡಿಯೊ  ಪ್ರಸಾರ ಮಾಡುತ್ತಿದ್ದ ಹಿಂದಿ ಹಾಡುಗಳನ್ನು ಕೇಳುವ ಸಮಯವಾಗಿತ್ತು. 4 ಗಂಟೆಗೆ ವಿವಿಧಭಾರತಿಯಿಂದ ಹಿಂದಿ ಭಾಷೆಯ ನಿರೂಪಣೆಯೊಂದಿಗೆ ದಕ್ಷಿಣ ಭಾರತೀಯ ಭಾಷಾ ಹಾಡುಗಳ ಕರ್ನಾಟಕ್ ಸಂಗೀತ್ ಸಭಾ   ಆರಂಭ. ಇದರಲ್ಲಿ ಮೊದಲು ಕಾಲು ಗಂಟೆ ಭಕ್ತಿ ಗೀತೆಗಳು.  ನಂತರ ಅರ್ಧ ಗಂಟೆ ಸುಗಮ ಸಂಗೀತ.  ಆ ಮೇಲೆ ಒಂದು ಗಂಟೆ ಚಿತ್ರ ಸಂಗೀತದ ಮಧುರ್ ಗೀತಂ. ಇದರಲ್ಲಿ   ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳ ಭಾಷೆಗಳ ಸರದಿ ಪ್ರತಿ ತಿಂಗಳಿಗೊಮ್ಮೆ ಚಕ್ರಾಕಾರವಾಗಿ ಬದಲಾಗುತ್ತಿತ್ತು. ಆಗ ವಿವಿಧಭಾರತಿಯ ಶಾರ್ಟ್ ವೇವ್ ಪ್ರಸಾರ 31 ಮತ್ತು 41 ಮೀಟರ್ ಬ್ಯಾಂಡಿನಲ್ಲಿ ಇರುತ್ತಿತ್ತು.  ಒಂದು  ಮದರಾಸಿನಿಂದ ಇನ್ನೊಂದು ಮುಂಬಯಿಯಿಂದ.  ಆ ಕಾಲದಲ್ಲಿ ಈಗಿನಂತೆ ರೇಡಿಯೊ ನೆಟ್ ವರ್ಕ್ ಇತ್ಯಾದಿ ಇಲ್ಲದ್ದರಿಂದ ಕಾರ್ಯಕ್ರಮಗಳನ್ನು ಮುಂಚಿತವಾಗಿ ಧ್ವನಿಮುದ್ರಣ ಮಾಡಿ ಎಲ್ಲ ವಿವಿಧಭಾರತಿ ಕೇಂದ್ರಗಳಿಗೆ ಕಳಿಸಲಾಗುತ್ತಿತ್ತು.  ಹೀಗಾಗಿ ಕೆಲವು ಸಲ ಕನ್ನಡ ಹಾಡುಗಳ ಸಮಯ ಈ ಎರಡು ತರಂಗಾಂತರಗಳಲ್ಲಿ ಬೇರೆ ಬೇರೆಯಾಗಿರುವುದೂ ಇತ್ತು.  ಹಾಗಾದಾಗ ಒಂದು ಕಡೆ ಕನ್ನಡ ಹಾಡುಗಳನ್ನು ರಹಸ್ಯವಾಗಿ ಕೇಳಿಸಿಕೊಂಡು ಕೊಂಚ ಸಮಯದ ನಂತರ ಇನ್ನೊಂದೆಡೆಯಿಂದ ಪ್ರಸಾರವಾಗುವಾಗ ಹಾಡುಗಳ ವಿವರಗಳನ್ನು  ಮುಂಚಿತವಾಗಿ ಊಹಿಸಿದಂತೆ ನಾಟಕವಾಡಿ ಮನೆಮಂದಿಯನ್ನು ಚಕಿತಗೊಳಿಸಲು ಸಾಧ್ಯವಾಗುತ್ತಿತ್ತು! ಈಗ  ಈ ಕರ್ನಾಟಕ ಸಂಗೀತ ಸಭಾ ಕಾರ್ಯಕ್ರಮ ನಿಂತೇ ಹೋಗಿದೆ. ಮದರಾಸು ಕೇಂದ್ರವಾಗಿ ಕಾರ್ಯಾಚರಿಸುತ್ತಿದ್ದ ಈ ಕಾರ್ಯಕ್ರಮಕ್ಕಾಗಿ ಸಂಗ್ರಹಿಸಲ್ಪಟ್ಟ  ಹಳೆ ಚಿತ್ರಗೀತೆಗಳ ಅಮೂಲ್ಯ 78 rpm ರೆಕಾರ್ಡುಗಳೆಲ್ಲ ಏನಾದವೋ. ಅವನ್ನು ನಮ್ಮ ಕೇಂದ್ರಗಳು ಪಡೆದು ಡಿಜಿಟಲೀಕರಣಗೊಳಿಸಿದರೆ ದೊಡ್ಡ ಖಜಾನೆಯೇ ನಮ್ಮದಾಗಬಹುದು. ಸಂಜೆ 5 ಗಂಟೆ ನಂತರ ರೇಡಿಯೊ ಮೋಸ್ಕೊದಿಂದ  ಪ್ರಸಾರವಾಗುತ್ತಿದ್ದ ಕನ್ನಡ ಕಾರ್ಯಕ್ರಮವನ್ನೂ ಒಮ್ಮೊಮ್ಮೆ ಕೇಳುವುದಿತ್ತು. ಆದರೆ ಇದರಲ್ಲಿ ಮನರಂಜನೆ  ಅಂಶದ ಕೊರತೆ ಇದ್ದುದರಿಂದ ಅಷ್ಟೊಂದು ಆಸಕ್ತಿದಾಯಕ ಅನ್ನಿಸುತ್ತಿರಲಿಲ್ಲ. 

ಸಂಜೆ ಪ್ರದೇಶ ಸಮಾಚಾರದಿಂದ ಮೊದಲ್ಗೊಂಡು ಗ್ರಾಮಸ್ಥರ ಕಾರ್ಯಕ್ರಮ, ವಾರ್ತೆಗಳು ಎಲ್ಲವನ್ನೂ ಕೇಳುತ್ತಿದ್ದೆವು.  ಗ್ರಾಮಸ್ಥರ ಕಾರ್ಯಕ್ರಮದಲ್ಲಿ ಕೆಲವೊಮ್ಮೆ ಪ್ರಸಾರವಾಗುತ್ತಿದ್ದ ಒಂದು ಚಿತ್ರಗೀತೆ ತುಂಬಾ ಇಷ್ಟವಾಗುತ್ತಿತ್ತು.  ನಾನು ಏಳನೇ ಕ್ಲಾಸಲ್ಲಿರುವಾಗ ಈ ಕಾರ್ಯಕ್ರಮದಲ್ಲಿ ಪ್ರಸಾರವಾದ ನೀರಲ್ಲಿ ಹುಟ್ಟಿ ನೀರಲ್ಲಿ ಬೆಳೆದು ನೀರು ಸೋಕಿದರೆ ಮಾಯ ಎಂಬ ಒಗಟಿಗೆ ಉಪ್ಪು ಎಂದು ಉತ್ತರ ಬರೆದು ಕಳಿಸಿದ್ದೆ.  ಕೆಲದಿನಗಳ ನಂತರ ನನ್ನ ಹೆಸರು ಮೊದಲ ಬಾರಿ ರೇಡಿಯೊದಲ್ಲಿ ಕೇಳಿಬಂದಾಗ ತುಂಬಾ ಸಂಭ್ರಮಗೊಂಡಿದ್ದೆ.  ಆಗ ಬೆಂಗಳೂರು ನಿಲಯದಿಂದ ವಾರಕ್ಕೆ ಒಂದು ದಿನ ಮಾತ್ರ ಸೋಮವಾರ ರಾತ್ರೆ ಎಂಟು ಗಂಟೆಗೆ  ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ ಇರುತ್ತಿತ್ತು. ಅದರಲ್ಲಿ ಮೊತ್ತ ಮೊದಲನೆಯದಾಗಿ ಓಹಿಲೇಶ್ವರ ಚಿತ್ರದ ಈ ದೇಹದಿಂದ ದೂರನಾದೆ ಹಾಡು ಕೇಳಿದ್ದು ಈಗಲೂ ನೆನಪಿದೆ. ಖ್ಯಾತ ಸಾಹಿತಿ ಎನ್ಕೆ ಅವರು ನಡೆಸಿಕೊಡುತ್ತಿದ್ದ ‘ಸುವೀ ಅವರ ಸವಿನಯ ವಂದನೆಗಳು’ ಅನ್ನುತ್ತಾ ಆರಂಭವಾಗುತ್ತಿದ್ದ ಭಾನುವಾರ ರಾತ್ರೆಯ ಪತ್ರೋತ್ತರ ಕಾರ್ಯಕ್ರಮ ಆಕರ್ಷಕವಾಗಿರುತ್ತಿತ್ತು.  ಬುಧವಾರ ರಾತ್ರೆ ಬಿನಾಕಾ ಗೀತ್ ಮಾಲಾ ಕಾರ್ಯಕ್ರಮಕ್ಕೆ ಮೀಸಲು.  ಅಂದು  ಏಳುವರೆಯೊಳಗೆ ಊಟ ಮುಗಿಸಿ ರೇಡಿಯೋ ಪಕ್ಕದ ಕುರ್ಚಿಯನ್ನು ಆಕ್ರಮಿಸಿದರೆ ಏಳುತ್ತಿದ್ದುದು ಒಂಭತ್ತು ಗಂಟೆಯ ನಂತರವೇ. ವಾರದ ಇತರ ದಿನಗಳಲ್ಲಿ ರಾತ್ರೆ 7.30ರಿಂದ 8ರ ವರೆಗೆ ರೇಡಿಯೊ ಸಿಲೋನಿನ ದೃಶ್ ಔರ್ ಗೀತ್, ಪಸಂದ್ ಅಪ್ನೀ ಅಪ್ನೀ ಖಯಾಲ್ ಅಪ್ನಾ ಅಪ್ನಾ, ಜಬ್ ಆಪ್ ಗಾ ಉಠೆ ಮುಂತಾದ ಸಾಪ್ತಾಹಿಕ ಕಾರ್ಯಕ್ರಮಗಳು ಹಾಗೂ ಚಲನಚಿತ್ರಗಳ ಪ್ರಚಾರದ ರೇಡಿಯೋ ಪ್ರೋಗ್ರಾಂಗಳನ್ನು ಕೇಳುವ ಸಮಯವಾಗಿತ್ತು.   ಗುರುವಾರ ಮತ್ತು ಭಾನುವಾರಗಳ ಸಂಜೆಗಳು ತಾಯಿಯವರಿಗೆ ಮೀಸಲು.  ಅವು ಮುಂಬಯಿ ಕೇಂದ್ರದಿಂದ ಮರಾಠಿ ಹರಿಕಥೆ ಪ್ರಸಾರವಾಗುತ್ತಿದ್ದ ದಿನಗಳು.  ಬದುಕಿರುವಷ್ಟು ಕಾಲ ಅವರು ಈ ಎರಡು ದಿನಗಳಂದು ಹರಿಕಥೆ ಕೇಳುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದರು. ಕೆಲವೊಮ್ಮೆ ಬೆಂಗಳೂರು ಕೇಂದ್ರದಿಂದ ಪ್ರಸಾರವಾಗುತ್ತಿದ್ದ ಕನ್ನಡ ಕಥಾ ಕಾಲಕ್ಷೇಪವನ್ನೂ ಕೇಳುತ್ತಿದ್ದರು. ಶನಿವಾರ ಸಂಜೆ ಮುಂಬಯಿ A  ಕೇಂದ್ರದ ಕನ್ನಡ ಕಾರ್ಯಕ್ರಮ ಕೇಳುತ್ತಿದ್ದೆವು.  ಅಲ್ಲಿಂದ ಒಮ್ಮೆ ಗಣೇಶ ಪ್ರತಾಪ ಎಂಬ ತೆಂಕು ತಿಟ್ಟಿನ ಯಕ್ಷಗಾನವೊಂದು ಪ್ರಸಾರವಾದಾಗ ಮೊತ್ತಮೊದಲ ಬಾರಿ ರೇಡಿಯೊದಲ್ಲಿ ಚೆಂಡೆ ಪೆಟ್ಟು ಕೇಳಿದ ಥ್ರಿಲ್ ಅನುಭವಿಸಿದ್ದೆವು.  ಎಂದಾದರೊಮ್ಮೆ ಮಾತ್ರ ಈ ರೀತಿ ಯಕ್ಷಗಾನದ ಪ್ರಸಾರ ಇರುವುದಾಗಿದ್ದರೂ ಆ ಮೇಲೆ ಆ ಕೇಂದ್ರವನ್ನು   ಯಕ್ಷಗಾನದ ಮುಂಬೈ ಎಂದೇ ಕರೆಯಲಾಗುತ್ತಿತ್ತು!  ಗುರುವಾರ ರಾತ್ರಿ ಹೈದರಾಬಾದ್ ಕೇಂದ್ರದ ಸಾಪ್ತಾಹಿಕ ಕನ್ನಡ ಕಾರ್ಯಕ್ರಮವನ್ನೂ ಕೇಳುತ್ತಿದ್ದೆವು. ಧಾರವಾಡ ಕೇಂದ್ರಕ್ಕೆ ಹೊಸ transmitter ಬಂದು ಹಳೆಯದನ್ನು ವಿವಿಧಭಾರತಿಗಾಗಿ ಉಪಯೋಗಿಸತೊಡಗಿದ ಮೇಲೆ  ಅಲ್ಲಿಂದ ರಾತ್ರಿ 8ಕ್ಕೆ ಪ್ರಸಾರವಾಗುತ್ತಿದ್ದ ವೃಂದಾವನ ಕಾರ್ಯಕ್ರಮವನ್ನು ಕೇಳುತ್ತಿದ್ದೆವು. ಆದರೆ ಬೆಂಗಳೂರು ವಿವಿಧಭಾರತಿ ನಮ್ಮೂರನ್ನು ತಲುಪುವಷ್ಟು ಶಕ್ತಿಶಾಲಿಯಾಗಿರಲಿಲ್ಲ. 8ರಿಂದ 9ರ ನಡುವೆ ಬಿ.ಬಿ.ಸಿ ಹಿಂದಿ ಪ್ರಸಾರವನ್ನೂ ಒಮ್ಮೊಮ್ಮೆ ಆಲಿಸುವುದಿತ್ತು.  ಭಾರತ ಪಾಕ್ ಯುದ್ಧದ ಸಮಯದಲ್ಲಂತೂ ನಿಷ್ಪಕ್ಷಪಾತವಾದ ಸುದ್ದಿಗಳಿಗಾಗಿ ದಿನವೂ ತಪ್ಪದೆ ಕೇಳುತ್ತಿದ್ದೆವು. ಭಾನುವಾರ ಝಂಕಾರ್ ಎಂಬ ಸಂಗೀತಕ್ಕೆ ಸಂಬಂಧಿಸಿದ ಚಿಕ್ಕ ಕಾರ್ಯಕ್ರಮವೊಂದು ಅಲ್ಲಿಂದ ಪ್ರಸಾರವಾಗುತ್ತಿತ್ತು.  ಸಾಮಾನ್ಯವಾಗಿ ಮಾಧ್ಯಮಗಳಿಂದ ದೂರವೇ ಉಳಿಯುತ್ತಿದ್ದ  ಮಹಮ್ಮದ್ ರಫಿಯವರ  ಇಂಟರ್ ವ್ಯೂ ಒಂದನ್ನು ಆ ಕಾರ್ಯಕ್ರಮದಲ್ಲಿ 16-Jul-1972ರಂದು ಮೊತ್ತ ಮೊದಲ ಬಾರಿಗೆ ಕೇಳುವ ಅವಕಾಶ ಸಿಕ್ಕಿತ್ತು. ನನ್ನ ಡೈರಿಯ ಆ ದಿನದ ಪುಟದಲ್ಲಿ ಇದರ ಬಗ್ಗೆ ಉಲ್ಲೇಖವಿರುವುದನ್ನು ಇಲ್ಲಿ ನೋಡಬಹುದು.


ರಾತ್ರಿ ಒಂಭತ್ತು ಗಂಟೆಯ ನಂತರ ನಾವೆಲ್ಲ ಹಾಸಿಗೆ ಸೇರಿದ ಮೇಲೆ ನಮ್ಮ ಹಿರಿಯಣ್ಣ ತಮಗಿಷ್ಟವಾದ ಶಾಸ್ತ್ರೀಯ ಸಂಗೀತ ಇತ್ಯಾದಿ ಕೇಳುತ್ತಾ ತಡರಾತ್ರಿವರೆಗೂ ಕೂತಿರುತ್ತಿದ್ದರು.  ಅವರಿಗೆ ಹಿಂದಿ ಹಾಡುಗಳೆಂದರೆ ಅಷ್ಟಕ್ಕಷ್ಟೇ ಆದರೂ ಅವುಗಳನ್ನು ಕೇಳದಂತೆ ನಮ್ಮನ್ನೆಂದೂ ತಡೆಯುತ್ತಿರಲಿಲ್ಲ.   ಎಲ್ಲ ಹಿಂದಿ ಹಾಡುಗಳು ಒಂದೇ ರೀತಿ ಕೇಳುತ್ತವೆ ಅನ್ನುತ್ತಿದ್ದರು - ನನಗೆ ಈಗಿನ ಹಿಂದಿ ಹಾಡುಗಳು ಕೇಳಿಸಿದ ಹಾಗೆ! ನಾನು 8ನೇ ತರಗತಿಗೆ ಹಾಸ್ಟೆಲ್ ಸೇರಿದ ಮೇಲೂ ಮನೆಯಲ್ಲಿ ಹಿಂದಿ ಹಾಡುಗಳನ್ನು ಹೊರತು ಪಡಿಸಿ ಬಹುತೇಕ ಇದೇ ಟೈಮ್ ಟೇಬಲ್ ಪಾಲಿಸಲಾಗುತ್ತಿತ್ತು. ವಾರಾಂತ್ಯಗಳಲ್ಲಿ ಮತ್ತು ರಜಾದಿನಗಳಲ್ಲಿ ನಾನು ಮನೆಗೆ ಹೋದಾಗ ಮತ್ತೆ ರೇಡಿಯೋ ನಿಯಂತ್ರಣ ನನ್ನ ಕೈಗೆ ಬರುತ್ತಿತ್ತು!

ಈಗ ಇಷ್ಟು ವರ್ಷಗಳ ನಂತರ ಸೆಟಿಲೈಟ್ ಟಿ.ವಿ, ಮೊಬೈಲ್, ಅಂತರ್ಜಾಲ  ಏನೆಲ್ಲ ಇದ್ದರೂ ಈಗಲೂ ಮನರಂಜನೆಗೆ ನನ್ನ ಮೊದಲ ಆಯ್ಕೆ ರೇಡಿಯೋವೇ ಆಗಿದೆ.  ಆದರೆ ಸುತ್ತಲೂ ಇರುವ ಅಸಂಖ್ಯ ಇಲೆಕ್ಟ್ರಾನಿಕ್ ಉಪಕರಣಗಳು ಸೂಸುವ ವಿಕಿರಣ ಮೀಡಿಯಂ ವೇವ್ ಮತ್ತು ಶಾರ್ಟ್ ವೇವ್ ಪ್ರಸಾರವನ್ನು ಬಾಧಿಸುವುದರಿಂದ ಹಾಗೂ ಬಹುತೇಕ ಎಫ್.ಎಂ. ನಿಲಯಗಳು ಏಕತಾನತೆಯಿಂದ ಬಳಲುವುದರಿಂದ ರೇಡಿಯೋ ಆಲಿಸುವ ಅವಧಿ ತುಂಬಾ ಸೀಮಿತವಾಗಿದೆ. ಕನ್ನಡ ವಿವಿಧಭಾರತಿ, ರೇನ್ ಬೋ ಹಾಗೂ ಬೆಂಗಳೂರು ಮುಖ್ಯ ವಾಹಿನಿ ಇತ್ಯಾದಿ ಆಕಾಶವಾಣಿ ಬೆಂಗಳೂರಿನ  ಎಲ್ಲ ವಾಹಿನಿಗಳು ಮತ್ತು ಮುಂಬೈ ಹಿಂದಿ ವಿವಿಧಭಾರತಿ, ಉರ್ದು ಸರ್ವಿಸ್ ಇತ್ಯಾದಿ  ವೆಬ್ ಸ್ಟ್ರೀಮಿಂಗ್ ಮೂಲಕ ಅಂತರ್ಜಾಲದಲ್ಲಿ ಲಭ್ಯವಿದ್ದರೂ ನೇರವಾಗಿ ರೇಡಿಯೋದಲ್ಲಿ ಕೇಳುವಾಗ ಸಿಗುತ್ತಿದ್ದ ಆನಂದ ಈಗ ಅವುಗಳಲ್ಲಿಲ್ಲ. ಇತ್ತೀಚೆಗೆ ಇವೆಲ್ಲವುಗಳಲ್ಲಿ ತಮ್ಮದೇ ಕಾರ್ಯಕ್ರಮಗಳ ಬಗ್ಗೆ ಪದೇ ಪದೇ ತುತ್ತೂರಿ ಊದುತ್ತಾ ಹೂರಣಕ್ಕಿಂತ ಹೆಚ್ಚು ಕಾಲಹರಣ ಮಾಡುತ್ತಾ ವಟಗುಟ್ಟುವ ಪ್ರವೃತ್ತಿ ಹೆಚ್ಚಾಗಿರುವುದು ಇದಕ್ಕೆ ಮುಖ್ಯ ಕಾರಣ. ಆದರೂ ನನ್ನಿಷ್ಟದ ಕಾರ್ಯಕ್ರಮಗಳು ಅಂತರ್ಜಾಲ, ಡಿ.ಟಿ.ಹೆಚ್ ಇತ್ಯಾದಿ  ಯಾವ ಮೂಲದಿಂದ ಬಂದರೂ ಅವುಗಳನ್ನು ರೇಡಿಯೊದಲ್ಲೇ ಆಲಿಸಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಿಕೊಂಡು ರೇಡಿಯೋದೊಂದಿಗಿನ ನನ್ನ ನಂಟನ್ನು ಉಳಿಸಿಕೊಂಡಿದ್ದೇನೆ.
**************
ಈ ಬರಹ 10-3-2019ರ ಭಾನುಪ್ರಭ ಪುರವಣಿಯಲ್ಲಿ ಆಕರ್ಷಕ ವಿನ್ಯಾಸದೊಂದಿಗೆ ಅಗ್ರಲೇಖನವಾಗಿ ಪ್ರಕಟವಾಯಿತು.




Tuesday 10 January 2017

ಬಾಲ್ಯದ ಆಟ


ಕ್ರಿಕೆಟ್, ಟಿ.ವಿ, ಕಂಪ್ಯೂಟರ್, ಮೊಬೈಲ್ ಇತ್ಯಾದಿ ಯಾವುದೂ ಇಲ್ಲದಿದ್ದ ಕಾಲದಲ್ಲಿ ಹುಟ್ಟಿದ ನಮ್ಮಂಥವರ ಬಾಲ್ಯವು ಅನೇಕ ವೈವಿಧ್ಯಮಯ ಆಟಗಳ ಆಡುಂಬೊಲವಾಗಿತ್ತು. ಬಹುತೇಕ ಆಟಗಳಿಗೆ ಯಾವುದೇ ಸಲಕರಣೆಗಳ ಅಗತ್ಯವೂ ಇರುತ್ತಿರಲಿಲ್ಲ. ಎಲ್ಲೆಡೆ ಕೂಡುಕುಟುಂಬಗಳೇ ಇರುತ್ತಿದ್ದ ಆ ಕಾಲದಲ್ಲಿ ಆಡಲು, ಆಡಿಸಲು ಮನೆ ತುಂಬ ವಿವಿಧ ವಯೋಮಾನದ ಸದಸ್ಯರೂ ಇರುತ್ತಿದ್ದರು.

ಚಿಕ್ಕ ಮಕ್ಕಳನ್ನು ಬೆನ್ನ ಮೇಲೇರಿಸಿಕೊಂಡು ಪ್ರತಿಯೊಬ್ಬರ ಹತ್ತಿರ ಹೋಗಿ ಉಪ್ಪು ಬೇಕೋ ಅನ್ನುವುದು, ಇಬ್ಬರು ದೊಡ್ಡ ಮಕ್ಕಳು ಪರಸ್ಪರರ ಕೈಗಳನ್ನು ಚೌಕಾಕಾರದಲ್ಲಿ ಜೋಡಿಸಿಕೊಂಡು ಮಗುವನ್ನು ಅದರಲ್ಲಿ ಕೂರಿಸಿ ರಥಯಾತ್ರೆ ಮಾಡಿಸುವುದು ಮೊದಲ ಹಂತದ ಕೆಲವು ಆಟಗಳು.

ಎಣಿಕೆಯ ಆಟಗಳು

ಮಕ್ಕಳೆಲ್ಲರ ಕೈಗಳನ್ನು ನೆಲದ ಮೇಲಿರಿಸಿ ಒಂದೊಂದೇ ಕೈ ಬೆರಳನ್ನು ಮುಟ್ಟುತ್ತಾ ವನರಿ ಟೋರಿ ಟಿಕ್ರಿ ಪೆನ್ ಆಪನ್ ಜಾಪನ್ ಪೋನ್ ಪೆನ್ ಮೊಗರಿ ಪೆನ್ ಟೊಣೊ ಟೋಣೊ ಸರ್ಟಿ ವನ್ ಅಂದು ಮುಗಿಸುವಾಗ ಯಾವ ಬೆರಳಿನ ಸರದಿ ಬಂದಿತ್ತೋ ಅದನ್ನು ಮಡಿಸುವುದು. ಹೀಗೆ ಮಡಿಸುತ್ತಾ ಕೊನೆಗೆ ಉಳಿದ ಬೆರಳಿಗೆ ಜಯಶಾಲಿಯ ಪಟ್ಟ.

ಎಲ್ಲರೂ ಮುಚ್ಚಿದ ಮುಷ್ಠಿಗಳನ್ನು ಮರದಂತೆ ಒಂದರ ಮೇಲೊಂದಿಟ್ಟು ಪಂರ್ದೋ ಕಾಯೋ ನೆಲ್ಲಿ ಕುಡಪ್ಪೊ ಆಟಿಡೊಂಜಿ ಪೆಲಕೈ ಉಂಡು ಅಯಿನ್ ಕೊಯಿಂಡ ಅಜ್ಜಿ ನೆರ್ವೊಳು ಕೊಯ್ಕೊ ಕೊಯ್ಕೊ ಕೊಯ್ಕೊ ಅನ್ನುವಾಗ ಯಾವ ಮುಷ್ಠಿ ಕೊಯ್ಯಲು ಸಿಗುತ್ತದೋ ಅದು ಆಟದಿಂದ ಹೊರಗೆ. ಹೀಗೆ ಮುಂದುವರಿಯುತ್ತಾ ಕೊನೆಗೆ ಯಾರ ಮುಷ್ಠಿ ಉಳಿಯುತ್ತದೋ ಅವರಿಗೆ ಪೆಲಕೈ(ಹಲಸಿನ ಹಣ್ಣು) ಸಿಕ್ಕಿದಂತೆ.

ಇದೇ ರೀತಿ ವೃತ್ತಾಕಾರ ಕುಳಿತವರ ಮಂಡಿಗಳನ್ನು ಒಂದೊಂದಾಗಿ ಮುಟ್ಟುತ್ತಾ ಅಟ್ಟ ಮುಟ್ಟ ತನ್ನ ದೇವಿ ನಿನ್ನ ಗಂಡ ಎಲ್ಲಿಗೆ ಹೋದ ಮಲ್ಲಪ ನಾಯಕನ್ ಕೇರಿಗೆ ಹೋದ ಏನು ತಂದ ಗಿಣಿಯೊಂದ ತಂದ ಚಂದ್ರ ಶಾಲೆಯೂ ಅನ್ನುತ್ತಾ ವಿಜೇತರನ್ನು ಆಯ್ಕೆ ಮಾಡುವುದು ಹೆಣ್ಣು ಮಕ್ಕಳ ಇಷ್ಟದ ಆಟವಾಗಿರುತ್ತಿತ್ತು.

ತುಂಬಾ ಮಕ್ಕಳು ಸೇರಿದ ಕಡೆ ಯಾರಾದರೂ ಸದ್ದಿಲ್ಲದ ಅಪಾನವಾಯುವಿನಿಂದ ವಾತಾವರಣ ಕಲುಷಿತಗೊಳಿಸುವುದು ಅಪರೂಪವೇನೂ ಆಗಿರಲಿಲ್ಲ. ಆಗ ಅಬ್ಬಲಕ ತಬ್ಬಲಕ ಮಿರಿಮಿರಿ ಕಂಚ ಜೋಳ ಜೋಪಿ ಅಸ್ಕಿ ಪುಸ್ಕಿ ಪಾದರ ಪುಸ್ಕಿ ಎಂದು ಅಪರಾಧಿಯನ್ನು ಪತ್ತೆ ಮಾಡುವ ಪದ್ಧತಿಯೊಂದಿತ್ತು. ಒಂದು ವೇಳೆ ಕೊನೆಯ ಪದ ಎಣಿಕೆ ಮಾಡುವವನತ್ತಲೇ ಬೆಟ್ಟು ಮಾಡಿದರೆ ಠುಂಯ್ ಎಂಬ ಹೆಚ್ಚಿನ ಪದವನ್ನು ಸೇರಿಸುವುದೂ ಇತ್ತು!

ಕೌಶಲ್ಯದ ಆಟಗಳು

5 ಚಿಕ್ಕ ಕಲ್ಲುಗಳನ್ನುಪಯೋಗಿಸಿ ಆಡುವ ಕಲ್ಲಾಟ ಇವುಗಳಲ್ಲೊಂದು. ಎಲ್ಲ ಕಲ್ಲುಗಳನ್ನು ಮೇಲೆ ಹಾರಿಸಿ ಅವುಗಳನ್ನು ಅಂಗೈಯ ಹಿಂಭಾಗದ ಮೇಲೆ ಹಿಡಿಯಬೇಕು. ನಂತರ ಒಂದು ಕಲ್ಲನ್ನು ಕೈಯ ಮೇಲುಳಿಸಿಕೊಂಡು ಉಳಿದವುಗಳನ್ನು ಒಂದೊಂದಾಗಿ ಕೆಳಗೆ ಬೀಳಿಸಬೇಕು. ಆ ಒಂದು ಕಲ್ಲನ್ನು ಮೇಲೆ ಹಾರಿಸಿ ಅದು ಕೆಳಗೆ ಬೀಳುವುದರೊಳಗೆ ನೆಲದ ಮೇಲಿನ ಕಲ್ಲುಗಳನ್ನು ಕ್ರಮದಂತೆ ಹೆಕ್ಕಿಕೊಂಡು ಮೇಲೆ ಹಾರಿಸಿದ್ದ ಕಲ್ಲನ್ನೂ ಹಿಡಿಯಬೇಕು. ಇದರಲ್ಲಿ ಒಂದೊಂದನೇ, ಎರಡೆರಡನೇ ಇತ್ಯಾದಿ ಅನೇಕ ಗ್ರೇಡುಗಳಿವೆ. ಕೊನೆ ಕೊನೆಯ ಗ್ರೇಡುಗಳಂತೂ ಬಲು ಕ್ಲಿಷ್ಟ. ಕೊನೆಯ ಅತಿ ಕ್ಲಿಷ್ಟ ಗ್ರೇಡನ್ನು ತಲುಪುವವರೂ ಅನೇಕರಿದ್ದರು. ಕಲ್ಲಿನ ಬದಲು ಗೋಲಾಕಾರದ ಗಜ್ಜುಗ ಕಾಯಿಗಳನ್ನು ಬಳಸಿದರೆ ಈ ಆಟ ಮತ್ತೂ ಕಠಿಣ.

ಸಾಂಪ್ರದಾಯಿಕ ಚೆನ್ನೆಮಣೆ ಆಟವನ್ನು ವಟಸಾವಿತ್ರಿ ವ್ರತದಿಂದ ನೂಲಹುಣ್ಣಿಮೆಯ ವರೆಗೆ ಮಾತ್ರ ಅಡಲು ಅನುಮತಿ ಇತ್ತು. ಕವಡೆ ಉಪಯೋಗಿಸಿ ಆಡುವ ಎಕ್ಕಾಟಿ ಎನ್ನುವ ಇನ್ನೊಂದು ರೀತಿಯ ಆಟವನ್ನು ವರ್ಷದುದ್ದಕ್ಕೂ ಆಡಬಹುದಾಗಿತ್ತು. ಎಂದೋ ಒಮ್ಮೆ ಅಕ್ಕ ತಂಗಿಯರಿಬ್ಬರು ಆಟದ ಕೊನೆಗೆ ಚೆನ್ನೆಮಣೆಯಿಂದಲೇ ಹೊಡೆದುಕೊಂಡು ಸತ್ತಿದ್ದರಂತೆ. ಹೀಗಾಗಿ ಸೋದರಿಯರಿಬ್ಬರು ಎಂದಿಗೂ ಚೆನ್ನೆಮಣೆ ಅಡಬಾರದು ಅನ್ನುತ್ತಿದ್ದರು.

ಒಬ್ಬರೇ ಆಡುವ ಆಟಗಳು

ನಮ್ಮ ಊರಿನ ಆಢ್ಯ ಮಹನೀಯರೊಬ್ಬರು ಕೊಟ್ಟ ಹಳೆ ಕಾರು ಟಯರೊಂದಿತ್ತು ನಮ್ಮಲ್ಲಿ. ಅದನ್ನು ಒಂದು ಕೋಲಿಂದ ಹೊಡೆದು ಓಡಿಸುತ್ತಾ ನಾವೇ ಕಾರು ಚಲಾಯಿಸಿದಂತೆ ಸಂಭ್ರಮಿಸುವುದು ನಮ್ಮ ಮೆಚ್ಚಿನ ಆಟವಾಗಿತ್ತು. ಬೇಲಿಯ ದಣಪೆಗೆ ಎಕ್ಸಲರೇಟರ್, ಕ್ಲಚ್, ಬ್ರೇಕ್, ಗೇರುಗಳಂತೆ ಒಂದೊಂದು ಕೋಲು ಸಿಕ್ಕಿಸಿ ಬಸ್ಸು ಬಿಡುವ ಡ್ರೈವಿಂಗ್ಆಟ ಆಡಿದ್ದೂ ಇದೆ! ಒಂದೊಂದು ಗಂಟು ಉಳಿಸಿದ ಬಿದಿರಿನ ಕೋಲುಗಳನ್ನೇರಿ ನಡೆಯುವುದು ಮರಕಾಲಿನ ಆಟ ನಮ್ಮ ಮೆಚ್ಚಿನದಾಗಿತ್ತು. ಅವುಗಳ ಮೇಲೆ ನಿಂತಲ್ಲೇ ನಿಲ್ಲುವುದು, ಎತ್ತರವಾದ ಮೆಟ್ಟಲುಗಳನ್ನೇರುವುದು ಮುಂತಾದವುಗಳನ್ನು ಮಾಡಬಲ್ಲವರು ಎಕ್ಸ್‌ಪರ್ಟ್ ಅನಿಸಿಕೊಳ್ಳುತ್ತಿದ್ದರು. ಬಿದಿರಿನ ಗಂಟು ಕಾಲಿಗೆ ತಾಗಿ ನೋವಾಗದಂತೆ ಅವುಗಳಿಗೆ ಗೋಣಿಚೀಲ ಸುತ್ತಿ ಕುಶನ್ ಕೂಡ ಮಾಡಿಕೊಳ್ಳುತ್ತಿದ್ದೆವು. ಅಂಗಳ ಹಾಳಾಗುತ್ತದೆ ಎಂದು ಹಿರಿಯರು ಬೈದರೂ ನಮ್ಮ ಉತ್ಸಾಹ ಕುಗ್ಗುತ್ತಿರಲಿಲ್ಲ. ಬುಗುರಿ ತಿರುಗಿಸುವುದು, ತಿರುಗುತ್ತಿರುವಾಗ ದಾರದಿಂದ ಅದನ್ನೆತ್ತಿ ಕೈಯ ಮೇಲೆ ತಿರುಗುವಂತೆ ಮಾಡುವುದು ಕೂಡ ನಮ್ಮ ನೆಚ್ಚಿನ ಆಟವಾಗಿತ್ತು. ತೆಂಗಿನ ಗರಿಯ ಗಿರಿಗಿಟ್ಲೆ ಕೈಯಲ್ಲಿ ಹಿಡಿದು ಓಡುವುದು, ಅಡಿಕೆ ಮರದ ತೆಳ್ಳಗಿನ ಪದರವೊಂದಕ್ಕೆ ನೂಲು ಕಟ್ಟಿ ಅದನ್ನು ಬ್ರೂಂ ಬ್ರೂಂ ಎಂದು ಸದ್ದು ಬರುವಂತೆ ತಿರುಗಿಸುವುದು, ಕುಂಟಲ ಗಿಡದ ಎಲೆ, ಶಂಖಪುಷ್ಪದ ಕೋಡುಗಳ ಪೀಪಿ ತಯಾರಿಸಿ ಊದುವುದು ಇತ್ಯಾದಿಗಳನ್ನೂ ನಾವು ಮಾಡುತ್ತಿದ್ದೆವು. ಕಾಗದದಿಂದ ವಿಮಾನ, ದೋಣಿ, ಹಡಗು, ಶಾಯಿ ದವತಿ ಇತ್ಯಾದಿಗಳನ್ನು ಮಾಡುವುದೂ ನಮ್ಮ ಆಟವಾಗಿತ್ತು.

ಹೊರಾಂಗಣ ಆಟಗಳು

ಕುರುಬನ ಪಾತ್ರದ ಒಬ್ಬನು ಕುರಿಗಳೇ ಕುರಿಗಳೇ ಓಡಿ ಬನ್ನಿ ಎಂದಾಗ ಓಡಿ ಬರುವವರನ್ನು ನಡುದಾರಿಯಲ್ಲಿ ನಿಂತಿರುವ ತೋಳ ಪಾತ್ರಧಾರಿ ಮುಟ್ಟಿದರೆ ಅವರು ಔಟ್. ಹೀಗೆ ಪುನರಾವರ್ತನೆಯಾಗುತ್ತಾ ಕೊನೆಗೆ ಔಟಾಗದೇ ಉಳಿದವರು ಜಯಶಾಲಿಗಳು. ಹೆಬ್ಬೆರಳು ಮತ್ತು ತೋರುಬೆರಳನ್ನು ವೃತ್ತಾಕಾರವಾಗಿ ಜೋಡಿಸಿ ಅದರ ಮೂಲಕ ಉಗುಳುವಾಗ ಯಾರ ಎಂಜಲು ಬೆರಳಿಗೆ ತಾಗುವುದಿಲ್ಲವೋ ಅವರಿಗೆ ಕುರುಬ ಮತ್ತು ತೋಳ ಆಗುವ ಅವಕಾಶ. ಎಂಜಲು ತಾಗಿದವರು ಕುರಿಗಳಾಗಬೇಕಿತ್ತು. ಇದೇ ರೀತಿ ಎಂಜಲು ತಾಗಿದವರು ಕಾಗೆ ಮತ್ತು ತಾಗದವರು ಗಿಳಿ ಆಗುವ ಕಾಗೆ ಗಿಳಿ ಆಟವೂ ಇತ್ತು.
ಮದುವೆ, ಮುಂಜಿಗಳಂಥ ಸಮಾರಂಭಗಳಿರುವಾಗ ಇಡೀ ಮನೆಯಂಗಳವನ್ನು ಆವರಿಸುವ ಚಪ್ಪರ ಹಾಕಲಾಗುತ್ತಿತ್ತು. ಅಂತಹ ಸಂದರ್ಭಗಳಲ್ಲಿ ಚಪ್ಪರದ ನಾಲ್ಕು ಕಂಬಗಳ ಮಧ್ಯೆ ಆಡುವ ಆಟವೇ ಕಂಬಾಟ. ನಾಲ್ವರು ನಾಲ್ಕು ಕಂಬಗಳನ್ನು ಹಿಡಿದುಕೊಂಡಿರಬೇಕು. 5ನೆಯವನು ನಡುವಿನಲ್ಲಿ ಸುತ್ತುತ್ತಿರಬೇಕು. ಆ ನಾಲ್ವರು ಕಂಬ ಬದಲಾಯಿಸುವ ಸಂದರ್ಭವನ್ನು ಹೊಂಚು ಹಾಕಿ ನಡುವಿದ್ದವನು ಖಾಲಿ ಕಂಬವನ್ನು ಆಕ್ರಮಿಸಿಕೊಳ್ಳಬೇಕು. ಕಂಬ ತಪ್ಪಿಹೋದವನು ನಡುವೆ ಬಂದು ಸುತ್ತತೊಡಗಬೇಕು. ಇದು ಸಾಕೆನ್ನಿಸುವ ವರೆಗೆ ಆಡಬಹುದಾದ ಆಟ.
ಇಂತಹ ಸಮಾರಂಭಗಳ ಸಂದರ್ಭದಲ್ಲಿ ಪಲ್ಲಿ ಹಿಡಿಯುವುದು ಯುವಕರ ಮೆಚ್ಚಿನ ಆಟವಾಗಿತ್ತು. ಇಬ್ಬರು ಪರಸ್ಪರರ ಎಡಗೈನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕು. ಇನ್ನೊಬ್ಬನು ಅವರ ಈ ಹಿಡಿತವನ್ನು ಬಿಡಿಸಲು ಪ್ರಯತ್ನಿಸಬೇಕು. ಬಿಡಿಸಲು ಬಂದವನ ಬೆನ್ನಿಗೆ ಬಲಗೈಯಿಂದ ಗುದ್ದುವ ಮುಕ್ತ ಅವಕಾಶ ಪಲ್ಲಿ ಹಿಡಿದವರಿಗಿರುತ್ತದೆ. ಗುದ್ದುಗಳನ್ನು ಸಹಿಸಿಕೊಂಡು ಪಲ್ಲಿ ಬಿಡಿಸಿದರೆ ಆತ ಗೆದ್ದಂತೆ.

ಶಾಲೆಯ ಆಟಗಳು

ವೃತ್ತಾಕಾರವಾಗಿ ಕುಳಿತವರ ಸುತ್ತ ಒಬ್ಬ ಟೊಪ್ಪಿಯೊಂದನ್ನು ಹಿಡಿದುಕೊಂಡು ಓಡುತ್ತಿರುತ್ತಾನೆ. ಮಧ್ಯದಲ್ಲಿ ಆ ಟೊಪ್ಪಿಯನ್ನು ಯಾರಾದರೊಬ್ಬರ ಹಿಂದೆ ರಹಸ್ಯವಾಗಿ ಇರಿಸುತ್ತಾನೆ. ತಕ್ಷಣ ಗೊತ್ತಾದರೆ ಇರಿಸಿಕೊಂಡವ ಅದೇ ಟೊಪ್ಪಿಯಿಂದ ಆತನನ್ನು ಹೊಡೆಯುತ್ತಾ ಒಂದು ಸುತ್ತು ಓಡಿಸಬೇಕು. ಗೊತ್ತಾಗದೇ ಹೋದರೆ ಇರಿಸಿಕೊಂಡವ ಟೊಪ್ಪಿಯೇಟು ತಿನ್ನುತ್ತಾ ಒಂದು ಸುತ್ತು ಓಡಬೇಕು. ಇದು ಟೊಪ್ಪಿ ಆಟ.

ಕುಳಿತವರೆಲ್ಲರೂ ಒಂದು action ಮಾಡುತ್ತಿರುತ್ತಾರೆ. ಅವರ ಮಧ್ಯೆ ಇರುವ ನಾಯಕ ಬೇರೆ action ಆರಂಭಿಸಿದರೆ ಎಲ್ಲರೂ ಆತನನ್ನು ಅನುಸರಿಸುತ್ತಾರೆ. ಹೊರಗೆ ಓಡುತ್ತಿರುವವನು ಈ ನಾಯಕ ಯಾರೆಂದು ಕಂಡುಹಿಡಿಯಬೇಕು. ಇದರಲ್ಲಿ ಸಫಲನಾದರೆ ಆತ ನಾಯಕನಾಗುತ್ತಾನೆ. ನಾಯಕನಾಗಿದ್ದವನು ಓಡುತ್ತಾನೆ. ಇದು ನಾಯಕನನ್ನು ಹುಡುಕುವ ಆಟ.
ಎಲ್ಲರೂ ಕೈ ಕೈ ಹಿಡಿದುಕೊಂಡು ವೃತ್ತಾಕಾರವಾಗಿ ಕೋಟೆಕಟ್ಟಿ ನಿಂತುಕೊಂಡಿರುತ್ತಾರೆ. ನಡುವೆ ದನ ಇರುತ್ತದೆ. ಹೊರಗಿರುವ ಹುಲಿ ಒಳಗೆ ಬಂದು ದನವನ್ನು ಹಿಡಿಯಲು ಪ್ರಯತ್ನಿಸುತ್ತದೆ. ಆದರೆ ಕೈ ಕೈ ಹಿಡಿದಿಕೊಂಡವರು ಹೀಗೆ ಮಾಡಲು ಬಿಡಬಾರದು. ಒಂದು ವೇಳೆ ಬಲಪ್ರಯೋಗಮಾಡಿ ಒಳಗೆ ಬಂದರೆ ದನಕ್ಕೆ ಹೊರಹೋಗಲು ಅವಕಾಶಮಾಡಿಕೊಟ್ಟು ಹುಲಿ ಹೊರಗೆ ಹೋಗದಂತೆ ತಡೆಯಬೇಕು. ಇಷ್ಟೆಲ್ಲ ಪ್ರತಿರೋಧದ ನಡುವೆ ಹುಲಿ ದನವನ್ನು ಮುಟ್ಟಿದರೆ ಈ ಹುಲಿದನದ ಆಟ ಮುಕ್ತಾಯವಾದಂತೆ.

ಇಬ್ಬರು ಹುಡುಗರು ಪರಸ್ಪರ ಹಿಡಿದುಕೊಂಡ ಕೈಗಳ ಮೇಲೆ ಒಂದು ಕಾಲು ಹಾಕಿ ಅವರ ಭುಜಗಳ ಮೇಲೆ ಕೈ ಇಟ್ಟು ಹೇಯ್ ಹೇಯ್ ಎನ್ನುತ್ತಾ ಅವರನ್ನು ಎತ್ತುಗಳಂತೆ ಓಡಿಸುವ ಗಾಡಿ ಆಟವನ್ನೂ ಆಡುತ್ತಿದ್ದೆವು.