Saturday, 8 March 2025

ಮರೆಯಲ್ಲುಳಿದ ಮದುಮಗಳು



ಶಾರ್ಟ್ ವೇವ್ ವಿವಿಧಭಾರತಿಯಲ್ಲಿ ಅಪರಾಹ್ನ 4 ಗಂಟೆಯ ನಂತರ ಕರ್ನಾಟಕ್ ಸಂಗೀತ್ ಸಭಾದ  ಮಧುರ್ ಗೀತಂ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತೀಯ ಭಾಷೆಗಳ ಸಿನಿಮಾ ಹಾಡುಗಳು ಪ್ರಸಾರವಾಗುತ್ತಿದ್ದುದುದು ಹಳೆಯ ತಲೆಮಾರಿನವರಿಗೆ ಗೊತ್ತಿರುತ್ತದೆ. ಈ ಕಾರ್ಯಕ್ರಮ ಅಪರಾಹ್ನ 4 ಗಂಟೆಗೆ ಆರಂಭವಾಗಲು ಒಂದು ಕಾರಣ ಇದೆ. ರೇಡಿಯೋ ಸಿಲೋನಿನ ದಕ್ಷಿಣ ಭಾರತೀಯ ಕಾರ್ಯಕ್ರಮ ಆರಂಭವಾಗುತ್ತಿದ್ದುದು ಕೂಡ 4 ಗಂಟೆಗೆ. 1957ರಲ್ಲಿ ವಿವಿಧಭಾರತಿ ಜನ್ಮ ತಾಳಿದ್ದೇ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ರೇಡಿಯೋ ಸಿಲೋನನ್ನು counter  ಮಾಡುವುದಕ್ಕಾಗಿ! ಆದರೆ ಮುಂದಿನ ಅನೇಕ ದಶಕಗಳ ಕಾಲ ಇದು ಸಾಧ್ಯವಾಗಲಿಲ್ಲ ಅನ್ನುವುದು ಬೇರೆ ಮಾತು.

ಅದೇನೇ ಇರಲಿ.  ಈ ಕಾರ್ಯಕ್ರಮದಿಂದಾಗಿ  ನಮಗೆ ಕನ್ನಡ ಹಾಡುಗಳೊಂದಿಗೆ ಪಾಲುಂ ಪಳಮುಂ ಚಿತ್ರದ ನಾನ್  ಪೇಸ ನಿನೈಪದೆಲ್ಲಾಂ, ಕಲ್ಯಾಣ ಪರಿಸು ಚಿತ್ರದ ಉನ್ನೈ ಕಂಡು ನಾನಾಡ,  ಮಿಸ್ಸಿಯಮ್ಮ ಚಿತ್ರದ ಬೃಂದಾವನಮಿದಿ ಅಂದರಿದಿ ಗೋವಿಂದುಡು, ಚೆಮ್ಮೀನ್ ಚಿತ್ರದ ಕಡನಿಲಕ್ಕರೆ ಪೋಣೋರೆ ಮುಂತಾದ ತಮಿಳು, ತೆಲುಗು ಮತ್ತು ಮಲಯಾಳಂ ಹಾಡುಗಳ ಪರಿಚಯವೂ ಆಗುತ್ತಿತ್ತು. ಆಗ  ಎಲ್.ಆರ್.ಈಶ್ವರಿ ಹಾಡಿದ ವಾರಾಯನ್ ತೋಡಿ ವಾರಾಯೋ ಎಂಬ  ಪಾಶ ಮಲರ್ ತಮಿಳು ಚಿತ್ರದ  ಹಾಡು ನಮಗೆ ವಿಶೇಷ ಆಕರ್ಷಣೆ ಆಗಿತ್ತು.  ಇದಕ್ಕೆ ಕಾರಣ  ಆ ಹಾಡಿನ ಆಕರ್ಷಕ ನಡೆ ಮತ್ತು ಚರಣಗಳ ಮಧ್ಯೆ ಇದ್ದ ಶ್ರುತಿಬದ್ಧ ಮಂತ್ರಘೋಷ.  

1961ರ ಪಾಶ ಮಲರ್ 1965ರಲ್ಲಿ ವಾತ್ಸಲ್ಯ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ತಯಾರಾಯಿತು.  ಸಂಗೀತ ನಿರ್ದೇಶಕ ವಿಜಯಾ ಕೃಷ್ಣಮೂರ್ತಿ ಉಳಿದ ಹಾಡುಗಳಿಗೆ ಸ್ವಂತ ಧಾಟಿಗಳನ್ನು ಸಂಯೋಜಿಸಿದರೂ ವಾರಾಯನ್ ತೋಡಿ ವಾರಾಯೋ  ಸನ್ನಿವೇಶದ  ಮುದ ತುಂಬಿ ಮೆರೆವ ಮದುಮಗಳೇ ಹಾಡಿಗೆ ವಿಶ್ವನಾಥನ್ ರಾಮಮೂರ್ತಿ ಅವರ ಮೂಲ ಟ್ಯೂನನ್ನೇ ಉಳಿಸಿಕೊಂಡರು. ಸ್ವತಃ ಅರೇಂಜರ್ ಆಗಿದ್ದ ಅವರಿಗೆ ಹಾಡಿನ ಮರುಸೃಷ್ಟಿ  ಕಷ್ಟವೆನಿಸಲಿಲ್ಲ. ತಮಿಳು ಹಾಡನ್ನೂ ಮೀರಿಸುವಂತೆ ಕನ್ನಡದಲ್ಲೂ ಎಲ್.ಆರ್. ಈಶ್ವರಿಯೇ ಹಾಡಿದರು.  ಸೋರಟ್ ಅಶ್ವತ್ಥ್ ಅವರ ಅರ್ಥಪೂರ್ಣ, ಸರಳ, ಪ್ರಾಸಬದ್ಧ ಸಾಹಿತ್ಯ ಹಾಡಿಗೆ ಹೆಚ್ಚಿನ ಮೆರುಗು ನೀಡಿತು. 

ಗಿಟಾರಿನ ಝೇಂಕಾರದೊಡನೆ ಆರಂಭವಾಗುವ ಸುಮಾರು 30 ಸೆಕೆಂಡುಗಳ ತಾಳವಾದ್ಯ ರಹಿತ prelude ಮುಗಿದೊಡನೆ ಶ್ರುತಿಯಲ್ಲಿರುವ ಢೋಲಕಿನ ಎತ್ತುಗಡೆಯೊಂದಿಗೆ ಹಾಡಿನ ಪಲ್ಲವಿ ಆರಂಭವಾಗುತ್ತದೆ. ಕೋರಸ್ ಧ್ವನಿಯ  ಮೊದಲ ಎರಡು ಸಾಲು ಆದ ಮೇಲೆ ಎಲ್.ಆರ್. ಈಶ್ವರಿಯ ಕಂಚಿನ ಕಂಠದ ಪ್ರವೇಶವಾಗುತ್ತದೆ. ಪಲ್ಲವಿ ಮುಗಿಯುವ ಮೊದಲೇ ಹಿನ್ನೆಲೆಯಲ್ಲಿ ತವಿಲ್ ಮತ್ತು ನಾಗಸ್ವರ ನುಡಿಯತೊಡಗಿ ಪಲ್ಲವಿ ಮುಗಿಯುತ್ತಲೇ ಅದೇ ಹಿನ್ನೆಲೆಯೊಂದಿಗೆ ಮಂತ್ರಗಳು ಕೇಳಿಸುತ್ತವೆ. ನಂತರ ಗಿಟಾರ್ ಲಯದೊಂದಿಗೆ ಸಣ್ಣ BGM ಇದೆ.  ಚರಣ ಆರಂಭವಾಗುತ್ತಲೇ ಸಣ್ಣ ಉರುಳಿಕೆಯೊಂದಿಗೆ ಢೋಲಕ್ take over ಮಾಡುತ್ತದೆ. ಇಲ್ಲಿ ಪಲ್ಲವಿ ಭಾಗದ ದತ್ತು ಠೇಕಾ (ಹಿಂದಿಯ ದತ್ತಾರಾಂ ಪ್ರಚುರಪಡಿಸಿದ ಲಯ)  ಬೇರೆ ನಡೆಗೆ ಬದಲಾಗುತ್ತದೆ. ಚರಣದ ಕೊನೆಯ ಸಾಲುಗಳನ್ನು ಪುನರಾವರ್ತನೆ ಮಾಡಿದ ಕೋರಸ್ ದತ್ತು ಠೇಕಾದೊಂದಿಗೆ  ಪಲ್ಲವಿಯ ಮೊದಲ ಎರಡು ಸಾಲು ಹಾಡುತ್ತದೆ. ಪುನಃ ತವಿಲ್, ನಾಗಸ್ವರ ಹಿನ್ನೆಲೆಯ ಮಂತ್ರಗಳ ನಂತರ ಈ ಸಲ ಚಪ್ಪಾಳೆ ಲಯದೊಂದಿಗಿನ ಗಿಟಾರಿನೊಂದಿಗೆ ಸಖಿಯರ ನಗು ಮೇಳೈಸುತ್ತದೆ. ಮೊದಲ ಚರಣದಂತೆಯೇ ಎರಡನೆಯ ಚರಣ ಸಾಗುತ್ತದೆ. ಕೊನೆಗೆ ಗಟ್ಟಿ ಮೇಳದ ಜೊತೆಗೆ ಮಂತ್ರಗಳು ಮೊಳಗಿ ಮಾಂಗಲ್ಯಧಾರಣೆಯ ಚಿತ್ರ ಕಣ್ಣಮುಂದೆ ಮೂಡುತ್ತದೆ. 

ಮುದ ತುಂಬಿ ಮೆರೆವ ಮದುಮಗಳೇ ಮನದಾಸೆ ತೀರೆ ವೇಳೆ ಈ ವೇಳೆ ಎಂಬ ಪಲ್ಲವಿಯ ಮೊದಲ ಎರಡು ಸಾಲುಗಳನ್ನು ಮುಖ್ಯ ಗಾಯಕಿ ಒಮ್ಮೆಯೂ ಹಾಡುವುದಿಲ್ಲ!

ಆದರೆ ಈ ಚಂದದ ಹಾಡು  ಜನಸಾಮಾನ್ಯರನ್ನು ತಲುಪಲೇ ಇಲ್ಲ!  ಆಕಾಶವಾಣಿಯಲ್ಲಿ ಈ ಚಿತ್ರದ ಹಾಡುಗಳು ಪ್ರಸಾರವಾಗದೇ ಇದ್ದುದು ಇದಕ್ಕೆ ಕಾರಣ. ಈ ಹಾಡುಗಳ ಗ್ರಾಮಫೋನ್ ಡಿಸ್ಕುಗಳೇ ತಯಾರಾಗಿರಲಿಲ್ಲವೇನೋ ಎಂಬ ಅನುಮಾನ ನನ್ನಲ್ಲಿ ಮೂಡಿತ್ತು.  ಆದರೆ ಅನೇಕ ವರ್ಷಗಳ ನಂತರ ಮೈಸೂರಿನ ಚಂದ್ರು ಸೌಂಡ್ ಸಿಸ್ಟಂನವರಲ್ಲಿ ಈ ಹಾಡಿನ ಡಿಸ್ಕ್ ಇರುವುದು ತಿಳಿದು ಕ್ಯಾಸೆಟ್ಟಿನಲ್ಲಿ ರೆಕಾರ್ಡ್ ಮಾಡಿಸಿಕೊಂಡಿದ್ದೆ. ಬಹುಶಃ ಆಕಾಶವಾಣಿಗೆ ಹಾಡುಗಳ ಡಿಸ್ಕ್ ಒದಗಿಸುವ ಜವಾಬ್ದಾರಿ  ಹೊತ್ತಿದ್ದ ಮದರಾಸಿನ ಸರಸ್ವತಿ ಸ್ಟೋರ್‌ನವರ ಎಡವಟ್ಟಿನಿಂದ  ಹೀಗಾಗಿರಬಹುದು. ಲಾಯರ್ ಮಗಳು, ಬಂಗಾರಿ, ಬಾಲರಾಜನ ಕಥೆ ಮುಂತಾದ ಚಿತ್ರಗಳ ಹಾಡುಗಳು ಆಕಾಶವಾಣಿಯನ್ನು ತಲುಪದೇ ಇರಲೂ ಇದೇ ಕಾರಣ ಇರಬಹುದು.

ಮುದ ತುಂಬಿ ಬಂದ ಮದುಮಗಳೇ
ಚಿತ್ರ : ವಾತ್ಸಲ್ಯ.
ಗಾಯನ : ಎಲ್.ಆರ್. ಈಶ್ವರಿ ಮತ್ತು ಸಂಗಡಿಗರು.
ಸಂಗೀತ : ವಿಜಯಾ ಕೃಷ್ಣಮೂರ್ತಿ.
ಸಾಹಿತ್ಯ : ಸೋರಟ್ ಅಶ್ವತ್ಥ್.


ಹಾಡು ಕೇಳಲು ಬಾಣದ ಮೇಲೆ ಕ್ಲಿಕ್ಕಿಸಿ.





ಬಂಧುವರ್ಗದಲ್ಲಿ ನಡೆಯುವ ವಿವಾಹಗಳ ವೀಡಿಯೊದಲ್ಲಿ ಈ ಹಾಡನ್ನು ನಾನು ತಪ್ಪದೆ ಬಳಸುತ್ತೇನೆ.

ರಾಜಕುಮಾರ್ ಮತ್ತು ಲೀಲಾವತಿ ಅವರು ಅಣ್ಣ ತಂಗಿ ಪಾತ್ರಗಳಲ್ಲಿ ನಟಿಸಿದ ಏಕೈಕ ಚಿತ್ರ ವಾತ್ಸಲ್ಯ. ಅವರೊಂದಿಗೆ  ಉದಯಕುಮಾರ್, ಜಯಂತಿ, ನರಸಿಂಹರಾಜು ಮುಂತಾದವರು ಅಭಿನಯಿಸಿದ ವೈ.ಆರ್. ಸ್ವಾಮಿ ನಿರ್ದೇಶನವಿದ್ದ ಈ ಚಿತ್ರ ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು.  


- ಚಿದಂಬರ ಕಾಕತ್ಕರ್.



2 comments:

  1. ಮಹಿಳಾ ದಿನಕ್ಕೆ ಪೂರಕವಾಗಿ ಒಂದೊಳ್ಳೆ ಹಾಡನ್ನು ನೆನಪಿಸಿದ್ದೀರಿ. ಸರಿಗಮ ದಂತಹ ಕನ್ನಡ. ಟಿವಿ ಕಾರ್ಯಕ್ರಮ ಸಂಯೋಜಕರಿಗಂತೂ ಹಳೇ ಹಾಡುಗಳ ಮಾಧುರ್ಯದ ಅರಿವೇ ಇದ್ದಂತಿಲ್ಲ.

    ReplyDelete
    Replies
    1. ಅವರಿಗೆಲ್ಲ 1975 ಅಂದರೆ ಅತೀ ಪುರಾತನ ಕಾಲ. ಅವರ ಪ್ರಕಾರ ಅದಕ್ಕಿಂತ ಆಚೆ ಹಾಡುಗಳೇ ಇರಲಿಲ್ಲ!

      Delete

Your valuable comments/suggestions are welcome