Wednesday 11 July 2018

ಚೆನ್ನ ಚೆನ್ನೆಯರ ನೆಚ್ಚಿನದಾಗಿದ್ದ ಚೆನ್ನೆಮಣೆ



ಜ್ಯೇಷ್ಠ ಮಾಸದ ಹುಣ್ಣಿಮೆಯಂದು ಆಚರಿಸಲ್ಪಡುವ ವಟಸಾವಿತ್ರಿ ಹಬ್ಬ ಬಂತೆಂದರೆ ನಮಗೆಲ್ಲ ಆಗ ಬಲು ಹಿಗ್ಗು.  ಮನೆಯ ಮಹಿಳೆಯರೆಲ್ಲ ಆಲದ ಮರದ ಗೆಲ್ಲೊಂದನ್ನು ನೆಟ್ಟ ತುಳಸಿ ಕಟ್ಟೆಯ ಸುತ್ತಲೂ   ಕೂತು ಪೂಜೆ ಮಾಡುವ ಅಂದ ಒಂದೆಡೆಯಾದರೆ  ಆ ದಿನದ ವಿಶೇಷವಾದ ಹಲಸಿನ ಹಣ್ಣಿನ ಉಂಬರದ ನಿರೀಕ್ಷೆ ಇನ್ನೊಂದೆಡೆ.   ಇವೆಲ್ಲಕ್ಕಿಂತ ಮಿಗಿಲಾಗಿ ಈ ಹಿಗ್ಗನ್ನು ಮತ್ತಷ್ಟು ಹಿಗ್ಗಿಸುತ್ತಿದ್ದುದು ಅಂದಿನಿಂದ ಎರಡು ತಿಂಗಳು ಅಂದರೆ ಶ್ರಾವಣ ಮಾಸದ ನೂಲ ಹುಣ್ಣಿಮೆ ವರೆಗೆ ಚೆನ್ನೆಮಣೆ ಆಡಲು ಸಿಗುತ್ತಿದ್ದ ರಹದಾರಿ.  ನನಗೆ ತಿಳಿದ ಮಟ್ಟಿಗೆ ಈ ರೀತಿ ಸಮಯ ಸೀಮೆಯ ಕಟ್ಟುಪಾಡು ಇದ್ದ ಆಟ ಚೆನ್ನೆಮಣೆ ಮಾತ್ರ.



ಚೆನ್ನೆಮಣೆಯು  ಮರದಿಂದ ಮಾಡಲ್ಪಡುತ್ತಿದ್ದು  ಎರಡೂ ಬದಿಗಳಲ್ಲಿ ಏಳು ಏಳು ಗುಳಿಗಳನ್ನು ಹೊಂದಿರುತ್ತದೆ.  ಎಡ ಮತ್ತು ಬಲ ಬದಿಗಳಲ್ಲಿ ಆಟಕ್ಕೆ ಬಳಸುವ ಕೆಂಪಗಿನ ಮಂಜುಟ್ಟಿ ಯಾ ಕೆಂಪು  ಮೈಗೆ ಕಪ್ಪು ಟೊಪ್ಪಿ ಇರುವ ಗುಲಗಂಜಿಯಂಥ ಬೀಜಗಳನ್ನು ಸಂಗ್ರಹಿಸಿಡಲು ಅನುಕೂಲವಾಗುವ ದೊಡ್ಡ ಖಾನೆಗಳಿರುತ್ತವೆ.  ಚೆನ್ನೆಮಣೆಯು ಸಾಮಾನ್ಯವಾಗಿ ಇಬ್ಬರು ಎದುರು ಬದುರು ಕುಳಿತು ಆಡುವಂಥದಾಗಿದ್ದು ತಮ್ಮ ತಮ್ಮ ಎಡಗಡೆಯ ಖಾನೆಯನ್ನು ಈ ಉದ್ದೇಶಕ್ಕೆ ಬಳಸಬೇಕು. ಚೆನ್ನೆಮಣೆಯ ಆಟಗಳಲ್ಲಿ ಅನೇಕ ವಿಧಗಳಿದ್ದು ಹೆಚ್ಚಿನವು ಚದುರಂಗದಂತೆ ಬುದ್ಧಿಮತ್ತೆಯನ್ನು ಬಳಸಿ ಆಡುವಂಥವು.  ಕವಡೆಗಳನ್ನು ಬಳಸಿ  ಅದೃಷ್ಟದಾಟ ಆಡುವ ಪದ್ಧತಿಯೂ ಇದೆ.  ನಾವು ಆಡುತ್ತಿದ್ದ  ಬುದ್ಧಿಮತ್ತೆಯ ಸರಳ ಆಟ ಮತ್ತು ಕವಡೆ ಬಳಸುವ ಅದೃಷ್ಟದಾಟದ ವಿವರಗಳು ಇಲ್ಲಿವೆ.

ಬುದ್ಧಿಮತ್ತೆಯ ಸರಳ ಆಟ

ಚೆನ್ನೆಮಣೆಯ ಎಡ ಮತ್ತು ಬಲ ಖಾನೆಗಳಲ್ಲಿ ತಲಾ 28 ಮಂಜುಟ್ಟಿಗಳನ್ನು ಹಾಕಿಡಲಾಗಿರುತ್ತದೆ. ಎದುರು ಬದುರು ಕುಳಿತ ಇಬ್ಬರು ಆಟಗಾರರೂ ತಮ್ಮ ಎಡಬದಿಯ ಸಂಗ್ರಹಾಗಾರದಿಂದ ಒಂದೊಂದು ಮನೆಯಲ್ಲಿ 4ರಂತೆ  ತಮ್ಮ ಬದಿಯ ಏಳೂ  ಮನೆಗಳಲ್ಲಿ ಈ ಮಂಜುಟ್ಟಿಗಳನ್ನು ಹಾಕಬೇಕು.  ಯಾರು ಆಟ ಪ್ರಾರಂಭಿಸುವುದೆಂದು ಪರಸ್ಪರ ಸಹಮತಿಯಿಂದ ನಿರ್ಧರಿಸಿಕೊಳ್ಳಬೇಕು. ಆಟ ಪ್ರಾರಂಭಿಸುವವರು ತನ್ನ ಏಳು ಮನೆಗಳ ಪೈಕಿ ಇಷ್ಟ ಬಂದ ಮನೆಯಿಂದ ಎಲ್ಲ ಬೀಜಗಳನ್ನು ಮುರಿದುಕೊಂಡು ಎಡದಿಂದ ಬಲಕ್ಕೆ ಒಂದೊಂದು ಬೀಜದಂತೆ ಹಾಕುತ್ತಾ ಹೋಗಬೇಕು. ತನ್ನ ಬದಿಯ  ಮನೆಗಳನ್ನು ದಾಟಿದ ಮೇಲೆ ಎದುರು ಬದಿಯ ಮನೆಗಳನ್ನು ಬಲದಿಂದ ಎಡಕ್ಕೆ ಕ್ರಮಿಸಬೇಕು. ಅಂದರೆ ಇದು ಅಪ್ರದಕ್ಷಿಣಾಕಾರದ ಪ್ರಕ್ರಿಯೆ.   ಕೈಯಲ್ಲಿದ್ದ ಬೀಜಗಳು ಮುಗಿದೊಡನೆ ಮುಂದಿನ ಮನೆಯಲ್ಲಿರುವ ಬೀಜಗಳನ್ನು ಮುರಿದುಕೊಂಡು ಮುಂದುವರಿಯಬೇಕು.  ಈ ರೀತಿ ಕೈಯ ಬೀಜಗಳು ಮುಗಿದಾಗ ಮುಂದಿನ ಮನೆ ಖಾಲಿಯಾಗಿದ್ದರೆ ಅದರ ಮುಂದಿನ ಮನೆಯಲ್ಲಿರುವ ಬೀಜಗಳೆಲ್ಲ ಆಡುತ್ತಿರುವವರಿಗೆ ಸೇರುತ್ತವೆ.   ಅವನ್ನು ಎತ್ತಿಕೊಂಡು ತನ್ನ ಎಡಬದಿಯ ಖಾನೆಯಲ್ಲಿ ಹಾಕಿಕೊಳ್ಳಬೇಕು. ಒಂದು ವೇಳೆ ಮುಂದಿನ ಎರಡು ಅಥವಾ ಹೆಚ್ಚು ಮನೆಗಳು ಖಾಲಿ ಇದ್ದರೆ ಆಟಗಾರನಿಗೆ ಏನೂ ಸಿಗುವುದಿಲ್ಲ. ಇದನ್ನು ಢುಕ್ಕುವುದು ಎನ್ನುತ್ತಾರೆ. ಆಟಗಾರನು ಈ ರೀತಿ ಢುಕ್ಕಿದಾಗ ಎದುರಾಳಿಯು ‘ಢುಕ್ ಮಂಡೂಕ್ ಢುಕ್’ ಎಂದು ಹೇಳಿ ಸಂಭ್ರಮಿಸುವುದಿದೆ.   ಈಗ ಎದುರಾಳಿಯ  ಸರದಿ.  ಅವರು ಕೂಡ ತನ್ನ ಬದಿಯ ಇಷ್ಟ ಬಂದ ಮನೆಯಿಂದ ಬೀಜಗಳನ್ನು ಮುರಿದುಕೊಂಡು ಇದೇ ರೀತಿ ಆಟ ಮುಂದುವರಿಸಬೇಕು.  ಹೀಗೆ ಆಟ ಸಾಗುತ್ತಾ ಇರುವಾಗ ಯಾವುದಾದರೂ ಮನೆಯಲ್ಲಿ ಒಂದು ಬೀಜ ಇದ್ದರೆ ಅದಕ್ಕೆ ಕಲ್ಲು ಎಂದೂ, ಎರಡು ಬೀಜ ಇದ್ದರೆ ದುಕ್ಕುಲ ಎಂದೂ,  ಮೂರು ಬೀಜಗಳು ಇದ್ದರೆ ತಿಕ್ಕುಲ ಎಂದೂ, ನಾಲ್ಕು ಬೀಜಗಳು ಜಮೆಯಾದರೆ  ತಿಸ್ತಿ ಎಂದೂ, ನಾಲ್ಕಕ್ಕಿಂತ ಹೆಚ್ಚಿದ್ದರೆ ಘರೊ ಎಂದೂ ಹೆಸರು. ಈ ಘರೊ ಚೆನ್ನೆಮಣೆಯ ಗುಳಿಯನ್ನು ಮೀರಿ ಮತ್ತೂ ಬೆಳೆದರೆ ಅದನ್ನು ಫೆರ್ಗ ಎನ್ನುವುದೂ ಇದೆ.  ಇಂತಹ ಫೆರ್ಗವೇನಾದರೂ  ತಿನ್ನಲು ಸಿಕ್ಕಿದರೆ ಆಗುವ ಆನಂದ ಅನನ್ಯ.   ತಿಸ್ತಿ ತಯಾರಾದ ತಕ್ಷಣ ಆಯಾ ಮನೆಯ ಒಡೆಯರು ಅದನ್ನು ಎತ್ತಿಕೊಂಡು ತಮ್ಮ ಸಂಗ್ರಹಾಗಾರಕ್ಕೆ ಸೇರಿಸಿಕೊಳ್ಳಬೇಕು.  ಹೀಗೆ ಮಾಡಲು ಮರೆತು ಆಟ ಮುಂದುವರೆದಾಗ ಅದರಲ್ಲಿ ಇನ್ನೊಂದು ಬೀಜವೇನಾದರೂ ಬಿದ್ದರೆ ಆ ತಿಸ್ತಿ ಕೊಳೆತು ಹೋಗುತ್ತದೆ ಹಾಗೂ ಆ ಮನೆಯೊಡೆಯ ಅದರ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತಾನೆ.   ಈ ರೀತಿ ಸಾಗುತ್ತಾ ಸಾಗುತ್ತಾ ಚೆನ್ನೆಮಣೆಯಲ್ಲಿ ಬರೇ ಮೂರು ಅಥವಾ ಅದಕ್ಕಿಂತ ಕಮ್ಮಿ ಬೀಜಗಳು ಉಳಿದರೆ ಅಲ್ಲಿಗೆ  ಒಂದು ಆಟ ಮುಗಿಯಿತು. ಕೊನೆಯಲ್ಲಿ ಮೂರು ಉಳಿದಾಗ ಎರಡು ಮೊದಲು ಆಡಿದವರಿಗೆ ಮತ್ತು ಒಂದು ಇನ್ನೊಬ್ಬರಿಗೆ.  ಎರಡು ಉಳಿದರೆ ಇಬ್ಬರಿಗೂ ಒಂದೊಂದು.  ಒಂದೇ ಉಳಿದರೆ ಅದು ಮೊದಲು ಆಡಿದವರಿಗೆ.

ಈ ಹಂತದಲ್ಲಿ ಸಹಜವಾಗಿಯೇ ಒಬ್ಬರ ಸಂಗ್ರಹದಲ್ಲಿ ಹೆಚ್ಚು ಇನ್ನೊಬ್ಬರ ಸಂಗ್ರಹದಲ್ಲಿ ಕಮ್ಮಿ ಬೀಜಗಳು ಇರುತ್ತವೆ.  ಈಗ ತಮ್ಮ ತಮ್ಮ ಬದಿಯ ಮನೆಗಳಲ್ಲಿ ನಾಲ್ಕರಂತೆ ಬೀಜಗಳನ್ನು ಹಾಕುತ್ತಾ ಹೋಗುವಾಗ ಕಮ್ಮಿ ಸಂಗ್ರಹವಿದ್ದವರ ಕೆಲವು ಮನೆಗಳು ಖಾಲಿ ಉಳಿಯುತ್ತವೆ. ಈ ರೀತಿ ನಾಲ್ಕು ಬೀಜಗಳು ಸಿಗದೆ ಖಾಲಿ ಉಳಿದ ಮನೆಗಳನ್ನು ಫೊತ್ತು ಅನ್ನುತ್ತಾರೆ.  ಈ ಫೊತ್ತುಗಳನ್ನು ಸುಲಭವಾಗಿ ಗುರುತಿಸಲಾಗುವಂತೆ ಅವುಗಳಲ್ಲಿ ಇತರ ಬಣ್ಣದ ಯಾವುದಾದರೂ ಕಾಯಿಗಳನ್ನೋ ಅಥವಾ ಕಾಗದದ ಚೂರನ್ನೋ ಇರಿಸುವುದು ವಾಡಿಕೆ.  ಹಿಂದಿನ  ಆಟ ಪ್ರಾರಂಭಿಸಿದವರ ಎದುರಾಳಿ ಈ ಸಲ  ಪ್ರಾರಂಭಿಸುತ್ತಾರೆ.  ಆಟ ಹಿಂದಿನಂತೆಯೇ ಮುಂದುವರೆಯುತ್ತದೆ.  ಬೀಜಗಳನ್ನು ಹಾಕುತ್ತಾ ಹೋಗುವಾಗ ಖಾಲಿ ಮನೆ ಅರ್ಥಾತ್ ಫೊತ್ತುಗಳಲ್ಲಿ ತಪ್ಪಿಯೂ ಬೀಳಬಾರದು.  ಒಂದು ವೇಳೆ ಬಿದ್ದರೆ ‘ಫೊತ್ತದಿ ಕಲ್ಲು ಥಾಪ್ಯಾಂ’  ಎಂದು ಹೇಳಿ ಆ ಬೀಜವನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕು ಫೊತ್ತದ  ಒಡೆಯನಿಗೆ ಸಿಕ್ಕುತ್ತದೆ.  ಈ ಆಟ ಮುಗಿದಾಗ ಆಗಲೇ ಫೊತ್ತುಗಳನ್ನು ಹೊಂದಿದ್ದವನಿಗೆ ಅವುಗಳ ಸಂಖ್ಯೆ ಜಾಸ್ತಿಯೂ ಆಗಬಹುದು ಅಥವಾ ಫೊತ್ತುಗಳು ಇನ್ನೊಂದು ಬದಿಗೆ ವರ್ಗಾವಣೆಯೂ ಆಗಬಹುದು!

ಈ ರೀತಿ ಏಳುಬೀಳುಗಳೊಂದಿಗೆ ಆಟ ಸಾಗಿ ಸಾಗಿ ಕೊನೆಗೆ ಯಾರದಾದರೂ ಎಲ್ಲ ಏಳು ಮನೆಗಳು ಫೊತ್ತುಗಳಾದರೆ ಅವರು ಸೋತಂತೆ.  ಆಗ ಗೆದ್ದವರು ಚೆನ್ನೆಮಣೆಯನ್ನು  ಎತ್ತಿ ಸೋತವರ ಮುಖದೆದುರು ಆರತಿ ಬೆಳಗಿದಂತೆ ಆಡಿಸುತ್ತಾ ‘ಮಂಗನ ಮೋರೆಗೆ ಮರದ ಕೊದಂಟಿಗೆ ಮಂಗಳಂ ಜಯ ಮಂಗಳಂ’  ಎಂದು ಹಂಗಿಸಿ ಜಗಳಕ್ಕೆ ನಾಂದಿ ಆಗುವುದೂ ಇತ್ತು.

ಈ ಆಟದಲ್ಲಿ ಕೈಯಲ್ಲಿರುವ ಬೀಜಗಳು ಮುಗಿದಾಗ ಏನು ಲಭಿಸುತ್ತದೆ ಎನ್ನುವುದು ಎಷ್ಟು ಫೊತ್ತುಗಳಿರುವಾಗ ಯಾವ ಮನೆಯಿಂದ ಆಟ ಪ್ರಾರಂಭಿಸಲಾಗುತ್ತದೆ ಎನ್ನುವುದರ ಮೇಲೆ ಹೊಂದಿಕೊಂಡಿರುತ್ತದೆ.  ಅನುಭವಿ ಆಟಗಾರರು ಈ ಹಿಕ್ಮತ್ತುಗಳನ್ನು ನೆನಪಿಟ್ಟುಕೊಂಡು ಎದುರಾಳಿಗಳನ್ನು ಸುಲಭವಾಗಿ ಸೋಲಿಸಬಲ್ಲವರಾಗಿರುತ್ತಾರೆ.

ಇದು ನಾವು ಆಡುತ್ತಿದ್ದ ಸರಳ ಆಟ.  ಖಾಲಿ ಮನೆಯ ಮುಂದಿನ ಬೀಜಗಳನ್ನು ತೆಗೆದುಕೊಳ್ಳುವಾಗ ಅದರ ವಿರುದ್ಧ ದಿಕ್ಕಿನಲ್ಲಿ ಇರುವ ಮನೆಯ ಬೀಜಗಳನ್ನೂ ತೆಗೆದುಕೊಳ್ಳುವ ಜೋಡುಮನೆ ಆಟ, ಒಂದು ಮನೆಯಲ್ಲಿ ಹೆಚ್ಚು ಹೆಚ್ಚು ಬೀಜಗಳನ್ನು ಸೇರಿಸುತ್ತಾ  ಹೋಗುವ ಬಂದಿ ಆಟ, ಮೂರು ಜನ ಸೇರಿ ಆಡುವ ರಾಜ ಮತ್ತು ಒಕ್ಕಲುಗಳ ಆಟವನ್ನೂ ಕೆಲವರು ಆಡುತ್ತಿದ್ದರು. 


ಎಕ್ಕಾಟಿ ಎಂಬ ಅದೃಷ್ಟದ ಆಟ

ಇದು ಏಳು ಕವಡೆಗಳನ್ನು ಬಳಸಿ ಆಡುವಂಥದ್ದು.  ಇದರಲ್ಲಿ ಬುದ್ಧಿಮತ್ತೆಯ ಯಾವ ಪಾತ್ರವೂ ಇಲ್ಲ.  ಎಲ್ಲ ಅದೃಷ್ಟದ್ದೇ ಆಟ.  ಇಬ್ಬರು ಆಟಗಾರರ ಸಂಗ್ರಹಾಗಾರಗಳಲ್ಲೂ ತಲಾ 28 ಬೀಜಗಳಿರುತ್ತವೆ. ಆಡುವವರು ಏಳೂ ಕವಡೆಗಳನ್ನು ಕೈಗಳೊಳಗೆ ಚೆನ್ನಾಗಿ ಆಡಿಸಿ ಎಸೆದಾಗ ಎಷ್ಟು ಕವಡೆಗಳು ಮೇಲ್ಮುಖವಾಗಿ ಬೀಳುತ್ತವೋ ಅವರ ಬದಿಯ ಆ ಸಂಖ್ಯೆಯ ಮನೆಯಲ್ಲಿ ಅವರ ಸಂಗ್ರಹದಿಂದ ಒಂದು ಬೀಜ ಹಾಕಬೇಕು. ಆದರೆ ಇದನ್ನು ಆರಂಭಿಸಬೇಕಾದರೆ ಒಂದು ಕವಡೆ ಮೇಲ್ಮುಖವಾಗಿ ಬೀಳುವ ವರೆಗೆ ಕಾಯಬೇಕು. ಒಂದು ವೇಳೆ ಎಲ್ಲ ಕವಡೆಗಳು ಕೆಳಮುಖವಾಗಿ ಬಿದ್ದರೆ ಮೂರನೆ ಮನೆಯಲ್ಲಿ ಒಂದು ಬೀಜ ಹಾಕಬೇಕು. ಎಲ್ಲ ಕವಡೆಗಳು ಕೆಳಮುಖವಾಗಿ ಬೀಳುವುದನ್ನು ಕಪ್ಪಾಲ ಅಥವಾ  ಬೊಕ್ಕಾ ಎಂದೂ, ಮೇಲ್ಮುಖವಾಗಿ ಬೀಳುವುದನ್ನು ರಥವೆಂದೂ ಕರೆಯುತ್ತಾರೆ.  ಮೂರು ಕವಡೆಗಳು ಮೇಲ್ಮುಖವಾಗಿ ಬಿದ್ದರೆ ಆಟ ಎದುರಿನವರಿಗೆ ವರ್ಗಾವಣೆಯಾಗುತ್ತದೆ.  ಅವರೂ ಅದೇ ರೀತಿ ಆಡುತ್ತಾ ಮೇಲ್ಮುಖವಾಗಿ ಬಿದ್ದ ಕವಡೆಗಳ ಅನುಸಾರ ಮನೆಗಳಲ್ಲಿ ಬೀಜ ತುಂಬುತ್ತಾ ಹೋಗಬೇಕು.  ಅವರಿಗೆ ಮೂರು ಬಿದ್ದೊಡನೆ ಮತ್ತೆ ಆಟ ಈ ಕಡೆಯವರಿಗೆ.  ಈ ರೀತಿ ಆಡುತ್ತಾ ಒಬ್ಬರ ಎಲ್ಲ ಬೀಜಗಳು ಮನೆಗಳಲ್ಲಿ ಸೇರಿದ ಮೇಲೆ ಬಿದ್ದ ಕವಡೆಗಳ ಆಧಾರದಲ್ಲಿ ಎದುರಾಳಿಯ ಮನೆಗಳಿಂದ ಒಂದೊಂದೇ ಬೀಜವನ್ನು ತೆಗೆಯುತ್ತಾ ಹೋಗಬೇಕು. ಆದರೆ ಇದಕ್ಕೂ ಒಮ್ಮೆ ಒಂದು ಬೀಳುವ ವರೆಗೆ ಕಾಯಬೇಕು.   ಮೂರು ಬಿದ್ದಾಗ ಆಟ ವರ್ಗಾವಣೆ.  ಯಾರು ಬೀಜಗಳೆಲ್ಲ ಮೊದಲು ಖಾಲಿ ಮಾಡುತ್ತಾರೋ ಅವರು ಗೆದ್ದಂತೆ.  ಗೆದ್ದವವರ ಮನೆಗಳಲ್ಲಿ ಎಷ್ಟು ಬೀಜಗಳು ಉಳಿದಿರುತ್ತವೋ ಸೋತವರು ಅಷ್ಟು ಹೊಲಸಿನ ಹೆಡಿಗೆಗಳನ್ನು ಹೊತ್ತಂತೆ ಎಂದು ಅರ್ಥ!

ಮುಗಿಯದ ಆಟ

ಕೆಲವು ಸಲ ಚೆನ್ನೆಮಣೆ ಆಡಲು ಜೊತೆಗಾರರು ಯಾರೂ ಸಿಗದ ಸಂದರ್ಭಗಳು ಬರುತ್ತವೆ.  ಅಕ್ಕ, ತಂಗಿ, ಅಣ್ಣ, ತಮ್ಮಂದಿರನ್ನು ಕರೆದರೆ ‘ನಿನಗೆ ಮೂರೂ ಹೊತ್ತು ಚೆನ್ನೆಮಣೆಯೇ ಆಯಿತು. ನಮಗೆ ಬೇರೆ ಕೆಲಸಗಳಿವೆ. ಹೋಗಾಚೆ’  ಎಂದು ಬೈದು ಕಳಿಸುತ್ತಾರೆ.  ಅದಕ್ಕೂ ಪರಿಹಾರವಿದೆ.  ಚೆನ್ನೆಮಣೆಯ ಗುಳಿಗಳಲ್ಲಿ ಎಡದಿಂದ 7,6,5,4,3,2,1,7,6,5,4,3,2,1 ಅಥವಾ 2,1,0,1,0,1,0,1,0,1,0,1,0,1 ಬೀಜಗಳನ್ನು ಹಾಕಿ ಎಡದ ಮೊದಲ ಮನೆಯಿಂದ ಆಡಲು ಆರಂಭಿಸಿದರೆ ಖಾಲಿ ಮನೆಗಳನ್ನು ಎದುರಿಸುವ ಪ್ರಸಂಗವೇ ಬರದೆ ಸಾಕೆನಿಸುವವರೆಗೆ ಒಬ್ಬರೇ ನಿರಂತರವಾಗಿ ಆಡುತ್ತಲೇ ಇರಬಹುದು! ಇದನ್ನು ಚಿತ್ಪಾವನಿ ಭಾಷೆಯಲ್ಲಿ ಅಢುಕತ್ಸಾಳಂ ಅನ್ನುತ್ತಾರೆ.  ಈ ಅಂತ್ಯರಹಿತ ಆಟವನ್ನು ಅಶೋಕವನದಲ್ಲಿ ಒಬ್ಬಂಟಿಯಾಗಿದ್ದ ಸೀತೆ ಆಡುತ್ತಿದ್ದಳು ಎನ್ನಲಾಗಿದ್ದು ಕೆಲವೆಡೆ ಇದನ್ನು ಸೀತೆ ಆಟ ಎಂದೇ ಕರೆಯಲಾಗುತ್ತದೆ.  ಕೆಲವು ಪ್ರದೇಶಗಳಲ್ಲಿ ಇದಕ್ಕೆ ಬೀಳದ ಅಜ್ಜಿ ಆಟ ಎಂಬ ಹೆಸರೂ ಇದೆಯಂತೆ.

ಮನರಂಜನೆಯ ಜೊತೆಗೆ ಬುದ್ಧಿಗೆ ಕಸರತ್ತನ್ನೂ ಕೊಡುವ ಚೆನ್ನೆಮಣೆ ಆಟ ಆಡುವುದನ್ನು ಮಕ್ಕಳಿಗೆ ಕಲಿಸಿ ಕೊಟ್ಟರೆ ಅವರು ಸ್ಮಾರ್ಟ್ ಫೋನ್, ವೀಡಿಯೊ ಗೇಮ್‌ಗಳ ಗುಂಗಿನಿಂದ ಹೊರ ಬರಲು ಸಹಾಯವಾಗಬಹುದು.

ಇಲ್ಲಿ ಬಳಸಿದ ಅನೇಕ ಶಬ್ದಗಳು ನಮ್ಮ ಚಿತ್ಪಾವನಿ ಭಾಷೆಯ ಮೂಲದವು.  ಪ್ರಾದೇಶಿಕವಾಗಿ ಈ ಪದಗಳು ಹಾಗೂ ಆಡುವ ರೀತಿಯಲ್ಲಿ ಭಿನ್ನತೆ ಇರಬಹುದು.ಈ ಪದಗಳಿಗೆ ಸಮಾನಾರ್ಥಕ ಕನ್ನಡ ಪದಗಳು ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.