Tuesday 28 February 2017

ನೆನೆಸಿಕೊಂಡ್ರೆ ಝುಮ್ಮನೆ


ನೆನೆಸಿಕೊಂಡಾಗ ಝುಮ್ಮನೆ ಇರುವ ಎಷ್ಟೋ ಸಂಗತಿಗಳು ನಿಜವಾಗಿ  ದೊರಕಿದಾಗ ಇಷ್ಟೇನೆ ಅನ್ನಿಸುವುದಿದೆ. ಅನೇಕ ಸಲ  ವಾಸ್ತವಕ್ಕಿಂತ ಕಲ್ಪನೆಯೇ ರಮ್ಯವಾಗಿರುವುದುಂಟು.  ಆದರೆ ನೆನೆಸಿದೊಡನೆ ನಾಲಗೆಯಲ್ಲಿ ನೀರೂರಿಸಿ ಕಮ್ಮಗೆ ಕುಣಿಯುವಂತೆ ಮಾಡುವ ಶ್ರಾದ್ಧದೂಟ ಮಾತ್ರ ಕಲ್ಪನೆಗಿಂತಲೂ ಹೆಚ್ಚು ರುಚಿಕರವಾಗಿರುವುದು ಅದನ್ನು ಸವಿದವರೆಲ್ಲರೂ ಬಲ್ಲ ವಿಚಾರ. ಶ್ರಾದ್ಧದೂಟದ ಸವಿಯನ್ನು ಕಲ್ಪಿಸುತ್ತಾ ಬಣ್ಣಿಸುವ ಸತ್ಯ ಹರಿಶ್ಚಂದ್ರ  ಚಿತ್ರದ ಶ್ರಾದ್ಧದೂಟ ಸುಮ್ಮನೆ  ಹಾಡು ಕೂಡ ಆ ಕಲ್ಪನೆಯಷ್ಟೇ ಮಧುರ. ಶ್ರಾದ್ಧ, ಪಿತೃಪಕ್ಷ ಇತ್ಯಾದಿಗಳನ್ನು  ಅಶುಭ ಎಂದು ಪರಿಗಣಿಸುವವರಿದ್ದಾರೆ. ಆದರೆ ಪಿತೃಗಳು ಬಂದು ನಮ್ಮನ್ನು ಹರಸುತ್ತಾರೆ ಎಂದು ನಂಬಲಾಗುವ  ಈ ಸಂದರ್ಭಗಳು ಶುಭಕರವೇ ಹಾಗೂ ಕೆಲವರು ಮಾಡುವಂತೆ ಈ ಹಾಡನ್ನು ಹಬ್ಬದೂಟ ಸುಮ್ಮನೆ ಎಂದು ಬದಲಾಯಿಸಿ ಹಾಡಿಕೊಳ್ಳಬೇಕಾಗಿಲ್ಲ ಎಂದು ನನ್ನ ಅನ್ನಿಸಿಕೆ.

ಮಾಯಾ ಬಜಾರ್ ಚಿತ್ರದ ವಿವಾಹ ಭೋಜನವಿದು ಹಾಡಿನ ಜನಪ್ರಿಯತೆಯಿಂದ ಪ್ರೇರೇಪಿತವಾಗಿರಬಹುದಾದ ಈ  ಹಾಡನ್ನು ವಿಭಿನ್ನ ಶೈಲಿಯಲ್ಲಿ ಪರಿಕಲ್ಪಿಸಿದ ಹುಣಸೂರು ಕೃಷ್ಣಮೂರ್ತಿ ನಿಜಕ್ಕೂ great.  ವಿವಾಹ ಭೋಜನ ಹಾಡಿನಲ್ಲಿ ಬಣ್ಣಿಸಲ್ಪಟ್ಟ ಭಕ್ಷಗಳೆಲ್ಲ ಪರದೆಯ ಮೇಲೆ ವಸ್ತುಶಃ ಕಾಣಿಸಿಕೊಳ್ಳುತ್ತವೆ.  ಆದರೆ ಇಲ್ಲಿ ಎಲ್ಲವೂ ಮನಸ್ಸಿನ ಮಂಡಿಗೆ ಮಾತ್ರ.  ಜನಪ್ರಿಯವಾಗಬೇಕಾದರೆ  ಪ್ರಸಿದ್ಧ ಗಾಯಕರೇ ಹಾಡಬೇಕೆಂದೇನೂ ಇಲ್ಲ ಎಂದು ಸಾಬೀತುಗೊಳಿಸಿದ ಹಾಡೂ ಹೌದು ಇದು. ಪೆಂಡ್ಯಾಲ ನಾಗೇಶ್ವರ ರಾವ್ ಅವರು ಶಂಕರಾಭರಣ ರಾಗದ ಸ್ವರಗಳಲ್ಲಿ  ಸಂಯೋಜಿಸಿದ  ಇದನ್ನು ಹಾಡಿದವರು ಹೆಸರೇ ಕೇಳಿರದ ಬಿ.ಗೋಪಾಲಂ ಎಂಬವರು ಮತ್ತು ಹೆಸರೇ ದಾಖಲಾಗದ ಇನ್ನೂ ಒಂದಿಬ್ಬರು. ಒಂದೆರಡು ಕಡೆ ನಟ ದ್ವಾರಕೀಶ್ ಅವರ ಧ್ವನಿಯನ್ನು ಕೇಳಿದಂತೆನಿಸಿತು.

ಅತಿ ಚಿಕ್ಕ prelude ಮತ್ತು  interlude ಹೊಂದಿರುವುದರಿಂದ  ಸುಮಾರು ಎರಡೂವರೆ ನಿಮಿಷ ಅವಧಿಯ ಈ ಹಾಡಿನಲ್ಲಿ 3 ಚರಣಗಳನ್ನು ಅಡಕಗೊಳಿಸಲು ಸಾಧ್ಯವಾಗಿದೆ.  ಚರಣಗಳು ಒಂದೇ ರೀತಿ ಇರದೆ ಒಂದೊಂದೂ  ವಿಭಿನ್ನ  ಶೈಲಿಯಲ್ಲಿರುವುದರಿಂದ ಏಕತಾನತೆ ಇಲ್ಲ.  ಚಿತ್ರದ ಸನ್ನಿವೇಶದಲ್ಲಿ ಇದನ್ನು ಮರುದಿನದ ಶ್ರಾದ್ಧಕ್ಕೆ ದರ್ಭೆ ತರಲು ಕಾಡಿಗೆ ಹೊರಟ ಕಾಲಕೌಶಿಕನ ಶಿಷ್ಯರು ಮತ್ತು ಲೋಹಿತಾಸ್ಯ ಹಾಡುವುದರಿಂದ ಬಾಲಕನಿಗೆ ಹೊಂದಿಕೆಯಾಗುವ ಧ್ವನಿಯೊಂದನ್ನು chorusನೊಂದಿಗೆ ಸೇರಿಸಲಾಗಿದೆ.  ತಂದೆಯು ಇನ್ನೆಲ್ಲೋ ಇದ್ದು ತಾಯಿಯು ಇನ್ನೊಬ್ಬರ ಮನೆಯ ಊಳಿಗದವಳಾಗಿರುವಾಗ ಅದುವರೆಗೆ ಅರಮನೆಯಲ್ಲಿ ಬೆಳೆದ ಆ ಮಗುವು ಈ ರೀತಿ ಕಾಡಿನಲ್ಲಿ ಕುಣಿದು ಕುಪ್ಪಳಿಸಿ ಹಾಡುವುದು ಅಸಹಜವೆಂದು ಮೇಲ್ನೋಟಕ್ಕೆ ಅನ್ನಿಸಿದರೂ ಪುಟ್ಟ ಮಕ್ಕಳು ಎಲ್ಲವನ್ನು ಮರೆತು ಕ್ಷಣಮಾತ್ರದಲ್ಲಿ ಹೊಸ ಪರಿಸರಕ್ಕೆ ಒಗ್ಗಿಕೊಳ್ಳುತ್ತಾರೆ ಎಂಬ ಸತ್ಯ ಅರಿತರೆ    ಇದು ಸಹಜವೇ ಎಂದು ಒಪ್ಪಿಕೊಳ್ಳಬೇಕಾಗುತ್ತದೆ.

ಸತ್ಯ ಹರಿಶ್ಚಂದ್ರ ಚಿತ್ರದ ನಮೋ ಭೂತನಾಥ, ತಿಲ್ಲಾನ, ನೀನು ನಮಗೆ ಸಿಕ್ಕಿ ಬಿದ್ದೆಯೋ ರಾಜ,  ಆನಂದ ಸದನ, ನನ್ನ ನೀನು, ವಿಧಿ ವಿಪರೀತ, ಕಾಲಕೌಶಿಕನ ಮುಂದೆ, ಕುಲದಲ್ಲಿ ಕೀಳ್ಯಾವುದೋ ಮತ್ತು ಈ ಹಾಡು ಸಮಾನವಾಗಿ ಜನಪ್ರಿಯವಾಗಿದ್ದು ವಿವಿಧಭಾರತಿಯ ಮಧುರಗೀತಂ ಕಾರ್ಯಕ್ರಮದಲ್ಲಂತೂ ಸರದಿಯಂತೆ ಎಲ್ಲವೂ ದಿನಕ್ಕೊಂದರಂತೆ ಪ್ರಸಾರವಾಗುತ್ತಿದ್ದವು.  ಕಾಲಕ್ರಮೇಣ ಕುಲದಲ್ಲಿ ಕೀಳ್ಯಾವುದೋ ಮುಂಚೂಣಿಯಲ್ಲುಳಿದು ಉಳಿದವು ಹಿನ್ನೆಲೆಗೆ ಸರಿದವು. 

ಸತ್ಯ ಹರಿಶ್ಚಂದ್ರ ಇತ್ತೀಚೆಗೆ ಬಣ್ಣ ಬಳಿದುಕೊಂಡು ಬಂದಾಗ ಆಧುನಿಕ ತಂತ್ರಜ್ಞಾನದ ಹೆಸರಿನಲ್ಲಿ  ಅದರ audio ತನ್ನ ಮೂಲ ಶುದ್ಧ ರೂಪ ಕಳೆದುಕೊಂಡದ್ದನ್ನು ಅನೇಕರು ಗಮನಿಸಿರಬಹುದು.  ಕತ್ತರಿ ಪ್ರಯೋಗಕ್ಕೆ ಒಳಗಾದ ಶ್ರಾದ್ಧದೂಟ ಹಾಡಿನ ಒಂದು ಚರಣ ಮಾತ್ರ ಚಿತ್ರದಲ್ಲಿ ಉಳಿದಿತ್ತು.  ಕಪ್ಪು ಬಿಳುಪು ಚಿತ್ರದ Original ಹಾಡು  ಇಲ್ಲಿದೆ. 






ಶ್ರಾದ್ಧದೂಟ ಸುಮ್ಮನೆ
ರಚನೆ :  ಹುಣಸೂರು ಕೃಷ್ಣಮೂರ್ತಿ
ಸಂಗೀತ : ಪೆಂಡ್ಯಾಲ ನಾಗೇಶ್ವರ ರಾವ್
ಗಾಯಕರು : ಬಿ. ಗೋಪಾಲಂ ಮತ್ತು ಸಂಗಡಿಗರು
       * * *

ತದ್ದಿನ ಧಿನ ಧಿನ ತದ್ದಿನ
ನಾಳೆ ನಮ್ಮ ತಿಥಿ ದಿನ

ಶ್ರಾದ್ಧದೂಟ ಸುಮ್ಮನೆ
ನೆನೆಸಿಕೊಂಡ್ರೆ ಝುಮ್ಮನೆ
ನೀರೂರಿ ನಾಲಗೆ
ಕುಣಿವುದಯ್ಯ ಕಮ್ಮಗೆ
ಲಲಲಲ್ಲ ಲಲ್ಲಲ

ಇಂಗು ತೆಂಗು ತಿರುವಿ ಬೆರೆತ
ವಡೆ ಗೊಜ್ಜು ಮಜ್ಜಿಗೆ ರಾಯ್ತ
ಜಂಗಿ ಜಗಿದು ಚಪ್ಪರಿಸಿ
ನಂಜಿಕೊಂಡು ತಿಂದರೆ
ಹೇ ಪಾಪ ರೀ ಪಾಪ
ಹೇ ಪಾಪ ರೀ ಪಾಪ
ಶ್ರಾದ್ಧದೂಟ ಸುಮ್ಮನೆ

ಪಾಯ್ಸ ಖೀರು ನಿಂಬೆ ಸಾರು
ಪೂರಿ ಹೋಳ್ಗೆ ಹಪ್ಳ ಸಂಡ್ಗೆ
ಪಟ್ಟಾಗಿಳಿಸೆ ಹೊಟ್ಟೆ ಒಳಗೆ
ಜುಟ್ಟು ನಿಲ್ವುದು ನೆಟ್ಟಗೆ
ಹೇ ಪಾಪ ರೀ ಪಾಪ
ಹೇ ಪಾಪ ರೀ ಪಾಪ

ಕೈಗೂ ಬಾಯ್ಗು ಹೂಡಿ ಜಗಳ
ಕೂರಿ ಕೂರಿ ರಸದ ಕವಳ
ತಿಂದು ತೇಗು ಬಂದ ಹೊರ್ತು
ಇಲ್ಲ ತೃಪ್ತಿಯಾದ ಗುರ್ತು
ಹೇ ಪಾಪ ರೀ ಪಾಪ
ಹೇ ಪಾಪ ರೀ ಪಾಪ

Wednesday 22 February 2017

ಹೀಗೊಂದು ಸೆಲ್ಫೀ ವರದಿ


ಅದು 2004ನೇ ಇಸವಿ.  ಕಾರ್ಕಳ ತಾಲೂಕಿನ ಮಾಳ ಕಾಲಕಾಮ ಪರಶುರಾಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನನ್ನ ಕೊಳಲುವಾದನ ಕಾರ್ಯಕ್ರಮ ಏರ್ಪಾಡಾಗಿತ್ತು. ಊರಿನ ಹವ್ಯಾಸಿ ಹುಡುಗರದ್ದೇ ಹಿಮ್ಮೇಳ.  ಇನ್ನೂ  ಮೊಬೈಲ್, facebook, whatsappಗಳ ಯುಗ ಆರಂಭವಾಗಿರಲಿಲ್ಲ. ಹೀಗಾಗಿ ವೀಡಿಯೋ ಮಾಡುವವರಾಗಲಿ, ಫೋಟೊ ತೆಗೆಯುವವರಾಗಲೀ ಯಾರೂ ಇರಲಿಲ್ಲ.  ವೃತ್ತಿಪರರಿಂದ ಈ ಕೆಲಸ ಮಾಡಿಸುವ ಮಟ್ಟದ ಕಾರ್ಯಕ್ರಮವೂ ಅದಾಗಿರಲಿಲ್ಲ.  ಆಗ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದ ಬಗ್ಗೆ ಇತರರಿಗೆ ತಿಳಿಯುತ್ತಿದ್ದುದು ಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳಲ್ಲಿ ಆ ಕುರಿತು ವರದಿಗಳು ಬಂದಾಗ.  ಆದರೆ ಅವೆಲ್ಲ ಪ್ರಸಿದ್ಧರಿಗೆ ಮಾತ್ರ ತಾನೇ.  ಹೀಗಾಗಿ ನನ್ನ ಕಾರ್ಯಕ್ರಮದ ವರದಿಯನ್ನು ನಾನೇ ತಯಾರಿಸುವ ಒಂದು ಹೊಸ ಪ್ರಯೋಗ ಮಾಡಿದ್ದೆ.  ಶ್ರೀವತ್ಸ ಜೋಶಿಯ ಸಹಕಾರದಿಂದ ದಟ್ಸ್ ಕನ್ನಡ portalನಲ್ಲೂ ಪ್ರಕಟವಾಗಿದ್ದ ಅದು ಸುಮಾರಾಗಿ  ಹೀಗಿತ್ತು.

**********************

ನಿಗದಿತ ಸಮಯ - ಸಂಜೆ 7 ಗಂಟೆಗೆ ಸರಿಯಾಗಿ ವೇದಿಕೆಯನ್ನೇರಿದೆವು. ಮಹಿಳೆಯರೇ ಜಾಸ್ತಿ ಸಂಖ್ಯೆಯಲ್ಲಿದ್ದ ಸಾಕಷ್ಟು ಶ್ರೋತೃಗಳು ಆಗಲೇ ಜಮಾಯಿಸಿದ್ದರು. ಪರಶುರಾಮನಿಗೆ ಮನದಲ್ಲೇ ವಂದಿಸಿ, ಚಿರನೂತನ ಗಣೇಶ ವಂದನೆಯಾದ  ವಾತಾಪಿ ಗಣಪತಿಂ ಕೀರ್ತನೆಯಾಡನೆ ಕಾರ್ಯಕ್ರಮ ಆರಂಭ. ಮುಂದಿನದು ನಾನು ಕೊಳಲು ನುಡಿಸಲು ಹೇಗೆ ಕಲಿತೆ ಎಂಬುದರ ಬಗ್ಗೆ ಒಂದು ಕಿರು ಪ್ರಾತ್ಯಕ್ಷಿಕೆ. ಧರ್ಮಸ್ಠಳ ಜಾತ್ರೆಯಿಂದ ನಾಲ್ಕಾಣೆ ಕೊಳಲು ಖರೀದಿ, ಊದಲು ಪ್ರಯತ್ನಿಸುವಾಗಿನ ಪೀ ಪೀ ರಾಗ, ಒಂದೇ ಕೈಯಿಂದ  ಪಾಪಿಯ ಜೀವನ ಪಾವನಗೊಳಿಸುವ ಹಾಡು ಮೂಡಿ ಬಂದ ಬಗೆ ಮುಂತಾದವುಗಳನ್ನು ನುಡಿಸಿ ತೋರಿಸಿದೆ.

ಸಂಪ್ರದಾಯಬದ್ಧ ಸಂಗೀತ ಕಛೇರಿಯನ್ನು ನಿರೀಕ್ಷಿಸಿದ್ದವರಿಗೆ ಏನೋ ವಿಚಿತ್ರವೆನ್ನಿಸಿರಬಹುದು. ಅಂತೂ ಎಲ್ಲರೂ ಕಣ್ಣು ಬಾಯಿ ಬಿಟ್ಟು ಗಮನವಿಟ್ಟು ಕೇಳುತ್ತಿದ್ದರು. ನನ್ನ ಕಾಲೇಜು ವಿದ್ಯಾಭ್ಯಾಸದ ನಂತರ ಮಂಗಳೂರು ಸೇರಿದ ಮೇಲೆ ಕಲಾನಿಕೇತನದಲ್ಲಿ ಶಾಸ್ತ್ರೀಯ ತರಬೇತಿ ಇತ್ಯಾದಿಗಳ ಬಗ್ಗೆ ತಿಳಿಸಿ ಎರಡನೆಯ ಹಾಡು ಹಿಂದೋಳ ರಾಗದ  ಸಾಮಜವರ ಗಮನ  ನುಡಿಸಿದೆ. ಮುಂದಿನ ಸಾಲಿನಲ್ಲಿ ಕುಳಿತ ವಿದ್ವಾಂಸರು ತಾಳ ಹಾಕುತ್ತಾ ನನಗೆ ಸಹಾಯ ಮಾಡುತ್ತಿದ್ದರು. (ಅದು ಒಂದು ರೀತಿಯ ಪರೀಕ್ಷೆಯೂ ಹೌದು! ) ಇನ್ನು ಪಂಡಿತರಿಗಿಂತ ಪಾಮರರತ್ತ ಹೆಚ್ಚು ಗಮನ ಕೊಡುವುದು ಸೂಕ್ತವೆಂದೆಣಿಸಿ, ಮಾಧುರ್ಯಕ್ಕೆ ಶಾಸ್ತ್ರೀಯ, ಲಘು, ಭಾವ ಗೀತೆ, ಭಕ್ತಿ ಗೀತೆ, ಚಿತ್ರ ಗೀತೆ ಎಂಬ ಯಾವ ವ್ಯತ್ಯಾಸವೂ ಇಲ್ಲ , ಶಾಸ್ತ್ರೀಯವೆಂದಾಕ್ಷಣ ಎಲ್ಲವೂ ಅತ್ಯುತ್ತಮ, ಉಳಿದದ್ದೆಲ್ಲಾ ಕಳಪೆ ಎಂಬುದು ಸರಿಯಲ್ಲ, ಕಾಳು-ಜೊಳ್ಳು ಎಲ್ಲ ಕಡೆಯೂ ಇದೆ, ಒಂದು ಉತ್ತಮ ಮೌಲ್ಯವುಳ್ಳ ಹಾಡು ಚಲನಚಿತ್ರದಲ್ಲಿ ಬಂದರೆ ಅದು ಸ್ವೀಕಾರಾರ್ಹವಲ್ಲ ಎಂಬ ಮಡಿವಂತಿಕೆ ಸಲ್ಲ, ಜೇನ್ನೊಣವು ವಿವಿಧ ಜಾತಿಯ ಹೂಗಳಿಂದ ಮಕರಂದವನ್ನು ಸಂಗ್ರಹಿಸಿ ಜೇನು ತಯಾರಿಸುವಂತೆ ಯಾವುದೇ ಮೂಲದಿಂದ ಬಂದರೂ ಮಾಧುರ್ಯವನ್ನು ಸ್ವೀಕರಿಸುವವರೇ ನಿಜವಾದ ಸಹೃದಯರು... - ಮುಂತಾದ ವಿಚಾರಗಳನ್ನು ತಿಳಿಸಿ ನುಡಿಸಿದ  ಸಂತ ತುಕಾರಾಂ ಚಿತ್ರದ ಮೋಹನ ರಾಗದ  ಜಯತು ಜಯ ವಿಠಲಾ  ಹಾಡು ಎಲ್ಲರಿಗೂ ಮೆಚ್ಚಿಗೆಯಾಯಿತು. ಆ ಮೇಲಿನದು ಶ್ರೋತೃಗಳೂ ನೇರವಾಗಿ ಭಾಗವಹಿಸುವಂತಹ ಐಟಂ. ಮುಂದೆ ನುಡಿಸಲಿರುವ ಹಾಡು ಯಾವುದೆಂದು ಗುರುತಿಸಿದವರಿಗೆ ಅವರು ಮೆಚ್ಚಿದ ಒಂದು ಹಾಡನ್ನು ನುಡಿಸುವ ವಿಶೇಷ ಬಹುಮಾನದ ಘೋಷಣೆ. ನುಡಿಸಿದ್ದು  ನೀ ಮಾಯೆಯಾಳಗೋ ನಿನ್ನೊಳು ಮಾಯೆಯೋ...,  ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ... ,  ಯಾಕೆನ್ನ ಈ ರಾಜ್ಯಕ್ಕೆಳೆತಂದೆ ಹರಿಯೆ...  ಮುಂತಾದ ಅನೇಕ ಭಜನೆ ಹಾಡುಗಳಿಗೆ ಅನ್ವಯಿಸಬಹುದಾದ ಕಾಂಬೋಧಿ ರಾಗದ ಧಾಟಿ. ನಿರೀಕ್ಷಿಸಿದಂತೆಯೇ ಒಬ್ಬೊಬ್ಬರು ಒಂದೊಂದು ಉತ್ತರ ಹೇಳಿದರು. ಕೊನೆಗೆ ಬಹುಮಾನ ದಕ್ಕಿದ್ದು  ಯಾಕೆನ್ನ ಈ ರಾಜ್ಯ  ಎಂದು ನನ್ನ ಮನಸ್ಸಿನಲ್ಲಿದ್ದ ಹಾಡನ್ನು ಗುರುತಿಸಿದ ಒಬ್ಬ ಸಭಿಕ ಮಹಾನುಭಾವರಿಗೆ! ಆವರ ಇಷ್ಟದ ಒಂದು ಹಾಡನ್ನು ಕಾರ್ಯಕ್ರಮದ ಕೊನೆಯ ಭಾಗದಲ್ಲಿ ನುಡಿಸುವ ಆಶ್ವಾಸನೆ ಕೊಟ್ಟೆ. ಮುಂದೆ ಅಲ್ಲಿ ಬಹುಸಂಖ್ಯಾಕರಾಗಿದ್ದ ಮಹಿಳೆಯರತ್ತ ಗಮನ. ಹಿಂದಿನ ಕಾಲದಲ್ಲಿ ಮದುವೆ, ಮುಂಜಿಗಳಲ್ಲಿ ಹೆಣ್ಣು ಮಕ್ಕಳು ಹಾಡುತ್ತಿದ್ದುದನ್ನು ನೆನಪಿಸಿ ಅಂತಹುದೇ ಒಂದು ಹಾಡು  ಪಾಲಿಸೆಮ್ಮ ಶ್ರೀ ಮೂಕಾಂಬಿಕೆಯೆ  ನುಡಿಸಿದಾಗ ಎಲ್ಲರಿಗೂ ಖುಷಿಯೋ ಖುಷಿ. ಆನಂತರ ಎಲ್ಲರನ್ನೂ ತಂತಮ್ಮ ಬಾಲ್ಯಕ್ಕೆ ಕರೆದೊಯ್ದದ್ದು - ತಮ್ಮನನ್ನೋ, ತಂಗಿಯನ್ನೋ ಮಲಗಿಸುವ ನೆವದಲ್ಲಿ ತೊಟ್ಟಿಲಿನ ಎರಡೂ ಬದಿಗಳಲ್ಲಿ ಒಬ್ಬೊಬ್ಬರು ಕುಳಿತು ಉಯ್ಯಾಲೆಯಾಡುತ್ತಾ ಹಾಡಿಕೊಳ್ಳುತ್ತಿದ್ದ ಹಾಡು  ಬಾರೊ ಬಾರೊ ಬಾರೋ ಗಣಪ . ಮತ್ತೆ ಶಾಸ್ತ್ರೀಯ ಸಂಗೀತದತ್ತ ಹೊರಳಿ  ರಾರಾ ವೇಣು ಗೋಪಾಬಾಲ  ಜತಿಸ್ವರ. ತಕ್ಷಣ ಇದೇ ಧಾಟಿಯನ್ನು ಹೋಲುವ  ಛುಪ್‌ನೇ ವಾಲೇ ಸಾಮ್‌ನೆ ಆ...  ನುಡಿಸಿ ಎಲ್ಲ ಸಂಗೀತವೂ ಒಂದೇ ಎಂಬ ವಾದಕ್ಕೆ ಪುಷ್ಟಿ. ಇದಾದೊಡನೆ ಕನ್ನಡವಾದರೆ ಕನ್ನಡ, ಮರಾಠಿಯಾದರೆ ಮರಾಠಿ ಆಗಬಹುದಾದ  ಭೀಮ ಪಲಾಸ್‌  ರಾಗದ ಎರಡು ರಚನೆಗಳು. ಮೊದಲನೆಯದು  ಆನಂದಾಚಾ ಕಂದ ಹರಿಲಾ  (ಮರಾಠಿಯಲ್ಲಿ),  ಮಾನವ ಜೀವನ ಸುಖಮಯವಾಗಿ  (ಕನ್ನಡದಲ್ಲಿ). ಹಾಗೆಯೇ ಇನ್ನೊಂದು  ಅಮೃತಾಹುನೀ ಗೋಡ  ಅಭಂಗ ಮತ್ತು ಅದರ ಕನ್ನಡ ರೂಪಾಂತರ  ಅಮೃತಕ್ಕೂ ತಾ ರುಚಿ ನಾಮ ನಿನ್ನ ದೇವ...  ಹಾಡು. ಆರಂಭದಲ್ಲಿ ಶ್ರೋತೃಗಳೊಡನೆ ಸಂವಹನಕ್ಕೆ ಉಪಯೋಗಿಸಿದ  ಒಂದೇ ಧಾಟಿ - ಹಲವು ಹಾಡು  ತತ್ವಕ್ಕೆ ವಿರುದ್ಧವಾದ  ಒಂದೇ ಹಾಡು-ಹಲವು ಧಾಟಿಗೆ ಉದಾಹರಣೆಯಾಗಿ  ಭಾಗ್ಯದಾ ಲಕ್ಷ್ಮಿ ಬಾರಮ್ಮದ ವಿವರಣೆಯೊಡನೆ ನುಡಿಸಲು ನಾನು ಆಯ್ದುಕೊಂಡದ್ದು  ಭಾಗ್ಯದಾ ಲಕ್ಷ್ಮೀ ಬಾರಮ್ಮ  ಚಿತ್ರದ ಟೈಟಲ್‌ ಹಾಡು, ಮಧ್ಯಮಾವತಿ ರಾಗದಲ್ಲಿ. ಜತೆಯಲ್ಲೇ ಪುರಂದರದಾಸರ ಮೂಲ ರಚನೆ ಶ್ರೀ ರಾಗದಲ್ಲಿ. ಮುಂದೆ ಜನಪದ ಜಗತ್ತಿಗೆ ಪ್ರವೇಶಿಸಿ ಜನಪ್ರಿಯ  ಭಾಗ್ಯದ ಬಳೆಗಾರದ ಸರದಿ. ನಂತರ ಬಂದವುಗಳು ಕೆಲ ಹಿಂದಿ ಚಿತ್ರಗೀತೆಗಳು -  ತೊರಾ ಮನ್‌ ದರ್‌ಪನ್‌ ಕಹಲಾಯೆ ,  ಜ್ಯೋತಿ ಕಲಶ್‌ ಛಲ್‌ಕೇ ,  ಕುಹೂ ಕುಹೂ ಬೋಲೆ ಕೋಯಲಿಯಾ  ಮುಂತಾದವು. ಹಾಗೆಯೇ ಈ ಮೊದಲು, ಟ್ಯೂನ್‌ ಕೇಳಿ ಹಾಡು ಗುರುತಿಸಿ ಸ್ಪರ್ಧೆಯನ್ನು ಗೆದ್ದಿದ್ದ ಶ್ರೋತೃವಿನ ಕೋರಿಕೆ -  ಜಿಸ್‌ ದೇಶ್‌ ಮೆಂ ಗಂಗಾ ಬಹತೀ ಹೈ  ಚಿತ್ರದ  ಮೇರಾ ನಾಮ್‌ ರಾಜು  ಹಾಡು.  ಶಂಕರ್ ಅವರ ಗಿಲಿ ಗಿಲಿ ಮ್ಯಾಜಿಕ್‌ ಸಂದರ್ಭವೊಂದಕ್ಕೆ ಈ ಹಾಡಿನ ತುಣುಕೊಂದನ್ನು ಉಪಯೋಗಿಸುತ್ತಿರುವುದನ್ನೂ ನೆನಪಿಸಿ ಭೈರವಿ ರಾಗದ ಈ ಹಾಡು ಪ್ರಸ್ತುತಗೊಂಡಿತು. ಅಷ್ಟರಲ್ಲಿ ಕೀ ಬೋರ್ಡ್‌ನಲ್ಲಿ ಸಹಕರಿಸುತ್ತಿದ್ದ ಗಜಾನನ ಮರಾಠೆಯವರ ಕೋರಿಕೆಯೊಂದನ್ನು ತೀರಿಸುವುದೂ ಅನಿವಾರ್ಯವಾಯಿತು. ಅವರಿಗಾಗಿ  ಸೆಹ್ರಾ  ಚಿತ್ರದ  ಪಂಖ್‌ ಹೊತೆತೊ ಉಡ್‌ ಆತೀರೆ  ನುಡಿಸುತ್ತಿದ್ದಂತೆ ಎರಡು ಗಂಟೆಯ ಕಾರ್ಯಕ್ರಮದ ಕೊನೆಯ ಹಂತ ಬಂದೇ ಬಿಟ್ಟಿತ್ತು. ಕೊನೆಗೆ ನುಡಿಸಿದ್ದು ಇತ್ತೀಚಿನ ದಿನಗಳಲ್ಲಿ ಬಹುಜನಪ್ರಿಯವಾಗಿರುವ  ಪವಮಾನ... ಜಗದಾ ಪ್ರಾಣ  ಹಾಡು. 

ಕಾರ್ಯಕ್ರಮದುದ್ದಕ್ಕೂ ಯಾರೊಬ್ಬರೂ ಕೂತಲ್ಲಿಂದ ಮಿಸುಕಾಡಿರಲಿಲ್ಲ. ವಿಶೇಷವಾಗಿ ಸಭಿಕರ  ಗುಜು ಗುಜು  ಸದ್ದೂ ಇರಲಿಲ್ಲ. ಮಾತೆಯರ ಮಾತೂ ಇರಲಿಲ್ಲ. ಹಾಡಿನಿಂದ ಹಾಡಿಗೆ ಶ್ರೋತೃಗಳ ಸಂಖ್ಯೆ ಏರುತ್ತಲೇ ಇತ್ತು. ಮಹೇಶ ಕಾಕತ್ಕರ್ ತನ್ನ ಯಕ್ಷಗಾನದ ಮೃದಂಗದಲ್ಲಿ, ವೆಂಕಟೇಶ ಡೋಂಗ್ರೆ ತಬ್ಲಾದಲ್ಲಿ, ಗಜಾನನ ಮರಾಠೆ ಕೀ ಬೋರ್ಡ್‌ನಲ್ಲಿ ತಾವು ಎಂದೂ ಕೇಳಿರಲಾರದ ಹಾಡುಗಳಿಗೂ ಉತ್ತಮ ಹಿಮ್ಮೇಳ ಒದಗಿಸಿದರು. ಎಂದೂ ಕೇಳಿರಲಾರದ ಎಂದು ಯಾಕಂದೆ ಅಂದರೆ ನಾವೆಲ್ಲರೂ ನೇರವಾಗಿ ವೇದಿಕೆಯಲ್ಲೇ ಒಟ್ಟು ಸೇರಿದ್ದು! ಸಾಂಸ್ಕೃತಿಕ ಕಾರ್ಯಕ್ರಮ ಸರಣಿಯಲ್ಲಿ ಅದರ ಹಿಂದಿನ ದಿನವೂ ಸಂಗೀತ ಕಾರ್ಯಕ್ರಮವೇ ಇದ್ದುದರಿಂದ ಮೊದಲು  ‘ಇವತ್ತೂ ಶಾಸ್ತ್ರೀಯ ಸಂಗೀತವೇ?...’  ಎಂದು ಮೂಗೆಳೆಯುತ್ತಿದ್ದ ಕೆಲವರೂ ವಿಭಿನ್ನ ಶೈಲಿಯ ಪ್ರಸ್ತುತಿಯಿಂದಾಗಿ ತಮ್ಮ ಅಭಿಪ್ರಾಯ ಬದಲಿಸಿದರೆಂದು ಕೆಲವು ಕಾರ್ಯಕರ್ತರು ಮಾತಾಡಿಕೊಳ್ಳುತ್ತಿದ್ದುದು ಕೇಳಿಸುತ್ತಿತ್ತು. ಬೆರಳೆಣಿಕೆಯ ಕೆಲವು ತೀರಾ ಸಂಪ್ರದಾಯಸ್ಥರಿಗೆ ಕಾರ್ಯಕ್ರಮದ ಶೈಲಿ ಇಷ್ಟವಾಗದೇ ಇದ್ದಿರಬಹುದಾದ ಸಾಧ್ಯತೆ ಇದ್ದರೂ ಬಹುತೇಕ ಮಂದಿಯ ಮನದಲ್ಲಿ ಒಂದು ನೆನಪಿಡಬಹುದಾದ ಸಂಜೆಯನ್ನು ಕಳೆದ ಭಾವನೆ ಇತ್ತೆಂದು ನನ್ನ ಅನಿಸಿಕೆ.

Wednesday 15 February 2017

ಗ್ರಾಮೊಫೋನ್ ಗಾಥೆ


ಇತ್ತೀಚೆಗೆ ಅತ್ಯಂತ ಹಳೆಯ ಹಾಡೊಂದನ್ನು  ಗ್ರಾಮೊಫೋನ್ ವೀಡಿಯೊ ಒಂದಕ್ಕೆ ಅಳವಡಿಸಿ ಹಂಚಿಕೊಂಡಿದ್ದೆ.  ಆದರೆ ಅದು ನಾನೆಣಿಸಿದಷ್ಟು ಮಂದಿಯ ಗಮನ ಸೆಳೆಯಲಿಲ್ಲ. ಕ್ಯಾಸೆಟ್ಟುಗಳನ್ನೇ ನೋಡಿರದ ಈಗಿನ ಜನಾಂಗದ ಅನೇಕರಿಗೆ  ಗ್ರಾಮೊಫೋನಿನ ಬಗ್ಗೆ ಮಾಹಿತಿಯೇ ಇಲ್ಲದಿರುವುದು ಇದಕ್ಕೆ ಕಾರಣವಿರಬಹುದು ಅಂದುಕೊಂಡಿದ್ದೇನೆ.  ಥಾಮಸ್ ಅಲ್ವಾ ಎಡಿಸನ್ ಗ್ರಾಮೊಫೋನನ್ನು ಆವಿಷ್ಕರಿಸಿದನು ಎಂದು ಈಗಿನ  ಶಾಲಾ ಪಠ್ಯದಲ್ಲಿ ಇದೆಯೋ ಗೊತ್ತಿಲ್ಲ.


ಕ್ಯಾಸೆಟ್, CD, DVD, Blue Ray Disk ಇತ್ಯಾದಿಗಳಿಗೆ ಹೋಲಿಸಿದರೆ ಅತ್ಯಂತ ದೀರ್ಘ ಆಯುಸ್ಸು ಅನುಭವಿಸಿದ ಗ್ರಾಮೋಫೋನಿಗೆ ಆರಂಭದಲ್ಲಿ ಫೋನೋಗ್ರಾಫ್ ಎಂಬ ಹೆಸರಿತ್ತು ಮತ್ತು ಅದು ತಟ್ಟೆಯ ಬದಲು ಸಿಲಿಂಡರ್ ಹೊಂದಿತ್ತು.  ನಂತರದ ದಿನಗಳಲ್ಲಿ ಅದನ್ನು  ರೆಕಾರ್ಡ್ ಪ್ಲೇಯರ್ ಮತ್ತು ಟರ್ನ್ ಟೇಬಲ್ ಎಂದೂ ಗುರುತಿಸುವ ಪರಿಪಾಠ ಆರಂಭವಾಯಿತು.  ಧ್ವನಿಯ ತರಂಗಗಳಿಗನುಸಾರವಾಗಿ  ಅರಗಿನ ತಟ್ಟೆಯ ತಿರುಗಣೆಯಲ್ಲಿ ಕುಳಿಗಳನ್ನು ನಿರ್ಮಿಸಿ ಆ ಕುಳಿಗಳಿಂದ  ಗ್ರಾಮೊಫೋನಿನ ಸೂಜಿ ಅರ್ಥಾತ್ ಸ್ಟೈಲಸ್ ಮೂಲಕ  ಅದೇ ಧ್ವನಿ ತರಂಗಗಳನ್ನು ಮರುಸೃಷ್ಟಿಸುವುದು ಸ್ಥೂಲವಾಗಿ ಇಲ್ಲಿ ಬಳಸಲಾಗುವ ತಂತ್ರಜ್ಞಾನ. ಇದಕ್ಕಾಗಿ ಮೊದಲು ಮಯಣದ ಅಚ್ಚು ತಯಾರಿಸಿಕೊಳ್ಳಲಾಗುತ್ತದೆ.  ಧ್ವನಿಮುದ್ರಣ ಮಾಡುವಾಗ ತಟ್ಟೆಯು ಯಾವ ವೇಗದಲ್ಲಿ ತಿರುಗುತ್ತಿತ್ತೋ playback ಮಾಡುವಾಗಲೂ ಅದೇ ವೇಗದಲ್ಲಿ ತಿರುಗುವುದು ತುಂಬಾ ಮುಖ್ಯ. ಆರಂಭದ ದಿನಗಳಲ್ಲಿ ಗಡಿಯಾರಕ್ಕೆ ಕೀಲಿ ಕೊಡುವಂತೆ ಹ್ಯಾಂಡಲ್ ಮೂಲಕ ಸ್ಪ್ರಿಂಗೊಂದನ್ನು ಬಿಗಿಗೊಳಿಸಿ ಅದರ ಶಕ್ತಿಯಿಂದ ತಟ್ಟೆ ಸಮವೇಗದಲ್ಲಿ ತಿರುಗುವಂತೆ  ಮಾಡಿ ತಿರುಗಣೆಯಲ್ಲಿರಿಸಿದ ಗ್ರಾಮೊಫೋನಿನ ಸೂಜಿ ಕೆಲವು ‘ಸನ್ನೆ’ಗಳ ಮೂಲಕ  ನೇರವಾಗಿ ಧ್ವನಿಪೆಟ್ಟಿಗೆಯ ತೆಳು ಪದರವನ್ನು ಕಂಪಿಸುವಂತೆ ಮಾಡಿ ಧ್ವನಿಯನ್ನು ಮರುಸೃಷ್ಟಿಸಲಾಗುತ್ತಿತ್ತು.  ಅದಕ್ಕೆ ಶಂಕುವಿನಾಕಾರದ ರಚನೆಯನ್ನು ಅಳವಡಿಸಿ ಧ್ವನಿಯು ಸಾಧ್ಯವಾದಷ್ಟು ಶಕ್ತಿಶಾಲಿಯಾಗುವಂತೆ ಮಾಡುವ ವ್ಯವಸ್ಥೆಯೂ ಇರುತ್ತಿತ್ತು.  ಕ್ರಮೇಣ ಹ್ಯಾಂಡಲ್ ತಿರುಗಿಸುವ ಬದಲು ವಿದ್ಯುತ್ ಮೋಟಾರು ಅಳವಡಿಕೆ  ಮತ್ತು ಸೂಜಿಯಿಂದ ನೇರ ಧ್ವನಿಪೆಟ್ಟಿಗೆಯಲ್ಲಿ ಕಂಪನ ಉಂಟುಮಾಡುವುದರ ಬದಲು ಸೂಜಿ ಗ್ರಹಿಸಿದ ತರಂಗಗಳನ್ನು ವಿದ್ಯುತ್ತಿಗೆ ಪರಿವರ್ತಿಸಿ  ಆ ವಿದ್ಯುತ್ತಿನಿಂದ ಮತ್ತೆ  ಧ್ವನಿಯನ್ನು ಸೃಷ್ಟಿಸುವ ತಂತ್ರಜ್ಞಾನದ ಬಳಕೆ ಆರಂಭವಾಯಿತು.  ಧ್ವನಿಮುದ್ರಣಕ್ಕಾಗಿ ಅರಗಿನ ತಟ್ಟೆಯ ಎರಡೂ ಬದಿಗಳನ್ನು ಆರಂಭದಿಂದಲೂ ಬಳಸಲಾಗುತ್ತಿತ್ತು. ಈ ರೆಕಾರ್ಡುಗಳನ್ನು ಗ್ರಾಮೊಫೋನ್ ಪ್ಲೇಟ್ ಎಂದೂ ಅನ್ನಲಾಗುತ್ತಿತ್ತು.

ಸುಮಾರು 1925ರ ವರೆಗೆ ಒಂದು hornನ ಎದುರು ಮಾತನಾಡಿದ್ದು ಸನ್ನೆಗಳ ಮೂಲಕ ನೇರವಾಗಿ ಮಯಣದ ಮಾಸ್ಟರ್ ಡಿಸ್ಕಿನ ಮೇಲೆ ಅಚ್ಚೊತ್ತುವ ಪದ್ಧತಿ ಇತ್ತು. ನಂತರ ಈ ಪದ್ಧತಿಯಲ್ಲಿ ಸುಧಾರಣೆಯಾಗಿ ಶಬ್ದವು microphone ಮೂಲಕ amplifierಗೆ ಹೋಗಿ ವಿದ್ಯುತ್ ತರಂಗಗಳಾಗಿ ಪರಿವರ್ತಿತ ಶಬ್ದವು ಮತ್ತೆ ಒಂದು ಸನ್ನೆಯ ಮೂಲಕ master diskನ ಮೇಲೆ ಅಚ್ಚು ಮೂಡಿಸುವ ತಂತ್ರ ಬಳಸಲ್ಪಡತೊಡಗಿತು. ಇದನ್ನು ಆಗ electrical recording ಅನ್ನುತ್ತಿದರು.

ಮೊದಲಿನ ಅನೇಕ ವರ್ಷಗಳ ಕಾಲ ನಿಮಿಷಕ್ಕೆ 78 ಸುತ್ತುಗಳ ವೇಗದ ಅರ್ಥಾತ್ 78 rpmನ ರೆಕಾರ್ಡುಗಳೇ ಚಾಲ್ತಿಯಲ್ಲಿದ್ದವು. ಅವುಗಳ ಒಂದು ಬದಿಯಲ್ಲಿ ಸುಮಾರು ಮೂರುವರೆ ನಿಮಿಷದ ಧ್ವನಿಮುದ್ರಣವನ್ನು ಅಳವಡಿಸಲು ಸಾಧ್ಯವಾಗುತ್ತಿತ್ತು.  ನಮ್ಮ ದೇಶದಲ್ಲಿ 30ರ ದಶಕದಿಂದಲೂ ಸಿನಿಮಾ ಹಾಡುಗಳ ಜೊತೆಗೆ ಶಾಸ್ತ್ರೀಯ ಸಂಗೀತ, ನಾಟಕ, ಭಕ್ತಿ ಸಂಗೀತ ಇತ್ಯಾದಿಗಳ ಧ್ವನಿ ಮುದ್ರಿಕೆಗಳು ತಯಾರಾಗುತ್ತಿದ್ದವು.  ಯಾವುದೇ ಹಾಡು ಮೂರುವರೆ ನಿಮಿಷಕ್ಕಿಂತ ಜಾಸ್ತಿ ಅವಧಿಯದ್ದಾದರೆ  ಅದನ್ನು ಎರಡು ಭಾಗ ಮಾಡಿ ರೆಕಾರ್ಡಿನ ಎರಡೂ ಬದಿಗಳಿಗೆ ಹಂಚಲಾಗುತ್ತಿತ್ತು.  ದೀರ್ಘವಾದ ನಾಟಕ ಇತ್ಯಾದಿಗಳಾದರೆ ಒಂದಕ್ಕಿಂತ ಹೆಚ್ಚು ರೆಕಾರ್ಡುಗಳ ಸೆಟ್ಟುಗಳನ್ನೇ ಬಿಡುಗಡೆಗೊಳಿಸಲಾಗುತ್ತಿತ್ತು.  ರಾಮನ ಅವತಾರ ರಘುಕುಲ ಸೋಮನ ಅವತಾರ, ನಾವಾಡುವ ನುಡಿಯೇ ಕನ್ನಡ ನುಡಿ, ಶಿವಶಂಕರಿ, ಲಾಗಾ ಚುನರಿ ಮೆಂ ದಾಗ್ ಛುಪಾವೂಂ ಕೈಸೆ  ಮುಂತಾದವು ರೆಕಾರ್ಡಿನ ಎರಡೂ ಬದಿಗಳನ್ನು ಆವರಿಸಿದ್ದ ಪ್ರಸಿದ್ಧವಾದ ದೀರ್ಘ ಹಾಡುಗಳು.  ರೇಡಿಯೋದಲ್ಲಿ ಇಂಥವುಗಳನ್ನು ಪ್ರಸಾರಮಾಡುವಾಗ ಮಧ್ಯದಲ್ಲಿ ‘ನೀವು ಈಗ ಭೂ ಕೈಲಾಸ ಚಿತ್ರದ ಹಾಡನ್ನು ಕೇಳುತ್ತಿರುವಿರಿ’ ಎಂಬಂಥ ಅತಿರಿಕ್ತ announcement ಬೇಕಾಗುತ್ತಿತ್ತು.  ಸಿನಿಮಾ ಹಾಡುಗಳ ಧ್ವನಿಮುದ್ರಣ ಮ್ಯಾಗ್ನೆಟಿಕ್ ಟೇಪುಗಳಲ್ಲಿ ಆರಂಭವಾಗುವ ಮೊದಲು ಫಿಲ್ಮಿನ ರೀಲುಗಳಲ್ಲೇ optical ರೆಕಾರ್ಡಿಂಗ್ ನಡೆಯುತ್ತಿತ್ತು.   ಹೀಗಾಗಿ ಕಲಾವಿದರೆಲ್ಲ ಗ್ರಾಮೊಫೋನ್ ಕಂಪೆನಿಯ ಸ್ಟುಡಿಯೋಗೆ ಹೋಗಿ ಮತ್ತೆ ಹಾಡುಗಳನ್ನು ಧ್ವನಿಮುದ್ರಿಸಬೇಕಾಗುತ್ತಿತ್ತು.  ಇದೇ ಕಾರಣದಿಂದಾಗಿ ಕೆಲವು ಹಳೆ ಹಾಡುಗಳನ್ನು ಸಿನಿಮಾದಲ್ಲಿ ಮತ್ತು ರೆಕಾರ್ಡಿನಲ್ಲಿ ಆಲಿಸುವಾಗ  ಕೆಲವು ಸೂಕ್ಷ್ಮ ವ್ಯತ್ಯಾಸಗಳು ಗೋಚರಿಸುವುದುಂಟು.  ರೆಕಾರ್ಡುಗಳ ಮಧ್ಯಭಾಗದಲ್ಲಿ ವೃತ್ತಾಕಾರದ ಕಾಗದದ ಲೇಬಲ್ ಇರುತ್ತಿದ್ದು ಅದರಲ್ಲಿ ಹಾಡಿಗೆ ಸಂಬಂಧಿಸಿದ ವಿವರಗಳೆಲ್ಲವೂ ಮುದ್ರಿತವಾಗಿರುತ್ತಿದ್ದವು.  ಹೀಗಾಗಿ ವಿಸ್ತೃತ ವಿವರಗಳನ್ನೊಳಗೊಂಡಿರುವ ಕಾಗದದ ಸ್ಲೀವ್ ಕಳೆದು ಹೋದರೂ ಮುಖ್ಯ  ವಿವರಗಳು  ಶಾಶ್ವತವಾಗಿ ಉಳಿಯುತ್ತಿದ್ದವು.  ಆದರೆ ಆರಂಭದ ಕೆಲವು ವರ್ಷ ಸಿನಿಮಾ ಹಾಡುಗಳ ರೆಕಾರ್ಡುಗಳಲ್ಲಿ  ಹಾಡುಗಾರರ ಹೆಸರೇ ಇರುತ್ತಿರಲಿಲ್ಲ. ಇದ್ದರೂ ನಿಜವಾಗಿ ಹಾಡಿದವರ ಹೆಸರಿನ ಬದಲಾಗಿ ಪರದೆಯ ಮೇಲಿನ  ಪಾತ್ರದ  ಹೆಸರು ನಮೂದಾಗಿರುತ್ತಿತ್ತಂತೆ. ಹೀಗಾಗಿ ಇಂತಹ ಕೆಲವು ಹಳೆಯ ಹಾಡುಗಳನ್ನು ನಿಜವಾಗಿ ಹಾಡಿದವರು ಯಾರು ಎಂದು ಕಂಡು ಹಿಡಿಯಲು ರೇಡಿಯೋ ನಿಲಯದವರಿಗೆ ಕಷ್ಟವಾಗುತ್ತಿತ್ತಂತೆ.  ಚಿತ್ರದಲ್ಲಿ ಕಾಣುತ್ತಿರುವ ಪಾಪಿಯ ಜೀವನ ಹಾಡಿನ ರೆಕಾರ್ಡಿನಲ್ಲಿ ಗಾಯಕ ಪಿ.ಬಿ.ಶ್ರೀನಿವಾಸ್ ಹೆಸರೇ ಇಲ್ಲದಿರುವುದನ್ನು ಗಮನಿಸಬಹುದು.



ಹಿಂದಿ  ಹಾಡುಗಳು ಚಿತ್ರ ಬಿಡುಗಡೆಯಾಗುವ ಕೆಲ ತಿಂಗಳ ಮೊದಲೇ ತಯಾರಾಗುತ್ತಿದ್ದರೆ ಕನ್ನಡ ಹಾಡುಗಳು  ಚಿತ್ರ ಬಿಡುಗಡೆಯಾಗಿ ಬಹಳ ಸಮಯದ ನಂತರವಷ್ಟೇ ಹೊರಬರುತ್ತಿದ್ದವು.  ರೆಕಾರ್ಡು ಬಿಡುಗಡೆಯಾದ ಕೂಡಲೇ  ಅವು ರೇಡಿಯೋ ಸಿಲೋನ್ ಮತ್ತು ವಿವಿಧಭಾರತಿಗೆ ತಲುಪುವಂತೆ  ನಿರ್ಮಾಪಕರು ನೋಡಿಕೊಳ್ಳುತ್ತಿದ್ದರು ಏಕೆಂದರೆ  ಚಿತ್ರ ಜನಪ್ರಿಯವಾಗಲು ರೇಡಿಯೋದಲ್ಲಿ ಹಾಡುಗಳು ಪ್ರಸಾರವಾಗುವುದು  ಬಲು ಮುಖ್ಯವಾಗಿರುತ್ತಿತ್ತು.  ರೇಡಿಯೋ ಸಿಲೋನಿನ ಬಿನಾಕಾ ಗೀತ್ ಮಾಲಾ ರೆಕಾರ್ಡುಗಳ ಮಾರಾಟದ ಅಂಕೆ ಸಂಖ್ಯೆಗಳನ್ನಾಧರಿಸಿಯೇ ಹಾಡುಗಳ ಜನಪ್ರಿಯತೆಯನ್ನು ನಿರ್ಧರಿಸುವ ಕಾರ್ಯಕ್ರಮವಾಗಿತ್ತು.   ಈಗ  ಎಲ್ಲ ಕಡೆ ಸಂಗೀತ digitize ಆಗತೊಡಗಿದ್ದರೂ ರೇಡಿಯೋ ಸಿಲೋನ್ ಈಗಲೂ  78  rpm ರೆಕಾರ್ಡುಗಳಿಂದ ಹಾಡುಗಳನ್ನು ಕೇಳಿಸುತ್ತಿದೆ.  ಏಷ್ಯಾದಲ್ಲೆ ಅತಿ ದೊಡ್ಡದು ಎಂಬ ಖ್ಯಾತಿ  ಹೊಂದಿದ  ರೆಕಾರ್ಡುಗಳ ಲೈಬ್ರರಿಯೂ ಅಲ್ಲಿದೆ.  ಆ ರೆಕಾರ್ಡುಗಳನ್ನು ಆಲಿಸುವಾಗಿನ ಶ್ರವಣ ಸುಖ ಈಗಿನ ಎಂಥ digital ಮಲ್ಟಿ ಚಾನಲ್ ಸ್ಟೀರಿಯೋ ಸಿಸ್ಟಂಗಳಲ್ಲೂ  ಸಿಗದು. ವಾಸ್ತವವಾಗಿ ನಾವು ಈಗಿನ ಕಾಲದಲ್ಲಿ ಕೇಳುವ mp3 ಅಂದರೆ ಕೆನೆ ತೆಗೆದ toned ಹಾಲಿನಂತೆ. ಗ್ರಾಮೊಫೋನಿಂದ ನೇರವಾಗಿ analog ರೂಪದಲ್ಲಿ ಕೇಳುವುದೆಂದರೆ ಮನೆಯ ಹಸುವಿನ ಹಾಲನ್ನು ಕಾಸಿ ಕುಡಿದಂತೆ.  ಕೆಳಗಿನ ಚಿತ್ರದಲ್ಲಿ ರೇಡಿಯೋ ಸಿಲೋನಿನ ರೆಕಾರ್ಡ್ ಲೈಬ್ರರಿಯ ಒಂದು ಭಾಗವನ್ನು ನೋಡಬಹುದು.  ಅಲ್ಲಿ ನಿಂತಿರುವವರು ಅಲ್ಲಿಯ announcer ಜ್ಯೋತಿ ಪರಮಾರ್.  ಆಕೆ 60-70ರ ದಶಕದಲ್ಲಿ ಅಲ್ಲಿದ್ದ ದಲವೀರ್ ಸಿಂಗ್ ಪರಮಾರ್ ಅವರ ಪುತ್ರಿ.  ರೇಡಿಯೋ ಸಿಲೋನ್ ಸಂಪೂರ್ಣವಾಗಿ ಗ್ರಾಮೊಫೋನ್ ರೆಕಾರ್ಡುಗಳ ಮೇಲೇ ಅವಲಂಬಿತವಾದ್ದರಿಂದ ಅಲ್ಲಿ  turn tableನಲ್ಲಿ  ರೆಕಾರ್ಡುಗಳನ್ನು ನುಡಿಸಲು spinner ಎಂಬ ಬೇರೆ ಸಹಾಯಕರಿರುತ್ತಾರೆ. ಅಲ್ಲಿಂದ ಪ್ರಸಾರವಾಗುತ್ತಿದ್ದ ಜಾಹೀರಾತುಗಳ jingleಗಳೂ ಕ್ಲಪ್ತ ಸಮಯದಲ್ಲಿ ವಿಳಂಬವಿಲ್ಲದೆ play ಮಾಡಲಾಗುವಂತೆ ಪುಟ್ಟ ಗ್ರಾಮೋಫೋನ್ ರೆಕಾರ್ಡುಗಳ ರೂಪದಲ್ಲೇ ಇರುತ್ತಿದ್ದುದು.   ವಿವಿಧಭಾರತಿ ಮತ್ತು ಆಕಾಶವಾಣಿಯ ಇತರ ನಿಲಯಗಳಲ್ಲಿ  ಅನೌಂಸರ್ consoleನಲ್ಲೇ turn table ಅಳವಡಿಸಲಾಗಿರುತ್ತದೆ. ಕಾರ್ಯಕ್ರಮ ಪ್ರಸ್ತುತ ಪಡಿಸುವವರೇ ರೆಕಾರ್ಡ್ ನುಡಿಸುತ್ತಾರೆ.  ಇನ್ನೊಂದು ಚಿತ್ರದಲ್ಲಿ ವಿವಿಧಭಾರತಿಯ ಜಯಮಾಲಾ ಕಾರ್ಯಕ್ರಮದಲ್ಲಿ ಗಾಯಕ ಮುಕೇಶ್  ರೆಕಾರ್ಡ್ ನುಡಿಸಲು ಸಿದ್ಧವಾಗಿರುವುದನ್ನು ನೋಡಬಹುದು.

60ರ ದಶಕದ ಮಧ್ಯಭಾಗದಲ್ಲಿ 45 rpmನ extended play ಅರ್ಥಾತ್ EP ರೆಕಾರ್ಡುಗಳು ಮತ್ತು 33 1/3 rpmನ long play ಅರ್ಥಾತ್ LP ರೆಕಾರ್ಡುಗಳು ಬರತೊಡಗಿದವು.  EPಗಳ ಒಂದು ಬದಿಯಲ್ಲಿ  ಕೊನೆಯನ್ನು ಒಂದಷ್ಟು trim ಮಾಡಿದ ಎರಡು ಚರಣಗಳ  ಎರಡು ಹಾಡು ಹಾಗೂ LPಗಳಲ್ಲಿ 3 ಚರಣಗಳ 4 ರಿಂದ 5 ಹಾಡುಗಳು ಹಿಡಿಸುತ್ತಿದ್ದವು.  ಹೀಗಾಗಿ ಒಂದೇ LPಯಲ್ಲಿ ಒಂದು ಚಿತ್ರದ  7 ರಿಂದ 8 ದೀರ್ಘ ಹಾಡುಗಳನ್ನು ಅಳವಡಿಸಲು ಸಾಧ್ಯವಾಗತೊಡಗಿತು. 78 rpm ರೆಕಾರ್ಡು ತಯಾರಿಗೆ  ಬಳಸುತ್ತಿದ್ದ ಅರಗಿಗೆ ಬದಲಾಗಿ EP, LP ಗಳನ್ನು venylನಿಂದ ತಯಾರಿಸಲಾಗುತ್ತಿತ್ತು. ಕನ್ನಡದಲ್ಲಿ ಇಂಥ micro grooveಗಳ EP ಯುಗ ಆರಂಭವಾದದ್ದು ಪರೋಪಕಾರಿ ಚಿತ್ರದ ಹಾಡುಗಳ ಮೂಲಕ. 60ರ ದಶಕದ ಬಹುತೇಕ ಎಲ್ಲ ಹಿಂದಿ ಹಾಡುಗಳಲ್ಲಿ 3 ಚರಣಗಳಿರುತ್ತಿದ್ದವು.  ಹೀಗಾಗಿ ಮೊದಲು ಎಲ್ಲ ಹಾಡುಗಳ ಎರಡೆರಡು ಚರಣಗಳುಳ್ಳ 78 rpm ರೆಕಾರ್ಡುಗಳು ಬಿಡುಗಡೆಯಾಗುತ್ತಿದ್ದವು. ಕೊಂಚ ಸಮಯದ ನಂತರ ಅವುಗಳ ಪೈಕಿ ಹೆಚ್ಚು ಜನಪ್ರಿಯತೆ ಗಳಿಸಿದ ನಾಲ್ಕು ಹಾಡುಗಳನ್ನು ಆಯ್ದು  EP  ತಯಾರಿಸಲಾಗುತ್ತಿತ್ತು. ಆಮೇಲೆ ಎಲ್ಲ ಹಾಡುಗಳ ಮೂರೂ ಚರಣಗಳನ್ನೊಳಗೊಂಡ LP ಬರುತ್ತಿತ್ತು. ಆದರೆ ಕನ್ನಡ ಹಾಡುಗಳ ಮಾರುಕಟ್ಟೆ ಸೀಮಿತವಾಗಿದ್ದುದರಿಂದ ಸಾಮಾನ್ಯವಾಗಿ ಎಲ್ಲ ಹಾಡುಗಳ 78 rpm ಮತ್ತು ಆಯ್ದ ನಾಲ್ಕು ಹಾಡುಗಳ  EP ಮಾತ್ರ ಬಿಡುಗಡೆಯಾಗುತ್ತಿತ್ತು. ಈ ರೀತಿ ವಿವಿಧ ವೇಗಗಳ ರೆಕಾರ್ಡುಗಳು ಬರತೊಡಗಿದ ಮೇಲೆ ಕೆಲವೊಮ್ಮೆ ಅಚಾತುರ್ಯದಿಂದ  ತಪ್ಪು ವೇಗ ಆಯ್ಕೆ ಆಗಿ ಹಾಡುಗಳು ಚಿತ್ರ ವಿಚಿತ್ರವಾಗಿ ಕೇಳಿಸುವುದೂ ಇತ್ತು.  ರೆಕಾರ್ಡಿನ ಮೇಲ್ಮೈಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ತಿರುಗಣೆಯಲ್ಲಿ ಸೂಜಿ ಸಿಕ್ಕಿಹಾಕಿಕೊಂಡು ‘ವಾತಾಪಿ ಗಣಪತಿಂ ಪತಿಂ ಪತಿಂ ಪತಿಂ ಪತಿಂ ಭಜೇ’ ಯಂತಹ  special effect ಉಂಟಾಗುವುದೂ  ಅಪರೂಪವೇನೂ ಆಗಿರಲಿಲ್ಲ.  78 rpmನ ಅರಗಿನ ಪ್ಲೇಟುಗಳಿಗೆ ಹೆಚ್ಚು  ಹಾನಿಯಾಗದಂತಿರಲು ತನ್ನಲ್ಲೇ sound box ಹೊಂದಿದ್ದು ಭಾರವಾದ  arm ಇದ್ದ ಹಿಂದಿನ ಕಾಲದ ಗ್ರಾಮೊಫೋನುಗಳಲ್ಲಿ  ಒಮ್ಮೆ ಮಾತ್ರ ಉಪಯೋಗಿಸಬಹುದಾದ ಮೆದು ಲೋಹದ ಸೂಜಿಗಳನ್ನು ಉಪಯೋಗಿಸುತ್ತಿದ್ದರು.   Venyl ರೆಕಾರ್ಡುಗಳು ಬಂದ ಮೇಲೆ ಹೆಚ್ಚು ಭಾರವಿಲ್ಲದ arm ಉಳ್ಳ ಸುಧಾರಿತ ರೆಕಾರ್ಡ್ ಪ್ಲೇಯರುಗಳಲ್ಲಿ ದೀರ್ಘ ಕಾಲ ಉಪಯೋಗಿಸಬಹುದಾದ crystal stylusಗಳ ಬಳಕೆ ಆರಂಭವಾಯಿತು.


ಆದರೆ ರೇಡಿಯೊ ಮತ್ತು ನಂತರದ ದಿನಗಳಲ್ಲಿ ಟೇಪ್ ರೆಕಾರ್ಡರುಗಳಂತೆ ಗ್ರಾಮೋಫೋನುಗಳು  ಮನೆಮನೆಗಳಲ್ಲಿ  ಇರುತ್ತಿರಲಿಲ್ಲ.  ಮೈಕ್ ಸೆಟ್ಟಿನವರು ಮತ್ತು ಸಿನಿಮಾ ಟಾಕೀಸು  ಬಿಟ್ಟರೆ ಎಲ್ಲೋ ಕೆಲವು ಅನುಕೂಲಸ್ಥರು ಮಾತ್ರ ಗ್ರಾಮೋಫೋನ್ ಹೊಂದಿರುತ್ತಿದ್ದರು. ಕೆಲವು ಸಿರಿವಂತರ ಮನೆಗಳಲ್ಲಿ ರೇಡಿಯೊ ಮತ್ತು ಗ್ರಾಮೋಫೋನ್ ಜೊತೆಯಲ್ಲೇ ಇರುವ ದೊಡ್ಡ radiogramಗಳೂ ಇರುತ್ತಿದ್ದವು.  ಆಗಿನ ರೇಡಿಯೋಗಳಲ್ಲೂ  ಗ್ರಾಮೊಫೋನನ್ನು ಕೇಳಲು ಆಗುವಂತೆ ಮಾಡುವ ಪಿಕ್ ಅಪ್ ಎಂಬ ವ್ಯವಸ್ಥೆ ಇರುತ್ತಿದ್ದರೂ ಈ ಸೌಲಭ್ಯ ಉಪಯೋಗಿಸುತ್ತಿದ್ದವರು ಬಲು ವಿರಳ ಎಂದೇ ನನ್ನ ಅನಿಸಿಕೆ.  ಆದರೂ  ಯಾರಾದರೂ ಥಟ್ಟನೆ ಅಭಿಪ್ರಾಯ ಬದಲಿಸಿದರೆ ‘ಪ್ಲೇಟು ಬದಲಿಸಿದ’ ಅನ್ನುವಷ್ಟು ಸಾಮಾನ್ಯ ಜನಜೀವನದಲ್ಲೂ  ಗ್ರಾಮೊಫೋನ್ ಪ್ರಭಾವ ಇತ್ತು.  ನಮಗೆ ಗ್ರಾಮೊಫೋನ್ ನೋಡಲು ಸಿಗುತ್ತಿದ್ದುದು ಶಾಲಾ ವಾರ್ಷಿಕೋತ್ಸವ ಮತ್ತು ಯಕ್ಷಗಾನ ಬಯಲಾಟಗಳ ಸಂದರ್ಭದಲ್ಲಿ ಮಾತ್ರ.  ವಾರ್ಷಿಕೋತ್ಸವಗಳಂದು ಮೈಕ್ ಸೆಟ್ಟಿನವರ  ಗೆಳೆತನ ಸಂಪಾದಿಸಿ ಅವರ  ರೆಕಾರ್ಡ್ ಸಂಗ್ರಹವನ್ನು ಪರಿಶೀಲಿಸಿ ನಮ್ಮಿಷ್ಟದ ಹಾಡುಗಳನ್ನು ಮತ್ತೆ ಮತ್ತೆ ನುಡಿಸಲು ಹೇಳುವುದಿತ್ತು. ಸಾಮಾನ್ಯವಾಗಿ ಅವರು ಪ್ರತೀ 78 rpm ಪ್ಲೇಟಿನ ಎರಡೂ ಬದಿಗಳನ್ನು ನುಡಿಸುತ್ತಿದ್ದುದರಿಂದ ಅಲ್ಲಿ ನಮಗೆ ಒಂದು ಹಾಡಿನ ಇನ್ನೊಂದು ಬದಿ ಯಾವ ಹಾಡಿದೆ ಎನ್ನುವ ಮಾಹಿತಿಯೂ ತಾನಾಗಿ ಸಿಗುತ್ತಿತ್ತು. ಬಾಗಿಲನು ತೆರೆದು ಹಾಡಿನ ಹಿಂದೆ ಚಿನ್ನದಂತೆ ಚಿನ್ನದಂತೆ ಚಿನ್ನ, ಬೊಂಬೆಯಾಟವಯ್ಯಾ ಹಾಡಿನ ಹಿಂದೆ ಭಲೇ ಭಲೇ ಗಾರುಡಿ, ಜಯತು ಜಯ ವಿಠಲ ಹಾಡಿನ ಹಿಂದೆ ಬೇಡ ಕೃಷ್ಣ ರಂಗಿನಾಟ, ಕಿಶೋರ್ ಕುಮಾರನ ಪ್ರಸಿದ್ಧ ಇನ್ ಕಮ್ ಟಾಕ್ಸಂ  ಹಾಡಿನ ಹಿಂದೆ ಮಹೇಂದ್ರ ಕಪೂರನ ನೇಕಿ ತೇರೆ ಸಾಥ್ ಚಲೆಗಿ ಬಾಬಾ ಇದ್ದದ್ದು ಈಗಲೂ ನನಗೆ ನೆನಪಿದೆ!  ಹೀಗೆ ಅನೇಕ ಸಲ ಒಂದು ಬದಿಯ ಅತಿ ಜನಪ್ರಿಯ ಹಾಡಿನಿಂದಾಗಿ ಅದರ ಹಿಂಬದಿಯಲ್ಲಿರುವ ಸುಮಾರಾದ ಹಾಡಿನ ಅದೃಷ್ಟವೂ ಖುಲಾಯಿಸುತ್ತಿತ್ತು. ಕೆಲವು ಕಡೆ ಒಂದು ರೂಪಾಯಿ ನಾಣ್ಯ ಹಾಕಿ ಬೇಕಿದ್ದ ಹಾಡು ಕೇಳಲಾಗುವಂತಹ juke boxಗಳು ಇರುತ್ತಿದ್ದವು. ಮಂಗಳೂರಿನ ರೆಡ್ ರೋಸ್ ರೆಸ್ಟೋರೆಂಟಿನಲ್ಲಿ ಅಂಥದ್ದೊಂದು juke box ಇತ್ತು. ನಾವು ಕೆಲವು ಗೆಳೆಯರು ಅಲ್ಲಿ ಕಳ್ಳ ಕುಳ್ಳ ಚಿತ್ರದ ನಾ ಹಾಡಲು ನೀವು ಆಡಬೇಕು ಹಾಡು ಕೇಳುತ್ತಾ ನೇಂದ್ರ ಬಾಳೆ ಹಣ್ಣಿನಿಂದ ತಯಾರಿಸಿದ banana flitters ಎಂಬ dish ಸವಿಯುತ್ತಿದ್ದೆವು. ಈಗಲೂ ಆ ಹಾಡು ಆಲಿಸಿದರೆ  juke box ಮತ್ತು   banana flitters ನೆನಪಾಗುತ್ತವೆ.


ನಮ್ಮ ದೇಶದ ಗ್ರಾಮೊಫೋನ್ ಉದ್ದಿಮೆಯಲ್ಲಿ ಅಂತರರಾಷ್ಟ್ರೀಯ ಕಂಪನಿಗಳದ್ದೇ ಸಿಂಹಪಾಲಿದ್ದರೂ   ಬೆಂಗಳೂರಿನ ಚಿಕ್ಕಪೇಟೆಯ ಅವೆನ್ಯೂ ರೋಡಲ್ಲಿ ಈಗಲೂ ಕಾರ್ಯಾಚರಿಸುತ್ತಿರುವ  ಸೀತಾ ಫೋನ್ ಕಂಪನಿ ಗ್ರಾಮೊಫೋನ್ ಮತ್ತು  ರೆಕಾರ್ಡುಗಳ ತಯಾರಿ ಹಾಗೂ ಮಾರಾಟದಲ್ಲಿ  1920ರ ದಶಕದಿಂದಲೂ ತೊಡಗಿಸಿಕೊಂಡಿದ್ದ ಸಂಸ್ಥೆ.  ಚಂದಮಾಮದ ಪ್ರತಿ ಸಂಚಿಕೆಯಲ್ಲೂ ಇವರ ಜಾಹೀರಾತು ಇರುತ್ತಿತ್ತು.   ಈಗಲೂ ಅನೇಕ ಕಡೆ antique ರೂಪದಲ್ಲಿ ಗ್ರಾಮೊಫೋನುಗಳು  ತಯಾರಾಗುತ್ತಿದ್ದು ದುಬಾರಿ ಬೆಲೆ ತೆತ್ತರೆ  ಕೊಳ್ಳಲು  ಸಿಗುತ್ತವೆ.


ಈಗ ಗ್ರಾಮೊಫೋನಿನಲ್ಲಿ ಇದೊಂದು ಹಾಡು ಕೇಳಿ. ಹಾಡಿದವರು ಯಾರೆಂದು ಗುರುತಿಸಲು ಪ್ರಯತ್ನಿಸಿ.



Monday 6 February 2017

ಮಧುರಾಮೃತಮಯವೀ ಗಾನ


      ಕನ್ನಡದಲ್ಲಿ ಜಾನಕಿ ರಹಿತ ಸುಶೀಲ ಸಿನಿಮಾಗಳು ಮತ್ತು ಸುಶೀಲ ರಹಿತ ಜಾನಕಿ ಸಿನಿಮಾಗಳ ಜೊತೆಗೆ ಜಾನಕಿ-ಸುಶೀಲ ಇಬ್ಬರೂ ಇದ್ದ ಸಿನಿಮಾಗಳೂ ಬಹಳ ಇದ್ದರೂ ಯಾಕೋ ಸುಶೀಲ-ಜಾನಕಿ ಜಂಟಿ ಹಾಡುಗಳು ಬಂದದ್ದು ಕಮ್ಮಿ ಎಂದೇ ಹೇಳಬೇಕು.  ಆದರೂ  ‘ಎಸ್.ಜಾನಕಿ ಮತ್ತು ಪಿ.ಸುಶೀಲ ಜೊತೆಯಾಗಿ ಹಾಡಿರುವ ಕೆಲ ಕನ್ನಡ ಹಾಡುಗಳ ಪಟ್ಟಿ ಮಾಡಬಲ್ಲಿರಾ’ ಎಂದು ಯಾರನ್ನಾದರೂ ಕೇಳಿದರೆ ನೀ ನಡೆವ ಹಾದಿಯಲ್ಲಿ, ನಿಜ ಹೇಳುವೆನು ಅಮ್ಮ ನಿನ್ನ ಕಂಡರೆ ಪ್ರೀತಿ, ದೀನಳ ಮೊರೆಯ ಆಲಿಸೆ ಏಕೆ, ತಿರುಪತಿ ಗಿರಿವಾಸ ಶ್ರೀ ವೆಂಕಟೇಶ, ಆಸೆ ಹೇಳುವಾಸೆ ಇತ್ಯಾದಿ ಹಾಡುಗಳನ್ನು ನೆನಪು ಮಾಡಿಕೊಂಡು ಕೂಡಲೇ ಹೇಳಿಯಾರು.   ‘ಅಷ್ಟೇನಾ’ ಎಂದರೆ ಕಿಟ್ಟು ಪುಟ್ಟು, ಸಿಂಗಾಪುರ್‌ನಲ್ಲಿ ರಾಜಾ ಕುಳ್ಳ ಸಿನಿಮಾಗಳ ಹಾಡುಗಳ ಬಗ್ಗೆಯೂ ಹೇಳಿಯಾರು.  ಆದರೆ ನಾನು ಈಗ ಇಲ್ಲಿ ಉಲ್ಲೇಖಿಸಲಿರುವ ಆಶಾಸುಂದರಿ ಚಿತ್ರದ ಅಮೃತಮಯವೀ ಸ್ನೇಹ ಎಂಬ ಹಾಡು ಯಾರಿಗಾದರೂ ನೆನಪಾಗುವ ಸಾಧ್ಯತೆ ಕಮ್ಮಿ. 

     ಆಶಾಸುಂದರಿ 1960ರಲ್ಲಿ ಬಿಡುಗಡೆಯಾದ ಜಾನಪದ ಕಥಾವಸ್ತುವಿದ್ದ ಹುಣಸೂರ್‍ ಕೃಷ್ಣಮೂರ್ತಿ ನಿರ್ದೇಶನದ ಚಿತ್ರ.  ರಾಜಕುಮಾರ್, ಹರಿಣಿ, ಕೃಷ್ಣಕುಮಾರಿ, ನರಸಿಂಹರಾಜು ಮುಂತಾದವರ ತಾರಾಗಣವಿತ್ತು.  ಈ ಚಿತ್ರಕ್ಕೆ ಸಂಗೀತ ಒದಗಿಸಿದವರು ಕನ್ನಡಕ್ಕೆ ಬಲು ಅಪರೂಪದವರೇ ಆದ ಎಸ್.ದಕ್ಷಿಣಾಮೂರ್ತಿ.  ತೆಲುಗು, ತಮಿಳಿನ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ ಇವರು ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ವಿಭಾಗಗಳಲ್ಲೂ ಕೈ ಆಡಿಸಿದವರು. ಶಾಸ್ತ್ರೀಯ ಸಂಗೀತದಲ್ಲಿ ಪದವಿಯನ್ನೂ ಹೊಂದಿದ್ದರು.  ಉತ್ತಮ ಹಾರ್ಮೋನಿಯಮ್, ವಯಲಿನ್ ವಾದಕರಾಗಿದ್ದು HMVಯಲ್ಲೂ ಸೇವೆ ಸಲ್ಲಿಸಿದ್ದ ಇವರು ಸಿನಿಮಾ ವಾದ್ಯವೃಂದವನ್ನು ಕಂಡಕ್ಟ್ ಮಾಡುವುದರಲ್ಲಿ ಸಿದ್ಧಹಸ್ತರಾಗಿದ್ದವರು.  50ರ ದಶಕದಲ್ಲೇ ಲತಾ ಮಂಗೇಶ್ಕರ್ ಅವರಿಂದ ಸಂತಾನಂ ಸಂಸಾರಂ ಚಿತ್ರಕ್ಕಾಗಿ ತೆಲುಗು ಹಾಡು ಹಾಡಿಸಿದ್ದರು. ಸ್ವತಃ ಕೆಲವು ಹಾಡುಗಳನ್ನೂ ಹಾಡಿದ್ದ ಇವರು ಕೆಲ ಹಾಲಿವುಡ್ ಚಿತ್ರಗಳಲ್ಲೂ ರೆಕಾರ್ಡಿಸ್ಟ್ ಮತ್ತು music conductor ಆಗಿ ಕೆಲಸ ಮಾಡಿದ್ದರಂತೆ.

ದಕ್ಷಿಣಾಮೂರ್ತಿ


ಅಮೃತಮಯವೀ ಸ್ನೇಹ
     ಆಶಾಸುಂದರಿ ಚಿತ್ರದಲ್ಲಿ ಪಿ.ಬಿ. ಶ್ರೀನಿವಾಸ್ ಧ್ವನಿಯಲ್ಲಿರುವ ಶೃಂಗಾರ ಸಾರೇ ಸೇರಿದಂತೆ ಅನೇಕ ಹಾಡುಗಳಿದ್ದರೂ  ಕೇಳುಗರಿಗೆ ಅಮೃತಪಾನದ ಅನುಭವ ನೀಡುವುದು  ಈ ಯುಗಳಗೀತೆ.  ಇದು ಕನ್ನಡದಲ್ಲಿ ಸುಶೀಲ ಮತ್ತು ಜಾನಕಿ ಜೊತೆಯಾಗಿ ಹಾಡಿದ ಮೊದಲ ಗೀತೆ. ಹೇಳಿಕೊಳ್ಳುವಂಥ ಸಾಹಿತ್ಯದ ಬಲವಿಲ್ಲದ ಈ ಹಾಡು ಗೆದ್ದದ್ದು ವೈಶಿಷ್ಟ್ಯಪೂರ್ಣ ರಾಗಸಂಯೋಜನೆ ಮತ್ತು ಈ ಇಬ್ಬರು ಗಾನಸರಸ್ವತಿಯರಿಂದಾಗಿ.  ಶಂಕರ್ ಜೈಕಿಶನ್, ಒ.ಪಿ.ನಯ್ಯರ್, ಸಲಿಲ್ ಚೌಧರಿ ಎಲ್ಲರೂ ತನ್ನಲ್ಲೇ ಇದ್ದಾರೆ ಎಂದು  ಸಂಗೀತ ನಿರ್ದೇಶಕರಾದ ದಕ್ಷಿಣಾಮೂರ್ತಿ ಈ ಹಾಡಿನಲ್ಲಿ ಸಾಬೀತುಪಡಿಸಿದ್ದಾರೆ.  ತಬಲಾ ಲಯದೊಂದಿಗಿನ ಆಲಾಪ್ ಶೈಲಿಯ  ಆರಂಭದ ನಂತರ ಒಂದು ಆಕರ್ಷಕವಾದ ದೀರ್ಘ prelude ಬರುತ್ತದೆ. ನಂತರ ಢೋಲಕ್‌ನೊಂದಿಗೆ ಮುಖ್ಯ ಪಲ್ಲವಿ ಆರಂಭವಾಗ ಹಾಡಿನ ಬಣ್ಣವೇ ಬದಲಾಗುತ್ತದೆ. ಮಧ್ಯದಲ್ಲಿ ಬರುವ ಒಂದು pause ಪಲ್ಲವಿ ಭಾಗಕ್ಕೊಂದು ವಿಶೇಷ ಮೆರುಗು ನೀಡಿದೆ. ಹಾಡಿನ ಉಲ್ಲಾಸದ  ಮೂಡಿಗೆ ಸರಿಹೊಂದುವ ದ್ರುತಲಯದ ದೀರ್ಘವಲ್ಲದ interlude ಮತ್ತು link pieceಗಳಿವೆ   ಕೊನೆಯ ಭಾಗದಲ್ಲಿ ಸ್ನೇಹಪೂರ್ವಕ   ಸ್ಪರ್ಧಾರೂಪದ ಆಲಾಪ್ ಜುಗಲ್ ಬಂದಿ  ಇದೆ.  ಅತಿದ್ರುತ ಲಯದೊಂದಿಗೆ  ಹಾಡು ಮುಕ್ತಾಯವಾಗುತ್ತದೆ.

ಸಾಧ್ಯವಾದರೆ ಹೆಡ್ ಫೋನಿನಲ್ಲಿ ಆಲಿಸುತ್ತಾ  ಈ ಅಮೃತವನ್ನು ಆಸ್ವಾದಿಸಿ.