Sunday 14 August 2016

ಏ ಮೇರೆ ವತನ್ ಕೇ ಲೋಗೊ




     1962ರ ಚೀನಾ ಯುದ್ಧದಲ್ಲಿ ಮಡಿದ ವೀರ ಯೋಧರ ನೆನಪಿನಲ್ಲಿ ಕವಿ ಪ್ರದೀಪ್ ಅವರು ರಚಿಸಿದ ಈ ಕವನವನ್ನು ಸಿ.ರಾಮಚಂದ್ರ ಅವರ ಸಂಗೀತ ದಿಗ್ದರ್ಶನದಲ್ಲಿ ಲತಾ ಮಂಗೇಷ್ಕರ್ January 27, 1963 ರಂದು ನೇಶನಲ್ ಸ್ಟೇಡಿಯಂನಲ್ಲಿ ಅಂದಿನ ಪ್ರಧಾನಿ ನೆಹರು ಅವರ ಸಮ್ಮುಖದಲ್ಲಿ ಹಾಡಿದ್ದರು. ಇದಕ್ಕಾಗಿ ಯಾರೂ ರಾಯಲ್ಟಿ ಸ್ವೀಕರಿಸಬಾರದು ಮತ್ತು ಇದನ್ನು ಯಾವ ಚಲನ ಚಿತ್ರದಲ್ಲೂ ಬಳಸಿಕೊಳ್ಳಬಾರದು ಎಂಬ ಶರತ್ತುಗಳೊಡನೆ ನಂತರ ಇದರ ಗ್ರಾಮೊಫೋನ್ ರೆಕಾರ್ಡ್ ಕೂಡ ತಯಾರಿಸಲಾಯಿತು. 50ರ ದಶಕದ ಕೊನೆಯಲ್ಲಿ  ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಉಂಟಾಗಿದ್ದ  ವಿರಸದ ಕಾರಣದಿಂದ ಆಗ ಸಿ. ರಾಮಚಂದ್ರ ಅವರ ಹಾಡುಗಳನ್ನು   ಲತಾ ಮಂಗೇಷ್ಕರ್ ಹಾಡುತ್ತಿರಲಿಲ್ಲ.  ಹೀಗಾಗಿ  ಇದನ್ನು ಆಶಾ ಭೋಸ್ಲೆ ಹಾಡುವುದೆಂದು ತೀರ್ಮಾನವಾಗಿ ರಿಹರ್ಸಲ್ ಕೂಡ ನಡೆಸಿ ಆಗಿತ್ತಂತೆ. ಆದರೆ ಪ್ರಧಾನಿ ಎದುರು ಹಾಡುವ ಅವಕಾಶ ಕಳೆದುಕೊಳ್ಳಬಯಸದ ಲತಾ ತಾತ್ಕಾಲಿಕವಾಗಿ ego ಬದಿಗಿಟ್ಟು ತಾನೇ ಹಾಡಲು ಮುಂದಾದುದರಿಂದ ಆಶಾ ಭೋಸ್ಲೆ ಹಿಂದೆ ಸರಿದರಂತೆ. ಈ ಹಾಡಿನ ಧಾಟಿ ಕವಿ ಪ್ರದೀಪ್ ಅವರದ್ದೇ, ವಾದ್ಯ ಸಂಯೋಜನೆ ಮತ್ತು arrangement ಮಾತ್ರ ಸಿ.ರಾಮಚಂದ್ರ ನಿರ್ವಹಿಸಿದ್ದು ಎಂದೂ ಕೆಲವರು ಹೇಳುತ್ತಾರೆ. ಪ್ರದೀಪ್ ಅವರು ಸಂಗೀತ ಜ್ಞಾನ ಕೂಡ ಉಳ್ಳವರಾಗಿದ್ದು ಆವೋ ಬಚ್ಚೊ ತುಮ್ಹೆ ದಿಖಾಯೆಂ, ದೇಖ್ ತೆರೇ ಸಂಸಾರ್ ಕೀ ಹಾಲತ್ ಮುಂತಾದ ಹಾಡುಗಳನ್ನು ಸ್ವತಃ ಹಾಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.  ಆ ಮೇಲೆ ಲತಾ ಮಂಗೇಷ್ಕರ್ ಅನೇಕ ಸಮಾರಂಭಗಳ ವೇದಿಕೆಗಳಲ್ಲಿ ಇದನ್ನು ಹಾಡಿರುವುದನ್ನು ನೀವು ಕೇಳಿರುತ್ತೀರಿ. ಆದರೆ  ಮೂಲ ಗ್ರಾಮೊಫೋನ್ ರೆಕಾರ್ಡ್ ವರ್ಷನ್ ಕೇಳುವಾಗಿನ ಅನುಭವವೇ ಬೇರೆ. ಆ ಕಾಲದಲ್ಲಿ ದಿನನಿತ್ಯವೆಂಬಂತೆ ವಿವಿಧಭಾರತಿಯಲ್ಲಿ ಇದು ಪ್ರಸಾರವಾಗುತ್ತಿತ್ತು. ನನಗಂತೂ ಇದನ್ನು ಕೇಳಿದಾಗ ನಮ್ಮ ಮನೆಗೆ ಆಗತಾನೇ ಕಾಲಿಟ್ಟಿದ್ದ ಹೊಸ ನ್ಯಾಶನಲ್ ಎಕ್ಕೊ ರೇಡಿಯೋದ ವಾರ್ನಿಷ್ ಪರಿಮಳವೇ ಮೂಗಿಗೆ ಅಡರುತ್ತದೆ!

     ಈ ಹಾಡಿನ ಆರಂಭದಲ್ಲಿರುವ ಡೋಲು ತಮ್ಮಟೆಗಳ ಸದ್ದಿಗೂ ವಿಶೇಷ ಅರ್ಥ ಇದೆ. ಅದು ಜನರು ಸ್ವಾತಂತ್ರ್ಯವನ್ನು ಸಂಭ್ರಮಿಸುವುದರ ಸಂಕೇತ.  ಅದನ್ನು ಕಂಡು ಕವಿಯು "ನೀವು ಬೇಕಾದಷ್ಟು ಸಂಭ್ರಮಿಸಿ.  ಧ್ವಜವನ್ನೂ ಅರಳಿಸಿ.  ಆದರೆ  ಗಡಿಗಳಲ್ಲಿ ಪ್ರಾಣ ತೆತ್ತ ಯೋಧರನ್ನು ಮರೆಯದಿರಿ" ಎಂದು ಎಚ್ಚರಿಸುತ್ತಾನೆ.


  


 ಗ್ರಾಮೊಫೋನ್ ರೆಕಾರ್ಡ್ ರೂಪದಲ್ಲಿ ಕೇಳಬಯಸುತ್ತೀರಾದರೆ ಇಲ್ಲಿದೆ.



ಏ ಮೇರೆ ವತನ್ ಕೆ ಲೋಗೊ ತುಮ್ ಖೂಬ್ ಲಗಾಲೋ ನಾರಾ
ಯೇ ಶುಭ್ ದಿನ್ ಹೈ ಹಮ್ ಸಬ್ ಕಾ ಲಹರಾಲೊ ತಿರಂಗಾ ಪ್ಯಾರಾ
ಪರ್ ಮತ್ ಭೂಲೋ ಸೀಮಾ ಪರ್ ವೀರೋ ನೆ ಹೈ ಪ್ರಾಣ್ ಗವಾಯೆ
ಕುಛ್ ಯಾದ್ ಉನ್ಹೆ ಭೀ ಕರ್ ಲೋ (2)
ಜೊ ಲೌಟ್ ಕೆ ಘರ್ ನ ಆಯೆ (2)

ಏ ಮೇರೆ ವತನ್ ಕೆ ಲೋಗೊ  ಜರಾ ಆಂಖ್ ಮೆ ಭರ್ ಲೊ ಪಾನೀ
ಜೊ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೊ ಕುರಬಾನಿ

ಜಬ್ ಘಾಯಲ್ ಹುವಾ ಹಿಮಾಲಯ್ ಖತರೆ ಮೆಂ ಪಡೀ ಆಜಾದೀ
ಜಬ್ ತಕ್ ಥೀ ಸಾಂಸ್ ಲಡೇ ವೊ(2) ಫಿರ್ ಅಪನೀ ಲಾಶ್ ಬಿಛಾ ದೀ
ಸಂಗೀನ್ ಪೆ ಧರ್ ಕರ್ ಮಾಥಾ ಸೋ ಗಯೇ ಅಮರ್ ಬಲಿದಾನೀ
ಜೊ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೊ ಕುರಬಾನಿ

ಜಬ್ ದೇಶ್ ಮೆಂ ಥೀ ದೀವಾಲೀ ವೊ ಖೆಲ್ ರಹೆ ಥೆ ಹೋಲಿ
ಜಬ್ ಹಮ್ ಬೈಠೆ ಥೆ ಘರೊ ಮೆಂ (2) ವೊ ಝೇಲ್ ರಹೆ ಥೆ ಗೋಲಿ
ಥೆ ಧನ್ಯ್ ಜವಾನ್ ವೊ ಅಪನೆ ಥೀ ಧನ್ಯ್ ವೊ ಉನ್ ಕೀ ಜವಾನೀ
ಜೊ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೊ ಕುರಬಾನಿ

ಕೋಯಿ ಸಿಖ್ ಕೊಯಿ ಜಾಟ್ ಮರಾಠಾ(2)  ಕೋಯಿ ಗುರಖಾ ಕೋಯಿ ಮದರಾಸೀ(2)
ಸರಹದ್ ಪರ್ ಮರನೇವಾಲಾ(2)  ಹರ್ ವೀರ್ ಥಾ ಭಾರತ್ ವಾಸೀ
ಜೊ ಖೂನ್ ಗಿರಾ ಪರಬತ್ ಪರ್ ವೊ ಖೂನ್ ಥಾ  ಹಿಂದುಸ್ತಾನೀ
ಜೋ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೋ ಕುರಬಾನೀ

ಥೀ ಖೂನ್ ಸೆ ಲತ್ ಪಥ್ ಕಾಯಾ ಫಿರ್ ಭೀ ಬಂದೂಕ್ ಉಠಾಕೆ
ದಸ್ ದಸ್ ಕೊ ಏಕ್ ನೆ ಮಾರಾ ಫಿರ್ ಗಿರ್ ಗಯೆ ಹೋಶ್ ಗವಾ ಕೆ
ಜಬ್ ಅಂತ್ ಸಮಯ್ ಆಯಾ ತೋ(2)  ಕಹ್ ಗಯೇ ಕೆ ಅಬ್ ಮರ್ ತೇ ಹೈಂ
ಖುಶ್ ರಹನಾ ದೇಶ್ ಕೆ ಪ್ಯಾರೋ(2) ಅಬ್ ಹಮ್ ತೊ ಸಫರ್ ಕರತೇ ಹೈಂ(2)
ಕ್ಯಾ ಲೋಗ್ ಥೆ ವೊ ದೀವಾನೆ ಕ್ಯಾ ಲೋಗ್ ಥೆ ವೊ ಅಭಿಮಾನೀ
ಜೋ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೋ ಕುರಬಾನೀ

ಜೈ ಹಿಂದ್ ಜೈ ಹಿಂದ್ ಕೀ ಸೇನಾ(2)
ಜೈ ಹಿಂದ್  ಜೈ ಹಿಂದ್  ಜೈ ಹಿಂದ್

ಓ ಎನ್ನ ದೇಶ ಬಾಂಧವರೆ ಎಂಬ ಇದರ ಕನ್ನಡ ಅವತರಣಿಕೆಯೂ ಒಂದಿದೆ. ಮೊತ್ತ ಮೊದಲು ಇದು ಕೇಳಿ ಬಂದದ್ದು ಆಕಾಶವಾಣಿ ಮುಂಬಯಿಯ ಸಾಪ್ತಾಹಿಕ ಕನ್ನಡ ಕಾರ್ಯಕ್ರಮದಲ್ಲಿ. ಯಾರ ಧ್ವನಿಯಲ್ಲೆಂದು ನೆನಪಿಲ್ಲ. ಈಗ ಅದನ್ನು ಅನೇಕರು ಹಾಡಿದ್ದಾರೆ. ಬಿ.ಆರ್.ಛಾಯಾ ಹಾಡಿದ್ದನ್ನು ಇಲ್ಲಿ ಕೇಳಬಹುದು.





Friday 5 August 2016

ಧಾಟಿ ಒಂದು ಹಾಡು ಎರಡು



     50ರ ದಶಕದ ಆರಂಭದಿಂದಲೂ ಆಗೊಮ್ಮೆ ಈಗೊಮ್ಮೆ ಕನ್ನಡ ಚಿತ್ರಗಳಲ್ಲಿ ಇತರ ಭಾಷೆಗಳ ಅದರಲ್ಲೂ ಹಿಂದಿಯ ಜನಪ್ರಿಯ ಗೀತೆಗಳ ಧಾಟಿಯ ಚಿತ್ರಗೀತೆಗಳು ಇರುತ್ತಿದ್ದವು. 1951ರಲ್ಲಿ ತೆರೆಕಂಡ ಕನ್ನಡದ ಮೊದಲ ಸೂಪರ್ ಹಿಟ್  ಚಿತ್ರ ಮಹಾತ್ಮಾ ಪಿಕ್ಚರ್ಸ್ ಅವರ ಜಗನ್ಮೋಹಿನಿಯಿಂದ ಈ ಪರಂಪರೆ ಆರಂಭವಾಯಿತು ಅನ್ನಿಸುತ್ತದೆ.  ಮಹಲ್ ಚಿತ್ರದ ಆಯೇಗಾ ಆಯೇಗಾ ಆನೆವಾಲಾ ಧಾಟಿಯಲ್ಲಿ ಎಂದೋ ಎಂದೊ ನಿನ್ನ ದರುಶನಬರಸಾತ್ ಚಿತ್ರದ ಮುಝೆ ಕಿಸೀಸೆ ಪ್ಯಾರ್ ಹೋಗಯಾ ಧಾಟಿಯಲ್ಲಿ ಓ ವಸಂತ ಮಾಸ ಓಡಿ ಬಂದಿದೆ ಹಾಗೂ ಪತಂಗಾ ಚಿತ್ರದ ಓ ದಿಲ್ ವಾಲೋ ದಿಲ್ ಕಾ ಲಗಾನಾ  ಧಾಟಿಯಲ್ಲಿ ಕರೆಯುವೆ ನಿನ್ನ ಕಣ್ಮಣಿ ನಾನೆ ಇತ್ಯಾದಿ ಹಾಡುಗಳು ಈ ಚಿತ್ರದಲ್ಲಿದ್ದವು.   ಅದೇ ಸಂಸ್ಥೆಯ ವರದಕ್ಷಿಣೆ ಚಿತ್ರದಲ್ಲೂ ಪ್ಯಾಸಾ ಸಿನಿಮಾದ ಸರ್ ಜೊ ತೇರಾ ಚಕರಾಯೆ ಧಾಟಿಯಲ್ಲಿ ಹಲ್ಲಿಗೆ ಸಂಜೀವನವು ....... ಸುಂದರ್ ಟೂತ್ ಪೌಡರ್ ಹಾಗೂ ಪೇಯಿಂಗ ಗೆಸ್ಟ್ ಚಿತ್ರದ ಛೋಡ್ ದೋ ಆಂಚಲ್ ಜಮಾನಾ ಕ್ಯಾ ಕಹೇಗಾ ಧಾಟಿಯಲ್ಲಿ  ಸಾಕು ಸಾಕು ಈ ವಿನೋದ ಎಂಬ ಹಾಡುಗಳಿದ್ದವು. ಆಗಿನ ಸಂಗೀತ ನಿರ್ದೇಶಕರಿಗೆ ಸ್ವಂತಂತ್ರ ಧಾಟಿಯ ಹಾಡುಗಳನ್ನು ರಚಿಸಲು ಬರುತ್ತಿರಲಿಲ್ಲವೆಂದಲ್ಲ. ನಿರ್ಮಾಪಕರ ಒತ್ತಾಯದ ಮೇರೆಗೆ ಈ ರೀತಿ ಮಾಡುತ್ತಿದ್ದರೋ ಏನೋ.  ಬೇರೆ ಭಾಷೆಗಳಿಂದ ಡಬ್ ಆದ ಚಿತ್ರಗಳಲ್ಲಿ ಸಹಜವಾಗಿಯೇ ಮೂಲ ಭಾಷೆಯ ಧಾಟಿಯ ಹಾಡುಗಳೇ ಇರುತ್ತಿದ್ದವು. ದಕ್ಷಿಣ ಭಾರತೀಯ ಭಾಷೆಗಳಿಂದ ಅದರಲ್ಲೂ ತೆಲುಗಿನಿಂದ ಡಬ್ ಆದ ಚಿತ್ರಗಳಲ್ಲಿ ಮೂಲ ಗಾಯಕರೇ ಕನ್ನಡದಲ್ಲೂ ಹಾಡುತ್ತಿದ್ದುದರಿಂದ ಅಂತಹ ವ್ಯತ್ಯಾಸ ಗೊತ್ತಾಗುತ್ತಿರಲಿಲ್ಲ.  ಆದರೆ ಹಿಂದಿಯಿಂದ ಡಬ್ ಆಗುವಾಗ ಅಥವಾ ಹಿಂದಿ ಧಾಟಿಗಳನ್ನು ಬಳಸಿಕೊಂಡಾಗ ಹಾಡುಗಳನ್ನು ಬೇರೆಯವರು ಹಾಡುವುದು ಅನಿವಾರ್ಯವಾಗಿ ಕೇಳುಗರಿಗೆ ಇಬ್ಬರು ಗಾಯಕರನ್ನು ಹೋಲಿಸಿ ನೋಡುವ ವಿಶಿಷ್ಟ ಅನುಭವ ದೊರೆಯುತ್ತಿತ್ತು.  ಅಂತಹ ಹೋಲಿಕೆಗಾಗಿ 50-60ರ ದಶಕಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಗಾಯಕರು ಹಾಡಿದ ಒಂದೇ ಧಾಟಿಯ  10 ಜೊತೆ ಹಾಡುಗಳು ಇಲ್ಲಿವೆ.  ಇವುಗಳಲ್ಲಿ ಕೆಲವನ್ನು ಅನೇಕರು ಇದುವರೆಗೆ ಕೇಳಿರಲಾರರು.

1. ಈ ಮೂಢತನವಿದೇಕೆ - ಯೆ ಜಿಂದಗಿ ಕೆ ಮೇಲೆ





ಮೇಲಾ ಚಿತ್ರಕ್ಕಾಗಿ ನೌಷಾದ್ ನಿರ್ದೇಶನದಲ್ಲಿ ರಫಿ ಹಾಡಿದ್ದ ಹಾಡಿನ ಟ್ಯೂನ್ ಹೊಂದಿದ್ದ ಹಾಡನ್ನು ಆರ್ ನಾಗೇಂದ್ರ ರಾಯಜಾತಕ ಫಲ ಚಿತ್ರಕ್ಕಾಗಿ  ಪಿ.ಬಿ.ಶ್ರೀನಿವಾಸ್ ಹಾಡಿದ್ದರು. ಈಗಾಗಲೇ ಹಿಂದಿಯ ಮಿ|| ಸಂಪತ್ ಚಿತ್ರದ ಮೂಲಕ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದ ಪಿ.ಬಿ.ಎಸ್ ಅವರಿಗೆ ಕನ್ನಡದ ಹೆಬ್ಬಾಗಿಲು ತೆರೆದ ಚಿತ್ರ ಇದು.  ಇದೇ ಚಿತ್ರ ತೆಲುಗಿನಲ್ಲಿ ಜಾತಕ ಫಲಂ ಹಾಗೂ ತಮಿಳಲ್ಲಿ ಜಾತಕಂ ಎಂಬ ಹೆಸರುಗಳಲ್ಲೂ ತಯಾರಾದುದರಿಂದ ಪಿ.ಬಿ.ಎಸ್ ಅವರಿಗೆ ಆರಂಭದಲ್ಲೇ ತ್ರಿಭಾಷಾ ಗಾಯಕನಾಗುವ ಅವಕಾಶ ಒದಗಿತ್ತು. ತಲತ್, ಮನ್ನಾಡೇ, ರಫಿ ಹಾಡುಗಾರಿಕೆಯ ಪರಮ ಭಕ್ತರಾಗಿದ್ದ ತಮಗೆ ಆರಂಭದಲ್ಲೇ ರಫಿಯ ಹಾಡು ಸಿಕ್ಕಿದ್ದು  ಅತೀವ ಖುಶಿ ನೀಡಿತ್ತು ಎಂದು ಪಿ.ಬಿ.ಶ್ರೀನಿವಾಸ್ ಹೇಳಿದ್ದುಂಟು.  ಜಾತಕ ಫಲ ಚಿತ್ರದ  ಸಂಗೀತ ನಿರ್ದೇಶಕರು ಆರ್. ಗೋವರ್ಧನ್.

2. ವಯ್ಯಾರಿ ವಯ್ಯಾರಿ -  ನ ಬೋಲೆ ನ ಬೋಲೆ 




ಹಿಂದಿಯ ಆಜಾದ್ ಚಿತ್ರಕ್ಕಾಗಿ ಸಿ.ರಾಮಚಂದ್ರ ನಂಗೀತ ನಿರ್ದೇಶನದಲ್ಲಿ ಲತಾ ಮಂಗೇಷ್ಕರ್ ಹಾಡಿದ್ದ ಈ ಹಾಡನ್ನು ಕನ್ನಡದಲ್ಲಿ ಜಿಕ್ಕಿ ಹಾಡಿದ್ದರು.  ವಿಶೇಷವೆಂದರೆ ಇದು ಕನ್ನಡಕ್ಕೆ ಡಬ್ ಆದ ಚಿತ್ರ ಅಲ್ಲ.  ಹಿಂದಿಯಲ್ಲಿ ಆಜಾದ್,  ತಮಿಳಿನಲ್ಲಿ ಮಲೈ ಕಳ್ಳನ್ ಹಾಗೂ ಕನ್ನಡದಲ್ಲಿ ಬೆಟ್ಟದ ಕಳ್ಳ  ಬೇರೆ ಬೇರೆ ತಾರಾಗಣದೊಂದಿಗೆ ಏಕಕಾಲಕ್ಕೆ ತಯಾರಾದ ಚಿತ್ರಗಳು.  ಕನ್ನಡದಲ್ಲಿ ಕಲ್ಯಾಣಕುಮಾರ್ ಮತ್ತು ಮೈನಾವತಿ ಪ್ರಧಾನ ಭೂಮಿಕೆಯಲ್ಲಿದ್ದರು.  ಹಿಂದಿಯಲ್ಲಿ ಲತಾ ಮತ್ತು  ಚಿತಲ್ಕರ್  ಧ್ವನಿಯಲ್ಲಿದ್ದ ಕಿತನಾ ಹಸಿಂ ಹೈ ಮೌಸಮ್ ಧಾಟಿಯ ನಗೆಯೆಂಬ ಅಂದಗಾತಿ ಹಾಡನ್ನು ಪಿ.ಬಿ.ಎಸ್ - ಜಿಕ್ಕಿ ಹಾಡಿದ್ದು ಬಿಟ್ಟರೆ  ಉಳಿದೆಲ್ಲ  ಹಾಡುಗಳು ಸ್ವತಂತ್ರ ಧಾಟಿಯಲ್ಲಿದ್ದವು.  ಸುಬ್ಬಯ್ಯ ನಾಯ್ಡು ಅವರ ಸಂಗೀತ ನಿರ್ದೇಶನವಿದ್ದ  ಈ ಚಿತ್ರದ ಹಾಡುಗಳು ಕೇಳಲು ಸಿಗುವುದು ಬಲು ಅಪರೂಪ.  ರೇಡಿಯೊ ಸಿಲೋನಿನಲ್ಲಿ ಕನ್ನಡ ಹಾಡುಗಳು ಬರುತ್ತಿದ್ದ ಕಾಲದಲ್ಲಿ ಬಹಳ ವರ್ಷ ಹಿಂದೆ ಒಮ್ಮೆ ಈ ವಯ್ಯಾರಿ ಹಾಡನ್ನು ಕೇಳಿದ್ದೆ.

3. ಎನ್ನ ಸುಖ ಆಗಿ ಶೂಲ - ತೇರಿ ದುನಿಯಾ ಸೆ ದೂರ್





50ರ ದಶಕದ ಮಧ್ಯಭಾಗದಲ್ಲಿ ಪಿ.ಬಿ.ಶ್ರೀನಿವಾಸ್ ಅವರು ಸಕ್ರಿಯರಾಗುವವರೆಗೆ ಎ. ಎಂ. ರಾಜಾ ಕನ್ನಡದಲ್ಲೂ ಬಹು ಬೇಡಿಕೆಯ ಗಾಯಕರಾಗಿ ಮೆರೆದವರು.  ಹೋಮಿ ವಾಡಿಯಾ ಅವರ ಹಿಂದಿಯ  ಜಬಕ್ ವರ್ಣರಂಜಿತ ಚಿತ್ರ ಕನ್ನಡಕ್ಕೆ ಡಬ್ ಆದಾಗ ರಫಿ ಹಾಡಿದ್ದ ಹಾಡುಗಳನ್ನು ಕನ್ನಡದಲ್ಲಿ ಹಾಡುವ ಅವಕಾಶ ಅವರಿಗೆ ಸಿಕ್ಕಿತು.  ಹಿಂದಿಯಲ್ಲಿ ರಫಿ, ಲತಾ ಮಂಗೇಷ್ಕರ್ ಜೊತೆಯಾಗಿ ಹಾಡಿದ್ದ ಈ ಹಾಡನ್ನು ರಾಜಾ ಅವರು ಪಿ.ಸುಶೀಲ ಜೊತೆ ಹಾಡಿದರು. ಸಾಹಿತ್ಯ ಗೀತಪ್ರಿಯ ಮತ್ತು ಚಿತ್ರಗುಪ್ತ ಅವರ ಮೂಲ ಸಂಗೀತದ ಮರುಸೃಷ್ಟಿ  ವಿಜಯಭಾಸ್ಕರ್ ಅವರಿಂದ.  ಹಿಂದಿಯ ತುಟಿ ಚಲನೆಗೆ ಹೊಂದಿಕೆಯಾಗಬೇಕಾದ ಅನಿವಾರ್ಯತೆ ಇರುವುದರಿಂದ ಹಾಡಿನ ಸಾಹಿತ್ಯದಲ್ಲಿ ಕೊಂಚ ರಾಜಿ ಮಾಡಿಕೊಳ್ಳಬೇಕಾಗಿ ಬರುತ್ತಿತ್ತು.  ಇದೇ ಚಿತ್ರಕ್ಕಾಗಿ ಜಿಕ್ಕಿ ಹಾಡಿರುವ  ಆನಂದದ ಛಾಯೆ ಕಂಡೆ ಸಖಾ  ಹಿಂದಿಯಲ್ಲಿ ಲತಾ ಹಾಡಿದ್ದ ಜಾನೆ ಕೈಸಾ ಛಾನೆಲಗಾ ನಶಾ ಹಾಡಿನ ಕನ್ನಡ ರೂಪ.  ಈ ಎರಡೂ ಕನ್ನಡ ಹಾಡುಗಳನ್ನು ನಾನು ಹಿಂದಿಯ ವೀಡಿಯೊಗೆ ಅಳವಡಿಸಿದ್ದು ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಶ್ರೀಮಂತವಾಗಿ ವರ್ಣದಲ್ಲಿ ಚಿತ್ರಿತವಾದ ಈ ಹಾಡುಗಳು ನೋಡಲು ರಂಜನೀಯವಾಗಿವೆ.  ಕನ್ನಡದಲ್ಲಿ ಕಪ್ಪು ಬಿಳುಪು ಚಿತ್ರಗಳಷ್ಟೇ ಬರುತ್ತಿದ್ದ ಆ ಕಾಲದಲ್ಲಿ ಈ ಸಂಪೂರ್ಣ ವರ್ಣರಂಜಿತ ಚಿತ್ರಗಳು ತೆರೆಯ ಮೇಲೆ ಕನ್ನಡ ಮಾತನಾಡುವಾಗ ಪ್ರೇಕ್ಷಕರಿಗೆ ಸ್ವರ್ಗವೇ ಧರೆಗಿಳಿದು ಬಂದ ಅನುಭವವಾಗುತ್ತಿದ್ದಿರಬಹುದು.  1961ರಲ್ಲಿ ಹೋಮಿ ವಾಡಿಯಾ ಅವರ ವರ್ಣರಂಜಿತ ಸಂಪೂರ್ಣ ರಾಮಾಯಣ ಕನ್ನಡೀಕರಣಗೊಂಡು ಪ್ರದರ್ಶಿತವಾದಾಗ ಊರಲ್ಲೆಲ್ಲ ದೊಡ್ಡ ಸುದ್ದಿಯಾಗಿತ್ತು. ಅದನ್ನು ನೋಡಲೆಂದೇ  ನಮ್ಮ ಮನೆ ಮಂದಿಯೆಲ್ಲ ಮೊತ್ತ ಮೊದಲ ಬಾರಿ 70 ಕಿ.ಮೀ ದೂರದ ಮಂಗಳೂರಿಗೆ ಬಂದು ಹೋಗಿದ್ದರು. ಆಗ ನಾನು ಶಾಲೆಗೆ ಹೋಗುತ್ತಿದ್ದುದರಿಂದ ಈ ಅವಕಾಶದಿಂದ ವಂಚಿತನಾಗಿದ್ದೆ.  ಈ ಬಗ್ಗೆ ಅಸಮಾಧಾನವನ್ನೂ ವ್ಯಕ್ತ ಪಡಿಸಿದ್ದೆ.  ಇದರ ಪರಿಣಾಮವಾಗಿ ನಮ್ಮ ಹಿರಿಯಣ್ಣ  ಆ ಮೇಲೆ ಪ್ರತಿ ಸಲ ವಾರ್ಷಿಕ ಖರೀದಿಗಳಿಗಾಗಿ ಮಂಗಳೂರಿಗೆ ಬರುವಾಗ ನನ್ನನ್ನೂ ಕರಕೊಂಡು ಬಂದು ಒಂದೊಂದು ಸಿನಿಮಾ ತೋರಿಸುತ್ತಿದ್ದರು!  ಕನ್ನಡ ಸಂಪೂರ್ಣ ರಾಮಾಯಣದ ಒಂದು ಹಾಡು ಪಿ.ಸುಶೀಲ Top Tenನಲ್ಲಿ ಸಮ್ಮಿಳಿತವಾಗಿದೆ.

4. ಬಾಳುವೆಯ ದೇಗುಲದಿ -  ಠಂಡಿ  ಹವಾ ಕಾಲಿ ಘಟಾ





ಮಿಸ್ಟರ್ ಅಂಡ್ ಮಿಸೆಸ್ 55 ಚಿತ್ರದಲ್ಲಿ ಗೀತಾ ದತ್ತ್ ಹಾಡಿದ್ದ ಈ ಓ.ಪಿ. ನಯ್ಯರ್ ಹಾಡಿನ ಧಾಟಿಯನ್ನು ಸದಾರಮೆ ಚಿತ್ರದಲ್ಲಿ ಪಿ.ಸುಶೀಲ ಹಾಡಿಗೆ ಅಳವಡಿಸಲಾಗಿತ್ತು.  ಸದಾರಮೆಗೂ ಆ ಮಿಸ್ಟರ್ ಅಂಡ್ ಮಿಸೆಸ್ ಗೂ ಏನು ಸಂಬಂಧವೋ ದೇವರೇ ಬಲ್ಲ!  ಚಿನ್ನಾ ಕೇಳ್ ಬ್ಯಾಡ್ವೆ ನನ್ನ ಪುರಾಣ , ಬಾರೆ ಬಾರೆ ನನ್ನ ಹಿಂದೆ ಹಿಂದೆ ಮುಂತಾದ  ಹಿಟ್ ಹಾಡುಗಳಿದ್ದ ಆ ಚಿತ್ರದಲ್ಲಿ ಇದೊಂದೇ ಹಿಂದಿ ಧಾಟಿಯದ್ದು.

5.  ನಾ ನಿನ್ನ ಮೋಹಿಸಿ ಬಂದಿಹೆನು - ದಿಲ್ ತುಮ್ ಕೊ ದೇ ದಿಯಾ ಜಾನೆ ಜಿಗರ್





ಕೆಲವು ನಿರ್ಮಾಪಕರು ಹಲವು ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಿಸುವವರಾಗಿದ್ದು ಒಂದು ಭಾಷೆಯ ಯಾವುದೋ ಚಿತ್ರದ ಹಾಡಿನ ಧಾಟಿಯನ್ನು ತಮ್ಮದೇ ಇನ್ನೊಂದು  ಭಾಷೆಯ  ಚಿತ್ರದ ಹಾಡಿಗೆ ಬಳಸಿಕೊಳ್ಳುವುದಿದೆ.  ಇಲ್ಲಿ ಬಿ.ಎಸ್.ರಂಗಾ ಅವರು ಹಾಗೆಯೇ ಮಾಡಿದ್ದಾರೆ. ಅವರು ನಿರ್ಮಿಸಿದ ಶಮ್ಮಿ ಕಪೂರ್- ಬಿ.ಸರೋಜಾ ದೇವಿ ತಾರಾಗಣದ ಪ್ಯಾರ್ ಕಿಯಾ ತೊ ಡರನಾ ಕ್ಯಾ ಚಿತ್ರದ ರಫಿ-ಆಶಾ ಡ್ಯುಯೆಟ್ ಒಂದರ ಧಾಟಿಯನ್ನು ತಮ್ಮ ಪ್ರತಿಜ್ಞೆ ಚಿತ್ರದಲ್ಲಿ ನರಸಿಂಹರಾಜು-ಜಯಾ ಜೋಡಿಗೆ ಪೀಠಾಪುರಂ ಮತ್ತು ಜಮುನಾರಾಣಿ ಧ್ವನಿಯಲ್ಲಿ ಅಳವಡಿಸಿಕೊಂಡಿದ್ದಾರೆ.  ಚಿ. ಸದಾಶಿವಯ್ಯ ಅವರ ಸಾಹಿತ್ಯಕ್ಕೆ ಹಿಂದಿಯಲ್ಲಿ ರವಿ ನೀಡಿದ್ದ ಸಂಗೀತವನ್ನು ಕನ್ನಡಕ್ಕೆ ಎಸ್.ಹನುಮಂತರಾವ್  ಹೊಂದಿಸಿದ್ದಾರೆ.  ಅದೇ ಹಿಂದಿ ಚಿತ್ರದಲ್ಲಿ ರಫಿ ಹಾಡಿದ್ದ ಜಬ್ ತಕ್ ಹಮ್ ಹೈಂ ಹಾಡಿನ ಧಾಟಿಯಲ್ಲಿ ಎಲ್.ಆರ್ ಈಶ್ವರಿ ಅವರಿಂದ ತಂಗಾಳಿ ಅಲೆಯು ಕೋಗಿಲೆ ಉಲಿಯೂ ರೂಪದಲ್ಲಿ ಹಾಡಿಸುವ ಪ್ರಯೋಗವನ್ನೂ ರಂಗಾ ಅವರು ಮಾಡಿದ್ದು ಈ ಎರಡೂ ಹಾಡುಗಳು ಹಿಂದಿಗಿಂತ ಕನ್ನಡದಲ್ಲೇ ಹೆಚ್ಚು  ಜನಪ್ರಿಯವಾಗಿದ್ದವು.  ಇದರೊಂದಿಗೆ ಆ ಚಿತ್ರದ ಅತ್ಯಂತ ಜನಪ್ರಿಯ ಜಾನೆ ಬಹಾರ್ ಹುಸ್ನ್ ತೇರಾ ಧಾಟಿಯ ಹಾಡನ್ನು ಪಿ.ಬಿ.ಎಸ್ ಧ್ವನಿಯಲ್ಲಿ ಹಾಡಿಸುತ್ತಿದ್ದರೆ ಜನಪ್ರಿಯತೆಯ ಶಿಖರವನ್ನೇ ಏರುತ್ತಿತ್ತೋ ಏನೋ.

6.  ಅಮೃತಕ್ಕೂ ತಾ ರುಚಿ -  ಅಮೃತಾಹುನೀ ಗೋಡ





ಇದು ಮರಾಠಿ ಧಾಟಿಯನ್ನು ಕನ್ನಡ ಚಿತ್ರದ  ಹಾಡಿಗೆ ಉಪಯೋಗಿಸಿಕೊಂಡ ಉದಾಹರಣೆ. ಸಂತ ತುಕಾರಾಂ ಚಿತ್ರದ ಈ ಮರಾಠಿ ಧಾಟಿಯ ಹಾಡಿಗೆ ಚಿ.ಸದಾಶಿವಯ್ಯ ಅವರ ಮೂಲ ಹಾಡಿನ  ಭಾವಾನುವಾದ ಅನ್ನಬಹುದಾದ ಸಾಹಿತ್ಯವಿದೆ.  ಸಂಗೀತ ಸಂಯೋಜಿಸಿದವರು  ವಿಜಯ ಭಾಸ್ಕರ್. ಜಾನಕಿ ಅವರು  ಮರಾಠಿ ಹಾಡಿನ ಗಾಯಕಿ ಮಾಣಿಕ್ ವರ್ಮಾ ಅವರಿಗೆ ಸರಿ ಸಾಟಿಯಾಗಿಯೇ ಹಾಡಿದ್ದಾರೆ.    ಒಂದು ಸ್ವಾರಸ್ಯಕರ ಅಂಶ ಎಂದರೆ ಸಂತ ತುಕಾರಾಂ ಚಿತ್ರದ ಹಾಡಿಗೆ ಸ್ಪೂರ್ತಿಯಾದ ಈ ಮರಾಠಿ ಅಭಂಗ ಸಂತ ನಾಮದೇವ್ ಅವರದ್ದೇ ಹೊರತು ಸಂತ ತುಕಾರಾಮರದ್ದಲ್ಲ.  ಆದರೆ ಕನ್ನಡೀಕರಿಸುವಾಗ  ತುಕಾ ಪಾಡುತಿರಲಿ ಎಂಬ ಸಾಲು ಸೇರಿಸಿ ಇದನ್ನು ತುಕಾರಾಮೀಕರಿಸಲಾಗಿದೆ!

7.  ರಾಧಿಕೆ ನಿನ್ನ ಸರಸ -  ರಾಧಿಕೆ ತೂನೆ ಬಂಸುರಿ





ಪಿ.ಬಿ.ಎಸ್ ಅವರಿಗೆ ಆರಂಭದ ದಿನಗಳಲ್ಲಿ ರಫಿಯೆ ಜಿಂದಗಿ ಕೆ ಮೇಲೆ ಸಿಕ್ಕಿದ ಹಾಗೆ ರಫಿಯನ್ನು ಆರಾಧ್ಯ ದೈವವೆಂದೇ ಅಂದು ಕೊಂಡಿರುವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ತನ್ನ ಸಂಘರ್ಷದ ದಿನಗಳಲ್ಲಿ ಸಿಕ್ಕಿದ ಹಾಡಿದು.  ಪ್ರಸಾದ್ ಪ್ರೊಡಕ್ಷನಿನವರು ಬೇಟಿ ಬೇಟೆ ಚಿತ್ರವನ್ನು ಕನ್ನಡದಲ್ಲಿ ತಂದೆ ಮಕ್ಕಳು ಹೆಸರಲ್ಲಿ ಮರು ನಿರ್ಮಿಸಿದಾಗ ಎಲ್ಲ ಹಾಡುಗಳನ್ನು ಹಾಡುವ ಸುಯೋಗ ಆಗಿನ್ನೂ ಕನ್ನಡ ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿದ್ದ ಎಸ್.ಪಿ.ಬಿ ಅವರಿಗೆ ಸಿಕ್ಕಿತು.  ಚಿತ್ರದ ಈ ಹಾಡಿಗೆ ಮಾತ್ರ ಹಿಂದಿ ಧಾಟಿಯನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿತ್ತು.  ಸಂಜೆಗೆಂಪು ಮೂಡಿತು ಹಾಡಲ್ಲಿ  ಆಜ್ ಕಲ್ ಮೆ ಢಲ್ ಗಯಾದ ಛಾಯೆ ಮಾತ್ರ ಇತ್ತು.  ಉಳಿದ ಹಾಡುಗಳಲ್ಲಿ ಜಿ.ಕೆ.ವೆಂಕಟೇಶ್ ಅವರ ಸ್ವಂತ ಧಾಟಿಗಳಿದ್ದವು.  ಇತರ ಭಾಷೆಗಳ ಧಾಟಿಗಳನ್ನು ಎಂದೂ ಬಳಸದ ಜಿ.ಕೆ.ವೆಂಕಟೇಶ್  ಇದಕ್ಕಾಗಿ ಟೀಕೆಯನ್ನೂ ಎದುರಿಸಬೇಕಾಯಿತು.  ಆದರೂ ಅವರು ಮುಂದೆ ಕೆಲವು ಚಿತ್ರಗಳಲ್ಲಿ ಹಿಂದಿ ಹಾಡುಗಳ ಛಾಯೆ ಬಳಸಿಕೊಂಡದ್ದಿದೆ.  ಉದಾಹರಣೆಗೆ ಕಸ್ತೂರಿ ನಿವಾಸದ   ನೀ ಬಂದು ನಿಂತಾಗದಲ್ಲಿ ಯೇ ದಿಲ್ ದೀವಾನಾ ಹೈಪ್ರತಿಧ್ವನಿಸರಿ ನಾ ಹೋಗಿ ಬರುವೆಯಲ್ಲಿ ಅಚ್ಛಾ ತೊ ಹಮ್ ಚಲ್ತೇ ಹೈಂ ಇತ್ಯಾದಿ.  ಭಕ್ತ ಜ್ಞಾನದೇವ ಚಿತ್ರದ  ನಿನ್ನೊಳಗಿರುವ  ಹಾಗೂ ಒಂದು ಎರಡು ಹಾಡುಗಳಲ್ಲಿ ಹಿಂದಿ ಸಂತ ಜ್ಞಾನೇಶ್ವರಜ್ಯೋತ್ ಸೆ ಜ್ಯೋತ್ ಹಾಗೂ ಏಕ್ ದೋ ತೀನ್ ಚಾರ್ ಹಾಡುಗಳ ಅಂಶ ಇತ್ತು.

8.  ದೂರದಿಂದ ಬಂದಂಥ  - ನಾಮ್ ಮೇರಾ ನಿಮ್ಮೊ





ಎಲ್.ಆರ್.ಈಶ್ವರಿ ಅವರ iconic ಹಾಡಾಗಿರುವ ಇದರ ಟ್ಯೂನ್  ಸಲಿಲ್ ಚೌಧುರಿ ಅವರಿಂದ ಸಂಶಯ ಫಲ ಚಿತ್ರಕ್ಕಾಗಿಯೇ ಸಂಯೋಜಿಸಲ್ಪಟ್ಟದ್ದು ಎಂದೇ ಅನೇಕರು ನಂಬಿದ್ದಾರೆ.  ಈ ಬಗ್ಗೆ ಬಣ್ಣ ಬಣ್ಣದ ಕಥೆಗಳೂ ಪತ್ರಿಕೆಗಳಲ್ಲಿ  ಬಂದಿವೆ.  ಯಾವುದೋ ಪಾರ್ಟಿಯಲ್ಲಿ  ಇರುವಾಗ ಸಲಿಲ್ ಚೌಧರಿ ಅವರಿಗೆ ಈ ಟ್ಯೂನ್ ಹೊಳೆಯಿತಂತೆ,  ಅಲ್ಲೇ ಇದ್ದ ಕು.ರ.ಸೀತಾರಾಮ ಶಾಸ್ತ್ರಿ ಅವರು ಅರ್ಧ ಗಂಟೆಯೊಳಗೆ ಅದಕ್ಕೆ ಸಾಹಿತ್ಯ ರಚಿಸಿ ಹಾಡು ತಯಾರಾಯಿತಂತೆ ಇತ್ಯಾದಿ.  ವಾಸ್ತವವಾಗಿ ಸಂಶಯ ಫಲ ಚಿತ್ರಕ್ಕಿಂತ ಹತ್ತು ವರ್ಷ ಮೊದಲೇ ಬಂದಿದ್ದ ಸಪನ್ ಸುಹಾನೇ ಹಿಂದಿ ಚಿತ್ರದಲ್ಲಿ ಸಲಿಲ್ ಚೌಧುರಿ ಅವರು ಈ ಟ್ಯೂನ್ ಬಳಸಿದ್ದರು. ಬಂಗಾಲಿ, ಮಲಯಾಳಂ, ಹಿಂದಿ ಎಲ್ಲ  ಭಾಷೆಗಳಲ್ಲೂ ಸಕ್ರಿಯರಾಗಿದ್ದ ಸಲಿಲ್ ಚೌಧರಿ ತಾವು ಒಂದು ಭಾಷೆಗೆಂದು ಸಂಯೋಜಿಸಿದ ಧಾಟಿಯನ್ನು ಇತರ ಭಾಷೆಗಳಲ್ಲೂ ಆಗಾಗ ಬಳಸುತ್ತಿದ್ದರು.  ಒಂದು ಹಾಡಿನ ಸಾಲನ್ನು ಅದೇ ಚಿತ್ರದ ಇನ್ನೊಂದು ಹಾಡಿನ ಮಧ್ಯಂತರ ಸಂಗೀತವಾಗಿ ಬಳಸುವ ಹವ್ಯಾಸವೂ ಅವರಿಗಿತ್ತು.  ಮಧುಮತಿ ಚಿತ್ರದ ಘಡಿ ಘಡಿ ಮೊರಾ ದಿಲ್ ಧಡಕೆ ಮತ್ತು ಆಜಾರೇ ಪರದೇಸಿ ಹಾಡುಗಳು ಇದಕ್ಕೊಂದು ಉದಾಹರಣೆ.


9.  ಇದೇ ಹೊಸ ಹಾಡು -  ಭಲೇ ಮಂಚಿ ರೋಜು





ತೆಲುಗಿನ ಜರುಗಿನ ಕಥಾ ಕನ್ನಡದ ನನ್ನ ತಮ್ಮ ಆಗಿ ಬಂದಾಗ ಅಲ್ಲಿ ಸಂಗೀತ ನಿರ್ದೇಶಕ ಘಂಟಸಾಲ ಸ್ವತಃ ಹಾಡಿದ್ದ ಹಾಡು ಕನ್ನಡದಲ್ಲಿ ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ ಕೇಳಿ ಬಂತು.  ಈ ಮೊದಲು ರಾಜ್ ಕುಮಾರ್ ಅವರಿಗೆ ಎಷ್ಟೋ ಚಿತ್ರಗಳಲ್ಲಿ ಧ್ವನಿಯಾಗಿದ್ದ ಘಂಟಸಾಲ ತನ್ನದೇ ಸಂಗೀತ ದಿಗ್ದರ್ಶನವಿದ್ದ ಈ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಅವರನ್ನು ಬಳಸಿದ್ದು ವಿಶೇಷವೇ.   ಕೊನೆ ಕೊನೆಗೆ ಅವರ ಆರೋಗ್ಯ ಚೆನ್ನಾಗಿ ಇರುತ್ತಿರಲಿಲ್ಲ ಎಂದು ಕೇಳಿದ್ದೇನೆ.  ಈ ಕಾರಣಕ್ಕಾಗಿಯೇ ಅವರು ಸ್ವತಃ ಹಾಡದಿರಲು ನಿರ್ಧರಿಸಿದರೋ ಏನೋ.  ಅಂತೂ ಪಿ.ಬಿ.ಎಸ್ ಧ್ವನಿಯಲ್ಲಿ ಈ ಹಾಡು ಕೇಳುವ ಸುಯೋಗ ನಮಗೆ ದೊರಕಿತು.  ಹಾಡಿನ ರೆಕಾರ್ಡಿಂಗ್ ಸಮಯದಲ್ಲಿ ಪಲ್ಲವಿ ಭಾಗದಲ್ಲಿರುವ ಎರಡು ಆಕರ್ಷಕ ಆಲಾಪಗಳು ತನ್ನ ಮನಸ್ಸಿನಲ್ಲಿ ಇದ್ದ ಹಾಗೆ ಬರುವ ವರೆಗೂ ಬಿಡದೇ ಆಲಾಪ ಸರಿ ಬರಬೇಕು ತಮ್ಮಾ ಎಂದು ಅನ್ನುತ್ತಿದ್ದರೆಂದು ಒಂದೆಡೆ ಪಿ.ಬಿ.ಎಸ್. ಹೇಳಿದ್ದರು.  ಪಿ.ಬಿ.ಶ್ರೀನಿವಾಸ್  ಹಾಡನ್ನು  ಘಂಟಸಾಲ ಧ್ವನಿಯಲ್ಲಿ ಕೇಳುವ  ಅವಕಾಶವೂ  ಅಮರ ಶಿಲ್ಪಿ ಜಕ್ಕಣ್ಣ ಚಿತ್ರದ ಮೂಲಕ ದೊರಕಿತ್ತು.  ಅಲ್ಲಿ ಕನ್ನಡದಲ್ಲಿ ಪಿ.ಬಿ.ಎಸ್ ಹಾಡಿದ್ದ ನಿಲ್ಲು ನೀ ನಿಲ್ಲು ನೀ ಹಾಡನ್ನು ತೆಲುಗು ಅವತರಣಿಕೆಯಲ್ಲಿ ಘಂಟಸಾಲ ಹಾಡಿದ್ದರು.

10.  ತುಂಬಿತು ಮನವ -  ತುಮ್ ಮೇರೆ ಮನ್ ಮೆ





ಇದು ವರೆಗೆ ನಾವು ನೋಡಿದ್ದು ಬೇರೆ ಭಾಷೆ ಹಾಡುಗಳ ಧಾಟಿಯ ಕನ್ನಡ ಹಾಡುಗಳನ್ನು.  ಆದರೆ ಇದು ಕನ್ನಡ ಧಾಟಿಯ ಹಿಂದಿ ಹಾಡು.  ಅದೂ ಅಂಥಿಂಥ ಹಾಡಲ್ಲ.  ರಾಜಕುಮಾರ್ ಅವರು ಎಸ್.ಜಾನಕಿ ಅವರೊಂದಿಗೆ ಮೊತ್ತ ಮೊದಲ ಬಾರಿ ಸ್ವತಃ ಹಾಡಿ ಧ್ವನಿಮುದ್ರಿಕೆ ಬಿಡುಗಡೆಯಾದ ಮಹಿಷಾಸುರ ಮರ್ದಿನಿ ಚಿತ್ರದ ಕ್ಲಿಷ್ಟವಾದ ಆಲಾಪ್, ಮುರ್ಕಿಗಳಿದ್ದ ಹಾಡಿನ ಹಿಂದಿ ರೂಪ ಇದು. ಆ ಚಿತ್ರ ದುರ್ಗಾ ಮಾತಾ ಎಂಬ ಹೆಸರಲ್ಲಿ ಹಿಂದಿಗೆ ಡಬ್ ಆದಾಗ ಕನ್ನಡದಷ್ಟೇ ಸೊಗಸಾಗಿ ಈ ಹಾಡನ್ನುಹಾಡಿದವರು ಮನ್ನಾಡೇ ಮತ್ತು ಗೀತಾ ದತ್.  ಹಾಗೆ ನೋಡಿದರೆ ರಾಜಕುಮಾರ್ ಇದಕ್ಕೆ ಮೊದಲೇ ಓಹಿಲೇಶ್ವರ ಚಿತ್ರದಲ್ಲಿ ಶರಣುಶಂಭೋ ಎಂಬ ಪೂರ್ಣ ಪ್ರಮಾಣದ ಹಾಡನ್ನು ಹಾಡಿದ್ದರು.  ಆದರೆ ಅದರ ಧ್ವನಿಮುದ್ರಿಕೆ ಬಿಡುಗಡೆ ಆಗಿರಲಿಲ್ಲ ಅಷ್ಟೇ.  ಅದಕ್ಕೂ ಮುಂಚೆ ಚಿತ್ರವೊಂದರಲ್ಲಿ ನರಸಿಂಹರಾಜು ಅವರಿಗಾಗಿ ರಾಜಕುಮಾರ್ ಹಾಡಿದ್ದರೆಂದು ಕೇಳಿದ್ದೇನೆ.  ಆದರೂ ಎಮ್ಮೆ ಹಾಡೇ ಅವರು ಮೊತ್ತ ಮೊದಲು ಹಾಡಿದ್ದು ಎಂದು ನಂಬಿದವರು ಅನೇಕರಿದ್ದಾರೆ.

     70ರ ದಶಕದ ನಂತರವಂತೂ  ವಿವಿಧ ಭಾಷಾ ಹಾಡುಗಳ ಪರಸ್ಪರ ಕೊಡುಕೊಳ್ಳುವಿಕೆ ಹೆಚ್ಚಾಗಿಯೇ ನಡೆದಿದ್ದು  ಈ ಪರಂಪರೆ ಈಗಲೂ ಮುಂದುವರೆದಿದೆ.