Saturday, 8 February 2025

ಭೀಷ್ಮ ನಿರ್ಯಾಣ ಮತ್ತು ಉತ್ತರಾಯಣ

 

ಅರ್ಜುನ ಪ್ರಯೋಗಿಸಿದ ಬಾಣಗಳಿಂದ ಜರ್ಜರಿತರಾದ ಭೀಷ್ಮಾಚಾರ್ಯರು ಉತ್ತರಾಯಣದ ನಿರೀಕ್ಷೆಯಲ್ಲಿ ಶರಶಯ್ಯೆಯ ಮೇಲೆ ಪವಡಿಸಿದ್ದರು ಎಂದು ಕಥೆಗಳಲ್ಲಿ ಓದಿ ಗೊತ್ತಿತ್ತು. ಮಾಘ ಶುಕ್ಲ ಅಷ್ಟಮಿ ತಿಥಿಯು ಭೀಷ್ಮಾಷ್ಟಮಿ ಎಂದು ಕರೆಯಲ್ಪಡುತ್ತದೆ, ಆ ದಿನವೇ ಅವರು ದೇಹತ್ಯಾಗ ಮಾಡಿದ್ದು ಎಂಬ ವಿಚಾರದತ್ತ ನಾನು ಗಮನ ಹರಿಸಿರಲಿಲ್ಲ. ಬಲ್ಲವರಲ್ಲಿ ಈ ಬಗ್ಗೆ ವಿಚಾರಿಸಿದಾಗ ಅನುಶಾಸನ ಪರ್ವದಲ್ಲಿ ಹೀಗೊಂದು ಶ್ಲೋಕ ಇರುವುದು ತಿಳಿಯಿತು..
ದಿಷ್ಟ್ಯಾ ಪ್ರಾಪ್ತೋsಸಿ ಕೌಂತೇಯ ಸಹಾಮಾತ್ಯೋ ಯುಧಿಷ್ಠಿರ l
ಪರಿವೃತ್ತೋ ಹಿ ಭಗವಾನ್ ಸಹಸ್ರಾಂಶುರ್ದಿವಾಕರ:ll
ಅಷ್ಟಪಂಚಾಶತಂ ರಾತ್ರ್ಯ: ಶಯಾನಸ್ಯಾಧ್ಯ ಮೇ ಗತಾ:l
ಶರೇಷು ನಿಶಿತಾಗ್ರೇಷು ಯಥಾ ವರ್ಷ ಶತಂ ತಥಾ ll
ಮಾಘೋsಯಂ ಸಮನುಪ್ರಾಪ್ತೋ ಮಾಸ: ಸೌಮ್ಯೋ(ಪುಣ್ಯೇ) ಯುಧಿಷ್ಠಿರ: l
ತ್ರಿಭಾಗ ಶೇಷ ಪಕ್ಷೋsಯಂ ಶುಕ್ಲೋ ಭವಿತು ಮರ್ಹತಿ ll
"ನಾನು ಶರಶಯ್ಯೆಯಲ್ಲಿ ಮಲಗಿ ಐವತ್ತೆಂಟು ದಿವಸಗಳಾಯಿತು. ಈಗ ಸೂರ್ಯನು ಉತ್ತರಕ್ಕೆ ತಿರುಗಲು ಆರಂಭಿಸಿದ್ದಾನೆ. (ಉತ್ತರಾಯಣ ಆರಂಭವಾಗಿದೆ.) ಮಾಘ ಮಾಸದ ನಾಲ್ಕು ಭಾಗಗಳಲ್ಲಿ ಮೂರು ಭಾಗ ಉಳಿದಿದೆ. (ಇದು ಮಾಘಶುಕ್ಲದ ಅಷ್ಟಮಿಯ ತಿಥಿಯಾಗಿದೆ.) ನನ್ನ ಸಂಕಲ್ಪದ ಪ್ರಕಾರ ಈಗ ನಾನು ದೇಹತ್ಯಾಗ ಮಾಡುತ್ತೇನೆ." ಎಂದು ಇದರ ಭಾವಾರ್ಥವಂತೆ.

ಇದನ್ನು ನೋಡಿದಾಗ ಉತ್ತರಾಯಣ ಆರಂಭವಾಗಿ ಎಷ್ಟೊ ಸಮಯದ ನಂತರ ಬರುವ ಮಾಘ ಶುಕ್ಲ ಅಷ್ಟಮಿ ತನಕ ಭೀಷ್ಮಾಚಾರ್ಯರು ಏಕೆ ಶರಶಯ್ಯೆಯಲ್ಲೇ ಇದ್ದರು ಎಂಬ ಪ್ರಶ್ನೆ ನನ್ನಲ್ಲಿ ಉದ್ಭವಿಸಿತು. ಒಂದು ಕಾಲಕ್ಕೆ ಉತ್ತರಾಯಣ ಆರಂಭದಂದೇ ಇರುತ್ತಿದ್ದ ಮಕರ ಸಂಕ್ರಾಂತಿ ಕ್ರಮೇಣ ಮುಂದೆ ಜರಗುತ್ತಾ ಬಂದುದು ನನಗೆ ಗೊತ್ತಿತ್ತು. ಈ ಬಗ್ಗೆ ಮತ್ತಷ್ಟು ಯೋಚಿಸಿದಾಗ ಚಾಂದ್ರ ಮಾಸಗಳೊಂದಿಗೆ ಸೌರಮಾಸಗಳು ತಳಕು ಹಾಕಿಕೊಂಡಿರುವ ಚಾಂದ್ರಸೌರ ಸಂಯುಕ್ತ ಪದ್ಧತಿಯನ್ನು ನಾವು ಅನುಸರಿಸುತ್ತಿರುವ ವಿಚಾರ ಹೊಳೆಯಿತು.

ಪ್ರತೀ ಚಾಂದ್ರ ಮಾಸದಲ್ಲೂ ಒಂದು ಸಂಕ್ರಾಂತಿ ಇರಬೇಕು. ಅಷ್ಟೇ ಅಲ್ಲ, ಚೈತ್ರದಲ್ಲಿ ಮೇಷ ಸಂಕ್ರಾಂತಿ, ವೈಶಾಖದಲ್ಲಿ ವೃಷಭ ಸಂಕ್ರಾಂತಿ, ಈ ರೀತಿ ಮುಂದುವರಿಯುತ್ತಾ ಫಾಲ್ಗುಣದಲ್ಲಿ ಮೀನ ಸಂಕ್ರಾಂತಿಯೇ ಇರಬೇಕು ಎಂಬ ನಿಯಮವೂ ಪಾಲಿಸಲ್ಪಡುತ್ತಿದೆ. ಈ ತಾಳ ಮೇಳ ತಪ್ಪಿದರೆ ಅಧಿಕ ಮಾಸ, ಕ್ಷಯ ಮಾಸಗಳ ಮೂಲಕ ಅದನ್ನು ಸರಿಪಡಿಸಲಾಗುತ್ತದೆ. ಹೀಗಾಗಿ ಭೂಮಿಯ ಓಲಾಡುವಿಕೆಯಿಂದಾಗಿ ಮಕರ ಸಂಕ್ರಾಂತಿ ಮತ್ತು ಇತರ ಸಂಕ್ರಾಂತಿಗಳು ಮುಂದಕ್ಕೆ ಜರಗುವಾಗ ಅವುಗಳೊಂದಿಗೆ ಸಂಬಂಧ ಕಲ್ಪಿಸಲಾಗಿರುವ ಚಾಂದ್ರ ಮಾಸಗಳೂ ಮುಂದೆ ಜರಗುತ್ತಿವೆ. ಇದೇ ಕಾರಣಕ್ಕೆ ಉತ್ತರಾಯಣ ಈಗ ಮಾರ್ಗಶಿರ / ಪುಷ್ಯ ಮಾಸಗಳಲ್ಲಿ ಆರಂಭವಾಗುವುದಾದರೂ ಸಾವಿರಾರು ವರ್ಷ ಹಿಂದೆ ಮಾಘ / ಫಾಲ್ಗುಣ ಮಾಸಗಳಲ್ಲೂ ಆರಂಭವಾಗುತ್ತಿತ್ತು. ಸಂಕ್ರಾಂತಿಗಳು ಋತುಮಾನಗಳಿಗೆ ಕಾರಣವಾದ ಸೂರ್ಯನ ಉತ್ತರ ದಕ್ಷಿಣ ಚಲನೆಯನ್ನು ಅನುಸರಿಸದೆ ಮೇಷಾದಿ ರಾಶಿಗಳಲ್ಲಿ ಅವನ ಚಲನೆಯನ್ನು ಹೊಂದಿಕೊಂಡಿರುವುದರಿಂದ ಅವುಗಳೊಂದಿಗೆ ತಳುಕು ಹಾಕಿಕೊಂಡಿರುವ ಚಾಂದ್ರ ಮಾಸಗಳೂ ಋತುಗಳ ಸಂಬಂಧ ಕಳೆದುಕೊಂಡಿವೆ ಈಗಿರುವಂತೆ ಮೇಷ ಸಂಕ್ರಾಂತಿಗಿಂತ ಮುಂಚಿನ ಅಮಾವಾಸ್ಯೆಯ ನಂತರ ಚೈತ್ರಮಾಸ ಆರಂಭವಾಗುವ ಬದಲು ವಸಂತ ವಿಷುವತ್ ದಿನವಾದ ಮಾರ್ಚ್ 21ಕ್ಕಿಂತ ಮುಂಚಿನ ಅಮಾವಾಸ್ಯೆಯ ನಂತರ ಚೈತ್ರ ಆರಂಭವಾಗುವಂತಾದರಷ್ಟೇ ಚೈತ್ರ ವೈಶಾಖಗಳು ನಿಜವಾದ ವಸಂತ ಋತು ಎನಿಸಿಯಾವು.




ಕ್ರಿಸ್ತ ಪೂರ್ವ 3000 ಇಸವಿಯಿಂದ ಮುಂದಿನ ಕೆಲವು ಶತಮಾನಗಳ ವರೆಗಿನ ವಿವಿಧ ಘಟ್ಟಗಳಲ್ಲಿ ಯಾವಾಗ ಮಕರ ಸಂಕ್ರಾಂತಿ ಇತ್ತು, ಉತ್ತರಾಯಣ ಯಾವ ತಿಂಗಳಲ್ಲಿ ಆರಂಭವಾಯಿತು, ಋತುಗಳಿಗೆ ಪ್ರಾತಿನಿಧಿಕವಾದ ಯುಗಾದಿಯೂ ಹೇಗೆ ಮುಂದಕ್ಕೆ ಸಾಗುತ್ತಿದೆ ಎಂಬ ವಿವರಗಳನ್ನು ಇಲ್ಲಿರುವ tableನಲ್ಲಿ ನೋಡಬಹುದು. ಅಂತರ್ಜಾಲದಲ್ಲಿರುವ ದೃಕ್ ಪಂಚಾಂಗದ ತಂತ್ರಾಂಶ ಬಳಸಿ ಕಾಲವನ್ನು ಹಿಂದಕ್ಕೆ project ಮಾಡಿ ಈ ಮಾಹಿತಿಯನ್ನು ಕ್ರೋಢೀಕರಿಸಲು ನನಗೆ ಸಾಧ್ಯವಾಯಿತು. ಕ್ರಿಸ್ತಪೂರ್ವದಲ್ಲಿ ಗ್ರೆಗೊರಿಯನ್ ಕ್ಯಾಲೆಂಡರ್ ಇಲ್ಲದಿದ್ದರೂ ಒಂದು ವೇಳೆ ಇದ್ದಿದ್ದರೆ ಹೀಗಿರುತ್ತಿತ್ತು ಎಂಬುದು ಇಲ್ಲಿಯ logic. ಇದನ್ನು ನೋಡಿದರೆ ಕ್ರಿ.ಶ. 300ರ ಸುಮಾರಿಗೆ ಡಿಸೆಂಬರ್ 22ರ ಉತ್ತರಾಯಣಾರಂಭದ ದಿನವೇ ಮಕರ ಸಂಕ್ರಮಣ ಇದ್ದದ್ದು, ಕ್ರಿ.ಪೂ. 3000ದಲ್ಲಿ ಜನವರಿಯಲ್ಲಿ ಇರುತ್ತಿದ್ದ ಯುಗಾದಿ ಮುಂದೆ ಸರಿಯುತ್ತಾ ಈಗ ಎಪ್ರಿಲ್ ತಿಂಗಳಿಗೆ ಬಂದಿರುವುದು ಮುಂತಾದ ವಿಚಾರಗಳು ತಿಳಿಯುತ್ತವೆ.

ಭೀಷ್ಮಾಚಾರ್ಯರು ದೇಹ ತ್ಯಾಗ ಮಾಡಿದ್ದು ಎನ್ನಲಾಗುವ ಕ್ರಿಸ್ತ ಪೂರ್ವ 2448, 3066, 3102, 3140 ಇತ್ಯಾದಿ ವರ್ಷಗಳ ಉಲ್ಲೇಖ ಅಂತರ್ಜಾಲದಲ್ಲಿ ಕಾಣಸಿಗುತ್ತದೆ. ಇಲ್ಲಿ tabulate ಮಾಡಿದ ಶತಮಾನಗಳ ಅಂಕಿ ಅಂಶಗಳ ಪ್ರಕಾರ ಕ್ರಿ.ಪೂ 2700ರಿಂದ ಕ್ರಿ.ಪೂ. 500ರ ವರೆಗೆ ಮಾಘ ಮಾಸದಲ್ಲಿ ಉತ್ತರಾಯಣ ಆರಂಭವಾಗಿದೆ. ಆದರೆ ಮಹಾಭಾರತದ ಶ್ಲೋಕದಲ್ಲಿ ಉಕ್ತವಾದ ಮಾಘ ಶುದ್ಧ ಅಷ್ಟಮಿಯ ಆಸುಪಾಸಿನಲ್ಲಿ ಡಿಸೆಂಬರ 22ರ ಉತ್ತರಾಯಣ ಆರಂಭವಾಗಿರುವುದು ಕ್ರಿ.ಪೂ. 500 ಇಸವಿಯಲ್ಲಿ ಎಂದು ಮೊದಲ ಹಂತದಲ್ಲಿ ಗೊತ್ತಾಯಿತು. ಆ ವರ್ಷ ಮಾಘ ಶುಕ್ಲ ಪಪ್ಠಿಯಂದು ಉತ್ತರಾಯಣ ಆರಂಭವಾಗಿತ್ತು. ಅದರ ಹಿಂದಿನ ಮತ್ತು ಮುಂದಿನ ವರ್ಷಗಳಲ್ಲಿ ಒಂದೊಂದಾಗಿ ಹುಡುಕಿದಾಗ ಕ್ರಿ.ಪೂ. 508 ಇಸವಿಯಲ್ಲಿ ಸರಿಯಾಗಿ ಮಾಘ ಶುಕ್ಲ ಅಷ್ಟಮಿಯಂದೇ ಉತ್ತರಾಯಣ ಆರಂಭವಾದದ್ದು ತಿಳಿಯಿತು. ಆದರೆ ಈ ಇಸವಿಗೂ ಮಹಾಭಾರತ ನಡೆದ ವರ್ಷಗಳೆಂದು ಊಹಿಸಲಾದ ಇಸವಿಗಳಿಗೂ ತುಂಬಾ ಅಂತರ ಇರುವುದರಿಂದ ಬೇರೆ ಕೆಲವು ವರ್ಷಗಳಲ್ಲೂ ಡಿಸೆಂಬರ್ 22ರಂದು ಮಾಘ ಶುಕ್ಲ ಅಷ್ಟಮಿ ಇದ್ದಿರಬಹುದು ಅನ್ನಿಸಿತು. ಕೆಲವು ವರ್ಷಗಳಿಗೊಮ್ಮೆ ನಮ್ಮ ಹುಟ್ಟುಹಬ್ಬ ಪಂಚಾಂಗ ಮತ್ತು ತಾರೀಕು ಪ್ರಕಾರ ಒಂದೇ ದಿನ ಬರುವುದು ಕೂಡ ನೆನಪಿತ್ತು. ಆ ದಿಸೆಯಲ್ಲಿ ಯೋಚಿಸಿ random ಆಗಿ ಹುಡುಕಿದಾಗ ಕ್ರಿ.ಪೂ. 527, 1013, 1977, 1996, 2042, 2061 ಇಸವಿಗಳಲ್ಲೂ ಡಿಸೆಂಬರ್ 22 ತಾರೀಕಿನಂದೇ ಮಾಘ ಶುಕ್ಲ ಅಷ್ಟಮಿ ಇದ್ದುದು ಗೊತ್ತಾಯಿತು. ಇವುಗಳನ್ನು ಪಟ್ಟಿಗೆ ಆ ಮೇಲೆ ಸೇರಿಸಿದ್ದು. ಹುಡುಕಿದರೆ ಇನ್ನಷ್ಟು ವರ್ಷಗಳು ಸಿಗಬಹುದು. ಇಷ್ಟೆಲ್ಲ ಮಾಘ ಶುಕ್ಲ ಅಷ್ಟಮಿಗಳ ಪೈಕಿ ಭೀಷ್ಮಾಚಾರ್ಯರು ದೇಹತ್ಯಾಗ ಮಾಡಿದ ವರ್ಷ ಯಾವುದೆಂಬ ವಿಷಯ ಒಗಟಾಗಿಯೇ ಉಳಿಯಿತು!
ಏನೇ ಇರಲಿ, ಈ ನೆವದಲ್ಲಿ ಹೊಸ ವಿಷಯಗಳು ಕಲಿಯಲು ಸಿಕ್ಕಿದ್ದಂತೂ ಹೌದು. - ಚಿದಂಬರ ಕಾಕತ್ಕರ್.

No comments:

Post a Comment

Your valuable comments/suggestions are welcome