ನನ್ನ ಬಗ್ಗೆ

ನನ್ನ ಬಗ್ಗೆ ನಾನೇ ಹೇಳುವುದಕ್ಕಿಂತ 15-09-2002ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಶ್ರೀವತ್ಸ ಜೋಶಿ ಬರೆದ ಲೇಖನವನ್ನು ಓದಿ.

"ಊಟಕ್ಕೆ ಒಳಗೆ ಬನ್ನಿ".  ಈಗಲೂ ನನಗೆ ನೆನಪಿದೆ, ಚಿಕ್ಕಂದಿನಲ್ಲಿ ನಾವು ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗುತ್ತಿದ್ದಾಗ ಅಲ್ಲಿನ ಆಕರ್ಷಣೆಗಳಲ್ಲಿ ಪ್ರಮುಖವಾದದ್ದು ಈ ವಿದ್ಯುತ್‌ ಚಾಲಿತ ಕರೆಗಂಟೆ / ಬೋರ್ಡ್‌. ಅವಿಭಕ್ತ ಕುಟುಂಬ, ದೊಡ್ಡ ಮನೆ- ಸಂಸಾರದ ನಮ್ಮ ಅಜ್ಜಿ ಮನೆಯಲ್ಲಿ ಬೇಸಿಗೆ ರಜೆ ಬಂತೆಂದರೆ, ಅದರಲ್ಲೂ ಸಮಾರಂಭಗಳೇನಾದರೂ ಇದ್ದರೆ, ನಾವೆಲ್ಲ ತುಂಬ ಮಂದಿ ಜಮಾಯಿಸುತ್ತಿದ್ದೆವು. ಮಧ್ಯಾಹ್ನ ಅಥವಾ ರಾತ್ರೆಯ ಊಟಕ್ಕೆ ಎಲ್ಲರನ್ನೂ ಊಟದ ಹಾಲ್‌ಗೆ ಕರೆಯುವಷ್ಟರಲ್ಲಿ ನಮ್ಮ ಸೋದರತ್ತೆಗೆ, ಅಜ್ಜಿಗೆ ಸಾಕು ಸಾಕಾಗುತ್ತಿತ್ತು. ಅದಕ್ಕೆಂದೇ ಆ ದೊಡ್ಡ ಮನೆಯ ಮೂರ್ನಾಲ್ಕು ಕಡೆ ಈ ಬೋರ್ಡು. ಅಡುಗೆ ತಯಾರಾದ ಮೇಲೆ ನಮ್ಮಜ್ಜಿ ಅಡುಗೆಮನೆಯಿಂದಲೆ ಒಂದು ಸ್ವಿಚ್‌ ಅದುಮಿದರೆ ಸಾಕು- ಎಲ್ಲ ಬೋರ್ಡ್‌ಗಳಲ್ಲಿ ದೀಪ ಬೆಳಗಿ ಗಂಟೆ ಮೊಳಗಿ,  ಊಟಕ್ಕೆ ಬನ್ನಿ   ಎಂಬ ಮುದ್ದಾದ ಕನ್ನಡ ಅಕ್ಷರಗಳು ಹೊಳೆಯುತ್ತಿದ್ದವು ! ನೆನಪಿರಲಿ- ಇದು ಎಪ್ಪತ್ತರ ದಶಕದ ಮಾತು. ಆಗಿನ್ನೂ ಹಳ್ಳಿಗಳಿಗೆ ವಿದ್ಯುತ್‌ ಸೌಕರ್ಯ ಬಂದಿತ್ತಷ್ಟೇ. ಅಂಥಾದ್ದರಲ್ಲಿ ಈ  ರಿಮೋಟ್‌ ಕಾಲಿಂಗ್‌  ವ್ಯವಸ್ಥೆಯನ್ನು ರೂಪಿಸಿದ ರೂವಾರಿ ನಮ್ಮ ಸೋದರ ಮಾವ (ಐದು ಮಂದಿ ಸೋದರರಲ್ಲಿ ಕಿರಿಯರು) ಚಿದಂಬರ ಕಾಕತ್ಕರ್‌. ಅವರನ್ನು ನಿಮಗೆಲ್ಲ ಪರಿಚಯಿಸುವುದಕ್ಕಾಗಿ ಈ ಲೇಖನ.


     ಮಂಗಳೂರಲ್ಲಿ ದೂರಸಂಪರ್ಕ ಇಲಾಖೆಯ ಒಬ್ಬ ಗುಮಾಸ್ತ (ಕ್ಲರ್ಕ್‌) ನಾಗಿ ಸೇರಿ ಈ ಮೂವತ್ತು ವರ್ಷಗಳಲ್ಲಿ ಸ್ವಪ್ರಯತ್ನದಿಂದ ಸಾಧನೆಯ ಮೆಟ್ಟಿಲುಗಳನ್ನೇರುತ್ತ ಇಂದು ಇಲಾಖೆಯಲ್ಲಿ ಒಬ್ಬ ಸಮರ್ಥ ಆಫೀಸರ್‌ ಆಗಿ,  ಕಂಪ್ಯೂಟರ್‌ ತಜ್ಞ ನಾಗಿ ಎಲ್ಲಕ್ಕಿಂತ ಮೇಲಾಗಿ   ಸಂಚಾರ ಸೇವಾ ಪದಕ ಕ್ಕೆ ಆಯ್ಕೆಯಾದ ಅವರ ವೃತ್ತಿ- ಪ್ರವೃತ್ತಿಗಳ ವಿವಿಧ ಮಜಲುಗಳಿಗೊಂದು ದರ್ಪಣ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಸರಿಯಾಗಿ ನಾಲ್ಕು ವರ್ಷ, ಒಂದು ತಿಂಗಳಲ್ಲಿ (20 ಸೆಪ್ಟೆಂಬರ್‌ 1951) ಜನಿಸಿದ ಈ ಸೃಜನಶೀಲ  ದುಡಿಮೆಗಾರ  ಭಾರತ ಸರಕಾರದ ಇಲಾಖೆಯಾಂದರ ಉದ್ಯೋಗಿಯಾಗಿ ತನ್ನ ಪ್ರತಿಭೆಯನ್ನು ಪ್ರಚಾರ ಬಯಸದೆ, ಇಲಾಖೆಯ ಅಭ್ಯುದಯಕ್ಕೇ ಉಪಯೋಗಿಸಿದ್ದು  ನಿಜಕ್ಕೂ ಅಭಿಮಾನದ ಸಂಗತಿ. ಚಿದಂಬರ ಕಾಕತ್ಕರ್‌ ಅವರ ಬಗ್ಗೆ ಪರಿಚಯ ಲೇಖನವೊಂದನ್ನು ಬರೆಯಬೇಕೆಂದು ಎಣಿಸಿದಾಗ ನನಗೆ ನೆನಪಾದದ್ದು,  ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಮಗು...ಆದರೆ ಸಾಧಿಸುವ ಛಲ ಮನುಷ್ಯನಿಗೆ ಬೇಕು...  ಎಂಬ ನನ್ನ ಆರನೆಯ ತರಗತಿಯ ಕನ್ನಡ ಪಠ್ಯಪುಸ್ತಕದ  ಧ್ರುವ  ಪಾಠದ ಸಾಲುಗಳು. ಏಕೆಂದರೆ ಅವರು ಇದಕ್ಕೊಂದು ಅಕ್ಷರಶಃ ಉದಾಹರಣೆ.  ಕಠಿಣ ದುಡಿಮೆ, ಮಾತು ಕಡಿಮೆ  ಎನ್ನುವುದರ ಪ್ರತಿರೂಪವೂ ಅವರೇ. ಇರಲಿ; ಗಾದೆಗಳಿಂದ ಉಪಮೆಗಳಿಂದ ವೈಭವೀಕರಿಸುವುದಕ್ಕಿಂತ ಅವರ ಮಾತುಗಳಲ್ಲೇ ಅವರ ಬಗ್ಗೆ ತಿಳಿದುಕೊಳ್ಳೋಣ. ಆಗಬಹುದಲ್ಲವೇ ?
                                                                                                      ---ಶ್ರೀವತ್ಸ ಜೋಶಿ

     
     ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದೆ  ಉದಯವಾಣಿ  ಕನ್ನಡ ದಿನಪತ್ರಿಕೆಯ ಓದುಗರಿಂದ ಕರ್ನಾಟಕದ ಅತ್ಯಂತ ಕುಗ್ರಾಮ ಎಂದು ಗುರುತಿಸಲ್ಪಟ್ಟ  ದಿಡುಪೆ ಗೆ ಪಕ್ಕದ್ದೇ ನಮ್ಮೂರು- ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ  ಮುಂಡಾಜೆ . ಸಹ್ಯಾದ್ರಿಯ ತಪ್ಪಲು, ಸುತ್ತಲೂ ಅಡಿಕೆ ತೋಟ. ಸನಿಹದಲ್ಲೇ ಧರ್ಮಸ್ಥಳ, ಸುಂದರವಾಗಿ ಹರಿವ ಮೃತ್ಯುಂಜಯ ನದಿ, ಮಳೆಗಾಲದಲ್ಲಿ ಉಜಿರೆ- ಬೆಳ್ತಂಗಡಿ ಪೇಟೆಗೆ ಹೋಗಬೇಕಿದ್ದರೆ ದೋಣಿಯವನ ಆಸರೆ ಬೇಕು, ಇಲ್ಲವೇ ಆರು ಮೈಲು ನಡೆದು ಬಸ್ಸು ಹಿಡಿಯಬೇಕು. ಹೀಗೆ ದಿಡುಪೆಯಷ್ಟಲ್ಲದಿದ್ದರೂ ನಮ್ಮೂರು ಕೂಡ ಸುಭಿಕ್ಷ ವೇನೂ ಅಲ್ಲ. ಅಂಥಾದ್ದರಲ್ಲೂ ಉಜಿರೆ ಮಂಜುನಾಥೇಶ್ವರ ಕಾಲೇಜು ಹತ್ತಿರದಲ್ಲೇ ಇದ್ದುದರಿಂದ ಮತ್ತು ವಿದ್ಯಾಭ್ಯಾಸಕ್ಕೆ ಮನೆಯಲ್ಲಿ ಪ್ರೋತ್ಸಾಹವೂ ಇದ್ದುದರಿಂದ ಬಿ.ಎಸ್ಸಿ. ಪದವಿ ಮುಗಿಸಿದೆ. 1973ರಲ್ಲೇ ಮಂಗಳೂರು ದೂರಸಂಪರ್ಕ (ಆಗ P & T ಅಂತ ಕರೆಯಲ್ಪಡುತ್ತಿದ್ದ ) ಇಲಾಖೆಯಲ್ಲಿ ಕ್ಲರ್ಕ್‌ ಆಗಿ ಸೇರಿದೆ. ನಾಲ್ಕು ವರ್ಷಗಳಲ್ಲೇ, ಅಂದರೆ 1977ರಲ್ಲಿ ಜ್ಯೂನಿಯರ್‌ ಟೆಲಿಕಾಂ ಆಫೀಸರ್‌ ಆಗಿ ಬಡ್ತಿ ಸಿಕ್ಕಿತು. 1993ರಿಂದೀಚೆಗೆ ಸಬ್‌ ಡಿವಿಜನಲ್‌ ಇಂಜಿನಿಯರ್‌ ಆಗಿ ಮಂಗಳೂರಲ್ಲೇ ಕೆಲಸ ಮಾಡುತ್ತಿದ್ದೇನೆ. ಅವತ್ತು P & T ಇದ್ದದ್ದು ಆಮೇಲೆ DOT BX, ಈಗ BSNL ಆಗಿದೆಯೆನ್ನಿ. ಆದರೆ ನನ್ನ ಕಛೇರಿ (ಕರ್ಮಭೂಮಿ) ಮಾತ್ರ ಅದೇ. ಯೂವುದೇ ಕೆಲಸವನ್ನು ಸುಲಭವನ್ನಾಗಿಸಿ ಮಾಡಲು, ಈವರೆಗೆ ಜನ ಪ್ರಯೋಗಿಸದೆ ಇರುವ ಸಾಧನ- ವಿಧಾನಗಳೇನಾದರೂ ಇವೆಯೇ ಎಂದು ಮೊದಲಿನಿಂದಲೂ ನನಗೆ ಒಂದು ತರಹದ ಹುಮ್ಮಸ್ಸು. ಕಂಪ್ಯೂಟರೈಸ್ಡ್‌ ಟೆಲಿಫೋನು ಮೊದಲು ಎಕ್ಸ್‌ಚೇಂಜ್‌ಗಳೆಲ್ಲ  ಸ್ಟ್ರೌಜರ್‌  ಎಂಬ ತಾಂತ್ರಿಕತೆಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದವು. ಆಗಲೇ ನಾನು ನನ್ನದೇ ಆದ ಮೀಟರ್‌ ಟೆಸ್ಟರ್‌, ಕೆಲಸವನ್ನು ಸುಲಭಗೊಳಿಸುವ ಹೊಸ ಸರ್ಕ್ಯೂಟ್‌ ಇತ್ಯಾದಿಗಳನ್ನು ಅಳವಡಿಸುವುದರಲ್ಲಿ ಯಶಸ್ಸು ಕಂಡಿದ್ದೆ.

     1984ರಷ್ಟು ಹಿಂದೆಯೇ ನಮ್ಮ ಇಲಾಖೆಗೆ ಕಂಪ್ಯೂಟರ್‌ ಒಂದು ಸಾಂಕ್ಷನ್‌ ಆಗಿ ಬಂದಿತ್ತು. ಟೆಲಿಫೋನ್‌ ಮೀಟರ್‌ ರೀಡಿಂಗ್‌ಗಳನ್ನು ಸಂಗ್ರಹಿಸಿಡಲು. ಆದರೆ ಕೇಳಿ : ಇಲಾಖೆಗೆ ಆ ಕಂಪ್ಯೂಟರ್‌ನ್ನು ಮಾರಿದ್ದ ಕಂಪೆನಿಯವರಾರೂ ಅದನ್ನು ಇನ್‌ಸ್ಟಾಲ್‌ ಮಾಡಲು ಬಂದಿರಲಿಲ್ಲ. ಸುಮಾರು ಎರಡು ತಿಂಗಳು ಅದು ಹಾಗೇ, ಮುಚ್ಚಿದ ಬಟ್ಟೆಯ ಕವರ್‌ ಒಳಗೇ ಇತ್ತು ! ಆವಾಗ ನನಗನ್ನಿಸಿತು- ಇದನ್ನಿಲ್ಲಿ ಸುಖಾಸುಮ್ಮನೇ ಇಡುವುದಕ್ಕಿಂತ ಯಾಕೆ ಉಪಯೋಗಿಸಬಾರದು ? Wordstar, Lotus, dBase ಇತ್ಯಾದಿ ತಂತ್ರಾಂಶಗಳೆಲ್ಲ ಅದರಲ್ಲಿದ್ದುವು. ಸರಿ, ಕೆಲವು ವ್ಯರ್ಥ ಪ್ರಯತ್ನಗಳ ನಂತರ ನಾನು ಆ ಕಂಪ್ಯೂಟರನ್ನು ಆನ್‌-ಆಫ್‌ ಮಾತ್ರವಲ್ಲದೆ ಆಪರೇಟ್‌ ಮಾಡುವುದನ್ನೂ ರೂಢಿಸಿಕೊಂಡೆ. ಕಲಿಸಿಕೊಡಲು ಯಾರೂ ಇಲ್ಲ. ಆದರೂ ಇಲಾಖೆಯ ಸಿಬ್ಬಂದಿ ಡ್ಯೂಟಿ- ಚಾರ್ಟ್ಸ್‌, ಸಲಕರಣೆಗಳ ಇನ್ವೆಂಟರಿ, ಎಕ್ಸ್‌ಚೇಂಜ್‌ನ ಟ್ರಾಫಿಕ್‌ ಅಂಕಿ ಅಂಶ ಇತ್ಯಾದಿ ಸಣ್ಣ ಪುಟ್ಟ ಕೆಲಸಗಳಿಗೆ ಹೇಗೋ ಮಾಡಿ ಆ ಕಂಪ್ಯೂಟರನ್ನು ಉಪಯೋಗಿಸಲು ತೊಡಗಿದೆ. ಆ ಬಳಿಕ ಕಂಪ್ಯೂಟರೈಸ್ಡ್‌ ಎಕ್ಸ್‌ಚೇಂಜ್‌ಗಳು ಆರಂಭವಾದಂತೆಲ್ಲ ನನ್ನ ಪ್ರಯೋಗಗಳು ಜಾಸ್ತಿಯಾಗತೊಡಗಿದವು. ನಾನು ರಚಿಸಿದ ಉಪಯುಕ್ತ ತಂತ್ರಾಂಶಗಳನ್ನೆಲ್ಲ ನಮ್ಮ ಮಂಗಳೂರು ಎಕ್ಸ್‌ಚೇಂಜ್‌ ಮಾತ್ರವಲ್ಲದೇ ಇಡೀ ಕರ್ನಾಟಕ ಟೆಲಿಕಾಂನ ಇತರ ಎಕ್ಸ್‌ಚೇಂಜ್‌ನವರೂ ಉಪಯೋಗಿಸತೊಡಗಿದರು.  90ರ ದಶಕದಲ್ಲಿ windows ಬಂದ ಮೇಲಂತೂ Visual basic, HTML ಇತ್ಯಾದಿಯನ್ನೆಲ್ಲ ಒಂದು ಕೈ ನೋಡೋಣ ಎಂದು ಪ್ರಯತ್ನಿಸತೊಡಗಿದೆ. ಬಹುವಾಗಿ  ಕೆಲವಂ ಬಲ್ಲವರಿಂದ ಕಲ್ತು...ಕೆಲವಂ ಮಾಳ್ಪವರಿಂದ ನೋಡಿ ಯೇ ಹೊರತು ಸಾಂಪ್ರದಾಯಿಕ ಟ್ರೆೃನಿಂಗ್‌ ಯಾವುದೂ ಇಲ್ಲ. ಆದರೂ ಅಪರೂಪಕ್ಕೊಮ್ಮೆ ಇಲಾಖೆ ಒಂದೆರಡು ದಿನ ಅಥವಾ ವಾರದ ಅವಧಿಯ ಕಂಪ್ಯೂಟರ್‌ ಕೋರ್ಸ್‌ಗೆ ನನ್ನನ್ನು ಪ್ರಾಯೋಜಿಸಿದ್ದುಂಟು. ಅವುಗಳನ್ನೂ ಸದುಪಯೋಗಿಸಿ, ಇಲಾಖೆಯ ದಿನನಿತ್ಯದ ಕೆಲಸ ಕಾರ್ಯಗಳಿಗೆ ಸಹಕಾರಿಯಾಗುವ ಬಹಳಷ್ಟು ತಂತ್ರಾಂಶಗಳನ್ನು ಬರೆದೆ. ಅವುಗಳಲ್ಲಿ ಅನೇಕ ತಂತ್ರಾಂಶಗಳು  ರಾಜ್ಯ ಹಾಗೂ ದೇಶದ ಇತರೆಡೆಯೂ ಉಪಯೋಗಿಸಲ್ಪಡುತ್ತಿವೆ.  ದೂರಸಂಪರ್ಕ ಇಲಾಖೆಯ ಕಂಪ್ಯೂಟರೀಕರಣದಲ್ಲಿ ನಾನು ತೋರಿಸಿದ ಆಸಕ್ತಿ ಮತ್ತು ಶ್ರಮಗಳನ್ನು ಗುರುತಿಸಿಯೇ  ಸಂಚಾರ ಸೇವಾ ಪದಕಕ್ಕೆ ನನ್ನ ಆಯ್ಕೆಯಾಗಿದೆಯೆಂಬುದು ನನ್ನ ಭಾವನೆ.

     ಮೊದಲಿನಿಂದಲೂ ನನಗೆ ರೇಡಿಯೋ ಎಂದರೆ ಪ್ರಾಣ. ನಾನು ಆರನೇ ಕ್ಲಾಸ್‌ನಲ್ಲಿದ್ದಾಗ ನಮ್ಮ ಮನೆಗೆ ನಮ್ಮ ಹಿರಿಯಣ್ಣ ಒಂದು ಸೆಕೆಂಡ್‌ ಹ್ಯಾಂಡ್‌ ರೇಡಿಯೋ (National Ecko ಎಂಬ ಕಂಪೆನಿಯದು; 50 ವೋಲ್ಟ್‌ ಗಜಗಾತ್ರದ ಬ್ಯಾಟರಿಯಿಂದ ಚಾಲಿತ ರೇಡಿಯೋ) ತಂದಿದ್ದರು. ಸಂಗೀತದಲ್ಲಿ ನನ್ನ ಆಸಕ್ತಿಗೆ ಮೂಲಕಾರಣ ಆ ರೇಡಿಯೋ. ಶಾಲೆಗೆ ರಜೆ ಇದ್ದಾಗಲೆಲ್ಲ ನಾನು ಆ ರೇಡಿಯೋ ಹತ್ತಿರವೇ ಒಂದು ಕುರ್ಚಿ ಇಟ್ಟುಕೊಂಡು ಕುಳಿತುಕೊಳ್ಳುತ್ತಿದ್ದೆ. ವಿವಿಧ ಭಾರತಿ ಅಥವಾ ರೇಡಿಯೋ ಸಿಲೋನ್‌ ಬಿಟ್ಟರೆ ಬೇರಾವ ಸ್ಟೇಷನ್ನನ್ನೂ ಟ್ಯೂನ್‌ ಮಾಡಲು ನಾನಾರಿಗೂ ಬಿಡುತ್ತಿರಲಿಲ್ಲ. ಬುಧವಾರ ರಾತ್ರಿ ರೇಡಿಯೋ ಸಿಲೋನ್‌ನಲ್ಲಿ 'ಬಿನಾಕಾ ಗೀತ್‌ ಮಾಲಾ" ಅಂತ ನಮ್ಮ ತಾಯಿಯವರಿಗೂ ಗೊತ್ತಿತ್ತು, ಆದ್ದರಿಂದ ಬುಧವಾರಗಳಂದು ಸಂಜೆ ಏಳೂವರೆಗೆಲ್ಲ ನನ್ನ ಊಟ ಮುಗಿದು ರೇಡಿಯೋಗೇ ಅಂಟಿಕೊಳ್ಳಲು ಸಿದ್ಧನಾಗಿರುತ್ತಿದ್ದೆ. 

      'ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಪ್ರತೀ ವರ್ಷವೂ ನಾವು ಹೋಗುತ್ತಿದ್ದೆವು. ಒಮ್ಮೆ ನಾಲ್ಕಾಣೆ ಕೊಟ್ಟು ಒಂದು ಕೊಳಲನ್ನು ನಾನು ಖರೀದಿಸಿದೆ. ಏನೋ ಒಂದು ಖುಷಿ. ನುಡಿಸಿದ್ದೇ ರಾಗ. ಆ ಕೊಳಲು ಒಂದೆರಡು ತಿಂಗಳಿಗೆ ಮಾತ್ರ ಬರುತ್ತಿತ್ತು. ಮುಂದಿನ ದೀಪೋತ್ಸವದಲ್ಲಿ ಮತ್ತೆ ಕೊಳಲು ಖರೀದಿ, ಮತ್ತೆ ಪೀಪೀ ಹಾಡು ಶುರು. ಹೀಗೆ 'ಬೊಗಳಿ ಬೊಗಳಿ ರಾಗ...ನರಳಿ ನರಳಿ ರೋಗ.. " ಎಂಬಂತೆ ನಾಲ್ಕಾಣೆ ಕೊಳಲಿನಿಂದಲೇ, ಗುರು ಅಂತ ಇಲ್ಲದೇನೇ, ಯಾವ ಹಾಡನ್ನೇ ಆಗಲಿ, ನುಡಿಸುವುದನ್ನು ಕಲಿತೆ! ಧರ್ಮಸ್ಥಳ ಜಾತ್ರೆಯಲ್ಲಿ ಮಾರಲ್ಪಡುತ್ತಿದ್ದ ಆ ಕೊಳಲುಗಳೆಲ್ಲ ಉದ್ದುದ್ದ ಹಿಡಿದು ( ಪುಂಗಿ / ಸನಾದಿಗಳಂತೆ, ಅಥವಾ ಗೊಲ್ಲರು ಕೊಳಲು ನುಡಿಸಿದಂತೆ ) ನುಡಿಸುವಂಥವು. 'ಕೊಳಲು ವಾದನ"ಕ್ಕೆ ಅವು ಸೂಕ್ತವಲ್ಲ. ಹಾಗಾಗಿ ನಮ್ಮ ತೋಟದಲ್ಲೇ ನದಿಯ ಹತ್ತಿರವಿದ್ದ ಬಿದಿರುಮೆಳ್ಳೆಯಿಂದ ಒಂದು ಒಳ್ಳೆಯ ಬಿದಿರನ್ನು ಕತ್ತರಿಸಿ, ಕಾದ ಸಲಾಕೆಯಿಂದ ಅದಕ್ಕೆ ತೂತುಗಳನ್ನು ಮಾಡಿ ನಾನೇ ಒಂದು ಕೊಳಲು ತಯಾರಿಸಿದೆ. ಅದು ಅಡ್ಡ ಹಿಡಿದು ( ಕೃಷ್ಣ ಕೊಳಲೂದುವಂತೆ) ಊದುವ ಕೊಳಲು. ಅಬ್ಬಾ ! ಇದರ ಧ್ವನಿ ಮಧುರವಾಗಿತ್ತು. ಆ ಮೇಲೆ ನಮ್ಮೂರಿನ ದೇವಸ್ಥಾನದಲ್ಲಿ ಧಾರ್ಮಿಕ ಉತ್ಸವಗಳ ವೇಳೆ ನನ್ನ ಕೊಳಲು ವಾದನ ಇರುತ್ತಿತ್ತು. ಹಾಗೆಯೇ ಕಾಲೇಜಿನ ಸಾಂಸ್ಕೃತಿಕ ಸಮಾರಂಭಗಳಲ್ಲಿ ನಾನು ಮೌತ್‌ ಆರ್ಗನ್‌ ಕೂಡ ನುಡಿಸುತ್ತಿದ್ದೆ. ಮಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿದ ಮೇಲೆ ಅಲ್ಲಿನ 'ಕಲಾನಿಕೇತನ"ದಲ್ಲಿ ಗೋಪಾಲಕೃಷ್ಣ ಐಯರ್‌ ಅವರಿಂದ ಶಾಸ್ತ್ರೀಯ ಸಂಗೀತದ 'ಅ..ಆ..." ಕಲಿತೆ. ಅದು ನನ್ನ 'ಏಕಲವ್ಯ" ವಿದ್ಯೆಯನ್ನು ತಿದ್ದಿ ತೀಡಿತು. ಶಾಸ್ತ್ರೀಯ ಸಂಗೀತವನ್ನು ಗಾಂಭೀರ್ಯದಿಂದ ನುಡಿಸಲು ನಾಗರ್‌ ಕೋಯಿಲ್‌ನಿಂದ ಒಂದು ಒಳ್ಳೆಯ ಕೊಳಲನ್ನೂ ತರಿಸಿದೆ. ಆಮೇಲೆ ಆಕಾಶವಾಣಿ ಮತ್ತು ದೂರದರ್ಶನಗಳಲ್ಲೂ ನನ್ನ ಕೊಳಲುವಾದನದ ಕಾರ್ಯಕ್ರಮಗಳನ್ನು ನೀಡಿದೆ. ಮಂಗಳೂರು ಸುತ್ತಮುತ್ತ ಭರತನಾಟ್ಯ ಅಥವಾ ಇತರ ಸಂಗೀತ ಕಾರ್ಯಕ್ರಮಗಳಲ್ಲಿ ಕೊಳಲು ನುಡಿಸಲು ಆಹ್ವಾನಗಳು ಬರತೊಡಗಿದವು. ಆಫೀಸಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ನನ್ನ ಕೊಳಲು ವಾದನ, ಮುಖ್ಯವಾಗಿ ಆಯ್ದುಕೊಳ್ಳುವ ಹಾಡುಗಳನ್ನು ಜನ ಮೆಚ್ಚ ತೊಡಗಿದರು. ಪ್ರೊ. ಶಂಕರ್‌ ಅವರ ಯಕ್ಷಿಣಿ ತಂಡದ ಸಂಗೀತ ವಿಭಾಗದಲ್ಲಿ ಕೊಳಲು ವಾದಕನಾಗಿ ಅವರೊಂದಿಗೆ ದೇಶದ ಹಲವು ಕಡೆ ಸುತ್ತಾಡಿದ್ದೇನೆ. ಹಾಗೆ ಪ್ರಯಾಣ ಮಾಡುವಾಗ ರೈಲಿನಲಿ ವೇಳೆ ಕಳೆಯಲಿಕ್ಕಾಗಿಯೇ ಬೋಗಿಯಲ್ಲೇ ಒಂದು ಮಿನಿ ಆರ್ಕೆಸ್ಟ್ರಾ. ನನ್ನ ಕೊಳಲು, ತಂಡದ ಇತರರಿಂದ ಬ್ರೀಫ್‌ಕೇಸ್‌, ಬಕೆಟ್‌- ಮಗ್ಗ್‌ ಏನು ಸಿಕ್ಕಿತೋ ಅದರಿಂದ ತಾಳ. ಸಮೀಪದ ಬೋಗಿಗಳಿಂದ ಪ್ರಯಾಣಿಕರು ನಮ್ಮ ಆರ್ಕೆಸ್ಟ್ರಾ ಕೇಳಲು ಜಮಾಯಿಸಿದ್ದ ನೆನಪು ಈಗಲೂ ಹಚ್ಚಹಸಿರು !

     ಆಗಲೇ ಹೇಳಿಂದಂತೆ ರೇಡಿಯೋ ನನ್ನ ಒಡನಾಡಿ. ಹಳೆಯ , ಹೊಸ ಹಿಂದಿ, ಕನ್ನಡ ಚಿತ್ರಗೀತೆಗಳೆಲ್ಲ ನನ್ನ ಸಂಗ್ರಹದಲ್ಲಿವೆ. ಕೆಲವರಿಗೆ ಎಲೆ ಡಿಕೆ ಮೆಲ್ಲುವ ನಶ್ಯ ಎಳೆಯುವ ಇತ್ಯಾದಿ ಚಟಗಳು ಇದ್ದಂತೆ ನನಗೆ ರೇಡಿಯೋ ಕೇಳುವ ಚಟ ಎಂದರೆ ತಪ್ಪಾಗಲಾರದು. ಕೇಬಲ್‌ ಸ್ಯಾಟಲೈಟ್‌ ಟೀವಿಯಲ್ಲಿ ಇಷ್ಟೊಂದು ಚಾನೆಲ್‌ಗಳೂ ವಿವಿಧ ಮನರಂಜನೆಯೂ ಇದ್ದರೂ ನನಗೆ ದಿನ ಮುಗಿದು ರಾತ್ರೆಯ ನಿದ್ದೆ ಬರುವುದು ವಿವಿಧ ಭಾರತಿಯ ಛಾಯಾಗೀತ್‌ ಮತ್ತು ಆಪ್‌ಕೀ ಫರ್ಮಾಯಿಷ್‌ ಕೇಳಿದರೆ ಮಾತ್ರ. ಮನೆಯವೆಲ್ಲ ಟೀವಿ ನೋಡಿ ಆದ ಮೇಲೆ ನಾನು ಟೀವಿಯನ್ನೂ ರೇಡಿಯೋದಂತೆ 'ಕೇಳು"ವುದುಂಟು. ಮಹಮ್ಮದ್‌ ರಫಿ ಮತ್ತು ಪಿ. ಬಿ.ಶ್ರೀನಿವಾಸ್‌ ನನಗೆ ಅತಿ ಮೆಚ್ಚುಗೆಯ ಹಿನ್ನೆಲೆ ಗಾಯಕರು. ರೇಡಿಯೋದಂತೆಯೇ ನನ್ನ ಇತರ ಹವ್ಯಾಸವೆಂದರೆ ಪತ್ರಿಕೆಗಳಿಗೆ ಸಣ್ಣ ಪುಟ್ಟ ಲೇಖನಗಳನ್ನು (ಇತ್ತೀಚೆಗೆ ಕಂಪ್ಯೂಟರ್‌ ಕುರಿತಂತೆ ಅಥವಾ ಇತರ ತಾಂತ್ರಿಕ ವಿಷಯಗಳ ಬಗ್ಗೆ) ಬರೆದು ಕಳಿಸುವುದು. ವಾಚಕರ ವಾಣಿ ವಿಭಾಗಕ್ಕೆ (Letters to the Editor ) ಅಥವಾ ಆಕಾಶವಾಣಿಯ ಪತ್ರೋತ್ತರ ವಿಭಾಗಕ್ಕೆ ಪತ್ರ ಬರೆದು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ನನ್ನ ಅಭಿಪ್ರಾಯ ಸಲ್ಲಿಸುವುದೂ ನನ್ನ ಇಷ್ಟದ ವಿಷಯ. 'ಇಂಥಾ ದಿನದ ಪೇಪರ್‌ನಲ್ಲಿ ನಿಮ್ಮ ಪತ್ರ ಪ್ರಕಟವಾದದ್ದು ಓದಿದೆ..." ಎಂದು ಯಾರಾದರೂ ಹೇಳಿದರೆ ಅದೊಂದು ರೀತಿ ಸಂತೋಷ. ಹಾಗೆಯೇ ಕನ್ನಡದಲ್ಲಿ ಮತ್ತು ಚಿತ್ಪಾವನಿ ಭಾಷೆಯಲ್ಲಿ ಕೆಲವು ಹಾಡುಗಳನ್ನೂ ಚುಟುಕಗಳನ್ನೂ ನಾನು ರಚಿಸಿದ್ದೇನೆ. ವಿದ್ಯಾರ್ಥಿ ದೆಸೆಯಲ್ಲಿ ಕುಂಚ ಬಣ್ಣಗಳಲ್ಲೂ ಕೈ ಆಡಿಸಿದ್ದುಂಟು. ಏನೋ, ಮನಕ್ಕೆ ಮುದನೀಡಲು 'ಕಲಾ ಸರಸ್ವತಿಯ ಸೇವೆ"!  ಪ್ರಶಸ್ತಿ ಬಂದದ್ದು ಸಂತೋಷವಾಗಿದೆ. ನನ್ನ ಸಹೋದ್ಯೋಗಿಗಳು, ಮೇಲಧಿಕಾರಿಗಳು, ಹಿತೈಷಿ-ಬಂಧು--ಮಿತ್ರರಿಗೆಲ್ಲ ನಾನು ಋಣಿಯಾಗಿದ್ದೇನೆ. ಈಗಿನ್ನು ಸಹಜವಾಗಿಯೇ ಜವಾಬ್ದಾರಿ, ಜನರ ಅಪೇಕ್ಷೆ- ನಿರೀಕ್ಷೆ ಜಾಸ್ತಿ. ಆದರೂ ಪ್ರಸಿದ್ಧಿಗಿಂತ ಉಪಯುಕ್ತತೆಗೆ (Popularity is good; Usefulness is noble!) ಪ್ರಾಧಾನ್ಯ ಕೊಡುವ ನನಗೆ ಇಂಥ ಶಕ್ತಿ -ಉತ್ಸಾಹಗಳನ್ನು ದೇವರು ಸದಾ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

15-09-2002ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ  ಈ ಲೇಖನದ ಇನ್ನೊಂದು ರೂಪವನ್ನೂ ಓದಬಹುದು.





Testimonials






1. ವಿ.ಕ. ದಲ್ಲಿ ವಾರದ ಪ್ರತಿಕ್ರಿಯೆಯಾಗಿ ಆಯ್ಕೆಗೊಂಡ ಓದುಗರೊಬ್ಬರ ಪತ್ರ. ಈ ಪತ್ರ ಬರೆದ ಸತೀಶ್ ಕೆಂಗವಲು ಅವರು ಖ್ಯಾತ ಮನಃಶಾಸ್ತ್ರಜ್ಞ ಮತ್ತು ಆಪ್ತಸಮಾಲೋಚಕರು ಎಂದು ಆ ಮೇಲೆ ತಿಳಿಯಿತು.






2. ನಾನು ಕಾಲೇಜಿಗೆ ಹೋಗುತ್ತಿದ್ದಾಗ, ಅಡಿಕೆ ಮಾರಿದ್ದ ಕೆಲವು ಸಾವಿರ ರೂಪಾಯಿಗಳಷ್ಟು ಹಣ ತರಲೆಂದು ಒಮ್ಮೆ ಮನೆಯವರು ನನ್ನನ್ನು ಅಡಿಕೆ ವ್ಯಾಪಾರಿಯೊಬ್ಬರ  ಬಳಿ ಕಳಿಸಿದ್ದರು. ಆಗ ಆಲ್ಲಿದ್ದ ಆಢ್ಯ ಮಹನೀಯರೊಬ್ಬರು ಇವನ  ಕೈಯಲ್ಲಿ  ಇಷ್ಟೊಂದು ಹಣ ಕೊಡಬಹುದೇ ಎಂದು ಅನುಮಾನ ವ್ಯಕ್ತ ಪಡಿಸಿದಾಗ ನನ್ನನ್ನು ಚಿಕ್ಕಂದಿನಿಂದಲೂ ಬಲ್ಲ ಆ ಅಡಿಕೆ ವ್ಯಾಪಾರಿ "ಇಷ್ಟು ಸಾವಿರಗಳೇನು, ನಾನು ಇವನ ಕೈಯಲ್ಲಿ  ಲಕ್ಷ ರೂಪಾಯಿ ಬೇಕಾದರೂ ಕೊಡಬಲ್ಲೆ" ಎಂದಿದ್ದರು. ನನ್ನ ಪರಿಚಯವೇ ಇಲ್ಲದ ಓದುಗರೊಬ್ಬರ ಉದ್ಗಾರಗಳು ಹಾಗೂ ನನ್ನನ್ನು ಚಿಕ್ಕಂದಿನಿಂದಲೂ ಬಲ್ಲ ಆ ಅಡಿಕೆ ವ್ಯಾಪಾರಿಯ ಹೇಳಿಕೆ  creativity ಹಾಗೂ integrity ಬಗ್ಗೆ valuable Testimonials ಎಂದುಕೊಂಡಿದ್ದೇನೆ!.

Sanchar Seva Padak awarded by BSNL
















  

 

 


ಉದಯವಾಣಿಯಲ್ಲಿ ಉಲ್ಲೇಖ

ಅಶೋಕ್ ಕುಮಾರ್ ಬರೆಯುತ್ತಿದ್ದ ನಿಸ್ತಂತು ಲೋಕದಲ್ಲಿ

 

  

Write up in Indian Express

A write up about my music collection which appeared in Indian Express dated 25-6-07



GiliGili Magical Music





















ಮೂರ್ತಿ ದೇರಾಜೆ ಅವರ ನನ್ನ ಗೋಪಾಲನ ಕೊಳಲಿಗೆ ಉಸಿರು





ಶ್ರೀಮತಿ ಸುಲೋಚನಾ ಭಟ್ ಅವರ ನೂಪುರ ನೃತ್ಯಸಂಸ್ಥೆಯ ಸ್ಮರಣ ಸಂಚಿಕೆಯಲ್ಲಿ


3 comments:

  1. Sir I am a Publisher - I want to publish your articles in book format - If intersted call this No . 98444 06266

    ReplyDelete
    Replies
    1. Thank you for the offer. But since most of my articles have multimedia contenet they may not be suitable to be printed in book form.

      Delete
  2. ಸಾರ್ ನಾನು ಎಂ.ಶಿವಕುಮಾರ್ ಹಾಸನ ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ. ನಾನು ನಿಮ್ಮ ಈ ಬರಹಗಳನ್ನ ಆಕಾಶವಾಣಿ ಕಾರ್ಯಕ್ರಮಗಳಾಗಿ ರೂಪಿಸಿ ಬಿತ್ತರಿಸ ಬಯಸುವೆ. ತಾವು ತಮಗೆ ಒಪ್ಪಿಗೆ ಇದ್ದಲ್ಲಿ ನನ್ನ ನಂಬರ್ 9483621531 ಅಥವಾ 9448669553 ಸಂಪರ್ಕಿಸಿ

    ReplyDelete

Your valuable comments/suggestions are welcome