
ಈಗ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಮಾದರಿಯ ರೇಡಿಯೋಗಳು ವೈವಿಧ್ಯಮಯ ದರಗಳಲ್ಲಿ ದೊರೆಯುತ್ತವೆ. ಆದರೆ ನಮ್ಮ ಅಭಿರುಚಿಯ ಕಾರ್ಯಕ್ರಮಗಳು ರೇಡಿಯೋದಲ್ಲಿ ಕೇಳಲು ಸಿಗುವುದು ಕಮ್ಮಿ. ನಮ್ಮಲ್ಲಿರುವ ಇತರ ಮೂಲಗಳ ಮನೋರಂಜನೆಯನ್ನೂ ರೇಡಿಯೋದಲ್ಲಿ ಕೇಳಲು ಆಗುವಂತಿರಬೇಕು. ಧ್ವನಿಯ ಗುಣಮಟ್ಟವೂ ಉತ್ತಮವಾಗಿರಬೇಕು. ಇದಕ್ಕೆ ನಾನು ಕಂಡು ಕೊಂಡ ಪರ್ಯಾಯ ಕಾರ್ ಸ್ಟೀರಿಯೊ.
12 ವೋಲ್ಟ್ ಬ್ಯಾಟರಿಯಲ್ಲಿ ಕಾರ್ಯಾಚರಿಸುವ ಕಾರ್ ಸ್ಟೀರಿಯೋವನ್ನು ಮನೆಯಲ್ಲೂ ಬಳಸಿ ಅದು ಒದಗಿಸುವ 20 watt ಶಕ್ತಿಯ ನಾಲ್ಕು ಸ್ಪೀಕರುಗಳ ಶಕ್ತಿಶಾಲಿ ಧ್ವನಿಯನ್ನು ಆನಂದಿಸಬಹುದು. ಬಾಹ್ಯ antenna ಜೋಡಿಸುವ ವ್ಯವಸ್ಥೆ ಇರುವುದರಿಂದ ಇದರ ರೇಡಿಯೋ ರಿಸೆಪ್ಷನ್ ಸಾಮರ್ಥ್ಯ ಅಧಿಕವಾಗಿರುತ್ತದೆ. ಉದ್ದ ವೈರೊಂದನ್ನು antenna ಆಗಿ ಬಳಸಿದರೆ ದೂರ ದೂರದ ನಿಲಯಗಳೂ ಕೇಳಿಸುತ್ತವೆ. ಹಳ್ಳಿ ಊರುಗಳಲ್ಲಿ electronic emission ಕಮ್ಮಿ ಇರುವುದರಿಂದ ಇನ್ನಷ್ಟು ಚೆನ್ನಾಗಿ ಕೇಳಿಸಬಹುದು. Bluetooth ಮತ್ತು Aux ಅನುಕೂಲವೂ ಇರುವುದರಿದ ಮೊಬೈಲಿನ ಶುಷ್ಕ ಧ್ವನಿಯನ್ನು ಶ್ರೀಮಂತಗೊಳಿಸಲು ಇದನ್ನು ಬಳಸಬಹುದು. USB ಇರುವುದರಿಂದ ಪೆನ್ ಡ್ರೈವಲ್ಲಿರುವ ಹಾಡುಗಳನ್ನೂ ಆಲಿಸಬಹುದು. ಹಳೆಯ ಸೆಟ್ಟುಗಳಲ್ಲಿ CD ಪ್ಲೇಯರ್ ಕೂಡ ಇರುತ್ತಿತ್ತು. ಆದರೆ ಈಗ CDಗಳ ಕಾಲ ಮುಗಿಯುತ್ತಾ ಬಂದಿದೆ.
ಹಳೆ ಕಾರು ಮಾರುವಾಗ ಅದರ ಸ್ಟೀರಿಯೋ ತೆಗೆದಿಟ್ಟುಕೊಳ್ಳಬಹುದು. ಇಲ್ಲವಾದರೆ ಒಂದೆರಡು ಸಾವಿರ ರೂಪಾಯಿ ಅಂದಾಜಿಗೆ online ಮಾರ್ಕೆಟಲ್ಲಿ ಒಳ್ಳೆಯ ಸೆಟ್ ಸಿಗುತ್ತದೆ.
ಆದರೆ ಇದು plug and play; ಅಂದರೆ ತಂದ, ಕನೆಕ್ಟ್ ಮಾಡಿದ, ಕೇಳಿದ ಮಾದರಿಯದ್ದಲ್ಲ. ವಯರುಗಳ ಕಲರ್ ಕೋಡ್ ಪ್ರಕಾರ ಸ್ಪೀಕರುಗಳನ್ನು ಮತ್ತು 12 volt ಪವರನ್ನು ನಾವೇ ಕನೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ.
ಸ್ಪೀಕರ್ ಜೋಡಣೆ. ಕಾರಿನಲ್ಲಿ ಬಳಸುವ ಸ್ಪೀಕರುಗಳೇ ಆದರೆ ಅವುಗಳನ್ನು ಇರಿಸಲು ಮರದ ಪೆಟ್ಟಿಗೆಯೋ ಅಥವಾ ಸೂಕ್ತವಾದ ಬೇರೆ ವ್ಯವಸ್ಥೆಯೋ ಮಾಡಿಕೊಳ್ಳಬೇಕು. ಮಡಕೆಯ ಬಾಯಿಯ ಮೇಲೆ ಸ್ಪೀಕರನ್ನು ಇರಿಸಿದರೆ ಹೆಚ್ಚಿನ ಬಾಸ್ ಎಫೆಕ್ಟ್ ಸಿಗುತ್ತದೆ. ಮನೆಯಲ್ಲಿದ್ದ ಸೌಂಡ್ ಸಿಸ್ಟಮಿನ ಹಳೆಯ ಸ್ಪೀಕರುಗಳಾದರೆ ನೇರವಾಗಿ ಬಳಸಬಹುದು. 20 watt / 8 ohm ಸಾಮರ್ಥ್ಯದವುಗಳಾದರೆ ಒಳ್ಳೆಯದು. ನಾನು ಕಾರ್ ಸ್ಪೀಕರ್ ಮತ್ತು ಹಳೆಯ Sony ಸೌಂಡ್ ಸಿಸ್ಟಮಿನ ಸ್ಪೀಕರುಗಳನ್ನು ಬಳಸಿದ್ದೇನೆ. ಕಲರ್ ಕೋಡ್ ಪ್ರಕಾರ ವಯರ್ ಜೋಡಿಸಿ ಇನ್ಸುಲೇಶನ್ ಟೇಪ್ ಸುತ್ತಬೇಕು. ಇಲ್ಲಿ ಹಿಂದೆ, ಮುಂದೆ, ಎಡ , ಬಲ ಎಂದೆಲ್ಲ ಉಲ್ಲೇಖಿಸಿದ್ದರೂ ನಮ್ಮ ಅನುಕೂಲದ ಪ್ರಕಾರ ಸ್ಪೀಕರುಗಳನ್ನು ಎಲ್ಲೂ ಇರಿಸಬಹುದು. ಅಷ್ಟೂ ಸ್ಪೀಕರುಗಳು ಬೇಕೆಂದೇನೂ ಇಲ್ಲ ಒಂದು ಇದ್ದರೂ ಸಾಕಾಗುತ್ತೆದೆ.

1. ಮನೆಯ ಇನ್ವರ್ಟರ್ ಬ್ಯಾಟರಿ ಬಳಸುವುದು. ಮನೆಯ inverter ಬಳಿಯಲ್ಲೇ ಇದನ್ನು ಇರಿಸುವ ಅನುಕೂಲ ಇದ್ದರೆ ಅದರ ಬ್ಯಾಟರಿಯನ್ನೇ ಬಳಸಬಹುದು. ಕೆಂಪು ವಯರನ್ನು ಬೆಡ್ ಸ್ವಿಚ್ ಮೂಲಕ ಜೋಡಿಸಬೇಕು. ಇದನ್ನು ಬೇಕಿದ್ದಾಗ ಮಾತ್ರ ಆನ್ ಮಾಡಿಕೊಂಡು ಉಪಕರಣವನ್ನು ಬಳಸದಿರುವಾಗ ಆಫ್ ಮಾಡಬೇಕು.

2. 12 volts DC adapter ಬಳಸುವುದು. ಬೇರೆಡೆ ಬೇಕೆಂದಾದರೆ 10 amps ಸಾಮರ್ಥ್ಯದ 12 volts DC adapter ಬಳಸಬಹುದು. ಕೆಂಪು ಮತ್ತು ಹಳದಿ ವಯರುಗಳನ್ನು ಒಟ್ಟಿಗೆ ಸೇರಿಸಿ Adapterನ ಪೊಸಿಟಿವ್‌ಗೆ ಜೋಡಿಸಬೇಕು. ಬೇಕಿದ್ದಾಗ ಮಾತ್ರ ಎಡಾಪ್ಟರ್ ಆನ್ ಮಾಡಿ ಉಪಯೋಗಿಸದಿರುವಾಗ ಆಫ್ ಮಾಡಬೇಕು. ಈ ಪದ್ಧತಿಯಲ್ಲಿ ಸೆಟ್ಟಿಂಗ್ಸ್ ಮೆಮೊರಿ ಉಳಿಯುವುದಿಲ್ಲ.


ನಾನು ಹಳೆಯ ಕಾರಿನಲ್ಲಿದ್ದ Pioneer ಸೆಟ್ಟನ್ನು ಮನೆಯ hallನಲ್ಲಿ ರೇಡಿಯೊ ನಿಲಯಗಳನ್ನಾಲಿಸಲು, DD Free Dishನ ಆಡಿಯೊ ಕೇಳಲು ಹಾಗೂ bluetooth ಮೂಲಕ ಮೊಬೈಲ್ ಕನೆಕ್ಟ್ ಮಾಡಿಕೊಳ್ಳಲು ಬಳಸುತ್ತೇನೆ. ಇದಕ್ಕೆ ನಂಬರ್ 3 ರೀತಿಯ ಪವರ್ ವ್ಯವಸ್ಥೆ ಮಾಡಿದ್ದೇನೆ.
ಹೊಸದಾಗಿ ಖರೀದಿಸಿದ Blaupunkt ಸೆಟ್ಟೊಂದನ್ನು bedroomನಲ್ಲಿ ಮಧ್ಯಾಹ್ನ ಊಟದ ನಂತರ ಕೊಂಚ ಹೊತ್ತು ವಿರಮಿಸುವಾಗ ಮೊಬೈಲಿಗೆ ಅಳವಡಿಸಿದ FM Transmitter ಮೂಲಕ ಮುಂಬಯಿ ವಿವಧ ಭಾರತಿ ಆಲಿಸಲು ಬಳಸುತ್ತಿದ್ದೇನೆ. ಎರಡು ಗಂಟೆಗೆ ಎಲ್ಲ ನಿಲಯಗಳಿಗೆ ಹಿಂದಿ ಮತ್ತು ಇಂಗ್ಲಿಷ್ ವಾರ್ತೆಗಳ ಸಮೂಹ ಸನ್ನಿಯ attack ಆಗುತ್ತದೆ. ಆಗ ರೆಕಾರ್ಡೆಡ್ ಹಾಡುಗಳನ್ನು ಕೇಳುತ್ತೇನೆ. ಇಲ್ಲಿ ನಾನು ಬಳಸುವುದು ನಂಬರ್ 1 ಮಾದರಿಯ inverter ಬ್ಯಾಟರಿ ಪವರ್.
ಮನೆಯಲ್ಲಿ ಕಾರ್ ಸ್ಟೀರಿಯೊ ಬಳಸುವವರು ಇನ್ನೂ ಅನೇಕರಿರಬಹುದು. ಆದರೆ ಎರಡು ಸೆಟ್ ಬಳಸುವುದು ನಾನೊಬ್ಬನೆಯೋ ಏನೋ!
ಒಟ್ಟಿನಲ್ಲಿ 50-60 ಸಾವಿರ ಬೆಲೆ ಬಾಳುವ ಆಧುನಿಕ ಸೌಂಡ್ ಸಿಸ್ಟಂಗಳಿಗೆ ಹೋಲಿಸಿದರೆ ಇದರಲ್ಲಿ ಹಿಂದಿನ ಕಾಲದ ಅನಲಾಗ್ ಧ್ವನಿ ಮತ್ತು ಈಗಿನ ಡಿಜಿಟಲ್ ಧ್ವನಿ ಎರಡೂ ತುಂಬಾ ಚೆನ್ನಾಗಿ ಕೇಳಿಸುತ್ತದೆ ಎಂದು ನನ್ನ ಅನುಭವ.
- ಚಿದಂಬರ ಕಾಕತ್ಕರ್.
ಅತ್ಯುತ್ತಮ ಮಾಹಿತಿಗಾಗಿ ಧನ್ಯವಾದಗಳು 🙏
ReplyDelete