Sunday 24 February 2019

ಮಂದಾರ ಮಂದಿರದಿಂದ ಬಾರೆ


ಆಗಿನ ಕಾಲದ ಕಲಾವಿದರು ನಿಜ ಅರ್ಥದಲ್ಲಿ ಕಲಾವಿದರಾಗಿದ್ದರೇ ಹೊರತು ಸ್ಟಾರುಗಳಲ್ಲ.  ಇದಕ್ಕೆ ಒಂದು ಉದಾಹರಣೆ 1963ರಲ್ಲಿ ತೆರೆ ಕಂಡ ಚಿತ್ರ ಚಂದ್ರಕುಮಾರ.  ಸಾಮಾನ್ಯವಾಗಿ ರಾಜ್‌ಕುಮಾರ್ ನಾಯಕನಾಗಿರುತ್ತಿದ್ದ ಚಿತ್ರಗಳಲ್ಲಿ ಉದಯ ಕುಮಾರ್ ಖಳನಾಯಕನಾಗಿಯೋ ಪೋಷಕ ಪಾತ್ರದಲ್ಲೋ ಕಾಣಿಸಿಕೊಳ್ಳುವುದು ವಾಡಿಕೆಯಾಗಿತ್ತು.  ಆದರೆ ಈ ಚಿತ್ರದಲ್ಲಿ ಕಥಾನಾಯಕ ಚಂದ್ರಕುಮಾರನಾಗಿ ಅಭಿನಯಿಸಿ ನಾಯಕಿ ಕೃಷ್ಣಕುಮಾರಿಯ ಜೊತೆ ಡ್ಯುಯೆಟ್ ಹಾಡಿದವರು ಉದಯಕುಮಾರ್. ನಾಯಕಿಯ ಪೋಷಕನ ರೂಪದಲ್ಲಿ ವಿಧಿಲಿಖಿತವನ್ನು ಸುಳ್ಳು ಮಾಡಲು ಹೊರಟ ತಪೋನಿಷ್ಠ ಪ್ರಚಂಡನಾಗಿ ಕಾಣಿಸಿಕೊಂಡವರು ರಾಜ್‌ಕುಮಾರ್.  ‘ಉದಯಕುಮಾರ್ ನಾಯಕನಟನಾಗಿರುವ ಚಿತ್ರದಲ್ಲಿ ಮೊತ್ತಮೊದಲ ಬಾರಿಗೆ ರಾಜ್‌ಕುಮಾರ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ’ ಎಂಬುದು ಆಗ ಪತ್ರಿಕೆಗಳಿಗೆ ಸೆನ್ಸೇಷನಲ್ ನ್ಯೂಸ್ ಆಗಿತ್ತು.  ರಾಜ್‌ಕುಮಾರ್ ಅವರು  ಅಬ್ಬಾ ಆ ಹುಡುಗಿ, ರಾಯರ ಸೊಸೆ, ಅನ್ನಪೂರ್ಣ, ಹಣ್ಣೆಲೆ ಚಿಗುರಿದಾಗ ಮುಂತಾದ ಚಿತ್ರಗಳಲ್ಲೂ ಕಥೆಗೆ ತಕ್ಕ ಚಿಕ್ಕ ಪಾತ್ರಗಳನ್ನು ನಿರ್ವಹಿಸಿದ್ದುಂಟು.

ಚಂದ್ರಕುಮಾರ ಚಿತ್ರದಲ್ಲಿ ಇನ್ನೊಂದು ವಿಶೇಷವೂ ಇತ್ತು.  ಆ ಚಿತ್ರಕ್ಕೆ ಇಬ್ಬರು ಸಂಗೀತ ನಿರ್ದೇಶಕರು. ಅಂದರೆ ರಾಜನ್ - ನಾಗೇಂದ್ರ ರೀತಿಯ ಸಂಗೀತ ನಿರ್ದೇಶಕ ಜೋಡಿ ಅಲ್ಲ. ಆ ಚಿತ್ರಕ್ಕಾಗಿ ಒಂದೆರಡು ಹಾಡುಗಳನ್ನು ಸಂಯೋಜಿಸಿದ ಎಂ. ವೆಂಕಟರಾಜು ಅಕಾಲದಲ್ಲಿ ವಿಧಿವಶರಾದುದರಿಂದ ಮುಂದೆ ಆ ಹೊಣೆಯನ್ನು ಟಿ. ಚಲಪತಿ ರಾವ್ ನಿಭಾಯಿಸಬೇಕಾಯಿತು. ವೆಂಕಟರಾಜು ಒಂದು ಕಾಲದಲ್ಲಿ ಚಲಪತಿ ರಾವ್ ಅವರಿಗೆ ಸಹಾಯಕರಾಗಿದ್ದವರು.  ಅಧಿಕೃತ ಮಾಹಿತಿ ಇಲ್ಲದಿದ್ದರೂ ಚಿತ್ರದ  ಆರು ಹಾಡುಗಳ ಪೈಕಿ ಬಣ್ಣದಿಂದ ಬಂಗಾರ ತಂದ ಮತ್ತು ನೀನೇ ನೀರೇ ಮಂದಾರ ಮಂದಿರದಿಂದ ಬಾರೇ  ವೆಂಕಟರಾಜು ಸಂಯೋಜನೆಗಳೆಂದು ನನ್ನ ಊಹೆ.  ಜೀವನ ತರಂಗ ಅವರ ಕೊನೆಯ ಪೂರ್ಣ ಆಲ್ಬಂ ಆಗಿತ್ತು.



ಮಂದಾರ ಮಂದಿರವೆಂದೊಡನೆ ನನ್ನ ಕಣ್ಣ ಮುಂದೆ ಬರುವುದು ಈ ಚಿತ್ರದ ಪೋಸ್ಟರಿನಲ್ಲಿರುವ ರೀತಿಯ ಚಂದ್ರಬಿಂಬದ ಹಿನ್ನೆಲೆಯಲ್ಲಿ ಕಾಣಿಸುವ ಮಂಟಪ ಮತ್ತು ಅದರತ್ತ ಸಾಗುವ ಮೆಟ್ಟಲುಗಳ ಓರೆ ಕೋರೆ ದಾರಿ! ಆ ಕಾಲದ  ಅನೇಕ ಚಿತ್ರಗಳ ರಮ್ಯ ಹಾಡುಗಳಲ್ಲಿ ಇಂತಹ ದೃಶ್ಯ ಇರುವುದು ಸಾಮಾನ್ಯವಾಗಿತ್ತು.  ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ ಹಾಡಿರುವ ಮಂದಾರ ಮಂದಿರದ ಹಾಡು ಆರ್ಕೆಷ್ಟ್ರೇಶನ್‌ನಲ್ಲಿ ಮಾಸ್ಟರ್ ಆಗಿದ್ದ ವೆಂಕಟರಾಜು ಅವರ ಸಿಗ್ನೇಚರ್ ಹಂಸಗೀತೆ. ಶಂಕರಾಭರಣ ರಾಗ ಛಾಯೆಯ ಈ ಹಾಡಿನುದ್ದಕ್ಕೂ jumping notes ಅಂದರೆ ದಾಟು ಸ್ವರಗಳ ಆಕರ್ಷಕ ಪ್ರಯೋಗ ಇದೆ.  ಸಲಿಲ್ ಚೌಧುರಿ ಮತ್ತು ವಿಜಯಭಾಸ್ಕರ್ ರಚನೆಗಳಲ್ಲೂ ಈ ರೀತಿ jumping notes ಬಳಕೆ ಹೆಚ್ಚಾಗಿರುತ್ತದೆ. ಪಿ.ಬಿ.ಎಸ್ ಅವರ ಓ ಹೋ ಹೋ ಎಂಬ ಆಲಾಪದೊಂದಿಗೆ ಆರಂಭವಾಗುವ ಹಾಡು ವೈಬ್ರಾಫೋನ್, ಮೆಂಡೊಲಿನ್, ಕೊಳಲು-ಕ್ಲಾರಿನೆಟ್, ಗ್ರೂಪ್ ವಯಲಿನ್ಸ್ ಹಾಗೂ ಸೊಲೋ ವಯಲಿನ್‌  ಒಳಗೊಂಡ ಸುಮಾರು 23 ಸೆಕೆಂಡುಗಳ ಸುದೀರ್ಘ preludeನೊಂದಿಗೆ ಮುಂದುವರೆಯುತ್ತದೆ. ಮೊದಲು ಗಿಟಾರ್ ರಿದಂ, ನಂತರ ವಯಲಿನ್ ಆರಂಭವಾಗುತ್ತಲೇ ಉರುಳಿಕೆಯೊಂದಿಗೆ ಢೋಲಕ್ ಸೇರಿಕೊಳ್ಳುತ್ತದೆ. ಗಾಯಕ ಗಾಯಕಿ ಸಾಲುಗಳನ್ನು ಹಂಚಿಕೊಂಡು ಹಾಡುವ ಪಲ್ಲವಿ ಭಾಗದಲ್ಲೂ ಢೋಲಕ್ ಮುಂದುವರೆಯುತ್ತದೆ. E ಅಂದರೆ ಬಿಳಿ ಮೂರು ಶ್ರುತಿಯ ಈ ಹಾಡಿನ ಪಲ್ಲವಿಯಲ್ಲಿ ಪಿ.ಬಿ.ಎಸ್ ಸಾಲುಗಳು ಮಂದ್ರ ಮಧ್ಯಮವನ್ನೂ ಸ್ಪರ್ಶಿಸಿದರೆ  ಜಾನಕಿ ಸಾಲುಗಳು ಮಧ್ಯ ಸಪ್ತಕದಲ್ಲಿ ಸಂಚರಿಸುತ್ತವೆ.   ಮೊದಲ ಚರಣದಲ್ಲಿ ಪಿ.ಬಿ.ಎಸ್ ಸಾಲುಗಳು ಮಧ್ಯ ಸಪ್ತಕದಲ್ಲಿದ್ದು  ತಾರ ಸಪ್ತಕದ ಗಾಂಧಾರದ ವರೆಗೆ ಸಂಚಾರವಿರುವ ಸಾಲುಗಳನ್ನು ಜಾನಕಿ ಲೀಲಾಜಾಲವಾಗಿ ನಿರ್ವಹಿಸಿದ್ದಾರೆ. ಎರಡನೆ ಚರಣದಲ್ಲಿ ಇದು ಅದಲು ಬದಲಾಗಿ ತಾರ ಗಾಂಧಾರ ಸ್ಪರ್ಶದ ಸಾಲುಗಳನ್ನು  ಪಿ.ಬಿ.ಎಸ್ falcetto ತಂತ್ರ ಉಪಯೋಗಿಸಿ ಹಾಡಿದ್ದಾರೆ. ಯಾವ ಸ್ಥಾಯಿ ಯಾರಿಗೆ ಸೂಕ್ತ ಎಂದು ಆಗಿನ ಸಂಗೀತ ನಿರ್ದೇಶಕರು ಬಲ್ಲವರಾಗಿದ್ದರು. ಪುರುಷ ಧ್ವನಿ ಮಂದ್ರ, ಮಧ್ಯ, ತಾರ ಎಲ್ಲಕ್ಕೂ ಸಲ್ಲುವಂಥದ್ದು ಮತ್ತು ಸ್ತ್ರೀ ಕಂಠ ಮಧ್ಯ ಮತ್ತು ತಾರ ಸಪ್ತಕಗಳಲ್ಲಿ ಚೆನ್ನಾಗಿ ನುಡಿಯುತ್ತದೆ ಎಂದೂ ಅವರಿಗೆ ಗೊತ್ತಿತ್ತು. Prelude ಮತ್ತು interludeಗಳಲ್ಲಿ ಅನ್ಯ ಸ್ವರವಾಗಿ ಮ2 ಸ್ಪರ್ಶ ಇದೆ.  ಎರಡು ಚರಣಗಳ ಮೊದಲು ಬರುವ interludeಗಳು ಭಿನ್ನವಾಗಿವೆ.

ಈ ಹಾಡಿನಲ್ಲಿ ಗಮನಕ್ಕೆ ಬರುವಂತೆ ಶಂಕರ್ ಜೈಕಿಶನ್ ಅವರ ಆರ್ಕೆಸ್ಟ್ರೇಷನ್ ಚಾತುರ್ಯ, ರೋಶನ್ ಅವರ ಮಾಧುರ್ಯ ಮತ್ತು ಒ.ಪಿ. ನಯ್ಯರ್ ಅವರ ಲಾಲಿತ್ಯವನ್ನು ತನ್ನ ಸಂಯೋಜನೆಗಳಲ್ಲಿ  ಒಗ್ಗೂಡಿಸುತ್ತಿದ್ದ ವೆಂಕಟರಾಜು ಆ ಮೂವರ ಅಂಶಗಳನ್ನೊಳಗೊಂಡ ಕನ್ನಡದ ತ್ರೀ ಇನ್ ವನ್ ಸಂಗೀತ ನಿರ್ದೇಶಕ ಅಂದರೆ ತಪ್ಪಾಗಲಾರದು. ಅವರು ಅಲ್ಪಾಯುವಾಗಿ ಅಷ್ಟು ಬೇಗ ನಮ್ಮನ್ನಗಲದೆ ಇರುತ್ತಿದ್ದರೆ ಇನ್ನೆಷ್ಟು ಇಂತಹ ಮಧುರ ಗೀತೆಗಳು ಜನ್ಮ ತಾಳುತ್ತಿದ್ದವೋ!


ಎಸ್.ಕೆ. ಕರೀಂ ಖಾನ್ ಈ ರಚನೆಯಲ್ಲಿ  ಸರಳ ಪದಪುಂಜಗಳಿಗಿಂತ  ಪ್ರಾಸಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಉನ್ಮತ್ತ ಪ್ರೇಮಿಗಳಿಬ್ಬರ ಉತ್ಕಟ ಭಾವಾಭಿವ್ಯಕ್ತಿ ಎಂಬ ನೆಲೆಯಲ್ಲಿ ಇದನ್ನು ನೋಡಬೇಕು. ಶಂಕರ್ ಜೈಕಿಶನ್ ಅವರಿಗೆ ಶೈಲೇಂದ್ರ ಇದ್ದಂತೆ ಇವರು ವೆಂಕಟರಾಜು ಅವರ ನೆಚ್ಚಿನ ಗೀತ ರಚಕರಾಗಿದ್ದವರು.







ರಾಜ್‌ಕುಮಾರ್, ಉದಯಕುಮಾರ್, ನರಸಿಂಹರಾಜು, ಕೃಷ್ಣಕುಮಾರಿ ಮುಂತಾದವರ  ನಾಲಿಗೆಯಿಂದ ಅಸ್ಖಲಿತವಾಗಿ ನುಡಿಯುವ ಕರೀಂ ಖಾನ್ ಅವರ ಪ್ರಖರ ಸಂಭಾಷಣೆಗಳುಳ್ಳ, ಚಂದಮಾಮದ ರಮ್ಯ ಕಥೆಯಂತಿರುವ  ಚಂದ್ರಕುಮಾರ ಚಿತ್ರ ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು.