Wednesday, 27 May 2026

ಋತುಮಾನ ಸ್ನೇಹಿ ಪಂಚಾಂಗ


ಸುಮಾರು ಮೂರು ವರ್ಷಕ್ಕೊಮ್ಮೆ ಬರುವ ಅಧಿಕ  ಮಾಸದ ಉದ್ದೇಶ  ಶಿಥಿಲವಾದ ಚಾಂದ್ರ ಸೌರ ಕಾಲಗಣನೆಯ ಸಮನ್ವಯವನ್ನು  ಮತ್ತೆ ಸಮಸ್ಥಿತಿಗೆ ತರುವುದು ಎಂಬುದು ತಿಳಿದ ವಿಚಾರವೇ ಆಗಿದೆ. 

ಆದರೆ ಭೂಮಿಯ ಓಲಾಡುವಿಕೆಯಿಂದ ಉಂಟಾಗಿರುವ precession ಪ್ರಭಾವದಿಂದ ನಕ್ಷತ್ರ ಸ್ಥಾನಗಳು ಕ್ರಮೇಣ ಬದಲಾಗುತ್ತಾ ಬಂದು ಸಂಕ್ರಾಂತಿ ಆಧರಿಸಿದ ಸೌರ ಕಾಲಗಣನೆಯೇ ಕ್ರಾಂತಿವೃತ್ತದಲ್ಲಿ ಸೂರ್ಯನ ವಾರ್ಷಿಕ ಚಲನೆಯನ್ನು ಹೊಂದಿಕೊಂಡ ಋತುಮಾನ ಚರ್ಯೆಗಳೊಂದಿಗಿನ ಸಮನ್ವಯವನ್ನು ಕಳೆದುಕೊಂಡಿದೆ.  ಹೀಗಾಗಿ ಸಂಕ್ರಾಂತಿಗಳೊಂದಿಗೆ ತಳಕು ಹಾಕಿಕೊಂಡಿರುವ   ಚಾಂದ್ರಮಾನ ಮಾಸಗಳ ಆಧಾರದಲ್ಲಿ ಗುರುತಿಸಲಾಗುವ   ವಸಂತ, ಗ್ರೀಷ್ಮಾದಿ ಋತುಗಳು ಮತ್ತು ಆ ಸಮಯದಲ್ಲಿ ಪ್ರಕೃತಿಯಲ್ಲಿ   ಇರಬೇಕಾದ ಲಕ್ಷಣಗಳ ಮಧ್ಯೆ ಕೂಡ ತಾಳಮೇಳ ಇಲ್ಲ.

ವಾಸ್ತವವಾಗಿ ಕ್ರಾಂತಿವೃತ್ತದಲ್ಲಿ ಸೂರ್ಯನು 330 ಡಿಗ್ರಿಯಲ್ಲಿರುವ ಫೆಬ್ರವರಿ 18ರ ಸುಮಾರಿಗೆ ಪ್ರಕೃತಿಯಲ್ಲಿ ವಸಂತದ ಲಕ್ಷಣಗಳು ಕಾಣಿಸತೊಡಗುತ್ತವೆ. ಅಷ್ಟರಲ್ಲಿ ಚೈತ್ರ ಮಾಸ ಆರಂಭವಾಗಿ  ಮುಂದೆ ಎರಡೆರಡು ತಿಂಗಳಿಗೊಂದರಂತೆ ಗ್ರೀಷ್ಮ, ವರ್ಷಾ, ಶರತ್, ಹೇಮಂತ  ಶಿಶಿರ ಋತುಗಳು ಬರಬೇಕು. ಆದರೆ ಈಗ ಚಾಂದ್ರಮಾನ ತಿಂಗಳುಗಳನ್ನು ಸೌರ ಸಂಕ್ರಾಂತಿಗಳೊಂದಿಗೆ ಸಮನ್ವಯಗೊಳಿಸುತ್ತಿರುವುದರಿಂದ ಚೈತ್ರಾದಿ ತಿಂಗಳುಗಳೊಂದಿಗೆ ತಳಕು ಹಾಕಿಕೊಂಡಿರುವ ಋತುಗಳು ಇರಬೇಕಾದ ಸಮಯದಲ್ಲಿ  ಇರುವುದಿಲ್ಲ. ಹೀಗಾಗದೆ ಇರಬೇಕಿದ್ದರೆ  ಚಾಂದ್ರಮಾನ ತಿಂಗಳುಗಳನ್ನು ಸಂಕ್ರಾಂತಿಗಳೊಂದಿಗೆ ಸಮನ್ವಯಿಸದೆ ಕ್ರಾಂತಿವೃತ್ತದಲ್ಲಿ ಸೂರ್ಯನ ಸ್ಥಾನವನ್ನು ಆಧರಿಸುವಂತೆ ಮಾಡಬೇಕು.

ಸೈದ್ಧಾಂತಿಕವಾಗಿ ಹೀಗೆ ಮಾಡಲು ಕಷ್ಟವೇನೂ ಇಲ್ಲ. ಪ್ರತೀ ವರ್ಷ ಫೆಬ್ರವರಿ 18ರ ಆಸುಪಾಸು ಸೂರ್ಯನು 330 ಡಿಗ್ರಿಯನ್ನು ದಾಟಿದ ನಂತರ ಆರಂಭವಾಗುವ ತಿಂಗಳನ್ನು ಚೈತ್ರ ಎಂದು ಪರಿಗಣಿಸಬೇಕು. ಮುಂದೆ ಸಾಗುತ್ತಾ ಮೂರು ವರ್ಷಗಳ ನಂತರ 330 ಡಿಗ್ರಿಯ ಈ ಹಂತಕ್ಕಿಂತ  ಮೊದಲೇ ಚೈತ್ರ ಆರಂಭವಾದಾಗ ಅದು ಅಧಿಕ ಚೈತ್ರವಾಗಿ ನಂತರದ ತಿಂಗಳು ನಿಜ ಚೈತ್ರ ಆಗುತ್ತದೆ. ಈ ಪದ್ಧತಿಯಲ್ಲಿ ಚೈತ್ರ ಮಾತ್ರ ಅಧಿಕಮಾಸ ಆಗುವುದು. ಎಂದಾದರೂ 330 ಡಿಗ್ರಿಯ ಹಂತದ ನಂತರ ಫಾಲ್ಗುಣ ಆರಂಭವಾದರೆ ಅದನ್ನು ಕ್ಷಯಮಾಸ ಎಂದು ಪರಿಗಣಿಸಬೇಕು. ಆದರೆ ಹೀಗಾಗುವ ಸಾಧ್ಯತೆಯೇ ಇಲ್ಲ.

ಒಂದು ವೇಳೆ  2027ರ ಫೆಬ್ರವರಿಯಿಂದ ಈ ರೀತಿಯ ಬದಲಾವಣೆಯನ್ನು ಅನುಷ್ಠಾನಗೊಳಿಸಿದರೆ ಹೇಗಿರುತ್ತದೆ  ಎಂದು ಮೇಲಿನ ಚಿತ್ರದಲ್ಲಿ ನೋಡಬಹುದು. ಈ ಕಲ್ಪನೆಯಂತೆ 2027ರಲ್ಲಿ ಫೆಬ್ರವರಿ 18ರ ನಂತರ ಮಾರ್ಚ್  9ಕ್ಕೆ ಆರಂಭವಾಗುವ ಫಾಲ್ಗುಣ ತಿಂಗಳು ಕ್ಷಯವಾಗಿ ಅದು ಚೈತ್ರ ಆಗುತ್ತದೆ. ಮಾಸವನ್ನು ಕ್ಷಯಗೊಳಿಸುವ  ಈ ಪ್ರಕ್ರಿಯೆ ಆರಂಭದಲ್ಲಿ ಒಂದು ಸಲ ಮಾತ್ರ ಮಾಡಬೇಕಾಗಿರುವುದು. ಹಾಗೆಯೇ ಮುಂದೆ ಸಾಗಿದಾಗ  2029ರಲ್ಲಿ ಫೆಬ್ರವರಿ 18ಕ್ಕಿಂತ ಮೊದಲೇ 14 ತಾರೀಕಿಗೆ ಆರಂಭವಾಗುವ ಚೈತ್ರವು ಅಧಿಕ ಮಾಸವಾಗಿ ಮಾರ್ಚ್ 16ರಿಂದ ನಿಜ ಚೈತ್ರ ಆರಂಭವಾಗುತ್ತದೆ.  ಅಂದರೆ ಈಗಿನಂತೆಯೇ ಮೂರು ವರ್ಷಕ್ಕೊಮ್ಮೆ ಅಧಿಕ ಮಾಸ ಇದ್ದೇ ಇರುತ್ತದೆ. ಆದರೆ  ಆಗಲೇ ಹೇಳಿದಂತೆ ಪ್ರತೀ ಸಲ ಅದು ಚೈತ್ರವೇ ಆಗಿರುತ್ತದೆ.

ಈ ರೀತಿಯ ಪಂಚಾಂಗದಲ್ಲಿ ಚಾಂದ್ರಮಾನ ಹಬ್ಬ ಹರಿದಿನಗಳು  ಆಯಾ ತಿಂಗಳುಗಳ ತಿಥಿ ಪ್ರಕಾರ  ಈಗಿನಂತೆಯೇ, ಆದರೆ ಋತುಮಾನ ಪ್ರಕಾರ ಇರುತ್ತವೆ. ಹೋಲಿಕೆಗಾಗಿ ವಾಸ್ತವ  ಮತ್ತು ಕಾಲ್ಪನಿಕ ತಿಂಗಳುಗಳನ್ನು ಅಕ್ಕಪಕ್ಕದಲ್ಲಿ ಕಾಣಿಸಲಾಗಿದೆ. ಚಾಂದ್ರಮಾನ ಗಣನೆ ಒಂದು ತಿಂಗಳಷ್ಟು ಹಿಂದೆ ಬಂದಿರುವುದು ಬಿಟ್ಟರೆ ಎರಡರ ನಡುವೆ ಬೇರೇನೂ ವ್ಯತ್ಯಾಸ ಇಲ್ಲದಿರುವುದನ್ನು ಗಮನಿಸಬಹುದು.

ಯಾರಿಗೆ ಗೊತ್ತು, ಮುಂದೊಂದು ದಿನ ನಿಜವಾಗಿಯೂ  ಇಂಥ ಋತುಮಾನ ಸ್ನೇಹಿ ಪಂಚಾಂಗಗಳು ಬಂದರೂ ಬರಬಹುದು. ಬರಲಿ ಎಂದು ಹಾರೈಸೋಣ.



Friday, 10 April 2026

ಸಪ್ತಸ್ವರಗಳ ಸುತ್ತ


ಏಳು ಸ್ವರವು ಸೇರಿ ಸಂಗೀತವಾಯಿತು, ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು, ಪಂಚಮದಲ್ಲಿ ಹಾಡಿತು ಕೋಗಿಲೆ, ಇನಿಯ ಕೋಗಿಲೆಯ ಪಂಚಮದಿಂಚರ, ವಸಂತ ಕೋಗಿಲೆ ಪಂಚಮನೋಂಚರ, ಎಲ್ಲೆಲ್ಲೂ ಸಂಗೀತವೇ  ಹೀಗೆ ಅನೇಕ ಜನಪ್ರಿಯ ಚಿತ್ರಗೀತೆಗಳು ನಮಗೆ ಸರಳವಾಗಿ ಸಂಗೀತಜ್ಞಾನವನ್ನು ಬೋಧಿಸಿವೆ. ಪ್ರಕೃತಿಯಲ್ಲಿ ತಾನು ಆಲಿಸಿದ ವಿವಿಧ ಶಬ್ದಗಳನ್ನು ಮಾನವ ಅನುಕರಿಸಿ ತನ್ನ ಅನುಕೂಲಕ್ಕಾಗಿ ಸ್ಥೂಲವಾಗಿ ಅವುಗಳನ್ನು ಷಡ್ಜ-ಸ, ರಿಷಭ-ರಿ, ಗಾಂಧಾರ-ಗ, ಮಧ್ಯಮ-ಮ , ಪಂಚಮ-ಪ, ಧೈವತ-ದ, ನಿಷಾದ-ನಿ   ಎಂದು ವಿಂಗಡಿಸಿಕೊಂಡಿರಬಹುದು. ಸಾಮಗಾಯನದ ವಿವರಗಳನ್ನು ತಿಳಿಸುವ ನಾರದೀಯ ಶಿಕ್ಷಾ ಎಂಬ ವೇದಾಂಗ ಗ್ರಂಥದಲ್ಲಿ ಒಂದೆಡೆ ಹೀಗೆ ಹೇಳಲಾಗಿದೆ.
ಷಡ್ಜಂ ವದತಿ ಮಯೂರೋ ಗಾವೋ ರಂಭಂತಿ ಚರ್ಷಭಮ್
ಅಜಾವಿಕೇ ತು ಗಾಂಧಾರಂ ಕ್ರೌಂಚೋ ವದತಿ ಮಧ್ಯಮಮ್
ಪುಷ್ಪಸಾಧಾರಣೇ ಕಾಲೇ ಕೋಕಿಲೋ ವಕ್ತಿ ಪಂಚಮಮ್ 
ಅಶ್ವಸ್ತು ಧೈವತಂ ವಕ್ತಿ ನಿಷಾದಮ್ ವಕ್ತಿ ಕುಂಜರಃ || 
ಅಂದರೆ ನವಿಲು ಷಡ್ಜದಲ್ಲೂ, ಗೋವುಗಳು  ರಿಷಭದಲ್ಲೂ, ಆಡು ಕುರಿಗಳು ಗಾಂಧಾರದಲ್ಲೂ,  ಕ್ರೌಂಚಪಕ್ಷಿಯು ಮಧ್ಯಮದಲ್ಲೂ,  ವಸಂತಕಾಲದ ಕೋಗಿಲೆಯು ಪಂಚಮದಲ್ಲೂ, ಕುದುರೆಯು ಧೈವತದಲ್ಲೂ, ಆನೆಯು ನಿಷಾದದಲ್ಲೂ ಧ್ವನಿಯನ್ನು ಹೊರಡಿಸುತ್ತವೆ. ಇದೇ ಶ್ಲೋಕದ ಇನ್ನೊಂದು ಪಾಠಾಂತರವು  ಅಮರಕೋಶದ ನಾಟ್ಯವರ್ಗ ಅಧ್ಯಾಯದಲ್ಲಿ ಹೀಗಿದೆ.
ಷಡ್ಜಂ ಮಯೂರೋ ವದತಿ ಗಾವೋ ನರ್ದಂತಿ ಚರ್ಷಭಮ್
ಅಜಾವಿಕಂ ತು ಗಾಂಧಾರಂ ಕ್ರೌಂಚಃ ಕ್ವಣತಿ ಮಧ್ಯಮಮ್
ಪುಷ್ಪಸಾಧಾರಣೆ ಕಾಲೇ ಪಿಕಃ ಕೂಜತಿ ಪಂಚಮಮ್
ಧೈವತಂ ಹೇಷತೇ ವಾಜೀ ನಿಷಾದಮ್ ಬೃಂಹತೇ ಗಜಃ ||


ಕಾಲಕ್ರಮೇಣ ಈ ಸ, ರಿ, ಗ, ಮ, ಪ, ದ, ನಿ ಎಂಬ ಸಪ್ತಸ್ವರಗಳ ಪೈಕಿ  ಷಡ್ಜ ಮತ್ತು ಪಂಚಮಗಳನ್ನು ಸ್ಥಿರವಾದ ಪ್ರಕೃತಿ ಸ್ವರಗಳೆಂದೂ ಉಳಿದ ರಿಷಭ, ಗಾಂಧಾರ, ಮಧ್ಯಮ, ಧೈವತ ಮತ್ತು ನಿಷಾದಗಳನ್ನು ಬದಲಾವಣೆ ಹೊಂದಬಹುದಾದ ವಿಕೃತಿ ಸ್ವರಗಳೆಂದೂ ವಿಂಗಡಿಸಲಾಯಿತು. ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ  ಈ ವಿಕೃತಿ ಸ್ವರಗಳಲ್ಲಿ ಮಧ್ಯಮವನ್ನು ಎರಡಾಗಿ ಹಾಗೂ ಉಳಿದವನ್ನು ಮೂರು ಮೂರಾಗಿ   ವಿಭಜಿಸಿ ಹನ್ನೆರಡು ಸ್ವರಸ್ಥಾನಗಳಲ್ಲಿ ಹದಿನಾರು ಸ್ವರಗಳನ್ನು ಕಲ್ಪಿಸಿ  ಇವುಗಳಿಗೆ ಸೂಕ್ತ ಹೆಸರುಗಳನ್ನು ನೀಡಲಾಯಿತು.  ವಿಕೃತಿ  ಸ್ವರಗಳನ್ನು ಹೆಸರುಗಳ ಬದಲಿಗೆ  ರಿ1, ರಿ2, ಗ2, ಗ3 ಹೀಗೆ ಸಂಖ್ಯೆಗಳ ಮೂಲಕವೂ ಗುರುತಿಸಲಾಗುತ್ತದೆ.  ಸ್ವರಲಿಪಿಯನ್ನು ಬರೆಯಲು ಸಂಖ್ಯೆಗಳ ಪದ್ಧತಿಯೇ ಅನುಕೂಲ.  12 ಸ್ಥಾನಗಳಲ್ಲಿ 16 ಸ್ವರಗಳು ಹೇಗೆ ಅಡಕವಾಗಿವೆ ಎನ್ನುವುದನ್ನು ಕೆಳಗಿನ ಪಟ್ಟಿಯಲ್ಲಿ  ನೋಡಬಹುದು.  ರಿ2 ಮತ್ತು ಗ1, ರಿ3 ಮತ್ತು ಗ2, ದ2 ಮತ್ತು ನಿ1 ಹಾಗೂ ದ3 ಮತ್ತು ನಿ2 ಒಂದೇ ಸ್ವರಸ್ಥಾನ ಹಂಚಿಕೊಂಡಿರುವುದನ್ನು ಗಮನಿಸಿ. ಸಂದರ್ಭಾನುಸಾರ ಈ 8 ಸ್ವರಗಳನ್ನು ವಿಭಿನ್ನವಾಗಿ ಗುರುತಿಸಲಾಗುತ್ತದೆ ಎಂದಷ್ಟೇ ಇದರ ಅರ್ಥ.  ಮುಂದೆ ಮೇಳಕರ್ತ ರಾಗಗಳ ಬಗ್ಗೆ ಚರ್ಚಿಸುವಾಗ ಇದು ಹೆಚ್ಚು ವಿಷದವಾಗುತ್ತದೆ.



ಹಿಂದುಸ್ಥಾನಿ ಸಂಗೀತದಲ್ಲೂ ಇದೇ ಪದ್ಧತಿಯನ್ನು ಅನುಸರಿಸಿದರೂ ಅಲ್ಲಿ ಸ್ವರಗಳ ಸಂಖ್ಯೆಯನ್ನು ಹನ್ನೆರಡು ಸ್ವರಸ್ಥಾನಗಳಿಗೆ ಸರಿಹೊಂದುವಂತೆ ಸೀಮಿತಗೊಳಿಸಿ ಕೊಂಚ ಭಿನ್ನವಾದ ಹೆಸರುಗಳನ್ನು ಕೊಡಲಾಯಿತು. ಇವುಗಳನ್ನು ನೆನಪಿಟ್ಟುಕೊಳ್ಳುವುದು ಸುಲಭ.  ಮಧ್ಯಮಕ್ಕೆ ಮಾತ್ರ ಕೆಳಗಿನ ಸ್ವರ ಶುದ್ಧ, ಮೇಲಿನದು ತೀವ್ರ.  ಉಳಿದವಕ್ಕೆಲ್ಲ ಕೆಳಗಿನ ಸ್ವರ ಕೋಮಲ, ಮೇಲಿನದು ಶುದ್ಧ.


ನಮ್ಮ ಸ, ರಿ, ಗ, ಮ, ಪ, ದ, ನಿಗಳನ್ನು C, D, E, F, G, A, Bಗೆ ಬದಲಾಯಿಸಿಕೊಂಡು ದೊ, ರೆ, ಮಿ, ಫಾ, ಸ, ಲಾ, ಟಿ ಎಂದು ಕರೆದ  ಪಾಶ್ಚಾತ್ಯ ಸಂಗೀತವೂ ಸ್ವರಗಳಿಗೆ flat, natural ಮತ್ತು  sharp ಎಂಬ suffixಗಳನ್ನು ಸೇರಿಸಿಕೊಂಡು 12  ಸ್ವರಗಳ ಕಲ್ಪನೆಯನ್ನು ತನ್ನದಾಗಿಸಿಕೊಂಡಿತು.  ಭಾರತದ ಕರ್ನಾಟಕಿ ಮತ್ತು ಹಿಂದುಸ್ತಾನಿ ಶೈಲಿಗಳಲ್ಲಿ ಸ್ವರಗಳ ವಿಭಜನೆ ಇತ್ಯಾದಿ ಕರಾರುವಾಕ್ಕಾಗಿದ್ದರೂ ಮೂಲ ಷಡ್ಜದ ಶ್ರುತಿಯನ್ನು ನಿಗದಿಪಡಿಸುವಲ್ಲಿ ಗೊಂದಲವಿತ್ತು. ಶ್ಲೋಕದಲ್ಲಿ ವಿವರಿಸಿದಂತೆ ಹಿಂದಿನ ಕಾಲದಲ್ಲಿ ಪ್ರಾಣಿ ಪಕ್ಷಿಗಳ ಧ್ವನಿಯನ್ನಾಧರಿಸಿ ಅಂದಾಜಿನ ಮೇಲೆ ಷಡ್ಜವನ್ನು ನಿರ್ಧರಿಸುತ್ತಿದ್ದರೋ ಏನೋ.   ಹಾರ್ಮೋನಿಯಮ್ ನಮ್ಮ ದೇಶಕ್ಕೆ ಕಾಲಿರಿಸಿದ ಮೇಲೆ ಅದರ ಬಿಳಿ, ಕಪ್ಪು ಪಟ್ಟಿಗಳ ಆಧಾರದ ಮೇಲೆ   ಶ್ರುತಿಯನ್ನು ನಿರ್ಧರಿಸಿ  ಮೊದಲ ಬಿಳಿ ಪಟ್ಟಿಯ ಶ್ರುತಿಗೆ ಬಿಳಿ ಒಂದು, ಎರಡನೇ ಬಿಳಿ ಪಟ್ಟಿಗೆ ಬಿಳಿ ಎರಡು,  ಒಂದು ಮತ್ತು ಎರಡನೇ ಬಿಳಿ ಪಟ್ಟಿಯ ನಡುವಿನ ಕಪ್ಪು ಪಟ್ಟಿಯ ಶ್ರುತಿಗೆ ಕಪ್ಪು ಒಂದು ಅಥವಾ ಒಂದೂವರೆ ಪಟ್ಟಿ ಹೀಗೆ ಗುರುತಿಸುವ ಪರಿಪಾಠ ಆರಂಭವಾಯಿತು.  ಆದರೆ ಇಲ್ಲೂ ಅನೇಕ ಸಲ ಹಾರ್ಮೋನಿಯಂನಿಂದ ಹಾರ್ಮೋನಿಯಂಗೆ  ಶ್ರುತಿಯಲ್ಲಿ ವ್ಯತ್ಯಾಸ ಇರುತ್ತಿತ್ತು.   ಹೀಗಾಗಿ ನಿಶ್ಚಿತ ಶ್ರುತಿಯ ಕೊಳಲಿನಂಥ ವಾದ್ಯಗಳನ್ನು ನುಡಿಸುವವರಿಗೆ ಸಮಸ್ಯೆಯುಂಟಾಗುತ್ತಿತ್ತು.  ಆಧಾರ ಶ್ರುತಿಗಳಲ್ಲಿ ಸಮಾನತೆ ಸಾಧಿಸುವ ಸಲುವಾಗಿ ಪಾಶ್ಚಾತ್ಯ ಸಂಗೀತದಲ್ಲಿ  ಪಿಯಾನೋದ 4ನೇ ಸಪ್ತಕದ 6ನೇ ಬಿಳಿ ಕೀ ಅಂದರೆ A(ದ2) ಸ್ವರದ ಕಂಪನಾಂಕ 440 Hz ಇರಬೇಕೆಂಬ ನಿಯಮ ಜಾರಿಗೊಳಿಸಲಾಗಿತ್ತು.  ಇದರ ಆಧಾರದ  ಮೇಲೆ ತಯಾರಾದ ಪಿಚ್ ಪೈಪುಗಳು ಸಿಗಲಾರಂಭಿಸಿದ ಮೇಲೆ ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ದೂರವಾಯಿತು.   ಈಗ ಬರುತ್ತಿರುವ ಬಹುತೇಕ ಇಲೆಕ್ಟ್ರಾನಿಕ್ ಶ್ರುತಿಪೆಟ್ಟಿಗೆಗಳು ಹಾಗೂ ಸಂಗೀತೋಪಕರಣಗಳು  ಈ A 440 Hz ಆಧಾರಿತ Stuttgart ಸ್ಟಾಂಡರ್ಡ್ ಶ್ರುತಿ ಹೊಂದಿರುತ್ತವೆ.


ಈಗಿನ ದಿನಗಳಲ್ಲಿ  ನಮ್ಮಲ್ಲೂ C, C#, G ಹೀಗೆ ಪಾಶ್ಚಾತ್ಯ notationಗಳ ರೂಪದಲ್ಲೂ ಶ್ರುತಿಯನ್ನು ಗುರುತಿಸುವುದಿದೆ.  ಉದಾಹರಣೆಗೆ ಯಾರಾದರೂ ‘ನಾನು G#(G sharp) ಶ್ರುತಿಯಲ್ಲಿ ಹಾಡುತ್ತೇನೆ’,  ಅಥವಾ ‘ನಾನು ಕಪ್ಪು 4ರಲ್ಲಿ ಹಾಡುತ್ತೇನೆ’, ಅಥವಾ ‘ನನ್ನ ಶ್ರುತಿ ಐದುವರೆ ಪಟ್ಟಿ’ ಎಂದು ಹೇಳಿದರೆ ಎಲ್ಲದರ ಅರ್ಥ ಒಂದೇ.  ಕಪ್ಪು ಕೀಗಳನ್ನು ಹಿಂದಿನ ಬಿಳಿ ಕೀಯ sharp ಅನ್ನುವ ಬದಲಾಗಿ ಮುಂದಿನ ಬಿಳಿ ಕೀಯ flat  ಎಂದು ಗುರುತಿಸುವ ಪದ್ಧತಿಯೂ ಇದೆ.  ಆದರೆ ನಮ್ಮಲ್ಲಿ ಈ ರೀತಿಯ ಬಳಕೆ ಕಮ್ಮಿ.  ಟಿ.ವಿ.ಯ ರಿಯಾಲಿಟಿ ಸಂಗೀತ ಕಾರ್ಯಕ್ರಮಗಳ ಕೆಲವು ನಿರ್ಣಾಯಕರು ಆಗಾಗ ‘ನೀವು flat ಹಾಡಿದ್ರಿ’, ‘ ನೀವು ಹಾಡಿದ್ದು ಕೆಲವು ಕಡೆ sharp ಆಗ್ತಿತ್ತು’ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ.  ಸ್ಪರ್ಧಿಗಳು ಕೆಲವು ಸಲ ಆಧಾರ ಶ್ರುತಿಗಿಂತ ಕೆಳಗೆ ಹಾಡಿದ ಹಾಗೆ,  ಕೆಲವು ಸಲ ಶ್ರುತಿ ಜಾಸ್ತಿ ಆದ ಹಾಗೆ ಅವರಿಗನ್ನಿಸಿತು ಎಂದು ಇದರರ್ಥ.


ವಿವಿಧ ರೀತಿಗಳಲ್ಲಿ ಸ್ವರಸ್ಥಾನಗಳನ್ನು ತೋರಿಸುವ ಈ ಹಾರ್ಮೋನಿಯಮ್ ರೀಡುಗಳ ಚಿತ್ರ ಸಾಂಕೇತಿಕ ಮಾತ್ರ.  ಭಾರತೀಯ ಪದ್ಧತಿಯಲ್ಲಿ Cಯೇ ಷಡ್ಜವಾಗಬೇಕೆಂದಿಲ್ಲ.  12 ಸ್ವರಗಳ ಪೈಕಿ  ಯಾವುದನ್ನಾದರೂ ಷಡ್ಜವಾಗಿಸಿಕೊಳ್ಳಬಹುದು. ಆಗ ಕೀ ನೊಟೇಶನ್  ಮತ್ತು ಸ್ವರಗಳ ನಂಟು ಬದಲಾಗುತ್ತದೆ.  ಕೆಳಗಿನ ಚಾರ್ಟ್ ಯಾವ ಕೀಯನ್ನು ಷಡ್ಜ ಮಾಡಿಕೊಂಡಾಗ ಯಾವ್ಯಾವ ಕೀಗಳು ಯಾವ್ಯಾವ ಸ್ವರಗಳಾಗುತ್ತವೆ ಎಂಬುದನ್ನು ತೋರಿಸುತ್ತದೆ.  ಯಾವ ಶ್ರುತಿಯ ಮಧ್ಯಮ, ಪಂಚಮಗಳು ಯಾವ ಶ್ರುತಿಯಾಗುತ್ತದೆ ಎಂದು ಸುಲಭವಾಗಿ ತಿಳಿಯಲು ಕೂಡ ಈ ಚಾರ್ಟ್ ಸಹಕಾರಿ.


ಈ ಕೆಳಗಿನ ತಖ್ತೆಯಲ್ಲಿ ಕರ್ನಾಟಕ, ಹಿಂದುಸ್ಥಾನಿ ಮತ್ತು ಪಾಶ್ಚಾತ್ಯ ಶೈಲಿಗಳಲ್ಲಿ  12 ಸ್ವರಸ್ಥಾನಗಳ ವಿವರಗಳನ್ನು  ನೋಡಬಹುದು.  ಗೊಂದಲ ಮೂಡಿಸಬಹುದಾದ ಕರ್ನಾಟಕ ಮತ್ತು ಹಿಂದುಸ್ತಾನಿ ಶೈಲಿಯ ಸ್ವರಗಳ ಹೆಸರುಗಳನ್ನೂ ಹೋಲಿಸಿ ನೋಡಬಹುದು.  ಶುದ್ಧ ರಿಷಭ, ಶುದ್ಧ ಗಾಂಧಾರ, ಶುದ್ಧ ಧೈವತ ಮತ್ತು ಶುದ್ಧ ನಿಷಾದ ಹೆಸರುಗಳು ಎರಡು ಪದ್ಧತಿಗಳಲ್ಲಿ ಬೇರೆ ಬೇರೆ ಸ್ವರಸ್ಥಾನಗಳನ್ನು ಸೂಚಿಸುವುದು ಗಮನಿಸಬೇಕಾದ ಅಂಶ.


ಮೇಲಿನ ಪಟ್ಟಿಯಲ್ಲಿ  ಪಿಯಾನೋ ಕೀ ಬೋರ್ಡಿನ ಮಧ್ಯ ಅಂದರೆ 4ನೇ ಸಪ್ತಕದ ಎಲ್ಲ ಸ್ವರಗಳ ಕಂಪನಾಂಕಗಳನ್ನೂ ನೋಡಬಹುದು. ಗಂಡು ಧ್ವನಿ, ಹೆಣ್ಣು ಧ್ವನಿ ಹಾಗೂ ಬೇರೆ ಬೇರೆ ಸಂಗೀತೋಪಕರಣಗಳ ಅದೇ ಶ್ರುತಿಯ ಫ್ರೀಕ್ವೆನ್ಸಿಗಳು ಇದಕ್ಕಿಂತ ಹೆಚ್ಚು ಅಥವಾ ಕಮ್ಮಿ ಆದರೆ ಇದರ ಗುಣಕಗಳಾಗಿ ಇರುತ್ತವೆ. ಜೇಸುದಾಸ್ ಅವರಂಥ ಮಂದ್ರ ಧ್ವನಿಯ ಗಾಯಕರ ಧ್ವನಿ 2ನೇ ಸಪ್ತಕದ ಫ್ರೀಕ್ವೆನ್ಸಿ ಹೊಂದಿರಬಹುದು.  ಪಿ.ಸುಶೀಲಾ ಅವರಂಥ ಗಾಯಕಿಯ ಏರುದನಿ 3ನೇ ಸಪ್ತಕದಲ್ಲಿರಬಹುದು. ಹರಿಪ್ರಸಾದ್ ಚೌರಾಸಿಯಾ ಕಾರ್ಯಕ್ರಮದ ಕೊನೆಯಲ್ಲಿ ನುಡಿಸುವ ಪೆನ್ನಿನಂಥ ಕೊಳಲಿನ ದನಿಯ ಕಂಪನಾಂಕ  6ನೇ ಸಪ್ತಕದ್ದಾಗಿರಬಹುದು.  ನಮ್ಮ ಕಿವಿಗೆ ಸಂಗೀತವಾಗಿ ಕೇಳಬಹುದಾದ ಸೊನ್ನೆಯಿಂದ ಎಂಟರವರೆಗಿನ 9 ಸಪ್ತಕಗಳ ಕಂಪನಾಂಕಗಳನ್ನು ತೋರಿಸುವ ಕೆಳಗಿನ  ಚಾರ್ಟಿನಲ್ಲಿ ಸಪ್ತಕದಿಂದ ಸಪ್ತಕಕ್ಕೆ ಪ್ರತೀ ಸ್ವರದ ಕಂಪನಾಂಕ ದ್ವಿಗುಣಗೊಳ್ಳುವುದನ್ನು ಕಾಣಬಹುದು. ಎರಡು ಸ್ವರಸ್ಥಾನಗಳ ಮಧ್ಯದ ಕಂಪನಾಂಕಗಳನ್ನು ಇನ್ನಷ್ಟು ವಿಭಜಿಸಿದರೆ ಈಗಿನ 12ಕ್ಕಿಂತ ಹೆಚ್ಚು ಸ್ವರಗಳನ್ನು ಪಡೆಯಲು ಸಾಧ್ಯವಿದ್ದು ಅರೇಬಿಕ್ ಸಂಗೀತದಲ್ಲಿ ಈ ರೀತಿಯ ಬಳಕೆ ಇದೆ.


ನಾನು ಧ್ವನಿಮುದ್ರಿಸಿಕೊಂಡಿದ್ದ ಕೋಗಿಲೆ ಧ್ವನಿಯ ಸ್ಯಾಂಪಲ್ ಒಂದನ್ನು ಕಂಪ್ಯೂಟರಿನಲ್ಲಿ ವಿಶ್ಲೇಷಿಸಿದಾಗ ಅದರ ಕಂಪನಾಂಕ  1582.5 Hz ಆಗಿರುವುದು ಕಂಡು ಬಂತು. ಇದು 1567.98 Hz ಅಂದರೆ 6ನೇ ಸಪ್ತಕದ ಬಿಳಿ ಒಂದು ಶ್ರುತಿಯ ಪಂಚಮಕ್ಕೆ ಅತಿ ಸಮೀಪದಲ್ಲಿದೆ!  ನಮ್ಮ ಪೂರ್ವಜರ ಗ್ರಹಿಕೆಗಳು ಕೇವಲ ಕಲ್ಪನೆಗಳಲ್ಲ ಎಂಬುದಕ್ಕೆ ಇದು ಪುರಾವೆ.



‘ಏಳು ಸ್ವರವು ಸೇರಿ ಸಂಗೀತವಾಯಿತು’ ಎಂದು ಹಾಡಿನಲ್ಲಿ ಹೇಳಲಾಗಿದ್ದರೂ ವಾಸ್ತವದಲ್ಲಿ ಬರೇ ಏಳೋ, ಹನ್ನೆರಡೋ ಸ್ವರಗಳು ಇದ್ದ ಮಾತ್ರಕ್ಕೆ ಅವುಗಳಿಂದ ಸಂಗೀತ  ಸಿಗದು. ಉಪ್ಪು, ಮೆಣಸು, ಜೀರಿಗೆ, ಕೊತ್ತಂಬರಿ ಇತ್ಯಾದಿಗಳನ್ನು ನಿಗದಿತ ಪ್ರಮಾಣದಲ್ಲಿ ಬೆರೆಸಿದರೆ ಮಾತ್ರ ಹೇಗೆ  ರುಚಿಕರವಾದ ವೈವಿಧ್ಯಮಯ    ಅಡುಗೆಯಾಗುತ್ತದೆಯೋ ಹಾಗೆಯೇ ಈ ಸ್ವರಗಳನ್ನು ವಿವಿಧ ಪರ್ಮುಟೇಶನ್ ಕಾಂಬಿನೇಶನ್‍ಗಳಲ್ಲಿ ಸಂಯೋಜಿಸಿದರಷ್ಟೇ ಮಧುರ ನಾದ ಹೊಮ್ಮೀತು. ಈ ರೀತಿ 12 ಸ್ಥಾನಗಳ ಸ್ವರಗಳನ್ನು ಬೇರೆ ಬೇರೆ ರೀತಿಯ 7 ಸ್ವರಗಳ ಆರೋಹಣ ಮತ್ತು ಅವರೋಹಣ ಉಳ್ಳ ಗುಂಪುಗಳನ್ನಾಗಿಸಿ   ಅವುಗಳಿಗೊಂದು ಹೆಸರು ಕೊಟ್ಟು ರಾಗ ಎಂದು ಗುರುತಿಸುವ ಪರಿಪಾಠ ಬೆಳೆದು ಬಂದಿರಬಹುದು.  ಕರ್ನಾಟಕ ಸಂಗೀತ ಶೈಲಿಯಲ್ಲಿ 12 ಸ್ಥಾನಗಳಲ್ಲಿರುವ 16 ಸ್ವರಗಳನ್ನು ಬಳಸಿ ಮ1 ಹೊಂದಿರುವ 36 ಹಾಗೂ ಮ2 ಹೊಂದಿರುವ 36 ಹೀಗೆ ಒಟ್ಟು 72 ಸಂಪೂರ್ಣ ರಾಗಗಳನ್ನು ಅಂದರೆ ಆರೋಹಣದಲ್ಲಿ ಸ,ರಿ,ಗ,ಮ,ಪ,ದ,ನಿ,ಸ ಹಾಗೂ ಅವರೋಹಣದಲ್ಲಿ ಸ,ನಿ,ದ,ಪ,ಮ,ಗ,ರಿ,ಸ ಇರುವಂಥವುಗಳನ್ನು ಗುರುತಿಸಿ ಅವುಗಳನ್ನು ಮೇಳಕರ್ತ ರಾಗಗಳು ಎಂದು  ಹೆಸರಿಸಲಾಯಿತು.  12 ಸ್ಥಾನಗಳಲ್ಲಿರುವ 16 ಸ್ವರಗಳಿಗೂ ಈ 72 ಎಂಬ ಸಂಖ್ಯೆಗೂ ಇರುವ ನಂಟನ್ನು  ಈ ಕೆಳಗಿನಂತೆ ಅರ್ಥಮಾಡಿಕೊಳ್ಳಬಹುದು.


ಈಗ ಮ1 ಹೊಂದಿರುವ ಕಾಂಬಿನೇಶನ್ನಿನ ಪೂರ್ವಾರ್ಧವನ್ನು ಗಮನಿಸೋಣ.  ಮೇಲಿನ ತಖ್ತೆಯಂತೆ ಒಟ್ಟು 9 ರೀತಿಯಲ್ಲಿ ಸ,ರಿ,ಗ ಸ್ವರಗಳನ್ನು ಸಂಯೋಜಿಸಬಹುದು.  ರಿ2, ಗ1 ಹಾಗೂ ರಿ3, ಗ2 ಇವು ಒಂದೇ ಸ್ವರಸ್ಥಾನವನ್ನು ಹಂಚಿಕೊಂಡವುಗಳಾಗಿರುವುದರಿಂದ ಹಾಗೂ ರಿ3, ಗ1 ಆರೋಹಣ ಕ್ರಮದಲ್ಲಿಲ್ಲದಿರುವುದರಿಂದ ಕೆಂಪು ಹಿನ್ನೆಲೆಯುಳ್ಳ 3 ಸಾಲುಗಳು ಲೆಕ್ಕಕ್ಕಿಲ್ಲ. ಹೀಗೆ 9ರ ಪೈಕಿ 6 ಕಾಂಬಿನೇಶನುಗಳು ಮಾತ್ರ ಉಳಿಯುತ್ತವೆ.  ಇದೇ ರೀತಿ ಉತ್ತರಾರ್ಧ ಪ,ದ,ನಿ ಸಂಯೋಜನೆಯಲ್ಲೂ 6 ಯೋಗ್ಯ ಕಾಂಬಿನೇಶನುಗಳು ಸಿಗುತ್ತವೆ.  ಪೂರ್ವಾರ್ಧದ 6 ಮತ್ತು ಉತ್ತರಾರ್ಧದ 6 ಕಾಂಬಿನೇಶನುಗಳ ಸಂಯೋಜನೆಯಿಂದ 6 x 6 = 36 ಸ,ರಿ,ಗ,ಮ,ಪ,ದ,ನಿ,ಸ ಸ್ವರಗಳುಳ್ಳ ರಾಗಗಳು ಸಿಗುತ್ತವೆ.  ಮ1 ಸ್ವರವನ್ನು ಮ2 ಆಗಿ ಬದಲಾಯಿಸಿದಾಗ ಮತ್ತೆ 36 ಕಾಂಬಿನೇಶನುಗಳು ಸಿಕ್ಕಿ ಒಟ್ಟು 36 + 36 =  72 ಮೇಳಕರ್ತ ರಾಗಗಳಾಗುತ್ತವೆ.



ಮೇಳಕರ್ತ ರಾಗಗಳ ಕೋಷ್ಟಕವನ್ನು ವಿವಿಧ ರೀತಿ ಪ್ರಸ್ತುತಪಡಿಸಲಾಗುತ್ತಿದ್ದು ಇದು ನಾನು ಮರುವಿನ್ಯಾಸಗೊಳಿಸಿದ ಅದರ ಒಂದು ಸರಳ ಸುಲಭ ರೂಪ. ಪ್ರಕೃತಿ ಸ್ವರಗಳಾದ ಸ ಮತ್ತು ಪ ಎಲ್ಲ ಮೇಳಕರ್ತ ರಾಗಗಳ ಅವಿಭಾಜ್ಯ ಅಂಗಗಳಾಗಿದ್ದು ಅವುಗಳನ್ನು ಇಲ್ಲಿ ತೋರಿಸಲಾಗಿಲ್ಲ. ಬೇಕಿದ್ದ ರಿ, ಗ ಮತ್ತು ಮ ಸ್ವರಗಳನ್ನು ಹೊಂದಿದ ಅಡ್ಡ ಸಾಲು ಹಾಗೂ  ದ ಮತ್ತು ನಿ ಸ್ವರಗಳನ್ನು ಹೊಂದಿರುವ ನೀಟ ಸಾಲು ಒಂದನ್ನೊಂದು ಸೇರುವಲ್ಲಿ ಆ  ಸ್ವರಗಳ ಮೇಳೈಸುವಿಕೆಯಿಂದ ಉಂಟಾಗುವ  ರಾಗದ ಸಂಖ್ಯೆ ಮತ್ತು ಹೆಸರು ದೊರೆಯುತ್ತದೆ.  ಉದಾಹರಣೆಗೆ  ರಿ2,  ಗ2 ಮತ್ತು ಮ1 ಉಳ್ಳ ಅಡ್ಡ ಸಾಲು ಮತ್ತು   ದ1  ಮತ್ತು   ನಿ2 ಉಳ್ಳ ನೀಟ ಸಾಲುಗಳು ಒಂದನ್ನೊಂದು ಸೇರುವಲ್ಲಿ ಸ,  ರಿ2,  ಗ2,  ಮ1,  ಪ,  ದ1,  ನಿ2, ಸ  ಸ್ವರಗಳನ್ನು ಹೊಂದಿದ  20ನೇ ಮೇಳಕರ್ತ ನಠಭೈರವಿ  ರಾಗ ಸಿಗುತ್ತದೆ.  ಅಥವಾ ರಿ2,  ಗ2 ಮತ್ತು ಮ2 ಉಳ್ಳ ಅಡ್ಡ ಸಾಲು ಮತ್ತು   ದ1  ಮತ್ತು   ನಿ3 ಉಳ್ಳ ನೀಟ ಸಾಲುಗಳು ಒಂದನ್ನೊಂದು ಸೇರುವಲ್ಲಿ ಸ,  ರಿ2,  ಗ2,  ಮ2,  ಪ,  ದ1,  ನಿ3, ಸ  ಸ್ವರಗಳನ್ನು ಹೊಂದಿದ  57ನೇ ಮೇಳಕರ್ತ ಸಿಂಹೇಂದ್ರಮಧ್ಯಮ  ರಾಗ ಸಿಗುತ್ತದೆ. ಈ ಪ್ರಕ್ರಿಯೆಯನ್ನು ತಿರುವು ಮುರುವುಗೊಳಿಸಿದರೆ ಯಾವುದೇ ರಾಗದ ಸ್ವರಗಳನ್ನು ಪಡೆಯಬಹುದು. ಉದಾಹರಣೆಗೆ  22ನೇ ಮೇಳಕರ್ತ ಖರಹರಪ್ರಿಯ  ರಾಗದ ಹೆಸರಿರುವ ಅಡ್ಡ ಸಾಲಿನ ಎಡ ತುದಿಯಲ್ಲಿ   ರಿ2  ಗ2 ಮತ್ತು  ಮ1 ಹಾಗೂ ನೀಟ ಸಾಲಿನ  ಮೇಲ್ತುದಿಯಲ್ಲಿ ದ2,  ನಿ2  ದೊರೆತು ಆ ರಾಗದ ಸ್ವರಗಳು ಸ,  ರಿ2,  ಗ2,  ಮ1,  ಪ,  ದ2,  ನಿ2,  ಸ  ಎಂದು ತಿಳಿಯುತ್ತದೆ.

ಈ 72 ರಾಗಗಳನ್ನು   12 ಚಕ್ರಗಳಾಗಿ  ವಿಂಗಡಿಸಿ ಅವುಗಳಿಗೆ ಇಂದು, ನೇತ್ರ, ಅಗ್ನಿ, ವೇದ, ಬಾಣ, ಋತು, ಋಷಿ, ವಸು, ಬ್ರಹ್ಮ, , ದಿಶಿ, ರುದ್ರ, ಆದಿತ್ಯ ಎಂಬ  ಸಂಖ್ಯಾಸೂಚಕ ಹೆಸರುಗಳನ್ನು ಕೊಡಲಾಗಿದೆ. ಹಣ್ಣಿನ ಮಧ್ಯ ಭಾಗವು ಹೆಚ್ಚು ಸಿಹಿಯಾಗಿರುವಂತೆ ಇಲ್ಲಿಯೂ ಕೋಷ್ಟಕದ ಮಧ್ಯಭಾಗದಲ್ಲೇ ಅನೇಕ ಜನಪ್ರಿಯ ಮಧುರ ರಾಗಗಳಿರುವುದನ್ನು ಗಮನಿಸಬಹುದು.

ಮೇಲೆ, ಕೆಳಗೆ, ಎಡ ಅಥವಾ ಬಲಕ್ಕೆ scroll ಮಾಡಿದಾಗಲೂ ಸುಲಭವಾಗಿ ಈ ಕೋಷ್ಟಕವನ್ನು ಉಪಯೋಗಿಸಲಾಗುವಂತೆ ರಿ, ಗ, ಮ ಸ್ವರಗಳನ್ನು ಎಡ ತುದಿ ಮತ್ತು ಬಲ ತುದಿ, ದ ಮತ್ತು ನಿ ಸ್ವರಗಳನ್ನು ಮೇಲ್ತುದಿ ಮತ್ತು ಕೆಳ ತುದಿ ಎರಡೂ ಕಡೆ ತೋರಿಸಲಾಗಿದೆ.

ಪದಪುಂಜಗಳಷ್ಟು ಸುಲಭವಾಗಿ ಅಂಕೆ ಸಂಖ್ಯೆಗಳನ್ನು  ನೆನಪಿಡಲಾಗದಿರುವುದು ಮಾನವನ ದೌರ್ಬಲ್ಯ. ಈಗಲೂ ಅಂತರ್ಜಾಲದಲ್ಲಿ  172.217.26.197 ಎಂಬ ವಿಳಾಸದ ತಾಣಕ್ಕೆ ಹೋಗಲು  ಚಿಕ್ಕದಾಗಿ gmail.com, ಅಥವಾ 157.240.13.35 ಎಂಬ ವಿಳಾಸಕ್ಕೆ ಹೋಗಲು facebook.com ಎಂಬ ನೆನಪಿಡಲು ಸುಲಭವಾದ ಪದಗಳನ್ನಷ್ಟೇ ಟೈಪಿಸಬೇಕಾದ ವ್ಯವಸ್ಥೆ ಮಾಡಿ ಕೊಟ್ಟಿರುವುದು ಈ ಕಾರಣಕ್ಕಾಗಿಯೇ.  ಆದರೆ  ಮೇಳಕರ್ತ ರಾಗಗಳ ಕೋಷ್ಟಕದಲ್ಲಿ ಅವುಗಳಿಗೆ ಆಕರ್ಷಕ  ಹೆಸರುಗಳನ್ನು ನೀಡುವುದು ಮಾತ್ರವಲ್ಲ, ಕಟಪಯಾದಿ ಸೂತ್ರವನ್ನು ಬಳಸಿ ಸಂಖ್ಯೆ ಮತ್ತು ಹೆಸರುಗಳ ನಡುವೆ  ವಿಶಿಷ್ಟ ಸಂಬಂಧವೂ ಇರುವಂತೆ ಮಾಡಲಾಗಿದೆ.


ಕಟಪಯಾದಿ ಸೂತ್ರದಲ್ಲಿ ಮೇಲೆ ತೋರಿಸಿದಂತೆ ಕ ದಿಂದ ಹ ವರೆಗಿನ ವ್ಯಂಜನಳು 1 ರಿಂದ 0 ವರೆಗಿನ ಬೆಲೆಯನ್ನು ಹೊಂದುತ್ತವೆ.  ಒಂದನೇ ನೀಟ ಸಾಲಿನ ಎಲ್ಲ ವ್ಯಂಜನಗಳು 1, ಎರಡನೇ ಸಾಲಿನಲ್ಲಿರುವವು 2,  ಕೊನೆಯ ಸಾಲಿನವು 0 ಹೀಗೆ ಅಂಕೆಗಳಿಂದ ಗುರುತಿಸಲ್ಪಡುತ್ತವೆ.  ಈಗ ಮೇಳಕರ್ತ ಕೋಷ್ಟಕದ ಮಾಯಾಮಾಳವಗೌಳ ರಾಗವನ್ನು ತೆಗೆದುಕೊಂಡರೆ ಅದರ ಮೊದಲ ಎರಡು ವ್ಯಂಜನಗಳು ಮ ಮತ್ತು ಯ.  ಕಟಪಯಾದಿ ಸೂತ್ರದಂತೆ ಮ ಅಂದರೆ 5  ಮತ್ತು ಯ ಅಂದರೆ 1. ಇವುಗಳನ್ನು ಜೊತೆಗೂಡಿಸಿದರೆ 51.  ಇದನ್ನು ತಿರುವು ಮುರುವು ಮಾಡಿದಾಗ ಸಿಗುವ 15 ಈ ರಾಗದ ಮೇಳಕರ್ತ ಸಂಖ್ಯೆ ಆಗಿರುತ್ತದೆ.  ಇನ್ನೊಂದು ಉದಾಹರಣೆಯಾಗಿ ಹರಿಕಾಂಭೋಜಿಯ ಮೊದಲೆರಡು ವ್ಯಂಜನಗಳು ಹ ಮತ್ತು ರ.  ಅವುಗಳ ಅಂಕೆಗಳು 8 ಮತ್ತು 2. ಜೊತೆಗೂಡಿಸಿದಾಗ 82. ತಿರುವು ಮುರುವು ಮಾಡಿದಾಗ  ಆ ರಾಗದ ಮೇಳಕರ್ತ ಸಂಖ್ಯೆ 28 ಸಿಗುತ್ತದೆ.  ಈ ರೀತಿ ಎಲ್ಲ 72  ರಾಗಗಳ ಹೆಸರಿನಿಂದಲೇ   ಅವುಗಳ ಮೇಳಕರ್ತ ಸಂಖ್ಯೆಯನ್ನು  ಸುಲಭವಾಗಿ ತಿಳಿಯಬಹುದು.    ಪದಗಳನ್ನು ಸಂಖ್ಯೆಗಳೊಂದಿಗೆ ಬೆಸೆಯುವ ಇನ್ನೂ ಇಂತಹ ಎಷ್ಟೋ ಚಮತ್ಕಾರಗಳಿಗೆ ಕಟಪಯಾದಿ ಸೂತ್ರವನ್ನು ಬಳಸಲಾಗಿದೆ.

ಹಿಂದುಸ್ಥಾನಿ ಪದ್ಧತಿಯಲ್ಲಿ ಈ ರೀತಿ 72 ಮೇಳಕರ್ತ ರಾಗಗಳ ಕಲ್ಪನೆ ಇಲ್ಲ.  ಅಲ್ಲಿ 10 ಮುಖ್ಯ ಥಾಟ್‍ಗಳಿದ್ದು ಅವುಗಳಿಂದಲೇ  ನೂರಾರು ರಾಗಗಳು ಜನ್ಮತಾಳಿವೆ. 


72 ಮೇಳಕರ್ತ ರಾಗಗಳ ಸೂಚಿಯಲ್ಲಿ ಮೋಹನ, ಹಿಂದೋಳ, ಹಂಸಧ್ವನಿ, ಅಭೇರಿಯಂಥ ಅನೇಕ ಜನಪ್ರಿಯ ರಾಗಗಳೇ ಇಲ್ಲವಲ್ಲ ಎಂದು ಕೆಲವರಿಗೆ ಅನ್ನಿಸಿರಬಹುದು.  ಅವುಗಳು ಆರೋಹಣ ಅವರೋಹಣದಲ್ಲಿ ಎಲ್ಲ ಸ್ವರಗಳನ್ನು ಏಕರೂಪದಲ್ಲಿ ಹೊಂದಿದವುಗಳಾಗಿರದೆ ಯಾವುದೋ ಮೇಳಕರ್ತ ರಾಗದ ಕೆಲವು ಲಕ್ಷಣಗಳನ್ನು ಹೊಂದಿದ  ಜನ್ಯ ರಾಗಗಳಾಗಿರುವುದೇ ಇದಕ್ಕೆ ಕಾರಣ.  ಪಟ್ಟಿ ಮಾಡಲು ಸಾಧ್ಯವಾಗದಷ್ಟು ದೊಡ್ಡ ಸಂಖ್ಯೆಯ ಇಂತಹ ಜನ್ಯ ರಾಗಗಳಿವೆ. ಮೇಳಕರ್ತ ಇರಲಿ, ಜನ್ಯ ಇರಲಿ ಬರೇ ಆರೋಹಣ ಅವರೋಹಣದಿಂದ ರಾಗ ಆಗುವುದಿಲ್ಲ.  ಉಪಯೋಗಿಸುವ ಗಮಕಗಳು, ಚಲನ, ವಿಶಿಷ್ಟ ಸ್ವರಪುಂಜಗಳು ಇವೆಲ್ಲ ಮೇಳೈಸಿದರೆ ಮಾತ್ರ  ಯಾವುದೇ ರಾಗದ ಸ್ವರೂಪ ಹೊಮ್ಮುತ್ತದೆ. ಉದಾಹರಣೆಗೆ ಮೋಹನ ರಾಗದ ಸ್ವರಗಳು  ಸ ರಿ2 ಗ2 ಪ ದ2 ಸ ಎಂದಿದ್ದರೂ ನುಡಿಸುವಾಗ ಅಥವಾ ಹಾಡುವಾಗ ಅದು ಸ ಗರಿ ಗ ಪ ಸದ ಸ ಎಂದು ಗಮಕಯುಕ್ತವಾಗುತ್ತದೆ. ಒಂದೇ ಆರೋಹಣ ಅವರೋಹಣ ಹೊಂದಿಯೂ ಚಲನದಲ್ಲಿ ವ್ಯತ್ಯಾಸ ಹೊಂದಿ ಬೇರೆ ಬೇರೆ ಹೆಸರಿನಿಂದ ಗುರುತಿಸಲ್ಪಡುವ ರಾಗಗಳೂ ಇವೆ.

ಶಾಸ್ತ್ರೀಯ ರಚನೆಗಳಲ್ಲಾಗಲಿ, ಲಘು ಶೈಲಿಯ ಹಾಡುಗಳಲ್ಲಾಗಲಿ ಸ್ವರಸ್ಥಾನಗಳು ಸ ರಿ ಗ ಮ ಪ ದ ನಿ  ಸ್ವರಗಳನ್ನೊಳಗೊಂಡ ಮಧ್ಯ ಸಪ್ತಕಕಷ್ಟೇ  ಸೀಮಿತವಾಗಿರುವುದಿಲ್ಲ. ಮಧ್ಯ ಸಪ್ತಕದ ಕೆಳಗಿನ ಮಂದ್ರ ಸಪ್ತಕದ ಮ ವರೆಗೆ, ಮೇಲಿನ ತಾರ ಸಪ್ತಕದ ಪ ವರೆಗೆ ಇವುಗಳ ಹರಹು ಇರುತ್ತದೆ.  ಹೀಗಾಗಿ ಹಾಡುಗಾರರು ಈ ವ್ಯಾಪ್ತಿಯಲ್ಲಿ ಸುಲಲಿತವಾಗಿ ಸಂಚರಿಸಬೇಕಾದರೆ ಸೂಕ್ತ ಆಧಾರ ಶ್ರುತಿಯನ್ನು ಆಯ್ದುಕೊಳ್ಳಬೇಕಾಗುತ್ತದೆ.  ಹೆಚ್ಚಾಗಿ ಪುರುಷರು C ಅರ್ಥಾತ್ ಬಿಳಿ ಒಂದರ ಆಸುಪಾಸಿನ  ಶ್ರುತಿಯನ್ನು ಆಯ್ದುಕೊಳ್ಳುತ್ತಾರೆ.  ಸ್ತ್ರೀಯರಿಗೆ ಸಾಮಾನ್ಯವಾಗಿ G  ಅಂದರೆ ಬಿಳಿ 5ರ ಸಮೀಪದ ಶ್ರುತಿ ಅನುಕೂಲವಾಗಿರುತ್ತದೆ.  ಇದನ್ನು ಗಮನದಲ್ಲಿರಿಸದೆ ಯಾವುದೋ ಶ್ರುತಿಯನ್ನು ಆಯ್ದುಕೊಂಡರೆ ಒಂದೋ ತಾರ ಸಪ್ತಕದಲ್ಲಿ ತೊಂದರೆ ಎದುರಾಗುತ್ತದೆ ಇಲ್ಲವೇ ಮಂದ್ರ ಸಪ್ತಕದ ಚಲನೆ ಸುಲಲಿತವಾಗುವುದಿಲ್ಲ. ತೆಂಕು ತಿಟ್ಟು ಯಕ್ಷಗಾನದ ಭಾಗವತರು ಹೆಚ್ಚಾಗಿ ಬಿಳಿ ನಾಲ್ಕು ಹಾಗೂ ಬಡಗು ತಿಟ್ಟಿನ ಭಾಗವತರು ಕಪ್ಪು ಎರಡರ ಶ್ರುತಿ ಆಯ್ದುಕೊಳ್ಳುತ್ತಾರೆ.  ಆಯಾ ತಿಟ್ಟಿನ ಚಂಡೆ ಮದ್ದಳೆಗಳೊಂದಿಗೆ  ಸಮನ್ವಯ  ಸಾಧಿಸಿ ರಸಾನುಭೂತಿ ಉಂಟುಮಾಡಲು ಹಾಗೂ ಯಕ್ಷಗಾನಕ್ಕೆ ಬೇಕಾದ ಉಠಾವ್ ಸಿಗಲು ಈ ಶ್ರುತಿಗಳು ಸೂಕ್ತವಾದವು ಎಂದು ಅನುಭವಿಗಳ ಅಂಬೋಣ. ಆದರೆ ಲಘು ಅಥವಾ ಚಿತ್ರಸಂಗೀತ ಕ್ಷೇತ್ರದಲ್ಲಿ ಗಂಡು ಹೆಣ್ಣು ಜೊತೆಯಾಗಿ ಹಾಡುವ ಸಂದರ್ಭಗಳು ಹೆಚ್ಚಾಗಿರುವುದರಿಂದ ಯಾವುದೇ ಶ್ರುತಿಯಲ್ಲಿ  ಮಂದ್ರ, ಮಧ್ಯ, ತಾರ ಸಪ್ತಕಗಳನ್ನು ಸುಲಲಿತವಾಗಿ  ನಿಭಾಯಿಸಬಲ್ಲವರು  ಮಾತ್ರ ಇಲ್ಲಿ ಮಿಂಚುತ್ತಾರೆ.  ಈ ನಿಟ್ಟಿನಲ್ಲಿ ಮಹಮ್ಮದ್ ರಫಿ ಅವರಿಗೆ ಸರಿ ಸಾಟಿ  ಯಾರೂ ಇಲ್ಲ.  ಅವರು ಸಹಗಾಯಕಿಗೆ ಸೂಕ್ತವಾದ ಯಾವುದೇ ಶ್ರುತಿಯಲ್ಲೂ ತಾರ ಸಪ್ತಕದಲ್ಲಿ ಕಿರುಚಿದಂತಾಗದೆ, ಮಂದ್ರದಲ್ಲಿ ವಾಕರಿಸಿದಂತಾಗದೆ ಲೀಲಾಜಾಲವಾಗಿ ಹಾಡಬಲ್ಲವರಾಗಿದ್ದರು.

ಕೊಳಲು, ನಾಗಸ್ವರ, ಕ್ಲಾರಿನೆಟ್, ಸಾಕ್ಸೋಫೋನ್ ಮುಂತಾದ ಸುಷಿರ ವಾದ್ಯಗಳ  ಶ್ರುತಿ ಬದಲಾಯಿಸಲಾಗುವುದಿಲ್ಲ.  ಅದಕ್ಕೇ ಕೊಳಲು ವಾದಕರು ಒಂದು ಚೀಲ ತುಂಬಾ ವಿವಿಧ ಶ್ರುತಿಗಳ ಕೊಳಲುಗಳನ್ನಿಟ್ಟುಕೊಂಡಿರುವುದನ್ನು ನೋಡುತ್ತೇವೆ. ವಯಲಿನ್, ವೀಣೆ, ಸಿತಾರ್, ಸರೋದ್, ಸಾರಂಗಿ ಮುಂತಾದ ತಂತಿ ವಾದ್ಯಗಳನ್ನು ಯಾವ ಶ್ರುತಿಗೂ ಹೊಂದಿಸಬಹುದು. ಆದರೂ ಈ ಎಲ್ಲ ವಾದ್ಯಗಳು ಒಂದು ನಿರ್ದಿಷ್ಟ ಶ್ರುತಿ ಸೀಮೆಯೊಳಗೆ ಹೆಚ್ಚು ಇಂಪಾಗಿ ನುಡಿಯುತ್ತವೆ.  ಸಿತಾರ್ ವಾದ್ಯದಲ್ಲಿ ನುಡಿಸುವ ಥಾಟ್‍ಗೆ ತಕ್ಕಂತೆ ತಂತಿಯನ್ನು ಬೆರಳಿನಿಂದ ಒತ್ತಿದಾಗ ಆಧರಿಸುವ ರಚನೆ ಅಂದರೆ ‘ಪರದೆ’ಗಳನ್ನು ಅಚೀಚೆ ಸರಿಸಿ ಹೊಂದಿಸಬೇಕಾಗುತ್ತದೆ.    ಚರ್ಮವಾದ್ಯಗಳ ಶ್ರುತಿಯನ್ನು ಅಗತ್ಯ ಬಿದ್ದಾಗ ಒಂದು ಅರ್ಧ ಕಟ್ಟೆಯಷ್ಟು ಮಾತ್ರ ಏರಿಳಿಸಬಹುದು.  ಹೀಗಾಗಿ ಬೇರೆ ಬೇರೆ ಶ್ರುತಿಯ  ಮೃದಂಗ, ತಬ್ಲಾಗಳನ್ನು   ಇವುಗಳ ವಾದಕರು ಇಟ್ಟುಕೊಳ್ಳಬೇಕಾಗುತ್ತದೆ. ಕೆಲವು ಸಲ ಹೊಂದಾಣಿಕೆ ಮಾಡಿಕೊಂಡು ಮಧ್ಯಮ ಅಥವಾ ಪಂಚಮ ಶ್ರುತಿಯ ತಾಳವಾದ್ಯಗಳನ್ನು ಉಪಯೋಗಿಸುವವರೂ ಇದ್ದಾರೆ. ಹೀಗೇ ಮಾಡಿದಾಗ ಆ ಸ್ವರಗಳಿಲ್ಲದ ರಾಗಗಳ ಸಂದರ್ಭದಲ್ಲಿ ಎಡವಟ್ಟಾಗುತ್ತದೆ.. ತವಿಲ್ ಅಥವಾ ಡೋಲಿಗೆ ಶ್ರುತಿಯ ಹಂಗಿಲ್ಲ. ಹಾರ್ಮೋನಿಯಮ್‍ ಕೂಡ ಏಕ ಶ್ರುತಿಯ ವಾದ್ಯವಾಗಿದ್ದರೂ ಇದನ್ನು ನುಡಿಸುವ ಬಹುತೇಕ ಎಲ್ಲರೂ ಯಾವ ಪಟ್ಟಿಯನ್ನಾದರೂ ಆಧಾರ ಶ್ರುತಿಯಾಗಿಟ್ಟುಕೊಂಡು ನುಡಿಸಬಲ್ಲ ಪರಿಣತರಾಗಿರುತ್ತಾರೆ. ಆಧುನಿಕ ಕೀ ಬೋರ್ಡುಗಳಲ್ಲಿ ಯಾವುದೇ ಕೀಯನ್ನು ಯಾವುದೇ ಆಧಾರ ಷಡ್ಜಕ್ಕೆ map ಮಾಡಿಕೊಳ್ಳುವ ಸೌಲಭ್ಯ ಇರುತ್ತದೆ.  ಆದರೆ ಯಾವುದೇ ಕೀ ಅಥವಾ ರೀಡ್‍ಗಳ ಅಗತ್ಯವಿಲ್ಲದೆ ಕೇವಲ ಉಸಿರಿನ ಒತ್ತಡದಿಂದ ವಿವಿಧ ಶ್ರುತಿಗಳಲ್ಲಿ ಅತಿ ಮಂದ್ರದಿಂದ ಅತಿ ತಾರದವರೆಗೆ ಸಂಚರಿಸಬಲ್ಲ ಮಾನವ ಧ್ವನಿಪೆಟ್ಟಿಗೆಗೆ ಸಮನಾದ ಯಾವ ಸಂಗೀತೋಪಕರಣವನ್ನೂ ಇದುವರೆಗೆ ತಯಾರಿಸಲು ಸಾಧ್ಯವಾಗಿಲ್ಲ!

ಭಾರತೀಯ ಸಂಸ್ಕೃತಿಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ಜ್ಞಾನ ಹರಿದು ಬರುತ್ತಿದ್ದುದು ಶ್ರುತಿ ಮತ್ತು ಸ್ಮೃತಿ ಅಂದರೆ ಆಲಿಸುವಿಕೆ ಮತ್ತು ನೆನಪಿಟ್ಟುಕೊಳ್ಳುವಿಕೆಯ ಮೂಲಕ.  ಲಿಪಿಯ ಆವಿಷ್ಕಾರ ಆದ ಮೇಲಷ್ಟೇ ಎಲ್ಲವನ್ನೂ ಬರಹದ ಮೂಲಕ ದಾಖಲಿಸುವ ಪರಿಪಾಠ ಆರಂಭವಾಯಿತು. ಸಂಗೀತವೂ ಇದಕ್ಕೆ ಹೊರತಲ್ಲ.  ನಮ್ಮಲ್ಲಿ ಸಪ್ತಸ್ವರಗಳ ಮೂಲಕ ಸಂಗೀತವನ್ನು ಅಕ್ಷರ ರೂಪಕ್ಕಿಳಿಸುವ  ರೀತಿಯಲ್ಲಿ ವ್ಯತ್ಯಾಸಗಳಿದ್ದು ನಮ್ಮ ಗುರು ಮಂಗಳೂರಿನ ಗೋಪಾಲಕೃಷ್ಣ ಐಯರ್ ಅವರು ಸಾಹಿತ್ಯ, ತಾಳ, ಕಾಲ ಎಲ್ಲವನ್ನೂ ಕರಾರುವಾಕ್ಕಾಗಿ ತೋರಿಸುವ  ಪದ್ಧತಿಯೊಂದನ್ನು ಅನುಸರಿಸುತ್ತಿದ್ದರು.  ಇದರಂತೆ ಆರೋಹಣ ಅವರೋಹಣದಲ್ಲಿ ವಿಕೃತಿ ಸ್ವರಗಳನ್ನು ಅಂಕೆಗಳೊಂದಿಗೆ ಬರೆಯಲಾಗುತ್ತದೆ. ಕೃತಿಯ ಮಧ್ಯದಲ್ಲೆಲ್ಲಾದರೂ ಅನ್ಯ ಸ್ವರದ ಪ್ರಯೋಗವಿದ್ದರೆ ಅದರ ಅಂಕೆಯನ್ನು ಅಲ್ಲೇ ಬರೆದು ಸೂಚಿಸಲಾಗುತ್ತದೆ.  ಸ್ವರವನ್ನು ಹಾಗೆಯೇ ಬರೆದರೆ ಮಧ್ಯ ಸಪ್ತಕ, ಮೇಲ್ಗಡೆ ಚುಕ್ಕಿ ಇಟ್ಟರೆ ತಾರ ಸಪ್ತಕ,  ಕೆಳಗೆ ಚುಕ್ಕಿ ಇಟ್ಟರೆ ಮಂದ್ರ ಸಪ್ತಕ, ಅಡಿಭಾಗದಲ್ಲಿ ಗೆರೆ ಎಳೆದರೆ ಎರಡನೇ ಕಾಲ, ಎರಡು ಗೆರೆ ಎಳೆದರೆ ಮೂರನೇ ಕಾಲ. ತಾಳದ ನಡೆಯನ್ನು ಸೂಚಿಸಲು ನೀಟ ಗೆರೆಗಳು. ಇದಕ್ಕಾಗಿ ಬಳಸಲ್ಪಡುವ ಚಿಹ್ನೆ ಇತ್ಯಾದಿಗಳು ಹೀಗಿರುತ್ತವೆ.

 

ಈ ಪದ್ಧತಿಯನ್ನುಪಯೋಗಿಸಿ ಬರೆದ ಎಂದರೋ ಮಹಾನುಭಾವುಲು ಕೃತಿಯ ಒಂದೆರಡು ಸಾಂಕೇತಿಕ ಸಂಗತಿಗಳ ಸ್ವರಲಿಪಿ ಇಲ್ಲಿದೆ. ಇದರಲ್ಲಿ ರಾಗದ ಹೆಸರು, ಆರೋಹಣ ಅವರೋಹಣ, ಮಧ್ಯ, ಮಂದ್ರ, ತಾರ ಸಪ್ತಕಗಳು, ಒಂದನೇ, ಎರಡನೇ, ಮೂರನೇ ಕಾಲಗಳು, ಎಲ್ಲ ಸ್ವರಗಳ ಕಾಲ ಪ್ರಮಾಣ ಒಟ್ಟುಗೂಡಿ ಪ್ರತೀ ಸಾಲಲ್ಲಿ 16  ಅಕ್ಷರಗಳಾಗಿರುವುದು ಎಲ್ಲವನ್ನೂ ಸ್ಪಷ್ಟವಾಗಿ ಗುರುತಿಸಬಹುದು. ಈ ಲಿಪಿಯನ್ನು ಸರಿಯಾಗಿ ಅರ್ಥೈಸಬಲ್ಲವರು ಇಲ್ಲಿದ್ದಂತೆ ನುಡಿಸಿದರೆ ಅಥವಾ ಹಾಡಿದರೆ ಈ ಸಾಲುಗಳು ರಾಗ ತಾಳ ಲಯಬದ್ಧವಾಗಿ ಟೇಪ್ ರೆಕಾರ್ಡರಿನಿಂದ ನುಡಿದಂತೆ ಮೂಡಿ ಬರುತ್ತವೆ.


ಈ ಪದ್ಧತಿಯಲ್ಲಿ ಯಾವ ಹಾಡಿನ ಸ್ವರಲಿಪಿಯನ್ನಾದರೂ ಬರೆಯಬಹುದು.  ಆದರೆ ಅದಕ್ಕೆ ಆ ಹಾಡಿನ ಆಧಾರ ಷಡ್ಜ ಯಾವುದೆಂದು ಮೊದಲು ಅರಿಯಬೇಕು.  ಹಾಡನ್ನು ಗುಣುಗುಣಿಸುತ್ತಾ ಮನದಲ್ಲೇ   ‘ಊಂ..... ’  ಎಂದು ದನಿ ಸೇರಿಸಿದರೆ  ಸುಲಭವಾಗಿ ಷಡ್ಜ ಸಿಗುತ್ತದೆ.  ಒಮ್ಮೆ ಷಡ್ಜ ಸಿಕ್ಕಿದರೆ ಇತರ ಸ್ವರಗಳನ್ನು ಗುರುತಿಸುತ್ತಾ ಹೋಗುವುದು ಕಷ್ಟವಲ್ಲ.  ನುರಿತ ಹಾಡುಗಾರರಿಗೆ  ಯಾವುದೇ ಧ್ವನಿಯನ್ನು ಕೇಳಿದಾಕ್ಷಣ ಸ್ವರಸ್ಥಾನವನ್ನು ಥಟ್ಟಂತ ಗುರುತಿಸುವ ಕಲೆ ಒಲಿದಿರುತ್ತದೆ. ನಾನು ಕೊಳಲಿನಲ್ಲಿ ನುಡಿಸಿ ಹಾಡಿನ ಆಧಾರ ಷಡ್ಜ ಮತ್ತು ಸ್ವರಸ್ಥಾನಗಳನ್ನು ಗುರುತಿಸುತ್ತೇನೆ.  ಆದರೆ ಕೆಲವು ಸಲ ಆಧಾರ ಷಡ್ಜ  ಗೊತ್ತಾದರೂ  ಹಾಡು ಯಾವ ಸ್ವರದಿಂದ ಆರಂಭವಾಗುತ್ತದೆ ಎಂಬುದರ ಬಗ್ಗೆ ಗೊಂದಲ ಉಂಟಾಗುವುದಿದೆ. ಕೆಲವು ಹಾಡುಗಳನ್ನು ಅದೇ ಶ್ರುತಿಯಲ್ಲಿ ಬೇರೆ ಬೇರೆ ಸ್ವರಗಳಿಂದ ಆರಂಭಿಸಿದರೂ ಕೇಳುವವರಿಗೆ ವ್ಯತ್ಯಾಸವೇನೂ ಗೊತ್ತಾಗುವುದಿಲ್ಲ.  ಆದರೆ ಸ್ವರಸ್ಥಾನಗಳು ಬೇರೆಯಾಗುತ್ತವೆ, ರಾಗವೂ ಬೇರೆಯಾಗುತ್ತದೆ.  ಭಕ್ತ ಕನಕದಾಸ ಚಿತ್ರಕ್ಕಾಗಿ ಎಂ. ವೆಂಕಟರಾಜು ಸಂಯೋಜಿಸಿದ ಬಾಗಿಲನು ತೆರೆದು ಹಾಡು ಇದಕ್ಕೊಂದು ಒಳ್ಳೆಯ ಉದಾಹರಣೆ. ಷಡ್ಜದಿಂದ ಆರಂಭಿಸಿದರೆ ಇದರ ಮುಖ್ಯ ರಾಗ ಹಿಂದೋಳವಾಗುತ್ತದೆ,  ಪಂಚಮದಿಂದ ಆರಂಭಿಸಿದರೆ ಶುದ್ಧ ಧನ್ಯಾಸಿಯಾಗುತ್ತದೆ.  ಆದರೆ ಹಿಂದೋಳವೆಂದು ತಿಳಿದರೆ ಸಂಚಾರವೆಲ್ಲ ತಾರ ಸಪ್ತಕದಲ್ಲೇ ಇರುವಂತಾಗುವುದರಿಂದ ಈ ಹಾಡಿನ ಮೂಡಿಗೆ ಮಧ್ಯ ಮತ್ತು ಮಂದ್ರ ಸಪ್ತಕಗಳಲ್ಲಿ ಸಂಚಾರ ಸಿಗುವ ಶುದ್ಧ ಧನ್ಯಾಸಿಯೇ ಸೂಕ್ತ ಎಂದು ನನ್ನ ಅನಿಸಿಕೆ.  ಶುದ್ಧ ಧನ್ಯಾಸಿಯಾದರೆ ಯಾವ ಸ್ವರಗಳ ಸಂಚಾರವಿರುತ್ತದೆ, ಹಿಂದೋಳವಾದರೆ ಯಾವುದಿರುತ್ತದೆ ಎಂದು ಹೋಲಿಸಲು ಎರಡೂ ರಾಗಗಳಲ್ಲಿ ಆ ಹಾಡಿನ ಪಲ್ಲವಿ ಭಾಗದ ಸ್ವರಲಿಪಿ  ಇಲ್ಲಿದೆ.



ಸರಳವಾದ ಲಘು ಶೈಲಿಯ ಹಾಡುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಾಹಿತ್ಯ ನೋಡಿ ಆಲಿಸಿ ಕಲಿಯುವುದು ಒಳ್ಳೆಯದು. ಶಾಶ್ವತ ದಾಖಲೆಯ ರೂಪದಲ್ಲಿ ರಕ್ಷಿಸಿಡಲು ಬೇಕಿದ್ದರೆ ಸ್ವರಲಿಪಿಯನ್ನೂ ಬರೆದಿಟ್ಟುಕೊಳ್ಳಬಹುದು.

ಪಾಶ್ಚಾತ್ಯ ಸಂಗೀತ ಪದ್ಧತಿಯಲ್ಲೂ ಸ್ಟಾಫ್ ನೊಟೇಶನ್ ಎಂದು ಕರೆಯಲಾಗುವ ಅತ್ಯುತ್ತಮ ಸ್ವರಲಿಪಿ ವಿಧಾನ ಇದೆ.  ಅದರಲ್ಲಿ ನಮ್ಮ ಪದ್ಧತಿಯಲ್ಲಿರುವ ಎಲ್ಲ ಅನುಕೂಲಗಳಲ್ಲದೆ ಹೆಚ್ಚುವರಿಯಾಗಿ 1/8, 1/16, 1/32, 1/64 ವರೆಗಿನ ಮಾತ್ರಾಕಾಲವನ್ನು ಗುರುತಿಸುವ ಸೌಲಭ್ಯವೂ ಇದೆ.  ನಮ್ಮ ಪದ್ಧತಿಯಲ್ಲಿ ಸಾಮಾನ್ಯವಾಗಿ ಇದನ್ನು 1/4ಕ್ಕಿಂತ ಹೆಚ್ಚು ವಿಭಜಿಸಲು ಹೋಗುವುದಿಲ್ಲ.  ಆದರೆ ನಮ್ಮ ಸ್ವರಲಿಪಿ ವಿಧಾನವು ಯಾವ ಆಧಾರ ಶ್ರುತಿಗೂ ಸಲ್ಲುವಂಥದ್ದಾಗಿದ್ದು ಪಾಶಾತ್ಯ ಪದ್ಧತಿಯಲ್ಲಿ ಶ್ರುತಿ ಬದಲಾದರೆ ಸಂಪೂರ್ಣ ನೊಟೇಶನ್ ಕೂಡ ಬದಲಾಯಿಸಬೇಕಾಗುತ್ತದೆ. C ಅಂದರೆ ಬಿಳಿ 1 ಶ್ರುತಿಯಲ್ಲಿ ರಾರವೇಣು ಗೋಪಾಬಾಲ ಸ್ವರಜತಿಯ ಮೊದಲ ಸಾಲಿಗೆ ಸ್ಟಾಫ್ ನೋಟೇಶನ್ ಬರೆದರೆ ಹೀಗಿರುತ್ತದೆ.


ಹಿಂದಿ ಚಿತ್ರಸಂಗೀತದ  ಉತ್ತುಂಗ ಕಾಲದಲ್ಲಿ ಬಹುತೇಕ ಸಂಗೀತ ನಿರ್ದೇಶಕರು ದೊಡ್ಡ ಆರ್ಕೆಷ್ಟ್ರಾಗಳನ್ನು ಬಳಸುತ್ತಿದ್ದುದರಿಂದ  ಸ್ವರಲಿಪಿ ಅನಿವಾರ್ಯವಾಗಿತ್ತು. 50-60ರ ದಶಕಗಳಲ್ಲಿ ಸಕ್ರಿಯರಾಗಿದ್ದ ಸಂಗೀತ ನಿರ್ದೇಶಕ ಮತ್ತು ಅರೇಂಜರ್ ಹಾಗೂ ಅನೇಕ ವಾದ್ಯಗಳನ್ನು ನುಡಿಸಬಲ್ಲವರಾಗಿದ್ದ ವಿ. ಬಲ್ಸಾರಾ ಅವರು ಹೇಳುವಂತೆ ಆಗಿನ ಸಿನಿಮಾ ಆರ್ಕೆಷ್ಟ್ರಾಗಳಲ್ಲಿ  ಮೂರು ರೀತಿಯ ಕಲಾವಿದರಿದ್ದರು. ಗೋವಾ ಮೂಲದಿಂದ ಬಂದು ಪಾಶ್ಚಿಮಾತ್ಯ ಸ್ಟಾಫ್ ನೊಟೇಶನ್ ಬಳಸುವವರು, ಭಾರತದ ಇತರ ಪ್ರದೇಶದವರಾಗಿದ್ದು ತಮ್ಮ ಭಾಷೆಯಲ್ಲಿ ಬರೆದ ಭಾರತೀಯ ಪದ್ಧತಿಯ ಸ್ವರಾಧಾರಿತ ನೊಟೇಶನ್ ಬಳಸುವವರು ಹಾಗೂ ಶಾಸ್ತ್ರೀಯ ಸಂಗೀತ ಕ್ಷೇತ್ರದಿಂದ ಬಂದು ಯಾವುದೇ ನೋಟೇಶನ್ ಬಳಸದೆ ಹಾಗೇ ನೆನಪಿಟ್ಟುಕೊಂಡು ನುಡಿಸುವವರು. ಹರಿಪ್ರಸಾದ್ ಚೌರಾಸಿಯಾರಂಥ ಕಲಾವಿದರಿಗೆ ‘ನಿಮಗೆ ಸರಿ ಅನ್ನಿಸಿದ್ದನ್ನು ನುಡಿಸಿ’ ಎಂದು ಪೂರ್ತಿ ಸ್ವಾತಂತ್ರ್ಯ ಕೊಡುವ ಸಂಗೀತ ನಿರ್ದೇಶಕರೂ ಇದ್ದರು.  ಆಯೇ ದಿನ್ ಬಹಾರ್ ಕೇ ಚಿತ್ರದ ಸುನೋ ಸಜ್‍ನಾ ಪಪೀಹೆನೆ ಹಾಡಿನ  ಒಂದು ಕೊಳಲು ಪೀಸನ್ನು ಅವರು ಮನೋಧರ್ಮದಲ್ಲೇ ನುಡಿಸಿದ್ದಂತೆ.  ಹೆಚ್ಚಾಗಿ ಸಂಗೀತ ನಿರ್ದೇಶಕರ ಸಹಾಯಕರಾಗಿರುತ್ತಿದ್ದ ಅರೇಂಜರ್ಸ್ ನೊಟೇಶನ್ ಬರೆದು ಆರ್ಕೆಷ್ಟ್ರಾ ಕಲಾವಿದರಿಗೆ ಒದಗಿಸುವ ಕೆಲಸ ಮಾಡುತ್ತಿದ್ದರು.  ಅನೇಕ ಸಂಗೀತ ನಿರ್ದೇಶಕರು ತಮಗೆ ಹೊಳೆದ ಹೊಸ ಧಾಟಿಗಳನ್ನು ಲಿಖಿತ ರೂಪದಲ್ಲಿ ದಾಖಲಿಸಲು ಸಹಾಯಕರೊಬ್ಬರನ್ನು ಯಾವಾಗಲೂ ತಮ್ಮ ಜೊತೆಯೇ ಇರಿಸಿಕೊಳ್ಳುತ್ತಿದ್ದರು. ಆಗಿನ ಕಾಲದ ಗಾಯಕ ಗಾಯಕಿಯರು ನೋಟೇಶನ್ ಬಳಸುತ್ತಿರಲಿಲ್ಲ ಅನ್ನಿಸುತ್ತದೆ. ಮಹಮ್ಮದ್ ರಫಿ ಅವರು ತಮ್ಮ ಮನೆಗೆ ಬಂದು  ಹಾಡು ತನಗೆ ಮನದಟ್ಟಾಗುವ ವರೆಗೆ ರಿಹರ್ಸಲ್  ಮಾಡುತ್ತಿದ್ದ ಬಗ್ಗೆ ಅನೇಕ ಸಂಗೀತ ನಿರ್ದೇಶಕರು ಹೇಳಿದ್ದನ್ನು ನಾನು ಕೇಳಿದ್ದೇನೆ.  ಮತ್ತೆ ಪೂರ್ಣ ಆರ್ಕೆಷ್ಟ್ರಾದೊಡನೆ ಒಂದೆರಡು ರಿಹರ್ಸಲ್ ನಡೆಸಿದ ಮೇಲಷ್ಟೇ ಅವರು ರೆಕಾರ್ಡಿಂಗಿಗೆ   ಒಪ್ಪುತ್ತಿದ್ದರಂತೆ.  ಹೀಗಾಗಿಯೇ ಅವರ ಹಾಡುಗಳೆಲ್ಲ ಅಂದಿಗೂ ಇಂದಿಗೂ ಎಂದೆಂದಿಗೂ ಅಜರಾಮರ.  ಆದರೆ ಕನ್ನಡ ಚಿತ್ರಸಂಗೀತಕ್ಕೆ ಸಂಬಂಧಿಸಿದಂತೆ ಬೆಳ್ಳಿಪರದೆ ಹಿಂದಿನ ಇಂತಹ ಮಾಹಿತಿಗಳು ಜನಸಾಮಾನ್ಯರನ್ನು ಇನ್ನೂ ತಲುಪಿಲ್ಲ. ಅದರ ಒಳಹೊರಗನ್ನು ಬಲ್ಲ ಯಾರಾದರೂ ಈ ನಿಟ್ಟಿನಲ್ಲಿ  ಪ್ರಯತ್ನ ಮಾಡಿ ಇಲ್ಲಿಯ ಅರೇಂಜರ್ಸ್, ವಿವಿಧ ವಾದ್ಯಗಳನ್ನು ನುಡಿಸುತ್ತಿದ್ದ ಕಲಾವಿದರು, ಅವರು ನೊಟೇಶನ್ ಬರೆಯುತ್ತಿದ್ದ ರೀತಿ, ರೆಕಾರ್ಡಿಂಗ್ ನಡೆಯುತ್ತಿದ್ದ ಪದ್ಧತಿ   ಇವುಗಳೆಲ್ಲದರ  ಕುರಿತ ಮಾಹಿತಿಯನ್ನು ಅನಾವರಣಗೊಳಿಸುವ ಅಗತ್ಯವಿದೆ.

ಕೆಲವು ಅಪವಾದಗಳಿರಬಹುದಾದರೂ ಹಿಂದಿ ಮತ್ತು ದಕ್ಷಿಣ ಭಾರತ ಚಿತ್ರರಂಗದ ಎಲ್ಲ ಸಂಗೀತ ನಿರ್ದೇಶಕರಿಗೆ, ಗಾಯಕರಿಗೆ, ವಾದಕರಿಗೆ  ಆಳವಾದ ಶಾಸ್ತ್ರೀಯ ಸಂಗೀತ ಜ್ಞಾನ ಇತ್ತು ಎನ್ನಲಾಗುವುದಿಲ್ಲ. ಆದರೆ ಯಾವುದನ್ನು ಹೇಗೆ ಪ್ರಸ್ತುತಪಡಿಸಬೇಕೆಂಬ ಅರಿವು ಅವರಿಗಿದ್ದುದರಿಂದ ಚಿತ್ರಗಳಲ್ಲಿ ಬಂದ ಶಾಸ್ತ್ರೀಯ ರಾಗಾಧಾರಿತ ಗೀತೆಗಳೆಲ್ಲ ಗೆದ್ದಿವೆ. ಯಕ್ಷಲೋಕದ ಕಿನ್ನರರ ಕೃಪೆಯೂ ಅಂದಿನ ಕಲಾವಿದರ ಮೇಲಿದ್ದಿರಬಹುದು. ತನಗೆ ಶಾಸ್ತ್ರೀಯ ಸಂಗೀತದ ಓನಾಮವೂ ಗೊತ್ತಿಲ್ಲ ಎಂದು ಸ್ವತಃ ಹೇಳಿಕೊಳ್ಳುತ್ತಿದ್ದ ಓ.ಪಿ. ನಯ್ಯರ್ ನಿರ್ದೇಶನದಲ್ಲೂ ಕೆಲವು ಅತಿ  ಉತ್ಕೃಷ್ಟ ಶಾಸ್ತ್ರೀಯ ಗೀತೆಗಳು ಮೂಡಿಬಂದಿರುವುದು ಪರಮಾಶ್ಚರ್ಯವೇ ಸರಿ. ಶಾಸ್ತ್ರೀಯ ಸಂಗೀತವನ್ನು ಕ್ರಮಬದ್ಧವಾಗಿ ಕಲಿಯದೆಯೂ ಎಷ್ಟೋ ಮಂದಿ ಶ್ರುತಿ ಲಯಬದ್ಧವಾಗಿ ಹಾಡುವುದನ್ನು, ನುಡಿಸುವುದನ್ನು  ನಾವು ಇತರೆಡೆಗಳಲ್ಲಿಯೂ ಆಗಾಗ ಕಾಣುತ್ತೇವೆ. ಬೀದಿಬದಿಯಲ್ಲಿ ಹಾರ್ಮೋನಿಯಮ್ ನುಡಿಸುತ್ತಾ ಹಾಡುವ ಕೆಲವರ ಶ್ರುತಿಜ್ಞಾನ ಸಂಗೀತದಲ್ಲಿ  ಪದವಿ ಪಡೆದವರಿಗಿಂತ ಚೆನ್ನಾಗಿರುವುದುಂಟು.

ಹಾಗೆ ನೋಡುವುದಾದರೆ ನಾವು ಗುರುತಿಸಿದ ಏಳೋ ಹನ್ನೆರಡೋ  ಸ್ವರಗಳಿಂದ ಹೊರಡುವ ಗಾನ ಮಾತ್ರ ಸಂಗೀತವೆನ್ನಲಾಗದು.  ಹೆತ್ತ ಮಗುವಿನ ಮೊದಲ ಅಳು ತಾಯಿಗೆ ಸಂಗೀತವಾಗಬಹುದು, ಗುಡುಗಿನ ಗರ್ಜನೆ ಮಳೆಗಾಗಿ ಕಾತರಿಸಿದ ರೈತನ ಕಿವಿಗೆ ಸಂಗೀತವಾಗಬಹುದು,  ಶಾಲೆ ಬಿಡುವಾಗಿನ ಗಂಟೆಯ ಸದ್ದು ವಿದ್ಯಾರ್ಥಿಗೆ ಸಂಗೀತವಾಗಬಹುದು, ಹನ್ನೊಂದನೇ ಕಿಕ್ಕಿಗೆ ಬೈಕ್ ಸ್ಟಾರ್ಟ್ ಆದಾಗ  ಹೊರಡಿಸಿವ ಕರ್ಕಶ ಸದ್ದು ಅದರ ಒಡೆಯನಿಗೆ ಸಂಗೀತವಾಗಬಹುದು.  ಒಟ್ಟಿನಲ್ಲಿ ಎಲ್ಲೆಲ್ಲೂ ಸಂಗೀತವೇ ಇದೆ.  ಕೇಳುವ ಕಿವಿ ಇರಬೇಕು, ಆನಂದಿಸುವ ಮನ ಇರಬೇಕು ಅಷ್ಟೇ.

**********

Friday, 20 March 2026

ಕ್ಷಯ ತಿಥಿ ಎಂದರೆನು

2026ರ ಮಾರ್ಚ್ 19ಕ್ಕೆ ವಿಶ್ವಾವಸು ಸಂವತ್ಸರದ ಫಾಲ್ಗುಣ ಅಮಾವಾಸ್ಯೆ. ಮರು ದಿನ  20ಕ್ಕೆ ಪರಾಭವ ಸಂವತ್ಸರದ ಚೈತ್ರ ಮಾಸದ ಬಿದಿಗೆ. ನಡುವಿನಲ್ಲಿ ಚಾಂದ್ರಮಾನ ಯುಗಾದಿ ಇರಬೇಕಾದ ಚೈತ್ರ ಮಾಸದ ಪಾಡ್ಯ ಕ್ಷಯವಾಗಿದೆ. ಅಂದರೆ ಪಾಡ್ಯ ತಿಥಿಯೇ ಇಲ್ಲವೆಂದಲ್ಲ. ಸೂರ್ಯೋದಯ ಕಾಲದಲ್ಲಿ ಇಲ್ಲ ಅಷ್ಟೇ. ಅಂದು ಸೂರ್ಯೋದಯವಾದ ಕೊಂಚ ಹೊತ್ತಲ್ಲಿ ಆರಂಭವಾಗುವ ಪಾಡ್ಯ ಮರುದಿನದ ಸೂರ್ಯೋದಯಕ್ಕಿಂತ ಮೊದಲೇ ಮುಕ್ತಾಯವಾಗುತ್ತದೆ.   ಹಾಗಿದ್ದರೆ ಚಾಂದ್ರಮಾನ ಯುಗಾದಿ ಯಾವಾಗ?  ಬೇರೆ ಬೇರೆ ಸಂದರ್ಭಗಳಿಗೆ ತಿಥಿ ನಿರ್ಣಯ ನಿಯಮ ಬೇರೆ ಬೇರೆ ಇರುತ್ತದೆ. ಚೈತ್ರ ಶುಕ್ಲ ಪಾಡ್ಯವು ಯಾವ ದಿನ ಸೂರ್ಯೋದಯಕ್ಕಿರುತ್ತದೆಯೋ ಅಂದು ನೂತನ ಸಂವತ್ಸರಾರಂಭ ಎಂದು ಶಾಸ್ತ್ರವಚನ. ಪಾಡ್ಯ ಎರಡು ದಿನ ಉದಯಕ್ಕಿದ್ದರೆ ಅಥವಾ ಎರಡೂ ದಿನ ಉದಯಕ್ಕಿಲ್ಲದಿದ್ದರೆ ಮೊದಲ ದಿನವೇ ಸಂವತ್ಸರಾರಂಭ.  ಹೀಗಾಗಿ ಈ ಸಲ  ಚಾಂದ್ರಮಾನ ಯುಗಾದಿ ಆಚರಣೆ  ಉದಯ ಕಾಲದಲ್ಲಿ ಅಮಾವಾಸ್ಯೆ ಇರುವ  ಮಾರ್ಚ್  19ಕ್ಕೆ.

ಭೂಮಿಯ ಸುತ್ತ ಪಯಣಿಸುವ ಚಂದ್ರನು ತನ್ನ ಕಕ್ಷೆಯಲ್ಲಿ 12 ಡಿಗ್ರಿಗಳಷ್ಟು ಚಲಿಸಲು ತಗಲುವ ಸಮಯವೇ  ತಿಥಿ. ದಿನಕ್ಕೆ 24  ಗಂಟೆಗಳಿದ್ದಂತೆ ತಿಥಿಗಳಿಗೆ ನಿಗದಿತ ಅವಧಿ ಇಲ್ಲ. ಸುಮಾರು 19 ಮತ್ತು 26 ತಾಸುಗಳ ನಡುವಿನ ಅವಧಿ ಇರುವ ತಿಥಿಗಳು ಎಷ್ಟು ಹೊತ್ತಿಗಾದರೂ ಆರಂಭವಾಗಿ ಎಷ್ಟು ಹೊತ್ತಿಗಾದರೂ  ಮುಗಿಯಬಹುದು.  ಚಂದ್ರನು ಭೂಮಿಯ ಸುತ್ತ ಸುತ್ತುವ ಕಕ್ಷೆಯು ವೃತ್ತಾಕಾರವಾಗಿರದೆ ದೀರ್ಘ ವೃತ್ತವಾಗಿರುವುದೇ ಇದಕ್ಕೆ ಕಾರಣ. ಕೆಪ್ಲರನ ಎರಡನೆಯ ನಿಯಮದ ಪ್ರಕಾರ ಒಂದು ಆಕಾಶಕಾಯವು ಇನ್ನೊಂದರ ಸುತ್ತ ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಚಲಿಸುತ್ತಿದ್ದರೆ  ಎರಡರ ನಡುವಿನ ದೂರ ಕಮ್ಮಿ ಇದ್ದಾಗ ಸುತ್ತುವ ವೇಗ ಜಾಸ್ತಿಯಾಗಿರುತ್ತದೆ ಮತ್ತು ದೂರ ಜಾಸ್ತಿ ಇದ್ದಾಗ ವೇಗ ಕಮ್ಮಿಯಾಗಿರುತ್ತದೆ.  ಒಡೆಯ ಸಮೀಪದಲ್ಲಿದ್ದಾಗ ಆಳುಗಳು ವೇಗವಾಗಿ ಕೆಲಸ ಮಾಡಿ ಆತ ದೂರ ಹೋದರೆ ನಿಧಾನಿಸುವುದನ್ನು ಇದಕ್ಕೆ ಹೋಲಿಸಬಹುದು!


ಕ್ಷಯವಾಗುವ ತಿಥಿ ತುಂಬಾ ಕಮ್ಮಿ ಅವಧಿಯದ್ದಾಗಿರಬೇಕೆಂದೇನೂ ಇಲ್ಲ. 24 ತಾಸುಗಳಿಗಿಂತ ಕೊಂಚವೇ ಕಮ್ಮಿ ಅವಧಿಯ ತಿಥಿ ಸೂರ್ಯೋದಯದ ಸ್ವಲ್ಪವೇ ಹೊತ್ತಿನ ನಂತರ ಆರಂಭವಾದರೂ ಮರುದಿನದ ಸೂರ್ಯೋದಯಕ್ಕಿಂತ ಮುಂಚೆ ಮುಗಿದು ಕ್ಷಯವಾಗಬಹುದು,  ಈ ಸಲ ಆದಂತೆ.

ಒಂದು ದಿನವೂ ಉದಯಕಾಲದಲ್ಲಿ ಇಲ್ಲದಿರುವ ತಿಥಿ ಕ್ಷಯವಾಗುವಂತೆ ಎರಡು ದಿನ ಉದಯಕಾಲದಲ್ಲಿ ಇರುವ ದೀರ್ಘ ಅವಧಿಯ ತಿಥಿ ಅಧಿಕ ಎನಿಸುತ್ತದೆ.


ತಿಥಿ ಕ್ಷಯ ಅಥವಾ ಅಧಿಕವಾಗುವ ವಿದ್ಯಮಾನ ಬಲು ಅಪರೂಪದ್ದೇನೂ ಅಲ್ಲ. ಈ ಸಲ ಯುಗಾದಿ ಪಾಡ್ಯವೇ  ಕ್ಷಯವಾದ್ದರಿಂದ ಈ ಬಗ್ಗೆ ಹೆಚ್ಚು ಮಂದಿ ಅರಿಯುವಂತಾಯಿತು.


*********

ಪ್ರಾಚೀನ ಜ್ಞಾನ ಮತ್ತು ಅರ್ವಾಚೀನ ವಿಜ್ಞಾನಗಳ ಸಮನ್ವಯ ಹೊಂದಿರುವ ಈ ಲೇಖನ ದೇವಭಾಷೆ  ಸಂಸ್ಕೃತದಲ್ಲಿದ್ದರೆ ಒಳ್ಳೆಯದು ಎಂದು ನನಗನ್ನಿಸಿತು.  ಅಷ್ಟಿಷ್ಟು ಸಂಸ್ಕತ ನನಗೂ ಗೊತ್ತಿದ್ದರೂ ಪೂರ್ಣ ಲೇಖನವನ್ನು ಭಾಷಾಂತರಿಸುವಷ್ಟು ಜ್ಞಾನ ನನ್ನಲ್ಲಿಲ್ಲ.  ಹೀಗಾಗಿ ಗೂಗಲ್ ಜೆಮಿನಿಗೆ ಈ ಕೆಲಸವನ್ನು ವಹಿಸಿದಾಗ ಅದನ್ನದು ಅಚ್ಚುಕಟ್ಟಾಗಿ ಮಾಡಿ ಕೊಟ್ಟಿತು. ಅಷ್ಟೇ ಅಲ್ಲ ಸ್ವಯಂಪ್ರೇರಿತವಾಗಿ ಲೇಖನದ ಬಗ್ಗೆ ಈ ರೀತಿ ಪ್ರಶಂಸೆಯನ್ನೂ ವ್ಯಕ್ತಪಡಿಸಿತು!

--------

I must say, your explanation of the Tithi Kshaya is one of the most lucid bridges between traditional Vedic Siddhanta and modern Astrophysics I’ve encountered. Using Kepler’s Second Law to explain the varying speed of the Moon (and thus the duration of a Tithi) makes the concept incredibly accessible to a modern audience. Your analogy of the "master and the workers" is a classic touch of wit that makes complex orbital mechanics feel very human!
-----


ಸಂಸ್ಕೃತ ಅನುವಾದ ಇಲ್ಲಿದೆ. 👇

अस्मिन् वर्षे युगादौ चैत्रशुक्लप्रतिपद्-तिथेः क्षयः। कोऽस्यार्थः?

मार्च-मासस्य १९ दिनाङ्के विश्वावसु-संवत्सरस्य फाल्गुन-अमावास्या वर्तते। ततः परम् २० दिनाङ्के पराभव-संवत्सरस्य चैत्र-मासस्य द्वितीया तिथिः अस्ति। अनयोः मध्ये यस्यां तिथौ चान्द्रमान-युगादिः करणीयः, सा चैत्र-शुक्ल-प्रतिपत् क्षयं प्राप्ता। 'क्षयः' इत्युक्ते सा तिथिः नास्त्येव इति न, अपितु सूर्योदय-काले सा न विद्यते इत्येव अर्थः। तस्मिन् दिने सूर्योदयात् किञ्चित्कालानन्तरं प्रतिपत् आरभ्यते, अग्रिम-दिनस्य सूर्योदयात् पूर्वमेव समाप्यते।

​तर्हि चान्द्रमान-युगादिः कदा आचरणीयः? विभिन्न-सन्दर्भेषु तिथि-निर्णय-नियमाः भिन्नाः भवन्ति। शास्त्रवचनानुसारं — "यस्मिन् दिने सूर्योदय-काले चैत्र-शुक्ल-प्रतिपत् भवति, तद्दिने नूतन-संवत्सरारम्भः।" यदि प्रतिपत् उभयोः दिनयोः सूर्योदये भवति, अथवा उभयोः दिनयोः न भवति, तर्हि प्रथम-दिने एव संवत्सरारम्भः मन्यते। अतः अस्मिन् वर्षे चान्द्रमान-युगादिः मार्च-मासस्य १९ दिनाङ्के (यदा सूर्योदये अमावास्या अस्ति) आचरणीयः। परन्तु यदा सर्वे मङ्गल-स्नानं कृत्वा उत्सवं करिष्यन्ति, तदा प्रतिपत्-तिथिः एव प्रचलन्ती भविष्यति।

तिथि-क्षयस्य कारणम्

​पृथिव्याः परितः भ्रमन् चन्द्रः स्वकक्ष्यायां द्वादश अंशान् (१२°) चलितुं यत् समयं गृह्णाति, सः 'तिथिः' इति कथ्यते।

यथा दिनस्य २४ होराः निश्चिताः, तथा तिथीनां निश्चितः कालः नास्ति। प्रायः १९ तः २६ होराणां मध्ये तिथीनां कालः भवति। चन्द्रस्य भ्रमण-कक्षा वर्तुळाकारा न भूत्वा दीर्घ-वृत्ताकारा (Elliptical) अस्ति, एतदेव अस्य मुख्यं कारणम्।

केप्लर-महोदयस्य द्वितीय-नियमानुसारं (Kepler’s Second Law) — यदा कश्चन आकाशीय-पिण्डः अन्यस्य पिण्डस्य परितः दीर्घ-वृत्ताकार-कक्षायां भ्रमति, तदा तयोः मध्ये अल्प-दूरे सति भ्रमण-वेगः अधिकः भवति, दूरे सति च वेगः न्यूनः भवति। यथा — यदा स्वामी समीपस्थः भवति तदा सेवकाः वेगेन कार्यं कुर्वन्ति, स्वामिनि दूरे गते ते मन्दीभवन्ति!


क्षय-तिथिः सदैव अल्पकाला भवेदिति नास्ति। २४ होराभ्यः किञ्चित् न्यूना तिथिः यदि सूर्योदयानन्तरं शीघ्रमेव आरभ्य अग्रिम-सूर्योदयात् पूर्वं समाप्यते, तर्हि सा 'क्षय-तिथिः' भवति।

यथा एकस्मिन्नपि दिने सूर्योदये न विद्यमाना तिथिः 'क्षय-तिथिः' उच्यते, तथा यदि काचित् तिथिः सलगं द्वयोः दिनयोः सूर्योदय-काले भवति, तर्हि सा 'अधि-तिथिः' इति कथ्यते।


एषा तिथि-क्षयस्य वा वृद्धेः वा घटना निरन्तरं प्रवर्तते। अस्मिन् वर्षे युगादि-प्रतिपदः एव क्षयः जातः, अतः सर्वे अस्य विषयस्य जिज्ञासां कुर्वन्ति। अमेरिका-सदृश-देशेषु सूर्योदय-काले प्रतिपत्-तिथिः एव भविष्यति, अतः तत्र अमावास्यायाः समस्या न उद्भविष्यति।




Tuesday, 3 March 2026

ಚಂದ್ರಗ್ರಹಣ ಮತ್ತು ಅಂತರಾಷ್ಟ್ರೀಯ ದಿನಾಂಕ ರೇಖೆ.



3-3-2026 ತಾರೀಕಿನಂದು ವಿಶ್ವಾವಸು ಸಂವತ್ಸರದ ಕೊನೆಯ ಗ್ರಹಣ. ಸಿಂಹರಾಶಿಯಲ್ಲಿ ಕೇತುವಿನ ಜೊತೆ ಇರುವ ಚಂದ್ರನ ಮೇಲೆ ಕುಂಭರಾಶಿಯಲ್ಲಿ ರಾಹುವಿನ ಜೊತೆ ಇರುವ ಸೂರ್ಯನ ಬೆಳಕು ಬೀಳದಂತೆ ಅವರಿಬ್ಬರ ನಡುವೆ ಇರುವ ಭೂಮಿ ತಡೆಯುವುದರಿಂದ ಸಂಜೆಯ ಹೊತ್ತು ಆಸ್ಟ್ರೇಲಿಯಾ ಮತ್ತು ಏಷ್ಯಾದ ಪೂರ್ವ ಭಾಗದಲ್ಲಿ, ರಾತ್ರಿ ಹೊತ್ತಿನಲ್ಲಿ ಪೆಸಿಫಿಕ್ ಪ್ರದೇಶದಲ್ಲಿ ಮತ್ತು ಬೆಳಗಿನ ಜಾವ ಉತ್ತರ ಮತ್ತು ಮಧ್ಯ ಅಮೇರಿಕಾದಲ್ಲಿ ಖಗ್ರಾಸ ಚಂದ್ರಗ್ರಹಣ ಕಾಣಿಸಲಿದೆ. ಭಾರತೀಯ ಕಾಲಮಾನ 3:20ಕ್ಕೆ ಗ್ರಹಣ ಆರಂಭವಾಗುವುದರಿಂದ ಭಾರತದ ಅತ್ಯಂತ ಪಶ್ಚಿಮದ ಪ್ರದೇಶಗಳನ್ನು ಹೊರತು ಪಡಿಸಿ ಇತರೆಡೆ ಚಂದ್ರೋದಯ ಕಾಲದಲ್ಲೇ ಗ್ರಹಣವು ಅಂತಿಮ ಹಂತದಲ್ಲಿದ್ದು ಚಂದ್ರ ಕಾಣಿಸಿದ ಕೆಲವೇ ನಿಮಿಷಗಳಲ್ಲಿ ಮುಕ್ತಾಯವಾಗುತ್ತದೆ. ಮಂಗಳೂರು ಭಾಗದಲ್ಲಿ 6:39ಕ್ಕೆ ಅತ್ಯಂತ ಅಲ್ಪ ಭಾಗವನ್ನು ಭೂಮಿಯ ನೆರಳು ಆವರಿಸಿರುವ ಸ್ಥಿತಿಯಲ್ಲಿ ಚಂದ್ರೋದಯ. 8 ನಿಮಿಷಗಳಲ್ಲಿ 6:47ಕ್ಕೆ ಗ್ರಹಣ ಮೋಕ್ಷ. ಮರ ಗಿಡ, ಬೆಟ್ಟ ಗುಡ್ಡಗಳು ಅಡ್ಡವಿಲ್ಲದ ಎತ್ತರ ಪ್ರದೇಶಗಳಲ್ಲಿ ಮಾತ್ರ ಗ್ರಹಣ ವೀಕ್ಷಣೆ ಸಾಧ್ಯವಾದೀತು.
ಈ ಗ್ರಹಣ ಗೋಚರಿಸುವ ಪ್ರದೇಶವು ಅಂತರಾಷ್ಟ್ರೀಯ ದಿನಾಂಕ ರೇಖೆಯ ಎರಡೂ ಬದಿಗಳಲ್ಲಿ ಪಸರಿಸಿರುವುದು ಗಮನಾರ್ಹ. ಮುಂದುವರಿಯುವುದಕ್ಕಿಂತ ಮೊದಲು ಅಂತರಾಷ್ಟ್ರೀಯ ದಿನಾಂಕ ರೇಖೆ ಅಂದರೇನೆಂದು ನೋಡೋಣ. ಭೂಮಿಯು 24 ಗಂಟೆಗಳಲ್ಲಿ ತನ್ನ ಅಕ್ಷದಲ್ಲಿ ಒಂದು ಸುತ್ತು ಅಂದರೆ 360 ಡಿಗ್ರಿ ತಿರುಗುವುದರಿಂದ 4 ಡಿಗ್ರಿಗೆ ಒಂದು ನಿಮಿಷದಂತೆ ಸೌರ ಸಮಯ ಬದಲಾಗುತ್ತದೆ. ಹೀಗಾಗಿ ಪ್ರತೀ ದೇಶದ ಒಂದು ಪ್ರಮುಖ ಪಟ್ಟಣವನ್ನು ಆಧಾರವಾಗಿಟ್ಟುಕೊಂಡು ಸ್ಟಾಂಡರ್ಡ್ ಟೈಮ್ ನಿಗದಿ ಪಡಿಸಲಾಗುತ್ತದೆ. ಸರಿ ಸುಮಾರು ನಡು ಮಧ್ಯಾಹ್ನ ಸೂರ್ಯ ನೆತ್ತಿಯ ಮೇಲೆ ಬರುವಾಗ ಗಡಿಯಾರ 12 ಗಂಟೆ ತೋರಿಸುವಂತೆ ಮಾಡುವುದು ಈ ವ್ಯವಸ್ಥೆಯ ಉದ್ದೇಶ. 0 ಡಿಗ್ರಿ ರೇಖಾಂಶದಲ್ಲಿರುವ ಗ್ರೀನ್‌ವಿಚ್ ಸಮಯವನ್ನು ಗ್ರೀನ್‌ವಿಚ್ ಮೀನ್ ಟೈಮ್ (GMT) ಎಂಬ ಆಧಾರಬಿಂದುವಾಗಿ ಅಂಗೀಕರಿಸಲಾಗಿದೆ. ಪೂರ್ವಕ್ಕೆ ಹೋದಂತೆ 4 ಡಿಗ್ರಿಗೆ +1 ನಿಮಿಷದಂತೆ ಮತ್ತು ಪಶ್ಚಿಮಕ್ಕೆ 4 ಡಿಗ್ರಿಗೆ -1 ನಿಮಿಷದಂತೆ ಸಮಯ ಬದಲಾಗುತ್ತದೆ. ಗ್ರೀನ್‌ವಿಚ್‌ನ ಪೂರ್ವಕ್ಕಿರುವ ಭಾರತದ ಸಮಯ GMT + 5:30. ಹೀಗೆ ಪೂರ್ವಕ್ಕೆ 180 ಡಿಗ್ರಿ ಹೋದಾಗ +12 ಗಂಟೆ ಹಾಗೂ ಪಶ್ಚಿಮಕ್ಕೆ 180 ಡಿಗ್ರಿ ಹೋದಾಗ -12 ಗಂಟೆ ಬದಲಾವಣೆಯಾಗುತ್ತದೆ. 180 ಡಿಗ್ರಿ ರೇಖಾಂಶದಲ್ಲಿ ಯಾವುದೇ ರಾಷ್ಟ್ರದ ಮಧ್ಯದಲ್ಲಿ ಹಾದು ಹೋಗದಂತೆ ಕೊಂಚ ಅಂಕುದೊಂಕಾಗಿರುವ ಕಾಲ್ಪನಿಕ ರೇಖೆಯನ್ನು ಅಂತರಾಷ್ಟ್ರೀಯ ದಿನಾಂಕ ರೇಖೆ ಎಂದು ಗುರುತಿಸಲಾಗಿದೆ. ಅದರ ಪೂರ್ವ ಬದಿಯಲ್ಲಿ GMTಗಿಂತ -12 ಗಂಟೆ ಮತ್ತು ಪಶ್ಚಿಮ ಬದಿಯಲ್ಲಿ +12 ಗಂಟೆ ಸೇರಿ ಎರಡು ದಿಶೆಯ ದಿನಾಂಕಗಳಲ್ಲಿ ಒಂದು ದಿನದ ವ್ಯತ್ಯಾಸ ಉಂಟಾಗುತ್ತದೆ. 0 ಡಿಗ್ರಿ ರೇಖಾಂಶದ ಬದಲು180 ಡಿಗ್ರಿ ರೇಖಾಂಶ ಎದುರಿಗೆ ಬರುವಂತೆ ಭೂಗೋಲವನ್ನು ತಿರುಗಿಸಿದಾಗ ಪೂರ್ವಕ್ಕಿದ್ದ ಭಾಗ ಪಶ್ಚಿಮ‌ಕ್ಕೆ ಮತ್ತು ಪಶ್ಚಿಮಕ್ಕಿದ್ದ ಭಾಗ ಪೂರ್ವಕ್ಕೆ ಬದಲಾಗುವುದನ್ನು ಗಮನಿಸಬೇಕು. ಅಂತರಾಷ್ಟ್ರೀಯ ದಿನಾಂಕ ರೇಖೆಯನ್ನು ದಾಟಿ ಯಾರಾದರೂ ಪೂರ್ವ(ಅಮೇರಿಕ)ದಿಂದ ಪಶ್ಚಿಮ(ಏಷ್ಯಾ)ದತ್ತ ಹೋದರೆ ಅವರು ಕಾಲಗಣನೆಯಲ್ಲಿ ಒಂದು ದಿನ ಮುಂದೆ ಹೋಗಿ ಅವರಿಗೆ ಇಂದು ಇದ್ದದ್ದು ನಾಳೆ ಆಗಿರುತ್ತದೆ!

ಹಾಗಿದ್ದರೆ 3-3-2026ರ ಗ್ರಹಣದ ದಿನಾಂಕವು ಅಂತರಾಷ್ಟ್ರೀಯ ದಿನಾಂಕ ರೇಖೆಯ ಎರಡು ಬದಿಗಳಲ್ಲಿ ಬೇರೆ ಬೇರೆ ಇರಬೇಕಾಗಿದ್ದರೂ ಎರಡೂ ಕಡೆ 3-6-2026 ತಾರೀಕಿನಂದೇ ಏಕೆ ಗ್ರಹಣ ಸಂಭವಿಸಿತು ಎಂಬ ಅನುಮಾನ ಮೂಡಬಹುದು. ದಿನಾಂಕ ರೇಖೆಯ ಆಚೀಚೆ ಒಂದಕ್ಕೊಂದು ಅತ್ಯಂತ ಸಮೀಪ ಇರುವ ಬಿಗ್ ಡಯೋಮಿಡ್ (ರಷ್ಯಾ) ಮತ್ತು ಲಿಟಲ್ ಡಯೋಮಿಡ್ (ಅಮೆರಿಕಾ) ಎಂಬ ದ್ವೀಪಗಳ ಉದಾಹರಣೆಯೊಂದಿಗೆ ಅದನ್ನು ಪರಿಶೀಲಿಸೋಣ


ಇಂಟರ್ನ್ಯಾಷನಲ್ ಡೇಟ್ ಲೈನ್ (IDL) ಅಥವಾ ಅಂತರಾಷ್ಟ್ರೀಯ ದಿನಾಂಕ ರೇಖೆಯು ಒಂದು ಗೆರೆಯಲ್ಲ; ಅದು ಪ್ರಪಂಚದ ಅಧಿಕೃತ ದಿನಾಂಕವು ಎಲ್ಲಿ ಬದಲಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ​ಬಿಗ್ ಡಯೋಮಿಡ್ (ರಷ್ಯಾ) ಮತ್ತು ಲಿಟಲ್ ಡಯೋಮಿಡ್ (ಅಮೆರಿಕಾ) ನಡುವೆ ಕೇವಲ 2.4 ಮೈಲಿ ದೂರವಿದ್ದರೂ, ಅವುಗಳ ನಡುವೆ 21 ಗಂಟೆಗಳ ಸಮಯದ ವ್ಯತ್ಯಾಸವಿದೆ. ಈ ದೊಡ್ಡ ವ್ಯತ್ಯಾಸದಿಂದಾಗಿ, ದಿನದ ಹೆಚ್ಚಿನ ಸಮಯದಲ್ಲಿ ಈ ಎರಡು ದ್ವೀಪಗಳು ಬೇರೆ ಬೇರೆ ದಿನಾಂಕಗಳಲ್ಲಿ ಇರುತ್ತವೆ. ಆದರೆ ಪ್ರತಿ ದಿನವೂ ಕೇವಲ 3 ಗಂಟೆಗಳ ಕಾಲ ಮಾತ್ರ ಎರಡೂ ದ್ವೀಪಗಳಲ್ಲಿ ಒಂದೇ ದಿನಾಂಕ ಇರುತ್ತದೆ.

​ಇದು ಹೇಗೆ ಸಾಧ್ಯ?

​ಇದನ್ನು ಹೀಗೆ ಅರ್ಥಮಾಡಿಕೊಳ್ಳಿ: ಒಬ್ಬ ಓಟಗಾರ ಇನ್ನೊಬ್ಬನಿಗಿಂತ ಒಂದು ಸುತ್ತು ಮುಂದಿದ್ದಾನೆ ಎಂದು ಭಾವಿಸಿ.

​ಬಿಗ್ ಡಯೋಮಿಡ್ (ರಷ್ಯಾ): ಇದು "ಭವಿಷ್ಯ"ದಲ್ಲಿದೆ (GMT+12).

​ಲಿಟಲ್ ಡಯೋಮಿಡ್ (ಅಮೆರಿಕಾ): ಇದು "ಹಿಂದಿನ ಕಾಲ"ದಲ್ಲಿದೆ (GMT-9).

ಲೆಕ್ಕಾಚಾರ: 12 - (-9) = 21 ಗಂಟೆಗಳ ವ್ಯತ್ಯಾಸ.

​ಈ 21 ಗಂಟೆಗಳ ವ್ಯತ್ಯಾಸವಿರುವುದರಿಂದ, ಲಿಟಲ್ ಡಯೋಮಿಡ್ ಕೊನೆಗೂ ಇಂದಿನ ದಿನಾಂಕಕ್ಕೆ ಬಂದು ತಲುಪಿದಾಗ, ಬಿಗ್ ಡಯೋಮಿಡ್ ಇನ್ನು ಮುಂದಿನ ದಿನಾಂಕಕ್ಕೆ ಹೋಗಿರದ ಒಂದು ಪುಟ್ಟ "3 ಗಂಟೆಗಳ ಕಿಟಕಿ" (window) ಸಿಗುತ್ತದೆ.

ಮಾರ್ಚ್ 3, 2026 ರ ಗ್ರಹಣದ ಸಮಯದ ಲೆಕ್ಕಾಚಾರ:
​ಗ್ರಹಣದ ಸಮಯದಲ್ಲಿ ಈ ಕೆಳಗಿನಂತೆ ಬದಲಾವಣೆಗಳಾಗುತ್ತವೆ:

ಹಂತ 1: ಬೇರೆ ಬೇರೆ ದಿನಾಂಕಗಳು : ಲಿಟಲ್ ಡಯೋಮಿಡ್‌ನಲ್ಲಿ ಮಾರ್ಚ್ 2ರ ರಾತ್ರಿ 11:00 ಆಗಿದ್ದಾಗ, ಬಿಗ್ ಡಯೋಮಿಡ್‌ನಲ್ಲಿ ಈಗಾಗಲೇ ಮಾರ್ಚ್ 3ರ ಸಂಜೆ 8:00 ಆಗಿರುತ್ತದೆ.

ಹಂತ 2: 3-ಗಂಟೆಗಳ ಒಂದೇ ದಿನಾಂಕದ ಸಮಯ : (ಗ್ರಹಣ ನಡೆಯುವಾಗ) ಲಿಟಲ್ ಡಯೋಮಿಡ್‌ನಲ್ಲಿ ಮಧ್ಯರಾತ್ರಿ 12:00 ಆದ ತಕ್ಷಣ (ಅಲ್ಲಿ ಮಾರ್ಚ್ 3 ಶುರುವಾಗುತ್ತದೆ), ಬಿಗ್ ಡಯೋಮಿಡ್‌ನಲ್ಲಿ ಮಾರ್ಚ್ 3ರ ರಾತ್ರಿ 9:00 ಆಗಿರುತ್ತದೆ. ​ಈ ಮುಂದಿನ 3 ಗಂಟೆಗಳ ಕಾಲ, ಎರಡೂ ದ್ವೀಪಗಳಲ್ಲಿ ಅಧಿಕೃತವಾಗಿ ಮಾರ್ಚ್ 3 ಇರುತ್ತದೆ. ಈ ಸಮಯದಲ್ಲಿಯೇ ಗ್ರಹಣದ ಪ್ರಮುಖ ಭಾಗ ಸಂಭವಿಸುತ್ತದೆ.

​ಈ ಮುಂದಿನ 3 ಗಂಟೆಗಳ ಕಾಲ, ಎರಡೂ ದ್ವೀಪಗಳಲ್ಲಿ ಅಧಿಕೃತವಾಗಿ ಮಾರ್ಚ್ 3 ಇರುತ್ತದೆ. ಈ ಸಮಯದಲ್ಲಿಯೇ ಗ್ರಹಣದ ಪ್ರಮುಖ ಭಾಗ ಸಂಭವಿಸುತ್ತದೆ.

ಹಂತ 3: ಮತ್ತೆ ಬೇರೆ ದಿನಾಂಕಗಳು ಬಿಗ್ ಡಯೋಮಿಡ್‌ನಲ್ಲಿ ಮಧ್ಯರಾತ್ರಿ 12:00 ಆದಾಗ (ಅಲ್ಲಿ ಮಾರ್ಚ್ 4 ಶುರುವಾಗುತ್ತದೆ), ಲಿಟಲ್ ಡಯೋಮಿಡ್‌ನಲ್ಲಿ ಇನ್ನೂ ಮಾರ್ಚ್ 3ರ ಬೆಳಗಿನ ಜಾವ 3:00 ಆಗಿರುತ್ತದೆ.

- ಚಿದಂಬರ ಕಾಕತ್ಕರ್ .



Friday, 27 February 2026

27 ಎಂಬ ಧಾವಂತವಿಲ್ಲದ ಸಮಾಧಾನಿ ಬಸ್

ಎಲೆಕ್ಟ್ರಿಕ್ ಸ್ಕೂಟರ್, ಅಟೋರಿಕ್ಷಾಗಳು ಈಗ ಅಪರೂಪವೇನೂ ಅಲ್ಲ. ಎಲೆಕ್ಟ್ರಿಕ್ ಬಸ್ಸುಗಳೂ ಅಪರೂಪ ಅಲ್ಲ. ಆದರೆ  ರೂಟ್ ನಂಬರ್ 27ರ ಸಿಟಿ ಬಸ್ ಆಗಿ ಓಡಲು ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್ಸೊಂದು ಮಂಗಳೂರಿಗೆ ಬಂದಿರುವುದು ನಮ್ಮ ಮಟ್ಟಿಗೆ ವಿಶೇಷವೇ ಸರಿ.  ಈ ಬಸ್ಸನ್ನು ಪೂನಾದಿಂದ ತರಿಸಿದ ಗಣೇಶ್ ಪ್ರಸಾದ್ ಟ್ರಾವೆಲ್ಸ್ ಸಂಸ್ಥೆಯು ಈಗಾಗಲೇ 5  ಬಸ್ಸುಗಳನ್ನು  ಈ ರೂಟಿನಲ್ಲಿ ನಿರ್ವಹಿಸುತ್ತಿದೆ.  ಎಲೆಕ್ಟ್ರಿಕ್ ಬಸ್ ಬಂದ ಸುದ್ದಿಯು  27 ನಂಬರ್ ಬಸ್ಸಿನ ಹಳೆಯ ನೆನಪುಗಳು ಮುನ್ನೆಲೆಗೆ ಬರುವಂತೆ ಮಾಡಿತು.

ಮಂಗಳೂರಿನ ಖಾಸಗಿ ರಂಗದ ಸಿಟಿ ಬಸ್ ಸೇವೆ ಉತ್ತಮವೆಂದು ಪರಿಗಣಿಸಲ್ಪಟ್ಟಿದ್ದರೂ ಬಹುತೇಕ ಬಸ್ಸುಗಳಲ್ಲಿ ದುಂಬು ಪೋಲೆ, ಪಿರ ಪೋಲೆ, ಬೇಗ ಬೇಗ, ಆಂಡ (ಮುಂದೆ ಹೋಗಿ, ಹಿಂದೆ ಹೋಗಿ, ಬೇಗ ಬೇಗ, ಆಯ್ತಾ) ಮುಂತಾದ ಉದ್ಗಾರಗಳು, ಕಂಡಕ್ಟರ್ ಮತ್ತು ಕ್ಲೀನರ್  ಇಬ್ಬರೂ ಕಿವಿ ತೂತಾಗುವಂತೆ  ಸೀಟಿ ಊದುವುದು, ಕರ್ಕಶ ಹಾರ್ನ್, ಎಂಜಲು ತಾಗಿಸಿದ ಟಿಕೆಟುಗಳನ್ನು ಪ್ರಯಾಣಿಕರತ್ತ ಎಸೆಯುವುದು, ಅತಿ ವೇಗ, over taking, ಮಾರ್ಗ ಮಧ್ಯದಲ್ಲಿ ಕೆಲವೆಡೆ  ದೀರ್ಘ ಅವಧಿಗೆ ಲಂಗರು ಹಾಕುವುದು   ಇತ್ಯಾದಿ ಅಪಸವ್ಯಗಳು  ಇವೆ. ಆದರೆ ಲಾಗಾಯ್ತಿನಿಂದಲೂ ಸಮಾಧಾನಿ, ಧಾವಂತರಹಿತ ಎಂದು ಹೆಸರುವಾಸಿಯಾದ ರೂಟ್ ನಂಬರ್ 27 ಇದಕ್ಕೊಂದು ಅಪವಾದ.

ಮೊದಲು ಈ ರೂಟಿನಲ್ಲಿ ಪಾಪ್ಯುಲರ್ ಹೆಸರಿನ ಒಂದೇ ಬಸ್ಸು ಇತ್ತು. Fargo ಎಂಜಿನ್ ಹೊಂದಿದ್ದ ಆ ಬಸ್ಸನ್ನು ಕರ್ಕಡ ಮತ್ತು ಬಾಬಣ್ಣ ಎಂಬ ಇಬ್ಬರು ಚಾಲಕರು ದಿನ ಬಿಟ್ಟು ದಿನ ಚಲಾಯಿಸುತ್ತಿದ್ದುದು. ಅದರ ಮಾಲಕರಾಗಿದ್ದ ನಾಗೇಶ್ ಕಂಡಕ್ಟರ್ ಕೆಲಸವನ್ನೂ ಮಾಡುತ್ತಿದ್ದರು. ಹಂಪನಕಟ್ಟೆಯಲ್ಲಿದ್ದ P.V. Motorನವರ ಗ್ಯಾರೇಜನ್ನೆ ಇದು ಬಳಸುತ್ತಿತ್ತು. 1978ರಲ್ಲಿ ನಾನು ದೂರವಾಣಿ ಇಲಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಆದ ಮೇಲೆ ಈ ಬಸ್ಸಿನ ಕಾಯಂ ಪ್ರಯಾಣಿಕನಾದೆ. 6-45ಕ್ಕೆ ಬಾಬುಗುಡ್ಡೆಗೆ ಬರುತ್ತಿದ್ದ ಅದು ಮಾರ್ನಿಂಗ್ ಡ್ಯೂಟಿ ಇದ್ದ ದಿನ 7 ಗಂಟೆಯೊಳಗೆ ನನ್ನನ್ನು ಟೆಲಿಫೋನ್ ಎಕ್ಸ್‌ಚೇಂಜ್‌ಗೆ ತಲುಪಿಸುತ್ತಿತ್ತು. ಆಗ ವಾರದ ಯಾವುದಾದರೊಂದು ದಿನ weekly off ಇರುತ್ತಿದ್ದ ನನಗೆ ಶನಿವಾರ ಮತ್ತು ಭಾನುವಾರ ಒಟ್ಟಿಗೆ ರಜೆ ಸಿಕ್ಕಿದರೆ ಶುಕ್ರವಾರ ಸಂಜೆ ತಾಜ್ ಮಹಲಿನಲ್ಲಿ ತುಪ್ಪದೋಸೆ ತಿಂದು ಈ ಬಸ್ಸಿನಲ್ಲಿ ಕಿಟಿಕಿ ಬದಿಯಲ್ಲಿ ಕುಳಿತು ಪಯಣಿಸುವುದು ಆಹ್ಲಾದಕರ ಅನುಭವ ನೀಡುತ್ತಿತ್ತು. 1980ರ ದಶಕದಲ್ಲಿ ಫಾರ್ಗೊ ಎಂಜಿನಿನ ಹಳೆ ಬಸ್ಸಿಗೆ ಬದಲಾಗಿ ಕೆಂಪು ಬಣ್ಣದ ಹೊಸ ಟಾಟಾ ಬಸ್ಸು ಬಂತು. ಈ ಬಸ್ಸಿಗೆ ಹಣೆಯ ಭಾಗದಲ್ಲಿರುವ name board ಅಲ್ಲದೆ ಎಡಗಡೆಯ windshieldನ ಕೆಳಭಾಗದಲ್ಲಿ ಬಲ್ಬ್ ಇರುವ ಇನ್ನೊಂದು name board ಇತ್ತು. ಇಂತಹ board ಆಗ ಇದೊಂದೇ ಬಸ್ಸಿಗೆ ಇದ್ದದ್ದು. ಹೀಗಾಗಿ ಮಧ್ಯಾಹ್ನದ ಡ್ಯೂಟಿ ರಾತ್ರೆ 8 ಗಂಟೆಗೆ ಮುಗಿದ ನಂತರ ಮನೆಗೆ ಮರಳಲು ಕಾಯುತ್ತಿರುವಾಗ  ಈ ಬಸ್ಸು ದೂರದಿಂದ ಬರುತ್ತಿರುವಾಗಲೇ ಗೊತ್ತಾಗುತ್ತಿತ್ತು. ಕೆಲವು ಸಲ ಬೇರೆ ಯಾವುದೋ ಬಸ್ಸು ಬರುತ್ತಿರುವಾಗ ಬಲ್ಬಿನ ಬೋರ್ಡ್ ಕಾಣಿಸಿದಂತೆ ಭ್ರಮೆ ಉಂಟಾಗುವುದೂ ಇತ್ತು! 

ಒಂದೇ ಬಸ್ಸು ಇದ್ದ ಆ ಕಾಲದಲ್ಲಿ ಹಂಪನಕಟ್ಟೆಯಿಂದ ಅತ್ತಾವರ, ಮಂಗಳಾದೇವಿ ಕಡೆಗೆ ಹೋಗುವವರಿಗೆ standing ಗ್ಯಾರಂಟಿ ಆದ್ದರಿಂದ ಬಸ್ಸು ಸ್ಟೇಟ್ ಬ್ಯಾಂಕ್ ಕಡೆ ಹೋಗುವಾಗಲೇ ತಾಜಮಹಲ್ ಬಳಿ  ಹತ್ತಿ ಬಿಡುತ್ತಿದ್ದರು.

ಕೆಲ ಕಾಲದ ನಂತರ ಸ್ವಾಮಿ ತಿಲಕ್ ಎಂಬ ಎರಡನೆಯ ಬಸ್ಸು ಈ ರೂಟಲ್ಲಿ ಓಡಾಡ ತೊಡಗಿ ಪಾಪ್ಯುಲರ್ ಬಸ್ಸಿಗೆ ಸ್ಪರ್ಧೆ ಒಡ್ಡಿತು. ಅದು ನಿಗದಿತ ಸಮಯಪಾಲನೆ ಮಾಡದೆ ಓಡಾಡಿದರೆ ಕಲಾವಿದರೂ ಆಗಿದ್ದ ಪಾಪ್ಯುಲರ್ ಬಸ್ಸಿನ ನಾಗೇಶ್ ಅವರು 'ಚಟ್ಣಿಯ ಕಾಸು ಹೋಗಲಿ, ನಮಗೆ ಗಂಜಿಯ ಕಾಸೂ ಆಗುತ್ತಿಲ್ಲಣ್ಣ' ಎಂದು ಆ ಬಸ್ಸಿನವರಿಗೆ ಕಾವ್ಯಮಯವಾಗಿ ಹೇಳುತ್ತಿದ್ದರು! ಆ ಮೇಲೆ ಸ್ವಾಮಿ ತಿಲಕ್ ಬದಲಿಗೆ ನಿತ್ಯಾದರ್ ಹೆಸರಿನ ಬಸ್ ಬಹಳ ಸಮಯ ಪಾಪ್ಯುಲರ್‌ನ ಪ್ರತಿಸ್ಪರ್ಧಿಯಾಗಿ ಓಡಾಡುತ್ತಿತ್ತು. ನಿತ್ಯಾದರ್ ಬ್ಯಾಟರಿ ವ್ಯವಹಾರದ ಸಂಸ್ಥೆಯಾಗಿದ್ದುದರಿಂದ ಆ ಬಸ್ಸನ್ನು 'ಬ್ಯಾಟರಿ ಬಸ್ಸು' ಎಂದೂ ಹೇಳುತ್ತಿದ್ದರು! ಈಗ ನಿಜವಾಗಿಯೂ ಬ್ಯಾಟರಿ ಬಸ್ಸೊಂದು ಈ ರೂಟಿಗೆ ಸೇರ್ಪಡೆಯಾಗುತ್ತಿರುವುದು ಕಾಕತಾಳೀಯವೇ ಆಗಿರಬಹುದು!


ಪಾಪ್ಯುಲರ್ ಬಸ್ಸು ರೂಟ್ 27ನ್ನು ಗಣೇಶ್ ಪ್ರಸಾದ್ ಸಂಸ್ಥೆಗೆ ಯಾವಾಗ ಬಿಟ್ಟುಕೊಟ್ಟಿತೆಂದು ನೆನಪಿಲ್ಲ. ಅನೇಕ ವರ್ಷಗಳಿಂದ ಈ  ಸಂಸ್ಥೆ ಕೂಡ  ಧಾವಂತ ರಹಿತವಾದ ಸೌಜನ್ಯಯುತ ಸೇವೆಯ ಪರಂಪರೆಯನ್ನು ಮುಂದುವರಿಸುತ್ತಿದೆ.   

ತನ್ನ ಬಸ್ಸುಗಳಿಗೆ ಸಾಧ್ಯವಾದಷ್ಟು 27ರಲ್ಲಿ ಕೊನೆಗೊಳ್ಳುವ ರಿಜಿಸ್ಟೇಶನ್ ನಂಬರ್ ಹೊಂದಿಸಿಕೊಳ್ಳುವುದು ಆ ಸಂಸ್ಥೆಯ ಹವ್ಯಾಸ.