Thursday 27 January 2022

ಮನೆಯಲ್ಲಿ ಜನಿವಾರ ತಯಾರಿ


ಈಗ ಗಂಟು ಹಾಕಿದ ಜನಿವಾರಗಳು ಅಂಗಡಿಯಲ್ಲಿ ಕೊಳ್ಳಲು ಸಿಗುವುದರಿಂದ ಯಾರೂ ಮನೆಯಲ್ಲಿ ಜನಿವಾರ ತಯಾರಿಸಲಾರರು.  ಆದರೆ ಹಿಂದಿನ ಕಾಲದಲ್ಲಿ ಸ್ವತಃ ತಕಲಿಯಲ್ಲಿ ನೂಲು ತೆಗೆದು ತಮ್ಮ ಬಳಕೆಗೆ ಬೇಕಾಗುವಷ್ಟು ಜನಿವಾರ ತಯಾರಿಸುವ ಕ್ರಮ  ಅನೇಕ ಮನೆಗಳಲ್ಲಿತ್ತು.  ನಮ್ಮಲ್ಲೂ ಇತ್ತು.  ಕಾಲೇಜು ಶಿಕ್ಷಣ ಮುಗಿಸಿ ಉದ್ಯೋಗ ಬೇಟೆ ನಡೆಸುತ್ತಾ ಮನೆಯಲ್ಲೇ ಇದ್ದ ಒಂದು ವರ್ಷ ನಾನೂ 50 ಜನಿವಾರ ತಯಾರಿಸಲಿಕ್ಕಾಗುವಷ್ಟು ನೂಲು ತೆಗೆದಿದ್ದೆ.  ನಮ್ಮ ತಂದೆ ಮತ್ತು ಅಣ್ಣಂದಿರು ಈ ಕೆಲಸ ಮಾಡುತ್ತಿದ್ದುದನ್ನು ನೋಡುತ್ತಾ ನಾನು ಬಾಲ್ಯ ಕಳೆದವನು.  ಅಂದು ಕಂಡದ್ದನ್ನು ಇಂದು ಅಕ್ಷರರೂಪಕ್ಕಿಳಿಸಲು ಪ್ರಯತ್ನಿಸಿದ್ದೇನೆ.  ನಿರೂಪಣೆಯಲ್ಲಿ ಕೆಲವು ಚಿತ್ಪಾವನಿ ಶಬ್ದಗಳು ಇವೆ.  ಸ್ವತಃ ಕಣ್ಣಿಂದ ನೋಡದಿದ್ದವರಿಗೆ ಈ ಪ್ರಕ್ರಿಯೆ ಮನದಟ್ಟಾಗುವುದು ತುಸು ಕಷ್ಟವೇ.

====
1. ನೂಲು ತೆಗೆಯುವುದು.
---------

ಇದಕ್ಕಾಗಿ  ಕಡೆಚ್ಚಿಲ್ ಬಳಸಿ ಗೆರಟೆಯಿಂದ ತಯಾರಿಸಿದ ಕಪ್ಪು ಚಕ್ರದ ನಡುವೆ  ಅಡಿಕೆ ಮರದ ಸಪುರ ಕಡ್ಡಿಯನ್ನು ತೂರಿಸಿದ  ತಕಲಿಯನ್ನು ಬಳಸಲಾಗುತ್ತಿತ್ತು. ಇದನ್ನು ಮರದ ಸೇರನ್ನು ಹೋಲುವ ಹಾನ್ನೆಯ ಮೇಲೆ ಇರಿಸಿದ ನಯಗೊಳಿಸಿದ ಗೆರಟೆಯೊಳಗೆ ಕೈಯಿಂದ ತಿರುಗಿಸುವುದು. ಒಮ್ಮೆ ಕೈಯಿಂದ ಜೋರಾಗಿ ತಿರುಪು ಕೊಟ್ಟರೆ fly wheel  ಪರಿಣಾಮದಿಂದ ತಕಲಿ ಬಹಳ ಹೊತ್ತು  ತಿರುಗುತ್ತಿತ್ತು. ತಕಲಿಗೆ ಮೊದಲೇ ಸುತ್ತಿರುವ ನೂಲಿನ ಎಳೆಯನ್ನು ಎಡಗೈಯಲ್ಲಿ ಹಿಡಿದಿರುವ ಹತ್ತಿಯ ದಪ್ಪದ ಬತ್ತಿಗೆ ತಾಗಿಸಿ ತಕಲಿಗೆ ತಿರುಪು ಕೊಟ್ಟು ಬಲಗೈಯ ಹೆಬ್ಬೆಟ್ಟು ಮತ್ತು ತೋರುಬೆರಳುಗಳಿಂದ ಹದವಾಗಿ ಎಳೆದರೆ ಸಪುರವಾರ ನೂಲು ಬರುತ್ತದೆ.  ಎಡಗೈಯಲ್ಲಿ ಇರುವ ಹತ್ತಿಯ ಬತ್ತಿಯನ್ನು ಮೇಲೆತ್ತುತ್ತಾ ಬಲಗೈಯಿಂದ ನೂಲು ಎಳೆಯುವ ವೇಗ ಜಾಸ್ತಿಯೂ ಆಗಬಾರದು ಕಮ್ಮಿಯೂ ಆಗಬಾರದು.  ನೂಲು ಪೈಲಟ್ ಪೆನ್ನಿನ ಬರವಣಿಗೆಯಂತೆ ಸರಾಗವಾಗಿ ಬರಬೇಕು.  ಮಧ್ಯದಲ್ಲಿ ಮೆಂಢೆ ಅಂದರೆ ಹತ್ತಿಯ ದಪ್ಪ ಉಂಡೆ ಬರಬಾರದು. ಎಡಗೈ ಹೋಗುವಷ್ಟು ಮೇಲೆ ಹೋದ ಮೇಲೆ ತಕಲಿಗೆ ತಿರುಪು ಕೊಡುವುದನ್ನು ನಿಲ್ಲಿಸಿ ನೂತ ನೂಲನ್ನು ತಕಲಿಯ ಕಡ್ಡಿಗೆ ಸುತ್ತುವುದು. ಆ ಮೇಲೆ ಮತ್ತೆ ಒಂದು ಮಾರು ನೂಲುವುದು. ತಕಲಿಗೆ ಸುತ್ತುವುದು.  ಹೀಗೆ ಸುತ್ತಿದ ನೂಲು ಕೆಳಭಾಗದಲ್ಲಿ ತಕಲಿಯ ಚಕ್ರದ ಅಂಚಿನವರೆಗೆ ಬರುವಲ್ಲಿ ವರೆಗೆ ಇದೇ ಕ್ರಮ ಮುಂದುವರೆಸುವುದು.  ಈ ಘಟ್ಟದಲ್ಲಿ ತಕಲಿಗೆ ಸುತ್ತಿದ ನೂಲಿಗೆ  ಶಂಕುವಿನಾಕಾರ ಬಂದಿರುತ್ತದೆ.  ಪರಿಣಿತಿ ಸಾಧಿಸಿದವರು ಮಧ್ಯ ಭಾಗದಲ್ಲಿ ಇನ್ನಷ್ಟು ನೂಲು ಸುತ್ತಿ ಜಂಬನೇರಳೆ ಆಕಾರ ಬರುವಂತೆಯೂ ಮಾಡಬಹುದು. ತಕಲಿ ಸುತ್ತುವ ಗೆರಟೆಯಲ್ಲಿ ಸ್ವಲ್ಪ ವಿಭೂತಿ ಹಾಕಿಕೊಳ್ಳುವ ಕ್ರಮವೂ ಇದೆ.  ಆಗಾಗ ಇದನ್ನು ಕೈಬೆರಳುಗಳಿಗೆ ಹಚ್ಚಿಕೊಂಡರೆ ನೂಲು ಎಳೆಯುವುದು ಸುಲಭ. ಸಾಕಷ್ಟು ನೂಲು ಸುತ್ತಿ ಭಾರವಾದ ತಕಲಿ ಹಾನ್ನೆಯ ಮೇಲಿನ ಗೆರಟೆಯಲ್ಲಿ ತಿರುಗುವಾಗ ಉಂಟಾಗುವ ಕರ್ರ್ ಎಂಬ ಶಬ್ದ ಕೇಳಲು ಬಲು ಆಪ್ಯಾಯಮಾನ.  ಹತ್ತಿಯಿಂದ ನೂಲು ಎಳೆಯುವಾಗ ಒಮ್ಮೊಮ್ಮೆ ಮಧ್ಯದಲ್ಲಿ ತುಂಡಾಗುವ ಸಂದರ್ಭಗಳೂ ಇರುತ್ತವೆ.  ಆಗ ಹತ್ತಿಯ ಎರಡು ಎಳೆಗಳನ್ನು ಬಳಸಿ ತುಂಡಾದ ತುದಿಗಳನ್ನು ಸೇರಿಸಿ ತಕಲಿಯಿಂದ ಸ್ವಲ್ಪ ತಿರುಪು ಕೊಟ್ಟರೆ ಸಂದು ಗೊತ್ತಾಗದರೀತಿ ನೂಲು ಕೂಡಿಕೊಳ್ಳುತ್ತದೆ. ನೂಲುವಿಕೆಯ ಒಂದು ಅಧ್ಯಾಯ ಮುಗಿದಾಗ ಹತ್ತಿಯ ಬತ್ತಿಯಿಂದ ನೂಲನ್ನು ಬೇರ್ಪಡಿಸಿ ತಕಲಿಯ ಚಕ್ರದ ಕೆಳಭಾಗ ದಂಡಿಗೆ ಸುತ್ತಿಡುವುದು. ಸಾಧ್ಯವಾದಷ್ಟು ನೂಲು ಸುತ್ತಿ ಒಂದು ತಕಲಿಯು ಫುಲ್ ಆಯಿತು ಅನ್ನಿಸಿದೊಡನೆ ಇನ್ನೊಂದು ತಕಲಿಯಲ್ಲಿ ನೂಲುವಿಕೆಯನ್ನು ಮುಂದುವರೆಸುವುದು. ಗೆರಟೆಯ ಕೆಳಗಿನ ಹಾನ್ನೆಯ ಟೊಳ್ಳು ಭಾಗವನ್ನು ಸಿದ್ಧ ಮಾಡಿಟ್ಟ ಹತ್ತಿಯ ಬತ್ತಿಗಳನ್ನು ದಾಸ್ತಾನಿರಿಸಿಕೊಳ್ಳಲು ಬಳಸುವುದು  ನಮ್ಮಲ್ಲಿ ಅಣ್ಣಂದಿರು ಮುಖ್ಯ ನೂಲುಗಾರರು.  ತಂದೆಯವರು ಕೂಡ ಅವರ ಯೌವನದಲ್ಲಿ ನೂಲುತ್ತಿದ್ದಿರಬಹುದು.  ನನ್ನ ನೆನಪಿನಲ್ಲಿ ಅವರು ಮುಂದಿನ ಕೆಲಸಗಳಾದ ತಿಸ್ತ್ಯೊ ಮಾಡುವುದು, ಜನಿವಾರಗಳಿಗೆ ತಿರುಪು ಕೊಡುವುದು ಮುಂತಾದವುಗಳನ್ನು ಮಾತ್ರ ಮಾಡುತ್ತಿದ್ದುದು. ವಟಸಾವಿತ್ರಿ ವ್ರತದಿಂದದಿಂದ ಉಪಾಕರ್ಮದ ಕೆಲವು ದಿನ ಮೊದಲಿನವರೆಗೆ ಮಾತ್ರ ನಮ್ಮಲ್ಲಿ ನೂಲುವಿಕೆಯ ಸೀಸನ್ ಇರುತ್ತಿದ್ದುದು.

2. ತಿಸ್ತಿ ಮಾಡುವುದು.
-----------
ತಿಸ್ತಿ ಅಂದರೆ ನೂಲಿನ ಮೂರು ಎಳೆಗಳನ್ನು ಒಟ್ಟು ಸೇರಿಸುವುದು ಎಂದರ್ಥ. ಇದನ್ನು ತಂದೆಯವರು ಮಾಡುತ್ತಿದ್ದುದು.  ಒಂದು ಜನಿವಾರಕ್ಕೆ ಬೇಕಾಗುವ ಸೂಕ್ತ ಅಳತೆಯ ನೂಲನ್ನು ಅಳೆಯಲು ಬಿದಿರಿನ ತೆಳ್ಳನೆಯ ಭೀಂಟ ಎಂಬ ಅಳತೆಗೋಲನ್ನು ಬಳಸುವುದು. ತುಂಬಿದ  ಎರಡು ತಕಲಿಗಳ ಇನ್ನೊಂದು ಬದಿಗೆ ಮಧ್ಯದಲ್ಲಿ ತೂತು ಮಾಡಿದ ರುವಿ ನಾಣ್ಯ ಸಿಕ್ಕಿಸಿ ಅವು ಸುಲಭವಾಗಿ ಉರುಳುವಂತೆ ಮಾಡಿ  ಒಂದು ಗೆರಸೆಯಲ್ಲಿ ಇಟ್ಟುಕೊಳ್ಳುವುದು. ಎರಡು ತಕಲಿಗಳ ನೂಲಿನ ತುದಿಗಳನ್ನು ಒಟ್ಟು ಸೇರಿಸಿ ಭೀಂಟಕ್ಕೆ 30 ಸುತ್ತು ಸುತ್ತುವುದು. ನಂತರ ಭೀಂಟದಲ್ಲಿರುವ ಎರಡು ನೂಲಿನೆಳೆಗಳ ತುದಿಗಳು ಮತ್ತು ಒಂದು ತಕಲಿಯ ನೂಲಿನ ತುದಿಯನ್ನು ಒಟ್ಟು ಮಾಡಿ ಮೂರು ಎಳೆಗಳನ್ನು ಅಂಗೈಗೆ ಸುತ್ತುತ್ತಾ ಹೋಗುವುದು. ಹೀಗೆ ಮಾಡುವಾಗ ಭೀಂಟ ಗೆರಸೆಯಲ್ಲಿ ಅಂತರ್ಲಾಗ ಹಾಕುವುದನ್ನು ನೋಡಲು ತುಂಬಾ ಚೆನ್ನಾಗಿರುತ್ತದೆ. ಭೀಂಟದಲ್ಲಿರುವ ನೂಲು ಮುಗಿದಾಗ ತಕಲಿಯ ನೂಲನ್ನು ಕತ್ತರಿಸಿ ನೂಲಿನ ಮೂರು ಎಳೆಗಳನ್ನು   ಅಂಗೈಯಿಂದ ಬೇರ್ಪಡಿಸಿ ಒಮ್ಮೆ ತೊಡೆಯ ಮೇಲೆ ಹೊಸೆದು ಗೆರಸೆಯ ಬದಿಯಲ್ಲಿ ಇಡುವುದು. ತಕಲಿಗಳ ನೂಲು ಮುಗಿಯುವ ವರೆಗೆ ಈ ಕಾರ್ಯ ಮುಂದುವರೆಸುವುದು. ನಂತರ ಹೊಸೆದು ಇಟ್ಟ ತಿಸ್ತಿಗಳನ್ನು ಅವುಗಳಿಗೆ  ತಿರುಪು ಕೊಡಲು ಉಪಯೋಗಿಸುವ ಕೆಂಪು ಬಣ್ಣದ ಹಾನ್ನೆಯಲ್ಲಿ ಶೇಖರಿಸಿಡುವುದು.

3. ತಿಸ್ತಿಗಳಿಗೆ ತಿರುಪು ಕೊಡುವುದು.
------------
ಇದಕ್ಕೆ ಮರದ ಆಟಿಕೆಯೊಂದರ ಹಸುರು ಬಣ್ಣದ ಚಕ್ರವನ್ನು  fly wheel ಆಗಿ ಬಳಸಿದ ದೊಡ್ಡ ತಕಲಿಯನ್ನು ತಂದೆಯವರು ಬಳಸುತ್ತಿದ್ದರು.  ಹಾನ್ನೆಯ ಗೆರಟೆಯ ಕೆಳಭಾಗದಲ್ಲಿ ಶೇಖರಿಸಿಟ್ಟ ಒಂದು ತಿಸ್ತಿಯನ್ನು ತೆಗೆದುಕೊಂಡು ಎಡ ಅಂಗೈಗೆ ಸಿಕ್ಕಿಸಿಕೊಂಡು ನೂಲಿನ ಮೂರೆಳೆಗಳ ತುದಿಯನ್ನು ತಕಲಿಗೆ ಒಂದೆರಡು ಸುತ್ತು ಸುತ್ತುವುದು.  ನಂತರ ಎಡಗೈಯನ್ನು ಮೇಲೆತ್ತುತ್ತಾ ಒಂದು ಮಾರು ನೂಲನ್ನು ಬಿಚ್ಚಿಕೊಂಡು ಬಲಗೈಯಿಂದ ತಕಲಿಗೆ  ಅಪ್ರದಕ್ಷಿಣಾಕಾರವಾಗಿ ತಿರುಪು ಕೊಡುವುದು. (ಹತ್ತಿಯಿಂದ ನೂಲುವಾಗ ತಕಲಿಯನ್ನು ಪ್ರದಕ್ಷಿಣಾಕಾರದಲ್ಲಿ ತಿರುಗಿಸುವುದು). ನೂಲಿಗೆ ಸಾಕಷ್ಟು ತಿರುಪು ಸಿಕ್ಕಿದ ಮೇಲೆ ಅದನ್ನು ತಕಲಿಗೆ ಸುತ್ತಿ ಮತ್ತೊಂದು ಮಾರು ಬಿಚ್ಚಿಕೊಂಡು ತಿರುಪು ಕೊಡುವುದು.  ಅಂಗೈಗೆ ಸಿಕ್ಕಿಸಿಕೊಂಡ ತಿಸ್ತಿ ಸಂಪೂರ್ಣ ಮುಗಿದ ಮೇಲೆ ತುದಿಯನ್ನು  ತಕಲಿಯಲ್ಲಿ ನೂಲು ಉಂಟುಮಾಡಿದ ಶಂಕುವಿನಾಕಾರದ ಸಪುರ ಭಾಗದಲ್ಲಿ ಸುತ್ತಿಡುವುದು. ತಕಲಿ ಪೂರ್ಣ ತುಂಬುವ ವರೆಗೆ ಇನ್ನಷ್ಟು ತಿಸ್ತಿಗಳಿಗೂ ಹೀಗೆಯೇ ಮಾಡುವುದು.

4. ಜನಿವಾರಗಳಿಗೆ ತಿರುಪು ಕೊಡುವುದು.
-------------

ಇದಕ್ಕೆ ಒಬ್ಬ ಸಹಾಯಕನೂ ಬೇಕು.  ತಂದೆಯವರ ಕಾಲದಲ್ಲಿ ಅಣ್ಣಂದಿರು ಸಹಾಯಕರಾಗಿರುತ್ತಿದ್ದರು. ಅಣ್ಣನ ಕಾಲದಲ್ಲಿ ನಾನೂ ಸಹಾಯಕನಾದದ್ದಿದೆ.  ಒಂದು ಕೈಯಲ್ಲಿ ತಿಸ್ತಿ ಸುತ್ತಿರುವ ತಕಲಿ ಮತ್ತು ಇನ್ನೊಂದು ಕೈಯಲ್ಲಿ ಖಾಲಿ ತಕಲಿಯೊಂದನ್ನು ಹಿಡಿದ, ತಿಸ್ತಿಗೆ ತಿರುಪು ಕೊಡುವ ಮುಖ್ಯ ವ್ಯಕ್ತಿ ಜಗಲಿಯಲ್ಲಿ ಒಂದು ಬದಿಯಲ್ಲಿ ನಿಲ್ಲುವುದು. ಸಹಾಯಕನಿಗೆ ನೂಲಿನ ತುದಿ ಕೊಟ್ಟು ಖಾಲಿ ತಕಲಿಯ ಕಡ್ಡಿಯ ಮೂಲಕ ನೂಲು ಹಾದು ಹೋಗುವ ಹಾಗೆ ಮಾಡುವುದು. ಸಹಾಯಕನು ಎಡ ಕೈಯಲ್ಲಿ ನೂಲಿನ ತುದಿ ಮತ್ತು ಬಲಗೈಯಲ್ಲಿ ನೂಲು ಹಾದು ಹೋಗುವ ಖಾಲಿ ತಕಲಿ ಹಿಡಿದು ಹಿಂದೆ ಹಿಂದೆ ಸಾಗುತ್ತ ಜಗಲಿಯ ಇನ್ನೊಂದು ತುದಿಗೆ  ಮುಟ್ಟುವಾಗ ಒಂದು ತಿಸ್ತಿ ತಕಲಿಯಿಂದ ಪೂರ್ತಿ ಹೊರಬರುತ್ತಿತ್ತು. ಈಗ ಖಾಲಿ ತಕಲಿಗಳಿಂದ ನೂಲನ್ನು ಹೊರಗೆ ತೆಗೆದಾಗ ತಿಸ್ತಿಯ ಮೂರು ಎಳೆಗಳ ಒಂದು ತುದಿ ಮುಖ್ಯ ವ್ಯಕ್ತಿಯ ಕೈಯಲ್ಲೂ ಇನ್ನೊಂದು ತುದಿ ಸಹಾಯಕನ ಕೈಯಲ್ಲೂ ಇರುತ್ತದೆ. ಈಗ ತಿರುಪು ಕೊಡುವವರು ತಮ್ಮ ಕೈಯಲ್ಲಿರುವ ತುದಿಯನ್ನು ಲೋಹದ ವಿಶೇಷ ತಕಲಿಯ ಕೊಕ್ಕೆಗೆ ಸಿಕ್ಕಿಸಿ ನೂಲನ್ನು ಎಡಗೈಯಲ್ಲಿ ಹಿಡಿದು ತಕಲಿಯ ದಂಡಿಯನ್ನು ಬಲ ತೊಡೆಯ ಮೇಲಿಟ್ಟು ಬಲ ಅಂಗೈಯಿಂದ ಉಜ್ಜಿ  ತಿರುಪು ಕೊಡುವುದು. ತಿರುಪು ಪಡೆದ ತಿಸ್ತಿಯ ಮೂರು ಎಳೆಗಳು ಗಿಡ್ಡವಾಗುತ್ತಾ ಹೋಗುತ್ತವೆ. ಈ ಹಂತದಲ್ಲಿ ಸಹಾಯಕನು ತನ್ನ ಕೈಯಲ್ಲಿರುವ ತುದಿಯನ್ನು ಮೊದಲೇ ಮಾಡಿಟ್ಟಿರುವ  ಸುಣ್ಣದ ಗುರುತೊಂದಕ್ಕೆ ಹಿಡಿದು ಸಾಕಷ್ಟು ತಿರುಪು ಆಯಿತೇ ಎಂದು ಪರೀಕ್ಷಿಸುವುದು. ಸರಿಯಾದ ಪ್ರಮಾಣದ ತಿರುಪು ಆಯಿತು ಎಂದು ಖಾತ್ರಿ ಆದ ಮೇಲೆ ತಿರುಪು ಕೊಡುವವರು   ತಿಸ್ತಿಯನ್ನು ಅಂಗೈ ಬೆರಳುಗಳಿಗೆ ಸುತ್ತಿ ತೊಡೆಗೆ ಹೊಸೆದು ಜೋಪಾನವಾಗಿ ತೆಗೆದಿರಿಸುವುದು.  ಈ ರೀತಿ ತಿಸ್ತಿ ಸುತ್ತಿಟ್ಟ ತಕಲಿ ಖಾಲಿ ಆಗುವ ವರೆಗೆ ಮಾಡುವುದು. ಒಂದು ಕೈಯಲ್ಲಿ ತಿಸ್ತಿಯ ತುದಿ ಮತ್ತು ಇನ್ನೊಂದು ಕೈಯಲ್ಲಿ ದಂಡಿಯ ಮೂಲಕ ತಿಸ್ತಿ ಹಾದು ಹೋದ ಖಾಲಿ ತಕಲಿ ಹಿಡಿದು ಹಿಂದೆ ಹಿಂದೆ ಸಾಗುವಾಗ ಕೆಲವೊಮ್ಮೆ ಸಹಾಯಕನ ಕೈ ಜಾರಿ ತಿಸ್ತಿಯ ನೂಲು ನೆಲಕ್ಕೆ ಬೀಳುವುದಿತ್ತು. ಆಗ ತಿಸ್ತಿ ಮಾಡುವ ಮುಖ್ಯ ವ್ಯಕ್ತಿಯ ಬೈಗುಳಗಳನ್ನು ಅರಗಿಸಿಕೊಂಡು  ಕೆಲಸವನ್ನು ಮತ್ತೆ  ಆರಂಭಿಸಬೇಕಾಗುತ್ತಿತ್ತು.

5. ಜನಿವಾರಕ್ಕೆ ಗಂಟು ಹಾಕುವುದು.
---------

ಇದನ್ನು ಮುಂಚಿತವಾಗಿ ಮಾಡಿ ಇಡಲಿಕ್ಕಿಲ್ಲ.  ಜನಿವಾರ ಬದಲಾಯಿಸಬೇಕಾದ ಮುನ್ನಾ ದಿನವಷ್ಟೇ ಮಾಡುವುದು.  ತಿರುಪು ಹಾಕಿದ ಜನಿವಾರ ತೆಗೆದುಕೊಂಡು ಪದ್ಮಾಸನ ಭಂಗಿಯಲ್ಲಿರುವ ತೊಡೆಗಳ ಸುತ್ತ ಮೂರು ಸುತ್ತು ಬರುವಂತೆ ಹೊಂದಿಸುವುದು.  ಎರಡು ತುದಿಗಳನ್ನು ಸೇರಿಸಿ ಬ್ರಹ್ಮಗಂಟು ಹಾಕಿ ಆದಷ್ಟು ಚಿಕ್ಕ ಕೊಸರು ಉಳಿಯುವಂತೆ ಜೋಡಿಸುವುದು. ಉಳಿದ ಕೊಸರನ್ನು ಗಂಟಿನೊಳಗೆ ಅಡಗಿಸುವುದು.

----------

ಮನೆ ಮಠ ತೊರೆದು ಗಡ್ಡ ಮೀಸೆ ಜಟೆ ಬೆಳೆಸಿ ಪರಿವ್ರಾಜಕರಂತೆ ಊರೂರು ತಿರುಗುವ ನಾವಡ ಎಂಬುವರು ನಮ್ಮೂರಿಗೂ ಬರುತ್ತಿದ್ದರು.  ಹೆಚ್ಚಾಗಿ ಊರ ದೇವಸ್ಥಾನದ ಅಂಬಲದ ಮೇಲೆ ಠಿಕಾಣಿ ಹೂಡುತ್ತಿದ್ದ ಅವರು ರಾತ್ರೆ ದತ್ತ ಭಜನೆ ಮಾಡಿ ನಮಗೆಲ್ಲ ದ್ರಾಕ್ಷಿ, ಕಲ್ಲುಸಕ್ಕರೆಗಳ ಪ್ರಸಾದ ಕೊಡುತ್ತಿದ್ದರು. ಹಗಲು ಹೊತ್ತು ತಕಲಿಯಲ್ಲಿ ನೂಲು ತೆಗೆದು ಯಾವ ಅಳತೆಯ ಪರಿಕರವೂ ಇಲ್ಲದೆ, ಇನ್ನೊಬ್ಬರ ಸಹಾಯವೂ ಇಲ್ಲದೆ ಜನಿವಾರ ತಯಾರಿಸುತ್ತಿದ್ದರು.

ಅವರೊಮ್ಮೆ ನಮ್ಮ ಮನೆಗೆ ಬಂದಾಗ ಹಪ್ಪಳ ತಿನ್ನುವ ಭಂಗಿಯ ಸ್ಕೆಚ್ ಒಂದು ಬಿಡಿಸಿದ್ದೆ!


--------

ಈಗ ಒಂದು ಪ್ರಶ್ನೆ.
ಮಂತ್ರಿಸಿ ಧರಿಸಲು ಸಿದ್ಧವಾದ ಗಂಟು ಹಾಕಿದ ಜನಿವಾರದಲ್ಲಿ ನೂಲಿನ ಎಷ್ಟು ಎಳೆಗಳಿರುತ್ತವೆ?

Sunday 23 January 2022

ಶ್ರಿ ಮಂಗಳಾದೇವಿ ನಿನಗೆ ಪ್ರಣಾಮ

ಮಂಗಳೂರು, ಮ್ಯಾಂಗಲೋರ್, ಮಂಜರುನ್, ಕುಡ್ಲ, ಕೊಡಿಯಾಲ, ಕುಡೇಲ, ಮೈಕಲ್, ಮಂಗಳಾಪುರಂ ಮುಂತಾದ ಹಲವು ಹೆಸರುಗಳಿಂದ ಗುರುತಿಸಲ್ಪಡುವ  ಮಂಗಳೂರಿಗೆ ಮಂಗಳೂರೆಂಬ ಹೆಸರು ಬರಲು ಕಾರಣಳಾದ ಮಂಗಳಾದೇವಿಯನ್ನು ಕುರಿತ  ಶ್ರೀ ಮಂಗಳಾದೇವಿ ನಿನಗೆ ಪ್ರಣಾಮ ಎಂಬ ಹಾಡನ್ನು ಅರಿಯದವರು ಕರ್ನಾಟಕದ ಕರಾವಳಿಯಲ್ಲಂತೂ ಯಾರೂ ಇರಲಾರರು.  ತಲತಲಾಂತರಗಳಿಂದ ಬಂದ ಸಾಂಪ್ರದಾಯಿಕ ಗೀತೆಯೇನೋ ಎನ್ನುವಷ್ಟು ಜನಪ್ರಿಯವಾದ ಇದು ಈ ಭಾಗದ ಮಹಿಳೆಯರಿಗೆಲ್ಲ ಕಂಠಪಾಠ. ಆದರೆ ಕಲಾವತಿ ರಾಗಾಧಾರಿತ ಈ ಹಾಡಿನ ಕುರಿತಾದ ಹೆಚ್ಚಿನ ಮಾಹಿತಿ ಅನೇಕರಿಗೆ ತಿಳಿದಿರಲಾರದು.

ಆಗಿನ್ನೂ  ಕ್ಯಾಸೆಟ್ ಯುಗ ಆರಂಭವಾಗಿರಲಿಲ್ಲ. ಗ್ರಾಮೊಫೋನ್ ತಟ್ಟೆಗಳ ರೂಪದಲ್ಲಿ ಮಾತ್ರ ಧ್ವನಿಮುದ್ರಣ ಆಗುತ್ತಿದ್ದುದು. ಅದಕ್ಕಾಗಿ ದೂರದ ಮದರಾಸಿಗೋ, ಬೊಂಬಾಯಿಗೋ ಹೋಗಬೇಕಿತ್ತು. 1950ರ ದಶಕದಲ್ಲಿ ಬೊಂಬಾಯಿಯ ನ್ಯಾಶನಲ್  ರೆಕಾರ್ಡ್ ಸಂಸ್ಥೆ  ಬೆಂಗಳೂರಿನ ಸೀತಾ ಫೋನ್ ಕಂಪನಿಯ ಸಹಯೋಗದೊಂದಿಗೆ ಅನೇಕ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಲಾವಣಿ, ಜಾನಪದ, ನಾಟ್ಯ ಸಂಗೀತ, ಶಾಸ್ತ್ರೀಯ ಸಂಗೀತ, ಹರಿಕಥೆ, ನಾಟಕಗಳು ಹೀಗೆ ವೈವಿಧ್ಯಮಯ ಗ್ರಾಮೊಫೋನ್ ರೆಕಾರ್ಡುಗಳನ್ನು ತಯಾರಿಸುತ್ತಿದ್ದುದು ಚಂದಮಾಮದ ಜಾಹೀರಾತುಗಳಿಂದ ತಿಳಿಯುತ್ತದೆ. ಆದರೆ ಅವುಗಳಲ್ಲಿ ಕರಾವಳಿ ಕಲೆಗಳಾದ ತಾಳಮದ್ದಳೆ, ಯಕ್ಷಗಾನ ಇತ್ಯಾದಿಗಳ ಒಂದೂ ರೆಕಾರ್ಡ್ ಇಲ್ಲದಿರುವುದರಿಂದ ಈ ಭಾಗ ಆ ಕಂಪನಿಗಳ ವ್ಯಾಪ್ತಿಯಿಂದ ಹೊರಗಿದ್ದುದು ಅರಿವಾಗುತ್ತದೆ. ಆಗ ದಕ್ಷಿಣ ಕನ್ನಡ ಮೈಸೂರು ರಾಜ್ಯದ ಅಂಗವಾಗಿರದೆ ಮದರಾಸು ಪ್ರೆಸಿಡೆನ್ಸಿಗೆ ಸೇರಿದ್ದುದು ಇದಕ್ಕೆ ಕಾರಣವೋ ಅಥವಾ ಈ ಕಡೆಯವರು ಆ ದಿಸೆಯಲ್ಲಿ ಆಸಕ್ತಿ ತೋರಿಸಿರಲಿಲ್ಲವೋ ತಿಳಿಯದು.

1970ರ ದಶಕದ ಆದಿ ಭಾಗದಲ್ಲಿ ತುಳು ಚಿತ್ರಗಳ ತಯಾರಿಕೆ ಆರಂಭವಾಗಿ ಹಾಡುಗಳ ಧ್ವನಿಮುದ್ರಣ ಮದರಾಸಿನಲ್ಲಿ ನಡೆಯತೊಡಗಿತು. ಮದರಾಸಿನೊಂದಿಗೆ ದಕ್ಷಿಣ ಕನ್ನಡಿಗರ ನಂಟು ಬೆಳೆಯಿತು. ಅಶೋಕ್ ಚರಣ್ ನೈಟ್ ಮೂಲಕ ಪ್ರಸಿದ್ಧರಾಗಿದ್ದ ಅಶೋಕ್ ಮತ್ತು ಚರಣ್ ಸಹೋದರರು 1973ರಲ್ಲಿ ಮದರಾಸಿಗೆ ತೆರಳಿ ನವ್ಯ ಗೀತೆಗಳು ಎಂಬ ಹೆಸರಿನಲ್ಲಿ ನಾಲ್ಕು ಪ್ರೈವೇಟ್ ಹಾಡುಗಳ ಗ್ರಾಮೊಫೋನ್ ರೆಕಾರ್ಡ್ ಹೊರ ತಂದರು. ಈ ಹಾಡುಗಳ ರಚನೆ ಮತ್ತು ಸಂಗೀತ ಸಂಯೋಜನೆ  ಅಶೋಕ್ ಚರಣ್ ಅವರದೇ ಆಗಿದ್ದು  ಇದಕ್ಕೆ ಪಾವಲಾರ್ ಬ್ರದರ್ಸ್ ಹೆಸರಿನಲ್ಲಿ ಇಳಯರಾಜಾ ಅವರು ಆರ್ಕೆಷ್ಟ್ರಾ ಅರೇಂಜ್  ಮಾಡಿದ್ದರು.  ಇದರಿಂದ ಸ್ಪೂರ್ತಿ ಪಡೆದ ವಿಜಯಕುಮಾರ್ ಎಂಬ ತರುಣ 1976ರಲ್ಲಿ ಮಂಗಳೂರಿನ  ಶರವು, ಮಂಗಳಾದೇವಿ, ಕದ್ರಿ ಮತ್ತು ಕುದ್ರೋಳಿ ದೇವಸ್ಥಾನಗಳನ್ನು ಕುರಿತು ಒಂದೊಂದು ಹಾಡನ್ನು ತಾವೇ ಬರೆದು, ಸ್ವರ ಸಂಯೋಜಿಸಿಕೊಂಡು ಮದರಾಸಿಗೆ ಹೋದರು. ಅಲ್ಲಿ ಎ.ಎ. ರಾಜ್ ಎಂಬವರ ಆರ್ಕೆಷ್ಟ್ರಾ ಸಂಯೋಜನೆಯೊಂದಿಗೆ ಪಿ.ಬಿ.ಶ್ರೀನಿವಾಸ್ ಅವರ ಧ್ವನಿಯಲ್ಲಿ ಶರವು ಮಹಾ ಗಣಪತಿ ಮತ್ತು ಕದಳಿ ವನದಲಿ ಶ್ರೀ ಮಂಜುನಾಥ ಹಾಗೂ ಬಿ.ಕೆ.ಸುಮಿತ್ರಾ ಧ್ವನಿಯಲ್ಲಿ ಶ್ರೀ ಮಂಗಳಾದೇವಿ ನಿನಗೆ ಪ್ರಣಾಮ ಮತ್ತು ನಾರಾಯಣ ಗುರುಸ್ವಾಮಿ ಎಂಬ ಹಾಡುಗಳ ಗ್ರಾಮೊಫೋನ್ ರೆಕಾರ್ಡ್ ಮಾಡಿಸಿದರು. ಈ ನಾಲ್ಕೂ ಹಾಡುಗಳಿಗೆ ಜನರಿಂದ ಉತ್ತಮ ಸ್ವಾಗತ ದೊರಕಿತು. ಅದರಲ್ಲೂ ಶರವು ಮಹಾ ಗಣಪತಿ ಮತ್ತು ಶ್ರೀ ಮಂಗಳಾದೇವಿ ನಿನಗೆ ಪ್ರಣಾಮ ಹಾಡುಗಳು ಅತೀವ ಜನಪ್ರಿಯತೆ ಗಳಿಸಿ ಸಾರ್ವಕಾಲಿಕ ಹಿಟ್ ಎನಿಸಿದವು. ಅಂತರ್ಜಾಲ ಕ್ರಾಂತಿಯಿಂದಾಗಿ ಉಳಿದ ಮೂರು ಹಾಡುಗಳು ಸುಲಭಲಭ್ಯವಾಗಿದ್ದರೂ ಅದೇಕೋ ಶ್ರೀ ಮಂಗಳಾದೇವಿ ಹಾಡು ಮಾತ್ರ ಮೂಲ ರೂಪದಲ್ಲಿ ಎಲ್ಲೂ ಸಿಗದಂತಾಗಿ ಇತರರು ಹಾಡಿದ್ದನ್ನು ಕೇಳಿ ತೃಪ್ತಿ ಪಡಬೇಕಾಗಿತ್ತು.


ನಮ್ಮ ಸಹೋದ್ಯೋಗಿ ಮಿತ್ರರೊಬ್ಬರಿಗೆ ಗುಜರಿ ಅಂಗಡಿಗಳಲ್ಲಿ ಗ್ರಾಮೊಫೋನ್ ರೆಕಾರ್ಡುಗಳೇನಾದರೂ ಕಂಡರೆ ಅವುಗಳನ್ನು ಕೊಂಡು ಸಂಗ್ರಹಿಸುವ ಹವ್ಯಾಸ ಇದೆ.  ಇತ್ತೀಚೆಗೆ ಅವರು  ತಮ್ಮ ಸಂಗ್ರಹವನ್ನು ಪರಿಶೀಲಿಸುತ್ತಿರುವಾಗ ಶ್ರೀ ಮಂಗಳಾದೇವಿ ಹಾಡಿನ ರೆಕಾರ್ಡೂ ಅವುಗಳ ಮಧ್ಯೆ ಇರುವುದು ಅವರ ಗಮನಕ್ಕೆ ಬಂತು. ಕೂಡಲೇ ಅದರ ಫೋಟೊ ತೆಗೆದು ನನಗೆ ಕಳಿಸಿದರು. ಅದರ mp3 ಮಾಡಿ ಕೊಡಿ ಎಂದು ಕೇಳಿದಾಗ ತಮ್ಮಲ್ಲಿರುವ ರೆಕಾರ್ಡ್ ಪ್ಲೇಯರಿನ ಮೋಟಾರು ಕೆಟ್ಟು ಹೋಗಿದೆ ಎಂದು ತಿಳಿಸಿದರು. ನಾನು ವಿಷಯವನ್ನು ಅಲ್ಲಿಗೇ ಬಿಟ್ಟೆ. ಕೆಲವು ದಿನಗಳ ನಂತರ ಹಾಡಿನ mp3 ರೆಡಿ ಆಗಿದೆ ಎಂದು ಅವರಿಂದ ಫೋನ್ ಬಂದಾಗ ನನಗೆ ಅಚ್ಚರಿ ಆಯಿತು. ತಾಂತ್ರಿಕ ನಿಪುಣರೂ ಆಗಿರುವ ಅವರು ಗ್ರಾಮಫೋನ್ ಟರ್ನ್ ಟೇಬಲನ್ನು ಕೈಯಲ್ಲೇ ಸ್ಥಿರವಾದ ವೇಗದಲ್ಲಿ ತಿರುಗಿಸಿ ಕಂಪ್ಯೂಟರಿನಲ್ಲಿ ಹಾಡನ್ನು ರೆಕಾರ್ಡ್ ಮಾಡಿದರಂತೆ.   ವೇಗದ ಅಲ್ಪ ಸ್ವಲ್ಪ ವ್ಯತ್ಯಾಸವನ್ನು ಆ ಮೇಲೆ ಸಾಫ್ಟ್‌ವೇರ್ ಮೂಲಕ ನಾನು ಸರಿಪಡಿಸಿಕೊಂಡೆ.  ಈ ರೀತಿ ಕಣ್ಮರೆಯಾಗಿ ಹೋಗಿದ್ದ ಹಾಡೊಂದು ಪುನರ್ಜನ್ಮ ಪಡೆದು ನಮಗೆಲ್ಲ ಕೇಳಲು ದೊರಕಿತು.

ವಾಸ್ತವವಾಗಿ ರೆಕಾರ್ಡುಗಳನ್ನು ತಯಾರಿಸುವ ಕಂಪನಿಯೇ ಕಲಾವಿದರಿಗೆ ಗೌರವ ಧನ ಕೊಡಬೇಕು. ಇಲ್ಲಿ ವಿಜಯಕುಮಾರ್ ಅವರು ದಾನಿಗಳ ಸಹಾಯದಿಂದ ತಾನೇ  ಹಣ ಹೊಂದಿಸಿ ಈ ಧ್ವನಿಮುದ್ರಣ  ಮಾಡಿಸಿದಂತಿದೆ.   ರೆಕಾರ್ಡಿನಲ್ಲಿ ಬರೆದಿರುವ Sponsored by Srikrishna ಎಂಬ ವಿಶೇಷ ಉಲ್ಲೇಖವನ್ನು ಗಮನಿಸಿ. P.Bಯವರ ಹೆಸರು P.B. Sreenivos ಎಂದಿರುವುದನ್ನೂ ಕಾಣಬಹುದು. ಎಲ್ಲ ಧ್ವನಿಮುದ್ರಿಕೆಗಳಲ್ಲೂ ಅವರ ಹೆಸರು ಹೀಗೆ ಶ್ರೀನಿವೋಸ್ ಎಂದೇ ಇರುತ್ತಿತ್ತು.  ಇದಕ್ಕೇನು ಕಾರಣ ಎಂದು ತಿಳಿದಿಲ್ಲ.

ಸಾಹಿತಿ ವಿಶುಕುಮಾರ್, ಸಂಗೀತಗಾರ ಚರಣ್‌ಕುಮಾರ್ ಮತ್ತು ಪತ್ರಕರ್ತ ಸಂತೋಷ್‌ಕುಮಾರ್ ಗುಲ್ವಾಡಿ ಕರಾವಳಿಗೆ ಕೀರ್ತಿ ತಂದ ಕುಮಾರತ್ರಯರು ಎಂದು ಹೇಳುವುದುಂಟು. ನಾಲ್ಕನೆಯವರಾಗಿ ವಿಜಯಕುಮಾರ್ ಕೂಡ ಆ ಪಟ್ಟಿಗೆ ಸೇರಲು ಅರ್ಹರು.



ಒಂದೊಂದು ಬದಿಯಲ್ಲಿ ಎರೆಡೆರಡು ಹಾಡುಗಳಿರುವ 45 RPMನ   EP(Extended Play) ರೆಕಾರ್ಡಿನಲ್ಲಿರುವ ಆ ನಾಲ್ಕೂ ಹಾಡುಗಳನ್ನು ಕೆಳಗಿನ ಪಟ್ಟಿಯಿಂದ ಆರಿಸಿ ಆಲಿಸಬಹುದು.  (ವಿವಿಧ ರೀತಿಯ ಗ್ರಾಮೊಫೋನ್ ರೆಕಾರ್ಡುಗಳ ಬಗ್ಗೆ ತಿಳಿಯಲು ಗ್ರಾಮೊಫೋನ್ ಗಾಥೆ ಲೇಖನ ನೋಡಿ.)




ಹೊಸಬರೆಂದಲ್ಲ, ಪ್ರಸಿದ್ಧ ಸಂಗೀತ ನಿರ್ದೇಶಕರ ಸಫಲತೆಯ ಹಿಂದೆಯೂ ಅರೇಂಜರ್‌ಗಳ ಕಾಣದ ಕೈಯ ಕೈವಾಡ ಇದ್ದೇ ಇರುತ್ತದೆ. ಈ ಹಾಡುಗಳಿಗೆ ಆರ್ಕೆಷ್ಟ್ರಾ ಅರೇಂಜ್ ಮಾಡಿದ  ಎ.ಎ. ರಾಜ್ ಕೆಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ. ಪಿ.ಬಿ.ಎಸ್, ಬಿ.ಕೆ. ಸುಮಿತ್ರಾ ಮತ್ತು ಸಂಗಡಿಗರ ಧ್ವನಿಗಳುಳ್ಳ ನೀಲಗಗನದಿ ಹಾರುವ ಓ ಗಾಳಿಪಟ, ಪಿ.ಬಿ.ಎಸ್ ಹಾಡಿರುವ ಎಲ್ಲರೂ ಸೇರಿ ಒಂದಾಗಿ ನವಜೀವನ ಗೀತೆಯ ಹಾಡೋಣ,  ಪಿ.ಬಿ.ಎಸ್, ಎಲ್.ಆರ್. ಈಶ್ವರಿ ಹಾಡಿದ ಪುಟ್ನರ್ಸಿ ಬಾರೇ ಪಟ್ಣಕ್ಕೆ ಮತ್ತು ಚಿ. ಉದಯಶಂಕರ್ ಮತ್ತು ಜಾನಕಿ ಹಾಡಿದ ಹೆಣ್ಣಿನದು ಹೂ ಮನಸು ಇತ್ಯಾದಿ ಹಾಡುಗಳಿದ್ದ ಮನಃಶಾಂತಿ ಇವುಗಳಲ್ಲೊಂದು. ಈ  ಹಾಡುಗಳು ವಿವಿಧಭಾರತಿಯ ಮಧುರ್ ಗೀತಂ ಕಾರ್ಯಕ್ರಮದಲ್ಲಿ ಬಹಳ ಸಮಯ ಪ್ರಸಾರವಾಗುತ್ತಿದ್ದು ಈಗ ಹಿನ್ನೆಲೆಗೆ ಸರಿದಿವೆ.  ಜೈ ಜವಾನ್ ಜೈ ಕಿಸಾನ್ ಎಂಬ 1971 ಹಿಂದಿ ಚಿತ್ರವೊಂದಕ್ಕೂ ಅವರ ಸಂಗೀತವಿದ್ದು ಅದರಲ್ಲಿ ಜೇಸುದಾಸ್, ಪಿ.ಬಿ.ಎಸ್ ಮತ್ತು ಎಸ್. ಜಾನಕಿ  ಹಾಡಿದ ಹಾಡುಗಳಿದ್ದವು. ಈ ಹಾಡುಗಳು ರೇಡಿಯೋ ಸಿಲೋನಿನ ಏಕ್ ಹೀ ಫಿಲ್ಮ್ ಕೇ ಗೀತ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಬಗ್ಗೆ ನನ್ನ ದಿನಚರಿಯಲ್ಲಿ ಉಲ್ಲೇಖ ಇದೆ.