Tuesday 3 December 2019

ಬಣ್ಣದ ಅಂಗಿ ತೊಟ್ಟ ತಂಗಿ


ಆಲಿಸಿದೊಡನೆ ನಮ್ಮ ಮನೆಗೆ ಆಗ ತಾನೇ ಬಂದಿದ್ದ ಹೊಸ ನ್ಯಾಶನಲ್ ಎಕ್ಕೊ ರೇಡಿಯೋದ ವಾರ್ನಿಶ್ ವಾಸನೆ ಈಗಲೂ ಮೂಗಿಗೆ ಅಡರುವಂತೆ ಮಾಡುವ  ಹಾಡುಗಳ ಪೈಕಿ 1963ರ ಗೌರಿ ಚಿತ್ರದ ಪುಟ್ಟ ಪುಟ್ಟ ಹೆಜ್ಜೆ ಇಟ್ಟು  ಕೂಡ ಒಂದು. ಯಾವ ಜನ್ಮದ ಮೈತ್ರಿ ಮತ್ತು ಇವಳು ಯಾರು ಬಲ್ಲೆಯೇನು ಆ ಚಿತ್ರದ ಕ್ಲಾಸ್ ಹಾಡುಗಳಾಗಿದ್ದರೂ ಆಗ ಇದರ ಮಂದೆ  ಅವು ನನಗೆ ಎರಡನೆ ದರ್ಜೆಯವುಗಳಾಗಿ ಕಾಣಿಸುತ್ತಿದ್ದವು. ಹಾಗೆಯೇ  ಕನ್ಯಾರತ್ನದ ಮೈಸೂರ್ ದಸರಾ ಬೊಂಬೆ, ಮಲ್ಲಿ ಮದುವೆಯ ಮಂಗನ ಮೋರೆಯ ಮುದಿ ಮೂಸಂಗಿ, ಕಿತ್ತೂರು ಚೆನ್ನಮ್ಮದ   ದೇವರು ದೇವರು ದೇವರೆಂಬುವರು, ಅಮರ ಶಿಲ್ಪಿ ಜಕ್ಕಣ್ಣದ  ಜಂತರ್ ಮಂತರ್ ಮಾಟವೋ, ರತ್ನ ಮಂಜರಿಯ ಯಾರು ಯಾರು ನೀ ಯಾರು ಮುಂತಾದವು ಆ ಚಿತ್ರಗಳ ಇನ್ನುಳಿದ ಹಾಡುಗಳನ್ನು ಹಿಂದಿಕ್ಕಿ ನನ್ನ ಮೆಚ್ಚಿನವಾಗಿದ್ದವು.  ಇವುಗಳಲ್ಲಿರುವ ಏನೋ ಒಂದು ಅನನ್ಯತೆ ಇದಕ್ಕೆ ಕಾರಣವಾಗಿರಬಹುದು.

ಆಗಲೇ ಒಂದು ಮಗುವಿರುವ ಕುಟುಂಬಕ್ಕೆ ಇನ್ನೊಂದರ ಆಗಮನವಾಗುವ ಸೂಚನೆ ದೊರಕಿದಾಗ  ಕುಟುಂಬದ ಮಗು, ತಂದೆ ಮತ್ತು ತಾಯಿಯ ನಡುವೆ ನಡೆಯುವ ಸಂವಾದದ ರೂಪದಲ್ಲಿರುವ ಈ ಹಾಡನ್ನು ಬರೆದವರು ಕು.ರ.ಸೀ. ಜಿ.ಕೆ.ವೆಂಕಟೇಶ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದವರು ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ ಮತ್ತು ಬೇಬಿ ಲತಾ.  ಈಕೆ ಬೆಂಗಳೂರು ಲತಾ ಎಂದು ಕೆಲವರೆನ್ನುತ್ತಾರೆ.  ಆದರೆ ಎರಡು ವರ್ಷ ಮೊದಲೇ 1961ರ ಕಣ್ತೆರೆದು ನೋಡು ಚಿತ್ರದಲ್ಲಿ ಬಂಗಾರದೊಡವೆ ಬೇಕೆ ಹಾಡಿನ ಒಂದು ವರ್ಶನನ್ನು ಪ್ರೌಢ ಮಹಿಳೆಯ ಧ್ವನಿಯಲ್ಲಿ ಬೆಂಗಳೂರು ಲತಾ ಹಾಡಿದ್ದರು. ಹೀಗಾಗಿ ಈಕೆ ಲತಾ ಹೆಸರಿನ ಬೇರೆ ಬಾಲಕಿ ಇರಬಹುದು ಎಂದು ನನ್ನ ಅನಿಸಿಕೆ. ಅಂದು ರೇಡಿಯೋದಲ್ಲಿ ಈ ಹಾಡು ಪ್ರಸಾರವಾಗುವಾಗ ಪಿ.ಬಿ.ಶ್ರೀನಿವಾಸ್ ಮತ್ತು ಎಸ್. ಜಾನಕಿ ಅವರ ಹೆಸರು ಮಾತ್ರ ಹೇಳುತ್ತಿದ್ದರು ಎಂದು ನನ್ನ ನೆನಪು.  ಬಹುಶಃ ಬಾಲಕಿಯ ಉಲ್ಲೇಖ ಧ್ವನಿಮುದ್ರಿಕೆಯಲ್ಲಿರಲಿಲ್ಲವೋ ಏನೋ.


ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಎಂದು ಗಂಡ ಹೆಂಡತಿ ನಡುವೆ  ಚರ್ಚೆ ನಡೆದು ಕೊನೆಗೆ  ಗಂಡ ನಿನಗೆ ತಮ್ಮ ಬೇಕೋ ತಂಗಿ ಬೇಕೋ ಎಂದು ಮಗುವನ್ನು ಕೇಳುತ್ತಾನೆ.  ಮಗು ಅವಲಕ್ಕಿ ಪವಲಕ್ಕಿ ಎಂದು ಎಣಿಸುತ್ತಾ ತಂದೆ ತಾಯಿಯನ್ನು ಸರದಿಯಂತೆ ಮುಟ್ಟುತ್ತಾ ಹೋಗುವಾಗ  ಕೊನೆಯ  ಕೊಠಾರ್ ಶಬ್ದ ತಾಯಿಯ ಪಾಲಾಗಿ ತನಗೆ ತಂಗಿ ಸಿಗುತ್ತಾಳೆ  ಎಂದು ಸಂಭ್ರಮಿಸಿದ ಮಗು ಗಿಡ್ಡು ಪುಟಾಣಿ ಮಕ್ಕಳ ರಾಣಿ ಬರುತ್ತಾಳೆ ಎಂದು  ಹಾಡ ತೊಡಗುತ್ತದೆ.  ತಂದೆ ತಾಯಿ ಇಬ್ಬರೂ ದನಿಗೂಡಿಸುತ್ತಾರೆ.

ಹೆಣ್ಣು ಹುಟ್ಟಿದರೆ ಮದುವೆ, ವರದಕ್ಷಿಣೆ ಎಂದು ಸಾಲದ ಹಿರಿ ಹೊರೆ ತಂದು ಇದ್ದ ಬದ್ದದ್ದನ್ನೆಲ್ಲ ಮಾರಿ ತಿರುಪೆ ಎತ್ತುವಂತಾದೀತು ಎಂದು ವ್ಯಾವಹಾರಿಕ ಬುದ್ಧಿಯ ತಂದೆ ಭೀತಿ ವ್ಯಕ್ತ ಪಡಿಸಿದಾಗ ಹೆಣ್ಣೆಂದರೆ ಪರಮಾನಂದದ ಭಾಗ್ಯ ತರುವವಳು; ಕರುಣೆ, ಪರ ಸೌಖ್ಯ ಚಿಂತನೆ, ಸಹನೆಗಳ ಸಾಕಾರಮೂರ್ತಿಯಾದ ಶುಭಮಂಗಳೆ ಜನಿಸಿದರೆ ಮನೆಯಲ್ಲಿ ಕುಬೇರನ ಖಜಾನೆಯೇ ತೆರೆದಂತಾಗಿ ನಿರಂತರ ಧನಪ್ರಾಪ್ತಿಯಾಗುತ್ತದೆ, ಭಯ ಪಡುವ ಅಗತ್ಯವಿಲ್ಲ  ಎಂದು ತಾಯಿ ವಾದಿಸುತ್ತಾಳೆ. ಮುಂದೆ ಎಲ್ಲ ಸಂಸಾರಗಳಲ್ಲಾಗುವಂತೆ ಮಾತಲ್ಲಿ ನಿನ್ನನ್ನು ಸೋಲಿಸಲಾರೆ ಎಂದು ಪತ್ನಿಯ ಮುಂದೆ ಪರಾಜಿತನಾಗುವ ಪತಿ ಶುಭಮಂಗಳೆಯನ್ನು ಸ್ವಾಗತಿಸಲು ಮಾನಸಿಕವಾಗಿ ಸಿದ್ಧನಾಗುತ್ತಾನೆ. ಇಲ್ಲಿ ಪತಿ ಗಂಡು ಮತ್ತು ಪತ್ನಿ ಹೆಣ್ಣು ಮಗು ಬಯಸುವ ಚಿತ್ರಣವಿದೆ. ಇದಕ್ಕೆ ತದ್ವಿರುದ್ಧವಾಗಿ  ಬಾಳು  ಬೆಳಗಿತು ಚಿತ್ರದ ಚೆಲುವಾದ ಮುದ್ದಾದ ಹಾಡಲ್ಲಿ  ಪತಿ ಹೆಣ್ಣು ಮಗುವನ್ನು ಮತ್ತು ಪತ್ನಿ ಗಂಡು ಮಗುವನ್ನು ಬಯಸುತ್ತಾಳೆ.  ವಾಸ್ತವವಾಗಿ ಇದು ಶಾಲೆಗಳ ಚರ್ಚಾಸ್ಪರ್ಧೆಗಳಲ್ಲಿ  ಹಳ್ಳಿ ಮೇಲೋ ಪಟ್ಟಣ ಮೇಲೋ ಎಂಬ ವಾಗ್ವಾದ ನಡೆದಂತೆ  ಚರ್ಚೆಗಾಗಿ ಚರ್ಚೆಯೇ ಹೊರತು ತಂದೆ ತಾಯಿಗಳಿಗೆ ಗಂಡು ಹೆಣ್ಣು ಎರಡೂ ಒಂದೇ. ನಾನು ಚಿಕ್ಕಂದಿನಿಂದಲೂ ನಮ್ಮ ಕುಟುಂಬದಲ್ಲಾಗಲಿ, ಬಂಧು ಮಿತ್ರರಲ್ಲಾಗಲಿ ಹೆಣ್ಣು ಹುಟ್ಟಿದಾಗ ಗಂಟೆ ಬಾರಿಸುವುದು, ಗಂಡು ಹುಟ್ಟಿದಾಗ ಶಂಖ ಊದುವುದು ಮತ್ತು ಆರನೆ ದಿನ ಷಷ್ಟಿ ಪೂಜೆಗೆ ಗಂಡಾದರೆ ಕಡಲೆ  ಉಸ್ಲಿ, ಹೆಣ್ಣಾದರೆ ಹೆಸರು ಕಾಳಿನ ಉಸ್ಲಿ ಎಂಬ ವ್ಯತ್ಯಾಸ ಬಿಟ್ಟರೆ ಬೇರೆ ಯಾವ ಭೇದ ಭಾವವನ್ನೂ ಕಾಣಲಿಲ್ಲ.  ಅದೇನೇ ಇರಲಿ. ಸಿನಿಮಾದಲ್ಲಿ ಆಕೆಗೆ ಹೆಣ್ಣು ಮಗುವೇ ಹುಟ್ಟುತ್ತದೆ.  ಆದರೆ ಏನೇನೋ ಘಟನಾವಳಿಗಳು ಜರುಗಿ ಅದು ಅವರಿಗೆ ದಕ್ಕದೆ ಇನ್ಯಾರ ಮನೆಯಲ್ಲೋ ಬೆಳೆಯಬೇಕಾಗಿ ಬರುತ್ತದೆ. ಅದುವರೆಗೆ ನೆಮ್ಮದಿಯಲ್ಲಿದ್ದ ಕುಟುಂಬ ಇನ್ನಿಲ್ಲದ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.   ಕೊನೆಗೆ ಎಲ್ಲ ಸುಖಾಂತ್ಯವಾಗುತ್ತದೆ ಎನ್ನಿ.

ಅವಲಕ್ಕಿ ಪವಲಕ್ಕಿ
ಕಾಂಚನ ಮಿಣ ಮಿಣ
ಢಾಂ ಢೂಂ ಡಸ್ಸ ಪುಸ್ಸ
ಕೊಂಯ್ ಕೊಠಾರ್

ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಟಾಣಿ ಮಕ್ಕಳ ರಾಣಿ ಬರ್ತಾಳೆ

ಹೊಯ್ ಬರ್ತಾಳೆ
ಭಲೆ ಬಂಗಾರ ತಂಗಿ ಬರ್ತಾಳೆ


ಆಹಾ
ಓಹೋ
ಬಂದರೆ ತಂಗಿ ಕೇಳೊ ಕಮಂಗಿ
ಮನೆ ಮಠ ಚೊಕ್ಕಟ ಕೈಯಲ್ಲಿ ಕರಟ
ದಿನಬೆಳಗಾದರೆ ಸಾವಿರ ನೋವು ತರ್ತಾಳೆ

ಹೊಯ್
ತರ್ತಾಳೆ ಒಂದು ಸಾಲದ ಹಿರಿ ಹೊರೆ ತರ್ತಾಳೆ


ಹೆಂಗರುಳು ಪರಮಾನಂದ ಭಾಗ್ಯದ ತಿರುಳು
ಯಾವಾಗಲೂ
ಕರುಣೆ ಪರ ಸೌಖ್ಯ ಚಿಂತನೆ
ಸಹನೆ ಸದಾ
ಹೊರ ಹೊಮ್ಮುವ ಜೀವನ ಪಾವನ ತಾನೆ
ಶುಭಮಂಗಳೆ ಜನಿಸಿದ ದಿನ
ನಿರಂತರ ಧನ
ಕುಬೇರನ ಮಿಲನ
ಭಯವೇತಕೆ


ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಟಾಣಿ ಮಕ್ಕಳ ರಾಣಿ ಬರ್ತಾಳೆ

ಹೊಯ್ ಬರ್ತಾಳೆ
ಭಲೆ ಬಂಗಾರ ತಂಗಿ ಬರ್ತಾಳೆ


ಸೋಲಿಸಬಲ್ಲೆನೆ ನಾ ಮಾತಲಿ ನೀ ಬಲು ಜಾಣೆ
ಎಲ್ಲಕೂ ನೀವೇ ಗುರು ಎಂಬುದ ನಾ ಮರೆತೇನೆ
ಪರಾಜಿತನಾದೆನೆ ಬಾ ನಿಲ್ಲಿಸು ಈ ಬಣ್ಣನೆ
ಶುಭಮಂಗಳೆ ಜನಿಸಿದ ದಿನ
ನಿರಂತರ ಧನ
ಕುಬೇರನ ಮಿಲನ
ಭಯವೇತಕೆ


ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಟಾಣಿ ಮಕ್ಕಳ ರಾಣಿ ಬರ್ತಾಳೆ

ಹೊಯ್ ಬರ್ತಾಳೆ
ಭಲೆ ಬಂಗಾರ ತಂಗಿ ಬರ್ತಾಳೆ

ಹೆಣ್ಣು ಮಕ್ಕಳನ್ನು ಉಳಿಸಿ ಬೆಳೆಸಲು ಮುಂದೊಂದು ದಿನ ದೇಶವ್ಯಾಪಿ ಚಳವಳಿಯನ್ನೇ ಹಮ್ಮಿಕೊಳ್ಳಬೇಕಾಗಿ ಬರಬಹುದು ಎಂದು ಕು.ರ.ಸೀ ಆಗಲೇ ಮನಗಂಡಿದ್ದರಿಂದ ಅದರ ಮುನ್ನುಡಿಯೆನ್ನಬಹುದಾದ ಇಂತಹ ಕವನ ರಚಿಸಿದರೋ ಏನೋ. ಸಾಮಾನ್ಯವಾಗಿ ಕ್ಲಿಷ್ಟ ಪದಗಳುಳ್ಳ ಸಂಕೀರ್ಣ ಸಾಲುಗಳ ಹಾಡುಗಳನ್ನು ಬರೆಯುತ್ತಿದ್ದ ಅವರು  ಇಲ್ಲಿ  ಸರಳತೆಗೆ ಒತ್ತು ಕೊಟ್ಟರೂ ಸಾಧ್ಯವಾದಲ್ಲೆಲ್ಲ ಅಂತ್ಯ ಪ್ರಾಸ, ದ್ವಿತೀಯಾಕ್ಷರ ಪ್ರಾಸ, ಒಳ ಪ್ರಾಸಗಳನ್ನು ಬಳಸಿದ್ದಾರೆ.  ಚಿತ್ರಗೀತೆಗಳನ್ನು ಅಷ್ಟಾಗಿ ಆಸ್ವಾದಿಸದ ನಮ್ಮ ಹಿರಿಯಣ್ಣ ಕೂಡ ಈ ಹಾಡು ರೇಡಿಯೊದಲ್ಲಿ ಮೊದಲ ಬಾರಿ ಬಂದಾಗ ಮನೆಮಠ ಚೊಕ್ಕಟ ಕೈಯಲ್ಲಿ ಕರಟ ಎಂಬ ಸಾಲಿನ ಗೂಢಾರ್ಥವನ್ನು ಮೆಚ್ಚಿದ್ದರು. ಮಕ್ಕಳು ಇಷ್ಟ ಪಡುವ ಅಟ್ಟ ಮುಟ್ಟ ತನ್ನಾ ದೇವಿ, ವನರಿ ಟೋರಿ ಟಿಕ್ರಿ ಪೇನ್ ಇತ್ಯಾದಿಗಳನ್ನು ಹೋಲುವ ಎಣಿಕೆಯ ಆಟವನ್ನು ಆರಂಭದಲ್ಲಿ ಅಳವಡಿಸಿದ್ದು   ಹಾಡಿನ  ಆಕರ್ಷಣೆಯನ್ನು ಹೆಚ್ಚಿಸಿದೆ.  ಅವಲಕ್ಕಿ ಪವಲಕ್ಕಿಯನ್ನು ಹೋಲುವ ಅಬ್ಬಲಕ ತಬ್ಬಲಕ ಎಂಬ ಎಣಿಕೆಯ ಆಟವನ್ನು ಮಕ್ಕಳ ಗುಂಪಿನಲ್ಲಿ  ಶಬ್ದ ರಹಿತವಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದವರನ್ನು ಗುರುತಿಸಲು ನಮ್ಮ ಕಡೆ ಬಳಸುತ್ತಿದ್ದರು!  ವಿವರಗಳಿಗೆ ಬಾಲ್ಯದ ಆಟ ಲೇಖನ ನೋಡಬಹುದು.

ಕೀರವಾಣಿಯ ಸ್ವರಗಳನ್ನು ಮುಖ್ಯವಾಗಿಟ್ಟುಕೊಂಡು ಲಾವಣಿ ಶೈಲಿಯಲ್ಲಿ ಸಂಯೋಜಿಸಿದ  ಈ ಹಾಡಿನಲ್ಲಿ ಜಿ.ಕೆ. ವೆಂಕಟೇಶ್  ಅಲ್ಲಲ್ಲಿ ಇತರ ಸ್ವರಗಳನ್ನೂ ಪ್ರಯೋಗಿಸಿದ್ದಾರೆ. ವಯಲಿನ್ಸ್, ಮ್ಯಾಂಡೊಲಿನ್, ಡಬಲ್ ಬೇಸ್ ಗಿಟಾರ್, ಕೊಳಲು-ಕ್ಲಾರಿನೆಟ್ ಮುಂತಾದವುಗಳೊಡನೆ ಮುಖ್ಯ ತಾಳವಾದ್ಯವಾಗಿ ಢೋಲಕ್ ಬಳಸಲಾಗಿದೆ. ಒಂದೆಡೆ ಜಲತರಂಗವೂ ಕೇಳಿಸುತ್ತದೆ.  ಚಿತ್ರಗೀತೆಗಳಲ್ಲಿ ಕಮ್ಮಿಯೇ ಕೇಳಬರುವ ಮೋರ್ ಸಿಂಗ್ ಬಳಕೆ ಹಾಡಿನ ಅಂದ ಹೆಚ್ಚಿಸಿದೆ.  ಕೆಲವು ಕಡೆ ಢೋಲಕ್ ನಾಲ್ಕನೆ ಕಾಲದ ನಡೆಯಲ್ಲಿ ನುಡಿಯುತ್ತದೆ.  ಒಂದೆಡೆ ಹಿಂದಿಯ ಎಸ್.ಎನ್. ತ್ರಿಪಾಠಿ ಅವರ ಹಾಡುಗಳಲ್ಲಿ ಕೇಳಿಬರುತ್ತಿದ್ದಂತಹ ಎತ್ತುಗಡೆ ಉರುಳಿಕೆಯನ್ನು ಗುರುತಿಸಬಹುದು. ಪಸಾಸ ಸಗಾಗ ಗಪಾಪ ದಪಗನಿಸ ಎಂಬ ಮುಕ್ತಾಯ ಹಾಡನ್ನು ಬೇರೆಯೇ ಎತ್ತರಕ್ಕೆ ಒಯ್ದು ನಿಲ್ಲಿಸುತ್ತದೆ.  ಚಿತ್ರದ ಟೈಟಲ್ಸಲ್ಲಿ ವೆಂಕಟೇಶ್ ಅವರ ತಮ್ಮ ಜಿ.ಕೆ. ರಘುವನ್ನು ಸಹಾಯಕ ಸಂಗೀತ ನಿರ್ದೇಶಕ ಎಂದು ತೋರಿಸಲಾಗಿದೆ.  ಬಂಗಾರದ ಪಂಜರ ಮುಂತಾದ ಚಿತ್ರಗಳಿಗೆ ಸ್ವಯಂ ಸಂಗೀತ ನಿರ್ದೇಶನ ಕೂಡ ಮಾಡಿದ್ದ ಅವರು ಆರ್ಕೆಷ್ಟ್ರಾ ಅರೇಂಜ್‌ಮೆಂಟ್  ಇತ್ಯಾದಿ ಬಲ್ಲವರಾಗಿದ್ದರೇ ಎಂಬ ಬಗ್ಗೆ ಮಾಹಿತಿ ಇಲ್ಲ.

ಮೈಸೂರಿನ ಚಂದ್ರು ಸೌಂಡ್ ಸಿಸ್ಟಂನವರು 78 rpm ರೆಕಾರ್ಡಿನಿಂದ ಧ್ವನಿಮುದ್ರಿಸಿ ಕೊಟ್ಟಿದ್ದ  ಆ ಹಾಡನ್ನು ಆರಂಭದ ಸಂಭಾಷಣೆ  ಸಹಿತ ಇಲ್ಲಿ ಆಲಿಸಿ. 



ಎನ್. ಲಕ್ಷ್ಮೀನಾರಾಯಣ್ ಅವರ ಪ್ರಶಸ್ತಿ ವಿಜೇತ ನಾಂದಿ ಚಿತ್ರ   ಕಿವುಡ ಮೂಕ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಗು ಈ ಹಾಡಿನ ಸಾಲುಗಳನ್ನು ಹಾಡುವುದರೊಂದಿಗೆ ಮುಕ್ತಾಯವಾಗುತ್ತದೆ.  ಜಿ.ಕೆ. ವೆಂಕಟೇಶ್ ನಿರ್ಮಿಸಿದ್ದ ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಲ್ಲೂ ಇದರ ತುಣುಕು ಇದೆ. ಬಹುಶಃ ಈ ಹಾಡಿನಿಂದ ಪ್ರೇರಣೆ ಪಡೆದೇ ಇತ್ತಿಚಿನ ಚಿತ್ರವೊಂದಕ್ಕೆ ಅವಲಕ್ಕಿ ಪವಲಕ್ಕಿ ಎಂಬ ಶೀರ್ಷಿಕೆ ಕೊಡಲಾಗಿತ್ತು.

ಜಟಕಾವಾಲ ರಾಮಯ್ಯನಾಗಿ ಕಾಣಿಸಿಕೊಂಡ ರಾಜಕುಮಾರ್ ಅವರಿಗೆ ಚಿತ್ರದಲ್ಲಿ ಇದೊಂದೇ ಹಾಡಿದ್ದದ್ದು.  ಮಾನವಸಹಜ ದೌರ್ಬಲ್ಯಗಳುಳ್ಳ ಸಾಮಾನ್ಯನೊಬ್ಬನ ಪಾತ್ರವಾಗಿತ್ತು ಅದು.  ಸಾಹುಕಾರ್ ಜಾನಕಿ, ಕೆ.ಎಸ್.ಅಶ್ವತ್ಥ್, ಸಂಧ್ಯಾ ಮುಂತಾದವರೂ ನಟಿಸಿದ್ದ ಗೌರಿ ಸದಭಿರುಚಿಯ ಚಿತ್ರವಾಗಿತ್ತು.