Sunday 17 June 2018

ಘಂಟೆಯ ಕಂಠದ ಘಂಟಸಾಲ




ವೆಂಕಟೇಶ್ವರ ರಾವ್ ಹಾಡಿದ ನಿಮ್ಮ ಇಷ್ಟದ ಹಾಡು ಯಾವುದು ಎಂದು ನಿಮ್ಮನ್ನು ಕೇಳಿದರೆ "ಯಾರ್ರೀ ಅದು ವೆಂಕಟೇಶ್ವರ ರಾವ್?" ಎಂದು ನೀವು ಮರು ಪ್ರಶ್ನೆ ಎಸೆಯುವುದು ಖಂಡಿತ.  ಅದೇ ಘಂಟಸಾಲ ಹಾಡಿದ್ದು ಅಂದರೆ ಕ್ಷಣವೂ ತಡ ಮಾಡದೆ  ಶಿವಶಂಕರಿ ಎಂದೋ ಬಾಳೊಂದು ನಂದನ ಎಂದೋ  ಉತ್ತರ ಬಂದೀತು.  ಒಂದು ವೇಳೆ ಮೆಲ್ಲುಸಿರೇ ಸವಿಗಾನ ಎಂದೇನಾದರೂ ನೀವು  ಹೇಳಿದರೆ ನಾನು ಮತ್ತೆ "ರೀ, ಅದು ರೇ ಅಲ್ಲ ರೀ" ಎಂದು ಎಚ್ಚರಿಸಬೇಕಾದೀತು!

ಘಂಟಸಾಲ ಎಂದೇ ಪ್ರಸಿದ್ಧರಾದ ಘಂಟಸಾಲ ವೆಂಕಟೇಶ್ವರ ರಾವ್ ಅವರನ್ನು ಕುರಿತ ಈ ಬರಹ ಈ ಹಿಂದಿನ ಮುರಿಯದ ಮನೆಯ ಮರೆಯಾದ ಗೀತಗುಚ್ಛದ sequel ಅರ್ಥಾತ್ ಮುಂದುವರಿದ ಭಾಗ ಅಂದರೆ ತಪ್ಪಾಗಲಾರದು.  ಯಾವುದಾದರೂ ಒಂದು ವಿಷಯದ ಬಗ್ಗೆ ಬರೆದರೆ ಉಳಿದವರು ಅದನ್ನೊಮ್ಮೆ ಓದಿ ಮರೆತರೂ ನಾನು ಮತ್ತೂ ಕೆಲವು ದಿನ ಅದೇ ಗುಂಗಿನಲ್ಲಿರುತ್ತೇನೆ.  ಆ ವಿಷಯಕ್ಕೆ ಸಂಬಂಧಿಸಿದ ವಿಷಯಗಳ ಹುಡುಕಾಟ ಮುಂದುವರೆಸಿ ಹೊಸತೇನಾದರೂ ಸಿಕ್ಕಿದರೆ ಅದನ್ನು ಲೇಖನಕ್ಕೆ ಸೇರಿಸುವುದೂ ಇದೆ.  ಮುರಿಯದ ಮನೆ  ಇತರ ಭಾಷೆಗಳಲ್ಲೂ ತಯಾರಾಗಿತ್ತಲ್ಲವೇ.  ಅದರ ಹಿಂದಿ ರೂಪ ಖಾನ್‌ದಾನ್ ಚಿತ್ರವನ್ನು ಅಂತರ್ಜಾಲದಲ್ಲಿ ವೀಕ್ಷಿಸುತ್ತಿರುವಾಗ ರಫಿ ಮತ್ತು ಆಶಾ ಭೋಸ್ಲೆ ಹಾಡಿದ ಪ್ರಸಿದ್ಧ ಹಾಡು ಬಡಿ ದೇರ್ ಭಯೀ ನಂದ್ ಲಾಲಾ ಆರಂಭವಾಗುವುದಕ್ಕಿಂತ ಮೊದಲು ಘಂಟಸಾಲ ಹಾಡಿರುವ ಶ್ಲೋಕವೊಂದು ಇರುವುದು ಕಂಡು ಆಶ್ಚರ್ಯಚಕಿತನಾಗಿ ಆ ವಿಷಯವನ್ನು ಕೂಡಲೇ face bookನಲ್ಲಿ ಹಂಚಿಕೊಂಡೆ. ಹೆಚ್ಚಿನವರಿಗೆ ಅದು ಗಮನಿಸಲು ಯೋಗ್ಯವಾದ ವಿಷಯವೆಂದು ಅನ್ನಿಸದಿದ್ದರೂ ಇಂತಹ ವಿಚಾರಗಳಲ್ಲಿ ನನಗೆ ಸಮಾನಾಂತರ ತರಂಗಾಂತರ ಹೊಂದಿರುವ face book ಗೆಳೆಯ ಸುದರ್ಶನ ರೆಡ್ಡಿ ಅವರಲ್ಲಿ ಕಿಡಿಯೊಂದು ಹೊತ್ತಿಕೊಂಡಿತು.  ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಘಂಟಸಾಲ ಬಗ್ಗೆ ಬಹಳಷ್ಟು ಮಾಹಿತಿ  ಒದಗಿಸಿದರು.  ಆ ಕಿಡಿ ನನ್ನಲ್ಲಿ ಜ್ವಾಲೆಯಾಗಿ ಹಬ್ಬಿ ಈ ಲೇಖನಕ್ಕೆ ಕಾರಣವಾಯಿತು!

ನಮ್ಮ ಮನೆಗೆ 1962ರಲ್ಲಿ ರೇಡಿಯೋ ಬಂದಾಗ ಆಗ ಪ್ರತಿ ಸೋಮವಾರ ರಾತ್ರೆ  8ರಿಂದ  8-30ರ ವರೆಗೆ ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾಗುತ್ತಿದ್ದ ನಿಮ್ಮ ಮೆಚ್ಚಿನ ಚಿತ್ರಗೀತೆಗಳು ಕಾರ್ಯಕ್ರಮದ ಮುಖಾಂತರ ಮೊತ್ತ ಮೊದಲು ನನ್ನ ಕಿವಿಗೆ ಬಿದ್ದ ಕನ್ನಡ ಹಾಡು ಓಹಿಲೇಶ್ವರ ಚಿತ್ರಕ್ಕಾಗಿ ಘಂಟಸಾಲ ಹಾಡಿದ ಈ ದೇಹದಿಂದ ದೂರನಾದೆ ಏಕೆ ಆತ್ಮನೆ.  ಆ ಧ್ವನಿ ಕೇಳಿದ ಕೂಡಲೇ ಇದು ತುಂಬುಗಲ್ಲದ ವ್ಯಕ್ತಿಯೊಬ್ಬರು ಹಾಡಿದ ಹಾಡು ಎಂದು ನನಗನ್ನಿಸಿತ್ತು!   ಎಸ್. ಜಾನಕಿ ಹಾಡಿದ  ಹಾಡುಗಳನ್ನು ಕೇಳಿದಾಗಲೂ ನನಗೆ ಹಾಗೆಯೇ ಅನ್ನಿಸುವುದು. ಎಲ್. ಆರ್. ಈಶ್ವರಿ ಅವರ ಹಾಡುಗಾರಿಕೆಯಲ್ಲಿ ತುಂಟತನ ಅಂತರ್ಗತವಾಗಿರುವ ಹಾಗೆ ಇವರಿಬ್ಬರ ಧ್ವನಿಯಲ್ಲಿ ಒಂದು ಮುದ್ದುತನವಿದೆ.

1945ರಲ್ಲಿ ಸ್ವರ್ಗ ಸೀಮಾ ಎಂಬ ಚಿತ್ರದಲ್ಲಿ ಓ ನಾ ರಾಜಾ ಎಂಬ ಹಾಡಿನ ಮೂಲಕ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದ ಇವರ ಹೆಸರು 1950ರ ವರೆಗೆ ಜಿ. ವೆಂಕಟೇಶ್ವರ ರಾವ್ ಅಥವಾ ಘಂಟಸಾಲ ವೆಂಕಟೇಶ್ವರ ರಾವ್ ಎಂದೇ ಉಲ್ಲೇಖಿಸಲ್ಪಡುತ್ತಿತ್ತು.  ಅವರು ಪ್ರಥಮವಾಗಿ ಸಂಗೀತ ನಿರ್ದೇಶನ ಮಾಡಿದ ಮನ ದೇಶಂ, ನಂತರದ ಕೀಲು ಗುರ್ರಂ, ಶಾವುಕಾರು ಚಿತ್ರಗಳ ಟೈಟಲ್‌ಗಳನ್ನು ನೋಡಿದರೆ ಈ ವಿಷಯ ವೇದ್ಯವಾಗುತ್ತದೆ.  1951ರಲ್ಲಿ ಬಂದ ಪಾತಾಳ ಭೈರವಿ ಚಿತ್ರದಲ್ಲಿ ಮೊತ್ತಮೊದಲು ಅವರ ಹೆಸರು ಹ್ರಸ್ವವಾಗಿ ಘಂಟಸಾಲ ಎಂದು ನಮೂದಿಸಲ್ಪಟ್ಟಿರುವುದು ಕಂಡು ಬರುತ್ತದೆ. ಅಲ್ಲಿಂದ ಮುಂದೆ ಈಗಿನ ಗಾಯಕರ ನಾಲ್ಕು ಪಟ್ಟು ಧ್ವನಿಭಾರವುಳ್ಳ, ಗುಡಿ ಗೋಪುರಗಳ ಘಂಟಾನಾದದಂಥ ಅವರ ಕಂಚಿನ ಕಂಠಕ್ಕೆ ಘಂಟಸಾಲ ಎಂಬ ನಾಲ್ಕಕ್ಷರದ ಘನ ನಾಮಧೇಯ ಅನ್ವರ್ಥವೇ ಆಗಿ ಹೋಯಿತು. ಚಿತ್ರರಂಗದಲ್ಲಿ ಚಾಲ್ತಿಯಲ್ಲಿರಲು ಚಿಕ್ಕ ಹೆಸರೇ ತಕ್ಕುದೆಂದು ಅವರೇ ಸ್ವತಃ ನಿರ್ಧರಿಸಿದರೋ ಅಥವಾ ಇನ್ಯಾರಾದರೂ ಈ ಬಗ್ಗೆ ಸಲಹೆ ನೀಡಿದರೋ ಎನ್ನುವ ಬಗ್ಗೆ ಮಾಹಿತಿ ಇಲ್ಲ.



4-12-1922ರಂದು ಆಂಧ್ರದ ಗುಡಿವಾಡ ಸಮೀಪದ ಚೌಟಪಲ್ಲಿ ಎಂಬಲ್ಲಿ ಜನಿಸಿದ ಅವರಿಗೂ ಸಮೀಪದ ಘಂಟಸಾಲ ಎಂಬ ಊರಿಗೂ ಯಾವ  ನೇರವಾದ ಸಂಬಂಧವೂ ಇಲ್ಲವಂತೆ.  ಪುರಾತನ ಕಾಲದಲ್ಲಿ ಅವರ ಕುಟುಂಬದವರು ಅಲ್ಲಿ ನೆಲೆಸಿದ್ದರಿಂದ ಈ ಘಂಟಸಾಲ ಎಂಬ ಹೆಸರು ಅವರ ವಂಶಕ್ಕೆ ಅಂಟಿಕೊಂಡಿತು ಎಂದು ಹೇಳಲಾಗುತ್ತದೆ.  ಅಂತೂ ಆ  ಊರಿಗೆ   ಜಗದ್ವಿಖ್ಯಾತವಾಗುವ ಯೋಗವಿತ್ತು!

ಅವರಿಗೆ ಸಂಗೀತ ತಂದೆಯಿಂದಲೇ ಬಳುವಳಿಯಾಗಿ ಬಂದಿತ್ತು.  ಯೌವನದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸವನ್ನೂ ಅನುಭವಿಸಿದ್ದರು.  ಈ ರಾಜಕೀಯ ತನಗಲ್ಲವೆಂದು ನಿರ್ಧರಿಸಿದ ಅವರು ಬಳಿಕ ವಿವಿಧ ಗುರುಗಳ ಬಳಿ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿ ವಿಜಯನಗರಂ ಸಂಗೀತ ನೃತ್ಯ ಕಾಲೇಜಿನಿಂದ ವಿದ್ವತ್ ಪದವಿ ಪಡೆದರು. ವಿದ್ಯಾಭ್ಯಾಸ ಕಾಲದಲ್ಲಿ  ವಾರಾನ್ನ, ಭಿಕ್ಷಾನ್ನಗಳಿಗೂ ಮೊರೆ ಹೋಗಬೇಕಾಗಿ ಬಂದಿತ್ತಂತೆ. ವಿದ್ವತ್ ಪದವಿ ಪಡೆದ ಮೇಲೆ ಕೆಲಕಾಲ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನೀಡಿದ ಅವರು ತನ್ನದೇ ತಂಡ ಕಟ್ಟಿಕೊಂಡು ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಸಂಗೀತ ಗೋಷ್ಟಿಗಳನ್ನು ನಡೆಸುತ್ತಿದ್ದರು.  ಅವರ ಕಂಠದಲ್ಲಿದ್ದ ಮಾಧುರ್ಯವನ್ನು ಗುರುತಿಸಿದ ಸಮುದ್ರಾಲ ಸೀನಿಯರ್ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷಿಸುವಂತೆ ಅವರಿಗೆ ಸಲಹೆ ನೀಡಿದರು.  ಆರಂಭದಲ್ಲಿ ಕೋರಸ್ ಗಾಯಕನಾಗಿ ಚಿತ್ರರಂಗಕ್ಕೆ ಅಡಿಯಿಸಿದ ಅವರು ಹಂತಹಂತವಾಗಿ ಮೇಲೇರತೊಡಗಿದರು. ಆಗಲೇ ಹೇಳಿದಂತೆ ಸ್ವರ್ಗ ಸೀಮಾ ಎಂಬ ಚಿತ್ರದಲ್ಲಿ ಓ ನಾ ರಾಜಾ ಎಂಬ ಹಾಡಿನ ಮೂಲಕ ಗಾಯಕನಾಗಿ 1949ರಲ್ಲಿ ಎನ್.ಟಿ. ರಾಮ ರಾವ್ ಅವರ ಪ್ರಥಮ ಚಿತ್ರ ಮನ ದೇಶಂ ಮೂಲಕ ಸಂಗೀತ ನಿರ್ದೇಶನ ಕ್ಷೇತ್ರಕ್ಕೂ ಕಾಲಿರಿಸಿ ತ್ರಿವಿಕ್ರಮನಾಗಿ ಬೆಳೆದರು.  ಹಿಂದಿಯ ಹೇಮಂತ್ ಕುಮಾರ್ ಮೊದಲಾದ ಗಾಯಕರೂ ಸಂಗೀತ ನಿರ್ದೇಶನ ಮಾಡಿದ್ದಿದೆ.  ಆದರೆ ನಂಬರ್ ವನ್ ಗಾಯಕನೊಬ್ಬ ಇತರ ಸಮಕಾಲೀನ ದಿಗ್ಗಜ ಸಂಗೀತಗಾರರಿಗೆ ಸರಿಸಾಟಿಯಾದ ನಂಬರ್ ವನ್ ಸಂಗೀತ ನಿರ್ದೇಶಕನೂ ಆದ ಉದಾಹರಣೆ ಇನ್ಯಾವ ಚಿತ್ರರಂಗದಲ್ಲೂ ಸಿಗಲಾರದು.  ಇತರ ಸಂಗೀತ ನಿರ್ದೇಶನದ ಚಿತ್ರಗಳಲ್ಲಿ ಎಷ್ಟು ಮಧುರಾತಿ ಮಧುರ ಗೀತೆಗಳನ್ನು ಹಾಡಿದರೋ ಅಷ್ಟೇ ಸುಮಧುರ ಗೀತೆಗಳನ್ನು  ತನ್ನ ಸಂಗೀತ ನಿರ್ದೇಶನದ ಚಿತ್ರಗಳಲ್ಲಿ ಹಾಡಿದ / ಹಾಡಿಸಿದ ಹೆಗ್ಗಳಿಕೆ ಅವರದು. ಎಲ್ಲ ಗಾಯಕ ಗಾಯಕಿಯರೊಡನೆ ಅವರು ಹಾಡಿದ್ದರೂ ಸುಶೀಲ ಮತ್ತು ಪಿ. ಲೀಲ ಅವರೊಂದಿಗಿನ ಹಾಡುಗಳು ಹೆಚ್ಚು ಜನಪ್ರಿಯ.

ಘಂಟಸಾಲ  ಹಾಡಿರುವ ಸಾವಿರಾರು ಗೀತೆಗಳಲ್ಲಿ ಹುಡುಕಿದರೂ ಒಂದು ಜೊಳ್ಳು ಸಿಗಲಾರದು.  ತಾನು ಸ್ವತಃ ಸಂಗೀತ ನಿರ್ದೇಶಕನಾಗಿದ್ದುದರಿಂದ ಇತರರ ಹಾಡುಗಳಲ್ಲೂ ಹೆಚ್ಚು ಹೆಚ್ಚು ಮಾಧುರ್ಯ ತುಂಬಲು ಅವರಿಗೆ ಸಾಧ್ಯವಾಗುತ್ತಿತ್ತೋ ಏನೋ.  ಈ ಲೇಖನಕ್ಕಾಗಿ ಅಂತರ್ಜಾಲವನ್ನು ಜಾಲಾಡುತ್ತಿರುವಾಗ ತೆಲುಗಿನಲ್ಲಿ ಇತರ ಭಾಷೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಸ್ತ್ರೀಯ ಸಂಗೀತವನ್ನು ಆಧರಿಸಿದ ಗೀತೆಗಳಿರುವುದು ಗಮನಕ್ಕೆ ಬಂತು.  ಶಾಸ್ತ್ರೀಯ ಸಂಗೀತದಲ್ಲಿ ನುರಿತ ಅನೇಕ ಸಂಗೀತ ನಿರ್ದೇಶಕರನ್ನು  ಹೊಂದಿರುವುದು ಮಾತ್ರವಲ್ಲ, ಅದನ್ನು ಅರೆದು ಕುಡಿದ ಘಂಟಸಾಲ ಅವರಂಥ ಗಾಯಕ  ಅವರಿಗೆ ದೊರಕಿದ್ದು ಇದಕ್ಕೆ ಮುಖ್ಯ ಕಾರಣ ಎಂದು ನನಗನ್ನಿಸಿತು.

1947ರ ಯೋಗಿ ವೇಮನ ಚಿತ್ರದ ಒಂದು ಹಾಡಿನಲ್ಲಿ  ಅವರು  ನೃತ್ಯದ ನಟ್ಟುವಾಂಗ ವಾದಕನಾಗಿ ಕಾಣಿಸಿಕೊಂಡಿದ್ದರು.  1960ರ ವೆಂಕಟೇಶ್ವರ ಮಹಾತ್ಮ್ಯಂ ಚಿತ್ರದಲ್ಲಿ   ಅವರು ತಿರುಪತಿ ದೇವಳದ ಗರ್ಭಗುಡಿಯ ಎದುರು ಕುಳಿತು ಹಾಡುವ ದೃಶ್ಯವಿದೆ.  15ನೇ ಶತಮಾನದ  ಸಂತ ಅನ್ನಮಯ್ಯ ಅರ್ಥಾತ್ ಅನ್ನಮಾಚಾರ್ಯರನ್ನು  ಹೊರತು ಪಡಿಸಿದರೆ ವೆಂಕಟೇಶ್ವರನ ಎದುರು ಕುಳಿತು ಹಾಡುವ ಸೌಭಾಗ್ಯ ಸಿಕ್ಕಿದ್ದು ಇವರಿಗೆ ಮಾತ್ರವಂತೆ.



ಚಿತ್ರರಂಗದೊಡನೆ ಸಂಬಂಧ ಹೊಂದಿರುವುದರಿಂದ ಶ್ರೇಷ್ಠ ಶಾಸ್ತ್ರೀಯ ಸಂಗೀತ ವಿದ್ವಾಂಸನಾಗಿದ್ದರೂ ಇತರ ಸಮಕಾಲೀನ ಶಾಸ್ತ್ರೀಯ ಸಂಗೀತ ಕಲಾವಿದರು ಇವರಿಗೆ ಸೂಕ್ತ ಮನ್ನಣೆ ಕೊಡುತ್ತಿರಲಿಲ್ಲವಂತೆ.  ಆದರೆ 1959ರಲ್ಲಿ ಬಂದ ಜಯಭೇರಿ ಚಿತ್ರದ    ಅದುವರೆಗೆ ಕೇಳದ ರಾಗದಲ್ಲಿದ್ದ ರಸಿಕ ರಾಜ ತಗುವಾರಮು ಎಂಬ ಶಾಸ್ತ್ರೀಯ ಹಾಡಿನಲ್ಲಿ ಇವರ ನಿರ್ವಹಣೆಯನ್ನು ನೋಡಿದ ಮೇಲೆ ಅವರೆಲ್ಲ ಚಿತ್ ಆಗಿ ತಮ್ಮ ಅಭಿಪ್ರಾಯ ಬದಲಿಸಿದರೆಂದು ಪ್ರತೀತಿ.  ಆ ಚಿತ್ರದ ಸಂಗೀತ ನಿರ್ದೇಶಕ ಪೆಂಡ್ಯಾಲ ನಾಗೇಶ್ವರ ರಾವ್ ಆರೋಹಣದಲ್ಲಿ ಕಾನಡಾ ಮತ್ತು ಅವರೋಹಣದಲ್ಲಿ ಚಕ್ರವಾಕ  ಸ್ವರಗಳನ್ನು ಹೊಂದಿಸಿ ಸಂಯೋಜಿಸಿದ  ಈ ಹೊಸ ರಾಗಕ್ಕೆ ವಿಜಯಾನಂದ ಚಂದ್ರಿಕಾ ಎಂಬ ಹೆಸರು ಕೊಟ್ಟಿದ್ದರು. ಜಗದೇಕವೀರನ ಕಥೆ ಚಿತ್ರದ ಹಿಂದುಸ್ತಾನಿ ಶೈಲಿಯ ಶಿವಶಂಕರಿ  ಮತ್ತು ಶುದ್ಧ ಕರ್ನಾಟಕ ಸಂಗೀತ ಶೈಲಿಯ ಈ ಹಾಡು, ಇವುಗಳ ಮೂಲಕ ಎರಡೂ ಪದ್ಧತಿಗಳಲ್ಲಿ ತನ್ನ ಪಾಂಡಿತ್ಯವೆಂತಹುದು  ಎಂದು  ಘಂಟಸಾಲ ಜಗತ್ತಿಗೆ ಜಾಹೀರುಪಡಿಸಿದರು.  ಈ ರಸಿಕ ರಾಜ ಹಾಡು ಕೂಡ ಶಿವಶಂಕರಿಯಂತೆಯೇ ರಿಯಲ್ ಟೈಮ್ ಶೋಗಳಲ್ಲಿ ಭಾಗವಹಿಸುವ ಯುವ ಕಲಾವಿದರ ಮೆಚ್ಚಿನದಾಗಿದ್ದು ಅನೇಕರು ಇವುಗಳನ್ನು ಚೆನ್ನಾಗಿಯೇ ಹಾಡುತ್ತಾರೆ.



ಈ ಜಯಭೇರಿ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲು ನಾನು ಪ್ರಯತ್ನಿಸುತ್ತಿದ್ದಾಗ ಅರಸುತ್ತಿದ್ದ ಬಳ್ಳಿಯೊಂದು ಕಾಲಿಗೆ ತೊಡರಿತು.  ಪಿ. ಬಿ. ಶ್ರೀನಿವಾಸ್ ಮತ್ತು ಘಂಟಸಾಲ ಜೊತೆಯಾಗಿ ಹಾಡಿದ ಹಾಡು ಯಾವುದಾದರೂ ಇದೆಯೇ ಎಂದು ತುಂಬಾ ಸಮಯದಿಂದ ನಾನು ಹುಡುಕುತ್ತಿದ್ದೆ. ಈ ಚಿತ್ರದಲ್ಲಿ  ಮದಿ ಶಾರದಾ ದೇವಿ ಮಂದಿರಮೇ ಎಂಬ ಹಾಡಿನಲ್ಲಿ ಘಂಟಸಾಲ ಜೊತೆಗೆ ಪಿ. ಬಿ. ಶ್ರೀನಿವಾಸ್ ತಾನೇ ತೆರೆಯ ಮೇಲೆ ಕಾಣಿಸಿಕೊಂಡು ಹಾಡಿರುವುದನ್ನು ತಿಳಿದು ನನ್ನ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ಇನ್ನೊಬ್ಬ ಗಾಯಕ ರಘುನಾಥ ಪಾಣಿಗ್ರಾಹಿ ಕೂಡ ಕಾಣಿಸಿಕೊಂಡ ಈ  ಹಾಡಿನಲ್ಲಿ ಪಿ.ಬಿ.ಎಸ್  ವೀಣೆ ನುಡಿಸುವ ದೃಶ್ಯವೂ ಇದೆ!  ಆದರೆ ಎಳೆ ಪ್ರಾಯ ಮತ್ತು ಪಾತ್ರಕ್ಕೆ ತಕ್ಕ ವೇಷ ಭೂಷಣ ಧರಿಸಿರುವುದರಿಂದ ಅವರನ್ನು ಗುರುತಿಸುವುದು ಸ್ವಲ್ಪ ಕಷ್ಟ.  ಆರಂಭದ ಶ್ಲೋಕವನ್ನು ಹಾಡಿದವರು ಬಾಲಮುರಳಿಕೃಷ್ಣ.



ಗ್ರಾಮೊಫೋನ್‍ಗಳ ಕಾಲದ ಯಾವುದೇ ಸಮಾರಂಭಗಳಲ್ಲಿ ಧ್ವನಿವರ್ಧಕದ ಮೂಲಕ ಮೊದಲು ಕೇಳಿಬರುತ್ತಿದ್ದುದು ವಿನಾಯಕ ಚೌತಿ ಚಿತ್ರದಲ್ಲಿ ಅವರು ಹಾಡಿದ ವಾತಾಪಿ ಗಣಪತಿಂ ಮತ್ತು ಅದೇ ರೆಕಾರ್ಡಿನ ಇನ್ನೊಂದು ಬದಿಯಲ್ಲಿದ್ದ ದಿನಕರಾ ಶುಭಕರಾ ಹಾಡುಗಳು. ಅವರ ಅನೇಕ ಪ್ರೈವೇಟ್ ಧ್ವನಿಮುದ್ರಿಕೆಗಳೂ ಪ್ರಸಿದ್ಧವಾಗಿದ್ದು ಭಗವದ್ಗೀತೆಯ ಆಯ್ದ  107 ಶ್ಲೋಕಗಳನ್ನು ಸುಶ್ರಾವ್ಯವಾಗಿ ಹಾಡಿ ತಾನೇ ಅರ್ಥ ವಿವರಣೆ ನೀಡಿದ LP ಬಲು ಜನಪ್ರಿಯ. ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ ಎಂದು ಅವರ ಗೀತಾ ಪಾರಾಯಣ ಆರಂಭವಾದರೆ ಆ ಸ್ಥಳದಲ್ಲಿ ಮರಾಠಾ ದರ್ಬಾರ್ ಅಗರಬತ್ತಿ ತಾನಾಗಿ ಹೊತ್ತಿಕೊಂಡಂತಾಗಿ ದೈವೀಕ ವಾತಾವರಣ ಸೃಷ್ಠಿಯಾಗುತ್ತದೆ.  ಇಲ್ಲಿ ಅವರು ಬಳಸಿರುವ ರಾಗಗಳೆಲ್ಲವನ್ನೂ ಗುರುತಿಸಲು ಸಾಧ್ಯವಾದರೆ ಕರ್ನಾಟಕ ಸಂಗೀತದ ಬಗ್ಗೆ ಪಿ.ಹೆಚ್. ಡಿ ಪ್ರಬಂಧವನ್ನೇ ಬರೆಯಬಹುದು!



ಅವರು ತೆಲುಗು ಚಿತ್ರಸಂಗೀತದ ಕುಲದೇವರಾದರೂ ದಕ್ಷಿಣದ ಇತರ ಭಾಷೆಗಳ ಪಂಚಾಯತನದಲ್ಲೂ ಅವರಿಗೆ ಆದರದ ಸ್ಥಾನವಿತ್ತು. ಕನ್ನಡದಲ್ಲಿ ಸ್ವಲ್ಪ ಹೆಚ್ಚೇ ಇತ್ತು.  ಕನ್ನಡದಲ್ಲಿ ಅವರು ಹಾಡಿದ, ಸಂಗೀತ ನೀಡಿದ ಚಿತ್ರಗಳ ಸಂಖ್ಯೆ ಸೀಮಿತವಾದರೂ ಎಂದಾದರೊಮ್ಮೆ ಸೌಂದರರಾಜನ್ ಅಥವಾ ಸಿರ್ಕಾಳಿ ಗೋವಿಂದರಾಜನ್ ಹಾಡಿದಾಗ ಅನ್ನಿಸುತ್ತಿದ್ದಂತೆ ಬೇರೆ ಭಾಷೆಯವರಾರೋ ಹಾಡಿದರು ಅನ್ನಿಸುತ್ತಿರಲಿಲ್ಲ.  ಹಳೆಯ ತಲೆಮಾರಿನ ಸಂಗೀತ ನಿರ್ದೇಶಕರೆಲ್ಲರೂ 1956ರಿಂದ ಅವರ ಪ್ರತಿಭೆ ಬಳಸಿಕೊಂಡರೂ ಯಾಕೋ ರಾಜನ್ ನಾಗೇಂದ್ರ ನಿರ್ದೇಶನದಲ್ಲಿ ಅವರು ಒಂದೂ ಕನ್ನಡ ಹಾಡು ಹಾಡಿಲ್ಲ.   ಕನ್ನಡದಲ್ಲಿ ಅವರು ಎಸ್. ಜಾನಕಿ ಅವರೊಡನೆಯೂ ಒಂದೇ ಒಂದು ಹಾಡು ಹಾಡದಿರುವುದು ಗಮನ ಸೆಳೆಯುವ ಅಂಶ. ಸೋದರಿ, ಓಹಿಲೇಶ್ವರ ಕಾಲದಿಂದ ಆಗಾಗ ರಾಜಕುಮಾರ್ ಧ್ವನಿಯಾಗುತ್ತಿದ್ದ ಅವರು ರಾಜ್ ಮತ್ತು ಪಿ.ಬಿ.ಸ್  ಅವರ ನಡುವೆ ಶರೀರ - ಶಾರೀರ ಸಂಬಂಧ ನೆಲೆಗೊಂಡ ನಂತರವೂ ಅನೇಕ ಬಾರಿ ಅವರಿಗಾಗಿ ಹಾಡಿದಾಗ ಅಸಹಜ ಎಂದೇನೂ ಅನ್ನಿಸುತ್ತಿರಲಿಲ್ಲ.  ಡಬ್ಬಿಂಗ್ ಚಿತ್ರಗಳನ್ನು ಹೊರತುಪಡಿಸಿದರೆ ಕನ್ನಡದಲ್ಲಿ ಅವರು ಮೊತ್ತ ಮೊದಲು ಸಂಗೀತ ನಿರ್ದೇಶನ ಮಾಡಿದ ಚಿತ್ರ ವಾಲ್ಮೀಕಿ.  1970ರಲ್ಲಿ ಕೊನೆಯದಾಗಿ ನನ್ನ ತಮ್ಮ ಚಿತ್ರಕ್ಕೆ  ಸಂಗೀತ ನಿರ್ದೇಶನ  ಮಾಡಿದರೂ ತಾನು ಒಂದೂ ಹಾಡು ಹಾಡದೆ ಪಿ.ಬಿ.ಎಸ್ ಧ್ವನಿಯನ್ನು ಬಳಸಿಕೊಂಡಿದ್ದರು. ಧರ್ಮಸ್ಥಳ ಮಹಾತ್ಮೆಯ ಜಯ ಜಯ ಲೋಕಾವನ ಹಾಡು 1975ರ ಮಹದೇಶ್ವರ ಪೂಜಾಫಲ ಚಿತ್ರದಲ್ಲಿ ಮರುಬಳಕೆಯಾಗಿತ್ತು.

ಅವರ ಪ್ರಮುಖ ಕನ್ನಡ ಚಿತ್ರಗಳ ವಿವರಗಳುಳ್ಳ ready reckoner ರೀತಿಯ ತಖ್ತೆಯೊಂದನ್ನು ಇಲ್ಲಿ ನೋಡಬಹುದು. ಆಯಾ ಚಿತ್ರಗಳ ಒಂದೊಂದು ಪ್ರಾತಿನಿಧಿಕ ಹಾಡಿನ ಉಲ್ಲೇಖವೂ ಇದೆ. ಈ ಪಟ್ಟಿ ಪರಿಪೂರ್ಣವೆಂದು ನಾನು ಹೇಳಲಾರೆ.  ಪಾಂಡವ ವನವಾಸಮು, ಸಂಪೂರ್ಣ ರಾಮಾಯಣದಂತಹ ಇನ್ನೂ ಕೆಲವು ಡಬ್ಬಿಂಗ್ ಚಿತ್ರಗಳು ಇರಬಹುದು.  ಕನ್ನಡದ ಅವರ ಹಾಡುಗಳೆಲ್ಲವೂ ಅತಿ ಪ್ರಸಿದ್ಧವಾಗಿದ್ದು ಅಂತರ್ಜಾಲದಲ್ಲೂ ಸುಲಭವಾಗಿ ಸಿಗುವುದರಿಂದ ಇಲ್ಲಿ ಯಾವುದನ್ನೂ ಕೇಳಿಸುವುದಿಲ್ಲ.



ದೀರ್ಘ ಕಾಲ ಅನಾರೋಗ್ಯದಿಂದ ಬಳಲಿ  11 ಫೆಬ್ರವರಿ1974ರಂದು ನಿಧನರಾದಾಗ ಅವರಿಗೆ ಕೇವಲ 52ರ ವಯಸ್ಸು.  ಹೀಗಾಗದಿರುತ್ತಿದ್ದರೆ  ಕನಿಷ್ಠ ಮುಂದಿನ ಇನ್ನೂ ಇಪ್ಪತ್ತು ವರುಷ ಅವರ ಸಾರ್ವಭೌಮತ್ವವನ್ನು ಯಾರೂ ಕಸಿಯಲು ಸಾಧ್ಯವಾಗುತ್ತಿರಲಿಲ್ಲ.  ಘಂಟಸಾಲ ಇಲ್ಲದೆ ದಶಕಗಳೇ ಸಂದು ಹೋದರೂ ಅಭಿಮಾನಿಗಳ ಹೃದಯದಲ್ಲಿ ಅವರ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಾಗಿಲ್ಲ.  ತೆಲುಗು ಚಿತ್ರ ಸಂಗೀತದಲ್ಲಿ ಪ್ರಥಮ 100 ಸ್ಥಾನಗಳು ಅವರಿಗೇ.  101ರಿಂದ ಇತರರ ಗಣನೆ ಆರಂಭವಾಗುತ್ತದೆ ಎಂದು ಅವರ ಕಟ್ಟಾ ಅಭಿಮಾನಿಗಳು ಹೇಳುವುದಿದೆ. ಸಂಗೀತದ ಶೋ ರೂಮ್‌ಗಳ  ತೆಲುಗು ವಿಭಾಗದಲ್ಲಿ ಇಂದಿಗೂ ಅರ್ಧಕ್ಕಿಂತ ಹೆಚ್ಚಿನ ಶೆಲ್ಫುಗಳು ಅವರಿಗೇ  ಮೀಸಲಾಗಿರುತ್ತವೆ.  ಘಂಟಸಾಲ ಮಾಸ್ಟರ್ ಹೆಸರು ಹೇಳಿಕೊಂಡು ಬದುಕು ಕಟ್ಟಿಕೊಂಡವರು ಅಸಂಖ್ಯ ಮಂದಿ ಇದ್ದಾರೆ.



Sunday 10 June 2018

ಮುರಿಯದ ಮನೆಯ ಮರೆಯಾದ ಗೀತಗುಚ್ಛ


ಮುರಿಯದ ಚಿತ್ರ ಎಂಬ ಶೀರ್ಷಿಕೆ ಹೊಂದಿದ ಚಿತ್ರ ವಿಮರ್ಶೆಯೊಂದು ಗೋಕುಲ ವಾರಪತ್ರಿಕೆಯಲ್ಲಿ ಪ್ರಕಟವಾದದ್ದು ನನಗಿನ್ನೂ ನೆನಪಿದೆ. ಸೆನ್ಸಾರಿನವರು ಕತ್ತರಿಯನ್ನು ಕೈಗೆತ್ತಿಕೊಳ್ಳಲು ಅವಕಾಶವೇ ಕೊಡದ ಮುರಿಯದ ಮನೆ ಚಿತ್ರವನ್ನು ಕುರಿತಾಗಿತ್ತದು. 1964ರಲ್ಲಿ ಬಿಡುಗಡೆಯಾದ ಸದಭಿರುಚಿಯ ಈ ಚಿತ್ರ ಒಂದು ದೃಶ್ಯವೂ ಕತ್ತರಿಸಲ್ಪಡದೆ ಸೆನ್ಸಾರಲ್ಲಿ ತೇರ್ಗಡೆಯಾಗಿತ್ತಂತೆ.  ರಾಜಕುಮಾರ್, ಜಯಂತಿ, ಅಶ್ವಥ್, ಉದಯಕುಮಾರ್, ಬಾಲಕೃಷ್ಣ, ಪಂಢರಿ ಬಾಯಿ ಮುಖ್ಯ ಪಾತ್ರಗಳಲ್ಲಿದ್ದ ಈ ಚಿತ್ರದಲ್ಲಿ ಅತಿಥಿ ಕಲಾವಿದನ ನೆಲೆಯಲ್ಲಿ ನರಸಿಂಹರಾಜು ಕೂಡ ಇದ್ದರು. ಅಂದಿನ ದಿನಗಳಲ್ಲಿ ಬಾಕ್ಸಾಫೀಸಿನ ಟ್ರಂಪ್ ಕಾರ್ಡ್ ಆಗಿದ್ದ ಅವರು ಅತಿಥಿ ಆದರೂ ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದರು. ಗುಬ್ಬಿ ಕಂಪನಿಯ ನಾಟಕರತ್ನ ಜಿ.ಹೆಚ್. ವೀರಣ್ಣ ಮತ್ತಿತರರು ಕರ್ನಾಟಕ ಫಿಲಂಸ್  ಲಾಂಛನದಲ್ಲಿ ತಯಾರಿಸಿದ ಈ ಚಿತ್ರಕ್ಕೆ ವೈ.ಆರ್. ಸ್ವಾಮಿ ನಿರ್ದೇಶನವಿತ್ತು. ಕು.ರ. ಸೀತಾರಾಮ ಶಾಸ್ತ್ರಿ ಸಂಭಾಷಣೆ ಮತ್ತು ಗೀತೆ ಬರೆದಿದ್ದರು.  ಅವರ ಸಂಭಾಷಣೆ ಬಾಯಿಂದ ನಿರರ್ಗಳವಾಗಿ ಹೊರಡಬೇಕಾದರೆ ಕಲಾವಿದರ ನಾಲಗೆ ತುಂಬಾ ಹರಿತವಾಗಿರಬೇಕಾಗುತ್ತದೆ. ಈ ಚಿತ್ರದಲ್ಲಿ ನಟಿಸಿದವರೆಲ್ಲರೂ ರಂಗಭೂಮಿಯ ಹಿನ್ನೆಲೆಯುಳ್ಳವರಾಗಿದ್ದು ಹರಿತ ನಾಲಗೆಯವರೇ ಆಗಿದ್ದರು.  ವಿಶೇಷವಾಗಿ ರಾಜಕುಮಾರ್ ಮತ್ತು ಅಶ್ವಥ್ ಅವರು ಗ್ರಾಮೀಣ ಸೊಗಡಿನ  ಸಂಭಾಷಣೆಗಳನ್ನು ನಿರ್ವಹಿಸಿದ ರೀತಿ ಅನನ್ಯ.  ಯೂಟ್ಯೂಬಿನಲ್ಲಿ ಲಭ್ಯವಿರುವ ಈ ಚಿತ್ರವನ್ನು ಸಂಭಾಷಣೆಗಳಿಗಾಗಿಯೇ ಒಮ್ಮೆ ಅಗತ್ಯ ನೋಡಿ.

ಆಗಿನ ಕಾಲದಲ್ಲಿ ದಕ್ಷಿಣ ಭಾರತದ ಅನೇಕ ಚಿತ್ರಗಳು ದೇಶದ ಬೇರೆ ಬೇರೆ ಭಾಷೆಗಳಲ್ಲಿ ತಯಾರಾಗಿ ನಿಜ ಅರ್ಥದಲ್ಲಿ ರಾಷ್ಟ್ರೀಯ ಭಾವೈಕ್ಯ ಸಾಧಿಸುತ್ತಿದ್ದವು.  ಮುರಿಯದ ಮನೆ ಕೂಡ  ತಮಿಳಿನಲ್ಲಿ ಭಾಗ ಪಿರಿವಿನೈ ಎಂಬ ಹೆಸರಲ್ಲಿ ಶಿವಾಜಿ ಗಣೇಶನ್ ಮತ್ತು ಬಿ.ಸರೋಜಾದೇವಿ ತಾರಾಗಣದೊಂದಿಗೆ 1959ರಲ್ಲಿ ತೆರೆ ಕಂಡಿತ್ತು,  1961ರಲ್ಲಿ ತಯಾರಾದ  ಕಲಸಿವುಂಟೆ ಕಲದು ಸುಖಮ್ ತೆಲುಗು ಚಿತ್ರದಲ್ಲಿ  ಎನ್.ಟಿ.ಆರ್ ಮತ್ತು ಸಾವಿತ್ರಿ ನಟಿಸಿದ್ದರು.  ಆ ಮೇಲೆ 1965ರಲ್ಲಿ ಸುನೀಲ್ ದತ್ತ್ ಮತ್ತು ನೂತನ್ ನಟಿಸಿದ ಹಿಂದಿಯ ಖಾನ್‌ದಾನ್ ವರ್ಣದಲ್ಲಿ ನಿರ್ಮಾಣವಾಯಿತು. ತಮಿಳಿನಲ್ಲಿ ವಿಶ್ವನಾಥನ್ ರಾಮಮೂರ್ತಿ, ತೆಲುಗಿನಲ್ಲಿ ಮಾಸ್ಟರ್ ವೇಣು ಮತ್ತು ಹಿಂದಿಯಲ್ಲಿ ರವಿ ಅವರ ಸಂಗೀತವಿತ್ತು. 1977ರಲ್ಲಿ ಶ್ರೀದೇವಿ ಮತ್ತು ಕಮಲಹಾಸನ್ ನಟಿಸಿದ್ದ ನಿರಕುಡಮ್ ಮಲಯಾಳಮ್ ಚಿತ್ರ ಕೂಡ ಇದೇ ಕಥೆ ಹೊಂದಿತ್ತು ಎನ್ನಲಾಗಿದೆ.  ಕನ್ನಡ ಚಿತ್ರವನ್ನು ಹೊರತುಪಡಿಸಿ ಉಳಿದೆಲ್ಲ ಅವತರಣಿಕೆಗಳನ್ನು ಎ. ಭೀಮ್ ಸಿಂಗ್  ಅವರೇ ನಿರ್ದೇಶಿಸಿದ್ದು ಗಮನಾರ್ಹ. ಹಿಂದಿಯ ಖಾನ್‌ದಾನ್ ಚಿತ್ರದ ಬಡಿ ದೇರ್ ಭಯೀ ನಂದ್‌ಲಾಲಾ ಹಾಡಿಗಿಂತ ಮೊದಲು ಬರುವ ಪರಿತ್ರಾಣಾಯ ಸಾಧೂನಾಂ ಶ್ಲೋಕವನ್ನು ಘಂಟಸಾಲ ಹಾಡಿರುವುದನ್ನು ಯಾರೂ ಗಮನಿಸಿದಂತಿಲ್ಲ. ದಕ್ಷಿಣದಲ್ಲಿ  ನಾಯಕನ ವಾಮ ಹಸ್ತ ಬಾಧಿತವಾಗಿದ್ದದ್ದು ಉತ್ತರದಲ್ಲಿ ದಕ್ಷಿಣವಾದುದನ್ನು ಕೆಳಗಿನ ಚಿತ್ರದಲ್ಲಿ ನೋಡಬಹುದು!


ಕರ್ನಾಟಕ ಫಿಲಂಸ್ ಈ ಮೊದಲು ನಿರ್ಮಿಸಿದ್ದ ಜೇನುಗೂಡು ಚಿತ್ರದ ಜೇನಿನಂಥ ಹಾಡುಗಳಿಗೆ ಸರಿಸಮವೆನ್ನಲಾಗದಿದ್ದರೂ ಈ ಚಿತ್ರವೂ ವಿಜಯಾ ಕೃಷ್ಣಮೂರ್ತಿ ಸಂಗೀತ ನಿರ್ದೇಶನದಲ್ಲಿ 6 ಸುಂದರ ಗೀತೆಗಳನ್ನು ನಮಗೆ ಕೊಟ್ಟಿತ್ತು.  ಕೊಂಚ ಬೇರೆಯೇ  ಸ್ವಾದದ ಈ ಹಾಡುಗಳಿಗೆ ಸಿಗಬೇಕಾದಷ್ಟು ಮಾನ್ಯತೆ  ಸಿಗಲಿಲ್ಲವೆಂದೇ ಹೇಳಬೇಕಾಗುತ್ತದೆ.  ಸಂಬಂಧಿಸಿದವರ ಅವಜ್ಞೆಯಿಂದ ಇಂದು ಅನೇಕ ಚಿತ್ರಗಳ  ಹಾಡುಗಳು ನಮಗೆ ಸಿಗುತ್ತಿಲ್ಲ.  ಆದರೆ ಕೆಲವು ಹಾಡುಗಳು ಲಭ್ಯವಿದ್ದರೂ ಅವಜ್ಞೆಗೊಳಗಾಗುತ್ತಿವೆ.  ಇವು ಅಂಥವೇ ಎಂದು ನನ್ನ ಅನಿಸಿಕೆ.

1964ರಲ್ಲಿ ನಾನು 8ನೇ ಕ್ಲಾಸಲ್ಲಿರುವಾಗ ಉಡುಪಿ, ಮಲ್ಪೆ, ಮಂಗಳೂರು ಪ್ರವಾಸದ ಸಂದರ್ಭದಲ್ಲಿ ಒಂದು ದಿನ  ಜ್ಯೋತಿ ಟಾಕೀಸಿನಲ್ಲಿ  ಈ ಚಿತ್ರವನ್ನೂ ಮರುದಿನ ಸೆಂಟ್ರಲ್ ಟಾಕೀಸಿನಲ್ಲಿ ಸಂಗಂ ಚಿತ್ರವನ್ನೂ ನೋಡಿದ್ದೆ.  ಆ ಮೇಲೆ 80ರ ದಶಕದಲ್ಲಿ ಕನ್ನಡ ಟಿ.ವಿ. ಪ್ರಸಾರ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಸಮಯದಲ್ಲಿ ಇಲಾಖಾ ತರಬೇತಿಯೊಂದರ ಸಲುವಾಗ ಅಲ್ಲಿಗೆ ಹೋಗುವ ಸಂದರ್ಭ ಬಂದಿತ್ತು  ಬೆಂಗಳೂರು ದೂರದರ್ಶನದಿಂದ ವಾರಕ್ಕೊಂದು ಕನ್ನಡ ಚಿತ್ರ ಪ್ರಸಾರವಾಗುವ ವಿಷಯ ಗೊತ್ತಿದ್ದುದರಿಂದ ಟೇಪ್ ರೆಕಾರ್ಡರನ್ನೂ ಜೊತೆಗೊಯ್ದಿದ್ದೆ. ಟ್ರೈನಿಂಗ್ ಸೆಂಟರಿನ ಹಾಸ್ಟೆಲಿನಲ್ಲಿ ಟಿ.ವಿ ಇರುವ ವಿಷಯ ಗೊತ್ತಿತ್ತು.  (ಬೆಂಗಳೂರು ವಿವಿಧಭಾರತಿಯಿಂದ ಪ್ರಸಾರವಾಗುವ ಹಳೆ ಚಿತ್ರಗೀತೆಗಳನ್ನು ಧ್ವನಿಮುದ್ರಿಸಿಕೊಳ್ಳುವ ಉದ್ದೇಶವೂ ಇತ್ತು. ವಾಸ್ತವವಾಗಿ ಈ ಹಿಂದೆ ತಾಂತ್ರಿಕ ಹುದ್ದೆಗೆ ಆಯ್ಕೆಯಾದಾಗ ಹಳೆಯ ಚಿತ್ರಗೀತೆಗಳನ್ನು ನಿಯಮಿತವಾಗಿ ಪ್ರಸಾರ ಮಾಡುತ್ತಿದ್ದ ಕನ್ನಡ ವಿವಿಧಭಾರತಿಯನ್ನು ಆಲಿಸುವ ಸಲುವಾಗಿಯೇ ಬೆಂಗಳೂರಿನಲ್ಲಿ ಪೋಸ್ಟಿಂಗ್ ಮಾಡಿಸಿಕೊಳ್ಳಲು ನಾನು ಪ್ರಯತ್ನಿಸಿದ್ದುಂಟು!  ಆದರೆ ಆ ಸಮಯದಲ್ಲಿ ಅಲ್ಲಿ ಖಾಲಿ ಹುದ್ದೆ ಇಲ್ಲದ್ದರಿಂದ ಇದು ಸಾಧ್ಯವಾಗಿರಲಿಲ್ಲ). ಆ ವಾರಾಂತ್ಯದ ಚಿತ್ರ  ಮುರಿಯದ ಮನೆ ಎಂದು ತಿಳಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.  ಆದರೆ ದುರದೃಷ್ಟವಶಾತ್ ಅಲ್ಲಿದ್ದ ಟಿ.ವಿ.ಯಲ್ಲಿ ಧ್ವನಿಮುದ್ರಣ ಮಾಡುವ ಸಲುವಾಗಿ  ನೇರವಾಗಿ ಟೇಪ್ ರೆಕಾರ್ಡರನ್ನು ಕನೆಕ್ಟ್ ಮಾಡುವ ವ್ಯವಸ್ಥೆಯೇ ಇರಲಿಲ್ಲ.  ಆದರೇನಂತೆ. ಅಲ್ಲಿಯ ವಾಚ್‌ಮನ್ ತಂದುಕೊಟ್ಟ ಒಂದು ಎತ್ತರವಾದ ಸ್ಟೂಲಿನ ಮೇಲೆ ಟಿ.ವಿ.ಯ ಎದುರು ಟೇಪ್ ರೆಕಾರ್ಡರನ್ನು ಇರಿಸಿ ಹಾಗೆಯೇ ಹಾಡುಗಳನ್ನೆಲ್ಲ ಧ್ವನಿಮುದ್ರಿಸಿಕೊಂಡಿದ್ದೆ.  ಹಾಡುಗಳು ಬರುವಾಗೆಲ್ಲ  ಮೌನವಾಗಿದ್ದು ಅಲ್ಲಿದ್ದ ಟಿ.ವಿ. ವೀಕ್ಷಕರು ಸಹಕರಿಸಿದ್ದರು! ಆ ಕ್ಯಾಸೆಟ್ ಈಗಲೂ ನನ್ನ ಬಳಿ ಇದೆ.

ಇನ್ನೀಗ ಒಂದೊಂದೇ ಹಾಡಿನ ವಿಶೇಷಗಳನ್ನು ವಿಶ್ಲೇಷಿಸುತ್ತಾ ಆಲಿಸುವ ಸಮಯ. ಚಿತ್ರದ ತಾರಾಗಣ, ತಾಂತ್ರಿಕ ವರ್ಗ, ಕಥಾ ಸಾರಾಂಶ ಮತ್ತು ಹಾಡುಗಳು ಇರುವ ಪದ್ಯಾವಳಿ ಇಲ್ಲಿದೆ.  ಹಾಡು ಕೇಳುವಾಗ scroll ಮಾಡುತ್ತಾ  ಸಾಹಿತ್ಯ ಓದಿಕೊಳ್ಳಬಹುದು.

 ಹಾಡುಗಳ ಪುಸ್ತಕ  ಓದಲು ಅದರ ಮೇಲೊಮ್ಮೆ ಕ್ಲಿಕ್ಕಿಸಿ scroll ಮಾಡಿ.

1. ನಮ್ಮೂರ ಚೆನ್ನಯ್ಯ ಮನ್ಮಥ ಮಾರ

ಕನ್ನಡ ಚಿತ್ರಗಳಲ್ಲಿ ಕೃಷ್ಣ ಜನ್ಮಾಷ್ಟಮಿ, ನವರಾತ್ರಿ,  ಶಿವರಾತ್ರಿ, ದೀಪಾವಳಿ  ಇತ್ಯಾದಿ ಸಂದರ್ಭಗಳಿಗೆ ಸಂಬಂಧಿಸಿದ ಹಾಡುಗಳು ಮೊದಲಿನಿಂದಲೂ ಸಾಕಷ್ಟು ಇವೆ.  ಆದರೆ ಗಣಪನನ್ನು ಕುರಿತ ಹಾಡುಗಳು ಇಲ್ಲವೆನ್ನುವಷ್ಟು ಕಮ್ಮಿ.  70ರ ದಶಕದ ನಂತರ ಗಜಮುಖನೆ ಗಣಪತಿಯೆ, ಶರಣು ಶರಣಯ್ಯ ಶರಣು ಬೆನಕ, ಶರವು ಮಹಾ ಗಣಪತಿ ಮುಂತಾದ ಚಲನಚಿತ್ರೇತರ ಗೀತೆಗಳು ಹಾಗೂ ಒಂದೆರಡು ಚಿತ್ರಗೀತೆಗಳೂ ಬಂದವೆನ್ನಿ.  ಈ ಹಾಡು ಆದಿಪೂಜಿತ ಗಣಪನ ಪ್ರಾರ್ಥನೆಯೊಂದಿಗೆ ಆರಂಭವಾಗುವುದರಿಂದ ಗಣಪನ ಉಲ್ಲೇಖವಿರುವ ಮೊದಲ ಚಿತ್ರಗೀತೆ ಎನ್ನಬಹುದೇನೋ.  ವಾಸ್ತವವಾಗಿ ಇದು ಹಳ್ಳಿಯ ಪಡ್ಡೆ ಹುಡುಗಿಯರು ಚಿತ್ರದ ನಾಯಕನನ್ನು ರೇಗಿಸಿ ಗೋಳಾಡಿಸುವ ಸಮೂಹಗೀತೆ.  ಘಂಟಸಾಲ ಮತ್ತು ಎಲ್.ಆರ್. ಈಶ್ವರಿ ಮುಖ್ಯ ಗಾಯಕರು.   ಇವರಿಬ್ಬರು ಜೊತೆಯಾಗಿ ಹಾಡಿದ ಬೇರೆ ಯಾವುದೇ ಕನ್ನಡ ಚಿತ್ರಗೀತೆ ನನಗೆ ನೆನಪಾಗುತ್ತಿಲ್ಲ. ಘಂಟಸಾಲ ಅವರು ಎಸ್. ಜಾನಕಿಯೊಂದಿಗೂ ಯಾವುದೇ ಕನ್ನಡ ಚಿತ್ರಗೀತೆ ಹಾಡಿದಂತಿಲ್ಲ. ಅವರು ಹೆಚ್ಚಾಗಿ ಪಿ. ಲೀಲಾ ಹಾಗೂ ಪಿ. ಸುಶೀಲಾ ಅವರೊಂದಿಗೆ ಹಾಡುತ್ತಿದ್ದುದು. ಈ ಹಾಡಿನ  ಸಾಹಿತ್ಯದಲ್ಲಿ ಬಾಯಾಳಿ ಬಜಾರಿಗಳು, ನಾಚಿಕೆಗೆಟ್ಟ ನೇಣಿತನ ಮುಂತಾದ ಅಪರೂಪದ ಪದಪ್ರಯೋಗಗಳಿವೆ.  ಹಾಡಿನ interludeನಲ್ಲಿ ಜಿಸ್ ದೇಶ್ ಮೆಂ ಗಂಗಾ ಬಹತೀ ಹೈ ಚಿತ್ರದ ಹಮ್ ಭೀ ಹೈಂ ತುಂ ಭೀ ಹೋ ಹಾಡಿನ ಕಂಡೂ ಕಾಣದ ಛಾಯೆ ಇದೆ.


2. ಕೇದಿಗೆ ಹೂ ಮುಡಿದು

ಈ ಒಂದು ಹಾಡಿಗೆ ಮಾತ್ರ ತಮಿಳು ಮತ್ತು ತೆಲುಗು ಅವತರಣಿಕೆಗಳಲ್ಲಿದ್ದ ಮೂಲ ಧಾಟಿಯನ್ನೇ ಉಳಿಸಿಕೊಳ್ಳಲಾಗಿದೆ.  ಪಿ.ಬಿ. ಶ್ರೀನಿವಾಸ್, ಪಿ.ಸುಶೀಲಾ ಹಾಡಿದ್ದಾರೆ.   ಶ್ರುತಿಮಾಡುವ ಸುತ್ತಿಗೆಯನ್ನು ತಬಲಾದ ಮೇಲೆ ಎಳೆದು ಹೊರಡಿಸಿದ ಧ್ವನಿ, ಕೊಳಲುಗಳು ಮತ್ತು ಹಳ್ಳಿಗಾಡಿನ ರೈತನ ಆಲಾಪಗಳೇ ಹಿನ್ನೆಲೆ ಸಂಗೀತ. ಸಾಲಿನ ಕೊನೆಯ ಪದವನ್ನು ಇನ್ನೊಬ್ಬರು ಪುನರುಚ್ಚರಿಸುವ ಪರಿ ಗಮನ ಸೆಳೆಯುತ್ತದೆ.  ಜಾನಪದ ಸೊಗಡಿನ ಸಂಗೀತದೊಂದಿಗೆ  ಅರ್ಥಪೂರ್ಣ ಸಾಹಿತ್ಯವೂ ಮೇಳೈಸಿದೆ.  ತೌರಿನಿಂದ ತಂದ ನೂರು ನಗ, ಕೊಳಗ ತುಂಬಾ ತಂದ ತಮ್ಮನ ಹಣ ತಂದು ಮನೆ ತುಂಬಿದರೆ ಚಂದವೋ ಅಥವಾ ಮರ್ವಾದೆ, ಮಾನಗಳು ಅಂದವೋ ಎಂದು ನಾಯಕ ಕೇಳಿದ್ದಕ್ಕೆ ನನಗೆ ಮಾನವೇ ಆಭರಣ,  ಮರ್ವಾದೆಯೇ ಹೊರೆ ಚಿನ್ನ ಎಂದು ನಾಯಕಿ ನುಡಿಯುತ್ತಾಳೆ.  ಹೋಲಿಕೆಗಾಗಿ ಕೊನೆ ಭಾಗದಲ್ಲಿ ತಮಿಳಿನಲ್ಲಿ ಟಿ.ಎಮ್. ಸೌಂದರರಾಜನ್ ಮತ್ತು ಪಿ. ಲೀಲಾ, ತೆಲುಗಿನಲ್ಲಿ ಘಂಟಸಾಲ ಮತ್ತು ಪಿ.ಸುಶೀಲಾ ಹಾಡಿದ ತುಣುಕುಗಳನ್ನು  ಸೇರಿಸಲಾದ ಈ ಹಾಡನ್ನು ಈಗ ಆಲಿಸಿ.  ಹಿಂದಿಯ ಖಾನ್‌ದಾನ್ ಚಿತ್ರದಲ್ಲಿ ಈ ಸನ್ನಿವೇಶದ ಹಾಡು ನೀಲ್ ಗಗನ್ ಪರ್ ಉಡ್‌ತೇ ಬಾದಲ್.


3. ಚಿನ್ನದಂತಹ ಬಾಳುವೆಯಲ್ಲಿ

ಒಂದಾಗಿದ್ದ ಮನೆ ಕುತಂತ್ರಿಯೊಬ್ಬನ ಕಾರಸ್ಥಾನದಿಂದ  ಎರಡಾಗಿ ಒಡೆಯುವ ಸಂದರ್ಭದ ಹಿನ್ನೆಲೆ ಹಾಡಿದು.  ಪಿ.ಬಿ.ಶ್ರೀನಿವಾಸ್ ಹಾಡಿದ್ದಾರೆ. ತಬ್ಲಾ, ಸಾರಂಗಿ, ಕೊಳಲು, ಸಿತಾರ್ ಇತ್ಯಾದಿಗಳ ಸರಳ ಹಿನ್ನೆಲೆ ಇದೆ. ಅಂದಿನ ದಿನಗಳಲ್ಲಿ ವಿವಿಧಭಾರತಿಯ ಮಧುರಗೀತಂ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು ಇದು. ಬೇರೆ ನಿಲಯಗಳಿಂದ ಕೇಳಿದ್ದು ನೆನಪಿಲ್ಲ. ವಿರಸವೆಂಬ ವಿಷಕೆ ಬಲಿಯಾಗದಿರು,  ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದು ಹಾಡಿನ ತಾತ್ಪರ್ಯ.


4.  ಅಂದಚಂದವೇತಕೆ ಅಂತರಂಗ ದೈವಕೆ

ಒಲಿದು ಬಂದು ಕೈ ಹಿಡಿದಾಕೆಗೆ ಅಂಗವಿಕಲನಾದ ತಾನು ಏನು ತಾನೇ ಕೊಡಬಲ್ಲೆ ಎಂದು ಪತಿಯು ಕೊರಗಿದಾಗ ಜೀವನದಲ್ಲಿ ಬಾಹ್ಯ ಅಂದ ಚಂದವೇ ಎಲ್ಲವೂ ಅಲ್ಲ, ಎಂದಿಗೂ ಮಾಸದಿರುವಂಥ ಅಂತರಂಗದ ಚೆಲುವು ಇರುವಾಗ ಚಿಂತೆ ಏಕೆ ಎಂದು ನವವಧುವು ಸಂತೈಸುವ ಪಿ.ಸುಶೀಲಾ ಧ್ವನಿಯಲ್ಲಿರುವ ಮಧುರ ಹಾಡಿದು. ಈ ಹಾಡು ಕೇಳಿದಾಗಲೆಲ್ಲ ನನಗೆ ಉಜಿರೆ ಹಾಸ್ಟೆಲ್ ನೆನಪಾಗುತ್ತದೆ.  ಓದಲೆಂದು ಪುಸ್ತಕ ಹಿಡಿದು ಹಾಸ್ಟೆಲ್ ಬಳಿಯ ಗುಡ್ಡಕ್ಕೆ ಹೋದಾಗ ಅನೇಕ ಸಲ ಅನತಿ ದೂರದ ಉಜಿರೆ ಪೇಟೆಯಿಂದ ಅಲ್ಲಿಯ ತುಳಸಿ ಸೌಂಡ್ ಸಿಸ್ಟಂನವರು ಧ್ವನಿವರ್ಧಕದಲ್ಲಿ ನುಡಿಸುತ್ತಿದ್ದ ಈ ಹಾಡು ತೇಲಿಬರುತ್ತಿತ್ತು.   ಹಿಂದಿಯಲ್ಲಿ ಈ ಸನ್ನಿವೇಶಕ್ಕಿರುವ ತುಮ್ಹೀ ಮೇರೆ ಮಂದಿರ್ ತುಮ್ಹೀ ಮೇರಿ ಪೂಜಾ ಅತಿ ಜನಪ್ರಿಯ.  ಈ ಹಾಡಿನಲ್ಲಿರುವ ಮಂದಿರ್, ಪೂಜಾ, ದೇವತಾ ಮುಂತಾದ ಪದಗಳಿಂದಾಗಿ ಇದನ್ನು ಕೆಲವು ನಿಲಯದವರು ಭಕ್ತಿಗೀತೆಗಳ ಕಾರ್ಯಕ್ರಮದಲ್ಲಿ ಕೇಳಿಸುವುದುಂಟು!


5.  ಮೊಲ್ಲೆ ಮಲರಿ ಘಮಿಸುತಿರೆ

ಇದೊಂದು ಬಹಳ ಅಂದರೆ ಬಹಳ ಅಪರೂಪದ ಹಾಡು.  ಅನೇಕರು ಇದುವರೆಗೆ ಕೇಳಿಯೇ ಇರಲಿಕ್ಕಿಲ್ಲ.  ಕನ್ನಡದಲ್ಲಿ ಎಲ್.ಆರ್. ಈಶ್ವರಿ ಧ್ವನಿಯಲ್ಲಿರುವ ಮೊಟ್ಟಮೊದಲ ಕ್ಯಾಬರೆ ಶೈಲಿಯ ಈ ಹಾಡು ಅವರ ಯಾವ ಆಲ್ಬಂನಲ್ಲೂ ಇದ್ದಂತಿಲ್ಲ. ಯಾವ ಆರ್ಕೆಷ್ಟ್ರಾದವರೂ ಇದನ್ನು ಹಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಆಕಾಶವಾಣಿಯಲ್ಲಂತೂ ಅಂದಿನ ಕಾಲದಲ್ಲಿ ಒಮ್ಮೆಯೂ ಪ್ರಸಾರವಾಗಿರಲಿಲ್ಲ. ಆಗ ಆಯ್ಕೆ ಸಮಿತಿಯೊಂದು ಅನುಮತಿ ನೀಡಿದ ಹಾಡುಗಳಷ್ಟೇ ಆಕಾಶವಾಣಿಯಲ್ಲಿ ಬಿತ್ತರಗೊಳ್ಳುತ್ತಿದ್ದವು. ಆಕ್ಷೇಪಾರ್ಹ ಅಂಶಗಳೇನಾದರೂ ಕಂಡುಬಂದ ಗೀತೆಗಳನ್ನು ತಡೆ ಹಿಡಿಯಲಾಗುತ್ತಿತ್ತು. ಆದರೆ ಈ ಹಾಡಿನ ಪ್ರಥಮ ಪದವನ್ನು ಒತ್ತಕ್ಷರ ರಹಿತವಾಗಿ ಓದಿದ ಹೊರತು ಖಂಡಿತವಾಗಿಯೂ ಇದರಲ್ಲಿ ಯಾವುದೇ ಆಕ್ಷೇಪಾರ್ಹ ಪದ ಇಲ್ಲ.    ನಾನು ಥಿಯೇಟರಲ್ಲಿ ಸಿನಿಮಾ ನೋಡುವಾಗ ಕೇಳಿದವನು   ಮತ್ತೆ ಈ ಹಾಡು ಕೇಳಿದ್ದು ಆ ದಿನ ಬೆಂಗಳೂರು ದೂರದರ್ಶನದಲ್ಲಿ  ಚಿತ್ರ ಪ್ರಸಾರವಾದಾಗಲೇ. ಕ್ಯಾಬರೆ ಹಾಡಾದರೂ ಅತ್ಯುತ್ಕೃಷ್ಟ ಸಾಹಿತ್ಯ ಹೊಂದಿದೆ ಇದು. ಅರಳಿ ನಿಂತ ಹೂವನ್ನು ಬಯಸದ ಹೆಣ್ಣು, ಒಲಿದು ಬಂದ ಹೆಣ್ಣನ್ನು ಬಯಸದ ಗಂಡು ಎಲ್ಲೂ ಇಲ್ಲ.  ಹರೆಯ ಇರುವಾಗ ಸಗ್ಗ, ಆ ಮೇಲೆ ಜರೆಯ ಕಗ್ಗ ಮಾತ್ರ    ಎಂದು ಕು.ರ.ಸೀ ಇಲ್ಲಿ ಕಾವ್ಯಮಯವಾಗಿ ಹೇಳಿದ್ದಾರೆ.  ಮೊಲ್ಲೆ ಮಲರಿ ಘಮಿಸುತಿರೆ ಭ್ರಮಿಸಿ ಬಯಸದಿಹ ಹೆಣ್ಣಾರೋ ನಲ್ಲೆ ಬಳುಕಿ ಬಳಿಗೆ ಬರೆ ಒಲಿಸಿ ನಲಿಸದಿಹ ಗಂಡಾರೋ ಎಂಬ ಟಂಗ್ ಟ್ವಿಸ್ಟರ್ ರೀತಿಯ ಅರ್ಥಗರ್ಭಿತ ಸಾಲುಗಳ ಪಲ್ಲವಿಯನ್ನು ಈ ಹಾಡು ಹೊಂದಿದೆ. ನೀವೂ ಇದನ್ನೊಮ್ಮೆ ವೇಗವಾಗಿ ಹೇಳಲು ಪ್ರಯತ್ನಿಸಬಹುದು. ಚರಣಗಳ ಕೊನೆಗೆ ತೆರೆಯ ಮೇಲೆ ನರಸಿಂಹರಾಜು rap ಶೈಲಿಯಲ್ಲಿ ಹೇಳುವ ಬಂದೆ ಬಂದೆ ಬಂದೆ ಇಡ್ಲಿ ದೋಸೆ ಕಾಫಿ ಚಹ ತಂದೆ ತಂದೆ ಕೋ ಕೋ ಕೋ ಮತ್ತು ಕೊಟ್ಟೆ ಕೊಟ್ಟೆ ಕೊಟ್ಟೆ ತಿಂಡಿ ತೀರ್ಥ ತಿಂದ ಬಿಲ್ಲು ಬಿಟ್ಟೆ ಬಿಟ್ಟೆ ಕೈ ಕೈ ಕೈ ಅನ್ನುವ ಸಾಲುಗಳು ಈ ಹಾಡಿನ ಹೈಲೈಟ್.  ಈ ಸಾಲುಗಳನ್ನು ಹೇಳಿದವರು ಜೆ.ವಿ. ರಾಘವುಲು, ಎ.ಎಲ್. ರಾಘವನ್ ಇವರ ಪೈಕಿ ಯಾರು ಎಂದು ಸ್ಪಷ್ಟವಾಗುತ್ತಿಲ್ಲ.  ವಿವರಗಳಲ್ಲಿ ರಾಘವ ಎಂದಷ್ಟೇ ಇದೆ.  ಆಕರ್ಷಕ ಜಾಸ್ ಶೈಲಿಯ ಸಂಯೋಜನೆಯಲ್ಲಿ Come Septembar, Tequila ಇತ್ಯಾದಿ ಪ್ರಸಿದ್ಧ ಪಾಶ್ಚಾತ್ಯ ಸಂಯೋಜನೆಗಳ ಛಾಯೆ ಕಾಣಿಸುತ್ತದೆ. Interlude ಭಾಗದ ಗಿಟಾರ್ ಸೊಲೋ ಕೇಳಲು ಆಕರ್ಷಕವಾಗಿದೆ.  ಕೆಲವು ವರ್ಷಗಳ ನಂತರ ಬಂದ ಕು.ರ.ಸೀ ಅವರೇ ಬರೆದು ಎಲ್.ಆರ್. ಈಶ್ವರಿ  ಹಾಡಿದ ದೂರದಿಂದ ಬಂದಂಥ ಸುಂದರಾಂಗ ಜಾಣದಲ್ಲೂ ಇದೇ ಶೈಲಿಯನ್ನು ಗುರುತಿಸಬಹುದು.


ಈ ಹಾಡಿನ ವೀಡಿಯೊದಲ್ಲಿ  01.12 ನಿಮಿಷಕ್ಕೆ ನರಸಿಂಹರಾಜು ಅವರ free style cross leg dance ವೀಕ್ಷಿಸಿ!.



6. ಮತಿಹೀನ ನಾನಾಗೆ ತಂದೆ

ಇದು ಈ ಗೀತಗುಚ್ಛದ ಅತ್ಯಂತ ಸುಂದರ ಹಾಡು. ಪಿ.ಬಿ. ಶ್ರೀನಿವಾಸ್ ಅವರ ಅತ್ಯುತ್ತಮ ಹಾಡುಗಳ ಪಟ್ಟಿಗೆ ಸೇರಬೇಕಾದದ್ದು. ಪಿ.ಬಿ.ಎಸ್ ಧ್ವನಿಯನ್ನು ಜೆಮಿನಿಯ ಎಸ್.ಎಸ್. ವಾಸನ್  ಮೊದಲ ಸಲ ಕೇಳಿದಾಗಲೇ  ಗುರುತಿಸಿದ್ದ  ಕಲ್ಲನ್ನೂ ಕರಗಿಸಬಲ್ಲ  ಆರ್ದ್ರ ಭಾವಕ್ಕೆ ಈ ಹಾಡೊಂದು ಉತ್ತಮ ಉದಾಹರಣೆ.  ಸ್ವತಃ arranger ಆಗಿದ್ದ ವಿಜಯಾ ಕೃಷ್ಣಮೂರ್ತಿ ತನ್ನ orchestration ಕೌಶಲ್ಯವನ್ನು ಇಲ್ಲಿ ಧಾರೆಯೆರೆದಿದ್ದಾರೆ.  ಪುಟ್ಟ ಮಕ್ಕಳ ಆಟವನ್ನು  ಸಂಕೇತಿಸುವ tinkling ಧ್ವನಿಯೊಂದಿಗೆ ಆರಂಭವಾಗುವ ಹಾಡು ಪಲ್ಲವಿ ಭಾಗ ಮುಗಿಯುವಲ್ಲಿವರೆಗೆ  ಅದೇ ಹಿನ್ನೆಲೆಯೊಂದಿಗೆ ಯಾವುದೇ ತಾಳವಾದ್ಯಗಳಿಲ್ಲದೆ ಮುಂದುವರಿಯುತ್ತದೆ. ವಿಷಾದ ಭಾವಕ್ಕೆ ಪೂರಕವಾದ ಗ್ರೂಪ್ ವಯಲಿನ್ಸ್, ಗಿಟಾರ್, ಸಿತಾರ್ , ಕೊಳಲು, ಕ್ಲಾರಿನೆಟ್ ಇತ್ಯಾದಿಗಳುಳ್ಳ ಕೌಂಟರ್ ಮೆಲೊಡಿ ಸಹಿತವಾದ interludeನ ನಂತರ ಚರಣ ಆರಂಭವಾಗುವಾಗ ತಬ್ಲಾ ಸೇರಿಕೊಳ್ಳುತ್ತದೆ.  ಚರಣ ಪುನರಾವರ್ತನೆಯಾಗುವ ಮೊದಲು ಚಿಕ್ಕ bridge music ಇದೆ.  ಎರಡನೆ interlude ಮೊದಲಿನದಕ್ಕಿಂತ ಭಿನ್ನವಾಗಿದೆ.  ಜೋಗುಳಕ್ಕೆ ಈ ರೀತಿಯ ಘನ orchestra ಬಳಸುವ ಪ್ರಯೋಗವನ್ನು ಆ ಮೇಲೆ ಶಂಕರ್ ಜೈಕಿಶನ್ ಕೂಡ ಬ್ರಹ್ಮಚಾರಿ ಚಿತ್ರದ ಮೈ ಗಾವೂಂ ತುಮ್ ಸೋ ಜಾವೊ ಹಾಡಿನಲ್ಲಿ ಮಾಡಿದರು. ನಾಂದಿಯ ಹಾಡೊಂದು ಹಾಡುವೆ, ದೇವರ ಮಕ್ಕಳು ಚಿತ್ರದ ಹಾದಿ ಹೂವು ನೀ ಮಗುವೆ, ಸನಾದಿ ಅಪ್ಪಣ್ಣದ ನಾನೆ ತಾಯಿ ನಾನೆ ತಂದೆ ಪಿ.ಬಿ.ಎಸ್ ಅವರ ಇದೇ ಶೈಲಿಯ ಇತರ ಗೀತೆಗಳು.  ನಿರಾಸೆ ಮೂಡಿಸುವ ಸಂಗತಿ ಎಂದರೆ ಅಂದ ಚಂದವೇತಕೆ ಮತ್ತು ಈ ಹಾಡು ಯೂಟ್ಯೂಬಲ್ಲಿರುವ ಚಿತ್ರದ ಪ್ರತಿಯಲ್ಲಿ ಇಲ್ಲದಿರುವುದು. 


Monday 4 June 2018

ಚೆಂದದ ಚೆಲುವಿನ ತಾರೆಯ ಹಾಡು


ಅದು 1973ರಲ್ಲಿ ನಾನು ದೂರವಾಣಿ ಇಲಾಖೆಗೆ ಆಯ್ಕೆಯಾಗಿ ತರಬೇತಿಗೆ ಯಾವಾಗ ಕರೆ ಬರುತ್ತದೆಂದು ಕಾಯುತ್ತಿದ್ದ ಕಾಲ. ಆಗ ತಾನೆ ನಾಗರಹಾವು ಚಿತ್ರದ ಹಾಡುಗಳು ಬಿಡುಗಡೆಯಾಗಿ ಆಕಾಶವಾಣಿಯಲ್ಲಿ ಪ್ರಸಾರವಾತೊಡಗಿದ್ದವು.  ಕನ್ನಡ ನಾಡಿನ ವೀರ ರಮಣಿಯ, ಹಾವಿನ ದ್ವೇಷ  ಇತ್ಯಾದಿ ಹಾಡುಗಳನ್ನು ಕೇಳಿದಾಗ ಅದು ಐತಿಹಾಸಿಕ ಚಿತ್ರವಾಗಿರಬಹುದೆಂದು ನನಗನ್ನಿಸಿತ್ತು!  ಚಿತ್ರದುರ್ಗದ ಕಲ್ಲಿನ ಕೋಟೆಯ ಓಬವ್ವನ ಕಥಾನಕ, ಹಾವಿನ ದ್ವೇಷ ಹಾಡಲ್ಲಿ ಇದ್ದ ರಾಮಾಚಾರಿ ಎಂಬ ಉಲ್ಲೇಖ ಮತ್ತು ರೋಷಾವೇಶದ ಸಾಲುಗಳು, ಐತಿಹಾಸಿಕ ಕಾದಂಬರಿಗಳಿಗೆ ಪ್ರಸಿದ್ಧರಾಗಿದ್ದ ತ.ರಾ.ಸು ಕೃತಿಯಾಧಾರಿತ ಎಂದು ಪತ್ರಿಕೆಗಳಲ್ಲಿ ಬಂದಿದ್ದ ವರದಿಗಳು ನನ್ನ ಊಹೆಗೆ ಕಾರಣ.  ಆಗ ನಾನು ಚಿತ್ರಗೀತೆಗಳ ಮಟ್ಟಿಗೆ ಏಕಪಾಠಿಯಾಗಿದ್ದೆ.  ಹಾಡುಗಳನ್ನು ರೇಡಿಯೋದಲ್ಲಿ ಒಮ್ಮೆ ಕೇಳಿದರೆ ಸಾಕು, ಥಟ್ಟಂತ ಅವುಗಳನ್ನು ಕೊಳಲಿನಲ್ಲಿ ನುಡಿಸಬಲ್ಲವನಾದ್ದೆ.  ಆದರೆ ಈ ಚಿತ್ರದ ಉಳಿದೆಲ್ಲ ಹಾಡುಗಳನ್ನು ಕೇಳಿ ಮನನ ಮಾಡಿಕೊಳ್ಳುವಷ್ಟರಲ್ಲಿ ತರಬೇತಿಗೆ ಕರೆ ಬಂದು ಬೆಂಗಳೂರಿಗೆ ಹೊರಟು ನಿಂತೆ.  ಅಲ್ಲಿ ನಾನು ಉಳಿದುಕೊಂಡಿದ್ದ ಮಿತ್ರರ ರೂಮಲ್ಲಿ ಟ್ರಾನ್ಸಿಸ್ಟರ್ ಇದ್ದುದರಿಂದ ಚಿತ್ರದ ಎಲ್ಲ ಹಾಡುಗಳ ತಕ್ಕಮಟ್ಟಿನ ಪರಿಚಯವೂ ಆಯಿತು. ಅದು ಐತಿಹಾಸಿಕ ಅಲ್ಲ ಸಾಮಾಜಿಕ ಚಿತ್ರ ಎಂಬ ವಿಷಯವೂ ತಿಳಿಯಿತು. ಕರ್ಪೂರದ ಗೊಂಬೆ ನಾನು ಹಾಡು ನನ್ನನ್ನು ಬಲು ಬೇಗ ಆಕರ್ಷಿಸಿತು. ಸುಲಭವಾಗಿ ಅದನ್ನು ಕೊಳಲಲ್ಲಿ ನುಡಿಸಲು ಕಲಿತೆ.  ಆದರೆ ನನ್ನನ್ನು ಹೆಚ್ಚು ಕಾಡಿದ್ದು ಚೆಂದದ ಚೆಲುವಿನ ತಾರೆಯನ್ನು ಕರೆಯುವ ಬಾರೇ ಬಾರೇ ಹಾಡು.  ಒಂದು ವಾರಾಂತ್ಯದಲ್ಲಿ ಸಂಜಯ್ ಟಾಕೀಸಿನಲ್ಲಿ  ಸಿನಿಮಾ ನೋಡಿದ ಮೇಲಂತೂ ಆ ಹಾಡಿನ ಮೇಲಿನ ಮೋಹ ಇನ್ನೂ ಹೆಚ್ಚಾಯಿತು.  ಆದರೆ ಇತರ ಹಾಡುಗಳನ್ನು ಸುಲಭವಾಗಿ ಗ್ರಹಿಸಿದ ನನಗೆ  ಇದೇಕೋ ಕಬ್ಬಿಣದ ಕಡಲೆ ಅನ್ನಿಸಿತ್ತು.  ಅದರ ಏರಿಳಿತಗಳೇ ಅರ್ಥವಾಗುತ್ತಿರಲಿಲ್ಲ.  ಗಾಂಧಿ ಬಜಾರ್ ಸಮೀಪದ ಡಿ.ವಿ.ಜಿ ರೋಡಲ್ಲಿದ್ದ ಭಾರತಿ ಎಂಬ ಹೋಟೆಲಲ್ಲಿ ಒಮ್ಮೆ ಕಾಫಿ ಕುಡಿಯಲು ಹೋಗಿದ್ದಾಗ ಅಲ್ಲಿದ್ದ ಜೂಕ್ ಬಾಕ್ಸಲ್ಲಿ ಈ ಹಾಡು ಕೇಳಿ ಬರುತ್ತಿತ್ತು.  ಅದನ್ನು ಮತ್ತೆ ಮತ್ತೆ ಕೇಳುವ ಸಲುವಾಗಿ ಆ ಮೇಲೆ  ಅನೇಕ ಸಾರಿ ಆ ಹೋಟೆಲಿಗೆ ಭೇಟಿ ನೀಡಿದ್ದೆ.  ಆದರೆ ಆ ಹಾಡನ್ನು ನಾನು ಗೆದ್ದದ್ದು ಎಷ್ಟೋ ವರ್ಷಗಳ ನಂತರ ಕ್ಯಾಸೆಟ್, CDಗಳ ಯುಗ ಆರಂಭವಾದ ನಂತರವೇ.  ಅಷ್ಟೇನೂ ಕಠಿಣವಲ್ಲದ ಇದು ಅದೇಕೆ ನನ್ನನ್ನು ಅಷ್ಟು ಸಮಯ ಸತಾಯಿಸಿತು ಎಂದು ಆ ಮೇಲೆ ನನಗೆ ಅನ್ನಿಸಿದ್ದಿದೆ.

ಶಂಕರ್ ಜೈಕಿಶನ್, ಓ.ಪಿ.ನಯ್ಯರ್,  ಹಿರಿಯ ಸಂಗೀತ ನಿರ್ದೇಶಕ ಎಸ್.ಡಿ. ಬರ್ಮನ್ ಮುಂತಾದ ಪ್ರಸಿದ್ಧರ ಅನೇಕ ರಚನೆಗಳಿಗೆ  ಪಾಶ್ಚಾತ್ಯ ಸಂಗೀತದ ರೆಕಾರ್ಡುಗಳು ಸ್ಪೂರ್ತಿಯಾಗಿದ್ದುದು  ರಹಸ್ಯವೇನೂ ಅಲ್ಲ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ  ಹಿಂದಿಯ ಪ್ರಸಿದ್ಧ ಹಾಡುಗಳು ಕನ್ನಡ ಸೇರಿದಂತೆ ದಕ್ಷಿಣದ ಎಲ್ಲ ಭಾಷೆಗಳ ಅನೇಕ ಹಾಡುಗಳ ಮೇಲೆ ಪ್ರಭಾವ ಬೀರಿರುವುದೂ ಗೊತ್ತಿರುವ ವಿಷಯವೇ.  ಆರಂಭದಲ್ಲಿ ಕೆಲವು ಡಬ್ಬಿಂಗ್ ಸಿನಿಮಾಗಳಿಗೆ ಮೂಲ ಹಿಂದಿ ಹಾಡುಗಳ ಧಾಟಿಯಲ್ಲಿ ಕನ್ನಡ ಹಾಡುಗಳನ್ನು ಮರು ಸೃಷ್ಟಿಸಿದ  ವಿಜಯ ಭಾಸ್ಕರ್ ಅವರ ನಂತರದ ಅನೇಕ ಹಾಡುಗಳ interludeಗಳಲ್ಲಿ ಹಿಂದಿಯ ಛಾಯೆ ಗುರುತಿಸಬಹುದು.  ಆದರೆ ಈ ಬಾರೆ ಬಾರೆ ಹಾಡು ಕ್ಲಿಫ್ ರಿಚಾರ್ಡ್ ಅವರ ಎವರ್ ಗ್ರೀನ್ ಟ್ರೀ ಎಂಬ ಪಾಶ್ಚಾತ್ಯ ಹಾಡಿನ ಸ್ಪೂರ್ತಿಯಿಂದ ಜನ್ಮ ತಾಳಿದ್ದು ಎಂದು ಅನೇಕರಿಗೆ ಗೊತ್ತಿರಲಾರದು.  ಈ ಹಾಡಿನ prelude  ಮತ್ತು ಒಂದು interlude ಆಗಿ ಬಳಸಲಾದ ನೀ ಪನಿ ಸಾ ಪಾ ಸಾ   ನೀ ಪಮ ಪಸಾ ಎಂಬ ಸಾಲು ಆ ರೆಕಾರ್ಡಿನಿಂದ   ಎತ್ತಿಕೊಂಡದ್ದು. ನನಗೆ ಈ ಮಾಹಿತಿ ಒದಗಿಸಿದವರು ಮಿತ್ರ ಮೂರ್ತಿ ದೇರಾಜೆ. ಆದರೆ ಈ ತಳಪಾಯದ ಮೇಲೆ ಸ್ವಂತ ಶೈಲಿಯ ಸುಂದರ ಸೌಧವನ್ನು ವಿಜಯ ಭಾಸ್ಕರ್ ನಿರ್ಮಿಸಿದರು ಎಂಬುದರಲ್ಲಿ ಎರಡು ಮಾತಿಲ್ಲ.  ಇದೊಂದು ರೀತಿ ವಿದೇಶಿ ಮಾವಿನ ಗಿಡಕ್ಕೆ ದೇಸೀ ತಳಿಯ ಕಸಿ ಕಟ್ಟಿದಂತೆ! 

ಸ ಗ21 ಪ ನಿ2 ಸ - ಸ ನಿ22 ಪ ಮ12 ರಿ2 ಎಂಬ ಭೀಮ್ ಪಲಾಸ್ ರಾಗದ ಸ್ವರಗಳನ್ನು ಆಧಾರವಾಗುಳ್ಳ ಈ ಹಾಡಿನ ಚಲನೆ ಪಹಾಡಿ ರಾಗವನ್ನು ಹೋಲುತ್ತದೆ ಎನ್ನುವುದು ಹೆಚ್ಚು ಸೂಕ್ತ. ಮಧ್ಯದಲ್ಲಿ 1 ರ ಸ್ಪರ್ಶವೂ ಇದೆ. ಮಂದ್ರ ನಿಷಾದದಿಂದ ತಾರ ಸಪ್ತಕದ ಗಾಂಧಾರದ ವರೆಗೆ ಹರಹು ಇರುವ ಹಾಡು ಮಧ್ಯ ಸಪ್ತಕದಲ್ಲೇ ಹೆಚ್ಚು ಸಂಚರಿಸುತ್ತದೆ.  ಪಿ.ಬಿ. ಶ್ರೀನಿವಾಸ್ ಅವರ ಹೆಚ್ಚಿನ ಹಾಡುಗಳಲ್ಲಿ ಕಾಣ ಸಿಗುವ ವಿಶಿಷ್ಟ ಮುರ್ಕಿಗಳು ಇಲ್ಲಿಲ್ಲ.  ಹಾಡಿನುದ್ದಕ್ಕೂ ಸ್ವರಗಳ ಏರಿಳಿತಗಳು ಬಹಳವೇ ಇದ್ದರೂ ಎಲ್ಲ ನೇರ noteಗಳು. ಎಲ್ಲ ಸಾಲುಗಳ landing noteಗಳು  ಬಲು ದೀರ್ಘ. ಶ್ರುತಿ ಸಾಧನೆಗೆ ಬಲು ಅನುಕೂಲ.  ಶ್ರುತಿ ಶುದ್ಧತೆಗೆ ಅಗ್ನಿ ಪರೀಕ್ಷೆಯೂ ಹೌದು. ಇಲ್ಲಿ ಕಾಣಿಸುವ ಪಿ.ಬಿ.ಎಸ್ ಅವರ ವೃತ್ತಿಪರತೆ, ಸ್ಪಷ್ಟ ಉಚ್ಚಾರ, ಧ್ವನಿಯ ಮಾರ್ದವತೆ , ಉಸಿರಿನ ನಿಯಂತ್ರಣ ಇತ್ಯಾದಿಗಳ ಬಗ್ಗೆ ಹೇಳಬೇಕಾದ ಅಗತ್ಯವೇ ಇಲ್ಲ.

ಈ ಹಾಡು ಕೇವಲ 8 ಸೆಕೆಂಡುಗಳ ಅವಧಿಯ ಅತಿ ಚಿಕ್ಕ prelude ಮತ್ತು  interludeಗಳನ್ನು ಹೊಂದಿರುವುದು ಒಂದು ವಿಶೇಷ. ಇಂತಹ ಉದಾಹರಣೆ ಇನ್ನೊಂದು ಸಿಗುವುದು ಕಷ್ಟ.   ಆದರೆ ಈ  interlude ಹಾಡಿನ ಅವಿಭಾಜ್ಯ ಅಂಗವೇ ಆಗಿದ್ದು ಇದಿಲ್ಲದೆ ಈ ಹಾಡನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ನಾನು ಕಾರ್ಯಕ್ರಮಗಳಲ್ಲಿ  ನುಡಿಸುವ ಹಾಡುಗಳು ಹೆಚ್ಚಾಗಿ interlude ಒಳಗೊಂಡಿರುವುದಿಲ್ಲ.  ಆದರೆ ಈ ಹಾಡನ್ನು interlude ಸೇರಿಸಿಯೇ ನಾನು ನುಡಿಸುವುದು. ಶಂಕರ್ ಜೈಕಿಶನ್ ಅವರ ಅನೇಕ ಹಾಡುಗಳಲ್ಲೂ ಚಿಕ್ಕ ಚಿಕ್ಕ interlude ಮತ್ತು bridge musicಗಳು ಹಾಡಿನ ಒಂದು ಭಾಗವೇ ಆಗಿರುತ್ತಿದ್ದವು.  ಎಸ್.ಡಿ. ಬರ್ಮನ್ ಕೂಡ ಯಾವಾಗಲೂ ಚಿಕ್ಕ interludeಗಳನ್ನು ಇಷ್ಟಪಡುತ್ತಿದ್ದರು. Interlude ಜಾಸ್ತಿ ಉದ್ದ ಇದ್ದರೆ ಮುಖ್ಯ ಹಾಡಿನ ಪ್ರಾಮುಖ್ಯ ಕಡಿಮೆಯಾಗುತ್ತದೆಂದು ಅವರು ತಮ್ಮ arrangersಗೆ ಹೇಳುತ್ತಿದ್ದರಂತೆ.

ಇದರ orchestration ಕೂಡ ಸರಳವಾಗಿದ್ದು ಸೀಮಿತ ಸಂಖ್ಯೆಯ ವಾದ್ಯೋಪಕರಣಗಳನ್ನು ಬಳಸಲಾಗಿದೆ.  ವಯಲಿನ್ಸ್, ಕೊಳಲು, ಬೊಂಗೊ, ಕಾಂಗೋ ಮತ್ತು ತಬ್ಲಾಗಳ ಜೊತೆಗೆ ಬೆಟ್ಟಗುಡ್ಡಗಳ ಅನುಭವ ನೀಡುವ ಸನಾದಿ ಅಥವಾ ಮೌರಿಯಂಥ ವಾದ್ಯ ವಿಶೇಷವೊಂದರ ಬಳಕೆ ಗಮನ ಸೆಳೆಯುತ್ತದೆ. ಇದು ರಷ್ಯಾ ಮೂಲದ Zhaleika ಎಂಬ ಹೆಸರಿನ ವಾದ್ಯ ಎನ್ನಲಾಗಿದೆ.  ಇದೇ ವಾದ್ಯದ ಬಳಕೆಯನ್ನು ನಾವಾಡುವ ನುಡಿಯೇ ಕನ್ನಡ ನುಡಿ ಹಾಡಲ್ಲೂ ಗುರುತಿಸಬಹುದು.  ಹಿಂದಿಯ ತುಮ್ ಅಗರ್ ಸಾಥ್ ದೇನೇ ಕಾ ವಾದಾ ಕರೊ ಮತ್ತು ಏಕ್ ಥಾ ಗುಲ್ ಔರ್ ಏಕ್ ಥೀ ಬುಲ್ ಬುಲ್  ಹಾಡುಗಳಲ್ಲೂ ಇಂಥದೇ ವಾದ್ಯವನ್ನು ಬಳಸಲಾಗಿದೆ.  ಇವೆಲ್ಲವೂ ಬೆಟ್ಟ ಗುಡ್ಡಗಳ ಹಿನ್ನೆಲೆಯ ಹಾಡುಗಳು ಎಂಬುದು ಗಮನಾರ್ಹ.  ಯುವವಾಣಿಯ signature tuneನಲ್ಲೂ ಇದೇ ರೀತಿಯ ವಾದ್ಯ ಇದೆ. ಬಾರೇ ಬಾರೇ ಹಾಡಿನುದ್ದಕ್ಕೂ ಹಿನ್ನೆಲೆಯಲ್ಲಿ ಹದವಾಗಿ ನುಡಿಯುವ ವಯಲಿನ್ಸ್, ಕೊಳಲು ಇತ್ಯಾದಿಗಳ counter melody ಇದೆ. ಈ ಚಿತ್ರದ ಸಂದರ್ಭದಲ್ಲಿ ಎಸ್.ಪಿ. ವೆಂಕಟೇಶ್ ಅನ್ನುವವರು ವಿಜಯ ಭಾಸ್ಕರ್ ಅವರಿಗೆ  ಸಹಾಯಕರಾಗಿದ್ದರು ಎಂದು ಕೇಳಿದ್ದೇನೆ.

ವಿಜಯನಾರಸಿಂಹ ಅವರು ‘ರೆ’ಕಾರವನ್ನು ಮುಖ್ಯವಾಗಿಟ್ಟುಕೊಂಡು ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಸರಳ ಸುಂದರ ಹಾಡು ಬರೆದಿದ್ದಾರೆ.  ಇದು ಬಾರೆ ಶಬ್ದದಿಂದ ಏಕೆ ಆರಂಭವಾಗುತ್ತದೆ ಎಂದು ನಾಗರ ಹಾವು ಚಿತ್ರ ನೋಡಿದವರಿಗೆ ಗೊತ್ತಿರುತ್ತದೆ.  ಚಿತ್ರದಲ್ಲಿ ಮಾರ್ಗರೆಟ್ ರಾಮಾಚಾರಿಯನ್ನು ಪ್ರೀತಿಸಲಾರಂಭಿಸುತ್ತಾಳೆ.  ಆದರೆ ತಾನು ಅಲಮೇಲುವನ್ನು ಪ್ರೀತಿಸುತ್ತಿದ್ದು ‘ನಿನಗಾಗಿ ಪ್ರಾಣ ಬೇಕಾದ್ರೂ ಕೊಡ್ತೀನಿ’ ಎಂಬುದಾಗಿ ಈಗಾಗಲೇ ಆಕೆಗೆ ಮಾತು ಕೊಟ್ಟಿರುವುದಾಗಿ ರಾಮಾಚಾರಿ ಹೇಳುತ್ತಾನೆ.  ‘ಮಾರ್ಗರೆಟ್ ಬೇಕೋ ಅಲಮೇಲು ಬೇಕೋ ಆಯ್ಕೆ ನಿನ್ನದು’ ಎಂದು ಹೇಳಿ ಮಾರ್ಗರೆಟ್  ನಿರ್ಗಮಿಸುತ್ತಾಳೆ.  ರಾಮಾಚಾರಿಯ ಮನಃಪಟಲದಿಂದಲೂ  ನಿಧಾನವಾಗಿ ಮಾರ್ಗರೆಟ್  ನಿರ್ಗಮಿಸಿ ಅಲಮೇಲು ಪ್ರವೇಶಿಸುವಾಗ ಆಕೆಯನ್ನು ಬಾರೇ ಬಾರೇ ಎಂದು ಕರೆಯುತ್ತಾನೆ.  ವಾಸ್ತವವಾಗಿ ಮಾರ್ಗರೆಟನ್ನು ಉದ್ದೇಶಿಸಿ ಹೇಳುವ   ಹೋಗೆ ಹೋಗೆ ಎಂಬ silent  ಸಾಲೊಂದನ್ನು ಈ  ಹಾಡಿಗಿಂತ  ಮುಂಚೆ ಕಲ್ಪಿಸಿಕೊಳ್ಳಬೇಕಾಗುತ್ತದೆ.  ಚಿತ್ರದಲ್ಲಿ ಇದನ್ನು ಹಿನ್ನೆಲೆ ಸಂಗೀತದ ಮೂಲಕ ಅಭಿವ್ಯಕ್ತಿಗೊಳಿಸಲಾಗಿದೆ.  ಹಾಡಿನುದ್ದಕ್ಕೂ ಅನೇಕ ಬಾರಿ ಪುನರಾವರ್ತನೆಯಾಗುವ ಬಾರೆ ಪದವು ಕೇಳುಗರ ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಸೀಮಿತ ತಂತ್ರಜ್ಞಾನದ ಆ ದಿನಗಳಲ್ಲಿ ನಾಯಕನ ಸಾಮಾನ್ಯ ವೇಗದ ನಡಿಗೆ ಮತ್ತು ನಾಯಕಿಯ slow motion ಓಟವನ್ನು ಒಂದೇ ಫ್ರೇಮಲ್ಲಿ ಅಳವಡಿಸಿದ್ದು ಈ ಹಾಡಿನ  ಹೆಚ್ಚುಗಾರಿಕೆ.

ಹಾಡಿಗೆ ಸ್ಪೂರ್ತಿಯಾದ ಕ್ಲಿಫ್ ರಿಚಾರ್ಡ್ ಅವರ ಟ್ಯೂನ್ ಇಲ್ಲಿ ಕೇಳಬಹುದು.



ಇದು ಗ್ರಾಮೊಫೋನ್ ರೆಕಾರ್ಡಲ್ಲಿ  ಇರುವ ಹಾಡಿನ ವರ್ಷನ್.  ಚಿತ್ರದಲ್ಲಿರುವ ಹಾಡಿಗೂ ಇದಕ್ಕೂ ಸ್ವಲ್ಪ ವ್ಯತ್ಯಾಸ ಇರುವುದನ್ನು ಗಮನಿಸಬಹುದು.  ಹಾಡಿನ ವಿಡಿಯೊ ಬೇಕಿದ್ದರೆ ಯೂಟ್ಯೂಬಲ್ಲಿ ಲಭ್ಯವಿದೆ.



ಬಾರೆ…ಬಾರೆ…
ಚೆಂದದ ಚೆಲುವಿನ ತಾರೆ
ಬಾರೆ…ಬಾರೆ…
ಒಲವಿನ ಚಿಲುಮೆಯ ಧಾರೆ

ಕಣ್ಣಿನ ಸನ್ನೆಯ
ಸ್ವಾಗತ ಮರೆಯಲಾರ
ಚೆಂದುಟಿ ಮೇಲಿನ
ಹೂ ನಗೆ ಮರೆಯಲಾರೆ
ಅಂದದ ಹೆಣ್ಣಿನ
ನಾಚಿಕೆ ಮರೆಯಲಾರೆ
ಮೌನ ಗೌರಿಯ
ಮೋಹದಾ ಕೈ ಬಿಡಲಾರೆ

ಬಾ.. ರೇ.. ಬಾ.. ರೇ..
ಚೆಂದದ ಚೆಲುವಿನ ತಾ..ರೆ
ಒಲವಿನ ಚಿಲುಮೆಯ ಧಾರೆ

ಕೈ ಬಳೆ ನಾದದ
ಗುಂಗನು ಅಳಿಸಲಾರೆ
ಮೈಮನ ಸೋಲುವ
ಮತ್ತನು ಮರೆಯಲಾರೆ
ರೂಪಸಿ ರಂಭೆಯ
ಸಂಗವ ತೊರೆಯಲಾರೆ
ಮೌನ ಗೌರಿಯ
ಮೋಹದಾ ಕೈ ಬಿಡಲಾರೆ

ಬಾ.. ರೇ.. ಬಾ.. ರೇ..
ಚೆಂದದ ಚೆಲುವಿನ ತಾ..ರೆ
ಒಲವಿನ ಚಿಲುಮೆಯ ಧಾರೆ



ಈ ಹಾಡನ್ನು ಕೊಳಲು ಅಥವಾ  ಇತರ ಸಂಗೀತೋಪಕರಣಗಳಲ್ಲಿ ನುಡಿಸಬಯಸುವವರಿಗಾಗಿ ಸಾಹಿತ್ಯ ಮತ್ತು ಸ್ವರಗಳೊಡನೆ ನಾನು ತಯಾರಿಸಿದ ವಿಶೇಷ ವಿಡಿಯೊ ಒಂದು ಇಲ್ಲಿದೆ. ಇದರಲ್ಲಿ ಬಳಸಲಾದ ಸ್ವರಗಳು
ಸ ಗ21 ಪ ನಿ2 ಸ - ಸ ನಿ22 ಪ ಮ12 ರಿ2.  ಸ್ವರದ ಮೇಲೆ ಚುಕ್ಕಿ ಇದ್ದರೆ ತಾರ ಸಪ್ತಕವೆಂದೂ ಕೆಳಗಡೆ ಚುಕ್ಕಿ ಇದ್ದರೆ ಮಂದ್ರ ಸಪ್ತಕವೆಂದೂ ತಿಳಿಯುವುದು.  1 ಪ್ರಯೋಗವಿರುವಲ್ಲಿ ಗುರುತು ಮಾಡಲಾಗಿದೆ.  ಇದು ನಾನು ತಯಾರಿಸಿರುವ ಸೆಲ್ಫಿ ವೀಡಿಯೊ!