Wednesday 6 May 2020

ಇಲ್ಲದ ಚಿತ್ರ ಪತಿಯೇ ದೈವ - ಹಾಡುಗಳಿರುವುದು ನಮ್ಮ ಸುದೈವ


ಒಬ್ಬ ನಿವೃತ್ತ ಶ್ರೀಮಂತ ಉದ್ಯಮಿ. ಮಾತು ಮಾತಿಗೆ ಎಲ್ಲವೂ ಭಗವಂತನ ಇಚ್ಛೆ ಅನ್ನುತ್ತಾ ಹಾಗೆಯೇ ನಂಬಿದವನು. ಆತನ ಪತ್ನಿ ತನ್ನಿಂದಲೇ ಎಲ್ಲ ಎಂದು ತಿಳಿದುಕೊಂಡಿರುವ ಜೋರು ಬಾಯಿಯವಳು. ಮನೆಯ ಮೂಗುದಾರವನ್ನು ತನ್ನ ಹಿಡಿತದಲ್ಲೇ ಇಟ್ಟುಕೊಂಡವಳು. ಹಿರಿಯ ಸೊಸೆ ವಿಧವೆ.  ಆಕೆಗಿಬ್ಬರು ಪುಟ್ಟ ಮಕ್ಕಳು. ಗಾಣದೆತ್ತಿನಂತೆ ದುಡಿಯುತ್ತಿದ್ದಾಳೆ.  ಎರಡನೆಯ ಮಗ ನವ ವಿವಾಹಿತ. ತಂದೆಯ ವ್ಯವಹಾರವನ್ನು ಈಗ ತಾನೇ ಮುನ್ನಡೆಸುತ್ತಿದ್ದಾನೆ. ಮೂರನೆಯ ಮಗ ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದಾನೆ.  ಕಾಲೇಜು ಕನ್ಯೆಯೊಬ್ಬಳೊಡನೆ ಆತನಿಗೆ  ಪ್ರೇಮಾಂಕುರವಾಗುತ್ತದೆ. ಇದನ್ನು ತಿಳಿದ ಆಕೆಯ ಮಲತಾಯಿ ತಾಟಕಿಯಂಥ ಅತ್ತೆ ಇರುವ ಮನೆಗೆ ಆಕೆಯನ್ನು ವಿವಾಹ ಮಾಡಿ ಕೊಡುವ ಸಂಚು ಹೂಡುತ್ತಾಳೆ. ಆದರೆ ಮಲತಾಯಿ ಆರಿಸಿದ ಆ ತಾಟಕಿಯ ಮಗ ತನ್ನ ಪ್ರೇಮಿಯೇ ಆಗಿರುತ್ತಾನೆ!  ಕೊನೆಯವಳಾದ ತಂಗಿಗೆ ಮದುವೆಯಾಗಿದ್ದರೂ ಕ್ಷುಲ್ಲಕ ಕಾರಣಕ್ಕಾಗಿ ಗಂಡನ ಮನೆ ಸೇರದೆ ತವರಿನಲ್ಲೇ ಉಳಿದಿದ್ದಾಳೆ. ಚಾಡಿ ಹೇಳಿ ಚಂದ ನೋಡುವ ಸ್ವಭಾವದವಳು. ವ್ಯವಹಾರಕ್ಕಾಗಿ ಹೆಚ್ಚು ಸಮಯ ಮನೆಯಿಂದ ಹೊರಗಿರುವ ಹಿರಿಯ ಮಗ ತನ್ನ ಪತ್ನಿ ಮತ್ತು ತಮ್ಮನ ಮಧ್ಯೆ ಇರುವ ಅತ್ತಿಗೆ ಮೈದುನರ ಸಹಜವಾದ ಸಲುಗೆಯನ್ನು ಅಪಾರ್ಥ ಮಾಡಿಕೊಳ್ಳುತ್ತಾನೆ.  ತಂಗಿ ಇದಕ್ಕೆ ಒಗ್ಗರಣೆ ಹಾಕುವ ಕೆಲಸ ಮಾಡುತ್ತಾಳೆ. ಪತ್ನಿಯ ಹೊಟ್ಟೆಯಲ್ಲಿರುವ ಮಗು ತನ್ನದಲ್ಲ ಎನ್ನುವಷ್ಟರ ಮಟ್ಟಿಗೆ ಹೋದ ಆತ ಮನೆ ಬಿಟ್ಟು ತನ್ನ ಪತ್ನಿಗೂ ಪರಿಚಯವಿರುವ ಸ್ನೇಹಿತೆಯೋರ್ವಳ ಮನೆ ಸೇರುತ್ತಾನೆ.  ಕಲಾವಿದೆಯಾದ ಆ ಸ್ನೇಹಿತೆ ಆತನಿಗೆ ಆಶ್ರಯ ನೀಡಿದರೂ ಅವರ ಸಂಸಾರವನ್ನು ಸರಿಹೊಂದಿಸುವ ಸಂಕಲ್ಪ ಮಾಡುತ್ತಾಳೆ. ಮದುವೆಯಾದರೂ ಗಂಡನ ಮನೆಗೆ ಹೋಗದ ಮಗಳ ಕಿತಾಪತಿ ಮತ್ತು ಪತ್ನಿಯ ಅಹಂಕಾರಗಳು ಮಿತಿ ಮೀರಿದಾಗ ಹಸುವಿನಂತಿದ್ದ ತಂದೆ ಹುಲಿಯಾಗಿ ತನ್ನ ಕೈಯ ಕೋಲಿಗೆ ಕೆಲಸ ಕೊಡುತ್ತಾನೆ.  ಪರಿಣಾಮವಾಗಿ ಸಿಂಹಿಣಿಯಾಗಿದ್ದ ಪತ್ನಿ ಹರಿಣಿಯಾಗುತ್ತಾಳೆ. ಮಗಳು ತೆಪ್ಪಗೆ ಗಂಡನ ಮನೆ ಸೇರುತ್ತಾಳೆ. ಅಳಿಯ ಮತ್ತು ಆಶ್ರಯ ನೀಡಿದ ಸ್ನೇಹಿತೆಯ ಪ್ರಯತ್ನದಿಂದ ಹಿರಿ ಮಗನ ಕಣ್ಣೆದುರಿನ ಪೊರೆ ಸರಿದು ಎಲ್ಲವೂ ಸುಖಾಂತ್ಯವಾಗುತ್ತದೆ.

ಇದು 1964ರಲ್ಲಿ ಬಿಡುಗಡೆಯಾದ  ಪತಿಯೇ ದೈವ ಸಿನಿಮಾದ ಕಥೆ.  ಆರ್. ನಾಗೇಂದ್ರ ರಾವ್ ನಿರ್ಮಿಸಿ ನಿರ್ದೇಶಿಸಿದ  ಈ ಚಿತ್ರದಲ್ಲಿ ಆರ್.ಎನ್. ಸುದರ್ಶನ್, ಅಶ್ವಥ್, ಬಾಲಕೃಷ್ಣ, ಚಿ.ಉದಯಶಂಕರ್, ಹನುಮಂತ ರಾವ್, ಪಂಢರಿ ಬಾಯಿ, ಮೈನಾವತಿ, ಜಯಂತಿ, ಕಲ್ಪನಾ, ಜಯಶ್ರೀ, ಲಕ್ಷ್ಮೀ ದೇವಿ ಮುಂತಾದವರು ನಟಿಸಿದ್ದರು. ಆರ್.ಎನ್. ಜಯಗೋಪಾಲ್  ಸಾಹಿತ್ಯ ರಚಿಸಿ ಬರೆದ ಗೀತೆಗಳಿಗೆ ವಿಜಯಭಾಸ್ಕರ್ ಸಂಗೀತ ಸಂಯೋಜಿಸಿದ್ದರು.

ನಾನು ಈ ಚಿತ್ರ ನೋಡಿಲ್ಲ. ಚಿತ್ರದ ಪದ್ಯಾವಳಿಯೂ ನನ್ನಲ್ಲಿಲ್ಲ. ಚಿತ್ರದ ಪ್ರಿಂಟ್ ಲಭ್ಯವಿಲ್ಲದಿರುವುದರಿಂದ ಅಂತರ್ಜಾಲದಲ್ಲೂ  ನೋಡಲು ಸಿಗುವುದಿಲ್ಲ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಕೂಡ ಎಲ್ಲೂ ಇಲ್ಲ.  ಹಾಗಿದ್ದರೆ   ಚಿತ್ರದ ಕಥೆ ಇಲ್ಲಿ ಎಲ್ಲಿಂದ ಎಂಬ ಸಂಶಯ ಮೂಡುವುದು ಸಹಜ.


ಬಿ.ಎಸ್. ರಾಮಯ್ಯ ಎಂಬವರು ಬರೆದ ತಮಿಳು ಕಥೆಯೊಂದನ್ನಾಧರಿಸಿ ಪಾಲಗುಮ್ಮಿ ಪದ್ಮರಾಜು ಎಂಬವರು ಶಾಂತಿ ನಿವಾಸಂ ಎಂಬ ತೆಲುಗು ನಾಟಕ ರಚಿಸಿದ್ದರು.  ಬಹಳ ಜನಪ್ರಿಯತೆ ಗಳಿಸಿದ ಇದನ್ನಾಧರಿಸಿ ಸುಂದರಲಾಲ್ ನಹಾಟಾ ಅವರು 1960ರಲ್ಲಿ ಅದೇ ಹೆಸರಿನ ತೆಲುಗು ಚಿತ್ರ ನಿರ್ಮಿಸಿದರು.  ನಾಗೇಶ್ವರ ರಾವ್, ಕಾಂತಾ ರಾವ್, ರಾಜಸುಲೋಚನಾ, ಕೃಷ್ಣಕುಮಾರಿ ಮುಂತಾದವರ ತಾರಾಗಣವಿದ್ದ ಚಿತ್ರಕ್ಕೆ ಘಂಟಸಾಲ ಅವರ ಸಂಗೀತವಿತ್ತು. ಆದರೆ ಅಂತಹ ಪ್ರತಿಭಾಶಾಲಿಯಾದ ಘಂಟಸಾಲ  ಕೆಲವು ಹಾಡುಗಳಿಗೆ ಉಜಾಲಾ ಚಿತ್ರದ ಯಾಲ್ಲಾ ಯಾಲ್ಲಾ ದಿಲ್ ಲೇ ಗಯಾ, ಮೌಸಿ ಚಿತ್ರದ ಟಿಂ ಟಿಂ ಟಿಂ ತಾರೋಂ ಕೆ ದೀಪ್ ಜಲೆ,  ಕೈದಿ ನಂಬರ್ 911ರ ಮೀಠಿ ಮೀಠಿ ಬಾತೊಂ ಸೆ ಬಚ್‌ನಾ ಜರಾ, ದಿಲ್ ದೇಕೆ ದೇಖೋದ ಟೈಟಲ್ ಹಾಡು ಮುಂತಾದ ಹಿಂದಿ ಧಾಟಿಗಳನ್ನು ಬಳಸಿದ್ದು ಆಶ್ಚರ್ಯಕರ. ನಿರ್ಮಾಪಕರ, ವಿತರಕರ ಒತ್ತಾಯ ಇತ್ತೋ ಏನೋ. ಘಂಟಸಾಲ ಸಂಗೀತದ ಚಿತ್ರಗಳಲ್ಲಿ ಅಪರೂಪವಾಗಿರುವ ಪಿ.ಬಿ.ಶ್ರೀನಿವಾಸ್ ಹಾಡೊಂದು ಈ ಚಿತ್ರದಲ್ಲಿ ಇರುವುದೂ  ಇನ್ನೊಂದು ವಿಶೇಷ.



ಶಾಂತಿ ನಿವಾಸಂ ತೆಲುಗು ಚಿತ್ರದ ಯಶಸ್ಸಿನಿಂದ ಪ್ರೇರಿತರಾದ ಜೆಮಿನಿಯ ಎಸ್.ಎಸ್. ವಾಸನ್ ಅವರು ಮರುವರ್ಷ ಅಂದರೆ 1961ರಲ್ಲಿ  ಇದನ್ನು ಘರಾನಾ ಎಂಬ ಹೆಸರಲ್ಲಿ  ಹಿಂದಿಯಲ್ಲಿ ನಿರ್ಮಿಸಿದರು. ರಾಜೇಂದ್ರ ಕುಮಾರ್, ರಾಜ್ ಕುಮಾರ್, ಆಶಾ ಪಾರೇಖ್ ಮುಂತಾದವರ ತಾರಾಗಣವಿದ್ದ ಚಿತ್ರಕ್ಕೆ ರವಿ ಸಂಗೀತವಿತ್ತು.  ಹುಸ್ನ್‌ವಾಲೆ ತೇರಾ ಜವಾಬ್ ನಹೀಂ, ಜಬ್ ಸೆ ತುಮ್ಹೆ ದೇಖಾ ಹೈ , ದಾದಿಯಮ್ಮಾ ದಾದಿಯಮ್ಮಾ ಮಾನ್ ಜಾವೊ ಹಾಡುಗಳು ಬಲು ಜನಪ್ರಿಯವಾಗಿ ಇಂದೂ ಆಸಕ್ತಿಯಿಂದ ಕೇಳಲ್ಪಡುತ್ತವೆ.  ರವಿ ಅವರಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ಮತ್ತು ಶಕೀಲ್ ಬದಾಯೂನಿ ಅವರಿಗೆ ಶ್ರೇಷ್ಠ ಗೀತ ರಚನೆಕಾರ  ಫಿಲಂ ಫೇರ್ ಅವಾರ್ಡುಗಳನ್ನು ಈ ಚಿತ್ರ ದೊರಕಿಸಿ ಕೊಟ್ಟಿತು.



ಇದೇ ಕಥೆಯನ್ನಾಧರಿಸಿ ಮತ್ತೆ  1989ರಲ್ಲಿ  ಘರ್ ಘರ್ ಕೀ ಕಹಾನಿ ಎಂಬ ಹಿಂದಿ ಚಿತ್ರ ತಯಾರಾಯಿತು. ರಿಷಿ ಕಪೂರ್, ಗೋವಿಂದ, ಸತೀಶ್ ಶಾಹ, ಜಯಾಪ್ರದಾ ಮುಂತಾದವರು ನಟಿಸಿದ್ದರು.  ಕನ್ನಡದ ನಮ್ಮ ಮಕ್ಕಳು ಚಿತ್ರವನ್ನು ಆಧರಿಸಿ ಚಂದಮಾಮದ ವಿಜಯಾ ಸಂಸ್ಥೆಯವರು 1970ರಲ್ಲಿ ನಿರ್ಮಿಸಿದ್ದ ಘರ್ ಘರ್ ಕೀ ಕಹಾನೀಯೊಂದಿಗೆ ಇದನ್ನು ಕನ್‌ಫ್ಯೂಸ್ ಮಾಡಿಕೊಳ್ಳಬಾರದು.

ಇಷ್ಟೆಲ್ಲ ಕಡೆ ತಿರುಗಾಡಿದ ಕಥೆಯೇ ನಮ್ಮ ಪತಿಯೇ ದೈವ ಚಿತ್ರದ್ದು. ಇದು ನಿರ್ಮಾಣ ಹಂತದಲ್ಲಿರುವಾಗಲೇ ಸುಧಾ ಮತ್ತು ಪ್ರಜಾಮತ ವಾರಪತ್ರಿಕೆಗಳ ಸಿನಿಮಾ ಪುಟಗಳಲ್ಲಿ ತೆಲುಗಿನ ಶಾಂತಿನಿವಾಸಂ ಆಧಾರಿತ ಚಿತ್ರ ಪತಿಯೇ ದೈವ ಎಂಬ ವಿಶೇಷಣದೊಂದಿಗೆ ಇದರ ಕುರಿತು ಸುದ್ದಿಗಳು ಪ್ರಕಟವಾಗುತ್ತಿದ್ದವು. ಪ್ರತಿ ಸಲ ಪಂಢರಿ ಬಾಯಿಯವರ ಉಲ್ಲೇಖ ಇದ್ದೇ ಇರುತ್ತಿತ್ತು. ನಾನು ಆಗಲೇ ಜೇನುಗೂಡು ಚಿತ್ರ ನೋಡಿದ್ದುದರಿಂದ ಪಂಢರಿಬಾಯಿ ಇರುವ ಮನೆಗೆ ಶಾಂತಿನಿವಾಸ ಎಂಬುದು ಅನ್ವರ್ಥ ನಾಮ ಎಂಬ ಭಾವನೆ ನನ್ನಲ್ಲಿ ಮೂಡುತ್ತಿತ್ತು!  ಈ ಚಿತ್ರದ ಏಳೆಂಟು ಹಾಡುಗಳು ಆ ಕಾಲದಲ್ಲಿ ಬಲು ಜನಪ್ರಿಯವಾಗಿದ್ದು ಬೆಂಗಳೂರು, ಧಾರವಾಡ, ಭದ್ರಾವತಿ, ಶಾರ್ಟ್ ವೇವ್ ವಿವಿಧಭಾರತಿಯ ಮಧುರ್ ಗೀತಂ ಕಾರ್ಯಕ್ರಮಗಳಲ್ಲಿ ನಿತ್ಯವೂ ಅನುರಣಿಸುತ್ತಿದ್ದವು.  ರೀಮೇಕ್ ಚಿತ್ರವಾದರೂ ವಿಜಯಭಾಸ್ಕರ್ ಹಾಡುಗಳ ಧಾಟಿಗಳನ್ನು ಕಾಪಿ ಮಾಡಿರಲಿಲ್ಲ. ಈ ಹಾಡುಗಳೆಲ್ಲ ಅತಿ ಶ್ರೇಷ್ಠ ಎಂದೇನೂ ಅಲ್ಲ.  ಆದರೆ ನಮ್ಮನ್ನು ಅಂದಿನ ಕಾಲಘಟ್ಟಕ್ಕೊಯ್ಯುವ ನಿಟ್ಟಿನಲ್ಲಿ ಅವುಗಳದ್ದೇ ಆದ ಮಹತ್ವವಿದೆ.

ನಗೆಮೊಗದೆ ನಲಿವ ನಲ್ಲೆ

ಪಿ.ಬಿ.ಶ್ರೀನಿವಾಸ್ ಹಾಡಿರುವ ಇದು ಹಿಂದಿಯಲ್ಲಿ ಹುಸ್ನ್‌ವಾಲೇ ತೇರಾ ಜವಾಬ್ ನಹೀಂ ಇದ್ದ ಸನ್ನಿವೇಶದ್ದಿರಬಹುದು. ಜಯಗೋಪಾಲ್ ಅವರು ಆದಿ, ಅಂತ್ಯಪ್ರಾಸಗಳನ್ನು ಬಳಸಿ ಬರೆದಿದ್ದಾರೆ.



ನಗೆ ಮೊಗದೆ ನಲಿವ ನಲ್ಲೆ
ನಿನಗೆಣೆಯ ಕಾಣೆನಲ್ಲೆ
ನಿನ್ನ ತುಂಟ ನೋಟದಲ್ಲೆ
ನೀನಾಡೊ ಮಾತ ಬಲ್ಲೆ

ನಿನ್ನ ಸನಿಹ ಮನಕೆ ತಂಪು
ನಿನ್ನ ದನಿಯು ಕಿವಿಗೆ ಇಂಪು
ನಿನ್ನ ಚೆಲುವ ತುಟಿಯ ಕೆಂಪು
ಕಂಗಳಿಗೆ ತಾನು ಸೊಂಪು

ಮುಂಗುರುಳ ಹಿಂದೆ ಸರಿಸಿ
ಮುಡಿಯಲ್ಲಿ ಹೂವನಿರಿಸಿ
ಮುಗುಳ್ನಗೆಯನೊಂದ ಹರಿಸಿ
ಮನ ಸೆಳೆದ ಪ್ರೇಮದರಸಿ

ನಡೆದಾಗ ನವಿಲಿನಂತೆ
ನಡು ಬಳುಕೆ ಬಳ್ಳಿಯಂತೆ
ನುಡಿಯೊಂದು ಮುತ್ತಿನಂತೆ
ಕುಡಿನೋಟ ಮಿಂಚಿನಂತೆ


ಕಣ್ಣೆಂಬ ಕಣೆಯಿಂದ
ಪಿ.ಬಿ.ಶ್ರೀನಿವಾಸ್ ಮತ್ತು ಪಿ.ಸುಶೀಲಾ ಧ್ವನಿಯಲ್ಲಿರುವ ಇದು ಟಿಪಿಕಲ್ ವಿಜಯಭಾಸ್ಕರ್ ಶೈಲಿಯ ಹಾಡು. ಕಣೆ ಎಂದರೆ ಬಾಣ ಎಂದರ್ಥ.  ಆದರೆ ನನಗೇಕೋ ಈ ಹಾಡು ಕೇಳಿದಾಗಲೆಲ್ಲ ಕಣ್ಣೆಂಬ ಕವಣೆಯಿಂದ ಕಲ್ಲೆಸೆಯುವ ದೃಶ್ಯವೇ ಕಣ್ಣೆದುರು ಬರುತ್ತಿದ್ದುದು.



ಕಣ್ಣೆಂಬ ಕಣೆಯಿಂದ ಕೊಲ್ಲುವ ಓ ಹೆಣ್ಣೆ
ಬಣ್ಣಿಸಲು ಬಾಯಿಲ್ಲ ನಿನ್ನಯ ಸೊಬಗನ್ನೆ
ಹೆಣ್ಣೆಂಬ ಹೂವೊಂದ ಹುಡುಕುತ ಬಂದವನೆ
ಕನ್ನಿಕೆಯ ಕೆನ್ನೆಯಲಿ ಕೆಂಪನು ತಂದವನೆ

ಕಿಲಕಿಲ ನೀನು ನಗುವಾಗ ಮುತ್ತುಗಳುದುರುವುದು
ಕುಲುಕುತಲಿ ನೀ ನಡೆವಾಗ ಈ ಹೃದಯವು ಮಿಡಿಯುವುದು
ಅರಳಿಹುದು ಅನುರಾಗ ಅರಗಿಣಿಯೆ ಬಾ ಬೇಗ
ಅಗಲಿರೆನು ಅರೆ ನಿಮಿಷ ನಿನ್ನನು ನಾನೀಗ

ಸನಿಹದಲಿ ನೀ ಇರುವಾಗ ಮೈಮನ ಮರೆಯುವುದು
ಸರಸದಲಿ ನೀ ಎಳೆವಾಗ ಈ ಕೈಗಳು ನಡುಗುವುದು
ಪ್ರಣಯಿನಿಯ ಪರಿಹಾಸ ಮಾಡುವೆಯಾ ಎಲ್ಲರಸ
ಪ್ರತಿ ನಿಮಿಷ ಹೊಸ ಹರುಷ ನಿನ್ನಯ ಸಹವಾಸ

ಮಂಗಳ ಮೂರ್ತಿ ಮಾರಯ್ಯ
ಎಲ್.ಆರ್. ಈಶ್ವರಿ ಮತ್ತು ಟಿ.ಆರ್. ಜಯದೇವ್ ಹಾಡಿರುವ ಇದು ಚಿತ್ರದ ಸನ್ನಿವೇಶಕ್ಕೆ ಸಂಬಂಧ ಇರುವಂಥದ್ದು.  ಗಂಡನ ಮನೆಗೆ ಹೋಗಲೊಲ್ಲದೆ ತವರು ಮನೆಯಲ್ಲೇ ಉಳಿದ ಮಡದಿಯನ್ನು ತನ್ನೊಡನೆ ಬರುವಂತೆ ಪರಿಪರಿಯಾಗಿ ಬೇಡಿಕೊಳ್ಳುವ ಹಾಸ್ಯ ಶೈಲಿಯ ಹಾಡಿದು. ಚಿತ್ರದ ಎಲ್ಲ ಹಾಡುಗಳ ಪೈಕಿ ನಾನು ಇದನ್ನು ಹೆಚ್ಚು ಮೆಚ್ಚುತ್ತಿದ್ದೆ.  ಇದರ ಗಾಯಕ ಜಯದೇವ್ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿಲ್ಲ. ಹುಡುಕಿದರೆ ಅವರ ಒಂದು ಫೋಟೊ ಕೂಡ ಸಿಗಲಿಲ್ಲ.  ರಾಮಕೃಷ್ಣ ಮತ್ತು ಎಸ್.ಪಿ.ಬಿ ಅವರಿಗಿಂತಲೂ ಮೊದಲು ಘಂಟಸಾಲ ಅವರ ಜಾಡು ಹಿಡಿದು  ಗಾಯನ ಕ್ಷೇತ್ರದಲ್ಲಿ ಅದೃಷ್ಟ ಹುಡುಕಲು ಬಂದವರಿವರು.  ಮನೆ ಅಳಿಯದ ನಿಲ್ಲೆ ಗೊಲ್ಲರು ಬಾಲೆ ನಿಲ್ಲೆ ಮತ್ತು ಸರಸಮಯ ಇದು ಸಮಯ, ಅನ್ನಪೂರ್ಣ ಚಿತ್ರದ ಅಂದ ಚಂದದ ಹೂವೆ,  ಪ್ರೇಮಮಯಿ ಚಿತ್ರದ ತೆಂಗೆಲ್ಲ ತೂಗಾಡೆ ತಂಗಾಳಿಗೆ, ಮನೆ ಕಟ್ಟಿ ನೋಡು ಚಿತ್ರದ ಕಂಡೆ ಕಂಡೆ  ಮೊದಲಾದ ಹಾಡುಗಳಲ್ಲಿ ಇವರ ಧ್ವನಿ ಇದೆ.



ಮಂಗಳಮೂರ್ತಿ ಮಾರಯ್ಯ
ಮಡದಿಯ ಮನೆಗೆ ಬಾರಯ್ಯ
ಮನಸೋತೆ ಮರುಳಾದೆ
ಮೊಗವನು ಎನಗೆ ತೋರಯ್ಯ

ಅತ್ತೆಯ ಮಗಳೆ ಅಮ್ಮಯ್ಯ
ಜೊತೆಯಲಿ ಬಾರೆ ದಮ್ಮಯ್ಯ
ಕೈ ಮುಗಿವೆ ಶರಣೆಂಬೆ
ಕರೆಯಲು ಕಳುಸಿಹ ಮಾವಯ್ಯ

ಸಿನಿಮಾಗೆ ಕರೆಯಲಿಂದೆ
ಹೊರಡುವೆನು ನಾನೆ ಮುಂದೆ
ಮನೆಯಲ್ಲವಂತೆ ಆ ಹುಚ್ಚು ಸಂತೆ
ಬರಲಾರೆ ಬಿಡಿರಿ ಚಿಂತೆ

ಒಣ ಜಂಭವೇಕೆ ಜಾಣೆ
ಛಲವೇಕೆ ನಿನಗೆ ಕಾಣೆ
ನೀ ಬರುವ ತನಕ
ಆ ಮನೆಯು ನರಕ
ನಾ ಹೋಗೆ ದೇವರಾಣೆ


ಕೋಪವೇಕೆ ಅಜ್ಜಿ
ಹಿಂದಿಯ ದಾದಿಯಮ್ಮಾ ದಾದಿಯಮ್ಮಾ ಮಾನ್ ಜಾವೊ ಇರುವ ಸಂದರ್ಭಕ್ಕೆ ಬಳಸಿದ ಲತಾ ಮತ್ತು ಅಂಜಲಿ ಧ್ವನಿಯಲ್ಲಿರುವ ಹಾಡು ಇದು. ಚಿತ್ರದಲ್ಲಿ ಮನೆಯ ಯಜಮಾನ ದಂಡಂ ದಶಗುಣಂ ತಂತ್ರ ಬಳಸಿದ ಮೇಲೆ ಮುನಿಸಿಕೊಂಡು ಮೂಲೆ ಸೇರಿದ ಅಜ್ಜಿಯನ್ನು ಮೊಮ್ಮಕ್ಕಳು ಓಲೈಸುವ ಸನ್ನಿವೇಶ ಇದು. ವಿಶೇಷವೆಂದರೆ ತೆಲುಗು ಶಾಂತಿನಿವಾಸಂ ಚಿತ್ರದಲ್ಲಿ ಈ ಸಂದರ್ಭಕ್ಕೆ ಹಾಡೇ ಇರಲಿಲ್ಲ!  ಹಿಂದಿಯ ದಾದಿಯಮ್ಮಾ ಹಾಡಿನ ದೃಶ್ಯಕ್ಕೆ  ಕನ್ನಡ ಹಾಡು ಸೂಪರ್ ಇಂಪೋಸ್ ಮಾಡಿ ನಾನು ತಯಾರಿಸಿದ ವೀಡಿಯೊವನ್ನು  ಅಜ್ಜಿಗೇಕೆ ಕೋಪ ಲೇಖನದಲ್ಲಿ ನೋಡಬಹುದು. ಪತಿಯೇ ದೈವ ಚಿತ್ರದಲ್ಲಿ  ಕೋಪವೇಕೆ ಹಾಡಿಗೆ ತೆರೆಯ ಮೇಲೆ ಅಭಿನಯಿಸಿದ ಬಾಲಕರ ಪೈಕಿ ಓರ್ವ ಹುಣಸೂರು ಕೃಷ್ಣಮೂರ್ತಿ ಅವರ ಪುತ್ರ ಶ್ರೀಪ್ರಸಾದ್ ಅಂತೆ.



ಕೋಪವೇಕೆ ಕೋಪವೇಕೆ ಅಜ್ಜಿ
ಈ ತಾಪವೇಕೆ ಮನಸಿಗೆ ಅಜ್ಜಿ
ಬಿಡು ನಿನ್ನ ಕೋಪ ತಾಳು ಶಾಂತ ರೂಪ
ಬಿಗುಮಾನ ಬಿಟ್ಟು ನೀ ಮಾತಾಡಜ್ಜಿ

ಪುಟ್ಟ ಪಾಪ ಹುಟ್ಟಿತೆಂದು ಲಡ್ಡು ತಂದೆವು
ತಟ್ಟೆ ತುಂಬ ಸಿಹಿ ತಿಂಡಿ ಕೊಂಡು ಬಂದೆವು
ಸೊಟ್ಟ ಮುಖವನ್ನು ಬಿಟ್ಟು
ಕಿಟ್ಟು ಪುಟ್ಟು ಮಾತ ಕೇಳಿ
ಗುಟ್ಟಿನಿಂದ ಹೊಟ್ಟೆ ತುಂಬ ತಿಂದು ಬಿಡಜ್ಜಿ

ತಪ್ಪುಗಳನೆಲ್ಲ ನಾವು ಒಪ್ಪಿಕೊಂಡೆವು ನಮ್ಮ
ತಪ್ಪನೆಲ್ಲ ಮನ್ನಿಸೆಂದು ಬೇಡಿ ಕೊಂಬೆವು
ನಿನ್ನ ಮಾತ ಕೇಳುವೆವು
ನಿನ್ನ ಸೇವೆ ಮಾಡುವೆವು
ಕೆನ್ನೆಗೇಟು ಹಾಕಿಕೊಂಡು ಕೇಳಿಕೊಂಬೆವು

ಜಯ ರಘುರಾಮ
ಚಿತ್ರದ ಆರಂಭದಲ್ಲಿ ಬರುವ ಮೋಹನ ರಾಗದ ಮೋಹಕ ಪ್ರಾರ್ಥನೆ ಇದು. ಬುಧಕೌಶಿಕ ಋಷಿ ವಿರಚಿತ ರಾಮರಕ್ಷಾ ಸ್ತೋತ್ರದ 30ನೆಯ ಶ್ಲೋಕವನ್ನು ಆರಂಭದಲ್ಲಿ ಬಳಸಿಕೊಳ್ಳಲಾಗಿದೆ..  ಟಿ.ಆರ್. ಜಯದೇವ್ ಮತ್ತು ಎಸ್. ಜಾನಕಿ ಹಾಡಿದ್ದಾರೆ. ಬೆಳಗ್ಗಿನ ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಬರುತ್ತಿತ್ತು. ರಾಮನವಮಿಯ ದಿನವಂತೂ ಇದು ಇರಲೇ ಬೇಕಿತ್ತು.


ಮಾತಾ ರಾಮೊ ಮತ್ಪಿತಾ ರಾಮಚಂದ್ರಃ
ಭ್ರಾತಾ ರಾಮೊ ಮತ್ಸಖಾ ರಾಘವೇಶಃ
ಸರ್ವಸ್ವಂ ಮೇ ರಾಮಚಂದ್ರೊ ದಯಾಲುಃ
ನಾನ್ಯಂ ದೈವಂ ನೈವ ಜಾನೇನ ಜಾನೆ

ಜಯ ರಘುರಾಮ ಜಯ ಘನಶ್ಯಾಮ
ಜಯ ಜಯ ಶುಭನಾಮ ಶ್ರೀ ರಾಮ
ಜಯ ಜಯ ಗುಣಧಾಮ ಶ್ರೀ ರಾಮ

ಆದರ್ಶ ನಿನ್ನಯ ಸೋದರ ಪ್ರೇಮ
ಆಡಿದ ಮಾತನು ತಪ್ಪದ  ನೇಮ
ಆಣತಿ ಪಿತನ ಪಾಲಿತ ರಾಮ
ಅಗಣಿತ ಗುಣಮಣಿ ಆನಂದಸೀಮ

ಸೀತೆಯ ಹೃದಯದಿ ಬೆಳಗಿದ ಜ್ಯೋತಿ
ಮಾತೆಗೆ ತೋರಿದೆ ಅನುಪಮ ಪ್ರೀತಿ
ರಾಮರಾಜ್ಯದೆ ನೆಲಸಿದೆ ನೀತಿ
ರಾಘವ ನಮಗೆ ಕರುಣಿಸು ಶಾಂತಿ

ಪೂಜಿಪ ದೈವವೆ
ಎಸ್. ಜಾನಕಿ ಧ್ವನಿಯಲ್ಲಿರುವ ಇದನ್ನು ನಾನು ಇದುವರೆಗೆ ಕೇಳಿಯೇ ಇರಲಿಲ್ಲ.  ಬೆರೆತ ಜೀವ ಚಿತ್ರದ ಅಂಕದ ಪರದೆಯ ಛಾಯೆ ಈ ಹಾಡಿನಲ್ಲಿ ಗೋಚರಿಸುತ್ತದೆ.


ಪೂಜಿಪ ದೈವವೆ ತೊರೆಯಿತಮ್ಮಾ
ಪ್ರಾಣವು ದೇಹವ ಮರೆಯಿತಮ್ಮಾ
ಪ್ರೀತಿಸೊ ಕೈಗಳೆ ಹೊಡೆದುದಮ್ಮಾ
ಪ್ರೇಮದ ಕಥೆಯು ಮುಗಿಯಿತಮ್ಮಾ

ರೆಪ್ಪೆಯು ಕಣ್ಣನೆ ಹಳಿಯಿತಮ್ಮಾ
ಮರವೇ ಬಳ್ಳಿಯ ನೀಗಿತಮ್ಮಾ
ರಕುತವು ತನ್ನನೆ ಜರೆಯಿತಮ್ಮಾ
ಹಾಲಲಿ ಹುಳಿಯು ಬೆರೆಯಿತಮ್ಮಾ

ಬೆಳಗಿದ ಮನೆಗೆ ಶಿರ ಬಾಗಿ
ನಮಿಸಿದಳಮ್ಮಾ ಕೊನೆಯಾಗಿ
ಕರುಳಿನ ಕರೆಗೆ ಕಿವುಡಾಗಿ
ನಡೆದಳು ಕಂಬನಿ ಹೊಳೆಯಾಗಿ


ಮಾಲೆಯ ಹಿಡಿದು ಬರುವ
ಕಲಾವತಿ ರಾಗದಲ್ಲಿರುವ ಈ ಹಾಡು ಶಾರ್ಟ್ ವೇವ್ ವಿವಿಧಭಾರತಿಯ ಮಧುರಗೀತಂ ಕಾರ್ಯಕ್ರಮದಲ್ಲಿ ನಿರಂತರ ಪ್ರಸಾರವಾಗುತ್ತಿತ್ತು.  ಮಲ್ಲಮ್ಮನ ಪವಾಡ ಚಿತ್ರದ ಶರಣೆಂಬೆ ನಾ ಶಶಿ ಭೂಷಣ ಹಾಡನ್ನೂ ವಿಜಯಭಾಸ್ಕರ್ ಅವರು ಕಲಾವತಿ ರಾಗದಲ್ಲೇ ಸಂಯೋಜಿಸಿದ್ದಾರೆ.



ಮಾಲೆಯ ಹಿಡಿದು ಬರುವ
ಈ ಬಾಲೆಯ ವರಿಸುವ ಚೆಲುವ
ಕೈ ಹಿಡಿವ ಮನ ಸೆಳೆವ
ಬ್ಶ್ಳಿಗೆ ಹರುಷವ ತರುವ

ಹಸೆಯಲಿ ಜಂಭದಿ ಕುಳಿತಿರುವ
ಹುಸಿನಗೆ ಬೀರುತ ಮೆರೆದಿರುವ
ತೆರೆಯನು ಹಿಡಿಯುವ ಸಮಯದಲಿ
ಜೀರಿಗೆ ಬೆಲ್ಲವ ಮೊದಲಲಿ ಸುರಿವ

ಮಂಗಳ ವಾದ್ಯವು ಮೊಳಗುತಿರೆ
ಸುಮಂಗಲಿಯರು ಶುಭ ಹಾಡುತಿರೆ
ಮಂತ್ರದ ಘೋಷವು ಕೇಳುತಿರೆ
ಮಂಗಳಸೂತ್ರವ ಬಿಗಿಯುವ ಮುದದಿ