
ಎಲೆಕ್ಟ್ರಿಕ್ ಸ್ಕೂಟರ್, ಅಟೋರಿಕ್ಷಾಗಳು ಈಗ ಅಪರೂಪವೇನೂ ಅಲ್ಲ. ಎಲೆಕ್ಟ್ರಿಕ್ ಬಸ್ಸುಗಳೂ ಅಪರೂಪ ಅಲ್ಲ. ಆದರೆ ಈಗ ರೂಟ್ ನಂಬರ್ 27ರಲ್ಲಿ ಮಂಗಳೂರಿನ ಪ್ರಥಮ ಹಾಗೂ ಸದ್ಯಕ್ಕೆ ಏಕೈಕ ಖಾಸಗಿ ಹವಾನಿಯಂತ್ರಿತ ಎಲೆಕ್ಟ್ರಿಕ್ ಸಿಟಿ ಬಸ್ ಟಿಕೆಟ್ ದರ ಹೆಚ್ಚಿಸದೆ ನಿಯಮಿತವಾಗಿ ಓಡಾಟ ನಡೆಸುತ್ತಿರುವುದು ನಮ್ಮ ಮಟ್ಟಿಗೆ ವಿಶೇಷವೇ ಸರಿ.
ರೂಟ್ ನಂಬರ್ 27ರಲ್ಲಿ ಮಂಗಳಾದೇವಿಯಿಂದ ಸ್ಟೇಟ್ ಬ್ಯಾಂಕಿಗೆ ಈಗಾಗಲೇ ಬಸ್ಸುಗಳನ್ನು ಓಡಿಸುತ್ತಿರುವ ಗಣೇಶ್ ಪ್ರಸಾದ್ ಸಂಸ್ಥೆ ಪೂನಾದಿಂದ ತರಿಸಿದ ನ್ಯೂಟನ್ ಕಂಪನಿಯ ಎಲೆಕ್ಟ್ರಿಕ್ ಬಸ್ಸು ಓಡಾಟ ಆರಂಭಿಸಿ ಕೆಲ ಕಾಲ ಕಳೆಯಿತಾದರೂ ಇದರಲ್ಲಿ ಪಯಣಿಸುವ ಸಂದರ್ಭ ನನಗೆ ಇತ್ತೀಚೆಗಷ್ಟೇ ಒದಗಿ ಬಂತು. 1970ರ ದಶಕದಿಂದಲೂ ಈ ರೂಟಿನ 27 ನಂಬರ್ ಬಸ್ಸುಗಳಲ್ಲಿ ಓಡಾಡುತ್ತಿದ್ದ ನೆನಪುಗಳೂ ಮತ್ತೆ ಮುನ್ನೆಲೆಗೆ ಬಂದವು.
*****

ಮೊದಲು ಈ ರೂಟಿನಲ್ಲಿ ಪಾಪ್ಯುಲರ್ ಹೆಸರಿನ ಒಂದೇ ಬಸ್ಸು ಇತ್ತು. Fargo ಎಂಜಿನ್ ಹೊಂದಿದ್ದ ಈ ಬಸ್ಸನ್ನು ಕರ್ಕಡ ಮತ್ತು ಬಾಬಣ್ಣ ಎಂಬ ಇಬ್ಬರು ಚಾಲಕರು ದಿನ ಬಿಟ್ಟು ದಿನ ಚಲಾಯಿಸುತ್ತಿದ್ದುದು. ಅದರ ಮಾಲಕರಾಗಿದ್ದ ಪರಂಗಿಪೇಟೆಯ ನಾಗೇಶ್ ಕಂಡಕ್ಟರ್ ಕೆಲಸವನ್ನೂ ಮಾಡುತ್ತಿದ್ದರು. ಹಂಪನಕಟ್ಟೆಯಲ್ಲಿದ್ದ P.V. Motorನವರ ಗ್ಯಾರೇಜನ್ನೆ ಇದು ಬಳಸುತ್ತಿತ್ತು. 1978ರಲ್ಲಿ ನಾನು ದೂರವಾಣಿ ಇಲಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಆದ ಮೇಲೆ ಈ ಬಸ್ಸಿನ ಕಾಯಂ ಪ್ರಯಾಣಿಕನಾದೆ. ಬೆಳಗ್ಗೆ 6-45ಕ್ಕೆ ಸರಿಯಾಗಿ ಬಾಬುಗುಡ್ಡೆಗೆ ಬರುತ್ತಿದ್ದ ಅದು ಮಾರ್ನಿಂಗ್ ಡ್ಯೂಟಿ ಇದ್ದ ದಿನ ನನ್ನನ್ನು 7 ಗಂಟೆಯೊಳಗೆ ಟೆಲಿಫೋನ್ ಎಕ್ಸ್‌ಚೇಂಜ್‌ಗೆ ತಲುಪಿಸುತ್ತಿತ್ತು. ಆಗ ವಾರದ ಯಾವುದಾದರೊಂದು ದಿನ weekly off ಇರುತ್ತಿದ್ದ ನನಗೆ ಶನಿವಾರ ಮತ್ತು ಭಾನುವಾರ ಒಟ್ಟಿಗೆ ರಜೆ ಸಿಕ್ಕಿದರೆ ಶುಕ್ರವಾರ ಸಂಜೆ ತಾಜ್ ಮಹಲಿನಲ್ಲಿ ತುಪ್ಪದೋಸೆ ತಿಂದು ಈ ಬಸ್ಸಿನ ಎಡ ಭಾಗದ ಕಿಟಿಕಿ ಬದಿಯಲ್ಲಿ ಕುಳಿತು ಪ್ರಯಾಣಿಸುವುದು ಆಹ್ಲಾದಕರ ಅನುಭವ ನೀಡುತ್ತಿತ್ತು.

ಕೆಲ ಕಾಲದ ನಂತರ ಫಾರ್ಗೊ ಎಂಜಿನಿನ ಹಳೆ ಬಸ್ಸಿಗೆ ಬದಲಾಗಿ ಟಾಟಾ ಎಂಜಿನಿನ ಫಳ ಫಳ ಕೆಂಪು ಬಣ್ಣದ ಹೊಸ ಪಾಪ್ಯುಲರ್ ಬಸ್ಸು ಬಂತು. ಅದರಲ್ಲಿ ಶಿರೋ ಭಾಗದ ಬದಲಿಗೆ windshieldನ ಕೆಳಭಾಗದಲ್ಲಿ ಬಲ್ಬು ಹೊಂದಿದ ಪೆಟ್ಟಿಗೆಯೊಳಗೆ ಮಂಗಳಾದೇವಿ - ಸ್ಟೇಟ್‌ಬ್ಯಾಂಕ್ ಎಂದು ಬರೆದ ಬೋರ್ಡ್ ಇತ್ತು. ಆಗ ಈ ಬಸ್ಸಿನಲ್ಲಿ ಮಾತ್ರ ಅಂಥ ವ್ಯವಸ್ಥೆ ಇದ್ದುದರಿಂದ ರಾತ್ರಿ ಹೊತ್ತು ದೂರದಿಂದಲೇ 27 ನಂಬರ್ ಬಸ್ಸೆಂದು ಗೊತ್ತಾಗುತ್ತಿತ್ತು.
ಒಂದೇ ಬಸ್ಸು ಇದ್ದ ಆ ಕಾಲದಲ್ಲಿ ಹಂಪನಕಟ್ಟೆಯಿಂದ ಅತ್ತಾವರ, ಮಂಗಳಾದೇವಿ ಕಡೆಗೆ ಹೋಗುವವರಿಗೆ standing ಗ್ಯಾರಂಟಿ ಆದ್ದರಿಂದ ಬಸ್ಸು ಸ್ಟೇಟ್ ಬ್ಯಾಂಕ್ ಕಡೆ ಹೋಗುವಾಗಲೇ ತಾಜಮಹಲ್ ಬಳಿ ಹತ್ತಿ ಬಿಡುತ್ತಿದ್ದರು.

ಕೆಲ ಕಾಲದ ನಂತರ ಚಾಕಲೇಟ್ ಬಣ್ಣದ ಬಾಡಿಯ ಸ್ವಾಮಿ ತಿಲಕ್ ಎಂಬ ಎರಡನೆಯ ಬಸ್ಸು ಈ ರೂಟಲ್ಲಿ ಓಡಾಡ ತೊಡಗಿ ಪಾಪ್ಯುಲರ್ ಬಸ್ಸಿಗೆ ಸ್ಪರ್ಧೆ ಒಡ್ಡಿತು. ಅದು ನಿಗದಿತ ಸಮಯಪಾಲನೆ ಮಾಡದೆ ಓಡಾಡಿದರೆ ಕಲಾವಿದರೂ ಆಗಿದ್ದ ಪಾಪ್ಯುಲರ್ ಬಸ್ಸಿನ ನಾಗೇಶ್ ಅವರು 'ಚಟ್ಣಿಯ ಕಾಸು ಹೋಗಲಿ, ನಮಗೆ ಗಂಜಿಯ ಕಾಸೂ ಆಗುತ್ತಿಲ್ಲಣ್ಣ' ಎಂದು ಆ ಬಸ್ಸಿನವರಿಗೆ ಕಾವ್ಯಮಯವಾಗಿ ಹೇಳುತ್ತಿದ್ದರು! ಆ ಮೇಲೆ ಸ್ವಾಮಿ ತಿಲಕ್ ಬದಲಿಗೆ ನಿತ್ಯಾದರ್ ಹೆಸರಿನ ಬಸ್ ಬಹಳ ಸಮಯ ಪಾಪ್ಯುಲರ್‌ನ ಪ್ರತಿಸ್ಪರ್ಧಿಯಾಗಿ ಓಡಾಡುತ್ತಿತ್ತು. ನಿತ್ಯಾದರ್ ಬ್ಯಾಟರಿ ವ್ಯವಹಾರದ ಸಂಸ್ಥೆಯಾಗಿದ್ದುದರಿಂದ ಆ ಬಸ್ಸನ್ನು 'ಬ್ಯಾಟರಿ ಬಸ್ಸು' ಎಂದೂ ಹೇಳುತ್ತಿದ್ದರು! ಈಗ ನಿಜವಾಗಿಯೂ ಬ್ಯಾಟರಿ ಬಸ್ಸೊಂದು ಈ ರೂಟಿಗೆ ಸೇರ್ಪಡೆಯಾಗುತ್ತಿರುವುದು ಕಾಕತಾಳೀಯವೇ ಆಗಿರಬಹುದು!

ಕೆಲವು ವರ್ಷಗಳ ನಂತರ ನಾನು ದ್ವಿಚಕ್ರ ವಾಹನ ಬಳಸತೊಡಗಿದ ಮೇಲೆ ನನ್ನ ಸಿಟಿ ಬಸ್ ಪಯಣ ಕಮ್ಮಿಯಾದ್ದರಿಂದ ಪಾಪ್ಯುಲರ್ ಬಸ್ಸು ರೂಟ್ 27ನ್ನು ಗಣೇಶ್ ಪ್ರಸಾದ್ ಸಂಸ್ಥೆಗೆ ಬಿಟ್ಟುಕೊಟ್ಟದ್ದು, ಬಸ್ಸುಗಳ ಸಂಖ್ಯೆ ಜಾಸ್ತಿ ಆದದ್ದು ಯಾವಾಗಿನಿಂದ ಎಂದು ನನಗೆ ನೆನಪಿಲ್ಲ.
ಆದರೆ ಹೆಸರು ಯಾವುದೇ ಇರಲಿ, ಇಂದು ಕೂಡ ರೂಟ್ ನಂಬರ್ 27ರಲ್ಲಿ ಓಡಾಡುವುದು ದುಂಬು ಪೋಲೆ, ಪಿರ ಪೋಲೆ, ಬೇಗ ಬೇಗ, ಆಂಡ ಮುಂತಾದ ಅರಚಾಟಗಳು, ಕಂಡಕ್ಟರ್ ಮತ್ತು ಕ್ಲೀನರ್ ಇಬ್ಬರೂ ಕಿವಿ ತೂತಾಗುವಂತೆ ಸೀಟಿ ಊದುವುದು, ಕರ್ಕಶ ಹಾರ್ನ್, ಅತಿ ವೇಗದ ಚಾಲನೆ, over taking, ಮಾರ್ಗ ಮಧ್ಯದಲ್ಲಿ ಕೆಲವೆಡೆ ದೀರ್ಘ ಅವಧಿಗೆ ಲಂಗರು ಹಾಕುವುದು ಇತ್ಯಾದಿ ಅಪಸವ್ಯಗಳು ಇಲ್ಲದ ಸಮಾಧಾನಿ ಬಸ್ಸುಗಳು.
- ಚಿದಂಬರ ಕಾಕತ್ಕರ್.