Saturday 28 July 2012

ರಫಿ - Top Ten for 10 Heroes




ರಫಿಯ ಹಾಡೆಂದರದು ಅಮೃತದ ಗುಳಿಗೆ
ಮಾಡುವುದು ಪ್ರತಿಯೊಂದು ದಿನವ ದೀವಳಿಗೆ
ಕೇಳುತ್ತ ಹೋದಂತೆ ಒಂದೊಂದೆ ಹಾಡು
ವಯಸು ಹಿಮ್ಮುಖವಾಗಿ ಚಲಿಸುವುದು ನೋಡು

 
     50 ರ ದಶಕದ ಉತ್ತರಾರ್ಧ ಮತ್ತು 60 ರ  ದಶಕದಲ್ಲಿ ಬಹುತೇಕ ಎಲ್ಲ ನಟರೂ ತೆರೆಯ ಮೇಲೆ ರಫಿ ಧ್ವನಿಯಲ್ಲಿ ಹಾಡಿದವರೇ.  ಕೆಲವರಂತೂ ರಫಿ ಹಾಡುಗಳಿಂದಾಗಿಯೆ ಯಶಸ್ಸಿನ ಮೆಟ್ಟಲೇರುತ್ತಾ ಹೋದವರು.  ಈ ಸಲದ ರಫಿ ಪುಣ್ಯ ತಿಥಿಯ ಸಂದರ್ಭದಲ್ಲಿ ಆ ಸಮಯದ 10 ಹಿರಿಯ ನಟರಿಗಾಗಿ ರಫಿ ಹಾಡಿದ್ದ 10 ಹಾಡುಗಳು ಇಲ್ಲಿವೆ. 

1. Raj Kapoor - Sadque Heer Tujhpe
ರಾಜ್ ಕಪೂರ್ - ಸದ್ಕೆ ಹೀರ್ ತುಝಪೆ

ಮೇರಾ ನಾಮ್ ಜೋಕರ್ ಚಿತ್ರದಲ್ಲಿ ರಫಿ ಹಾಡೊಂದು ಇದೆಯೆಂದು ಹೇಳಿದರೆ  ಅದು  ಮಲ್ಟಿ ಸ್ಟಾರ್  ಚಿತ್ರವಾದ ಕಾರಣ ರಾಜೇಂದ್ರ ಕುಮಾರ್ ಅಥವಾ ಧರ್ಮೇಂದ್ರ ಅವರಿಗಾಗಿ ಇರಬಹುದು ಎಂಬ ಭಾವನೆ ಬರುವುದು ಸಹಜ.  ಅಲ್ಲ, ಇದನ್ನು ರಫಿ ಹಾಡಿದ್ದು ರಾಜ್ ಕಪೂರ್ ಅವರಿಗಾಗಿಯೇ.  ಮುಕೇಶ್ , ತಪ್ಪಿದರೆ ಮನ್ನಾಡೆ ಅವರೇ ರಾಜ್ ಕಪೂರ್ ಹಾಡುಗಳನ್ನ್ನು ಹಾಡುವ ಅಲಿಖಿತ ನಿಯಮ ಇದ್ದ ಆ ಕಾಲದಲ್ಲಿ  ಇದು ಹೇಗೆ ಸಾಧ್ಯ ಅನ್ನಿಸುತ್ತದೆಯಲ್ಲವೇ.  ಪಂಜಾಬೀ ಜಾನಪದ ಶೈಲಿಯ ಈ  ಹೀರ್ ಹಾಡೇ ಅಂಥದ್ದು.  ಅದನ್ನು ಬೇರೆ ಯಾರೂ ಹಾಡಲು ಸಾಧ್ಯವೇ ಇಲ್ಲ ಎಂದು ರಾಜ್ ಕಪೂರ್, ಶಂಕರ್-ಜೈಕಿಶನ್ ಎಲ್ಲರೂ ನಿರ್ಧರಿಸಿರಬಹುದು.  ಶಂಕರ್-ಜೈಕಿಶನ್ ಹಾಡುಗಳನ್ನು ಶೈಲೇಂದ್ರ ಅಥವಾ ಹಸರತ್ ಜೈಪುರಿ ಬರೆಯುವುದು ಆಗಿನ ಇನ್ನೊಂದು ನಿಯಮ.  ಶಂಕರ್ ಗೆ ಪ್ರಿಯರಾಗಿದ್ದ ಶೈಲೇಂದ್ರ  ಅವರ  ನಿಧನದ ಬಳಿಕ ಈ ನಿಯಮವೂ ಮುರಿಯತೊಡಗಿ ನೀರಜ್, ರಾಜೇಂದ್ರ ಕಿಶನ್ ಮುಂತಾದವರು ಅವರಿಗೆ ಹಾಡು ಬರೆಯತೊಡಗಿದ್ದರು.  ಆದರೆ ಈ ಹಾಡು ಸ್ವತಃ ಸಂಗೀತ ನಿರ್ದೇಶಕರೂ ಆಗಿದ್ದ ಪ್ರೇಮ್ ಧವನ್ ಅವರ ರಚನೆ.  ಧ್ವನಿಯನ್ನು ತೆಳು ಬಂಗಾರದ ಸರಿಗೆಯಂತೆ  ಬಳುಕಿಸಿ  ತನ್ನೆಲ್ಲ ಪ್ರತಿಭೆಯನ್ನು ಧಾರೆಯೆರೆದು ರಫಿ ಹಾಡಿದ ಈ ಹಾಡು ಚಿತ್ರಮಂದಿರಗಳಲ್ಲಿ ತೆರೆಕಂಡ  ಮೇರಾ ನಾಮ್ ಜೋಕರ್ ನಲ್ಲಿ  ಇಲ್ಲದಿದ್ದುದು ವಿಷಾದನೀಯ.





2. Dilip Kumar - Toote Hue Khwabone
ದಿಲೀಪ್ ಕುಮಾರ್ - ಟೂಟೆ ಹುವೆ ಖ್ವಾಬೊಂ ನೆ

ಸಲಿಲ್ ಚೌಧರಿ ಮನದಾಳದಿಂದ ರಫಿ ಪ್ರಿಯರಲ್ಲವೆಂದು ಅವರ ಹೆಚ್ಚಿನ ಚಿತ್ರಗಳ ತಲತ್ ಹಾಗೂ ಮುಕೇಶ್ ಹಾಡುಗಳಿಂದ ತಿಳಿಯುತ್ತದೆ.  ಮಧುಮತಿಯಲ್ಲೂ ಅವರ ಮುಖ್ಯ ಗಾಯಕ ಮುಕೇಶ್.  ಆದರೆ ಬೇರಾರೂ ಈ ಹಾಡಿಗೆ ನ್ಯಾಯ ಒದಗಿಸಲು ಸಾಧ್ಯವೇ ಇಲ್ಲವೆಂದು  ಗೊತ್ತಿದ್ದುದರಿಂದ ಈ ಹಾಡಿಗಾಗಿ ಅವರು ಅನಿವಾರ್ಯವಾಗಿ ರಫಿ ಅವರ ಮೊರೆ ಹೋಗಬೇಕಾಯಿತು.  ರಫಿಯೂ ಅವರ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ.  ಇದೇ ಚಿತ್ರದ ಜಂಗಲ್ ಮೆಂ ಮೋರ್ ನಾಚಾ ಕೂಡ ರಫಿಯೇ ಹಾಡಿದ್ದಾರೆ ಏಕೆಂದರೆ ಅದು ಜಾನಿವಾಕರ್ ಹಾಡು.  ಜಾನಿವಾಕರ್ ತಮ್ಮ ಹಾಡುಗಳಿಗೆ ರಫಿ ಹೊರತು ಇನ್ನಾರನ್ನೂ ಒಪ್ಪುತ್ತಿರಲಿಲ್ಲ.  ಒಂದು ವೇಳೆ ನಾಯಕ ಮತ್ತು ಜಾನಿವಾಕರ್  ಸೇರಿ ಹಾಡುವುದಿದ್ದರೆ  ತನಗೆ ರಫಿ ಹಾಗೂ ನಾಯಕನಿಗೆ ಬೇರೆ ಗಾಯಕನಿರುವಂತೆ ಅವರು ನೋಡಿಕೊಳ್ಳುತ್ತಿದ್ದರು!  ದೂರ್ ಕೀ ಆವಾಜ್ಹಮ್ ಭಿ ಅಗರ್ ಬಚ್ಚೆ ಹೋತೆ ಇದಕ್ಕೆ ಉದಾಹರಣೆ.




3. Dev Anand - Dil Ka Bhanvar Kare Pukar
ದೇವ್ ಆನಂದ್ -ದಿಲ್ ಕಾ ಭಂವರ್ ಕರೇ ಪುಕಾರ್

ತೇರೆ ಘರ್ ಕೆ ಸಾಮ್ನೆ ಚಿತ್ರದ ಈ ಹಾಡು ಏಕಮುಖಿ ನಿಯಮ ಉಲ್ಲಂಘನೆಯ ಒಂದು ಉದಾಹರಣೆ.  60ರ ದಶಕದ ಕೊನೆವರೆಗೂ ಶಂಕರ್- ಜೈಕಿಶನ್ ಅವರು ಶೈಲೇಂದ್ರ - ಹಸ್ರತ್ ಜೈಪುರಿಗೆ ಸಂಪೂರ್ಣ ನಿಷ್ಠರಾಗಿದ್ದವರು.  ಆದರೆ ಈ ಈರ್ವರು ಗೀತ ರಚನಕಾರರು ಆಗಾಗ ಬೇರೆಯವರಿಗೂ ಬರೆಯುತ್ತಿದ್ದರು !  ಇಲ್ಲಿ ಹಸ್ರತ್ ಜೈಪುರಿ ಅವರು ಎಸ್.ಡಿ.ಬರ್ಮನ್ ಅವರಿಗೆ ಗೀತೆಗಳನ್ನು ಬರೆದಿದ್ದಾರೆ.  ಈಗ ಪ್ರವೇಶ ನಿಷೇಧಿಸಲ್ಪಟ್ಟಿರುವ ಕುತುಬ್ ಮಿನಾರ್ ನಲ್ಲಿ ಸಂಪೂರ್ಣ ಚಿತ್ರೀಕರಣಗೊಂಡ ಏಕೈಕ ಗೀತೆ ಇದು.  ಸಾಹಿತ್ಯ, ಸಂಗೀತ, ನಟನೆ, ಚಿತ್ರೀಕರಣ ಎಲ್ಲದರಲ್ಲೂ ಅದೆಂತಹ ಲವಲವಿಕೆ.  ಕುತುಬ್ ಮಿನಾರ್ ನಿಂದ ಇಳಿಯುತ್ತಿರುವ  ಪ್ರವಾಸಿಗಳಲ್ಲೋರ್ವರಾಗಿ ಚಿತ್ರದ ನಿರ್ದೇಶಕ  ವಿಜಯ್ ಆನಂದ್ ಅವರನ್ನೂ ಇದರಲ್ಲಿ ನೋಡಬಹುದು.




4. Shammi Kapoor - Zindagi Kya Hai
ಶಮ್ಮಿ ಕಪೂರ್ - ಜಿಂದಗಿ ಕ್ಯಾಹೈ

ಕನ್ನಡಿಗ ಬಿ.ಎಸ್.ರಂಗಾ ಅವರು ನಿರ್ಮಿಸಿದ ಬಿ.ಸರೋಜಾದೇವಿ ನಾಯಕಿಯಾಗುಳ್ಳ ಪ್ಯಾರ್ ಕಿಯಾ ತೊ ಡರನಾ ಕ್ಯಾ ಚಿತ್ರದ ಈ ಹಾಡು ಕೇಳಲು ಸಿಗುವುದು ಕಮ್ಮಿ.  ಇದರ ಸಂಗೀತ ನಿರ್ದೇಶಕ ರವಿ ಆದರೂ ದಟ್ಟ ಶಂಕರ್ ಜೈಕಿಶನ್  ಛಾಯೆಯನ್ನು ಇಲ್ಲಿ ಗುರುತಿಸಬಹುದು.  ಹಾಗೆ ನೋಡ ಹೋದರೆ 60ರ ದಶಕದಲ್ಲಿ ನೌಶಾದ್ ಸೇರಿದಂತೆ ಶಂಕರ್ ಜೈಕಿಶನ್ ಪ್ರಭಾವದಿಂದ ತಪ್ಪಿಸಿಕೊಂಡವರು ಯಾರೂ ಇಲ್ಲವೆಂದೇ ಅನ್ನಿಸುತ್ತದೆ.




5. Rajendra Kumar - Hai Vo Chale
ರಾಜೇಂದ್ರ ಕುಮಾರ್ - ಹಾಯ್ ವೊ ಚಲೆ

ಇವರು ಜ್ಯುಬಿಲಿ ಕುಮಾರ್ ಎನ್ನಿಸಿಕೊಳ್ಳಲು ರಫಿ ಹಾಡುಗಳೇ ಕಾರಣ.  ಹಮ್ ರಾಹೀ ಚಿತ್ರದ ಲಘು ಶೈಲಿಯ ಈ ಹಾಡಿನಲ್ಲಿ ದತ್ತಾರಾಮ್ ಅವರ ಢೋಲಕ್ ಕೈ ಚಳಕ ಎದ್ದು ಕಾಣುತ್ತದೆ.  ಇದರ ಆರಂಭದ intro music ನಲ್ಲಿ ಸಂಗಂನ  ಹರ್ ದಿಲ್ ಜೊ ಪ್ಯಾರ್ ಕರೇಗಾ intro ದ ಒಂದು ಚಿಕ್ಕ ಎಳೆ ಗುರುತಿಸಿದಿರಾ?  ಇವುಗಳ composing ಸರಿ ಸುಮಾರು ಒಟ್ಟೊಟ್ಟಿಗೇ ಆಗಿರಬಹುದು.




6. Dharmendra  - Hui Sham Unka Khayal Aa Gaya
ಧರ್ಮೇಂದ್ರ - ಹುಯೀ ಶ್ಯಾಮ್ ಉನ್ ಕಾ ಖಯಾಲ್ ಆ ಗಯಾ

ಲಕ್ಷ್ಮಿ-ಪ್ಯಾರೆ ಅವರ ಕ್ಲಾಸಿಕ್ ರಚನೆ  ಮೆರೆ ಹಮ್ ದಮ್ ಮೆರೆ ದೋಸ್ತ್ ಚಿತ್ರದ ಮುಸ್ಸಂಜೆ ನೆನಪಿನ ಈ ಹಾಡು.  ಇದು ಕಶ್ಮೀರ್ ಕೀ ಕಲಿಹೈ ದುನಿಯಾ ಉಸೀಕೀ ಹಾಡಿನಿಂದ ಸ್ಪೂರ್ತಿ ಪಡೆದಂತೆ ಭಾಸವಾಗುತ್ತದೆ.  ಅದರಂತೆಯೇ ಇಲ್ಲೂ ಅತಿ ಕಡಿಮೆ ಸಂಗೀತೋಪಕರಣಗಳನ್ನು ಬಳಸಲಾಗಿದೆ.  ಮುಸ್ಸಂಜೆಗೂ ನೆನಪುಗಳಿಗೂ ಅದೇನೋ ಬಿಡಿಸಲಾಗದ ನಂಟು.  ಒಬ್ಬಂಟಿ ಸಂಜೆಗಳಲ್ಲಿ  ಕಾಡುವ ನೆನಪುಗಳನ್ನು ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಅನುಭವಿಸಿಯೇ ಇರುತ್ತೇವೆ. ಕಹೀಂ ದೂರ್ ಜಬ್ ದಿನ್ ಢಲ್ ಜಾಯೆ,   ಆಂಚಲ್ ಮೆ ಸಜಾಲೇನಾ ಕಲಿಯಾ ಮುಂತಾಗಿ ಇನ್ನೂ ಕೆಲವು ಮುಸ್ಸಂಜೆ ನೆನಪಿನ ಹಾಡುಗಳಿವೆ.  ನಮಗೆ ಮುಸ್ಸಂಜೆ ನೆನಪುಗಳನ್ನು ಸವಿಯಾಗಿಸಲು ಧರ್ಮೇಂದ್ರ ಮೊರೆ ಹೋದ ರೀತಿಯ ನಶೆ ಬೇಡ, ಇಂತಹ ಹಾಡುಗಳ ನಶೆ ಮಾತ್ರ ಸಾಕು ಅಲ್ಲವೇ?




7. Joy Mukherji - Ek Musafir Ek Haseena
ಜೊಯ್ ಮುಖರ್ಜಿ - ಮುಝೆ ದೇಖ್ ಕರ್

ಏಕ್ ಮುಸಾಫಿರ್ ಏಕ್ ಹಸೀನಾ ಚಿತ್ರದಲ್ಲಿ ರಫಿ ಮೆಲುದನಿಯಲ್ಲಿ ಹಾಡಿದ ವಿಳಂಬ ಗತಿಯ ಹಾಡಿದು.  ಮೆಲುದನಿಯಿರಲಿ ಏರುದನಿಯಿರಲಿ, ನಿಧಾನ ಲಯವಿರಲಿ ತೀವ್ರ ಗತಿ ಇರಲಿ, ವಾದ್ಯಗಳ ಅಬ್ಬರವಿರಲಿ ಮೌನವೇ ಹಿನ್ನೆಲೆ ಸಂಗೀತವಾಗಿರಲಿ , ರಫಿಯ ಹಾಡುಗಳೆಲ್ಲ ನೇರ ಮನದಾಳಕ್ಕೆ ಇಳಿಯುತ್ತಿದ್ದ ಕಾಲವದು.




8. Biswajit - Tera Husn Rahe
ಬಿಸ್ವಜೀತ್ - ತೇರಾ ಹುಸ್ನ್ ರಹೆ ಮೇರಾ ಇಶ್ಕ್ ರಹೆ

ಬೀಸ್ ಸಾಲ್ ಬಾದ್ ಮೂಲಕ  ನಿರ್ಮಾಪಕರಾಗಿ ಬಿಸ್ವಜೀತ್ ಅವರನ್ನು ತೆರೆಗೆ ತಂದ ಹೇಮಂತ್ ಕುಮಾರ್ ಸಂಗೀತದ ದೋ ದಿಲ್ ಚಿತ್ರದ ಮಧುರ ಹಾಡಿದು.  ತಾವೇ ಶ್ರೇಷ್ಠ ಗಾಯಕರಾಗಿದ್ದರೂ ಹೇಮಂತ್ ಕುಮಾರ್ ಈ ಚಿತ್ರದಲ್ಲಿ ರಫಿಯನ್ನು ಬಳಸಿಕೊಂಡಿದ್ದಾರೆ.  ಈ ಮುಂಚೆಯೂ ಜಾಗೃತಿ, ಮಿಸ್ ಮೇರಿ ಮುಂತಾದ ಚಿತ್ರಗಳಲ್ಲಿ ಅವರು ರಫಿಯನ್ನು ಬಳಸಿದ್ದಿದೆ.  ಇದೇ ರೀತಿ ನನ್ನ ತಮ್ಮ ಚಿತ್ರದ ಸಂಗೀತ ನಿರ್ದೇಶಕ ಘಂಟಸಾಲ ಅವರ ಇದೇ ಹೊಸ ಹಾಡು ಪಿ.ಬಿ.ಎಸ್  ಹಾಡಿದ್ದನ್ನು ನೆನಪಿಸಿಕೊಳ್ಳಬಹುದು.




9. Sunil Datt - Nainovale Tere Naina
ಸುನೀಲ್ ದತ್ತ್  - ನೈನೊವಾಲೆ ತೇರೆ ನೈನಾ

ಚಿತ್ರಗೀತೆಗಳ ಸಿದ್ಧ ಮಾದರಿಗಿಂತ ಭಿನ್ನವಾದ  ಈ ಶಂಕರ್- ಜೈಕಿಶನ್ ರಚನೆ ಬೇಟಿ ಬೇಟೆ ಚಿತ್ರದ್ದು.  ಗಿಟಾರ್ ಹಾಗೂ ಎಕಾರ್ಡಿಯನ್ ಗಳನ್ನು ಅತಿ ಸುಂದರ ಸಂಗಮ ಇಲ್ಲಿದೆ.  ಬ್ರಹ್ಮಚಾರಿಆಜ್ ಕಲ್ ತೆರೆ ಮೆರೆ ಪ್ಯಾರ್ ಕೆ ಹಾಗೂ ದಿಲ್ ಅಪನಾ ಔರ್ ಪ್ರೀತ್ ಪರಾಯೀಅಜೀಬ್ ದಾಸ್ತಾಂ ಹೈ ಯೆ ಹಾಡುಗಳೂ ಇದೇ ರೀತಿ ಸಿದ್ಧ ಮಾದರಿಗೆ  ಹೊರತಾದವುಗಳು.


 

10. Pradeep Kumar - Jo Baat Tujh Me Hai
ಪ್ರದೀಪ್ ಕುಮಾರ್ - ಜೊ ಬಾತ್ ತುಝ್ ಮೆ ಹೈ

ಜೊ ವಾದಾ ಕಿಯಾ ವೊ, ಪಾಂವ್ ಛೂ ಲೇನೆ ದೊ ಹಾಗೂ ಈ ಹಾಡು  ತಾಜ್ ಮಹಲ್ ಚಿತ್ರದ 3 ಆಧಾರ ಸ್ತಂಭಗಳು.  ಸಾರಂಗಿಯ ಮಧುರ ದನಿಯೊಂದಿಗೆ ಆರಂಭವಾಗುವ ಈ ಹಾಡಿನ  ಒಂದು ಚರಣ ಮಧ್ಯ ಸ್ಥಾಯಿಯಲ್ಲೂ ಇನ್ನೊಂದು ಮಂದ್ರ ಸ್ಥಾಯಿಯಲ್ಲೂ ಇದ್ದು ಇದರ ಸಂಯೋಜನೆ ಮಾಧುರ್ಯವೇ ಮೈವೆತ್ತಂತಿದೆ. ಸ್ವತಃ ಹೃದಯ ಬೇನೆಯಿಂದ ನರಳುತ್ತಿದ್ದ ರೋಶನ್ ಕೇಳುಗರ ಹೃದಯಗಳಿಗೆ ತಂಪನ್ನೆರೆಯುತ್ತಿದ್ದರು.  ಈ ಚಿತ್ರದ ಹಾಡುಗಳು  ಧ್ವನಿಮುದ್ರಿತವಾದೊಡನೆ ಮದರಾಸಿನಲ್ಲಿ ರಾಜಕುಮಾರ್ ಚಿತ್ರದ ಶೂಟಿಂಗಲ್ಲಿದ್ದ ಶಮ್ಮಿ ಕಪೂರ್ ಅವುಗಳ  ಟೇಪ್ ಗಳನ್ನು ತರಿಸಿಕೊಂಡು ರಾತ್ರಿಯಿಡೀ ಆಲಿಸುತ್ತಾ ಕಣ್ಣೀರು ಸುರಿಸಿದ್ದರಂತೆ . 



    

 ಈ ನಟರಿಗೆ ರಫಿ ಹಾಡಿರುವ  ಎಷ್ಟೋ ಮರೆಯಲಾಗದ ಹಾಡುಗಳ ಪೈಕಿ ಇಲ್ಲಿರುವವು ಪ್ರಾತಿನಿಧಿಕ ಮಾತ್ರ.    ಗುರು ದತ್ತ್, ಭರತ್ ಭೂಷಣ್ , ಜಾನಿವಾಕರ್, ಮಹಮೂದ್ ಹಾಗೂ ನಂತರದ ಪೀಳಿಗೆಯ ಶಶಿ ಕಪೂರ್,  ಮನೋಜ್ ಕುಮಾರ್, ಫಿರೋಜ್ ಖಾನ್,  ಸಂಜಯ್, ಜಿತೇಂದ್ರ, ರಾಜೇಶ್  ಖನ್ನಾ , ಅಮಿತಾಭ್ ಬಚ್ಚನ್ ಮುಂತಾದ ಇನ್ನೂ ಎಷ್ಟೋ ನಟರಿಗಾಗಿ  ರಫಿ ಹಾಡಿರುವ ಹಾಡುಗಳನ್ನು ಇನ್ನೊಮ್ಮೆ ಯಾವತ್ತಾದರೂ ನೋಡೋಣ.


Tuesday 24 July 2012

ಎಣ್ಣೆ ಸಮುದ್ರವೂ ಬತ್ತಿ ಪರ್ವತವೂ



ಆಗಿನ್ನೂ ವಿದ್ಯುತ್ ಎಂದರೆ ಏನೆಂದು ಗೊತ್ತಿರದಿದ್ದ ಚಿಮಿಣಿ ದೀಪಗಳ ಕಾಲ.  ಸಾಯಂಕಾಲವಾದೊಡನೆ ದೀಪಗಳ ಗಾಜನ್ನೊರಸಿ, ಅವುಗಳ ಹೊಟ್ಟೆ ಖಾಲಿಯಾಗಿದ್ದರೆ ತುಂಬಿಸಿ ಜ್ಯೋತಿ ಬೆಳಗಿಸಿ ಆದೊಡನೆ  ಕೂಡುಕುಟುಂಬಗಳ ಮನೆ ಹಿರಿಯರು  ಮಕ್ಕಳನ್ನೆಲ್ಲ ಕೂರಿಸಿಕೊಂಡು ಬಾಯಿ ಪಾಠ ಹೇಳಿಕೊಡುತ್ತಿದ್ದರು.  ಶುಭಂ ಕರೋತು ಕಲ್ಯಾಣಂ ದಿಂದ ಆರಂಭವಾದ ಇದು ಆದಿತ್ಯವಾರ ಸೋಮವಾರ, ಪಾಡ್ಯ ಬಿದಿಗೆ, ಚೈತ್ರ ವೈಶಾಖ, ವಸಂತ ಋತು ಗ್ರೀಷ್ಮ ಋತು,  ಮೇಷ  ವೃಷಭ,  ಅಶ್ವಿನಿ ಭರಣಿ, ಬವ - ಸಿಂಹ, ಬಾಲವ - ಹುಲಿ,  ಪ್ರಭವ ವಿಭವ ಇತ್ಯಾದಿ ಕಾಲ ಗಣನೆಯ ಎಲ್ಲ ಕೋಷ್ಟಕಗಳನ್ನು ಒಳಗೊಂಡಿರುತ್ತಿತ್ತು.  ಐಚ್ಛಿಕವಾಗಿ ರಾಮರಕ್ಷಾ ಸ್ತೋತ್ರವನ್ನು ಹೇಳುವ ಕ್ರಮವೂ ಇತ್ತು.  ಇಷ್ಟೆಲ್ಲ ಮುಗಿಯುವ ಹೊತ್ತಿಗೆ ಸುಮಾರು ಏಳು ಗಂಟೆ ಆಗುತ್ತಿತ್ತು.  ಏಳೂವರೆ ಹೊತ್ತಿಗೆ ಮಕ್ಕಳು ಹಿರಿಯರು ಎಲ್ಲರ ಊಟವೂ ಆಗಿ ಎಂಟು ಎಂಟುವರೆಯೊಳಗೆ  ಮಲಗುವ ತಯಾರಿಯೂ ಆಗುತ್ತಿತ್ತು.  ಒಳ್ಳೊಳ್ಳೆ ಕತೆಗಳನ್ನು ಹೇಳುವ   ಹಿರಿಯರ ಬಳಿ ಮಲಗಲು ಮಕ್ಕಳಲ್ಲಿ ಪೈಪೋಟಿ.  ಮಲಗಲು ಹೋಗುವಾಗ ಚಿಕ್ಕದೊಂದು ಬೆಡ್ ಲ್ಯಾಂಪ್ ಒಯ್ಯುವುದೂ ವಾಡಿಕೆ. ರಾತ್ರಿಯ ಗಾಢಾಂಧಕಾರದಲ್ಲಿ ಭಯವಾಗದಂತೆ 

ಕಫಲ್ಲಸ್ಯ* ತ್ರಯೊ ಭಾರ್ಯಾ
ದಾಹಿನೀ ಮೋಹಿನೀ ಸತಿ
ತಾಸಾಂ ಸ್ಮರಣ ಮಾತ್ರೇಣ
ಚೋರೋ ಗಚ್ಛತಿ ನಿಷ್ಫಲಃ
ಅಗಸ್ತಿರ್ ಮಾಧವಂಚೈವ
ಮುಚುಕುಂದೋ ಮಹಾಮುನಿಂ
ವೃಕೋದರಂಚ ರಾಮಂಚ
ಷಡೇತೇ ಶಯನೇ ಸ್ಮರೇತ್
ಹರಿಂ ಹರಂ ಹನೂಮಂತಂ
ಹರಿಶ್ಚಂದ್ರಮ್ ಹಲಾಯುಧಂ
ಪಂಚೈತಾನಿ ಸ್ಮರೇನ್ನಿತ್ಯಂ
ಹಾನಿ ಶಸ್ತ್ರಃ ನ ಬಾಧ್ಯತೆ
ಜಲೇ ರಕ್ಷತು ವಾರಾಹಃ
ಸ್ಥಲೇ ರಕ್ಷತು ವಾಮನಃ
ಅಟವ್ಯಾಂ ನಾರಸಿಂಹಸ್ಚ
ಸರ್ವತಃ ಪಾತು ಕೇಶವಃ
ಕಫಲ್ಲ ಕಫಲ್ಲ  ಕಫಲ್ಲ

ಅನಂತ ಪದ್ಮನಾಭ ಅನಂತ ಪದ್ಮನಾಭ ಅನಂತ ಪದ್ಮನಾಭ
ಆಸ್ತಿಕ ಆಸ್ತಿಕ ಆಸ್ತಿಕ
ಕಾಳ ರಾತ್ರಿ ಮಹಾಮ್ಮಾಯೀ
ಕ್ಷೇಮ ರಾತ್ರಿ ಸುಖೀ ಪಹ


ಎಂಬ ಭಯಹರ ಸ್ತೋತ್ರವನ್ನು ಹೇಳಿ ದೀಪ ಆರಿಸಿ ಮಲಗುವುದು ಬಹುತೇಕ ಎಲ್ಲ ಕಡೆ ಇದ್ದ ವಾಡಿಕೆ. 

ನಮ್ಮ ಮನೆಯಲ್ಲಿ ಇದರ ಮುಂದುವರಿದ ಭಾಗವಾಗಿ

 

ದೀಪ ದೀಪಾಂತರಕ್ಕೆ ಹೋಗಿ      
ಎಣ್ಣೆ ಸಮುದ್ರಕ್ಕೆ ಹೋಗಿ   
ಬತ್ತಿ ಪರ್ವತಕ್ಕೆ ಹೋಗಿ
ಅನ್ಪತ್ಯವಾದ್ರೆ ಇವತ್ತು ಬನ್ನಿ
ಇಲ್ಲವಾದ್ರೆ ನಾಳೆ ಸಂಜೆ ಬನ್ನಿ
ಆಯ್ತೋ ... ಆಯ್ತು...
ಉಫ್ ....





ಎಂಬ ಸ್ವಾರಸ್ಯಕರ ಪ್ರಕ್ರಿಯೆಯೊಡನೆ ಸೂಕ್ತ ಮರ್ಯಾದೆಯೊಂದಿಗೆ ದೀಪ ಆರಿಸುವ ವಿಶೇಷ ಪದ್ಧತಿಯೊಂದಿತ್ತು.  ಮುಂದೆ ಸಸೇಮಿರಾ ಕತೆ, ನೇತಾಡುವ ರುಂಡಗಳ  ಕತೆ, ರಾಜ ಮತ್ತು ಟೊಪ್ಪಿಯ ಕತೆ,  ಸತ್ಯೆನಲಾ ಪಾಕಿ ಕತೆ,  ಇಲಿ ದಂಪತಿಗಳ ಕತೆ ಮುಂತಾದವುಗಳನ್ನು ಕೇಳುತ್ತಾ ನಿದ್ದೆಗೆ ಜಾರಿದುದೇ ತಿಳಿಯುತ್ತಿರಲಿಲ್ಲ.

 *ಕಫಲ್ಲ ಎಂಬುವವನು ಆದಿ ಚೋರನಂತೆ.  ಈತನ ಹೆಸರನ್ನು ಸ್ಮರಿಸಿದವರಿಗೆ ಚೋರ ಭಯವಿಲ್ಲವೆಂದು ಬ್ರಹ್ಮ ವರಕೊಟ್ಟಿದ್ದನೆಂದು ನಂಬಿಕೆ ಇದೆ. ಕೆಲವು ಕಡೆ ಬಾಗಿಲಿಗೆ ಬೀಗ ಹಾಕಿ ಹೊರ ಹೋಗುವಾಗ
ತಿಸ್ತ್ರೋ ಭಾರ್ಯಾ ಕಫಲ್ಲಸ್ಯ, ದಾಹಿನೀ ಮೋಹನೀ ಸತೀ।
ತಾಸಾಂ ಸ್ಮರಣ-ಮಾತ್ರೇಣ, ಚೌರೋ ವಿಶಾತಿ ನೋ ಗೃಹಮ್।।

ಎಂದು ಹೇಳುವ ಕ್ರಮವೂ ಇದೆಯಂತೆ.