Monday 6 February 2012

ಕನ್ನಡದ ಮನ್ನಾಡೇಯ ಗೀಗೀ ಹಾಡು

     ಕನ್ನಡ ಚಿತ್ರ ಸಂಗೀತದ ಸುವರ್ಣಯುಗವನ್ನು ಶ್ರೀಮಂತಗೊಳಿಸಿದ ಗಾಯಕ ಗಾಯಕಿಯರಲ್ಲಿ ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶೀಲ, ಘಂಟಸಾಲ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಲ್.ಆರ್.ಈಶ್ವರಿ ಮುಂತಾದವರನ್ನು ಅರಿಯದ ಕನ್ನಡಿಗರಿಲ್ಲ. ಆದರೆ ಕಂಡರೂ ಕಾಣದಂಗೆ ನಡೀತಿದ್ದಿ ನ್ಯಾಯವೇನೇ ಇದು ಬೆಳ್ಳಿ(ಅಣ್ಣ ತಂಗಿ), ಭಲೇ ಭಲೇ ಗಾರುಡಿ(ಕೃಷ್ಣಗಾರುಡಿ), ಸತ್ಯದ ನುಡಿಯ ಲಾಲಿಸಿರೊ(ಚಂದವಳ್ಳಿಯ ತೋಟ), ಕನ್ನಡ ನಾಡಿನ ಕುಲ ನಾರಿ(ನಾಗ ಪೂಜಾ),  ನಾ ನಿನ್ನ ಮೋಹಿಸಿ ಬಂದಿಹೆನು(ಪ್ರತಿಜ್ಞೆ), ನೀನೆ ಕಿಲಾಡಿ ಹೆಣ್ಣು(ಗಾಳಿ ಗೋಪುರ), ಹಾಡು ಬಾ ಕೋಗಿಲೆ(ವೀರ ಸಂಕಲ್ಪ), ಸುಬ್ಬ ಬಂದ ಹಬ್ಬ ತಂದ(ಅಮರ ಜೀವಿ), ಹಗಲು ಹರಿಯಿತು ಇರುಳು ಕಳೆಯಿತು(ಚಕ್ರ ತೀರ್ಥ), ರಾತ್ರಿಯಲಿ ಮಳೆ ಬಂದು(ಅಮ್ಮ), ನಾನೂ ನೀನೂ ಜೋಡಿ(ಸ್ಕೂಲ್ ಮಾಸ್ಟರ್), ನಾವಿಕನಾರೊ ನಡೆಸುವನೆಲ್ಲೊ(ಕುಲ ಗೌರವ), ಬೆಳಗಲಿ ಬೆಳಗಲಿ(ಶ್ರೀ ಕೃಷ್ಣ ದೇವರಾಯ), ನನ್ನ ನಿನ್ನ ಕಣ್ಣು ಸೇರಿದಂದು ನನ್ನವಳಾದೆ ನೀನು(ಅಡ್ಡ ದಾರಿ), ಚೆಲುವೇ ಚೆಲುವೇ ತಾನಿ ತಂದಾನಾ(ಲಕ್ಷಾಧೀಶ್ವರ), ಮಾತಿನ ಮಲ್ಲ ತೋರುತ ಹಲ್ಲ(ವಿಜಯ ನಗರದ ವೀರ ಪುತ್ರ), ಹಲೊ ಮಿಸ್ ಹಲೊ ಮಿಸ್ ಕೊಂಚ ನಿಲ್ಲಿ(ಚಿಕ್ಕಮ್ಮ) ಮುಂತಾದ ಹಾಡುಗಳು ಅನೇಕರಿಗೆ  ಗೊತ್ತಿದ್ದರೂ ಈ ಹಾಡುಗಳಿಗೆ ಧ್ವನಿ ನೀಡಿದ ಗಾಯಕ ಯಾರು ಎಂದು ಕೇಳಿದರೆ ಬಹುಶಃ ಕೂಡಲೇ ಉತ್ತರ ಸಿಗಲಾರದು. ಇವರೇ ಕನ್ನಡದ ಮನ್ನಾಡೇ ಎಂದು ಕರೆಯಬಹುದಾದ ಪೀಠಾಪುರಂ ನಾಗೇಶ್ವರ ರಾವ್. ಮನ್ನಾಡೇಯನ್ನು ಹೋಲುವ ಘನ ಗಂಭೀರ ಕಂಠ, ಅವರಂತೆಯೇ ಕೊಂಚ ತೊದಲು ಎನ್ನಬಹುದಾದ voice throw , ಹೆಚ್ಚಾಗಿ ಕಾಮಿಡಿ ಹಾಗೂ ಹಿನ್ನೆಲೆಯ ಹಾಡುಗಳಿಗಾಗಿ ಬಳಕೆ ಇವು ಇವರಿಬ್ಬರ ಸಮಾನ ಅಂಶಗಳು.  ಕನ್ನಡದಲ್ಲಿ ಇವರನ್ನು ಹೆಚ್ಚು ಬಳಸಿಕೊಂಡವರು ಟಿ.ಜಿ.ಲಿಂಗಪ್ಪ. ಪಿ.ಬಿ.ಎಸ್ ಅವರಂತೆಯೇ ತೆಲುಗು ಮಾತೃಭಾಷಿಗರಾದರೂ ಕನ್ನಡಿಗರೂ ನಾಚುವಷ್ಟು ಶುದ್ಧ ಕನ್ನಡ ಉಚ್ಚಾರದಲ್ಲಿ ಇಷ್ಟೊಂದು ಪ್ರಸಿದ್ಧ ಹಾಡುಗಳನ್ನು ಹಾಡಿದ ಇವರ ಬಗ್ಗೆ ಯಾವುದೇ ಪತ್ರಿಕೆಯಲ್ಲಿ ಲೇಖನವನ್ನಾಗಲೀ,  ಫೋಟೊವನ್ನಾಗಲೀ, ಕೊನೆಗೆ 1996ರಲ್ಲಿ ಇವರು ನಿಧನ ಹೊಂದಿದ ಸುದ್ದಿಯನ್ನಾಗಲೀ ಎಲ್ಲೂ ನೋಡಿದ ನೆನಪಿಲ್ಲ. 50-60 ರ ದಶಕಗಳಲ್ಲಿ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಇವರ ಬಗ್ಗೆ ಅಂತರ್ಜಾಲವನ್ನು ಜಾಲಾಡಿದಾಗ ಒಂದು ಫೋಟೊ ಮತ್ತು ಕೊಂಚ ಮಾಹಿತಿ ದೊರಕಿತು.

     ಕೊನೆವರೆಗೂ ಹಿನ್ನೆಲೆಯಲ್ಲೇ ಉಳಿದು ನಿಜ ಅರ್ಥದಲ್ಲಿ ಹಿನ್ನೆಲೆ ಗಾಯಕರಾದ ಇವರನ್ನು ನೆನಪಿಸಿಕೊಳ್ಳುತ್ತಾ ಇತ್ತೀಚೆಗೆ ಹೆಚ್ಚಾಗಿ ಕೇಳಿಬರದ ಪಾಪ ಪುಣ್ಯ ಚಿತ್ರದ ಗೀ ಗೀ ಪದವನ್ನು ಆಲಿಸೋಣ


ಚಿತ್ರ : ಪಾಪ ಪುಣ್ಯ
ರಚನೆ : ಮಹದೇವ ಬಣಕಾರ್
ಸಂಗೀತ : ಪದ್ಮಚರಣ್
ಗಾಯಕರು : ಪೀಠಾಪುರಂ ನಾಗೇಶ್ವರ ರಾವ್ ಮತ್ತು ಸಂಗಡಿಗರು


ಹರ ಹರಾ ಹರಾ
ಅರೆ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀ
ನಾವು ಬಂದೇವ ನಾವು ಬಂದೇವ
ನಾವು ಬಂದೇವ ಶ್ರೀಶೈಲ ನೊಡೊದಕ್ಕ
ಸ್ವಾಮಿ ಸೇವಾ ಮಾಡಿ ಮತ್ತ ಹೋಗೋದಕ್ಕ
ನಾವು ಬಂದೇವ ಶ್ರೀಶೈಲ ನೊಡೊದಕ್ಕ
ಸ್ವಾಮಿ ಸೇವಾ ಮಾಡಿ ಮತ್ತ ಹೋಗೋದಕ್ಕ
ನಾವು ಬಂದೇವ ನಾವು ಬಂದೇವ
ನಾವು ಬಂದೇವ ಶ್ರೀಶೈಲ ನೊಡೊದಕ್ಕ
ಸ್ವಾಮಿ ಸೇವಾ ಮಾಡಿ ಮತ್ತ ಹೋಗೋದಕ್ಕ
ಅರೆ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀ

ಹೇ ಬೆಟ್ಟದ ಮೇಲೇರಿ ಶಿವ ಯಾಕೆ ಕುಂತ
ಅವನಿಗೇನು ಬಂತ
ಅಂಥದ್ದವನಿಗೇನು ಬಂತ
ಹೂಂ ಹೇಳಪ್ಪ
ಕೆಟ್ಟ ಜನರ ಮುಖ ನೋಡಬಾರದಂತ.. ತ..
ತತ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀ

ಹೇ ಹಣ್ಣು ಕಾಯಿ ಧೂಪ ದೀಪ ಇಡತಾರಂತ
ಯಾಕಂತ
ಪುಣ್ಯ ಬರಲಿ ಅಂತ  ಪುಣ್ಯ ಬರಲಿ ಅಂತ
ತಾಸಿನೊಳಗೆ ಕೋಟಿ ಪುಣ್ಯ ಬರಲಿ ಅಂತ.. ತ..
ತತ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀ
ನಾವು ಬಂದೇವ ನಾವು ಬಂದೇವ
ನಾವು ಬಂದೇವ ಶ್ರೀಶೈಲ ನೊಡೊದಕ್ಕ
ಸ್ವಾಮಿ ಸೇವಾ ಮಾಡಿ ಮತ್ತ ಹೋಗೋದಕ್ಕ
ಅರೆ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ ಗಾಗಿಯ

ಹೇ ಭಿಕ್ಷುಕ ಬಂದರೆ ನಿಷ್ಠುರವಾಗಿ ಹೇಳ್ತಾರಂತ
ಏನಂತ
ಮುಂದಕ್ಕ ಹೋಗಂತ
ಈಗಾಗೂದಿಲ್ಲ
ಮುಂದಕ್ಕ ಹೋಗಂತ
ಬೆಟ್ಟ ಏರಿ ಬಂದಿದ್ರೂ ಕೆಟ್ಟ ಗುಣ ಹೋಗಿರ್ಲಿಲ್ಲ
ಹುಟ್ಟುಗುಣ ಸುಟ್ಟರೂ ಹೋಗದಂತ.. ತ..
ತತ ಗೀಯ ಗೀಯ ಗಾಗಿಯ ಗೀಯ ಗೀ
ಹೇ ಬಾಯಿದ್ರೂ ಮೂಕನಾಗಿ
ಕಿವಿ ಇದ್ರೂ ಕಿವುಡನಾಗಿ
ಶಿವ ಯಾಕೆ ಕುಂತ
ಹೇಳಪ್ಪಾ
ವರ ಕೇಳತಾರಂತ.. ತ..
ತತ ಗೀಯ ಗೀಯ ಗಾಗಿಯ ಗೀಯ ಗೀ

ಹೇ ಶಿವನ ಒಲಿಸೂದಕ್ಕ ಏನ ಮಾಡಬೇಕ
ಹೂಂ ಹೇಳಪ್ಪಾ
ಭಕ್ತಿಯೊಂದು ಸಾಕ
ನಮ್ಮಿಂದ ಶಿವನಿಗೇನು ಬೇಕ.. ಕ..
ತತ ಗೀಯ ಗೀಯ ಗಾಗಿಯ ಗೀಯ ಗೀಯ ಗೀ
ನಾವು ಬಂದೇವ ನಾವು ಬಂದೇವ
ನಾವು ಬಂದೇವ ಶ್ರೀಶೈಲ ನೊಡೊದಕ್ಕ
ಸ್ವಾಮಿ ಸೇವಾ ಮಾಡಿ ಮತ್ತ ಹೋಗೋದಕ್ಕ
ಅರೆ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ

5 comments:

  1. This is a beautiful song.
    Padmanabh Kakathkar

    ReplyDelete
  2. Very rare find... I heard this song first from my aunt.. But she was not remembering everything.. Thanks for sharing

    ReplyDelete
  3. ಇವರ ಹಾಡುಗಳನ್ನು ಸಾಕಷ್ಟು ಕೇಳಿದ್ದೆ. ಇವರ ನಿಜವಾದ ಧ್ವನಿ ಕೇಳಿ ಇವರು ನಿಜವಾದ ಕನ್ನಡಿಗರು ಎಂದು ತಿಳಿದುಕೊಂಡಿದಿದೆ. ಇವರ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಅನಂತ ಧನ್ಯವಾದಗಳು ಸರ.

    ReplyDelete
    Replies
    1. ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

      Delete

Your valuable comments/suggestions are welcome