Monday 30 November 2020

ಹರಿಶ್ಚಂದ್ರಾಯಣ

‘ಕೆಟ್ಟ ವಸಿಷ್ಠ. ತನ್ನ ಶಿಷ್ಯನೊಬ್ಬನೇ ಸತ್ಯವಂತನಂತೆ. ಆಹಾ! ಹೇಳುವುದಕ್ಕೆ ಆ ದೇವರ್ಷಿ.  ಕುಳಿತು ಕೇಳುವುದಕ್ಕೆ ಈ ದೇವೇಂದ್ರ.  ಸರಿಯಾಗಿದೆ ಜೋಡಿ.’ - ಇದು ನಮ್ಮೂರ ಶಾಲಾ ವಾರ್ಷಿಕೋತ್ಸವದಲ್ಲಿ ಅಭಿನಯಿಸಿದ ಸತ್ಯ ಹರಿಶ್ಚಂದ್ರ ನಾಟಕದಲ್ಲಿ ವಿಶ್ವಾಮಿತ್ರನ ಪ್ರಥಮ ಪ್ರವೇಶದ ಡಯಲಾಗ್. ವಿಶ್ವಾಮಿತ್ರನಾಗಿದ್ದುದು ನಾನಲ್ಲ.  ನಮ್ಮ ಮನೆಯಲ್ಲಿದುಕೊಂಡು ಮುಂಡಾಜೆ ಹೈಯರ್ ಎಲಿಮೆಂಟರಿ ಶಾಲೆಗೆ ಹೋಗುತ್ತಿದ್ದ ನಮ್ಮಕ್ಕನ ಮಗ. ಆತ ಮನೆಯಲ್ಲಿ ತನ್ನ ಪಾತ್ರದ ಸಂಭಾಷಣೆಗಳನ್ನು ಪದೇ ಪದೇ ಅಭ್ಯಾಸ ಮಾಡುತ್ತಿದ್ದುದರಿಂದ ಆಗಿನ್ನೂ ಸಿದ್ದಬೈಲು ಪರಾರಿ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ ನನಗೂ ಈ ಮೊದಲ ಸಾಲುಗಳು ಕಂಠಪಾಠವಾಗಿ ಈಗಲೂ ನೆನಪಿನಲ್ಲುಳಿದಿವೆ.  ವಾರ್ಷಿಕೋತ್ಸವದ ದಿನ ಆತ ದಾಡಿ ಮೀಸೆ ಧರಿಸಿ ಕೆಂಪು ನಾರುಮಡಿಯುಟ್ಟು ಜಟಾಧಾರಿಯಾಗಿ ಕೈಯಲ್ಲಿ ದಂಡ ಕಮಂಡಲು ಹಿಡಿದು ಈ ಡಯಲಾಗ್ ಹೇಳುತ್ತಾ ವೇದಿಕೆಯನ್ನು ಪ್ರವೇಶಿಸಿದ ದೃಶ್ಯವನ್ನೂ ನಾನು ಮರೆತಿಲ್ಲ.  ಆತ್ಯುತ್ತಮ ನಟ ಪ್ರಶಸ್ತಿಯೂ ಅಂದು ಆತನಿಗೆ ದೊರಕಿತು.  ಆ ನಾಟಕದಲ್ಲಿ ಹರಿಶ್ಚಂದ್ರ ಶ್ಮಶಾನ ಕಾಯುತ್ತಾ ಹಾಡುವ ‘ಕಾಯಕೆ ಕವಿಯಿತು ಮಸಣದ ಹೊಗೆಯು, ಆಯಿತು ವಾಸಕೆ  ಮುರುಕಲು ಮನೆಯು’ ಎಂಬ ಹಾಡೂ ಇತ್ತು. ಮನೆಯಲ್ಲಿ ಮಸಣ ಶಬ್ದದ ಉಚ್ಚಾರ ಮಾಡಿದರೆ ಹಿರಿಯರು ಬೈದಾರೆಂಬ ಭಯದಿಂದ ನಾವದನ್ನು ‘ಕಾಯಕೆ ಕವಿಯಿತು ಧೂಪದ ಹೊಗೆಯು, ಆಯಿತು ವಾಸಕೆ ಚಂದದ ಮನೆಯು’ ಎಂದು ಬದಲಾಯಿಸಿ ಹಾಡಿಕೊಳ್ಳುತ್ತಿದ್ದೆವು.  ಕರುಣ, ರೌದ್ರ, ಹಾಸ್ಯ ಎಲ್ಲಾ ರಸಗಳಿಗೆ ವಿಪುಲ ಅವಕಾಶವಿರುವ ಹರಿಶ್ಚಂದ್ರ ನಾಟಕ ಅಂದಿನ ಶಾಲಾ ವಾರ್ಷಿಕೋತ್ಸವಗಳಲ್ಲಿ ಇರುತ್ತಿದ್ದುದು ಸಾಮಾನ್ಯವಾಗಿತ್ತು.

ಕೆಲವು ವರ್ಷಗಳ ನಂತರ  ಆ ಶಾಲೆಯಲ್ಲೇ  ಹರಿಶ್ಚಂದ್ರನೊಂದಿಗೆ ಮತ್ತೆ ನನ್ನ ಮುಖಾಮುಖಿಯಾಯಿತು. ಆದರೆ ರಸಮಯ ನಾಟಕದಲ್ಲಲ್ಲ,  ನನಗೆ ಆಗ ವಧ್ಯ ಎನಿಸಿದ್ದ ಪದ್ಯ ರೂಪದಲ್ಲಿ!  ನಾನು ಸಿದ್ದಬೈಲು ಶಾಲೆಯಲ್ಲಿ 5ನೇ ತರಗತಿ ಮುಗಿಸಿ  ಅದೇ ಮುಂಡಾಜೆ ಹೈಯರ್ ಎಲಿಮೆಂಟರಿ ಶಾಲೆಗೆ ಸೇರಿದ್ದೆ.  6ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ನಮಗೆ ಹೊಸದಾಗಿದ್ದ ಹಳೆಗನ್ನಡದ ಕೆಲವು ಪದ್ಯಗಳಿದ್ದವು. ಅವುಗಳಲ್ಲಿ ಒಂದು ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಪುತ್ರ ರೋಹಿತಾಶ್ವನು ಹಾವು ಕಡಿದು ಮರಣ ಹೊಂದಿದಾಗ ಚಂದ್ರಮತಿಯು ವಿಲಾಪಿಸುವ ಈ ಭಾಗವಾಗಿತ್ತು.

ಲಲನೆ ಮೂಗಿನೊಳುಸುರನಳ್ಳೆಯೊಳು ಹೊಯ್ಲನುಗು
ರೊಳು ರಜವನೆದೆಯೊಳಲ್ಲಾಟಮಂ ಕೈಯ ಮೊದ
ಲೊಳು ಮಿಡುಕನಂಗದೊಳು ನೋವನಕ್ಷಿಯೊಳು ಬೆಳ್ಪಂ ಭಾಳದೊಳು  ಬೆಮರನು  |
ಲಲಿತಕಂಠದೊಳುಲುಕನಂಘ್ರಿಯೊಳು ಬಿಸಿಯನಂ
ಗುಳಿಗಳೊಳು ಚಿಟುಕನುಂಗುಟದೊಳರುಣಾಂಬುವಂ
ಸಲೆ ನಾಲಗೆಯೊಳಿಂಪ ರೋಮದೊಳು ಬಲ್ಪನಾರಯ್ದು ಕಾಣದೆ ನೊಂದಳು ||

ಆದರೆ ಇದು 1,2,4 ಮತ್ತು 5ನೇ ಪಾದಗಳಲ್ಲಿ 5 ಮಾತ್ರೆಯ 4 ಗಣಗಳು(ತಕತಕಿಟ  ತಕತಕಿಟ ತಕತಕಿಟ ತಕತಕಿಟ)   ಹಾಗೂ 3 ಮತ್ತು 6ನೇ ಪಾದಗಳಲ್ಲಿ 5 ಮಾತ್ರೆಯ 6 ಗಣಗಳು ಮತ್ತು ಕೊನೆಯಲ್ಲೊಂದು ಎರಡಕ್ಷರ ಕಾಲದ ಗುರು(ತಕತಕಿಟ ತಕತಕಿಟ ತಕತಕಿಟ ತಕತಕಿಟ ತಕತಕಿಟ ತಕತಕಿಟ ತಾ) ಇರುವ, ಪ್ರತೀ ಪಾದದ ಎರಡನೇ ಅಕ್ಷರ ನಿರ್ದಿಷ್ಟ ವ್ಯಂಜನವಾಗಿರುವ ಆದಿ ಪ್ರಾಸದ ವಾರ್ಧಕ ಷಟ್ಪದಿ ಎಂದು ಈ ಲೇಖನಕ್ಕೆ ವಿಷಯ ಸಂಗ್ರಹಿಸುವಾಗಷ್ಟೇ ನನಗೆ ತಿಳಿದದ್ದು. ನಾವು ಶುಕ್ರವಾರದ  ಭಜನೆಗಳಲ್ಲಿ ಹಾಡುತ್ತಿದ್ದ ಕನಕದಾಸ, ಪುರಂದರದಾಸರ ಬಹುತೇಕ ರಚನೆಗಳಲ್ಲೂ ಆದಿಪ್ರಾಸ ಇರುವುದು ಶಾಲಾ ಕಾಲದಲ್ಲಿ ನನಗೆ ಗೊತ್ತಿರಲಿಲ್ಲ! ಅಂದು ಅಧ್ಯಾಪಕರು ಇದನ್ನೆಲ್ಲ ಹೇಳಿರಲಿಲ್ಲವೋ ಅಥವಾ ನಾನು ಕೇಳಿಸಿಕೊಂಡಿರಲಿಲ್ಲವೋ ಗೊತ್ತಿಲ್ಲ. ಆಗ ಹೇಗೋ ಇದನ್ನು ಯಾಂತ್ರಿಕವಾಗಿ ಕಂಠಪಾಠ ಮಾಡಿ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರಿಸಿದ್ದೆ.  ಆದರೆ ನಾಟಕದ ವಿಶ್ವಾಮಿತ್ರನ ಮಾತುಗಳನ್ನು ಉಚ್ಚರಿಸುತ್ತಾ ಮನೆಯಲ್ಲಿ ತಿರುಗಾಡಿದಂತೆ ಈ ಪದ್ಯವನ್ನು ಎಂದೂ ಖುಶಿಯಿಂದ ಗುನುಗಿಕೊಂಡದ್ದಿಲ್ಲ. ಇದು ಹರಿಶ್ಚಂದ್ರನ ಕಥೆಗೆ  ಸಂಬಂಧಿಸಿದ್ದೆಂಬ ಅಂಶ ನನ್ನ ಮನದಲ್ಲಿ ದಾಖಲಾಗಿರಲೂ ಇಲ್ಲ.  ಇದೇ ಪಠ್ಯಪುಸ್ತಕದೊಳಗಿನದ್ದಕ್ಕೂ ಹೊರಗಿನದಕ್ಕೂ ಇರುವ ವ್ಯತ್ಯಾಸವಿರಬಹುದು! 

ನಾನು ಎಂಟರಿಂದ ಹತ್ತನೇ ತರಗತಿ ವರೆಗೆ ಉಜಿರೆ ಹಾಸ್ಟೆಲಲ್ಲಿದ್ದುಕೊಂಡು ಓದಿದ್ದು.  ಮೊದಮೊದಲು ಪ್ರತೀ ವಾರಾಂತ್ಯದಲ್ಲಿ ಮನೆಗೆ ಹಾಜರಿ ಹಾಕುತ್ತಿದ್ದೆ.  ಕ್ರಮೇಣ ಹಾಸ್ಟೆಲ್ ಜೀವನ ಅಭ್ಯಾಸ ಆಗಿ ಹತ್ತನೇ ತರಗತಿಗಾಗುವಾಗ ಹೆಚ್ಚಾಗಿ ತಿಂಗಳಿಗೊಮ್ಮೆಯಷ್ಟೇ ಮನೆಗೆ ಹೋಗುತ್ತಿದ್ದೆ.  ಹೀಗೆ ಬೇಸಿಗೆಯ ಒಂದು ವಾರಾಂತ್ಯದಲ್ಲಿ  ಮನೆಗೆ ಹೋಗಿದ್ದಾಗ ಚಾವಡಿಯಲ್ಲಿರುವ ಟೇಬಲ್ ಮೇಲೊಂದು ಪಂಚಾಂಗದಾಕಾರದಲ್ಲಿದ್ದ ಹೊಳೆಯುವ ಹೊದಿಕೆಯ ಚಂದದ ತೆಳ್ಳಗಿನ ಪುಸ್ತಕ ಕಂಡಿತು. ಆಗ ತಾನೇ ಮಂಗಳೂರಲ್ಲಿ ತಾತ್ಕಾಲಿಕ ನೌಕರಿಗೆ ಸೇರಿದ್ದ ನಮ್ಮಣ್ಣ ನೋಡಿದ್ದ ಸತ್ಯ ಹರಿಶ್ಚಂದ್ರ ಸಿನಿಮಾದ ಪದ್ಯಾವಳಿ ಆಗಿತ್ತದು.  ಇತರ ಸಾಮಾನ್ಯ ಪದ್ಯಾವಳಿಗಳಂತಲ್ಲದೆ ಇದರ ಒಳಪುಟಗಳಲ್ಲಿ ತಿಳಿವರ್ಣದ ಸಿನಿಮಾ ದೃಶ್ಯಗಳ ಮೇಲೆ ಕಥಾ ಸಾರಾಂಶ, ನಟ ನಟಿಯರು ಮತ್ತು ಪಾರಿಭಾಷಿಕ ವರ್ಗದವರ ವಿವರ ಹಾಗೂ ಹಾಡುಗಳನ್ನು  ಮುದ್ರಿಸಲಾಗಿತ್ತು. ಕೂಡಲೇ ಚಾವಡಿಯಿಂದ  ಹೊರಜಗಲಿಗೆ ಬಂದು ಅಲ್ಲಿನ ಕಟ್ಟೆಯ ಮಾಮೂಲಿ ಆಯಕಟ್ಟಿನ ಜಾಗದಲ್ಲಿ  ಕುಳಿತು ಪದ್ಯಾವಳಿಯ ಪುಟಗಳನ್ನು ಒಂದೊಂದಾಗಿ ತಿರುಗಿಸತೊಡಗಿದೆ. ಆಗ ಮಧ್ಯಾಹ್ನದ ಹೊತ್ತಾಗಿದ್ದು ಪದ್ಯಾವಳಿಯಲ್ಲಿದ್ದ ಶ್ರಾದ್ಧದೂಟ ಸುಮ್ಮನೆ ಹಾಡಿನ ಇಂಗು ತೆಂಗು ತಿರುವಿ ಬೆರೆತ ವಡೆ ಗೊಜ್ಜು ಮಜ್ಜಿಗೆ ರಾಯ್ತ ಸಾಲಿನ ಮೇಲೆ ಕಣ್ಣಾಡಿಸುತ್ತಿರುವಾಗ  ಅಡಿಗೆ ಮನೆಯಿಂದಲೂ  ಇಂಗು ತೆಂಗು ತಿರುವಿ ಬೆರೆತ ದಿವಿಹಲಸಿನ ಹುಳಿ ಕುದಿಯುತ್ತಿರುವ ಸುವಾಸನೆ ತೇಲಿ ಬರುತ್ತಿತ್ತು! ಅಂದು ಅಪರಾಹ್ನ ಶಾರ್ಟ್ ವೇವ್ ವಿವಿಧಭಾರತಿಯ ಮಧುರ್ ಗೀತಂ ಕಾರ್ಯಕ್ರಮದಲ್ಲಿ ಅದೇ ಹಾಡು ಕೇಳಲೂ ಸಿಕ್ಕಿತು.  ಸಾಮಾನ್ಯವಾಗಿ ಕನ್ನಡ ಚಿತ್ರಗಳು ತೆರೆ ಕಂಡು ಸುಮಾರು ಒಂದು ಒಂದೂವರೆ ತಿಂಗಳುಗಳ ನಂತರವಷ್ಟೇ  ಹಾಡುಗಳ ಧ್ವನಿಮುದ್ರಿಕೆಗಳು ತಯಾರಾಗಿ ರೇಡಿಯೋ ಸ್ಟೇಶನ್ ತಲುಪುತ್ತಿದ್ದವು. ಆದರೆ ಈ ಚಿತ್ರದ  ಧ್ವನಿಮುದ್ರಿಕೆಗಳು ಬಹು ಬೇಗ ತಯಾರಾಗಿ ದಿನನಿತ್ಯವೆಂಬಂತೆ ಹಾಡುಗಳು ಪ್ರಸಾರವಾಗತೊಡಗಿದ್ದವು.  ಆಗ ನನಗೆ ರೇಡಿಯೋ ಕೇಳುವ ಅವಕಾಶ ಹೀಗೆ ಮನೆಗೆ ಬಂದಾಗ ಮಾತ್ರ ಸಿಗುತ್ತಿದ್ದುದಾದರೂ ಚಿತ್ರಗೀತೆಗಳ ಮಟ್ಟಿಗೆ ನಾನು ಏಕಪಾಠಿಯಾಗಿದ್ದುದರಿಂದ ಸ್ವಲ್ಪವೇ ಸಮಯದಲ್ಲಿ ನಮೋ ಭೂತನಾಥಾ, ನೀನು ನಮಗೆ ಸಿಕ್ಕಿಬಿದ್ದೆಯೋ ರಾಜಾ, ನನ್ನ ನೀನು ನಿನ್ನ ನಾನು, ಶ್ರಾದ್ಧದೂಟ ಸುಮ್ಮನೆ, ವಿಧಿ ವಿಪರೀತ, ಕುಲದಲ್ಲಿ ಕೀಳ್ಯಾವುದೋ ಹಾಡುಗಳು ನನ್ನ ನೆಚ್ಚಿನವಾಗಿಬಿಟ್ಟವು. ಸತ್ಯ ಹರಿಶ್ಚಂದ್ರ ಚಿತ್ರವನ್ನು ವಿಕ್ಷಿಸಲು ನಾನು ಕೆಲವು ವರ್ಷಗಳೇ ಕಾಯಬೇಕಾಯಿತು. ಆ ಚಿತ್ರದ ಬಗ್ಗೆ ಮತ್ತು  ಹಾಡುಗಳ ಬಗ್ಗೆ ಇನ್ನಷ್ಟು ವಿಚಾರಗಳನ್ನು ಆ ಮೇಲೆ  ತಿಳಿಯೋಣ.

ಐತರೇಯ ಬ್ರಾಹ್ಮಣ, ಸಾಂಖ್ಯಾಯನ ಶ್ರೌತಸೂತ್ರ,  ವೇದಾರ್ಥ ದೀಪಿಕೆ, ಬ್ರಹ್ಮಾಂಡ ಪುರಾಣ, ವಾಯು ಪುರಾಣ, ಮತ್ಸ್ಯ ಪುರಾಣ , ಬ್ರಹ್ಮ ವೈವರ್ತ ಪುರಾಣ, ಶೈವ ಪುರಾಣ,  ಮಾರ್ಕಂಡೇಯ ಪುರಾಣ,  ಬ್ರಹ್ಮ ಪುರಾಣ, ಪದ್ಮ ಪುರಾಣ ಇತ್ಯಾದಿಗಳಲ್ಲಿ ಹರಿಶ್ಚಂದ್ರನ ಕಥೆಯು ಉಕ್ತವಾಗಿದ್ದು 12ನೆಯ ಶತಮಾನದ ಕನ್ನಡ ಕವಿ ರಾಘವಾಂಕನ ಹರಿಶ್ಚಂದ್ರ ಕಾವ್ಯವು  ಅತಿ ಪ್ರಸಿದ್ಧವಾಗಿದೆ. ಈ ವಿವಿಧ ಮೂಲಗಳಲ್ಲಿ ಕಥೆಯ ಪಾತ್ರಗಳ ಹೆಸರುಗಳಲ್ಲಿ ಸ್ವಲ್ಪ ವ್ಯತ್ಯಾಸ ಇದೆ.  ಹರಿಶ್ಚಂದ್ರನ ಪತ್ನಿ ಕೆಲವೆಡೆ ಚಂದ್ರಮತಿಯಾದರೆ ಇನ್ನು ಕೆಲವೆಡೆ ವಿಶೇಷವಾಗಿ ಉತ್ತರಭಾರತದಲ್ಲಿ ತಾರಾಮತಿ ಅನ್ನಿಸಿಕೊಳ್ಳುತ್ತಾಳೆ. ಶೈವ್ಯಾ ಎಂಬ ಹೆಸರೂ ಆಕೆಗಿತ್ತೆಂಬ ಉಲ್ಲೇಖ ಇದೆ. ಅವರ ಪುತ್ರನಿಗೆ ಲೋಹಿತಾಶ್ವ, ರೋಹಿತಾಶ್ವ, ಲೋಹಿತಾಸ್ಯ, ಲೋಹಿದಾಸ  ಇತ್ಯಾದಿ ಹೆಸರುಗಳಿವೆ.  ವಿಶ್ವಾಮಿತ್ರನ ಶಿಷ್ಯ ನಕ್ಷತ್ರಿಕನ ಪಾತ್ರ ರಾಘವಾಂಕನ ಸೃಷ್ಟಿಯೆನ್ನಲಾಗುತ್ತಿದ್ದು ಉತ್ತರಭಾರತದ ಕಡೆ ಪ್ರಚಲಿತವಿರುವ ಕಥೆಗಳಲ್ಲಿ ಈ ಪಾತ್ರ ಇಲ್ಲ.

ಹರಿಶ್ಚಂದ್ರ  ಸತ್ಯವಾದಿಯೆಂದೇ ಖ್ಯಾತನಾದರೂ   ಆತ ಮಾತಿಗೆ ತಪ್ಪಿದ ಕಥೆಯೂ ಒಂದಿದೆ.  ಆತನಿಗೆ ಬಹುಕಾಲ ಸಂತಾನ ಪ್ರಾಪ್ತಿ ಆಗಿರಲಿಲ್ಲ. ಮಗ ಹುಟ್ಟಿದರೆ  ವರುಣನಿಗೆ ಬಲಿ ಕೊಡುತ್ತೇನೆಂದು ಹರಸಿಕೊಳ್ಳುತ್ತಾನೆ.  ಆದರೆ ಆ ಮೇಲೆ ಪುತ್ರವ್ಯಾಮೋಹದಿಂದ ಮಗನನ್ನು ಬಚ್ಚಿಟ್ಟು ವರುಣನ ಶಾಪದಿಂದ ಜಲೋದರ ವ್ಯಾಧಿಗೊಳಗಾಗುತ್ತಾನೆ.  ಕೊನೆಗೆ ಮಗನ ಬದಲಿಗೆ ಋಚೀಕ ಮುನಿಯ ಪುತ್ರ ಶುನಶ್ಯೇಪನೆಂಬುವವನನ್ನು ಬಲಿಕೊಟ್ಟು ವ್ಯಾಧಿಯಿಂದ ಮುಕ್ತನಾಗುತ್ತಾನೆ. ಶುನಶ್ಯೇಪನನ್ನು ವಿಶ್ವಾಮಿತ್ರ ಬದುಕಿಸಿಕೊಂಡು  ಪುತ್ರನಾಗಿ ಸ್ವೀಕರಿಸುತ್ತಾನೆಂದೂ ಐತಿಹ್ಯವಿದೆ. ಕೆಲವರು ಒಮ್ಮೆ ಒಂದು ಕ್ಲಾಸಲ್ಲಿ ಫೇಲ್ ಆಗಿ ಮತ್ತೆ rank ವಿದ್ಯಾರ್ಥಿ ಆಗುವ ಹಾಗೆ ಈ ಘಟನೆಯ ನಂತರ ಹರಿಶ್ಚಂದ್ರ ಪೂರ್ತಿ ಸತ್ಯಸಂಧನಾಗಿ ಬದಲಾಗಿರಬೇಕು.  ಆದರೆ ಕಥೆಯ ಜನಪ್ರಿಯ ರೂಪದಲ್ಲಿ ಈ ಭಾಗವನ್ನು ಬಿಟ್ಟೇ ಬಿಡಲಾಗುತ್ತದೆ.  ಇಂದ್ರನ ಆಸ್ಥಾನದಲ್ಲಿ  ವಸಿಷ್ಠನೊಂದಿಗೆ ಹರಿಶ್ಚಂದ್ರನ ಸತ್ಯಸಂಧತೆಯ ಕುರಿತು ವಾಗ್ವಾದ ನಡೆಸುವಾಗ ವಿಶ್ವಾಮಿತ್ರ ಕೂಡ  ಈ ವಿಷಯ ಉಲ್ಲೇಖಿಸುವುದಿಲ್ಲ.

ಚಿತ್ರರಂಗಕ್ಕೂ ಹರಿಶ್ಚಂದ್ರನ ಕಥೆಗೂ ಗಾಢವಾದ ನಂಟಿದೆ. ಚಿತ್ರರಂಗದ ಅನೇಕ ಪ್ರಥಮಗಳಿಗೂ ಈ ಕಥೆ ಸಾಕ್ಷಿಯಾಗಿದೆ.

ಭಾರತೀಯ ಚಿತ್ರರಂಗದ ಪಿತಾಮಹನೆಂದು ಖ್ಯಾತರಾದ ದಾದಾ ಸಾಹೇಬ್ ಫಾಲ್ಕೆ 1913ರಲ್ಲಿ ನಿರ್ಮಿಸಿದ ರಾಜಾ ಹರಿಶ್ಚಂದ್ರ ಭಾರತದ ಮೊದಲ ಕಥಾಚಿತ್ರ ಎಂಬ ಖ್ಯಾತಿಗೊಳಗಾಗಿದೆ. ಲೈಫ್ ಆಫ್ ಕ್ರೈಸ್ಟ್ ಎಂಬ ಪಾಶ್ಚಾತ್ಯ ಚಿತ್ರವನ್ನು ವೀಕ್ಷಿಸುವಾಗ ನಮ್ಮ ದೇವ ದೇವರುಗಳೂ ತೆರೆಯ ಮೇಲೆ ಹೀಗೆ ಕಾಣಿಸಿದರೆ ಎಷ್ಟು ಚೆನ್ನ ಎಂಬ ಆಲೋಚನೆ ಅವರಿಗೆ ಬಂತಂತೆ. ತನ್ನದೆಲ್ಲವನ್ನೂ ಸಿನಿಮಾ ಹುಚ್ಚಿಗಾಗಿ ಮಾರಿಕೊಳ್ಳುತ್ತಿದ್ದ ಫಾಲ್ಕೆ ಅವರನ್ನು ಜನರು ಸತ್ಯ ಹರಿಶ್ಚಂದ್ರ ಎಂದು ಕರೆಯುತ್ತಿದ್ದುದರಿಂದ ರಾಮ ಅಥವಾ ಕೃಷ್ಣನ ಕಥೆಯ ಬದಲಿಗೆ ಈ ಕಥೆಯನ್ನು ಅವರು ಆಯ್ದುಕೊಂಡರಂತೆ.  ಹರಿಶ್ಚಂದ್ರನ ಪತ್ನಿ ಇಲ್ಲಿ ತಾರಾಮತಿ.  ಆಕೆಯ ಪಾತ್ರಕ್ಕೆ ಯಾವ ಸೂಕ್ತ ಸ್ತ್ರೀಯೂ  ಸಿಗದಿದ್ದುದರಿಂದ ಅಣ್ಣಾ ಸಾಲುಂಕೆ ಎಂಬ ನಟ ಆ ಪಾತ್ರದಲ್ಲಿ ನಟಿಸಿದರು.  40 ನಿಮಿಷ ಅವಧಿಯ ಈ ಚಿತ್ರ ಅಂತರ್ಜಾಲದಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸಿನಿಮಾ ರೀಲನ್ನು ವೀಕ್ಷಿಸುತ್ತಿರುವ ಫಾಲ್ಕೆ ಮತ್ತು ಅವರ ನಿರ್ದೇಶನದ ರಾಜಾ ಹರಿಶ್ಚಂದ್ರ ಚಿತ್ರದ ಒಂದು ದೃಶ್ಯ.

1917ರಲ್ಲಿ ಈ ಚಿತ್ರ ಕಲ್ಕತ್ತಾದಲ್ಲಿ ಸತ್ಯವಾದಿ ರಾಜಾ ಹರಿಶ್ಚಂದ್ರ ಎಂಬ ಹೆಸರಲ್ಲಿ ಮರುನಿರ್ಮಾಣವಾಯಿತು. ರುಸ್ತಂಜೀ ಧೋತಿವಾಲಾ ಎಂಬವರು ನಿರ್ದೇಶಿಸಿದ್ದರು. 

ಮೊದಲ ಟಾಕಿ ಚಿತ್ರ ಆಲಂ ಆರಾ ತಯಾರಾದ ಮರುವರ್ಷ ಅಂದರೆ 1932ರಲ್ಲಿ ವಿ. ಶಾಂತಾರಾಮ್ ಅವರು ತನ್ನ ಪ್ರಭಾತ್ ಕಂಪನಿಯ ಮೊದಲ ಟಾಕಿಯಾಗಿ  ಹರಿಶ್ಚಂದ್ರನ ಕಥೆಯನ್ನಾಧರಿಸಿ ಅಯೋಧ್ಯೆ ಚಾ ರಾಜಾ ಎಂಬ ಮರಾಠಿ ಚಿತ್ರ ನಿರ್ಮಿಸಿದರು. ಇದರಲ್ಲಿ ತಾರಾಮತಿಯಾಗಿದ್ದವರು ಪ್ರಸಿದ್ಧ  ನಟಿ ದುರ್ಗಾ ಖೋಟೆ.    ಈ ಕಪ್ಪು ಬಿಳುಪು ಮೂಲ ಚಿತ್ರ ಮತ್ತು ಇತ್ತೀಚೆಗೆ ತಯಾರಾದ   ಬಣ್ಣದ ಆವೃತ್ತಿ  ಎರಡೂ ಅಂತರ್ಜಾಲದಲ್ಲಿ ಇವೆ. ಪುಣೆಯ ರಾಷ್ಟ್ರೀಯ ಚಲನಚಿತ್ರ ಸಂಗ್ರಹಾಗಾರದಲ್ಲಿ ಸಂಭವಿಸಿದ  ಅಗ್ನಿ ಆಕಸ್ಮಿಕದಲ್ಲಿ ಮೊದಲ ಟಾಕಿ ಆಲಂ ಆರಾ ನಾಶವಾಗಿರುವುದರಿಂದ ಲಭ್ಯವಿರುವ ಮೊದಲ ಟಾಕಿ ಚಿತ್ರ ಎಂಬ ಹೆಗ್ಗಳಿಗೆ ಇದಕ್ಕಿದೆ.

ವಿ. ಶಾಂತಾರಾಮ್ ಅವರ ಅಯೋಧ್ಯೇಚಾ ರಾಜಾ ಚಿತ್ರದ ದೃಶ್ಯ.

1935ರಲ್ಲಿ ಟಿ.ಎ. ರಾಮನ್ ಎಂಬವರ ನಿರ್ದೇಶನದಲ್ಲಿ ತೆಲುಗು ಹರಿಶ್ಚಂದ್ರ ನಿರ್ಮಾಣವಾಯಿತು.  ಕೊಲ್ಹಾಪುರದಲ್ಲಿ ತಯಾರಾದ ಇದರಲ್ಲಿ ಮರಾಠಿ ಪ್ರಭಾವ ಹೆಚ್ಚಿತ್ತು.

1943ರಲ್ಲಿ ಎ.ವಿ.ಎಂ ಸಂಸ್ಥೆಯವರು ಆರ್ ನಾಗೇಂದ್ರರಾಯರ ನಿರ್ದೇಶನದಲ್ಲಿ ಕನ್ನಡ ಹರಿಶ್ಚಂದ್ರ ನಿರ್ಮಿಸಿದರು.  ಸುಬ್ಬಯ್ಯ ನಾಯ್ಡು ಹರಿಶ್ಚಂದ್ರ, ಲಕ್ಷ್ಮೀ ಬಾಯಿ ಚಂದ್ರಮತಿ, ಸ್ವತಃ ನಾಗೇಂದ್ರ ರಾವ್ ವಿಶ್ವಾಮಿತ್ರನಾಗಿ ಕಾಣಿಸಿಕೊಂಡರು. ಜಗದೋದ್ಧಾರನ ಖ್ಯಾತಿಯ ಪ್ರಸಿದ್ಧ ಗಾಯಕ ಬಿ.ಎಸ್. ರಾಜಯ್ಯಂಗಾರ್ ನಾರದನ ಪಾತ್ರದಲ್ಲಿ ನಟಿಸಿದ್ದು ಈ ಚಿತ್ರದ ವಿಶೇಷ. ಈ ಚಿತ್ರಕ್ಕೆ ತಮಿಳು ಭಾಷೆಯ ಸಂಭಾಷಣೆಗಳು ಅಳವಡಿಸಲ್ಪಟ್ಟು ಇನ್ನೊಂದು ಭಾಷೆಗೆ ಡಬ್ ಆದ ಮೊದಲ ಭಾರತೀಯ ಚಿತ್ರ ಎಂಬ ದಾಖಲೆ ನಿರ್ಮಾಣವಾಯಿತು.  ಈಗ ಅಂತರ್ಜಾಲದಲ್ಲಿ ಲಭ್ಯವಿರುವ ಈ ಚಿತ್ರದ  ಒಂದಷ್ಟು ಭಾಗದಲ್ಲಿ ತಮಿಳು ಸಂಭಾಷಣೆಗಳಿವೆ!  ಹರಿಶ್ಚಂದ್ರ ಕಾಶಿಗೆ ತಲುಪಿದೊಡನೆ ವಿಶ್ವನಾಥನ ಎದುರು ಹಾಡುವ ಹಾಡು ಭುವನೇಶ್ವರಿಯ ನೆನೆ ಮಾನಸವೇ ಧಾಟಿಯಲ್ಲಿದೆ.

ಆರ್. ನಾಗೇಂದ್ರರಾಯರು ನಿರ್ದೇಶಿಸಿ  ನಟಿಸಿದ 1943ರ ಹರಿಶ್ಚಂದ್ರ ಚಿತ್ರದ ದೃಶ್ಯ.

1955ರಲ್ಲಿ ಮಲಯಾಳಂ ಭಾಷೆಯ ಹರಿಶ್ಚಂದ್ರ ತಯಾರಾಯಿತು. ಇದರಲ್ಲಿ  ಪಿ.ಬಿ. ಶ್ರೀನಿವಾಸ್ ಹಾಡಿದ ಮಹಾನ್ ತ್ಯಾಗಮೇ ಎಂಬ ಹಾಡೊಂದಿದ್ದು  ಇದು ಅವರ ಮೊದಲ ಮಲಯಾಳಂ ಹಾಡು.

1960ರಲ್ಲಿ ಎಸ್.ವಿ. ರಂಗರಾವ್, ಲಕ್ಷ್ಮೀರಾಜ್ಯಂ, ರೇಲಂಗಿ ಮುಂತಾದವರು ಮುಖ್ಯ ಪಾತ್ರಗಳಲ್ಲಿದ್ದ ತೆಲುಗು ಹರಿಶ್ಚಂದ್ರ ಚಿತ್ರ ತಯಾರಾಯಿತು. ಎಸ್. ದಕ್ಷಿಣಾಮೂರ್ತಿ ಅವರ ಸಂಗೀತವಿತ್ತು.  

1963ರಲ್ಲಿ  ಚಿತ್ರರಂಗದ ಹಳೆ ಹುಲಿ ಎಂದು ಖ್ಯಾತರಾಗಿದ್ದ ಪೃಥ್ವಿರಾಜ್ ಕಪೂರ್ ಹರಿಶ್ಚಂದ್ರನ ಪಾತ್ರದಲ್ಲಿ ಕಾಣಿಸಿಕೊಂಡ ಹಿಂದಿ ಹರಿಶ್ಚಂದ್ರ ತಾರಾಮತಿ ಚಿತ್ರ ಬಂತು. ಇದರ ಸಂಗೀತ ನಿರ್ದೇಶಕರು ಆಗ ತಾನೇ ಪಾರಸ್ ಮಣಿ ಚಿತ್ರದ ಮೂಲಕ ಪ್ರಸಿದ್ಧರಾಗತೊಡಗಿದ್ದ ಲಕ್ಸ್ಮೀಕಾಂತ್ ಪ್ಯಾರೇಲಾಲ್. ಅವರ ನಿರ್ದೇಶನದಲ್ಲಿ ಹೇಮಂತ್ ಕುಮಾರ್ ಹಾಡಿದ ಏಕೈಕ  ಹಾಡು ಜಗತ್ ಭರ್ ಕೀ ರೋಶನೀ ಕೆ ಲಿಯೆ ಎಂಬ ಹಾಡು ಇದರಲ್ಲಿತ್ತು.  ಲತಾ ಧ್ವನಿಯ ಮೈ ಎಕ್ ನನ್ಹಾ ಸಾ ಬಚ್ಚಾ ಹೂಂ ಎಂಬ ಹಾಡು ಸಾಕಷ್ಟು ಜನಪ್ರಿಯವಾಗಿ ಬಿನಾಕಾ ಗೀತ್ ಮಾಲಾದಲ್ಲೂ ಕೇಳಿಸಿತ್ತು. ಇದೇ ನಿರ್ಮಾಪಕರು 1970ರಲ್ಲಿ ಪ್ರದೀಪ್ ಕುಮಾರ್ ಅವರನ್ನು ಹರಿಶ್ಚಂದ್ರನನ್ನಾಗಿಸಿ ಮತ್ತೆ ಆ ಚಿತ್ರವನ್ನು ನಿರ್ಮಿಸಿದರು.  ಈ ಸಲ ಸಂಗೀತ ನಿರ್ದೇಶನ ಹೃದಯನಾಥ್ ಮಂಗೇಶ್ಕರ್ ಅವರದಾಗಿತ್ತು.  1955ರಲ್ಲಿ ಮರಾಠಿ ಚಿತ್ರರಂಗ ಪ್ರವೇಶಿಸಿದ್ದ ಅವರ ಮೊದಲ ಹಿಂದಿ ಚಿತ್ರ ಇದಾಗಿರಲೂಬಹುದು.

ಪೃಥ್ವೀರಾಜ್ ಕಪೂರ್ ಹರಿಶ್ಚಂದ್ರನಾಗಿ ನಟಿಸಿದ್ದ ಹರಿಶ್ಚಂದ್ರ ತಾರಾಮತಿ ಹಿಂದಿ ಚಿತ್ರದ ದೃಶ್ಯ.

1968ರಲ್ಲಿ ಶಿವಾಜಿ ಗಣೇಶನ್, ವರಲಕ್ಷ್ಮೀ ಮುಂತಾದವರು ನಟಿಸಿದ್ದ ತಮಿಳು ಹರಿಶ್ಚಂದ್ರ ತೆರೆ ಕಂಡಿತು. ಇದರಲ್ಲಿ ಹರಿಶ್ಚಂದ್ರನ ಪುತ್ರನ ಹೆಸರು ಲೋಹಿದಾಸ. 70ರ ದಶಕದಲ್ಲೂ ತೆಲುಗಿನಲ್ಲಿ ಸಿ.ಎಸ್. ರಾವ್ ನಿರ್ದೇಶನದಲ್ಲಿ ಒಂದು ಕಲರ್ ಸತ್ಯ ಹರಿಶ್ಚಂದ್ರ ತಯಾರಾಯಿತು.

1965ರ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ರಾಜಕುಮಾರ್, ಪಂಢರಿಬಾಯಿ ಮತ್ತು ಬೇಬಿ ಪದ್ಮಿನಿ.

ಇವೆಲ್ಲಕ್ಕಿಂತ ಮಿಗಿಲಾಗಿ 1965ರಲ್ಲಿ ವಿಜಯಾ ಸಂಸ್ಥೆಯವರು ಕನ್ನಡ ಮತ್ತು ತೆಲುಗಿನಲ್ಲಿ ಏಕ ಕಾಲದಲ್ಲಿ ಆದರೆ ವಿಭಿನ್ನ ತಾರಾಗಣದೊಡನೆ ನಿರ್ಮಿಸಿದ ಸತ್ಯ ಹರಿಶ್ಚಂದ್ರವೇ ನಾವೀಗ ಮುಖ್ಯವಾಗಿ ಚರ್ಚಿಸಲಿರುವ ಚಿತ್ರ. ಈ ಹಿಂದೆ ವಿಜಯಾ ಸಂಸ್ಥೆಯವರು ತಮ್ಮ ಮಾಯಾಬಜಾರ್ ಮತ್ತು ಜಗದೇಕವೀರನ ಕಥೆ ತೆಲುಗು ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿದ್ದರು.  ಆದರೆ 60ರ ದಶಕದಲ್ಲಿ ಡಬ್ಬಿಂಗ್ ವಿರುದ್ಧ ಪ್ರಬಲ ಪ್ರತಿರೋಧ ವ್ಯಕ್ತವಾಗತೊಡಗಿದ ಹಿನ್ನೆಲೆಯಲ್ಲಿ ಈ ರೀತಿ ಬೇರೆ ಬೇರೆಯಾಗಿ ನಿರ್ಮಿಸುವ ನಿರ್ಧಾರ ಕೈಗೊಂಡಿರಬಹುದು.  ಕನ್ನಡದಲ್ಲಿ ರಾಜಕುಮಾರ್, ಪಂಡರಿಬಾಯಿ, ನರಸಿಂಹರಾಜು, ಉದಯಕುಮಾರ್, ಅಶ್ವತ್ಥ್, ಎಂ.ಪಿ. ಶಂಕರ್ ಮುಂತಾದವರು ಮುಖ್ಯ ಪಾತ್ರಗಳಲ್ಲಿದ್ದರೆ ತೆಲುಗಿನಲ್ಲಿ ಎನ್.ಟಿ. ರಾಮರಾವ್,  ವರಲಕ್ಷ್ಮೀ,  ಮುಕ್ಕಾಮಲ, ರಮಣ ರೆಡ್ಡಿ ಮುಂತಾದವರು ನಟಿಸಿದ್ದರು.  ಕನ್ನಡದಲ್ಲಿ ಸಂಭಾಷಣೆ, ಹಾಡುಗಳ ಹೊಣೆ ಹೊತ್ತವರು ಹುಣಸೂರು ಕೃಷ್ಣಮೂರ್ತಿ.  ತೆಲುಗಿನಲ್ಲಿ ಪಿಂಗಳಿ ನಾಗೇಂದ್ರ ರಾವ್. ಕನ್ನಡದಲ್ಲಿ ನಿರ್ದೇಶಕರೂ ಹುಣಸೂರರೇ ಆದರೂ ತೆಲುಗಿನಲ್ಲಿ ಕೆ.ವಿ.ರೆಡ್ಡಿ ಅವರ ಹೆಸರಿದೆ. ಪಾತ್ರಗಳ ವೇಷ ಭೂಷಣ,  ಹಾವ ಭಾವ, ಆಗಮನ ನಿರ್ಗಮನ, ಸಂಭಾಷಣೆ ಒಪ್ಪಿಸುವ ರೀತಿ ಎಲ್ಲವೂ ಕನ್ನಡಿಯೊಳಗಿನ ಬಿಂಬ ಪ್ರತಿಬಿಂಬದಂತೆ ಇವೆ. ಹೀಗಾಗಿ ಕನ್ನಡವನ್ನು ತೆಲುಗು ಅನುಸರಿಸಿತೋ ಅಥವಾ ತೆಲುಗನ್ನು ಕನ್ನಡವೋ ಹೇಳುವುದು ಕಷ್ಟ. ಆದರೆ ರಾಜಕುಮಾರ್ ಪಾತ್ರ ನಿರ್ವಹಣೆಯ ಮುಂದೆ ತನ್ನದು ಸಪ್ಪೆ ಎಂದು ಸ್ವತಃ ಎನ್.ಟಿ.ಆರ್ ಒಪ್ಪಿ ರಾಜ್ ಅವರನ್ನು ಅಪ್ಪಿಕೊಂಡಿದ್ದರಂತೆ. ಈ ಚಿತ್ರದ ನಕ್ಷತ್ರಿಕನ ಪಾತ್ರ ನರಸಿಂಹರಾಜು ಅವರಿಗೆ ಹೇಳಿ ಮಾಡಿಸಿದಂಥದ್ದು. ಚಂದ್ರಮತಿ ಮತ್ತು ಲೋಹಿತಾಶ್ವನನ್ನು ಕೊಂಡುಕೊಳ್ಳುವ ಕಾಲಕೌಶಿಕನ ಪಾತ್ರದಲ್ಲಿ ಬಾಲಕೃಷ್ಣ ಇದ್ದಿದ್ದರೆ ಗಯ್ಯಾಳಿ ಕಲಹಕಂಠಿಯಾಗಿದ್ದ ರಮಾದೇವಿಗೆ ಸರಿಯಾದ ಈಡುಜೋಡಾಗುತ್ತಿತ್ತು. ಆದರೆ ಇಲ್ಲಿ ಎಂ.ಎಸ್. ಸುಬ್ಬಣ್ಣ ಆ ಪಾತ್ರದಲ್ಲಿದ್ದಾರೆ. ಅವರ ನಿರ್ವಹಣೆಯೂ  ಚೆನ್ನಾಗಿಯೇ ಇದೆ. ಇವರು ಉತ್ತಮ ಮೇಕಪ್ ಕಲಾವಿದ ಕೂಡ ಆಗಿದ್ದು ಮೇಕಪ್ ಸುಬ್ಬಣ್ಣ ಎಂದು ಕರೆಸಿಕೊಳ್ಳುವುದೇ ಹೆಚ್ಚು. ಆಗಲೇ ತಾಯಿಯ ಪಾತ್ರಗಳಿಗೆ ಬ್ರಾಂಡ್ ಆಗಿದ್ದ ಪಂಡರಿಬಾಯಿ ಅವರನ್ನು ಚಂದ್ರಮತಿಯ ರೂಪದಲ್ಲಿ ರಾಜ್‌ಕುಮಾರ್ ಎದುರು ನಾಯಕಿಯಾಗಿ ಆರಿಸಿದ್ದು ಒಂದು ಅಚ್ಚರಿಯ ಆದರೆ ಅತ್ಯಂತ ಸೂಕ್ತ ನಿರ್ಧಾರವೇ. ರಾಜ್ ಅವರ ಮೊದಲ ಚಿತ್ರ ಬೇಡರ ಕಣ್ಣಪ್ಪ ಚಿತ್ರದಲ್ಲಿ ಪಂಡರಿಬಾಯಿಯೇ ನಾಯಕಿಯಾಗಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.  ಹುಣಸೂರರ ಅಳಿಯ ದ್ವಾರಕೀಶ್ ಕಾಲಕೌಶಿಕನ ಶಿಷ್ಯನೊಬ್ಬನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯಾ ಸಂಸ್ಥೆಯ ಕಾಯಂ ಛಾಯಾಗ್ರಾಕರಾಗಿದ್ದವರು ಮಾರ್ಕಸ್ ಬಾರ್ಟ್ಲೆ ಎಂಬವರು. ಆದರೆ ಈ ಚಿತ್ರಕ್ಕೆ  ಕನ್ನಡದಲ್ಲಿ ಮಾಧವ ಬುಲ್‌ಬುಲೆ, ತೆಲುಗಿನಲ್ಲಿ ಕಮಲ್ ಘೋಷ್ ಆ ಹೊಣೆ ಹೊತ್ತರು. ಈ ರೀತಿ ಛಾಯಾಗ್ರಾಹಕರು ಬೇರೆ ಬೇರೆ ಇರುವುದರಿಂದ ಎರಡು ಭಾಷೆಯ ದೃಶ್ಯಗಳನ್ನು ಸರದಿಯಂತೆ ಒಟ್ಟೊಟ್ಟಿಗೆ ಚಿತ್ರಿಸದೆ ಸೆಟ್ಟುಗಳನ್ನು ಹಾಗೆಯೇ ಇಟ್ಟುಕೊಂಡು ಪ್ರತ್ಯೇಕವಾಗಿ ಚಿತ್ರಿಸಿದ್ದರು ಎಂದು ಊಹಿಸಬಹುದು. ರಾಘವಾಂಕನ  ಕಾವ್ಯವನ್ನಾಧರಿಸಿದ ಈ ಚಿತ್ರದಲ್ಲಿ  ಹರಿಶ್ಚಂದ್ರನ ಪತ್ನಿಯ ಹೆಸರು ಉತ್ತರಭಾರತದ ಚಿತ್ರಗಳಲ್ಲಿದ್ದಂತೆ ತಾರಾಮತಿ ಎಂದಿರದೆ ಚಂದ್ರಮತಿ  ಎಂದಿತ್ತು.  ಪುತ್ರ ಲೋಹಿತಾಶ್ವ ಅಥವಾ ರೋಹಿತಾಶ್ವ ಆಗಿರದೆ ಲೋಹಿತಾಸ್ಯ ಆಗಿದ್ದ.  ಪುರಾಣ ಭಾರತ ಕೋಶ ಮತ್ತು ಪುರಾಣ ನಾಮ ಚೂಡಾಮಣಿಗಳಲ್ಲಿ ಲೋಹಿತಾಸ್ಯ ಎಂಬ ಹೆಸರು ಉಕ್ತವಾಗಿಲ್ಲ. ಈ ಪಾತ್ರದಲ್ಲಿದ್ದದ್ದು ಬೇಬಿ ಪದ್ಮಿನಿ.

ಚಿತ್ರದ ಸಂಗೀತ ನಿರ್ದೇಶಕರು ಪೆಂಡ್ಯಾಲ ನಾಗೇಶ್ವರ ರಾವ್. ರಾಜಕುಮಾರ್ ಅವರ ಅಧಿಕೃತ ಧ್ವನಿಯಾಗಿ ಪಿ.ಬಿ. ಶ್ರೀನಿವಾಸ್ ಗುರುತಿಸಲ್ಪಟ್ಟಿದ್ದರೂ ಈ ಚಿತ್ರದಲ್ಲಿ ಅವರಿಗಾಗಿ ಘಂಟಸಾಲ ಎಲ್ಲ ಹಾಡುಗಳನ್ನು ಹಾಡಿದರು. ಅದಕ್ಕೆ ಮೊದಲು ಓಹಿಲೇಶ್ವರ, ಹರಿಭಕ್ತ, ಸತಿಶಕ್ತಿ, ಗಾಳಿ ಗೋಪುರ, ಮುರಿಯದ ಮನೆ ಮುಂತಾದ ಚಿತ್ರಗಳಲ್ಲಿ ಕೂಡ ಘಂಟಸಾಲ ಅವರು ರಾಜ್ ಧ್ವನಿಯಾಗಿದ್ದುದರಿಂದ ಇದೇನೂ ಅಸಹಜ ಅನ್ನಿಸಲಿಲ್ಲ. 60ರ ದಶಕದ ಕೊನೆ ವರೆಗೆ ಈ ಚಿತ್ರದ ಹಾಡುಗಳೆಲ್ಲ ರೇಡಿಯೊ ನಿಲಯಗಳಿಂದ ಆಗಾಗ ಪ್ರಸಾರವಾಗುತ್ತಿದ್ದವು.  70ರ ದಶಕದಲ್ಲಿ ರೇಡಿಯೊ ಸೇರಿದಂತೆ ಮಾಧ್ಯಮಗಳೆಲ್ಲ  ಒಂದಿಬ್ಬರು ಗಾಯಕರ ಅತಿಯಾದ ಓಲೈಕೆ ಆರಂಭಿಸಿದಾಗ ಇತರ ಹಳೆ ಹಾಡುಗಳೊಂದಿಗೆ  ಇವುಗಳೂ ಹಿನ್ನೆಲೆಗೆ ಸರಿದವು.  ಆದರೆ 80ರ ದಶಕದಲ್ಲಿ ಎಚ್.ಎಂ.ವಿ ಸಂಸ್ಥೆಯವರು ಮತ್ತೆ ಹಳೆ ಚಿತ್ರಗಳ ಹಾಡುಗಳನ್ನು ಕ್ಯಾಸೆಟ್ ರೂಪದಲ್ಲಿ ಬಿಡುಗಡೆ ಮಾಡಲಾರಂಭಿಸಿದರು. ಖ್ಯಾತ ಧ್ವನಿಮುದ್ರಿಕೆಗಳ ಸಂಗ್ರಹಣಕಾರ ವಿ.ಎ.ಕೆ ರಂಗರಾವ್(ಗಮನಿಸಿ - ಎಂ. ರಂಗರಾವ್ ಅಲ್ಲ) ಅವರ ಮುತುವರ್ಜಿಯಲ್ಲಿ ಸತ್ಯ ಹರಿಶ್ಚಂದ್ರ  ಚಿತ್ರದ ಪ್ರಮುಖ ಸಂಭಾಷಣೆ,  ಕಂದಪದ್ಯ, ಶ್ಲೋಕ, ಬಳಕೆಯಾದ ರಾಗಗಳ ವಿವರ ಸಮೇತ ಎಲ್ಲ ಹಾಡುಗಳನ್ನೊಳಗೊಂಡ ಕ್ಯಾಸೆಟ್  ಮಾರುಕಟ್ಟೆಗೆ ಬಂದು ಅಭಿಮಾನಿಗಳ ಸಂಗ್ರಹ ಸೇರಿತು. 

ರಾಜಕುಮಾರ್ ಅಭಿನಯದ ಕನ್ನಡ ಸತ್ಯ ಹರಿಶ್ಚಂದ್ರ ಪ್ರತೀ ಸಲ ಮರು ಬಿಡುಗಡೆಯಾದಾಗ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿತ್ತು. ಹಿಂದಿಯಲ್ಲಿ ಮುಗಲ್-ಎ-ಆಜಮ್ ಮತ್ತು ನಯಾ ದೌರ್ ಮೂಲಕ ಕಪ್ಪು ಬಿಳುಪು ಚಿತ್ರಗಳಿಗೆ   ಕೃತಕವಾಗಿ ವರ್ಣ ಸಂಸ್ಕರಣ ಮಾಡುವ ಪರಿಪಾಠ ಆರಂಭವಾಗಿತ್ತು.. ಇದರಿಂದ ಉತ್ತೇಜಿತರಾದ  ರಾಜ್ ಅಭಿಮಾನಿ ಕೆ.ಸಿ.ಎನ್ ಗೌಡ ಅವರು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸತ್ಯ ಹರಿಶ್ಚಂದ್ರವನ್ನೂ ವರ್ಣರಂಜಿತಗೊಳಿಸುವ ಸಾಹಸಕ್ಕೆ ಕೈ ಹಾಕಿದರು. ಒಂದೊಂದಾಗಿ ಪ್ರತಿ ಫ್ರೇಮಿಗೆ ಬಣ್ಣ ಬಳಿಯುವ  ಈ ಮಹಾಕಾರ್ಯವನ್ನು ಕ್ಯಾಲಿಫೋರ್ನಿಯಾದ ಗೋಲ್ಡ್ ಸ್ಟೋನ್ ಕಂಪನಿ ಕೈಗೆತ್ತಿಕೊಂಡಿತು.  ಆಡಿಯೊವನ್ನು ಈಗಿನ DTS ಸಿಸ್ಟಮಿಗೆ ಹೊಂದುವಂತೆ ಪರಿವರ್ತಿಸಲಾಯಿತು.  2008ರಲ್ಲಿ ಬಿಡುಗಡೆಯಾದ ಈ ಕಲರ್ ವರ್ಷನ್ ಥಿಯೇಟರುಗಳಲ್ಲಿ ಹೇಗೆ ನಿರ್ವಹಣೆ ಮಾಡಿತೆಂದು ಗೊತ್ತಿಲ್ಲ.  ಮಂಗಳೂರಿನಲ್ಲಿ ಕೆಲವು ದಿನ ಮಾತ್ರ ಇತ್ತೆಂದು ನೆನಪು.  ನನಗೆ ನೋಡುವ ಅವಕಾಶವಾಗಲಿಲ್ಲ. ಈಗ ಟಿ.ವಿ.ಯಲ್ಲಿ  ಆಗಾಗ ಪ್ರಸಾರವಾಗುವ ಅದನ್ನು ನೋಡಿ ನನಗೆ ಅನ್ನಿಸಿದ ಪ್ರಕಾರ  ಕಪ್ಪು ಬಿಳುಪಿನಲ್ಲಿ ಇದ್ದ ಆತ್ಮ ಕಲರಿನಲ್ಲಿ ಕಳೆದು ಹೋಗಿತ್ತು. ವೆಸ್ಟ್ರೆಕ್ಸ್ ಸೌಂಡ್ ಸಿಸ್ಟಮಿನಲ್ಲಿ ಧ್ವನಿಮುದ್ರಿತವಾಗಿದ್ದ ಮೂಲ ಆಪ್ಟಿಕಲ್  ಆಡಿಯೋದ ಸ್ಪಷ್ಟತೆ ಕೂಡ DTS ಪರಿವರ್ತನೆಯಲ್ಲಿ ಬಾಧಿತವಾಗಿತ್ತು. ಕಪ್ಪು ಬಿಳುಪನ್ನೇ ಮತ್ತೆ ನೋಡೋಣ ಎಂದರೆ ಅಂತರ್ಜಾಲದಲ್ಲಿದ್ದ ಅದು ಮಾಯವಾಗಿ ಬಿಟ್ಟಿತ್ತು.  ಅಂಗಡಿಗಳಲ್ಲಿ ಕಪ್ಪು ಬಿಳುಪಿನ CD ಹುಡುಕಾಟವೂ ವ್ಯರ್ಥವಾಯಿತು.  ಕೊನೆಗೆ ಒಂದು ಆನ್ ಲೈನ್ ಅಂಗಡಿಯಲ್ಲಿ ಕಪ್ಪು ಬಿಳುಪು CD ಲಭ್ಯ ಇರುವ ಸೂಚನೆ ಸಿಕ್ಕಿತು.  ತಡ ಮಾಡದೆ  ಆರ್ಡರ್ ಮಾಡಿದರೆ  ಅದು ಔಟ್ ಆಫ್ ಸ್ಟಾಕ್ ಎಂದು ದುಡ್ಡು ಹಿಂದೆ ಬಂತು! ಸುಮಾರು ಎರಡು ವರ್ಷದ ಪ್ರಯತ್ನದ ನಂತರ ಇತ್ತೀಚೆಗೆ ಫೇಸ್ ಬುಕ್ ಫ್ರೆಂಡ್ ಒಬ್ಬರ ಮೂಲಕ ಕಪ್ಪು ಬಿಳುಪು CD ನನ್ನ ಕೈ ಸೇರಿ ಸ್ಪಟಿಕದಂತೆ ಸ್ಪಷ್ಟವಾದ ಆಡಿಯೊ ಆಲಿಸುವ ನನ್ನ ಬಹುಕಾಲದ ಬಯಕೆ ನೆರವೇರಿದಂತಾಗಿ ಈ ಹಿಂದೆ ಒಮ್ಮೆ ಬೆಂಗಳೂರಿನ ಶಾಂತಿ, ಮತ್ತೊಮ್ಮೆ ಮಂಗಳೂರಿನ ಪ್ಲಾಟಿನಮ್ ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗಿದ್ದ ಚಿತ್ರ ನೋಡಿದ್ದ ನೆನಪು ಮರುಕಳಿಸಿತು. ಈ ಮೂಲಕ ಫೇಸ್ ಬುಕ್ ಮಿತ್ರರೆಲ್ಲ ಲೈಕ್ ಒತ್ತಿ ಕಮೆಂಟ್ ಬರೆಯಲು ಮಾತ್ರ ಇರುವವರಲ್ಲ ಎಂದೂ ಸಾಬೀತಾಯಿತು.  

ಈಗ ಮೂಲ ಕಪ್ಪು ಬಿಳುಪು ಚಿತ್ರದಿಂದ ಧ್ವನಿಮುದ್ರಿಸಿದ  ಹಾಡುಗಳನ್ನು ಅವುಗಳ ವಿಶೇಷತೆ ಗಮನಿಸುತ್ತಾ  ಆಲಿಸೋಣ. ಅನುಕೂಲ ಇದ್ದರೆ ಹೆಡ್ ಫೋನ್ ಬಳಸಿ. ನಿಮ್ಮಲ್ಲಿ ಕಲರ್ ಚಿತ್ರದ CD ಇದ್ದರೆ ಅಥವಾ ಸುವರ್ಣ ವಾಹಿನಿಯಲ್ಲಿ ಅದನ್ನು ನೋಡಿದ್ದರೆ ಆಡಿಯೋ ಗುಣಮಟ್ಟವನ್ನು ಹೋಲಿಸಿ ನೋಡಿ.  ಇನ್ನು ಮುಂದೆ ಯಾರಾದರೂ ಕಪ್ಪು ಬಿಳುಪು ಚಿತ್ರಗಳನ್ನು ಕಲರ್ ಮಾಡುವುದಿದ್ದರೆ ಮೂಲ ಆಪ್ಟಿಕಲ್ ಸೌಂಡ್ ಟ್ರಾಕನ್ನು ಹಾಗೆಯೇ ಉಳಿಸಿಕೊಳ್ಳಿ ಎಂದು ನನ್ನ ವಿನಮ್ರ ವಿನಂತಿ.

01. ವಂದೇ ಸುರಾಣಾಂ

ಚಿತ್ರ ಆರಂಭವಾಗುವುದು ಕುಲದೇವರ ಎದುರು ಹರಿಶ್ಚಂದ್ರ ಹಾಡುವ ಈ ಶ್ಲೋಕದಿಂದ.  ಬಹುತೇಕ ಕನ್ನಡ ಚಿತ್ರಗಳಲ್ಲಿ ಟೈಟಲ್ಸ್ ಆರಂಭವಾಗುವ ಮೊದಲು ದೇವರ ವಿಗ್ರಹದೆದುರು ಹೂ ಹಣ್ಣು ಕಾಯಿ ಇಟ್ಟು ಅಗರಬತ್ತಿ ಹೊತ್ತಿಸಿರುವ ದೃಶ್ಯದೊಡನೆ ಒಂದು ಶ್ಲೋಕ ಇದ್ದೇ ಇರುತ್ತದೆ.  ಆದರೆ ಈ ಶ್ಲೋಕ ಟೈಟಲ್ಸ್ ಮುಗಿದು ಚಿತ್ರ ಆರಂಭವಾಗುವಾಗ ಇರುವುದು. ಆರಭಿ ರಾಗದ ಈ ಶ್ಲೋಕವನ್ನು ನಾನು ಎಷ್ಟು ಸಮಾರಂಭಗಳಲ್ಲಿ ಪ್ರಾರ್ಥನೆಯಾಗಿ ಮತ್ತು ಭೋಜನ ಸಮಾರಂಭಗಳಲ್ಲಿ ಚೂರ್ಣಿಕೆಯಾಗಿ ಹಾಡಿ ಮೆಚ್ಚುಗೆ ಗಳಿಸಿದ್ದೇನೆಂದು ಲೆಕ್ಕವಿಲ್ಲ. ಈ ಚಿತ್ರದ ಟೈಟಲ್ಸ್ ಜೊತೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮೊದಲು ಕಲಿಯುವ ಮಾಯಾಮಾಳವಗೌಳ ರಾಗದ ಸರಳ ವರಸೆ ಜಂಟಿ ವರಸೆಗಳು ಇರುವುದು ಒಂದು ವಿಶೇಷ.

 02. ತಿಲ್ಲಾನ

ದೇವೇಂದ್ರನ ಆಸ್ಥಾನದಲ್ಲಿ ವಿಶ್ವಾಮಿತ್ರ ಮತ್ತು ವಸಿಷ್ಠರ ನಡುವೆ ಜಿದ್ದಾಜಿದ್ದಿ ಆರಂಭವಾಗುವ ಮೊದಲು ಮೇನಕೆ ನರ್ತಿಸುತ್ತಿರುವ ತಿಲ್ಲಾನ ಇದು. ಸಾರಮತಿ ರಾಗದಲ್ಲಿ ಪಿ. ಲೀಲಾ ಹಾಡಿದ ಇದರಲ್ಲಿ ಚಿತ್ರದ ನೃತ್ಯ ನಿರ್ದೇಶಕ ಪಸುಮರ್ತಿ ಕೃಷ್ಣಮೂರ್ತಿ ಅವರ ಚುರುಕು ನಾಲಗೆಯ ಜತಿಗಳಿವೆ. ಕುಳಿತ ಹಕ್ಕಿ ಹಾರುವಂತೆ ಮೃದಂಗ ನುಡಿಸಿದ ವಿದ್ವಾಂಸ ಯಾರೆಂದು ತಿಳಿಯದು.  ಸಾಮಾನ್ಯ ನೃತ್ಯ ಪ್ರದರ್ಶನಗಳಲ್ಲಿ ತಿಲ್ಲಾನ ಪ್ರದರ್ಶಿಸುವಾಗ ಮೊದಲ ಸಾಲನ್ನು ಕೇಳುಗರಿಗೆ ಬೋರಾಗುವಷ್ಟು ಬಾರಿ ಪುನರಾವರ್ತನೆ ಮಾಡುತ್ತಾರೆ.  ಆದರೆ ಇಲ್ಲಿ ಹಾಗೆ ಮಾಡದೆ ವಿವಿಧ ವಾದ್ಯಗಳನ್ನು ಬಳಸಿದ ವೈವಿಧ್ಯ ಇದೆ.  ಕಲರ್ ಚಿತ್ರದಲ್ಲಿ ಈ ಹಾಡಿನ ಒಂದು ತುಣುಕಷ್ಟೇ ಇದೆ.

03. ನೀನು ನಮಗೆ ಸಿಕ್ಕಿ ಬಿದ್ದೆಯೋ

ಹರಿಶ್ಚಂದ್ರನನ್ನು ಬಲೆಗೆ ಬೀಳಿಸಲು ವಿಶ್ವಾಮಿತ್ರ ಸೃಷ್ಟಿಸಿದ ಮಾತಂಗ ಕನ್ಯೆಯರ ಜಾನಪದ ಶೈಲಿಯ ಹಾಡಿದು.  ಪಿ. ಲೀಲಾ ಮತ್ತು ಪಿ. ಸುಶೀಲಾ ಹಾಡಿದ್ದಾರೆ.  ಡೋಲು, ತಮ್ಮಟೆ, ಕೊಳಲು ಮುಂತಾದ ಜಾನಪದ ವಾದ್ಯಗಳನ್ನೇ ಬಳಸಲಾಗಿದೆ.

04. ಏನಿದೀ ಗ್ರಹಚಾರವೋ

ಕೋಲು ಕೊಟ್ಟು ಹೊಡೆಸಿಕೊಂಡಂತೆ ವಿಶ್ವಾಮಿತ್ರ ಕೇಳದಿದ್ದರೂ ರಾಜ್ಯವನ್ನು ಬಿಟ್ಟುಕೊಡುತ್ತೇನೆಂದು ಹರಿಶ್ಚಂದ್ರ ತಾನಾಗಿಯೇ ಹೇಳಿ ಸತಿಸುತರ ಜೊತೆ ಕಾಡಿಗೆ ತೆರಳುವಾಗ  ವಸೂಲಿಗಾಗಿ ಅವರನ್ನು ಹಿಂಬಾಲಿಸುವ ನಕ್ಷತ್ರಿಕ ನರಸಿಂಹರಾಜುವಿನ ಈ ಹಾಡು ಘಂಟಸಾಲ ಹಾಡಿರುವುದು.  ಆತ ತನ್ನ ಕಷ್ಟಗಳನ್ನೇ ಹೇಳಿಕೊಳ್ಳುವುದಾದರೂ ಅಪರೋಕ್ಷವಾಗಿ ಇದು ಹರಿಶ್ಚಂದ್ರನ ಕಷ್ಟಗಳ ಪ್ರತಿಧ್ವನಿಯೂ ಹೌದು.

05. ಆನಂದ ಸದನ

ಸುಖ ಸೌಭಾಗ್ಯದ ಕೊನೆಯ ಗುಟುಕಾಗಿ  ರಾಜಕುಮಾರ ಲೋಹಿತಾಸ್ಯನನ್ನು  ಅರಮನೆಯಲ್ಲಿ ಓಲೈಸುವ   ಅಂದದ ಈ ಹಾಡು ಪಿ. ಸುಶೀಲಾ ಅವರ ಧ್ವನಿಯಲ್ಲಿದೆ. ಹೆಡ್ ಫೋನ್ ಬಳಸಿದರೆ ತಬಲಾ ಎಡದ ಕುಸುರಿ ಕೆಲಸವನ್ನೂ ಆಲಿಸಬಹುದು. ಚಿತ್ರದ ಅಂತಿಮ ಭಾಗದಲ್ಲಿ ಪಿ. ಲೀಲಾ ಧ್ವನಿಯಲ್ಲಿ ಈ ಹಾಡಿನ sad version ಕೂಡ ಇದೆ. 

06. ನಮೋ ಭೂತನಾಥ

ಕಾಶಿ ತಲುಪಿದೊಡನೆ ಹರಿಶ್ಚಂದ್ರನು ವಿಶ್ವನಾಥನನ್ನು ಸ್ತುತಿಸುವ ದರ್ಬಾರಿ ಕಾನಡಾ ರಾಗಾಧಾರಿತ ಜನಪ್ರಿಯ ಹಾಡಿದು.  ಘಂಟಸಾಲ, ಪಿ. ಲೀಲಾ ಹಾಡಿದ್ದಾರೆ.  ಘಂಟಸಾಲ ಅವರು ಪೆಂಡ್ಯಾಲ ಅವರದೇ ನಿರ್ದೇಶನದಲ್ಲಿ ಜಗದೇಕವೀರನ ಕಥೆ ಚಿತ್ರದಲ್ಲಿ ಹಾಡಿದ ಇದೇ ರಾಗದ ಶಿವಶಂಕರಿಗೆ ಹೋಲಿಸಿದರೆ ಇದು ಬಹಳ ಸರಳ ರಚನೆ ಅನಿಸುತ್ತದೆ. ಇದರಲ್ಲಿ ಯಾವುದೇ ಕ್ರಿಯಾಪದವಿಲ್ಲದೆ ಸಂಸ್ಕೃತ ವಿಶೇಷಣಗಳು ಮಾತ್ರ ಇರುವುದರಿಂದ ಇದು ಯಾವ ಭಾಷೆಗೂ ಸಲ್ಲುತ್ತದೆ. ಹೀಗಾಗಿ ಇದನ್ನು ತೆಲುಗು ಮತ್ತು ಕನ್ನಡಕ್ಕೆಂದು ಪ್ರತ್ಯೇಕವಾಗಿ ಧ್ವನಿಮುದ್ರಿಸುವ ಅಗತ್ಯವೇ ಬಂದಿರಲಾರದು. ಆದರ್ಶ ಸತಿ ಚಿತ್ರದ ನಮೋ ನಮೋ ನಟರಾಜಾ ಇಂಥ ಇನ್ನೊಂದು ಭಾಷಾತೀತ ಹಾಡು. ಅನೇಕರಿಗೆ ಈ ಹಾಡಿನಲ್ಲಿ   ಇದೇ ರಾಗದ  ಮೊಹಬ್ಬತ್ ಕಿ ಝೂಟಿ ಕಹಾನಿ ಪೆ ರೋಯೆ ಎಂಬ ಮುಗಲ್ ಎ ಆಜಮ್ ಚಿತ್ರದ ಹಾಡಿನ  ಹೋಲಿಕೆ ಕಾಣಿಸುವುದುಂಟು. ಒಮ್ಮೆ ನಮ್ಮೂರಿಗೆ ಬಂದಿದ್ದ ಏಕ ಕಾಲದಲ್ಲಿ ಬಾಯಲ್ಲಿ ಮುಖವೀಣೆ ಮತ್ತು ಪುಂಗಿಯ ಶ್ರುತಿ, ಮೂಗಿನಲ್ಲಿ ಕೊಳಲು ನುಡಿಸುವವರೊಬ್ಬರು ಈ ಹಾಡು ನುಡಿಸಿದ್ದು ನನಗೆ ಯಾವಾಗಲೂ ನೆನಪಾಗುತ್ತಿರುತ್ತದೆ. ಅಂಜನಪ್ಪ ಎಂಬ ಇಂಥ ಕಲಾವಿದರೊಬ್ಬರ ಬಗ್ಗೆ ಒಮ್ಮೆ ಪತ್ರಿಕೆಗಳಲ್ಲಿ ಬಂದಿತ್ತು.

07. ಕಾಲಕೌಶಿಕನ ಮುಂದೆ

ವಾಸ್ತವವಾಗಿ ಅಮ್ಮಾವ್ರ ಗಂಡನಾಗಿರುವ ಕಾಲಕೌಶಿಕ ತನ್ನ ಶಿಷ್ಯರ ಮುಂದೆ ಬಡಾಯಿ ಕೊಚ್ಚಿಕೊಳ್ಳುವ ಹಾಸ್ಯಭರಿತ ಹಾಡಿದು. ಇದನ್ನು ಹಾಡಿದ್ದು ರಾಜನ್ ನಾಗೇಂದ್ರ ಜೋಡಿಯ ನಾಗೇಂದ್ರ ಎಂದು ಬಹಳ ಕಾಲ ನನಗೆ ಗೊತ್ತೇ ಇರಲಿಲ್ಲ. ತೆಲುಗಿನಲ್ಲಿ ಇದನ್ನು ಹಾಡಿದ್ದು ಮಾಧವಪೆದ್ದಿ ಸತ್ಯಂ. ವಿವಾಹ ಭೋಜನವಿದು, ಭಲೇ ಚಾನ್ಸಿದೇ ಮುಂತಾದ ಹಾಡುಗಳಲ್ಲಿ ನಾವು ನೋಡಿದಂತೆ ಅವರು ಬಹಳ ಚೆನ್ನಾಗಿ ಕನ್ನಡದಲ್ಲೂ ಹಾಡಬಲ್ಲವರಾದರೂ ರೆಕಾರ್ಡಿಂಗ್ ಸಮಯದಲ್ಲಿ ಅಲಭ್ಯರಿದ್ದುದರಿಂದ ನಾಗೇಂದ್ರ ಅವರನ್ನು ಬಳಸಿರಬಹುದೋ ಏನೋ. 

08.  ಕುಲದಲ್ಲಿ ಕೀಳ್ಯಾವುದೋ

ವೀರಬಾಹು ತನ್ನ ಸಂಗಡಿಗರೊಂದಿಗೆ ಮೊದಲ ಬಾರಿ ಕಾಣಿಸಿಕೊಳ್ಳುವ ಸನ್ನಿವೇಶದ ಬಹಳ ಜನಪ್ರಿಯವಾದ ಈ ಹಾಡನ್ನು ಘಂಟಸಾಲ ಮತ್ತಿತರರು ಬಲು ಉತ್ಸಾಹಭರಿತವಾಗಿ ಹಾಡಿದ್ದಾರೆ. ಪ್ರತಿ ಪದವು ನೇರವಾಗಿ ಮನಕ್ಕೆ ನಾಟುವಂಥ ವಾಯ್ಸ್ ಥ್ರೋ ಇರುವ ಈ ಹಾಡಲ್ಲಿ. ತಮ್ಮಟೆ, ಡೋಲುಗಳು ಮಾತ್ರ ಬಳಕೆಯಾಗಿದ್ದು ಯಾವುದೇ ತಂತಿ ಅಥವಾ  ಗಾಳಿವಾದ್ಯದ ಬಳಕೆಯಾಗದಿರುವುದು ಮತ್ತು interludeಗಳು ಇಲ್ಲದಿರುವುದು ಗಮನಾರ್ಹ. ಸರಳ ಪದಗಳಲ್ಲಿ ಹುಣಸೂರರು ಈ ಹಾಡಿನಲ್ಲಿ ಜೀವನದ ಅಂತಿಮ ಸತ್ಯವನ್ನು ತೆರೆದಿಟ್ಟಿದ್ದಾರೆ. 1960ರಲ್ಲಿ  ತೆಲುಗಿನಲ್ಲಿ ಬಂದ ಎಸ್.ವಿ. ರಂಗರಾವ್ ನಟನೆಯ ಹರಿಶ್ಚಂದ್ರ ಚಿತ್ರದ ಬಹಳಷ್ಟು ಅಂಶಗಳಿಂದ ಈ ಚಿತ್ರ ಸ್ಪೂರ್ತಿ ಪಡೆದಿರುವುದು ಕಂಡುಬರುತ್ತದೆ.  ಅದರಲ್ಲೂ ವೀರಬಾಹು  ತಮ್ಮಟೆ ನುಡಿಸುತ್ತಾ ಇದೇ ರೀತಿಯ ಹಾಡಿನೊಂದಿಗೆ ಪ್ರವೇಶಿಸುತ್ತಾನೆ.

09. ನನ್ನ ನೀನು ನಿನ್ನ ನಾನು

ವೀರಬಾಹುವಿನೆದುರು ನರ್ತಕಿಯೋರ್ವಳು ಹಾಡುವ ಇದು ಸ್ವರ್ಣಲತಾ ಅವರ ಧ್ವನಿಯಲ್ಲಿದೆ. ಮಾಯಾ ಬಜಾರ್ ಚಿತ್ರದ ಆಹಾ ನನ್ ಮದ್ವೆಯಂತೆ ಕೂಡ ಇವರೇ ಹಾಡಿದ್ದು. ಜೊತೆಗೆ ಜಗನ್ನಾಥ್ ಎಂಬವರ ಮಾತುಗಳೂ ಇವೆ. ಇದರ ಕೊನೆಯಲ್ಲಿ ಬರುವ ‘ಯೀರದಾಸ ಹೆಂಗೈತೆ’ ಎಂಬ ಸಾಲೂ ಪ್ರಾಮುಖ್ಯ ಹೊಂದಿದೆ.  ಧಣಿ ವೀರಬಾಹುವಿನ ಸೇವೆ ಮಾಡುತ್ತಾ ಅಲ್ಲೇ ಇದ್ದರೂ ಹರಿಶ್ಚಂದ್ರ ಆ ನೃತ್ಯ ನೋಡಿರುವುದಿಲ್ಲ. ಇದರ ಗ್ರಾಮೊಫೋನ್ ರೆಕಾರ್ಡಿನಲ್ಲಿ ಮಳೆಗಾಲ ಮಾಡಿಳಿದು ಬರಲಾರೆ ಆದ ಮೇಲೆ ಮೆಲ್ಲನೆ ಬಾರಯ್ಯಾ ಗೋಡೆ ಏರಿ ಎಂಬ ಸಾಲು ಇತ್ತು. ಚಿತ್ರದಲ್ಲಿರುವ ಹಾಡಲ್ಲಿ ಇದಿಲ್ಲ.  ಈ ಹಾಡಿನೊಂದಿಗೆ ತಳಕು ಹಾಕಿಕೊಂಡ ಹಳೆಯ ನೆನಪೊಂದಿದೆ. ಪುಟ್ಟ ಮಗುವಾಗಿದ್ದಾಗ ನಮ್ಮ ಅಣ್ಣನ ಮಗನೊಬ್ಬನಿಗೆ ಅಮ್ಮನನ್ನು ಕಂಡಾಗಲೆಲ್ಲ ಹಾಲುಣ್ಣುವ ಆಸೆ. ಆಗಾಗ ನಮ್ಮ ಮನೆಗೆ ಬಂದು  ಎಲೆಯಡಿಕೆ ಮೆಲ್ಲುತ್ತಾ ಪುಟ್ಟ ಮಕ್ಕಳನ್ನು ಆಡಿಸುವ ಹವ್ಯಾಸವಿದ್ದ ನೆರೆಮನೆಯ ಮಹನೀಯರೊಬ್ಬರು ‘ನನ್ನ ನೀನು ನಿನ್ನ ನಾನು ಕಾದು ಕೊಂಡು  ಅಮ್ಮು ತಿಂದೆ’ ಎಂದು ಅವನನ್ನು ಕಿಚಾಯಿಸುತ್ತಿದ್ದರು!

10. ವಿಧಿ ವಿಪರೀತ

ವಿಧಿವಿಲಾಸವನ್ನು ಬಣ್ಣಿಸುವ ಈ ವೈವಿಧ್ಯಪೂರ್ಣ ಹಾಡು ಘಂಟಸಾಲ ಮತ್ತು ಪಿ. ಲೀಲಾ ಅವರ ಧ್ವನಿಗಳಲ್ಲಿದೆ. ಚಿತ್ರದ ಅತ್ಯಂತ ದೀರ್ಘ ಹಾಡಾದ ಇದು ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದಿರಬಹುದು. ವಿವಿಧ ಭಾವಗಳ ಒಂದು ಕೊಲಾಜ್‌ನಂತಿರುವ  ಈ ಹಾಡು ಶಾರ್ಟ್ ವೇವ್ ವಿವಿಧಭಾರತಿಯ ಮಧುರಗೀತಂ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು.

11. ಶ್ರಾದ್ಧದೂಟ ಸುಮ್ಮನೆ

ಮಾಯಾ ಬಜಾರ್ ಚಿತ್ರದ ವಿವಾಹ ಭೋಜನವಿದು ಹಾಡಿನ ಜನಪ್ರಿಯತೆಯಿಂದ ಈ ಹಾಡು ಪ್ರೇರೇಪಿತವಾಗಿರಬಹುದು.  ವಿವಾಹ ಭೋಜನ ಹಾಡಿನಲ್ಲಿ ಬಣ್ಣಿಸಲ್ಪಟ್ಟ ಭಕ್ಷಗಳೆಲ್ಲ ಪರದೆಯ ಮೇಲೆ ವಸ್ತುಶಃ ಕಾಣಿಸಿಕೊಳ್ಳುತ್ತವೆ.  ಆದರೆ ಇಲ್ಲಿ ಎಲ್ಲವೂ ಮನಸ್ಸಿನ ಮಂಡಿಗೆ ಮಾತ್ರ.  ಜನಪ್ರಿಯವಾಗಬೇಕಾದರೆ  ಪ್ರಸಿದ್ಧ ಗಾಯಕರೇ ಹಾಡಬೇಕೆಂದೇನೂ ಇಲ್ಲ ಎಂದು ಸಾಬೀತುಗೊಳಿಸಿದ ಹಾಡೂ ಹೌದು ಇದು.  ಇದನ್ನು ಹಾಡಿದವರು ಹೆಸರೇ ಕೇಳಿರದ ಬಿ.ಗೋಪಾಲಂ ಎಂಬವರು ಮತ್ತು ಹೆಸರೇ ದಾಖಲಾಗದ ಇನ್ನೂ ಒಂದಿಬ್ಬರು. ಒಂದೆರಡು ಕಡೆ ನಟ ದ್ವಾರಕೀಶ್ ಅವರ ಧ್ವನಿಯನ್ನು ಕೇಳಿದಂತೆನಿಸಿತು. ಈ ಚಿತ್ರದ ಉಳಿದ ಹಾಡುಗಳಲ್ಲಿ ಭಾರತೀಯ ವಾದ್ಯಗಳನ್ನು ಮಾತ್ರ ಬಳಸಲಾಗಿದ್ದರೂ ಈ ಒಂದರಲ್ಲಿ ಫ್ಯಾಂಟಸಿಯ ಪ್ರತೀಕವಾಗಿ ಗಿಟಾರ್, ಟ್ರಂಪೆಟ್ ಇತ್ಯಾದಿಗಳೂ ಇವೆ. ಕಲರ್ ಚಿತ್ರದಲ್ಲಿ ಈ ಹಾಡಿದ್ದೂ ಒಂದು ತುಣುಕು ಮಾತ್ರ ಇರುವುದು. ಮೇಲೆ ಉಲ್ಲೇಖಿಸಿದಂತೆ ಅಡಿಗೆ ಮನೆಯಿಂದ  ಇಂಗು ತೆಂಗು ತಿರುವಿ ಬೆರೆತ ದಿವಿಹಲಸಿನ ಹುಳಿ ಕುದಿಯುತ್ತಿರುವ ಸುವಾಸನೆ ತೇಲಿ ಬರುತ್ತಿದ್ದುದು ಪದ್ಯಾವಳಿಯಲ್ಲಿ ಈ ಹಾಡು ನೋಡುತ್ತಿರುವಾಗಲೇ! ಬಹಳಷ್ಟು ಹಳೆ ಪದ್ಯಾವಳಿಗಳು ನನ್ನ ಸಂಗ್ರಹದಲ್ಲಿದ್ದರೂ ಇದೊಂದು ಈಗ ಎಲ್ಲೋ ಕಳೆದು ಹೋಗಿದೆ.


ಕೆಳಗಿನ ಪಟ್ಟಿಯಲ್ಲಿ ಕ್ಲಿಕ್ಕಿಸಿ ಇವೆಲ್ಲ ಹಾಡುಗಳನ್ನು ಒಂದೊಂದಾಗಿ ಆಲಿಸಿ.


 

Thursday 12 November 2020

ಗೂಡುದೀಪ



ಮಾರುಕಟ್ಟೆಯಲ್ಲಿ ವೈವಿಧ್ಯಮಯ ಗೂಡುದೀಪಗಳು ಕೊಳ್ಳಲು ಸಿಗುತ್ತವಾದರೂ ಈ ಸಲ ದೀಪಾವಳಿಗೆ ಸರಳ ಸಾಂಪ್ರದಾಯಿಕ ಗೂಡುದೀಪವನ್ನು ಮನೆಯಲ್ಲೇ ತಯಾರಿಸಬೇಕೆಂಬ ಉಮೇದು ನನಗೆ ಬಂತು. ಇದಕ್ಕೆ ಬಿದಿರಿನ ಸಪೂರ ಕಡ್ಡಿಗಳು ಬೇಕಾಗುತ್ತವೆ. ನಾನೆಲ್ಲಿಂದ ಅವುಗಳನ್ನು ತರಲಿ? ಅದಕ್ಕೆ ಯಾವುದು ಪರ್ಯಾಯ ಎಂದು ಯೋಚಿಸುತ್ತಿರುವಾಗ ಮನೆಯೊಳಗೆ ಸೇವೆ ಮಾಡಿ ಅರ್ಧ ಸವೆದು ಈಗ ಟೇರೇಸ್ ಗುಡಿಸಲು ಬಳಕೆಯಾಗುತ್ತಿದ್ದ ಮನೆಯಲ್ಲೇ ತಯಾರಿಸಿದ ಗಟ್ಟಿಮುಟ್ಟಾದ ತೆಂಗಿನ ಕಡ್ಡಿಗಳ ಕಸಬರಿಕೆ ಕಣ್ಣಿಗೆ ಬಿತ್ತು. ಅದರಿಂದ ಬೇಕಾಗುವಷ್ಟು ನೇರ ಕಡ್ಡಿಗಳನ್ನು ಆಯ್ದು, ತೊಳೆದು, ಅಳತೆಗೆ ತಕ್ಕಂತೆ ತುಂಡರಿಸಿ ಪ್ರಾಜೆಕ್ಟ್ ಆರಂಭಿಸಿಯೇ ಬಿಟ್ಟೆ. ಕಡ್ಡಿಗಳನ್ನು ಬಿಗಿಯಾಗಿ ಕಟ್ಟಲು ಬಳಸಿದ ಟ್ವೈನ್ ದಾರದ ಶಕ್ತಿವರ್ಧನೆ ಮಾಡಲು ಟೆಲಿಫೋನ್ ಇಲಾಖೆಯಲ್ಲಿ ಕಲಿತ ದಾರಕ್ಕೆ ಮಯಣ ಸವರುವ ವಿದ್ಯೆಯನ್ನು ಪ್ರಯೋಗಿಸಿದೆ. ಅರ್ಧ ದಿನದಲ್ಲಿ ಗೂಡುದೀಪದ ಗೂಡು ತಯಾರಾಯಿತು. ಬಣ್ಣದ ಕಾಗದ ಕತ್ತರಿಸಿ ಹಚ್ಚಲು ಇನ್ನರ್ಧ ದಿನ ಬೇಕಾಯಿತು. ಎಂದೋ ತಂದಿದ್ದ ಫೆವಿಕಾಲ್ ಲಭ್ಯ ಇದ್ದುದರಿಂದ ಹೈಸ್ಕೂಲಿನಲ್ಲಿ ಕಲಿತಂತೆ ಮೈಲುತುತ್ತು ಬೆರೆಸಿದ ಮೈದಾ ಅಂಟು ತಯಾರಿಸುವ ಅಗತ್ಯ ಬೀಳಲಿಲ್ಲ.

ನಾವೇನೋ ಈಗ ಸುಲಭವಾಗಿ ವಿದ್ಯುತ್ ದೀಪವೊಂದನ್ನು ಒಳಗಿರಿಸಿ ಗೂಡುದೀಪವನ್ನು ಮಾಡಿನ ಅಂಚಿಗೆ ನೇತು ಹಾಕುತ್ತೇವೆ. ಹಿಂದಿನ ಕಾಲದಲ್ಲಿ ಎಣ್ಣೆಯ ದೀಪವನ್ನು ಒಳಗಿರಿಸಲು ಅನುಕೂಲವಾಗುವಂತೆ ಗೂಡುದೀಪದೊಳಗೆ ಮಣ್ಣು ಮತ್ತು ಸೆಗಣಿ ಬೆರೆಸಿ ಕಟ್ಟೆಯೊಂದನ್ನು ಕಟ್ಟುತ್ತಿದ್ದರು. ನಮ್ಮಣ್ಣ ಎತ್ತರ ಪ್ರದೇಶದಲ್ಲಿರುವ ಎತ್ತರವಾದ ಮರಕ್ಕೆ ಇನ್ನೂ ಎತ್ತರವಾದ ಗಳುವೊಂದನ್ನು ಕಟ್ಟಿ ಅದರ ತುದಿಗೆ ಅಳವಡಿಸಿದ ರಾಟೆಯೊಂದರ ಮೂಲಕ ಉದ್ದವಾದ ಹಗ್ಗವೊಂದರ ಸಹಾಯದಿಂದ ಎಣ್ಣೆ ತುಂಬಿದ ದೀಪದೊಂದಿಗಿನ ಗೂಡುದೀಪವನ್ನು ಸಂಜೆ ಮನೆಯಂಗಳದಿಂದಲೇ ಮೇಲೇರಿಸಿ ಮರುದಿನ ಬೆಳಗ್ಗೆ ಕೆಳಗಿಳಿಸುವ ವ್ಯವಸ್ಥೆ ಮಾಡುತ್ತಿದ್ದರು. ಆ ಗೂಡುದೀಪ ಎಷ್ಟು ಎತ್ತರದಲ್ಲಿರುತ್ತಿತ್ತು ಎಂದು ಯಾರಾದರೂ ಕೇಳಿದರೆ ಸತ್ಯ ಹರಿಶ್ಚಂದ್ರ ಚಿತ್ರದ ನಕ್ಷತ್ರಿಕ ನರಸಿಂಹರಾಜುವಿನಂತೆ ‘ಒಂದು ಮಹೋನ್ನತವಾದ ಆನೆಯ ಮೇಲೆ ದೀರ್ಘಕಾಯನೂ ಬಲಶಾಲಿಯೂ ಆದ ಮನುಷ್ಯನೊಬ್ಬನು ನಿಂತು ಒಂದು ಕವಡೆಯನ್ನು ರಿವ್ವನೆ ಆಕಾಶಕ್ಕೆ ರಿವ್ವಿದರೆ ಎಷ್ಟು ಎತ್ತರಕ್ಕೆ ಹೋಗುತ್ತದೋ ಅಷ್ಟು’ ಎಂದು ಹೇಳಬೇಕಾದೀತು! ಕೆಲವೊಮ್ಮೆ ಅನಿರೀಕ್ಷಿತವಾಗಿ ಮಳೆ ಬಂದರೆ ರಾತ್ರೆಯೇ ಅದನ್ನು ಕೆಳಗಿಳಿಸುವ ಪ್ರಸಂಗವೂ ಬರುವುದಿತ್ತು.

ಈಗ ದೀಪಾವಳಿ ಸಮಯದಲ್ಲಷ್ಟೇ ಗೂಡುದೀಪಗಳು ಕಾಣಿಸುವುದಾದರೂ ಹಿಂದಿನ ಕಾಲದಲ್ಲಿ ಕೋಜಾಗರಿ ಹುಣ್ಣಿಮೆಯಿಂದ ಮೊದಲುಗೊಂಡು ದೀಪಾವಳಿ ನಂತರದ ಕಾರ್ತೀಕ ಹುಣ್ಣಿಮೆವರೆಗೂ ಗೂಡುದೀಪ ಇರಿಸುವ ಪದ್ಧತಿ ಇತ್ತು. ಈ ಸಮಯದಲ್ಲಿ ಪಿತೃಲೋಕದಲ್ಲಿ ಅಂಧಕಾರ ಕವಿದಿರುವುದರಿಂದ ಪೂರ್ವಜರಿಗೆ ಈ ಮೂಲಕ ಬೆಳಕು ಲಭಿಸಲಿ ಎಂಬುದು ಇದರ ಹಿಂದಿರುವ ನಂಬುಗೆ. ಇದು ಹಗಲು ಸಣ್ಣದಾಗುತ್ತಾ ಹೋಗಿ ಇರುಳು ದೊಡ್ಡದಾಗುವ ಕಾಲವಾಗಿರುವುದು ಈ ನಂಬುಗೆಯ ವೈಜ್ಞಾನಿಕ ಹಿನ್ನೆಲೆ ಇರಬಹುದು. ದೀಪಾವಳಿಯ ಹಣತೆಗಳು, ಕಾರ್ತೀಕ ದೀಪೋತ್ಸವ ಇವೆಲ್ಲವೂ ಇದಕ್ಕೆ ಪೂರಕ. ಗೂಡುದೀಪವನ್ನು ಏರಿಸುವಾಗ
ದಾಮೋದರಾಯ ನಭಸಿ ತುಲಾಯಾಂದೋಲಯಾ ಸಹ|
ಪ್ರದೀಪಂ ತೇ ಪ್ರಯಚ್ಛಾಮಿ ನಮೋನಂತಾಯ ವೇಧಸೇ||

ಎಂಬ ಶ್ಲೋಕವನ್ನು ಉಚ್ಚರಿಸುವ ಸಂಪ್ರದಾಯವೂ ಇದೆ.

ಈ ಹಿಂದೆ ದೀಪದ ಶಾಖದಿಂದ ತಾನಾಗಿ ತಿರುಗುವ ದುಂಡನೆಯ ಗೂಡುದೀಪ ನಾನು ತಯಾರಿಸಿದ್ದುಂಟು. ಆದರೆ ಸಾಂಪ್ರದಾಯಿಕ ಗೂಡುದೀಪ ತಯಾರಿಗೆ ಕೈ ಹಚ್ಚಿದ್ದು ಇದೇ ಮೊದಲು. ಅದು ಎಣಿಸಿದಷ್ಟು ಸುಲಭ ಅಲ್ಲವೆಂದು ಮನದಟ್ಟಾಯಿತು. ಆದರೆ ಕಸ(ಬರಿಕೆ)ದಿಂದ ರಸ ಬರಿಸಿದ ಸಮಾಧಾನವೂ ದೊರಕಿತು.

ಈ ರೀತಿಯ ಗೂಡುದೀಪ ಸ್ವತಃ ತಯಾರಿಸಲು ಇಚ್ಛಿಸುವವರಿಗಾಗಿ DIY ಮಾದರಿಯ ಸಚಿತ್ರ ವಿವರಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.

ಬೇಕಾಗುವ ಸಾಮಗ್ರಿಗಳು.
ಸುಮಾರು 10" ಉದ್ದದ  ಬಿದಿರು, ಅಡಿಕೆ ಸಿಬ್ಬೆ ಅಥವಾ ನಾನು ಬಳಸಿದಂತೆ ತೆಂಗಿನ ಸೋಗೆಯ ಗಟ್ಟಿಯಾದ ಮತ್ತು ನೇರವಾದ ಸಪುರ ಕಡ್ಡಿಗಳು - 32.
ಇಂಥದೇ ಸುಮಾರು 14" ಉದ್ದದ ಕಡ್ಡಿಗಳು - 8.
ಟ್ವೈನ್ ದಾರ.
ದಾರಕ್ಕೆ ಸವರಲು ಜೇನು ಮಯಣ ಅಥವಾ ಕ್ಯಾಂಡಲ್.
ವಿವಿಧ ಬಣ್ಣದ ಟಿಷ್ಯೂ ಕಾಗದಗಳು - 5
ಕಾಗದ ಅಂಟಿಸಲು ಫೆವಿಕಾಲ್ ಅಥವಾ ಮೈದಾ ಅಂಟು.
ಮತ್ತು ಬಹಳಷ್ಟು ತಾಳ್ಮೆ!
 
1. 10 ಇಂಚಿನ ನಾಲ್ಕು ನಾಲ್ಕು ಕಡ್ಡಿಗಳ ತುದಿಗಳನ್ನು ಮಯಣ ಸವರಿದ ಟ್ವೈನ್ ದಾರದಿಂದ ಬಿಗಿಯಾಗಿ ಕಟ್ಟಿ ಚಿತ್ರದಲ್ಲಿರುವಂತೆ 8 ಚೌಕಾಕಾರಗಳನ್ನು ತಯಾರಿಸಬೇಕು. ದಾರಕ್ಕೆ ಮಯಣ ಸವರುವುದರಿದ  ಅದರ ಶಕ್ತಿ ಹೆಚ್ಚುತ್ತದೆ. ಕಡ್ಡಿಗಳ ಹೆಚ್ಚು ಭಾಗ ದಾರದ ಗಂಟುಗಳಿಂದ ಹೊರಗೆ  ಉಳಿಯದ ಹಾಗೆ ಜಾಗ್ರತೆ ವಹಿಸಬೇಕು.
 
2. ಅವುಗಳಲ್ಲಿ ನಾಲ್ಕು ಚೌಕಗಳ ಮೂಲೆಯಿಂದ ಮೂಲೆಗೆ ಚಿತ್ರದಲ್ಲಿರುವಂತೆ 16 ಇಂಚಿನ ಕಡ್ಡಿಯನ್ನು ಎರಡೂ ಬದಿಯಲ್ಲಿ ಸಮಾನ ಭಾಗ ಹೊರಗುಳಿಯುವಂತೆ ಕಟ್ಟಬೇಕು.
 
3. ಈ ನಾಲ್ಕು ಚೌಕಗಳ ಉದ್ದ ಕಡ್ಡಿ ಕಟ್ಟದಿರುವ B ಮೂಲೆಯನ್ನು  Cಗೆ,   Dಯನ್ನು   Eಗೆ,  Fನ್ನು  Gಗೆ ಮತ್ತು   Hನ್ನು Aಗೆ ಜೋಡಿಸಬೇಕು. 
4. ಆಗ ದೊರಕಿದ ಆಕಾರದ ಮೇಲ್ಭಾಗಕ್ಕೆ  ಮತ್ತು ಕೆಳಭಾಗಕ್ಕೆ  ಮೊದಲೇ ಸಿದ್ಧಪಡಿಸಿಟ್ಟಿರುವ 2 +2 ಚೌಕಗಳನ್ನು  ಅಳವಡಿಸಿ ಟ್ವೈನ್ ದಾರದಿಂದ ಕಟ್ಟಿದಾಗ ಹೀಗೆ ಕಾಣಿಸುತ್ತದೆ.
 
5. ಕೆಳಗಿನಿಂದ ಎರಡನೆಯ ಮತ್ತು ಮೇಲಿನಿಂದ ಎರಡನೆಯ ಚೌಕಗಳ ಮೂಲೆಯಿಂದ ಮೂಲೆಗೆ ಎರಡೆರಡು ಉದ್ದದ ಕಡ್ಡಿಗಳನ್ನು ಕಟ್ಟಬೇಕು. ಇವು ಗೂಡುದೀಪದ ಆಕಾರಕ್ಕೆ ದೃಢತೆ ಒದಗಿಸುವುದಷ್ಟೆ ಅಲ್ಲದೆ  ಮೇಲ್ಗಡೆಯ ಕಡ್ಡಿಗಳು ಬಲ್ಬು ತೂಗಾಡಿಸಲೂ ಉಪಯೋಗವಾಗುತ್ತವೆ. ಎಣ್ಣೆಯ ದೀಪ ಇರಿಸುವ ಇಚ್ಛೆ ಇದ್ದರೆ ಕೆಳಗಡೆ ಚೌಕಕ್ಕೆ ಮೂರು ಮೂರು ಹೆಚ್ಚುವರಿ ಕಡ್ಡಿಗಳನ್ನು ಕಟ್ಟಬಹುದು.

ಕೆಳಗಿನ ಚಿತ್ರಗಳು ನಾಲ್ಕೂ ಪಾರ್ಶ್ವಗಳ ನೋಟವನ್ನು ಸ್ಪಷ್ಟವಾಗಿ ತೋರಿಸುತ್ತವೆ.
 
6.  ಇನ್ನು ಬಣ್ಣದ ಕಾಗದಗಳನ್ನು ಹಚ್ಚುವ ಕೆಲಸ.  ಅದಕ್ಕಿಂತ ಮೊದಲು ಗೂಡುದೀಪವನ್ನು ತೂಗಾಡಿಸಲಿಕ್ಕಾಗಿ ಮೇಲಿನ ಚೌಕದ ಮೂಲೆಯಿಂದ ಮೂಲೆಗೆ ಸೂಕ್ತ ಅಳತೆಯ ಗಟ್ಟಿಯಾದ ಹಗ್ಗವೊಂದನ್ನು ಕಟ್ಟಬೇಕು. ಬಣ್ಣದ ಕಾಗದವನ್ನು ಬೇಕಿದ್ದ ಅಳತೆಗೆ ನಾಜೂಕಾಗಿ ಕತ್ತರಿಸಿಕೊಳ್ಳಬೇಕು. ಮೊದಲು 1, 2, 3 ಮತ್ತು 4ನೇ ಚೌಕಗಳಿಗೆ ಒಂದಕ್ಕೊಂದು contrast ಇರುವ ಬಣ್ಣ ಆಯ್ದುಕೊಳ್ಳಬೇಕು.  ಅಂಟನ್ನು ಪೇಪರ್ ಅಂಚಿನ ಬದಲು ಕಡ್ಡಿಗಳಿಗೆ ಹಚ್ಚುವುದು ಅನುಕೂಲಕರ. ನಂತರ 8 ತ್ರಿಕೋಣಾಕಾರಗಳಿಗೆ ಅಕ್ಕಪಕ್ಕದಲ್ಲಿ ಒಂದೇ ಬಣ್ಣ ಬರದಂತೆ ಎಚ್ಚರವಹಿಸಿ ಕಾಗದ ಅಂಟಿಸಬೇಕು.  ನಂತರ ಮೇಲಿನ 4 ಮತ್ತು ಕೆಳಗಿನ 4 ಚಿಕ್ಕ ಆಯತಾಕಾರಗಳಿಗೆ ಸೂಕ್ತ ಬಣ್ಣದ ಕಾಗದ ಅಂಟಿಸಿದರೆ ಮುಖ್ಯ ಕೆಲಸ ಮುಗಿದಂತೆ.  ಗೂಡುದೀಪವನ್ನು ನೆಲದ ಮೇಲಿರಿಸಿಯೇ ಇಷ್ಟು ಕೆಲಸವನ್ನು ಮಾಡುವುದು ಅನುಕೂಲಕರ. ನಂತರ ಅದನ್ನು ಕೊಕ್ಕೆಯೊಂದಕ್ಕೆ ತೂಗಾಡಿಸಿ assorted ಬಣ್ಣಗಳ ಪೇಪರ್ ಪಟ್ಟಿಗಳನ್ನು ಕೆಳಭಾಗದ ಆಯತಾಕಾರದ ಒಳಭಾಗಕ್ಕೆ ಬಾಲಗಳಂತೆ ಅಂಟಿಸಿದಾಗ ನಿಮ್ಮ ಸರಳ ಸಾಂಪ್ರದಾಯಿಕ ಗೂಡು ದೀಪ ರೆಡಿ. ಮೂಲೆಗಳಿಗೆ ಹೂವಿನಾಕಾರಗಳನ್ನು ಅಂಟಿಸುವುದು, ಅಂಚುಗಳಿಗೆ ಬೇರೆ ಬಣ್ಣದ ಪಟ್ಟಿಗಳನ್ನು ಹಚ್ಚುವುದು ಮುಂತಾದ ಎಷ್ಟೂ ಅಲಂಕರಣಗಳನ್ನು ನಿಮ್ಮ ಕಲ್ಪನೆಯ ಪ್ರಕಾರ ಮಾಡಬಹುದು.