Saturday, 3 December 2016

ಒಂದು ಗ್ರೂಪ್ ಫೋಟೊದ ಸುತ್ತ



ಯಾವುದಾದರೂ ಸಮಾರಂಭದಲ್ಲಿ ಕುಟುಂಬದ ಎಲ್ಲರನ್ನೂ ಒಂದು ಗ್ರೂಪ್ ಫೋಟೊಗಾಗಿ ಒಟ್ಟುಗೂಡಿಸುವುದು ಎಷ್ಟು ಕಷ್ಟ ಎಂದು ಎಲ್ಲರಿಗೂ ಗೊತ್ತಿದೆ.  ಹಾಗಿರುವಾಗ ಇಲ್ಲದಿರುವವರೂ ಇರುವ ಒಂದು ಗ್ರೂಪ್ ಫೋಟೊ ಬೇಕೆಂದಾದರೆ?  ಇಲ್ಲಿ ಆದದ್ದು ಹಾಗೆಯೇ. ನಾವು ಐದು ಜನ ಅಣ್ಣ ತಮ್ಮಂದಿರು ಮತ್ತು ಐದು ಜನ ಅಕ್ಕ ತಂಗಿಯರು ತಂದೆ ತಾಯಿಗಳೊಟ್ಟಿಗಿರುವ ಫೋಟೊ ತೆಗೆಸಿಟ್ಟುಕೊಳ್ಳುವ  ಸಂದರ್ಭ ಮತ್ತು ಸೌಲಭ್ಯ ನಮಗೆ ಒದಗಿರಲಿಲ್ಲ.  ಈಗ ತಂದೆ-ತಾಯಿ, ಮೂವರು ಹಿರಿ ಅಣ್ಣಂದಿರು ಮತ್ತು ಮೂವರು  ಅಕ್ಕಂದಿರು ನಮ್ಮೊಂದಿಗಿಲ್ಲ. ಹೀಗಾಗಿ ಈ ಒಂದು ಆಸೆ ಕನಸಿನ ಗಂಟಾಗಿಯೇ ಉಳಿದಿತ್ತು.  ಆದರೆ ಮನಸ್ಸಿದ್ದರೆ ಮಾರ್ಗವಿದೆಯಲ್ಲವೇ.  ಪೂನಾದಲ್ಲಿರುವ ನಮ್ಮಣ್ಣ ಮತ್ತು ನಾನು  ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಸಂಯುಕ್ತ ಪ್ರಯತ್ನದಿಂದ 7 ಬೇರೆ ಬೇರೆ ಫೋಟೊಗಳನ್ನು ಸಂಯೋಜಿಸಿ ಕೊನೆಗೂ ನಮ್ಮದೊಂದು ಗ್ರೂಪ್ ಫೋಟೊ ತಯಾರಿಸಿಯೇ ಬಿಟ್ಟೆವು!  ಇದನ್ನು ನೋಡಿದಾಗ ಕೂಡು ಕುಟುಂಬದ ಭಾಗವಾಗಿ ಕಳೆದ ಆ ದಿನಗಳ ನೆನಪುಗಳು ಸಿನಿಮಾ ರೀಲಿನಂತೆ ಬಿಚ್ಚಿಕೊಳ್ಳತೊಡಗುತ್ತವೆ.  ಫೋಟೊದಲ್ಲಿರುವ ಒಬ್ಬೊಬ್ಬರ ಪರಿಚಯದ ಮೂಲಕ ರೀಲಿನ ಕೆಲವು ದೃಶ್ಯಗಳನ್ನು ನೋಡೋಣ.

ಕುಳಿತವರಲ್ಲಿ ಎಡದಿಂದ ಮೊದಲನೆಯವರು ನಮ್ಮ ದೊಡ್ಡ ಅಕ್ಕ ಕಮಲಾ.  ನಾನು ಹುಟ್ಟುವ ಮೊದಲೇ ಅವರು ವಿವಾಹವಾಗಿ ಹೋಗಿದ್ದರಿಂದ ನನಗೆ ಅವರಿಗಿಂತ ನನ್ನ ಸಮಕಾಲೀನರಾದ ಅವರ ಮಕ್ಕಳ ಒಡನಾಟವೇ ಜಾಸ್ತಿ. ಆದರೂ ನನ್ನ ಮೇಲೆ ಅವರಿಗೆ ವಿಶೇಷ ಅಭಿಮಾನ ಕೊನೆ ವರೆಗೂ ಇತ್ತು.   ನಿಂತವರಲ್ಲಿ ಬಲಗಡೆಯಿಂದ ಮೊದಲನೆಯವರು ನಮ್ಮ ದೊಡ್ಡ ಅಣ್ಣ ನಾರಾಯಣ.  ಅವರೂ ನಾನು ಜನಿಸುವ ಮೊದಲೇ ಕಾರ್ಯ ನಿಮಿತ್ತ ಬೇರೆ ಬಿಡಾರ ಹೂಡಿದ್ದರಿಂದ ಮುಂದೆ ಕಾಲೇಜು ದಿನಗಳಲ್ಲಿ ಅವರೊಂದಿಗಿದ್ದರೂ ಬಾಲ್ಯದಲ್ಲಿ ಆಗೊಮ್ಮೆ ಈಗೊಮ್ಮೆ ಮಾತ್ರ ಅವರ ಸಂಪರ್ಕ ಇರುತ್ತಿತ್ತು. ತಮ್ಮ ತಾರುಣ್ಯದಲ್ಲಿ ವಜ್ರಾದಪಿ ಕಠೋರಾಣಿ ಎಂದು  ನಮಗೆ ಅನ್ನಿಸಿದರೂ ನಾವು ಬೆಳೆದಂತೆ ಅವರೂ ಮೃದೂನಿ ಕುಸುಮಾದಪಿ ಆಗಿದ್ದರು. ಇನ್ನುಳಿದವರೆಲ್ಲರೂ ನನ್ನ ಕಾಲದಲ್ಲಿ ಬಹಳ ವರ್ಷ ಒಂದೇ ಸೂರಿನಡಿ ಇದ್ದವರು.  ಅಂಥಿಂಥ ಸೂರಲ್ಲ ಅದು.  14ಕ್ಕೂ ಹೆಚ್ಚು ನಿರ್ದಿಷ್ಟ ಹೆಸರು ಹೊಂದಿದ್ದ ಹಜಾರ, ಕೋಣೆ, ಜಗಲಿಗಳನ್ನು ಒಳಗೊಂಡ ಮೂರಂಕಣದ ಬೃಹತ್ ಮಹಡಿ ಸಂಕೀರ್ಣ. ಮಣ್ಣಿನ ದಪ್ಪ ಗೋಡೆಗಳು, ಅಡಿಕೆ ಸೋಗೆ ಹೊಚ್ಚಿದ ಬೆಚ್ಚಗಿನ ಮಾಡು. ಹುಡುಗರ ಪೈಕಿ ಎಲ್ಲರಿಗಿಂತ ಚಿಕ್ಕವನಾದ ನನಗೆ ಈ ಸೂರಿನಡಿಯಲ್ಲಿ ತಂದೆ ತಾಯಿ ಮಾತ್ರವಲ್ಲ,  ಅಣ್ಣ ಅತ್ತಿಗೆಯಂದಿರು ಹಾಗೂ ಅಕ್ಕಂದಿರ ಛತ್ರ ಛಾಯೆಯಲ್ಲಿ ಬಾಲ್ಯವನ್ನು ಕಳೆಯುವ ಅವಕಾಶ  ಪ್ರಾಪ್ತವಾಗಿತ್ತು. 

ಕುಳಿತವರಲ್ಲಿ ಎಡದಿಂದ ಎರಡನೆಯವರಾದ ನಮ್ಮ ತಂದೆ ಬಾಲಕೃಷ್ಣ ನಾರಾಯಣ ಕಾಕತ್ಕರ್  ಈ ಮನೆಯ ಜನರಲ್ ಮ್ಯಾನೇಜರ್ .  ಅವರಿಗೆ ಕೃಷಿ, ಹೈನುಗಾರಿಕೆ, ಪೌರೋಹಿತ್ಯಗಳಲ್ಲಿ ಸಮಾನ ಪರಿಣಿತಿ ಇತ್ತು.  ಹೈನುಗಾರಿಕೆ ಅವರಿಗೆ ಚೆನ್ನಾಗಿ ಕೂಡಿಯೂ ಬರುತ್ತಿತ್ತು. ಅವರ ಕಾಲದಲ್ಲಿ ಹಟ್ಟಿ ತುಂಬ ಎಮ್ಮೆ, ದನ, ಕರುಗಳು ಇರುತ್ತಿದ್ದು  ಕೆಲಸದಾಳುಗಳು ಬಾಯಾರಿಕೆಗಾಗಿ ನೀರು ಕೇಳಿದರೆ ಮಜ್ಜಿಗೆ ಕೊಡುವಷ್ಟು ಹೈನುತ್ಪನ್ನಗಳು ಯಥೇಚ್ಛವಾಗಿರುತ್ತಿದ್ದವು. ಅಗತ್ಯವಿದ್ದರೆ ಘಟ್ಟದಿಂದ ಇಳಿಯುತ್ತಿದ್ದ ಪೈರಿನಿಂದ ಹೊಸ ಎಮ್ಮೆ ಖರೀದಿಸುತ್ತಿದ್ದರು. ಶ್ರಮದ ಕೆಲಸದಲ್ಲಿ ಎತ್ತಿದ ಕೈ. ಅಕ್ಕಿ ಮುಡಿ, ಅಡಿಕೆ ಗೋಣಿಗಳನ್ನು ಹೊತ್ತುಕೊಂಡು ಸರಸರನೆ ಅಟ್ಟವೇರುತ್ತಿದ್ದರು. ಅಚ್ಚಿನಲ್ಲಿ ಎರಕ ಹೊಯ್ದಂತೆ ಪ್ರತಿ ವರ್ಷ ಒಂದೇ ರೀತಿ ಕಾಣಿಸುವ ಸುಂದರವಾದ ಚೌತಿ ಗಣಪನನ್ನು ತಯಾರಿಸುತ್ತಿದ್ದರು. ಅವರು ಹಂತ ಹಂತವಾಗಿ ತಯಾರಿಸುತ್ತಿದ್ದ ಗಣಪನಿಗೆ ಸೊಂಡಿಲು ಇಡುವ ದಿನ ನಮಗೆಲ್ಲ ವಿಶೇಷ ಸಂಭ್ರಮದ್ದಾಗಿರುತ್ತಿತ್ತು. ಬಣ್ಣ ಹಚ್ಚುವ ದಿನವಂತೂ ಹೆಚ್ಚಿನ ಸಂಭ್ರಮ. ಮೊದಮೊದಲು  ಗಣಪನ ಬೆನ್ನಿಗೆ ಮಾತ್ರ ಮತ್ತು ಸ್ವಲ್ಪ ದೊಡ್ಡವನಾದ ಮೇಲೆ ಇತರ ಭಾಗಗಳಿಗೆ  ಬಣ್ಣ ಹಚ್ಚಲು ನನಗೂ ಅನುಮತಿ ಕೊಡುತ್ತಿದ್ದರು. ಗಣಪ ತಯಾರಿಸಿ ಉಳಿದ ಮಣ್ಣಿನಲ್ಲಿ ಚಿಕ್ಕ ಚಿಕ್ಕ ಬೊಂಬೆಗಳನ್ನು ಮಾಡಿ ಬಣ್ಣ ಹಚ್ಚುವ ಸ್ವಾತಂತ್ರ್ಯವೂ ನಮಗಿತ್ತು.  ಆದರೆ ಮರು ವರ್ಷ ಗಣಪನಿಗಾಗಿ ಕುಂಬಾರ ತಂದುಕೊಡುತ್ತಿದ್ದ  ಮಣ್ಣು ಕಡಿಮೆ ಬಿದ್ದರೆ ಆ ಬೊಂಬೆಗಳು ಹುಡಿಯಾಗುವುದೂ ಇತ್ತು!  ರಾತ್ರಿ ಪಕ್ಕದಲ್ಲಿ  ಮಲಗಿಸಿಕೊಂಡು ಮಕ್ಕಳಿಗೆ ಕಥೆಗಳನ್ನು ಹೇಳುತ್ತಿದ್ದರೂ   ಸ್ವಭಾವದಲ್ಲಿ ಅವರು ಸ್ವಲ್ಪ ಖಡಕ್. ಸಣ್ಣ ತಪ್ಪುಗಳಿಗೆ ‘ಹೂಂ’ ಎಂದು ಗದರಿಸಿ ಸುಮ್ಮನಾಗುತ್ತಿದ್ದವರು ಕೆಲವು ಸಲ ಮಕ್ಕಳು, ಸಾಕು ಪ್ರಾಣಿಗಳನ್ನು ಬೆತ್ತದಿಂದ ಸದೆಯುತ್ತಿದ್ದರು. ಮೊದಲ ದಿನ ಶಾಲೆಗೆ ಹೋಗುವುದಿಲ್ಲ ಎಂದು ಹಟ ಹಿಡಿದಿದ್ದ ನಾನೂ ಅವರ ಬೆತ್ತದ ರುಚಿ ನೋಡಿದ್ದುಂಟು!

ಕುಳಿತವರಲ್ಲಿ ಎಡದಿಂದ ಮೂರನೆಯವರು ನಮ್ಮ ತಾಯಿ ಸರಸ್ವತಿ. ಅತ್ತಿಗೆ, ಅಕ್ಕಂದಿರ ಸಹಕಾರದೊಂದಿಗೆ ಮನೆಯೊಳಹೊರಗಿನ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದ ಚೀಫ್ ಹೋಮ್ ಮಿನಿಸ್ಟರ್.  ಗಂಡುಮಕ್ಕಳು, ಹೆಣ್ಣುಮಕ್ಕಳು ಅಥವಾ ಮೊಮ್ಮಕ್ಕಳು  ಎಂದು ಎಂದೂ  ಭೇದ ಮಾಡಿದವರಲ್ಲ. ವ್ರತ ನೇಮಗಳನ್ನು ಕಟ್ಟುನಿಟ್ಟಾಗಿ ಆಚರಿಸುತ್ತಿದ್ದರು.  ಇಂತಿಂತಹ ದಿನ ಇಂತಿಂತಹ ಹಬ್ಬವೋ ನೇಮವೋ ಇದೆ ಎಂದು ಮೊದಲೇ ಗೊತ್ತುಪಡಿಸಿಕೊಂಡು ಅದಕ್ಕೆ ಬೇಕಾದ ಬಾಳೆಗೊನೆ ಇತ್ಯಾದಿಗಳನ್ನು ಗಂಡು ಮಕ್ಕಳಿಗೆ ಹೇಳಿ  ಸಿದ್ಧಮಾಡಿ ಇಟ್ಟುಕೊಳ್ಳುತ್ತಿದ್ದರು. ಅವರು ಆಚರಿಸುವ ಪ್ರತೀ ನೇಮದ ದಿನ ದೇವರೊಂದಿಗೆ ನಮಗೂ ಏನಾದರೂ ವಿಶೇಷ ನೈವೇದ್ಯ ಅರ್ಪಣೆಯಾಗುತ್ತಿತ್ತು. ದಿನಾ ಬೆಳಗ್ಗೆ ಗಂಜಿ ಊಟದ ಪರಿಪಾಠವಿದ್ದರೂ ವಾರದಲ್ಲಿ ಒಂದೆರಡು ದಿನ ವೈವಿಧ್ಯಮಯ ದೋಸೆ ಇತ್ಯಾದಿಗಳು ಇರುತ್ತಿದ್ದವು. ಮರದ ಒತ್ತುಮಣೆಯಲ್ಲಿ ಶ್ಯಾವಿಗೆ ತಯಾರಿ ಹಮ್ಮಿಕೊಂಡ ದಿನ ನಮಗೆಲ್ಲರಿಗೂ ಉದ್ದದ ಸಲಾಕೆಯನ್ನು ಒತ್ತುವ ಕೆಲಸ ಇರುತ್ತಿತ್ತು.   ಮರಾಠಿ ಸಾಹಿತ್ಯದಲ್ಲಿ ಅವರಿಗೆ ಹೆಚ್ಚು ಆಸಕ್ತಿ.  ಅಪರಾಹ್ನ ಬಿಡುವಿನ ವೇಳೆಯಲ್ಲಿ ಯಾವುದಾದರೂ ಆಧ್ಯಾತ್ಮಿಕ ಪುಸ್ತಕ ಓದುತ್ತಲೇ ಇರುತ್ತಿದ್ದರು. ಮನೆಗೆ ರೇಡಿಯೋ ಬಂದ ಮೇಲಂತೂ ಗುರುವಾರ ಮತ್ತು ಭಾನುವಾರ ಆಕಾಶವಾಣಿ ಮುಂಬಯಿಯಿಂದ ಪ್ರಸಾರವಾಗುತ್ತಿದ್ದ ಮರಾಠಿ ಹರಿಕಥೆಗಳನ್ನು ತಪ್ಪದೆ ಆಲಿಸುತ್ತಿದ್ದರು.  ಆ ದಿನಗಳಂದು ನನ್ನ ಸಿಲೋನ್, ವಿವಿಧ ಭಾರತಿಗಳಿಗೂ ಬಿಡುವು! ಸಮಯ ಸಿಕ್ಕಾಗ ತೋಟಕ್ಕೆ ಹೋಗಿ ಸೋಗೆಗಳನ್ನು ಒಟ್ಟುಮಾಡಿ ಹಾಳೆಗಳನ್ನು ಕಡಿದು ಸಿಪ್ಪೆ ಸುಲಿದು ಒಣಗಿಸಿ ಅಚ್ಚುಕಟ್ಟಾಗಿ ಕಟ್ಟಿ ಇಡುತ್ತಿದ್ದರು.  ಆ ಕಾಲದಲ್ಲಿ ಬೆಳಗಿನ ಗಂಜಿ ಊಟಕ್ಕೆ ಹಾಳೆಗಳನ್ನು ಉಪಯೋಗಿಸುವ ಪರಿಪಾಠವಿತ್ತು. ಕೆಲ ವರ್ಷಗಳ ನಂತರ ಧರ್ಮಸ್ಥಳದಿಂದಲೂ ಹಾಳೆಗಳಿಗೆ ಬೇಡಿಕೆ ಬರತೊಡಗಿದ ಮೇಲೆ ಈ ಮೂಲಕ ಕೊಂಚ ಆರ್ಥಿಕ ಸಂಪನ್ಮೂಲವೂ ಹರಿದು ಬರತೊಡಗಿತ್ತು.  ಶಾಲೆಗೆ ರಜೆ ಸಿಕ್ಕಿದ ಮೇಲೆ ವರ್ಷಕ್ಕೊಮ್ಮೆ ನನ್ನನ್ನೂ ಕರೆದುಕೊಂಡು ತವರು ಮನೆಗೆ ಹೋಗುವ ಅವರ ಪರಿಪಾಠ ನಾನು ಹೈಸ್ಕೂಲು ಸೇರುವ ವರೆಗೂ ಮುಂದುವರೆದಿತ್ತು. ಮುಂದೆ ಕಾಲೇಜು ಮುಗಿಸಿ  ಉದ್ಯೋಗಕ್ಕೆ ಆಯ್ಕೆಯಾಗಿ ಮನೆ ಬಿಟ್ಟು ಹೊರಟು ನಿಂತ ನನಗೆ ನಾನು ಯಾವಾಗಲೂ ಊಟ ಮಾಡುತ್ತಿದ್ದ ಸ್ಟೀಲ್ ತಟ್ಟೆಯನ್ನು ಜೊತೆಗೊಯ್ಯುವಂತೆ ಹೇಳಿದ್ದರು. ಧರ್ಮಸ್ಥಳದಿಂದ 50ರ ದಶಕದಲ್ಲಿ ಖರೀದಿಸಿದ್ದ, ಈಗಿನ ಕಾಲದ ನಾಲ್ಕು ತಟ್ಟೆಗಳಷ್ಟು ದಪ್ಪಗಿರುವ ಅದರಲ್ಲೇ ನಾನೂ ಈಗಲೂ ಉಣ್ಣುವುದು.  ನಾನು ಅವರಿಗಾಗಿ ಒಳಗೆ ಬನ್ನಿ ಎಂಬ ಬೋರ್ಡಿನ ಕಾಲ್ ಬೆಲ್ ಮಾಡಿದ್ದು,  ಪಾತ್ರೆಯಲ್ಲಿ ಇಸ್ತ್ರಿ ಹಾಕಲು ಹೋಗಿ ಅವರ ಹೊಸ ಸಿಲ್ಕ್ ರವಕೆಯನ್ನು ಸುಟ್ಟದ್ದು ಇತ್ಯಾದಿ ಇನ್ನೊಂದೆಡೆ ಈಗಾಗಲೇ ಹೇಳಿದ್ದೇನೆ.  ಅವರಿಗೊಮ್ಮೆ ವಿಮಾನ ಯಾತ್ರೆ ಮಾಡಿಸುವ ಅವಕಾಶ ನಾನು ಉದ್ಯೋಗ ಮಾಡುತ್ತಿದ್ದ ದೂರವಾಣಿ ಇಲಾಖೆಯ ಎಲ್.ಟಿ.ಸಿ ಸೌಲಭ್ಯದ ಮೂಲಕ ನನಗೆ ದೊರಕಿತ್ತು.

ನಿಂತವರಲ್ಲಿ ಎಡದಿಂದ ಮೂರನೆಯವರು ನಮ್ಮ ಎರಡನೆಯ ಅಣ್ಣ ಹರಿಹರ  - ಮನೆಯ ಎಕ್ಸಿಕ್ಯೂಟಿವ್ ಆಫೀಸರ್.  ಏಕೆಂದರೆ ತಂದೆಯವರ ನಿರ್ದೇಶನದಂತೆ ಮನೆಯ ಹೊರಗಿನ ವ್ಯವಹಾರಗಳನ್ನೆಲ್ಲ ಅವರೇ ನೋಡಿಕೊಳ್ಳುತ್ತಿದ್ದುದು. ಪ್ರಗತಿಪರ ಕೃಷಿಯಲ್ಲೂ ಅವರಿಗೆ ಬಹಳ ಆಸಕ್ತಿ.  ವೈವಿಧ್ಯಮಯ ಹಣ್ಣು ಹೂವಿನ ಗಿಡಗಳನ್ನು ಬೆಳೆಸಿದ್ದರು. ಗಿಡಗಳನ್ನು ಕಸಿಮಾಡುವುದರಲ್ಲೂ ಪರಿಣತಿ ಹೊಂದಿದ್ದು ಇದಕ್ಕಾಗಿ ಧರ್ಮಸ್ಥಳದಲ್ಲಿ ವಿಶೇಷ ತರಬೇತಿಯನ್ನೂ ಪಡೆದಿದ್ದರು. ಜೇನುಸಾಕಣೆಯಲ್ಲೂ ತೊಡಗಿಸಿಕೊಂಡಿದ್ದರು.  ಲೆಮನ್ ಗ್ರಾಸ್ ಬೆಳೆಸಿ ಎಣ್ಣೆ  ತಯಾರಿಸಲು ಹೋಗಿ ಕೈ ಸುಟ್ಟುಕೊಂಡದ್ದೂ ಇದೆ. ಮಕ್ಕಳೆಂದರೆ ಅವರಿಗೆ ಅಚ್ಚು ಮೆಚ್ಚು. ಚಿಕ್ಕ ಮಕ್ಕಳನ್ನು ತೊಟ್ಟಿಲಲ್ಲಿ ಕೂರಿಸಿ ತೂಗುತ್ತಾ ‘ಬಾಯಿಪಾಠ’ ಹೇಳಿಕೊಡುತ್ತಿದ್ದರು. ಯಾವತ್ತು ಪೇಟೆಗೆ ಹೋದರೂ ಬರುವಾಗ ಮಕ್ಕಳಿಗೆ ಪೆಪ್ಪರಮಿಂಟು ಕಟ್ಟಿಸಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಮನೆ ಮಂದಿಗೆ ಕಾಯಿಲೆ ಕಸಾಲೆ ಬಂದಾಗ ಔಷಧೋಪಚಾರ ಇವರದೇ ಜವಾಬ್ದಾರಿಯಾಗಿತ್ತು. ಪ್ರಥಮ ಸುತ್ತಿನ ಚಿಕಿತ್ಸೆಗೆ ಬೇಕಾದ ಔಷಧಿಗಳೆಲ್ಲವನ್ನೂ ಸಂಗ್ರಹಿಸಿ ಇಟ್ಟಿರುತ್ತಿದ್ದರು. ಅವರಿಗೆ ಗಿಳಿ ಸಾಕುವ ಹವ್ಯಾಸವಿತ್ತು. ‘ನೆಂಟ್ರು ಬಂದ್ರು ಚಾಪೆ ಹಾಕಿ ಬೆಲ್ಲ ಕೊಡಿ ನೀರು ಕೊಡಿ’ ಅನ್ನುತ್ತಿದ್ದ ಅದು ಮನೆಗೆ ಬಂದವರಿಗೆಲ್ಲ ಆಕರ್ಷಣೆಯ ಕೇಂದ್ರವಾಗಿತ್ತು. ಪುಸ್ತಕ ಸಂಗ್ರಹದಲ್ಲೂ ಅಪಾರ ಆಸಕ್ತಿ ಇತ್ತವರಿಗೆ.  ಪ್ರತೀ ವರ್ಷ ಧರ್ಮಸ್ಥಳ ದೀಪೋತ್ಸವಕ್ಕೆ ಹೋದಾಗ ಒಂದಾದರೂ ಪುಸ್ತಕ ಕೊಳ್ಳುತ್ತಿದ್ದರು. ತಮ್ಮ ಶಾಲಾ ಪಠ್ಯ ಪುಸ್ತಕಗಳನ್ನೂ ಕೊನೆವರೆಗೂ ಜೋಪಾನವಾಗಿ ಕಾಯ್ದಿಟ್ಟುಕೊಂಡಿದ್ದರು. ಪುಸ್ತಕಗಳಿಗೆ ಭದ್ರವಾದ ಬೈಂಡ್ ಹಾಕುವುದನ್ನು ನಮಗೆಲ್ಲ ಕಲಿಸಿ ಕೊಟ್ಟದ್ದು ಅವರೇ. ಊರ ಪರವೂರ ಸಮಾಚಾರಗಳನ್ನು ಒಂದಷ್ಟು ಮಸಾಲೆ ಸೇರಿಸಿ ವರ್ಣರಂಜಿತವಾಗಿ ವಿವರಿಸುವುದರಲ್ಲಿ ಅವರಿಗೆ ಅವರೇ ಸಾಟಿ. ಅವರು ಹೇಳಿದ್ದಕ್ಕೆ 10ರಿಂದ ಭಾಗಿಸಿದಾಗ ಸಿಗುವುದು ವಾಸ್ತವ ಸಂಗತಿಯಾಗಿರುತ್ತದೆ ಎಂದು ನಾವು ಗುಟ್ಟಿನಲ್ಲಿ ಮಾತಾಡಿಕೊಳ್ಳುವುದಿತ್ತು! ಕೆಲವೊಮ್ಮೆ ದಿಟ್ಟ ನಿರ್ಧಾರಗಳನ್ನೂ ಕೈಗೊಳ್ಳುತ್ತಿದ್ದರು. ಆರ್ಥಿಕ ಸ್ಥಿತಿ ಅಷ್ಟೊಂದು ಉತ್ತಮವಾಗಿರದ ಆ ಕಾಲದಲ್ಲೇ  ಮನೆಗೊಂದು ರೇಡಿಯೋ ತಂದದ್ದು  ಇವುಗಳಲ್ಲೊಂದು.  ಅವರ ಈ ನಿರ್ಧಾರವಲ್ಲದಿದ್ದರೆ ನನಗೆ  ರೇಡಿಯೋದೊಂದಿಗೆ  ನಂಟು ಬೆಳೆಯುತ್ತಲೇ ಇರಲಿಲ್ಲ. ಊರಿಗೆ ವಿದ್ಯುತ್ ಸೌಲಭ್ಯ ಬಂದಾಗ ಸಂಪರ್ಕ ಪಡೆದುಕೊಂಡ ಮೊದಲ ಕೆಲವು ಮನೆಗಳಲ್ಲಿ ನಮ್ಮದೂ ಒಂದಾಗಲೂ ಅವರ ನಿರ್ಧಾರವೇ ಕಾರಣ. ತಂದೆಯವರು ತೀರಿದ ಮೇಲೆ ತಮ್ಮಂದಿರು ತಂಗಿಯರೆಂದು ತಾತ್ಸಾರ ಮಾಡದೆ  ನಮಗೆಲ್ಲ ಶಿಕ್ಷಣ  ಕೊಡಿಸಿ ಮದುವೆ ಮಾಡಿಸಿ ಜವಾಬ್ದಾರಿ ನಿಭಾಯಿಸಿದರು.

ನಿಂತವರಲ್ಲಿ ಬಲದಿಂದ ಎರಡನೆಯವರಾದ ನಮ್ಮ ಮೂರನೇ ಅಣ್ಣ ಗಣಪತಿ - ಮನೆಯ ಎಕ್ಸಿಕೂಟಿವ್ ಇಂಜಿನಿಯರ್. ಸಾಂಪ್ರದಾಯಿಕ ಶಿಕ್ಷಣದಲ್ಲಿ ಅಷ್ಟೊಂದು ಆಸಕ್ತಿ ತೋರದಿದ್ದರೂ ಜನ್ಮಜಾತ ಪ್ರತಿಭೆಯ ಅದ್ಭುತ ತಾಂತ್ರಿಕ ತಜ್ಞ. ರೇಡಿಯೋದ ಹಳೆ ಬ್ಯಾಟರಿ, ಗೆರಟೆ ಮತ್ತು ಟೂತ್ ಪೇಸ್ಟಿನ ಮುಚ್ಚಳದ ಸ್ವಿಚ್ ಇತ್ಯಾದಿ ಬಳಸಿ ವಿದ್ಯುತ್ ಬರುವ ಮೊದಲೇ ಚೌತಿ, ನವರಾತ್ರಿ ಸಂದರ್ಭಗಳಲ್ಲಿ ದೇವರ ಮಂಟಪಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿದ್ದವರು.  ಬಡಗಿ ಕೆಲಸವೂ ಬರುತ್ತಿತ್ತು. ಮುಟ್ಟಾಳೆ ಧರಿಸಿ ತೋಟದಲ್ಲಿ ಆಳುಗಳೊಂದಿಗೆ ದುಡಿಯುತ್ತಿದ್ದರು. ಏನನ್ನಾದರೂ ಮಾಡಿದರೆ ಅತ್ಯುತ್ತಮವಾಗಿ, ಇತರರಿಗಿಂತ ಚೆನ್ನಾಗಿ ಮಾಡಬೇಕೆಂಬ ಹಂಬಲವುಳ್ಳವರು.  ಮನೆಗೆ ರೇಡಿಯೋ ಬಂದಾಗ ಅತ್ಯಂತ ಎತ್ತರದ ಬಿದಿರಿಗೆ ಏರಿಯಲ್ ಜೋಡಿಸಿ ಎತ್ತರವಾದ ದಿಬ್ಬದ ಮೇಲೆ ಅದನ್ನು ಸ್ಥಾಪಿಸಿ ಹಗಲು ಹೊತ್ತು ಕೂಡ ದೂರದ ಧಾರವಾಡದಂತಹ ಮೀಡಿಯಂ ವೇವ್ ನಿಲಯಗಳು ಸುಸ್ಪಷ್ಟವಾಗಿ ಕೇಳಿಸುವಂತೆ ಮಾಡಿದ್ದರು.  ದೀಪಾವಳಿ ಸಮಯ ಎತ್ತರವಾದ ಮರವೊಂದಕ್ಕೆ ಇನ್ನೂ ಎತ್ತರವಾದ ಗಳು ಕಟ್ಟಿ ತಮ್ಮ ಗೂಡುದೀಪ ಇತರೆಲ್ಲವುಗಳಿಂದ ಮೇಲಿರುವಂತೆ ನೋಡಿಕೊಳ್ಳುತ್ತಿದ್ದರು. ಸರಸರನೆ ಮರಗಳನ್ನೇರಿ ಅಡ್ಡ ಗೆಲ್ಲುಗಳ ಮೇಲೂ ನಡೆಯಬಲ್ಲವರಾಗಿದ್ದರು.  ಹಲಸಿನ ಹಣ್ಣುಗಳನ್ನು ಕೊಯ್ದು ಹಗ್ಗ ಕಟ್ಟಿ ಇಳಿಸಿ ತೊಳೆ ಬಿಡಿಸುವಲ್ಲಿಯವರೆಗಿನ ಜವಾಬ್ದಾರಿ ಇವರದೇ ಆಗಿರುತ್ತಿತ್ತು.  ಅವರು ತೊಳೆ ಬಿಡಿಸಿ ಹಾಕಿದಂತೆಲ್ಲ ಸುತ್ತಲೂ ಕೂತ ಮಕ್ಕಳಾದ ನಾವು ಅವುಗಳನ್ನು ಮಾಯ ಮಾಡುತ್ತಿದ್ದೆವು!  ವಿವಿಧ ಜಾತಿಯ ಹಲಸು ಮಾವುಗಳ ತಳಿ ಬೆಳೆಸುವಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಜೇನು ಸಾಕಣೆಯಲ್ಲೂ ಅವರು ಎತ್ತಿದ ಕೈ. ನಾನು ಕಾಲೇಜು ಮುಗಿಸುವಷ್ಟರಲ್ಲಿ ಅವರೂ ಬೇರೆ ಜಮೀನಿನಲ್ಲಿ ವಾಸ್ತವ್ಯ ಹೂಡಿ ಸ್ವಂತ ದುಡಿಮೆಯಿಂದ ಅಲ್ಲಿ ನಂದನವನವನ್ನೇ ಸೃಷ್ಟಿಸಿದರು. ಒಂದು ಸಲ ರೇಶ್ಮೆ ಕೃಷಿಯಲ್ಲೂ ಕೈ ಆಡಿಸಿದ್ದುಂಟು. 

ಕುಳಿತವರಲ್ಲಿ ಬಲದಿಂದ ಮೊದಲನೆಯವರು ನನ್ನ ಎರಡನೇ ಅಕ್ಕ ಅಂಬಾ. ಬಾಲ್ಯದಲ್ಲಿ ನನ್ನ ಗವರ್ನೆಸ್ ಆಗಿದ್ದವರು. ಚಿಕ್ಕಂದಿನಿಂದಲೂ ತಾಯಿಗಿಂತ ನನಗೆ ಅವರ ಒಡನಾಟವೇ ಜಾಸ್ತಿ ಇದ್ದುದಂತೆ.  ಎಲ್ಲಿ ಹೋಗುವಾಗಲೂ ನನ್ನನ್ನು ಹೊತ್ತುಕೊಂಡೇ ಹೋಗುತ್ತಿದ್ದರು. ‘ಅಂಬಾ ಹೋದರೆ ನಾನೂ...’ ಎಂಬುದು ನನ್ನ ಬೀಜಾಕ್ಷರಿ ಮಂತ್ರವಾಗಿರುತ್ತಿತ್ತಂತೆ. ಸ್ವಲ್ಪ ಸಂಗೀತಾಭ್ಯಾಸವನ್ನೂ ಮಾಡಿದ್ದ ಅವರು ಅನೇಕ ಮರಾಠಿ,ಕನ್ನಡ ಹಾಡುಗಳನ್ನು ಹಾಡುತ್ತಾ ನನ್ನನ್ನು ತೊಟ್ಟಿಲಲ್ಲಿ ತೂಗುತ್ತಿದ್ದರಂತೆ.  ಹಾಡು ನಿಲ್ಲಿಸಿದರೆ ಮತ್ತೆ ಹಾಡುವಂತೆ ನಾನು ಹಠ ಮಾಡುವುದೂ ಇತ್ತಂತೆ. ಅವರು ಹಾಡುತ್ತಿದ್ದ ಜಗನ್ಮೋಹಿನಿ ಚಿತ್ರದ ಎಂದೋ ಎಂದೋ ಹಾಡಿನ ಬಗ್ಗೆ ತಿಳಿಯಲು ಎಲ್ಲೂ ಇಲ್ಲದ ಹಾಡು ನೋಡಬಹುದು.  ನಾನು ಯಾವಾಗಲೂ ಅವರೊಂದಿಗೇ ಇರುವುದನ್ನು ಕಂಡು ನಮ್ಮ ತಂದೆ ‘ಇವಳ ಮದುವೆಯಾಗುವಾಗ ಈತನನ್ನೂ ವರದಕ್ಷಿಣೆಯಾಗಿ ಕೊಟ್ಟುಬಿಡೋಣ’ ಎಂದು ತಮಾಷೆ ಮಾಡುತ್ತಿದ್ದರಂತೆ!  ಅವರು ಮದುವೆಯಾಗಿ ಇನ್ನೊಂದು ಮನೆಗೆ ಹೋಗುತ್ತಾರೆ ಎಂದು ಯಾರಾದರೂ ಅಂದಾಗ ಹೀಗೆ ಒಬ್ಬೊಬ್ಬರೇ ಹೆಣ್ಣು ಮಕ್ಕಳು ಮದುವೆಯಾಗಿ ಮನೆ ಬಿಟ್ಟು ಹೋದರೆ ನಮಗೆ ಅಡುಗೆ ಮಾಡಿ ಬಡಿಸುವವರು ಯಾರು ಎಂದು ನನಗೆ ದಿಗಿಲಾಗುತ್ತಿತ್ತು!   ಅದ್ಭುತ ಜ್ಜಾಪಕ ಶಕ್ತಿ ಹೊಂದಿದ್ದ ಅವರಿಗೆ ತಮ್ಮ ಮಕ್ಕಳದ್ದು ಮಾತ್ರವಲ್ಲ, ಬಂಧು ಬಳಗದ ಎಲ್ಲರ ಮಕ್ಕಳ ಜನ್ಮ ದಿನಗಳೂ ಕಂಠಪಾಠವಾಗಿದ್ದವು.  ಚಿಕ್ಕಂದಿನಲ್ಲಿ ಕಲಿತ ಎಲ್ಲ ಹಾಡುಗಳನ್ನೂ ಕೊನೆ ವರೆಗೂ ನೆನಪಿಟ್ಟುಕೊಂಡಿದ್ದರು.

ನಿಂತವರಲ್ಲಿ ಎಡದಿಂದ ಎರಡನೆಯವರು ಈಗ ಪೂನಾದಲ್ಲಿರುವ ಈ ಗ್ರೂಪ್ ಫೋಟೊ ತಯಾರಿಯಲ್ಲಿ ಮುಖ್ಯ ಪಾತ್ರ ವಹಿಸಿರುವ ನನ್ನ ನಾಲ್ಕನೇ ಅಣ್ಣ ಪದ್ಮನಾಭ.  ಬಾಲ್ಯದಿಂದಲೂ ಇವರು ನನ್ನ ಟೆಕ್ನಿಕಲ್ ಎಡ್ವೈಸರ್.  ಬಹುಪಾಲು ಪ್ರಪಂಚ ಜ್ಞಾನವನ್ನು ನಾನು ಇವರಿಂದಲೇ ಸಂಪಾದಿಸಿದ್ದು.   ವಯಸ್ಸಿನಲ್ಲಿ  ಹೆಚ್ಚು ಅಂತರ ಇಲ್ಲದೆ ಇದ್ದುದರಿಂದ ನಾವು ಬಾಲ್ಯದಲ್ಲಿ ಚರ್ಚಿಸದಿರುವ ವಿಷಯಗಳೇ ಇಲ್ಲ ಎಂದರೆ ತಪ್ಪಾಗಲಾರದು.  ಈಗಲೂ ಇದು ಮುಂದುವರೆದಿದ್ದು ವಿಷಯಗಳ ಆದಾನ ಪ್ರದಾನ ನಡೆಯುತ್ತಲೇ ಇರುತ್ತದೆ.

ಕುಳಿತವರಲ್ಲಿ ಬಲದಿಂದ ಎರಡನೆಯವರು ಮೂರನೆಯ ಅಕ್ಕ. 9-6-2022ರಂದು ಅಲ್ಪ ಕಾಲದ ಅಸ್ವಾಸ್ಥ್ಯದಿಂದ 74ರ ವಯಸ್ಸಿನಲ್ಲಿ ನಿಧನರಾದರು.  ಸುಧಾ ಕಾಕತ್ಕರ್ ಆಗಿದ್ದ ಅವರು ಮದುವೆಯ ನಂತರ ನಮ್ಮ ಸಂಪ್ರದಾಯದಂತೆ ಸೀತಾ ದಾಮ್ಲೆ ಆಗಿದ್ದರು.  ನಾನು ಅವರ ಬೆನ್ನಿಗೆ ಹುಟ್ಟಿದ ತಮ್ಮ.  ಡಾನ್ಸ್ ಎಂಬ ಪದವನ್ನು ಮೊತ್ತಮೊದಲು ನಮಗೆ ಪರಿಚಯಿಸಿದ್ದು ಅವರೇ.  ಬಾರೊ ಶ್ರೀ ಕೃಷ್ಣ ಬೇಗ ಕೊಳಲನೂದುತ ಎಂಬ ನೃತ್ಯವನ್ನು ಯಾರೋ ಅವರಿಗೆ ಕಲಿಸಿದ್ದರು.  ‘ಒಮ್ಮೆ ಡಾನ್ಸ್ ಮಾಡು’ ಎಂದು ಯಾರಾದರೂ ಹೇಳಿದರೆ ಯಾವ ಅಳುಕೂ ಇಲ್ಲದೆ ಹಾಡುತ್ತಾ ನರ್ತಿಸಿ  ತೋರಿಸುತ್ತಿದ್ದರು. ‘ಶಿಕ್ಕದಲ್ಲಿ ಇದ್ದ ಬೆಣ್ಣೆ ಹಾರಿ ತೆಗೆದ’ ಎಂಬ ಸಾಲಿಗೆ ಅವರು ಮೇಲಕ್ಕೆ ಹಾರಿ ಅಭಿನಯಿಸುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ. ನಾನು ಎರಡನೇ ಕ್ಲಾಸು ಇರುವಾಗ ಅವರು 5ನೇ.  ಹೀಗಾಗಿ ಎರಡು ವರ್ಷ ನಾವು ಒಟ್ಟಿಗೆ ಸಿದ್‌ಬೈಲು ಶಾಲೆಗೆ ಹೋದದ್ದು.    ಒಂದು ಸಲ ಶಾಲೆಯಿಂದ ಬರುವಾಗ ಸುಧಕ್ಕ ತೋಡಿನ ಬದಿಯಲ್ಲಿದ್ದ ಮರದ ಟೊಂಗೆಯೊಂದಕ್ಕೆ ಪುಸ್ತಕದ ಚೀಲ ಸಿಕ್ಕಿಸಿ ಅಲ್ಲಿ ಬೀಳುತ್ತಿದ್ದ ರೆಂಜೆ ಹಣ್ಣು ಹೆಕ್ಕಲೆಂದು ಹೋದರು. ಅಷ್ಟರಲ್ಲಿ ಆ ಟೊಂಗೆ ಮುರಿದು ಅದಕ್ಕೆ ಸಿಕ್ಕಿಸಿದ್ದ ಚೀಲ ಧೊಪ್ಪೆಂದು ತೋಡಿನ ನೀರೊಳಗೆ ಬಿತ್ತು!  ಆ ಮೇಲೆ ಹತ್ತಿರದ ಮನೆಯವರು ಕಷ್ಟಪಟ್ಟು ದೋಟಿಯಿಂದ ಚೀಲ ಎತ್ತಿ ಕೊಟ್ಟರು.  ಪುಸ್ತಕಗಳೆಲ್ಲ ಚಂಡಿಪುಂಡಿ ಆಗಿದ್ದವು. 6ನೇ ತರಗತಿ ಮುಗಿಸಿದಮೇಲೆ ಅವರ ಸಹಪಾಠಿ ಹುಡುಗಿಯರೆಲ್ಲ ಮಾತಾಡಿಕೊಂಡು ತಮಗೆ ಶಾಲಾ ಶಿಕ್ಷಣ ಅಷ್ಟು ಸಾಕು ಎಂದು ಸಾಮೂಹಿಕ ಠರಾವು ಪಾಸು ಮಾಡಿಕೊಂಡರು.  ಮನೆಯವರೂ ಅದಕ್ಕೆ ಸಮ್ಮತಿಯ ಮುದ್ರೆ ಒತ್ತಿದರು. ನಮ್ಮ ಮನೆಯ ಹೆಣ್ಣು ಮಕ್ಕಳ ಪೈಕಿ ಅತ್ಯಂತ ಉದ್ದ ಕೂದಲು ಹೊಂದಿದ್ದ ಅವರು ನೀಳವೇಣಿ ಅನ್ನಿಸಿಕೊಂಡಿದ್ದರು.  ನಮ್ಮ ಅಣ್ಣ ಅವರಿಗೆ ಕೇಶವರ್ಧಿನಿ ಎಂಬ ಸುವಾಸಿತ ತೈಲ ತಂದು ಕೊಡುತ್ತಿದ್ದರು. 1966ರ ಸುಮಾರಿಗೆ ಯಾವುದೋ ಸರ್ಕಾರಿ ಸ್ಕೀಮಿನ ಭಾಗವಾಗಿ ನಡೆಯುತ್ತಿದ್ದ ಹೊಲಿಗೆ ತರಬೇತಿಗೆ ಸೇರಿ ಕಟ್ಟಿಂಗ್ ಮತ್ತು ಹೊಲಿಗೆ ಕಲಿತರು. 1967ರಲ್ಲಿ ಅವರಿಗೆ ಸಬ್ಸಿಡಿ ದರದಲ್ಲಿ ಒಂದೊಂದು  ಉಷಾ ಹೊಲಿಗೆ   ಮೆಷೀನು ದೊರಕಿತು. ಅದೇ ವರ್ಷ ಅವರ ಮದುವೆ ಆಯಿತು. ಆ ಮೆಷೀನನ್ನು ಅವರು ಜೊತೆಗೆ ಕೊಂಡೊಯ್ಯುವುದೆಂದಾಗಿತ್ತು.  ಆದರೆ ಗಂಡನ ಮನೆಯವರು ಬೇರೆ ಮಷೀನು ಖರೀದಿಸುವುದಾಗಿ ನಿರ್ಧರಿಸಿದ್ದರಿಂದ ಅದು ನಮ್ಮಲ್ಲೇ ಉಳಿದು ಅದನ್ನು ತಂಗಿ ಬಳಸತೊಡಗಿ ಹೊಲಿಗೆಯಲ್ಲಿ ಪರಿಣಿತಿ ಸಾಧಿಸಿದಳು.  ಅವರು ಸೇರಿದ ಮನೆ ತುಂಬಾ ಜನರಿದ್ದ ಕೂಡುಕುಟುಂಬವಾಗಿದ್ದು ನಮ್ಮ ಮನೆಯೂ ಹಾಗೇ ಇದ್ದುದರಿಂದ ಹೊಂದಿಕೊಳ್ಳುವುದು ಅವರಿಗೇನೂ ಕಷ್ಟ ಆಗಲಿಲ್ಲ. ಮದುವೆಯಾದ ಹೆಣ್ಣು ಮಕ್ಕಳು ನಿತ್ಯವೂ 18  ಮೊಳದ ಕಚ್ಚೆ ಸೀರೆ ಉಡುವುದು ನಮ್ಮ ಸಮುದಾಯದ ಆಗಿನ ಸಂಪ್ರದಾಯವಾಗಿತ್ತು.  ಕೆಲವು ವರ್ಷ ಅವರೂ ಅದನ್ನು ಪಾಲಿಸಿದರು.  ನಂತರ ಈ ಸಂಪ್ರದಾಯಕ್ಕೆ ಸಾರ್ವತ್ರಿಕ ವಿನಾಯಿತಿ ದೊರಕಿತು. ಈಗ ಮದುವೆ ಮುಂಜಿಯಂತಹ ಸಮಾರಂಭಗಳಂದು ಮಾತ್ರ ಹೆಣ್ಣು ಮಕ್ಕಳು ಇಂಥ ಸೀರೆ ಉಡುತ್ತಾರೆ. ನಮ್ಮ ತಂದೆಯವರಂತೆ ಹೈನುಗಾರಿಕೆ ಅವರಿಗೂ ಕೂಡಿ ಬರುತ್ತಿದ್ದು ಕೊನೆಯ ವರೆಗೂ ಒಂದಾದರೂ ಕರೆಯುವ ದನ ಅವರ ಮನೆಯ ಹಟ್ಟಿಯಲ್ಲಿ ಇರುತ್ತಿತ್ತಂತೆ. ಅವರು ಮೃದು ಭಾಷಿಯಾಗಿದ್ದು ಗಟ್ಟಿ ದನಿಯಲ್ಲಿ ಮಾತಾಡಿದ್ದನ್ನಾಗಲೀ, ಯಾರನ್ನಾದರೂ ಗದರಿಸಿದ್ದನ್ನಾಗಲೀ ನಾನು ನೋಡಿಲ್ಲ.  ಇತರರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವ ಅಭ್ಯಾಸವೂ ಅವರಿಗಿರಲಿಲ್ಲ.  ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ ಇದ್ದರು.   

ಮೂರನೇ ಮತ್ತು ನಾಲ್ಕನೆಯವರಾದ ಇಬ್ಬರು ತಂಗಿಯಂದಿರು ಹೇಮಲತಾ ಮತ್ತು ಮನೋರಮಾ ತಮ್ಮ ತಮ್ಮ ಕುಟುಂಬದೊಂದಿಗೆ ಸಂತೃಪ್ತ ಜೀವನ ನಡೆಸುತ್ತಿರುವವರು.  ಅವರು ಹೆಚ್ಚು ಕಮ್ಮಿ ನನ್ನ ಓರಗೆಯವರೇ ಆದ್ದರಿಂದ ನನ್ನ ಅನುಭವಗಳೇ ಅವರ ಅನುಭವಗಳು. ಹೀಗಾಗಿ ಹೆಚ್ಚು ಹೇಳುವುದೇನೂ ಇಲ್ಲ.

ನಮ್ಮ ಕೂಡು ಕುಟುಂಬದ ಆ ಮನೆ ಈಗ ಶಿಥಿಲಾವಸ್ಥೆ ತಾಳಿದೆ.  ಈಗಲೂ ಊರಿಗೆ ಹೋದಾಗ ಅದರ ಎಲ್ಲ ಕೋಣೆಗಳೊಳಗೂ ಒಮ್ಮೆ ಹೊಕ್ಕು ಹಳೆ ನೆನಪುಗಳನ್ನು ನವೀಕರಣಗೊಳಿಸಿಕೊಳ್ಳುವುದಿದೆ.  ಈ ಚಿತ್ರದಲ್ಲಿ ಕಾಣುತ್ತಿರುವ ಕಿಟಿಕಿಯ ಬುಡ ಆ ಮನೆಯಲ್ಲಿ  ಇರುವಷ್ಟು ಕಾಲ ನಾನು ಊಟಕ್ಕೆ ಕುಳಿತುಕೊಳ್ಳುತ್ತಿದ್ದ ಸ್ಥಳವಾಗಿತ್ತು.

13 comments:

  1. ಈ ಮನೆಯ ಆ ಕಾಲದ ಅವಿಭಕ್ತ ಕುಟುಂಬಕ್ಕೆ ಸಂಬಂಧಿತ ನನ್ನ ಕೆಲವು ನೆನಪುಗಳು.:
    ತಂದೆಯವರು ಸ್ವಂತ ಅನುಭವದಿಂದ ಆಲ್ ರೌಂಡರ್ ಆಗಿದ್ದರು. ಸಣ್ಣ ಮಕ್ಕಳ ಬಟ್ಟೆಗಳನ್ನು ಹೊಲಿಯುವುದು, ಬಡಗಿ ಕೆಲಸ,ಮನೆಯ ಸಾಧನ ಸಾಮಾಗ್ರಿಗಳಿಗೆ ಸಕಾಲದಲ್ಲಿ maintenance ಕೆಲಸ ಮಾಡುವುದು ಇತ್ಯಾದಿ.
    ಹರಿಹರ ಅಣ್ಣ ಇವರು ನನಗೆ ಕೆಲವು ಸಂದರ್ಭಗಳಲ್ಲಿ ತಂದೆಯವರಿಗಿಂತಲೂ ಹೆಚ್ಹು ಪ್ರಿಯವಾಗಿದ್ದರು. ಒಮ್ಮೆ ಯಾವುದೋ ಕಾರಣಕ್ಕಾಗಿ ತಂದೆಯವರು ನನಗೆ ಬೆತ್ಹದಿಂದ ಹೊಡೆದಾಗ ನನಗೆ ಆದ ಗಾಯಗಳಿಗೆ ಮುಲಾಮು ಹಚ್ಚಲು ಮುಂದಾದವರು ಇವರೇ.
    ನಾನು ಧರ್ಮಸ್ಥಳ ದೀಪೋತ್ಸವಕ್ಕೆ ಹೋಗಿದ್ದಾಗ ಒಮ್ಮೆ ಆ ಜನ ಜಂಗುಳಿಯಲ್ಲಿ ಕಾಣೆಯಾಗಿದ್ದೆನು. ಒಬ್ಬ ಧಾಂಡಿಗನು ನನ್ನನ್ನು ಎಳೆದುಕೊಂಡು ಹೋಗಲು ಶುರು ಮಾಡಿದ್ದನು. ನಾನು ಅಣ್ಣನ ಒಟ್ಟಿಗೆ ಇದ್ದರೂ ಸಹಾ ಈ ವಿಷಯ ಅವರಿಗೇಕೋ ಗೊತ್ತಾಗಿರಲಿಲ್ಲ. ಆದರೆ ನಾನು ಅಣ್ಣಾ ಅಣ್ಣಾ ಎಂದು ಜೋರಾಗಿ ಕಿರುಚಿದ ಮೇಲೆ ಅವರು ನನ್ನನ್ನು ಆ ರಾಕ್ಷಸನಿಂದ ಬಿಡಿಸಿದಾಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ನಾನು ಅವರಿಗೆ ಚಿರ ಋಣಿ.
    ಇದೇ ತರ ಗಣಪತಿ ಅಣ್ಣ ( ತಾಂತ್ರಿಕ ತಜ್ಞರು) ನನಗೆ ನನ್ನ ಹವ್ಯಾಸವಾದ ಫೋಟೋಗ್ರಾಫಿಗೆ ಬೇಕಾದ ಕೆಲವು ಎಕ್ವಿಪ್ಮೆಂಟ್ಗಳನ್ನು ತಯಾರಿಸಿ ಕೊಟ್ಟಿದ್ದರು.ಅವರಿಗೆ ಇದರ ಕುರಿತಾದ ಮೂಲ ಐಡಿಯಾ ಸ್ವಲ್ಪ ಹೇಳಿ ಕೊಟ್ಟರೆ ಸಾಕಾಗುತ್ತಿತ್ತು. ಎಲೆಕ್ಟ್ರಿಕ್ ಕೆಲಸದಲ್ಲೂ ಕೂಡಾ ಮೂಲ ಐಡಿಯಾ ಹೇಳಿ ಕೊಟ್ಟರೆ ಅವರಿಗೆ ಸಾಕಾಗುತ್ತಿತ್ತು.
    ಇನ್ನು ನನ್ನ ನಾರಾಯಣ ಅಣ್ಣ. ನಾನು ಶಾಲೆಗೆ ಹೋಗುವ ದಾರಿಯಲ್ಲಿ ಒಂದು ಹೊಳೆ ಇರುತ್ತಿತ್ತು. ಮಳೆಗಾಲ ಪ್ರಾರಂಭವಾಗುವ ಮೊದಲು ಕೆಲವೊಮ್ಮೆ ನದಿಗೆ ಸ್ವಲ್ಪ ಜಾಸ್ತಿ ನೀರು ಇದ್ದರೆ ವಾಪಸ್ ಮನೆಗೆ ಬರುವಾಗ ಆಚೆ ದಡದಿಂದ "ಕೂ" ಎಂಬ ಶಬ್ದ ಮಾಡಿದರೆ ಅವರು ನನ್ನ ಸಹಾಯಕ್ಕೆ ಮನೆಯಿಂದ ( ನದಿ ಮನೆಯ ಹತ್ತಿರವೇ ಇದೆ) ಬರುತ್ತಿದ್ದರು. ಕೆಲವೊಮ್ಮೆ ನನ್ನ ಸಾಹಸಕ್ಕೆ ಬೈ ಗಳನ್ನು ತಿಂದದ್ದೂ ಇದೆ! ನಾರಾಯಣ ಅಣ್ಣನ ಕುರಿತಾಗಿ ಇನ್ನೊಂದು ಮುಖ್ಯ ವಿಷಯವನ್ನು ಇಲ್ಲಿ ಬರೆಯ ಬಯಸುತ್ತೇನೆ. ಅದೇನೆಂದರೆ: ಆನ್ ಲೈನ್ marketing ( ಆಗ ಪೋಸ್ಟ್ ಕಾರ್ಡ್ ಮೂಲಕ). 1950 ರ ದಶಕದಲ್ಲಿ ಅವರು ಇದರಲ್ಲಿ ಸಕ್ರಿಯ ಭಾಗ ವಹಿಸುತ್ತಿದ್ದರು. ಅವರು VPP ಮೂಲಕ ಊರಲ್ಲಿ ಎಲ್ಲೆಲ್ಲೂ ಸಿಗದ ಹೂ ಬೀಜಗಳು, ಬಟ್ಟೆಗೆ ಬಣ್ಣ ಬದಲಾಯಿಸುವ ಡೈ , ಮಿನಿ printing press, ink less stamp, ಎಲ್ಲೂ ಸಿಗದ ಪುಸ್ತಕಗಳು ಮುಂತಾದುವುಗಳನ್ನೆಲ್ಲಾ ಹೊರ ಊರುಗಳಿಂದ ತರಿಸುತ್ತಿದ್ದರು. ನಮ್ಮ ಹಳ್ಳಿಯ ಆಸು ಪಾಸಿನವರಿಗೆ ಇದನ್ನೆಲ್ಲಾ ನೋಡಿ ಆಶ್ಚರ್ಯವಾಗದೆ ಇರುತ್ತಿರಲಿಲ್ಲ!
    ಇನ್ನು ಚಿದಂಬರ. ಅವನು ಈಗಾಗಲೇ ಮೇಲೆ ಬರೆದಂತೆ ನಾನು ಯಾವ ಕೆಲಸವನ್ನೂ ಅವನನ್ನು consult ಮಾಡದೇ ಶುರು ಮಾಡುವುದಿಲ್ಲ.

    ReplyDelete
  2. "ಕನಕನ ಕಿಂಡಿ" ತರ "ಚಿದಂಬರ್ ಕಿಟಕಿ" ಅಂತ ಹೆಸರಿಡಬೋದೇನೋ ? :-)
    ಒಳ್ಳೆ ಆರ್ಟಿಕಲ್..ಒಳ್ಳೆ ಐಡಿಯಾ... ನನ್ನ ಬಳಿಯೂ ಕೆಲವು ಹಳೇ ಫೋಟೋಸ್ ಇವೆ. ನಿಮ್ಮ ಐಡಿಯಾ ಕಾಪಿ ಮಾಡ್ತೀನಿ..

    Jayanti Sheshadri (FB)

    ReplyDelete
  3. ನೂರಕ್ಕೆ ಇನ್ನೂರು ಮಾರ್ಕ್ಸ್!

    Mahesh (FB)

    ReplyDelete
  4. ನಮ್ಮ ಕುಟುಂಬದ ಫೋಟೋ ಕಥೆಯೂ ಇದೇ...ಗರಿಷ್ಠ ಎಲ್ಲರೂ ಸೇರಿದ್ದಾಗ ಒಬ್ಬರು ಮಿಸ್ ಆಗಿದ್ದರು...ಇದೇ ಐಡಿಯ ಮಾಡುವುದು ಒಳಿತು ...ನಿಮ್ಮ ಕಥೆ ಓದುತ್ತಿದ್ದಂತೆ ಪ್ಯಾರಲಲ್ ಸ್ಕ್ರೀನಿನಲ್ಲಿ ನಮ್ಮ ಮನೆಯ ಕಥೆಯನ್ನು ನೋಡಿದಂತಾಯ್ತು...!!

    Sudarshana Reddy (FB)

    ReplyDelete
  5. ಅದ್ಭುತವಾಗಿದೆ!!! ಬರಹವಂತೂ ಹಳೆಯ ದಿನಗಳಿಗೇ ಕಳಿಸಿದಂತಾಯ್ತು!!ಧನ್ಯವಾದಗಳು!!

    Chandrakanta Acharya (FB)

    ReplyDelete
  6. ವೈಯಕ್ತಿಕ ವಿಷಯವಾಗಿದ್ದರೂ ಅದ್ರಲ್ಲಿ ಎಲ್ಲರಿಗೂ ಒಂದು ಪಾಠವಿದೆ ಅನ್ನಿಸ್ತು. ನಮ್ಮದೇ ಮನೆಯವ್ರನ್ನ ನಾವು 'taking for granted' ಮಾಡೋದೇ ಜಾಸ್ತಿ ಅಲ್ವಾ? ಅವರ ಒಳ್ಳೆಯ ಗುಣಗಳನ್ನು ಗುರುತಿಸೋದು/ಕೃತಜ್ಞತೆ ವ್ಯಕ್ತಪಡಿಸೋದು ಕಡಿಮೆಯೇ.
    ಹಾಗೆ ಎದುರಿಗೆ ಹೇಳಲು- ಒಂದೇ ಅದು ಕೃತಕವಾಗಿ ಕಂಡೀತೇ ಎಂಬ ಹಿಂಜರಿಕೆ ಇಲ್ಲವೇ ನಮ್ಮ ಬಿಗುಮಾನ ಅಡ್ಡ ಬರುತ್ತೆ. ನೀವು ಅವೆರಡೂ ಇಲ್ಲದೆ- ಸಹಜವಾಗಿ ಬರೆದು ಅವರೆಲ್ಲರಿಗೂ ದೊಡ್ಡ ಉಡುಗೊರೆ ಕೊಟ್ಟಿದ್ದೀರಿ!

    Anonymous (mail)

    ReplyDelete
  7. ಕಾಲ್ಪನಿಕ group photo!! Super. ನೀವು ಅವರೆಲ್ಲರ ಬಗ್ಗೆ ನೀಡಿರುವ ವಿವರಣೆಯಂತೂ ಅಮೋಘ.

    Mangala Gundappa(FB)

    ReplyDelete
  8. So touchy. Narrative script is so beautiful and made me to read two times. Even I was brought up in similar situation.

    Ganesh Jaya Hatwar (FB)

    ReplyDelete
  9. ವಂಶವೃಕ್ಷದ ವಿವರ ಒದಿ ಖುಶಿಯಾಯ್ತು.

    ReplyDelete
  10. Superrrrr..sir upland few more photos of your childhood home...rooms attic we don't get to see such houses..

    ReplyDelete
  11. I couldn't control my emotion when I read the last line. I could relate to it.

    ReplyDelete
    Replies
    1. ಪ್ರತಿಕ್ರಿಯೆಗಾಗಿ ಧನ್ಯವಾದಗಳು.

      Delete
  12. ನಿಮ್ಮ ಕುಟುಂಬ ಪರಿಚಯಿಸುವ ಲೇಖನ ಬಹಳ ಚೆನ್ನಾಗಿದೆ. 👌

    ReplyDelete

Your valuable comments/suggestions are welcome