Sunday 5 June 2022

ಸೈಕಲ್ ಸಹವಾಸದ ಸ್ವಾರಸ್ಯಗಳು



ಈ ಚಿತ್ರದಲ್ಲಿ ನಾನು ರೈಡ್ ಮಾಡುತ್ತಿರುವುದು ಮಡ್‌ಗಾರ್ಡ್, ಕ್ಯಾರಿಯರ್ ಯಾವುದೂ ಇಲ್ಲದ ಆಧುನಿಕ ಸೈಕಲ್. ಆದರೆ ಇಲ್ಲಿ ನಾನು ಬರೆಯುತ್ತಿರುವುದು ಕಾಲೇಜು ದಿನಗಳಲ್ಲಿ ಹಲವು ವರ್ಷ ನನ್ನ ಸಹವರ್ತಿ ಆಗಿದ್ದ Flying Pegion ಮಾದರಿಯ ಭಾರತದ ಸಾಂಪ್ರದಾಯಿಕ ಸೈಕಲ್ ಸಹವಾಸದ ಬಗ್ಗೆ.

1960ರ ದಶಕ ಅದು. ಇನ್ನೂ ಬೈಕು, ಸ್ಕೂಟರ್, ಕಾರುಗಳು ಐಷಾರಾಮಿ ಸವಲತ್ತುಗಳಾಗಿದ್ದವು. ಹೀಗಾಗಿ ಸೈಕಲ್ ಜನತಾ ಜನಾರ್ದನನ ವಾಹನ ಅನಿಸಿಕೊಂಡಿತ್ತು. ಹಾಗೆಂದು ಈಗ ಬೈಕ್, ಸ್ಕೂಟರುಗಳಿರುವಷ್ಟು ಸಂಖ್ಯೆಯ ಸೈಕಲುಗಳು ಆಗ ಇರಲಿಲ್ಲ. . ಈಗಿನಂತೆ  ಮಗು ನಡೆಯಲು ಕಲಿಯುವುದಕ್ಕೂ ಮುನ್ನ ಮನೆಗೆ ಟ್ರೈಸಿಕಲ್ ಬರುವ ಕಾಲವೂ ಅದಾಗಿರಲಿಲ್ಲ. ನಾನು ಮೊದಲು ಸೈಕಲನ್ನು ಸಮೀಪದಿಂದ ನೋಡಿದ್ದು ನಮ್ಮ ಅಜ್ಜಿ ಮನೆಯಲ್ಲಿ. ನಮ್ಮ ಸೋದರ ಮಾವ ಮನೆಯಲ್ಲಿ ಸೈಕಲ್ ಇಟ್ಟುಕೊಂಡಿದ್ದ ಕೆಲವೇ ಮಂದಿಗಳಲ್ಲಿ ಒಬ್ಬರಾಗಿದ್ದರು. ಅವರು ಅದನ್ನು  ಅಂಗಳದ ಕಂಬವೊಂದಕ್ಕೆ ಸರಪಳಿಯಿಂದ ಬಂಧಿಸಿಟ್ಟಿರುತ್ತಿದ್ದರು. ಹೀಗಾಗಿ ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋದಾಗ ಕಟ್ಟಿಟ್ಟಲ್ಲೇ ಕೈಯಿಂದ ಪೆಡಲ್ ತಿರುಗಿಸುವ ಅವಕಾಶ ಮಾತ್ರ ನಮಗೆ ಸಿಗುತ್ತಿತ್ತು. ಅದರ ಹಿಂಭಾಗದಲ್ಲಿದ್ದ ಕೆಂಪಗಿನ ರಿಫ್ಲೆಕ್ಟರ್ ನಮಗಾಗ ಒಂದು ಆಕರ್ಷಣೆ. ಈಗ ಸ್ಕೂಟರ್, ಬೈಕುಗಳ ರಿಫ್ಲೆಕ್ಟರ್ ನೋಡಿದಾಗಲೂ ನನಗೆ ಆ ಸೈಕಲ್ ದೃಶ್ಯವೇ ನೆನಪಿಗೆ ಬರುವುದು. ಕೈಪಂಪ್ ಬಳಸಿ ಒಂದು ಬಟ್ಟೆ ಚೂರಿನ ಮೂಲಕ ಅವರು ಸೈಕಲ್ ಚಕ್ರಕ್ಕೆ ಗಾಳಿ ತುಂಬುವುದನ್ನು ನೋಡಲು ಚೋದ್ಯವೆನಿಸುತ್ತಿತ್ತು.


ಸೈಕಲ್ ಸವಾರಿಯ ಅನುಭವ ಪಡೆಯಲು ಸಾಮಾನ್ಯವಾಗಿ ಹೈಸ್ಕೂಲ್ ಮೆಟ್ಟಲೇರಿದ ಮೇಲಷ್ಟೇ ಸಾಧ್ಯವಾಗುತ್ತಿತ್ತು. ಗಂಟೆಗೆ ಕೆಲವು ಆಣೆಗಳ ಬಾಡಿಗೆಗೆ ಆಗ ಸೈಕಲುಗಳು ದೊರೆಯುತ್ತಿದ್ದವು. ಆಗಲೇ expert ಆಗಿರುತ್ತಿದ್ದ ಅಣ್ಣನನ್ನೋ, ಸ್ನೇಹಿತನನ್ನೋ ಜೊತೆಗಿಟ್ಟುಕೊಂಡು ಊರಿನ ಮೈದಾನಿನಲ್ಲಿ ಸೈಕಲ್ ಸವಾರಿ ಕಲಿಯುವಿಕೆ  ಆರಂಭವಾಗುತ್ತಿತ್ತು. ಆಗ ಸಾಮಾನ್ಯವಾಗಿ 22 ಇಂಚು ಮತ್ತು 24 ಇಂಚು ಫ್ರೇಮ್ ಸೈಜಿನ ಎತ್ತರದ ಸೈಕಲುಗಳೇ ಇರುತ್ತಿದ್ದುದು.  ವಯಸ್ಕರಿಗೂ ಸೀಟ್ ಮೇಲೆ ಕುಳಿತಾಗ ಕಾಲು ನೆಲಕ್ಕೆ ಎಟಕುತ್ತಿರಲಿಲ್ಲ. ಸೈಕಲ್ ಎತ್ತರ ಇದ್ದಷ್ಟೂ ಪೆಡಲ್ ಮಾಡುವುದು ಸುಲಭ ಎಂಬ ನಂಬಿಕೆಯೂ ಆ ಕಾಲದಲ್ಲಿತ್ತು.  ಹೀಗಾಗಿ ಕಲಿಯುವ ಹುಡುಗರು ಕ್ರಮವಾಗಿ ಪೆಡಲ್ ಬ್ಯಾಲನ್ಸ್, ರೋಲಿನ ಒಳಗಿಂದ ಕಾಲು ತೂರಿಸಿ ಪೆಡಲನ್ನು ತಿರುಗಿಸುವ ಕತ್ರಿ ಬ್ಯಾಲನ್ಸ್, ರೋಲ್ ಮೇಲಿಂದ ಕಾಲು ಆಚೆ ಹಾಕಿ ಪೆಡಲ್ ತಿರುಗಿಸುವ ರೋಲ್ ಬ್ಯಾಲನ್ಸ್, ಕ್ಯಾರಿಯರ್ ಮೇಲೆ ಕುಳಿತು ಓಡಿಸುವುದು, ನಂತರ ಸೀಟಾರೋಹಣ ಹೀಗೆ ಹಂತ ಹಂತವಾಗಿ ಪ್ರಾವೀಣ್ಯ ಸಾಧಿಸಬೇಕಾಗುತ್ತಿತ್ತು. ಇದಕ್ಕೂ ಮೊದಲು ಹಿಂದಿನ ಚಕ್ರದ ಬೋಲ್ಟಿನ ಮೇಲೆ ಕಾಲಿಟ್ಟು ನಡೆಸುವ ಕುಟ್ಟಿ ಬ್ಯಾಲೆನ್ಸ್ ಮತ್ತು ಪೆಡಲಿನ axle ಮೇಲೆ ಕಾಲಿಡುವ ಗುಮ್ಮ ಬ್ಯಾಲೆನ್ಸ್ ಎಂಬ ಇನ್ನೆರಡು ಹಂತಗಳಿದ್ದವು ಎಂದು ನಮ್ಮ ಹಿರಿಯಣ್ಣ ಹೇಳುತ್ತಿದ್ದರು. ಆದರೆ ನಮ್ಮ ಕಾಲದಲ್ಲಿ ಈ ಹಂತ ಇರಲಿಲ್ಲ.



ನನಗೆ ಸೈಕಲ್ ಸವಾರಿಯ ಮೊದಲ ಅನುಭವ  6ನೇ ತರಗತಿಯಲ್ಲಿರುವಾಗ ದೊರಕಿತು.  ಸದ್ಯದಲ್ಲೇ ನನ್ನ ಉಪನಯನ ಎಂದು ನಿರ್ಧಾರವಾಗಿದ್ದ ಕಾಲವದು.  ಅಣ್ಣನೊಂದಿಗೆ ಉಜಿರೆಗೆ ಹೋಗಿ ಸೈಕಲ್ ಕಲಿಯಬೇಕೆಂಬ ಅಭಿಲಾಷೆಯನ್ನು ತಂದೆಯವರ ಮುಂದೆ ವ್ಯಕ್ತಪಡಿಸಿದಾಗ ‘ಉಪನಯನದ ಹೊತ್ತಿಗೆ ಕೈಕಾಲು ಮುರಿದುಕೊಳ್ಳಬೇಕೆಂದು ನಿನ್ನ ಉದ್ದೇಶವೋ.  ಸೈಕಲೂ ಬೇಡ ಏನೂ ಬೇಡ’ ಎಂದು ಅವರು ನನ್ನ ಆಸೆಗೆ ತಣ್ಣೀರೆರಚಿದರು. ಆದರೂ ಅವರನ್ನು ಹೇಗೋ ಒಪ್ಪಿಸಿ ಒಂದು ದಿನ ನಾನು ಮತ್ತು ಪದ್ಮನಾಭ ಅಣ್ಣ ಉಜಿರೆಗೆ ಹೋಗಿಯೇ ಬಿಟ್ಟೆವು. ಅಲ್ಲಿ ಶೇಷಗಿರಿ ಶೆಣೈ ಅವರ ಬಾಡಿಗೆ ಸೈಕಲ್ ಶಾಪಿನಿಂದ ಕಲಿಯುವವರಿಗೆಂದೇ ಇರುವ ಸಣ್ಣ ಸೈಕಲೊಂದನ್ನು ಪಡೆದು ಜನಾರ್ದನ ದೇವಸ್ಥಾನದ ಎದುರಿನ  ರಥಬೀದಿಗೆ ಹೋದೆವು. ಸೀಮಿತ ಕಾಲಾವಕಾಶ ಇದ್ದುದರಿಂದ ಪೆಡ್ಲ್ ಬ್ಯಾಲೆನ್ಸ್, ಕತ್ರಿ ಬ್ಯಾಲೆನ್ಸ್ ಎಂದೆಲ್ಲ ಸಮಯ ವ್ಯರ್ಥ ಮಾಡದೆ ನನ್ನನ್ನು ಸೀಟಿನ ಮೇಲೆ ಕೂರಿಸಿ ಅಣ್ಣ ಹಿಂದಿನಿಂದ ತಳ್ಳುತ್ತಾ ಬಂದರು. ಕೊಂಚ ಹೊತ್ತಿನ ನಂತರ ‘ಮುಂದೆ ನೋಡುತ್ತಾ ಪೆಡಲ್ ತಿರುಗಿಸುತ್ತಿರು’ ಎಂದು ಹೇಳಿ ಕೈ ಬಿಟ್ಟರು. ಪೆಡಲ್ ತಿರುಗಿಸುವುದೋ ಮುಂದೆ ನೋಡುವುದೋ ಎಂದು ನನಗೆ ಗೊತ್ತಾಗದಿದ್ದರೂ ಯಾವುದೋ ಮಾಯದಲ್ಲಿ ಸ್ವಲ್ಪ ದೂರ ಸರಿಯಾಗಿಯೇ ಸಾಗಿದ ಸೈಕಲ್ ಆ ಮೇಲೆ ಮನಸ್ಸು ಬದಲಾಯಿಸಿ ಸಮೀಪದ ಹೊಂಡವೊಂದರ ಒಳಗೆ ಇಳಿದು ಅಡ್ಡ ಬಿದ್ದಿತು.  ಅದರೊಂದಿಗೆ ನಾನೂ ಧರಾಶಾಯಿಯಾದೆ.  ಬಿದ್ದಲ್ಲಿಂದ ಎದ್ದು  ಮತ್ತೆ ಅಭ್ಯಾಸ ಮುಂದುವರೆಸಿ ಒಂದಷ್ಟು ದೂರ ನಾನೊಬ್ಬನೇ ಹೋಗುವಷ್ಟು ಪರಿಣತಿ ಸಾಧಿಸಿದೆ. ಆಗ ರಥಬೀದಿಯ ಆಚೆ ತುದಿಯಲ್ಲಿರುವ  ತನ್ನ ಮನೆಯಿಂದ ಹೈಸ್ಕೂಲಿಗೆ ಹೊರಟು ಬಂದ  ಹೆಡ್‌ಮಾಸ್ಟರ್ ಆರ್.ಎನ್. ಭಿಡೆಯವರು ನಮ್ಮನ್ನು ಕಂಡು ಅಣ್ಣನೊಡನೆ ’ತಮ್ಮನಿಗೆ ಸೈಕಲ್ ಕಲಿಸುತ್ತಿದ್ದೀಯೇನೋ’ ಎಂದು ಕೇಳಿದ್ದು ನನಗೆ ಸರಿಯಾಗಿ ನೆನಪಿದೆ.  ಅಷ್ಟರಲ್ಲಿ ಬಾಡಿಗೆ ಕರಾರಿನ ಒಂದು ಗಂಟೆ ಮುಗಿಯುತ್ತಾ ಬಂದುದರಿಂದ ಸೈಕಲನ್ನು ಶೇಷಗಿರಿಯವರಿಗೆ ಹಿಂದಿರುಗಿಸಿ ಮನೆಗೆ ಹಿಂತಿರುಗಿದೆವು.   

ನಾನು ತೀರಾ ಚಿಕ್ಕವನಿದ್ದಾಗ  ಬಾಡಿಗೆ ಸೈಕಲೊಂದನ್ನು ತಂದು ಅಣ್ಣಂದಿರು ಮನೆಯಂಗಳದಲ್ಲಿ ಇಡೀ ರಾತ್ರಿ ಓಡಿಸಿದ ಅಸ್ಪಷ್ಟ ನೆನಪು ನನಗಿತ್ತು. ಅದೇ ಹೆಜ್ಜೆ ಜಾಡನ್ನು ಅನುಸರಿಸಿ ಆ ಮೇಲೊಮ್ಮೆ ನಾವು ಅಕ್ಕಪಕ್ಕದ ಕೆಲವು ಸ್ನೇಹಿತರು ಸೇರಿಕೊಂಡು ಒಂದೆರಡು ರೂಪಾಯಿಗಳ ಓವರ್ ನೈಟ್ ಬಾಡಿಗೆಗೆ ಸಿಗುತ್ತಿದ್ದ ಸಣ್ಣ ಸೈಜಿನ ಸೈಕಲ್ ತಂದು ಸರದಿಯಂತೆ ರಾತ್ರಿಯಿಡೀ ನಮ್ಮೂರ ದೇವಸ್ಥಾನದ ಸುತ್ತ  ಓಡಿಸಿ ಆನಂದಿಸಿದ್ದೆವು.  ದೇವಸ್ಥಾನದ ನಾಲ್ಕು ಮೂಲೆಗಳಿಗೆ ಲಾಟೀನು ತೂಗಾಡಿಸಿ ಬೆಳಕಿನ ವ್ಯವಸ್ಥೆ ಮಾಡಿಕೊಂಡಿದ್ದೆವು. ಆಗ ಯಾರಾದರೂ  ಸೀಟಿನ ಮೇಲೆ ಕೂರಿಸಿ ದೂಡಿ ಬಿಟ್ಟರೆ ಮಾತ್ರ ಮುಂದೆ ಓಡಿಸಲು ನನಗೆ ಬರುತ್ತಿತ್ತು. ಇಳಿಯುವ ಹೊತ್ತಲ್ಲೂ ಯಾರಾದರೂ ಹಿಡಿದು ಸಹಾಯ ಮಾಡಬೇಕಾಗುತ್ತಿತ್ತು. ಒಂದು ಸಲ ಹ್ಯಾಂಡಲ್ ಕಂಟ್ರೋಲ್ ತಪ್ಪಿ ದೇವಸ್ಥಾನದ ಹಿಂದಿನ ಆಳವಾದ ಪ್ರಪಾತದ ಅಂಚಿನತ್ತ ಸೈಕಲ್ ಸಾಗಿದರೂ ಹೇಗೋ ಸಾವರಿಸಿಕೊಂಡಿದ್ದೆ.  ಮರುದಿನ ಬೆಳಗ್ಗೆ ಶೌಚ ಮುಗಿಸಿ ಪ್ರಕ್ಷಾಲನಕ್ಕೆಂದು  ನೀರು ತಾಗಿಸಿದಾಗ ರಾತ್ರಿಯಿಡೀ ಸೈಕಲ್ಲಿನ ಸೀಟ್ ಮೇಲೆ ಕುಳಿತ ಪರಿಣಾಮದ ಅನುಭವವಾಗಿತ್ತು!

‘ಹಿಂದಿನ ಚಕ್ರ ತಿರುಗುತ್ತಾ ಇದೆ ನೋಡೋ’ ಎಂದು ಹೊಸತಾಗಿ ಸವಾರಿ ಕಲಿತವರ ಏಕಾಗ್ರತೆ ಭಂಗಗೊಳಿಸಿ ಅವರು ಬ್ಯಾಲನ್ಸ್ ತಪ್ಪಿ ಸೈಕಲ್ ಸಮೇತ ಧೊಪ್ಪನೆ ಬೀಳುವುದನ್ನು ನೋಡಿ ಸಂತೋಷ ಪಡುವುದು ಆಗಿನ ದಿನಗಳಲ್ಲಿ ಸಾಮಾನ್ಯವಾಗಿತ್ತು! ಎಷ್ಟು ಸಲ ಬಿದ್ದು ಎದ್ದರೂ ಸೈಕಲ್ ಮೇಲಿನ ಮೋಹ ಮಾತ್ರ ಕಮ್ಮಿ ಆಗುತ್ತಿರಲಿಲ್ಲ. ಎರಡು ತೊಡೆಗಳ ನಡುವೆ ಎದುರಿನ ಚಕ್ರವನ್ನು ಒತ್ತಿ ಹಿಡಿದು,  ತಿರುಚಿ ಹೋಗಿರುತ್ತಿದ್ದ ಹ್ಯಾಂಡಲ್ ಬಾರನ್ನು  ನೇರ್ಪುಗೊಳಿಸುವ ವಿದ್ಯೆಯೂ ಸೈಕಲ್ ಕಲಿಕೆಯ ಭಾಗವೇ ಆಗಿರುತ್ತಿತ್ತು.

ನಾನು ಸೈಕಲ್ ಸವಾರಿಯ  ಪ್ರಾಥಮಿಕ ಪಾಠಗಳನ್ನು ಕಲಿಯುವಷ್ಟರೊಳಗೆ ನಮ್ಮ ಮಾಳದ ಹಿರಿಯಕ್ಕನ  ಮನೆಗೆ ಸೈಕಲ್ ಆಗಮನವಾಗಿತ್ತು. ಅಕ್ಕನ ಮಕ್ಕಳು ಹೆಚ್ಚು ಕಮ್ಮಿ ನನ್ನ ಸಮವಯಸ್ಕರೇ ಆಗಿದ್ದುದರಿಂದ ಬೇಸಿಗೆ ರಜೆಯಲ್ಲಿ ಅಲ್ಲಿಗೆ ಹೋದಾಗ ಅದನ್ನು ಉಪಯೋಗಿಸುವ ಸ್ವಾತಂತ್ರ್ಯ ನನಗಿತ್ತು. ಅಲ್ಲಿದ್ದ ಚಿಕ್ಕ ಅಂಗಳದಲ್ಲಿ ಸೈಕಲ್ ಓಡಿಸುತ್ತಾ ಪೆಡಲ್ ಮೇಲೆ ಕಾಲಿಟ್ಟು ಸೀಟ್ ಮೇಲೆ ಏರಿ ಕುಳಿತುಕೊಳ್ಳುವುದು, ಸೈಕಲ್ ವೇಗ ಕಮ್ಮಿ ಮಾಡಿ ಪೆಡಲ್ ಮೇಲೆ ಕಾಲಿರಿಸಿ ಸುರಕ್ಷಿತವಾಗಿ ಇಳಿಯುವುದು, ಅಂಗಳದಲ್ಲೇ ಎಂಟು ಬರೆಯುವುದು ಮುಂತಾದ ತರಹೆವಾರಿ ಕೌಶಲ್ಯಗಳನ್ನು ಕಲಿಯುವ ಅವಕಾಶ ನನಗೆ ಅಲ್ಲಿ ಸಿಕ್ಕಿತು. ಪೆಡಲ್ ಮೇಲೆ ಎಡ ಕಾಲಿರಿಸಿ ಬಲಕಾಲನ್ನು ಎದುರಿನ ರೋಲ್ ಮೇಲಿಂದ ಆ ಕಡೆ ಹಾಕಿ ಸೀಟ್ ಮೇಲೆ ಕುಳಿತುಕೊಳ್ಳುವ ಪದ್ಧತಿ ನನಗೆ ಅನುಕೂಲಕರ ಅನ್ನಿಸುತ್ತಿತ್ತು. ಅನೇಕರು ಬಲಕಾಲನ್ನು ಹಿಂಬದಿಯಿಂದ ಎತ್ತಿ ಕ್ಯಾರಿಯರ್ ಮೇಲಿಂದ ಆ ಕಡೆ ಹಾಕುವ ಪದ್ಧತಿಯನ್ನು ಇಷ್ಟಪಡುತ್ತಾರೆ.  ನೋಡಲು ಇದುವೇ ಚಂದ ಕೂಡ. ಹಿಂದಿನ ಮುಂದಿನ ಎರಡೂ ಬ್ರೇಕುಗಳನ್ನು ಜೊತೆಯಲ್ಲೇ ಬಳಸಬೇಕು ಎಂದುದನ್ನೂ ನಾನು ಅಲ್ಲಿಯೇ ಕಲಿತದ್ದು.  ಸೈಕಲಿನ ಮುಂದಿನ ಬ್ರೇಕನ್ನು ಬಳಸಲೇ ಬಾರದು ಎಂಬ ತಪ್ಪು ಅಭಿಪ್ರಾಯವೂ  ಕೆಲವರಲ್ಲಿದೆ.  ಅದೊಂದನ್ನೇ ಬಳಸಬಾರದು ಅಷ್ಟೇ.

ಯಾರದೋ ಒತ್ತಾಯಕ್ಕೆ ನಮ್ಮ ಹಿರಿಯಣ್ಣ  ಕಂತಿನಲ್ಲಿ ದುಡ್ಡು ಕಟ್ಟಿ ಲಕ್ಕಿ ಡಿಪ್ಪಿನಲ್ಲಿ ಸೈಕಲ್ ಸಿಗಬಹುದಾದ ಸ್ಕೀಮೊಂದಕ್ಕೆ ಸೇರಿದ್ದರು. ಆಗ ನಾನು ದಿನಾ ಬಸ್ಸಿನಲ್ಲಿ ಓಡಾಡುತ್ತಾ ಕಾಲೇಜಿಗೆ ಹೋಗುತ್ತಿದ್ದೆ. 1968ರಲ್ಲಿ ರಸ್ತೆಗಳ ರಾಷ್ಟ್ರೀಕರಣ ಆದ ಮೇಲೆ ಖಾಸಗಿ ಬಸ್ಸುಗಳೆಲ್ಲ ಸ್ಥಗಿತವಾಗಿ  ಸಮಯಪ್ರಜ್ಞೆ ಇಲ್ಲದ ಸರ್ಕಾರಿ ಬಸ್ಸುಗಳಿಂದಾಗಿ  ನನಗೆ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ಹೋಗಲು ತೊಂದರೆ ಆಗುತ್ತಿತ್ತು. ಇದು ಅವರಿಗೆ ತಿಳಿದು ಬಸ್ಸುಗಳ ಉಸಾಬರಿಯೇ ಬೇಡವೆಂದು ಲಕ್ಕಿ ಡಿಪ್ಪಿನ ಎಲ್ಲ ಕಂತುಗಳನ್ನು ಒಮ್ಮೆಗೇ ಕಟ್ಟಿ ನನಗೆ ಸೈಕಲ್ ತೆಗೆಸಿ ಕೊಟ್ಟರು. ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮ ಇಲ್ಲದಿದ್ದ ಆ ಕಾಲದಲ್ಲೂ ಅವರು ಇಂಥ ಬೋಲ್ಡ್ ನಿರ್ಧಾರಗಳನ್ನು ಆಗಾಗ ತೆಗೆದುಕೊಳ್ಳುತ್ತಿದ್ದರು.   ಗೂಡ್ಸ್ ಆಫೀಸಿಗೆ ಬಂದಿದ್ದ ಆ ಫಿಲಿಪ್ಸ್ ಸೈಕಲನ್ನು  ಬೆಳ್ತಂಗಡಿಯಿಂದ ತರಲು ನಾನೂ ಅಣ್ಣನೊಂದಿಗೆ ಹೋಗಿದ್ದೆ.  ಅದುವರೆಗೆ ರಸ್ತೆಯಲ್ಲಿ ಸೈಕಲ್ ಓಡಿಸಿ ಅಭ್ಯಾಸವಿಲ್ಲದಿದ್ದರೂ ನಾನು ಧೈರ್ಯ ವಹಿಸಿ ಅದನ್ನೇರಿ ಮನೆಯತ್ತ ಹೊರಟೆ.  ದನಕರುಗಳಿಗೆ ಬೇಯಿಸಿ ಹಾಕಲೆಂದು ಅಣ್ಣ ಖರೀದಿಸಿದ್ದ ಹುರುಳಿಯಿದ್ದ ಚೀಲವನ್ನು ಕ್ಯಾರಿಯರಲ್ಲಿರಿಸಿಕೊಂಡೆ.  ಸ್ವಲ್ಪ ದೂರ ಸಾಗುತ್ತಲೇ ರಸ್ತೆಯ ಏರು ಎದುರಾದಾಗ ಇದು ಮೈದಾನಿನ  ಸೈಕಲ್ ಸವಾರಿಯಂತಲ್ಲ ಎಂಬ ಸತ್ಯ ಅರಿವಾಗತೊಡಗಿತು. ಕೈ ಕಾಲುಗಳ ಶಕ್ತಿಯೆಲ್ಲ ಉಡುಗಿ ಹೋದಂತಾಗಿ ಏದುಸಿರು ಬರತೊಡಗಿತು.  ಆದರೂ ಮರ್ಯಾದೆಯ ಪ್ರಶ್ನೆಯಾಗಿದ್ದರಿಂದ ಪೆಡಲ್ ತುಳಿಯುವುದನ್ನು ಮುಂದುವರಿಸಿದೆ.  ಹೀಗೆ ಉಜಿರೆ ದಾಟಿ ಸ್ವಲ್ಪ ದೂರ ಬರುತ್ತಲೇ  ಸ್ಪ್ರಿಂಗಿನ ಒತ್ತಡಕ್ಕೆ ಕ್ಯಾರಿಯರಲ್ಲಿದ್ದ ಚೀಲ ಒಡೆದು ಅದರಲ್ಲಿದ್ದ ಹುರುಳಿಯೆಲ್ಲ ರಸ್ತೆ ಪಾಲಾಯಿತು. ತುಂಬಿಸಿಕೊಳ್ಳೋಣವೆಂದರೆ ಬೇರೆ ಚೀಲ ನನ್ನಲ್ಲಿರಲಿಲ್ಲ.  ಅಲ್ಲೇ ಸಾಗುತ್ತಿದ್ದ  ಹಳ್ಳಿಗನೋರ್ವನಿಗೆ  ತನ್ನ ಅಂಗವಸ್ತ್ರದಲ್ಲಿ ಕಟ್ಟಿಕೊಂಡು ಅದನ್ನೊಯ್ಯುವಂತೆ ಹೇಳಿ ಪಯಣ ಮುಂದುವರೆಸಿದೆ.  ಈ ರೀತಿ ಹೊಸ ಸೈಕಲಿಗೆ ಪ್ರಥಮ ದಿನ ಹುರುಳಿಯ ಬಲಿ ಸಂದಿತು.

ಮರುದಿನ ಬೆಳಗ್ಗೆ ಸ್ವಲ್ಪ ಬೇಗ ಹೊರಟು ಅದರಲ್ಲೇ ಕಾಲೇಜಿಗೆ ಹೋದೆ.  ಆ ಸೈಕಲ್ಲಿಗೆ ಆಂಶಿಕ ಗೇರ್ ಕೇಸ್ ಮಾತ್ರ ಇದ್ದುದರಿಂದ ಶೇಷಗಿರಿ ಶೆಣೈ ಅವರಲ್ಲಿ ಚೈನನ್ನು ಪೂರ್ತಿ ಕವರ್ ಮಾಡುವ ಬೇರೆ ಗೇರ್ ಕೇಸ್ ಹಾಕಿಸಿದೆ. ಒಂದು ಚಂದದ ಸೀಟ್ ಕವರ್, ರೋಲ್ ಕವರ್ ಮತ್ತು ಬಣ್ಣದ ಗೊಂಡೆಗಳಂತೆ ಕಾಣಿಸುವ ಹಬ್ ಬ್ರಶ್ಯುಗಳನ್ನೂ ಖರೀದಿಸಿದೆ. ಅಸಲಿ ಹೂವಿನಂತೆ ಕಾಣಿಸುವ ಪ್ಲಾಸ್ಟಿಕ್ ಪುಷ್ಪವೊಂದನ್ನು ಹ್ಯಾಂಡಲ್ ಬಾರಿಗೆ ಸಿಕ್ಕಿಸಿದೆ. ಪ್ರಭು ಕೇನ್ ವರ್ಕ್ಸ್‌ನಿಂದ ಒಂದು ಬೆತ್ತದ ಬುಟ್ಟಿಯನ್ನೂ ಖರೀದಿಸಿ ಕ್ಯಾರಿಯರಿಗೆ ಅಳವಡಿಸಿಕೊಂಡೆ. ಇದರಿಂದ ಪುಸ್ತಕಗಳನ್ನು, ಸಣ್ಣ ಪುಟ್ಟ ವಸ್ತುಗಳನ್ನು ಇಟ್ಟುಕೊಳ್ಳಲು ತುಂಬಾ ಅನುಕೂಲವಾಯಿತು. ಕೆಲವು ದಿನಗಳ ನಂತರ ಕಾರ್ಕಳದಿಂದ ಒಂದು ಗಾಳಿ ಹಾಕುವ  ಪಂಪ್ ಕೂಡ ತರಿಸಿಕೊಂಡೆ. ದಿನಾ ಸಂಜೆ ಹಿಂತಿರುಗಿದೊಡನೆ ಸೈಕಲನ್ನು ಒರೆಸಿ ಶುಭ್ರವಾಗಿಡುತ್ತಿದ್ದೆ. ವಾರಕ್ಕೊಮ್ಮೆ ಚಕ್ರಗಳಿಗೆ, ಚೈನಿಗೆ ಎಣ್ಣೆ ಬಿಡುತ್ತಿದ್ದೆ. ಕಾಲೇಜು ಇಲ್ಲದಿದ್ದಾಗ ಊರಿನಲ್ಲಿದ್ದ ನಮ್ಮ ಮೂರು ಮನೆಗಳ ಮಧ್ಯೆ ಹಾಲು, ಮಜ್ಜಿಗೆಗಳ ಆದಾನ ಪ್ರದಾನದ ನೆಪದಲ್ಲಿ  ಓಡಾಡುತ್ತಿದ್ದೆ. ಪೇಟೆಯಿಂದ ದಿನಸಿ ಸಾಮಾನು ತರಲು ನಾನೇ  ಹೋಗುತ್ತಿದ್ದೆ. ಮನೆಗೆ ಬರುವ ನೆಂಟರಿಷ್ಟರನ್ನು ಕ್ಯಾರಿಯರ್ ಮೇಲೆ ಕೂರಿಸಿ ಡಬಲ್ ರೈಡ್ ಮಾಡಿಕೊಂಡು ಬಸ್ಸಿಗೆ ಬಿಡುತ್ತಿದ್ದೆ. ಹೀಗೆ ಕೂತು ಅಭ್ಯಾಸವಿಲ್ಲದವರ ಲಗೇಜನ್ನಾದರೂ ಒಯ್ದು ಕೊಡುತ್ತಿದ್ದೆ. ಉಜಿರೆಯಿಂದ ವಾಪಸು ಬರುವಾಗ ಗೋಪಾಲ ಮಾಸ್ಟ್ರ ಅಂಗಡಿಯಿಂದ ಪಾರ್ಲೆ ಗ್ಲುಕೊ ಬಿಸ್ಕೆಟ್ ಪ್ಯಾಕೆಟ್ ಒಂದನ್ನು ಕೊಂಡು ಬೆತ್ತದ ಬುಟ್ಟಿಯಲ್ಲಿರಿಸಿ ಒಂದೊಂದನ್ನೇ ಬಾಯಿಗೆ ಹಾಕುತ್ತಾ ಬಂದರೆ ದಾರಿ ಸವೆದುದೇ ಗೊತ್ತಾಗುತ್ತಿರಲಿಲ್ಲ. ಮುಂಡಾಜೆ ಮುಟ್ಟುವಾಗ ಪ್ಯಾಕೆಟ್ ಖಾಲಿಯಾಗಿರುತ್ತಿತ್ತು. ಹೀಗೆ ದಿನಗಳು ಸೈಕಲಿನ ಸಹವಾಸದಲ್ಲಿ ಸುಖವಾಗಿ ಸಾಗುತ್ತಿದ್ದವು.

ಒಂದು ದಿನ ಬೆಳಗ್ಗೆ ಎದ್ದು ನೋಡಿದಾಗ ಹಿಂಬದಿಯ ಚಕ್ರದಲ್ಲಿ ಗಾಳಿ ಕಮ್ಮಿಯಾಗಿರುವುದು ಗಮನಕ್ಕೆ ಬಂತು. ಒಮ್ಮೆ ಫುಲ್ ಗಾಳಿ ತುಂಬಿಕೊಂಡು ನಮ್ಮೂರಿನ ಸಕಲಕಲಾವಲ್ಲಭ ಎನಿಸಿಕೊಂಡಿದ್ದ ಅಸ್ರಣ್ಣರ ಬಳಿ ಹೋದೆ.   ಒಂದೋ ಪಂಕ್ಚರ್ ಆಗಿರಬಹುದು ಅಥವಾ ವಾಲ್ವ್ ಟ್ಯೂಬ್ ತೊಂದರೆ ಇರಬಹುದು ಎಂದು ಡಯಗ್ನೋಸ್ ಮಾಡಿದ ಅವರು ವಾಲ್ವ್ ಟ್ಯೂಬ್ ಹೊರತೆಗೆದು ಟ್ಯೂಬಲ್ಲಿ ಗಾಳಿ ಇಲ್ಲದಂತೆ ಮಾಡುವುದು, ಲಿವರ್‌ಗಳನ್ನು ಬಳಸಿ ಟೈರನ್ನು ರಿಮ್ಮಿನಿಂದ ಬೇರ್ಪಡಿಸುವುದು, ಟ್ಯೂಬನ್ನು ಹೊರಗೆಳೆದುಕೊಳ್ಳುವುದು, ಮತ್ತೆ ಟ್ಯೂಬಿಗೆ ವಾಲ್ವ್ ಟ್ಯೂಬ್ ಸಿಕ್ಕಿಸಿ ಗಾಳಿ ತುಂಬಿಸುವುದು, ಬೋಗುಣಿಯಲ್ಲಿರುವ ನೀರಿನಲ್ಲಿ  ಟ್ಯೂಬನ್ನು ಮುಳುಗಿಸಿ ಎಲ್ಲಿಂದಲಾದರೂ ಗಾಳಿ ಗುಳ್ಳೆಗಳು ಬರುತ್ತವೆಯೇ ಎಂದು ಪರೀಕ್ಷಿಸುವುದು ಇತ್ಯಾದಿ ಕೆಲಸಗಳನ್ನು  ಮಾಡುವಾಗ ನಾನೂ ಕುತೂಹಲದಿಂದ ಗಮನಿಸಿದೆ. ಒಂದೆಡೆ ಗಾಳಿಗುಳ್ಳೆಗಳು ಬರುತ್ತಿರುವುದನ್ನು ಕಂಡ ಅವರು ಆ ಜಾಗ ಗುರುತಿಟ್ಟುಕೊಂಡು ಟ್ಯೂಬಿನ ಗಾಳಿ ಪೂರ್ತಿ ತೆಗೆದರು.  ಆ ಭಾಗವನ್ನು ಬಟ್ಟೆಯಿಂದ ಚೆನ್ನಾಗಿ ಒರಸಿ ಸ್ಯಾಂಡ್ ಪೇಪರಿನಿಂದ ಉಜ್ಜಿದರು. ತಮ್ಮ ಬಳಿ ಇದ್ದ ಹಳೆ ಟ್ಯೂಬೊಂದರಿಂದ ವೃತ್ತಾಕಾರದ ಭಾಗವನ್ನು ಕತ್ತರಿಸಿ ತೆಗೆದು ಅದನ್ನೂ ಸ್ವಚ್ಛಗೊಳಿಸಿ ಸ್ಯಾಂಡ್ ಪೇಪರಿನಿಂದ ಉಜ್ಜಿದರು. ಟ್ಯೂಬೊಂದರಿಂದ ಸ್ವಲ್ಪ ರಬ್ಬರ್ ಸೊಲ್ಯೂಷನನ್ನು ಸೈಕಲ್ ಟ್ಯೂಬಿನ ಗುರುತಿಸಿದ ಭಾಗಕ್ಕೆ ಕೈಬೆರಳಿನಿಂದ ಸಮನಾಗಿ ಸವರಿ ಒಂದೆರಡು ನಿಮಿಷ ಒಣಗಲು ಬಿಟ್ಟರು.  ಕತ್ತರಿಸಿ ಸ್ವಚ್ಛಗೊಳಿಸಿದ್ದ ವೃತ್ತಾಕಾರದ ರಬ್ಬರನ್ನು ಆ ಭಾಗದ ಮೇಲೆ ಇಟ್ಟು ಕೈಯಿಂದ ಚೆನ್ನಾಗಿ ಒತ್ತಿದರು. ಮತ್ತೆ ಸೈಕಲ್ ಟ್ಯೂಬಿಗೆ ಗಾಳಿತುಂಬಿ ನೀರಿನಲ್ಲಿಟ್ಟು ಪರೀಕ್ಷಿಸಿದಾಗ ಗಾಳಿಗುಳ್ಳೆಗಳು ಬರುವುದು ನಿಂತಿತ್ತು. ನಂತರ ಗಾಳಿ ತೆಗೆದ ಟ್ಯೂಬನ್ನು ಟಯರಿನ ಒಳಗೆ ತೂರಿಸಿ ಲಿವರ್‌ಗಳ ಸಹಾಯದಿಂದ ಟಯರನ್ನೂ ರಿಮ್ಮಿನ ಒಳಗೆ ಸೇರಿಸಿ ಗಾಳಿ ತುಂಬಿ ಮರುದಿನಕ್ಕೆ  ಗಾಳಿ ಕಮ್ಮಿ ಆಗಿದ್ದರೆ ವಾಲ್ವ್ ಟ್ಯೂಬಿನ ರಬ್ಬರ್ ಬದಲಾಯಿಸ ನೋಡಬೇಕು ಎಂದು ಹೇಳಿದರು.  ಇನ್ನು ಮುಂದೆ ಈ ಕೆಲಸ ನಾನೂ ಮಾಡಬಲ್ಲೆ ಎಂಬ ವಿಶ್ವಾಸ ನನ್ನಲ್ಲಿ ಮೂಡಿತು.  ಶಾಲಾ ಪಠ್ಯದಲ್ಲೂ ಇಂಥ ಕೆಲಸಗಳ ಬಗ್ಗೆ ಮಾಹಿತಿ ಇದ್ದರೆ ಎಷ್ಟು  ಚೆನ್ನಾಗಿರುತ್ತಿತ್ತು ಎಂದು ನನಗಾಗ ಅನ್ನಿಸಿದ್ದುಂಟು.

ಮರುದಿನವೇ ಪಂಕ್ಚರ್ ರಿಪೇರಿಗೆ ಬೇಕಾದ ಲಿವರ್‌ಗಳು, ರಬ್ಬರ್ ಸೊಲ್ಯೂಷನ್, ಸ್ಯಾಂಡ್ ಪೇಪರ್, ಹಳೆ ಟ್ಯೂಬಿನ ಒಂದಷ್ಟು ತುಂಡುಗಳು, ಒಂದಡಿ ವಾಲ್ವ್ ಟ್ಯೂಬ್ ಇತ್ಯಾದಿಗಳನ್ನು ಜೋಡಿಸಿಕೊಂಡು ಪಂಕ್ಚರ್ ಕಿಟ್ ತಯಾರಿಸಿಟ್ಟುಕೊಂಡೆ. ಸ್ಪಾನರ್, ಇಕ್ಕುಳ ಮುಂತಾದವು ಮೊದಲೇ ಮನೆಯಲ್ಲಿದ್ದವು. ಮುಂದೆ ಲೆಕ್ಕವಿಲ್ಲದಷ್ಟು ಸಲ ಈ ಹತ್ಯಾರುಗಳು ಉಪಯೋಗಕ್ಕೆ ಬಂದವು. ಆ ಕಾಲದ ಟ್ಯೂಬು, ಟೈರುಗಳು ಅಷ್ಟೊಂದು ಉತ್ತಮ ಗುಣಮಟ್ಟದವು ಆಗಿರುತ್ತಿರಲಿಲ್ಲವೋ ಏನೋ. ಅದೂ ಅಲ್ಲದೆ ನಮ್ಮ ಮನೆಯಿಂದ ಉಜಿರೆಗೆ ಹೋಗುವ ದಾರಿಯ ಸ್ವಲ್ಪ ಭಾಗ ಕಲ್ಲು ಮಣ್ಣುಗಳ ಕಚ್ಚಾ ರಸ್ತೆ ಆಗಿದ್ದುದರಿಂದ ಮಾಮೂಲಿ ಟ್ಯೂಬ್ ಪಂಕ್ಚರ್ ಮಾತ್ರವಲ್ಲದೆ ಟೈರುಗಳೂ ಬೇಗ ಹಾಳಾಗುತ್ತಿದ್ದವು. ಕೆಲವು ಸಲ ಟೈರಿಗೆ ಗುಳ್ಳೆಗಳು ಬರುತ್ತಿದ್ದವು. ಇನ್ನು ಕೆಲವು ಸಲ ಟೈರ್ ಬದಿಯ ಸರಿಗೆ ಬಿಟ್ಟುಕೊಂಡು ಟ್ಯೂಬ್ ಹೊರಗೆ ಬರುತ್ತಿತ್ತು. ಆಗ ಹಳೆ ಟೈರಿನ ತುಂಡು ಒಳಗೆ ಇಡುವುದು, ಫ್ಯೂಸ್ ವೈರಿನಿಂದ ಬಿಚ್ಚಿದ ಸರಿಗೆಯನ್ನು ಹೊಲಿಯುವುದು ಇತ್ಯಾದಿ ತೇಪೆ ಕೆಲಸಗಳನ್ನು ಮಾಡಿ ಸಾಧ್ಯವಾದಷ್ಟು ದಿನ ದೂಡುತ್ತಿದ್ದೆ. ಕೆಲವೊಮ್ಮೆ ನಡುದಾರಿಯಲ್ಲಿ ಹೀಗಾದಾಗ ಟಯರಿಗೆ ಹಗ್ಗ ಬಿಗಿಯಾಗಿ ಸುತ್ತಿ ಪ್ರಯಾಣ ಮುಂದುವರಿಸಿದ್ದೂ ಇದೆ. ಇನ್ನು ಸಾಧ್ಯವೇ ಇಲ್ಲವೆಂದು ಅನಿಸಿದಾಗ ‘ಇದು ಎಲ್ಲ ಹೋಗಿದೆ ಭಟ್ರೇ’ ಎಂದು ಹೇಳುವ ಶೇಷಗಿರಿಯವರಲ್ಲಿಗೆ ಹೋಗಿ ಟೈರ್, ಟ್ಯೂಬುಗಳನ್ನು ಬದಲಾಯಿಸಲೇ ಬೇಕಾಗುತ್ತಿತ್ತು. ಒಮ್ಮೆ ಕಾಲೇಜಲ್ಲಿ ಪರೀಕ್ಷೆ ಇದ್ದ ದಿನ ನಡುದಾರಿಯಲ್ಲಿ ಟ್ಯೂಬಿನ ನೆಕ್ ತುಂಡಾಗಿ ಸೈಕಲ್ ಕೈ ಕೊಟ್ಟಿತ್ತು. 2 ಕಿ.ಮೀ ತಳ್ಳಿಕೊಂಡು ಹೋಗಿ ರಿಪೇರಿಗೆ ಕೊಟ್ಟು ಕಾಲೇಜು ಮುಟ್ಟುವಾಗ ಅರ್ಧ ಗಂಟೆ ತಡವಾಗಿತ್ತು. ಚೈನ್ ಸಡಿಲಗೊಂಡು ಕೇಸಿಗೆ ತಾಗಿ ಕಟ ಕಟ ಸದ್ದು ಬರತೊಡಗುವುದು, ಪೆಡಲ್ ಶಾಫ್ಟಿನ ಕ್ವಾರ್ಟರ್ ಪಿನ್ ಸಡಿಲಗೊಡು ಪ್ಲೇ ಕಾಣಿಸಿಕೊಳ್ಳುವುದು,  ಕ್ಯಾರಿಯರಿನ ಕಾಲು ತುಂಡಾಗುವುದು ಮುಂತಾದ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುತ್ತವೇ ಇದ್ದವು.

ನೀರು ತಾಗಿದರೆ ಸೈಕಲ್ ತುಕ್ಕು ಹಿಡಿದು ಹಾಳಾಗುತ್ತದೆಂದು ಯಾರೋ ಹೇಳಿದ್ದರಿಂದ ಮೊದಲ ಮಳೆಗಾಲದಲ್ಲಿ ಚಕ್ರಗಳಿಗೆ ಮತ್ತು ಹ್ಯಾಂಡಲ್ ಬಾರಿಗೆ  ಗ್ರೀಸ್ ಬಳಿದು ಸೈಕಲನ್ನು ಒಳಗಿಟ್ಟಿದ್ದೆ. ಆದರೆ ಈ ಭೀತಿ ನಿರಾಧಾರ ಎಂದು ಅರಿವಾಗಿ ಮುಂದಿನ ಮಳೆಗಾಲಗಳಲ್ಲಿ ಕೆಲವೊಮ್ಮೆ ಒಂದು ಕೈಯಲ್ಲಿ ಕೊಡೆ ಹಿಡಿದು, ಕೆಲವೊಮ್ಮೆ ರೇನ್‌ಕೋಟ್  ಧರಿಸಿ, ಮಳೆ ತುಂಬಾ ಜಾಸ್ತಿ ಇದ್ದರೆ ಎರಡನ್ನೂ ಬಳಸಿ  ಸೈಕಲ್ ಸವಾರಿ ಮುಂದುವರೆಸಿದೆ.

ಅಂತೂ ಕಾಲೇಜಿಗೆ ಹೋಗಿ ಬರಲು ದಿನಕ್ಕೆ ಸರಾಸರಿ 20 ಕಿ.ಮೀ ಸವಾರಿ ಮಾಡುತ್ತಾ ಮಾಡುತ್ತಾ ಸಾಕಷ್ಟು ಪರಿಣಿತಿ ಗಳಿಸಿದೆ.  ಎಂಥ ಏರುಗಳಲ್ಲೂ ಇಳಿದು ತಳ್ಳದೆ ಪೆಡಲ್ ಮಾಡಿಯೇ ಸಾಗುತ್ತಿದ್ದೆ. ಕೆಲವು ಕಡಿದಾದ ಏರುಗಳಲ್ಲಿ ಪೆಡಲ್ ಮೇಲೆ ನಿಂತು ದೇಹದ ಭಾರವನ್ನೂ ಸದುಪಯೋಗ ಮಾಡಿಕೊಳ್ಳಬೇಕಾಗುತ್ತಿತ್ತು. ನಿಂತಲ್ಲೇ ನಿಲ್ಲುವುದು, ಪೆಡಲ್ ಮೇಲೆ ಕಾಲಿಡದೆ ನೆಲದಿಂದ ಹಾರಿ ನೇರವಾಗಿ ಸೀಟ್ ಮೇಲೆ ಕುಳಿತುಕೊಳ್ಳುವುದು, ಎರಡೂ ಕೈ ಬಿಟ್ಟು ಓಡಿಸುವುದು ಮುಂತಾದ ಸ್ಟಂಟ್‌ಗಳನ್ನೂ ಕಲಿತೆ.  ಸೋಮಂತಡ್ಕದ ನಂತರ ಸೀಟು ಎಂಬಲ್ಲಿ ಎರಡೂ ಕೈ ಬಿಟ್ಟರೆ  ಮುಂದಿನ ಹದವಾದ ಇಳಿಜಾರು ರಸ್ತೆಯಲ್ಲಿ ಸಾಗುತ್ತಾ ನಿಡಿಗಲ್ ಸೇತುವೆ ದಾಟಿದ ನಂತರವೇ ಮತ್ತೆ ಹ್ಯಾಂಡಲ್ ಹಿಡಿಯುತ್ತಿದ್ದುದು.

ಒಂದು ದಿನ ಕಾಲೇಜಿಂದ ಹಿಂತಿರುಗುತ್ತಾ ಸೋಮಂತಡ್ಕದ ಕಡಿದಾದ ಇಳಿಜಾರಲ್ಲಿ ಹೀಗೆ ಎರಡೂ ಕೈಗಳನ್ನು ಬಿಟ್ಟುಕೊಂಡು ವೇಗವಾಗಿ ಬರುತ್ತಿದ್ದೆ.  ಬಹುಶಃ ರಾಂಗ್ ಸೈಡಲ್ಲೂ ಇದ್ದೆ ಅನ್ನಿಸುತ್ತದೆ. ಇಳಿಜಾರಿನ ಕೊನೆಯಲ್ಲಿರುವ ತಿರುವಿನಲ್ಲಿ  ಒಮ್ಮೆಗೇ ಎದುರಿಂದ ಅಂಬಾಸಿಡರ್ ಕಾರೊಂದು ಪ್ರತ್ಯಕ್ಷವಾಯಿತು.  ತಕ್ಷಣ ಎರಡೂ ಬ್ರೇಕುಗಳನ್ನು ಹೇಗೆ ಒತ್ತಿದೆ ಎಂದು ಗೊತ್ತಿಲ್ಲ.  ಕಾರಿನವನೂ ಇದ್ದ ಶಕ್ತಿಯೆಲ್ಲ ಬಳಸಿ ಬ್ರೇಕ್ ಹಾಕಿದ್ದರಿಂದ ಅವಘಡವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿತು.  ಸಾವರಿಸಿಕೊಂಡ ಕಾರಿನವನು ಬೈಯಲು ಬಾಯಿ ತೆರೆಯುವಷ್ಟರಲ್ಲಿ ನಾನು ಕಾಣದಂತೆ ಮಂಗಮಾಯವಾಗಿದ್ದೆ!

ಒಂದು ಸಲ ಅಡ್ಡ ಹಾಯುತ್ತಿದ್ದ ಹಾವಿನ ಮೇಲೂ ಸೈಕಲ್ ಹರಿಸಿದ್ದುಂಟು! ಬಹುಶಃ ಅದು ಕೇರೆ ಹಾವಿರಬೇಕು.  ಆದರೂ ಎಲ್ಲಿ ಓಡಿಸಿಕೊಂಡು ಬರುತ್ತದೋ ಎಂಬ ಭಯದಿಂದ ಏನಾಯಿತೆಂದು ಹಿಂತಿರುಗಿಯೂ ನೋಡದೆ ಸ್ವಲ್ಪ ದೂರ ಎರಡೂ ಕಾಲುಗಳನ್ನು ಮೇಲೆತ್ತಿ ಹಿಡಿದು ಸಾಗಿ ಆ ಮೇಲೆ ವೇಗವಾಗಿ ಪೆಡಲ್ ಮಾಡುತ್ತಾ ಮನೆ ಮುಟ್ಟಿದ ಮೇಲೆಯೇ ನಿಟ್ಟುಸಿರು ಬಿಟ್ಟದ್ದು.

ನಮ್ಮ ಸೈಕಲಿಗೆ ಡೈನಮೋ ಇದ್ದರೂ ರಾತ್ರಿ ಸವಾರಿಯ ಸಂದರ್ಭವೇ ಇರದ್ದರಿಂದ ಅದರ ಬೆಳಕಿನಲ್ಲಿ  ಓಡಿಸುವ ಅನುಭವ ಹೊಂದಲಾಗಿರಲಿಲ್ಲ.  ಆ ವರ್ಷದ ಕಾಲೇಜು ಡೇ ದಿನ ಇದಕ್ಕೆ ಮುಹೂರ್ತ ಒದಗಿ ಬಂತು.  ರಾತ್ರೆ ಕಾರ್ಯಕ್ರಮಗಳೆಲ್ಲ ಮುಗಿದು ಸೈಕಲ್ ಹೊರಡಿಸಿ ಡೈನಮೋ ಗುಂಡಿ ಅದುಮಿದರೆ ಯಾಕೋ ಲೈಟ್ ಹೊತ್ತಲೇ ಇಲ್ಲ.  ನೋಡಿದರೆ ಯಾರೋ ಕಿಡಿಗೇಡಿಗಳು ಬಲ್ಬ್ ಹಾರಿಸಿ ರಾತ್ರಿಯ ತಂಪಾದ ವಾತಾವರಣದಲ್ಲಿ  ಡೈನಮೋ ಬೆಳಕಿನಲ್ಲಿ ಪೆಡಲ್ ಮಾಡುತ್ತಾ ಸಾಗುವ ನನ್ನ ಕನಸಿಗೆ ತಣ್ಣೀರೆರಚಿದ್ದರು. ಬೆಳದಿಂಗಳ ಬೆಳಕಿನಲ್ಲಿ ಹೇಗೋ ಮನೆ ಸೇರಿದೆನೆನ್ನಿ.

ಪಂಚಾಯತ್‌ನಿಂದ ಸೈಕಲಿಗೆ ಬ್ಯಾಡ್ಜ್  ಮಾಡಿಸಿಕೊಳ್ಳಬೇಕೆಂಬ  ನಿಯಮವಿತ್ತು.  ತಪಾಸಣೆ, ದಂಡದಂಥ ಕಠಿಣ ಕ್ರಮಗಳು ಇಲ್ಲದಿದ್ದರೂ ನಾನು ಬ್ಯಾಡ್ಜ್  ಮಾಡಿಸಿ  ಚಕ್ರದ ಕಡ್ಡಿಗೆ ಅಳವಡಿಸಿಕೊಂಡಿದ್ದೆ.
 
ಡಿಗ್ರಿ ಮುಗಿದ ನಂತರದ  ಸುಮಾರು ಒಂದು ವರ್ಷ ಉದ್ಯೋಗ ಬೇಟೆ ನಡೆಸುತ್ತಾ ಮನೆಯಲ್ಲೇ ಇದ್ದ ಸಮಯದಲ್ಲೂ ಸೈಕಲ್ ಬಳಸದ, ಅದರ ಸೇವೆ ಮಾಡದ ಒಂದು ದಿನವೂ ಇರಲಾರದು.  ಆ ವರ್ಷದ ದಿನಚರಿಯ ಪುಟಗಳಲ್ಲೆಲ್ಲ  ಒಂದಲ್ಲ ಒಂದು ಕಾರಣಕ್ಕೆ ಸೈಕಲ್ ವ್ಯಾಪಿಸಿಕೊಂಡಿದೆ   1973ರಲ್ಲಿ ನೌಕರಿಗಾಗಿ ಊರು ಬಿಡುವ ವರೆಗೂ  ನನ್ನ ನೆಚ್ಚಿನ ಸಂಗಾತಿಯಾಗಿ ಮುಂದುವರಿದ ಆ ಸೈಕಲ್  ನಂತರವೂ ಅನೇಕ ವರ್ಷ ಅಣ್ಣನ ಮಕ್ಕಳಿಗೆ ಸಾರ್ಥಕ ಸೇವೆ ಸಲ್ಲಿಸಿತು.