Thursday 21 December 2017

ನಮ್ಮ ಮೊದಲ ಟೀವಿ


ನಾನು ಮೊದಲು ಟೀವಿ ನೋಡಿದ್ದು 1977ರಲ್ಲಿ ಟೆಲಿಕಾಂ ಜೂನಿಯರ್ ಎಂಜಿನಿಯರ್ ತರಬೇತಿಯಲ್ಲಿದ್ದಾಗ.  ಬರಿ ನೋಡಿದ್ದು ಮಾತ್ರ ಅಲ್ಲ, ಅದರಲ್ಲಿ ಕಾಣಿಸಿಕೊಂಡಿದ್ದೆ ಕೂಡ.  ಅಲ್ಲಿಯ  Audio Visual Labಗೆ ಒಂದು ಕಪ್ಪು ಬಿಳುಪು ಟೀವಿ ಮತ್ತು ಒಂದು ವಿಡಿಯೊ ಕ್ಯಾಮರಾ ಆಗ ತಾನೇ ಬಂದಿತ್ತು.  ಪ್ರಯೋಗಾರ್ಥವಾಗಿ ನಮ್ಮ ಕ್ಲಾಸ್ ರೂಮಿನ ಚಿತ್ರೀಕರಣ ಮಾಡಿದ್ದರು.  ಕ್ಲಾಸಲ್ಲಿ ನಾನು ಯಾವಾಗಲೂ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದೆ. ಟಿ.ವಿ.ಯಲ್ಲಿ ಕಾಣಿಸಿಕೊಳ್ಳಬೇಕೆಂಬ ಉತ್ಸಾಹದಿಂದ ಅಂದು ಬೋಧಕರಿಗೆ ಎಂದಿಗಿಂತ ಸ್ವಲ್ಪ ಜಾಸ್ತಿಯೇ ಪ್ರಶ್ನೆಗಳನ್ನು ಎಸೆದಿದ್ದೆ.  ತಕ್ಷಣ ಆ ದೃಶ್ಯವನ್ನು ಟೀವಿಯಲ್ಲಿ  ತೋರಿಸಿದಾಗ  ನಾನು ಮಾತು ಮಾತಿಗೂ ತಲೆಯನ್ನು ಅತ್ತ ಇತ್ತ ಆಡಿಸುತ್ತಿರುವುದು ಅರಿವಾಯಿತು!  ಆ ಮೇಲೆ ಮಾತನಾಡುವಾಗ ತಲೆಯನ್ನು ನಿಯಂತ್ರಣದಲ್ಲಿಡತೊಡಗಿದೆ.  ಅದೇ ವರ್ಷ ಲಾಲ್ ಬಾಗ್ ಸಮೀಪ ನಡೆದ ಒಂದು ವಿಜ್ಞಾನ ಪ್ರದರ್ಶನದಲ್ಲಿ ಕಲರ್ ಟೀವಿಯನ್ನು ನೋಡುವ ಮತ್ತು ಅದರಲ್ಲಿ ಕಾಣಿಸಿಕೊಳ್ಳುವ ಅವಕಾಶವೂ ದೊರಕಿತು.  ಈ ಸಲ ತಲೆ ಸ್ಥಿರವಾಗಿಟ್ಟುಕೊಂಡಿದ್ದೆ!

ನಾನು ನಿಜವಾದ ಟೀವಿ ಪ್ರಸಾರ ವೀಕ್ಷಿಸಿದ್ದು 70ರ ದಶಕದ ಕೊನೆಯಲ್ಲಿ.  ಅದುವರೆಗೆ ಸಾತಾರಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನನ್ನ ಅಣ್ಣ ತನ್ನ ಕರ್ಮಭೂಮಿಯನ್ನು ಪುಣೆಗೆ ಬದಲಾಯಿಸಿಕೊಂಡಿದ್ದರು.  ನಾನೊಮ್ಮೆ ಅಲ್ಲಿಗೆ ಹೋದಾಗ ಒಂದು ದಿನ ಅವರ ಸಾತಾರಾ ಬಾಡಿಗೆ ಮನೆಯೊಡೆಯ ದಾಂಡೇಕರ್ ತನ್ನ ಪುಣೆ ನಿವಾಸಕ್ಕೆ ನಮ್ಮನ್ನೆಲ್ಲ ಆಹ್ವಾನಿಸಿದ್ದರು.  ತಮ್ಮ ಹೊಸ ಟೀವಿಯನ್ನು ನಮಗೆ ತೋರಿಸುವುದು ಅವರ ಉದ್ದೇಶವಾಗಿತ್ತು. ಕಾಕತಾಳೀಯವೋ ಎಂಬಂತೆ ಅಲ್ಲಿ ನನಗೆ ಮುಕೇಶ್  ಲೈವ್ ಕಾರ್ಯಕ್ರಮ ವೀಕ್ಷಿಸುವ  ರಸದೌತಣ ದೊರಕಿತ್ತು.  ಒಂದು ವರ್ಷದ ನಂತರ ಮತ್ತೆ ಪುಣೆಗೆ ಹೋದಾಗ ಅಣ್ಣನ ಮನೆಗೇ ಟೀವಿ ಬಂದಿತ್ತು. ಬುಧವಾರ ಬರುತ್ತಿದ್ದ ಛಾಯಾಗೀತ್ ಕಾರ್ಯಕ್ರಮದಿಂದ ಅವರು ನೇರವಾಗಿ ಟೇಪ್ ರೆಕಾರ್ಡರಲ್ಲಿ ಧ್ವನಿಮುದ್ರಿಸಿಕೊಳ್ಳುತ್ತಿದ್ದ  ಹಾಡುಗಳ ಸ್ಪಷ್ಟತೆ ಕಂಡು ದಂಗಾಗಿದ್ದೆ.  ಮಂಗಳೂರಿಗೂ ದೂರದರ್ಶನ ಪ್ರಸಾರ ವಿಸ್ತರಿಸಿ ನಾನೂ ಒಂದು ಟೀವಿ ಹೊಂದುವಂತಾಗಿ ಹೀಗೆ ನನ್ನಿಷ್ಟದ ಹಾಡುಗಳನ್ನು ಧ್ವನಿಮುದ್ರಿಸುವ  ಕನಸು ಕಾಣತೊಡಗಿದ್ದೆ.

1982ರ ಏಷ್ಯನ್ ಗೇಮ್ಸ್ ಸಂದರ್ಭದಲ್ಲಿ ಭಾರತದಲ್ಲಿ ಕಲರ್ ಟೀವಿ ಪ್ರಸಾರ ಆರಂಭಗೊಂಡು ದೇಶದಾದ್ಯಂತ ಮುಖ್ಯ ನಗರಗಳಲ್ಲಿ ದೂರದರ್ಶನದ low power transmitters  ಸ್ಥಾಪಿಸಲ್ಪಟ್ಟವು.  ಮಂಗಳೂರೂ ಅವುಗಳಲ್ಲಿ ಒಂದಾಗಿತ್ತು.  ಕೆಲವೇ ದಿನಗಳಲ್ಲಿ ಇಲ್ಲಿಯ ರೇಡಿಯೊ ಅಂಗಡಿಗಳೆಲ್ಲ ಟೀವಿ ಶೋರೂಂಗಳಾಗಿ ಪರಿವರ್ತನೆ ಹೊಂದಿದವು.  ಸಾಯಂಕಾಲಗಳಲ್ಲಿ ಪೇಟೆ ಸುತ್ತುತ್ತಾ  ವಿವಿಧ ಮಾದರಿಯ ಕಪ್ಪು ಬಿಳುಪು ಮತ್ತು ಕಲರ್ ಟೀವಿಗಳನ್ನು ಹೊರಗಿನಿಂದಲೇ ಆಸೆಯ ಕಣ್ಣುಗಳಿಂದ ನೋಡುತ್ತಿದ್ದೆ.  ಒಳಗೆ ಕಾಲಿರಿಸಲು ಜೇಬು ಅನುಮತಿ ಕೊಡುತ್ತಿರಲಿಲ್ಲ.  ಪುರಭವನದ ಹೊರಭಾಗದಲ್ಲಿ ಸಾರ್ವಜನಿಕ ವೀಕ್ಷಣೆಗೆಂದು ಒಂದು ಕಲರ್ ಟೀವಿ ಇಟ್ಟಿದ್ದರು.  ಭಾನುವಾರದ ಹಿಂದಿ ಚಲನಚಿತ್ರವನ್ನು ನೋಡಲು ಮನೆಯವರೆಲ್ಲರೂ  ಒಮ್ಮೊಮ್ಮೆ ಅಲ್ಲಿಗೆ ಹೋಗುತ್ತಿದ್ದೆವು.

ಹೀಗೆಯೇ ಎರಡು ವರ್ಷಗಳು ಕಳೆದವು.  1984ರಲ್ಲಿ ಒಂದು ದಿನ 12 ಇಂಚು ಪರದೆಯ ಚಿಕ್ಕ second hand ಕಪ್ಪು ಬಿಳುಪು ಟೀವಿಯೊಂದು ಅಗ್ಗದ ದರಕ್ಕೆ ಒಂದೆಡೆ ಮಾರಾಟಕ್ಕಿದೆ ಎಂಬ ಸುದ್ದಿ ನಮ್ಮ ಆಫೀಸಿನ ತಾಂತ್ರಿಕ ನಿಪುಣ ಗೆಳೆಯರೊಬ್ಬರ ಮೂಲಕ ಸಿಕ್ಕಿತು. ಟೀವಿ ವೀಕ್ಷಣೆಗೆ ಬೇಕಾದ ಕನಿಷ್ಟ ಅಂತರವೂ ಇಲ್ಲದ ಬೆಂಕಿಪೆಟ್ಟಿಗೆಯಂಥ ಬಾಡಿಗೆ ಮನೆಯಲ್ಲಿ ಆಗ ನಾವಿದ್ದರೂ  ಈ ಸದವಕಾಶ ಕಳೆದುಕೊಳ್ಳಬಾರದು ಎಂದು ನಿರ್ಧರಿಸಿ ಒಂದು ಸಾಯಂಕಾಲ ಟೀವಿ ನೋಡಲು  ಆ ಮಿತ್ರರೊಡನೆ ಹೊರಟೇ  ಬಿಟ್ಟೆ.  Wooden cabinet ಮತ್ತು rolling shutter ಇದ್ದ ಆ ಟೀವಿ Televista ಕಂಪನಿಯದಾಗಿತ್ತು. ಕಲರ್ ಟೀವಿಯ ಭ್ರಮೆ ಮೂಡಿಸಲು ಬಣ್ಣ ಬಣ್ಣದ  ಗಾಜೊಂದು screen ಎದುರಿಗಿತ್ತು. ಚಿತ್ರ ಅಷ್ಟೊಂದು clear ಆಗಿ ಬರದಿದ್ದರೂ ನನಗೆ ಮುಖ್ಯವಾಗಿದ್ದ sound quality ತುಂಬಾ ಚೆನ್ನಾಗಿದ್ದುದರಿಂದ 1500 ರೂ.ಗಳಿಗೆ(ಗಮನಿಸಿ- 15000 ಅಲ್ಲ!) ಆ ಮನೆಯವರೊಡನೆ ವ್ಯವಹಾರ ಕುದುರಿಸಿ antenna ಸಮೇತ  ಟೀವಿಯನ್ನು ಮನೆಗೆ ತಂದೇ ಬಿಟ್ಟೆವು.  ನಾವಿದ್ದ ಬಾಡಿಗೆ ಮನೆಯ ಮಾಲೀಕರು ಏನನ್ನುತ್ತಾರೋ ಎಂಬ ಅಳುಕಿನಿಂದ ಮಾಡಿನ ತುದಿಯಲ್ಲಿ ಹಂಚಿಗೆ ತೂತು ಕೊರೆಯಲು ಹೋಗದೆ  ಆ ತಾಂತ್ರಿಕ ನಿಪುಣ ಮಿತ್ರರು ಪಕ್ಕಾಸು ತುದಿಗೆ antenna   ಅಳವಡಿಸಿಕೊಟ್ಟರು. ಕೆಲವೇ ಕ್ಷಣಗಳಲ್ಲಿ ನಮ್ಮ ಪುಟ್ಟ ಮನೆಯ ಪುಟ್ಟ ಹಜಾರದ ಪುಟ್ಟ ಟೇಬಲ್ ಮೇಲೆ ಕೂತ ಪುಟ್ಟ ಟೀವಿಯಲ್ಲಿ ಚಿತ್ರಗಳು  ಮಾತನಾಡತೊಡಗಿದವು.  ಅಂದು ನಾವು ಮೊತ್ತಮೊದಲು ನೋಡಿದ್ದು ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ವಿವಿಧ ಭಾಷೆಯ ಸಿನಿಮಾ ಹಾಡುಗಳ ಕಾರ್ಯಕ್ರಮ ಚಿತ್ರಮಾಲಾ.

ಆದರೆ ಆ ಟೀವಿಯಲ್ಲಿ ನನ್ನ ಮುಖ್ಯ ಅವಶ್ಯಕತೆಯಾಗಿದ್ದ  ನೇರ ಆಡಿಯೊ ರೆಕಾರ್ಡಿಂಗ್ ಮಾಡಲು head phone jack ಇರಲಿಲ್ಲ. ಹೀಗಾಗಿ ಆ ಭಾನುವಾರ ಪ್ರಸಾರವಾದ ಹರೇ ಕಾಂಚ್ ಕೀ ಚೂಡಿಯಾಂ ಚಿತ್ರದಿಂದ ನನ್ನ ಮೆಚ್ಚಿನ ಹಾಡು ಧಾನಿ ಚುನರೀ ಪಹನ್ ಧ್ವನಿಮುದ್ರಿಸಲಾಗದೆ ಕೈ ಕೈ ಹಿಸುಕಿಕೊಳ್ಳುವಂತಾಯಿತು.  ಮರುದಿನವೇ speakerನಿಂದ parallel connection ಮಾಡಿ  jack ಅಳವಡಿಸಿಕೊಂಡೆ.  ಅಲ್ಲಿಂದ ಉತ್ತಮ ಹಾಡುಗಳಿಗಾಗಿ ಕಾಯುತ್ತಾ ಟೇಪ್ ರೆಕಾರ್ಡರ್ ಸಿದ್ಧವಾಗಿರಿಸಿಕೊಂಡು ಧ್ವನಿಮುದ್ರಿಸುವ ನನ್ನ ಕಾಯಕ ಆರಂಭಗೊಂಡಿತು. ಆಗ ಅನಲಾಗ್ ಪ್ರಸಾರ ಇದ್ದುದರಿಂದ  ಅತ್ಯುತ್ತಮ ಗುಣಮಟ್ಟದ ನೂರಾರು  ಹಾಡುಗಳು ನನ್ನ ಕ್ಯಾಸೆಟ್ಟುಗಳಲ್ಲಿ ಸೆರೆಯಾದವು. ಕೆಳಗಿನ ಚಿತ್ರದಲ್ಲಿ ನನ್ನ ಟೇಪ್ ರೆಕಾರ್ಡರ್ ಯಾವಾಗಲೂ ಟೀವಿಯ ಪಕ್ಕದಲ್ಲೇ ಇರುತ್ತಿದ್ದುದನ್ನು ಗಮನಿಸಬಹುದು.


ಆಗ ದೆಹಲಿಯ ಹಿಂದಿ ಪ್ರಸಾರ ಮಾತ್ರವಿದ್ದು ವಾರದ ದಿನಗಳಲ್ಲಿ ಸಂಜೆ ನಾಲ್ಕರಿಂದ ಹಾಗೂ ಭಾನುವಾರಗಳಂದು ಬೆಳಗ್ಗಿನಿಂದ ರಾತ್ರಿಯ ವರೆಗೆ ದಿನವಿಡೀ ಕಾರ್ಯಕ್ರಮಗಳಿರುತ್ತಿದ್ದವು. ಪ್ರಸಾರ ಆರಂಭದ ಮೊದಲು ಕೂ ಶಬ್ದದೊಡನೆ ನಮಗೆ ಕಪ್ಪು ಬಿಳುಪಿನಲ್ಲಿ ಕಾಣುತ್ತಿದ್ದ ಬಣ್ಣದ ಪಟ್ಟಿಗಳನ್ನು ನೋಡುತ್ತಾ signature tuneಗಾಗಿ ಕಾಯುವುದು ರೋಮಾಂಚಕಾರಿ ಅನುಭವವಾಗಿರುತ್ತಿತ್ತು.  ಭಾನುವಾರ ಅಪರಾಹ್ನ ಒಂದು ಪ್ರಾದೇಶಿಕ ಭಾಷೆಯ ಚಿತ್ರ ಮತ್ತು ಸಂಜೆ  ಒಂದು ಹಿಂದಿ ಚಲನಚಿತ್ರ ಪ್ರಸಾರವಾಗುತ್ತಿತ್ತು.  ಶನಿವಾರದಂದು ಮುಂದಿನ ವಾರದ ಕಾರ್ಯಕ್ರಮಗಳ ಮುನ್ನೋಟದ ಸಾಪ್ತಾಹಿಕಿ ಎಂಬ ಕಾರ್ಯಕ್ರಮವಿರುತ್ತಿತ್ತು.  ಹೆಚ್ಚಾಗಿ ವಾರದ ಎಲ್ಲ ಕಾರ್ಯಕ್ರಮಗಳ ವಿವರ ಮುಗಿದ ಮೇಲೆ ಭಾನುವಾರದ ಚಲನಚಿತ್ರದ ಹೆಸರು ಹೇಳುತ್ತಿದ್ದರು. ಉತ್ತಮ ಹಾಡುಗಳುಳ್ಳ ಯಾವುದಾದರೂ ಚಿತ್ರವೆಂದಾದರೆ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.  ಮರುದಿನ ಸಂಜೆಯ ಸಂಭ್ರಮದ ಬಗ್ಗೆ ಕನಸು ಕಾಣುತ್ತಾ ಸಾಕಷ್ಟು  ಸ್ಥಳಾವಕಾಶವುಳ್ಳ ಕ್ಯಾಸೆಟ್ ಸಿದ್ಧವಾಗಿಟ್ಟುಕೊಂಡು ಕರೆಂಟು ಕೈಕೊಡದಿರಲಿ ಎಂಬ ಹಾರೈಕೆಯೊಡನೆ ಆ ಕ್ಷಣಕ್ಕಾಗಿ ಕಾಯುತ್ತಿದ್ದೆ.   ಕೆಲವು ವೇಳೆ  ಸಾಪ್ತಾಹಿಕಿಯಲ್ಲಿ ಚಲನಚಿತ್ರದ ಹೆಸರು ಹೇಳದೇ ಇರುವುದೂ ಇತ್ತು.  ಆಗ ಮರುದಿನ ಸಂಜೆಯವರೆಗೆ ಕುತೂಹಲದಿಂದ  ಕಾದು ನಮಗಿಷ್ಟವಿಲ್ಲದ ಯಾವುದಾದರೂ ಚಿತ್ರ ಪ್ರಸಾರವಾದರೆ ಆಗುತ್ತಿದ್ದ ನಿರಾಸೆ ಅಷ್ಟಿಷ್ಟಲ್ಲ. ಚಲನ ಚಿತ್ರಗಳಿಂದ ಹಾಡುಗಳನ್ನು ರೆಕಾರ್ಡ್ ಮಾಡಲು ಕಣ್ಣಲ್ಲಿ ಎಣ್ಣೆ ಹಾಕಿ  ಕಾಯಬೇಕಾಗುತ್ತಿತ್ತು.  ಎಷ್ಟು ಎಚ್ಚರ ವಹಿಸಿದರೂ ಕೆಲವು ಸಲ ಹಾಡು ಯಾವ ಕ್ಷಣದಲ್ಲಿ ಆರಂಭವಾಗುತ್ತದೆಂದು ತಿಳಿಯದೆ ಮೊದಲ ಸಾಲು ತಪ್ಪಿ ಹೋಗುತ್ತಿತ್ತು. ಇಲ್ಲವೇ ಕೊಂಯ್ಕ್ ಎಂಬ ಸದ್ದಿನೊಡನೆ ಅರ್ಧದಿಂದ ರೆಕಾರ್ಡ್ ಆಗುತ್ತಿತ್ತು. ಹಾಗಾದ ಎಷ್ಟೋ ಹಾಡುಗಳನ್ನು ಡಿಜಿಟಲ್ ಯುಗ ಆರಂಭವಾದ ಮೇಲೆ ಪ್ಲಾಸ್ಟಿಕ್ ಸರ್ಜರಿ ಮಾಡಿ ಸರಿಪಡಿಸಿಕೊಂಡೆ, 

ಹೆಚ್ಚು ಹಾಡು ಹೆಕ್ಕಲು ಸಿಗುತ್ತಿದ್ದ ರಂಗೋಲಿ ಮತ್ತು ಚಿತ್ರಹಾರ್ ಕಾರ್ಯಕ್ರಮಗಳನ್ನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಇದರಲ್ಲಿ ಬರುವ ಹಾಡುಗಳಲ್ಲಿ ರೇಡಿಯೊದಲ್ಲಿ ಕೇಳುತ್ತಿದ್ದುದಕ್ಕಿಂತ ಹೆಚ್ಚಿನ ಚರಣ ಇರುತ್ತಿದ್ದುದರಿಂದ ನನ್ನ ಕ್ಯಾಸೆಟ್ಟುಗಳಲ್ಲಿ ಆಗಲೇ ಇದ್ದ ಹಾಡುಗಳನ್ನೂ ಮತ್ತೆ ಧ್ವನಿಮುದ್ರಿಸಿಕೊಳ್ಳುತ್ತಿದ್ದೆ.  ವಾರ್ತಾಪ್ರಸಾರವನ್ನೂ ತಪ್ಪದೆ ನೋಡುತ್ತಿದ್ದೆವು.  ರಮಣ್, ಕಿವಿಯ ಬಳಿ ಹೂ ಮುಡಿಯುತ್ತಿದ್ದ  ಸಲ್ಮಾ ಸುಲ್ತಾನ್, ಗೀತಾಂಜಲಿ ಅಯ್ಯರ್ ಮುಂತಾದವರು ಮೆಚ್ಚಿನ ವಾರ್ತಾ ವಾಚಕರಾಗಿದ್ದರು.

ನಮ್ಮ ಮನೆಯ ಆಸುಪಾಸಿನಲ್ಲಿ ಆಗ ಬೇರೆಲ್ಲೂ ಟೀವಿ ಇರಲಿಲ್ಲ.  ಹೀಗಾಗಿ ಚಲನಚಿತ್ರ, ಕ್ರಿಕೆಟ್ ಮ್ಯಾಚ್ ಇತ್ಯಾದಿ ಇರುವಾಗ ನಮ್ಮ ಮನೆ ಒಂದು ಮಿನಿ ಥಿಯೇಟರ್ ಆಗಿ ಪರಿವರ್ತನೆಗೊಳ್ಳುತ್ತಿತ್ತು.  ಪ್ರಮುಖ ಮ್ಯಾಚ್ ಇದ್ದರೆ ಹಳ್ಳಿಯಿಂದ ಬಂಧುಮಿತ್ರರೂ ಬರುವುದಿತ್ತು. ಇಂದಿರಾ ಗಾಂಧಿ ನಿಧನರಾದ ದಿನ ಮನೆಯ ಒಳಗೆ ಜಾಗ ಸಾಕಾಗದೆ ಅಂಗಳದಲ್ಲೂ ನಿಂತು ಜನರು ಪ್ರಸಾರ ವೀಕ್ಷಿಸಿದ್ದರು.

ನಾವು ಟೀವಿ ಕೊಂಡಾಗ ಹಂ ಲೋಗ್ ಎಂಬ ಒಂದು ದೈನಿಕ ಧಾರಾವಾಹಿ ಪ್ರಸಾರವಾಗುತ್ತಿತ್ತು.  ಅದರ ಕೊನೆಯಲ್ಲಿ ಚಿತ್ರ ನಟ ಅಶೋಕ್ ಕುಮಾರ್ ಕಾಣಿಸಿಕೊಂಡು ಅಂದಿನ ಎಪಿಸೋಡ್ ಬಗ್ಗೆ ಕೆಲವು ಮಾತುಗಳನ್ನು ಆಡುತ್ತಿದ್ದರು.  ಕೆಲವೊಮ್ಮೆ ಕೊನೆಯಲ್ಲಿ ವೈವಿಧ್ಯಕ್ಕೆಂದು ಹಮ್ ಲೋಗ್ ಎಂಬುದನ್ನು ಬೇರೆ ಬೇರೆ ಭಾಷೆಗಳಲ್ಲಿ ಹೇಳುತ್ತಿದ್ದರು.  ಒಮ್ಮೆ ಮಂಗಳೂರಿನ ತುಳುವಿನಲ್ಲೂ ‘ಎಂಕುಲು ಜನ’ ಎಂದು ಹೇಳಿದ್ದರು!

ಕೆಲವೇ ದಿನಗಳಲ್ಲಿ ಯೆ ಜೊ ಹೈ ಜಿಂದಗಿ ಎಂಬ ಹಾಸ್ಯಲೇಪನದ ದೈನಿಕ ಸೀರಿಯಲ್ ಒಂದು ಆರಂಭವಾಯಿತು.  ದಿನವೂ ಬೇರೆ ಬೇರೆ ಕಥಾ ಪ್ರಸಂಗಗಳಿರುತ್ತಿದ್ದ ಅದರಲ್ಲಿ ಶಫಿ ಇನಾಮ್‌ದಾರ್, ಸತೀಷ್ ಷಾ, ಸ್ವರೂಪ್ ಸಂಪತ್  ಮತ್ತು ರಾಕೇಶ್ ಬೇಡಿ ಮುಖ್ಯ ಪಾತ್ರಧಾರಿಗಳಾಗಿರುತ್ತಿದ್ದರು.  ಕಿಶೋರ್ ಕುಮಾರ್ ಹಾಡಿದ ಟೈಟಲ್ ಹಾಡು ಇದರ ವಿಶೇಷತೆಯಾಗಿತ್ತು.



ಆ ಮೇಲೆ ಅಡೋಸ್ ಪಡೋಸ್, ನುಕ್ಕಡ್, ಬುನಿಯಾದ್  ಇತ್ಯಾದಿ ಸೀರಿಯಲ್‌ಗಳು ಪುಂಖಾನುಪುಂಖವಾಗಿ ಬರತೊಡಗಿದವು.  ಇವೆಲ್ಲ ರಾತ್ರಿ ವೇಳೆ ಪ್ರಸಾರವಾಗುತ್ತಿದ್ದದ್ದು. 1986ರಲ್ಲಿ ಆರಂಭವಾದ ರಾಮಾನಂದ್ ಸಾಗರ್ ಅವರ ರಾಮಾಯಣ ಭಾನುವಾರ ಹಗಲು ಹೊತ್ತಿನ ಮೆಗಾ ಧಾರಾವಾಹಿಗಳಿಗೆ ನಾಂದಿ ಹಾಡಿತು.  ಆ ಮೇಲಂತೂ ಧಾರಾವಾಹಿಗಳ ಪಟ್ಟಿ  ಹೆಸರುಗಳನ್ನು ನೆನಪಿಡಲಾಗದಷ್ಟು  ಉದ್ದ ಬೆಳೆಯಿತು.

ಭಾನುವಾರ ಬೆಳಗ್ಗೆ ದೂರದರ್ಶನವೇ ನಿರ್ವಹಿಸುತ್ತಿದ್ದ ಖ್ಯಾತರೊಡನೆ ಸಂದರ್ಶನಗಳ ಒಂದು ಗಂಟೆಯ ಕಾರ್ಯಕ್ರಮವೊಂದು ಚೆನ್ನಾಗಿರುತ್ತಿತ್ತು.  ಅದರಲ್ಲೊಮ್ಮೆ ಸಂಗೀತ ನಿರ್ದೇಶಕ ರಾಜ್ ಕಮಲ್ ಅವರು ಹಾರ್ಮೋನಿಯಮ್, ಢೋಲಕ್ ಮತ್ತು ಗಾಜಿನ ಪಟ್ಟಿಗಳ ಹಿಮ್ಮೇಳ ಮಾತ್ರ ಇಟ್ಟುಕೊಂಡು ಸ್ವತಃ ಹಾಡಿದ ಸಾವನ್ ಕೊ ಆನೆ ದೊ ಚಿತ್ರದ  ಚಾಂದ್ ಜೈಸೆ ಮುಖಡೆ ಪೆ ಬಿಂದಿಯಾ ಸಿತಾರಾ ನನಗೆ ಧ್ವನಿಮುದ್ರಿಸಲು ಸಿಕ್ಕಿತ್ತು.



ಆಗ ಜಾಹೀರಾತುಗಳ ಹಾವಳಿ ಈಗಿನ ಖಾಸಗಿ ವಾಹಿನಿಗಳಲ್ಲಿರುವಷ್ಟು ಇರಲಿಲ್ಲ.  ಕೇಳಲು ನೋಡಲು ಹಿತಕರವಾದ ಬೆರಳೆಣಿಕೆಯ  ಕೆಲವೇ ಜಾಹೀರಾತುಗಳಿರುತ್ತಿದ್ದವು.  ಆಯ್ದ ಕೆಲವನ್ನು ನಾನು ಧ್ವನಿಮುದ್ರಿಸಿಕೊಂಡದ್ದೂ ಇದೆ. ಈಗ ದೂರದರ್ಶನ ವಾಹಿನಿಗಳಲ್ಲಿ ವಾಣಿಜ್ಯ ಜಾಹೀರಾತುಗಳು ಶೂನ್ಯವಾದರೂ ತಮ್ಮದೇ ಪ್ರೊಮೋಗಳನ್ನು ಪದೇ ಪದೇ ತೋರಿಸುತ್ತಾ ವೃಥಾ ಕಾಲಹರಣ ಮಾಡುತ್ತಾರೆ.



ಕೆಲ ವರ್ಷಗಳ ನಂತರ ಕಲರ್ ಟೀವಿ ಕೊಂಡ ಮೇಲೆ ನನ್ನ ಮೊದಲ ಟೀವಿಗೆ ಭಾರವಾದ ಮನಸ್ಸಿನಿಂದ ವಿದಾಯ ಕೋರಿದೆ. ಕೇಬಲ್ ಕನೆಕ್ಷನ್ ಬಂದ ಮೇಲೆ ಆ antennaವನ್ನು FM ರೇಡಿಯೋಗೆ ಉಪಯೋಗಿಸತೊಡಗಿದೆ.

ಆ ಮೊದಲ ಕಪ್ಪು ಬಿಳುಪು ಯುಗದಲ್ಲಾಗಲಿ, ನಂತರದ ಕಲರ್ ಕಾಲದಲ್ಲಾಗಲಿ, 90ರ ದಶಕದಲ್ಲಿ ಕನ್ನಡ ಪ್ರಸಾರ ರಾಜ್ಯವ್ಯಾಪಿಯಾದ ಮೇಲಾಗಲೀ,  ಈಗಿನ ಕೇಬಲ್, ಸೆಟಿಲೈಟುಗಳ ಸಂತೆಯಲ್ಲಾಗಲಿ ನಾನು ಟೀವಿಯನ್ನು ನೋಡಿದ್ದು ಕಮ್ಮಿ  ಕೇಳಿದ್ದು ಜಾಸ್ತಿ.

ಸಹವಾಸ ದೋಷ !

ಬಹಳ ಕಾಲ ಟೀವಿ ಜತೆಯಲ್ಲಿ ಇದ್ದ ನನ್ನ ಟೇಪ್ ರೆಕಾರ್ಡರ್ ಸಹವಾಸ ದೋಷದಿಂದ ತಾನೇ ಟೀವಿ ಆದದ್ದನ್ನು ಇಲ್ಲಿ ನೋಡಬಹುದು!



Friday 15 December 2017

ವೈದೇಹಿ ಏನಾದಳು

ಯಕ್ಷಗಾನ , ಹರಿಕಥೆ, ನಾಟಕಗಳಲ್ಲಿ ರಾಮ ಹಾಡುವ ಹಾಡುಗಳಿರುತ್ತವೆ.  ಸುಧೀರ್ ಫಡ್ಕೆ ಅವರ ಪ್ರಸಿದ್ಧ ಗೀತರಾಮಾಯಣದಲ್ಲೂ ಕೋಠೆ ಸೀತಾ ಜನಕ ನಂದಿನಿ ಎಂದು ರಾಮ ಹಾಡುತ್ತಾನೆ. ಆದರೆ ಚಲನಚಿತ್ರಗಳಲ್ಲಿ ರಾಮನನ್ನು ಕುರಿತ ಹಾಡುಗಳು, ರಾಮನ ಉಲ್ಲೇಖ ಇರುವ ಹಾಡುಗಳು ನೂರಾರು ಇದ್ದರೂ ಯುದ್ಧ ಸಂದರ್ಭದ ಕಂದ ಪದ್ಯಗಳನ್ನು ಹೊರತು ಪಡಿಸಿದರೆ ಸ್ವತಃ ರಾಮ ಹಾಡುವ ಹಾಡುಗಳು ಇಲ್ಲವೆನ್ನುವಷ್ಟು ಕಮ್ಮಿ. ಸಂಪೂರ್ಣ ರಾಮಾಯಣ, ಲವ ಕುಶದಂಥ ಸಿನಿಮಾಗಳಲ್ಲೂ ರಾಮನ ಭಾವನೆಗಳನ್ನು ವ್ಯಕ್ತ ಪಡಿಸುವ ಹಾಡುಗಳು ಹಿನ್ನೆಲೆಯಲ್ಲಷ್ಟೇ ಕೇಳಿ ಬರುತ್ತವೆ. ಕನ್ನಡಕ್ಕೂ ಡಬ್ ಆಗಿದ್ದ ಹೋಮಿ ವಾಡಿಯಾ ಅವರ ಸಂಪೂರ್ಣ ವರ್ಣರಂಜಿತ ಸಂಪೂರ್ಣ ರಾಮಾಯಣ ಚಿತ್ರಕ್ಕಾಗಿ ರಾಮ ಮತ್ತು ಸೀತೆ  ಹಾಡಲೆಂದು ತುಮ್ ಗಗನ್ ಕೆ ಚಂದ್ರಮಾ ಔರ್ ಮೈ ಧರಾ ಕೀ ಧೂಲ್ ಹೂಂ ಎಂಬ ಒಂದು ಯುಗಳ ಗೀತೆಯನ್ನು ಕವಿ ಭರತವ್ಯಾಸ್ ಅವರು ರಚಿಸಿದ್ದರೂ ಆ ಮೇಲೆ ಅದನ್ನು ಕೈಬಿಡಲಾಯಿತಂತೆ. ಮುಂದೆ ಅದೇ ಗೀತೆಯನ್ನು ಸತಿ ಸಾವಿತ್ರಿ ಚಿತ್ರದಲ್ಲಿ ಬಳಸಿಕೊಳ್ಳಲಾಯಿತು.  ಹಸಿರು ತೋರಣ ಚಿತ್ರದ ಒಂದು ನಾಟಕದ ಸನ್ನಿವೇಶದಲ್ಲಿ ರಾಮನ ಪಾತ್ರಧಾರಿಯಾಗಿ ರಾಜ್ ಕುಮಾರ್ ಅವರಿಗೆ ಒಂದು ಹಾಡಿದ್ದರೂ ಅದನ್ನು  ನಾಟಕದ ಹಾಡೆಂದೇ ಪರಿಗಣಿಸಬೇಕಾಗುತ್ತದೆ.   ಈ ನಿಟ್ಟಿನಲ್ಲಿ ಸೀತಾ ವಿಯೋಗದಲ್ಲಿ ರಾಮ ಹಾಡುವ ದಶಾವತಾರ ಚಿತ್ರದ ವೈದೇಹಿ ಏನಾದಳು ಹಾಡು  ಏಕಮೇವಾದ್ವಿತೀಯವಾಗಿ ನಿಲ್ಲುತ್ತದೆ.

1960ರಲ್ಲಿ ಬಿಡುಗಡೆಯಾದ ದಶಾವತಾರ ಚಿತ್ರವನ್ನು  ಬಿ.ಎಸ್. ರಂಗಾ ಅವರು  ನಿರ್ಮಿಸಿದ್ದರು.  ಸಾಹಿತ್ಯ ಮತ್ತು ಹಾಡುಗಳ  ಹೊಣೆ ಹೊತ್ತವರು ಜಿ.ವಿ.ಅಯ್ಯರ್. ಸಂಗೀತ ನಿರ್ದೇಶನ ಜಿ.ಕೆ. ವೆಂಕಟೇಶ್ ಅವರದ್ದು. ಚಿತ್ರದ ಹತ್ತರಲ್ಲಿ ಒಂದು ಭಾಗವಾದ ರಾಮಾವತಾರದಲ್ಲಿ ಸೀತಾಪಹರಣ ಸನ್ನಿವೇಶಕ್ಕೆ  ಒಂದು ಹಾಡಿರಬೇಕೆಂಬ ಪ್ರೇರಣೆ ಹೇಗುಂಟಾಯಿತೋ, ಜಿ.ವಿ. ಅಯ್ಯರ್ ಅವರ ಲೇಖನಿಯನ್ನು ಯಾರು ಹಿಡಿದು ನಡೆಸಿದರೋ, ಕನ್ನಡ ಚಿತ್ರ ಸಂಗೀತ  ಇನ್ನೂ ಶೈಶವಾವಸ್ಥೆಯಲ್ಲಿದ್ದು ಹಿಂದಿ ಹಾಡುಗಳ ಧಾಟಿಗಳನ್ನೇ ಬಳಸುತ್ತಿದ್ದ ಕಾಲದಲ್ಲಿ  ಹಿಂದೆ ಬಂದಿರದ ಮುಂದೆ ಬರಲು ಸಾಧ್ಯವಿಲ್ಲದ ಧಾಟಿಯೊಂದನ್ನು ಜಿ.ಕೆ. ವೆಂಕಟೇಶ್ ಅವರು ಹೇಗೆ ಸಂಯೋಜಿಸಿದರೋ, ಕಲ್ಲೂ ಕರಗುವಂತೆ, ಸಕಲ ಚರಾಚರಗಳು ಕ್ಷಣಕಾಲ ಸ್ತಬ್ಧವಾಗುವಂತೆ ಗಾನ ಗಂಧರ್ವ ಪಿ.ಬಿ.ಶ್ರೀನಿವಾಸ್ ಅದನ್ನು ಹೇಗೆ ಹಾಡಿದರೋ ಆ ರಾಮನಿಗೇ ಗೊತ್ತು.

ಗೋದಾವರಿ ದೇವಿ ಮೌನವಾಂತಿಹೆ ಏಕೆ ಎಂದು ಆರಂಭವಾಗುವ ಈ ಹಾಡನ್ನು ಎಲ್ಲರೂ ಗುರುತಿಸುವುದು ವೈದೇಹಿ ಏನಾದಳು ಎಂಬ ನಂತರದ ಸಾಲಿನಿಂದಲೇ.  ಆ ಮೊದಲ ಸಾಲು ಮತ್ತೆ ಮರುಕಳಿಸುವುದೂ ಇಲ್ಲ. ಜಂಪೆ ತಾಳದಲ್ಲಿದ್ದು ಶುಭಪಂತುವರಾಳಿ ರಾಗವನ್ನು ಆಧರಿಸಿದ ಈ ಹಾಡಿನ ಷಡ್ಜ ಎಲ್ಲಿ ಎಂದೇ ಸುಲಭದಲ್ಲಿ ಗೊತ್ತಾಗುವುದಿಲ್ಲ. ಇದನ್ನು ಯಥಾವತ್ ಮರು ಸೃಷ್ಟಿ ಮಾಡುವುದಂತೂ ದೂರದ ಮಾತು.

ಚೇಲೋ ಮತ್ತು ವೈಬ್ರಾಫೋನ್ ಜೊತೆಯಾಗಿರುವ ಈ ಹಾಡಿನ prelude ಆಲಿಸುವಾಗಲೇ ನಮ್ಮ ಚೈತನ್ಯವೆಲ್ಲ ಕಾಲುಗಳ ಮೂಲಕ ಬಸಿದು ನೆಲಕ್ಕಿಳಿದಂಥ ಅನುಭವವಾಗುತ್ತದೆ. ಕಾನನದ ನೀರವತೆಯನ್ನು ಬಿಂಬಿಸುವ ವಿಶಿಷ್ಟ ದನಿಯ ತಾಳವಾದ್ಯ ಮತ್ತು ಕೊಳಲಿನ ಹಿನ್ನೆಲೆಯೊಂದಿಗೆ ಪಲ್ಲವಿ ಆರಂಭವಾಗುತ್ತದೆ.  ಚೇಲೋ ಮತ್ತು ವೈಬ್ರಾಫೋನ್‌ಗಳ ಅತಿ ಚಿಕ್ಕ interlude  ನಂತರ ಪಲ್ಲವಿಯ ಮುಂದುವರಿದ ಭಾಗವೇ ಎನ್ನಿಸುವ  ಪ್ರೀತಿ ಅಮೃತವನೆರೆದು ಎಂಬ ಸಾಲು ಇರುವ ಮೊದಲ ಚರಣ ಬರುತ್ತದೆ. ಪಿ.ಬಿ.ಶ್ರೀನಿವಾಸ್ ಅವರ ಹೆಗ್ಗುರುತಾದ ವಿಶಿಷ್ಟ ಮುರ್ಕಿಗಳು ಅರ್ಥಾತ್ ಸಣ್ಣ ಸಣ್ಣ ಬಳುಕುಗಳನ್ನು ಹೊಂದಿದ ಚರಣ ಭಾಗದ ಸಂಚಾರ  ಮುಂದುವರೆಯುತ್ತಾ ಕರ್ಕಶವೆನ್ನಿಸದ ರೀತಿ false voiceನಲ್ಲಿ ಏರು ಸ್ವರಗಳನ್ನು ಸ್ಪರ್ಶಿಸಿ ಮತ್ತೆ ಕೆಳಗಿಳಿಯಲು ವೈಬ್ರಾಫೋನ್ ಮತ್ತು ಚೇಲೊಗಳ bridge music  ಸೇತುವೆ ನಿರ್ಮಿಸಿಕೊಡುತ್ತದೆ.

ಮುಂದಿನ interlude ಬರೇ ಹಕ್ಕಿಗಳ ಚಿಲಿಪಿಲಿ ಸದ್ದು.  ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು ಎಂದು ಉದಯ ಶಂಕರ್ ಅವರು ಬರೆಯುವ ಎಷ್ಟೋ ವರ್ಷ ಮೊದಲೇ ಜಿ.ಕೆ. ವೆಂಕಟೇಶ್ ಅವರು ಈ ಪ್ರಯೋಗ ಮಾಡಿದ್ದರು.  ಈ ಚರಣದಲ್ಲಿ ಪ್ರೇಮಗಾನದ ಸುಧೆಯ ಎಂಬಲ್ಲಿ ದಿಂದ ಕ್ಕೆ ಒಂದು ಸ್ವರ ಸ್ಥಾನ ಏರುವ ಸೊಗಸು ಅನನ್ಯ. ಉಳಿದ ಚರಣಗಳ ಇಂತಹ  ಭಾಗದಲ್ಲಿ  ಈ ಪ್ರಯೋಗ ಇಲ್ಲ.

ಮಸಣ ಮೌನದೆ ಸುಳಿವ ಎಂಬ ಚರಣದ ಸುಳಿವ ಎಂಬಲ್ಲಿ ಪಿ.ಬಿ.ಎಸ್ ಅವರ ಧ್ವನಿ ಅತಿ ಮಂದ್ರ ಸ್ಥಾಯಿಯಲ್ಲಿ sustain ಆಗುವಾಗಿನ ಅನುಭವ ಅನನ್ಯ. ಹಾಡಿನ ಇಡೀ ಸಾರವೇ ಈ ಭಾಗದಲ್ಲಿ ಅಡಕವಾಗಿದೆಯೇನೋ ಎಂದು ಅನ್ನಿಸುತ್ತದೆ.  ಮಸಣದ ಮೌನವನ್ನು ಅಭಿವ್ಯಕ್ತಿಗೊಳಿಸಲೋ ಎಂಬಂತೆ ಈ ಇಡೀ ಚರಣದಲ್ಲಿ ಯಾವ ತಾಳವಾದ್ಯವನ್ನೂ ಉಪಯೋಗಿಸಲಾಗಿಲ್ಲ. ಆದರೆ ನಾವು ಹಾಡಲ್ಲಿ ಎಷ್ಟು ತಲ್ಲೀನರಾಗಿರುತ್ತೇವೆ ಎಂದರೆ ಈ ವಿಷಯ ನಮ್ಮ ಗಮನಕ್ಕೇ ಬರುವುದಿಲ್ಲ!

ಈ ಸುದೀರ್ಘ ಡಬಲ್ ಪ್ಲೇಟ್ ಹಾಡು ನಮ್ಮ ತಾಯಿಗೆ ಬಲು ಮೆಚ್ಚಿನದಾಗಿತ್ತು.  ರೇಡಿಯೋದಲ್ಲಿ ಪ್ರಸಾರವಾದರೆ ಎಲ್ಲಿದ್ದರೂ ಬಂದು ಪೂರ್ತಿ ಕೇಳದೆ ಹೋಗುತ್ತಿರಲಿಲ್ಲ.  ಪಿ.ಬಿ.ಎಸ್  ಧ್ವನಿಯನ್ನು ತುಂಬಾ ಇಷ್ಟ ಪಡುತ್ತಿದ್ದ  ಅವರು ಈ ಹಾಡಂತೂ ಸ್ವತಃ ಶ್ರೀರಾಮನೇ ಹಾಡಿದಂತಿದೆ ಅನ್ನುತ್ತಿದ್ದರು.

ಆದರೆ ಇಂತಹ ಅದ್ವಿತೀಯ ಹಾಡನ್ನು ಸೂಕ್ತವಾಗಿ ಚಿತ್ರೀಕರಿಸುವಲ್ಲಿ  ನಿರ್ದೇಶಕರು ಸೋತಿದ್ದಾರೆ ಎಂದೇ ಅನ್ನಬೇಕಾಗುತ್ತದೆ. ಹಾಡಿನ ಬಹು ಭಾಗ  long shot ಗಳನ್ನೇ ಹೊಂದಿದ್ದು ಹಾಡಿನ ಭಾವಕ್ಕೆ ಯಾವ ರೀತಿಯಲ್ಲೂ ಪೂರಕವಾಗಿಲ್ಲ.  ಇತ್ತೀಚೆಗೆ ಗಮನವಿಟ್ಟು ನೋಡುವವರೆಗೆ ಶ್ರೀರಾಮನ ಪಾತ್ರಧಾರಿ ಪ್ರಸಿದ್ಧ ನಟ ರಾಜಾ ಶಂಕರ್ ಎಂದು ನನಗೆ ಗೊತ್ತಾಗಿರಲೇ ಇಲ್ಲ!.  ಯಾರೋ ಅನಾಮಿಕ ಕಲಾವಿದ ಎಂದೇ ನಾನಂದುಕೊಂಡಿದ್ದೆ.

ನಮ್ಮನ್ನು ಭಾವನಾಲೋಕಕ್ಕೊಯ್ಯುವ  ಈ ಮಧುರ ಹಾಡನ್ನು ಈಗ ಸಾಹಿತ್ಯ ಓದುತ್ತಾ  ಆಲಿಸಿ. ಹೆಡ್ ಫೋನ್ ಬಳಸಿದರೆ ಉತ್ತಮ.






ಗೋದಾವರಿ ದೇವಿ ಮೌನವಾಂತಿಹೆ ಏಕೆ
ವೈದೇಹಿ ಏನಾದಳು  ವೈದೇಹಿ ಏನಾದಳು

ಪ್ರೀತಿ ಅಮೃತವನೆರೆದು ಜೀವಜ್ಯೋತಿಯ ಬೆಳಗಿ
ನೀತಿ ನೇಹದ ದಾರಿ ತೋರಿದವಳು

ವೈದೇಹಿ ಏನಾದಳು  ವೈದೇಹಿ ಏನಾದಳು

ಮಾಮರದ ಮರೆಯಲ್ಲಿ ಕುಳಿತಿರುವ ಕೋಗಿಲೆಯೆ
ನಿನ್ನ ದನಿ ಜೊತೆಯಲ್ಲಿ ತನ್ನ ದನಿ ಸೇರಿಸುತ
ಪ್ರೇಮಗಾನದ ಸುಧೆಯ ಹರಿಸಿದವಳು

ವೈದೇಹಿ ಏನಾದಳು  ವೈದೇಹಿ ಏನಾದಳು

ಮಲ್ಲೆ ಮಲ್ಲಿಗೆ ಜಾಜಿ ಸಂಪಿಗೆಯ ಹೂಗಳೆ
ಎಲ್ಲ ನಗುಮೊಗವೆಲ್ಲ ತನ್ನೊಡನೆ ನಗಲೆಂದು
ಶಿರದಲ್ಲಿ ಧರಿಸಿದವಳು

ವೈದೇಹಿ ಏನಾದಳು  ವೈದೇಹಿ ಏನಾದಳು

ಮಸಣಮೌನದೆ ಸುಳಿವ ವಿಪಿನವಾಸಿಗಳೆ
ನೀವು ಧರಣಿಜಾತೆಯ ಕಾಣಿರಾ
ಧರಣಿಜಾತೆಯ ಕಾಣಿರಾ

ನೇಸರನೆ ನೀನೇಕೆ ಮೋರೆಮರೆ ಮಾಡುತಿಹೆ
ಸೀತೆ ಇರುವನು ತೋರೆಯಾ
ಸೀತೆ ಇರುವನು ತೋರೆಯಾ

ವೈದೇಹಿ ಏನಾದಳು  ವೈದೇಹಿ ಏನಾದಳು


Sunday 26 November 2017

ರತ್ನಮಂಜರಿಯ ರತ್ನಗಳು


ಸಾಮಾನ್ಯವಾಗಿ ಚಿತ್ರಗೀತೆಗಳೆಲ್ಲ ಕೆಲವು  ಸಿದ್ಧ ಮಾದರಿಗಳಲ್ಲೇ ಇರುತ್ತವೆ. ಆದರೆ ಕೆಲವು ಗೀತೆಗಳು ಈ ಸಿದ್ಧ ಮಾದರಿಗೆ ಹೊರತಾಗಿದ್ದು ತಮ್ಮ uniquenessನಿಂದಾಗಿ ಗುಂಪಿನಿಂದ ಬೇರೆಯಾಗಿ ನಿಲ್ಲುತ್ತವೆ. ಶಂಕರ್ ಜೈಕಿಶನ್ ಅವರ ಅಜೀಬ್ ದಾಸ್ತಾಂ ಹೈ ಯೆ ಮತ್ತು ಆಜ್ ಕಲ್ ತೆರೆ ಮೆರೆ ಪ್ಯಾರ್ ಕೆ ಚರ್ಚೆ ಹರ್ ಜಬಾನ್ ಪರ್   ಇತ್ಯಾದಿ ಹಾಡುಗಳನ್ನು ಇಂತಹ ವಿಭಾಗಕ್ಕೆ ಸೇರಿಸಬಹುದು. ಕನ್ನಡದಲ್ಲಿ ರಾಜನ್ ನಾಗೇಂದ್ರ  ಸಂಗೀತ ನಿರ್ದೇಶನವಿದ್ದು 1962ರಲ್ಲಿ ತೆರೆ ಕಂಡ ರತ್ನಮಂಜರಿ ಚಿತ್ರದ ಯಾರು ಯಾರು ನೀ ಯಾರು ಮತ್ತು ಗಿಲ್ ಗಿಲ್ ಗಿಲಿ ಗಿಲಕ್ಕ ಹಾಡುಗಳು ಇಂತಹವೇ. ಏಕೆಂದರೆ ಈ ರೀತಿಯವು ಮತ್ತೆ ಬರಲಿಲ್ಲ.  ಈ ಎರಡು ಹಾಡುಗಳು ahead of time  ಎಂದೆನ್ನಿಸಿದರೆ  ಆ ಚಿತ್ರದ   ಉಳಿದ ಹಾಡುಗಳು  50ರ ದಶಕದವೋ ಅನ್ನಿಸುವಂತಿದ್ದು ಜನಪ್ರಿಯತೆಯಲ್ಲಿ ಕೊಂಚ ಹಿಂದೆ ಬಿದ್ದಿದ್ದವು.  ಬೆಂಗಳೂರು, ಧಾರವಾಡ ಆಕಾಶವಾಣಿ ನಿಲಯಗಳಲ್ಲಿ ಈ ಎರಡು ಹಾಡುಗಳು ಅನುರಣಿಸದ  ದಿನವೇ ಇದ್ದಿರಲಾರದು. ಈಗಲೂ ಇವು ರೇಡಿಯೊ ನಿಲಯಗಳ ಮೆಚ್ಚಿನವುಗಳಾಗಿದ್ದು ಆಗಾಗ ಕೇಳಲು ಸಿಗುತ್ತವೆ. ಮುಂದಿನ ಸಲ ರೇಡಿಯೊದಲ್ಲಿ ಬಂದಾಗ ಈ ವಿವರಣೆಯನ್ನು ನೆನೆಸಿಕೊಂಡು ಆಲಿಸಿ. ಹೆಚ್ಚು ಆನಂದಿಸುವಿರಿ! ಹಾಡುಗಳನ್ನು ಬರೆದವರು ಚಿತ್ರದ  ನಿರ್ದೇಶಕರೂ ಆಗಿದ್ದ ಹುಣಸೂರು ಕೃಷ್ಣಮೂರ್ತಿ.  ಚಿತ್ರದ ವಿವರಗಳಲ್ಲಿ  10 ಮಂದಿ ಹಿನ್ನೆಲೆ ಗಾಯಕ ಗಾಯಕಿಯರ ಹೆಸರಿರುವುದನ್ನು ಗಮನಿಸಬಹುದು.  ಆಗಿನ ಕಾಲದಲ್ಲಿ ಆಯಾ ಹಾಡಿನ ಅವಶ್ಯಕತೆಗೆ ತಕ್ಕಂತೆ ಗಾಯಕರನ್ನು ಆಯ್ದುಕೊಳ್ಳುವ ಪರಿಪಾಠವಿತ್ತು. ಆದರೆ 1970ರ ದಶಕದ ನಂತರ ಕೆಲವೇ  ಧ್ವನಿಗಳು ಎಲ್ಲ ರೀತಿಯ   ಹಾಡುಗಳಲ್ಲೂ ಕೇಳಿಸತೊಡಗಿ ಚಿತ್ರ ಸಂಗೀತ ಏಕತಾನತೆಯಿಂದ ಸೊರಗಿತು.

ಯಾರು ಯಾರು ನೀ ಯಾರು

ಇದು ಸ್ವತಃ ನಾಗೇಂದ್ರ ಮತ್ತು ರಾಣಿ ಎಂಬ ಗಾಯಕಿ ನರಸಿಂಹರಾಜು ಮತ್ತು ಎಂ. ಎನ್. ಲಕ್ಷ್ಮಿದೇವಿ ಅವರಿಗಾಗಿ  ಹಾಡಿದ ಗೀತೆ.  ಇದರ ಸಾಹಿತ್ಯ ರುಂಡ ಮತ್ತು ಮುಂಡ ಬೇರೆ ಬೇರೆಯಾಗಿದ್ದ ಒಂದು ಮಾಯಾವಿ ಹೆಣ್ಣು ಮತ್ತು ಅಲ್ಲಿಗೆ ಬಂದ ಒಂದು ಗಂಡಿನ ಸಂಭಾಷಣೆಯ ರೂಪದಲ್ಲಿದೆ.  ಹಾಡನ್ನು ಕಣ್ಣು ಮುಚ್ಚಿ ಆಲಿಸಿದರೂ ಈ ಚಿತ್ರಣ ಸ್ಪಷ್ಟವಾಗಿ ಮನಸ್ಸಿನಲ್ಲಿ ಮೂಡುತ್ತದೆ. ನನಗೆ ಆ ಕಾಲದಲ್ಲಿ ಈ ಸಿನಿಮಾ ನೋಡುವ ಅವಕಾಶ ಒದಗಿರಲಿಲ್ಲ.  ಆ ಮೇಲೊಮ್ಮೆ ಇದು ಟಿ.ವಿ.ಯಲ್ಲಿ ಪ್ರಸಾರವಾದಾಗ ಅಲ್ಲಿ ಚಿತ್ರೀಕರಣಗೊಂಡುದಕ್ಕಿಂತ ಮನಸ್ಸಿನ ಕಲ್ಪನೆಯೇ ಹೆಚ್ಚು ರಮ್ಯ ಎಂದು ನನಗನ್ನಿಸಿತ್ತು.  ಗಾಯಕರ ಅತ್ಯಂತ ಸ್ಪಷ್ಟ ಉಚ್ಚಾರ ಮತ್ತು ಶಕ್ತಿ ಶಾಲಿ voice throw ಈ ಹಾಡಿನ ವಿಶೇಷತೆ.  ಅದರಲ್ಲೂ ‘ರ’ಕಾರದ ಉಚ್ಚಾರವಂತೂ ಅಚ್ಚರಿ ಮೂಡಿಸುವಂತಿದೆ.  ಸಾಹಿತ್ಯವನ್ನು ಅನುಸರಿಸುತ್ತಾ ಅಲ್ಲಲ್ಲಿ break, take off ಮಾಡುವ ಢೋಲಕ್ ಮುಖ್ಯ ತಾಳವಾದ್ಯವಾಗಿ ಮ್ಯಾಂಡೊಲಿನ್ ಮುಂಚೂಣಿಯಲ್ಲಿರುವ ಮಿತ ಹಿಮ್ಮೇಳವಿದೆ.  ಆರಂಭದ ಭಾಗದಲ್ಲಿ  chinese temple bells ಎಂಬ ಉಪಕರಣದ ಕಿಟಿಕಿಟಿಕಿಟಿಕ್ ಎಂಬ ಸದ್ದು ಗಮನ ಸೆಳೆಯುತ್ತದೆ.  ಕೊನೆಯ ಭಾಗದಲ್ಲಿ ರುಂಡ ಮುಂಡ ಸೇರಿಸುವಾಗಿನ ಮ್ಯಾಂಡೊಲಿನ್ effect ಕೂಡ ಮಜವಾಗಿದೆ.  ಕ್ಲಾರಿನೆಟ್ ಕೊಳಲುಗಳ ಜಂಟಿ ಬಳಕೆಯಲ್ಲಿ ಓ. ಪಿ. ನಯ್ಯರ್ ಛಾಪು ಇದೆ. ಅದುವರೆಗೆ ಹೆದರಿ ನಡುಗುತ್ತಿದ್ದ ಗಂಡು ಪಾತ್ರ ಹಾಡಿನ ಕೊನೆಯಲ್ಲಿ ‘ಇನ್ನಿವರು ಹೆದರಲಾರ್ರು’ ಅಂದಾಗ ಕೇಳುಗರಿಗೂ ಒಂದು ರೀತಿ ನಿರಾಳ ಅನ್ನಿಸುತ್ತದೆ.  70ರ ದಶಕದಲ್ಲಿ ನಾನು ಟೇಪ್ ರೆಕಾರ್ಡರ್ ಕೊಂಡ ಮೇಲೆ ಈ ಹಾಡನ್ನು ಧ್ವನಿಮುದ್ರಿಸಿಕೊಳ್ಳಲು ಬಹಳ ಪ್ರಯತ್ನ ಪಟ್ಟಿದ್ದೆ.  ಕೊನೆಗೆ ಬೆಂಗಳೂರಿನ ಹೋಟೆಲೊಂದರಲ್ಲಿ ಚಹಾ ಕುಡಿಯುತ್ತಿದ್ದಾಗ ಜೊತೆಗೊಯ್ದಿದ್ದ ಟೇಪ್ ರೆಕಾರ್ಡರನ್ನು ಮೇಜಿನ ಮೇಲಿರಿಸಿ ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾದ ಇದನ್ನು ಧ್ವನಿಮುದ್ರಿಸಿಕೊಳುವಲ್ಲಿ ಸಫಲನಾದೆ. ಸಾಹಿತ್ಯ ಓದುತ್ತಾ ಈಗ ಹಾಡು ಆಲಿಸಿ. ನೀವು ಬೇರೆಡೆ ಕೇಳುವ ಈ ಹಾಡಿಗೂ ಇಲ್ಲಿರುವುದಕ್ಕೂ ಸ್ವಲ್ಪ ವ್ಯತ್ಯಾಸವಿದೆ. ಏನೆಂದು ಗುರುತಿಸಲು ಪ್ರಯತ್ನಿಸಿ.



ಯಾರು ಯಾರು ನೀ ಯಾರು
ಎಲ್ಲಿಂದ ಬಂದೆ ಯಾವೂರು
ಬದುಕಿದ್ದ ಜನರು ಇಲ್ಯಾರು ಬರರು
ಬಂದವರು ಬದುಕಲಾರ್ರು

ಯಾರು ಯಾರು ನೀ ಯಾರು
ಎಲ್ಲಿರುವೆ ಬಂದು ಮುಖ ತೋರು
ಯಾಕಿಲ್ಲಿ ಜನರು ಬಂದುಳಿಯಲಾರ್ರು
ಏನಿದರ ಗುಟ್ಟು ಸಾರು

ನೋಡು ನೋಡು ನಾನಿಲ್ಲಿ
ಎಲ್ಲಿ
ಗಿಡದಲ್ಲಿ
ಉಳಿದಿದ್ದೆಲ್ಲಿ
ನೋಡು ನೋಡು ನಾನಿಲ್ಲಿ
ನಿನ್ನ ಬೆನ್ನ ಹಿಂದುಗಡೆಯಲ್ಲಿ
ಅಯ್ಯಯ್ಯಯ್ಯೋ ಭೂತ ಕಾಣಿಸಿತು ಮಾತನಾಡಿಸಿತು
ಪ್ರಾಣ ಹೋಗೊ ಗತಿ ಬಂತು
ಅಯ್ಯೊ ಗಂಡೆ ಸ್ವಲ್ಪ ಧೈರ್ಯ ತಾಳು
ಹೇಳೊ ಮಾತು ಕೇಳು


ದೇವಕನ್ಯೆ ನಾನಯ್ಯ
ನನ್ನ ಜೀವ ಉಳಿಸೊ ಮಹರಾಯ
ದೇವಕನ್ಯೆಯೋ ದೆವ್ವಕನ್ಯೆಯೋ
ಯಾವ ಪೀಡೆಯೋ ತಿಳಿಯೆ
ಮೂರ್ಖನಾಗದಿರು ಮೂರ್ಛೆ ಹೋಗದಿರು
ಮದುವೆ ಆಗು ಬಾ ಎದುರು
ರುಂಡ ಒಂದು ಕಡೆ ಮುಂಡ ಒಂದು ಕಡೆ
ಮದುವೆ ಆಗೋದ್ಯಾವ್ಕಡೆ
ಅಯ್ಯೊ ಗಂಡೆ ಸ್ವಲ್ಪ ಧೈರ್ಯ ತೋರ್ಸು
ರುಂಡ ಮುಂಡ ಸೇರ್ಸು

ಯಾರು ಯಾರು ನೀ ಯಾರು
ಎಲ್ಲಿಂದ ಬಂದೆ ಯಾವೂರು
ಬದುಕಿದ್ದ ಜನರು ಹೆದರೋಡುತಿದ್ರು
ಇನ್ನಿವರು ಹೆದರಲಾರ್ರು

ಗಿಲ್ ಗಿಲ್ ಗಿಲಿ ಗಿಲಕ್ಕ

ಎಸ್. ಜಾನಕಿ ಅವರ ever green ಹಾಡುಗಳಲ್ಲಿ ಅಗ್ರ ಶ್ರೇಣಿಯಲ್ಲಿರುವ ಇದು ಅತಿ ವೇಗ ಹೊಂದಿದ್ದು ಹೆಚ್ಚು ಸಾಹಿತ್ಯ ಭಾಗ ಒಳಗೊಂಡಿದೆ. ಸಂದರ್ಭಕ್ಕೆ ತಕ್ಕ ಅರ್ಥ ಕಲ್ಪಿಸಿಕೊಳ್ಳಬೇಕಾದ  ಪ್ರಾಸಬದ್ಧವಾದ ಅಣಕು ಶಬ್ದಗಳೇ ಜಾಸ್ತಿ ಇದರಲ್ಲಿ. ಅಲ್ಲಲ್ಲಿ ಜಾನಕಿಯವರ ಧ್ವನಿ ಸುಲಲಿತವಾಗಿ ತಾರ ಸಪ್ತಕದ ಪಂಚಮವನ್ನು ಸ್ಪರ್ಶಿಸುತ್ತದೆ. ಹಾಡಿನ ವೇಗಕ್ಕೆ ಸರಿಸಾಟಿಯಾಗಿ ವಿವಿಧ ವಾದ್ಯಗಳನ್ನು ನುಡಿಸಿದ ಅನಾಮಿಕ ಕಲಾವಿದರೆಲ್ಲರ ನೈಪುಣ್ಯವನ್ನು ನಾವು ಮೆಚ್ಚಲೇ ಬೇಕು.  ಹಿಂದಿ ಚಿತ್ರರಂಗದಲ್ಲಿ ಪಾರಸ್ ಮಣಿ ಚಿತ್ರದ ಉಯಿಮಾ ಉಯಿಮಾ ಯೆ ಕ್ಯಾ ಹೋಗಯಾ ಎಂಬ ಅತಿ ವೇಗದ ಹಾಡಿಗೆ ನುಡಿಸಿದ ಕಲಾವಿದರಿಗಿಂತ ನಾವೆನೂ ಕಮ್ಮಿ ಇಲ್ಲ ಎಂದು ಸಾಬೀತು ಪಡಿಸಿದ್ದಾರೆ  ನಮ್ಮವರು.  ಹಾಡಿನ ಕೊನೆಯ 25 ಸೆಕೆಂಡುಗಳಷ್ಟು ಕಾಲದ climax ಕೇಳುತ್ತಿದ್ದಂತೆ ನಾವು ಭರದಿಂದ ತಿರುಗುವ ಗಾಳಿ ಸುಳಿಯಲ್ಲಿ ಮೇಲಕ್ಕೇರುತ್ತಾ ಕೊನೆಗೆ ಧೊಪ್ಪನೆ ಕೆಳಕ್ಕೆ ಬಿದ್ದ ಅನುಭವವಾಗುತ್ತದೆ!



ಗಿಲ್ ಗಿಲ್ ಗಿಲ್ ಗಿಲ್ ಗಿಲ್ ಗಿಲ್ ಗಿಲ್ ಗಿಲಿ
ಗಿಲಕ್ಕ್ ಕಾಲಗೆಜ್ಜೆ ಝಣಕ್ಕ್ ಕೈಯ ಬಳೆ
ಠಣಕ್ಕ್ ಝಣಕ್ಕ್ ಹಾ ಹಾ ಹಾ
ಗಿಲ್ ಗಿಲ್ ಗಿಲಿ ಗಿಲಕ್ಕ್ ಕಾಲಗೆಜ್ಜೆ ಝಣಕ್ಕ್
ಕೈಯ ಬಳೆ ಠಣಕ್ಕ್ ರಂಗೆದ್ದಿತೊ
ನಿನ್ನ ಕಂಡು ಹಾರಿ ಕುಣಿಯೊ ಭುಂಗೆದ್ದಿತೊ
ಕೋಡಿಯಂತೆ ಹರಿದು ಬಂದ ಈ ಸ್ಪೂರ್ತಿಗೆ
ಜೋಡಿ ಇತ್ತು ಆಡು ಬಾರೊ ನನ್ನೊಂದಿಗೆ
ಜೋಡಿ ಇತ್ತು ಆಡು ಬಾರೊ ನನ್ನೊಂದಿಗೆ

ನೀರ ನಿನ್ನ ಕಣ್ಣ ಬಾಣ ಹಾರಿ ಬಂದು ನನ್ನ ಪ್ರಾಣ
ನಿನಗಾಯಿತೋ ನೇಹ ನನಸಾಯಿತೋ
ಆಸೆ ಬಳ್ಳಿ ಹೂವ ಬಿಟ್ಟು ರಾಶಿ ಜೇನ ತುಂಬಿ ಇಟ್ಟು
ತುಳುಕಾಡಿತೋ ನಿನ್ನ ಹುಡುಕಾಡಿತೊ
ಮೋರೆ ತೋರಿ ಗಿರಕ್ಕ ಮೊರೆಯ ಕೇಳಿ ಸರಕ್ಕ
ಮರುಕ್ಕ ತೊರೊಕ್ಕೆ ಮುರುಕ ಯಾತಕೊ
ಕಣ್ಣುಗಳ ಥಳಕ್ಕ್ ತನುವಿನ ಬಳಕ್ಕ್
ಮನಸಿನ ಕುಲುಕ್ಕ್ ರಂಗೆದ್ದಿತೊ
ನಿನ್ನ ಕಂಡು ಕರಗಿ ಜೀವ ಝುಮ್ಮೆಂದಿತೋ
ಕೋಡಿಯಂತೆ ಹರಿದು ಬಂದ ಈ ಸ್ಪೂರ್ತಿಗೆ
ಜೋಡಿ ಇತ್ತು ಆಡು ಬಾರೊ ನನ್ನೊಂದಿಗೆ
ಜೋಡಿ ಇತ್ತು ಆಡು ಬಾರೊ ನನ್ನೊಂದಿಗೆ

ದಟ್ಟ ಕಾಡಿನಲ್ಲಿ ಬೆಳೆದ ದಿವ್ಯವಾದ ಮಲ್ಲೆ ಹೂವು
ಮುಟ್ಟಿಲ್ಲವೋ ದುಂಬಿ ಮುಟ್ಟಿಲ್ಲವೋ
ನಿನ್ನ ಬಿಟ್ಟು ಅನ್ಯರತ್ತ ಹಾರಲಿಲ್ಲ ಹೂವ ಚಿತ್ತ
ಸಟೆಯಲ್ಲವೋ ಮಾತು ಸಟೆಯಲ್ಲವೋ
ಕೊಟ್ಟು  ಭಾಷೆ ಕರಕ್ಕೆ ಕಟ್ಟು ತಾಳಿ ಉರಕ್ಕೆ
ಪ್ರಾಣಕ್ಕೆ ಪ್ರೇಮಕ್ಕೆ ನೀನೆ ನಾಯಕ
ಕಣ್ಣುಗಳ ಥಳಕ್ಕ್ ತನುವಿನ ಬಳಕ್ಕ್
ಮನಸಿನ ಕುಲುಕ್ಕ್ ರಂಗೆದ್ದಿತೊ
ನಿನ್ನ ಕಂಡು ಕರಗಿ ಜೀವ ಝುಮ್ಮೆಂದಿತೋ
ಕೋಡಿಯಂತೆ ಹರಿದು ಬಂದ ಈ ಸ್ಪೂರ್ತಿಗೆ
ಜೋಡಿ ಇತ್ತು ಆಡು ಬಾರೊ ನನ್ನೊಂದಿಗೆ
ಜೋಡಿ ಇತ್ತು ಆಡು ಬಾರೊ ನನ್ನೊಂದಿಗೆ

ಈ ರತ್ನಮಂಜರಿ ಚಿತ್ರ ಅಂತರ್ಜಾಲದಲ್ಲಿ ವೀಕ್ಷಣೆಗೆ ಲಭ್ಯವಿದೆ. ಆದರೆ  ಹಾಡುಗಳ ಭಾಗ ಅಲ್ಲಲ್ಲಿ  ಕ್ಷತಿಗೊಂಡಿರುವುದರಿಂದ ನೋಡಿದರೆ ರಸಭಂಗವಾಗುವ ಸಾಧ್ಯತೆ ಜಾಸ್ತಿ.  




Wednesday 22 November 2017

ದಂತಧಾವನಗಾನ ನೆನಪಿಸಿದ ದಂತಕತೆ


1956ರಲ್ಲಿ ವರದಕ್ಷಿಣೆ ಎಂಬ ಚಿತ್ರ ಬಂದಿತ್ತು ಎಂದಾಗಲಿ, ಅದರಲ್ಲಿ   ಪ್ಯಾಸಾ ಚಿತ್ರದ ಸರ್ ಜೊ ತೇರಾ ಚಕರಾಯೆ ಧಾಟಿಯ ಸುಂದರ್ ಟೂತ್ ಪೌಡರ್ ಎಂಬ ಹಾಡೊಂದು ಇದೆ ಎಂದಾಗಲಿ ಅಂತರ್ಜಾಲ ಕ್ರಾಂತಿಗಿಂತ ಮೊದಲು ನನಗೆ ಗೊತ್ತೇ ಇರಲಿಲ್ಲ. ಏಕೆಂದರೆ ಈ ಚಿತ್ರದ ಹಾಡುಗಳುರೇಡಿಯೋದಲ್ಲಿ ಬರುತ್ತಿರಲಿಲ್ಲ. ಆ ಮೇಲೆ ಈ ಹಾಡಿನ ಬಗ್ಗೆ ಮಾಹಿತಿ ದೊರಕಿದರೂ ಬಹಳ ಕಾಲ ಅದು ಕೇಳಲು ಸಿಕ್ಕಿರಲಿಲ್ಲ. ಅಂತೂ ಕೊನೆಗೆ ಆ ಚಿತ್ರದ ಹಾಡುಗಳು ಮಾತ್ರವಲ್ಲ, ಇಡೀ ಚಿತ್ರವೇ ಅಂತರ್ಜಾಲದಲ್ಲಿ ಲಭ್ಯವಾಯಿತು. ಚಿತ್ರದ ಟೈಟಲ್ಸ್‌ನಲ್ಲಿ  ಸ್ಟೀವನ್ಸ್ ಮತ್ತು ಜ್ಯೂನಿಯರ್ ಘಂಟಸಾಲ ಎಂಬ ಪುರುಷ  ಗಾಯಕರ ಹೆಸರಿದ್ದು  ಈ ಹಾಡಿನ ಗಾಯಕ ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ. ಚಿತ್ರದ ಪದ್ಯಾವಳಿಯೋ, ಹಾಡಿನ ಗಾನತಟ್ಟೆಯೋ ಯಾರಲ್ಲಾದರೂ ಇದ್ದರೆ ಖಚಿತವಾಗಿ ಹೇಳಬಹುದು.  

ಟೂತ್ ಪೌಡರ್ ಮಾರುವವನ ಪಾತ್ರದಲ್ಲಿ  ನರಸಿಂಹರಾಜು  ಈ  ಹಾಡನ್ನು ತೆರೆಯ ಮೇಲೆ ಹಾಡಿದ್ದು ಎಂದು ನನಗೆ  ಈ ವಿಡಿಯೊ ನೋಡಿದ ಮೇಲಷ್ಟೇ ಗೊತ್ತಾದದ್ದು.  ಹಲ್ಲುಪುಡಿಯನ್ನು ಕುರಿತ ಈ ಹಾಡಿಗೆ ತನ್ನ ಹಲ್ಲುಗಳನ್ನೇ ಬಂಡವಾಳವನ್ನಾಗಿಸಿ ಸದಭಿರುಚಿಯ ಹಾಸ್ಯದ ಹರಿಕಾರನಾಗಿ ದಶಕಗಳ ಕಾಲ ಕನ್ನಡ ಚಿತ್ರರಂಗವನ್ನಾಳಿದ  ನರಸಿಂಹರಾಜು ಅಲ್ಲದೆ ಇನ್ಯಾರು ತಾನೇ ನ್ಯಾಯ ಒದಗಿಸಬಲ್ಲರು ಎಂದು ನನಗೆ ಅನ್ನಿಸಿತು.



ದಂತಧಾವನದ ಈ ಗಾನ ನನ್ನ ಮನಸ್ಸು ಬಾಲ್ಯಕಾಲದ ನಮ್ಮ ದಂತ ಕತೆಯ ನೆನಪಿನತ್ತ ಧಾವಿಸುವಂತೆ ಮಾಡಿತು. ತೀರಾ ಚಿಕ್ಕವರಾಗಿದ್ದಾಗ ಟೂತ್ ಪೌಡರ್, ಪೇಸ್ಟುಗಳೆಂದರೇನೆಂದೇ ನಮಗೆ ಗೊತ್ತಿರಲಿಲ್ಲ.   ನಮ್ಮ ತಂದೆಯವರು ಬೆರಣಿ ಸುಟ್ಟು ತಯಾರಿಸಿದ ಪೆಂಡೊ ಎಂಬ ಕರ್ರಗಿನ ಬಿಲ್ಲೆಗಳನ್ನು ಗೆರಟೆಯೊಂದರಲ್ಲಿ ಹಾಕಿಡುತ್ತಿದ್ದರು. ಅದನ್ನು ಒಂದಿಷ್ಟು ಮುರಿದುಕೊಂಡು ನಮ್ಮ ಹಲ್ಲು ತಿಕ್ಕುತ್ತಿದ್ದರು.   ತನಗಾಗಿ ಅವರು ತೆಂಗಿನ ಸಿಪ್ಪೆಯಿಂದ ತಯಾರಿಸಿದ ಬ್ರಶ್ಶೊಂದನ್ನು ಇಟ್ಟುಕೊಂಡಿರುತ್ತಿದ್ದರು.  ನಮ್ಮ ತಾಯಿ ಮತ್ತು ಅತ್ತಿಗೆಯಂದಿರು ಹಲ್ಲುಜ್ಜಲು ಮಾವಿನೆಲೆ ಉಪಯೋಗಿಸುತ್ತಿದ್ದರು.  ಕೆಲಕಾಲದ ನಂತರ ನಮ್ಮ ಮನೆಗೆ ಖಾಕಿ ಬಣ್ಣದ ಲಕೋಟೆಯಲ್ಲಿ ಬರುತ್ತಿದ್ದ ಗುಲಾಬಿ ಬಣ್ಣದ ನಂಜನಗೂಡು ಟೂತ್ ಪೌಡರಿನ ಪ್ರವೇಶವಾಯಿತು. ಅದನ್ನು ಒಂದು ಹಳೆಯ ಕುಟಿಕುರಾ ಫೇಸ್ ಪೌಡರಿನ ಡಬ್ಬಿಯಲ್ಲಿ ಹಾಕಿಡುತ್ತಿದ್ದರು. ಒಗರು ಮಿಶ್ರಿತ ಸಿಹಿ ರುಚಿಯ ದೊರಗಾದ ಆ ಪುಡಿಯನ್ನು  ಅಂಗೈಗೆ ಸುರಿದುಕೊಂಡು ಬೆರಳಿನಿಂದ ಎದುರಿನ ಹಲ್ಲುಗಳ ಮುಂಭಾಗ ಮಾತ್ರ  ತಿಕ್ಕುತ್ತಿದ್ದೆವು. ಹೀಗಾಗಿ ದವಡೆ ಹಲ್ಲುಗಳ ಸೂಕ್ತ ನಿರ್ವಹಣೆ ಇಲ್ಲದೆ ಕುಳಿಗಳುಂಟಾಗಿ ಹಲ್ಲುನೋವು ಎಲ್ಲ ಮಕ್ಕಳಲ್ಲೂ ಸಾಮಾನ್ಯವಾಗಿತ್ತು.  ಪದೇ ಪದೇ ಬೆಲ್ಲವನ್ನು ಬೇಡಿ ತಿನ್ನುವ ಅಭ್ಯಾಸವೂ ನಮಗಿದ್ದುದು ಇದಕ್ಕೆ ಪೂರಕವಾಗಿತ್ತು.  ಆಗ ದಂತವೈದ್ಯ ಎಂಬ ಪದವನ್ನೇ ನಾವು ಕೇಳಿರಲಿಲ್ಲ.  ಲವಂಗದ ಎಣ್ಣೆಯ ಒಂದು ಬಾಟಲಿ ಯಾವಾಗಲೂ ಮನೆಯಲ್ಲಿರುತ್ತಿತ್ತು.  ಹಲ್ಲು ನೋವು ತೀವ್ರವಾದಾಗ ಸ್ವಲ್ಪ ಹತ್ತಿಯನ್ನು ಅದರಲ್ಲದ್ದಿ ಹಲ್ಲಿನ ಕುಳಿಯಲ್ಲಿಡಲಾಗುತ್ತಿತ್ತು.  ಕೆಲವು ಸಲ ಇಸ್ಮಾಲಿ ಎಂಬವನೊಬ್ಬ ಬಂದು ನಮ್ಮನ್ನು ಹೊರ ಜಗಲಿಯಲ್ಲಿದ್ದ ಬೆಂಚಿನ ಮೇಲೆ ಮಲಗಿಸಿ ಎಡಗಡೆಯ   ಹಲ್ಲು ನೋಯುತ್ತಿದ್ದರೆ ಬಲಗಡೆ ಕಿವಿಯಲ್ಲಿ ಯಾವುದೋ ಎಲೆಗಳ ರಸವನ್ನು ಹಿಂಡುತ್ತಿದ್ದ!  ಜೀವಮಾನವಿಡೀ ಒಮ್ಮೆಯೂ ನಿಜವಾದ ಬೀಡಿ ಸಿಗರೇಟು ಸೇದದಿದ್ದರೂ ಹಲ್ಲು ನೋವಿಗೆಂದು ಎಕ್ಕದ ಗಿಡದ ಟೊಳ್ಳು ಕಾಂಡವನ್ನು ಬೀಡಿಯಂತೆ ಸೇದಿದ್ದೂ ಉಂಟು!



ಕೆಲವು ವರ್ಷಗಳ ನಂತರ ನಮ್ಮಲ್ಲಿ ಕೊಲ್ಗೇಟ್ ಬಿಳಿ ಹಲ್ಲುಪುಡಿಯ ಬಳಕೆ ಆರಂಭವಾಯಿತು.  ಹಲ್ಲುಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ನಮ್ಮ ಒಬ್ಬ ಅಣ್ಣ ತನಗಾಗಿ ಮಾತ್ರ ಪೇಸ್ಟ್ ಮತ್ತು ಬ್ರಶ್ ತಂದಿಟ್ಟುಕೊಂಡು ಬಳಸುತ್ತಿದ್ದರು.  ಆ ಪೇಸ್ಟನ್ನು ಮುಟ್ಟುವ ಅಧಿಕಾರ ಬೇರೆ ಯಾರಿಗೂ ಇರಲಿಲ್ಲ!  ಅವರು ಹೆಚ್ಚಾಗಿ ಕೆಂಪು ಬಣ್ಣದ ಪೆಟ್ಟಿಗೆಯ ಕೋಲ್ಗೇಟ್ ಪೇಸ್ಟ್ ತರುತ್ತಿದ್ದರು. ನಾನು ನಾಲ್ಕನೇ ಕ್ಲಾಸಲ್ಲಿರುವಾಗ ನನ್ನ ಒತ್ತಾಯದ ಮೇರೆಗೆ ನಮ್ಮ ಇನ್ನೊಬ್ಬ ಅಣ್ಣ ನನಗೂ ಹಳದಿ ಬಣ್ಣದ ಪೆಟ್ಟಿಗೆಯ ಕೋಲಿನೋಸ್ ಪೇಸ್ಟ್ ಮತ್ತು ಜ್ಯೂನಿಯರ್ ಬ್ರಶ್ ಒಂದನ್ನು ತಂದುಕೊಟ್ಟಿದ್ದರು. ಅದನ್ನುಪಯೋಗಿಸಿ ಮೊದಲ ದಿನ ಅತ್ಯುತ್ಸಾಹದಿಂದ ಬ್ರಶ್ ಮಾಡಲು ಪ್ರಯತ್ನಿಸಿದಾಗ  ಒಸಡುಗಳಿಂದ ರಕ್ತ ಜಿನುಗಿತ್ತು!


ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ಉಜಿರೆಯಲ್ಲಿ ಹಾಸ್ಟೆಲ್ ಸೇರಿದ ಮೇಲೆ  ವಿವಿಧ ಟೂತ್ ಪೇಸ್ಟುಗಳನ್ನು ಮನಸೋ ಇಚ್ಛೆ ಉಪಯೋಗಿಸಲು ನನಗೆ ಪೂರ್ಣ ಸ್ವಾತಂತ್ರ್ಯ ದೊರಕಿತು.  ಕೈಯಲ್ಲಿ ಹೆಚ್ಚು ದುಡ್ಡು ಇಲ್ಲದಿರುತ್ತಿದ್ದರೂ ಅವಶ್ಯಕ ವಸ್ತುಗಳನ್ನು ಕೊಂಡುಕೊಳ್ಳಲು ಅನುಕೂಲವಾಗುವಂತೆ  ನಮ್ಮ ಸಂಸ್ಕೃತ ಅಧ್ಯಾಪಕರೂ ಆಗಿದ್ದ ಗೋಪಾಲ ಮಾಸ್ಟ್ರ ಅಂಗಡಿಯಲ್ಲಿ ನನ್ನ ಖಾತೆಯೊಂದನ್ನು ಮನೆಯವರು ತೆರೆದಿದ್ದರು.  ಬೇಕಿದ್ದ ವಸ್ತುಗಳನ್ನು ಕೊಂಡು ಪುಸ್ತಕವೊಂದರಲ್ಲಿ ಅದನ್ನು ದಾಖಲಿಸಿ ಆಗಾಗ ಲೆಕ್ಕ ಚುಕ್ತಾ ಮಾಡುವ ವ್ಯವಸ್ಥೆಯಾಗಿತ್ತದು.  ನಾವು ಬಿಸ್ಕೆಟ್, ಚಾಕಲೇಟು ಇತ್ಯಾದಿ ಕೊಂಡದ್ದು ಸುಲಭದಲ್ಲಿ ವೇದ್ಯವಾಗದಂತೆ ವಿವರಗಳನ್ನು ಮೋಡಿ ಅಕ್ಷರಗಳಲ್ಲಿ ಬರೆದು ಮೊಬಲಗು ಮಾತ್ರ ಸ್ಪಷ್ಟವಾಗಿ ಕಾಣಿಸುವಂತೆ ಅವರು ಆ ಪುಸ್ತಕದಲ್ಲಿ ಬರೆಯುತ್ತಿದ್ದರು!  ಪ್ರಾಣಿಗಳ ಪುಟ್ಟ ಪ್ಲಾಸ್ಟಿಕ್ ಬೊಂಬೆಗಳೊಂದಿಗೆ ಬರುತ್ತಿದ್ದ ಬಿನಾಕಾ ಪೇಸ್ಟನ್ನು ನಾನು ಹೆಚ್ಚಾಗಿ ಕೊಳ್ಳುತ್ತಿದ್ದೆ.  ಪಚ್ಚೆ ಕಲರಿನ ಕ್ಲೋರೊಫಿಲ್, ತಿಳಿ ಗುಲಾಬಿ ಬಣ್ಣದ ರೋಸ್, ಬಿಳಿ ಬಣ್ಣದ ಟಾಪ್ ಮತ್ತು ತಿಳಿ ನೀಲಿ ಬಣ್ಣದ ಫ್ಲೋರೈಡ್ ಎಂಬ ವಿವಿಧ ಬಿನಾಕಾ ಪೇಸ್ಟುಗಳು ಆಗ ದೊರಕುತ್ತಿದ್ದವು.  ಬಿಳಿ ಪೇಸ್ಟಿಗೆ ಕೆಂಪು ಪಟ್ಟೆಗಳುಳ್ಳ ಸಿಗ್ನಲ್ ಟೂತ್ ಪೇಸ್ಟು ಕೂಡ ಆಗ ಜನಪ್ರಿಯವಾಗಿತ್ತು.  ಪಟ್ಟೆಗಳಿಗಾಗಿ ಮುಚ್ಚಳದ ಬಳಿ ಅಳವಡಿಸಿರುತ್ತಿದ್ದ ಕೆಂಪು ಪದಾರ್ಥದ ಸಂಗ್ರಹಾಗಾರವನ್ನು ತೆರೆದು ಕೆಂಪು ಭಾಗ ಮಾತ್ರ ಮೊದಲು ಹೊರಗೆ ಬರುವಂತೆ ಕೆಲವು ಮಿತ್ರರು ಮಾಡಿಕೊಳ್ಳುತ್ತಿದ್ದರು.  ಫೋರ್‍ಹನ್ಸ್ ಎಂಬ ಪೇಸ್ಟಿನ ಜಾಹೀರಾತಲ್ಲಿ ದಂತರಕ್ಷಣೆಯ ಕುರಿತಾದ ಉಚಿತ ಕಿರು ಪುಸ್ತಿಕೆಗಾಗಿ ಬರೆಯಿರಿ ಎಂಬ ಸೂಚನೆ ಇರುತ್ತಿತ್ತು.  ಆ ಪೇಸ್ಟಿನ ಒಗರು ರುಚಿ ನನಗಿಷ್ಟವಾಗದಿದ್ದರೂ ನಾನು ಈ ಬಣ್ಣಬಣ್ಣದ ಪುಸ್ತಿಕೆಯನ್ನು ಅನೇಕ ಬಾರಿ ತರಿಸಿದ್ದಿದೆ.


ಇಷ್ಟೆಲ್ಲ ವಿವಿಧ ಪೇಸ್ಟುಗಳನ್ನು ಬಳಸಿ ಪ್ರಯೋಗ ಮಾಡಿದರೂ ಇವ್ಯಾವುದೂ ಒಸಡುಗಳನ್ನು ಬಲಪಡಿಸಲಿಲ್ಲ, ಹಲ್ಲಿನ ಎನಾಮಲನ್ನು ಗಟ್ಟಿಗೊಳಿಸಲಿಲ್ಲ, ಆಗಾಗ ಕಾಡುವ ಹಲ್ಲು ನೋವನ್ನು ಹೋಗಲಾಡಿಸಲಿಲ್ಲ. ಕೊನೆಗೆ ನೌಕರಿ ದೊರೆತು ಮಂಗಳೂರು ಸೇರಿ ಆರ್ಥಿಕವಾಗಿ ಸ್ವಲ್ಪ ಸಬಲನಾದ ಮೇಲೆ ದಂತವೈದ್ಯ ಮಿತ್ರರುಗಳ ನೆರವಿನಿಂದ  ಹಲ್ಲುಗಳನ್ನು  ಸದೃಢಗೊಳಿಸಿಕೊಂಡು ಬೇನೆ ಬೇಗುದಿಗಳಿಂದ ಮುಕ್ತಿ ಹೊಂದಿ ಆನಂದವಾಗಿದ್ದೇನೆ ಎಂಬಲ್ಲಿಗೆ ಈ ದಂತಕತೆಯು ಮುಕ್ತಾಯವಾದುದು.





Wednesday 18 October 2017

ದೀಪಾವಳಿಯೂ ಮಸಾಲೆದೋಸೆಯೂ



ಬೇಕೆನಿಸಿದಾಗ ಹೋಟಲಿಗೆ ಹೋಗಿ ತಿನ್ನುವ ಮಸಾಲೆದೋಸೆಗೂ ದೀಪಾವಳಿಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಎಂದೆನ್ನಿಸುತ್ತಿದೆಯೇ?  ಆದರೆ ನಮ್ಮ ಮನೆಯ ಮಟ್ಟಿಗೆ ಇವೆರಡಕ್ಕೆ ಅವಿನಾಭಾವ ಸಂಬಂಧವಿದೆ.  ಹಾಗೆಂದು ಇದು ಬಲು ಹಿಂದಿನಿಂದ ನಡೆದು ಬಂದದ್ದೇನೂ ಅಲ್ಲ.

ನಮ್ಮ ಕರಾವಳಿ ಭಾಗದಲ್ಲಿ ದೀಪಾವಳಿಯಂದು ದೋಸೆ ಮಾಡುವ ಸಂಪ್ರದಾಯ ಬಲು ಹಿಂದಿನಿಂದಲೂ ಇದೆ. ದಿನ ನಿತ್ಯ ಬೆಳಗ್ಗೆ ಗಂಜಿ ಉಣ್ಣುವ ದಿನಚರಿಯ ಮನೆಗಳಲ್ಲಿ ಎಂದಾದರೊಮ್ಮೆ  ದೋಸೆಯಂಥ ತಿಂಡಿ   ಇರುತ್ತಿರಲಿಲ್ಲವೆಂದೇನೂ ಅಲ್ಲ.  ಆದರೆ ದೀಪಾವಳಿಯ ಮುನ್ನಾ ದಿನ ಪ್ರತಿ ಮನೆಯಲ್ಲಿ ದೊಡ್ಡ ಹಂಡೆಯಲ್ಲಿ ಮೂರು ದಿನಕ್ಕೆ ಸಾಕಾಗುವಷ್ಟು ದೋಸೆಹಿಟ್ಟು ರುಬ್ಬಿಟ್ಟುಕೊಳ್ಳಲಾಗುತ್ತಿತ್ತು.  ಹಬ್ಬದ ವಿಶೇಷವಾಗಿ ಅದಕ್ಕೆ ಸ್ವಲ್ಪ ಅರಸಿನವನ್ನೂ   ಬೆರೆಸಲಾಗುತ್ತಿತ್ತು.  ನರಕ ಚತುರ್ದಶಿಯಂದು ಬೆಳಗಿನ ಜಾವ ಎಲ್ಲರ ತೈಲಾಭ್ಯಂಗದ ನಂತರ  ಬಾಳೆಹಣ್ಣಿನ ಸೀಕರಣೆಯ ಜೊತೆ ದೋಸೆ ಮತ್ತು ನೈವೇದ್ಯದ ಸಿಹಿ ಅವಲಕ್ಕಿ ಮೆಲ್ಲುವ ಕಾರ್ಯಕ್ರಮ.  ಹಿರಿಯರು ಅಂದು ಮಧ್ಯಾಹ್ನ ಎಂದಿನಂತೆ ಅನ್ನ ಉಣ್ಣುತ್ತಿದ್ದರೂ ನಾನೂ ಸೇರಿದಂತೆ ಕಿರಿಯರೆಲ್ಲರಿಗೆ ಆ ದಿನ ಮೂರು ಹೊತ್ತೂ ದೋಸೆಯೇ! ಮುಂದಿನ ಮೂರು ದಿನವೂ ಬೆಳಗ್ಗೆಗೆ ದೋಸೆ.  ದಿನದಿಂದ ದಿನಕ್ಕೆ ಹುಳಿ ಹೆಚ್ಚಾಗುತ್ತಾ ಹೋಗುತ್ತಿದ್ದ   ಹಿಟ್ಟಿಗೆ ಕೊನೆಯ ದಿನ ಹಸಿ ಮೆಣಸು ಕೊಚ್ಚಿ ಹಾಕಿ ಮಾಡಿದ ದೋಸೆಗೆ ಅದ್ಭುತ ರುಚಿ.  ಆಗ ನಮ್ಮಲ್ಲಿ  ದೋಸೆಗೆ ಜೊತೆಯಾಗಿ ಚಟ್ಣಿ ಬಳಸುವ ಪರಿಪಾಠ ಇರಲಿಲ್ಲ.  ಮನೆಯಲ್ಲಿ ಯಥೇಚ್ಛ ಜೇನುತುಪ್ಪ ಇರುತ್ತಿದ್ದುದರಿಂದ  ಅದನ್ನೇ ತುಪ್ಪದ ಜೊತೆ ಬೆರೆಸಿ ಬಳಸುತ್ತಿದ್ದುದು.  ಗೋಪೂಜೆಯ ದಿನ ದನಕರುಗಳಿಗೂ  ಎರಡೆರಡು ದೋಸೆ ತಿನ್ನುವ ಭಾಗ್ಯ.  ಪೂಜೆ ಇಲ್ಲದಿದ್ದರೂ ಎಮ್ಮೆಗಳಿಗೂ ದೋಸೆ  ಸಿಗುತ್ತಿತ್ತು.


ಒಂದು ಗ್ರೂಪ್ ಫೊಟೋದ ಸುತ್ತ
ಲೇಖನದ ಮೂಲಕ ಈಗಾಗಲೇ ಪರಿಚಿತರಾದ ನಮ್ಮ ಕುಟುಂಬದ ಹೊಸತನದ ಹರಿಕಾರ ಗಣಪತಿ ಅಣ್ಣನಿಗೆ  ಈ ಮೂರು ದಿನಗಳ ದೋಸೆ ಹಬ್ಬದಲ್ಲಿ ಏನಾದರೂ ಬದಲಾವಣೆ ಬೇಕೆನ್ನಿಸಿತು.  ಪ್ರತಿ ವರ್ಷ ಧರ್ಮಸ್ಥಳ ದೀಪೋತ್ಸವಕ್ಕೆ ಹೋದಾಗ ಅಲ್ಲಿಯ ಮಿತ್ರ ಸಮಾಜ ಹೋಟೆಲಿನಲ್ಲಿ ನಾವು ಮಸಾಲೆ ದೋಸೆ ತಿನ್ನುವುದಿತ್ತು. ಮೊದಲೇ ಚಿಕ್ಕ ಹೋಟೆಲು ಅದು.  ಜಾತ್ರೆಯ ಜನಸಂದಣಿ ಬೇರೆ.  ಹೀಗಾಗಿ  ಸಪ್ಲಯರ್ ನಮ್ಮ ಟೇಬಲ್ ಬಳಿಗೆ ಬಂದು  ಆರ್ಡರ್ ಪಡೆದು ಮಸಾಲೆ ದೋಸೆ ನಮ್ಮ ಮುಂದೆ ಪ್ರತ್ಯಕ್ಷವಾಗಲು ಬಹಳ ತಡವಾಗುತ್ತಿತ್ತು. ಕೆಲವೊಮ್ಮೆ ಆತ ನಮ್ಮನ್ನು ಮರೆತೇ ಬಿಟ್ಟನೇನೋ ಎಂದೂ ಅನ್ನಿಸುವುದಿತ್ತು. ಕೊನೆಗೂ ಆತ ದೋಸೆಗಳ ಪ್ಲೇಟುಗಳೊಡನೆ ನಮ್ಮತ್ತ ಬಂದಾಗ ನಿಧಿ ದೊರಕಿದಷ್ಟು ಸಂತೋಷ. ಇತರ ದಿನಗಳಲ್ಲೂ ಮನೆಗೆ ಬೇಕಾದ ದಿನಸಿ ಇತ್ಯಾದಿ ತರಲು ಬೆಳಗ್ಗಿನ ಹೊತ್ತು  ಉಜಿರೆ, ಬೆಳ್ತಂಗಡಿ ಇತ್ಯಾದಿ ಕಡೆ ಹೋದಾಗ ಕೆಲವೊಮ್ಮೆ ಹೋಟೆಲಿಗೆ ಭೇಟಿ ಕೊಡುತ್ತಿದ್ದರೂ ಅಲ್ಲಿ ಗೋಳಿಬಜೆ, ಅವಲಕ್ಕಿ-ಕಡ್ಲೆಯಂಥ ತಿಂಡಿಗಳಲ್ಲೇ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತಿತ್ತು ಏಕೆಂದರೆ ಆಗ ಹೋಟೆಲುಗಳಲ್ಲಿ ಮಸಾಲೆ, ತುಪ್ಪ, ಸಾದಾ ದೋಸೆಗಳು ಸಂಜೆ ನಾಲ್ಕರ ನಂತರವಷ್ಟೇ ಇರುತ್ತಿದ್ದುದು.  ನಮ್ಮಲ್ಲಿ ಅಪರಾಹ್ನದ ನಂತರ ಪೇಟೆಗೆ ಹೋಗುವ ಪದ್ಧತಿಯೇ ಇರಲಿಲ್ಲ. ಹೀಗಾಗಿ ಜಾತ್ರೆಯಂದು ಹೋಟೆಲಿನಲ್ಲಿ ಅಷ್ಟು ಹೊತ್ತು ಕಾದು ವರ್ಷಕ್ಕೊಮ್ಮೆ ತಿನ್ನುವ ಮಸಾಲೆ ದೋಸೆಯನ್ನು ಮನೆಯಲ್ಲೇ ಏಕೆ ಮಾಡಬಾರದೆಂಬ ಯೋಚನೆ ಅಣ್ಣನಿಗೆ ಮೂಡಿತು.  ಇದನ್ನು ಕಾರ್ಯರೂಪಕ್ಕೆ ತರಲು ದೀಪಾವಳಿಯೇ ಸೂಕ್ತ ಎಂದೂ ಅವರಿಗೆ ಅನ್ನಿಸಿತು.  ಮನಸ್ಸಿಗೆ ಅನ್ನಿಸಿದ್ದನ್ನು  ಕಾರ್ಯಗತಗೊಳಿಸಲು ಮೀನ ಮೇಷ ಎಣಿಸುವವರಲ್ಲ  ಅವರು. ಒಂದು ವರ್ಷ ದೀಪಾವಳಿಯ ಹಿಂದಿನ ದಿನ ಪೇಟೆಗೆ ಹೋಗಿ ಒಂದು ಚೀಲ ಬಟಾಟೆ ತಂದೇ ಬಿಟ್ಟರು.  ತೂಗಾಡಿಸಿದ ನೀರುಳ್ಳಿಯ ಗೊಂಚಲು  ಮನೆಯಲ್ಲಿ ಯಾವಾಗಲೂ ಇರುತ್ತಿತ್ತು.  ದೀಪಾವಳಿಯಂದು ಬೆಳಗ್ಗೆ ತಾವೇ ಮುತುವರ್ಜಿ ವಹಿಸಿ ಬಟಾಟೆ ಬೇಯಿಸಿ ಸುಲಿದು, ಈರುಳ್ಳಿ ಹೆಚ್ಚಿ  ಪಲ್ಯ ಮಾಡಿದರು. ಹಬ್ಬದ ದಿನ ನೀರುಳ್ಳಿಯ ಬಳಕೆಗೆ ನಮ್ಮ ತಾಯಿ ಮತ್ತು ಹಿರಿಯಣ್ಣನಿಂದ ಆಕ್ಷೇಪ ವ್ಯಕ್ತವಾದರೂ ಬೇರೆ ಒಲೆ, ಬೇರೆ ಕಾವಲಿಯನ್ನು ಬಳಸಿ ಮಸಾಲೆ  ದೋಸೆ ತಯಾರಿಸಿಯೇ ಬಿಟ್ಟರು.  ನಾವೆಲ್ಲ ಮತ್ತೆ ಮತ್ತೆ ಕೇಳಿ ಹಾಕಿಸಿಕೊಂಡು ತಿಂದೆವು.  ಅಂದಿನಿಂದ ಸಾಂಪ್ರದಾಯಿಕ ಹಳದಿ ದೋಸೆ ಮತ್ತು ಬಾಳೆ ಹಣ್ಣಿನ ಸೀಕರಣೆಗೆ ಸಮಾನಾಂತರವಾಗಿ ಮಸಾಲೆ ದೋಸೆಯೂ ನಮ್ಮ ಮನೆ ದೀಪಾವಳಿಯ ಅವಿಭಾಜ್ಯ ಅಂಗವಾಯಿತು.

ಉದ್ಯೋಗ ನಿಮಿತ್ತ ನಮ್ಮ ಕುಟುಂಬ ಸದಸ್ಯರೆಲ್ಲ ಈಗ ಬೇರೆ ಬೇರೆ ಕಡೆ ನೆಲೆಸಿದ್ದರೂ ದೀಪಾವಳಿಯ ಸಂದರ್ಭದಲ್ಲಿ ಒಂದು ದಿನವಾದರೂ ಮನೆಯಲ್ಲೇ ಮಸಾಲೆ ದೋಸೆ ತಯಾರಿಸಿ ಈಗಿಲ್ಲದ ಅಣ್ಣನನ್ನು ನೆನಪಿಸಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ನಮ್ಮೂರ ಪ್ರಸಿದ್ಧ ಕವಿ ರಾಮಚಂದ್ರ ಮಾಸ್ತರರ ಹಳೆಯ ಚುಟುಕವೊಂದು ನೆನಪಾಗುತ್ತಿದೆ.

ನಮ್ಮ ಅಣ್ಣ ಬಂದ
ಆಲೂಗಡ್ಡೆ ತಂದ
ಉಳ್ಳಿಗಡ್ಡೆಯೊಡನೆ ಬೆರೆಸಿ
ಪಲ್ಯ ಮಾಡಿ ತಿಂದ

ಆದರೆ ಇಲ್ಲಿ ಕೊನೆಯೆ ಪದ ತಿಂದ ಎಂದಿದ್ದುದನ್ನು ತಿನ್ನಿಸಿದ ಎಂದು ಬದಲಾಯಿಸಬೇಕಾಗುತ್ತದೆ.

ಈ ಮಸಾಲೆದೋಸೆ ಪುರಾಣದ ಕೊನೆಯಲ್ಲೊಂದು ಪ್ರಶ್ನೆ.  ಬಟಾಟೆ ನೀರುಳ್ಳಿ ಪಲ್ಯ ಪೂರಿಯೊಡನೆ ಸೇರಿದರೆ ಪೂರಿ ಭಾಜಿ, ದೋಸೆಯೊಡನೆ ಸೇರಿದರೆ ಮಸಾಲೆ ದೋಸೆ ಹೇಗಾಗುತ್ತದೆ?  ಇದಕ್ಕೆ ಉತ್ತರ ತಿಳಿದೂ ಹೇಳದಿದ್ದರೆ ನೀವು ತಿನ್ನುವ ಗರಿ ಗರಿ ಮಸಾಲೆದೋಸೆ ಬಾಯಿ ತಲುಪುವ ಮುನ್ನವೇ ಪುಡಿ ಪುಡಿಯಾಗಿ ಕೈಯಿಂದ ಉದುರೀತು!



Sunday 1 October 2017

ಲಂಡನ್‌ನಲ್ಲಿ ಜಗನ್ಮೋಹಿನಿ ಪತ್ತೆಯಾದಳು!


ಇಲ್ಲ ಇಲ್ಲ.  ಕೊಹಿನೂರ್ ವಜ್ರ ಅಥವಾ ಟಿಪ್ಪು ಖಡ್ಗದಂತೆ ಜಗನ್ಮೋಹಿನಿಯನ್ನು ಯಾರೂ ಹಾರಿಸಿಕೊಂಡು ಹೋಗಲಿಲ್ಲ. ವಾಸ್ತವವಾಗಿ  ಮೂಲ ಜಗನ್ಮೋಹಿನಿ ಲಂಡನ್‌ನಲ್ಲಿ ಇಲ್ಲ ಕೂಡ. ರಾಮಾಯಣದ ಕೆಲವು ಪಾಠಾಂತರಗಳ ಪ್ರಕಾರ ರಾವಣನ ಅಶೋಕವನದಲ್ಲಿದ್ದ ಛಾಯಾ ಸೀತೆಯಂತೆ  ಅಲ್ಲಿ ಇರುವುದು ಜಗನ್ಮೋಹಿನಿಯ ಛಾಯಾ ರೂಪ ಮಾತ್ರ! ಯಾರಪ್ಪಾ ಈ ಜಗನ್ಮೋಹಿನಿ ಎಂದು ಯೋಚಿಸುತ್ತಿದ್ದೀರಾ?  ಈಕೆ ಬೇರಾರೂ ಅಲ್ಲ.  50ರ ದಶಕದಲ್ಲಿ ಎಂದೋ ಎಂದೋ ಎಂದು ಹಾಡಿ ಎಲ್ಲರನ್ನೂ ಸಮ್ಮೋಹನಗೊಳಿಸಿದ್ದವಳು.  ಅರ್ಥಾತ್ ನಾನು ಅನೇಕ ವರ್ಷಗಳಿಂದ ಹುಡುಕಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದ ಜಗನ್ಮೋಹಿನಿ ಚಿತ್ರದ ಕೆಲವು ಹಾಡುಗಳು ಕೊನೆಗೂ ಲಂಡನ್‌ನಲ್ಲಿರುವ ಬ್ರಿಟಿಷ್ ಲೈಬ್ರರಿಯಲ್ಲಿ ಪತ್ತೆಯಾದವು.  ಅಷ್ಟೇ ಅಲ್ಲ. ನಾನು ನಿರೀಕ್ಷಿಸದಿದ್ದ ಇನ್ನೂ ಅನೇಕ ಹಳೆ ಹಾಡುಗಳ ಭಂಡಾರದ ಕೀಲಿ ಕೈಯೇ ದೊರಕಿದಂತಾಯಿತು.  ಮಿತ್ರರೊಬ್ಬರು ನೀಡಿದ ಸಣ್ಣ ಸುಳಿವೊಂದು ಇದಕ್ಕೆ ಕಾರಣವಾಯಿತು.

ಬ್ರಿಟಿಷ್ ಲೈಬ್ರರಿ ಹಮ್ಮಿಕೊಂಡ Endangered Archives Programme ಅಡಿಯಲ್ಲಿ ಯಂಗ್ ಇಂಡಿಯಾ ಲೇಬಲ್ ಹೊಂದಿ ಮುಂಬಯಿಯ ನ್ಯಾಶನಲ್ ಗ್ರಾಮೊಫೋನ್ ರೆಕಾರ್ಡಿಂಗ್ ಕಂಪನಿ ಸುಮಾರು 1935 ರಿಂದ 1955ರ ವರೆಗೆ ತಯಾರಿಸಿದ್ದ ಸಾವಿರಾರು 78 rpm ರೆಕಾರ್ಡುಗಳನ್ನು digitised ರೂಪದಲ್ಲಿ ಸಂಗ್ರಹಿಸಲಾಗಿದ್ದು ನಾವು ಚಂದಮಾಮ ಜಾಹೀರಾತುಗಳಲ್ಲಿ ನೋಡುತ್ತಾ ಬಂದಿರುವ ಅನೇಕ ಕನ್ನಡ ಚಿತ್ರಗಳ ಹಾಡುಗಳು  ಮುಕ್ತವಾಗಿ ಆಲಿಸಲು  ಅಲ್ಲಿ ಲಭ್ಯವಿವೆ.  ಜಗನ್ಮೋಹಿನಿಯ ಕೆಲವು ಹಾಡುಗಳ ಜೊತೆಗೆ ಶ್ರೀನಿವಾಸ ಕಲ್ಯಾಣ, ದಳ್ಳಾಳಿ, ಆಶಾಢಭೂತಿ, ಗಂಧರ್ವ ಕನ್ಯೆ, ಚಂಚಲ ಕುಮಾರಿ ಮುಂತಾದವು ಅಲ್ಲದೆ ಅನೇಕ ನಾಟಕಗಳು, ಲಾವಣಿಗಳು, ರಂಗ ಗೀತೆಗಳು, ಶಾಸ್ತ್ರೀಯ ಸಂಗೀತ ಇತ್ಯಾದಿಗಳ ದೊಡ್ಡ ಖಜಾನೆಯೇ ಇದೆ.  ಆಗಲೇ ಹೇಳಿದಂತೆ ಇವುಗಳ ಪ್ರತಿ ಮಾತ್ರ ಅಲ್ಲಿದ್ದು ಮೂಲ ಸಾಮಗ್ರಿ ಆಯಾ ಸಂಗ್ರಾಹಕರ ಬಳಿಯಲ್ಲೇ ಇರುತ್ತದೆ.  ಈ ಕನ್ನಡ ಖಜಾನೆ ಅಲ್ಲಿ ಸೇರ್ಪಡೆಯಾದದ್ದು  ವೆಂಕಟಮೂರ್ತಿ ಮತ್ತು ಕೊಚ್ಚಿಯ ಸಮೀಪದ ಪಾಲ ಎಂಬಲ್ಲಿ ಹಳೆ ಗ್ರಾಮೊಫೋನ್ ಮತ್ತು ರೆಕಾರ್ಡುಗಳ ಬೃಹತ್ ಸಂಗ್ರಹಾಲಯವನ್ನೇ ಹೊಂದಿರುವ ಸನ್ನಿ ಮಾಥ್ಯೂ ಎಂಬ ಮಹಾನುಭಾವರ ಸಹಕಾರದಿಂದ.  ಇತರ ಅನೇಕರೂ ವಿವಿಧ ಭಾಷೆಗಳಲ್ಲಿ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.



ಬ್ರಿಟಿಷ್ ಮತ್ತು ಜರ್ಮನ್ ರೆಕಾರ್ಡಿಂಗ್ ಕಂಪನಿಗಳ ತೀವ್ರ ಸ್ಪರ್ಧೆ ಎದುರಿಸಿಯೂ ಈ ಅಪ್ಪಟ ಸ್ವದೇಶಿ ಸಂಸ್ಥೆಯಾದ ನ್ಯಾಶನಲ್ ಗ್ರಾಮೊಫೋನ್ ರೆಕಾರ್ಡಿಂಗ್ ಕಂಪನಿ  ಸುಮಾರು ಎರಡು ದಶಕಗಳ ಕಾಲ  10000ಕ್ಕೂ ಹೆಚ್ಚು 78 rpm ರೆಕಾರ್ಡುಗಳನ್ನು   ಬಿಡುಗಡೆ ಮಾಡಿತ್ತು.  ಸಿನಿಮಾ ಸಂಗೀತದ ಜೊತೆಗೆ ಹವ್ಯಾಸಿ ಕಲಾವಿದರಿಗೂ ಅವಕಾಶ ನೀಡುತ್ತಿದ್ದ ಇದು 1948ರ ಹೊತ್ತಿಗೆ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲತೊಡಗಿ 1955ರಲ್ಲಿ ಬಾಗಿಲು ಮುಚ್ಚಿತು.  ಕನ್ನಡದಲ್ಲಿ ಮಹಾತ್ಮಾ ಸಂಸ್ಥೆ ಬಿಟ್ಟರೆ ಇನ್ಯಾವ ಚಿತ್ರ ನಿರ್ಮಾಪಕರೂ ಈ ಲೇಬಲ್‌ನಲ್ಲಿ ರೆಕಾರ್ಡು ಬಿಡುಗಡೆ ಮಾಡಿದಂತಿಲ್ಲ. 

ಹಳೆ ಗ್ರಾಮೊಫೋನ್ ರೆಕಾರ್ಡು ಸಂಗ್ರಹದ ಹವ್ಯಾಸ ಇರುವ  ಎಷ್ಟೋ ಮಂದಿ ಇದ್ದಾರೆ. ಬೆಂಕಿ ಪೆಟ್ಟಿಗೆ ಸಂಗ್ರಹದಿಂದ ಕಡ್ಡಿ ಗೀರಲಾಗದು, ಸ್ಟಾಂಪ್ ಸಂಗ್ರಹದಿಂದ ಅಂಚೆಯಲ್ಲಿ ಕಾಗದ ಕಳಿಸಲಾಗದು, ನಾಣ್ಯ ಸಂಗ್ರಹದಿಂದ ಏನನ್ನೂ ಕೊಳ್ಳಲಾಗದು.  ಆದರೆ ಗ್ರಾಮೊಫೋನ್ ರೆಕಾರ್ಡುಗಳನ್ನು ಸುಮ್ಮನೆ ಕಪಾಟಿನಲ್ಲಿ ಇಟ್ಟುಕೊಳ್ಳುವ ಬದಲು ಈ ರೀತಿ ಡಿಜಿಟೈಸ್ ಮಾಡಿ ಈ ಮಹನೀಯರಂತೆ ಪ್ರಪಂಚಕ್ಕೆ ಹಂಚಬಹುದಲ್ಲವೇ.  ಎಲ್ಲ ಸಂಗ್ರಾಹಕರು ಬ್ರೀಟಿಷ್ ಲೈಬ್ರರಿ ಜೊತೆ ಕೈ ಜೋಡಿಸಿ  ಅಥವಾ ತಮ್ಮದೇ ರೀತಿಯಲ್ಲಿ ಈ ದಿಸೆಯಲ್ಲಿ ಮುಂದುವರಿಯಲಿ ಎಂದು ಹಾರೈಸೋಣ.

ಬ್ರಿಟಿಷ್ ಲೈಬ್ರರಿಯ ಮಹಾನ್ ಸಮುದ್ರವನ್ನು ಜಾಲಾಡಬಯಸುವವರು ಇಲ್ಲಿ ಕ್ಲಿಕ್ಕಿಸಬಹುದು.  ನಾನು ಅಲ್ಲಿ ಮುಳುಗು ಹಾಕಿ ತಂದಿರುವ ಕೆಲವು ಅನರ್ಘ್ಯ ಮುತ್ತು ರತ್ನಗಳನ್ನು ಸಾಧ್ಯವಾದಷ್ಟು ಸ್ವಚ್ಛಗೊಳಿಸಿ ಇಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸಿದ್ದೇನೆ. ಇವುಗಳೆಲ್ಲ ಡಿ.ಶಂಕರ್ ಸಿಂಗ್ ಅವರ ಚಿತ್ರಗಳ ಹಾಡುಗಳಾಗಿದ್ದು ಹೆಚ್ಚಿನವು ಅಕ್ಕನ ಅಂಗಿ ತೊಟ್ಟ ತಂಗಿಯಂತೆ ಜನಪ್ರಿಯ ಹಿಂದಿ  ಟ್ಯೂನ್ ಹೊಂದಿವೆ.   ಅಂದಿನ ರೆಕಾರ್ಡುಗಳಲ್ಲಿ ಚಿತ್ರದ ಹೆಸರು ಮತ್ತು ಸಂಗೀತ ನಿರ್ದೇಶಕರ ಹೆಸರುಗಳು ಮಾತ್ರ ಅಂಕಿತವಾಗುತ್ತಿದ್ದು ಗಾಯಕರು ಮತ್ತು ಗೀತ ರಚನೆಕಾರ ಕುರಿತ ಮಾಹಿತಿ ಇರುತ್ತಿರಲಿಲ್ಲ. ಮಹಾತ್ಮಾ ಫಿಲಂಸ್ ಸಂಸ್ಥೆಯ ಆಗಿನ ಬಹುತೇಕ ಚಿತ್ರಗಳಿಗೆ ಹುಣಸೂರ್ ಕೃಷ್ಣಮೂರ್ತಿ ಅವರ ಸಾಹಿತ್ಯ ಮತ್ತು ಹಾಡುಗಳಿರುತ್ತಿದ್ದು  ಪಿ.ಶ್ಯಾಮಣ್ಣ ಎಂದೇ ಗುರುತಿಸಲ್ಪಡುತ್ತಿದ್ದ ಪಲವಂಗುಡಿ ಶ್ಯಾಮ ಐಯರ್  ಅವರ ಸಂಗೀತವಿರುತ್ತಿತ್ತು.  ಟಿ. ಕಲ್ಯಾಣಂ ಎಂಬವರು arranger ರೂಪದಲ್ಲಿ ಅವರಿಗೆ ಸಹಾಯಕರಾಗಿರುತ್ತಿದ್ದರು.


ಈ vintage ಹಾಡುಗಳು ನಿಮ್ಮಲ್ಲಿ ಅನೇಕರಲ್ಲಿ ಯಾವ ಹಳೆ ನೆನಪುಗಳನ್ನೂ ಮೀಟಲಾರವು.  ಏಕೆಂದರೆ ನೀವು ಇವುಗಳನ್ನು ಒಮ್ಮೆಯೂ ಕೇಳಿರಲಾರಿರಿ.  ಹಾಂ, ಕೆಲವು ಹಾಡುಗಳ ಧಾಟಿಗಳು ಆಪ್ತವಾಗಬಹುದು. ಹಳೆ ರೆಕಾರ್ಡುಗಳಾದ್ದರಿಂದ ಧ್ವನಿಮುದ್ರಣದ ಗುಣಮಟ್ಟವೂ ಅಷ್ಟೊಂದು ಚೆನ್ನಾಗಿಲ್ಲ.  ಹೀಗಾಗಿ ಆಸಕ್ತಿಯಿದ್ದರೆ ಮಾತ್ರ ಮುಂದುವರೆಯಿರಿ. Headphone / earphone ಬಳಸಿ. Iphone / Ipad ಬಳಕೆದಾರರು Safari ಬದಲಿಗೆ Chrome ಬ್ರೌಸರ್ ಬಳಸಿದರೆ ಹಾಡುಗಳ player ತೆರೆದುಕೊಳ್ಳುತ್ತದೆ.

ಜಗನ್ಮೋಹಿನಿ


ನನ್ನ ಮುಖ್ಯ ಉದ್ದೇಶ ಆಗಿದ್ದದ್ದೇ ಈ ಚಿತ್ರದ ಹಾಡುಗಳನ್ನು  ಹುಡುಕುವುದು.  ಉಳಿದವು ನನಗೆ ಬೋನಸ್ ರೂಪದಲ್ಲಿ ದೊರಕಿದ್ದು.  ಆದರೆ ದುರದೃಷ್ಟವಶಾತ್ ಜಗನ್ಮೋಹಿನಿಯ 12 ಹಾಡುಗಳ ಪೈಕೆ 4 ಮಾತ್ರ ಸಿಕ್ಕಿವೆ.  ನನ್ನ ಮುಖ್ಯ ಗುರಿಯಾಗಿದ್ದ ಎಂದೋ ಎಂದೊ, ವಸಂತ ಮಾಸ ಓಡಿ ಬಂದಿದೆ, ಕರೆಯುವೆ ನಿನ್ನ ಇತ್ಯಾದಿ ಲಭ್ಯವಾಗಿಲ್ಲ.  ಮುಂದೊಂದು ದಿನ ಇವೂ ಸಿಗದೆ ಹೋಗಲಾರವು ಎಂಬ ನಂಬಿಕೆ ನನಗಿದೆ.  ಈ ಚಿತ್ರಕ್ಕೆ ಸಂಗೀತ ನೀಡಿದವರು ಪಿ. ಶ್ಯಾಮಣ್ಣ. ಜಗನ್ಮೋಹಿನಿ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿದೆ ಎಲ್ಲೂ ಇಲ್ಲದ ಆ ಹಾಡು ನೋಡಿ.

ನೀ ಎನ್ನ ಜೀವನ
ಬಹುಕಾಲದಿಂದ  ಚಂದಮಾಮದ ಜಾಹೀರಾತಿನಲ್ಲಿ ಈ ಸಾಲುಗಳನ್ನು ನೋಡುತ್ತಿದ್ದರೂ ಈ ಯುಗಳ ಗೀತೆ ದಿಲ್ಲಗಿ ಚಿತ್ರದ ತೂ ಮೇರಾ ಚಾಂದ್ ಮೈ ತೆರೀ ಚಾಂದನೀ ಧಾಟಿಯನ್ನು ಹೊಂದಿರಬಹುದೆಂಬ ಕಲ್ಪನೆಯೂ ನನಗಿರಲಿಲ್ಲ.  ಪುರುಷ ಧ್ವನಿ ಯಾರದ್ದೆಂದು ಗೊತ್ತಿಲ್ಲ.  ಸ್ತ್ರೀ ಕಂಠ ಅಮೀರ್ ಬಾಯಿ ಕರ್ನಾಟಕಿ ಅವರದ್ದಿರಬಹುದೆನ್ನಿಸುತ್ತದೆ. ಆಗ ಗಾನಸರಸ್ವತಿ ಎಂಬವರೂ ಹಾಡುತ್ತಿದ್ದರು.



ಮನದೊಳತಿ ಚಿಂತೆ 
ಇದೊಂದು ವಿಷಾದ ಭಾವದ ಗೀತೆಯಾಗಿದ್ದು ಹೆಚ್ಚಿನ ಭಾಗ ಆಲಾಪ ಶೈಲಿಯಲ್ಲಿದ್ದು ಬರ್‌ಸಾತ್ ಚಿತ್ರದ ಅಬ್ ಮೇರಾ ಕೌನ್ ಸಹಾರಾ ಧಾಟಿಯನ್ನಾಧರಿಸಿದೆ. 



ಎಂದೋ ಎಂದೋ
ಈ ಹಾಡಿಲ್ಲದೆ ಜಗನ್ಮೋಹಿನಿಯ ನೆನಪೇ ಅಪೂರ್ಣ.  ಮೂಲ ಹಾಡು ಲಭ್ಯವಿಲ್ಲದ್ದರಿಂದ ನಾನು ಮರುಸೃಷ್ಟಿಗೊಳಿಸಿದ ವರ್ಷನ್ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.



ಕಬ್ಬಿನ ಮೇಲೆ ಜೇನು ಸುರಿದಂತೆ ಫೇಸ್ ಬುಕ್ ಮಿತ್ರ ಶ್ರೀನಾಥ್ ಅವರು ಜಗನ್ಮೋಹಿನಿ ಚಿತ್ರದ ಪದ್ಯಪುಸ್ತಕವನ್ನು ಒದಗಿಸಿದ್ದಾರೆ. ನೋಡಲು ಒಮ್ಮೆ ಕ್ಲಿಕ್ಕಿಸಿ scroll ಮಾಡಿ.




ಶ್ರೀನಿವಾಸ ಕಲ್ಯಾಣ
ಈ ಚಿತ್ರದಲ್ಲೇ ರಾಜಕುಮಾರ್ ಅವರು ಮೊದಲು ಬಣ್ಣ ಹಚ್ಚಿದ್ದಂತೆ.  ಸಪ್ತಋಷಿಗಳ ಪೈಕಿ ಓರ್ವನ ಪುಟ್ಟ ಪಾತ್ರ ಅವರದಾಗಿತ್ತು.. ಇದರಲ್ಲಿದ್ದ 10 ಹಾಡುಗಳಲ್ಲಿ ಕೆಲವು ಇಲ್ಲಿವೆ.


ಎಂಥ ಭಾಗ್ಯವತಿ
70ರ ದಶಕದಲ್ಲಿ ಬಂದ ರಾಜನ್ ನಾಗೇಂದ್ರ ಸಂಗೀತವಿದ್ದ  ಶ್ರೀನಿವಾಸ ಕಲ್ಯಾಣದ ನಾನೇ ಭಾಗ್ಯವತಿ ನೆನಪಾಯಿತೇ. ಈ ಹಾಡನ್ನು  ಹಾಡಿದವರು  ನಾಗೇಂದ್ರ.  ಹೌದು, ರಾಜನ್ ನಾಗೇಂದ್ರ  ಜೋಡಿಯಾಗಿ  ಸೌಭಾಗ್ಯ ಲಕ್ಷ್ಮಿ ಚಿತ್ರದ ಮೂಲಕ ಸಂಗೀತ ನಿರ್ದೆಶಕರಾಗುವುದಕ್ಕೂ ಮೊದಲು ಅದೇ ನಾಗೇಂದ್ರ ಹಾಡಿದ ಗೀತೆ ಇದು. 50ರ ದಶಕದಲ್ಲಿ ಅನೇಕ ವೈವಿಧ್ಯಮಯ ಗೀತೆಗಳನ್ನು ಹಾಡಿದ ಅವರು ನಂತರ ಹಾಸ್ಯಗೀತೆಗಳಿಗೆ ತಮ್ಮನ್ನು ಸೀಮಿತಗೊಳಿಸಿದ್ದೇಕೆ ಎಂದು ತಿಳಿಯದು.



ಪೋಗಿ ಬಾರಮ್ಮ ಪದ್ಮಾವತಿ
ಸಮೂಹಗಾನ ರೂಪದಲ್ಲಿರುವ ಇದು ಬಾಬುಲ್ ಚಿತ್ರದ ಛೋಡ್ ಬಾಬುಲ್ ಕಾ ಘರ್ ಹಾಡಿನ ಧಾಟಿಯಲ್ಲಿದೆ.  ಮುಖ್ಯ ಸ್ವರ ಅಮೀರ್ ಬಾಯಿ ಕರ್ನಾಟಕಿ ಅವರದ್ದಿರಬಹುದು. 



ಯೌವನ ತುಂಬಿದ ನವವಧುವಂತೆ
ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸಿ ವರ್ಣಿಸುವ ಈ ಆಕರ್ಷಕ ಹಾಡು ಯಾವ ಹಿಂದಿ ಧಾಟಿಯನ್ನಾಧರಿಸಿದೆ ಎಂದು ಗೊತ್ತಿಲ್ಲ.



ದಳ್ಳಾಳಿ
1953ರಲ್ಲಿ ಬಂದ ಈ ಚಿತ್ರದಲ್ಲಿ 10 ಹಾಡುಗಳಿದ್ದು ಅವುಗಳ ಪೈಕಿ ಕೆಲವು ಇಲ್ಲಿವೆ. ಸಂಗೀತ ಪಿ.ಶ್ಯಾಮಣ್ಣ.



ನಾನೊಂದು ಬೇಕೆಂದು
ಭಗವಾನ್ ದಾದಾ ಅವರ ಅಲಬೇಲಾ ಚಿತ್ರದ ಧೀರೆ ಸೆ ಆಜಾರಿ ಅಖಿಯನ್ ಮೆಂ ಹಾಡಿನ ಧಾಟಿಯನ್ನು ಇದು ಹೊಂದಿದೆ.



ಜೀವನ ಒಂದು ಸಂತೆ
ಪರ್‌ದೇಸ್ ಚಿತ್ರದಲ್ಲಿದ್ದ ಶಂಷಾದ್ ಬೇಗಂ ಹಾಡೊಂದರ ಧಾಟಿಯನ್ನಾಧರಿಸಿದ ಈ ಹಾಡು ಬಲು ಆಕರ್ಷಕವಾಗಿದೆ.



ದೂರಾಯಿತು ಮನದಾಶಾಕಿರಣ
ಇದು ಆವಾರಾ ಚಿತ್ರದ ಹಾಡೊಂದರ ಧಾಟಿಯನ್ನು ಹೊಂದಿದೆ.




ದಿನಾ ಜಗಳ ಕಾಯ್ದು
ಅಲಬೇಲಾ ಚಿತ್ರದ ಕಭಿ ನರಮ್ ಕಭಿ ಗರಮ್ ಧಾಟಿ ಹೊಂದಿರುವ ಇದು ಟಂಗ್ ಟ್ವಿಸ್ಟರ್ ರೀತಿಯ ಪದಗಳನ್ನು ಹೊಂದಿದೆ.  ಸುಂದರವಾಗಿ ಹಾಡಿದ ಗಾಯಕ ಯಾರು ಎಂಬ ಮಾಹಿತಿ ಇಲ್ಲ.



ಅನ್ನದ ಕೂಗು
ದೀದಾರ್ ಚಿತ್ರದಲ್ಲಿ ರಫಿ ಹಾಡಿದ ಮೇರಿ ಕಹಾನಿ ಭೂಲನೆವಾಲೆ ಧಾಟಿಯನ್ನು ಆಧರಿಸಿದ ಇದನ್ನು ಹಾಡಿದವರು ಎ.ಎಂ. ರಾಜಾ.



ವೆರಿ ಸೂನ್ ವೆರಿ ಸೂನ್
ಸಿ. ರಾಮಚಂದ್ರ ಅವರ ಸಂಡೆ ಕೆ ಸಂಡೆ ಮತ್ತು ಶಾಮ್ ಢಲೆ ಖೀಡಕೀ ತಲೆ ಧಾಟಿಗಳನ್ನು ಆಧರಿಸಿದ ಈ ಹಾಡಲ್ಲಿ ಇಬ್ಬರು ಗಾಯಕಿಯರಿದ್ದಾರೆ.



ಗಂಧರ್ವ ಕನ್ಯೆ
ಈ ಚಿತ್ರದಲ್ಲಿದ್ದ ಹಾಡುಗಳ ಸಂಖ್ಯೆ ಭರ್ತಿ 14.  ಅವುಗಳ ಪೈಕಿ 6 ಇಲ್ಲಿವೆ.



ಬಾ ಬಾ ಮುದ್ದಿನ್ ಗಿಣಿ
ನಾಗೇಂದ್ರ ಮತ್ತು ಎ.ಎಂ. ರಾಜಾ ಜೊತೆಯಾಗಿ ಈ ಹಾಡು ಹಾಡಿದ್ದಾರೆ. ಜತೆಯಲ್ಲಿರುವ  ಹೆಣ್ಣು ದನಿ ಪಿ.ಸುಶೀಲ ಅವರದ್ದಿರಬಹುದು.



ಕುಣಿಯುತ ದೋಣಿ ನೀ
ದೋಣಿ ಪಯಣದ ಹಾಡಾಗಿರಬಹುದಾದ ಇದನ್ನೂ  ನಾಗೇಂದ್ರ ಮತ್ತು ಎ.ಎಂ. ರಾಜಾ ಹಾಡಿದ್ದಾರೆ.



ಇಂದಿನ ದಿನ ಮನ
ಪಿ.ಸುಶೀಲ ಹಾಡಿರುವ ಈ ಹಾಡಿನ ಧಾಟಿ ಯಾವುದೆಂದು ಪ್ರತ್ಯೇಕವಾಗಿ  ಹೇಳಬೇಕಾದ ಅಗತ್ಯವೇ ಇಲ್ಲ.



ಎಲೆಲೆ ಬಾಳೆಯ ಹಣ್ಣೆ
ಪ್ರೇಮಲೋಕದಲ್ಲಿ ನಾಯಕಿಯನ್ನು ನಿಂಬೆ ಹಣ್ಣಿಗೆ ಹೋಲಿಸಲಾಗಿದ್ದರೆ ಎಷ್ಟೋ ವರ್ಷ ಮೊದಲೇ ಇಲ್ಲಿ ಆಕೆಯನ್ನು ಬಾಳೆಹಣ್ಣಿಗೆ ಹೋಲಿಸಲಾಗಿದೆ!   ನಾಗೇಂದ್ರ ಮತ್ತು ಎ.ಎಂ. ರಾಜಾ ಹಾಡಿದ್ದಾರೆ.  ಆಗ ಗಾಯಕರಿಗೊಂದು, ಆರ್ಕೆಷ್ಟ್ರಾಕ್ಕೊಂದು- ಹೀಗೆ ಎರಡೇ ಮೈಕ್ ಇರುತ್ತಿದ್ದುದಂತೆ.  ಹೀಗಾಗಿ ಒಂದೇ ಮೈಕನ್ನು share ಮಾಡುವಾಗ  ಗಾಯಕರಿಬ್ಬರ ಧ್ವನಿಯಲ್ಲಿ ಸ್ವಲ್ಪ imbalance ಆದಂತಿದೆ. ಹಿನ್ನೆಲೆಯಲ್ಲಿ ಚೌಡಕಿಯಂಥ ವಾದ್ಯವನ್ನು ಉಪಯೋಗಿಸಲಾಗಿದೆ.



ಈ ಸಂಸಾರ ನೌಕೆಯು
ಬೈಜು ಬಾವ್ರಾದ ತೂ ಗಂಗಾ ಕೀ ಮೌಜ್ ಧಾಟಿಯ ಈ ಹಾಡಲ್ಲಿ ಕೇಳಿಬರುವ ಧ್ವನಿಗಳು ಎ.ಎಂ. ರಾಜಾ ಮತ್ತು ಪಿ.ಸುಶೀಲ.



ನೀಲಾಕಾಶದಿ
ಪಿ.ಸುಶೀಲ ಧ್ವನಿಯಲ್ಲಿರುವ ಈ ಹಾಡಿನಲ್ಲಿ ಪ್ರಕೃತಿಯ ವರ್ಣನೆ ಇದೆ.



ಚಂಚಲಕುಮಾರಿ


ಈ ಚಿತ್ರಕ್ಕೆ ಸಂಗೀತ ನಿರ್ದೇಶನ ರಾಜನ್ ನಾಗೇಂದ್ರ ಅವರದ್ದು. ಧ್ವನಿಮುದ್ರಿಕೆಯಲ್ಲಿ ಅವರ ಹೆಸರು ಆರ್. ನಾಗೇಂದ್ರ ಮತ್ತು ರಾಜನ್ ಎಂದು ದಾಖಲಾಗಿತ್ತು. ಒಟ್ಟು ಆರು ಹಾಡುಗಳಿದ್ದವು.  ಅವುಗಳಲ್ಲಿ ಎರಡು ಇಲ್ಲಿವೆ.



ಕಣ್ಣಮುಂದೆ ನಿಲ್ಲು ಬಾ
ನಾಗೇಂದ್ರ ಅವರೊಡನೆ ಹಾಡಿದ ಗಾಯಕಿ ಯಾರೆಂಬುದರ ಬಗ್ಗೆ ಮಾಹಿತಿ ಇಲ್ಲ.



ಕಿಲಿ ಕಿಲಿ ವಚ್ ವಚ್
ಕುದುರೆ ಗಾಡಿ ಲಯದ ಈ ಹಾಡಿನ ಸಾಹಿತ್ಯ ಪೂರ್ತಿ ಹಿಂದಿಯಲ್ಲಿದೆ.  ನಾಗೇಂದ್ರ ಮತ್ತು ಹೆಸರು ತಿಳಿಯದ ಗಾಯಕಿ ಹಾಡಿದ್ದಾರೆ.




ಮಾಡಿದ್ದುಣ್ಣೋ ಮಹಾರಾಯ 
ಎ. ಎಂ.ರಾಜಾ ಮತ್ತು ಗಾನಸರಸ್ವತಿ ಹಾಡಿರುವ ಓ ನಲ್ಲೆ ಎಂಬ ಈ ಹಾಡು ಓ.ಪಿ.ನಯ್ಯರ್ ಸಂಗೀತವಿದ್ದ ಆರ್ ಪಾರ್ ಚಿತ್ರದ ಮೊಹಬ್ಬತ್ ಕರ್ ಲೊ ಜೀ ಭರ್ ಲೊ ಧಾಟಿಯನ್ನು ಹೊಂದಿದೆ. ಸಂಗೀತ ಪಿ. ಶ್ಯಾಮಣ್ಣ.



ಸೌಭಾಗ್ಯಲಕ್ಷ್ಮಿ

ರಾಜನ್ ನಾಗೇಂದ್ರ ಅವರು ‘ಆರ್. ನಾಗೇಂದ್ರನ್ - ರಾಜನ್’ ಎಂಬ ಹೆಸರಲ್ಲಿ ಮೊತ್ತ ಮೊದಲಿಗೆ ಸಂಗೀತ  ನಿರ್ದೇಶನ ಮಾಡಿದ  ಈ ಚಿತ್ರ  1953ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಬಹುತೇಕ ಹಾಡುಗಳಿಗೆ ಅವರು ಸ್ವಂತ ಟ್ಯೂನ್ ಅಳವಡಿಸಿದರೂ  ಕನಸಲ್ಲಿ ಒಬ್ಬ ಎಂಬ ಹಾಡು ಮಾತ್ರ ಆವಾರಾ ಚಿತ್ರದ ಎಕ್ ಬೇವಫಾ ಸೆ ಪ್ಯಾರ್ ಕಿಯಾ ಎಂಬ ಶಂಕರ್ ಜೈಕಿಶನ್ ಧಾಟಿಯನ್ನು ಹೊಂದಿತ್ತು. ಪಿ.ಲೀಲ ಹಾಡಿದ್ದ  ಇದರ happy ಮತ್ತು sad ವರ್ಷನ್‌ಗಳಿದ್ದು ಗ್ರಾಮೊಫೋನ್ ಪ್ಲೇಟಿನ ಎರಡೂ ಬದಿಗಳನ್ನಾವರಿಸಿದ್ದವು.  ಪಿ.ಲೀಲ ಅವರು ಆ ಮೇಲೆ ರಾಜನ್ ನಾಗೇಂದ್ರ ಅವರ ನಿರ್ದೇಶನದಲ್ಲಿ ಹೆಚ್ಚು ಹಾಡುಗಳನ್ನು ಹಾಡದಿದ್ದರೂ ನಾಗಾರ್ಜುನ, ಅನ್ನಪೂರ್ಣ, ಕನ್ನಿಕಾ ಪರಮೇಶ್ವರಿ ಕಥೆ ಮುಂತಾದ ಚಿತ್ರಗಳಲ್ಲಿ ಅವರ ಹಾಡುಗಳಿದ್ದವು.




Thursday 21 September 2017

ಪಿ.ಬಿ.ಎಸ್ - ಏಕ ಅನೇಕ



ಈಗ ಕುಟುಕು ಜೀವ ಮಾತ್ರ ಹಿಡಿದುಕೊಂಡಿರುವ ರೇಡಿಯೊ ಸಿಲೋನ್ ತನ್ನ ಉತ್ತುಂಗದ ದಿನಗಳಲ್ಲಿ ಪ್ರಸಾರ ಮಾಡುತ್ತಿದ್ದ ಅನೇಕ ಜನಪ್ರಿಯ ಸಾಪ್ತಾಹಿಕ ಕಾರ್ಯಕ್ರಮಗಳ ಪೈಕಿ  ಏಕ್ ಔರ್ ಅನೇಕ್ ಕೂಡ ಒಂದು. ಇದರಲ್ಲಿ ಒಬ್ಬ ಗಾಯಕ/ಗಾಯಕಿಯೊಡನೆ ಇತರರು ಹಾಡಿರುವ ಗೀತೆಗಳು ಪ್ರಸಾರವಾಗುತ್ತಿದ್ದವು.

ಇದೇ ಮಾದರಿಯಲ್ಲಿ ಪಿ.ಬಿ.ಶ್ರೀನಿವಾಸ್ ಅವರನ್ನು ಕೇಂದ್ರವಾಗಿರಿಸಿ ಒಂದು compilation ಮಾಡಬೇಕೆಂಬುದು ನನ್ನ ಬಹು ದಿನಗಳ ಬಯಕೆಯಾಗಿತ್ತು.  ಈ ದಿಸೆಯಲ್ಲಿ ಕಾರ್ಯಪ್ರವೃತ್ತನಾದಾಗ ಅವರು ಕ್ರಿಯಾಶೀಲರಾಗಿದ್ದ 3 ದಶಕಗಳಿಗೆ ಸರಿಹೊಂದುವಂತೆ 35ಕ್ಕೂ ಹೆಚ್ಚು ಕಲಾವಿದರೊಂದಿಗೆ ಅವರು ಹಾಡಿದ 30 ವೈವಿಧ್ಯಮಯ ಹಾಡುಗಳನ್ನು ಒಟ್ಟುಗೂಡಿಸಲು ನನಗೆ ಸಾಧ್ಯವಾಯಿತು. ಈ ಸುಗ್ರಾಸ ರಸದೌತಣವನ್ನು ಒಂದೆರಡು ದಿನಗಳಲ್ಲಿ ಆಸ್ವಾದಿಸಲು ಸಾಧ್ಯವಾಗದು.  ಸಾವಕಾಶವಾಗಿ ಸವಿಯಿರಿ.

01. ಪಿ. ಸುಶೀಲ - ಹಾರುತ ದೂರ ದೂರ
ಪಿ.ಬಿ.ಎಸ್ ಅವರು ಅತಿ ಹೆಚ್ಚು ಹಾಡುಗಳನ್ನು ಹಾಡಿರುವುದು ಸುಶೀಲ ಮತ್ತು ಜಾನಕಿ ಅವರೊಂದಿಗೆ.  ಹೀಗಾಗಿ ಅವರ ಒಂದೊಂದು ಹಾಡನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸ.  ಆದರೂ ನಾನು 1960ರ ರಾಣಿ ಹೊನ್ನಮ್ಮ ಚಿತ್ರದ ಈ ಹಾಡು ಆಯ್ಕೆ ಮಾಡಿದ್ದೇನೆ. ಕನ್ನಡದಲ್ಲಿ ಇದು ಅವರಿಬ್ಬರ ಪ್ರಥಮ ಯುಗಳಗೀತೆ.  ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರು ಶಂಕರ್ ಜೈಕಿಶನ್ ಶೈಲಿಯಲ್ಲಿ ಅತಿ ಶ್ರೀಮಂತ  ಆರ್ಕೆಸ್ಟ್ರೇಶನ್ ಮಾಡಿದ ಹಾಡಿದು. ಗ್ರೂಪ್ ವಯಲಿನ್ಸ್, ಚೇಲೊ, ಪಿಯಾನೊ, ಗಿಟಾರ್,  ತಬ್ಲಾ ತರಂಗ್ ಇತ್ಯಾದಿ ಹತ್ತಾರು ವಾದ್ಯಗಳ ಬಳಕೆ ಇದರಲ್ಲಿದೆ.  ಹಾಡು ಆರಂಭವಾಗುತ್ತಿದ್ದಂತೆ ನಾವೂ ಚಂದಿರ ತಾರಾ ಲೋಕದತ್ತ ಮೇಲೇರತೊಡಗುತ್ತೇವೆ. ಅತ್ಯಾಕರ್ಷಕ ಪದಪುಂಜಗಳನ್ನು ಬಳಸುವುದರಲ್ಲಿ ಕು.ರ.ಸೀ ಅಗ್ರಗಣ್ಯರು.  ಬಿಂಕದ ಸಿಂಗಾರಿಯ ಮಧುಪಾನಪಾತ್ರೆಯಂತೆ ಇಲ್ಲಿ ಬಳಸಲಾದ ಪೂರ್ಣೇಂದುಹಾಸಭಾಸ ಪ್ರಯೋಗ ನನಗೆ ಬಲು ಇಷ್ಟ.  ಪಿ.ಬಿ.ಎಸ್ ಅವರ ಪ್ರವೇಶ ಚರಣದಲ್ಲಿ ಆಗುವುದು ಈ ಹಾಡಿನ ಒಂದು ವಿಶೇಷ. ಚರಣಗಳ ಕೊನೆಯಲ್ಲಿ ಬರುವ ಒಂದು ಸಣ್ಣ pause ಹಾಡಿನ ಒಟ್ಟಂದವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ವಿಜಯಭಾಸ್ಕರ್ ಅವರು ಮುಂದೆ ಯಾವ ಹಾಡುಗಳಲ್ಲೂ ಇಷ್ಟು ವೈಭವೋಪೇತ ಆರ್ಕೇಷ್ಟ್ರಾ ಬಳಸಲಿಲ್ಲ.  70ರ ದಶಕದಲ್ಲಿ ರಾಜನ್ ನಾಗೇಂದ್ರ ಮತ್ತಿತರರು ಹೆಚ್ಚು ಹೆಚ್ಚು ವಾದ್ಯೋಪಕರಣಗಳನ್ನು ಬಳಸಿ ದೊಡ್ಡ ಆರ್ಕೆಷ್ಟ್ರಾದತ್ತ ವಾಲಿದರೂ  ವಿಜಯಭಾಸ್ಕರ್ ಸರಳ ಸಂಯೋಜನೆಗಳಲ್ಲೇ ಮಾಧುರ್ಯ ತುಂಬುತ್ತಿದ್ದರು.
 


೦2. ಎಸ್.ಜಾನಕಿ - ಬಾರಾ ಚಂದ್ರಮಾ
ತನ್ನ ಮೊದಲ ಚಿತ್ರ ಭಕ್ತ ಕನಕದಾಸದ ಮೂಲಕ ಆರ್ಕೆಸ್ಟ್ರೇಶನ್ ರಾಜನಾಗಿ ಚಿತ್ರರಂಗ ಪ್ರವೇಶಿಸಿದ ಎಂ. ವೆಂಕಟರಾಜು ಅವರ ಎರಡನೆ ಚಿತ್ರ ಸ್ವರ್ಣಗೌರಿಯ ಹಾಡಿದು.  ಸೀಮಿತ ಸಂಖ್ಯೆಯ ವಾದ್ಯಗಳನ್ನು ಬಳಸಿ ಅತ್ಯುತ್ತಮ ಪರಿಣಾಮ ಉಂಟುಮಾಡುವುದು ಇವರ ಹೆಚ್ಚುಗಾರಿಕೆ.  ಈ ಹಾಡಿನ ಆರಂಭದಲ್ಲಿ ವೀಣೆ ಮತ್ತು ಕೊಳಲುಗಳ ಒಂದು ಕಿರು ಜುಗಲ್ ಬಂದಿ ಇದೆ.  ನಂತರ ಕೆಲ ಹಿಂದಿ ಹಾಡುಗಳ ಆರಂಭದಲ್ಲಿರುತ್ತಿದ್ದಂತಹ ಶಾಯರಿಯನ್ನು ಹೋಲುವ ನಾಲ್ಕು ಸಾಲುಗಳನ್ನು ಜಾನಕಿ ಹಾಡುತ್ತಾರೆ. ಸಿನಿಮಾದ ಪದ್ಯಾವಳಿಗಳಲ್ಲಿ ಇದನ್ನು ‘ಸಾಕಿ’ ಎಂದು ಉಲ್ಲೇಖಿಸಲಾಗುತ್ತಿತ್ತು. ಆ ಮೇಲೆ ಮನ ಸೆಳೆಯುವ preludeನೊಂದಿಗೆ  ಮುಖ್ಯ ಹಾಡು ಶುರುವಾಗುತ್ತದೆ. ಇತರ ವಾದ್ಯಗಳ ಜೊತೆಗೆ ಅಕಾರ್ಡಿಯನ್, Vibraphoneಗಳನ್ನು  ಬಳಸಲಾಗಿದೆ. ಹಿಂದಿಯ ಚಿತ್ರಗುಪ್ತ ಅವರ ಶೈಲಿಯಲ್ಲಿ interludeಗಳಿಗೆ ತಬ್ಲಾ ಢೋಲಕ್ ಬದಲಿಗೆ ಗಿಟಾರ್ ರಿದಂ ಇದೆ.  ಹಿನ್ನೆಲೆಯಲ್ಲಿ Bass Guitar ಬಳಕೆ ಮುದ ನೀಡುತ್ತದೆ. ಎಸ್.ಕೆ.ಕರೀಂ ಖಾನ್ ಅವರ ಪ್ರಾಸಬದ್ಧ ಸಾಹಿತ್ಯವಿದೆ.



03. ಎಸ್.ಪಿ. ಬಾಲಸುಬ್ರಹ್ಮಣ್ಯಂ - ಹಗಲೇನು ಇರುಳೇನು
ಇದು ರಾಜ್ ಕುಮಾರ್ ಅವರ 100ನೇ ಚಿತ್ರವೆಂದು ಪತ್ರಿಕೆಗಳಲ್ಲೆಲ್ಲ ಹೆಚ್ಚಿನ ಪ್ರಚಾರ ಪಡೆದ 1968ರ ಭಾಗ್ಯದ ಬಾಗಿಲು ಚಿತ್ರದ ಗೀತೆ. ಉದಯಶಂಕರ್ ಸಾಹಿತ್ಯಕ್ಕೆ ವಿಜಯಭಾಸ್ಕರ್ ಸಂಗೀತವಿದೆ. 1967ರ ನಕ್ಕರೆ ಅದೇ ಸ್ವರ್ಗ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕಾಲಿಟ್ಟ ಎಸ್.ಪಿ.ಬಿ ಅವರು ಪಿ.ಬಿ.ಎಸ್ ಅವರೊಂದಿಗೆ ಹಾಡಿದ ಮೊದಲ ಯುಗಳ ಗೀತೆಯಿದು.  ದೂರವಾಣಿ ಇಲಾಖೆಯಲ್ಲಿ ಅನೇಕ ವರ್ಷ round the clock ಕಾರ್ಯ ನಿರ್ವಹಿಸಿದ ನಾನು ಕೂಡ ‘ಹಗಲೇನು ಇರುಳೇನು ದುಡಿಯುವ ಜೀವಕೆ ಹೊತ್ತೇನು’ ಅನ್ನುವ ತತ್ವ ಅಳವಡಿಸಿಕೊಂಡಿದ್ದವನೇ!



04. ರಾಜಕುಮಾರ್ -  ಭಕ್ತ ಪ್ರಹ್ಲಾದ ಹರಿಕತೆ
ಯಾರು ತಿಳಿಯರು ನಿನ್ನ, ನಾ ಬೆಂಕಿಯಂತೆ, ಅಮ್ಮ ನೀನು ನಮಗಾಗಿ, ನಿನ್ನೀ ನಗುವೇ ಇವುಗಳ ಪೈಕಿ ಯಾವುದಾದರೊಂದು ಇರಬಹುದೆಂದುಕೊಂಡರೆ ಇದ್ಯಾವುದಪ್ಪಾ ಹರಿಕತೆ ಅಂದಿರಾ.  ಹೌದು.  ಇದು ಕ್ರಾಂತಿವೀರ ಚಿತ್ರದಲ್ಲಿ ರಾಜ್‌ಕುಮಾರ್  ನಡೆಸುವ ಭಕ್ತ ಪ್ರಹ್ಲಾದ ಹರಿಕತೆ. ಅದರೊಳಗಿನ ಗಾಯನ ಭಾಗವನ್ನು ನಿರ್ವಹಿಸಿರುವುದು  ಪಿ.ಬಿ.ಎಸ್ . ಇಲ್ಲಿ ನಾನು ರೇಡಿಯೊ ಸಿಲೋನಿನ ಪದ್ಧತಿ ಅನುಸರಿಸಿದ್ದೇನೆ.  ಅಲ್ಲಿ ಏಕ್ ಔರ್ ಅನೇಕ್ ಕಾರ್ಯಕ್ರಮಕ್ಕೆ ಹಾಡುಗಳಲ್ಲಿ ಖಯಾಲೊ ಮೆಂ, ಬದ್ಕಮ್ಮಾ ಓ ಬದ್ಕಮ್ಮಾ, ಚೂನಿಯಾ ಕಿಧರ್ ಹೈ ರಿ  ತೂ ಎಂದು ಒಂದೆರಡು ಸಾಲುಗಳನ್ನು ಹೇಳುವ ಮೆಹಮೂದ್ ಕೂಡ ಗಾಯಕರೆಂದು ಪರಿಗಣಿಸಲ್ಪಡುತ್ತಿದ್ದರು.  ಹೀಗಾಗಿ ಅವರ ಬದ್ಕಮ್ಮ, ಹಮ್ ಕಾಲೆ ಹೈಂ ತೊ ಕ್ಯಾ ಹುವಾ, ಯಕ್ ಚತುರ ನಾರ್ ಮುಂತಾದ ಹಾಡುಗಳು ಕಾರ್ಯಕ್ರಮದಲ್ಲಿ ಸೇರ್ಪಡೆಯಾಗುತ್ತಿದ್ದವು.   ಆದರೆ ಇಲ್ಲಿ ರಾಜ್‌ಕುಮಾರ್ ಅವರು ಹರಿಕಥೆಯ ಗದ್ಯ ಮಾತ್ರವಲ್ಲದೆ ಕೊನೆಯಲ್ಲಿ ಒಂದು ಪದ್ಯವನ್ನೂ ಸುಂದರವಾಗಿ ಹಾಡಿದ್ದಾರೆ.  ಹಾಗೆ ನೋಡಿದರೆ ಗಾಯನಭಾಗ ಸಮೇತ ಇಡೀ ಹರಿಕಥೆಯನ್ನು ಅವರೇ ನಿರ್ವಹಿಸಬಲ್ಲವರಾಗಿದ್ದರು.  ಆದರೆ ಆಗ ಬಹಳ ಆಳಕ್ಕೆ ಬೇರು ಬಿಟ್ಟಿದ್ದ ಶರೀರ ಶಾರೀರ ಸಂಬಂಧವನ್ನು  ಬೇರ್ಪಡಿಸುವ ರಿಸ್ಕ್ ಯಾರೂ ತೆಗೆದುಕೊಳ್ಳುತ್ತಿರಲಿಲ್ಲ. ಅಲ್ಲದೆ ವೃತ್ತಿಪರರ ಹಾಡಿಗೆ lip sync ಮಾಡುವುದು ಆಗ stardomನ ಭಾಗವೂ ಆಗಿತ್ತು. ಈ ಬಗ್ಗೆ ಕರುಣೆಯೇ ಕುಟುಂಬದ ಕಣ್ಣು ಚಿತ್ರದಲ್ಲಿ ಬಾಲಣ್ಣನ ಒಂದು ಡಯಲಾಗ್ ಕೂಡ ಇದೆ. ಅದೇನೇ ಇರಲಿ.  ಈಗ ಹರಿಕಥಾಶ್ರವಣ ಮಾಡಿ ಪುಣ್ಯಪ್ರಾಪ್ತಿ ಮಾಡಿಕೊಳ್ಳಿ.



05. ವಾಣಿ ಜಯರಾಮ್ - ಎಂದೆಂದೂ ನಿನ್ನನು ಮರೆತು.
ಎಲ್ಲೆಡೆ ಕೇಳಿಬರುವ ಜನಪ್ರಿಯ ಹಾಡುಗಳಿಗೆ ಹೊರತಾದ ಆಯ್ಕೆ ನನ್ನ ಪ್ರಾಶಸ್ತ್ಯವಾಗಿರುತ್ತದಾದರೂ ಈ ಹಾಡನ್ನು ಸೇರಿಸದಿರಲು ನನ್ನ ಮನಸ್ಸು ಒಪ್ಪಲಿಲ್ಲ.  ಅದುವರೆಗೆ ಸರಳ ಸಂಗೀತ ಸಂಯೋಜಿಸುತ್ತಿದ್ದ ರಾಜನ್ ನಾಗೇಂದ್ರ ಅವರು ದೀರ್ಘ interludeಗಳ ಶ್ರೀಮಂತ   ಆರ್ಕೆಷ್ಟ್ರಾ ಬಳಸಲು ಆರಂಭಿಸಿದ ದಿನಗಳ ಹಾಡಿದು.  ಬೋಲೆರೆ ಪಪೀಹರಾ ಎಂದು ಹಿಂದಿಯಲ್ಲಿ ಹಾಡಿ ನಿಗೂಢ ಕಾರಣದಿಂದ ದಕ್ಷಿಣಕ್ಕೆ ಹಾರಿಬಂದ ಕೋಗಿಲೆ ವಾಣಿ ಜಯರಾಮ್ ಅವರು ಪಿ.ಬಿ.ಎಸ್ ಜೊತೆ ಹಾಡಿದ ಮೊದಲ ಯುಗಳ ಗೀತೆ ಇದು.  ಇದಕ್ಕೆ ಸಂಬಂಧಿಸಿದಂತೆ ನನ್ನ ಇನ್ನೊಂದು ನೆನಪೂ ಇದೆ.  ಇದನ್ನು ನಾನು ಮೊದಲು ಕೇಳಿದ್ದು ರೇಡಿಯೋ ಸಿಲೋನಿನ ಮಧ್ಯಾಹ್ನದ ಕನ್ನಡ ಹಾಡುಗಳ ಕಾರ್ಯಕ್ರಮದಲ್ಲಿ. ಆಗಿನ್ನೂ ತುಲಸಿ ಸಮೀರ್, ಮೀನಾಕ್ಷಿ ಪೊಣ್ಣುದೊರೈ ಇರಲಿಲ್ಲ.   ಹಾಗಾಗಿ announcement ತಮಿಳಲ್ಲೇ ಇರುತ್ತಿತ್ತು.   ಅಂದಿನ announcer ‘ಅಡತ್ತದಾಕ ಎರಡು ಕನಸು ಅಂದ ಪಡತ್ತಿಲ್  ಎಸ್.ಪಿ. ಬಾಲಸುಬ್ರಹ್ಮಣ್ಯಂ - ವಾಣಿ ಜಯರಾಮ್  ಪಾಡಿಯದ್’ ಎಂದು ಹೇಳಿ ಈ ಹಾಡು ಕೇಳಿಸಿದ್ದ.  ಹಾಡು ಕೇಳಿದ ಮೇಲಷ್ಟೇ ಅದು ಪಿ.ಬಿ.ಎಸ್ ಎಂದು ಗೊತ್ತಾದದ್ದು. 90ರ ದಶಕದ ಜಾನ್ ಸೆ  ಪ್ಯಾರಾ ಎಂಬ ಚಿತ್ರದಲ್ಲಿ ಬಿನ್ ತೇರೆ ಕುಛ್ ಭಿ ನಹೀಂ ಹೈ ಎಂಬ ಹಾಡಿಗೆ ಆನಂದ್ ಮಿಲಿಂದ್ ಈ  ಧಾಟಿಯನ್ನು ಬಳಸಿದ್ದರು.  ಚರಣಗಳ ಕೊನೆಯಲ್ಲಿ ಬರುವ ಗಿಟಾರಿನ ‘ಚಕ ಚಕ ಛಂ’ ನನಗೆ ಈ ಹಾಡಿನ ಅತ್ಯಂತ ಇಷ್ಟವಾದ ಭಾಗ!



06. ಜೇಸುದಾಸ್ -  ಕಾಣದ ದೇವರು ಊರಿಗೆ ನೂರು.
ಇಲ್ಲಿ ಇರುವುದು ಇದೊಂದೇ ಆಯ್ಕೆ.  ಸುವರ್ಣ ಭೂಮಿ ಚಿತ್ರದ ಈ ಹಾಡಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಾಯಿಯ ಹಾಡು ಒಂದಲ್ಲ ಎರಡು ನೋಡಿ.



07. ಜಮುನಾರಾಣಿ - ನಗೆಯೆಂಬ ಅಂದಗಾತಿ
ಹಿಂದಿಯಲ್ಲಿ ದಿಲೀಪ್ ಕುಮಾರ್ ಮತ್ತು ಮೀನಾ ಕುಮಾರಿ ನಟಿಸಿದ್ದ ಆಜಾದ್ ಚಿತ್ರವು ಕನ್ನಡದಲ್ಲಿ ಕಲ್ಯಾಣ್ ಕುಮಾರ್  ಮತ್ತು ಮೈನಾವತಿ ನಟನೆಯೊಂದಿಗೆ ಬೆಟ್ಟದ ಕಳ್ಳ ಎಂಬ ಹೆಸರಲ್ಲಿ ತಯಾರಾಗಿತ್ತು. ಹಿಂದಿಯ ನ ಬೋಲೆ ನ ಬೋಲೆ ಹಾಡು ವೈಯಾರಿ ವೈಯಾರಿ ವೈಯಾರಿಯೇ  ಹಾಗೂ ಕಿತನಾ ಹಸೀನ್ ಹೈ ಮೌಸಮ್ ಹಾಡು ನಗೆಯೆಂಬ ಅಂದಗಾತಿ ಮತ್ತು ದೇಖೊಜಿ ಬಹಾರ್ ಆಯಿ ಇದ್ದದ್ದು ಬಂದಿದೆ ವಸಂತ ಮಾಸ ಆಗಿ ಮೂಲ ಧಾಟಿಯಲ್ಲೇ ಕನ್ನಡೀಕರಣಗೊಂಡಿದ್ದವು.  ಉಳಿದ ಹಾಡುಗಳಿಗೆ ಸುಬ್ಬಯ್ಯ ನಾಯ್ಡು ಸ್ವತಂತ್ರ ರಾಗಸಂಯೋಜನೆ ಮಾಡಿದ್ದರು. ಪಿ.ಬಿ.ಎಸ್ ಅವರ ಕಂಠಮಾಧುರ್ಯ ಹಾಗೂ ಯಥಾವತ್ತಾಗಿ ಮರು ಸೃಷ್ಟಿಸಲಾದ ಸಿ.ರಾಮಚಂದ್ರ ಅವರ ಮೂಲ orchestration ಇವುಗಳಿಂದಾಗಿ ಈ ಹಾಡಿಗೆ ಬೆಲೆ. ಸಾಹಿತ್ಯದ ಸಾಲುಗಳು ಅರ್ಥಹೀನ ಅನಿಸುವಂತಿವೆ.  ‘ಕಿತ‌ನಾ ಹಸೀಂ ಹೈ ಮೌಸಮ್ ಕಿತ್‌ನಾ ಹಸೀಂ ಸಫರ್ ಹೈ’ ಎನ್ನುವಲ್ಲಿರುವ ಹಸೀಂ ಪದವನ್ನು ಸುಂದರ ಎಂಬುದರ ಬದಲಾಗಿ ನಗೆ ಎಂದು ತಿಳಿದುಕೊಂಡು ‘ನಗೆಯೆಂಬ ಅಂದಗಾತಿ’ ಎಂದು ಭಾಷಾಂತರಿಸಲಾಗಿದೆ! ‘ಈ ನೋಟವೇನು ಅಂದ ಈ ಪಯಣವೇನು ಚಂದ’ ಎಂದಾದರೂ ಹೇಳಬಹುದಾಗಿತ್ತು.


08. ಜಿ.ಕೆ. ವೆಂಕಟೇಶ್  -  ನಗುವೇ ನಾಕ
‘ನಾ ಪಾಪವದೇನಾ ಮಾಡಿದೆನೋ’ದಿಂದ ಎಮ್ಮೆ ಹಾಡಿನವರೆಗೂ  ಪಿ.ಬಿ.ಎಸ್ ಅವರ ಅಸಂಖ್ಯ ಮಧುರ ಗೀತೆಗಳನ್ನು ಕೊಟ್ಟವರು ಜಿ.ಕೆ. ವೆಂಕಟೇಶ್. ಆದರೆ ಭೂತಯ್ಯನ ಮಗ ಅಯ್ಯು ಚಿತ್ರದ ‘ಮಾರಿಯೆ ಗತಿಯೆಂದು’ ಬಿಟ್ಟರೆ ಅವರಿಬ್ಬರು ಸೇರಿ ಹಾಡಿರುವ ಮಲ್ಲಿ ಮದುವೆ ಚಿತ್ರದ ಇದೊಂದೇ ಹಾಡು ನನಗೆ ನೆನಪಾಗುತ್ತಿರುವುದು. ‘ಮಲ್ಲಿ ಮದುವೆ’ಯ ಇತರ ಹಾಡುಗಳು ಆಗಾಗ ರೇಡಿಯೊದಲ್ಲಿ ಬರುತ್ತಿದ್ದರೂ ನಾನು ಇದನ್ನು ಕೇಳಿದ್ದು ಅಂತರ್ಜಾಲದಲ್ಲಿ ಮಾತ್ರ.  ಬಹುಶ: ಮಧುಪಾನದ ನಶೆಯ ಹಾಡಾದ್ದರಿಂದ ಆಕಾಶವಾಣಿ ಇದನ್ನು ಬಹಿಷ್ಕರಿಸಿತ್ತೋ ಏನೋ.  ಅಥವಾ ಇದು ಗ್ರಾಮಫೋನ್ ರೆಕಾರ್ಡ್ ರೂಪದಲ್ಲಿ ಬಿಡುಗಡೆಯೇ ಆಗಿರಲಿಲ್ಲವೋ ಏನೋ.  ಇದರಲ್ಲಿ ಜಿ.ಕೆ.ವಿ ಅವರ ಗುರು ವಿಶ್ವನಾಥನ್ ರಾಮಮೂರ್ತಿ ಅವರ ಪಾಡಾದ ಪಾಟ್ಟೆಲ್ಲಾಂ ಪಾಡವಂದಾಳ್ ಹಾಡಿನ ಛಾಯೆ ಗೋಚರಿಸುತ್ತದೆ.



09. ಎಲ್.ಆರ್. ಈಶ್ವರಿ - ಡೂ ಡೂ ಡೂ ಬಸವಣ್ಣ
ಹಣ್ಣೆಲೆ ಚಿಗುರಿದಾಗ ಚಿತ್ರಕ್ಕಾಗಿ ಇವರಿಬ್ಬರು ಹಾಡಿದ  ‘ಇದೇ ಹುಡುಗಿ’ ಹಾಡು ಗ್ರಾಮಫೋನ್ ಡಿಸ್ಕಿನಲ್ಲಿ ‘ಹೂವು ಚೆಲುವೆಲ್ಲ’ ಹಾಡಿನ ಹಿಂಬದಿಯಲ್ಲಿದ್ದು ಹೆಚ್ಚು ಕೇಳಿಬರುತ್ತಿತ್ತು.  ಸಂತ ತುಕಾರಾಮ್ ಚಿತ್ರದ ಹೇ ಪಂಢರಯ್ಯ, ಸತಿ ಅನಸೂಯದ ಆದಿ ದೇವ, ಮೇಯರ್ ಮುತ್ತಣ್ಣದ ಅಯ್ಯಯ್ಯಯ್ಯೋ ಹಳ್ಳಿ ಮುಕ್ಕ ,  ಲಗ್ನ ಪತ್ರಿಕೆಯ ಥಳುಕು ಮೋರೆ ಹೆಣ್ಣಿಗೆ ಕೂಡ ಜನಪ್ರಿಯ ಹಾಡುಗಳೇ.  ನಾನಿಲ್ಲಿ ಆಯ್ದುಕೊಂಡದ್ದು ಬಂಗಾರದ ಹೂವು ಚಿತ್ರದ ಈ ಹಾಡು.



10. ಎ.ಎಲ್. ರಾಘವನ್ -  ಶೀನು ಸುಬ್ಬು
ಇದು ಲಗ್ನ ಪತ್ರಿಕೆ ಚಿತ್ರದ `ಬಲು ಅಪರೂಪ ನಮ್ ಜೋಡಿ' ಹಾಡಲ್ಲ.  ಭಲೆ ಅದೃಷ್ಟವೋ ಅದೃಷ್ಟ ಚಿತ್ರದಲ್ಲಿದ್ದ ಅದರ sequel ಅರ್ಥಾತ್ ಮುಂದುವರಿದ ಭಾಗವಾದ ‘ನಾವು ಹಾಡಿದರೆ ಸಂಗೀತ ಇನ್ಯಾರೂ ಹಾಡಿದರೂ someಗೀತ’. ಜಿಗಿ ಜಿಗಿಯುತ ನಲಿ ಹಾಡಿದ ಜೆ.ವಿ.ರಾಘವುಲು ಅವರೇ ಶೀನು ಸುಬ್ಬು ಹಾಡುಗಳನ್ನು ಪಿ.ಬಿ.ಎಸ್ ಅವರೊಂದಿಗೆ ಹಾಡಿದ್ದು ಎಂದು ನಾನು ಬಹಳ ಕಾಲ ಅಂದುಕೊಂಡಿದ್ದೆ. ಆ ಮೇಲೆ ಸೂಕ್ಷ್ಮವಾಗಿ ಗಮನಿಸಿದಾಗಷ್ಟೇ ಗೊತ್ತಾಯಿತು ಅವರು ‘ವುಲು’ ಮತ್ತು ಇವರು ‘ವನ್’ ಎಂದು! ತಮಿಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದ ಎ.ಎಲ್. ರಾಘವನ್ ಕನ್ನಡದಲ್ಲಿ ಹಾಡಿದ್ದು ಬೆರಳೆಣಿಕೆಯಷ್ಟು ಮಾತ್ರ. ಅನ್ನಪೂರ್ಣ ಚಿತ್ರದಲ್ಲಿ ಅವರು ರಾಜ್‌‍ಕುಮಾರ್ ಅವರಿಗೆ ಹಾಡಿದ್ದು ಒಂದು ದಾಖಲೆ.  ತೆರೆಯ ಮೇಲೆ  ಚಿ. ಉದಯಶಂಕರ್ ಮತ್ತು ಶಿವರಾಂ ಅವರು ಶೀನು ಮತ್ತು ಸುಬ್ಬುವಾಗಿ ಅಭಿನಯಿಸಿದ ಈ  ‘ಬಲು ಅಪರೂಪ ನಮ್ ಜೋಡಿ’ ಹಾಡು  ಎಷ್ಟು ಜನಪ್ರಿಯವಾಯಿತೆಂದರೆ ಈ sequel ಮಾತ್ರವಲ್ಲದೆ ಆ ಮೇಲೆ ಇದೇ ಹೆಸರಿನ ಒಂದು ಸಿನಿಮಾ ಕೂಡ ತಯಾರಾಯಿತು.



11. ಜೆ.ವಿ ರಾಘವುಲು, ರುದ್ರಪ್ಪ - ದೇವರು ದೇವರು ದೇವರೆಂಬುವರು
ಈ ರಾಘವುಲು ಅವರೇ ನನ್ನಲ್ಲಿ ಗೊಂದಲ ಉಂಟುಮಾಡಿದ್ದವರು. ಕಿತ್ತೂರು ಚೆನ್ನಮ್ಮ ಚಿತ್ರದ ಈ ಸವಾಲ್ ಜವಾಬಿನ ಹಾಡಲ್ಲಿ ಜಾನಕಿ ಕೂಡ ಇದ್ದಾರೆ.  ಈ ಹಾಡಲ್ಲಿರುವ ನರಸಿಂಹರಾಜು ಮತ್ತು ಬಾಲಕೃಷ್ಣ ಅವರ ಸಂಭಾಷಣೆ ನಮ್ಮ ಮನೆಯ ರೇಡಿಯೋವನ್ನು ನಾನು ಆ ಚಿತ್ರ ನೋಡಿದ್ದ ಕಾರ್ಕಳದ ಜೈಹಿಂದ್ ಟಾಕೀಸ್ ಆಗಿ ಪರಿವರ್ತಿಸುತ್ತಿತ್ತು.  ಈ ಬಗ್ಗೆ ಹೆಚ್ಚಿನ ವಿವರಗಳಿಗೆ ರೇಡಿಯೋವನ್ನು ಸಿನಿಮಾ ಟಾಕೀಸ್ ಮಾಡುತ್ತಿದ್ದ ಹಾಡು ಲೇಖನ ನೋಡಬಹುದು. ಜೆ.ವಿ. ರಾಘವುಲು ಅವರು ತೆಲುಗಿನ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ.   ಕನ್ನಡದಲ್ಲೂ ದ್ವಾರಕೀಶ್  ಅವರ ಪೋಲೀಸ್ ಪಾಪಣ್ಣ ಚಿತ್ರಕ್ಕೆ ಅವರ ಸಂಗೀತವಿತ್ತು.



12. ಬಿ.ಕೆ.ಸುಮಿತ್ರಾ - ಓರೆ ನೋಟದ ವೈಯಾರಿ
ಈ ಕಾಂಬಿನೇಶನ್ ಅಂದೊಡನೆ ಎಲ್ಲರ ಮನಸ್ಸಲ್ಲಿ ಮೂಡುವ ಹಾಡು ಮಧುರ ಮಧುರವೀ ಮಂಜುಳಗಾನ.  ಆದರೆ ಅದನ್ನು ಚಂದನ ವಾಹಿನಿಯಲ್ಲಿ ಅಜೀರ್ಣವಾಗುವಷ್ಟು ನೋಡಿ/ಕೇಳಿ ಆಗಿದೆ.  ಹೀಗಾಗಿ ಒಂದೇ ಬಳ್ಳಿಯ ಹೂಗಳು ಚಿತ್ರದ ಈ ಹಾಡನ್ನು  ಆಯ್ಕೆ ಮಾಡಿದ್ದೇನೆ.  ಇದು ಹಿಂದಿಯ ಛೋಟಿ ಬಹನ್ ಚಿತ್ರದ ಕನ್ನಡ ಅವತರಣಿಕೆ.  ಶಂಕರ್ ಜೈಕಿಶನ್ ಅವರ ಮಹಾನ್ ಭಕ್ತರಾಗಿದ್ದ ಸತ್ಯಂ ಆ ಚಿತ್ರದ ಮೂಲ ಧಾಟಿಗಳನ್ನು ಬಳಸಿಕೊಳ್ಳಬಹುದಾಗಿತ್ತು.  ಆದರೆ ಹಾಗೆ ಮಾಡದೆ ಇತರ ಹಾಡುಗಳ ಅಲ್ಪ ಸ್ವಲ್ಪ ಛಾಯೆಯುಳ್ಳ ಬೇರೆ ಧಾಟಿಗಳನ್ನು ಸಂಯೋಜಿಸಿದರು. ದೂರದಿಂದಲಿ ಬಂದವಳೆ ಹಾಡಲ್ಲಿ ಶಂ.ಜೈ. ಅವರ ‘ಆಯೀ ಮಿಲನ್ ಕೀ ಬೇಲಾ’ದ ಓ ಸನಮ್ ತೆರೆ ಹೋಗಯೆ ಹಮ್ ಛಾಯೆ ಇದೆ!  ರಫಿಯ ದೊಡ್ಡ ಅಭಿಮಾನಿಯಾಗಿದ್ದ ಸತ್ಯಂ ಈ ಚಿತ್ರದಲ್ಲಿ ಅವರಿಂದ ಒಂದು ಹಾಡು ಹಾಡಿಸಿ ದಾಖಲೆ ನಿರ್ಮಿಸಿದರು.  ಮುಂದಿನ ದಿನಗಳಲ್ಲಿ ತನ್ನ ರಚನೆಗಳನ್ನು ಎಸ್.ಪಿ.ಬಿ ಅವರಿಂದ ಹಾಡಿಸುವಾಗ  ರಫಿ ಶೈಲಿಯಲ್ಲಿ ಹಾಡುವಂತೆ ಸಲಹೆ ನೀಡುತ್ತಿದ್ದರಂತೆ. ಈ ಓರೆ ನೋಟದ ವೈಯಾರಿ ಹಾಡಿನ tune ಮತ್ತು interludeಗಳಲ್ಲೂ ಕೆಲ ಹಾಡುಗಳ ಅಸ್ಪಷ್ಟ ಪ್ರಭಾವ ಇದೆ. ಶ್ರುತಿ ಭೇದದಂಥ ಕಸರತ್ತೂ ಇದೆ.



13. ಎಚ್. ಕೃಷ್ಣಮೂರ್ತಿ -  ಅಮ್ಮಾ ಎಂದರೆ
ಕಳ್ಳ ಕುಳ್ಳ ಚಿತ್ರದ ಈ ಹಾಡನ್ನು ಪಿ.ಬಿ.ಎಸ್ ಅವರೊಡನೆ ಹಾಡಿದ ಕೃಷ್ಣಮೂರ್ತಿ ಒಬ್ಬ ಅಜ್ಞಾತ ಗಾಯಕ.  ಬೇರೆ ಯಾವ ಹಾಡಲ್ಲೂ ನಾನು ಅವರ ಧ್ವನಿ ಕೇಳಿಲ್ಲ.  ಆದರೂ legend ಪಿ.ಬಿ.ಎಸ್ ಅವರಿಗೆ ಸರಿ ಸಾಟಿಯಾಗಿ ಹಾಡಿದ ಅವರಿಗೆ ಮೆಚ್ಚುಗೆ ಸಲ್ಲಲೇ ಬೇಕು. ಪಿ.ಬಿ.ಎಸ್ ಅವರ ಕೊಂಚ ಅನುನಾಸಿಕ ಧ್ವನಿ ಹಾಡಿಗೆ ವಿಶೇಷ ಮೆರುಗು ನೀಡಿದೆ. ಉದಯ ಶಂಕರ್ ಅವರ ಸಾಹಿತ್ಯ ಎಂದಿನಂತೆ ಸರಳ ಸುಂದರ. ಅತ್ಯುತ್ತಮ ಆರ್ಕೆಸ್ಟ್ರೇಶನ್ ಉಳ್ಳ ಈ ಹಾಡಿನಲ್ಲಿ ರಾಜನ್ ನಾಗೇಂದ್ರ ಅವರು  ಅಮ್ಮನನ್ನು ಕಾಣಲು ತೆರಳುತ್ತಿರುವ ಪುತ್ರರ ಉಲ್ಲಾಸವನ್ನು ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ.   ಕಣ್ಣು ಮುಚ್ಚಿ ಆಲಿಸಿದರೂ ಚಲಿಸುತ್ತಿರುವ ವಾಹನದ ಕಲ್ಪನೆ ಮನದಲ್ಲಿ ಮೂಡುತ್ತದೆ.  ಕೊನೆಯ ಭಾಗದಲ್ಲಿ, ಕನ್ನಡದಲ್ಲಿ ಅಪರೂಪವಾದ ಶ್ರುತಿಯನ್ನು  ಒಂದು ಪಟ್ಟಿ ಎತ್ತರಿಸಿ ಹಾಡುವ scale change ತಂತ್ರ ಬಳಸಲಾಗಿದೆ.  ಸೀತಾ ಔರ್ ಗೀತಾ ಚಿತ್ರದ ಕೊಯಿ ಲಡಕಿ ಮುಝೆ ಕಲ್ ರಾತ್ ಹಾಡಿನಲ್ಲೂ ಈ ತಂತ್ರ ಬಳಕೆಯಾಗಿದೆ.



14. ಪಿ. ಲೀಲ -  ಮಿಕ್ಸ್ಚರ್ ಹಾಡು
ಇವರಿಬ್ಬರ ಹಾಡುಗಳು ಬಲು ಕಮ್ಮಿ.  ವಿಜಯ ನಗರದ ವೀರ ಪುತ್ರದ ಎನ್ಮನ ಮಂದಿರದೆ ಹಾಡಿನ ಉಲ್ಲೇಖ ಮನದಲ್ಲಿ ಉಳಿದಂಥ... ಲೇಖನದಲ್ಲಿ ಈಗಾಗಲೇ ಆಗಿದೆ.  ಇಲ್ಲಿ ಆಯ್ದುಕೊಂಡದ್ದು ಗಂಡೊಂದು ಹೆಣ್ಣಾರು ಚಿತ್ರದ ಒಂದು ಹಾಡು.  ಇದು ಬೇರೆ ಚಿತ್ರಗಳ ಹಾಡಿನ ತುಣುಕುಗಳನ್ನೊಳಗೊಂಡಿರುವಂಥ ಫ್ರುಟ್ ಸಲಾದ್.  ಇದೇ ಚಿತ್ರದಲ್ಲಿ ಇವರಿಬ್ಬರು ಹಾಡಿದ ಹರಿಕಥಾ ಶೈಲಿಯ ಹಾಡೂ ಒಂದಿದೆ.



15. ಬೆಂಗಳೂರು ಲತಾ - ನಗುತಿದೆ ಅನುರಾಗ
ನಿಮ್ಮಲ್ಲಿ ಬಹುಪಾಲು ಮಂದಿ ಈ ಹಾಡನ್ನು ಮೊದಲ ಬಾರಿ ಕೇಳುತ್ತಿದ್ದೀರಿ.  ಇದು 60ರ ದಶಕದಲ್ಲಿ ಬಂದ ಬೇವು ಬೆಲ್ಲ ಎಂಬ ಚಿತ್ರದ್ದು.  ಸಂಗೀತ ನಿರ್ದೇಶಕರು ಹೆಸರೇ ಕೇಳಿ ಗೊತ್ತಿಲ್ಲದ ದಿವಾಕರ್ ಎಂಬವರು.  ರಚನೆ ಎಸ್. ಕೆ. ಕರೀಂ ಖಾನ್ ಅವರದ್ದು.  ಹಾಡಿನ ಸ್ವಲ್ಪ ಭಾಗ ಪಾಶ್ಚಾತ್ಯ ವಾದ್ಯಗಳೊಂದಿಗೆ ಕ್ಲಬ್ ಡಾನ್ಸ್ ಶೈಲಿಯಲ್ಲಿದ್ದರೆ ಸ್ವಲ್ಪ ಭಾಗ ಕೊಳಲು, ಢೋಲಕ್ ಹಿನ್ನೆಲೆಯೊಡನೆ ದೇಸೀ ಶೈಲಿಯಲ್ಲಿದೆ.  ‘ಚಿಕ್ ಚಿಕ್ ಚಿಕ್ ಲೂ ಪಾಪ ಲುಪ ಲುಪ’  ಎಂಬ ಅರ್ಥರಹಿತ ಸಾಲುಗಳೂ ಹಾಡಲ್ಲಿವೆ.  ರೇಡಿಯೋ ಸಿಲೋನಿನಲ್ಲಿ ಇಂಥ ಸಾಲುಗಳುಳ್ಳ ಹಾಡುಗಳದ್ದೇ ಅನೋಖೆ ಬೋಲ್ ಎಂಬ ಕಾರ್ಯಕ್ರಮ ಇರುತ್ತಿತ್ತು.



16. ರವೀ - ಉಪ್ಪ ತಿಂದ ಮ್ಯಾಲೆ
ರವೀ ಅರ್ಥಾತ್  ಕೆ.ಎಸ್.ಎಲ್ ಸ್ವಾಮಿ ಪಿ.ಬಿ.ಎಸ್ ಅವರ ದೊಡ್ಡ ಅಭಿಮಾನಿ ಹಾಗೂ ಸಹಚರರಾಗಿದ್ದವರು.  ತಮ್ಮ ಚಿತ್ರಗಳಾದ ತೂಗುದೀಪ, ಅರಸಿನ ಕುಂಕುಮ ಮತ್ತು  ಭಾಗ್ಯ ಜ್ಯೋತಿ ಚಿತ್ರಗಳಲ್ಲಿ ಅವರನ್ನು ತೆರೆಯ ಮೇಲೆ ತೋರಿಸಿದ್ದರು.  ಈ ಹಾಡು ತಮ್ಮ ಗುರು ಬಿ.ಆರ್. ಪಂತುಲು ಅವರ ನೆನಪಿಗಾಗಿ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ್ದ ಕಾಲೇಜು ರಂಗ ಚಿತ್ರದ್ದು.  ಸಂಗೀತ ನಿರ್ದೇಶನ ಪಂತುಲು ಅವರ ಪದ್ಮಿನಿ ಸಂಸ್ಥೆಯ ಆಸ್ಥಾನ ವಿದ್ವಾನ್ ಟಿ.ಜಿ. ಲಿಂಗಪ್ಪ ಅವರದ್ದು.



17. ಸಿ.ಕೆ. ರಮಾ -  ಸಿರಿವಂತನಾದರೂ
ಚಿತ್ರವೇ ಇಲ್ಲದ ಈ ಚಿತ್ರಗೀತೆಯ ವಿವರಗಳು  ಸಿರಿವಂತನಾದರೂ ಕನ್ನಡ ಹಾಡನ್ನಾಲಿಸುವೆ ಲೇಖನದಲ್ಲಿವೆ.



18. ಟಿ.ಎ. ಮೋತಿ - ಷೋಡಶಿ ಷೋಡಶಿ
ಇದು ಭವಭೂತಿಯ ಕೃತಿಯನ್ನಾಧರಿಸಿದ ಮಧುಮಾಲತಿ ಚಿತ್ರದಲ್ಲಿ ಅಳವಡಿಸಲಾದ ಕು.ವೆಂ.ಪು ರಚನೆ. ಈ ಚಿತ್ರದ ನಿರ್ದೇಶಕ ಎಸ್.ಕೆ.ಎ. ಚಾರಿ ಅವರು ತಮ್ಮ ಇತರ ಚಿತ್ರಗಳಾದ ಮನೆ ಅಳಿಯ, ಮಾವನ ಮಗಳು, ಗೌರಿ ಮುಂತಾದ ಚಿತ್ರಗಳಲ್ಲೂ ಪ್ರಸಿದ್ಧ ಕವಿಗಳ ರಚನೆಗಳನ್ನು ಬಳಸಿಕೊಂಡಿದ್ದರು. ಟಿ.ಎ. ಮೋತಿ ಜಿ.ಕೆ. ವೆಂಕಟೇಶ್ ಅವರ ಮೆಚ್ಚಿನ ಗಾಯಕರಾಗಿದ್ದವರು.  ಕಲಾವತಿ, ಕನ್ಯಾರತ್ನ, ಬಂಗಾರದ ಮನುಷ್ಯ  ಚಿತ್ರಗಳಲ್ಲೂ ಅವರನ್ನು ಬಳಸಿಕೊಂಡಿದ್ದರು.  ಈ ಹಾಡಿನ ಕೊನೆಯಲ್ಲಿ ಪಿ.ಬಿಎಸ್, ಮೋತಿ ಜೊತೆಗೆ ಇನ್ನೋರ್ವ ಗಾಯಕನ ಧ್ವನಿಯೂ ಇದ್ದು ಸ್ವತಃ ಜಿ.ಕೆ.ವಿ ಅವರದ್ದೋ ಅಥವಾ ಪೀಠಾಪುರಂ ನಾಗೇಶ್ವರ ರಾವ್ ಅವರದ್ದೋ ಎಂದು ಗೊತ್ತಾಗುತ್ತಿಲ್ಲ.



19. ಪೀಠಾಪುರಂ ನಾಗೇಶ್ವರ ರಾವ್ -   ನಾ ಹಾಡಬೇಕೆ
ನಾನು ಕನ್ನಡದ ಮನ್ನಾಡೆ ಎಂದು ಉಲ್ಲೇಖಿಸುವ ಇವರು ಪಿ.ಬಿ.ಎಸ್ ಜೊತೆ ಹಾಡಿದ  ಈ ಏಕೈಕ ಹಾಡು ಕುಲಗೌರವ ಚಿತ್ರದ್ದು.  ಹಿನ್ನೆಲೆ ಮತ್ತು ಹಾಸ್ಯ ಸಂದರ್ಭದ ಹಾಡುಗಳನ್ನೇ ಇವರು ಹೆಚ್ಚು ಹಾಡುತ್ತಿದ್ದುದು. ಇಲ್ಲೂ ಅವರು ಹಾಡಿದ್ದು ನರಸಿಂಹರಾಜು ಅವರಿಗಾಗಿ. ಸಂಗೀತ ಟಿ.ಜಿ. ಲಿಂಗಪ್ಪ.



20. ವಿದ್ಯಾರಾಣಿ - ಗೋವಿನ ಹಾಡು
ಭೈರಪ್ಪ ಅವರ ತಬ್ಬಲಿಯು ನೀನಾದೆ ಮಗನೆ ಕೃತಿಯನ್ನಾಧರಿಸಿದ ಚಿತ್ರದಲ್ಲಿ ಅಳವಡಿಸಲಾದ ಗೋವಿನ ಹಾಡಿನಲ್ಲಿ ಬಿ.ಕೆ. ಸುಮಿತ್ರಾ ಕೂಡ ಇದ್ದಾರೆ.  ಭಾಸ್ಕರ ಚಂದಾವರ್ಕರ್ ಅವರ ಸಂಗೀತ.  ಪಿ.ಬಿ.ಎಸ್ ಅವರ ಅಜ್ಞಾತವಾಸ ಕಾಲದ ಪ್ರಸಿದ್ಧ  ಹಾಡುಗಳ ಪೈಕಿ ಇದೂ ಒಂದು.



21. ಮಾಧವಪೆದ್ದಿ ಸತ್ಯಂ -  ಏಳೇಳು ಶರಧಿಯು
ಮಾಯಾ ಬಜಾರ್‌ನಂಥ ಚಿತ್ರಗಳಲ್ಲಿ ಎಸ್.ವಿ.ರಂಗರಾವ್ ಅಭಿನಯಿಸಿದ ರಾಕ್ಷಸ ಪಾತ್ರಗಳಿಗೆ ಹಾಡುತ್ತಿದ್ದ ಕೃಶಕಾಯದ ಆದರೆ ಘನ ಗಂಭೀರ ಧ್ವನಿಯ ಸತ್ಯಂ ಎಲ್ಲಿ,  ನವಿರು ದನಿಯ ಪಿ.ಬಿ.ಎಸ್ ಎಲ್ಲಿ.  ಆದರೂ ಇವರಿಬ್ಬರದೂ ಒಂದು ಯುಗಳ ಗೀತೆ ಭಲೇ ಭಾಸ್ಕರ್ ಚಿತ್ರದಲ್ಲಿದೆ. ಇಲ್ಲಿಯೂ ಅವರು ಹಾಡಿದ್ದು ರಾವಣನ ಪಾತ್ರಕ್ಕೆ! ರಾವಣ-ಹನುಮ ಸಂವಾದಕ್ಕಾಗಿ ಇವರಿಬ್ಬರನ್ನು ಒಟ್ಟು ಸೇರಿಸಿದವರು ಸಂಗೀತ ನಿರ್ದೇಶಕ ಸತ್ಯಂ.



22. ಎ.ಪಿ. ಕೋಮಲ-  ಜೀವನ ಹೂವಿನ ಹಾಸಿಗೆ
ಏಕ್ ಹೀ ಫಿಲ್ಮ್ ಕೇ ಗೀತ್ ಹೊರತಾಗಿ ಯಾವುದೇ ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಒಂದೇ ಚಿತ್ರದ ಎರಡು ಹಾಡುಗಳಿರದಂತೆ ನೋಡಿಕೊಳ್ಳುವ ಅಲಿಖಿತ ನಿಯಮವೊಂದು ರೇಡಿಯೊ ಸಿಲೋನ್ ಸೇರಿದಂತೆ ಎಲ್ಲ ರೇಡಿಯೊ ಸ್ಟೇಶನ್‌ಗಳಲ್ಲಿತ್ತು.  ಬಿನಾಕಾ ಗೀತ್‍ಮಾಲಾದಲ್ಲಿ ಮಾತ್ರ ಇದಕ್ಕೆ ವಿನಾಯಿತಿ ಇದ್ದು ಒಂದು ಚಿತ್ರದ ಎರಡು ಹಾಡುಗಳಿಗೆ ಅವಕಾಶವಿರುತ್ತಿತ್ತು.  ರಾಣಿ ಹೊನ್ನಮ್ಮ ಚಿತ್ರದ ‘ಹಾರುತ ದೂರ ದೂರ’ ಹಾಡು ಈಗಾಗಲೇ  ಇಲ್ಲಿ ಸಮ್ಮಿಳಿತವಾಗಿದ್ದು ಕು.ರ.ಸೀ ವಿರಚಿತ ಈ ಹಾಡೂ ಅದೇ ಚಿತ್ರದ್ದಾಗಿರುವುದು ಈ ವಿಷಯ ಇಲ್ಲಿ ಪ್ರಸ್ತಾಪವಾಗಲು ಕಾರಣ. ‘ಹಾರುತ ದೂರ ದೂರ’ ಹಾಡಿನ ಶಂಕರ್ ಜೈಕಿಶನ್ ಮಾದರಿಯ heavy ಆರ್ಕೆಷ್ಟ್ರಾಕ್ಕೆ ವಿರುದ್ಧವಾಗಿ ಈ ಹಾಡು ಸೌಮ್ಯವಾದ ನೌಷಾದ್ ಶೈಲಿಯಲ್ಲಿದೆ.  ಕೊಹಿನೂರ್ ಚಿತ್ರದ ಕೋಯಿ ಪ್ಯಾರ್ ಕಿ ದೇಖೆ ಜಾದೂಗರಿ ಹಾಡಿನ ಛಾಯೆಯೂ ಇದರಲ್ಲಿದೆ.  ಕೆಲ ಕಾಲ ಮುಂಬಯಿ ಚಿತ್ರರಂಗದಲ್ಲೂ ದುಡಿದ ಅವರ ಮೇಲೆ ಹಿಂದಿ ಚಿತ್ರ ಸಂಗೀತದ ಪ್ರಭಾವವಿದ್ದುದು ಸಹಜವೇ ಆಗಿದೆ. ಹಿಂದಿಯಿಂದ ಕನ್ನಡಕ್ಕೆ ಡಬ್ ಆದ ಜಿಂಬೊ ನಗರ ಪ್ರವೇಶ, ಸಂಪೂರ್ಣ ರಾಮಾಯಣ ಮುಂತಾದ ಚಿತ್ರಗಳಲ್ಲಿ ಮೂಲ ಹಿಂದಿ ಹಾಡುಗಳನ್ನು ಯಥಾವತ್ತಾಗಿ ಮರುಸೃಷ್ಟಿಸುವ ಜವಾಬ್ದಾರಿಯನ್ನೂ ಅವರು ನಿಭಾಯಿಸಿದ್ದರು.  ಅವರ ಅನೇಕ ಪ್ರಸಿದ್ಧ ಹಾಡುಗಳ interludeಗಳಲ್ಲಿ ಹಿಂದಿ ಹಾಡುಗಳ ಎಳೆ ಇರುತ್ತಿತ್ತು.



23. ಬಾಲಸುಬ್ರಹ್ಮಣ್ಯಂ, ಇಂದುಮತಿ - ಭಾಗ್ಯವಂತರು ನಾವು ಭಾಗ್ಯವಂತರು
ಭಾಗ್ಯವಂತರು ಚಿತ್ರದ ಈ ಟೈಟಲ್ ಹಾಡಲ್ಲಿ ‘ಕಾಣದೆ ಗೌರಿ ಆತುರ ತೋರಿ....’ ಎಂಬ ಎರಡು ಸಾಲುಗಳನ್ನು ಎಸ್.ಪಿ.ಬಿ ಅವರು ಹಾಡಿದ್ದೆಂದು ಅನೇಕರು ತಪ್ಪಾಗಿ ತಿಳಿದುಕೊಂಡಿದ್ದಾರೆ. ಆ ಸಾಲುಗಳನ್ನು ಸೂಕ್ಷ್ಮವಾಗಿ ಆಲಿಸಿದರೆ ಅದು ಅವರ ಧ್ವನಿ ಅಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.  ಚಿತ್ರದ ಟೈಟಲ್ಸಲ್ಲಿ  ‘ಬಾಲಸುಬ್ರಹ್ಮಣ್ಯಮ್’ ಎಂದಷ್ಟೇ ಉಲ್ಲೇಖ ಇದ್ದರೂ ರೇಡಿಯೋದಲ್ಲಿ ಈ ಹಾಡು ಪ್ರಸಾರವಾಗುವಾಗ ‘ಜಿ.ಬಾಲಸುಬ್ರಹ್ಮಣ್ಯಂ’ ಅನ್ನುತ್ತಿದ್ದರೆಂದು ನನ್ನ ನೆನಪು. ಹೀಗಾಗಿ ಅವರು ಅದೇ ಹೆಸರಿನ ಬೇರೆ ಗಾಯಕ ಎಂದು ನನ್ನ ಅನಿಸಿಕೆ.  ಉದಯಶಂಕರ್ ಸಾಹಿತ್ಯಕ್ಕೆ ಸಂಗೀತ ರಾಜನ್ ನಾಗೇಂದ್ರ ಅವರದ್ದು. ತನ್ನ ಚಿತ್ರಗಳಲ್ಲಿ ಪಿ.ಬಿ.ಎಸ್ ಅವರ ಒಂದಾದರೂ ಹಾಡಿರಬೇಕೆಂದು ರಾಜ್‌ಕುಮಾರ್ ಅವರು ಆಸೆಪಡುತ್ತಿದ್ದ ಕಾಲದ ಹಾಡಿದು.



24. ಬಿ.ವಸಂತ, ಟಿ.ಆರ್. ಜಯದೇವ್ - ಸರಸಮಯ ಇದು ಸಮಯ
ಮನೆ ಅಳಿಯ ಚಿತ್ರದ ಈ ಹಾಡು ಇವರಿಬ್ಬರೊಡನೆ ಪಿ.ಬಿ.ಎಸ್ ಮತ್ತು ಜಾನಕಿ ಸೇರಿ ಎರಡು ಜೋಡಿ ಪ್ರೇಮಿಗಳಿಗಾಗಿ ಹಾಡಿರುವುದು. ಈ ಚಿತ್ರದ ಸಂಗೀತ ನಿರ್ದೇಶನ ಟಿ. ಛಲಪತಿ ರಾವ್.  ಜಯದೇವ್ ಕೆಲ ಕಾಲ ಕನ್ನಡದಲ್ಲಿ ಅನೇಕ ಹಾಡುಗಳನ್ನು ಹಾಡಿದ್ದರು ಇದೇ ಚಿತ್ರದ ನಿಲ್ಲೆ ಗೊಲ್ಲರು ಬಾಲೆ ಮತ್ತು ಅನ್ನಪೂರ್ಣ ಚಿತ್ರದ ಅಂದಚಂದದ ಹೂವೆ ಹಾಡುಗಳು  ಜನಪ್ರಿಯತೆ ಗಳಿಸಿದ್ದವು.  ಹೆಸರು ನೋಡಿದರೆ ಪುರುಷ ಎಂಬ ಭಾವನೆ ಬರುವ  ಬಿ. ವಸಂತ ಅವರು ಕೂಡ  ಸಾಕಷ್ಟು ಗೀತೆಗಳನ್ನು ಹಾಡಿದ್ದಾರೆ.  ಅವರು ಎಮ್. ಸತ್ಯಂ ಅವರೊಂದಿಗೆ ಹಾಡಿದ್ದ ಅಮರ ಶಿಲ್ಪಿ ಜಕ್ಕಣ್ಣದ ಜಂತರ್ ಮಂತರ್ ಮಾಟವೋ ಹಾಡು ಬಲು ಪ್ರಸಿದ್ಧವಾಗಿತ್ತು.



25. ಅಂಜಲಿ, ಕೌಸಲ್ಯ - ನಿನ್ನೊಲುಮೆ ನಮಗಿರಲಿ ತಂದೆ
ನಮ್ಮ ಮಕ್ಕಳು ಚಿತ್ರದ ಈ ಜನಪ್ರಿಯ ಹಾಡಿನಲ್ಲಿ ಇವರಿಬ್ಬರೊಂದಿಗೆ ಬಿ.ಕೆ.ಸುಮಿತ್ರಾ ಕೂಡ ದನಿಗೂಡಿಸಿದ್ದಾರೆ.  ಆರಂಭದ ಶ್ಲೋಕದಲ್ಲಿ ಪಿ.ಬಿ.ಎಸ್ ಅವರ ಸಂಸ್ಕೃತ ಶಬ್ದಗಳ ಉಚ್ಚಾರ ಸ್ಪಟಿಕದಂತೆ ಶುಭ್ರ. ಭಕ್ತಿ ಭಾವಕ್ಕೆ ಸೂಕ್ತವಾದ ಜಂಪೆತಾಳದಲ್ಲಿರುವ  ನಟಭೈರವಿ ರಾಗಛಾಯೆಯ  ಸರಳ ಸಂಯೋಜನೆ ವಿಜಯ ಭಾಸ್ಕರ್ ಅವರದ್ದು. ಹಾಡಿನ ಸಾಹಿತ್ಯ ಆರ್. ಎನ್. ಜಯಗೋಪಾಲ್ ಅವರದ್ದು.



26. ಕಸ್ತೂರಿ ಶಂಕರ್, ಎಚ್.ಎಮ್, ಮಹೇಶ್   -  ಅರೆರೆರೆ ಎಂಥ ಗಂಡಿಗೆ
ಬೆಸುಗೆ ಚಿತ್ರಕ್ಕಾಗಿ ಇವರಿಬ್ಬರೊಂದಿಗೆ ಅಂಜಲಿಯೂ ಸೇರಿ ಪಿ.ಬಿ.ಎಸ್ ಜೊತೆ ಹಾಡಿದ quadruplet ಹಾಡಿದು.  ಈ ಸಮಯದಲ್ಲಿ  ಪಿ.ಬಿ. ಶ್ರೀನಿವಾಸ್ ಅವರಿಗೆ ಇಂತಹ ಭಾಗಶಃ ಅವಕಾಶಗಳು ಮಾತ್ರ ದೊರಕುತ್ತಿದ್ದವು.



27. ಜಿಕ್ಕಿ - ಶ್ರಮದಿ ನಾವ್ ದುಡಿದು
ಪಿ.ಜಿ.ಕೃಷ್ಣವೇಣಿ ಎಂಬ ನಿಜ ನಾಮಧೇಯದ ಜಿಕ್ಕಿ ಜೊತೆ ಪಿ.ಬಿ.ಎಸ್ ಹಾಡಿರುವ ಈ  ಹಾಡು 1965ರಲ್ಲಿ ತೆರೆಕಂಡ ವಾತ್ಸಲ್ಯ ಚಿತ್ರದ್ದು.  ಇದು ತಮಿಳಿನ ಪಾಸಮಲರ್ ಚಿತ್ರದ ರೀಮೇಕ್. ರಾಜಕುಮಾರ್ ಮತ್ತು ಲೀಲಾವತಿ ಅಣ್ಣ ತಂಗಿ ಪಾತ್ರಗಳಲ್ಲಿ ಅಭಿನಯಿಸಿದ ಏಕೈಕ ಚಿತ್ರ ಇದು. ಆಗ ಪತ್ರಿಕೆಗಳಿಗೆಲ್ಲ ಇದು ಸೆನ್ಸೇಷನಲ್ ಸುದ್ದಿಯಾಗಿತ್ತು.  ಈ ಹಾಡಿನ ಹಿನ್ನೆಲೆ ಸಂಗೀತದಲ್ಲಿ ಶಂಕರ್ ಜೈಕಿಶನ್ ಛಾಯೆ ಗೋಚರಿಸುತ್ತಿದ್ದು ಇದರ ಛಾಯೆ ಆ ಮೇಲೆ ಬಂದ ಲಕ್ಷ್ಮಿ-ಪ್ಯಾರೇ ಅವರ ಸಾಧು ಔರ್ ಶೈತಾನ್ ಚಿತ್ರದ ಮೆಹಬೂಬಾ ಮೆಹೆಬೂಬ ಹಿನ್ನೆಲೆ ಸಂಗೀತದ ಮೇಲೆ ಬಿದ್ದಿದೆ! ಉಳಿದೆಲ್ಲ ಹಾಡುಗಳಿಗೆ ಸ್ವಂತ ಧಾಟಿ ಸಂಯೋಜಿಸಿದ ವಿಜಯಾ ಕೃಷ್ಣಮೂರ್ತಿ ಮುದ ತುಂಬಿ ಮೆರೆವ ಮದುಮಗಳೇ ಎಂಬ ಎಲ್.ಆರ್.ಈಶ್ವರಿ ಹಾಡಿಗೆ ತಮಿಳಿನ ವಾರಾಯನ್ ತೋಡಿ ವಾರಾಯೋ ಧಾಟಿಯನ್ನು ಉಳಿಸಿಕೊಂಡಿದ್ದರು. 



28. ಆರ್.ಎನ್. ಸುದರ್ಶನ್  -   ಒಂದೇ ಒಂದು ಹೂವು
ಆರ್.ಎನ್.ಆರ್ ಕುಟುಂಬದ ನಗುವ ಹೂವು ಚಿತ್ರದಲ್ಲಿ ಇರಬೇಕು ಇರಬೇಕು ಹಾಡನ್ನು ಆರ್.ಎನ್. ಸುದರ್ಶನ್ ಸ್ವತಃ ಹಾಡಿದ್ದರು. ಈ ಹಾಡಲ್ಲಿ ವಾಚನ ಭಾಗ ಮಾತ್ರ ಅವರದಾಗಿದ್ದು  ಪಿ.ಬಿ.ಎಸ್ ಹಾಡಿದ್ದರು.  ಇತ್ತೀಚೆಗೆ ನಮ್ಮನ್ನಗಲಿದ ಸುದರ್ಶನ್ ಅವರಿಗೆ ಶ್ರದ್ಧಾಂಜಲಿ ರೂಪವಾಗಿ ಈ ಸುಂದರ ಹಾಡಿನ ಸೇರ್ಪಡೆ.




29. ಸುಮನ್ ಕಲ್ಯಾಣ್‌ಪುರ್ -  ತಲ್ಲಣ ನೂರು ಬಗೆ

ಜಯತೆ ಸತ್ಯಮೇವ ಜಯತೆ, ಒಂದೊಂದಾಗಿ ಜಾರಿದರೆ ಹಾಡುಗಳ ಕಲ್ಪವೃಕ್ಷ ಚಿತ್ರದ ಸಂಗೀತ ನಿರ್ದೇಶಕ  ‘ಮೈ ಜಿಂದಗಿ ಕಾ ಸಾಥ್ ನಿಭಾತಾ ಚಲಾ ಗಯಾ’ ಖ್ಯಾತಿಯ ಹಿಂದಿ ಚಿತ್ರರಂಗದ ಅದೇ ಜಯದೇವ್ ಎಂದು ನನಗೆ ಬಹಳ ಕಾಲ ಗೊತ್ತೇ ಇರಲಿಲ್ಲ.  ಅದೇ ಹೆಸರಿನ ಇನ್ಯಾರೋ ಇರಬಹುದು ಅಂದುಕೊಂಡಿದ್ದೆ.  ಆ ಚಿತ್ರದಲ್ಲಿ ಪಿ.ಬಿ.ಎಸ್ ಮತ್ತು ಸುಮನ್ ಕಲ್ಯಾಣ್‌ಪುರ್ ಹಾಡಿದ ಯುಗಳ ಗೀತೆಗಳಿವೆ ಎಂದು ಗೊತ್ತಾದದ್ದೂ  ಈಚೆಗೆ.  ಇದು ಅವುಗಳಲ್ಲೊಂದು.



30. ಆಶಾ ಭೋಸ್ಲೆ - ಸವಾಲು ಹಾಕಿ ಸೋಲಿಸಿ ಎಲ್ಲರ
ಮರಾಠಿ ಲಾವಣಿ ಶೈಲಿಯಲ್ಲಿ ಆಶಾ ಭೋಸ್ಲೆ ಹಾಕಿದ ಸವಾಲಿಗೆ ಪಿ.ಬಿ.ಶ್ರೀನಿವಾಸ್ ಅವರು ಕನ್ನಡದ ಲಾವಣಿ ಮೂಲಕ ಸೂಕ್ತ ಉತ್ತರ ನೀಡುವ ದೂರದ ಬೆಟ್ಟ ಚಿತ್ರದ ಸುದೀರ್ಘ ಹಾಡು ಇದು. ಇದರಲ್ಲಿ ಸೂತ್ರಧಾರನ ಮಾತುಗಳನ್ನಾಡಿದ್ದು ಚಿ. ಉದಯಶಂಕರ್ ಇರಬಹುದೇನೋ ಎಂದು ನನ್ನ ಊಹೆ.   ಹೋಳಿಯ ಸನ್ನಿವೇಶ ಮತ್ತು ಈ ಹಾಡಿನ ಭಾಗ ಮಾತ್ರ ವರ್ಣದಲ್ಲಿ ಚಿತ್ರೀಕರಣಗೊಂಡ ಆ ಚಿತ್ರ  ಉಳಿದಂತೆ  ಕಪ್ಪು ಬಿಳುಪಿನಲ್ಲಿತ್ತು. ಬಹುಶ: ಇದು  ಭಾಗಶಃ ವರ್ಣ ಮಾದರಿಯ ಕೊನೆಯ ಕನ್ನಡ ಚಿತ್ರ.



ಇಲ್ಲಿರುವ ಮಾಹಿತಿ ಪರಿಪೂರ್ಣವಲ್ಲ.  ನನಗೆ ತಿಳಿದಂತೆಯೇ ಪಿ.ಬಿ.ಶ್ರೀನಿವಾಸ್ ಜೊತೆಯಲ್ಲಿ ಹಾಡಿದ ಇನ್ನೂ ಕೆಲ ಕಲಾವಿದರಿದ್ದಾರೆ. ನನಗೆ ಗೊತ್ತಿಲ್ಲದವರು ಇನ್ನೂ ಹಲವರಿರಬಹುದು.  ಮೂವತ್ತಕ್ಕೆ ಮುಕ್ತಾಯವಾಗಲಿ ಎಂದು ಇಷ್ಟಕ್ಕೇ ಸೀಮಿತಗೊಳಿಸಿದ್ದೇನೆ.  ಸಾವಕಾಶವಾಗಿ ಓದಿ.  ಹಾಡುಗಳನ್ನು ಒಂದೊಂದಾಗಿ ಆಲಿಸಿ.  



Thursday 7 September 2017

ಬಾಗಿಲನು ತೆರೆದ ದಾಸರ ಪದ



ಬಾಗಿಲನು ತೆರೆದು - 1960ರಲ್ಲಿ ತೆರೆ ಕಂಡ ಭಕ್ತ ಕನಕದಾಸ ಚಿತ್ರದ ಈ ದಾಸರ ಪದ  ಪಿ.ಬಿ.ಶ್ರೀನಿವಾಸ್ ಅವರಿಗೆ ಮೊದಲ ಬಾರಿ ರಾಜ್ ಕುಮಾರ್ ಅವರ ಎಲ್ಲ ಹಾಡುಗಳನ್ನು ಹಾಡಿ ಕನ್ನಡದ ಮುಖ್ಯ ಗಾಯಕನಾಗಿ ನೆಲೆ ಕಂಡುಕೊಳ್ಳುವ,  ಎಂ.ವೆಂಕಟರಾಜು ಅವರಿಗೆ ಮೊತ್ತ ಮೊದಲ ಬಾರಿ  ಸಂಗೀತ ನಿರ್ದೇಶಕನಾಗುವ ಮತ್ತು ನಮಗೆಲ್ಲ ಅನವರತ ಮಧುರ ಗೀತೆಗಳನ್ನಾಲಿಸುವ ಅವಕಾಶದ ಬಾಗಿಲು ತೆರೆಯಿತು.

ಹಿಂದಿ ಹಾಗೂ ಇತರ ಭಾಷೆಗಳಂತೆ ಕನ್ನಡದಲ್ಲೂ ಅಲಿಖಿತ ನಿಯಮಗಳು ಹರಳುಗಟ್ಟತೊಡಗಿದ್ದು 60ರ ದಶಕದ ಆರಂಭದಲ್ಲಿ.  ಅಲ್ಲಿವರೆಗೆ  ಇಂಥ ನಾಯಕನಿಗೆ ಇಂಥ ಗಾಯಕನೇ ಹಾಡಬೇಕೆನ್ನುವ ರಿವಾಜು ಇರಲಿಲ್ಲ.  ಕನ್ನಡದಲ್ಲೂ ರಾಜ್ ಅವರಿಗೆ ಸಿ.ಎಸ್. ಜಯರಾಮನ್, ಪೀಠಾಪುರಂ ನಾಗೇಶ್ವರ ರಾವ್, ಘಂಟಸಾಲ  ಮುಂತಾದ ವಿವಿಧ ಗಾಯಕರು ಹಾಡುತ್ತಿದ್ದರು.   ಭಕ್ತ ಕನಕದಾಸದ ಎಲ್ಲ ಹಾಡುಗಳನ್ನು ರಘುನಾಥ ಪಾಣಿಗ್ರಾಹಿ (ಖ್ಯಾತ ಒಡಿಸ್ಸಿ ಪಟು ಸಂಯುಕ್ತಾ ಪಾಣಿಗ್ರಾಹಿಯವರ ಪತಿ) ಅವರು ಹಾಡುವುದೆಂದಿತ್ತಂತೆ. ಆದರೆ  ಕೊನೆ ಗಳಿಗೆಯಲ್ಲಿ ಈ ನಿರ್ಧಾರ ಬದಲಾಗಿ ಪಿ.ಬಿ.ಎಸ್ ಅವರಿಗೆ ಆ ಅವಕಾಶ ದೊರೆತು ರಾಜ್ ಜೊತೆ ಸುದೀರ್ಘ ಶರೀರ - ಶಾರೀರ ಸಂಬಂಧ ಬೆಳೆಯಲು ನಾಂದಿಯಾಯಿತು. ಆ ಮೇಲಂತೂ ಕೆಲವು ಅಪವಾದಗಳನ್ನು ಹೊರತು ಪಡಿಸಿದರೆ ಕನ್ನಡದ ಕುಮಾರತ್ರಯರಿಗೂ ಪಿ.ಬಿ.ಎಸ್ ಅವರೇ ಧ್ವನಿಯಾದರು.

ಭಕ್ತ ಕನಕದಾಸ ಚಿತ್ರದ ಎಲ್ಲ ಹಾಡುಗಳೂ ಅತಿ ಮಧುರವಾಗಿದ್ದರೂ ಅವುಗಳ ಪೈಕಿ  ಕಲಶಪ್ರಾಯವಾಗಿ ಹೊಮ್ಮಿದ್ದು ಬಾಗಿಲನು ತೆರೆದು.  ಚಲನಚಿತ್ರ ರಂಗದಲ್ಲಿ ಸಾಮಾನ್ಯವಾಗಿ ಸಂಗೀತ ನಿರ್ದೇಶಕರು ಮೊದಲು ಡಮ್ಮಿ ಸಾಹಿತ್ಯದೊಡನೆ ಹಾಡೊಂದರ ಟ್ಯೂನ್ ಸಿದ್ಧಪಡಿಸಿ ಗೀತ ರಚನಕಾರರು ಅದಕ್ಕೆ ಹೊಂದುವ ಸಾಹಿತ್ಯ ರಚಿಸುತ್ತಾರೆ.  ಆದರೆ ಇಲ್ಲಿ ಆಗಲೇ ಎಷ್ಟೋ ವಿದ್ವಾಂಸರು ಶತಮಾನಗಳಿಂದ ಸಂಪ್ರದಾಯಬದ್ಧವಾಗಿ ಹಾಡಿಕೊಂಡು ಬಂದಿದ್ದ ದಾಸರ ಕೀರ್ತನೆಯನ್ನು ವಿಭಿನ್ನವಾಗಿ ಪ್ರಸ್ತುತ ಪಡಿಸುವ ಸವಾಲು ವೆಂಕಟರಾಜು ಅವರ ಎದುರಿಗಿತ್ತು.  ಅವರ ಈ ನ ಭೂತೋ ನ ಭವಿಷ್ಯತಿ ಎಂಬಂಥ  ಸಂಯೋಜನೆಯನ್ನು   ಪಿ.ಬಿ.ಶ್ರೀನಿವಾಸ್ ಕಲ್ಲೂ ಕರಗುವಂತೆ ಆರ್ದ್ರವಾಗಿ  ಹಾಡಿ ಅಜರಾಮರಗೊಳಿಸಿದರು.  (ಚಿತ್ರದ ಟೈಟಲ್ಸ್‌ನಲ್ಲಿ ಅವರ ಹೆಸರು ಪಿ.ಬಿ.ಶ್ರೀನಿವಾಸನ್ ಎಂದು ಉಲ್ಲೇಖಿಸಲ್ಪಟ್ಟಿತ್ತು!)


ಇದರ ರಾಗ ಸಂಯೋಜನೆ ಒಂದು ರೀತಿ tricky ಅನಿಸುವ ರೀತಿಯಲ್ಲಿದೆ.  ಒಂದು ಕೋನದಲ್ಲಿ ನೋಡಿದರೆ ಹಿಂದೋಳ ಅಥವಾ ಮಾಲಕೌಂಸ್ ಮುಖ್ಯ ರಾಗವಾಗಿ ನಡುವೆ  ಚಂದ್ರಕೌಂಸ್ ಇತ್ಯಾದಿ ಛಾಯೆ ಗೋಚರಿಸುತ್ತದೆ.  ಇನ್ನೊಂದು ಕೋನದಲ್ಲಿ ನೋಡಿದರೆ ಶುದ್ಧ ಧನ್ಯಾಸಿ, ಭೀಮ್ ಪಲಾಸ್, ಸುಮನೇಶ ರಂಜಿನಿ, ಮಧುವಂತಿ ಇವುಗಳ ಮಿಶ್ರಣವಾಗಿ ಕಾಣುತ್ತದೆ. ಬಾಗಿಲನು ತೆರೆದು ಎಂಬುದನ್ನು ನೀಸಾ ಗಸ ಸಾನೀ ಸ ಸ ಸಾ ಎಂದು ಹಾಡಿದರೆ ಹಿಂದೋಳ, ಮಾಪಾ ನಿಪ ಪಾಮಾ ಪ ಪ ಪಾ ಎಂದು ಹಾಡಿದರೆ ಶುದ್ಧ ಧನ್ಯಾಸಿ. ಹಿಂದೋಳ ಅಂದುಕೊಂಡರೆ ಮೂಲ ಹಾಡು A Sharp ಶ್ರುತಿಯಲ್ಲಿದೆ.  ಶುದ್ಧ ಧನ್ಯಾಸಿ ಅಂದುಕೊಂಡರೆ F ಶ್ರುತಿಯಲ್ಲಿ. ಚಿತ್ರಗೀತೆಗಳಲ್ಲಿ ಪುರುಷ ಧ್ವನಿಗೆ  A Sharp ಶ್ರುತಿ ಆಯ್ದುಕೊಳ್ಳುವುದು ಕಮ್ಮಿ.  ಹೀಗಾಗಿ ಮುಖ್ಯ ರಾಗ ಶುದ್ಧ ಧನ್ಯಾಸಿ ಅಂದುಕೊಳ್ಳುವುದೇ ಸೂಕ್ತ.  ನನ್ನದು ಅದೇ ಆಯ್ಕೆ.  ಇತರ ರಾಗಗಳ ಛಾಯೆ ಕಾಣಿಸಿಕೊಳ್ಳುವುದು interlude ಮತ್ತು ಚರಣ ಭಾಗದಲ್ಲಿ.

ಇದಕ್ಕೆ ಅಳವಡಿಸಿದ ಜಂಪೆ ತಾಳದ ನಡೆ  ಕೂಡ ಅಷ್ಟೇ  tricky. ಕೆಲವು ಪದಗಳು ಸಮದಲ್ಲಿ ಎತ್ತುಗಡೆಯಾದರೆ  ಇನ್ನು ಕೆಲವು ಒಂದಕ್ಷರ ಬಿಟ್ಟು.  ಆದರೆ ನಿರ್ದಿಷ್ಟ pattern ಇಲ್ಲ. ಹೀಗಾಗಿ ಬಹುತೇಕ ಗಾಯಕರು / ವಾದಕರು ಈ ಹಾಡನ್ನು ಯಥಾವತ್ ಮರುಸೃಷ್ಟಿಗೊಳಿಸುವಲ್ಲಿ ಸೋಲುತ್ತಾರೆ.  ‘ಮಾತ್ರೆ ಲೆಕ್ಕ ತಪ್ಪಿದರೆ ತಾಳಕೆ ಸಿಗದು..’ ಅನ್ನುವ ಪರಿಸ್ಥಿತಿ.  ಅದಕ್ಕೆ ಅನೇಕರು ಒಂದೆರಡು ಸಾಲು ಮೂಲಕ್ಕೆ ನಿಷ್ಠರಾಗಿದ್ದು ನಂತರ ತಮ್ಮ ಸ್ವಂತ ಶೈಲಿಯಲ್ಲಿ ಹಾಡುತ್ತಾರೆ. ಗೋಡೆ ಕಟ್ಟುವಾಗ ಕಲ್ಲುಗಳನ್ನು ನೇರವಾಗಿ ಒಂದರ ಮೇಲೆ ಇನ್ನೊಂದಿಡದೆ ಸ್ವಲ್ಪ offset ಇರುವಂತೆ ಮಾಡಿ ಬಲವರ್ಧನೆ ಮಾಡುವಂತೆ ಈ ರೀತಿಯ ತಾಳದ offset  pattern ಮತ್ತು ರಾಗಗಳ ಹದವಾದ ಮಿಶ್ರಣದ plastering  ಈ ಹಾಡಿನ ಬಾಳ್ವಿಕೆ ಮೇಲೆ ಧನಾತ್ಮಕ ಪರಿಣಾಮ ಬೀರಿರಬಹುದೇನೋ ಎಂದು ನನಗನ್ನಿಸುವುದಿದೆ!


ಚಿತ್ರಗೀತೆಯಾದರೂ  ಆಕಾಶವಾಣಿ ಬೆಂಗಳೂರಿನ ಗೀತಾರಾಧನ ಕಾರ್ಯಕ್ರಮದಲ್ಲಿ ಸ್ಥಾನ ಪಡೆಯುತ್ತಿದ್ದುದು ಇದಕ್ಕೆ ಸಂದ ಗೌರವ. ಅನೇಕ ಶಾಸ್ತ್ರೀಯ ನೃತ್ಯಪಟುಗಳೂ ಒಂದು ಚರಣದ ವರೆಗೆ ಇದೇ ಧಾಟಿಯನ್ನು ಉಳಿಸಿಕೊಂಡು ಈ ಹಾಡನ್ನು ರಂಗದಲ್ಲಿ ಬಳಸಿಕೊಳ್ಳುವುದುಂಟು.  ಆದರೆ ಹಾಡುವವರು ಮೂಲದಲ್ಲಿರುವ ಇತರ ರಾಗಗಳ ಛಾಯೆ ಹೊಮ್ಮಿಸುವಲ್ಲಿ ಸೋತು ಅಲ್ಲಿ ಏಕತಾನತೆ ಕಾಣಿಸಿಕೊಳ್ಳುತ್ತದೆ.  ನೃತ್ಯ ಪ್ರದರ್ಶನದಲ್ಲಿ ಅನಿವಾರ್ಯವಾದ ಪುನರಾವರ್ತನೆ ಕೂಡ ಇದಕ್ಕೆ ಇನ್ನೊಂದು ಕಾರಣ. 


ಮೊದಲು ಟಿ.ಚಲಪತಿ ರಾವ್ ಅವರ ಸಹಾಯಕರಾಗಿದ್ದ ಎಂ. ವೆಂಕಟರಾಜು  ಅತ್ಯುತ್ತಮ ಆರ್ಕೆಷ್ಟ್ರಾ ಬಳಕೆಗೆ   ಪ್ರಸಿದ್ಧರು. ಆರ್ಕೆಷ್ಟ್ರಾ ನಿರ್ವಹಣೆಯಲ್ಲಿ ಅವರ ಬಲಗೈ ಆಗಿದ್ದವರು ಅಚ್ಯುತನ್ ಎಂಬ ಅರೇಂಜರ್.  ಈ ಹಾಡಲ್ಲಿ ತಾಳವಾದ್ಯವಾಗಿ ತಬ್ಲಾ ಇದ್ದು triangle ಬಳಸಿ ಭಜನೆ ತಾಳದ ಪರಿಣಾಮ ಉಂಟು ಮಾಡಲಾಗಿದೆ.  Vibra phone, ಸಿತಾರ್, ಗ್ರೂಪ್ ವಯಲಿನ್ಸ್, ಚೇಲೊ, ಸೊಲೊ ವಯಲಿನ್, ಕೊಳಲುಗಳನ್ನು ಸುಂದರವಾಗಿ ಬಳಸಲಾಗಿದೆ. ಆದಿಮೂಲ ಎಂದು,  ಬಿಡದೆ ನಿನ್ನನು ಭಜಿಸೆ ಮತ್ತು ಭಕ್ತ ವತ್ಸಲ ನಿನಗೆ ಭಾಗಗಳಲ್ಲಿ ನೀಡಲಾದ ಒಂದು ತಾಳದಷ್ಟು pause ಹಾಡಿನ ಅಂದ ಹೆಚ್ಚಿಸಿದೆ. ಹಾಡಿನ ಚಿತ್ರಣದಲ್ಲಿ ಒಳಗೊಂಡಿರುವ ಕೊರಡೆ ಏಟುಗಳನ್ನು ಲಯಬದ್ಧವಾದ cymbals ನಾದಕ್ಕೆ ಹೊಂದಿಸಲಾಗಿದೆ. ಮೂರು ಚರಣಗಳಿರುವಾಗ ಒಂದು ಮತ್ತು ಮೂರನೇ ಚರಣ ಒಂದು ರೀತಿ, ಎರಡನೇ ಚರಣ ಬೇರೊಂದು ರೀತಿ  ಇರುವ ಸಂಪ್ರದಾಯವನ್ನೂ ಇಲ್ಲೂ ಪಾಲಿಸಲಾಗಿದೆ.  ಮೂರು ಚರಣಗಳಿಗಿಂತ ಮುನ್ನ ಬರುವ interludeಗಳೂ ವಿಭಿನ್ನವಾಗಿವೆ. ಸಿತಾರ್, ವಯಲಿನ್ಸ್ ಇತ್ಯಾದಿಗಳನ್ನೊಳಗೊಂಡು ಮಂದಿರದ ಘಂಟಾನಾದದೊಂದಿಗೆ ಕೊನೆಗೊಳ್ಳುವ  climax ಭಾಗದ ಸಂಯೋಜನೆಯಂತೂ ಅತ್ಯದ್ಭುತ.

ಚಿತ್ರದಲ್ಲಿ ಈ ಹಾಡು ಆರಂಭವಾಗುವುದಕ್ಕೆ  ಮೊದಲು ಬರುವ ದೀನ ನಾನು ಸಮಸ್ತ ಲೋಕಕೆ ದಾನಿ ನೀನು ಎಂಬ ಉಗಾಭೋಗ ಶೈಲಿಯಲ್ಲಿ ಹಾಡಲಾದ ಭಾಗ ಟಿ.ವಿ., ಅಂತರ್ಜಾಲ ಯುಗ ಆರಂಭವಾದ ಮೇಲೆ ಈ ಹಾಡಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.  ಆದರೆ ಮೊದಲು ರೇಡಿಯೊದಲ್ಲಿ ಕೇಳಿ ಬರುತ್ತಿದ್ದ ಗ್ರಾಮೊಫೋನ್ ರೆಕಾರ್ಡ್ versionನಲ್ಲಿ ಇದು ಇರಲಿಲ್ಲ.  ವಾಸ್ತವವಾಗಿ ಈ  ಭಾಗ  ಕನಕದಾಸ ವಿರಚಿತ ಭಾಮಿನಿ ಷಟ್ಪದಿ ಛಂದಸ್ಸಿನ  ಹರಿಭಕ್ತಿಸಾರದ  49ನೆಯ ಪದ್ಯ. ಇಲ್ಲಿ 3 - 4 ಮಾತ್ರೆಗಳ ಹರಹು ಮತ್ತು ಆದಿ ಪ್ರಾಸ ಇರುವುದನ್ನು ಗಮನಿಸಬಹುದು. ಈ ವಿಚಾರದ ಮೇಲೆ ಬೆಳಕು ಚೆಲ್ಲಿದ ನಾರಾಯಣೀ ದಾಮೋದರ್ ಅವರಿಗೆ ನಾನು ಕೃತಜ್ಞ.

ದೀನ ನಾನು ಸಮಸ್ತ ಲೋಕಕೆ
ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು
ಏನ ಬಲ್ಲೆನು ನಾನು ನೆರೆ ಸು
ಜ್ಞಾನಮೂರುತಿ ನೀನು ನಿನ್ನ ಸ
ಮಾನರುಂಟೇ ದೇವ ರಕ್ಷಿಸು ನಮ್ಮನನವರತ

ಹಾಡಿನ ಸಂಯೋಜನೆಯಲ್ಲಿ ಪದಗಳನ್ನು ಅನಿರ್ದಿಷ್ಟ patternನಲ್ಲಿ 5 ಅಕ್ಷರದ ಜಂಪೆ ತಾಳಕ್ಕೆ ಹೊಂದಿಸಿದ್ದನ್ನು ಇಲ್ಲಿ ಗಮನಿಸಿ.

ಬಾಗಿಲನು | ತೆರೆದು || ಸೇವೆಯನು | ಕೊಡೊ ಹರಿಯೆ ||
,ಬಾಗಿಲನು | ತೆರೆದು || ಸೇವೆಯನು | ಕೊಡೊ ಹರಿಯೆ ||
,ಕೂಗಿದರೂ | ,ಧ್ವನಿ ಕೇಳ || ಲಿಲ್ಲವೇ | ,ನರಹರಿಯೆ ||
ಬಾಗಿಲನು | ತೆರೆದು ||

,ಪರಮಪದ | ದೊಳಗೆ ವಿಷ || ಧರನ ತಲ್ | ಪದಲಿ ನೀ ||
,ಸಿರಿಸಹಿತ | , ಕ್ಷೀರವಾ || ರಿಧಿಯೊಳಿರ | ಲು.....||
,ಕರಿರಾಜ | ಕಷ್ಟದಲಿ  || ,ಆದಿ ಮೂ | ಲ ಎಂದು  || ...  ||
,ಕರೆಯಲಾ | ಕ್ಷಣ ಬಂದು ||
,ಒದಗಿದೆಯೋ |,ನರಹರಿಯೇ ||
ಬಾಗಿಲನು | ತೆರೆದು ||

,ಕಡುಕೋಪ | ದಿಂ ಖಳನು || ,ಖಡ್ಗವನೆ | ಪಿಡಿದು ||
,ನಿನ್ನೊಡೆಯ | ,ಎಲ್ಲಿಹನು  || ಎಂದು ನುಡಿ | ಯೇ  ||
,ಧೃಢ ಭಕುತಿ | ಯಲಿ ಶಿಶುವು || ,ಬಿಡದೆ ನಿ | ನ್ನನು ಭಜಿಸೇ || ..  ||
,ಸಡಗರದಿ | ಸ್ತಂಭದಿಂ || ,ದೊಡೆದೆ | ,ನರಹರಿಯೇ ||
ಬಾಗಿಲನು | ತೆರೆದು ||

,ಯಮಸುತನ | ರಾಣಿಗೆ ಅ|| ಕ್ಷಯ ವಸನ | ವ ಇತ್ತೆ  ||
,ಸಮಯದಲಿ | , ಅಜಮಿಳನ ||ಪೊರೆದೆ |...  ||
,ಸಮಯಾಸ | ಮಯವುಂಟೆ || ,ಭಕ್ತವ | ತ್ಸಲ | ನಿನಗೆ..|| ...||
,ಕಮಲಾಕ್ಷ | ,ಕಾಗಿನೆಲೆ || ಯಾದಿ ಕೇ | ಶವನೇ || 
,ಬಾಗಿಲನು | ತೆರೆದು || ಸೇವೆಯನು | ಕೊಡೊ ಹರಿಯೆ ||
,ಬಾಗಿಲನು | ತೆರೆದು || ಸೇವೆಯನು | ಕೊಡೊ ಹರಿಯೆ ||
,ಕೂಗಿದರೂ | ,ಧ್ವನಿ ಕೇಳ || ಲಿಲ್ಲವೇ | ,ನರಹರಿಯೆ ||
ಬಾಗಿಲನು | ತೆರೆದು ||
ಬಾಗಿಲನು | ತೆರೆದು ||
ಬಾಗಿಲನು | ತೆರೆದು ||
ಸೇವೆಯನು | ಕೊಡೊ ಹರಿಯೇ ||

ಇಲ್ಲಿ ಆದಿ ಪ್ರಾಸದ ಜೊತೆ ಅಲ್ಲಲ್ಲಿ ಒಳ ಪ್ರಾಸವೂ ಇರುವುದನ್ನು ಗಮನಿಸಬಹುದು. 17ನೇ ಶತಮಾನದಲ್ಲೇ ಕನಕದಾಸರು ಬಳಸಿರುವ ಭಾಷೆ ಈಗಿನ ಆಧುನಿಕ ಕನ್ನಡವನ್ನು  ಹೋಲುವುದು ಅಚ್ಚರಿ ಮೂಡಿಸುತ್ತದೆ. 19ನೇ ಶತಮಾನದ ಎಷ್ಟೋ ದಾಖಲೆಗಳಲ್ಲಿ ಖಂಡಿತವಾಗಿಯೂ ಇಷ್ಟು ಸ್ಪಷ್ಟವಾದ ಸರಳ ಕನ್ನಡ ಇರಲಿಕ್ಕಿಲ್ಲ.

ಕೇಳಿದಷ್ಟೂ ಇನೂ ಇನ್ನೂ ಕೇಳಬೇಕೆನ್ನಿಸುವ ಈ ಹಾಡನ್ನು ಈಗ ಒಂದೆರಡು ಸಾಲುಗಳ ಪೂರ್ವಭಾವೀ ಡಯಲಾಗ್ ಸಮೇತ ಇನ್ನೊಮ್ಮೆ ಆಲಿಸಿ.  ಬಿಕ್ಕಳಿಕೆ, ನಿಟ್ಟುಸಿರುಗಳಿಲ್ಲದೆ ಗಾಯನದಲ್ಲೇ ಪಿ.ಬಿ.ಎಸ್ ಅವರು ವಿಷಾದ ಭಾವ ಅಭಿವ್ಯಕ್ತಗೊಳಿಸಿರುವುದನ್ನು ಅನುಭವಿಸಿ.






ಇದೇ ಹಾಡನ್ನು ವೇದಿಕೆಯೊಂದರಲ್ಲಿ ನಾನು ನುಡಿಸಿದ್ದು ಹೀಗೆ.