ಪತ್ರಿಕೆಗೆ ಪತ್ರ

ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ, ಗಮನಕ್ಕೆ ಬಂದ ಸ್ವಾರಸ್ಯಕರ ಸಂಗತಿಗಳ ಬಗ್ಗೆ  ಅಥವಾ ಸ್ಥಳೀಯ ಸಮಸ್ಯೆಗಳ ಬಗ್ಗೆ ಪತ್ರಿಕೆಗಳಿಗೆ  ಸಂಕ್ಷಿಪ್ತವಾಗಿ ಪತ್ರ ಬರೆಯುವುದೂ ನನ್ನದೊಂದು ಹವ್ಯಾಸ.  ನಾನು ಉದಯವಾಣಿಯ ಕಾಯಂ ಓದುಗ ಆದುದರಿಂದ ಹೆಚ್ಚಿನ ಪತ್ರಗಳು ಅದರಲ್ಲೇ ಪ್ರಕಟವಾಗಿವೆ.  ವಿಜಯ ಕರ್ನಾಟಕ, ಕನ್ನಡ ಪ್ರಭ, ಸುಧಾ,  ತರಂಗ, ಕಸ್ತೂರಿಗಳಲ್ಲೂ ಕೆಲವು ಪ್ರಕಟವಾಗಿವೆ.  ಇದರಿಂದ ಯಾವುದೇ ಸಮಸ್ಯೆ ಪರಿಹಾರವಾಗುತ್ತದೆ ಎಂದೇನೂ ಅಲ್ಲ.  ಎಲ್ಲೆಲ್ಲೋ ದೂರದಲ್ಲಿರುವ ಸ್ನೇಹಿತರು, ಪರಿಚಯಸ್ಥರಲ್ಲಿ ನನ್ನ ನೆನಪನ್ನು ಆಗಾಗ refresh ಮಾಡುವುದೇ ಇದರ ಉದ್ದೇಶ.  ನಿಮ್ಮ ಪತ್ರವನ್ನು ಇಂತಹ ದಿನದ ಪತ್ರಿಕೆಯಲ್ಲಿ   ನೋಡಿದೆ ಎಂದು ಯಾರಾದರೂ ಹೇಳಿದರೆ ಏನೋ ಒಂದು ಖುಶಿ.  ಕಳೆದ ಕೆಲವು ವರ್ಷಗಳಲ್ಲಿ  ಪ್ರಕಟವಾದ ಇಂತಹ ಒಂದಷ್ಟು ಪತ್ರಗಳನ್ನು ಇಲ್ಲಿ ಪ್ರಸ್ತುತ ಪಡಿಸಿದ್ದೇನೆ.  ವಿರಾಮದ ವೇಳೆಯಲ್ಲಿ ಒಂದೊಂದಾಗಿ ಓದಿ.  ಒಮ್ಮೆಗೇ ಓದಿದರೆ ಬೋರ್ ಆಗಬಹುದು!

ಚುನಾವಣಾ ನಾಮಪತ್ರ ಮೆರವಣಿಗೆ ಕುರಿತು ಪ್ಯಾನ್ ಪೇಪರ್ ಪತ್ರ.














Note : ಹಳದಿಯಲ್ಲಿ ಹೈಲೈಟ್ ಮಾಡಿದ ಅಂಶವನ್ನು ಪತ್ರಿಕೆಯವರು ತಾವಾಗಿ ಸೇರಿಸಿರುವುದು!




ನಾನು ಕಳಿಸದಿದ್ದರೂ ಇನ್ನೊಂದು ಪತ್ರಿಕೆ ಈ ಪತ್ರವನ್ನು ತಾನಾಗಿ share ಮಾಡಿಕೊಂಡಿದೆ!






































ಕಸ್ತೂರಿ ಜೂನ್ 2014

ಗತ ವೈಭವದತ್ತ
ಕಸ್ತೂರಿಯು ಮತ್ತೆ ಗತ ವೈಭವದತ್ತ ಸಾಗುತ್ತಿರುವ ಎಲ್ಲ ಲಕ್ಷಣಗಳೂ ಕಂಡುಬರತೊಡಗಿವೆ.  ಪ್ರಕಟವಾಗುವ ವ್ಯಂಗ್ಯ ಚಿತ್ರಗಳೂ ಕಸ್ತೂರಿಯ ಗುಣಮಟ್ಟದವೇ ಆಗಿರಲಿ. ಮಾಸ ಭವಿಷ್ಯ ದಯವಿಟ್ಟು ಬೇಡ.  ಅವರವರ ಭವಿಷ್ಯವನ್ನು ಅವರವರೇ ರೂಪಿಸಿಕೊಳ್ಳುವಂತೆ ಪ್ರಚೋದಿಸುವ ಲೇಖನಗಳು ಮೂಡಿ ಬರಲಿ.
 
ಉದಯವಾಣಿ 5-4-2014

ಆಮಂತ್ರಣ ಆಭಾಸ

ಮದುವೆ, ಮುಂಜಿ ಮುಂತಾದ ಸಮಾರಂಭಗಳ ಆಮಂತ್ರಣ ಪತ್ರಿಕೆಗಳಲ್ಲಿ ಒಕ್ಕಣೆಯು ಉತ್ತಮ ಪುರುಷ(first person)ದಲ್ಲಿದ್ದರೂ ಅತಿಥೇಯರು ತಮ್ಮ ಹೆಸರುಗಳ ಹಿಂದೆ ಶ್ರೀ ಅಥವಾ ಶ್ರೀಮತಿ ಎಂದು ಹಾಕಿಕೊಳ್ಳುವುದು ವಾಡಿಕೆ.  ಆದರೆ ಈ ಗೌರವ ಸೂಚಕಗಳು ಇತರರಿಗೆ ಮಾತ್ರ ಬಳಸಬೇಕಾದವುಗಳಾಗಿದ್ದು ತಮ್ಮನ್ನು ತಾವೇ ಶ್ರೀ ಇಂಥವ ಅಥವಾ ಶ್ರೀಮತಿ ಇಂಥವಳು ಎಂದು ಪರಿಚಯಿಸಿಕೊಳ್ಳುವುದು ಆಭಾಸ ಎನ್ನಿಸುವುದಿಲ್ಲವೇ?


ವಿಜಯ ಕರ್ನಾಟಕ ಮುಖಪುಟ 27-4-2013

ಅಕ್ಕಿ : ಪೊಳ್ಳು ಭರವಸೆ
ಬಡವರಿಗೆ ಒಂದು ರೂ ದರದಲ್ಲಿ ಅಕ್ಕಿ ಕೊಡುತ್ತೇವೆಂಬ ರಾಜಕೀಯ ಪಕ್ಷಗಳ ಪೊಳ್ಳು ಭರವಸೆಗಳನ್ನು ಪ್ರಜ್ಞಾವಂತ ನಾಗರಿಕರೆಲ್ಲರೂ ಖಂಡಿಸಬೇಕು.  ಇದಕ್ಕೆ ಬೇಕಾಗುವ ಸಂಪನ್ಮೂಲ   ಸಾಮಾನ್ಯ ತೆರಿಗೆದಾರರ ಹಣದಿಂದ  ಬರಬೇಕಲ್ಲದೆ ಆ ರಾಜಕೀಯ ಪಕ್ಷಗಳು ತಮ್ಮ ಖಜಾನೆಯಿಂದೇನೂ ಬರುವುದಿಲ್ಲ. ಇದರ ಬದಲು ಎಲ್ಲರಿಗೂ ಕೆ.ಜಿ.ಗೆ ಹತ್ತರಿಂದ ಹದಿನೈದು ರೂಪಾಯಿ ದರದಲ್ಲಿ ಅಕ್ಕಿ ಸಿಗುವಂತೆ ಮಾಡಿದರೆ ಅದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತದೆ.

ವಿಜಯ ಕರ್ನಾಟಕ ಮುಖಪುಟ 16-2-2013
ಉದಯವಾಣಿ 19-2-2013
ಹಿರಿಯರ ಬಡ್ಡಿಗೆ ಕರ ಬೇಡ

ಇತ್ತೀಚಿನ ವರದಿಗಳ ಪ್ರಕಾರ ಹಣದುಬ್ಬರ ದರ 10.8 % ಸಮೀಪ ಇದೆ.  ಬ್ಯಾಂಕುಗಳು ಠೇವಣಿಗಳ ಮೇಲೆ ಹೆಚ್ಚೆಂದರೆ 9.5 % ಬಡ್ಡಿ ನೀಡಬಹುದು.  ಹೀಗಾಗಿ ಬ್ಯಾಂಕಿನಲ್ಲಿರಿಸಿದ ಹಣದ ಮೌಲ್ಯ ಕರಗುತ್ತಾ ಬರುವುದರಲ್ಲಿ ಯಾವ ಸಂಶಯವೂ ಇಲ್ಲ.  ದುರ್ಭಿಕ್ಷದಲ್ಲಿ ಅಧಿಕಮಾಸದಂತೆ ಈ ಋಣಾತ್ಮಕ ಬಡ್ಡಿಯ ಮೇಲೂ ಕರ ಭಾರ ಬೇರೆ.  ಇಂತಹ ಪರಿಸ್ಥಿತಿಯಲ್ಲಿ .ಉಳಿತಾಯದ ಹಣದಲ್ಲಿಯೇ ಜೀವನ ಸಾಗಿಸಬೇಕಾದ ನಿವೃತ್ತರು ಹಾಗೂ ಹಿರಿಯ ನಾಗರಿಕರ  ಮಟ್ಟಿಗಾದರೂ ಬಡ್ಡಿಮೇಲಿನ ತೆರಿಗೆಯನ್ನು ತೆಗೆದು ಹಾಕುವ ಅಗತ್ಯವಿದೆ. ಈ ಸಲದ ಬಜೆಟ್ಟಲ್ಲಾದರೂ ವಿತ್ತ  ಮಂತ್ರಿಗಳು ಇತ್ತ ಚಿತ್ತ ಹರಿಸುವರೆಂದು ಆಶಿಸೋಣವೇ?


ವಿಜಯಕರ್ನಾಟಕ  ಮುಖಪುಟದಲ್ಲಿ 28-1-2013

ರೈಲಿನೊಳಗೆ ಮಾಹಿತಿ ಬೇಕು
ರೈಲ್ವೇ ನಿಲ್ದಾಣಗಳಲ್ಲಿ ರೈಲುಗಾಡಿಗಳ ಆಗಮನ ನಿರ್ಗಮನದ ಸಮಯ, ಪ್ಲಾಟ್ ಫಾರಂ ಸಂಖ್ಯೆ, ತಡವಾಗಿ ಚಲಿಸುತ್ತಿರುವ ಬಗ್ಗೆ ಮಾಹಿತಿ ಇತ್ಯಾದಿ ಬಿತ್ತರವಾಗುತ್ತಲೇ ಇರುತ್ತವೆ. ಆದರೆ ರೈಲುಗಾಡಿಗಳ ಒಳಗಿರುವವರಿಗೆ ಇದರ ಬಗ್ಗೆ ಯಾವ ಮಾಹಿತಿಯೂ ಇರುವುದಿಲ್ಲ. ವಿಮಾನ ಹಾಗೂ ಬೆಂಗಳೂರಿನ ಕೆಲವು ಸಿಟಿ ಬಸ್ಸುಗಳಲ್ಲಿರುವಂತೆ ರೈಲಿನಲ್ಲಿಯೂ ಪ್ರಯಾಣಿಕರಿಗೆ ಸೂಕ್ತ ಮಾಹಿತಿಗಳನ್ನು ಆಗಾಗ ಒದಗಿಸುವ ವ್ಯವಸ್ಥೆಯ ಅಗತ್ಯವಿದೆ. ತಡವಾಗಿ ಚಲಿಸುತ್ತಿದ್ದರೆ ಆ ಬಗ್ಗೆ ಮಾಹಿತಿ, ನಡುದಾರಿಯಲ್ಲಿ ನಿಂತಿದ್ದರೆ ಅದಕ್ಕೆ ಕಾರಣ , ಮುಂದೆ ಬರುವ ನಿಲ್ದಾಣದ ಹೆಸರು ಹಾಗೂ ಅಲ್ಲಿಗೆ ತಲುಪಲಿರುವ ಸಮಯ, ಪ್ಲಾಟ್ ಫಾರ್ಮ್ ಸಂಖ್ಯೆ ಹಾಗು ಪಾರ್ಶ್ವ ಮುಂತಾದ ವಿಷಯಗಳು ಪ್ರತಿ ಬೋಗಿಯಲ್ಲಿರುವ ಪ್ರಯಾಣಿಕರಿಗೆ ತಿಳಿಯುವಂತಾಗಬೇಕು. ಈಗಿನ ಎಲೆಕ್ಟ್ರಾನಿಕ್ ಯುಗದಲ್ಲಿ ಇದೇನೂ ಕಷ್ಟಸಾಧ್ಯವಲ್ಲ.


ಉದಯವಾಣಿ 19-6-2012
ಅರಬೀ ಸಮುದ್ರ ಸ್ಥಳಾಂತರಗೊಳ್ಳಲಿ !
ಬಡಪಾಯಿ ನೇತ್ರಾವತಿಯನ್ನು ತಿರುಗಿಸುವ ಯೋಚನೆಯನ್ನು ಬಿಟ್ಟು  ಅರಬೀ ಸಮುದ್ರವನ್ನೇ ಬೆಂಗಳೂರಿನ ಹೊರವಲಯಕ್ಕೆ ಸ್ಥಳಾಂತರಿಸುವ ಯೋಜನೆ ರೂಪಿಸಿದರೆ ಬಹಳಷ್ಟು ಲಾಭಗಳಿವೆ.
1. ಅಗಾಧ  ಪ್ರಮಾಣದ ಜಲರಾಶಿ ಸುಮ್ಮನೆ ತೆರೆಗಳನ್ನೆಬ್ಬಿಸುತ್ತಾ  ವರ್ಷವಿಡೀ ಪೋಲಾಗುವುದು ತಪ್ಪುತ್ತದೆ.
2. ಕರಾವಳಿಯನ್ನು ಕಾಡುವ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ದೊರಕಿದಂತಾಗಿ ವರ್ಷ ವರ್ಷವೂ ಇದಕ್ಕಾಗಿ ವ್ಯರ್ಥವಾಗುವ ಬಹಳಷ್ಟು ಹಣ  ಉಳಿಯುತ್ತದೆ.
3. ಸಿಂಗಾಪುರ್ ಆಗಲು ಹೊರಟಿರುವ ಬೆಂಗಳೂರಿಗೆ ಸುಂದರವಾದ ಬೀಚ್ ಗಳು ದೊರಕಿ ಪ್ರವಾಸೋದ್ಯಮ  ಅಭಿವೃದ್ಧಿಗೊಳ್ಳುತ್ತದೆ.
4. ರಾಜಧಾನಿಯಲ್ಲೇ ಸರ್ವಋತು ಬಂದರು ಲಭ್ಯವಾಗಿ ಆಮದು ರಫ್ತು ವ್ಯವಹಾರಕ್ಕೆ ಉತ್ತೇಜನ ದೊರಕುತ್ತದೆ.
5. ಕರಾವಳಿ ಭಾಗದವರಿಗೆ ಮಾತ್ರ ಸೀಮಿತವಾಗಿದ್ದ ಮೀನುಗಾರಿಕೆಯ ಅವಕಾಶ ಇತರರಿಗೂ ದೊರಕಿ ಅಸಮಾನತೆ ಹೋಗಲಾಡಿಸಿದಂತಾಗುವುದಲ್ಲದೆ ಬೆಂಗಳೂರಿಗರಿಗೆ ತಾಜಾ ಸಮುದ್ರೋತ್ಪನ್ನಗಳು ದಿನವೂ ದೊರೆಯುತ್ತವೆ.
6. ಬೆಂಗಳೂರಿಗೆ ಪ್ರಯಾಣಿಕ ಹಡಗುಗಳ ಯಾನ ಆರಂಭಗೊಂಡು ರೈಲು, ಬಸ್ಸು, ವಿಮಾನಗಳ ಒತ್ತಡ ನಿವಾರಣೆಯಾಗುತ್ತದೆ.
7. ಎಲ್ಲಕ್ಕಿಂತ ದೊಡ್ಡ ಲಾಭವಾಗಿ ತಿರುಗಿಸುವ ಅಗತ್ಯವೇ ಇಲ್ಲದೆ ನೇತ್ರಾವತಿಯ  ಜೊತೆಗೆ ನಂದಿನಿ, ಫಲ್ಗುಣಿ, ಶಾಂಭವಿ, ಶರಾವತಿ, ಕಾಳಿ ಮುಂತಾದ ಎಲ್ಲ ಪಶ್ಚಿಮಾಭಿಮುಖಿ ನದಿಗಳು ತಾವಾಗಿ ದಿಕ್ಕು ಬದಲಿಸುತ್ತವೆ.
(ನೇತ್ರಾವತಿ ನದಿ ನೀರನ್ನು ತಿರುಗಿಸುವ ಎತ್ತಿನ ಹೊಳೆ ಯೋಜನೆಗೆ ಪ್ರತಿಭಟನಾ ರೂಪದ ಪತ್ರವಿದು)

ಉದಯವಾಣಿ 28-11-2011 ಮತ್ತು ವಿಜಯ ಕರ್ನಾಟಕ 30-11-2011
ಬಡ್ಡಿಗೆ ತೆರಿಗೆ
ಉಳಿತಾಯ ಮಾಡಿದ ಹಣಕ್ಕೆ ಸಿಗುವ ಬಡ್ಡಿ ದರವು  ಹಣದುಬ್ಬರ ದರಕ್ಕಿಂತ ಕಮ್ಮಿ ಇದ್ದರೆ  ಆ ಹಣದ ಮೌಲ್ಯ ಕರಗುತ್ತಾ ಬರುತ್ತದೆಯಲ್ಲವೇ?  ಹೀಗಾಗಿ ಹಣದುಬ್ಬರ ದರಕ್ಕಿಂತ ಹೆಚ್ಚಿನ ದರದ ಬಡ್ಡಿ ದೊರಕಿದರೆ ಅದು ಆದಾಯವೆನಿಸೀತೇ ಹೊರತು ಅದಕ್ಕಿಂತ ಕಡಿಮೆ ದರದ ಬಡ್ಡಿಯನ್ನು ಆದಾಯವೆಂದು ಪರಿಗಣಿಸಲು ಹೇಗೆ ಸಾಧ್ಯ?  ಇದಕ್ಕೆ ತೆರಿಗೆ ವಿಧಿಸುವುದೆಂದರೆ  ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿದ ಮೂಲ ಧನವನ್ನೇ ಕಿತ್ತುಕೊಳ್ಳುವುದೆಂದು ಅರ್ಥ.  ಈ  ಅವೈಜ್ಞಾನಿಕ ಪದ್ಧತಿಯನ್ನು ಎಲ್ಲರೂ ಒಕ್ಕೊರಲಿನಿಂದ ಪ್ರತಿಭಟಿಸಬೇಕು. ಹೆಚ್ಚಿನ ದರದ ಬಡ್ಡಿಗೆ ಹಣದುಬ್ಬರದ ಅಂಶವನ್ನು ಕಳೆದು ಬೇಕಿದ್ದರೆ ತೆರಿಗೆ ವಿಧಿಸಲಿ.  ಇಲ್ಲವಾದರೆ ಉಳಿತಾಯ ಪ್ರವೃತ್ತಿಯನ್ನೇ ಅಪರೋಕ್ಷವಾಗಿ ನಿರುತ್ತೇಜನಗೊಳಿಸಿದಂತೆ.

ಸುಧಾ 6-10-2011
ರಾಮ ರಾವಣರಿಗೆ ಒಂದೇ ಅಸ್ತ್ರ
ರಾಮ ರಾವಣರಿಬ್ಬರಿಗೂ ಒಂದೇ ಕಂಪೆನಿ ಶಸ್ತ್ರಾಸ್ತ್ರ ಪೂರೈಸಿತೆ?  ಉದಯ ವಾಹಿನಿಯ ಸೀತೆ ಧಾರಾವಾಹಿ ನೋಡಿದರೆ ಹೌದೆನ್ನಿಸುತ್ತದೆ.  ರಾಮ್ ರಾವಣ ಇಬ್ಬರ ಪಾಳಯದವರು ಉಪಯೋಗಿಸುವ ಬಾಣಗಳ ಬಣ್ಣ, ಗಾತ್ರ - ಕೊನೆಗೆ ಬಾಣದ ಮೊನೆಗಳನ್ನು ಭದ್ರಪಡಿಸಲು ಉಪಯೋಗಿಸುವ ರಿವಿಟ್ ಎಲ್ಲವೂ ತದ್ರೂಪಿ!

ಉದಯವಾಣಿ 13-12-2010
ಆಕಾಶವಾಣಿಯ ವಾರ್ತೆಗಳು
ಸುದ್ದಿಗಳಿಗಾಗಿ ಅಲ್ಲವಾದರೂ ಗಡಿಯಾರವನ್ನು ಸರಿಹೊಂದಿಸಲೆಂದು ಆಕಾಶವಾಣಿಯ ವಾರ್ತೆಗಳನ್ನು ಕೇಳುವವರಲ್ಲಿ ನಾನೂ ಒಬ್ಬ.  ಇತ್ತೀಚೆಗೆ ಕನ್ನಡ ವಾರ್ತೆಗಳ ಕೊನೆಯಲ್ಲಿ  ವಾಚಕರು ಮುಖ್ಯಾಂಶಗಳನ್ನು ಓದಿ ಮುಗಿಸುವ ಮೊದಲೇ ಹಠಾತ್ತಾಗಿ ಪ್ರಸಾರವು ಮೊಟಕುಗೊಂಡು ಧ್ವನಿಯೊಂದು ಆಕಾಶವಾಣಿ ಎಂದು ಒದರುತ್ತದೆ.   ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ಉದ್ಘೋಷಕರಲ್ಲಿ ಕೆಲವರು ಬೆಚ್ಚಿಬಿದ್ದು  ತತ್ ಕ್ಷಣ ವಾರ್ತಾಸಂಪರ್ಕವನ್ನು ಕತ್ತರಿಸಿ ಎಂದಿನಂತೆ ಮುಂದಿನ ಕಾರ್ಯಕ್ರಮದತ್ತ ಗಮನ ಹರಿಸಿದರೆ  ಇನ್ನು ಕೆಲವರು ತಮ್ಮದಲ್ಲದ ತಪ್ಪಿಗೆ  ವಿಷಾದ ಸೂಚಿಸಿ ಮುಂದುವರಿಯುತ್ತಾರೆ.  ಆಧುನಿಕ ತಂತ್ರಜ್ಞಾನದ ಅಳವಡಿಕೆಯ ಅಧ್ವಾನದಿಂದಲೋ  ಸಮನ್ವಯದ ಕೊರತೆಯಿಂದಲೋ ಹೀಗಾಗುತ್ತಿರಬಹುದು.  ಕೇಳುಗರಿಗೆ ಇರುಸುಮುರಿಸು ಉಂಟುಮಾಡುವ ಈ ವಿದ್ಯಮಾನವನ್ನು  ಪರಿಹರಿಸುವತ್ತ ಆಕಾಶವಾಣಿಯ ವರಿಷ್ಟರು ಗಮನ ಹರಿಸಲಿ.
(ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ)

ಕಸ್ತೂರಿ  ಸೆಪ್ಟಂಬರ್ 2010
ಶಂಕರ್ ಜೈಕಿಶನ್
ಹಿಂದಿ ಚಿತ್ರರಂಗದ ದೈತ್ಯ ಪ್ರತಿಭೆ ಶಂಕರ್ ಜೈಕಿಶನ್ ಅವರ ಕಾರ್ಯವೈಖರಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಲೇಖನ ತೀಸ್ರೀ ಕಸಂ ಅನನ್ಯವಾಗಿತ್ತು. ನೂರಾರು ವಾದ್ಯಗಳನ್ನು ಬಳಸಿಯೂ ಬ್ರಹ್ಮಚಾರಿ ಚಿತ್ರದ ಮೈ ಗಾವೂಂ ತುಮ್ ಸೋ ಜಾವೊ ದಂತಹ ಹಾಡುಗಳಲ್ಲಿ ರಾತ್ರಿಯ ನೀರವತೆಯನ್ನು  ಸೃಷ್ಟಿಸುವುದು  ಅವರಿಂದ ಮಾತ್ರ ಸಾಧ್ಯ.  ಅವರ ಹಾಡುಗಳಲ್ಲಿ ಆಗಾಗ ಕಾಣಿಸಿಕೊಳ್ಳುವ  ಕೊಳಲು, ಸಿತಾರ್, ಮ್ಯಾಂಡೊಲಿನ್,  ಎಕಾರ್ಡಿಯನ್ ಮುಂತಾದವುಗಳ ಚಿಕ್ಕ ಚಿಕ್ಕ ತುಣುಕುಗಳು ನೇರ ಎದೆಯನ್ನು ಇರಿಯುತ್ತವೆ.  ಇಲ್ಲಿ ಅವರ ಸಹಾಯಕರಾದ ಸೆಬಾಸ್ಟಿಯನ್, ದತ್ತಾರಾಮ್,  ಕೊಳಲುವಾದಕ ಸುಮಂತ್ ರಾಜ್,  ಸಿತಾರ್ ವಾದಕ ರಯೀಸ್ ಖಾನ್  ಹಾಗೂ ಅನಾಮಿಕರಾಗಿಯೇ ಉಳಿದ ಇನ್ನೆಷ್ಟೋ ಪ್ರತಿಭೆಗಳನ್ನು ನೆನೆಯುವುದು ಸೂಕ್ತ.

ಉದಯವಾಣಿ  27-4-2009
ಮತದಾನ ಭತ್ತೆ ದೊರಕಲಿ
ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಕೆಲವು ಸಲ ಮೈಲುಗಟ್ಟಲೆ ದೂರದಿಂದ ಬಂದು ತಾಸುಗಟ್ಟಲೆ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುವ ಪ್ರತಿ ಓರ್ವ ಅರ್ಹ ಮತದಾರನಿಗೆ ಸ್ಥಳದಲ್ಲೇ ಸಾಂಕೇತಿಕವಾಗಿ ಭತ್ತೆ ದೊರಕುವ  ವ್ಯವಸ್ಥೆ ಇದ್ದರೆ  ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ  ಮತದಾನದ ಪ್ರಮಾಣ ವೃದ್ಧಿಸಲು ಸಹಾಯವಾದೀತು. ತಮಗೇನೋ ಪುಕ್ಕಟೆ ಸಿಗುತ್ತದೆ, ಏಕೆ ಬಿಡುವುದು ಎಂಬ ಮಾನವ ಸಹಜ ಭಾವನೆಯನ್ನು ಪ್ರಚೋದಿಸಲು  ಕೊಡುವ ಈ ಮೊತ್ತ ಸರಕಾರಿ ಬೊಕ್ಕಸಕ್ಕೆ ಖಂಡಿತವಾಗಿಯೂ ಭಾರವಾಗದು.  ಸಹಕಾರಿ ಸಂಸ್ಥೆಗಳಲ್ಲಿ ಸಿಟ್ಟಿಂಗ್ ಫೀಸ್ ಎಂಬ ಹೆಸರಿನಲ್ಲಿ  ಈಗಾಗಲೇ ಇಂತಹ ವ್ಯವಸ್ಥೆ ಇದೆ.

ಉದಯವಾಣಿ  20-2-2009
ಕ್ಲಾಕ್ ಟವರ್ ಮರು ನಿರ್ಮಾಣಗೊಳ್ಳಲಿ
ಮಂಗಳೂರಿನ ಹೃದಯಭಾಗದಲ್ಲಿ ಶೋಭಾಯಮಾನವಾಗಿದ್ದ  ಕ್ಲಾಕ್ ಟವರನ್ನು ಕೆಲ ವರ್ಷಗಳ ಹಿಂದೆ ಅಭಿವೃದ್ಧಿಯ ಹೆಸರಿನಲ್ಲಿ  ರಾತ್ರೋರಾತ್ರಿ ಕೆಡವಲಾಗಿತ್ತು.  ಈಗ ರಸ್ತೆ ಕಾಂಕ್ರೀಟಿಕರಣಗೊಳ್ಳುತ್ತಿರುವ ಸಂದರ್ಭದಲ್ಲಿ  ಆ ಭಾಗದ ವಿನ್ಯಾಸ ಬದಲಾಗುತ್ತಿರುವುದು ಕಾಣುತ್ತದೆ.   ಅಲ್ಲಿ ವೃತ್ತ ಅಥವಾ ಕಾರಂಜಿಯ ಬದಲು ಹಿಂದೆ ಇದ್ದಂತೆ  ಕ್ಲಾಕ್ ಟವರ್ ಮರು ನಿರ್ಮಾಣವಾದರೆ  ಈಗಲೂ  ಅಂತೆಯೇ ಗುರುತಿಸಲ್ಪಡುವ ಆ ಜಾಗದ ಹೆಸರು ಅನ್ವರ್ಥವಾದೀತು.  ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮುಂದಾಳುಗಳು  ಈ ನಿಟ್ಟಿನಲ್ಲಿ ಯೋಚಿಸಲಿ.
(ಆ ಜಾಗ ಈಗಲೂ ಯಾವುದೇ ರಚನೆ ನಿರ್ಮಾಣಗೊಳ್ಳದೆ ಹಾಗೆಯೇ ಇರುವುದರಿಂದ  ಕ್ಲಾಕ್ ಟವರ್ ಮತ್ತೆ ಎದ್ದು ನಿಂತೀತೆಂಬ ಆಶಾ ಭಾವನೆ ಇನ್ನೂ ಇದೆ.)

ಉದಯವಾಣಿ 8-4-2008
ಸರಳತೆ, ಪ್ರಾಮಾಣಿಕತೆ, ಬದ್ಧತೆಗಳ ಎಸ್.ಪಿ.ಬಿ
ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಇತ್ತೀಚಿನ ಸಂಚಿಕೆಗಳಲ್ಲಿ ದಾಖಲಾದ ಮೂಲ ಗಾಯಕರ ಬಗೆಗಿನ ಕೆಲವೊಂದು ತಪ್ಪು ಮಾಹಿತಿಗಳ ಬಗ್ಗೆ  ಎಸ್.ಪಿ.ಬಿ ಅವರಿಗೊಂದು ಇ ಮೇಲ್ ಕಳಿಸಿದ್ದೆ.  ಐದೇ ನಿಮಿಷಗಳಲ್ಲಿ ಉತ್ತರಿಸಿದ ಅವರು  ಈ ಮಾಹಿತಿಗಳು ಬೇರೊಂದು ಮೂಲದಿಂದ ತಮಗೆ ದೊರಕುತ್ತಿರುವುದಾಗಿಯೂ, ಹೀಗಾಗದಂತೆ ಏನು ಮಾಡಬಹುದೆಂಬುದರ ಬಗ್ಗೆ ಯೋಚಿಸುವುದಾಗಿಯೂ, ಗಮನಕ್ಕೆ ತಂದುದಕ್ಕೆ ಧನ್ಯವಾದಗಳೆಂದೂ    ತಿಳಿಸಿದರು. ಲಕ್ಷಾಂತರ ವೀಕ್ಷಕರಲ್ಲಿ ಯ:ಕಶ್ಚಿತ್  ಓರ್ವನ ಇ ಮೇಲ್ ಗೆ  ಇಷ್ಟು ಶೀಘ್ರವಾಗಿ ಸ್ಪಂದಿಸಲು ಕಾರಣವಾದ  ಸರಳತೆ, ಪ್ರಾಮಾಣಿಕತೆ, ಬದ್ಧತೆಗಳೇ ಅವರ ಯಶಸ್ಸಿನ ಗುಟ್ಟಾಗಿರಬಹುದೇ?
(ಇತ್ತೀಚೆಗೆ ಈ ಕಾರ್ಯಕ್ರಮ ಏಕತಾನತೆಯಿಂದ ಸೊರಗುತ್ತಿರುವುದು ವಿಷಾದನೀಯ).

ಉದಯವಾಣಿ 30-11-2007
ಶಾಸ್ತ್ರೀಯ ಸಂಗೀತ ವಾಹಿನಿ
ಇತ್ತೀಚೆಗೆ ಮಂಗಳೂರಲ್ಲಿ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರ ಕಾರ್ಯಕ್ರಮ ನಡೆದ ಸಂದರ್ಭದಲ್ಲಿ ಶಾಸ್ತ್ರೀಯ ಸಂಗೀತಕ್ಕೆಂದೇ ಮೀಸಲಾದ ಜಾಹೀರಾತು ರಹಿತ ವಾಹಿನಿಯೊಂದರ ಅಗತ್ಯವಿದೆಯೆಂಬ ಪ್ರಸ್ತಾವ ಬಂದಿತ್ತು.  ಇಂತಹ ರಾಗಂ ಎಂಬ ಶ್ರಾವ್ಯ ವಾಹಿನಿಯೊಂದು ದೂರದರ್ಶನದ ಡಿ.ಟಿ.ಹೆಚ್ ನಲ್ಲಿ ಲಭ್ಯವಿರುವುದು ಅನೇಕರಿಗೆ ತಿಳಿದಿರಲಾರದು.  ಇಲ್ಲಿ ದಿನದ 24 ಗಂಟೆಯೂ ಶಾಸ್ತ್ರೀಯ ಸಂಗೀತ ಆಧಾರಿತ ಕಾರ್ಯಕ್ರಮಗಳು ಜಾಹೀರಾತುರಹಿತವಾಗಿ ಪ್ರಸಾರವಾಗುತ್ತಿರುತ್ತವೆ.  ಆಗಾಗ ಧ್ವನಿಯ ಗುಣಮಟ್ಟ ಕಳಪೆ ಇರುವುದನ್ನು ಸರಿಪಡಿಸಿದರೆ ಸಂಗೀತಪ್ರಿಯರಿಗೆ ಇದೊಂದು ವರದಾನವೇ ಸರಿ.  ಸದ್ಯ ಇದು ಕರ್ನಾಟಕ ಸಂಗೀತಕ್ಕೆ ಮೀಸಲಾಗಿದ್ದು ಆಸಕ್ತರು ಒತ್ತಡ ಹೇರಿದರೆ ಹಿಂದುಸ್ತಾನೀ ಸಂಗೀತಕ್ಕೂ ಅವಕಾಶ  ಸಿಗದಿರಲಾರದು.

ಉದಯವಾಣಿ 2-5-2006
ದೀವಟಿಗೆ ಸಲಾಂ
ಪೊಳಲಿ ಚೆಂಡಿನ ಸಂದರ್ಭದಲ್ಲಿ ದೀವಟಿಗೆ ಸಲಾಂ ಎಂಬ ವಿಧಿ ನೆರವೇರುತ್ತದೆ ಎಂದು ಇತ್ತೀಚೆಗೆ ಪತ್ರಿಕೆಯಲ್ಲಿ ಓದಿದೆ.   ಇದೇ ರೀತಿ ಮುಂಡಾಜೆಯ  ಶ್ರೀ ಲಕ್ಷ್ಮೀನಾರಾಯಣ ದೇವಳದಲ್ಲೂ ದೇವರ ಉತ್ಸವ ಹೊರಡುವ ಮುನ್ನ  ಸಲಾಂ ತೆಕೊ ಶ್ರೀ ಸಾಗರ ಶಯನನೆ ಎಲ್ಲರೂ ಮಾಡುವ ಸಲಾಂ   ಎಂಬ ಹಾಡನ್ನೊಳಗೊಂಡ ದೀವಟಿಗೆ ಸಲಾಂ  ನಡೆಯುತ್ತದೆ.  ಸಾಮಾನ್ಯವಾಗಿ ಹಿಂದೂ ಸಂಪ್ರದಾಯದೊಂದಿಗೆ  ಗುರುತಿಸಿಕೊಳ್ಳದ ಸಲಾಂ ಶಬ್ದವನ್ನೊಳಗೊಂಡ ಈ ವಿಧಿಯ ಮೂಲದ ಬಗ್ಗೆ  ಬಲ್ಲವರಿಂದ ತಿಳಿಯುವ ಕುತೂಹಲವಿದೆ.
(ಕುತೂಹಲ ಇನ್ನೂ ತಣಿಯಲಿಲ್ಲ).

ಉದಯವಾಣಿ 24-7-2005 (ಹಾಡು ಹಾದಿ ಹೆಜ್ಜೆ ಗುರುತು ಅಂಕಣ)
ಇಲ್ಲದ ಹಾಡಿಗೆ ತುಡಿತ
ಎಂದೋ  ಎಂದೋ ಎಂದೋ,  ಎಂದೋ ನಿನ್ನ ದರುಶನ - 50ರ ದಶಕದ ಸೂಪರ್ ಹಿಟ್ ಚಿತ್ರ  ಜಗನ್ಮೋಹಿನಿ ಚಿತ್ರದ ಈ ಹಾಡು ನನ್ನ ಕಿವಿಗೆ ಬಿದ್ದ ಮೊದಲ ಸಿನಿಮಾ ಗೀತೆ.  ನನ್ನ ಅಕ್ಕ ಈ ಹಾಡನ್ನು ಹಾಡುತ್ತಾ ನನ್ನನ್ನು ತೊಟ್ಟಿಲಲ್ಲಿ ಕೂರಿಸಿ ತೂಗುತ್ತಿದ್ದಳಂತೆ.  ಮತ್ತೆ ಮತ್ತೆ ಈ ಹಾಡು ಹಾಡುವಂತೆ ನಾನು ಹಠ ಮಾಡುತ್ತಿದ್ದುದೂ ಇತ್ತಂತೆ.  ನನಗೆ ಅರಿವು ಮೂಡುವುದಕ್ಕೂ ಮುನ್ನ ಎಂದೋ ಒಮ್ಮೆ ಮನೆಯವರೊಂದಿಗೆ  ಬೆಳ್ತಂಗಡಿಯ ಟೂರಿಂಗ್ ಟಾಕೀಸಿನಲ್ಲಿ  ಆ ಚಿತ್ರವನ್ನು ನೋಡಿದ್ದು,  ಅದರೊಳಗಿನ ಜನರೆಲ್ಲ ಬೂದಿಯ ಮೇಲೇಕೆ ಓಡಾಡುತ್ತಿದ್ದಾರೆಂದು ನಾನು ಅಚ್ಚರಿಪಟ್ಟದ್ದು - ಕೆಲ ಅಸ್ಪಷ್ಟ ನೆನಪು  ನನಗಿನ್ನೂ ಇದೆ.  ಕಪ್ಪು ಬಿಳುಪಿನ ಆ ಚಿತ್ರದ ನೆಲ, ಬೆಟ್ಟ ಗುಡ್ದಗಳು  ನನಗೆ ಬೂದಿ ರಾಶಿಯಂತೆ ಕಂಡಿರಬೇಕು.  ನಮ್ಮಕ್ಕ ಈಗಲೂ ಆ ಹಾಡನ್ನು ಹಾಡಬಲ್ಲರು. ಆದರೆ ರೇಡಿಯೋದಲ್ಲಾಗಲೀ, ಧ್ವನಿಮುದ್ರಿಕೆಯಲ್ಲಾಗಲೀ ಅದನ್ನು ನಾನು ಇದು ವರೆಗೂ ಕೇಳಿದ್ದಿಲ್ಲ.  ಬಹುಶ: ಇನ್ನು ಕೇಳುವ ಸಾಧ್ಯತೆಯೂ ಇಲ್ಲ.  ಚಿತ್ರದ ಮೂಲ ಪ್ರತಿಯೇ ನಾಶವಾಗಿ ಹೋಗಿದೆಯೆಂದು ಕೇಳಿದ್ದೇನೆ.  ಗ್ರಾಮೋಫೋನ್ ಇಟ್ಟುಕೊಂಡಿದ್ದವರ ಮನೆಯ ಅಟ್ಟದಲ್ಲೋ, ಹಳೆ ಕಾಲದ ಮೈಕ್ ಸೆಟ್ಟಿನವರ ಗೋದಾಮಿನಲ್ಲೋ  ಈ ಹಾಡಿನ ಸವೆದು ಹೋದ ಗಾನ ತಟ್ಟೆ ಇರಲೂಬಹುದು.  ಆದರೆ ಆಗಾಗ ರೇಡಿಯೊ, ಟಿ.ವಿ.ಗಳಲ್ಲಿ ಪ್ರಸಾರವಾಗುವ ಇದರ ಮೂಲವಾದ ಮಹಲ್ ಚಿತ್ರದ ಆಯೇಗಾ ಆಯೇಗಾ ಆಯೇಗಾ, ಆಯೇಗಾ ಆನೇವಾಲಾ ಹಾಡನ್ನು ಕೇಳಿದಾಗಲೆಲ್ಲ ಆ ದಿನಗಳ ಮಸುಕಾದ ಚಿತ್ರಗಳು ಕಣ್ಮುಂದೆ ಸುಳಿಯುತ್ತವೆ.  ಮುಂದಿನ ದಿನಗಳಲ್ಲಿ ಅದೆಷ್ಟೋ ಹಾಡುಗಳು ಮನಸ್ಸನ್ನು ಪ್ರವೇಶಿಸಿವೆ, ನೆಲೆ ನಿಂತಿವೆ, ಕ್ಯಾಸೆಟ್, ಸಿ.ಡಿ.ಗಳ ರೂಪದಲ್ಲಿ ಕಪಾಟು ಸೇರಿವೆ.  ಆದರೆ ಇಲ್ಲದ ಈ ಹಾಡಿನ ಬಗ್ಗೆ ತುಡಿತ  ಕಮ್ಮಿಯಾಗಿಲ್ಲ.


ಉದಯವಾಣಿ 24-3-2005
ಟ್ರಾನ್ಸಿಸ್ಟರ್ ನಲ್ಲಿ ಡಿ.ಟಿ.ಹೆಚ್
ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಡಿ.ಟಿ.ಹೆಚ್ ಮಾಧ್ಯಮದಲ್ಲಿ   ಟಿ.ವಿ.ಚಾನಲ್ ಗಳೊಡನೆ  ಆಡಿಯೊ ಚಾನಲ್ ಗಳೂ ಇರುತ್ತವೆ.  ದೂರದರ್ಶನದ ಡಿ.ಟಿ.ಹೆಚ್ ನಲ್ಲಂತೂ ವಿವಿಧಭಾರತಿ,  ಎಫ್.ಎಂ.ಗೋಲ್ಡ್, ರೈನ್ ಬೊ , ಬೆಂಗಳೂರಿನ ಕನ್ನಡ ಕಾರ್ಯಕ್ರಮಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ರೇಡಿಯೊ ಚಾನಲ್ ಗಳು ದಿನದ 24 ಗಂಟೆಗಳ ಕಾಲ ಲಭ್ಯವಿವೆ.  ಒಂದೇ ತೊಂದರೆ ಎಂದರೆ ಇವನ್ನು ಟಿ.ವಿ.ಯಲ್ಲೇ ಕೇಳಬೇಕು. ಇಲ್ಲವೇ ದುಬಾರಿ ಮ್ಯೂಸಿಕ್ ಸಿಸ್ಟಂ ಗಳನ್ನು ಉಪಯೋಗಿಸಬೇಕು.  ಇದಾವುದೂ ಇಲ್ಲದೆ ಕೆಲವು ನೂರು ರೂಪಾಯಿಗಳಿಗೆ ಮಾರುಕಟ್ಟೆಯಲ್ಲಿ ದೊರಕುವ ಕಾರ್ಡ್ ಲೆಸ್ ಹೆಡ್ ಫೋನ್ ಗಳ ಟ್ರಾನ್ಸ್ ಮೀಟರ್ ಉಪಯೋಗಿಸಿ ಎಫ್.ಎಂ ಬ್ಯಾಂಡ್ ಇರುವ ಟ್ರಾನ್ಸಿಸ್ಟರ್ ನಲ್ಲೂ  ಈ ಚಾನಲ್ ಗಳನ್ನು ಆಲಿಸಲು ಸಾಧ್ಯವಿದೆ.  ಸೂಕ್ತ ಕೋರ್ಡ್ ಗಳನ್ನು ಬಳಸಿ ಸೆಟ್ ಟಫ್ ಬಾಕ್ಸ್ ನ ಆಡಿಯೊ ಪೋರ್ಟನ್ನು ಈ ಟ್ರಾನ್ಸ್ ಮಿಟರ್ ಗೆ ಜೋಡಿಸಿದರೆ  ಸರಿ.  ಟ್ರಾಸಿಸ್ಟರ್ ಟ್ಯೂನ್ ಮಾಡಿ  ಅಡುಗೆ ಮನೆಯಲ್ಲೋ, ದಿಂಬಿನ ಪಕ್ಕದಲ್ಲೋ ಅಥವಾ 25 ಮೀಟರ್ ವ್ಯಾಪ್ತಿಯಲ್ಲಿ  ಎಲ್ಲಿ ಬೇಕಾದರೂ ಇಟ್ಟುಕೊಂಡು ಮೆಚ್ಚಿನ ಕಾರ್ಯಕ್ರಮಗಳನ್ನು ಆಲಿಸಬಹುದು. ಉಪಯೋಗಿಸುವ ಟ್ರಾನ್ಸಿಸ್ಟರ್ 78 ಮೆಗಾಹರ್ಟ್ಸ್ ನಿಂದ 108 ಮೆಗಾಹರ್ಟ್ಸ್ ವ್ಯಾಪ್ತಿಯನ್ನು ಹೊಂದಿರುವುದು  ಹಾಗೂ ಕೊಂಡ ಉಪಕರಣದ ಕಂಪನಾಂಕ ಈ ಮಿತಿಯೊಳಗೆ ಇರುವುದು ಅಗತ್ಯ.(ಕಂಪನಾಂಕವನ್ನು ಸೂಚನಾಪತ್ರದಲ್ಲಿ ನಮೂದಿಸಿರುತ್ತಾರೆ).   ಅಂತೆಯೇ ಸೆಟ್ ಟಾಪ್ ಬಾಕ್ಸ್ ನಲ್ಲೂ ಎರಡು ಆಡಿಯೋ ಪೋರ್ಟ್ ಗಳಿದ್ದರೆ ಒಂದನ್ನು ಟಿ.ವಿ.ಗೂ   ಇನ್ನೊಂದನ್ನು ಈ ಉದ್ದೇಶಕ್ಕೂ ಬಳಸಲು ಅನುಕೂಲ.  ಡಿ.ಟಿ.ಹೆಚ್ ಬದಲಿಗೆ  ಸಿ.ಡಿ.ಪ್ಲೇಯರನ್ನೋ,  ಟೇಪ್ ರೆಕಾರ್ಡರನ್ನೋ ಈ ಉಪಕರಣಕ್ಕೆ ಜೋಡಿಸಿದರೆ  ಸ್ವಂತ ರೇಡಿಯೋ ಸ್ಟೇಶನ್ ನ ಆನಂದವನ್ನೂ ಹೊಂದಬಹುದು.
(ಕೆಲವರು ಈ ಬಗ್ಗೆ ಹೆಚ್ಚಿನ ಮಾಹಿತಿ ಕೋರಿದ್ದರು. ಪ್ರಯೋಗಿಸಿದ್ದಾರೋ ತಿಳಿದಿಲ್ಲ.  ನಾನಂತೂ ಈಗಲೂ ಉಪಯೋಗಿಸುತ್ತಿದ್ದೇನೆ).


ಉದಯವಾಣಿ  1-7-2003
ಯಾರು ಸಸ್ಯಾಹಾರಿ (ಟೂತ್ ಪೇಸ್ಟ್ ನಲ್ಲಿ ಪ್ರಾಣಿಜನ್ಯ ವಸ್ತುಗಳನ್ನು ಬಳಸಲಾಗುತ್ತದೆ  ಎಂಬ ಲೇಖನಕ್ಕೆ ಪ್ರತಿಕ್ರಿಯೆ)
ಶುದ್ಧ ಸಸ್ಯಾಹಾರಿಗಳ ವ್ರತ ಕೆಡಿಸಲು  ಟೂತ್ ಪೇಸ್ಟೇ ಬೇಕೆಂದಿಲ್ಲ.  ಅನಾದಿ ಕಾಲದಿಂದಲೂ ತಾಂಬೂಲದ  ಜೊತೆ ಬಳಸುವ ಸುಣ್ಣವೂ ಪ್ರಾಣಿಜನ್ಯ ಚಿಪ್ಪನ್ನು ಸುಟ್ಟು ತಯಾರಿಸಿದ್ದಲ್ಲವೇ?  ಇನ್ನೂ ಸೂಕ್ಷ್ಮವಾಗಿ ಗಮನಿಸುವುದಾದರೆ  ನಾವು ಬಳಸುವ ಯಾವುದೇ ಆಹಾರ ಪಾನೀಯಗಳಲ್ಲಿ ಅಸಂಖ್ಯಾತ ಸೂಕ್ಷ್ಮಾಣುಜೀವಿಗಳಿರುವುದು ಸರ್ವ ವೇದ್ಯ.  ಬೇಯಿಸಿದ ಆಹಾರವಾದರೆ ಇವನ್ನು ಕೊಂದು ಇಲ್ಲವಾದರೆ ಸಜೀವವಾಗಿ ಎಲ್ಲರೂ ಇವನ್ನು ಸೇವಿಸುವವರೇ.


ಉದಯವಾಣಿ  17-6-2003
ಅಪ್ಪಣೆ ಮೀರುವ ಮಳೆನೀರು
ಮಂಗಳೂರಿನ ಮಂಕಿಸ್ಟೇಂಡನ್ನು ಮಾರ್ನಮಿಕಟ್ಟೆಗೆ  ಜೋಡಿಸುವ  ರಸ್ತೆಯ ಬಲಬದಿಯಲ್ಲಿ  ಇತ್ತೀಚೆಗೆ ಚರಂಡಿ ನಿರ್ಮಾಣದ ಕಾಮಗಾರಿಯೊಂದು ಉತ್ತಮವಾಗಿಯೇ ನಡೆದಿದೆ.   ಆದರೆ ಸ್ವಲ್ಪ ಮುಂದಿರುವ ತೋಡಿಗೆ ಸಂಪರ್ಕ ಹೊಂದಬೇಕಾಗಿದ್ದ ಇದು ಅಪಾರ್ಟ್ ಮೆಂಟ್ ಒಂದರ ಮುಂದೆ ಹಠಾತ್ ಕೊನೆಗೊಂಡಿದೆ.   ಬಹುಶ: ಮಳೆನೀರಿಗೆ ಇಲ್ಲಿಯವರೆಗೆ ಹರಿಯಲು ಮಾತ್ರ ಮಹಾನಗರಪಾಲಿಕೆಯ ಅನುಮತಿ ಇರುವುದು ಇದಕ್ಕೆ ಕಾರಣವಿರಬಹುದು.  ಆದರೆ ಈ ಸಲದ ಮೊದಲ ಮಳೆಗೆ  ಈ ಚರಂಡಿಯಲ್ಲಿ ತುಂಬಿದ ನೀರು ನಗರಪಾಲಿಕೆಯ ಅಪ್ಪಣೆ ಮೀರಿ ತನ್ನ ಸಹಜ ಧರ್ಮದಂತೆ ಉಕ್ಕಿ ಹರಿದು ಮುಂದೆ ದಾರಿ ಕಾಣದೆ ಅಲ್ಲೇ ರಸ್ತೆಯ ಮೇಲೆ ವಿಶಾಲವಾದ ಸರೋವರವೊಂದನ್ನು ನಿರ್ಮಿಸಿತು.   ಅಷ್ಟೇ ಅಲ್ಲ, ತನ್ನೊಡನೆ ಹೊತ್ತು ತಂದ ಮನ್ಣು ಮರಳುಗಳನ್ನೆಲ್ಲ  ರಸ್ತೆಯ ಮೇಲೆ ಹರಡಿ  ಚಂದ್ರನ ಮೇಲ್ಮೈಯಂತಹ ಕುಳಿಗಳನ್ನು ಸೃಷ್ಟಿಸಿತು.  ಮಳೆಗಾಲದುದ್ದಕ್ಕೂ ಮಳೆನೀರಿನ ಈ ಉದ್ಧಟತನವು ಇನ್ನೂ ಹೆಚ್ಚಾಗುವ ಸಂಭವವಿರುವುದರಿಂದ ತನ್ನ ಅಪ್ಪಣೆ ಮೀರಿದ ಮಳೆನೀರಿಗೆ   ಮಹಾ ನಗರಪಾಲಿಕೆಯು ತಕ್ಕ ಶಾಸ್ತಿ ಮಾಡಬೇಕಿದೆ.
(1999ರಲ್ಲಿ ಇದೇ ರೋಡಿನ ಬಗ್ಗೆ ಬರೆದಿದ್ದ ಬೇತಾಳ ಕತೆಯನ್ನೂ ಓದಿ.  ಇಷ್ಟು ವರ್ಷಗಳ ನಂತರವೂ ಪರಿಸ್ಥಿತಿ ಹಾಗೆಯೇ ಇದೆ.)

ಉದಯವಾಣಿ 3-1-2003 ಹಾಗೂ ವಿಜಯ ಕರ್ನಾಟಕ 6-1-2003
ಕನ್ನಡ ವಾರ್ತೆ
ಸೂಕ್ತ ವಾಚಕರಿಲ್ಲದೆ ದಿಲ್ಲಿಯಿಂದ ಬಿತ್ತರಗೊಳ್ಳುವ ಕನ್ನಡ ವಾರ್ತಾಪ್ರಸಾರವು ಎಲ್ಲರಿಂದಲೂ ಟೀಕೆಗೊಳಗಾಗುತ್ತಿದೆ.  ಹಿಂದೆ ಸಂಪರ್ಕ ಸಾಧನಗಳು ಸೀಮಿತವಾಗಿದ್ದ ಕಾಲದಲ್ಲಿ  ಕೇಳುಗರಿಗೆ ತಾಜಾ ಸುದ್ದಿಗಳನ್ನು ದಿಲ್ಲಿಯಿಂದಲೇ ನೀಡುವ ಪರಿಪಾಠ ಇದ್ದುದು ಸಹಜವೇ ಆಗಿದೆ.  ಆದರೆ ಮಾಹಿತಿ ತಂತ್ರಜ್ಞಾನವು ಉತ್ತುಂಗಕ್ಕೇರಿ ಪ್ರಪಂಚವೇ ಒಂದು ಹಳ್ಳಿಯಾಗಿರುವ ಈ ಕಾಲದಲ್ಲಿ ಆಯಾ ರಾಜ್ಯಗಳ ರಾಜಧಾನಿಗಳಲ್ಲೇ ಪ್ರಪಂಚದಾದ್ಯಂತದ ತಾಜಾ ಸುದ್ದಿಗಳನ್ನು ಕ್ಷಣಮಾತ್ರದಲ್ಲಿ ಪಡೆಯುವುದು ಕಷ್ಟವೇನೂ ಅಲ್ಲ.  ಹೀಗಾಗಿ ಪ್ರಾದೇಶಿಕ ಭಾಷೆಗಳ ವಾರ್ತೆಗಳು ಆಯಾ ರಾಜ್ಯಗಳಿಂದಲೇ ಮೂಡಿಬಂದು ರಾಷ್ಟ್ರೀಯ ಜಾಲದಲ್ಲಿ ಪ್ರಸಾರವಾದರೆ ಈ ಸಮಸ್ಯೆ ಬಗೆ ಹರಿದೀತು.
(ಈ ಪದ್ಧತಿ ಕಾರ್ಯಗತವಾಗಿದೆ. ಆದರೆ ವಾರ್ತಾ ಓದುಗರ ತಪ್ಪುಗಳು ಮುಂದುವರಿದಿವೆ!)

ಉದಯವಾಣಿ 23-10-2002
ಎಫ್. ಎಂ. ಗೆ ವೆಲ್ ಕಂ
ಮಂಗಳೂರು  ಆಕಾಶವಾಣಿಯು  ಅಕ್ಟೋಬರ್ ಒಂದರಿಂದ  ಎಫ್. ಎಂ. ಪರೀಕ್ಷಾ ಪ್ರಸಾರ ಆರಂಭಿಸಿರುವುದು  ರೇಡಿಯೊ ಪ್ರಿಯರಿಗೆ ಅದರಲ್ಲೂ ಜಿಲ್ಲೆಯ ದಕ್ಷಿಣ ಭಾಗದವರಿಗೆ ಖುಶಿ ತಂದಿದೆ.  ಅಪರಾಹ್ನ ಬಾಂದನಿ ಮುಗಿದ ಮೇಲೆ ಇತರ ಎಫ್. ಎಂ. ಕೇಂದ್ರಗಳಂತೆ ಇಲ್ಲಿಂದಲೂ  ವಿವಿಧಭಾರತಿ ಕಾರ್ಯಕ್ರಮಗಳು ಪ್ರಸಾರವಾದರೆ  ಇನ್ನೂ ಹೆಚ್ಚು ಖುಶಿ ಆದೀತು.  ಹಾಗೆಯೇ ಬೆಳಗಿನ ಪ್ರಸಾರ ಮುಗಿದ ಮೇಲೇ ಬೆಂಗಳೂರು ವಿವಿಧಭಾರತಿಯ "ನಂದನ"ವನ್ನೂ  ಪ್ರಸಾರಿಸಬಹುದು.
(ಇಂದಿಗೂ ಆಕಾಶವಾಣಿಯು ಹಗಲಿನ ಹೆಚ್ಚು ಹೊತ್ತು ನಿದ್ರಿಸುವುದರಲ್ಲೇ ಸುಖ ಕಾಣುತ್ತಿದೆ !)

ಉದಯವಾಣಿ 16-9-2001
ಪಿ.ಬಿ.ಎಸ್ (ಮಹಾಬಲೇಶ್ವರ ರಾವ್ ಅವರ ಅಂಕಣ ಹಿರಿಯ ಹೆಜ್ಜೆ ಗೆ ಪ್ರತಿಕ್ರಿಯೆ)
ಡಾ| ಪಿ.ಬಿ.ಶ್ರೀನಿವಾಸ್ ಕುರಿತ ಲೇಖನ ಖುಶಿ ನೀಡಿತು.  ಕೋರಿಕೆ ಪತ್ರ ಬರೆಯುವ ಕೇಳುಗರಿಗೆ ಹಾಗೂ ಸ್ವತ: ಆಕಾಶವಾಣಿಯವರಿಗೆ  80ರ ದಶಕದ ನಂತರದ ಅಳುವ, ನಗುವ,   ಕೆಮ್ಮುವ , ಹೂಂಕರಿಸುವ ಹಾಡುಗಳೇ ಆಪ್ಯಾಯಮಾನವಾಗಿ ಕಾಣಿಸುತ್ತಿರುವುದು ವಿಷಾದನೀಯ.  ಆದರೆ ಪಿ.ಬಿ.ಎಸ್ ಹಾಡುಗಳ ಕ್ಯಾಸೆಟ್ ಮತ್ತು ಸಿ.ಡಿ. ಗಳು ಆಗಾಗ ಬಿಡುಗಡೆಗೊಳ್ಳುತ್ತಿರುವುದು ಹಾಗೂ ಟಿ.ವಿ. ಚಾನಲ್ ಗಳು ಆಗಾಗ ಇವರ ಹಾಡುಗಳನ್ನು ಬಿತ್ತರಿಸುತ್ತಿರುವುದು ಸಂತೋಷದ ವಿಚಾರ.
(ಈಗ ಆಕಾಶವಾಣಿಯಿಂದಲೂ  ಹೆಚ್ಚು ಹೆಚ್ಚು ಹಳೆಯ ಹಾಡುಗಳೇ ಬಿತ್ತರಗೊಳ್ಳುತ್ತಿರುವುದು ಸಂತೋಷದ ವಿಷಯ.  ನನ್ನ ಸಂಗ್ರಹದಿಂದ ನೀಡಿದ ಅನೇಕ ಹಾಡುಗಳು ಮಂಗಳೂರು ಆಕಾಶವಾಣಿಯಿಂದ  ಆಗಾಗ ಪ್ರಸಾರವಾಗುತ್ತಿವೆ. ) 

ಉದಯವಾಣಿ 14-7-2000
ಹತ್ತಿರವಾದ ವಿವಿಧಭಾರತಿ
ತನ್ನ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳಿಂದ  ಹಾಗೂ ಎಫ್.ಎಂ. ಪ್ರಸಾರದ ಸ್ಪಷ್ಟತೆಯಿಂದ  ಈಗಾಗಲೇ ಗಮನ ಸೆಳೆದಿದ್ದ  ಆಕಾಶವಾಣಿ ಮಡಿಕೇರಿ ಕೇಂದ್ರವು ಜುಲೈ ಒಂದರಂದು ಆರಂಭವಾದ ತನ್ನ ಮಧ್ಯಾಹ್ನದ ಪ್ರಸಾರದಲ್ಲಿ ಮುಂಬಯಿ ವಿವಿಧಭಾರತಿಯ ಹಿಂದಿ ಹಾಗೂ ಬೆಂಗಳೂರು ವಿವಿಧಭಾರತಿಯ ಕನ್ನಡ ಕಾರ್ಯಕ್ರಮಗಳ  ಮರುಪ್ರಸಾರ ಆರಂಭಿಸಿರುವುದರೊಂದಿಗೆ ರಾಜ್ಯದ ಈ ಭಾಗಕ್ಕೊಂದು ವಿವಿಧ ಭಾರತಿ ಕೇಂದ್ರ ಬೇಕೆಂಬ ಬೇಡಿಕೆ ಆಂಶಿಕವಾಗಿಯಾದರೂ ಈಡೇರಿದಂತಾಗಿದೆ.  ಇದನ್ನು ಸಾಧ್ಯವಾಗಿಸಿದವರೆಲ್ಲರಿಗೂ ಅಭಿನಂದನೆ ಸಲ್ಲಲೇ ಬೇಕು.

     ಸೂಕ್ತ ಏರಿಯಲ್ ಉಪಯೋಗಿಸಿದರೆ ಮಂಗಳೂರಲ್ಲೂ ಸಿ.ಡಿ. ಗುಣಮಟ್ಟದ  ಧ್ವನಿ ಲಭ್ಯವಾಗುವ ಈ ಪ್ರಸಾರದ ಉಪಯೋಗವನ್ನು ರೇಡಿಯೊ ಪ್ರಿಯರು ಪಡೆದುಕೊಳ್ಳಬಹುದು.  ಕೆಲವು ಪ್ರದೇಶಗಳಲ್ಲಿ ಟ್ರಾನ್ಸಿಸ್ಟರ್ ಗಳಲ್ಲಿರುವ  ಅಂತರ್ನಿರ್ಮಿತ ಏರಿಯಲ್ ಅಥವಾ ಒಂದು ಸಾಮಾನ್ಯ ತಂತಿಯೇ ಸಾಕಾಗಬಹುದಾದರೂ   ಮ್ಯೂಸಿಕ್ ಸಿಸ್ಟಂಗಳನ್ನು  ಹೊಂದಿದವರು  ಡಿಶ್ ಅಥವಾ ಕೇಬಲ್ ಗಳ ಬಳಕೆಯಿಂದ ನಿರುಪಯುಕ್ತವಾಗಿರಬಹುದಾದ  ಹಳೆಯ ಟಿ.ವಿ. ಏಂಟೆನಾವನ್ನು ಏರಿಯಲ್ ಆಗಿ ಉಪಯೋಗಿಸಿದರೆ ಉತ್ತಮ ಫಲಿತಾಂಶ ದೊರಕುತ್ತದೆ.   ಟಿ.ವಿ. ಚಾನಲ್ ಗಳನ್ನು ಬದಲಿಸಿ ಬಳಲಿದವರು ಒಮ್ಮೆ ರೇಡಿಯೊ ಆಲಿಸಿ ಇದರಲ್ಲಿರುವ ಆತ್ಮೀಯತೆಯ ಎಳೆಯನ್ನು  ಗುರುತಿಸುವ ಪ್ರಯತ್ನ ಮಾಡಬಹುದು.
(ಮಡಿಕೇರಿ ಆಕಾಶವಾಣಿ ಈಗಲೂ ತನ್ನ ಗುಣಮಟ್ಟ ಕಾಯ್ದುಕೊಂಡಿದೆ).

ಉದಯವಾಣಿ 16-1-1999
ಬೇತಾಳ ಮಾರ್ಗಜಲ ಪುರಾಣಂ
ಛಲ ಬಿಡದ ತ್ರಿವಿಕ್ರಮನು ಮತ್ತೆ ಮರದ ಮೇಲೇರಿ ತೂಗಾಡುತ್ತಿದ್ದ  ಶವವನ್ನು  ಕೆಳಗಿಳಿಸಿ ಹೆಗಲಮೇಲಿರಿಸಿ ಸ್ಮಶಾನದ ಕಡೆಗೆ ನಡೆಯತೊಡಗಿದನು.  ಆ ಶವದಲ್ಲಿದ್ದ ಬೇತಾಳವು  ಗಹಗಹಿಸಿ ನಗುತ್ತಾ "ಎಲೈ ರಾಜನೇ,  ನಿನ್ನ ವ್ಯರ್ಥ ಶ್ರಮವನ್ನು ಕಂಡರೆ  ಏನೊಂದೂ ಉಪಯೋಗವಿಲ್ಲೆಂದು ತಿಳಿದೂ ಪದೇ ಪದೇ ಪತ್ರಿಕೆಗಳ ದೂರುಗಂಟೆಗೆ ಪತ್ರ ಬರೆಯುವ ಓದುಗರ ನೆನಪಾಗುತ್ತದೆ.  ನಿನಗೆ ದಾರಿಯ ಶ್ರಮ ತಿಳಿಯದಂತಿರಲು ಕತೆಯೊಂದನ್ನು ಹೇಳುತ್ತೇನೆ. ಆಲಿಸುವಂತಹನಾಗು" ಎಂದು ಈ ರೀತಿ ಹೇಳತೊಡಗಿತು.

     ಮಂಗಳೂರೆಂಬ ಮಹಾನಗರದಲ್ಲಿ ಮಾರ್ನಮಿಕಟ್ಟೆಯನ್ನು  ಮಂಕಿಸ್ಟೇಂಡ್ ಗೆ ಜೋಡಿಸುವ ರಸ್ತೆಯೊಂದಿದೆ.  ಕಳೆದ ವರ್ಷವಷ್ಟೇ ಇದರ ಡಾಮರೀಕರಣವೂ ಆಗಿತ್ತು.   ಆದರೆ ಮಳೆಗಾಲ ಆರಂಭವಾದೊಡನೆ ಫ್ಲಾಟ್ ಪಾಯಿಂಟ್  ಎಂಬ ಕಟ್ಟಡದ ಸಮೀಪ ರಸ್ತೆಯು ತಗ್ಗಾಗಿರುವುದರಿಂದ ಮಳೆನೀರಿನೊಡನೆ  ಹರಿದುಬಂದ ಹೊಯ್ಗೆ  ಡಾಮರಿನ ಮೇಲೆ ಶೇಖರವಾಗಿ  ಚಂದ್ರನ ಮೇಲ್ಮೈಯಂತಹ ಕುಳಿಗಳನ್ನು ಸೃಷ್ಟಿಸಿ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗುತ್ತಿತ್ತು.  ಇದನ್ನು ಮನಗಂಡ ಮಹಾನಗರಪಾಲಿಕೆಯವರು  ತತ್ ಕ್ಷಣ ಕಾರ್ಯಪ್ರವೃತ್ತರಾಗಿ  ರಸ್ತೆಯ ಈ ಭಾಗಕ್ಕೆ ಬೆಣಚುಕಲ್ಲುಗಳನ್ನು ಹಾಸಿ  ರಸ್ತೆಯನ್ನು ಸುಮಾರು ನಾಲ್ಕು ಇಂಚುಗಳಷ್ಟು  ಎತ್ತರಿಸಿ ಈ ತೊಂದರೆಯನ್ನು ನಿವಾರಿಸುವ ಪ್ರಯತ್ನ ಮಾಡಿದರು.  ಆದರೆ ಇದರಿಂದ ನಯವಾದ ಟಾರು ರಸ್ತೆಯ ಬದಲಿಗೆ ಚೂಪಾದ ಬೆಣಚುಕಲ್ಲುಗಳ ಮೇಲೆ ಜನರು ಹಾಗೂ ವಾಹನಗಳು ಓಡಾಡುವಂತಾಯಿತೇ ಹೊರತು ಮಳೆ ಬಂದಾಗ ಮೊದಲಿನಂತೆ ನೀರು ರಸ್ತೆಯ ಮೇಲಕ್ಕೇ ಬರುತ್ತಿತ್ತು.

     ಇಷ್ಟು ಹೇಳಿ ಹಠಾತ್ತಾಗಿ ಕತೆಯನ್ನು ನಿಲ್ಲಿಸಿದ  ಬೇತಾಳವು "ಎಲೈ ರಾಜನೇ,  ನಗೊಂದು ಸಂದೇಹ.  ಮಹಾನಗರಪಾಲಿಕೆಯವರು ಮುತುವರ್ಜಿಯಿಂದ ಇಷ್ಟೆಲ್ಲ ಮಾಡಿದರೂ ಮಳೆ ನೀರಿಗೆ ರಸ್ತೆಯ ಮೇಲೆಯೇ ಬರಬೇಕೆಂಬ ಚಲ ಏಕೆ?  ಈ ಪ್ರಶ್ನೆಗೆ ತಿಳಿದೂ ಉತ್ತರ ಹೇಳದಿದ್ದರೆ ಈ ರಸ್ತೆಯನ್ನು ಎತ್ತರಿಸಲು ಹಾಕಿದ ಚೂಪಾದ ಬೆಣಚುಕಲ್ಲುಗಳು ತಾಗಿ  ವಾಹನಗಳ ಟಯರುಗಳು ಛಿದ್ರಗೊಂಡಂತೆ  ನಿನ್ನ ತಲೆಯೂ ಸಾವಿರ ಹೋಳುಗಳಾದೀತು ಹುಷಾರ್" ಎಂದಿತು.

     ಅನಿವಾರ್ಯವಾಗಿ ಮೌನ ಮುರಿದ ತ್ರಿವಿಕ್ರಮನು "ಅಯ್ಯಾ ಬೇತಾಳನೇ,  ತಗ್ಗಿದ್ದ ಕಡೆಗೆ ಹರಿಯುವುದು ನೀರಿನ ಸಹಜ ಗುಣವೆಂದು ನಿನಗೆ ತಿಳಿಯದೇ?  ಈ ರೀತಿ ರಸ್ತೆಯನ್ನು ನಾಲ್ಕು ಇಂಚು ಏರಿಸಿದ ಮಾತ್ರಕ್ಕೆ ಎತ್ತರದ ಭಾಗದಿಂದ ಬರುವ ನೀರನ್ನು ತಡೆಯಲು ಸಾಧ್ಯವೇ?  ಇಷ್ಟೆಲ್ಲ ಮಾಡುವ ಬದಲು ನೀರು ಸುಲಭವಾಗಿ ಹರಿದು ಹೋಗುವಂತೆ  ರಸ್ತೆಯ ಎರಡೂ ಬದಿಗಳಲ್ಲಿ  ಚರಂಡಿಗಳನ್ನು  ಮಾಡಿ ಕೊಡುತ್ತಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ"  ಈ ಅನಿರೀಕ್ಷಿತ ಉತ್ತರದಿಂದ ಬೆಚ್ಚಿ ಬಿದ್ದ ಬೇತಾಳವು  ಥಟ್ಟನೆ ಶವದೊಡನೆ ಮಾಯವಾಗಿ ಮತ್ತೆ ಮರದಲ್ಲಿ ನೇತಾಡತೊಡಗಿತು.
(ಇಂದಿನವರೆಗೂ ಎರಡು ಬದಿಗೆ ಚರಂಡಿ ಆಗಲೂ ಇಲ್ಲ , ಸಮಸ್ಯೆ ಬಗೆಹರಿಯಲೂ ಇಲ್ಲ).


ಕನ್ನಡಪ್ರಭ 6-11-1998
ಮಧುರ ಗಾಯಕ
ಪಿ.ಬಿ.ಶ್ರೀನಿವಾಸ್ ಹಿನ್ನೆಲೆಗೆ ಸರಿದದ್ದು ವಿಷಾದನೀಯವಾದರೂ  ಈ ಸಲ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಸಂತಸದ ವಿಷಯ.  ಈ ಸಂದರ್ಭದಲ್ಲಿ ಇನ್ನೊಂದು ಮಾತು.  ಕೆಲದಿನಗಳ ಹಿಂದೆ ಬೆಂಗಳೂರು ದೂರದರ್ಶನದಿಂದ "ಮಧುರ ಗಾಯಕ ಪಿ.ಬಿ.ಶ್ರೀನಿವಾಸ್" ಎಂಬ ವಿಶಿಷ್ಟ ಧಾರಾವಾಹಿಯೊಂದು ಪ್ರಸಾರವಾಗುತ್ತಿತ್ತು. ಅವರ ವೃತ್ತಿಜೀವನದ ಆರಂಭದಿಂದ ಮೊದಲ್ಗೊಂಡು ಆಯಾ ವರ್ಷದ ಉತ್ತಮ  ಹಾಡುಗಳನ್ನು ಆಯ್ಕೆ ಮಾಡಿ ಅದರ ರಚನೆಯ ಸಂದರ್ಭ, ಸಂಬಂಧಿಸಿದವರೊಡನೆ ಸಂದರ್ಶನ  ಇತ್ಯಾದಿಗಳೊದನೆ ಉತ್ತಮವಾಗಿ ಬರುತ್ತಿತ್ತು.  ಆದರೆ 1963ನೇ ಇಸವಿ ತನಕ ಬಂದ ಮೇಲೆ ಹಠಾತ್ತಾಗಿ ಧಾರಾವಾಹಿ ನಿಂತು ಹೋಯ್ತು.  ಸಂಬಂಧಿಸಿದವರು ಈ ಧಾರಾವಾಹಿಯನ್ನು ಮತ್ತೆ ಮುಂದುವರೆಸಿ ಚಿತ್ರಗೀತೆಗಳ ಸುವರ್ಣಯುಗವೊಂದನ್ನು  ಸಮಗ್ರವಾಗಿ ದಾಖಲಿಸಲಿ.

ಉದಯವಾಣಿ 30-10-1998
ಆಕಾಶವಾಣಿಯಲ್ಲಿ ಕನ್ನಡಕ್ಕೆ ಎರಡನೇ ದರ್ಜೆ
ಶಾರ್ಟ್ ವೇವ್ ನ  ವಿವಿಧಭಾರತಿಯಲ್ಲಿ ಮಧುರ ಗೀತಂ ಎಂಬ ದಕ್ಷಿಣ ಭಾರತೀಯ ಭಾಷೆಗಳ ಚಲನಚಿತ್ರ ಸಂಗೀತದ ಕಾರ್ಯಕ್ರಮವೊಂದು  ಲಾಗಾಯ್ತಿನಿಂದಲೂ ಪ್ರಸಾರಗೊಳ್ಳುತ್ತಿರುವುದು ಅನೇಕರಿಗೆ ಗೊತ್ತಿರಬಹುದು.  ಸಂಜೆ 4-30ರಿಂದ 5-30ರ ವರೆಗೆ ಇರುತ್ತಿದ್ದ ಇದರಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳ  ಭಾಷೆಯ ಗೀತೆಗಳು ಸಮಾನ ಕಾಲಾವಕಾಶ ಪಡೆದು ಪ್ರಸಾರವಾಗುತ್ತಿದ್ದವು.  ಇತ್ತೀಚೆಗೆ ಈ ಕಾರ್ಯಕ್ರಮದ ಸಮಯವನ್ನು ಸಂಜೆ 6-15ಕ್ಕೆ ಬದಲಾಯಿಸಿ  ದಿನಕ್ಕೆ ಒಂದೇ ಭಾಷೆಯ ಗೀತೆಗಳನ್ನು ಪ್ರಸಾರ ಮಾಡುತ್ತಿದ್ದಾರೆ.  ಹೀಗಾಗಿ ೭ ದಿನಗಳನ್ನು 4 ಭಾಷೆಗಳಿಗೆ ಹಂಚುವಾಗ  ಉಳಿದ ಭಾಷೆಗಳಿಗೆ ತಲಾ 2 ದಿನ ಸಿಕ್ಕಿದರೆ ನಮ್ಮ ಬಡಪಾಯಿ ಕನ್ನಡ ಉಳಿದ ಒಂದು ದಿನದಿಂದ ತೃಪ್ತಿಪಡಬೇಕಾಗಿದೆ.  ನಮ್ಮಲ್ಲೇ ಈ ಪರಿಸ್ಥಿತಿ  ಇರುವಾಗ ನೆರೆಯ ರೇಡಿಯೊ ಶ್ರೀ ಲಂಕಾದಲ್ಲಿ  ತೆಲುಗು ಮಲಯಾಳಗಳಿಗೆ  ದಿನಾ ಒಂದೂವರೆ ಗಂಟೆ ಕಾಲಾವಕಾಶ ಇರುವಾಗ ಕನ್ನಡಕ್ಕೆ  ಅರ್ಧ ಗಂಟೆ  ಮಾತ್ರ ಏಕೆ ಎಂದು ಕೇಳುವ ಹಕ್ಕು ನಮಗಿಲ್ಲ ಅಲ್ಲವೇ?
(ಈಗ ವಿವಿಧ ಭಾರತಿಯ ಮಧುರ ಗೀತಂ ಕಾರ್ಯಕ್ರಮವೇ ಮಾಯವಾಗಿದೆ.  ಅಂತೆಯೇ ರೇಡಿಯೊ ಶ್ರೀ ಲಂಕಾದ ಕನ್ನಡ ಕಾರ್ಯಕ್ರಮವೂ !)


ಉದಯವಾಣಿ  7-5-1997
ಏನಿದು ಸ್ಕೈ ರೇಡಿಯೊ
ಕೆಲವು ವರ್ಷಗಳ ಹಿಂದೆ ಎಲ್ಲ ರಾಜ್ಯಗಳ ಆಕಾಶವಾಣಿ ಕೇಂದ್ರಗಳನ್ನು ಉಪಗ್ರಹದ ಮೂಲಕ  ಸ್ಕೈ ರೇಡಿಯೊ ಜಾಲಕ್ಕೆ ಸೇರಿಸಿರುವುದಾಗಿಯೂ ಇದರಿಂದಾಗಿ  ದೇಶದ ಯಾವುದೇ ಭಾಗದಲ್ಲೂ ಬೇಕಿದ್ದ ಭಾಷೆಯ ಕಾರ್ಯಕ್ರಮಗಳನ್ನು  ಆಲಿಸಲು ಸಾಧ್ಯವಾಗುವುದಾಗಿಯೂ ಪತ್ರಿಕೆಗಳಲ್ಲಿ ಸುದ್ದಿಯೊಂದು ಪ್ರಕಟವಾಗಿತ್ತು.  ಅದರಂತೆಯೇ ರಾಜಕೀಯ ಪಕ್ಷವೊಂದರ "ಸಾಧನೆ"ಗಳ ಪಟ್ಟಿಯಲ್ಲಿಯೂ  ಇದರ ಬಗ್ಗೆ ಪ್ರಸ್ತಾಪವಿತ್ತು.  ಆದರೆ ಈ ಸೌಲಭ್ಯವು ಇತರ ಆಕಾಶವಾಣಿ ಕೇಂದ್ರಗಳ ಮರುಪ್ರಸಾರಕ್ಕಷ್ಟೇ ಸೀಮಿತವೇ ಅಥವಾ ಕೇಳುಗರೇ  ನೇರವಾಗಿ ಈ  ಪ್ರಸಾರವನ್ನು ಆಲಿಸಲು ಸಾಧ್ಯವಿದೆಯೇ ಎಂಬುದರ ಬಗ್ಗೆ ಅನುಮಾನಗಳು ಹಾಗೆಯೇ ಉಳಿದುಕೊಂಡಿವೆ.   ವಿಸ್ತೀರ್ಣದಲ್ಲಿ  ನಮ್ಮ ರಾಜ್ಯಕ್ಕಿಂತ ಎಷ್ಟೋ ಚಿಕ್ಕದಾದ  ಕೇರಳವೂ ಸೇರಿದಂತೆ  ನಮ್ಮ ಸುತ್ತಮುತ್ತಲ ರಾಜ್ಯಗಳೆಲ್ಲ ಶಾರ್ಟ್ ವೇವ್ ಕೇಂದ್ರಗಳನ್ನು ಹೊಂದಿದ್ದರೂ  ನಮ್ಮ ವಿಶಾಲ ಕರ್ನಾಟಕಕ್ಕೆ ಈ ಸೌಲಭ್ಯವಂತೂ ಇಲ್ಲ.   ಹೀಗಾಗಿ ಈ ಸ್ಕೈ ರೇಡಿಯೊ  ಬೆಂಗಳೂರು ಕೇಂದ್ರದ ಪ್ರಸಾರವನ್ನು ಜನಸಾಮಾನ್ಯರು ನೇರವಾಗಿ ಪಡೆಯಲು ಸಾಧ್ಯವೇ?  ಈ ಬಗ್ಗೆ ಬಲ್ಲವರಾರಾದರೂ ಬೆಳಕು ಚೆಲ್ಲಬೇಕಾಗಿ  ವಿನಂತಿ.
(ಇದಕ್ಕೆ ಯಾರೂ ಪ್ರತಿಕ್ರಿಯಿಸಲಿಲ್ಲ.  ಆದರೆ ಬಹಳ ವರ್ಷಗಳ ನಂತರ  DTH  ಮೂಲಕ ಈ ಸೌಲಭ್ಯ ದೊರಕಿತು.)

ಉದಯವಾಣಿ  2-5-1997
ವಿವಿಧಭಾರತಿ ಎಫ್.ಎಂ. ಕೇಂದ್ರ ಮಂಗಳೂರಿಗೂ ಬರಲಿ
ನಮ್ಮ ರಾಜ್ಯದಲ್ಲಿ ಬೆಂಗಳೂರು ಹಾಗೂ ಧಾರವಾಡಗಳಲ್ಲಿ ವಿವಿಧಭಾರತಿ ಕೇಂದ್ರಗಳಿದ್ದರೂ  ಅವುಗಳ ಪ್ರಸಾರ ದ.ಕ.ಜಿಲ್ಲೆಯನ್ನು ತಲುಪುವಷ್ಟು ಶಕ್ತವಾಗಿಲ್ಲ. ಇತ್ತೀಚೆಗೆ ವಿವಿಧಭಾರತಿಯ ಎಫ್.ಎಂ.ಕೇಂದ್ರಗಳನ್ನು ಅನೇಕ ನಗರಗಳಲ್ಲಿ ಸ್ಥಾಪಿಸಲಾಗುತ್ತಿದ್ದು ಮಂಗಳೂರಿಗೂ ಅಂತಹ ಕೇಂದ್ರವೊಂದರ ಅವಶ್ಯಕತೆಯಿದೆ.  ಮುಖ್ಯ ಹಿಂದಿ ಕಾರ್ಯಕ್ರಮಗಳೊಡನೆ  ಬೆಂಗಳೂರು ವಿವಿಧಭಾರತಿಯ  ಕನ್ನಡ ಕಾರ್ಯಕ್ರಮಗಳೂ ಇದರಲ್ಲಿ ಪ್ರಸಾರವಾಗುವಂತಾಗಬೇಕು.
(ಇದು ಇನ್ನೂ ಸಾಕಾರಗೊಂಡಿಲ್ಲ.  DTH ನಂತಹ ಸೌಲಭ್ಯಗಳಿದ್ದರೂ ರೇಡಿಯೊದಲ್ಲಿ ನೇರವಾಗಿ ಕೇಳುವ ಆನಂದವೇ ಬೇರೆ.)


ಉದಯವಾಣಿ 6-8-1995(ನಿಮಗೆ ಗೊತ್ತೇ ಶೀರ್ಷಿಕೆಯಲ್ಲಿ)
ಹಿಂದಕ್ಕೆ ತಿರುಗುವ ಫ್ಯಾನ್
ಟ್ಯೂಬ್ ಲೈಟ್ ಬೆಳಕು ಇರುವ ಕೊಠಡಿಯಲ್ಲಿ ಫ್ಯಾನ್ ಹಾಕಿದರೆ ಕೆಲವು ಸಲ ಅದು ಹಿಂದಕ್ಕೆ ತಿರುಗಿದಂತೆ ಕಾಣಿಸುತ್ತದೆಯಲ್ಲವೇ?  ಅದೇ ರೀತಿ ಚಲನ ಚಿತ್ರಗಳಲ್ಲಿ ಕುದುರೆಗಾಡಿ ಓಡುವ ದೃಶ್ಯ ಇದ್ದರೆ ಅದರ ಚಕ್ರಗಳೂ ಹಿಂದಕ್ಕೆ ತಿರುಗಿದಂತೆ ಕಾಣುವುದನ್ನು ಗಮನಿಸಬಹುದು.  ಇದಕ್ಕೆ ಸ್ಟ್ರೋಬೊಸ್ಕೋಪಿಕ್ ಎಫೆಕ್ಟ್  ಎಂಬುದೇ ಕಾರಣ.  ಇದನ್ನು ಕೆಳಗಿನ ಉದಾಹರಣೆಯಿಂದ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

     ನಿಮ್ಮಲ್ಲಿ ಸೆಕೆಂಡಿನ ಮುಳ್ಳು ಮಾತ್ರ ಇರುವ ಗಡಿಯಾರವೊಂದು ಇದೆಯೆಂದೂ ಅದನ್ನು ಕತ್ತಲು ಕೋಣೆಯೊಂದರಲ್ಲಿ 55 ಸೆಕೆಂಡಿಗೊಮ್ಮೆ ಬೆಳಕು ಬೀರುವಂತಹ ಬಲ್ಬೊಂದರ ಮುಂದೆ ಇರಿಸಲಾಗಿದೆಯೆಂದೂ ಭಾವಿಸಿಕೊಳ್ಳಿ.  ಪ್ರಾರಂಭದಲ್ಲಿ ಬೆಳಕು ಬೀಳುವಾಗ ಗಡಿಯಾರದ ಮುಳ್ಳು 12ರ ಮೇಲೆ ಇದೆಯೆಂದು ಭಾವಿಸೋಣ.  55 ಸೆಕೆಂಡುಗಳ ನಂತರ ಪುನ: ಬೆಳಕು ಬೀಳುವಾಗ ಗಡಿಯಾರದ ಮುಳ್ಳು 11ರ ಮೇಲೆ ಇರುತ್ತದೆ ಅಲ್ಲವೇ?  ಮುಂದಿನ ಸಲ ಬೆಳಕು ಬೀಳುವಾಗ ಅದು 10ರ ಮೇಲಿರುತ್ತದೆ.  ಅಂದರೆ ವಾಸ್ತವವಾಗಿ ಮುಳ್ಳು ಪ್ರದಕ್ಷಿಣಾಕಾರವಾಗಿ ತಿರುಗುತ್ತಿದ್ದರೂ ಅಖಂಡವಲ್ಲದ ಬೆಳಕಿನ ಕಾರಣದಿಂದ ಅದು ಅಪ್ರದಕ್ಷಿಣಾಕಾರವಾಗಿ ತಿರುಗುತ್ತಿದೆಯೆಂಬ ಭ್ರಮೆಯುಂಟಾಗುತ್ತದೆ.

     ಟ್ಯೂಬ್ ಲೈಟ್ ನ ಬೆಳಕು ಕೂಡ ಅಖಂಡವಾಗಿರದೆ ಸೆಕೆಂಡಿಗೆ 50ರಷ್ಟು ಬಾರಿ ನಂದಿ ಪುನ: ಉರಿಯುತ್ತಿರುತ್ತದೆ.   ಹೀಗಾಗಿ ಫ್ಯಾನಿನ ವೇಗಕ್ಕೆ ಅನುಗುಣವಾಗಿ ಕೆಲವೊಮ್ಮೆ ಅದು ಹಿಂದಕ್ಕೆ ತಿರುಗಿದಂತೆ ಕಾಣಿಸುತ್ತದೆ.  ಸೂರ್ಯನ ಬೆಳಕಿನಲ್ಲಿ ಅಥವಾ ಸಾದಾ ಬಲ್ಬಿನ ಬೆಳಕಿನಲ್ಲಿ ಇಂತಹ ಭ್ರಮೆ ಎಂದೂ ಉಂಟಾಗುವುದಿಲ್ಲವೆಂದು ಗಮನಿಸಿ.    ಚಲನಚಿತ್ರಗಳಲ್ಲಿ ಕೂಡ ಪ್ರೊಜೆಕ್ಟರ್ ನಿಂದ ಬರುವ ಬೆಳಕು ಅಖಂಡವಾಗಿರದೆ ಅದರ ಮುಂದೆ ಓಡುವ ರೀಲಿನ ಫ್ರೇಮ್ ಗಳಿಂದಾಗಿ ಸೆಕೆಂಡಿಗೆ 16ಕ್ಕಿಂತಲೂ ಹೆಚ್ಚು ಬಾರಿ ತಡೆಯಲ್ಪಡುತ್ತದೆ .


ಉದಯವಾಣಿ 5-4-1995
ಸಾಮಾನ್ಯ ವಿಮೆ - ಹೀಗೇಕೆ?
ಜೀವ ವಿಮೆಯ ಸಂದರ್ಭದಲ್ಲಾದರೆ ಯಾವುದೇ ಕ್ಲೇಮ್ ಇಲ್ಲದಿದ್ದ ಪಕ್ಷದಲ್ಲಿ ಪಾಲಿಸಿಯ ಅವಧಿ ಮುಗಿದೊಡನೆ  ಕಟ್ಟಿದ ಪೂರ್ತಿ ಪ್ರೀಮಿಯಂ ಒಂದಷ್ಟು ಬೋನಸ್ ಜೊತೆಗೆ  ಪಾಲಿಸಿದಾರನಿಗೆ  ಹಿಂತಿರುಗಿಸಲ್ಪಡುತ್ತದೆ.  ಆದರೆ ವಾಹನಗಳಿಗೆ ಕಡ್ಡಾಯವಾಗಿರುವ ಸಾಮಾನ್ಯ ವಿಮೆಯ ವಿಷಯದಲ್ಲಿ ಹೀಗಿಲ್ಲ.  ದುರದೃಷ್ಟವಶಾತ್ ಅಪಘಾತವೇನಾದರೂ ಸಂಭವಿಸಿದಲ್ಲಿ ಪರಿಹಾರವೇನೋ ದೊರಕುತ್ತದೆ ನಿಜ.  ಆದರೆ ಜಾಗರೂಕರಾಗಿ ಇದ್ದುಕೊಂಡು ಅಪಘಾತ ನಡೆಸದೆ ಇದ್ದವರಿಗೆ ಯಾವುದೇ ಪ್ರತಿಫಲವೂ ಇಲ್ಲ. ಅವರು ತಮ್ಮ ಹಳೆ ಪ್ರೀಮಿಯಮನ್ನು ಸಂಪೂರ್ಣವಾಗಿ ಮರೆತು ಮುಂದಿನ ವರ್ಷ ಮತ್ತೆ ಪ್ರೀಮಿಯಂ ತುಂಬಬೇಕು. ಇದರರ್ಥ ತಪ್ಪು ಮಾಡದವರೆಲ್ಲ ಸೇರಿಕೊಂಡು ತಪ್ಪು ಮಾಡಿದವರಿಗೆ ಪರಿಹಾರವನ್ನು ಕೊಟ್ಟು ವಿಮಾ ಕಂಪೆನಿಯನ್ನೂ ಸಾಕುವುದು ಎಂದಲ್ಲವೇ?  ಜೀವ ವಿಮೆಯಂತೆಯೇ ಇಲ್ಲಿ ಕೂಡ  ಯಾವುದೇ ಕ್ಲೇಮ್ ಇಲ್ಲದಿದ್ದ ಪಕ್ಷದಲ್ಲಿ ಕಟ್ಟಿದ ಪ್ರೀಮಿಯಂ ಪಾಲಿಸಿದಾರನಿಗೆ ಹಿಂತಿರುಗುವಂತಾಗಬೇಕು.


1 comment:

  1. ನಿಮ್ಮಂತೆಯೆ ವಿಜಯವಾಣಿ, ಕನ್ನಡಪ್ರಭ, ವಿಜಯಕರ್ನಾಟಕ, ಉದಯವಾಣಿ, ಹೊಸ ದಿಗಂತ ಮುಂತಾದ ಪತ್ರಿಕೆಗಳಿಗೆ ಓದುಗರ ಸಂಪಾದಕೀಯಕ್ಕೆ ಪತ್ರ, ಲೇಖನಗಳನ್ನು ಕಳುಹಿಸಲು ಇರುವ Email ವಿಳಾಸ ತಿಳಿದಿದ್ದಲ್ಲಿ ದಯವಿಟ್ಟು ತಿಳಿಸಿ.

    ReplyDelete

Your valuable comments/suggestions are welcome