Saturday 23 November 2013

ನಮಗೆ ದೀಪಾವಳಿಯಾಗಿದ್ದ ಗುಂಡಿ ದೀಪ

   
    
ಎಲ್ಲ ಕಡೆ ದೀಪಾವಳಿ ಸಮಯದಲ್ಲಿ ಸುಡುಮದ್ದು ಸಿಡಿಸುವ ಸಂಪ್ರದಾಯವಿದ್ದರೆ ಆ ಕಾಲದಲ್ಲಿ  ನಮ್ಮ ಕೈಗೆ ಪಟಾಕಿ, ಸುರುಸುರು ಕಡ್ಡಿಗಳು ಬರುತ್ತಿದ್ದುದು  ಗುಂಡಿ   ದೀಪವೆಂದೇ ಖ್ಯಾತವಾದ,  ಉತ್ಥಾನ ದ್ವಾದಶಿಯಂದು ಆರಂಭಗೊಂಡು ಹುಣ್ಣಿಮೆಯ ದಿನ ಸಮಾಪನಗೊಳ್ಳುವ ಮುಂಡಾಜೆ ಶ್ರೀ ಗುಂಡಿ ಲಕ್ಷ್ಮೀನಾರಾಯಣ ದೇವಸ್ಥಾನದ  ಕಾರ್ತಿಕ ದೀಪೋತ್ಸವದ ಸಮಯದಲ್ಲಿ.  ಇದು ಒಂದು ಮನೆತನಕ್ಕೆ ಸೇರಿದ ಖಾಸಗಿ ದೇವಸ್ಥಾನವಾದರೂ  ಊರಿನವರಿಗೆಲ್ಲ ಅದು "ನಮ್ಮ ದೇವಸ್ಥಾನ".  ನಾವು "ಮನೆಗೆ ಹೋಗುತ್ತೇನೆ" ಎಂದು ಹೇಳಿದರೆ  ಹೇಗೆ ನಮ್ಮ ಮನೆಗೆಂದು ಅರ್ಥವೋ ಹಾಗೆಯೇ "ದೇವಸ್ಥಾನಕ್ಕೆ ಹೋಗಿ ಬರುತ್ತೇನೆ" ಎಂದರೆ ಗುಂಡಿ ದೇವಸ್ಥಾನಕ್ಕೆ ಎಂದೇ ಅರ್ಥ. ನಮ್ಮ ಕುಟುಂಬಕ್ಕಂತೂ ಅದರೊಡನೆ ಅವಿನಾಭಾವ ಸಂಬಂಧ. ನಮ್ಮ ಹಿರಿಯಣ್ಣ ಅಲ್ಲಿ  ನಾಲ್ಕು ದಶಕಗಳಿಗೂ ಹೆಚ್ಚು ಸಮಯ ಪೂಜಾ ಕೈಂಕರ್ಯ ಕೈಗೊಂಡವರು.  ನಾನೂ ಶಾಲಾ ಜೀವನದ ಹೆಚ್ಚಿನ ವರ್ಷಗಳನ್ನು ಆ ದೇವಸ್ಥಾನದ ವಠಾರದಲ್ಲೇ ಕಳೆದವನು. ಇಲ್ಲಿರುವಂತಹ ಅಚ್ಚುಕಟ್ಟು, ಸ್ವಚ್ಛತೆಗಳನ್ನು ನಾನು ಬೇರೆಲ್ಲಿಯೂ ಕಂಡಿಲ್ಲ.  ಇಲ್ಲಿಯಂತಹ  ನೀಟಾಗಿ ಕತ್ತರಿಸಿದ ಹುಲ್ಲುಗಾವಲಿನ  ಹೊರಸುತ್ತೂ ಬೇರೆಡೆ ಇಲ್ಲ.

ಕಾರ್ತೀಕ ಶುದ್ಧ ಏಕಾದಶಿಯಂದು ರಾತ್ರೆ ಸರಳ ದೀಪಾರಾಧನೆಯೊಂದಿಗೆ   ಇಲ್ಲಿಯ ದೀಪೋತ್ಸವಕ್ಕೆ ಚಾಲನೆ ಸಿಗುತ್ತಿತ್ತು.  ಆ ದಿನ ಸಕ್ಕರೆ ಬೆರೆಸಿದ  ಕೊಬ್ಬರಿಯ ಪ್ರಸಾದ. ಮರುದಿನ ದ್ವಾದಶಿಯಂದು ಬೆಳಗ್ಗೆ ತುಳಸಿಪೂಜೆ ಹಾಗೂ ದೇವಳದ ಎದುರಿನ ಗುಡ್ಡಕ್ಕೆ ದೇವರ ಬಲಿ ಹೋಗಿ ನೆಲ್ಲಿಮರದ ಅಡಿಯಲ್ಲಿ ನಡೆಯುವ ಧಾತ್ರಿ ಪೂಜನ. ದ್ವಾದಶಿಯಿಂದ ಹುಣ್ಣಿಮೆವರೆಗೂ  ಮಧ್ಯಾಹ್ನ ಹವನ, ಪಾರಾಯಣಗಳಂತಹ ವೈದಿಕ ಕಾರ್ಯಕ್ರಮಗಳು, ರಾತ್ರೆ  ದೇವರ ಉತ್ಸವ.  ಅಷ್ಟು ದಿನವೂ ಮಧ್ಯಾಹ್ನ ಅನ್ನ ಸಂತರ್ಪಣೆ ಹಾಗೂ ರಾತ್ರೆ ಉತ್ಸವದ ನಂತರ  ಒಗ್ಗರಣೆ ಅವಲಕ್ಕಿ, ಬಾಳೆಹಣ್ಣು ಮತ್ತು ಶುಂಠಿ ಏಲಕ್ಕಿ ಮಿಶ್ರಿತ ಬಿಸಿ ನೀರು.  ಸಂಜೆ ಗ್ಯಾಸ್ ಲೈಟುಗಳನ್ನು ಉರಿಸುವಾಗ ಪಕ್ಕದಲ್ಲಿ ನಿಂತು ಅವುಗಳ ಹೊಳೆಯುವ ಮೈಯಲ್ಲಿ ಕಾಣಿಸುವ ಅಕರಾಳ ವಿಕರಾಳ ಮುಖಗಳನ್ನು ನೋಡುವುದು ಆಗಿನ ಒಂದು ಪ್ರಮುಖ ಆಕರ್ಷಣೆ.  ಆ ಹೊತ್ತಿಗೆ ಆಯ್ದ ಮಂದಿಗೆ ಪಾಕ ಶಾಲೆಯಲ್ಲಿ ವಿಶೇಷ ಚಹಾ ಪಾನದ ವ್ಯವಸ್ಥೆಯೂ ಇತ್ತು. 

ದೀವಟಿಗೆ ಸಲಾಂ



ನಮ್ಮ ಜಿಲ್ಲೆಯ ಅನೇಕ ಕಡೆ ಇರುವಂತೆ ಇಲ್ಲಿಯೂ ದೀವಟಿಗೆ ಸಲಾಂ ಸಂಪ್ರದಾಯ ಇತ್ತು. ಹಿಂದೆ ಪ್ರತಿ ದಿನವೂ  ವೇಸ್ಟಿ ಉಡಿಸಿದ ಮರದ ಬೊಂಬೆಗಳು ಹೊರುವ ಪಲ್ಲಕ್ಕಿಯನ್ನೊಳಗೊಂಡ ಬಂಡಿಯಲ್ಲಿ ದೇವರನ್ನು ಕೂರಿಸಿ ಎಳೆಯುವ ಸಂಪ್ರದಾಯವಿತ್ತು.   ಹುಣ್ಣಿಮೆಯ ದೊಡ್ಡ ದೀಪೋತ್ಸವದ ದಿನ ಎದುರಿನ ಗುಡ್ಡದ ಮೇಲಿನ ಕಟ್ಟೆಯಲ್ಲಿ ಅಷ್ಟ ಸೇವಾದಿಗಳು ನಡೆದರೆ ಉಳಿದ ದಿನ  ದೇವಸ್ಥಾನದ ಸಮೀಪದ ಓಲಗ ಮಂಟಪದಲ್ಲಿ ಈ ಸೇವೆಗಳು ನಡೆಯುತ್ತಿದ್ದವು. ದೇವಸ್ಥಾನದ ನಾಲ್ಕೂ ಬದಿಗಳಲ್ಲಿ ಕಟ್ಟಿದ ಅಡಿಕೆ ಸಲಾಕೆಗಳ ಮೇಲೆ ಸಾವಿರಾರು ಮಣ್ಣಿನ  ಹಣತೆಗಳನ್ನು ಉರಿಸಲಾಗುತ್ತಿತ್ತು.  ಊರಿನ ಉತ್ಸಾಹಿ ತರುಣರು ಪಟಾಕಿ, ಬಾಣ ಬಿರುಸು, ಬಲೂನು ಇತ್ಯಾದಿಗಳ ಅಂಗಡಿ ತೆರೆಯುವುದೂ ಇತ್ತು.  ಭರ್ಜರಿ ವ್ಯಾಪಾರವೂ ಆಗುತ್ತಿತ್ತು.  ಶಬ್ದ ಮಾಲಿನ್ಯ ಉಂಟುಮಾಡುವ  ಪಟಾಕಿಗಳಿಗಿಂತ ನೋಟಕ್ಕೆ ರಮ್ಯ ಎನಿಸುವ ಸುರು ಸುರು ಕಡ್ಡಿ, ಸೂರ್ಯ-ಚಂದ್ರ ಬೆಂಕಿ ಪೆಟ್ಟಿಗೆ, ನೆಲ ಚಕ್ರ, ಹೂ ದಾನಿ, ಬಲೂನು ಇತ್ಯಾದಿಗಳಿಗೆ  ಕೊಳ್ಳುಗರ ಪ್ರಾಶಸ್ತ್ಯ ಇತ್ತು. ಶ್ರೀನಿವಾಸ ಅಸರ್ಣರು ತಯಾರಿಸಿದ  ವೈವಿಧ್ಯಮಯ ಗೂಡುದೀಪಗಳು  ದೀಪೋತ್ಸವಕ್ಕೆ ಹೆಚ್ಚಿನ  ಮೆರುಗು ನೀಡುತ್ತಿದ್ದವು. ಓಲಗ ಮಂಟಪದ ಮೇಲ್ಮಾಳಿಗೆ ಮೇಲಿದ್ದ ಮರದ ಗರುಡ ಹನುಮಂತ ವಿಗ್ರಹಗಳ ಮುಂದೆ ತಿರುಗುವ ಗೂಡುದೀಪಗಳನ್ನೂ ಅವರು ಇರಿಸುತ್ತಿದ್ದರು.  ಗರುಡ ಹನುಮಂತ ಮೂರ್ತಿಗಳಿಗೆ ಚಕ್ರಗಳನ್ನು ಅಳವಡಿಸಿ ಭಂಡಿಯೊಂದಿಗೆ ಅವುಗಳನ್ನೂ  ಉತ್ಸವದ ಜೊತೆ ಎಳೆದುಕೊಂಡು ಹೋಗುವ  ಯೋಚನೆಯೂ ಇತ್ತಂತೆ.  ಆದರೆ ಅದು ಏಕೋ ಕಾರ್ಯರೂಪಕ್ಕೆ ಬರಲಿಲ್ಲ.  ಈಗ ಓಲಗ ಮಂಟಪದ ಮೇಲ್ಮಾಳಿಗೆ ದುರ್ಬಲವಾದದ್ದರಿಂದ ಗರುಡ ಹನುಮಂತರು ಕೆಳಗಿಳಿದು  ಬಂದಿದ್ದಾರೆ. 



60ರ ದಶಕದಲ್ಲಿ ಚೀನಾ ಯುದ್ಧದ ನಂತರ ಕೆಲ ವರ್ಷ ಭಂಡಿ ಉತ್ಸವ ಸ್ಥಗಿತಗೊಂಡು ದೇವರ ಬಲಿ ದೇವಸ್ಥಾನದ  ಒಳ ಸುತ್ತಿಗೆ  ಸೀಮಿತಗೊಂಡಿತು. ಒಳಗಿನ ಅಂಬಲದ ಮೇಲೆ ತಾತ್ಕಾಲಿಕವಾಗಿ ರಚಿಸಲಾಗುತ್ತಿದ್ದ ಮಂಟಪದಲ್ಲಿ ಉತ್ಸವಮೂರ್ತಿಯನ್ನಿಟ್ಟು ಅಷ್ಟಸೇವೆಗಳನ್ನು ನಡೆಸಲಾಗುತ್ತಿತ್ತು.  ಅಲ್ಲಿ ವರೆಗೆ ರಾಮನವಮಿ ಮತ್ತು ಅಕ್ಷಯತೃತೀಯಾಗಳಂದು ನಡೆಯುತ್ತಿದ್ದ ಭಂಡಿ ಉತ್ಸವಗಳೂ ನಿಂತು ಹೋದವು.  70ರ ದಶಕದಲ್ಲಿ ಹಳೆ ಪದ್ಧತಿ ಆಂಶಿಕವಾಗಿ ಪುನರುತ್ಥಾನಗೊಂಡು ಚತುರ್ದಶಿ ವರೆಗೆ ದೇವಸ್ಥಾನದ ಒಳಗಡೆಯೇ ದೇವರ ಬಲಿ ಉತ್ಸವ, ಅಷ್ಟ ಸೇವಾದಿಗಳು ನಡೆದು ಹುಣಿಮೆಯ ದೊಡ್ಡ ದೀಪದ ದಿನ ಮಾತ್ರ  ಹೊರಸುತ್ತಿನ ಭಂಡಿ ಉತ್ಸವದ ನಂತರ ದೇವರು ಗುಡ್ಡದ ಮೇಲಿನ ಕಟ್ಟೆಗೆ ಹೋಗಿ ಅಷ್ಟಸೇವೆಗಳನ್ನು ಸ್ವೀಕರಿಸುವ ಕ್ರಮ ಆರಂಭವಾಯಿತು.  ಪಟಾಕಿ, ಬಾಣ ಬಿರುಸು ಇತ್ಯಾದಿಗಳ ಬಳಕೆ ನಿಂತು ಹೋಗಿ  ಭಕ್ತವೃಂದದ ಭಾಗವಹಿಸುವಿಕೆಯೂ ಗಮನಾರ್ಹವಾಗಿ ಕಡಿಮೆ ಆದರೂ ಅನೇಕ ವರ್ಷಗಳ ಕಾಲ ಈ ಪದ್ಧತಿ ಮುಂದುವರಿಯಿತು.

ಚತುರ್ದಶಿ ವರೆಗೆ ದೇವಸ್ಥಾನದ ಒಳಸುತ್ತಿನಲ್ಲಿ ನಡೆಯುತ್ತಿದ್ದ ಉತ್ಸವ.



ಭಂಡಿಯನ್ನು ಅದರ ಕೋಣೆಯಿಂದ ಹೊರತಂದು ದೇವಸ್ಥಾನದ ಎದುರಿಗೆ ತರುವಾಗ ಅದರಲ್ಲಿ ಕುಳಿತುಕೊಳ್ಳಲು ಚಿಕ್ಕ ಮಕ್ಕಳಾಗಿದ್ದ ನಮಗೆ ಅನುಮತಿ ಇತ್ತು. ಉತ್ಸವ ಮುಗಿದ ಮೇಲೆ ಭಂಡಿಯನ್ನು ಅದರ ಕೋಣೆಯೊಳಗೆ ಸೇರಿಸಿ ಬಾಗಿಲು ಹಾಕಿಕೊಂಡವರು ಹೇಗೆ ಹೊರಗೆ ಬರುತ್ತಾರೆ ಎಂದು ನಮಗೆ ಅಚ್ಚರಿಯಾಗುತ್ತಿತ್ತು. ಆ ಕೋಣೆಯಿಂದ ಉಗ್ರಾಣಕ್ಕೆ ಬರಲು ಓಬವ್ವನ ಕಿಂಡಿಯಂಥ ಒಂದು ತೆರೆದ ಕಿಟಿಕಿ ಇರುವುದು ಆಗ ನಮಗೆ ಗೊತ್ತಿರಲಿಲ್ಲ.     

ಪಲ್ಲಕ್ಕಿ ಕಟ್ಟುವ ಕಾರ್ಯವನ್ನು ಊರಿನವರೆಲ್ಲರೂ ಸಾಮೂಹಿಕವಾಗಿ ನಿರ್ವಹಿಸಿದರೆ  ದೀಪೋತ್ಸವಕ್ಕೆ ಸಂಬಂಧಿಸಿದ ಇತರ  ಕಾರ್ಯಗಳಿಗೆ ನಿಗದಿಯಾದ ಊರಿನ ವಿವಿಧ  ಮನೆತನಗಳಿದ್ದವು.  ಭಂಡಿ ಎಳೆಯಲು ಒಂದು ಮನೆತನವಾದರೆ, ದೂಡಲು ಇನ್ನೊಂದು ಮನೆತನ.  ದೀವಟಿಗೆ, ದಂಡ ಚಾಮರ, ಸಂಗೀತ ಸೇವೆ ಹೀಗೆ ಒಂದೊಂದಕ್ಕೂ ಬೇರೆಯೇ ಮನೆತನಗಳು. ಉತ್ಸವದ ಕೊನೆಯ ದಿನ ಸಂಬಂಧಿಸಿದ ಎಲ್ಲರಿಗೂ ಸಾಂಕೇತಿಕ  ಗೌರವ ಪ್ರದಾನ.   

ಇತರೆಡೆ ಇರುವಂತೆ ಬೇರೆಯೇ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಸಂಪ್ರದಾಯ ಸಾಮಾನ್ಯವಾಗಿ ಇಲ್ಲಿ ಇರಲಿಲ್ಲ.  ದೇವರ ಸಾನ್ನಿಧ್ಯದಲ್ಲಿ ನಡೆಯುವ ಅಷ್ಟ ಸೇವೆಗಳೇ ಊರಿನ  ಜನತೆಗೆ ವೇದ, ಶಾಸ್ತ್ರ, ಪುರಾಣ, ಸಂಗೀತಗಳಲ್ಲಿ ತಮ್ಮ ಪ್ರತಿಭೆ ತೋರಿಸಲು ವೇದಿಕೆ.  ನಾನೂ 1968ರಲ್ಲಿ ಮೊದಲ ಬಾರಿ ನಾಲ್ಕು ಜನರ ಎದುರಿಗೆ  ಕೊಳಲು ನುಡಿಸಿದ್ದು ಇಲ್ಲಿಯೇ. ಆ ಮೇಲೆ  ತರಬೇತಿಗಾಗಿ   ಬೆಂಗಳೂರಲ್ಲಿ ಇದ್ದ ಸಮಯ ಬಿಟ್ಟರೆ ಪ್ರತೀ ವರ್ಷ   ಅಷ್ಟ ಸೇವೆಯಲ್ಲಿ ಪಾಲ್ಗೊಂಡಿದ್ದೇನೆ.  

ಕಾರ್ಪೊರೇಟ್ ವಲಯದಲ್ಲಿ ಪ್ರಾಯೋಜಕತ್ವವು ಇತ್ತೀಚೆಗೆ ಕಾಣಿಸಿಕೊಂಡದ್ದಾದರೂ ಇಲ್ಲಿ ದಶಕಗಳ ಹಿಂದಿನಿಂದಲೂ ಒಂದೊಂದು ದಿನದ ಉತ್ಸವವನ್ನು ಒಬ್ಬೊಬ್ಬರು ಪ್ರಾಯೋಜಿಸುವ ಪರಿಪಾಠ ಇತ್ತು.

ಹಿಂದಿನಿಂದಲೂ ಸಂಗೀತ ವಿಭಾಗದಲ್ಲಿ ಗುರುತಿಸಿಕೊಂಡ ಬತ್ರಬೈಲು  ಕುಟುಂಬದ ವಾಸುದೇವ ತಾಮ್ಹನಕರ್ ರಚಿಸಿ ಹಾಡಿರುವ ಈ ದೀಪೋತ್ಸವದ ವೈಭವವನ್ನು ಸ್ಥೂಲವಾಗಿ ವರ್ಣಿಸುವ  ಚಿತ್ಪಾವನಿ ಭಾಷೆಯ  ಹಾಡಿನ ವೀಡಿಯೊ ಒಂದು  ಕನ್ನಡ ಉಪ ಶೀರ್ಷಿಕೆಗಳೊಂದಿಗೆ ಇಲ್ಲಿದೆ.  ವೀಡಿಯೊ ಚಿತ್ರೀಕರಣ, ಎಡಿಟಿಂಗ್, ಹಾಡಿನ ಕನ್ನಡ ಭಾವಾನುವಾದ ಎಲ್ಲ ನನ್ನವೇ,





ಮಂಗಳಾರತಿ ಪ್ರಣತಿ
ಸಾಮಾನ್ಯವಾಗಿ ಮಹಾಮಂಗಳಾರತಿಯ ಜೊತೆಗೆ ಗಂಟೆ ಜಾಗಟೆ ಹಾಗೂ ವೇದ ಮಂತ್ರ ಘೋಷಗಳಿರುವುದನ್ನು ಕಾಣುತ್ತೇವೆ.  ಆದರೆ ಇಲ್ಲಿ  ದೊಡ್ಡ ದೀಪೋತ್ಸವದ ದಿನ ಮಹಾಮಂಗಳಾರತಿ ಆದೊಡನೆ ಸಂಗೀತಕಾರರು ವಿಶೇಷ ಮಂಗಳ ಪದವೊಂದನ್ನು ಹಾಡುವ  ಪರಿಪಾಠ ಇತ್ತು. ಮಂಗಳಾರತಿ ಪ್ರಣತಿ ಎಂಬ ಆ ಸುಮಧುರ ಹಾಡನ್ನು  ವಾಸುದೇವ ತಾಮ್ಹನಕರ್ ಧ್ವನಿಯಲ್ಲಿ ಆಲಿಸಿ.




ಕಾರಣಾಂತರಗಳಿಂದ ಈಗ ದೀಪೋತ್ಸವದ ನಿರಂತರತೆಗೆ ತಡೆ ಉಂಟಾಗಿದೆ.  ಹಿಂದಿನ ವೈಭವ ಮತ್ತೆ ಮರುಕಳಿಸುವುದೆಂದು ಹಾರೈಸೋಣ.
    

Thursday 24 October 2013

ಕಳಚಿದ ಕೊನೆಯ ಕೊಂಡಿ ಮನ್ನಾಡೆ


    
     ಕೆಲ ಸಮಯ ಹಿಂದೆ ಕನ್ನಡದ ಮನ್ನಾಡೆ ಎಂಬ ಹೆಸರಲ್ಲಿ ಗಾಯಕ ಪೀಠಾಪುರಂ ನಾಗೇಶ್ವರ ರಾವ್ ನೆನಪನ್ನು ಹಂಚಿಕೊಂಡಿದ್ದೆ.  ಇಂದು ತನ್ನ ಸುಮಾರು 6 ದಶಕಗಳ ಆರಕ್ಕೇರದ ಮೂರಕ್ಕಿಳಿಯದ  ಕಲಾಯಾತ್ರೆಯನ್ನು ಮುಗಿಸಿ 94ರ ಹರೆಯದಲ್ಲಿ   ಇಹಲೋಕ  ಯಾತ್ರೆಯನ್ನು ಮುಗಿಸಿದ ಅಸಲಿ ಮನ್ನಾಡೆ  ಅರ್ಥಾತ್  ಪ್ರಬೋಧ್ ಚಂದ್ರ ಡೇ ಅವರಿಗೆ ಕೆಲವು  ಹಾಡುಗಳ ಮೂಲಕ ನುಡಿ ನಮನ ಸಲ್ಲಿಸುವ ಸಮಯ ಬಂದಿದೆ. ಅವರ ನಿಧನದೊಂದಿಗೆ ಚಿತ್ರಸಂಗೀತದ ಸುವರ್ಣಯುಗವನ್ನು ಆಳಿದ್ದ ಪುರುಷ ಗಾಯಕರ ಕೊನೆಯ ಕೊಂಡಿ ಕಳಚಿದಂತಾಗಿದೆ.

1.  ಮೇರಿ ಸೂರತ್ ತೇರಿ ಆಂಖೆಂ - ಪೂಛೊ ನ ಕೈಸೆ ಮೈನೆ. Pucho Na Kaise
     ಅವರ ಸರ್ವ ಶ್ರೇಷ್ಠ ಗೀತೆಗಳ ಪೈಕಿ ಒಂದು. ಅಹಿರ್ ಭೈರವ್ ರಾಗಾಧಾರಿತ ಎಸ್.ಡಿ. ಬರ್ಮನ್ ಸಂಯೋಜನೆ. ಆರಂಭದ ದಿನಗಳಲ್ಲಿ ಮನ್ನಾಡೇ ಅವರು ಬರ್ಮನ್ ಸಹಾಯಕರಾಗಿ ದುಡಿದಿದ್ದರು.




 
2.  ಬೂಟ್ ಪಾಲಿಷ್ - ಲಪಕ್ ಝಪಕ್  Boot Polish - Lapak Khapak
     ಬಕ್ಕ ತಲೆಯ  ದೇವಿಡ್ ಅವರ ಧ್ವನಿಯಾಗಿ ಮನ್ನಾಡೆ ಹಾಡಿದ ಶಂಕರ್ ಜೈಕಿಶನ್ ನಿರ್ದೇಶನದ ಗೀತೆ.





3. ದೂಜ್ ಕಾ ಚಾಂದ್ - ಫೂಲ್ ಗೇಂದುವಾ Duj Ka Chand - Phul Genduva
      ಹಳೆ ಗ್ರಾಮಫೋನ್ ತಟ್ಟೆಯಲ್ಲಿ ಸೂಜಿ ಸಿಕ್ಕಿಹಾಕಿಕೊಂಡಂತೆ ಕೇಳಿಸುವ ವಿಶಿಷ್ಟ ಸಂಯೋಜನೆಯುಳ್ಳ ರೋಶನ್ ಅವರ ಸ್ವರ ಕಲ್ಪನೆ. 



4.  ಚಂದಾ ಔರ್ ಬಿಜಲಿ - ಕಾಲ್ ಕಾ ಪಹಿಯಾ Chanda Aur Bijli - Kaal Ka Pahiya
     ಆರಂಭದ ದಿನಗಳಲ್ಲಿ ಹೆಚ್ಚು ಭಜನೆಗಳನ್ನೇ ಹಾಡಿ ಸಂತ ಮನ್ನಾಡೆ ಎಂದೆನ್ನಿಸಿಕೊಂಡಿದ್ದವರು ಮತ್ತೆ 60ರ ದಶಕದ ಕೊನೆಯಲ್ಲಿ  ಶಂಕರ್ ಜೈಕಿಶನ್ ನಿರ್ದೇಶನದಲ್ಲಿ ಹಾಡಿದ ಸುಂದರ ಭಜನೆ.




5.  ಬಸಂತ್ ಬಹಾರ್ - ಸುರ್ ನ ಸಜೆ Basant Bahar - Sur Na Saje
     ತ.ರಾ.ಸು ಕಾದಂಬರಿ ಹಂಸ ಗೀತೆ ಆಧರಿಸಿದ ಚಿತ್ರದ  ನೆನಪಲ್ಲುಳಿಯುವ ಹಾಡು.  ಈ ಚಿತ್ರದ ಮೂಲಕ ಶಂಕರ್ ಜೈಕಿಶನ್ ಅವರು ತಾವು ಶಾಸ್ತ್ರೀಯ ಸಂಗೀತದಲ್ಲೂ ಯಾರಿಗೂ ಕಮ್ಮಿಯಿಲ್ಲ ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದರು.



6.  ತಲಾಷ್ - ತೇರೆ ನೈನಾ Talaash - Tere Naina
     ಎಸ್.ಡಿ.ಬರ್ಮನ್ ನಿರ್ದೇಶನದಲ್ಲಿ ಮೂಡಿ ಬಂದ ಇನ್ನೊಂದು ಶ್ರೇಷ್ಠ ಹಾಡು.  ಹಿಂದಿ ಹಾಡುಗಳಲ್ಲಿ ಅಪರೂಪವಾದ ಮೃದಂಗದ ಬಳಕೆ ಇಲ್ಲಿಯ ವಿಶೇಷ.



7.  ಪಗ್ಲಾ ಕಹೀಂಕಾ - ಭೈಂಸ್ ಕೊ ಡಂಡಾ Pagla Kahin Ka - Bhains Ko Danda
     60ರ ದಶಕದಲ್ಲಿ ಶಮ್ಮಿ ಕಪೂರ್- ರಫಿ  ನಡುವೆ ಬಿಡಿಸಲಾರದಂತಹ ಬೆಸುಗೆ  ಬೆಸೆದಿದ್ದರೂ ಏಕೋ ಈ ಶಂಕರ್ ಜೈಕಿಶನ್  ಹಾಡು ಮನ್ನಾಡೆ ಪಾಲಾಯಿತು.  ಹಾಗೆಂದು ಶಂ ಜೈ ಸಂಗೀತ ನೀಡಿದ ಮೊದಲ ಶಮ್ಮಿ ಚಿತ್ರ ಉಜಾಲಾದಲ್ಲಿ ಮನ್ನಾಡೆಯೇ ಹಾಡಿದ್ದರು.



8.  ದೂರ್ ಕೀ ಆವಾಜ್ -ಹಮ್ ಭಿ ಅಗರ್ Door Ki Awaz - Hum Bhi Agar
     ರವಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಆಕರ್ಷಕ ಬರ್ತ್ ಡೇ ಹಾಡು. ಇಲ್ಲಿ ನಿಜ ಜೀವನದಲ್ಲೂ ಗೆಳೆಯರಾಗಿದ್ದ ರಫಿ- ಮನ್ನಾಡೆ ಜೊತೆಯಾಗಿದ್ದಾರೆ.  ಆಶಾ ಭೋಸ್ಲೆಯೂ ದನಿಗೂಡಿಸಿದ್ದಾರೆ. ಸಾಮಾನ್ಯವಾಗಿ ಹೀರೊಗಳಿಗೆ ರಫಿಯೇ ಹಾಡುತ್ತಿದ್ದ ಕಾಲದ ಈ ಹಾಡಲ್ಲಿ ಮಾತ್ರ ಹೀರೊ ಜೊಯ್ ಮುಖರ್ಜಿಗೆ ಮನ್ನಾಡೆ ಹಾಗೂ ಹಾಸ್ಯ ನಟ ಜಾನಿವಾಕರ್ ಅವರಿಗೆ ರಫಿ ಧ್ವನಿಯಾಗಿರುವುದು ಗಮನಿಸಬೇಕಾದ ಅಂಶ.   ರಫಿ ಹೊರತು ಇನ್ನಾರ ಧ್ವನಿಯನ್ನೂ ಜಾನಿವಾಕರ್ ಒಪ್ಪದಿದ್ದುದು ಇದಕ್ಕೆ ಕಾರಣ.



9.  ಅಭಿಲಾಷಾ - ಏಕ್ ಜಾನಿಬ್ ಶಮ್ಮೆ ಮೆಹೆಫಿಲ್  Abhilasha - Ek janib Shamme Mehfil
     ಇನ್ನೊಂದು ಮನ್ನಾಡೇ-ರಫಿ ಯುಗಳ ಗೀತೆ.  ಸಂಗೀತ ನಿರ್ದೇಶನ ಆರ್.ಡಿ.ಬರ್ಮನ್.  ಅವರಿಬ್ಬರು ಜೊತೆಯಾಗಿ ಹಾಡಿದಷ್ಟು  ಯುಗಳ ಗೀತೆಗಳನ್ನು ಇನ್ನಾವ ಪುರುಷ ಗಾಯಕ ಜೋಡಿಯೂ ಹಾಡಿರಲಾರದು.  ಇವರಿಬ್ಬರ ನಿವಾಸಗಳು ಅಕ್ಕ ಪಕ್ಕದಲ್ಲೇ ಇದ್ದುವಂತೆ.  ಇಬ್ಬರಿಗೂ ತಮ್ಮ ತಮ್ಮ ತಾರಸಿಯ ಮೇಲೆ ಗಾಳಿಪಟ ಹಾರಿಸುವ ಹವ್ಯಾಸ ಇತ್ತಂತೆ.  ಮನ್ನಾಡೆ ಗಾಳಿಪಟ ರಫಿಯವರ ಪಟಕ್ಕಿಂತ ಯಾವಾಗಲೂ ಹೆಚ್ಚು ಎತ್ತರಕ್ಕೇರುತಿತ್ತಂತೆ.  ಆಗ ರಫಿ "ಗಾಳಿಪಟದಲ್ಲಿ ನನ್ನನ್ನು ಸೋಲಿಸಿದೆಯಲ್ಲ.  ನಾಳೆ  ಯುಗಳಗೀತೆಯ ರೆಕಾರ್ಡಿಂಗ್ ನಲ್ಲಿ ನಿನ್ನನ್ನು ನೋಡಿಕೊಳ್ಳುತ್ತೇನೆ" ಎಂದು ಹುಸಿ ಧಮಕಿ ಹಾಕುತ್ತಿದ್ದರಂತೆ!



10.  ಕಲಾವತಿ - ಕುಕು ಕುಹೂ
     ಇಬ್ಬರು ಸಂಗೀತ ನಿರ್ದೇಶಕರಿದ್ದ ಕಲಾವತಿ ಚಿತ್ರದಲ್ಲಿ ಅಳವಡಿಸಲಾಗಿದ್ದ ಕುವೆಂಪು ರಚನೆ.  ಮನ್ನಾಡೇ ಹಾಗೂ ಸುಮನ್ ಕಲ್ಯಾಣಪುರ್ ಹಾಡುಗಳನ್ನು ಮುಂಬಯಿಯಲ್ಲಿ ಲಕ್ಷ್ಮಣ್ ಬೇರ್ಲೆಕರ್ ಸಂಯೋಜಿಸಿದರೆ ಇತರ ಹಾಡುಗಳ ರೂವಾರಿ ಜಿ.ಕೆ.ವೆಂಕಟೇಶ್.  ಮನ್ನಾಡೆ ಮಾರ್ಗದರ್ಶಿ, ಸಂಗೊಳ್ಳಿ ರಾಯಣ್ಣ, ಕಲ್ಪವೃಕ್ಷ  ಮುಂತಾದ ಚಿತ್ರಗಳಲ್ಲಿ ಇನ್ನೂ ಕೆಲವು ಕನ್ನಡ ಗೀತೆಗಳನ್ನು ಹಾಡಿದ್ದರು.




11.   ಮನ್ನಾಡೆ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರಕಿದ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿ ನನ್ನ ಜೊತೆ ನಡೆಸಿದ ಫೋನ್ ಇನ್ ಸಂದರ್ಶನದ ತುಣುಕು.









ರಫಿ, ತಲತ್ ತನ್ನಿಂದ ಶ್ರೇಷ್ಠರೆಂದಿದ್ದ ಮನ್ನಾಡೇ
     ಒಂದು ವೇಳೆ ತಾನು ಸಂಗೀತ ನಿರ್ದೇಶಕನಾಗಿರುತ್ತಿದ್ದರೆ ರೊಮ್ಯಾಂಟಿಕ್ ಹಾಡುಗಳನ್ನು  ರಫಿ ಅಥವಾ ತಲತ್ ಮಹಮೂದ್ ಅವರಿಂದ ಹಾಡಿಸುತ್ತಿದ್ದೆ.  ನನ್ನದು ಏನಿದ್ದರೂ ನಂತರದ ಸ್ಥಾನ ಎಂದು ಮನ್ನಾಡೇ ಹೇಳಿದ್ದನ್ನು ಅವರ ಧ್ವನಿಯಲ್ಲೇ ಕೇಳಿ.


Monday 26 August 2013

ಈ ಗಾಯಕ ಗೊತ್ತೆ



     ಪಿ.ಬಿ.ಶ್ರೀನಿವಾಸ್, ಘಂಟಸಾಲ, ಬಾಲಸುಬ್ರಹ್ಮಣ್ಯಂ ಯಾರೆಂದು ಎಲ್ಲರಿಗೂ ಗೊತ್ತು.  ಎ ಎಂ ರಾಜಾ, ಪೀಠಾಪುರಂ ನಾಗೇಶ್ವರ ರಾವ್, ಮಾಧವ ಪೆದ್ದಿ ಸತ್ಯಂ ಕನ್ನಡ ಹಾಡು ಹಾಡಿರುವುದು ಕೂಡ ಹಲವರಿಗೆ ಗೊತ್ತು.   ಆದರೆ ನಿನ್ನೆ ನಿಧನ ಹೊಂದಿದ ರಘುನಾಥ ಪಾಣಿಗ್ರಾಹಿ ಕನ್ನಡ ಚಿತ್ರಗಳಲ್ಲಿ ಹಾಡಿದ್ದಾರೆಂದು ಕೆಲವರಿಗಷ್ಟೇ ಗೊತ್ತಿರಬಹುದು.  ಒರಿಸ್ಸಾದ ಪ್ರಸಿದ್ಧ ಗಾಯಕರಾದ ಇವರು ಕನ್ನಡದಲ್ಲಿ ಒಂದೆರಡು ಹಾಡುಗಳನ್ನು ಮಾತ್ರ ಹಾಡಿರುವುದು ಇದಕ್ಕೆ ಕಾರಣ.  ಭಕ್ತ ಕನಕದಾಸ ಚಿತ್ರದ ಎಲ್ಲ ಹಾಡುಗಳನ್ನು ಇವರೇ ಹಾಡುವುದೆಂದು ನಿಶ್ಚಯವಾಗಿತ್ತಂತೆ.  ಆದರೆ ಕೊನೆ ಗಳಿಗೆಯಲ್ಲಿ  ಆ ಹಾಡುಗಳನ್ನು ಪಿ.ಬಿ.ಶ್ರೀನಿವಾಸ್ ಹಾಡಿ  ದಶಕಗಳ ಕಾಲ ರಾಜಕುಮಾರ್ ಧ್ವನಿಯಾಗಿ  ಉಲಿಯುತ್ತಾ  ಉಳಿದದ್ದು  ಇತಿಹಾಸ.  ಮನ ಮೆಚ್ಚಿದ ಮಡದಿ ಚಿತ್ರದ ಲವ್ ಲವ್ ಎಂದರೇನು ಎಂಬ ಹಾಡನ್ನು ಧ್ವನಿಮುದ್ರಿಕೆಯಲ್ಲಿ ಪಾಣಿಗ್ರಾಹಿ ಮತ್ತು ಜಮುನಾರಾಣಿ ಹಾಡಿದ್ದಾರೆ.  ಪದ್ಯಾವಳಿಯಲ್ಲೂ ಇವರ ಹೆಸರೇ ಇದೆ.  ಆದರೆ ಚಿತ್ರದಲ್ಲಿ ಪಿ.ಬಿ.ಎಸ್ ಮತ್ತು ಜಮುನಾರಾಣಿ ಹಾಡಿದ ವರ್ಶನ್ ಇದೆ !


     1957ರಲ್ಲಿ ಬಂದ ಆರ್ ನಾಗೇಂದ್ರ ರಾಯರ  ನಿರ್ಮಾಣದ  ಮೊದಲ  ಚಿತ್ರ ಪ್ರೇಮದ ಪುತ್ರಿಗಾಗಿ ರಘುನಾಥ ಪಾಣಿಗ್ರಾಹಿ ಹಾಡಿದ ಪ್ರೇಮವೆ ದೈವ ಎಂಬ ಮಧುರ ಗೀತೆಯೊಂದು ಸಾಹಿತ್ಯದೊಂದಿಗೆ ಇಲ್ಲಿದೆ.  ಆ ಸಮಯಕ್ಕೆ ದೊಡ್ಡ ಆರ್ಕೆಷ್ಟ್ರಾ ಉಪಯೋಗ ಆರಂಭವಾಗಿತ್ತಾದರೂ ಈ ಹಾಡಿನಲ್ಲಿ ಹಾರ್ಮೋನಿಯಮ್ ಮತ್ತು ತಬ್ಲಾ ಮಾತ್ರ ಬಳಸಲಾಗಿರುವುದನ್ನು ಗಮನಿಸಬಹುದು. ಈ ಚಿತ್ರದ ಸಂಗೀತ ನಿರ್ದೇಶಕರು ಪದ್ಮನಾಭ ಶಾಸ್ತ್ರಿಆರ್ ಎನ್ ಜಯಗೋಪಾಲ್ ಈ ಚಿತ್ರದ ಮೂಲಕವೇ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದರು.  ಆದರೆ ಈ ಹಾಡಿನ ಸಾಹಿತ್ಯ ಅವರದ್ದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ.  ಇದೇ ಚಿತ್ರದ ಪಿ ಲೀಲಾ ಹಾಡಿರುವ ತ್ರಿಭುವನ ಜನನಿ ಜಗನ್ಮೋಹಿನಿ ಅವರೇ ಬರೆದದ್ದು.





ಪ್ರೇಮವೇ ದೈವ ಹೇ ಜೀವ
ಪ್ರೇಮವೇ ದೈವ
ಪ್ರೇಮವೆ ಧರ್ಮ ಪ್ರೇಮವೆ ಕರ್ಮ
ಪ್ರೇಮವೇ ದೈವ ಹೇ ಜೀವ
ಪ್ರೇಮವೇ ದೈವ


ಪ್ರೇಮದ ಪಥವ ಶೋಧಿಸು ಜೀವ
ಪ್ರೇಮದಿ ಪೂಜಿಸೆ  ದೇವನು ಒಲಿವ
ಪ್ರೇಮವೇ ದೈವ ಹೇ ಜೀವ
ಪ್ರೇಮವೇ ದೈವ

ಜನನಿಯ ಪ್ರೇಮ ಜನಕನ ಪ್ರೇಮ
ತನುಜನ ಪಾಲಿಪ ನೇಮ
ಮಾನವ ಕೋಟಿಯ ಕಾಯುವ  ಮರ್ಮ
ಸನಾತನವು ಈ ಪ್ರೇಮ
ಜಾತಿ ಮತಗಳ ಗಣಿಸದು ಪ್ರೇಮ
ನೀತಿಯ ಮಾರ್ಗವಿದೇ ಪ್ರೇಮ
ಸತ್ಯದ ಸಾಧನ ನಿರ್ಮಲ ಪ್ರೇಮ
ಸತ್ಯ ಸ್ವರೂಪನು ಆ ಪರಮಾತ್ಮ
ಪ್ರೇಮವೇ ದೈವ ಹೇ ಜೀವ
ಪ್ರೇಮವೇ ದೈವ

 
    

Thursday 27 June 2013

ಅಣಕವಾಡುಗಳೆಂಬ ಫ್ರುಟ್ ಸಲಾದ್


     ಸುಪ್ರಸಿದ್ಧ ಚಲನ ಚಿತ್ರಗೀತೆಗಳ ತುಣುಕುಗಳನ್ನು ಸೇರಿಸಿ ರಚಿಸಲ್ಪಟ್ಟ ಅಣಕವಾಡುಗಳು ಎಲ್ಲ ಭಾಷೆಯ ಚಲನಚಿತ್ರಗಳಲ್ಲೂ ಬಂದಿವೆ.  ಹೆಚ್ಚಾಗಿ ಇವು ಹಾಸ್ಯ ಸನ್ನಿವೇಶಗಳಿಗಾಗಿ ಸಂಯೋಜಿಸಲ್ಪಟ್ಟರೂ ಕೆಲವೊಮ್ಮೆ ಒಂದು ರೂಪಕದ ರೂಪದಲ್ಲೂ ಇರುವುದುಂಟು.   ಕಿಶೋರ್, ಮುಕೇಶ್ ಅಥವಾ ಆಶಾ ಭೋಸ್ಲೆ ಹಾಡಿದ್ದ ಹಾಡನ್ನು ರಫಿ ಹಾಡಿದರೆ ಹೇಗಿರುತ್ತದೆ, ರಫಿ ಹಾಡು ಆಶಾ ಭೋಸ್ಲೆ ಸ್ವರದಲ್ಲಿ ಹೇಗೆ ಕೇಳಿಸುತ್ತದೆ, ಪೀಠಾಪುರಂ ಧ್ವನಿಯಲ್ಲಿದ್ದ ಹಾಡು ಪಿ.ಬಿ.ಎಸ್  ಕಂಠದಲ್ಲಿ,  ಜಾನಕಿ ಹಾಡು ಬೆಂಗಳೂರು ಲತಾ ಧ್ವನಿಯಲ್ಲಿದ್ದರೆ ಹೇಗನ್ನಿಸುತ್ತದೆ  ಎಂದು ಹೋಲಿಸುತ್ತಾ ಇಂತಹ ಅಣಕವಾಡುಗಳನ್ನು ಆಲಿಸುವುದು ಮೋಜೆನ್ನಿಸುತ್ತದೆ.   ತಮ್ಮ ಹಳೆಯ ಚಿತ್ರಗಳ ಗೀತೆಗಳನ್ನು ಮಾತ್ರವಲ್ಲದೆ ಇತರರ (ಹೆಚ್ಚಾಗಿ ಶಂಕರ್ ಜೈಕಿಶನ್) ಗೀತೆಗಳ ತುಣುಕುಗಳನ್ನೂ  ಇವು ಒಳಗೊಳ್ಳುತ್ತಿದ್ದುದು ಅಂದಿನ ಸಂಗೀತ ನಿರ್ದೇಶಕರ ವಿಶಾಲ ಮನೋಭಾವಕ್ಕೆ ಸಾಕ್ಷಿ.  ಅಂತಹ ಕೆಲವು ಕುತೂಹಲಕರ ಅಣಕವಾಡುಗಳು ಇಲ್ಲಿವೆ.

1. ಮೈ ಚುಪ್ ರಹೂಂಗೀ
ಚಾಹೆ ಕೊಯಿ ಮುಝೆ ಜಂಗ್ಲಿ ಕಹೆದಾದಿಯಮ್ಮಾ ಮಾನ್ ಜಾವೊ, ಲೇಕೆ ಪಹಲಾ ಪಹಲಾ ಪ್ಯಾರ್ ಮುಂತಾದ ಹಾಡುಗಳ ಸಾಲುಗಳನ್ನೊಳಗೊಂಡ ಇದು ಮೊಲವೊಂದು ಸಿಂಹವನ್ನು ಯುಕ್ತಿಯಿಂದ ಸೋಲಿಸುವ ಕಥೆಯನ್ನು ಮಕ್ಕಳು ಅಭಿನಯಿಸಿ ತೋರಿಸುವ ಸನ್ನಿವೇಶಕ್ಕಾಗಿ  ಚಿತ್ರಗುಪ್ತ ಅವರಿಂದ ಸಂಯೋಜಿಸಲ್ಪಟ್ಟಿದೆ.




2. ಏಕ್ ಫೂಲ್ ದೋ ಮಾಲಿ
ಜೊ ವಾದಾ ಕಿಯಾ ವೊ, ದಿಲ್ ಕೆ ಝರೊಕೆ ಮೆ ಮುಂತಾದವುಗಳನ್ನೊಳಗೊಂಡ ಇದು ಹಾಸ್ಯ ಸನ್ನಿವೇಶಕ್ಕೆ ರವಿ ಅವರ ಸಂಯೋಜನೆ. ಆಶಾ ಭೋಸ್ಲೆ ಪರದೆ ಮೆಂ ರಹನೆ ದೋ ಧಾಟಿಯಲ್ಲಿ ಮೇರಿ ತರಹ ಗಂಜಾ ಎಂದು ರಫಿ ಧ್ವನಿಯಲ್ಲಿ ಡೇವಿಡ್  ತನ್ನ ಬೋಳು ತಲೆಯನ್ನು ತಾನೇ ಲೇವಡಿ ಮಾಡಿಕೊಳ್ಳುವುದು ಇದರ ಹೈಲೈಟ್.




3. ಲಾಖೊಂ ಮೆಂ ಏಕ್
ಈ ಹಾಡಿನಲ್ಲಿ ಮೆರೆ ಸಾಮನೆವಾಲಿ ಖಿಡಕಿ ಮೆಂ, ಮೆರೆ ಸಪನೊಂ ಕಿ ರಾನಿ , ಓ ಮೆರೆ ಸೋನಾರೆಯೇ ಜೊ ಮೊಹಬ್ಬತ್ ಹೈ ಮುಂತಾದ ಬಹುತೇಕ ತಮ್ಮದೇ ಹಾಡುಗಳ ತುಣುಕುಗಳನ್ನು ಆರ್.ಡಿ. ಬರ್ಮನ್ ಅಳವಡಿಸಿದ್ದಾರೆ.




4. ಮೈ ಸುಂದರ್ ಹೂಂ
ಇತರರ  ಅಣಕವಾಡುಗಳಲ್ಲಿ ತಮ್ಮ  ಹಾಡುಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದಕ್ಕೆ  ಕೃತಜ್ಞತೆಯೋ ಎಂಬಂತೆ ಇಲ್ಲಿ ಶಂಕರ್ ಜೈಕಿಶನ್ ಅವರು ಲಕ್ಷ್ಮಿ-ಪ್ಯಾರೆ, ಕಲ್ಯಾಣಜೀ ಆನಂದಜೀ, ಎಸ್.ಡಿ.ಬರ್ಮನ್ ಮುಂತಾದವರ ಟ್ಯೂನ್‌ಗಳನ್ನೂ ಬಳಸಿದ್ದಾರೆ.  ತಮ್ಮ ರಚನೆಗಳೇ ಆದ ತೇರಿ ಪ್ಯಾರಿ ಪ್ಯಾರಿ, ಮುನ್ನೆ ಕಿ ಅಮ್ಮಾ , ಏ ಭಾಯ್ ಜರಾ ದೇಖ್ ಕೆ ಚಲೊ ಮುಂತಾದವೂ ಇವೆ. ಮನ್ನಾಡೆ  ಧ್ವನಿಯಲ್ಲಿ ಆರಾಧನಾ ಹಾಡುಗಳನ್ನು ಇದರಲ್ಲಿ ಕೇಳಬಹುದು.




5. ವಾರಿಸ್
ಹಾಸ್ಯ ಪಾತ್ರಗಳಲ್ಲೇ ಹೆಚ್ಚು ಗುರುತಿಸಿಕೊಂಡರೂ ಮಹಮೂದ್ ಬಲು ಪ್ರತಿಭಾವಂತ ನಟ. ಅತ್ಯುತ್ತಮ ಮಿಮಿಕ್ರಿ ಪಟು ಕೂಡ.  ಹಮ್‌ಜೋಲಿ ಚಿತ್ರದಲ್ಲಿ ಆತ ತ್ರಿಪಾತ್ರಧಾರಿಯಾಗಿ ಪೃಥ್ವಿರಾಜ ಕಪೂರ್ ಮತ್ತು ರಾಜ್ ಕಪೂರ್ ಅವರ ನಕಲು ಮಾಡಿದ್ದನ್ನು ಅನೇಕರು ನೋಡಿರಬಹುದು. ವಾರಿಸ್ ಚಿತ್ರದ ಈ mixture ಹಾಡಲ್ಲಿ ಆತ ಶಮ್ಮಿ ಕಪೂರನನ್ನು ನಕಲು ಮಾಡಿದ್ದ.







Sunday 21 April 2013

ಪಿ.ಬಿ.ಶ್ರೀನಿವಾಸ್ ರೇಡಿಯೊ ಸಂದರ್ಶನ


     ಇಂದಿನ ನೂರಾರು  ಚಾನಲ್ ಗಳ  ಕೇಬಲ್ ಟಿ.ವಿ,  ಅಂತರ್ಜಾಲ, CD, MP3 ಮುಂತಾದವುಗಳ ಮಧ್ಯೆಯೂ ನನ್ನ ಮೊದಲ ಪ್ರೀತಿ ರೇಡಿಯೊ. ಸ್ಥಳೀಯ ಕೇಂದ್ರಗಳ ಕಾರ್ಯಕ್ರಮಗಳಿಗಿಂತಲೂ ವಿಶೇಷ ಪ್ರಯತ್ನದ ಮೂಲಕ ದೂರ ದೂರದ ಕೇಂದ್ರಗಳ ಕಾರ್ಯಕ್ರಮಗಳನ್ನು ಆಲಿಸುವುದು ನನಗೆ ಹೆಚ್ಚು ಖುಶಿ ನೀಡುತ್ತದೆ.  ಹಗಲು ಹೊತ್ತಿನಲ್ಲಿ  short wave ಹಾಗೂ ರಾತ್ರಿ ಹೊತ್ತು medium wave ನಲ್ಲಿ ಖಂಡಾಂತರದ ಕಾರ್ಯಕ್ರಮಗಳನ್ನೂ ಸುಲಭವಾಗಿ ಆಲಿಸಬಹುದು.  ಆದರೆ FM ಕೇಂದ್ರಗಳ ಸಾಮಾನ್ಯ 60 ರಿಂದ 70 ಕಿ.ಮೀ ವ್ಯಾಪ್ತಿಯನ್ನು ಮೀರಬೇಕಾದರೆ ಕೊಂಚ ಶ್ರಮ ಪಡಬೇಕಾಗುತ್ತದೆ.   ಮಂಗಳೂರಿನಿಂದ 140 ಕಿ.ಮೀ ದೂರದ ಮಡಿಕೇರಿ ಕೇಂದ್ರದ ಕಾರ್ಯಕ್ರಮಗಳನ್ನು ಹಳೆಯ TV  antenna ಉಪಯೋಗಿಸಿ ಕೆಲವು ವರ್ಷಗಳಿಂದ ಆಲಿಸುತ್ತಾ ಬಂದಿದ್ದೇನೆ.  ಇತ್ತೀಚೆಗೆ antenna ಎತ್ತರವನ್ನು ಮತ್ತಷ್ಟು ಏರಿಸಿ ಕೆಲವು ಪ್ರಯೋಗಗಳನ್ನು ನಡೆಸಿದಾಗ ನನ್ನ Samsug Home Theater ನಲ್ಲಿ 170 ಕಿ.ಮೀ ದೂರದ ಹಾಸನ FM ಕೇಂದ್ರದ ಕಾರ್ಯಕ್ರಮಗಳೂ ಸ್ಪಷ್ಟವಾಗಿ ಕೇಳಿಸತೊಡಗಿದವು. ಪಿ.ಬಿ ಶ್ರೀನಿವಾಸ್ ಜತೆ ಹಾಸನ ಆಕಾಶವಾಣಿ ನಡೆಸಿದ್ದ ಸಂದರ್ಶನವೊಂದು ಇಂದು ಪ್ರಸಾರವಾದಾಗ  ನನ್ನ ಈ ಪರಿಶ್ರಮ ಸಾರ್ಥಕವೆನಿಸುವ  ಅಪೂರ್ವ ಕ್ಷಣವೊಂದು ಪ್ರಾಪ್ತವಾಯಿತು.   USB ತಂತ್ರಜ್ಞಾನದ ಕೃಪೆಯಿಂದ ಸ್ಪಷ್ಟ ಧ್ವನಿಮುದ್ರಣವೂ ಸಾಧ್ಯವಾಯಿತು. ಬೇರೆಲ್ಲೂ ಕೇಳ ಸಿಗಲಾರದ ಆ ಕಾರ್ಯಕ್ರಮದ ಆಯ್ದ ಭಾಗವನ್ನು ಇಲ್ಲಿ ಪ್ರಸ್ತುತಪಡಿಸಿದ್ದೇನೆ.




 
ಹಾಸನ ಆಕಾಶವಾಣಿಯಿಂದಲೇ ಲಭ್ಯವಾದ ಪಿ.ಬಿ.ಎಸ್ ಅವರ ಮೊದಲ ಕನ್ನಡ ಚಿತ್ರ ‘ಜಾತಕಫಲ’ದ  ‘ಚಿಂತಿಸದಿರು ರಮಣಿ’ ಹಾಡು ಇಲ್ಲಿದೆ.



     ಇದಕ್ಕೆ ಪೂರಕವಾಗಿ ತನ್ನ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹೆಸರಾದ ಮಡಿಕೇರಿ ಆಕಾಶವಾಣಿ ಪ್ರಸಾರ ಮಾಡಿದ ಪಿ.ಬಿ.ಎಸ್ ಬಹುಭಾಷಾ ಗೀತೆಗಳನ್ನೊಳಗೊಂಡ ಪ್ರಸ್ತುತಿಯೊಂದು ಇಲ್ಲಿದೆ. 

Sunday 14 April 2013

ಹೊರಟೆ ಸೇರೆ ನಮ್ಮ ಊರ ನಿಮಗೆ ನನ್ನ ನಮಸ್ಕಾರ



ಕನ್ನಡ, ತುಳು, ತಮಿಳು, ತೆಲುಗು, ಮಲೆಯಾಳ, ಕೊಂಕಣಿ , ಸಂಸ್ಕೃತ, ಹಿಂದಿ ಇತ್ಯಾದಿ ಭಾಷೆಗಳ ರಚನೆಗಳನ್ನು ಆಯಾ ಭಾಷಿಗರೇ ನಾಚುವಷ್ಟು ಸಹಜವಾಗಿ ಹಾಡುತ್ತಿದ್ದ, ಅದ್ಭುತ ಉಸಿರಿನ ನಿಯಂತ್ರಣ, ಧ್ವನಿ ಭಾರ, ಮಂದ್ರದ ಜೀರು, ಸ್ಪಷ್ಟ ಉಚ್ಚಾರಗಳ ಒಡೆಯ, ಗಾನೆ ಗಾನೆ ಪೆ  ಲಿಖಾ ಹೈ ಗಾನೆ ವಾಲೆ ಕಾ ನಾಮ್ ಅನ್ನುತ್ತಾ ಕೊನೆ ಉಸಿರಿನವರೆಗೂ ಉಲ್ಲಾಸಪೂರ್ಣ ಜೀವನ ನಡೆಸಿ ಇಂದು ಪಂಚತ್ವವನ್ನು ಹೊಂದಿದ    ಗಾನ ಗಂಧರ್ವ ಪಿ.ಬಿ ಶ್ರೀನಿವಾಸ್ ಅವರಿಗೆ  ಆಯ್ದ ಐದು ಹಾಡುಗಳ ಪಂಚ  ಗಾನ ನಮನ.  ಭೌತಿಕವಾಗಿ ಇನ್ನು ಅವರನ್ನು ನಾವು ಕಾಣಲಾರೆವಾದರೂ ನಮ್ಮೆಲ್ಲರ ಮನಗಳಲ್ಲಿ ನೆಲೆಯಾಗಿರುವ ಸಹಸ್ರಾರು ಹಾಡುಗಳ ಮೂಲಕ ಅವರು ಸದಾ ನಮ್ಮೊಂದಿಗೆ ಇರುತ್ತಾರೆ. 70ರ ದಶಕದ ಮಧ್ಯಭಾಗದಲ್ಲಿ  ಕ್ಷಮತೆಯ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗ ಅವರನ್ನು ಕಡೆಗಣಿಸತೊಡಗಿ  ಇನ್ನಷ್ಟು ಮಧುರ ಗೀತೆಗಳು ನಮ್ಮದಾಗುವ ಅವಕಾಶ ತಪ್ಪಿ ಹೋದ ದುರಂತ ಮಾತ್ರ ಮರೆಯಲಾಗದ್ದು.

1.  ನವಜೀವನ ಚಿತ್ರದ ಸರ್ವ ಧರ್ಮ ಸಮನ್ವಯದ ಪ್ರಾರ್ಥನೆ.



2.  ಬದುಕಿದೆನು ಬದುಕಿದೆನು - ಭಕ್ತ ಕನಕದಾಸ



3.  ತೂಗುದೀಪವಿದು  ನಿಜ ಬಾಳಿನ ರೂಪವಿದು -  ತೂಗುದೀಪ



4.  ನಾ ಪಾಪವದೇನ ಮಾಡಿದೆನೊ - ಓಹಿಲೇಶ್ವರ



5.  ಸಂತ ತುಕಾರಾಂ ಚಿತ್ರದ ಹೊರಟೆ ಸೇರೆ ನಮ್ಮ ಊರ ನಿಮಗೆ ನನ್ನ ನಮಸ್ಕಾರ  ಹಾಗೂ  ಶಿವ ಕ್ಷಮಾಪಣಾ ಸ್ತೋತ್ರ



ಇನ್ನಷ್ಟು ಆಯ್ದ ಪಿ.ಬಿ.ಎಸ್ ಹಾಡುಗಳಿಗೆ  ವಿವಿಧ ಸಂಗೀತ ನಿರ್ದೇಶಕರ ಒಡನಾಟದಲ್ಲಿ ಪಿ.ಬಿ.ಎಸ್ Top 10 ಮತ್ತು  ಮಂದ್ರದಲ್ಲಿ ಪಿ.ಬಿ.ಎಸ್ ಮಾಂತ್ರಿಕತೆ  ನೋಡಿ.

Friday 29 March 2013

ರೇಡಿಯೋವನ್ನು ಸಿನಿಮಾ ಟಾಕೀಸ್ ಮಾಡುತ್ತಿದ್ದ ಹಾಡು


     ನಾನು 6ನೇ ತರಗತಿ ಸೇರುವ ಹೊತ್ತಿಗೆ ನಮ್ಮ ಮನೆಗೆ ರೇಡಿಯೋ ಪ್ರವೇಶವಾಗಿತ್ತು.  ನಮ್ಮ ಅಣ್ಣಂದಿರಿಗೆಲ್ಲ ಶಾಸ್ತ್ರೀಯ ಸಂಗೀತ, ಹರಿಕತೆ ಇತ್ಯಾದಿ ಇಷ್ಟವಾದರೆ ನನ್ನ ಮೊದಲ ಆಯ್ಕೆ ಚಿತ್ರಗೀತೆಗಳು. ಆಗೆಲ್ಲ ನಮಗೆ ಸಿನಿಮಾ ನೋಡುವ ಅವಕಾಶ  ಸಿಗುತ್ತಿದ್ದುದು ಬೇಸಗೆ ರಜೆಯಲ್ಲಿ   ನಮ್ಮ ಅಕ್ಕನ ಮನೆಗೆ ಹೋದಾಗ ಕಾರ್ಕಳದ ಜೈಹಿಂದ್ ಟಾಕೀಸಿನಲ್ಲಿ ಉತ್ತಮ ಚಿತ್ರ ಓಡುತ್ತಿದ್ದರೆ ಮಾತ್ರ.    ಈ ರೀತಿ ಜೇನುಗೂಡು, ಕನ್ಯಾರತ್ನ, ಕಿತ್ತೂರು ಚೆನ್ನಮ್ಮ ಚಿತ್ರಗಳನ್ನು ನೋಡಿದ್ದೆ.  ಈ ಚಿತ್ರಗಳ ಹಾಡುಗಳು ರೇಡಿಯೋದಲ್ಲಿ ಕೇಳಿಬಂದಾಗ ಹೆಚ್ಚು ಖುಶಿ ನೀಡುತ್ತಿದ್ದವು. ಅದರಲ್ಲೂ ಸಂಭಾಷಣೆಗಳನ್ನೂ ಒಳಗೊಂಡಿದ್ದ  ಯಾವುದಾದರೂ ಹಾಡಿದ್ದರೆ    ಮತ್ತೆ  ಆ   ಸಿನಿಮಾ ನೋಡಿದ ಅನುಭವವಾಗುತ್ತಿತ್ತು.   ಕಿತ್ತೂರು ಚೆನ್ನಮ್ಮ ಚಿತ್ರದ ಅಂತಹುದೇ ದೇವರು ದೇವರು ದೇವರೆಂಬುವರು ಎಂಬ ಒಂದು ಸವಾಲ್ ಜವಾಬ್  ಹಾಡು  ಆಕಾಶವಾಣಿ ಬೆಂಗಳೂರು ಕೇಂದ್ರದಿಂದ  ಆಗಾಗ ಪ್ರಸಾರವಾಗುತ್ತಿತ್ತು.  ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದ 6 ನಿಮಿಷದ ಈ ಹಾಡಿನಲ್ಲಿ   ನರಸಿಂಹರಾಜು, ಬಾಲಕೃಷ್ಣ ಮತ್ತಿತರರ ಉತ್ತರ ಕರ್ನಾಟಕ ಶೈಲಿಯ ಸಂಭಾಷಣೆ ಆಲಿಸಿದಾಗ ನಾವು ಸಿನಿಮಾ ಟಾಕೀಸಲ್ಲೇ ಇದ್ದೇವೇನೋ ಅನ್ನಿಸುತ್ತಿತ್ತು.  ಎಸ್. ಜಾನಕಿ, ಜೆ.ವಿ.ರಾಘವುಲು, ರುದ್ರಪ್ಪ ಮತ್ತಿತರರು ಹಾಡಿದ್ದ   ಈ ಹಾಡಿಗೆ  ಪಿ.ಬಿ.ಶ್ರೀನಿವಾಸ್ ಅವರ ಕೊಂಚ ಅನುನಾಸಿಕ  ಧ್ವನಿ ವಿಶೇಷ ಮೆರುಗು ನೀಡಿದೆ.  ಚೌಡಕಿ, ತಮ್ಮಟೆ, ತಬ್ಲಾ, ಢೋಲಕ್, ಮೋರ್ ಸಿಂಗ್ ಮುಂತಾದ ವಿವಿಧ  ತಾಳವಾದ್ಯಗಳನ್ನು ಒಳಗೊಂಡ ಇದರಲ್ಲಿ ಮಹಾರಾಷ್ಟ್ರದ  ಢೋಲಕಿಯ ಆಕರ್ಷಕ ನುಡಿತವಿದೆ.  ಚಿತ್ರಗೀತೆಗಳಲ್ಲಿ ಸಾಮಾನ್ಯವಾಗಿರುವ ವಯಲಿನ್, ಕೊಳಲು, ಮ್ಯಾಂಡೊಲಿನ್, ಕ್ಲಾರಿನೆಟ್ ಮುಂತಾದ  ವಾದ್ಯಗಳ ಯಾವುದೇ interlude ಈ ಹಾಡಿನಲ್ಲಿ ಇಲ್ಲದಿರುವುದನ್ನು ಗಮನಿಸಬಹುದು.

      ಜಿ.ವಿ.ಅಯ್ಯರ್ ಸಾಹಿತ್ಯದ ಈ ಹಾಡಿನ 4:30ನೇ ನಿಮಿಷಕ್ಕೆ ನಿದ್ರೆಯ ಬಗ್ಗೆ  ಸ್ವಾರಸ್ಯಕರವಾದ ವಿಶ್ಲೇಷಣೆಯೊಂದಿದೆ. ಅದರಲ್ಲಿ  ಸ್ವಚ್ಛ ಮನದವರೊಡನೆ ಸರಸವಾಡುವುದು ನಿದ್ದೆ ಎಂಬ ಸಾಲು ನನಗೆ ತುಂಬಾ ಇಷ್ಟ. ಇದೇ ಆಶಯದ ನನ್ನ ಚುಟುಕವೊಂದು ಹೀಗಿದೆ.

ಪರವಸ್ತು ಧನ ಕನಕ ನಿನಗಾಗೆ ಮಣ್ಣು
ನಿತ್ಯ ನಿದ್ರೆಯ ಪಡೆವೆ ಮುಚ್ಚುತಲೆ ಕಣ್ಣು
ಹೊತ್ತದಿರಲೆಂದಿಗೂ ಹೊಟ್ಟೆಯಲಿ ಕಿಚ್ಚು
ಫಲದ ಗೊಡವೆಯ ಬಿಟ್ಟು ದುಡಿಮೆಯನೆ ನೆಚ್ಚು

     H M V ಯವರು ಬಿಡುಗಡೆಗೊಳಿಸಿದ್ದ ಕಿತ್ತೂರು ಚೆನ್ನಮ್ಮ ಚಿತ್ರದ cassette ನಲ್ಲೂ ಒಳಗೊಂಡಿರದ,  ಅಂತರ್ಜಾಲದಲ್ಲೂ ಸುಲಭದಲ್ಲಿ ಸಿಗದ, ರೇಡಿಯೋ ನಿಲಯದವರೂ ಮರೆತ ಈ ಹಾಡು  ನಿಮಗಾಗಿ ಇಲ್ಲಿದೆ.


Sunday 10 March 2013

ಎಲ್ಲೋ ಜೋಗಪ್ಪ ನಿನ್ನರಮನೆ


ಸುಮಾರು 35 ವರ್ಷ ಹಿಂದಿನ ಮಾತು.  ಆಗ ತಾನೇ ನೇಶನಲ್ ಪಾನಾಸೋನಿಕ್ ಟೇಪ್ ರೆಕಾರ್ಡರ್ ಒಂದನ್ನು ಖರೀದಿಸಿದ್ದೆ.  ವಿವಿಧ ಮೂಲಗಳಿಂದ ಹಳೆ ಚಿತ್ರಗೀತೆಗಳನ್ನು ಸಂಗ್ರಹಿಸಿ ಧ್ವನಿಮುದ್ರಿಸಿಕೊಳ್ಳುವುದರ ಜೊತೆಗೆ ಆಗಾಗ ಇತರ ಪ್ರಯೋಗಗಳನ್ನು ಮಾಡುವುದೂ ಇತ್ತು.  ಆನಂಗಳ್ಳಿಯ ನಮ್ಮ ಕೂಡು ಕುಟುಂಬದಲ್ಲಿ ಹಾಡು ಪಾಡು ನಡೆಯುತ್ತಲೇ ಇರುತ್ತಿತ್ತು.  ಪೂನಾದಲ್ಲಿರುವ ನಮ್ಮಣ್ಣ ಒಮ್ಮೆ ಊರಿಗೆ ಬಂದಿದ್ದ ಸಮಯದಲ್ಲಿ ನಮ್ಮ ಕೋರಲ್ ಗ್ರೂಪನ್ನು ಒಟ್ಟುಗೂಡಿಸಿ ಒಂದು ಹಾಡು ಯಾಕೆ ಧ್ವನಿಮುದ್ರಿಸಬಾರದು ಎಂಬ ಯೋಚನೆ ಬಂದಾಗ   ಪ್ರಖ್ಯಾತ ಗಾಯಕ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ  ಅವರು  ಕಲಿಸಿ ಕೊಟ್ಟಿದ್ದ ಎಲ್ಲೋ ಜೋಗಪ್ಪ ಹಾಡು ನೆನಪಿಗೆ ಬಂತು.  ನಾನು ಅಷ್ಟಿಷ್ಟು ಕೊಳಲು ನುಡಿಸುತ್ತಿದ್ದೆ.  ಕೀಲಿಗಳೆಲ್ಲ ಮುರಿದು ತಂತಿ ಮಾತ್ರ ಉಳಿದಿದ್ದ ಬುಲ್ ಬುಲ್ ತರಂಗವೊಂದು  ಮನೆಯಲ್ಲಿತ್ತು. ಚಿಕ್ಕ ಡಬ್ಬಿಯೊಂದು ತಾಳವಾದ್ಯದ ಕೆಲಸ ಮಾಡಿತು.  ಮನೆಯ ಒಂದು ಕೋಣೆ ಸ್ಟೂಡಿಯೊ ಆಗಿ ಪರಿವರ್ತನೆಗೊಂಡು ಒಂದೆರಡು ರಿಹರ್ಸಲುಗಳ ನಂತರ ಟೇಕ್ ಕೂಡ ಓಕೆ ಆಯಿತು.  ಅಂದಿನಿಂದ ಟೇಪಲ್ಲಿ ಮ್ಯಾಗ್ನೆಟಿಕ್ ರೂಪದಲ್ಲಿ ಹಾಯಾಗಿದ್ದ  ಆ ಹಾಡು ಡಿಜಿಟಲ್  ರೂಪ ತಾಳಿ ಇಲ್ಲೀಗ ಅನಾವರಣಗೊಂಡಿದೆ.



ಎಲ್ಲೋ ಜೋಗಪ್ಪ ನಿನ್ನ ಅರಮನೆ
ಎಲ್ಲೋ ಜೋಗಪ್ಪ ನಿನ್ನ ತಳಮನೆ

ಕಂಕಣಘಟ್ಟ ಕಾರಣಘಟ್ಟ
ಮತಿಘಟ್ಟ ಮಾರಣಘಟ್ಟ
ಅಲ್ಲಿಗೈವತ್ತು ಗಾವುದರಮನೆ
ಅಲ್ಲಿಗೆಪ್ಪತು ಗಾವುದ ತಳಮನೆ

ಉದ್ದಿನ್ ಹೊಲವ ಬಿಟ್ಟು
ಮುದ್ದಾಡೊ ಗಂಡನ ಬಿಟ್ಟು
ಗುಡ್ಡಹತ್ತೊ ಜೋಗಿಕೂಟೆ ಬರಬಹುದೇ
ಗುಡ್ಡಹತ್ತೊ ಜೋಗಿಕೂಟೆ ಬರಬಹುದೇ

ಎಳ್ಳೀನ್ ಹೊಲವ ಬಿಟ್ಟು
ಒಳ್ಳೆ ಗಂಡನ ಬಿಟ್ಟು
ತಳ್ಹೊತ್ತು ಜೋಗಿಕೂಟೆ ಬರಬಹುದೇ
ತಳ್ಹೊತ್ತು ಜೋಗಿಕೂಟೆ ಬರಬಹುದೇ

ಕಡ್ಲೆ ಹೊಲವ ಬಿಟ್ಟು
ಕಡುಜಾಣ ಗಂಡನ ಬಿಟ್ಟು
ಕಡೆಹೊತ್ತು ಜೋಗಿಕೂಟೆ ಬರಬಹುದೇ
ಕಡೆಹೊತ್ತು ಜೋಗಿಕೂಟೆ ಬರಬಹುದೇ

Monday 14 January 2013

ಪದ್ಯಾವಳಿಯಿಂದ ಒಂದು ಪದ್ಯ

     ಸುಮಾರು 60ರ ದಶಕದ ಕೊನೆಯವರೆಗೆ  ಹಿಂದಿ ಚಿತ್ರಗಳ ಹಾಡುಗಳು ಬಿಡುಗಡೆಯ ಒಂದೆರಡು ತಿಂಗಳ ಮೊದಲೇ ರೇಡಿಯೊದಲ್ಲಿ ಪ್ರಸಾರವಾಗತೊಡಗಿ ರೇಡಿಯೊ ಸಿಲೊನ್ ನಲ್ಲಿ  ಬರುತ್ತಿದ್ದ ಆ ಚಿತ್ರಗಳ ಜಾಹೀರಾತು ಹಾಗೂ ರೇಡಿಯೊ ಪ್ರೋಗ್ರಾಮ್ ಗಳಿಂದಾಗಿ ಚಿತ್ರಗಳ ಕಥಾ ಸಾರಾಂಶ ಹಾಗೂ ಹಾಡುಗಳು ಎಲ್ಲರಿಗೂ  ಮೊದಲೇ ಕಂಠಪಾಠವಾಗಿರುತ್ತಿದ್ದವು.  ಆದರೆ ಕನ್ನಡ ಚಿತ್ರಗಳ ಹಾಡುಗಳು ರೆಡಿಯೊದಲ್ಲಿ ಪ್ರಸಾರವಾಗುತ್ತಿದ್ದುದು ಚಿತ್ರ ಬಿಡುಗಡೆಯ ಒಂದೆರಡು ತಿಂಗಳ ನಂತರವೇ.  ಹೀಗಾಗಿ ಚಿತ್ರಗಳ ಹಾಡು ಹಾಗೂ ಕಥಾಸಾರಾಂಶಕ್ಕಾಗಿ 10 ಪೈಸೆ ಬೆಲೆಯ ಪದ್ಯಾವಳಿಗಳನ್ನು ಟಿಕೇಟ್ ಕೌಂಟರ್ ಅಥವಾ ಬಿಸ್ಕೆಟ್ ಹಾಗೂ ತಂಪು ಪಾನೀಯ ಮಾರುವ  ಹುಡುಗರಿಂದ ಸಾಮಾನ್ಯವಾಗಿ ಎಲ್ಲರೂ ಪಡೆದುಕೊಳ್ಳುತ್ತಿದ್ದರು.  ಟಿಕೆಟ್ ಕೊಂಡು ಆದಷ್ಟು ಬೇಗ ಥಿಯೇಟರ್ ಒಳಹೊಕ್ಕು ಎದುರಿನವರ ತಲೆ ಅಡ್ಡಬರದಿರುವ ಸೀಟು ಹಿಡಿದು ಪದ್ಯಾವಳಿಯ ಮೇಲೆ ಕಣ್ಣು ಹಾಯಿಸುತ್ತಾ  ಚಿತ್ರ  ಆರಂಭವಾಗುವ ಕ್ಷಣವನ್ನು ಎದುರು ನೋಡುವುದೇ ಒಂದು ಸಂಭ್ರಮ.  ಈ ಪದ್ಯಾವಳಿಗಳಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಕಥಾ ಸಾರಾಂಶವು ನಿರೂಪಿತವಾಗಿ  ಅಂತ್ಯವನ್ನು ಮಾತ್ರ ಗೋಪ್ಯವಾಗಿಡಲಾಗುತ್ತಿತ್ತು.  ಹಾಡುಗಳ ಬಗೆಗಿನ ಎಲ್ಲ ಮಾಹಿತಿಗಳ ಜೊತೆಗೆ  ಸಂಪೂರ್ಣ ತಾಂತ್ರಿಕ ವರ್ಗದ ವಿವರಗಳೂ ಇರುತ್ತಿದ್ದವು.   ಪದ್ಯಾವಳಿಗಳು  ಚಿತ್ರ ನೋಡಿದ ನೆನಪನ್ನು ಎಂದೆಂದಿಗೂ ಉಳಿಸುವುದರೊಂದಿಗೆ  ಮುಂದೆ ರೇಡಿಯೊದಲ್ಲಿ ಹಾಡು ಪ್ರಸಾರವಾಗತೊಡಗಿದಾಗ  ಜೊತೆ ಜೊತೆಗೆ ಹಾಡಿ ಆನಂದಿಸಲೂ ಅನುವು ಮಾಡಿ ಕೊಡುತ್ತಿದ್ದವು.

     ಹಿಂದಿಯ ಸಸುರಾಲ್ ಚಿತ್ರದ ಕನ್ನಡ ಅವತರಣಿಕೆ  ಮನೆ ಅಳಿಯದ ಪದ್ಯಾವಳಿಯ ಕೆಲವು ಪುಟಗಳು  ಇಲ್ಲಿವೆ.  ಹೇಳುವ ಒಗಟನು ಒಡೆದು ಎಂಬ ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದ 6 ನಿಮಿಷದ ಹಾಡು ಒಂದು ಕಾಲಕ್ಕೆ ರೇಡಿಯೊದಲ್ಲಿ ದಿನನಿತ್ಯವೆಂಬಂತೆ ಕೇಳಬರುತ್ತಿತ್ತು.   ಆ ಚಿತ್ರದ ಇನ್ನೊಂದು ಜಾನಪದ ಶೈಲಿಯ ವಿಶಿಷ್ಟ double side ಹಾಡು ನಿಲ್ಲೆ ಗೊಲ್ಲರು ಬಾಲೆ ನಿಲ್ಲೆ  ಸಾಹಿತ್ಯದ ಪುಟದೊಡನೆ ಇಲ್ಲಿ ಪ್ರಸ್ತುತಪಡಿಸಿದ್ದೇನೆ.

     ಚಿತ್ರದ ತಾರಾಗಣದಲ್ಲಿ ನಾಯಕಿಯ ಹೆಸರನ್ನು ಗಮನಿಸಿ . ಫೋಟೊವನ್ನೂ ನೋಡಿ.





ನಟವರ ಗಂಗಾಧರ ಖ್ಯಾತಿಯ ಎಸ್.ಕೆ.ಕರೀಂ ಖಾನ್ ರಚಿಸಿದ ಈ ಹಾಡಿನಲ್ಲಿ ಒಲ್ಲದ ಮುದಿಗಂಡಿನೊಂದಿಗೆ ಮದುವೆ ನಿಶ್ಚಯವಾದ ಹೆಣ್ಣೊಬ್ಬಳು ಮೊದಲು ಪ್ರಿಯಕರನ ಮಾತುಗಳಿಗೆ ಸೊಪ್ಪು ಹಾಕದಿದ್ದರೂ ಕೊನೆಗೆ ಆತನ ಪೌರುಷ, ಅಂದ ಚಂದಗಳಿಗೆ  ಮನಸೋತು ಒಲಿಯುವ ಕತೆಯನ್ನು ಗ್ರಾಮ್ಯ ಶಬ್ದಗಳನ್ನು ಬಳಸಿ ಹೇಳಲಾಗಿದೆ.  ಎಸ್.ಪಿ.ಬಾಲಸುಬ್ರಹ್ಮಣ್ಯಂ ಪ್ರವೇಶದ ಮೊದಲು ಕೊಂಚ ಕಾಲ ಕನ್ನಡದಲ್ಲೂ ಮಿಂಚಿದ ಟಿ.ಆರ್.ಜಯದೇವ್ ಎಂಬ ಗಾಯಕ ಹಾಗೂ ಹಿರಿಯ ಗಾಯಕಿ ಜಿಕ್ಕಿ ಇದನ್ನು ಹಾಡಿದ್ದಾರೆ.  ಪ್ರತಿಭಾವಂತ ಸಂಗೀತ ನಿರ್ದೇಶಕ ಎಂ.ವೆಂಕಟರಾಜು ನಿಧನದ ನಂತರ ಕನ್ನಡಕ್ಕೆ ಪ್ರವೇಶ ಮಾಡಿದ ಅವರ ಗುರು ಟಿ.ಛಲಪತಿ ರಾವ್ ಸಂಗೀತವಿದೆ.

ಪದ್ಯಾವಳಿಯ ಮೇಲೆ ಕಣ್ಣಾಡಿಸುತ್ತಾ ಈ ಸುಂದರ ಹಾಡನ್ನು  ಆಲಿಸಿ.