Tuesday 30 January 2018

ಸಣ್ಣಗೆ ಮುರಳಿಯ ತಣ್ಣನೆ ಹಾಡು


ಆನಂದ ಕಂದ ಚಿತ್ರದ  ನೀನಿದ್ದರೇನೊ ಹತ್ತಿರ ಎಷ್ಟೊಂದು ನಡುವೆ ಅಂತರ - ವಿಜಯಭಾಸ್ಕರ್, ಆರ್. ಎನ್. ಜಯಗೋಪಾಲ್ ಮತ್ತು ಪಿ.ಸುಶೀಲ ಅವರ ಪ್ರತಿಭೆಯ ಪರಾಕಾಷ್ಟೆಯ ಪ್ರತೀಕವಾದ ಈ ಹಾಡು  ವಿವಿಧ ರೇಡಿಯೊ ನಿಲಯಗಳಿಂದ ಈಗಲೂ ಕೆಲವೊಮ್ಮೆ ಕೇಳಿ ಬರುವುದಿದೆ. ಪಿಯಾನೋ ಬಳಸಿರುವ ಕನ್ನಡ ಹಾಡುಗಳಲ್ಲೇ ಅತ್ಯುತ್ತಮವಾದದ್ದು ಎನ್ನಬಹುದಾದ ಇದು   ಅಂತರ್ಜಾಲದಲ್ಲೂ ಲಭ್ಯವಿದೆ.  ಆದರೆ  ನಾನಿಲ್ಲಿ ಹೇಳ ಹೊರಟಿರುವುದು  ಇತ್ತೀಚೆಗೆ ಹೆಚ್ಚು ಕೇಳ ಸಿಗದ ಅದೇ ಚಿತ್ರದ ತಣ್ಣನೆ ರಾತ್ರಿ ಸಣ್ಣಗೆ ಮುರಳಿ ಊದಿದ ಕೃಷ್ಣಯ್ಯ ಎಂಬ ಸುಂದರ ಹಾಡಿನ ಬಗ್ಗೆ.

ಆ ಚಿತ್ರ ನಾನು ನೋಡಿಲ್ಲ.  ಅದರ ವೀಡಿಯೊ ಕೂಡ ಲಭ್ಯವಿಲ್ಲ.  ಆದರೆ ಹಾಡನ್ನು ಗಮನಿಸುವಾಗ ವೇದಿಕೆಯಲ್ಲಿ ಪ್ರಸ್ತುತ ಪಡಿಸುವ ನೃತ್ಯದ ಸನ್ನಿವೇಶಕ್ಕೆ ಇದನ್ನು ಬಳಸಿರಬಹುದು ಅನ್ನಿಸುತ್ತದೆ. ಅನೇಕ ಸಲ ನಮ್ಮ ಈ ರೀತಿಯ ಕಲ್ಪನೆಯೇ ವಾಸ್ತವಕ್ಕಿಂತ ರಮ್ಯವಾಗಿರುತ್ತದಲ್ಲವೇ.

ಆರ್.ಎನ್. ಜಯಗೋಪಾಲ್ ಅವರು ಈ  ಹಾಡಲ್ಲಿ ಪ್ರಾಸಬದ್ಧವಾದ ಸರಳ ಪದಗಳನ್ನೇ ಬಳಸಿದ್ದಾರೆ. ಪಲ್ಲವಿ ಭಾಗದಲ್ಲಿರುವ  ಣಕಾರದ ಒಳಪ್ರಾಸ ಮತ್ತು ಕೃಷ್ಣಯ್ಯ ಪದದ ಪುನರಾವರ್ತನೆ ಹಾಡನ್ನು ಕೇಳುಗರ ಮನದಲ್ಲಿ ರಿಜಿಸ್ಟರ್ ಮಾಡಲು ಸಹಾಯ ಮಾಡುತ್ತದೆ.  ಪ್ರತೀ ಪದದ ಪ್ರತೀ ಅಕ್ಷರವೂ ತಾಳದೊಡನೆ ಮೇಳೈಸುವುದರಿಂದ ಹಾಡಿನ ಲಾಲಿತ್ಯ ವೃದ್ಧಿಯಾಗಿದೆ. ಇಲ್ಲಿ ಬಣ್ಣದ ಬಣ್ಣದ ಎಂಬ ಪದಗಳ ಬಳಕೆಯಾದುದನ್ನು ವಿಶೇಷವಾಗಿ ಗಮನಿಸಬಹುದು. ಸಾಮಾನ್ಯವಾಗಿ  ಹೇಳುವಂತೆ ಬಣ್ಣ ಬಣ್ಣದ ಎಂದಿರುತ್ತಿದ್ದರೆ ಲಯದ ಹರಿವಿಗೆ ತಡೆಯೊಡ್ಡಿದಂತಾಗಿ ಹಾಡು ಕಳೆಗುಂದುತ್ತಿತ್ತು. ಚರಣ ಭಾಗದಲ್ಲೂ ಲಯದ ಓಘಕ್ಕೆ ತಡೆಯೊಡ್ಡದ ಸರಳ ಪದಗಳ  ಸುದೀರ್ಘ ಸಾಹಿತ್ಯವಿದ್ದು ಎಲ್ಲೂ ಸಾಲುಗಳ ಪುನರಾವರ್ತನೆ ಇಲ್ಲ.

ಈ ಹಾಡನ್ನು ಆಲಿಸಿದಾಗ ಮೇಲ್ನೋಟಕ್ಕೆ ಇದು ಸತ್ಯಂ ಅವರ ಸಂಗೀತ ಇರಬಹುದೇನೋ ಎನ್ನುವ ಭಾವನೆ ಮೂಡುತ್ತದೆ.  ವಿಜಯ ಭಾಸ್ಕರ್ ಅವರ ವಿಶೇಷತೆಗಳಾದ ಅನಿರೀಕ್ಷಿತ ತಿರುವುಗಳು, jumping noteಗಳು ಇತ್ಯಾದಿ ಇಲ್ಲದ ಇದರ ಸರಳತೆ ಇದಕ್ಕೆ ಕಾರಣ.   22ನೇ ಮೇಳಕರ್ತ ಖರಹರಪ್ರಿಯ ಜನ್ಯ ರಾಗಗಳಾದ ಶುದ್ಧ ಧನ್ಯಾಸಿ, ಭೀಮ್ ಪಲಾಸ್, ಕಾಪಿ ಎಲ್ಲವುಗಳ ಛಾಯೆ ಇದರಲ್ಲಿ ಕಾಣ ಸಿಗುತ್ತದೆ.  ಸುಮಾರು 40 ಸೆಕೆಂಡುಗಳ ಸುದೀರ್ಘ Interludeಗಳಲ್ಲಿ ತಬಲಾ ತರಂಗವನ್ನು ಸುಂದರವಾಗಿ ಬಳಸಲಾಗಿದೆ. ಸಿತಾರ್ ಹಾಗೂ ಏಕ ಕಾಲದಲ್ಲಿ ನುಡಿಯುವ  ಚೇಲೊ ಮತ್ತು group violinಗಳು  ಶಂಕರ್ ಜೈಕಿಶನ್ ಸಂಗೀತವನ್ನು ನೆನಪಿಸುತ್ತವೆ.  ಕೃಷ್ಣನ  ಕುರಿತ ಹಾಡಾದರೂ ಎಲ್ಲೂ ಕೊಳಲು ಪ್ರಮುಖವಾಗಿರದೆ ಅಲ್ಲಲ್ಲಿ ಕ್ಲಾರಿನೆಟ್ ಜೊತೆಗೆ ಮಾತ್ರ ಕೇಳಿಬರುತ್ತದೆ.  ಜಾನಪದ ಶೈಲಿಗೆ ಒತ್ತು ಕೊಟ್ಟದ್ದರಿಂದ ಎಲ್ಲೂ ಕೌಂಟರ್ ಮೆಲೊಡಿ ಪ್ರಯೋಗಿಸಲಾಗಿಲ್ಲ.

ಕೋರಸ್‌ ಜೊತೆಗೆ ಹಾಡಿರುವ ಪಿ.ಸುಶೀಲ ಅವರ ಅನುನಾಸಿಕ ಧ್ವನಿ ತಾರ ಷಡ್ಜ ಮತ್ತು ಗಾಂಧಾರಗಳ ನಡುವೆ ಸಂಚಾರ ಇರುವ ಚರಣ ಭಾಗಕ್ಕೆ ವಿಶೇಷ ಮೆರುಗು ನೀಡಿದೆ.  ಅಲ್ಲಲ್ಲಿ ಸುಂದರ ಮುರ್ಕಿಗಳ ಅಲಂಕಾರವೂ ಇದೆ.


ಬನ್ನಿ, ಈಗ ಈ ಅಪರೂಪದ ಹಾಡನ್ನು ಆಲಿಸಿ ಆನಂದಿಸಿ.





ಚಿತ್ರ : ಆನಂದ ಕಂದ
ಹಾಡಿದವರು : ಪಿ.ಸುಶೀಲ ಮತ್ತು ಸಂಗಡಿಗರು.
ಸಾಹಿತ್ಯ : ಆರ್.ಎನ್. ಜಯಗೋಪಾಲ್
ಸಂಗೀತ : ವಿಜಯಭಾಸ್ಕರ್



ತಣ್ಣನೆ ರಾತ್ರಿ ಸಣ್ಣಗೆ ಮುರಳಿ ಊದಿದ ಕೃಷ್ಣಯ್ಯ
ನಮ್ಮ  ಕೃಷ್ಣಯ್ಯ
ಹುಣ್ಣಿಮೆ ಚೆಲುವು ಕಣ್ಣಲಿ ಪಡೆದ ಅಂದದ ಕೃಷ್ಣಯ್ಯ
ಅಂದದ ಕೃಷ್ಣಯ್ಯ
ಬಣ್ಣದ ಬಣ್ಣದ ಸುಂದರ ಕನಸನು ತಂದ ಕೃಷ್ಣಯ್ಯ
ಹೆಣ್ಣಿನ ಮನಸಿನ ನೆಮ್ಮದಿ ಕೆಡಿಸಿ ನಿಂದ ಕೃಷ್ಣಯ್ಯ
ನಮ್ಮ ಕೃಷ್ಣಯ್ಯ ಅಂದದ ಕೃಷ್ಣಯ್ಯ
ನಮ್ಮ ಕೃಷ್ಣಯ್ಯ ಅಂದದ ಕೃಷ್ಣಯ್ಯ

ಯಮುನಾ ನದಿಯ ತೀರದಲಿ
ಮಲ್ಲಿಗೆ ಹಂಬಿನ ತೋಟದಲಿ
ತಿಂಗಳ ಬೆಳಕಿನ ಸೆರಗಿನಲಿ
ತುಂಬದ ಬಯಕೆಯ ಕೊರಗಿನಲಿ
ನಾ ದಾರಿ ಕಾದು ನಿಂತೆ
ಏನೇನೊ ನೂರು ಚಿಂತೆ
ಎಲ್ಲೋ ಏನೋ ಕಾಣೆ ನಮ್ಮ
ಮೋಹನ ಕೃಷ್ಣಯ್ಯ

ಅವನಲಿ ಮೌನವ ತೋರಿಸುವೆ
ಕೋಪದಿ ಮೊಗವ ತಿರುಗಿಸುವೆ
ದೂರಕೆ ಸರಿದು ಕಾಡಿಸುವೆ
ಹೆಣ್ಣಲಿ ಕ್ಷಮೆಯನು ಬೇಡಿಸುವೆ
ಕೈಜೋಡಿಸೆನ್ನ ಬೇಡಿ
ಆ ಮೇಲೆ ಎನ್ನ ಕೂಡಿ
ತಪ್ಪಿನ ಕಾಣಿಕೆ ಕೆನ್ನೆಗೆ ಇತ್ತು ರಮಿಸುವ ಕೃಷ್ಣಯ್ಯ
****

ಜಯಗೋಪಾಲ್ ಅವರು ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಓದುತ್ತಿದ್ದಾಗ ವಾರ್ಷಿಕೋತ್ಸವ ಸಂದರ್ಭಕ್ಕೆ ಈ ಹಾಡು ರಚಿಸಿದ್ದರಂತೆ.   ಅದನ್ನು ಬಹಳ ಇಷ್ಟಪಟ್ಟ ಅವರ ಗುರುಗಳಾದ ದ್ವಾರಕಾನಾಥ್ ಹದಿನಾಲ್ಕು ವರ್ಷಗಳ ನಂತರ ತಾವು ಆನಂದ ಕಂದ ಚಿತ್ರವನ್ನು ನಿರ್ದೇಶಿಸಿದಾಗ ಈ ಗೀತೆಯನ್ನು ಬಳಸಿಕೊಂಡರು ಎಂದು  ಎನ್.ಎಸ್. ಶ್ರೀಧರಮೂರ್ತಿ ಅವರು ಮಾಹಿತಿ ಒದಗಿಸಿದ್ದಾರೆ.  ಅಂದರೆ ಸುಮಾರು 1954ರ ಆಸುಪಾಸು ಈ ಗೀತೆಯ ರಚನೆ ಆಗಿರಬಹುದು.  ಶ್ರೀಧರಮೂರ್ತಿ ಅವರ ಪ್ರತಿಕ್ರಿಯೆಯನ್ನು ಪುಟದ ಕೊನೆಯಲ್ಲಿರುವ ಕಮೆಂಟ್ಸ್ ವಿಭಾಗದಲ್ಲಿ ನೋಡಬಹುದು.

Thursday 11 January 2018

ಸುವ್ವಿ ಸುವ್ವಿ ಸುವ್ವಾಲೆ ಪ್ರಾಸಬದ್ಧ ಪದಮಾಲೆ


ಹಿಂದಿಯ ಮಜರೂಹ್ ಸುಲ್ತಾನ್‌ಪುರಿಯವರಂತೆ ಕನ್ನಡದ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರು ಸುಲಭದಲ್ಲಿ ಅರ್ಥವಾಗದ ಒಗಟಿನಂಥ ಕ್ಲಿಷ್ಟ ಪದಪುಂಜಗಳನ್ನು ತಮ್ಮ ಗೀತೆಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಕೆಲವೊಮ್ಮೆ ಅವರು ಲಾಲಿತ್ಯಪೂರ್ಣ ಸರಳ ಪದಗಳನ್ನೇ ಬಳಸಿ ಹಾಡು ಬರೆದದ್ದೂ ಇದೆ.  ಅಂಥವುಗಳಲ್ಲಿ ಕನ್ಯಾರತ್ನ ಚಿತ್ರದ ಜಾನಪದ ಸೊಗಡಿನ ಸುವ್ವಿ ಸುವ್ವಿ ಸುವ್ವಾಲೆ ಹಾಡೂ ಒಂದು.  ಗ್ರಾಮೀಣ ಬಾಲೆಯೊಬ್ಬಳು ತನ್ನ ಇನಿಯನೊಡನೆ   ನಡೆಸುವ ಸರಸ ಸಂವಾದ ರೂಪದ ಈ  ಹಾಡಲ್ಲಿ ಆಕೆ ಆತನ ಪೊಳ್ಳು ಮಾತುಗಳಿಗೆ ಸುಲಭದಲ್ಲಿ ಸೊಪ್ಪು ಹಾಕದೆ ಚೆನ್ನಾಗಿ ಪರೀಕ್ಷಿಸಿ ಮುಂದಡಿ ಇಡುವ ಚಿತ್ರಣ ಇದೆ.  ಪಲ್ಲವಿ, ಚಿತ್ರಗೀತೆಗಳಲ್ಲಿ ಬಲು ಅಪರೂಪವಾದ ಅನುಪಲ್ಲವಿ ಮತ್ತು ಚರಣಗಳ  ಪ್ರತಿ ಸಾಲಲ್ಲೂ   ಲಕಾರ ಅಂತ್ಯಪ್ರಾಸ ಇದೆ.  ಹಿಂದಿನ ಕಾಲದ ಬಹುತೇಕ ಗೀತೆಗಳು ಪ್ರಾಸಬದ್ಧವಾಗಿಯೇ ಇರುತ್ತಿದ್ದರೂ ಈ ರೀತಿ ಒಂದೇ ಅಕ್ಷರದ ನಿಯಮ ಪಾಲಿಸಿದ ಉದಾಹರಣೆಗಳು ಕಮ್ಮಿ.  ಸುವ್ವಿ,  ದುವ್ವಿ, ಸುವ್ವಾಲೆ, ದುವ್ವಾಲೆ,  ಅಂಬಾಲೆ,  ಜೋಮಾಲೆ,  ಜೋಲೆ,  ಹೊನ್ನಾಲೆ,  ಹೊಂದಾಳೆ ಮುಂತಾದ ಶಬ್ದಕೋಶಗಳಲ್ಲಿ ಸಿಗಲಾರದ ಜಾನಪದ ಪದಗಳು ಹಾಡಿನುದ್ದಕ್ಕೂ ಇವೆ.  ಇಂಥವೇ ಪದಗಳನ್ನು ಪ್ರಭಾಕರ ಶಾಸ್ತ್ರಿ ಅವರು ನಂತರ ವಾಲ್ಮೀಕಿ ಚಿತ್ರದ ಜಲಲ ಜಲಲ ಜಲ ಧಾರೆ ಹಾಡಿನಲ್ಲೂ  ಉಪಯೋಗಿಸಿದರು.  ಆರಂಭದ ಪಲ್ಲವಿ ಭಾಗ ಚರಣಗಳ ಮಧ್ಯೆ ಒಮ್ಮೆಯೂ ಪುನರಾವರ್ತನೆಯಾಗದೆ ಕೊನೆಯಲ್ಲಿ ಮಾತ್ರ ಬರುವುದು ಕೂಡ ಇತರ ಚಿತ್ರಗೀತೆಗಳಲ್ಲಿ ಕಾಣಸಿಗದ ವಿಶೇಷ.

ಆಂಗ್ಲರ ಬಳುವಳಿಯಾದ ಪ್ಯಾಂಟು ಶರ್ಟುಗಳನ್ನು ನಮ್ಮವೇ ಎಂದು ಎಲ್ಲರೂ ಒಪ್ಪಿಕೊಂಡ ಹಾಗೆ ಕನ್ನಡ ಸಿನಿಮಾ ಹಾಡುಗಳಿಗೆ ಹಿಂದಿ  ಧಾಟಿಗಳನ್ನು ಬಳಸುವುದೂ ಸರ್ವಮಾನ್ಯವಾಗಿದ್ದ 50ರ ದಶಕದಲ್ಲೇ   ಆ ಪದ್ಧತಿಗೆ ತಿಲಾಂಜಲಿ ಇತ್ತು ಸ್ವಂತಿಕೆ ಮೆರೆಯತೊಡಗಿ ಆರಂಭದಿಂದಲೇ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದವರು ಜಿ.ಕೆ.ವೆಂಕಟೇಶ್.  ಹಳ್ಳಿ ಹಿನ್ನೆಲೆಯ ಈ ಹಾಡಿನಲ್ಲೂ ಅವರು  ದೇಸಿ ವಾದ್ಯಗಳಾದ  ಢೋಲಕ್ , ಸಂತೂರ್, ಕೊಳಲುಗಳ ಜೊತೆಗೆ ಶಿಷ್ಟ ವಾದ್ಯ ಸಿತಾರ್ ಹಾಗೂ ಪಾಶ್ಚಾತ್ಯ ಕ್ಲಾರಿನೆಟ್, ಗಿಟಾರುಗಳನ್ನು ಬಳಸುವುದು ಮಾತ್ರವಲ್ಲದೆ ಎರಡು ವಾದ್ಯಗಳನ್ನು ವಿಭಿನ್ನ ಪೂರಕ ಶ್ರುತಿಗಳಲ್ಲಿ ಒಟ್ಟಿಗೆ ನುಡಿಸುವ ಪಾಶ್ಚಾತ್ಯ ಸಂಗೀತ ಪದ್ಧತಿಯ harmaonization ಪ್ರಯೋಗವನ್ನೂ ಮಾಡಿದ್ದಾರೆ.  1.18 ನಿಮಿಷದಿಂದ ಆರಂಭವಾಗುವ ಅನುಪಲ್ಲವಿ ನಂತರದ interludeನಲ್ಲಿ ಸಂತೂರ್ ಮತ್ತು ಗಿಟಾರ್‌ಗಳಿಗೆ counter ಆಗಿ  ಹಿನ್ನೆಲೆಯಲ್ಲಿ ಭಿನ್ನ ಶ್ರುತಿಯ  ಎರಡು ಕೊಳಲುಗಳ harmonized ನುಡಿಸುವಿಕೆ ಗಮನಿಸಬಹುದು. ಹಿಂದಿ ಹಾಡುಗಳಲ್ಲಿ ಈ harmonized ನುಡಿಸುವಿಕೆ ಹೆಚ್ಚಾಗಿ ಕಂಡುಬರುತ್ತಿದ್ದು ಜಾನೆಮನ್ ಜಾನೆಮನ್ ತೇರೆ ದೊ ನಯನ್ ಹಾಡಿನ ಆರಂಭದ bit ಸುಲಭವಾಗಿ ನೆನಪಾಗುವ ಉದಾಹರಣೆ. ಜಾನಪದ ಶೈಲಿಯ ಈ ಹಾಡಿನಲ್ಲಿ ಇಂತಹ ಪಾಶ್ಚಾತ್ಯ ತಂತ್ರಗಳ ಬಳಕೆ  ಚಂದದ ಸೀರೆ ಕುಪ್ಪುಸ ತೊಟ್ಟು ಹಣೆಗೆ ಕುಂಕುಮ ಧರಿಸಿದ  ಹಳ್ಳಿಯ ಹೆಣ್ಣುಮಗಳೊಬ್ಬಳು ಕೈಗೆ ವಾಚ್ ಕಟ್ಟಿ ಹೆಗಲಿಗೆ ವ್ಯಾನಿಟಿ ಬ್ಯಾಗ್ ತೂಗು ಹಾಕಿಕೊಂಡಂತೆ ಎಂದು  ನಾವು ಅರ್ಥೈಸಬಹುದು! 

ಸಂತೂರಿನ ಸಣ್ಣ ಪಲುಕಿನ ನಂತರ ಪಿ ಬಿ ಶ್ರೀನಿವಾಸ್ ಸುವ್ವೀ ಅಂದೊಡನೆ ಕೋಗಿಲೆ ಉಲಿಯ ರೂಪದ ಶಿಳ್ಳೆ, ಮತ್ತೆ ಅದೇ ಸಂತೂರಿನ ಪಲುಕು ಮತ್ತು  ಸುವ್ವೀಯ ನಂತರ  ಗಿಟಾರ್ ರಿದಮಿನ ಜೊತೆಗೆ ಕೊಳಲು ಕ್ಲಾರಿನೆಟ್ ಮತ್ತು ಸಂತೂರ್ ಸಮ್ಮಿಲನದ ಒಟ್ಟು ಮೂವತ್ತೆರಡು ಸೆಕೆಂಡುಗಳ, ಸುಗ್ರಾಸ ಭೋಜನದ ಮುಂಚಿನ ಅಪೆಟೈಸರಿನಂತಹ ಪ್ರೀಲ್ಯೂಡ್ ಗೆಜ್ಜೆ ಸದ್ದಿನೊಂದಿಗೆ ಮುಕ್ತಾಯವಾಗುತ್ತದೆ.
 
 Interludeಗಳ ಕೆಲವು ಭಾಗಗಳಲ್ಲಿ ರಿದಂ ಗಿಟಾರಿಗೆ ಬಿಟ್ಟುಕೊಟ್ಟು ಉಳಿದಂತೆ ಹಾಡಿನುದ್ದಕ್ಕೂ ನುಡಿಯುವ ಶ್ರುತಿಬದ್ಧ ಢೋಲಕ್ ನಡೆ ಬಲು ಸುಂದರ. ಗಿಟಾರ್ ರಿದಂ ನಂತರ ಢೋಲಕ್ ನಡೆ ಎತ್ತಿಕೊಳ್ಳುವ ಸಂದರ್ಭದ ಉರುಳಿಕೆಯ ಅಂದವನ್ನು ಆಲಿಸಿಯೇ ಆನಂದಿಸಬೇಕು.  ಪ್ರತಿ ಚರಣದ ಕೊನೆಭಾಗದಲ್ಲಿ  ಜಾನಕಿ ಮತ್ತು ಪಿ.ಬಿ. ಶ್ರೀನಿವಾಸ್  ಅವರ ಸುರುಳಿಯಾಕಾರದ  ಅತ್ಯಾಕರ್ಷಕ ಆಲಾಪಗಳಿವೆ. ಇವನ್ನು ಆಲಿಸಿದಾಗ  ಜಾನಕಿ  ನಮ್ಮನ್ನು ತಿರುಗಣೆ ಮೆಟ್ಟಲುಗಳಲ್ಲಿ   ಕೆಳಗಿಳಿಸಿದಂತೆಯೂ ಪಿ.ಬಿ.ಎಸ್ ಮತ್ತೆ ಮೇಲಕ್ಕೆ ಕರೆದುಕೊಂಡು ಬಂದಂತೆಯೂ  ಭಾಸವಾಗುತ್ತದೆ!  ಈ ಭಾಗದಲ್ಲಿ ಅದುವರೆಗೆ ನೇರವಾಗಿದ್ದ ಢೋಲಕ್‌ ನಡೆ ‘ಥೋಡಾ ಥೋಡಾ ಜ್ಯಾದಾ ಜ್ಯಾದಾ ಥೋಡಾ ಥೋಡಾ ಜ್ಯಾದಾ ಜ್ಯಾದಾ’ ಶೈಲಿಗೆ ಬದಲಾಗುತ್ತದೆ.  ಈ ರೀತಿಯ ನಡೆಯನ್ನು ಮುಂದೆ  ಎಸ್.ಡಿ. ಬರ್ಮನ್ ಅವರು ಜ್ಯೂಯಲ್ ತೀಫ್ ಚಿತ್ರದ ದಿಲ್ ಪುಕಾರೆ ಆರೆ ಆರೆ ಆರೆ ಹಾಡಲ್ಲಿ ಬಳಸಿಕೊಂಡಿದ್ದಾರೆ.

ಸ ಗ21 ಪ ನಿ2 ಸ್ವರಗಳ   ಶುದ್ಧ ಧನ್ಯಾಸಿ ರಾಗಾಧಾರಿತ ಈ ಹಾಡಿನ interludeಗಳ ಭಾಗದಲ್ಲಿ ದ1 ಮತ್ತು ದ2 ಸ್ವರಗಳ ಸ್ಪರ್ಶ ಇದ್ದು ಅಭೇರಿ ಅರ್ಥಾತ್ ಭೀಮ್ ಪಲಾಸ್ ಛಾಯೆ ಗೋಚರಿಸುತ್ತದೆ. ಆದರೆ ಆ ರಾಗಗಳ ಬೇರೆ ಯಾವುದೇ ರಚನೆಯನ್ನು ಒಂದಿನಿತೂ ಹೋಲದಿರುವುದು ಸಂಗೀತಕಾರನ ಜಾಣ್ಮೆಯ ದ್ಯೋತಕ.  ಬಹುಶಃ ಕನ್ನಡ ಚಿತ್ರಸಂಗೀತದಲ್ಲಿ ಕರುಣೆಯೇ ಕುಟುಂಬದ ಕಣ್ಣು ಚಿತ್ರದ ಪ್ರೇಮಗಾನ ತಂದ ಯೌವನ ಹಾಡಲ್ಲಿ ಮೊತ್ತ ಮೊದಲು ಜಿ.ಕೆ.ವೆಂಕಟೇಶ್ ಅವರು ಕಾಶ್ಮೀರದ ಜಾನಪದ ವಾದ್ಯ ಸಂತೂರ್ ಬಳಕೆ ಮಾಡಿದರು.  ಈ ಹಾಡಿನ ಅಂದ ಹೆಚ್ಚಿಸುವಲ್ಲೂ ಸಂತೂರ್ ಪಾತ್ರ ಹಿರಿದು. ಗಿಟಾರ್ chordನೊಂದಿಗೆ ಕೊನೆಗೊಳ್ಳುವ ಆರಂಭದ ಎರಡು ಸಂತೂರ್ ತುಣುಕುಗಳು ಪ್ರೇಮಿಗಳ ರೋಮಾಂಚನವನ್ನು ಪ್ರತಿನಿಧೀಕರಿಸುವಂತಿವೆ.   ಕ್ಲಾರಿನೆಟ್-ಕೊಳಲಿನ ಪಲುಕುಗಳ ಅಂದದ ಬಗ್ಗೆ ಹೇಳಬೇಕಾಗಿಯೇ ಇಲ್ಲ. ಹಾಡಿನ ಕೊನೆಯ ಭಾಗದ  ಹಿನ್ನೆಲೆಯಲ್ಲಿ ಬರುವ ಗಮಪನಿ ಸಾ...   ಗಸನಿ ಸಾ.... ನಿಸಗಮ ಪಾ ಮಾಗಸಾನೀ ಸಾ.... ಎಂಬ ಕೊಳಲ ತಾನವಂತೂ  ದೈವೀ ಅನುಭೂತಿ ನೀಡುತ್ತದೆ. 



ಪಿ.ಬಿ.ಶ್ರೀನಿವಾಸ್ ಮತ್ತು ಎಸ್. ಜಾನಕಿ ಅವರ ಮಧುರ ಧ್ವನಿಗಳು ಮೇಳೈಸಿರುವ ಈ ಹಾಡನ್ನು ಸಿನಿಮಾದಲ್ಲಿ  ಹಾಡಿದ್ದು ನಾಯಕ ನಾಯಕಿ ಅಲ್ಲ,  ನಾಯಕನ ಅಕ್ಕ ಮತ್ತು ಆಕೆಯ ಆಕೆಯನ್ನು ಮದುವೆಯಾಗಲಿದ್ದ ಪೋಲಿಸ್ ಅಧಿಕಾರಿ. ಆದರೆ ಆಕೆ ತಮ್ಮನಿಗಾಗಿ ಮದುವೆಯ ಮಾತು ಮರೆತು ಕನ್ಯೆಯಾಗಿಯೇ ಉಳಿಯಬಯಸುತ್ತಾಳೆ.  ಕಥೆಯ ಕೊನೆಗೆ ಎಲ್ಲ ಸುಖಾಂತ್ಯವಾಗಿ ಆಕೆಗೆ ಕನ್ಯಾರತ್ನ ಎಂಬ ಬಿರುದು ಸಿಗುತ್ತದೆ.  ಈ ಪಾತ್ರಗಳನ್ನು ಸಾಹುಕಾರ್ ಜಾನಕಿ ಮತ್ತು ರಾಜಾ ಶಂಕರ್ ನಿರ್ವಹಿಸಿದ್ದರು.  Youtube ವಾಹಿನಿಯಲ್ಲಿ ಈ ಹಾಡು ಮಾತ್ರವಲ್ಲ , ಕನ್ಯಾರತ್ನ ಚಿತ್ರವೇ ಲಭ್ಯವಿದೆ.  ಆಸಕ್ತರು ವೀಕ್ಷಿಸಬಹುದು.  ಹಾಡಿನ ವಿಡಿಯೊ ನೋಡುವುದಾದರೆ 2.33 ನಿಮಿಷಕ್ಕೆ ಆರಂಭವಾಗುವ ಸಾಹುಕಾರ್ ಜಾನಕಿ ಅವರ ಆಕರ್ಷಕ ಸರಳ dance steps ನೋಡಲು ಮರೆಯದಿರಿ.



ಚಿತ್ರ : ಕನ್ಯಾರತ್ನ
ಗಾಯಕರು : ಪಿ.ಬಿ.ಶ್ರೀನಿವಾಸ್ ಮತ್ತು ಎಸ್. ಜಾನಕಿ
ರಚನೆ : ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ : ಜಿ.ಕೆ. ವೆಂಕಟೇಶ್



ಸುವ್ವೀ ಸುವ್ವೀ ಸುವ್ವಾಲೆ ಕಣ್ಣೆ ಕರೆಯೋಲೆ
ದುವ್ವಿ ದುವ್ವಿ ದುವ್ವಾಲೆ ಒಲವೇ ಉಯ್ಯಾಲೆ
ಸುವ್ವಿ ಸುವ್ವಾಲೆ    ||ಪ||

ಕುಲುಕಿ ಬಳುಕಿ ನಡೆಯೋಳೆ ಜಾಣೆ ಜೋಮಾಲೆ
ನಿಲ್ಲೆ ಅಂಬಾಲೆ ಹೋಯ್
ಬಲ್ಲೆ ಬಲ್ಲೆ ನಾ ನಿನ್ನ ಕಣ್ಣ ಮುಚ್ಚಾಲೆ
ಕಣ್ಣು ಮುಚ್ಚಾಲೆ   ||ಅನು ಪ||


ಜೇನಿನಂಥ ಮಾತನಾಡಿ ಓಟ ಆ ಮೇಲೆ

ಓಟ ಆಮೇಲೆ
ಕಣ್ಣಿನಾಣೆ ಓಡಲಾರೆ ನಂಬೆ ಹೊಂಬಾಳೆ

ನಂಬೆ ಹೊಂಬಾಳೆ
ಬಾಳ್ವೆ ಹೂಮಾಲೆ
ಅನುರಾಗದ ಸುವ್ವಾಲೆ
ಓ....
ಒಹೋ ಓ...    ||೧||

ಮಾತು ಮನಸು ಹೊಮ್ಮಿದಂತೆ ಹಾಡೋಣ ಜೋಲೆ
ಹಾ..
ಹಾಡೋಣ ಜೋಲೆ
ಸೋತು ಗೆದ್ದು ಸೇರಿದಂತೆ ಆಡೋಣ ಲೀಲೆ
ಆ..
ಆಡೋಣ ಲೀಲೆ
ಅದುವೇ ಹೊನ್ನಾಲೆ
ಮನದಾಸೆಗೆ ಹೊಂದಾಳೆ
ಓ....
ಒಹೋ ಓ...     ||೨||

ಸುವ್ವೀ ಸುವ್ವೀ ಸುವ್ವಾಲೆ ಕಣ್ಣೆ ಕರೆಯೋಲೆ
ದುವ್ವಿ ದುವ್ವಿ ದುವ್ವಾಲೆ ಒಲವೇ ಉಯ್ಯಾಲೆ
ಸುವ್ವಿ ಸುವ್ವಾಲೆ
ನಿಲ್ಲೆ ಅಂಬಾಲೆ