Wednesday 26 July 2023

1953ರ ಪಂಢರಾಪುರ ಯಾತ್ರೆ


ನಮ್ಮ ಚಿಕ್ಕತಂದೆ ವೆಂಕಟೇಶ ಕಾಕತ್ಕರ್ ಅವರಿಗೆ ಪುಣ್ಯಕ್ಷೇತ್ರಗಳ ಯಾತ್ರೆ ಕೈಗೊಳ್ಳುವುದೆಂದರೆ ಬಲು ಉತ್ಸಾಹ. ಯೌವನದಲ್ಲೇ ಪತ್ನಿಯನ್ನು ಕಳೆದುಕೊಂಡಿದ್ದ ಅವರಿಗೆ ಮಕ್ಕಳಿರಲಿಲ್ಲ. ಯಾರನ್ನಾದರೂ ಜೊತೆ ಮಾಡಿಕೊಂಡು ಕೊಲ್ಲೂರು, ತಿರುಪತಿ, ಕಾಶಿ ಹೀಗೆ ಒಂದಲ್ಲ ಒಂದು ಕಡೆಗೆ ಹೋಗುತ್ತಲೇ ಇರುತ್ತಿದ್ದರು. ಅಂಥ ಒಂದು ಯಾತ್ರೆಗೆ ನಮ್ಮ ಎರಡನೇ ಅಣ್ಣ ಹರಿಹರ ಕಾಕತ್ಕರ್ (ಇವರ ಬಗ್ಗೆ ಗ್ರೂಪ್ ಫೋಟೊ ಲೇಖನದಲ್ಲಿ ಓದಿದ್ದೀರಿ) ಮತ್ತು ಆಗ ಹದಿಹರೆಯದ ಬಾಲಕನಾಗಿದ್ದ, ದುರ್ಗ ಕಾಳಾಜೆ ಕುಟುಂಬದ ಗೋಪಾಲಕೃಷ್ಣ ಚಿಪಳೂಣಕರ್ ಅವರನ್ನೂ ಕರೆದೊಯ್ದಿದ್ದರು. ಈಗಿನಂತಹ ಸೌಲಭ್ಯಗಳಿಲ್ಲದಿದ್ದ ಕಾಲದ ಆ ಯಾತ್ರೆಯ ವಿವರಗಳನ್ನು ನಮ್ಮ ಅಣ್ಣ ರಸವತ್ತಾಗಿ ದಾಖಲಿಸಿಟ್ಟಿದ್ದಾರೆ. ಆ ಕಾಲದ ಆರ್ಥಿಕ, ಸಾಮಾಜಿಕ ಸ್ಥಿತಿಗಳ ಚಿತ್ರಣ ಇದರಲ್ಲಿ ದೊರಕುತ್ತದೆ. ಬ್ರಾಕೆಟಲ್ಲಿ ಬರೆದಿರುವುದು ನನ್ನ ಟಿಪ್ಪಣಿಗಳು. ಇದು ಸಾಕಷ್ಟು ದೀರ್ಘವಾಗಿರುವುದರಿಂದ ವಾರಕ್ಕೊಂದು ಕಂತು ಕಾಣಿಸಿಕೊಳ್ಳಲಿದೆ.


ಇನ್ನೇಕೆ ತಡ. ಕಾಲಯಂತ್ರದಲ್ಲಿ ಕುಳಿತು 1953ಕ್ಕೆ ಪಯಣಿಸೋಣ. ನಮ್ಮಣ್ಣ ಬರೆದಿಟ್ಟಿರುವ ವಿವರಗಳನ್ನು ಕಣ್ಣಮುಂದೆ ತಂದುಕೊಳ್ಳೋಣ.

*******
ಭಾಗ - 1

14-11-1953 ಶನಿವಾರ

ಬೆಳಗ್ಗೆ ಗಂಟೆ 6ಕ್ಕೆ ಆನಂಗಳಿಯ ನಮ್ಮ ಮನೆಯಿಂದ ನಾನು, ಚಿಕ್ಕತಂದೆಯವರು ಮತ್ತು ಕಾಳಾಜೆ ಗೋಪಾಲಕೃಷ್ಣ ಮನೆಯಿಂದ ಹೊರಟು ಹೊಳೆ ದಾಟುವಾಗ ಗೋಪಾಲಕೃಷ್ಣನ ಕೈಯಲ್ಲಿದ್ದ ಟ್ರಂಕು ನೀರಿಗೆ ಬಿದ್ದು ಅದರಲ್ಲಿದ್ದ ಅವನ ಮತ್ತು ನಮ್ಮ ಬಟ್ಟೆಗಳು ಒದ್ದೆಯಾದವು.(ನವಂಬರ್ ತಿಂಗಳಲ್ಲಿ ಸೂರ್ಯೋದಯ 6-30ಕ್ಕೆ. ಹೀಗಾಗಿ ಅವರು ಟಾರ್ಚ್ ಬೆಳಕಲ್ಲಿ ಹೊಳೆ ದಾಟಿದ್ದಿರಬಹುದು.) ಆದರೂ ದೇವರ ದಯೆಯಿಂದ ಕೋಟಿನ ಕಿಸೆಯಲ್ಲಿದ್ದ ನಮ್ಮ ಪಾಕೀಟು ಒದ್ದೆಯಾಗದೆ ಉಳಿಯಿತು. ನಿಡ್ಗಲ್ಲಿನಿಂದ ನಮಗೆ ಮೂಲ್ಕಿ ಕಡೂರು ಬಸ್ಸು ಸಿಕ್ಕಿ ಬೆಳಗ್ಗೆ ಗಂಟೆ ಎಂಟಕ್ಕೆ ಅದರಲ್ಲಿ ಕೂತೆವು. (ಬಸ್ಸಿನ ಹೆಸರು ಬರೆದಿಲ್ಲ. ಕಾಳಾಜೆ ಗೋಪಾಲಕೃಷ್ಣ ಚಿಪ್ಳೂಣ್ಕರರಿಗೆ ಫೋನ್ ಮಾಡಿ ವಿಚಾರಿಸಿದಾಗ ಅವರು ಕಂಬಾಯಿಂಡ್ ಬುಕಿಂಗ್ ಎಜನ್ಸಿಯ, ಮೂತಿ ಇದ್ದ ಬಸ್ಸು ಎಂದು ಹೇಳಿದರು. ಅಂದರೆ CPCಯೇ ಇರಬಹುದು. ಶಂಕರ್ ವಿಠಲ್, ಹನುಮಾನ್, PV, CPC ಮುಂತಾದವು ಆಗ ಕಂಬಾಯಿಂಡ್ ಬುಕಿಂಗ್ ಎಜನ್ಸಿಯಲ್ಲಿ revenue share ಮಾಡಿಕೊಳ್ಳುತ್ತಿದ್ದವು. ಆದರೆ ನಂತರ ಮುಲ್ಕಿ-ಕಡೂರು ರೂಟಿನ ಯಾವುದೇ ಬಸ್ಸು ಇರಲಿಲ್ಲ. ಬದಲಿಗೆ ಮಂಗಳೂರು - ಕಡೂರು ಮಧ್ಯೆ CPC ಬಸ್ಸುಗಳು ಓಡಾಡುತ್ತಿದ್ದವು.) ಬಳಿಕ ಚಾರ್ಮಾಡಿ ಗಡಿಯಲ್ಲಿ ನಾವು ಕೂತ ಬಸ್ಸು ಚೇಂಜಾಗಿ ಬೇರೆ ಬಸ್ಸು ಹತ್ತಿ ಅದರಲ್ಲಿ ಕೂತೆವು.(ಮೊದಲು ದ.ಕ. ಜಿಲ್ಲೆ ಮದ್ರಾಸ್ ಪ್ರೆಸಿಡೆನ್ಸಿಗೂ, ಗಟ್ಟದ ಮೇಲಿನ ಭಾಗ ಮೈಸೂರು ರಾಜ್ಯಕ್ಕೂ ಸೇರಿದ್ದರಿಂದ ಚಾರ್ಮಾಡಿ ಘಾಟಿಯ HP Curveಗಳು ಕಳೆದೊಡನೆ ಇರುವ ಗಡಿ ಭಾಗದಲ್ಲಿ ಬಸ್ಸು ಬದಲಾಯಿಸಬೇಕಿತ್ತು. 1956ರಲ್ಲಿ ಭಾಷಾವಾರು ರಾಜ್ಯ ವಿಂಗಡಣೆ ಆಗಿ ದ.ಕ. ಕೂಡ ಮೈಸೂರು ರಾಜ್ಯದ ಭಾಗವಾದ ಮೇಲೆ ನೇರ ಬಸ್ಸುಗಳು ಆರಂಭವಾದವು. ಆದರೂ 1968ರಲ್ಲಿ ರಾಷ್ಟ್ರೀಕರಣ ಆಗುವ ವರೆಗೂ ಮಂಗಳೂರು-ಚಾರ್ಮಾಡಿ ಗಡಿ ನಡುವೆ ಸಂಚರಿಸುವ ಭಾರತ್ ಬಸ್ಸು ಇತ್ತು!). ಆ ಬಸ್ಸು ಮಧ್ಯಾಹ್ನ 12-30ಕ್ಕೆ ಚಿಕ್ಕಮಗಳೂರಿಗೆ ತಲುಪಿತು. ಅಲ್ಲಿ ಬಸ್ಸು ಅರ್ಧ ಗಂಟೆ ನಿಲ್ಲುವುದರಿಂದ ಅಲ್ಲೇ ಹತ್ತಿರವಿದ್ದ ಬ್ರಾಹ್ಮಣರ ಊಟದ ಹೋಟೆಲಿಗೆ ಹೋಗಿ ಊಟ ಒಂದರ 12 ಆಣೆ ಪ್ರಕಾರ ಕೊಟ್ಟು ಮೂವರೂ ಮೇಜಿನ ಮೇಲೆ ಊಟ ಮಾಡಿದೆವು. ಅಲ್ಲಿ ಅಂಗಡಿಯಿಂದ ಅರ್ಧ ಡಜನ್ ನಿಂಬೆ ಹಣ್ಣುಗಳನ್ನು ಪಡಕೊಂಡು ಬಸ್ಸು ಹತ್ತಿ 2-30ಕ್ಕೆ ಕಡೂರು ತಲುಪಿದೆವು. ಅಲ್ಲಿ 3-30ಕ್ಕೆ ರೈಲು ಹತ್ತಿದೆವು.

15-11-1953 ಆದಿತ್ಯವಾರ

ಇಡೀ ರಾತ್ರೆ ಕೂತು ಬೆಳಿಗ್ಗೆ 7-30ಕ್ಕೆ ಮಿರ್ಜೆ ತಲುಪಿದೆವು. ಅಲ್ಲಿ ರೈಲ್ವೆ ಸ್ಟೇಶನಿನಿಂದ ಹೊರಗೆ ಬರಬೇಕಾದರೆ ಒಂದು ದೊಡ್ಡ ಏಣಿ ಹತ್ತಿ ಒಂದು ಮಾಳಿಗೆಯ ಮೇಲೆ ಹೋಗಿ ಇನ್ನೊಂದು ಏಣಿಯಿಂದ ಇಳಿದು ಬೇರೆ ಊರಿಗೆ ಹೋಗುವ ರೈಲು ಹತ್ತಬೇಕು. ಅಲ್ಲಿ ರೈಲಿನಿಂದ ಇಳಿದ ಕೂಡಲೇ ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ಅಲ್ಲಿ ನಾವು ಇಳಿಯುವಾಗ 5 ರೈಲುಗಳು ಬೇರೆ ಬೇರೆ ಊರುಗಳಿಗೆ ಹೊರಟು ನಿಂತಿದ್ದವು. ರೈಲಿನಲ್ಲಿ ನಮಗೆ ದೊರೆತ ಒಬ್ಬ ಮಿತ್ರರ ಸಹಾಯದಿಂದ(ಹೆಸರು ಬರೆದಿಲ್ಲ) ಬೆಳಗಿನ 10-30ರ ರೈಲಿಗೆ ಪಂಢರಪುರಕ್ಕೆ ಟಿಕೇಟು ಪಡಕೊಂಡೆವು. ರೈಲು ಹೊರಡಲು ಮೂರು ಗಂಟೆ ಟೈಮು ಇದ್ದ ಕಾರಣ ಅಲ್ಲಿ ನಲ್ಲಿಯ ಹತ್ತಿರ ಮುಖಮಾರ್ಜನಾದಿಗಳನ್ನು ತೀರಿಸಿ ನಮ್ಮ ಮಿತ್ರನೊಡನೆ ಒಂದು ಹೋಟೆಲಿಗೆ ಹೋಗಿ ಕಾಪಿ ಕುಡಿದೆವು.




ಚಿಕ್ಕತಂದೆಯವರು ತನಗೆ ಹೊರಗೆ ತಿರುಗಾಡಲು ಆಸಕ್ತಿ ಇಲ್ಲ ಎಂದು ಹೇಳಿದ್ದರಿಂದ ನಮ್ಮ ಲಗೇಜಿನೊಡನೆ ಅವರನ್ನು ಸ್ಟೇಶನ್ನಿನಲ್ಲೇ ಕುಳ್ಳಿರಿಸಿ ಮಿರ್ಜೆಯಲ್ಲಿ ನೋಡಬೇಕಾದಂಥ ವಿಶೇಷಗಳನ್ನು ತೋರಿಸುವಂತೆ ಮಿತ್ರನಲ್ಲಿ ಕೇಳಿದೆವು. ಅವರು ನಮ್ಮ ಕೂಡೆ ಬಂದು ಅಲ್ಲಿ ಇರುವ ಒಂದು ಮುಸಲ್ಮಾನರ ದರ್ಗಾವನ್ನು ನಮಗೆ ತೋರಿಸಿದರು. ಅಲ್ಲಿ ಇಬ್ಬರು ಮುಸ್ಲಿಂ ಗುರುಗಳ ಒಂದು ಆಳು ಎತ್ತರದ ಸಮಾಧಿಗಳು ಇವೆ. ಅವುಗಳನ್ನು ಉತ್ತಮವಾದ ರೇಶ್ಮೆ ಬಟ್ಟೆಯಿಂದ ಮುಚ್ಚಿರುತ್ತಾರೆ. ಅವುಗಳ ಮೇಲೆ ಸುಮಾರು 100 ಫೀಟು ಎತ್ತರದ ಗುಮ್ಮಟಗಳನ್ನು ಕಟ್ಟಿರುತ್ತಾರೆ. ಅದರ ಮಧ್ಯದಲ್ಲಿ ನೇತಾಡುವ ಸರಪಳಿಯಲ್ಲಿ ಪಂಚದೀಪಗಳು ಸದಾ ಉರಿಯುತ್ತಿರುತ್ತವೆ. ಮುಸಲ್ಮಾನ ಮೌಲ್ವಿಗಳು ಅಲ್ಲಿ ದಿನ ಒಂದಕ್ಕೆ ಸುಮಾರು ಒಂದು ಮಣ ಗುಗ್ಗುಳ ಧೂಪ ಹೊತ್ತಿಸುತ್ತಾರೆ. ನಂತರ ಅಲ್ಲಿಂದ ಹೊರಟು ದೊಡ್ಡ ಆಸ್ಪತ್ರೆಯನ್ನು ನೋಡಲು ಹೊರಟೆವು. ಅದರಲ್ಲಿ ಕಣ್ಣು ಓಪ್ರೆಶನ್, ಬಾಯಿ ಮತ್ತು ಕಿವಿ ಓಪ್ರೆಶನ್, ಕಾಲು ಮುರಿದವರು ಮೊದಲಾದ ಎಲ್ಲವರನ್ನೂ ನೋಡಲಾಯ್ತು. ಇಷ್ಟಾಗುವಾಗ ಗಂಟೆ 9-30 ಆದ್ದರಿಂದ ಕೆಲವು ವಿಷಯಗಳು ನೋಡಲು ಬಾಕಿ ಉಳಿದವು. ಅಲ್ಲದೆ ನಮಗೂ ನೋಡಲು ಅಸಹ್ಯವಾಯ್ತು. ಅಲ್ಲಿಂದ ರೈಲ್ವೇ ಸ್ಟೇಶನಿಗೆ ಒಂದೂವರೆ ಮೈಲು ಇರುವ ಕಾರಣ ರೈಲಿಗೆ ತಡವಾಗುವ ಹೆದರಿಕೆಯಿಂದ 3 ಜನರಿಗೆ ತಲಾ 2 ಆಣೆ ಪ್ರಕಾರ 6 ಆಣೆ ಕೊಟ್ಟು ಕುದುರೆ ಟಾಂಗಾದಲ್ಲಿ ಸ್ಟೇಶನಿಗೆ ಬಂದೆವು. ರಸ್ತೆಯಲ್ಲಿ ಬರುವಾಗ ಎತ್ತು, ಎಮ್ಮೆ , ಕೋಣಗಳ ಕೊಂಬುಗಳಿಗೆಲ್ಲ ಕೆಂಪು ಪೈಂಟು ಹಚ್ಚಿದ್ದನ್ನು ಕಂಡೆವು. ಅದು ಆ ಊರಿನ ಪದ್ಧತಿಯಂತೆ.




ಪಂಢರಪುರ ರೈಲಿಗೆ ಹೋಗಲಿರುವ ಎಲ್ಲರನ್ನೂ ಪೋಲೀಸು ಬಂದೋಬಸ್ತು ಇರುವ ಒಂದು ಕಂಪೌಂಡಿನೊಳಗೆ ದನಗಳನ್ನು ಕೂಡಿಸುವಂತೆ ಕೂಡಿ ಹಾಕಲಾಯ್ತು. ಅಲ್ಲಿಂದ ಎಲ್ಲರಿಗೂ ಇನಾಕ್ಯುಲೇಶನ್ ಮಾಡಿ ಹೊರಗೆ ಬಿಡುವುದೆಂದು ನಿರ್ಧಾರವಾಯಿತು. ಆದರೂ ನಾವು ಪಂಢರಾಪುರದಲ್ಲಿ ಮಾಡಿಸಿಕೊಳ್ಳುತ್ತೇವೆಂದು ಹೇಳಿ ನಮ್ಮ ಮಿತ್ರನ ಸಹಾಯದಿಂದ ಅಲ್ಲಿಯ ಇನಾಕ್ಯುಲೇಶನ್ ತಪ್ಪಿಸಿಕೊಂಡೆವು. ರೈಲು 10-15ಕ್ಕೆ ಹೊರಡುವುದೆಂದು ತಿಳಿಸಿದ್ದರು. ಆದರೂ 10 ಗಂಟೆ ವರೆಗೂ ಯಾರನ್ನೂ ಹೊರಗೆ ಬಿಡಲಿಲ್ಲ. 10-10ಕ್ಕೆ ಗೇಟು ತೆರೆಯಲಾಯ್ತು. ನಾವು ನಮ್ಮ ಮಿತ್ರನ ಸಲಹೆಯಂತೆ ಗೇಟಿಗೆ ನಾಲ್ಕು ಕೋಲು ಹಿಂದೆ ಒಂದು ಬದಿಯಲ್ಲಿ ಒಟ್ಟಿಗೆ ನಿಂತಿದ್ದೆವು. ಕ್ಯೂ ಪದ್ಧತಿಯಂತೆ ಹೊರಡಬೇಕೆಂದು ಮಿತ್ರರು ಹೇಳಿದ್ದರು. ಆದರೆ ಗೇಟು ತೆರೆದೊಡನೆ ಕ್ಯೂ ಬಿಟ್ಟು ಜನರು ಹೊರಗೆ ಓಡಲಾರಂಭಿಸಿದರು. ಬಿಗಿಲು ಊದುತ್ತಾ ಸುತ್ತಲಿಂದಲೂ ಲಾಠಿ ಹಿಡಿದ ಪೋಲೀಸರು ಬಂದರು. ನಾವು ಮಿತ್ರನ ಸಲಹೆಯಂತೆ ಒಂದು ಮೂಲೆಯಲ್ಲಿ ಕುಳಿತು ಬಿಟ್ಟೆವು. ಗಂಡಸು ಮತ್ತು ಹೆಂಗಸು ಎಂಬ ಭೇದವಿಲ್ಲದೆ ನಿಂತಿದ್ದವರ ಮತ್ತು ಓಡುತ್ತಿದ್ದವರ ತಲೆಗಳಿಗೆ ಪೋಲೀಸರು ಲಾಠಿಯಿಂದ ತಮಗೆ ತೃಪ್ತಿಯಾಗುವಷ್ಟು ಹೊಡೆದರು. ಜನರು ಕೂಗಿದರು. ಕೆಲವರು ಅಡ್ಡ ಬಿದ್ದರು. ಕೆಲವರ ತಲೆಗಳಿಗೆ ಬಾಸುಂಡೆಗಳು ಬಂದವು. ಬೋಳಾಗಿದ್ದವರ ತಲೆಗಳು ಒಡೆದವು. ಬೆಡ್ಡಿಂಗ್ ವಗೈರೆ ಹೊತ್ತುಕೊಂಡಿದ್ದವರ ತಲೆಗಳು ಉಳಿದವು. ನಾವು ಕೂತಿದ್ದರಿಂದ ನಮಗೆ ಪೆಟ್ಟು ಬೀಳಲಿಲ್ಲ. ಮಿತ್ರನ ಸಲಹೆ ಅಲ್ಲದಿದ್ದಲ್ಲಿ ನಾವೂ ಪೆಟ್ಟು ತಿನ್ನಬೇಕಾಗುತ್ತಿತ್ತು. ಪರಿಸ್ಥಿತಿ ತಹಬಂದಿಗೆ ಬಂದ ಮೇಲೆ ಹತ್ತು ಹತ್ತು ಜನರ ಗುಂಪುಗಳನ್ನು ಹೊರಗೆ ಬಿಡಲಾಯ್ತು. ನಮ್ಮದು ನಾಲ್ಕನೆಯ ಗುಂಪು. ನಮ್ಮ ಹಿಂದೆ ಅಂಥ 500 ಗುಂಪುಗಳಿದ್ದವು. ಎಲ್ಲರೂ ರೈಲಿನಲ್ಲಿ ಕೂತರೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ನಾವು 4ನೇ ಗುಂಪಿನವರು ಹೋದಾಗಲೇ ಬಹುತೇಕ ಎಲ್ಲಾ ಡಬ್ಬಿಗಳೂ ತುಂಬಿದ್ದವು. ನಾವು ಹೋಗಿ 15 ನಿಮಿಷದಲ್ಲಿ ರೈಲು ಹೊರಟಿತು. ಆದರೆ ನಮಗೆ ಸಹಾಯ ಮಾಡುತ್ತಿದ್ದ ಮಿತ್ರರು ಗಲಾಟೆಯಲ್ಲಿ ನಮ್ಮಿಂದ ಬೇರೆಯಾಗಿ ಬಿಟ್ಟರು. ಆದರೆ ಸುದೈವವಶಾತ್ ನಾವು ಕುಳಿತಿದ್ದ 2ನೇ ಡಬ್ಬಿಗೇ ಅವರೂ ಹತ್ತಿದರು.




ಸಂಜೆ 6-30ಕ್ಕೆ ರೈಲು ಪಂಢರಾಪುರ ತಲುಪಿತು. ಅಲ್ಲಿ ಪುನಃ ಎಲ್ಲರನ್ನೂ ಒಂದು ಹಟ್ಟಿಯಲ್ಲಿ ಕೂಡಿ ಹಾಕಲಾಯ್ತು. ರೈಲಿನ ಟಿಕೇಟು ನಮ್ಮಿಂದ ಪಡೆದು ಎರಡು ಅಡಿ ಅಗಲದ ದಾರಿಯಲ್ಲಿ ನಮ್ಮನ್ನು ಕ್ಯೂ ಪದ್ಧತಿಯಂತೆ ಬಿಡಲಾಯ್ತು. ದಾರಿಯ ತುದಿಯಲ್ಲಿ ಇನಾಕ್ಯುಲೇಶನ್ ಪಾಸ್ ಕೇಳಲಾಗುತ್ತಿತ್ತು. ನಮ್ಮ ಮಿತ್ರನಲ್ಲಿ ಪಾಸಿತ್ತು, ನಮ್ಮಲ್ಲಿ ಇರಲಿಲ್ಲ. ಆದರೂ ಅವರು ಉಪಾಯದಿಂದ ನಮ್ಮನ್ನೂ ಪಾರಾಗಿಸಿದರು.

ನಮ್ಮ ಮಿತ್ರರು ಪಂಢರಾಪುರದಲ್ಲಿ ನಮಗೆ ಇಳಿದುಕೊಳ್ಳಲು ಒಳ್ಳೆ ಜನರ ಒಂದು ಮನೆಯನ್ನು ಗೊತ್ತುಮಾಡಿ ಕೊಟ್ಟು ಅವರೂ ಅದೇ ಮನೆಯಲ್ಲಿ ಉಳಿದುಕೊಂಡರು. ಅಲ್ಲಿ ನಲ್ಲಿ ನೀರಿನಲ್ಲಿ ಸ್ನಾನ ಮಾಡಿ ಅಲ್ಲಿಯೇ ರಾತ್ರಿಯ ಊಟ ಮುಗಿಸಿ ಮಲಗಿದೆವು.
****

ಭಾಗ - 2



16-11-1953 ಸೋಮವಾರ 

ಬೆಳಗ್ಗೆ ಎದ್ದು ನಲ್ಲಿ ನೀರಿನಲ್ಲಿ ಬಟ್ಟೆಗಳನ್ನೆಲ್ಲ ಒಗೆದೆವು.  ಚಂದ್ರಭಾಗಾ( ಭೀಮಾ ನದಿ ಅಲ್ಲಿ ಚಂದ್ರಭಾಗಾ ಅನ್ನಿಸಿಕೊಳ್ಳುತ್ತದೆ) ನದಿಗೆ ಹೋಗಿ ಸ್ನಾನ, ಸಂಧ್ಯಾವಂದನೆ ಮುಗಿಸಿದೆವು.  ನದಿ ತಟದಲ್ಲಿರುವ ಗುಡಿಗಳನ್ನೆಲ್ಲ ನೋಡುತ್ತಾ ಉಳಕೊಂಡ ಮನೆಗೆ ಬಂದು ಊಟ ಮಾಡಿದೆವು. ಮಧ್ಯಾಹ್ನ 2 ಗಂಟೆಗೆ ನಮ್ಮ ಮಿತ್ರರೊಡಗೂಡಿ ಪಂಢರಪುರ ಕ್ಷೇತ್ರ ತಿರುಗಾಡಲು ಹೊರಟೆವು. ಅಲ್ಲಿ ತುಕಾರಾಮ ಮಠ, ನಾಮದೇವ ಮಠವೇ ಮೊದಲಾದ ಎಲ್ಲಾ ಮಠಗಳನ್ನು ನೋಡಿದೆವು. ತುಕಾರಾಮ ಮಠದಲ್ಲಿ 2 ಅಡಿ ಎತ್ತರದ ತುಕಾರಾಮ ಮೂರ್ತಿ ಇರುತ್ತದೆ. ಸತತ ಗಾಯನ, ಕೀರ್ತನೆ, ಭಜನೆ ವಗೈರೆ ನಡೆಯುತ್ತಾ ಇರುತ್ತದೆ. ಆ ಮಠದ ಒಳಗೆ ಹೋದರೆ ಹೊರಗೆ ಬರಲು ಮನಸ್ಸು ಬರುವುದಿಲ್ಲಾ. 

ಹಾಗೆಯೇ ಮುಂದಕ್ಕೆ ಅನಾಥಾಲಯಕ್ಕೆ ಹೋದೆವು.  ಅಲ್ಲಿ ಒಂದಾಣೆ ಕೊಟ್ಟು ಒಳಗೆ ಹೋಗಬೇಕು.  ಒಳಗೆ 10 ದಿವಸದ ಮಗುವಿನಿಂದ 16 ವರ್ಷದ ವರೆಗಿನ ಮಕ್ಕಳು ಇದ್ದರು. ಪೊದರುಗಳಲ್ಲಿ ತ್ಯಜಿಸಿದ ಮಕ್ಕಳನ್ನು ಎತ್ತಿ ತರುವ ಅನೇಕ ಫೋಟೊಗಳು ಅಲ್ಲಿ ಇದ್ದವು. 

ನಂತರ ಗಾಡಗೆ ಮಹಾರಾಜರ ಧರ್ಮಶಾಲೆಗೆ ಹೋಗಿ  ಅವರನ್ನು ಖುದ್ದು ಭೇಟಿ ಆದೆವು.  ಅಲ್ಲಿ ಸುಮಾರು 100 ಮಂದಿ ಭಿಕ್ಷುಕರು ಸಾಲಾಗಿ ಊಟಕ್ಕೆ ಕೂತಿದ್ದರು. ಅಷ್ಟು ಭಿಕ್ಷುಕರಿಗೂ ಹೊಟ್ಟೆ ತುಂಬಾ ರೊಟ್ಟಿ ಮತ್ತು ರಾಶಿ ರಾಶಿ ತಿಂಡಿಗಳು ಹಂಚಲ್ಪಟ್ಟವು.  ಗಾಡಗೆ ಮಹಾರಾಜರು  ಸ್ವತಃ ತಮ್ಮ ಕೈಯಿಂದಲೂ ಉಣ್ಣುವವರಿಗೆ ತೃಪ್ತಿಯಾಗುವ ವರೆಗೆ ಬಡಿಸಿದರು. ಆದರೆ ಅವರ ಧರ್ಮ ಏಕಾದಶಿ ಸಂಬಂಧ ಮಾತ್ರ ಅಲ್ಲವಂತೆ.  ಸುಮಾರು 10 ತಿಂಗಳಿಂದ ಹೀಗೆಯೇ ಸತತವಾಗಿ ನಡೆದುಕೊಂಡು ಬಂದಿದೆಯಂತೆ.

ಆ ಧರ್ಮಶಾಲೆಯ ಹಿಂದೆ ಸಂತ ಗಯಾ ಬಾಯಿಯ ಇನ್ನೊಂದು ಧರ್ಮಶಾಲೆಯನ್ನೂ ನೋಡಿದೆವು. ಇಲ್ಲಿ ಕೂಡ ಗಯಾ ಬಾಯಿಯವರು ಸ್ವಂತ ಕೈಯಿಂದ ಭಿಕ್ಷುಕರಿಗೆ ಬಡಿಸುತ್ತಿದ್ದರು. ‘ನಾಳೆ ಪಂಢರಪುರ ದರ್ಶನಕ್ಕೆ ಬರುವ ಎಲ್ಲಾ ಬಡ ಜನರಿಗೆ ಪಾಂಡುರಂಗನು ನನ್ನಿಂದ ಅನ್ನದಾನ ಮಾಡಿಸಲಿರುವನು. ಅದನ್ನು ಸ್ವೀಕರಿಸಿ ನನ್ನನ್ನು ಧನ್ಯಳನ್ನಾಗಿ ಮಾಡಬೇಕು ಎಂದು ಬಯಸುತ್ತೇನೆ’ ಎಂದು ಲೌಡ್ ಸ್ಪೀಕರಿನಲ್ಲಿ ಹೇಳುತ್ತಿದ್ದರು. ‘ಇಲ್ಲಿಗೆ ಬರುವ ಜನರಿಗೆ ಮಾತ್ರ ಕೊಡಲಾಗುವುದೇ ಹೊರತು ಅಲ್ಲಿದ್ದಾರೆ, ಇಲ್ಲಿದ್ದಾರೆ ಎಂದು ಹೇಳಿದರೆ ಸಿಗದು’ ಎಂಬ ಶರ್ತ ಇರುವುದನ್ನೂ ಹೇಳಿದರು. ನಾಳೆ ರಿಜರ್ವ್ ಪೋಲೀಸರ ಬಂದೋಬಸ್ತು ಕೂಡ ಇರುವುದಂತೆ.

ಅಲ್ಲಿಂದ ಹೊರಟು ಮಾರ್ಕೇಟ್ ನೋಡಲು ಹೋದೆವು. ಧರ್ಮಸ್ಥಳ ನಡಾವಳಿಯಲ್ಲಿ ನೋಡಿದ್ದಕ್ಕಿಂತ 1000 ಪಾಲು ಜಾಸ್ತಿ ತರಕಾರಿ ರಾಶಿಯನ್ನು ಅಲ್ಲಿ ನೋಡಿದೆವು.  ಅಲ್ಲಿಂದ ಮುಂದೆ ನಡೆದು ಕುದುರೆ ಮತ್ತು ಎತ್ತುಗಳ ಸಂತೆ ನಡೆಯುವ ಜಾಗಕ್ಕೆ ಹೋದೆವು. ಕುದುರೆಗಳು 100 ರೂಪಾಯಿಯಿಂದ 1500 ರೂಪಾಯಿ ವರೆಗಿನ ಕ್ರಯದವು ಇದ್ದವು. ಅದರಲ್ಲಿ ಒಂದು ಕುದುರೆ ಮಾತ್ರ ಯಾರಾದರೂ ನೋಡುವಂಥದ್ದಿತ್ತು.  ಆದರ ಕಣ್ಣಿಗೆ ಗಟ್ಟಿಯಾಗಿ ಬಟ್ಟೆ ಕಟ್ಟಿದ್ದರು. ಯಾಕೆಂದು ಕೇಳಲಾಗಿ ಅದರ ಕಣ್ಣಿಗೆ ಹೆಣ್ಣು ಕುದುರೆ ಕಂಡರೆ ತುಡುಗು ಮಾಡುತ್ತದೆಂದು ತಿಳಿಸಿದರು. 

ಹೀಗೆ ಏನೇನೋ ವಿಚಿತ್ರಗಳನ್ನು ನೋಡುತ್ತಾ ಬಿಡಾರಕ್ಕೆ ಬಂದೆವು. ಕೈಕಾಲು ತೊಳೆದು ಸಂಧ್ಯಾವಂದನೆ ಮಾಡಿದೆವು.  ನಮ್ಮ ಬಿಡಾರದವರ  ಭಜನೆಯ ಪಾಳಿಯು ರಾತ್ರೆ 10 ಗಂಟೆಗೆ ಇದ್ದುದರಿಂದ  ನಾವು ಕೂಡ ಅವರ ಜೊತೆ ಸೇರಿಕೊಂಡೆವು.  ಅವರೊಂದಿಗೆ ಯಾವುದೇ ನೂಕು ನುಗ್ಗಲು ಇಲ್ಲದೆ ಹಿಂದೆ ಮುಂದೆ ಪೋಲೀಸ್ ದಳಗಳನ್ನು ಇಟ್ಟು ಕೊಂಡು ದೇವಸ್ಥಾನದೊಳಗೆ ಹೋಗಲು ಸಾಧ್ಯವಾಯಿತು.  ಗರ್ಭಗುಡಿಯ ಒಳಗೆ ಹೋಗಿ ದೇವರ ಕಾಲಿನ ಮೇಲೆ ತಲೆಯಿಟ್ಟು  ನಮಸ್ಕಾರ ಮಾಡುವ ಅವಕಾಶ ಕೂಡ ದೊರಕಿತು.  ಇಲ್ಲವಾದರೆ 4 - 5  ಲಕ್ಷ ಜನರ ಗುಂಪಿನಲ್ಲಿ ಕೂತು ಕ್ಯೂ ಪದ್ಧತಿ ಪ್ರಕಾರ ಒಳಗೆ ಹೋಗಿ ದೇವರ ದರ್ಶನ ಮಾಡಬೇಕಾದರೆ ಸತ್ತು ಸುಣ್ಣವಾಗಬೇಕಿತ್ತು. ಏನಾದರೂ ಗಲಾಟೆಯಾದಲ್ಲಿ ಈ ಗುಂಪಿಗೆ ದನ ಕಾಯುವವನು ದನಗಳನ್ನು ಹೊಡೆಯುವಂತೆ ಬೆತ್ತದಿಂದ ತಲೆಗೆ ಹೊಡೆಯಲಾಗುತ್ತದೆ. ಆ ಗುಂಪಿನವರಿಗೆ 7 - 8 ಗಂಟೆಗಳ ನಂತರ ದರ್ಶನದ ಪಾಳಿ ಬರುತ್ತದೆ. ನಮಗೆ ಅರ್ಧ ಗಂಟೆಯೊಳಗೆ ದೇವಸ್ಥಾನದೊಳಗೆ ಮಾಡುವ ಎಲ್ಲ ಕಾರ್ಯಗಳನ್ನು ಮುಗಿಸಿ ಹೊರಗೆ ಬರಲು ಸಾಧ್ಯವಾಯ್ತು. ಅಲ್ಲಿ ಕರ್ಪೂರಾರತಿಗೆ ರೂ 5, ದೇವರಿಗೆ ಪಾದಕಾಣಿಕೆ 0-1-0, ದೇವರಿಗೆ ನೀವಾಳಿಸಿ ಎಸೆಯಲು 0-1-0, ವಿಠ್ಠಲನಿಗೆ ತುಳಸಿ ಸಹಿತ ಹೂಮಾಲೆ 0-2-0, ರುಕುಮಾಯಿಗೆ ಸೇವಂತಿಗೆ ಮಾಲೆ 0-4-0  ಇಷ್ಟನ್ನು ಮಾಡಲಾಯ್ತು. ಇಷ್ಟೆಲ್ಲಾ ಆದಮೇಲೆ ಆ ಮನೆಯವರು ನಮ್ಮನು ಬಿಡಾರಕ್ಕೆ ತಲುಪಿಸಿ ಮತ್ತೆ ದೇವಸ್ಥಾನಕ್ಕೆ ಹೋದರು.  ರಾತ್ರೆ 10-30ಕ್ಕೆ ನಾವು ಮಲಗಿದೆವು.

17-11-1953 ಮಂಗಳವಾರ ಏಕಾದಶಿ

ಬೆಳಗ್ಗೆ ಮುಖಮಾರ್ಜನಾದಿ ಕೃತ್ಯಗಳನ್ನು ತೀರಿಸಿ  ಚಾ ಕುಡಿದು ಸ್ನಾನ ಸಂಧ್ಯಾವಂದನೆಗಳನ್ನು ಬಿಡಾರದಲ್ಲೇ ತೀರಿಸಲಾಯ್ತು.  ಏಕೆಂದರೆ ಲಕ್ಷಗಟ್ಟಲೆ ಜನರು ಸೇರಿರುವುದರಿಂದ ಚಂದ್ರಭಾಗಾ ನದಿಯ ದಡ ತುಂಬಾ ಹೊಲಸಾಗಿರುತ್ತದೆ. ನಂತರ ಇಡೀ ಪಂಢರಾಪುರ ಪಟ್ಟಣವನ್ನು ಸುತ್ತಿ ನೋಡಲಾಯ್ತು. (ಫೋಟೋ ತೆಗೆಸಿದ್ದು ಈ ದಿನವೇ ಇರಬಹುದು.)

18-11-1953 ಬುಧವಾರ

ದ್ವಾದಶಿ ಆದ್ದರಿಂದ ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡಿದೆವು. ನಂತರ ಇಡೀ ನಗರ ಪ್ರದಕ್ಷಿಣೆ ಮಾಡಿ ಅಲ್ಲಿ ಕೊಳ್ಳಬೇಕಾದ್ದನ್ನೆಲ್ಲ ಕೊಂಡೆವು.  ರಾತ್ರೆ ಜ್ಞಾನೇಶ್ವರ ಮಠದಲ್ಲಿ ನಡೆಯುವ ಹರಿಕಥೆಗೆ ಹೋದೆವು. ಅಲ್ಲಿ ಹಂಚುತ್ತಿದ್ದ ತಪಕೀರ್ ಎಂಬ ಪ್ರಸಾದವನ್ನು ಪಡೆದೆವು. ತಲಾ 1-8-0ಯ ಮುನ್ಸಿಪಲ್ ಪಾಸುಗಳನ್ನು ಪಡಕೊಳ್ಳಲಾಯ್ತು. ರಾತ್ರೆ 12-30ರ ಬಸ್ಸಿನಲ್ಲಿ  ಸೋಲಾಪುರಕ್ಕೆ ಹೊರಟೆವು.

******

ಭಾಗ -3



19-11-1953 ಗುರುವಾರ 

ನಿನ್ನೆ ರಾತ್ರೆ ಪಂಢರಾಪುರದಿಂದ ಬಸ್ಸಿನಲ್ಲಿ ಹೊರಟವರು ಬೆಳಗಿನ ಜಾವ 4-30ಕ್ಕೆ ಸೋಲಾಪುರ ತಲುಪಿದೆವು. ಬೆಳಗಿನ ವರೆಗೆ ರೈಲ್ವೇ ಸ್ಟೇಶನಿನಲ್ಲಿ ಮಲಗಿದೆವು. ಅಲ್ಲಿಂದ 8 ಗಂಟೆಯ ಟ್ರೈನಿಗೆ ಗಾಣಗಾಪುರಕ್ಕೆ ಹೋದೆವು.   ಅಲ್ಲಿಂದ 10 ಗಂಟೆಯ ಬಸ್ಸಿನಲ್ಲಿ ಹೊರಟು ಮಧ್ಯಾಹ್ನಕ್ಕೆ ಗುಲ್ಬರ್ಗಾ ತಲುಪಿದೆವು.  ಅಲ್ಲಿ ಒಂದು ಶಿವಳ್ಳಿ ಬ್ರಾಹ್ಮಣರ ಹೋಟೆಲಿನಲ್ಲಿ ಸ್ನಾನ, ಊಟ ಮುಗಿಸಿದೆವು. ತಣ್ಣೀರಿಗೆ ಬಾಲ್ದಿ ಒಂದರ 3 ಆಣೆ, ಊಟಕ್ಕೆ ರೂ 1.  ಅಲ್ಲಿಂದ 2-30ರ ಬಸ್ಸಿಗೆ ಕಡಗಂಚಿಗೆ ಹೊರಟೆವು. ಕಡಗಂಚಿಯಿಂದ ಏಳೂವರೆ ಮೈಲು ನಡೆದುಕೊಂಡು ಹೋಗಬೇಕಾದ್ದರಿಂದ ಗುಲ್ಬರ್ಗದಲ್ಲೇ ದಿನ ಒಂದರ ರೂ 1 ರಂತೆ ಬಾಡಿಗೆ ನಿಶ್ಚಯಿಸಿ ರೂಮು ಬಾಡಿಗೆಗೆ ಮಾಡಿಕೊಂಡು ಅಲ್ಲಿ ನಮ್ಮ ಬೇಗುಗಳನ್ನಿಟ್ಟು ಜೋಡು ಬೀಗ ಹಾಕಿ ಬೆಡ್ಡಿಂಗುಗಳನ್ನು ಮಾತ್ರ ಜೊತೆಗೆ ತಂದಿದ್ದೆವು. ಬಸ್ಸು 3-30ಕ್ಕೆ ಕಡಗಂಚಿಗೆ ತಲುಪಿತು. ಅಲ್ಲಿ ಬಸ್ಸಿನಿಂದಿಳಿದು ಅತ್ತಿತ್ತ ನೋಡುವಷ್ಟರಲ್ಲಿ  10 ಮಂದಿ ಸ್ವಾಮಿಕಾರ್ತಿಕಕ್ಕೆ ಹೋಗುವವರು ಸಿಕ್ಕಿದರು. ಅವರು ನಾವು ಕೂಡಿ  ಸಂಜೆ 6ಕ್ಕೆ ಕಾಲ್ನಡಿಗೆಯಲ್ಲಿ ನರಾವಣ ತಲುಪಿದೆವು. ಅಲ್ಲಿಯ ಜನರು ತುಂಬಾ ಸಾಧು ಸ್ವಭಾವದವರು. ಅವರು ನಮಗೆ ಉಳಿದುಕೊಳ್ಳಲು ನಾರಾಯಣ ಮಠ ಎಂಬ ಒಂದು ಬಂಗಲೆಯನ್ನು ತೋರಿಸಿದರು.  ಅಲ್ಲಿ ಒಂದು ಬ್ರಾಹ್ಮಣರ ಮನೆಯೂ ಇದೆ.  ಅವರು ನಮಗೆ ರಾತ್ರೆ ಕಾಫಿ ಮಾಡಿ ಕೊಟ್ಟರು.

20-11-1953  ಶುಕ್ರವಾರ

ಬೆಳಗ್ಗೆ ಅದೇ ಮನೆಯವರು ನಮಗೆ ಚಾ ಮಾಡಿ ಕೊಟ್ಟರು.  ಅಲ್ಲಿಂದ ನಾವು ಕ್ಷೇಮೇಶ್ವರಕ್ಕೆ ಹೊರಟೆವು.  ನರಾವಣದಿಂದ ಕ್ಷೇಮೇಶ್ವರಕ್ಕೆ ಒಂದೇ ರಸ್ತೆ ಇರುವುದರಿಂದ ಸುಲಭವಾಗಿ ಅಲ್ಲಿಗೆ ತಲುಪಿದೆವು. ಅಲ್ಲಿ ನಮಗೆ ದುರ್ಗದವರೂ ಭೇಟಿಯಾದರು. (ಬಹುಶಃ ದುರ್ಗದಿಂದ ಇನ್ನೊಂದು ತಂಡದವರೂ ಬೇರೆಯಾಗಿ ಯಾತ್ರೆ  ಕೈಗೊಂಡಿದ್ದಿರಬಹುದು.)  ಕ್ಷೇಮೇಶ್ವರದಲ್ಲಿ ನಾವು ಸ್ನಾನ, ಪೂಜೆ, ದರ್ಶನ, ಊಟ  ವಗೈರೆ ತೀರಿಸಿದೆವು.  ಗಂಟೆ 3 ಕ್ಕೆ ನರಾವಣಕ್ಕೆ ಬಸ್ಸು ಇದೆ ಎಂದು ತಿಳಿದದ್ದರಿಂದ  ಒಂದುವರೆ ಮೈಲು ದೂರ ಇರುವ ಬಸ್ ನಿಲ್ದಾಣಕ್ಕೆ  ಬಿಸಿಲನ್ನು ಲೆಕ್ಕಿಸದೆ ಓಡಿದೆವು. ಆದರೆ ನಾವು ತಲುಪುವಾಗ ಬಸ್ಸು ಹೋಗಿ 10 ಮಿನಿಟು ಆಗಿತ್ತು.  ಸಂಜೆ 7ಕ್ಕೆ ಇನ್ನೊಂದು ಬಸ್ಸು ಇರುವುದೆಂದು ತಿಳಿದು ಬಂದದ್ದರಿಂದ ಅಲ್ಲಿಯೇ ಇದ್ದ ಒಂದು ಹೋಟೆಲಿನಲ್ಲಿ ಕುಳಿತೆವು. ರಾತ್ರೆ ಗಂಟೆ 9 ಆದರೂ ಆ ಬಸ್ಸು ಬರಲಿಲ್ಲ.  ಅಲ್ಲಿರುವ ಮನೆ, ಹೋಟೆಲುಗಳೆಲ್ಲ ವೀರಶೈವರವು ಆಗಿದ್ದರಿಂದ  ಹಸಿವಿಗೆ 4 ಆಣೆಯ ಹುರಿಯಕ್ಕಿ ತಿಂದು ಹತ್ತಿರವಿರುವ ಒಂದು ಮಾರುತಿ ದೇವಸ್ಥಾನದಲ್ಲಿ ಮಲಗಿದೆವು. ರಾತ್ರೆ 1-30ಕ್ಕೆ ಬಸ್ಸು ಬಂದು ಹೋಯಿತಂತೆ.  ನಿದ್ದೆ ಬಂದ ಕಾರಣ ನಮಗೆ ತಿಳಿಯಲಿಲ್ಲ. 

21-11-1953 ಶನಿವಾರ

ಬೆಳಗ್ಗೆ ಎದ್ದು 5 ರೂ ಬಾಡಿಗೆಗೆ ಒಂದು ಎತ್ತಿನ ಗಾಡಿ ಮಾಡಿಕೊಂಡು ನರಾವಣಕ್ಕೆ ಬಂದೆವು. ಅಳಂದದಿಂದ ಬಂದ ಬಸ್ಸಿನಲ್ಲಿ ಅಲ್ಲಿಂದ  ಗುಲ್ಬರ್ಗಕ್ಕೆ ಬಂದೆವು. ಅಲ್ಲಿ ನಮ್ಮ ಲಗೇಜು ಇಟ್ಟಿದ್ದ ರೂಮಿಗೆ ಹೋದೆವು. ಸ್ನಾನಕ್ಕೆ ಕೆರೆ ವಗೈರೆ ಏನಾದರೂ ಇರುವುದೋ ಎಂದು ವಿಚಾರಿಸಲಾಗಿ ಅರ್ಧ ಫರ್ಲಾಂಗ್ ದೂರದಲ್ಲಿ ಉತ್ತಮವಾದ ಕೆರೆ ಇರುವುದೆಂದು ತಿಳಿದೆವು. ಅಲ್ಲಿಗೆ ಹೋಗಿ ನೋಡಿದಾಗ ಅದು ಕಾರ್ಕಳ ರಾಮಸಮುದ್ರಕ್ಕಿಂತಲೂ ದೊಡ್ಡದೆಂದು ತಿಳಿಯಿತು. ಅಲ್ಲಿ ಬಟ್ಟೆ ಒಗೆದು, ಸ್ನಾನ ಮಾಡಿ ಊಟ ತೀರಿಸಿದೆವು.  ಗುಲ್ಬರ್ಗದಿಂದ ರೈಲಿನಲ್ಲಿ ಹೊರಟು 5-30ಕ್ಕೆ ಗಾಣಗಾಪುರ ತಲುಪಿದೆವು. ರೈಲ್ವೆ ಸ್ಟೇಶನಿನಿಂದ ಗಾಣಗಾಪುರ ದೇವಸ್ಥಾನಕ್ಕೆ 15 ಮೈಲು ಆದ್ದರಿಂದ  ಬಸ್ಸಿಗಾಗಿ ಕಾಯುತ್ತಾ ಕುಳಿತೆವು.  ಬಸ್ಸು 7ಕ್ಕೆ ಹೊರಟು 7-45ಕ್ಕೆ  ಗಾಣಗಾಪುರಕ್ಕೆ ತಲುಪಿತು.  ಅಲ್ಲಿ ರಾತ್ರೆ ದೇವರ ದರ್ಶನ ಮಾಡಿ ನದಿ ನೋಡಿದೆವು. ದೇವಳದ ಮಾಳಿಗೆಯ ಮೇಲೆ ನಮಗೆ ಉಳಕೊಳ್ಳಲು ಸ್ಥಳ ಸಿಕ್ಕಿತು.

22-11-1953 ಆದಿತ್ಯವಾರ

ಬೆಳಗ್ಗೆ 7ಕ್ಕೆ ಹೊಳೆಗೆ ಹೋಗಿ  ಸ್ನಾನ, ಸಂಧ್ಯಾವಂದನೆ  ಮುಗಿಸಿದೆವು. ದೇವ ದರ್ಶನ ಮಾಡಿ ಒಂದು ಪಂಚೋಪಚಾರ ಪೂಜೆ ಮಾಡಿಸಿದೆವು. ವಿಜಾಪುರ ಬ್ರಾಹ್ಮಣರ ಒಂದು ಮನೆಯಲ್ಲಿ ಊಟ ಮಾಡಿದೆವು. ಊಟ ಒಂದರ 0-1-0 ಯಂತೆ ಅವರಿಗೆ ಕೊಟ್ಟೆವು. ನಂತರ ಗಂಟೆ 3ಕ್ಕೆ ಬಸ್ಸು ನಿಲ್ದಾಣಕ್ಕೆ ಬಂದೆವು. ಗಂಟೆ 6ಕ್ಕೆ ಬಸ್ಸು ಬಂತು. ತುಂಬಾ ರಶ್ ಇತ್ತು. ಹೇಗಾದರೂ ನಾವು ಎಲ್ಲರೂ ಬಸ್ಸಿನೊಳಗೆ ನುಗ್ಗಿದೆವು. ಬಸ್ಸು 7-45ಕ್ಕೆ ಗಾಣಗಾಪುರ ಸ್ಟೇಶನಿಗೆ ತಲುಪಿತು. ರಾತ್ರೆ ಸ್ಟೇಶನಿನಲ್ಲೇ ಉಳಕೊಂಡೆವು.

23-11-1953 ಸೋಮವಾರ

ಪಂಢರಾಪುರ ಮಾರ್ಗವಾಗಿ ಮಿರ್ಜೆಗೆ ರೂ 6-3-0ರ ಟಿಕೇಟು ಪಡೆದುಕೊಂಡು ಬೆಳಗ್ಗೆ 6-45ಕ್ಕೆ  ರೈಲಿನಲ್ಲಿ ಕುಳಿತೆವು. ಮಧ್ಯಾಹ್ನ ಗಂಟೆ 12ಕ್ಕೆ ಕುರ್ಡುವಾಡಿ ಜಂಕ್ಷನಿನಲ್ಲಿ ಇಳಿದೆವು. ಮಿರ್ಜೆಗೆ ಹೋಗುವ ರೈಲು ರಾತ್ರೆ 10ಕ್ಕೆ ಇರುವುದೆಂದು ಸ್ಟೇಶನ್ ಮಾಸ್ತರರು ಹೇಳಿದರು. ಅಲ್ಲಿಯೇ ಸಮೀಪವಿದ್ದ ಗೆಸ್ಟ್ ಹೌಸ್ ಎಂಬ ಚಿತ್ಪಾವನ ಬ್ರಾಹ್ಮಣರ ಹೋಟೆಲಿಗೆ ಹೋಗಿ ಸ್ನಾನ ಊಟ ತೀರಿಸಿದೆವು. ಬಿಸಿ ನೀರು ಬಾಲ್ದಿ ಒಂದರ 0-2-0. ಊಟ ಒಂದರ ರೂ 1-0-0. ಅಲ್ಲಿಯ ಬಾವಿಗಳ ನೀರು ಉಪ್ಪು. ಅದನ್ನು ಕುಡಿದರೆ ಕೊಳೆತ ಸಿಯಾಳದ ನೀರನ್ನು ಕುಡಿದಂತೆ ಆಗುತ್ತದೆ. ರಾತ್ರೆ ಗಂಟೆ ಹತ್ತಕ್ಕೆ ಮಿರ್ಜೆಗೆ ಹೋಗುವ ರೈಲಲ್ಲಿ ಕುಳಿತೆವು.


*****

ಭಾಗ - 4




24-11-1953 ಮಂಗಳವಾರ

ಕುರ್ಡುವಾಡಿಯಿಂದ ಹೊರಟ ರೈಲು ಬೆಳಗ್ಗೆ 7-30ಕ್ಕೆ ಮಿರ್ಜೆಗೆ ತಲುಪಿತು.  ಅಲ್ಲಿ ಕಾಫಿ ಕುಡಿದು ಗಂಟೆ 9 ಕ್ಕೆ ಕೊಲ್ಹಾಪುರಕ್ಕೆ ಹೋಗುವ ರೈಲಿನಲ್ಲಿ ಕುಳಿತೆವು. 12-30ಕ್ಕೆ ಕೊಲ್ಹಾಪುರಕ್ಕೆ ತಲುಪಿದೆವು. ದುರ್ಗ ಅನಂತ ಭಟ್ರ ಸಲಹೆಯಂತೆ 7 ಜನರಿಗೆ ಎರಡು ಟಾಂಗಾ ಮಾಡಿ ಬ್ರಾಹ್ಮಣರ ಹೋಟೆಲಿಗೆ ಹೋದೆವು. ಅಲ್ಲಿ ದಿವಸ ಒಂದರ ತಲಾ 8 ಆಣೆಯಂತೆ ರೂಮು ಗೊತ್ತು ಮಾಡಿ ಅದೇ ಟಾಂಗಾಗಳಲ್ಲಿ ಪಂಚಗಂಗಾ ಸ್ನಾನ, ದೇವಿ ದರ್ಶನವಗೈರೆ ಮಾಡಿಕೊಂಡು ಬಂದೆವು.  7 ಜನರ ಬಾಡಿಗೆ ರೂ 6 ಆಯಿತು. ಹೋಟೆಲಿನಲ್ಲಿ ಊಟ ಒಂದರ ರೂ 1/-. ದುರ್ಗದವರು ಈ ದಿನವೇ ಹೊರಟು ಹೋದರು.  ನಮ್ಮಲ್ಲಿರುವ ಹಣ ಮುಗಿಯುತ್ತಾ ಬಂದದ್ದರಿಂದ ನಾವು ಇಲ್ಲೇ ಉಳಿಯಬೇಕಾಯಿತು.(ಇನ್ನೊಂದು ಪಾರ್ಟಿಯವರಲ್ಲಿ ಕೇಳಲು ಸಂಕೋಚವಾಯಿತೋ, ಅವರಲ್ಲೂ ಹೆಚ್ಚಿಗೆ ದುಡ್ಡು ಇರಲಿಲ್ಲವೋ ತಿಳಿಯದು) ರೂ 50 ಕಳಿಸುವಂತೆ ಕಾರ್ಕಳದ ಆನಂದ ಭಟ್ರಿಗೆ( ಇವರು ಯಾರು?) express ತಂತಿ ಬಿಟ್ಟೆವು. (ಉಜಿರೆ ಹಾಸ್ಟೆಲಲ್ಲಿರುವಾಗ, ಕಾಲೇಜಿಗೆ ಹೋಗುವಾಗ, ನಂತರ true copyಗಳನ್ನು ಟೈಪ್ ಮಾಡಿಸುವಾಗ  ಕೆಲವು ಸಲ ನನ್ನ ಪರ್ಸಿನಲ್ಲಿರುವ ಹಣವೂ ಪೂರಾ ಖಾಲಿಯಾದದ್ದಿದೆ! ಈಗ ಪರ್ಸಿನ ರಿಸರ್ವ್ ಜಾಗದಲ್ಲಿ ಸ್ವಲ್ಪ ಹೆಚ್ಚಿನ buffer ಹಣ ಇಟ್ಟುಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದೇನೆ.)

25-11-1953 ಬುಧವಾರ

ಈ ದಿನವೂ ಹಣ ಬರಲಿಲ್ಲ. ಹಾಗಾಗಿ ಕಾಳಾಜೆಗೆ ತಂತಿ ಬಿಡಲಾಯ್ತು.(ಕಾಳಾಜೆಗೆ ತಂತಿ ಹೇಗೆ ಮುಟ್ಟಿತು?) 

26-11-1953 ಗುರುವಾರ

ಇವತ್ತು ದಿನ ಸಾಯಂಕಾಲ 3 ಕ್ಕೆ ಹಣ ಬಂತು. ಆದರೆ ಎಡ್ರೆಸ್ಸಿನಲ್ಲಿ ಕಾಕತ್ಕಾರ ಎಂದು ಇರುವುದರ ಬದಲಿಗೆ ಕಾಕಕಾರ ಎಂದು ಬರೆದಿದ್ದುದರಿಂದ ಹಣ ನಮಗೆ ಸಿಗಲಿಲ್ಲ. ಇದನ್ನು ಸರಿಪಡಿಸುವರೆ ಪುನಃ ತಂತಿ ಬಿಡಲಾಯ್ತು. ಎರಡು ದಿನವೂ ನಾವು ಕೊಲ್ಹಾಪುರವನ್ನು ಸುತ್ತಿ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದೆವು. ಭವ್ಯ ರಾಜವಾಡೆಗಳು ಮತ್ತು ಅಲ್ಲಲ್ಲಿ ಶಿವಾಜಿ, ಗಾಂಧಿ, ಸಂಭಾಜಿ ಮುಂತಾದವರ ಕಾಂಕ್ರೀಟು ಮೂರ್ತಿಗಳು, ಒಂದು ರಾಜವಾಡೆಯಲ್ಲಿ ಚಿನ್ನದ ತುಳಜಾ ಭವಾನಿ, ಒಂದುವರೆ ಆಳೆತ್ತರದ ಒಂದು ಕೋಣ ಇತ್ಯಾದಿ ಇವೆ. ಒಟ್ಟಾರೆ ನಾವು ತಿರುಗಾಡಿದ್ದರಲ್ಲಿ ಕೊಲ್ಹಾಪುರದಷ್ಟು ಉತ್ತಮ ಸ್ಥಳ ಬೇರೆ ನೋಡಲಿಲ್ಲ. 

27-11-1953 ಶುಕ್ರವಾರ

ಈ ದಿನ ಕೊಲ್ಹಾಪುರದ ಒಂದು ವಸ್ತು ಸಂಗ್ರಹಾಲಯವನ್ನು ನೋಡಿದೆವು. ಅಲ್ಲಿ 1000 ವರ್ಷಕ್ಕಿಂತಲೂ ಹಳೆಯ ವಸ್ತುಗಳಿವೆ. ಅವುಗಳಲ್ಲಿ ಮಣ್ಣಿನ ಪಾತ್ರೆ, ಹೊಳೆಯುವ ಕಲ್ಲುಗಳು ಮತ್ತು ಶಿಲಾ ಪ್ರತಿಮೆಗಳು ಹೆಚ್ಚು. ವಸ್ತು ಸಂಗ್ರಹಾಲಯದ ಸಿಬ್ಬಂದಿ ಎಲ್ಲವನ್ನೂ ವಿನಯದಿಂದ ತೋರಿಸುತ್ತಾರೆ. ಹೊರಗೆ ಬರುವಾಗ ನಮ್ಮ ಅಭಿಪ್ರಾಯ ಮತ್ತು ಹೆಸರು ಒಂದು ಪುಸ್ತಕದಲ್ಲಿ ಬರೆಯಬೇಕು. ಅಲ್ಲಿ ಎದುರು 10 ಎಕರೆಯಷ್ಟು ಗಾರ್ಡನ್ ಇದೆ. ಆದರೆ ವಿಶೇಷ ಹೂ ಗಿಡಗಳು ಯಾವುದೂ ಇಲ್ಲ. 8-10 ಬಗೆಯವು ಇವೆ ಅಷ್ಟೇ. ಬಾಕಿ ಎಲ್ಲ ಕ್ರೋಟನ್. ( ಲಾಹಾಣ್ಣಾಗೆ ವೈವಿಧ್ಯಮಯ ಹೂ, ಹಣ್ಣುಗಳ ಗಿಡ ಬೆಳೆಸುವುದರಲ್ಲಿ ತುಂಬಾ ಆಸಕ್ತಿ ಮತ್ತು ಪರಿಣಿತಿ ಇದ್ದದ್ದರಿಂದ ಅಲ್ಲಿದ್ದುದೆಲ್ಲ ಸಪ್ಪೆಯಾಗಿ ಕಂಡಿರಬಹುದು.) ಅಲ್ಲಿ ಎದುರುಗಡೆ ಒಂದು ಕಾರಂಜಿ ಇದೆ. ಅದರ ಕೊಳದಲ್ಲಿ ಕೆಂಪು, ಹಳದಿ, ಹಸುರು ಬಣ್ಣದ ಮೀನುಗಳಿವೆ.

ಹಣ ಬಂತೇ ಎಂದು ತಿಳಿಯಲು ಸಂಜೆ ಪೋಸ್ಟಾಫೀಸಿಗೆ ಹೋದೆವು.  ಹಣ ಬಂದಿತ್ತು. ಆದರೆ ನಮ್ಮ ಲಾಡ್ಜಿನ ಎಡ್ರೆಸ್ ಸರಿಯಾಗಿ ಬರೆಯದಿದ್ದುದರಿಂದ ಈ ಸಲವೂ ನಮಗೆ ಹಣ ಸಿಗಲಿಲ್ಲ. ಎಡ್ರೆಸ್ ಸರಿಪಡಿಸುವಂತೆ ಪುನಃ ತಂತಿ ಬಿಡಲಾಯ್ತು.

28-11-1953 ಶನಿವಾರ

ಇವತ್ತು ಮಧ್ಯಾಹ್ನ 2-30ಕ್ಕೆ ಎಡ್ರೆಸ್ ಸರಿಪಡಿಸಿ ಬಂತು. ಪೋಸ್ಟಾಫೀಸಿನ ಪಿಯೋನ್ ನಾವು ಉಳಿದುಕೊಂಡ ಪ್ರಫುಲ್ಲ ಲಾಡ್ಜಿಗೆ ಹಣ ತಂದು ಕೊಟ್ಟನು. ನಂತರ ಸಾಯಂ ಗಂಟೆ 5 ಕ್ಕೆ ಹೊರಟು ರೈಲ್ವೇ ಸ್ಟೇಶನಿಗೆ ಹೋಗಿ 0-13-0 ಪ್ರಕಾರ ಮಿರ್ಜೆಗೆ ಟಿಕೆಟು ಪಡಕೊಂಡು ರೈಲಿನಲ್ಲಿ ಕುಳಿತೆವು. ರಾತ್ರೆ 8ಕ್ಕೆ ಮಿರ್ಜೆಗೆ ತಲುಪಿದೆವು. ಅಲ್ಲಿ ಕಡೂರಿಗೆ ಹೋಗುವ ರೈಲು .ರೆಡಿ ಇತ್ತು. ಟಿಕೆಟು ಪಡಕೊಂಡು ಅದರಲ್ಲಿ ಕುಳಿತೆವು. (ಕೊಲ್ಹಾಪುರದಲ್ಲೇ ನೇರ ಕಡೂರಿಗೆ ಯಾಕೆ ಟಿಕೇಟು ಪಡಕೊಳ್ಳಲಿಲ್ಲ?) 8-15ಕ್ಕೆ ರೈಲು ಹೊರಟಿತು. ನಮಗೆ ಮಲಗಲು ಜಾಗ ಸಿಕ್ಕಿತು.

29-11-1953  ಆದಿತ್ಯವಾರ

ಬೆಳಗ್ಗೆ 4-30ಕ್ಕೆ ರೈಲು ಹುಬ್ಬಳ್ಳಿ ತಲುಪಿತು. ನಾವು ಕೂತಿದ್ದ ಸೀಟುಗಳು ಇನ್ಯಾರಿಗೋ ರಿಸರ್ವ್ ಆಗಿದ್ದರಿಂದ ನಾವು ಇನ್ನೊಂದು ಬೋಗಿಗೆ ಹೋಗಬೇಕಾಯಿತು. ಮಧ್ಯಾಹ್ನ 1 ಗಂಟೆಗೆ ರೈಲು ಕಡೂರಿಗೆ ಬಂತು. ಅಲ್ಲಿ ಮೂಲ್ಕಿ  ಎಕ್ಸ್‌ಪ್ರೆಸ್ ಬಸ್ಸು ಹೊರಡಲು ಸಿದ್ಧವಾಗಿ ನಿಂತಿತ್ತು. ನಾವು ಹತ್ತಿದ ತಕ್ಷಣ ಬಸ್ಸು ಹೊರಟಿತು. ಚಿಕ್ಕಮಗಳೂರಲ್ಲಿ 15 ನಿಮಿಷ ಪುರುಸತ್ತು ಇದ್ದದ್ರಿಂದ ಹೋಟೆಲಿನಲ್ಲಿ ಕಾಫಿ ಕುಡಿದೆವು.  7-15ಕ್ಕೆ ಮುಂಡಾಜೆಯಲ್ಲಿ ಇಳಿದು  ಗುಂಡಿ ದೇವಸ್ಥಾನಕ್ಕೆ ಬಂದು ಅಲ್ಲಿ ಸ್ನಾನ ಊಟ ಮುಗಿಸಿ ಮಲಗಿದೆವು.

30-11-1953 ಸೋಮವಾರ

ಗುಂಡಿ ದೇವಸ್ಥಾದಿಂದ ಹೊರಟು ಬೆಳಗ್ಗೆ 9 ಗಂಟೆಗೆ ಮನೆಗೆ ತಲುಪಿದೆವು.

ಇಂತಿ ಪಂಢರಪುರ ವಗೈರೆ ಯಾತ್ರೆ ಸಂಪೂರ್ಣವು.

ಇದನ್ನು 1-12-1953 ಮಂಗಳವಾರದಂದು ಬರೆದದ್ದು.

- ಹರಿಹರ ಕಾಕತ್ಕಾರ್

ಹೆಚ್ಚುವರಿ ಟಿಪ್ಪಣಿಗಳೊಂದಿಗೆ ಪ್ರಸ್ತುತಿ ಮತ್ತು ಚಿತ್ರಗಳ ಸಂಗ್ರಹ  - ಚಿದಂಬರ ಕಾಕತ್ಕರ್.