Friday 28 October 2016

ನಾಡಿನಂದ ಈ ದೀಪಾವಳಿ


     ಕುಲವಧು ಚಿತ್ರದ ಯುಗ ಯುಗಾದಿ ಕಳೆದರೂ ರೇಡಿಯೊದಲ್ಲಿ ಕೇಳಿ ಬರದಿದ್ದರೆ ಹೇಗೆ ಯುಗಾದಿ ಆಚರಣೆ ಅಪೂರ್ಣವಾದೀತೋ ಹಾಗೆಯೇ ನಂದಾ ದೀಪ ಚಿತ್ರದ ನಾಡಿನಂದ ಈ ದೀಪಾವಳಿ ಹಾಡು ಬೆಳ ಬೆಳಗ್ಗೆ ಕೇಳಿಸದಿದ್ದರೆ ಅದು ದೀಪಾವಳಿಯೇ ಅಲ್ಲವೇನೋ ಅನ್ನಿಸೀತು.  ದೀಪಗಳ ಹಬ್ಬದೊಡನೆ ಅದರದ್ದು ಅಷ್ಟೊಂದು ಅವಿನಾಭಾವ ಸಂಬಂಧ. ಸೋರಟ್ ಅಶ್ವಥ್ ಅವರು ರಚಿಸಿ ಎಂ. ವೆಂಕಟರಾಜು ಅವರ ಸಂಗೀತ ನಿರ್ದೇಶನದಲ್ಲಿ ಎಸ್. ಜಾನಕಿ ಮತ್ತು ಪಿ. ಲೀಲ ಜೊತೆಗೂಡಿ ಹಾಡಿದ  ಈ ಹಾಡಿನ ಎಲ್ಲ ಅಂಗಗಳು ಉಲ್ಲಾಸವೇ ಮೂರ್ತಿವೆತ್ತಂತೆ ಇರುವಂಥವು.  ಆರ್ಕೆಸ್ಟ್ರೇಶನ್ನಿನ್ನಲ್ಲಿ ಎತ್ತಿದ ಕೈಯಾಗಿದ್ದ  ವೆಂಕಟರಾಜು ಆರಂಭದಲ್ಲಿ ಒಂದು ಆಕರ್ಷಕ prelude ಮತ್ತು 3 ಚರಣಗಳಿಗೆ 3 ಬೇರೆ ಬೇರೆ interlude ಬಳಸಿದ್ದಾರೆ. ಹಿಂದಿಯಲ್ಲಿ ಶಂಕರ್ ಜೈಕಿಶನ್ ಹೀಗೆ ಮಾಡುತ್ತಿದ್ದರು. ಮ್ಯಾಂಡೊಲಿನ್, ವಯಲಿನ್ಸ್, ಕ್ಲಾರಿನೆಟ್ ಮತ್ತು ಕೊಳಲುಗಳ ಸಮ್ಮಿಶ್ರಣದೊಂದಿಗೆ ಇಡೀ ಹಾಡನ್ನು ಎತ್ತಿ ಕೊಟ್ಟಿರುವುದು ಅತ್ಯಾಕರ್ಷಕ ಢೋಲಕ್ ನುಡಿತ.  ಎಡದ ಗುಂಕಿ, ಉರುಳಿಕೆ, ಹಾಡಿನ ಬೋಲ್ ಗಳ ಅನುಸರಿಸುವಿಕೆ, ಅಲ್ಲಲ್ಲಿ break, take off ಗಳ ಅಂದವನ್ನು ಕೇಳಿಯೇ ಅನುಭವಿಸಬೇಕು. 3ನೇ ಚರಣಕ್ಕೆ ಮೊದಲಿನ interludeನಲ್ಲಿ ಕ್ಲಾರಿನೆಟ್ ಕೊಳಲುಗಳ ಜೊತೆಗಿನ ಶಕ್ತಿಶಾಲಿ ಢೋಲಕ್ ನುಡಿತವಂತೂ ಎಂಥವರನ್ನೂ ಕಾಲೆತ್ತಿ ಕುಣಿಯುವಂತೆ ಪ್ರೇರೇಪಿಸೀತು. ಜಾನಕಿ ಮತ್ತು ಪಿ. ಲೀಲ ಇಬ್ಬರೂ ಹಾಡಿನ ಮೂಡಿಗೆ ಸರಿಯಾಗಿ ಉಲ್ಲಾಸ ಉಕ್ಕುವಂತೆ ಹಾಡಿದ್ದಾರೆ. ಅವರಿಬ್ಬರು ಜೊತೆಗೆ ಹಾಡಿದ್ದು ಕಮ್ಮಿ.  ಒಂದು ಈ ಅಜರಾಮರ ಹಾಡಾದರೆ ಇನ್ನೊಂದು ವಾಲ್ಮೀಕಿ ಚಿತ್ರದ ಮನದೇ ಮಹಾ ಬಯಕೆ.

     ಈ ಹಾಡು ಮಾತ್ರವಲ್ಲ, ನಂದಾದೀಪ ಚಿತ್ರವೇ  ದೀಪಾವಳಿಯೊಂದಿಗೆ ಬೆಸೆಯಲು ನನ್ನ ಮಟ್ಟಿಗೆ ಇನ್ನೊಂದು ಕಾರಣವೂ ಇದೆ.  1972ರಲ್ಲಿ ಆಗ ತಾನೇ ನನ್ನ graduation ಮುಗಿದಿತ್ತು.  ಈಗಿನಂತೆ campus selection ಇತ್ಯಾದಿ ಆಗ ಇರಲಿಲ್ಲ. ಹೀಗಾಗಿ ಪತ್ರಿಕೆಗಳಲ್ಲಿ ಬಂದ ಬೇಕಾಗಿದ್ದಾರೆ ಜಾಹೀರಾತುಗಳನ್ನು ನೋಡಿ ಅರ್ಜಿ ಸಲ್ಲಿಸುತ್ತಾ ಇರಬೇಕಾಗುತ್ತಿತ್ತು.  ನಾನೂ ಹಾಗೆಯೇ ಮಾಡುತ್ತಿದ್ದೆ. ಒಮ್ಮೆ ಆಕಾಶವಾಣಿ ಧಾರವಾಡದಿಂದ announcer ಹುದ್ದೆಗೆ ಅರ್ಜಿ ಕರೆದಿದ್ದರು. ಮೊದಲೇ ರೇಡಿಯೋ ಪ್ರಿಯನಾದ ನಾನು ಬಿಟ್ಟೇನೇ? ಅರ್ಜಿ ಗುಜರಾಯಿಸಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣನೂ ಆದೆ. ಆಮೇಲೆ ಧ್ವನಿ ಪರೀಕ್ಷೆ, ಇಂಟರ್ ವ್ಯೂಗಳೂ ನಡೆದವು.  ನನಗಿಂತ ಅರ್ಹನಾದ ಯಾರೋ ಆಯ್ಕೆ ಕೂಡ ಆದರು. ಅದಲ್ಲ ವಿಷಯ.  ಆಗ ದೀಪಾವಳಿ ಸಮಯ. ಧಾರವಾಡದ  ಟಾಕೀಸೊಂದರಲ್ಲಿ  ಈ ವಿಶೇಷ ಸಂದರ್ಭಕ್ಕಾಗಿ ನಂದಾದೀಪ ಚಿತ್ರದ ಹೊಸ ಪ್ರಿಂಟ್ ಬಿಡುಗಡೆ ಆಗಿ  ಪ್ರದರ್ಶಿತವಾಗುತ್ತಿದ್ದದ್ದು ನನಗೆ ನೋಡಲು ಸಿಕ್ಕಿ ಸ್ವರ್ಗಕ್ಕೆ ಮೂರೇ  ಗೇಣು ಅನ್ನಿಸಿತ್ತು.  ನಾನು ಆ ಹುದ್ದೆಗೆ ಆಯ್ಕೆ ಆಗಿದ್ದರೂ ಅಷ್ಟು ಖುಶಿಯಾಗುತ್ತಿತ್ತೋ ಇಲ್ಲವೋ!


ದೀಪಾವಳಿಯ ಆನಂದ ಹೆಚ್ಚಿಸಲು ಸಾಹಿತ್ಯದೊಡನೆ ನಂದಾ ದೀಪದ ಹಾಡು ನಿಮಗಾಗಿ ಇಲ್ಲಿದೆ.



ನಾಡಿನಂದ ಈ ದೀಪಾವಳಿ ಬಂತು
ಸಂತೋಷ ತಾಳಿ ನಮ್ಮೀ ಬಾಳ ಕಾರಿರುಳ
ತಾ ನೀಗೆ ಬಂದ ಶುಭ ವೇಳಾ
ಈ ದಿವ್ಯ ಕಾಂತಿ ಮನದಿ  ಪ್ರಶಾಂತಿ
ಹೊಂದಿ ಸಂಪ್ರೀತಿ
ನಾಡಿನಂದ ಈ ದೀಪಾವಳಿ

ಇಂದೀ ಉಲ್ಲಾಸ ಪ್ರೀತಿ ವಿಕಾಸ
ಜ್ಯೋತಿ ನಿನ್ನಿಂದ ಹಾಸ
ನಮ್ಮೀ ಆಸೆ ಮಕರಂದ
ತಾ ಚಿಮ್ಮಿ ತಂದ ಆನಂದ
ಸಿಂಗಾರ ಸಂಗೀತ
ಹಾಡಿ ಓಲಾಡಿ ಕೂಡೆ

ನಾಡಿನಂದ ಈ ದೀಪಾವಳಿ ಬಂತು
ಸಂತೋಷ ತಾಳಿ ನಮ್ಮೀ ಬಾಳ ಕಾರಿರುಳ
ತಾ ನೀಗೆ ಬಂದ ಶುಭ ವೇಳಾ
ಈ ದಿವ್ಯ ಕಾಂತಿ ಮನದಿ  ಪ್ರಶಾಂತಿ
ಹೊಂದಿ ಸಂಪ್ರೀತಿ
ನಾಡಿನಂದ ಈ ದೀಪಾವಳಿ

ಸಿಡಿವ ಮತಾಪು ಮಿಡಿವಂಥ ಕೇಪು
ಸೇರೇ ಕಣ್ಣಾಸೆ ಸೊಂಪು
ತುಂಬಿ ಬಾನ ಹೂಬಾಣ
ತಾ ಹೊಮ್ಮಿ ತಂದ ಹೊಂಬಣ್ನ
ಹೊಸ ಬಾಳ ಸಂಕೇತ
ಎಂದು ಸಂದೇಶ ತಂತು
ನಾಡಿನಂದ ಈ ದೀಪಾವಳಿ

ಬಾಳ ಬಂಗಾರ ಮನದ ಮಂದಾರ
ಸೇರೇ ಆನಂದ ಸಾರ
ನಂದಾ ದೀಪ ನೆಲೆಯಾಗಿ
ಒಲುಮೆ ಎಂದೂ ಜತೆಯಾಗಿ
ನಂದಾ ದೀಪ ನೆಲೆಯಾಗಿ
ಒಲುಮೆ ಎಂದೂ ಜತೆಯಾಗಿ
ಹಾಯಾದ ಆಮೋದ
ನೀಡೆ ಹಾರೈಸಿ ಬಂದ
ನಾಡಿನಂದ ಈ ದೀಪಾವಳಿ ಬಂತು
ಸಂತೋಷ ತಾಳಿ ನಮ್ಮೀ ಬಾಳ ಕಾರಿರುಳ
ತಾ ನೀಗೆ ಬಂದ ಶುಭ ವೇಳಾ
ಈ ದಿವ್ಯ ಕಾಂತಿ ಮನದಿ  ಪ್ರಶಾಂತಿ
ಹೊಂದಿ ಸಂಪ್ರೀತಿ
ನಾಡಿನಂದ ಈ ದೀಪಾವಳಿ
******************


ಚಿತ್ರ ನೋಡುವ ಇಚ್ಛೆ ಇದ್ದರೆ ಯೂಟ್ಯೂಬಿನಲ್ಲಿ ಲಭ್ಯವಿದೆ.  ಈಗ ಇಂತಹ ಅನೇಕ ಹಳೆಯ ಚಿತ್ರಗಳು  ಉಚಿತ ವೀಕ್ಷಣೆಗೆ ಸುಲಭದಲ್ಲಿ ಸಿಗುವುದು ಅಂತರ್ಜಾಲದ ವರದಾನವೇ ಸರಿ.

Saturday 22 October 2016

ಬೆರೆತ ಜೀವದ ಸವಿ ಹಾಡು


      ಈ ಶೀರ್ಷಿಕೆ ಬೆರೆತ ಜೀವ ಚಿತ್ರದ ಒಂದು ಹಾಡಿನದೇ ಸಾಲು.  ಚಿತ್ರ ಸಂಗೀತದ ಸುವರ್ಣಯುಗವೆಂದು ಅನಿಸಿಕೊಂಡಿರುವ 60ರ ದಶಕದಲ್ಲೂ, ಅದು ಕನ್ನಡ ಇರಲಿ, ಹಿಂದಿ ಇರಲಿ ಅಥವಾ ಬೇರೆ ಭಾಷೆ ಇರಲಿ, ಎಲ್ಲ  ಸಿನಿಮಾಗಳ ಎಲ್ಲ ಹಾಡುಗಳು ಚೆನ್ನಾಗಿಯೇ ಇರುತ್ತಿದ್ದವು ಎಂದೇನಿಲ್ಲ. ಹಿಂದಿಯಲ್ಲಿ ಶಂಕರ್ ಜೈಕಿಶನ್ ಅಥವಾ ಓ. ಪಿ. ನಯ್ಯರ್ ಸಂಗೀತದ ಕೆಲವು ಚಿತ್ರಗಳನ್ನು ಬಿಟ್ಟರೆ ಉಳಿದ ಎಲ್ಲ ಭಾಷೆಗಳ ಚಿತ್ರಗಳಲ್ಲಿ ಒಂದೋ ಎರಡೋ ಹಾಡುಗಳಷ್ಟೇ ಉತ್ತಮ ಅನ್ನಿಸಿಕೊಳ್ಳುತ್ತಿದ್ದವು. ಕನ್ನಡದಲ್ಲಂತೂ ಎಲ್ಲ ಹಾಡುಗಳು ಅತ್ಯುತ್ತಮ ಅನ್ನಿಸಿಕೊಂಡದ್ದು ಕೆಲವೇ ಕೆಲವು ಚಿತ್ರಗಳಲ್ಲಿ. ಬೆರೆತ ಜೀವ ಅವುಗಳ ಪೈಕಿ ಒಂದು. 

     1965ರಲ್ಲಿ ಬಂದ ಬೆರೆತ ಜೀವ ತಮಿಳಿನ ಪಾಲುಂ ಪಳಮುಂ ಚಿತ್ರದ ಕನ್ನಡ ರೂಪ. ಕನ್ನಡ, ತಮಿಳು ಎರಡರಲ್ಲೂ ಬಿ.ಸರೋಜಾದೇವಿ ನಾಯಕಿ. ಅಲ್ಲಿ ಶಿವಾಜಿ ಗಣೇಶನ್ ನಾಯಕನಾದರೆ ಇಲ್ಲಿ ಕಲ್ಯಾಣ್ ಕುಮಾರ್ ಹೀರೊ. ಮುಂದೆ ಇದೇ ಚಿತ್ರ ಹಿಂದಿಯಲ್ಲಿ ಸಾಥಿ ಎಂಬ ಹೆಸರಿನಲ್ಲಿ ತಯಾರಾದಾಗ ಸರೋಜಾದೇವಿಯನ್ನು ಬಹಳಷ್ಟು ಹೋಲುತ್ತಿದ್ದ ವೈಜಯಂತಿಮಾಲಾ ನಾಯಕಿಯಾಗಿದ್ದದ್ದು ಕಾಕತಾಳೀಯವೇ ಇರಬಹುದು. ಅಂದಿನ ದಿನಗಳಲ್ಲಿ ಮಧ್ಯ ವಯಸ್ಸಿನ ಹೀರೊಗಳು ಕಾಲೇಜು ಹುಡುಗರ ಪಾತ್ರ ವಹಿಸುತ್ತಿದ್ದುದು ಸಾಮಾನ್ಯವಾಗಿದ್ದರೂ ಈ ಚಿತ್ರದ ನಾಯಕ ತಲೆಗೂದಲು ಹಣ್ಣಾಗತೊಡಗಿದ್ದ ಮಧ್ಯವಯಸ್ಕನೇ ಆಗಿದ್ದುದು ಒಂದು ವಿಶೇಷ. ವಿಶ್ವನಾಥನ್ ರಾಮಮೂರ್ತಿ ಸಂಗೀತವಿದ್ದ ಪಾಲುಂ ಪಳಮುಂ ಚಿತ್ರದ  ನಾನ್ ಪೇಸ ನಿನೈಪದೆಲ್ಲಾಂ, ಪೋನಾಲ್ ಪೋಗಟ್ಟುಂ ಪೋಡಾ ಮುಂತಾದ ಹಾಡುಗಳು ಬಲು ಜನಪ್ರಿಯವಾಗಿದ್ದು ವಿವಿಧಭಾರತಿಯಲ್ಲಿ ಪ್ರಸಾರವಾಗುತ್ತಿದ್ದ ಮಧುರ್ ಗೀತಂ ಕಾರ್ಯಕ್ರಮದಲ್ಲಿ ದಿನನಿತ್ಯವೆಂಬಂತೆ ಕೇಳಿ ಬರುತ್ತಿದ್ದವು. ಕನ್ನಡ ಅವತರಣಿಕೆಯಲ್ಲಿ  ಈ ಜನಪ್ರಿಯ ಧಾಟಿಗಳನ್ನೇ ಬಳಸುವ ಅವಕಾಶವಿದ್ದರೂ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್  ನನ್ನ ಧಾಟಿಯ ನೀನರಿಯೆ ನನ್ನ ಹಾಡೇ ಬೇರೆ ಎಂದು ಸವಾಲು ಹಾಕಿ   ಬೆರೆತ ಜೀವ ಚಿತ್ರದ ನಿರ್ಮಾಪಕ ನಿರ್ದೇಶಕರೂ ಆಗಿದ್ದ ಕು.ರ.ಸೀತಾರಾಮ ಶಾಸ್ತ್ರಿ ಅವರು ಬರೆದ ಅರ್ಥಪೂರ್ಣ ಪ್ರಾಸಬದ್ಧ ಹಾಡುಗಳನ್ನು ಬೇರೆಯೇ ಧಾಟಿಯಲ್ಲಿ ಸಂಯೋಜಿಸಿ ಗೆದ್ದಿದ್ದರು. (ಕೆಲವು ವರ್ಷಗಳ ನಂತರ ಭಲೇ ಭಾಸ್ಕರ್ ಎಂಬ ಚಿತ್ರದ ನನ್ನೆದೆಯ ಹಾಡೆಲ್ಲ ನೀನಾಗಬೇಕು ಎಂಬ ಹಾಡಿಗೆ ಸತ್ಯಂ ಅವರು ನಾನ್ ಪೇಸ ನಿನೈಪದೆಲ್ಲಾಂ ಧಾಟಿಯನ್ನು ಬಳಸಿಕೊಂಡರು). ಬೆರೆತ ಜೀವದ ಹಾಡುಗಳಿಗೆ ಧ್ವನಿಯಾಗಿದ್ದವರು ಆಗ ಕನ್ನಡದಲ್ಲಿ ಏಕವೇವಾದ್ವಿತೀಯರಾಗಿದ್ದ ಪಿ.ಬಿ.ಶ್ರೀನಿವಾಸ್ ಮತ್ತು ಸರೋಜಾದೇವಿ ಅಭಿನಯದ ಚಿತ್ರಗಳಲ್ಲಿ ಹೆಚ್ಚಾಗಿ ಹಾಡುತ್ತಿದ್ದ ಪಿ.ಸುಶೀಲ. ಆ ಕಾಲದಲ್ಲಿ ರೇಡಿಯೋ ನಿಲಯಗಳಿಂದ ಅದರಲ್ಲೂ ನಮ್ಮ ಮನೆಯ ನ್ಯಾಶನಲ್ ಎಕ್ಕೊ ರೇಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿದ್ದ ಆಕಾಶವಾಣಿ ಭದ್ರಾವತಿ  ನಿಲಯದದಿಂದ ಪದೇ ಪದೇ ಬಿತ್ತರವಾಗುತ್ತಿದ್ದ  ಬೆರೆತ ಜೀವದ ಸವಿ ಹಾಡುಗಳು ಈಗ ನಿಮಗಾಗಿ ಇಲ್ಲಿವೆ.

ಏನು ಬೇಕು ಏನು ಬೇಕು ಎಂದೆನ್ನ ಕೆಣಕಿ
     ಇದು ಆದರ್ಶ ದಂಪತಿಗಳ ಹಾಡು.  ಹೆಚ್ಚಿನ ದಾಂಪತ್ಯಗಳಲ್ಲಿ ಪತಿಯು ಪತ್ನಿಯ ಬೇಕು ಬೇಡಗಳನ್ನು ಗಮನಿಸದೆ ತನ್ನದೇ ಸಾಮ್ರಾಜ್ಯದಲ್ಲಿ ಮುಳುಗಿರುತ್ತಾನೆಂಬ ಆರೋಪ ಸಾಮಾನ್ಯವಾಗಿದ್ದರೂ ಇಲ್ಲಿ ಪತ್ನಿಯು ಏನು ಬೇಕು ಎಂದು ಪದೇ ಪದೇ ಏಕೆ ಕೇಳುತ್ತಿರುವೆ ಎಂದು ಪತಿಯನ್ನು  ಪ್ರಶ್ನಿಸುತ್ತಾಳೆ.  ಅದಕ್ಕೆ ಪತಿಯು ಜೀವ ಜೀವಗಳು ಬೆರೆಯುವ ಮುನ್ನ ಆಕೆಯ ಬಯಕೆ ಹರಕೆಗಳನ್ನು ಅರಿಯುವುದು ತನ್ನ ಕರ್ತವ್ಯ ಅನ್ನುತ್ತಾನೆ.  ಕಥೆಯಲ್ಲಿ ಪತಿಯು ದೃಷ್ಟಿಯನ್ನು ಕಳೆದುಕೊಳ್ಳಲಿರುವ ಬಗ್ಗೆ ಮುನ್ಸೂಚನೆಯೂ ಒಂದು ಸಾಲಿನಲ್ಲಿದೆ. ಎರಡನೇ ಚರಣ ಆಗಿ ಹಾಡು ಇನ್ನೇನು ಮುಗಿಯಿತು ಅನ್ನಿಸಿದರೂ ಮತ್ತೂ ಮುಂದುವರಿದು ಕ್ಲೈಮ್ಯಾಕ್ಸ್  ತಲುಪುವುದು ಇದರ ವಿಶೇಷ. ಹಾಡಿನ ನಡೆಯು ಮನ ಮೆಚ್ಚಿದ ಮಡದಿತುಟಿಯ ಮೇಲೆ ತುಂಟ ಕಿರುನಗೆಯನ್ನು ಸ್ವಲ್ಪ ಮಟ್ಟಿಗೆ ಹೋಲುತ್ತದೆ.



ಬಂದದ್ದೆಲ್ಲ ಬರಲಿ
     ಬಂದದ್ದೆಲ್ಲ ಬರಲಿ ಗೋವಿಂದನ ದಯೆಯಿರಲಿ ಎಂಬ ಗಾದೆ ಮಾತೇ ಇಲ್ಲಿ ಹಾಡಿನ ಪಲ್ಲವಿಯಾಗಿದೆ.  ಬಯಸಿದ್ದನ್ನು ಗಳಿಸುವ ಛಲವಿರಬೇಕು.  ಆದರೆ ಅದು ಅಳಿದರೆ ಹಲುಬದ ಸ್ಥಿತಪ್ರಜ್ಞತೆಯೂ ಇರಬೇಕು ಎಂಬ ನೀತಿ ಬೋಧೆ ಇದರಲ್ಲಿದೆ.  ಹಾಡಿನ interludeನಲ್ಲಿ ಶಂಕರ್ ಜೈಕಿಶನ್ ಸಂಗೀತದ ಛಾಯೆ ಗೋಚರಿಸುತ್ತದೆ.  ಮೂರು ಚರಣಗಳನ್ನು ಹೊಂದಿದ್ದು ಸುಮಾರು ನಾಲ್ಕು ನಿಮಿಷ ಅವಧಿಯ ಈ ಹಾಡು ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದಿರಬಹುದು.



ನನ್ನ ಧಾಟಿಯ ನೀನರಿಯೆ
     ವಾಸ್ತವವಾಗಿ ಈ ಹಾಡು ಯಾವುದೇ ಹಾಡಿನ ಧಾಟಿಯ ಬಗ್ಗೆ ಅಲ್ಲ.  ನಾಯಕ ಬಾಳಿನಲ್ಲಿ ತಾನು ಅನುಸರಿಸುತ್ತಿರುವ ದಾರಿಯನ್ನು ಬೇರೆ ಧಾಟಿಯ ಹಾಡಿಗೆ ಹೋಲಿಸುತ್ತಾನೆ.  ನಾಯಕನ ತಪ್ಪಿನ ಬಗ್ಗೆ ಅರಿವಿರುವ ನಾಯಕಿ ಆತನದು ಶ್ರುತಿ ತೊರೆದ ಲಯವಿರದ ಹರಕು ಧಾಟಿಯ ಹಾಡು ಎಂದು ಆತನನ್ನು ಎಚ್ಚರಿಸಲು ಪ್ರಯತ್ನಿಸುತ್ತಾಳೆ. ಸಿತಾರ್, ಸಂತೂರ್, ಗ್ರೂಪ್ ವಯಲಿನ್ಸ್, ಗಿಟಾರ್, ತಬ್ಲಾಗಳನ್ನೊಳಗೊಂಡ ಆಕರ್ಷಕ ಆರ್ಕೆಸ್ಟ್ರೇಶನ್ ಈ ಹಾಡಿನಲ್ಲಿದೆ.



ಅಂಕದ ಪರದೆ ಜಾರಿದ ಮೇಲೆ
     ಇದು ಈ ಚಿತ್ರದ ಅತ್ಯಂತ ಜನಪ್ರಿಯ ಗೀತೆ. ಎರಡು ಗಂಧಾರ, ಎರಡು ಮಧ್ಯಮ, ಎರಡು ದೈವತಗಳನ್ನೊಳಗೊಂಡ ಕ್ಲಿಷ್ಟವಾದ  ಕ್ರೋಮ್ಯಾಟಿಕ್ ಸಂಯೋಜನೆ ಇದು.  ಕೇಳಲು ಬಲು ಇಂಪು. ಹಾಡಲು, ನುಡಿಸಲು ಬಲು ಕಠಿಣ.  ವಿಷಾದದ ಹಾಡುಗಳಿಗೆ ಹೇಳಿಸಿದ ಚೇಲೊ, ಮಂದ್ರ ಕೊಳಲು, ಕ್ಲಾರಿನೆಟ್, ಗ್ರೂಪ್ ವಯಲಿನ್ಸ್ ಇತ್ಯಾದಿಗಳ ಸುಂದರ ಸಮ್ಮಿಶ್ರಣ  ತುಂಬಾ ಪರಿಣಾಮಕಾರಿಯಾಗಿ ಬಳಸಲ್ಪಟ್ಟಿದೆ.   ಬೈಜು ಬಾವ್ರಾ ಚಿತ್ರದ ಮೊಹೆ ಭೂಲ್ ಗಯೆ ಸಾವರಿಯಾ ಹಾಡಿನ ಅಪರೋಕ್ಷ ಪ್ರಭಾವ ಇದರ ಮೇಲಿದೆಯೇನೋ ಎಂದು ಕೆಲವೊಮ್ಮೆ ಅನ್ನಿಸುತ್ತದೆ.



ಕಂಡಂಥ ಕನಸೆಲ್ಲ ನನಸಾಗಲಿ
     ಪಿ.ಬಿ.ಶ್ರೀನಿವಾಸ್ ಅವರ ಕಂಠದ ಮಂದ್ರ ಮಾಧುರ್ಯವನ್ನು ಪೂರ್ಣ ಬಳಸಿಕೊಂಡ ಬಲು ಸುಂದರ ಹಾಡಿದು. ಪಿ.ಬಿ.ಎಸ್ ಗಾಯನದ ಹೆಗ್ಗುರುತಾದ ವಿಶಿಷ್ಟ ಮುರ್ಕಿ ಅರ್ಥಾತ್ ಧ್ವನಿಯ ಬಳುಕುಗಳನ್ನೊಳಗೊಂಡ  ಈ ಹಾಡು ಕೇಳಲು ಸಿಗುವುದು ಬಲು ಕಮ್ಮಿ.  ಕೆಲ ವರ್ಷಗಳ ನಂತರ ಬಂದ ನಮ್ಮ ಮಕ್ಕಳು ಚಿತ್ರದ ನಿನ್ನೊಲುಮೆ ನಮಗಿರಲಿ ತಂದೆ ಹಾಡಿನಲ್ಲಿ ಇದರ ಛಾಯೆಯನ್ನು  ಗುರುತಿಸಬಹುದು.  ಕಿತ್ತೂರು ಚೆನ್ನಮ್ಮಅಹೋರಾತ್ರಿ ನಿಲದೋಡಿ ತಾ ಬಂದಿದೆ ಮತ್ತು ಈ ಹಾಡಿನ ಎತ್ತುಗಡೆಯಲ್ಲೂ ಸಾಮ್ಯವಿದೆ.



ಬೀಳಲು ಮಾಗಿದ ಹಣ್ಣಲ್ಲ
     ಇದು ಹಾಡಲ್ಲ.  ಬರೇ ನಾಲ್ಕು ಸಾಲಿನ ಚೌಪದಿ.  ಕಣ್ಣು ಮುಚ್ಚಿ ಆಲಿಸಿ ನೋಡಿ.  ಮೂರುವರೆ ನಿಮಿಷದ ಹಾಡೊಂದು ಉಂಟುಮಾಡಬಲ್ಲ  ಪರಿಣಾಮ ಈ  ಮೂವತ್ತು ಸೆಕೆಂಡುಗಳಲ್ಲಿ ಅಡಕವಾಗಿದೆ.



     ಆಗಿನ ಕಾಲದ ಬಹುತೇಕ ಚಿತ್ರಗಳ ಒಂದಾದರೂ ಹಾಡಿನಲ್ಲಿ ಆ ಚಿತ್ರದ ಹೆಸರು ಅಡಕವಾಗಿದ್ದು ಅದನ್ನು ಟೈಟಲ್ ಹಾಡು ಎಂದು ಕರೆಯಲಾಗುತ್ತಿತ್ತು.  ರಾಜ್ ಕಪೂರ್ ಅವರ ಸಂಗಂನಲ್ಲಂತೂ ಮೂರು ಹಾಡುಗಳಲ್ಲಿ ಚಿತ್ರದ ಹೆಸರಿನ  ಉಲ್ಲೇಖವಿತ್ತು.  ಈ ಚಿತ್ರದ ಎಷ್ಟು ಹಾಡುಗಳಲ್ಲಿ  ಬೆರೆತ ಜೀವದ ಉಲ್ಲೇಖವಿದೆ ಎಂದು ಅವುಗಳನ್ನು ಗಮನವಿಟ್ಟು ಪೂರ್ತಿ ಕೇಳಿದವರಿಗೆ ತಿಳಿಯುವುದರಿಂದ ನಾನು ಹೇಳುವುದಿಲ್ಲ. ಈ ಚಿತ್ರದ ಎರಡು ರೀಲುಗಳ negetiveಗಳೇ ಕಳೆದು ಹೋಗಿವೆಯಂತೆ!  ಉಳಿದ ಭಾಗ  youtubeನಲ್ಲಿ ಲಭ್ಯವಿದ್ದು  ಆಸಕ್ತರು ವೀಕ್ಷಿಸಬಹುದು.

     ಕೆಳಗಿನ Scrollable  ಪದ್ಯಾವಳಿಯಲ್ಲಿ ಎಲ್ಲ ಹಾಡುಗಳ ಸಾಹಿತ್ಯ ಇದೆ.  ಓದುತ್ತಾ ಹಾಡುಗಳನ್ನು ಆಲಿಸಿ, ಆನಂದ ದ್ವಿಗುಣಗೊಳಿಸಿ.



Wednesday 12 October 2016

ಪೆಟ್ರೊಮ್ಯಾಕ್ಸಿನ ರೆಟ್ರೊಸ್ಪೆಕ್ಟ್



ಸಂತಸವ ನೀಡುವುದು ನೆನಪುಗಳ ಮೆಲುಕು 
ಅಡಗಿಹುದು ಮನದೊಳಗೆ ಏನೇನೊ ಸರಕು
ಆಟವನು ನೋಡಿದ್ದು ಕಂಬಳಿಯ ಹೊದ್ದು
ಗ್ಯಾಸ್ ಲೈಟು ಹೊರಡಿಸಿದ ಹಿಸ್ಸೆಂಬ ಸದ್ದು
    

     ವಿದ್ಯುತ್ ದೀಪಗಳು ವಿವಿಧ  ಅವತಾರಗಳನ್ನು ತಾಳುತ್ತಾ ಬುರುಡೆ ಬಲ್ಬಿನಿಂದ ಟ್ಯೂಬ್ ಲೈಟ್, CFL ಮತ್ತು ಈಗಿನ LED ಬಲ್ಬುಗಳವರೆಗೆ ಬಂದು ಮುಟ್ಟಿದ್ದರೂ ಈಗಲೂ ಅಲ್ಲೊಂದು ಇಲ್ಲೊಂದು ಕಡೆ ಪೆಟ್ರೋಮ್ಯಾಕ್ಸ್ ಅಥವಾ ಗ್ಯಾಸ್ ಲೈಟುಗಳು ಬೆಳಕು ಬೀರುತ್ತಿರುವುದು ಅವುಗಳ ಸಮಯದ ಸೀಮೆಯನ್ನು ಮೀರಿದ ಉಪಯುಕ್ತತೆಯನ್ನು ಸಾರಿ ಹೇಳುತ್ತದೆ.  19ನೇ ಶತಮಾನದ ಕೊನೆಯ ಭಾಗದಲ್ಲಿ Max Graetz ಎಂಬಾತನು ಆವಿಷ್ಕರಿಸಿದ ಈ ದೀಪದಲ್ಲಿ ಮೊದಲು ಪ್ಯಾರಫಿನ್ ಮೇಣವನ್ನು ಇಂಧನವಾಗಿ ಉಪಯೋಗಿಸಲಾಗುತ್ತಿತ್ತಂತೆ. ನಂತರ ಈಗಿರುವಂತೆ ಸೀಮೆ ಎಣ್ಣೆಯ ಬಳಕೆ ಆರಂಭವಾಯಿತು.  ಒಂದು ಚಿಕ್ಕ ಕೈ ಪಂಪ್ ಮೂಲಕ ಟ್ಯಾಂಕಿನಲ್ಲಿ ಉಂಟುಮಾಡುವ ಒತ್ತಡ ಮತ್ತು ಆರಂಭದಲ್ಲಿ ಇಂಧನ ಮೇಲೇರುವ ಕೊಳವೆಯ ಬುಡದಲ್ಲಿ ಸ್ಪಿರಿಟನ್ನು  ಉರಿಸಿ ಉಂಟುಮಾಡುವ ಉಷ್ಣತೆ ಹಾಗೂ ಒಮ್ಮೆ ಉರಿಯತೊಡಗಿದ ಮೇಲೆ ತನ್ನದೇ ಉಷ್ಣತೆಯನ್ನು ಉಪಯೋಗಿಸಿ ಇಂಧನವು ಗ್ಯಾಸ್ ರೂಪವನ್ನು ತಾಳಿ ಕಿರು ರಂಧ್ರವುಳ್ಳ ಪಿನ್  ಮೂಲಕ ಮ್ಯಾಂಟಲಿನೊಳಗೆ ಚಿಮ್ಮಿ ಉಜ್ವಲ ಬೆಳಕು ಬೀರುವಂತೆ ಮಾಡುವ  ಇದರ ತಂತ್ರಜ್ಞಾನ ನಿಜಕ್ಕೂ ಅದ್ಭುತ. ವಿವಿಧ ರಾಸಾಯನಿಕಗಳನ್ನು ಲೇಪಿಸಿದ ಸಿಲ್ಕಿನ ಬಲೆಯಂಥ ರಚನೆ ಹೊಂದಿದ ಮ್ಯಾಂಟಲ್ ಪ್ರಥಮ ಉಪಯೋಗದಲ್ಲೇ ಸುಟ್ಟು ಬೂದಿಯಾದರೂ  ಸೂಕ್ತ ಎಚ್ಚರಿಕೆ ವಹಿಸಿದರೆ ಆ ಬೂದಿಯೇ ಸುದೀರ್ಘ ಸಮಯ ಬಾಳಿಕೆ ಬರುವುದು ಇನ್ನೊಂದು ವಿಸ್ಮಯ. ಉಪಯೋಗಿಸಲ್ಪಡುವ ಪೆಟ್ರೋಲಿಯಮ್ ಮೂಲದ ಇಂಧನ ಮತ್ತು ಆವಿಷ್ಕರಿಸಿದವನ  ಹೆಸರಿನ ಪೂರ್ವಾರ್ಧ ಮ್ಯಾಕ್ಸ್ ಸೇರಿ ಪೆಟ್ರೊಮ್ಯಾಕ್ಸ್ ಹಾಗೂ ಇಂಧನವು ಗ್ಯಾಸ್ ರೂಪಕ್ಕೆ ಪರಿವರ್ತನೆಗೊಂಡು ಬೆಳಕನ್ನೀಯುವುದರಿಂದ ಗ್ಯಾಸ್ ಲೈಟ್ - ಎರಡೂ ಇದಕ್ಕೆ ಅನ್ವರ್ಥ ನಾಮಗಳೇ.

     ಗ್ಯಾಸ್ ಲೈಟಿಗೆ ಹೊಸ ಮ್ಯಾಂಟಲ್ ಅಳವಡಿಸಿ ಅದನ್ನು ಉರಿಸುವುದು ಸುಲಭದ ಕೆಲಸವೇನೂ ಅಲ್ಲ. ಆ ವಿದ್ಯೆ ಗೊತ್ತಿದ್ದವನು ಸಮುದಾಯದ   ದೊಡ್ಡ ಹೀರೊ ಎಂದೇ ಅನ್ನಿಸಿಕೊಳ್ಳುತ್ತಿದ್ದ. ಮ್ಯಾಂಟಲ್ ಹೊಂದಿ ಸಿದ್ಧವಾಗಿರುವ ಗ್ಯಾಸ್ ಲೈಟ್ ಉರಿಸುವುದು, ಬೆಳಕು ಮಂಕಾದಾಗ ಪಿನ್ ಹೊಡೆದು ಗಾಳಿ ಪಂಪ್ ಮಾಡುವುದೂ   ಕೆಲವೇ ಮಂದಿಗೆ ಒಲಿಯುತ್ತಿದ್ದ ವಿದ್ಯೆ. ಪಂಪ್ ಮಾಡುವಾಗ ಕೊಂಚ ಎಡವಟ್ಟಾದರೂ ಮ್ಯಾಂಟಲ್ ಬಿದ್ದು ಹೋಗುವ ಅಪಾಯವಿರುತ್ತಿತ್ತು. ಶಾಸ್ತ್ರೀಯವಾಗಿ ಸ್ಪಿರಿಟ್ ಉಪಯೋಗಿಸಿ ಉರಿಸಬೇಕೆಂದಿದ್ದರೂ ಎಣ್ಣೆಯಲ್ಲಿ ಅದ್ದಿದ ಒಂದು ಬತ್ತಿಯ ಸಹಾಯದಿಂದ ಅಥವಾ ಕೇವಲ ಒಂದು ಬೆಂಕಿ ಕಡ್ಡಿಯ ಸಹಾಯದಿಂದಲೇ ಕಾರ್ಯ ಸಾಧಿಸುವ expert ಗಳೂ ಇದ್ದರು. ಇಂಧನ ಟ್ಯಾಂಕಿನಲ್ಲಿ ಪ್ರೆಶರ್ ಗೇಜ್ ಇರುತ್ತಿದ್ದರೂ ಅಂದಾಜಿನಲ್ಲಿ ಗಾಳಿ ಪಂಪ್ ಮಾಡುತ್ತಿದ್ದರೇ ಹೊರತು ಅದನ್ನು ಯಾರೂ ನೋಡುತ್ತಿರಲಿಲ್ಲ.  ಗ್ಯಾಸ್ ಲೈಟ್ ಉರಿಸುವಾಗ ಮಕ್ಕಳೆಲ್ಲ ಸುತ್ತುಗಟ್ಟಿ ನಿಲ್ಲುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಕೆಲವು ಸಲ ಹಿರಿಯರೂ ಮಕ್ಕಳೊಂದಿಗೆ ಸೇರುವುದಿತ್ತು! ಅವುಗಳ ಹೊಳೆಯುವ ಟ್ಯಾಂಕಲ್ಲಿ ಮುಖದ ವಿಕೃತ ಪ್ರತಿಬಿಂಬ ನೋಡುವುದು ಬಹಳ ಮಜಾ ಅನ್ನಿಸುತ್ತಿತ್ತು. ಗ್ಯಾಸ್ ಲೈಟುಗಳ ಗಾಜು ಎರಡು ರೀತಿಯದಾಗಿರುತ್ತಿತ್ತು.  ಒಂದು ಇತರ ಲ್ಯಾಂಪುಗಳಂತೆ single unit ಆಗಿರುವಂಥದ್ದು ಇನ್ನೊಂದು ಅನೇಕ ಪಟ್ಟಿಗಳನ್ನು ಸೇರಿಸಿ ಮಾಡಿರುವಂಥದ್ದು. ಮೊದಲನೆಯದ್ದು ಒಡೆದರೆ ಇಡೀ ಗಾಜು  ಬದಲಾಯಿಸಬೇಕಾಗುತ್ತಿತ್ತು.  ಎರಡನೆಯ ವಿಧದಲ್ಲಾದರೆ ಒಡೆದ ಪಟ್ಟಿಗಳನ್ನು ಮಾತ್ರ ಬದಲಾಯಿಸಿದರೆ ಸಾಕಾಗುತ್ತಿತ್ತು.  ಫಾರ್ಗೊ ಮ್ಯಾಂಟಲ್ಲುಗಳ   ಆಕರ್ಷಕ   ಗಟ್ಟಿಮುಟ್ಟಾದ ತಗಡಿನ ಪೆಟ್ಟಿಗೆ ಬಹೂಪಯೋಗಿಯಾಗಿರುತ್ತಿತ್ತು.

     ಇಂಧನವನ್ನು ಗಟಗಟನೆ ಕುಡಿಯುವ ಗ್ಯಾಸ್ ಲೈಟುಗಳನ್ನು ವಿಶೇಷ ಸಮಾರಂಭ, ಉತ್ಸವ ಹಾಗೂ ಅಂಗಡಿ ಮುಂಗಟ್ಟುಗಳಲ್ಲಷ್ಟೇ  ಹೆಚ್ಚಾಗಿ ಉಪಯೋಗಿಸುತ್ತಿದ್ದುದು. ವಿದ್ಯುದ್ದೀಪಾಲಂಕೃತವಾದ ಭವ್ಯ ರಂಗ ಮಂಟಪಗಳಿಗಿಂತ ಮುಂಚೆ ಯಕ್ಷಗಾನ ಬಯಲಾಟಗಳಿಗೂ ಗ್ಯಾಸ್ ಲೈಟುಗಳೇ ಬೆಳಕಿನ ಆಸರೆಯಾಗಿದ್ದವು. ಉತ್ಸವ, ಜಾತ್ರೆಗಳಲ್ಲಿ ಅವುಗಳನ್ನು ತಲೆಯ ಮೇಲೆ ಹೊತ್ತುಕೊಳ್ಳಲು ಅನುಕೂಲವಾಗುವಂತಹ ವಿಶೇಷ standಗಳಿರುತ್ತಿದ್ದವು. ಅವು ಹೊರಡಿಸುತ್ತಿದ್ದ ಹಿಸ್ ಶಬ್ದವು ಸಮಾರಂಭಗಳಿಗೊಂದು ಶೋಭೆ. ಮದುವೆ ಮುಂಜಿಗಳಂತಹ ಸಮಾರಂಭಗಳಲ್ಲಿ ರಾತ್ರೆ ಸರಿಯಾದ ದಿಂಬು ಹೊದಿಕೆ ಇಲ್ಲದೆ ಮಲಗಿದ್ದಲ್ಲಿ ಕಾರ್ಯಕರ್ತರಾರಾದರೂ ಗ್ಯಾಸ್ ಲೈಟ್ ಕೈಯಲ್ಲಿ ಹಿಡಿದು ದಾಪುಗಾಲು ಹಾಕುತ್ತಾ ಓಡಾಡಿದರೆ ಅದರ ಪ್ರಖರ ಬೆಳಕು ಕಣ್ಣಿಗೆ ಚುಚ್ಚಿ ಅಸಾಧ್ಯ ಸಿಟ್ಟು ಬರುವುದೂ ಇತ್ತು.


      ನಮ್ಮೂರಿಗೆ ಸಮೀಪದ ಉಜಿರೆಯಲ್ಲಿ ಕೆಲ ಸಮಯ ಗ್ಯಾಸ್ ಲೈಟುಗಳನ್ನು ಬಾಡಿಗೆಗೆ ಕೊಡುವ ವ್ಯವಹಾರ ನಡೆಸುತ್ತಿದ್ದ ಜನಾರ್ದನ ಭಟ್ ಎಂಬುವವರಿಗೆ ಲೈಟ್ ಭಟ್ಟರೆಂಬ ಹೆಸರೇ ಕೊನೆವರೆಗೆ ಅಂಟಿಕೊಂಡು ಬಿಟ್ಟಿತ್ತು!  ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಮುಗಿಯುವವರೆಗೆ ಮಾತ್ರ : ಬೊಂಬೆಯಾಟವಯ್ಯ ಲೇಖನ ನೋಡಬಹುದು.

    ನಮ್ಮ ಮನೆಯಲ್ಲೂ ಯಕ್ಷಗಾನ ಬಯಲಾಟಗಳಿಗೆ ಹಾಗು ಧರ್ಮಸ್ಥಳ ಜಾತ್ರೆಗೆ ಹೋಗಲೆಂದೇ ಒಂದು second hand ಗ್ಯಾಸ್ ಲೈಟ್ ಖರೀದಿಸಿದ್ದರು. ಅದರ ಒಳಹೊರಗುಗಳನ್ನೆಲ್ಲ ಬಲ್ಲ ನಮ್ಮ ಅಣ್ಣ ಅದಕ್ಕೆ incharge. ಅದರ ಬೆಳಕಿನಲ್ಲಿ ಮನೆ ಮಂದಿಯೆಲ್ಲ ಸಾಲಾಗಿ ನಡೆಯುವಾಗ ಬೀಳುತ್ತಿದ್ದ ಕಾಲುಗಳ ಉದ್ದುದ್ದ ನೆರಳುಗಳು ನೋಡಲು ಬಹಳ ಚೆನ್ನಾಗಿರುತ್ತಿದ್ದವು. ಧರ್ಮಸ್ಥಳ ತಲುಪಿದೊಡನೆ ಅದನ್ನು ಆರಿಸಿ ಪರಿಚಯದ ಅಂಗಡಿಯೊಂದರಲ್ಲಿ ಇರಿಸುತ್ತಿದ್ದರು.  ವಾಪಸ್ ಹೊರಡುವ ಸಮಯಕ್ಕೆ  ಅದನ್ನು ಮತ್ತೆ ಉರಿಸಿ ನಡೆಯತೊಡಗಿದರೆ ಜಾತ್ರೆಯ ಜನಜಂಗುಳಿಯಲ್ಲಿ ಬೇರೆ ಬೇರೆಯಾಗುವ ಸಾಧ್ಯತೆಯಿದ್ದ ಮನೆ ಮಂದಿಗೆಲ್ಲ  ಇದು ಗೋಚರಿಸಿ ಮತ್ತೆ ಒಟ್ಟು ಸೇರುವುದಕ್ಕೆ ಅನುಕೂಲವಾಗುತ್ತಿತ್ತು ಏಕೆಂದರೆ ಈ ರೀತಿ ಗ್ಯಾಸ್ ಲೈಟ್ ನೊಂದಿಗೆ ಜಾತ್ರೆಗೆ ಬರುವವರು ಬೇರೆ ಯಾರೂ ಇರಲಿಲ್ಲ!

     ನಿಮ್ಮನ್ನು ಹಳೆಯ ಕಾಲಕ್ಕೊಯ್ಯಬಹುದಾದಂಥ ಪೆಟ್ರೊಮ್ಯಾಕ್ಸ್  ಉರಿಸುವ ದೃಶ್ಯವುಳ್ಳ ಕಿರು ವೀಡಿಯೊ ಒಂದನ್ನು ಇಲ್ಲಿ ನೋಡಬಹುದು.



     ಕೆಲ ಸಮಯ ಹಿಂದೆ ಈ ವೀಡಿಯೊವನ್ನು facebook ಗೆ upload ಸುಮಾರು 6000 ಬಾರಿ ವೀಕ್ಷಿಸಲ್ಪಟ್ಟು ಅನೇಕ ಪ್ರತಿಕ್ರಿಯೆಗಳೂ ದಾಖಲಾಗಿದ್ದವು.  ಅವುಗಳಲ್ಲಿ ಕೆಲವು ಇಲ್ಲಿವೆ.






Sunday 2 October 2016

ನವೋಲ್ಲಾಸದ ನವರಾತ್ರಿ


     ಇದು ಈಗಿನ ನವರಾತ್ರಿಯ ನವೋಲ್ಲಾಸ ಅಲ್ಲ.  ನಮ್ಮ ಬಾಲ್ಯದ ದಿನಗಳದ್ದು. ಆಗ ಪರೀಕ್ಷೆಗಳು ಮುಗಿದು ರಜೆ ಆರಂಭವಾಗಿರುತ್ತಿತ್ತು. ಮನಸ್ಸು ಹಕ್ಕಿಯಂತೆ ಹಗುರಾಗಿರುತ್ತಿತ್ತು.  ರಜಾದ ಮಜಾವನ್ನು ಕೊಲ್ಲುವ ಖಳನಾಯಕರಂಥ ಕೆಲವು ಅಧ್ಯಾಪಕರು ಹೋಮ್ ವರ್ಕ್ ಕೊಡುತ್ತಿದ್ದರೂ ಅದನ್ನು ರಜೆಯ ಕೊನೆಯ ದಿನಕ್ಕೆ ಮೀಸಲಿರಿಸಿ ತತ್ಕಾಲಕ್ಕೆ ಮರೆತು ಬಿಡುತ್ತಿದ್ದೆವು.  ಪಿತೃ ಪಕ್ಷದ ಕೊನೆಯ ದಿನದಂದು  ದೇವರ ಪೀಠ, ಪ್ರಭಾವಳಿ ಇತ್ಯಾದಿ ಎಲ್ಲ ಪರಿಕರಗಳನ್ನು ಸ್ವಚ್ಛವಾಗಿ ತೊಳೆಯುವುದರೊಂದಿಗೆ ನವರಾತ್ರಿಯ ಸಂಭ್ರಮ ಆರಂಭ. ಸಂಜೆಯಾಗುತ್ತಲೇ ಹುಡುಗರೆಲ್ಲರೂ ಒಂದೊಂದು ಚಿಕ್ಕ ಬುಟ್ಟಿ ಹಿಡಿದುಕೊಂಡು ದೇವಿಗೆ ಪ್ರಿಯವಾದ ಕೇಪುಳದ ಹೂವುಗಳನ್ನು ತರಲು ಗುಡ್ಡೆಗೆ ಹೊರಡುತ್ತಿದ್ದೆವು. ಒಂಭತ್ತು ದಿನವೂ ಹೂಗಳು ಬೇಕಾಗಿದ್ದುದರಿಂದ ಇಂಥಿಂಥ ದಿನ ಇಥಿಂಥ ಕಡೆ ನಮ್ಮ ದಂಡಯಾತ್ರೆ ಎಂದು ಮೊದಲೇ ನಿರ್ಧರಿಸಿಕೊಂಡಿರುತ್ತಿದ್ದೆವು.  ಇದಕ್ಕಾಗಿ ಎಷ್ಟೋ ಬೇಲಿಗಳನ್ನು ದಾಟುವ, ಅಗಳುಗಳನ್ನು ಹಾರುವ ಸಂದರ್ಭವೂ ಬರುತ್ತಿತ್ತು. ಏನಾದರೂ ಎಲ್ಲ ಬುಟ್ಟಿಗಳು ಹೂಗಳಿಂದ ತುಂಬದೆ ಮನೆಗೆ ಹಿಂತಿರುಗುವ ಪ್ರಶ್ನೆಯೇ ಇರಲಿಲ್ಲ. ನವರಾತ್ರಿ ಅಂದರೆ ಕೇಪುಳ ಹಣ್ಣುಗಳ ಕಾಲವಲ್ಲವಾದ್ದರಿಂದ ಹೂಗಳ ಮೇಲಷ್ಟೇ ಗಮನ ಕೇಂದ್ರೀಕರಿಸಲು ನಮಗೆ ಸಾಧ್ಯವಾಗುತ್ತಿತ್ತು. (ಬೇಸಗೆಯಲ್ಲಿ ಹಣ್ಣು ಬಿಡಲು ಆರಂಭವಾದ ಮೇಲೆ ನಾವೆಂದೂ ನೇರವಾಗಿ ಶಾಲೆಗೆ ಹೋದದ್ದೇ ಇಲ್ಲ. ಗುಡ್ಡವಿಡೀ ಸುತ್ತಾಡಿ ಜೇಬು ತುಂಬಾ ಕೇಪುಳ ಹಣ್ಣು ತುಂಬಿದ ಮೇಲಷ್ಟೇ  ಶಾಲೆಯ ಹಾದಿ ನಮಗೆ ಕಾಣುತ್ತಿದ್ದುದು.)  ಅಷ್ಟೋತ್ತರ ನಾಮಾವಳಿಗೆ ಬೇಕಾದಷ್ಟು ಹೂಗಳನ್ನು ತೆಗೆದಿರಿಸಿಕೊಂಡು ಉಳಿದವುಗಳ ಮಾಲೆ ತಯಾರಿಸುವುದು ಹೆಚ್ಚಾಗಿ ನಮ್ಮ ಹಿರಿಯಣ್ಣ ಹಾಗೂ ಅಕ್ಕನ ಕೆಲಸವಾಗಿರುತ್ತಿತ್ತು.  ಒಂಭತ್ತು ದಿನಗಳಿಗೂ ಬೇಕಾಗುವಷ್ಟು ಬಾಳೆ ನಾರನ್ನು ಇದಕ್ಕಾಗಿ ಮೊದಲೇ  ಸಿದ್ಧಪಡಿಸಿಟ್ಟುಕೊಳ್ಳಲಾಗುತ್ತಿತ್ತು.  ಪುಷ್ಕಳವಾಗಿ ಅರಳುತ್ತಿದ್ದ ಗೋರಟೆ ಹಾಗೂ ನಾವು ಮೈಸೂರು  ಗೋರಟೆ ಎಂದು ಕರೆಯುತ್ತಿದ್ದ ಹಳದಿ ಹೂಗಳ ಮಾಲೆಗಳನ್ನು ತಯಾರಿಸಲೂ ಇದು ಬೇಕಾಗುತ್ತಿತ್ತು. ಇವುಗಳನ್ನು ಆಯಾ ದಿನ ಬೆಳಗ್ಗೆಯೇ ಕಟ್ಟಲಾಗುತ್ತಿತ್ತು.


     ನವರಾತ್ರಿಯ ಮೊದಲ ದಿನ ಬೆಳಗ್ಗೆ ತೆನೆ ತರುವ ಸಂಭ್ರಮ. ವಾಡಿಕೆಯ ಕೆಲಸದಾಳೊಬ್ಬ ಭತ್ತದ ತೆನೆ, ಮಾವು, ಹಲಸು ಮತ್ತು ಬಿದಿರಿನ ಎಲೆ ಹಾಗೂ ದಡ್ಡಾಲ್ ಎಂಬ ಮರದ ನಾರುಗಳನ್ನು ತಂದು ಮೊದಲೇ ಒಂದು ಗೆರಸೆಯೊಳಗೆ ಸಿದ್ಧವಾಗಿಟ್ಟಿರುತ್ತಿದ್ದ ಒಂದು ಸೇರು ಅಕ್ಕಿ, ಮುಳ್ಳು ಸೌತೆ, ಸುಲಿಯದ ತೆಂಗಿನಕಾಯಿಗಳ ಜೊತೆ ಇಟ್ಟು "ಪೊಲಿಯೇ ಪೊಲಿ ಪೊಲಿ ಪೊಲಿ ಪೊಲಿಚ್ಚೆ" ಅನ್ನುತ್ತಾ  ತುಳಸಿ ಕಟ್ಟೆಯ ಎದುರು ಇರಿಸುತ್ತಿದ್ದ.  ಆತನನ್ನು ಸೂಕ್ತ ಗೌರವದೊಂದಿಗೆ ಸನ್ಮಾನಿಸಲಾಗುತ್ತಿತ್ತು. ಮಧ್ಯಾಹ್ನ ತಂದೆಯವರು ಶಂಖ ಜಾಗಟೆಗಳ ಗೌರವದೊಂದಿಗೆ ತುಲಸಿ ಕಟ್ಟೆ ಎದುರಿಂದ ಆ ಗೆರಸೆಯನ್ನು ಒಳಗೆ ತಂದು ದೇವರ ಪಕ್ಕ ಇರಿಸಿ ಆ ಎಲ್ಲ ಸುವಸ್ತುಗಳಿಗೆ ಪೂಜೆ ಸಲ್ಲಿಸಿ ನಂತರ ನವರಾತ್ರಿ ಪೂಜೆ ಆರಂಭಿಸುತ್ತಿದ್ದರು. ಪೂಜೆಯ ಕೊನೆ ಹಂತದಲ್ಲಿ ಸಿಗುವ ಪಂಚಾಮೃತಕ್ಕಾಗಿ ನಾವೆಲ್ಲ ಕಾದಿರುತ್ತಿದ್ದೆವು. ಪೂಜೆ ಮುಗಿದು  ಮಧ್ಯಾಹ್ನ ಭೋಜನ ತೀರಿದ ಬಳಿಕ  ಮಾವಿನೆಲೆ ಮತ್ತು ಹಲಸಿನೆಲೆಗಳನ್ನು ವಿಶೇಷ ರೀತಿಯಲ್ಲಿ ಮಡಚಿ ಅದರೊಳಗೆ  ಬಿದಿರಿನ ಎಲೆ ಮತ್ತು ಭತ್ತದ ತೆನೆ ಇರಿಸಿ ನಾರಿನಿಂದ ಬಿಗಿದು ವಿವಿಧ ಕಡೆ ಕಟ್ಟಲು ಸಿದ್ಧಗೊಳಿಸುವ ಕೆಲಸ.  ದೇವರ ಕೋಣೆ, ಕುಡಿಯುವ ನೀರಿನ ಪಾತ್ರೆ, ಮಜ್ಜಿಗೆ ಕಡೆಯುವ ಕಂಬ, ಮನೆಯ ಹೆಬ್ಬಾಗಿಲು, ಪಡಸಾಲೆಯ ಕಂಬ, ಮಗುವಿನ ತೊಟ್ಟಿಲು, ಬಾವಿ, ಹಟ್ಟಿ, ಅಡಕೆ ಮರ, ತೆಂಗಿನ ಮರ ಇತ್ಯಾದಿ ಕಡೆ ತೆನೆ ಕಟ್ಟಲಾಗುತ್ತಿತ್ತು.  ಕೊನೆಗೆ ಒಂದಷ್ಟು ತೆನೆಗಳನ್ನು ಒಂದು ಅಡಿಕೆ ಹಾಳೆಯೊಳಗಿರಿಸಿ ಅಕ್ಕಿ ಮುಡಿಯಂತೆ ಕಟ್ಟಿ ಅದನ್ನೊಯ್ದು ಅಡಿಗೆ ಮನೆಯ ಅಟ್ಟದೊಳಗೆ ಧೊಪ್ಪೆಂದು ಸದ್ದು ಬರುವಂತೆ ಒಗೆಯಲಾಗುತ್ತಿತ್ತು.  ಹೆಚ್ಚಾಗಿ ಈ ಕೆಲಸ ನನ್ನ ಪಾಲಿನದಾಗಿರುತ್ತಿತ್ತು.  ವರ್ಷವಿಡೀ ಇದೇ ರೀತಿ ಅಕ್ಕಿ ಮುಡಿಗಳು ಅಟ್ಟಕ್ಕೆ ಬಂದು ಬೀಳಲಿ ಎಂಬ ಆಶಯವಂತೆ ಈ ಆಚರಣೆಯದು.   ದಿನವೂ ಬೆಳಗ್ಗೆ ಅಣ್ಣ ಸಪ್ತಶತಿ ಪಾರಾಯಣ ಮಾಡುತ್ತಿದ್ದರೆ ರಾತ್ರೆ ತಂದೆಯವರು ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡುತ್ತಿದ್ದರು. ಆ ಪುಸ್ತಕದಲ್ಲಿ ದೇವಿಯು ಚಂಡ ಮುಂಡರನ್ನು ವಧಿಸುವ ಸುಂದರವಾದ ವರ್ಣ ಚಿತ್ರವೊಂದಿತ್ತು.  ಅದನ್ನು ತೋರಿಸುವಂತೆ ನಾವು ತಂದೆಯವರನ್ನು ಕೇಳುವುದಿತ್ತು.  ಪಾರಾಯಣದ ಒಂದು ಹಂತದಲ್ಲಿ  ಚಿಟಿಕೆಯಷ್ಟು ಮಂತ್ರಿಸಿದ ಭಸ್ಮವನ್ನು ನಮ್ಮ ಬಾಯಿಗೆ ಹಾಕುತ್ತಿದ್ದರು. ಸಪ್ತಶತಿಯಲ್ಲಿ ಪದೇ ಪದೇ ಬರುವ ನಮಸ್ತಸ್ಯೈ  ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ಹಾಗೂ ಲಕ್ಷ್ಮೀನಾರಾಯಣ ಹೃದಯದ ಫಟು ಕುರು ಕುರು ಸ್ವಾಹಾ ಎಂಬ ಸಾಲುಗಳು ನಮಗೆಲ್ಲರಿಗೂ ಕಂಠಪಾಠವಾಗಿದ್ದವು!


     ಆಗಿನ್ನೂ ನಮ್ಮ ಹಳ್ಳಿಗೆ ವಿದ್ಯುತ್ತು ಬಂದಿರಲಿಲ್ಲ.  ಆದರೂ 50 ವೋಲ್ಟಿನ ಬ್ಯಾಟರಿಯಿಂದ ನಡೆಯುವ ರೇಡಿಯೊ ಒಂದು ನಮ್ಮಲ್ಲಿತ್ತು.  ನಮ್ಮ ಒಬ್ಬ ಅಣ್ಣನಿಗೆ ಕಸದಿಂದ ರಸ ತಯಾರಿಸುವ ವಿದ್ಯೆ ಚೆನ್ನಾಗಿ ಗೊತ್ತಿತ್ತು. ರೇಡಿಯೋಗೆ ಉಪಯೋಗಿಸಲಾಗದಂಥ ಹಳೆಯ ನಿರುಪಯೋಗಿ ಬ್ಯಾಟರಿಯೊಂದನ್ನು ಒಡೆದು ಅದರೊಳಗೆ ಟಾರ್ಚಿನಲ್ಲಿ ಉಪಯೋಗಿಸುವಂಥ ಚಿಕ್ಕ ಚಿಕ್ಕ ಸೆಲ್ಲುಗಳಂಥದೇ ರಚನೆ  ಇರುವುದನ್ನು ಅವರು ಕಂಡುಕೊಂಡಿದ್ದರು.  ಆ ಸೆಲ್ಲುಗಳನ್ನು ಎರಡು ವಯರುಗಳ ಮೂಲಕ  ಬಲ್ಬಿಗೆ ಜೋಡಿಸಿದಾಗ  ಅದನ್ನು ಉರಿಸುವಷ್ಟು ವಿದ್ಯುತ್ತು ಅವುಗಳಲ್ಲಿ ಉಳಿದಿರುವುದೂ ಅವರಿಗೆ ಗೊತ್ತಾಗಿತ್ತು. ಇದನ್ನು ದೇವರ ಮಂಟಪದ ಅಲಂಕಾರಕ್ಕೆ ಯಾಕೆ ಉಪಯೋಗಿಸಬಾರದು ಎಂಬ ಯೋಚನೆ ಅವರಿಗೆ ಬಂತು.  ಏನನ್ನಾದರೂ ಯೋಚಿಸಿದರೆ ಅದನ್ನು ಮಾಡಿಯೇ ತೀರುವುದು ಅವರ ಜಾಯಮಾನ. ಅಷ್ಟಿಷ್ಟು ಬಡಗಿ ಕೆಲಸವೂ ಅವರಿಗೆ ಬರುತ್ತಿತ್ತು.   ಮರದ ತುಂಡೊಂದನ್ನು ಕೆತ್ತಿ ಒಂದು ಬ್ಯಾಟರಿ ಬಾಕ್ಸು  ಮತ್ತು ಗೆರಟೆ ಹಾಗೂ ಒಂದು ಹಳೆಯ ಸ್ಪ್ರಿಂಗ್ ಉಪಯೋಗಿಸಿ ಒಂದು ಟಾಗಲ್ ಸ್ವಿಚ್ಚು ತಯಾರಿಸಿ ನವರಾತ್ರಿ ಪೂಜೆಯ ಹೊತ್ತಲ್ಲಿ ದೇವರ ಮೇಲೆ ಬಲ್ಬಿನ ಬೆಳಕು ಬೀಳುವಂತೆ ಮಾಡಿಯೇ  ಬಿಟ್ಟಿದ್ದರು.

     ನವರಾತ್ರಿಯಿಂದ ಆರಂಭವಾಗುವ ಆಶ್ವೀಜ ಮಾಸದ ಭಾನುವಾರಗಳಂದು ಬೆಳಗ್ಗೆ ತಣ್ಣೀರಲ್ಲಿ ಸ್ನಾನ ಮಾಡುವ ಸಂಪ್ರದಾಯ ನಮ್ಮಲ್ಲಿತ್ತು.  ಹಿರಿಯರೆಲ್ಲರೂ ಬಾವಿಯಿಂದ ನೀರೆಳೆದು ಸ್ನಾನ ಮುಗಿಸಿದರೂ ನಾವು  ತೋಟದ ಪಕ್ಕದಲ್ಲಿ ಹರಿಯುವ ಮೃತ್ಯುಂಜಯಾ ನದಿಗೆ ಹೋಗುತ್ತಿದ್ದೆವು.  ಅಷ್ಟರಲ್ಲಿ ಮಳೆ ಕಡಿಮೆಯಾಗಿ ನದಿ ನೀರು ತಿಳಿಯಾಗಿರುತ್ತಿತ್ತು. ಆ ಚುಮು ಚುಮು ಚಳಿಯಲ್ಲಿ ಮೊದಲ ಮುಳುಗು ಹಾಕುವುದು ಕಠಿಣವೆನಿಸಿದರೂ ನಂತರ ಮೇಲೆ ಬರುವ ಮನಸ್ಸೇ ಬರುತ್ತಿರಲಿಲ್ಲ. ಸ್ನಾನ ಮುಗಿಸಿದ ಮೇಲೆ ಕೆಂಪು ಕಲ್ಲೊಂದನ್ನು ಅರೆದು ಗಂಧದಂತೆ ಹಣೆಗೆ ಹಚ್ಚಿಕೊಳ್ಳುತ್ತಿದ್ದೆವು.  ಆ ದಿನ ಅಕ್ಕಿಯ ತಿಂಡಿ ತಿನ್ನಬಾರದೆಂಬ ನಿಯಮವಿದ್ದುದರಿಂದ ಬೆಳಗ್ಗಿನ ಫಲಾಹಾರಕ್ಕೆ ಅರಳಿನ ಮೊಗ್ಗುಗಳ ಉಸ್ಲಿ. ಭತ್ತ ಹುರಿದು ಅರಳು ತಯಾರಿಸುವಾಗ ಪೂರ್ತಿ ಸಿಡಿಯದೆ ಉಳಿದ ಚೂರುಗಳೇ ಈ ಅರಳಿನ ಮೊಗ್ಗುಗಳು.  ಅಕ್ಕಿಯದೇ ಇನ್ನೊಂದು ರೂಪವಾದರೂ ಉರಿಯಲ್ಲಿ ಸುಟ್ಟು ಶುದ್ಧವಾದದ್ದು ಎಂಬ ನಂಬಿಕೆ.  ಮಧ್ಯಾಹ್ನದ ನೈವೇದ್ಯಕ್ಕೆ ದಿನವೂ ಏನಾದರೂ ಸಿಹಿ ಇರುತ್ತಿತ್ತು.  ಮೊದಲ ದಿನ ಹೆಚ್ಚಾಗಿ ಹಾಲುಬಾಯಿ, ನಂತರದ ದಿನಗಳಲ್ಲಿ ಮುಳ್ಳು ಸೌತೆಯ ಕಡುಬು, ಅದರದ್ದೇ ಗುಳಿ ಅಪ್ಪ, ಅಂಬೋಡೆ ಪಾಯಸ,  ಅಕ್ಕಿಯ ಮೋದಕ, ಅತಿರಸ, ಎರಿಯಪ್ಪ, ನೀರುದೋಸೆ ಕಾಯಿ ಹೂರಣ, ಒತ್ತುಶ್ಯಾವಿಗೆ ರಸಾಯನ, ಗೋಧಿಯ ಉಂಡೆ, ಕೇಸರಿ ಭಾತ್, ಪಂಚಕಜ್ಜಾಯದ ಉಂಡೆ  ಇತ್ಯಾದಿ.


     ಈ ಮೊದಲೇ ಹೇಳಿದಂತೆ ದಿನವೂ ಕೇಪುಳದ ಹೂವುಗಳನ್ನು ತರಲು ವಿವಿಧ ಜಾಗಗಳಿಗೆ ಹೋಗುವಾಗ ಕೆಲವೊಮ್ಮೆ ಕಾವಟೆ ಎಂಬ ಮೃದುವಾದ ಮರದ ದೊಡ್ಡ ದೊಡ್ಡ ಮುಳ್ಳುಗಳನ್ನು ಎಬ್ಬಿಸಿ ತಂದು, ಅದರ ತಳವನ್ನು ಕಲ್ಲಿಗೆ ಉಜ್ಜಿ ನಯವಾಗಿಸಿ, ಕೊಡೆ ಕಡ್ಡಿಯಿಂದ ಮಾಡಿದ ಚಾಣದಿಂದ ಕೆತ್ತಿ ನಮ್ಮ ಹೆಸರಿನ ಮುದ್ರೆ ತಯಾರಿಸುವುದೂ ಇತ್ತು.  ಅದಕ್ಕೆ ಸಿಗರೇಟು ಡಬ್ಬಿಯ ಮುಚ್ಚಳದಲ್ಲಿ ಚಿಂದಿ ಬಟ್ಟೆಯೊಂದನ್ನಿರಿಸಿ ಹಳೆ ಬ್ಯಾಟರಿಯೊಳಗಿನ ಮಸಿಯನ್ನು ನೀರಲ್ಲಿ ಕಲಸಿ ಹಚ್ಚಿದ ಇಂಕ್ ಪ್ಯಾಡ್.

     ಧರ್ಮಸ್ಥಳದಲ್ಲಿ ಮಹಾನವಮಿಯಯಂದು ಕುಮಾರಿಕಾ ಸುವಾಸಿನಿಯರಿಗೆ ಸೀರೆ ವಿತರಿಸುವ ಸಂಪ್ರದಾಯವಿದೆ.  ನಮ್ಮ ಮನೆಯ ಹೆಣ್ಣುಮಕ್ಕಳು ಯಾವತ್ತೂ ಈ ಅವಕಾಶ ತಪ್ಪಿಸಿಕೊಳ್ಳುತ್ತಿರಲಿಲ್ಲ.  ಅವರಿಗೆ ಜೊತೆಯಾಗಿ ಹೋಗುವ ಅಣ್ಣಂದಿರೊಡನೆ ನಾನೂ ಸೇರಿಕೊಳ್ಳುವುದಿತ್ತು. ಸುಮಾರು 7 ಕಿಲೋಮೀಟರ್ ದೂರವನ್ನು ನಡೆದೇ ಕ್ರಮಿಸುವುದಾಗಿತ್ತು. ದಾರಿಯುದ್ದಕ್ಕೂ  ಗುಡ್ದ ಹಾಗೂ ಗದ್ದೆಗಳ ಸರಣಿ.  ಗದ್ದೆಯ ಅಗಲ ಕಿರಿದಾದ  ಬದುಗಳ ಮೇಲೆ ನಡೆಯುವಾಗ ಆಚೀಚೆ ನೋಡುತ್ತಾ ಪ್ರಕೃತಿ ಸೌಂದರ್ಯ ಸವಿಯಲು ಹೊರಟರೆ ಕೆಸರಿನೊಳಗೆ ಬೀಳುವುದೇ ಸೈ.  ಒಂದು ಕಡೆಯಂತೂ ಕುತ್ತಿಗೆವರೆಗೆ ಹೂತು ಹೋಗುವಷ್ಟು ಕೆಸರು. ಒಂದಿಬ್ಬರು ಅಜಾಕರೂಕತೆಯಿಂದ ಹಾಗೆ ಹೂತು ಹೋಗಿ ಅವರನ್ನು ಮೇಲೆಳೆಯಲು ಹರಸಾಹಸ ಪಡಬೇಕಾಗಿ ಬಂದಿತ್ತಂತೆ.   ಧರ್ಮಸ್ಥಳ ತಲುಪಿದೊಡನೆ ಹೆಣ್ಣು ಮಕ್ಕಳು ದೇವಸ್ಥಾನದ ಒಳಗಡೆ ಹೋದರೆ ನಾವು ಅಂಗಡಿ ಬೀದಿಗಳಲ್ಲಿ ಒಂದಷ್ಟು ಹೊತ್ತು ಠಳಾಯಿಸಿ ಕಾಲು ಸೋಲತೊಡಗಿದೊಡನೆ  ವಸಂತ ಮಹಲಿನಲ್ಲಿ ಬೆಳಗಿನ ವರೆಗೂ ನಡೆಯುವ ನಾಟಕಕ್ಕೋ ಸಂಗೀತ ಕಾರ್ಯಕ್ರಮಕ್ಕೋ ಪ್ರೇಕ್ಷಕರಾಗುತ್ತಿದ್ದೆವು. ಬೆಳಗಾದೊಡನೆ ಹೆಣ್ಣು ಮಕ್ಕಳು ಸೀರೆ ಸಿಕ್ಕಿದ ಖುಶಿಯೊಂದಿಗೆ, ನಾವು ದಣಿದ ಕಾಲುಗಳೊಂದಿಗೆ ಅವೇ ಗುಡ್ಡ ಗದ್ದೆಗಳನ್ನು ದಾಟಿ ಮನೆ ಸೇರುತ್ತಿದ್ದೆವು.  ನಿದ್ದೆಗಣ್ಣಾಗಿರುತ್ತಿದ್ದುದರಿಂದ ಗದ್ದೆ ಬದುಗಳಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತಿತ್ತು.
 

     ನಮ್ಮ ಹಳ್ಳಿ ಕಡೆ ನವರಾತ್ರಿ ವೇಷಗಳು ಬರುತ್ತಿದ್ದುದು ಕಮ್ಮಿ.  ಕೆಲವೊಮ್ಮೆ ಮುಖಕ್ಕೆ ಮಸಿ ಮೆತ್ತಿ ಕೊಳಲು ನುಡಿಸುವ ಆದಿವಾಸಿ, ಸಿದ್ ಔರ್ ಸಿದ್ ಅನ್ನುತ್ತಾ ಬರುವ ಅನಾರ್ಕಲಿ, ಕರಡಿ ಅಥವಾ ಸಿಂಹದ ವೇಷ ಇತ್ಯಾದಿ ಬರುತ್ತಿದ್ದವು.  ಹುಲಿ ವೇಷವಂತೂ ಇಲ್ಲವೆನ್ನುವಷ್ಟು ಕಮ್ಮಿ.  ಇವುಗಳನ್ನು ನೋಡಿ ನಮಗೂ ಉಮೇದು ಬಂದು ಅಡಿಕೆ ಹಾಳೆಯಿಂದ ಕರಡಿ ಮುಖ ತಯಾರಿಸಿ ಅದಕ್ಕೆ ಕಪ್ಪು ಬಳಿದು ಬಾಯಲ್ಲಿ ಕೆಂಪು ರಬ್ಬರ್ ಹಾಳೆಯ ನಾಲಗೆ ಸಿಕ್ಕಿಸಿ ಅಂಗಳದ ತೊಂಡೆ ಚಪ್ಪರಕ್ಕೆ ತೂಗು ಹಾಕಿ ಸಂಭ್ರಮಿಸುವುದಿತ್ತು.

     ಈ ರೀತಿ ನವರಾತ್ರಿಯ ನವೋಲ್ಲಾಸ ಮುಗಿದ ಮೇಲೆ ಉಳಿಸಿಟ್ಟಿದ್ದ ರಜೆಯ ಹೋಮ್ ವರ್ಕ್ ಇತ್ಯಾದಿ ಮುಗಿಸಿ ಮುಂದೆ ಬರುವ ದೀಪಾವಳಿ ಸಂಭ್ರಮದ ಸವಿಗನಸು ಕಾಣುತ್ತಾ ಶಾಲೆಯ ಕಡೆ ಭಾರವಾದ ಹೆಜ್ಜೆ ಹಾಕುತ್ತಿದ್ದೆವು.