Thursday 27 July 2017

ಗಾನ ದಾರಿಯಲ್ಲಿ ಸೂರ್ಯ ಜಾರಿ ಹೋದ


ಆರಾಧನಾದಲ್ಲಿ ರಾಜೇಶ್ ಖನ್ನಾಗೆ ಕಿಶೋರ್ ಕುಮಾರ್ ಕೆಲವು ಹಾಡುಗಳನ್ನು ಹಾಡಿದ್ದೇ ನೆಪವಾಗಿ ರಫಿ ಕ್ರಮೇಣ ಹಿನ್ನೆಲೆಗೆ ಸರಿಯುವಂತಾದಾಗ  ಅವರ ಅನೇಕ ಅಭಿಮಾನಿಗಳಿಗೆ ಅನ್ನಿಸಿದ್ದು ಹೀಗೆ.  ಆದರೆ ಆರಾಧನಾದಲ್ಲಿ ರಫಿ ಹಾಡುಗಳೂ ಇದ್ದವು.  ಅದೇ ಸಮಯಕ್ಕೆ ಬಂದ ರಾಜೇಶ್ ಖನ್ನಾ ಚಿತ್ರಗಳಾದ ದೋ ರಾಸ್ತೆ, ದ ಟ್ರೇನ್ ಚಿತ್ರಗಳು ಗೆದ್ದದ್ದೇ ರಫಿ ಹಾಡುಗಳಿಂದ. ಆದರೂ ಹೀಗೇಕಾಯಿತು? ಕಾರಣ ಯಾರಿಗೂ ಗೊತ್ತಿಲ್ಲ.

ಆಗ ಚಾಲ್ತಿಯಲ್ಲಿದ್ದ ಅಲಿಖಿತ ನಿಯಮದ ಪ್ರಕಾರ  ರಾಜ್ ಕಪೂರ್ ಅವರಿಗೆ ಮತ್ತು ಆಗೊಮ್ಮೆ ಈಗೊಮ್ಮೆ ಇತರ pathos ಹಾಡುಗಳಿಗೆ ಮುಕೇಶ್,  ತನಗಾಗಿ ಮತ್ತು ದೇವಾನಂದ್‌ಗಾಗಿ ಕಿಶೋರ್ ಕುಮಾರ್, ಬಿ.ಆರ್. ಫಿಲ್ಮ್ಸ್‌ನ ಚಿತ್ರಗಳಿಗೆ ಮಹೇಂದ್ರ ಕಪೂರ್, ತನ್ನ ಸಂಗೀತ ನಿರ್ದೇಶನದ ಚಿತ್ರಗಳಿಗೆ ಹೇಮಂತ್ ಕುಮಾರ್, ಹಾಸ್ಯ ಮತ್ತು ಶಾಸ್ತ್ರೀಯ ಹಾಡುಗಳಿಗೆ ಮನ್ನಾಡೇ ಹಾಡುತ್ತಿದ್ದುದನ್ನು ಬಿಟ್ಟರೆ ಇತರೆಲ್ಲ ಹಾಡುಗಳಿಗೆ ರಫಿಯೇ ಧ್ವನಿಯಾಗುತ್ತಿದ್ದುದು.  ಹೀಗಾಗಿ ಆರಾಧನಾ ಹಾಡುಗಳನ್ನೂ ರಫಿಯೇ ಹಾಡುವುದೆಂದು ನಿರ್ಧಾರವಾಗಿತ್ತು.  ಒಂದು ಹಾಡು  ಬಾಗೊ ಮೆಂ ಬಹಾರ್ ಹೈ ರಫಿ-ಲತಾ ಧ್ವನಿಯಲ್ಲಿ ರೆಕಾರ್ಡ್ ಕೂಡ ಆಗಿತ್ತು. ಅಷ್ಟರಲ್ಲಿ ರಫಿ ದೀರ್ಘ ರಜೆಯ ಮೇಲೆ ಹಜ್ ಯಾತ್ರೆಗೆ ತೆರಳಿದರು. ಶಕ್ತಿ ಸಾಮಂತ್  ನಿರ್ಮಿಸುತ್ತಿದ್ದ ದೊಡ್ಡ ಬಜಟ್ ಚಿತ್ರ ಪಗ್ಲಾ ಕಹೀಂ ಕಾ ಯಾವುದೋ ಕಾರಣಕ್ಕೆ ಅರ್ಧದಲ್ಲಿ ನಿಂತಿತ್ತು. ಹೀಗಾಗಿ ಅವರು stop gap arrangement ಆಗಿ   ಶರ್ಮಿಳಾ ಠಾಗೋರ್ ಮತ್ತು ಆಗಿನ್ನೂ ನವ ನಟನೇ ಆಗಿದ್ದ ರಾಜೇಶ್ ಖನ್ನಾ  ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ ಆರಾಧನಾ ನಿರ್ಮಾಣಕ್ಕೆ ಕೈ ಹಾಕಿದ್ದರು.  ಬೇಗ ಚಿತ್ರೀಕರಣ ಮುಗಿಸಿ ಚಿತ್ರ ಬಿಡುಗಡೆ ಮಾಡುವುದು ಅವರಿಗೆ ಅನಿವಾರ್ಯವಾಗಿತ್ತು. ಅದಕ್ಕಾಗಿ ತಕ್ಷಣ ಹಾಡುಗಳು ಬೇಕಾಗಿದ್ದವು.  ಈ ಕುರಿತು ಸಂಗೀತ ನಿರ್ದೇಶಕ ಎಸ್.ಡಿ.ಬರ್ಮನ್ ಅವರೊಂದಿಗೆ ಚರ್ಚಿಸುತ್ತಿದ್ದಾಗ ಅವರ ಆಪ್ತರಾದ ಕಿಶೋರ್ ಕುಮಾರ್ ಅವರಿಂದ ಉಳಿದ ಹಾಡುಗಳನ್ನು ಹಾಡಿಸಿದರೆ ಹೇಗೆ ಎಂಬ ಯೋಚನೆ ಶಕ್ತಿ ಸಾಮಂತ್ ಅವರಿಗೆ ಬಂತು. ಕೂಡಲೇ ‘ಬರ್ಮನ್ ದಾದಾ ನಿಮ್ಮನ್ನು ಬರಹೇಳಿದ್ದಾರೆ’ ಎಂದು ಫೋನ್ ಮಾಡಿ ಕಿಶೋರ್ ಕುಮಾರ್ ಅವರನ್ನು ಕರೆಸಲಾಯಿತು.  ಇನ್ಯಾರಿಗೂ ಕ್ಯಾರೇ ಅನ್ನದಿದ್ದರೂ ಬರ್ಮನ್ ದಾದಾಗೆ ಬಹಳ ಗೌರವ ಕೊಡುತ್ತಿದ್ದ ಕಿಶೋರ್ ತಡ ಮಾಡದೆ ಬಂದರು.  ಬಂದೊಡನೆ ‘ಏನು ವಿಷಯ’ ಎಂದು ಬರ್ಮನ್ ದಾದಾ ಅವರಲ್ಲಿ ವಿಚಾರಿಸಿದಾಗ ‘ಕರೆದದ್ದು  ನಾನಲ್ಲ, ಶಕ್ತಿ ಸಾಮಂತ್ ನಿನ್ನಲ್ಲಿ ಏನೋ ಮಾತಾಡಬೇಕಂತೆ’ ಅಂದಾಗ ಶಕ್ತಿ ಸಾಮಂತ್ ಕಕ್ಕಾಬಿಕ್ಕಿಯಾದರೂ ಕಿಶೋರ್‌ಗೆ ವಿಷಯ ತಿಳಿಸಿದರು. ಚಿತ್ರದ ನಾಯಕ ರಾಜೇಶ್ ಖನ್ನಾ ಎಂದು ತಿಳಿಯುತ್ತಲೇ ಕಿಶೋರ್ ‘ಇಲ್ಲ ಇಲ್ಲ.  ನಾನು ದೇವಾನಂದ್‌ಗೆ ಮಾತ್ರ ಹಾಡುವುದು. ಇತರರಿಗೆ ಹಾಡಿದರೆ ಜನ ಒಪ್ಪಲಾರರು’ ಎಂದು ಖಡಾಖಂಡಿತವಾಗಿ ನಿರಾಕರಿಸಿದರು.  ವಾಸ್ತವವಾಗಿ ತಾನೊಬ್ಬ ನಟನೇ ಹೊರತು ಹಿನ್ನೆಲೆ ಗಾಯಕ ಅಲ್ಲ.  ತನ್ನ ಹಾಡುಗಳಿಂದ ಇತರರೇಕೆ ಖ್ಯಾತಿ ಗಳಿಸಬೇಕು ಎಂಬ ಭಾವನೆ ಅವರ ತಲೆಯಲ್ಲಿತ್ತು.  ರಾಗಿಣಿ, ಶರಾರತ್, ಬಾಘಿ ಶಹಜಾದಾ ಮುಂತಾದ ಚಿತ್ರಗಳಲ್ಲಿ ರಫಿಯ ಹಾಡಿಗೆ ಅಭಿನಯಿಸಲು ಅವರು ಒಪ್ಪಿದ್ದೂ ಇದೇ ಕಾರಣಕ್ಕಾಗಿ. ಕಲ್ಯಾಣಜೀ ಆನಂದಜೀ ಅವರಿಗೆ ಉಪಕಾರ್ ಚಿತ್ರದ ಕಸಮೆ ವಾದೇ ಪ್ಯಾರ್ ವಫಾ  ಹಾಡನ್ನು ಕಿಶೋರ್ ಅವರಿಂದ ಹಾಡಿಸಬೇಕೆಂದು ಆಸೆ ಇತ್ತು. ಇದಕ್ಕಾಗಿ ಅವರನ್ನು ಸಂಪರ್ಕಿಸಿದಾಗ ‘ನಾನೇ ಬೇರೆಯವರಿಂದ playback ಹಾಡಿಸಿಕೊಳ್ಳುವ ನಟ. ಇನ್ನೊಬ್ಬರಿಗಾಗಿ ಹಾಡುವಂತೆ ನನ್ನನ್ನೇನು ಕೇಳುತ್ತೀರಿ’ ಅಂದಿದ್ದರಂತೆ.  ಆದರೆ ಬರ್ಮನ್ ದಾದಾ ಬಿಟ್ಟಾರೆಯೇ. ‘ಏಕೆ ನಖ್ರಾ ಮಾಡುತ್ತಿ.  ಸುಮ್ಮನೆ ನಾನು ಹೇಳಿದಂತೆ ಕೇಳು’ ಎಂದು ದಬಾಯಿಸಿದಾಗ  ಕಿಶೋರ್ ವಿಧಿಯಿಲ್ಲದೆ ಒಪ್ಪಬೇಕಾಯಿತು.  ಹೀಗೆ ಚಿತ್ರೀಕರಣಕ್ಕಾಗಿ ಕೂಡಲೇ ಬೇಕಾಗಿದ್ದ  ಕೋರಾ ಕಾಗಜ್ ಥಾ ಯೆ ಮನ್ ಮೇರಾ, ಮೇರೆ ಸಪನೋಂ ಕಿ ರಾನಿ ಮತ್ತು ರೂಪ್ ತೇರಾ ಮಸ್ತಾನಾ ಕಿಶೋರ್ ಧ್ವನಿಯಲ್ಲಿ ರೆಕಾರ್ಡ್ ಆದವು.  ಅಷ್ಟರಲ್ಲಿ ವಿದೇಶದಿಂದ ಮರಳಿದ ರಫಿ ತಾನು ಹೋಗುವ ಮೊದಲು ಆರಾಧನಾದ ಒಂದೇ ಹಾಡು ರೆಕಾರ್ಡ್ ಆಗಿದ್ದುದನ್ನು ನೆನಪಿಸಿಕೊಂಡು ‘ನಾನು ಬಂದಿದ್ದೇನೆ. ನನ್ನಿಂದ ಏನಾದರೂ ಸೇವೆ ಬೇಕಿದ್ದರೆ ಹೇಳಿ’ ಎಂದು ಶಕ್ತಿ ಸಾಮಂತ್‌ಗೆ ಫೋನ್ ಮಾಡಿದರು.  ಅದುವರೆಗಿನ ತನ್ನ ಎಲ್ಲ ಚಿತ್ರಗಳಲ್ಲೂ ಹಾಡಿದ್ದ ರಫಿ ಬಗ್ಗೆ ಸಾಮಂತ್‌ಗೆ ಅಪಾರ ಗೌರವವಿತ್ತು.  ಅವರಿಗೆ ವಿಷಯ ತಿಳಿಸಿ ‘ಒಂದು ಹಾಡು ಉಳಿದಿದೆ.  ಅದನ್ನು ನೀವು ಹಾಡಿ ಬಿಡಿ’ ಎಂದರು.  ಆ ಹಾಡು ಗುನ್ ಗುನಾ ರಹೇ ಹೈಂ ಭಂವರೆ.  ಇವಿಷ್ಟು ವಿವರಗಳನ್ನು ಸ್ವತಃ ಶಕ್ತಿ ಸಾಮಂತ್ ಒಂದು ರೇಡಿಯೋ ಸಂದರ್ಶನದಲ್ಲಿ ಹೇಳಿದ್ದಾರೆ.   ಆದ್ದರಿಂದ ಕೆಲವು ಹಾಡುಗಳ ಧ್ವನಿಮುದ್ರಣದ ನಂತರ ಎಸ್.ಡಿ.ಬರ್ಮನ್ ಅವರಿಗೆ ಅಸೌಖ್ಯ ಉಂಟಾಯಿತು.  ಉಳಿದ ಹಾಡುಗಳನ್ನು ಆರ್. ಡಿ. ಬರ್ಮನ್ ತನಗೆ ಪ್ರಿಯರಾದ ಕಿಶೋರ್ ಅವರಿಂದ ಹಾಡಿಸಿದರು ಎಂದೆಲ್ಲ ಕೆಲವೆಡೆ ಉಲ್ಲೇಖವಾಗಿರುವುದು ಸತ್ಯಕ್ಕೆ ದೂರವಾದ ಮಾತು. ಆರಾಧನಾದ ಯಾವ ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲೂ ಆರ್.ಡಿ. ಬರ್ಮನ್ ಇರಲೇ ಇಲ್ಲ ಎಂದು ರೂಪ್ ತೇರಾ ಮಸ್ತಾನಾ ಹಾಡಿನಲ್ಲಿ saxophone ನುಡಿಸಿದ ಮನೋಹಾರಿ ಸಿಂಗ್ ಒಂದೆಡೆ ಹೇಳಿರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ.

ಯಾರು ಹಾಡಿದ್ದೆಂಬುದರ ಬಗ್ಗೆ ಹೆಚ್ಚು ಗಮನ ನೀಡದೆ ಆರಾಧನಾದ  ಹಾಡುಗಳ ವೈವಿಧ್ಯ ಮತ್ತು ಮಾಧುರ್ಯವನ್ನು ರಫಿ ಪ್ರಿಯರೂ ಸೇರಿದಂತೆ ಎಲ್ಲರೂ ಆಸ್ವಾದಿಸಿದ್ದರು. ತನಗಾಗಿ ಅಥವಾ ದೇವಾನಂದ್‌ಗಾಗಿ ಅಲ್ಲದೆಯೂ ಕಿಶೋರ್ ಈ ಮೊದಲೂ ಭೂತ್ ಬಂಗ್ಲಾ, ಹೋಲಿ ಆಯಿರೇ, ತೀನ್ ಬಹೂರಾನಿಯಾಂ, ಪ್ಯಾರ್ ಕಾ ಮೌಸಮ್, ಅಭಿಲಾಷಾ, ನನ್ಹಾ ಫರಿಶ್ತಾ,  ಹಮ್‌ಜೋಲಿ, ಕಾರವಾಂ  ಮುಂತಾದ ಚಿತ್ರಗಳಲ್ಲಿ ಹಾಡಿದ ಉದಾಹರಣೆಗಳಿದ್ದವು. ಆದರೂ ಕೆಲವು ಪತ್ರಿಕೆಗಳು ಮೊತ್ತ ಮೊದಲಬಾರಿ ಕಿಶೋರ್ ಕುಮಾರ್ ಆರಾಧನಾದಲ್ಲಿ ಬೇರೊಬ್ಬ ಹೀರೊಗೆ ಹಾಡಿದರು ಎಂದು ಬರೆದವು.  ಅಂದಿನ ದಿನಗಳಲ್ಲಿ ಹಾಡುಗಳ ಜನಪ್ರಿಯತೆಯ ಏಕೈಕ ಮಾನದಂಡವಾಗಿದ್ದ ಬಿನಾಕಾ ಗೀತ್ ಮಾಲಾದಲ್ಲಿ ಆರಾಧನಾದ ಕಿಶೋರ್ ಹಾಡುಗಳು ಅಂತಹ ಸದ್ದೇನೂ ಮಾಡಿರಲಿಲ್ಲ.  

ಕಾಲ ಕ್ರಮೇಣ  ರಫಿ ಮುಖ್ಯ ಗಾಯಕನಾಗಿದ್ದ ಚಿತ್ರಗಳಲ್ಲಿ ಒಂದೊಂದು ಕಿಶೋರ್ ಹಾಡು ಬರಲು ಆರಂಭವಾಗಿ ಹಿಟ್ ಆಗತೊಡಗಿತು. ಅಂದಾಜ್ ಚಿತ್ರದ ಜಿಂದಗಿ ಎಕ್ ಸಫರ್ ಹೈ ಸುಹಾನಾ, ತುಮ್ ಹಸೀನ್ ಮೈ ಜವಾನ್ ಚಿತ್ರದ ಮುನ್ನೆ ಕೀ ಅಮ್ಮಾ ಇದಕ್ಕೆ ಕೆಲವು ಉದಾಹರಣೆಗಳು.  ಇನ್ನಷ್ಟು ಸಮಯ ಕಳೆದಂತೆ ಇದು ತಿರುವು ಮುರುವು ಆಗಿ ಕಿಶೋರ್ ಮುಖ್ಯ ಗಾಯಕನಾಗಿ ರಫಿಯ ಒಂದೊಂದು ಹಾಡು ಬರತೊಡಗಿತು. ಉದಾಹರಣೆಗೆ ಸಚ್ಚಾ ಝೂಟಾ ಚಿತ್ರದ ಯೂಂ ಹಿ ತುಮ್ ಮುಝ್ ಸೆ ಬಾತ್ ಕರ್‌ತೀ ಹೊ, ಹಾಥಿ ಮೇರೆ ಸಾಥಿಯ ನಫ್‌ರತ್ ಕೀ ದುನಿಯಾ ಕೊ ಛೋಡ್ ಕೆ  ಇತ್ಯಾದಿ.  ಆ ಮೇಲೆ ರಫಿ ದೃಶ್ಯದಿಂದ ಮರೆಯಾಗಿ ಬಹುತೇಕ ಚಿತ್ರಗಳಲ್ಲಿ ಹಿನ್ನೆಲೆ ಗಾಯಕನಾಗಿ ಕಿಶೋರ್ ಕುಮಾರ್ ಹೆಸರು ಮಾತ್ರ ಕಾಣಿಸಿಕೊಳ್ಳತೊಡಗಿತು.  ಕಾರಣಾಂತರಗಳಿಂದ ಕಿಶೋರ್ ಲಭ್ಯರಾಗದ ಸಂದರ್ಭ ಅಥವಾ ಇಬ್ಬರು ಗಾಯಕರು ಹಾಡಬೇಕಾಗಿ  ಬಂದಾಗ ರಫಿ ಬದಲು ಮನ್ನಾಡೇ, ಮುಕೇಶ್ , ಮಹೇಂದ್ರ ಕಪೂರ್, ಭೂಪೇಂದ್ರ  ಮುಂತಾದವರು ಸಂಗೀತ ನಿರ್ದೇಶಕರ  ಆಯ್ಕೆ ಆಗತೊಡಗಿದರು.  ವಾಸ್ತವವಾಗಿ ಸೀತಾ ಔರ್ ಗೀತಾದ ಅಭೀ ತೊ ಹಾಥ್ ಮೆಂ ಜಾಮ್ ಹೈ, ಶೋಲೆ ಚಿತ್ರದ ಯೇ ದೋಸ್ತಿ ಮುಂತಾದ ಹಾಡುಗಳು  ರಫಿಯ ಪಾಲಿಗೆ ಬರಬೇಕಾಗಿದ್ದವುಗಳು.  ರಫಿಯ ಹಾಡುಗಳಿಂದಲೇ ಜನಪ್ರಿಯತೆಯ ತುತ್ತ ತುದಿಗೇರಿದ್ದ ರಾಜೇಂದ್ರ ಕುಮಾರ್ ಕೂಡ ಆಪ್ ಆಯೇ ಬಹಾರ್ ಆಯೀ ಚಿತ್ರದ ತುಮ್ ಕೊ ಭೀ ತೊ ಐಸಾ ಹಿ ಕುಛ್ ಎಂದು ಕಿಶೋರ್ ಧ್ವನಿಯಲ್ಲಿ ಹಾಡಿದ್ದು,  ದಿಲೀಪ್ ಕುಮಾರ್ ಅಭಿನಯದ ಸಗೀನ ಚಿತ್ರದ ಎಲ್ಲ ಹಾಡುಗಳು ಕಿಶೋರ್ ಪಾಲಾದದ್ದು ರಫಿ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟು ಮಾಡಿತ್ತು.

ಇದಕ್ಕೆ ಅಂದಿನ ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕರೇ ಕಾರಣ  ಎಂದು ಹೇಳಲಾಗದು.  ಯಾವ ಶ್ರುತಿಯಲ್ಲೂ ಯಾವ ಶೈಲಿಯಲ್ಲೂ ಯಾರೊಂದಿಗೂ ಯಾವುದೇ ರೀತಿಯ ಹಾಡನ್ನು ಅತಿ ಶೀಘ್ರವಾಗಿ ಕಲಿತು ತಪ್ಪಿಲ್ಲದೆ ಹಾಡಬಲ್ಲವರಾಗಿದ್ದ ರಫಿ ಎಲ್ಲರ ಪ್ರಥಮ ಆಯ್ಕೆಯೇ ಆಗಿದ್ದರು. ಆದರೆ  ಹಜ್ ಯಾತ್ರೆಯನ್ನು ಮುಗಿಸಿ ಬಂದ ರಫಿ ಆಧ್ಯಾತ್ಮದತ್ತ ಹೆಚ್ಚು ವಾಲಿದ್ದರು ಮತ್ತು ಹೆಚ್ಚು ಸಮಯ ವಿದೇಶದಲ್ಲೇ ವಾಸ್ತವ್ಯ ಹೂಡುತ್ತಿದ್ದುದರಿಂದ ಬೇಕಿದ್ದಾಗ ಧ್ವನಿಮುದ್ರಣಕ್ಕೆ ಸಿಗುತ್ತಿರಲಿಲ್ಲ ಎಂದು ಕೆಲವರು ಹೇಳುತ್ತಾರೆ.  ಓರ್ವ ವ್ಯಕ್ತಿ  ಅವರ ಮನೆಯಲ್ಲೇ ಠಿಕಾಣಿ  ಹೂಡಿ ಹಾಡಿನ ಮೂಲಕ ಸಂಪತ್ತು ಗಳಿಸುವುದು ಪಾಪ ಕಾರ್ಯ ಎಂಬ ವಿಚಾರವನ್ನು ಅವರ ತಲೆಯಲ್ಲಿ ತುಂಬಿದ್ದರು ಎಂದೂ ಹೇಳಲಾಗುತ್ತಿದೆ.  ಈ ವಿಚಾರವನ್ನು ರಫಿಯ ಪುತ್ರ ಪಕ್ಕದಲ್ಲೇ ವಾಸವಾಗಿದ್ದ ಪ್ರಖ್ಯಾತ ಅರೇಂಜರ್ ಮತ್ತು ಸರ್ವ ವಾದ್ಯ ಪರಿಣತ ಕೇರ್ಸಿ ಲಾರ್ಡ್ ಅವರಲ್ಲಿ ಹೇಳಿಕೊಂಡಾಗ ಅವರು ಉಪಾಯವಾಗಿ ಆ ವ್ಯಕ್ತಿಯನ್ನು ಸಾಗಹಾಕಿದ ಮೇಲೆ ಮತ್ತೆ ರಫಿ ಹಾಡತೊಡಗಿದರು ಎಂದು ಸ್ವತಃ ಲಾರ್ಡ್ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಮಧ್ಯೆಯೂ ಲಕ್ಷ್ಮೀ ಪ್ಯಾರೆ ತಮ್ಮ ಚಿತ್ರಗಳಲ್ಲಿ ಒಂದಾದರೂ ರಫಿ ಹಾಡಿರುವಂತೆ ನೋಡಿಕೊಳ್ಳುತ್ತಿದ್ದರು.  ರಫಿ ಅಭಿಮಾನಿಗಳಾದ ನಾಸಿರ್ ಹುಸೇನ್, ಮನಮೋಹನ್ ದೇಸಾಯಿ ಮುಂತಾದವರು ಕೂಡ ಸಾಧ್ಯವಾದಾಗಲೆಲ್ಲ  ಅವರನ್ನು ಬಳಸಿಕೊಳ್ಳುತ್ತಿದ್ದರು.  ಆದರೆ ಅಷ್ಟರಲ್ಲಿ ಅವರ ಧ್ವನಿಯಲ್ಲಿ ತೆರೆಮೇಲೆ ಹಾಡುತ್ತಿದ್ದ ನಾಯಕ ನಟರು ಒಬ್ಬೊಬ್ಬರಾಗಿ ನಿವೃತ್ತರಾಗಿದ್ದರು. ತನ್ನ ಅತಿ ಮೆಚ್ಚಿನ ಗಾಯಕ ರಫಿ ಎಂದು ಘಂಟಾ ಘೋಷವಾಗಿ ಸಾರುತ್ತಿದ್ದ ಓ.ಪಿ.ನಯ್ಯರ್ ಆಶಾ ಭೋಸ್ಲೆಯೊಂದಿಗೆ ಜಗಳವಾಡಿ ಮರೆಗೆ ಸರಿದಿದ್ದರು.  ಜೈಕಿಶನ್ ನಿಧನದ ನಂತರ ಅವರ ಬಲಗೈ ಬಂಟರಾಗಿದ್ದ ಸೆಬಾಸ್ಟಿಯನ್ ಶಸ್ತ್ರ ತ್ಯಾಗ ಮಾಡಿ ಗೋವೆಗೆ ಹಿಂತಿರುಗಿದ ಮೇಲೆ ಅದುವರೆಗೆ ಅವರನ್ನೇ ಅನುಸರಿಸಿ ತಮ್ಮ ರಚನೆಗಳಲ್ಲೂ ಮಾಧುರ್ಯ ತುಂಬಿ ತುಳುಕುವಂತೆ ಮಾಡುತ್ತಿದ್ದ ಇತರ ಸಂಗೀತ ನಿರ್ದೇಶಕರು ಸಂಗೀತೋಪಕರಣಗಳ ಬದಲಿಗೆ oscillatorಗಳ ಸದ್ದನ್ನು ಬಳಸಲಾರಂಭಿಸಿದ್ದರು. ಹಾಡುಗಳಲ್ಲೂ ಮೊದಲಿನ ವೈವಿಧ್ಯ ಇರದೆ ಏಕತಾನತೆ ಕಾಣಿಸತೊಡಗಿತ್ತು. ಜಯದೇವ್ ಮತ್ತು  ಮದನ್ ಮೋಹನ್ ಅವರ  ಜಂಟಿ ಸಂಗೀತ ನಿರ್ದೇಶನದ ಲೈಲಾ ಮಜ್ನೂದಲ್ಲಿ ಯುವ ನಟ ಋಷಿ ಕಪೂರ್ ಅವರ ಎಲ್ಲ ಹಾಡುಗಳನ್ನು  ಹಾಡುವ ಮೂಲಕ ಮತ್ತೆ ಮುಂಚೂಣಿಗೆ ಬಂದಂತೆ ಕಂಡರೂ ಆ ಹೊತ್ತಿಗೆ ರಫಿಯ ಧ್ವನಿಯಲ್ಲಿ ಮೊದಲಿನ ಮಾರ್ದವತೆ ಮಾಯವಾಗಿದ್ದನ್ನು ಮುಂದಿನ ಅಮರ್ ಅಕ್ಬರ್ ಅಂತೋಣಿ, ಸರ್‌ಗಮ್, ಆಶಾ ಮುಂತಾದ ಚಿತ್ರಗಳ ಹಾಡುಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.  ಸಂದರ್ಭಕ್ಕೆ ತಕ್ಕಂತೆ ಆರೇಳು ವಿಧದ ಧ್ವನಿಗಳಲ್ಲಿ  ಹಾಡಬಲ್ಲವರಾಗಿದ್ದ ಹಳೆ ರಫಿ ಅವರಾಗಿರಲಿಲ್ಲ. ಒಳಗಿಂದೊಳಗೆ ಅವರನ್ನು ಕೊರೆದು ತಿನ್ನುತ್ತಿದ್ದ ಅನಾರೋಗ್ಯವೂ ಇದಕ್ಕೆ ಕಾರಣವಾಗಿರಬಹುದು.  ಕೊನೆ ಕೊನೆಗೆ ಅವರು ಹಾಡುವಾಗ ಶರೀರವೆಲ್ಲ ನೀಲಿಗಟ್ಟುತ್ತಿತ್ತು ಎಂದು ಲತಾ ಮಂಗೇಶ್ಕರ್ ಒಂದೆಡೆ ಹೇಳಿದ್ದಾರೆ.   ಹೀಗೆ 70ರ ದಶಕದ ಆರಂಭದಲ್ಲಿ ಗಾನ ದಾರಿಯಲ್ಲಿ ಜಾರತೊಡಗಿದ ಸೂರ್ಯ ನಡು ನಡುವೆ ಮೋಡಗಳ ಮರೆಯಿಂದ ಮುಖ ತೋರಿಸಿ ಕೊನೆಗೆ  31-7-1980ರಂದು ಅಸ್ತಂಗತನಾದ.

70ರ ದಶಕದಲ್ಲಿ  ರೇಡಿಯೋ ಸಿಲೋನಿನ  ಏಕ್ ಹೀ ಫಿಲ್ಮ್ ಕೇ ಗೀತ್  ಕಾರ್ಯಕ್ರಮದಲ್ಲಿ ಹೊಸ ಚಿತ್ರದ ಗೀತೆಗಳು ಪ್ರಸಾರವಾಗುವಾಗ ಎಲ್ಲಾದರೂ ಒಂದು ರಫಿ ಹಾಡು ಕೇಳಿ ಬಂದೀತೇ ಎಂದು ಕಾಯುವ,  ಬಿನಾಕಾ ಗೀತ್ ಮಾಲಾದಲ್ಲಿ ಅಪರೂಪಕ್ಕೊಂದು ರಫಿ ಹಾಡು ಸರ್ತಾಜ್ ಗೀತ್ ಆದರೆ ಪುಳಕಗೊಂಡು ತೃಪ್ತಿಪಟ್ಟುಕೊಳ್ಳುವ  ಪರಿಸ್ಥಿತಿ ರಫಿ ಅಭಿಮಾನಿಗಳಿಗೆ ಬಂದೊದಗಿತ್ತು.  ಫರ್ಮಾಯಿಶಿ ಕಾರ್ಯಕ್ರಮಗಳಲ್ಲಿ ರಫಿ ಹಾಡುಗಳೇ ಇರುತ್ತಿರಲಿಲ್ಲ.  ಕಾಲಚಕ್ರ ಮತ್ತೆ ತಿರುಗಿತು.  ಒಮ್ಮೆ ಬುಸುಗುಟ್ಟಿ ನೊರೆಯುಕ್ಕಿಸಿದ ಹಾಡುಗಳು ತಣ್ಣಗಾದವು.  50-60ರ ದಶಕದ ಹಾಡುಗಳು ಸುವರ್ಣಯುಗದ  ಸಂಗೀತವಾಗಿ ಹರಳುಗಟ್ಟಿದವು. ಈಗ ಯಾವುದೇ FM ಅಥವಾ ರೇಡಿಯೊ ಸ್ಟೇಶನ್ ಆಲಿಸಿದರೂ 90 ಶೇಕಡಾ ಕಾರ್ಯಕ್ರಮಗಳು ಈ ಸುವರ್ಣಯುಗದ ರಫಿ ಮತ್ತಿತರರ ಹಾಡುಗಳಿಂದಲೇ ತುಂಬಿರುತ್ತವೆ.   ಅಂತರ್ಜಾಲ ಸರ್ವವ್ಯಾಪಿಯಾದಮೇಲಂತೂ ರೇಡಿಯೋ ಸ್ಟೇಶನ್‌ಗಳ ಅವಲಂಬನೆಯೂ ತಪ್ಪಿ  ಯಾರಿಗೆ ಯಾವುದು ಬೇಕೋ ಅದನ್ನು ಆರಿಸಿಕೊಳ್ಳುವ  ವರ ದೊರಕಿದೆ.
----

ರಫಿ ರಜೆಯಿಂದ ಮರಳಿದ ಮೇಲೆ ಆರಾಧನಾದಲ್ಲಿ ಬಾಕಿ ಉಳಿದಿದ್ದ ಗುನ್ ಗುನಾ ರಹೇ ಹೈಂ ಭಂವರೆ ಹಾಡು ಆಶಾ ಭೋಸ್ಲೆಯೊಡನೆ ಹಾಡಿದರಲ್ಲವೇ.  ಒಂದು ವೇಳೆ ಅವರು ಮರಳುವುದು ಇನ್ನಷ್ಟು ತಡವಾಗಿ ಅದನ್ನೂ ಕಿಶೋರ್ ಹಾಡುತ್ತಿದ್ದರೆ ಹೇಗಿರುತ್ತಿತ್ತು ಎಂಬ ಕುತೂಹಲ ಉಂಟಾಗುವುದು ಸಹಜ.  ಅದಕ್ಕೆ ಉತ್ತರ ಇಲ್ಲಿದೆ.  ಆರಾಧನಾ ಹಿಟ್ ಆದ ಮೇಲೆ  ಅದನ್ನು ಬಂಗಾಲಿಗೆ ಡಬ್ ಮಾಡಿದಾಗ  ಅದನ್ನು ಹಾಡಿದ್ದು ಕಿಶೋರ್ ಮತ್ತು ಆಶಾ.   ಅದನ್ನು ಮತ್ತು ಮೂಲ ಹಿಂದಿ ಹಾಡನ್ನು ಇಲ್ಲಿ ಕೇಳಬಹುದು.





***********
ಈ ಲೇಖನ 29-7-2017ರ ವಿಶ್ವವಾಣಿಯಲ್ಲೂ ಪ್ರಕಟವಾಗಿದ್ದು ಓದಲು ಚಿತ್ರದ ಮೇಲೆ ಕ್ಲಿಕ್ಕಿಸಿ.

http://epaper.vishwavani.news/admin/Publish/big-thumbnails/Vishwavani-ALL-29072017-13.gif

****************************************



ಈ ಲೇಖನವನ್ನು ಓದಿ ಬೆಂಗಳೂರಿನ ಮಹೇಶ್ ದೇಶ್‌ಪಾಂಡೆ ಅವರು ಧ್ವನಿರೂಪದಲ್ಲಿ ಕಳಿಸಿರುವ ಪ್ರತಿಕ್ರಿಯೆ ಇಲ್ಲಿದೆ.




13-8-2017ರ ವಿಶ್ವವಾಣಿಯಲ್ಲಿ ಪ್ರಕಟವಾದ  ಮೆಚ್ಚಿಗೆ ಪತ್ರ.
=

Sunday 23 July 2017

ಸಂತ ತುಕಾರಾಂ ಹಾಡುಗಳೆಷ್ಟು ಸ್ವಂತ



ಅಮೃತಕ್ಕು ತಾ ರುಚಿ  ಮತ್ತು ಅಮೃತಾಹುನೀ ಗೋಡ ದ್ವಿಭಾಷಾ ಹಾಡಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮರಾಠಿಯ ಪ್ರಸಿದ್ಧ ಗಾಯಕಿ ಮಾಣಿಕ್ ವರ್ಮಾ ಹಾಡಿದ ಸಂತ ನಾಮದೇವರ ಈ ರಚನೆಯನ್ನು ತುಕಾರಾಮರ ಅಭಂಗವಾಗಿ ಕನ್ನಡೀಕರಿಸಿ  ಸಂತ ತುಕಾರಾಂ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು.  ಎಸ್.ಜಾನಕಿ ಅವರು ಮಾಣಿಕ್ ವರ್ಮಾ ಅವರಿಗೆ ಸರಿ ಸಾಟಿಯಾಗಿಯೇ ಹಾಡಿದ ಈ ಹಾಡು ಜಯತು ಜಯ ವಿಠಲ, ಬೇಡ ಕೃಷ್ಣ ರಂಗಿನಾಟಗಳಂತೆ  ಬಲು ಜನಪ್ರಿಯವೂ ಆಯಿತು. 

ವಾಸ್ತವವಾಗಿ ಈ ಹಾಡು ಮಾತ್ರವಲ್ಲ, 1963ರಲ್ಲಿ ಬಿಡುಗಡೆಯಾದ ಕನ್ನಡ ಸಂತ ತುಕಾರಾಂ ಚಿತ್ರವೇ 1936ರಲ್ಲಿ ಪ್ರಭಾತ್ ಕಂಪನಿ ನಿರ್ಮಿಸಿದ್ದ ಅದೇ ಹೆಸರಿನ ಮರಾಠಿ ಸಿನಿಮಾವನ್ನು ಆಧರಿಸಿ ತಯಾರಾಗಿತ್ತು.   ಈ ಬಗ್ಗೆ ಎಲ್ಲೂ ಅಧಿಕೃತ ಉಲ್ಲೇಖ ಇಲ್ಲದಿದ್ದರೂ ಅಂತರ್ಜಾಲದಲ್ಲಿ ವೀಕ್ಷಣೆಗೆ ಲಭ್ಯವಿರುವ ಎರಡೂ ಚಿತ್ರಗಳಲ್ಲಿನ ಪಾತ್ರಗಳ  ವೇಷ ಭೂಷಣ, ದೃಶ್ಯ, ಸನ್ನಿವೇಶಗಳಲ್ಲಿರುವ ಸಾಮ್ಯ ಗಮನಿಸಿದಾಗ ಈ ಅಂಶ ಸ್ಪಷ್ಟವಾಗುತ್ತದೆ.  ಕೆಲವು ಭಾಗಗಳು ಕೊಲ್ಹಾಪುರದ ಶಾಲಿನಿ ಸಿನಿಟೋನ್ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡುದೂ ಚಿತ್ರದ ಮರಾಠಿ ನಂಟಿಗೆ ಪುಷ್ಟಿ ನೀಡುತ್ತದೆ. ಮರಾಠಿಯಲ್ಲಿ ವಿಷ್ಣು ಪಂತ್ ಪಗ್ನಿಸ್ ತುಕಾರಾಮನ ಪಾತ್ರದಲ್ಲಿ ಅಭಿನಯಿಸಿದ್ದು ಕೇಶವ ರಾವ್ ಭೋಲೆಯವರ ಸಂಗೀತ ನಿರ್ದೇಶನವಿತ್ತು. ಜಯತು ಜಯ ವಿಠಲಾ, ಬೇಡ ಕೃಷ್ಣ,  ಏಳಯ್ಯ ಮನ ಮೋಹನ ಮುಂತಾದ ಹಾಡುಗಳನ್ನು ಬಿಟ್ಟರೆ  ಆ ಮರಾಠಿ ಚಿತ್ರದ  ಅನೇಕ ಅಭಂಗಗಳನ್ನೇ  ಕನ್ನಡೀಕರಿಸಿ  ಬಳಸಿಕೊಳ್ಳಲಾಗಿತ್ತು.   ಒಂದು ಹಾಡು 1942ರ ಕಿಸ್ಮತ್ ಹಿಂದಿ ಚಿತ್ರದ ಹಾಡಿನ  ಧಾಟಿಯನ್ನೂ ಹೊಂದಿತ್ತು. ಮರಾಠಿ ಸಂತನ ಕಥೆಯಾದ್ದರಿಂದ ಅಭಂಗಗಳ ಧಾಟಿ ಮತ್ತು ಅನುವಾದದ ಅಳವಡಿಕೆ  ಸಹಜ. ಮುಂದೆ ಭಕ್ತ ಕುಂಬಾರದ ಮೂಳೆ ಮಾಂಸದ ತಡಿಕೆ ಹಾಡಿಗೂ ಜಿ.ಕೆ.ವೆಂಕಟೇಶ್ ಅವರು ಮರಾಠಿಯ ಕಾನಡಾ ರಾಜಾ ಪಂಢರಿಚಾ ಧಾಟಿಯನ್ನು ಬಳಸಿದ್ದಿದೆ. ಆದರೂ ಈ ಹಿಂದಿ ಧಾಟಿಯ ಬಳಕೆಗೆ ಕಾರಣ  ತಿಳಿಯದು. ಇರಲಿ, ವ್ಯಾಸೋಚ್ಛಿಷ್ಟಂ ಜಗತ್ಸರ್ವಂ ಎಂಬ ಉಕ್ತಿಯಂತೆ ನಾವು original ಎಂದು ತಿಳಿದುಕೊಂಡಿರುವುದೂ ಇನ್ಯಾವುದೋ ಮೂಲದಿಂದ ಸ್ಪೂರ್ತಿ ಪಡೆದಿರುವುದೇ ಆಗಿರುತ್ತದಲ್ಲವೇ.  ಈಗ ನಾವು ಕನ್ನಡದ ಕನ್ನಡಿಯಲ್ಲಿ ಪ್ರತಿಬಿಂಬಿತವಾದ  ಆ ಹಾಡುಗಳು ಮತ್ತು ಮೂಲ ಧಾಟಿಗಳನ್ನು ಜೊತೆ ಜೊತೆಯಾಗಿ ಕೇಳೋಣ. ಇವುಗಳಲ್ಲಿ ಕೆಲವನ್ನು ನೀವು ಇದುವರೆಗೆ ಕೇಳಿರದೆ ಇರುವ ಸಾಧ್ಯತೆಯೂ ಇದೆ.

ಅಮೃತಕ್ಕು ತಾ ರುಚಿ







ಎಂಥ ಕರುಣಾನಿಧಿಯೋ






ಸದಾ ಕಣ್ಣ ಮುಂದೆ






ಆದಿ ಬೀಜ ಒಂದೆನೇ





ಹೇ ಪಂಢರಯ್ಯ

ಇದು 1942ರ ಕಿಸ್ಮತ್ ಚಿತ್ರಕ್ಕಾಗಿ  ಕನ್ನಡದವರೇ ಆದ ಅಮೀರ್ ಬಾಯಿ ಕರ್ನಾಟಕಿ ಧ್ವನಿಯಲ್ಲಿದ್ದ ಹಾಡನ್ನಾಧರಿಸಿದ್ದು.






ಕನ್ನಡದ ಕನ್ನಡಿಯಲ್ಲಿನ ಈ ಪ್ರತಿಬಿಂಬಗಳ ನಂತರ ವಿಜಯ ಭಾಸ್ಕರ್ ಅವರು ಸ್ವಂತಿಕೆ ತೋರಿದ  ಕೆಲವು ಹಾಡುಗಳನ್ನು ಆಲಿಸೋಣ.

ಹೇ ಪಾಂಡುರಂಗ
ಪಿ.ಬಿ.ಶ್ರೀನಿವಾಸ್ ಅವರ ಧ್ವನಿಯಲ್ಲಿ ಶಿವರಂಜಿನಿ ರಾಗದ ಕಿರು ಹಾಡು.



ನಮ್ಮ ಮನೆ
ಸಂತ ತುಕಾರಾಂ ಚಿತ್ರ ಎಲ್.ಆರ್.ಈಶ್ವರಿಯವರಿಗೆ ತಮ್ಮ ಬಹುಮುಖ ಪ್ರತಿಭೆ ತೋರಿಸಲು ವೇದಿಕೆಯಾಗಿತ್ತು. ಈ ಚಿತ್ರದಲ್ಲಿ ಅವರೇ ಮುಖ್ಯ ಗಾಯಕಿ ಆಗಿದ್ದುದು. ಲೀಲಾವತಿಯವರ ಎಲ್ಲ ಹಾಡುಗಳನ್ನು ಅವರೇ ಹಾಡಿದ್ದರು. ಮೃದು ಮನಸ್ಸಿನ ಆದರೆ ಕಟು ಮಾತುಗಳ ಜೀಜಾ ಬಾಯಿಯ ಪಾತ್ರಕ್ಕೆ ಸೂಕ್ತವಾದ ಧ್ವನಿಯೇ ಆಗಿತ್ತದು.  ಅವರ ಧ್ವನಿಯಲ್ಲಿ ಜಾನಪದ ಶೈಲಿಯ ಈ ಹಾಡು ಆಲಿಸಿ.  ಇದೇ ಚಿತ್ರದಲ್ಲಿ ಅವರು ಹಾಡಿದ ಶಾಸ್ತ್ರೀಯ ಶೈಲಿಯ ಹಾಡಿಗಾಗಿ ಬರೇ ಕ್ಯಾಬರೆ ಅಲ್ಲ ನೋಡಿ.



ಕಣ್ಸನ್ನೆ ಗೈದ
ಎಸ್.ಜಾನಕಿ ಹಾಡಿರುವ ಮಹಾರಾಷ್ಟ್ರದ ಲಾವಣಿ ಶೈಲಿಯ  ಈ ಹಾಡಿನಲ್ಲಿ ಢೋಲಕಿಯ ಆಕರ್ಷಕ ನುಡಿತವಿದೆ.



ಜಯತು ಜಯ ವಿಠಲ
ಸರ್ವಕಾಲಿಕ ಹಿಟ್ ಆಗಿರುವ  ಈ ಹಾಡೂ ಮರಾಠಿ ಧಾಟಿಯನ್ನಾಧರಿಸಿದ್ದು ಎಂದು ಕೆಲವರು ತಪ್ಪಾಗಿ ಹೇಳುವುದುಂಟು.  ಮರಾಠಿ ಸಂತ ತುಕಾರಾಂ ಚಿತ್ರ ಈಗಲೂ ಅಂತರ್ಜಾಲದಲ್ಲಿ ಲಭ್ಯವಿದ್ದು ಅದರಲ್ಲಿ ಇದನ್ನು ಹೋಲುವ ಯಾವ ಹಾಡೂ ಇಲ್ಲ.  ಇದು ವಿಜಯಭಾಸ್ಕರ್ ಅವರದ್ದೇ ಸ್ವಂತ ಕಂಪೋಸಿಷನ್.



ಪೀಠಾಪುರಂ, ರಾಮದಾಸ್ ಮತ್ತು ಭೋಜ ರಾವ್ ಧ್ವನಿಯಲ್ಲಿರುವ  ಆ ಹಾಡಿನ ಕಾಪಿ ರಾಗಾಧಾರಿತ ವರ್ಷನ್ ಕೇಳಿದ್ದೀರಾ? ಇಲ್ಲಿದೆ ನೋಡಿ.    ಇದನ್ನು ಯಾರೋ ಶಾಸ್ತ್ರೀಯ ಸಂಗೀತದ ವಿದ್ವಾಂಸರು ಹಾಡಿದ್ದಾರೆ ಎಂದೇ ನಾನು ಇತ್ತೀಚಿನವರೆಗೂ ತಿಳಿದುಕೊಂಡಿದ್ದೆ. ಲಘು ಧಾಟಿಯ ಹಾಡುಗಳಿಗಷ್ಟೇ ಸೀಮಿತರಾಗಿದ್ದ  ಪೀಠಾಪುರಂ ನಾಗೇಶ್ವರ ರಾವ್  ಇಷ್ಟು ವಿದ್ವತ್‌ಪೂರ್ಣವಾಗಿ ಹಾಡಬಲ್ಲರೆಂಬ ಕಲ್ಪನೆಯೂ ನನಗಿರಲಿಲ್ಲ.









Monday 17 July 2017

ಮನದೇ ಮಹಾ ಬಯಕೆ



ಘಂಟಸಾಲ ಎಷ್ಟು ಒಳ್ಳೆಯ ಗಾಯಕರೋ ಅಷ್ಟೇ ಒಳ್ಳೆಯ ಸಂಗೀತ ನಿರ್ದೇಶಕರು ಕೂಡ. ನಾನು ಏಳನೇ ತರಗತಿಯಲ್ಲಿದ್ದಾಗ ಬೆಳ್ತಂಗಡಿಯ ಮರುಳ ಸಿದ್ಧೇಶ್ವರ ಟೂರಿಂಗ್ ಟಾಕೀಸಿನಲ್ಲಿ ಮೋಹಿನಿ ರುಕ್ಮಾಂಗದ ಎಂಬ ತೆಲುಗಿನಿಂದ ಕನ್ನಡಕ್ಕೆ ಡಬ್ ಆದ ಚಿತ್ರ ನೋಡಿದ್ದೆ. ಅಂದು ದೀಪಗಳು ಆರಿ ಜಾಹೀರಾತುಗಳು ಮತ್ತು ನ್ಯೂಸ್ ರೀಲ್ ಮುಗಿದು ಚಿತ್ರ ಆರಂಭವಾಗಿ ಟೈಟಲ್ಸ್ ಪರದೆಯ ಮೇಲೆ ಮೂಡುವ ಸಂದರ್ಭದಲ್ಲಿ  ಸಂಗೀತ - ಘಂಟಸಾಲ ಎಂಬ ಅಕ್ಷರಗಳು ಕಾಣಿಸುತ್ತಲೇ ಪುಳಕಿತನಾದ ಪ್ರೇಕ್ಷಕರಲ್ಲೋರ್ವ ‘ಹೋ! ಘಂಟಸಾಲನ ಸಂಗೀತ.  ಭಾರೀ ಎಡ್ಡೆ ಇಪ್ಪುಂಡುಯೇ’(ಘಂಟಸಾಲ ಅವರ ಸಂಗೀತ.  ತುಂಬಾ ಚೆನ್ನಾಗಿರುತ್ತದೆ) ಎಂದು ತುಳುವಿನಲ್ಲಿ ಹೇಳಿದ್ದು ಅವರ ಹೆಸರೇ ಮಾಧುರ್ಯಕ್ಕೊಂದು ಗ್ಯಾರಂಟಿಯಾಗಿತ್ತು ಎಂಬುದಕ್ಕೆ ಸಾಕ್ಷಿ.    ಅವರ ಮುಖ್ಯ ಕಾರ್ಯಕ್ಷೇತ್ರ ತೆಲುಗು ಚಿತ್ರರಂಗವಾದರೂ ಕನ್ನಡದಲ್ಲೂ ಅನೇಕ ಚಿತ್ರಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದ್ದು  ವಾಲ್ಮೀಕಿ ಅವುಗಳಲ್ಲೊಂದು.  


ವಾಲ್ಮೀಕಿ ಚಿತ್ರದ ಜಲಲ ಜಲಲ ಜಲ ಧಾರೆ  ಹಾಡನ್ನು ಅರಿಯದವರಿಲ್ಲ. ಆದರೆ ಇದೇ ಚಿತ್ರದಲ್ಲಿ ಮನದೇ ಮಹಾ ಬಯಕೆ ಎಂಬ ಉಲ್ಲಾಸ ಮತ್ತು ವಿಷಾದ ಎರಡೂ ಭಾವಗಳು ಮೋಹನ ರಾಗವೊಂದರಲ್ಲೇ ಅಭಿವ್ಯಕ್ತಗೊಂಡ ಸರಳ ಸುಂದರ  two in one ಹಾಡೊಂದು ಇರುವುದು ಅನೇಕರಿಗೆ ಮರೆತೇ ಹೋಗಿರಬಹುದು. ಘಂಟಸಾಲ ಅವರ ಕ್ಯಾಂಪಲ್ಲಿ ಹೆಚ್ಚು ಗುರುತಿಸಿಕೊಳ್ಳದ ಎಸ್. ಜಾನಕಿ ಅವರು  ಪಿ.ಲೀಲ ಜೊತೆಗೆ ಇದನ್ನು ಹಾಡಿದ್ದು ಒಂದು ವಿಶೇಷ. ಈ ಗಾಯಕಿಯರೀರ್ವರು ಜೊತೆಗೆ ಹಾಡಿದ್ದು ಬಲು  ಕಮ್ಮಿ.  ನನಗೆ ನೆನಪಿರುವ ಇವರ ಜಂಟಿಗಾಯನದ ಇನ್ನೊಂದು ಹಾಡು ನಂದಾದೀಪ ಚಿತ್ರದ ನಾಡಿನಂದ ಈ ದೀಪಾವಳಿ.

ಒಲವೆ ಜೀವನ ಸಾಕ್ಷಾತ್ಕಾರ, ಬರೆದೆ ನೀನು ನಿನ್ನ ಹೆಸರ ಇತ್ಯಾದಿ ಒಂದೇ ಹಾಡಿನ happy ಮತ್ತು sad ಆವೃತ್ತಿ ಇರುವ ಉದಾಹರಣೆಗಳು ಅನೇಕ ಸಿಗಬಹುದು.  ಆದರೆ ಒಂದೇ ಹಾಡಲ್ಲಿ ಒಂದೇ ರಾಗ ಒಂದೇ ಲಯವನ್ನು ಬಳಸಿಕೊಂಡು ಎರಡು ಭಾವಗಳ ಅಭಿವ್ಯಕ್ತಿ ಸುಲಭವಲ್ಲ.  ಅದನ್ನು ಗಾಯಕಿಯರಾದ ಎಸ್.ಜಾನಕಿ ಮತ್ತು ಪಿ.ಲೀಲ,  ಹಾಡು ಬರೆದ ಕಣಗಾಲ್ ಪ್ರಭಾಕರ ಶಾಸ್ತ್ರಿ ಮತ್ತು ಸಂಗೀತ ನಿರ್ದೇಶಕ ಘಂಟಸಾಲ ಇಲ್ಲಿ ಸಾಧಿಸಿ ತೋರಿಸಿದ್ದಾರೆ.

ಮ್ಯಾಂಡೊಲಿನ್ ಮತ್ತು ವೀಣೆಯ ಪಲುಕುಗಳೊಂದಿಗಿನ  ಜಾನಕಿ ಅವರ ಕಿರು ಆಲಾಪದೊಂದಿಗೆ ಹಾಡು ಆರಂಭವಾಗುತ್ತದೆ.  ಪಲ್ಲವಿಗೆ  ಹೊಂದಿಕೊಂಡಂತಿರುವ ಮೊದಲ ಚರಣಕ್ಕೆ ಮೊದಲು interlude ರೂಪದಲ್ಲಿ ಮ್ಯಾಂಡೊಲಿನ್‌ನ ಚಿಕ್ಕ bridge music ಮಾತ್ರ ಇದೆ.  ಈ ಭಾಗದ ಉಲ್ಲಾಸ ಭಾವವನ್ನು ಕಟ್ಟಿಕೊಟ್ಟದ್ದು  ಎಡ ಬಲಗಳ ಸುಂದರ ಸಮನ್ವಯದ ದ್ರುತ ತಬ್ಲಾ ನಡೆ.  ಚರಣದ ಸಾಲಿನ ಪುನರಾವರ್ತನೆಯ ನಡುವಿನ bridge music ಹಳೆಯ ಮರಾಠಿ ಹಾಡುಗಳನ್ನು ನೆನಪಿಸುತ್ತದೆ. ಕೆಲವರಿಗೆ remix  ರೂಪದಲ್ಲಿ  ಒಮ್ಮೆ ಬಲು ಪ್ರಸಿದ್ಧವಾಗಿದ್ದ ಸೈಯಾಂ ದಿಲ್ ಮೆಂ ಆನಾ ರೆ ಕೂಡ ನೆನಪಾದೀತು.  ಚರಣದ ಕೊನೆ ಭಾಗದ ಜಾನಕಿ ಅವರ ಆಲಾಪ ಭೂಪ್ ರಾಗದ ಕಿರು ಭಾಷ್ಯದಂತಿದೆ ಎಂದರೆ ತಪ್ಪಾಗಲಾರದು.

ಈ ಭಾಗ ಮುಗಿಯುತ್ತಲೇ ತಾರ್ ಶಹನಾಯಿ ಮತ್ತು ಡೋಲಿನ ವಿಳಂಬಿತ ಗತಿಯ ನುಡಿತ ಮುಂದಿನ ವಿಷಾದ ಭಾವಕ್ಕೆ ವೇದಿಕೆ ಸಿದ್ಧಪಡಿಸುತ್ತವೆ. ನುಡಿತದ ಗತಿ ಮಾತ್ರ ಬದಲಾಗಿ ಅದೇ ಲಯ ಮುಂದುವರೆಯುವುದು ಗಮನಿಸಬೇಕಾದ ಅಂಶ. ಮುಕೇಶ್ ಅವರಂತೆ ಪಿ.ಲೀಲ ಕೂಡ  ತನ್ನ ಧ್ವನಿಯಲ್ಲಿ inbuilt pathos ಹೊಂದಿದ್ದು ಭಾವಗಳ ವೈರುಧ್ಯ ಎದ್ದು ಕಾಣಲು ಅವರನ್ನು ಆಯ್ಕೆ ಮಾಡಿದ್ದು ಘಂಟಸಾಲ ಅವರ ಜಾಣ್ಮೆಯ ದ್ಯೋತಕ.  ನಡುವೆ ಅಲ್ಲಲ್ಲಿ ಜೊತೆಗೂಡುವ ತಾರ್ ಶಹನಾಯಿಯ ಮಧುರ ರೋದನ ಈ ಭಾವವನ್ನು ಮತ್ತಷ್ಟು ಎತ್ತಿಕೊಡುತ್ತದೆ.

ಮುಂದಿನ ಎರಡು ಚರಣಗಳು ಸರದಿಯಂತೆ ಎರಡೂ ಭಾವಗಳನ್ನು ಅಭಿವ್ಯಕ್ತಿಸಿ ಕೊನೆಗೆ ಇಬ್ಬರು ಗಾಯಕಿಯರು  ಜೊತೆಯಾಗಿ  ಪಲ್ಲವಿ ಭಾಗವನ್ನು ಹಾಡುತ್ತಾರೆ.

ಅರ್ಥಪೂರ್ಣ ಸಾಹಿತ್ಯ, ಆಕರ್ಷಕ ಧಾಟಿ, ಸೀಮಿತ ಸಂಖ್ಯೆಯ ವಾದ್ಯಗಳು, ಭಾವಕ್ಕೆ ತಕ್ಕ ಧ್ವನಿಗಳ ಆಯ್ಕೆ,  ಧ್ವನಿ ಮತ್ತು ವಾದ್ಯಗಳನ್ನು ಸ್ಪಷ್ಟವಾಗಿ ಆಲಿಸಲು ಸಾಧ್ಯವಾಗಿಸುತ್ತಿದ್ದ ಅಂದಿನ RCA ಧ್ವನಿಮುದ್ರಣ  ಈ ಹಾಡನ್ನು ಬಲು ಎತ್ತರಕ್ಕೊಯ್ದಿವೆ. ಚಿತ್ರಗೀತೆಗಳ ಸಿದ್ಧ ಮಾದರಿಗಿಂತ ಇದು ಕೊಂಚ ಭಿನ್ನವೂ ಹೌದು. 

ಸರಿಯೋ ಬೆಸವೋ ನಾನೇ ತಂದೆ ಎಂಬ ಸಾಲಿನಲ್ಲಿ ವಿಷಮ ಸಂಖ್ಯೆ ಎಂಬುದರ ಸಮಾನಾರ್ಥಕವಾದ ಬೆಸ ಪದವನ್ನು ತಪ್ಪು ಎಂಬರ್ಥದಲ್ಲಿ ಬಳಸಿರುವುದು ಒಂದು ವಿಶಿಷ್ಟ ಪ್ರಯೋಗ.

ಆದರ್ಶ ಸತಿ, ಶ್ರೀ ಕೃಷ್ಣ ಗಾರುಡಿ, ಅಮರಶಿಲ್ಪಿ ಜಕ್ಕಣ್ಣ, ಸತ್ಯ ಹರಿಶ್ಚಂದ್ರ, ವೀರ ಕೇಸರಿಗಳಂತೆ ವಾಲ್ಮೀಕಿ ಕೂಡ ಕನ್ನಡ ಮತ್ತು ತೆಲುಗಿನಲ್ಲಿ ಏಕ ಕಾಲಕ್ಕೆ ತಯಾರಾಗಿದ್ದು ಈ ಹಾಡಿನ ತೆಲುಗು ತದ್ರೂಪಿ ಕೂಡ ಇದೆ.



ಚಿತ್ರ : ವಾಲ್ಮೀಕಿ
ಗಾಯಕರು : ಎಸ್. ಜಾನಕಿ ಮತ್ತು ಪಿ.ಲೀಲ
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ : ಘಂಟಸಾಲ
***

ಮನದೆ ಮಹಾಬಯಕೆ
ಏನೇನೊ ರೂಪ ರೇಖೆ
ಮನದೆ ಮಹಾಬಯಕೆ

ನೀ ಬಂದಂದೆ ನಾ ಮೈ ಮರೆತೆ
ಆ ನೆನಪೊಂದೇ ನೂತನ ಕವಿತೆ
ನಿನ್ನೊಲವೇ ಮನೋರಮ್ಯ ಚರಿತೆ
ಮರೆಯದ ಮೋಹನ ಗೀತೆ

ಯಾರದೊ ಕಾಣೆ ಚಂದದ ಗೊಂಬೆ
ಸರಿಯೋ ಬೆಸವೋ ನಾನೇ ತಂದೆ
ದೈವವೆ ನೀಡಿದ ಸೌಭಾಗ್ಯವೆಂದೆ
ನಂಬಲೊ ಬಿಡಲೊ ನಾ ಮುಂದೆ

ಚಿತ್ತದೆ ನೆನೆದೆ ಚಿತ್ರವ ಬರೆದೆ
ಚಿತ್ತಜ ನಾನೇ ಪರವಶವಾದೆ
ನಾ ಮಣಿವೆ ಮನೋದೈವವೆಂಬೆ
ಪ್ರೇಮಿಸು ಅನುರಾಗವೇ

ಆಸೆಯ ದೀಪ ಆರದಂತೆ
ಅರಳಿದ ಜಾಜಿ ಬಾಡದಂತೆ
ಕಣ್ಣಿನ ಕಾಡಿಗೆ ನೀರಾಗದಂತೆ
ಕಣ್ಣಿಡು ಕಾಪಾಡು ಮಾತೆ




Sunday 9 July 2017

ಸತ್ಯೆನೆಲಾ ಪಾಕಿ


ಒಂದಾನೊಂದು ಊರಲ್ಲಿ ಒಬ್ಬ ಸೆಟ್ಟಿ ಇದ್ದ.  ಆತ ಒಮ್ಮೆ ತನ್ನ ಮನೆ ಹಿತ್ತಿಲಲ್ಲಿ ಹರಿವೆ ಬೆಳೆಸಿದ.  ಆದರೆ ಹರಿವೆಸೊಪ್ಪನ್ನೆಲ್ಲ ಒಂದು ಹಕ್ಕಿ ಬಂದು ತಿಂದು ಹಾಕ್ತಾ ಇತ್ತು.   ಒಂದು ದಿನ ಆತ ಮರೆಯಲ್ಲಿ ಹೊಂಚು ಹಾಕಿ ಸೊಪ್ಪು ತಿನ್ನಲು ಬಂದ ಹಕ್ಕಿಯನ್ನು ಗಬಕ್ಕನೆ ಹಿಡಿದು ನೀರು ಕೊತ ಕೊತ ಕುದೀತಿದ್ದ ಬಚ್ಚಲು ಮನೆ ಹಂಡೆಯಲ್ಲಿ ಹಾಕಿ ಸತ್ಯೆನೆಲಾ ಪಾಕಿ ಎಂದು ಕೇಳಿದ.

ಹ್ಯಾಂಗ್ ಸತ್ತೆ ಸೆಟ್ಟಿ
ಸೆಟ್ಟಿ  ಮನೆಗ್ ಹೋದೆ
ಹರಿವೆ ಸೊಪ್ಪು ತಿಂದೆ
ಬಿಸಿ ನೀರ್ ಮಿಂದೆ
ಎಂದು ಹೇಳಿ ಹಕ್ಕಿ ಹಂಡೆಯಿಂದ ಎದ್ದು ಹಾರಿ ಹೋಯಿತು.

ಮರುದಿನ ಯಥಾ ಪ್ರಕಾರ ಸೊಪ್ಪು ತಿನ್ನಲು ಬಂದ ಹಕ್ಕಿಯನ್ನು ಹಿಡಿದು ಬಚ್ಚಲೊಲೆಯಲ್ಲಿ ಹಾಕಿ ಸತ್ಯೆನೆಲಾ ಪಾಕಿ ಅಂದ.

ಹ್ಯಾಂಗ್ ಸತ್ತೆ ಸೆಟ್ಟಿ
ಸೆಟ್ಟಿ  ಮನೆಗ್ ಹೋದೆ
ಹರಿವೆ ಸೊಪ್ಪು ತಿಂದೆ
ಬಿಸಿ ನೀರ್ ಮಿಂದೆ
ಚಳಿ ಕಾಯ್ದೆ
ಅನ್ನುತ್ತಾ ಹಕ್ಕಿ ಒಲೆಯಿಂದ ಎದ್ದು  ಹಾರಿ ಹೋಯಿತು.

ಮರು ದಿನ ಪುನಃ ಬಂದ ಹಕ್ಕಿಯನ್ನು ಹಿಡಿದು ಹಗ್ಗದಲ್ಲಿ ಕಟ್ಟಿ ಪಕ್ಕದಲ್ಲಿ ಇದ್ದ ಒಣಗಿದ ಮರಕ್ಕೆ ನೇತಾಡಿಸಿ ಸತ್ಯೆನೆಲಾ ಪಾಕಿ ಅಂದ.

ಹ್ಯಾಂಗ್ ಸತ್ತೆ ಸೆಟ್ಟಿ
ಸೆಟ್ಟಿ  ಮನೆಗ್ ಹೋದೆ
ಹರಿವೆ ಸೊಪ್ಪು ತಿಂದೆ
ಬಿಸಿ ನೀರ್ ಮಿಂದೆ
ಚಳಿ ಕಾಯ್ದೆ
ಒಣಗಲ್ ಮರಕ್ಕೆ ನೇತಾಡ್ದೆ
ಎಂದು ಹೇಳಿ ಹಕ್ಕಿಯು ಹಗ್ಗದಿಂದ ಬಿಡಿಸಿಕೊಂಡು ಹಾರಿ ಹೋಯಿತು.

ಮರುದಿನವೂ ಬಂದ ಹಕ್ಕಿಯನ್ನು ಹಿಡಿದು ಬಟ್ಟೆ ಒಗೆಯುವ ಕಲ್ಲಿಗೆ ಅಪ್ಪಳಿಸಿ ಸತ್ಯೆನೆಲಾ ಪಾಕಿ ಎಂದ.

ಹ್ಯಾಂಗ್ ಸತ್ತೆ ಸೆಟ್ಟಿ
ಸೆಟ್ಟಿ  ಮನೆಗ್ ಹೋದೆ
ಹರಿವೆ ಸೊಪ್ಪು ತಿಂದೆ
ಬಿಸಿ ನೀರ್ ಮಿಂದೆ
ಚಳಿ ಕಾಯ್ದೆ
ಒಣಗಲ್ ಮರಕ್ಕೆ ನೇತಾಡ್ದೆ
ಅರೆಕಲ್ ಮೇಲೆ ಧಿಂ ಧಿಂ ಮಾಡ್ದೆ
ಅನ್ನುತ್ತಾ ಹಕ್ಕಿ ಕಲ್ಲಿಂದ ಎದ್ದು ಹಾರಿ ಹೋಯಿತು.

ಯಥಾಪ್ರಕಾರ ಮರುದಿನ ಮತ್ತೆ ಬಂದ ಹಕ್ಕಿಯನ್ನು ಹಿಡಿದು ಅಲ್ಲೇ ಪಕ್ಕದಲ್ಲಿ ಆತನ ಇಬ್ಬರು ಹೆಣ್ಣು ಮಕ್ಕಳು ಭತ್ತ ಕುಟ್ಟುತ್ತಿದ್ದ ಒನಕೆ ಅಡಿಯಲ್ಲಿ ಹಾಕಿ ಸತ್ಯೆನೆಲಾ ಪಾಕಿ ಅಂದ.

ಹ್ಯಾಂಗ್ ಸತ್ತೆ ಶೆಟ್ಟಿ
ಸೆಟ್ಟಿ ಮನೆಗ್ ಹೋದೆ
ಹರಿವೆ ಸೊಪ್ಪು ತಿಂದೆ
ಬಿಸಿ ನೀರ್ ಮಿಂದೆ
ಚಳಿ ಕಾಯ್ದೆ
ಒಣಗಲ್ ಮರಕ್ಕೆ ನೇತಾಡ್ದೆ
ಅರೆಕಲ್ ಮೇಲೆ ಧಿಂ ಧಿಂ ಮಾಡ್ದೆ
ಅಕ್ಕತಂಗೀರಿಗೆ ಭತ್ತ ಕುಟ್ಟಿ ಕೊಟ್ಟೆ
ಎಂದು ಹೇಳಿ ಹಕ್ಕಿ ಒನಕೆ ಅಡಿಯಿಂದ ಹಾರಿ ಹೋಯಿತು.

ಇದು ಸುಲಭಕ್ಕೆ ತೊಲಗುವ ಪೀಡೆಯಲ್ಲ ಎಂದೆಣಿಸಿದ ಸೆಟ್ಟಿ ಮರು ದಿನ ಬಂದ ಹಕ್ಕಿಯನ್ನು ಹಿಡಿದು ಕೊಂದು ಸಾರು ಮಾಡಿ ಅನ್ನದಲ್ಲಿ ಕಲಸಿ ತಿಂದುಬಿಟ್ಟು ಸತ್ಯೆನೆಲಾ ಪಾಕಿ ಅಂದ.

ಹ್ಯಾಂಗ್ ಸತ್ತೆ ಸೆಟ್ಟಿ
ಸೆಟ್ಟಿ ಮನೆಗ್ ಹೋದೆ
ಹರಿವೆ ಸೊಪ್ಪು ತಿಂದೆ
ಬಿಸಿ ನೀರ್ ಮಿಂದೆ
ಚಳಿ ಕಾಯ್ದೆ
ಒಣಗಲ್ ಮರಕ್ಕೆ ನೇತಾಡ್ದೆ
ಅರೆಕಲ್ ಮೇಲೆ ಧಿಂ ಧಿಂ ಮಾಡ್ದೆ
ಅಕ್ಕತಂಗೀರಿಗೆ ಭತ್ತ ಕುಟ್ಟಿ ಕೊಟ್ಟೆ
ಸೆಟ್ಟಿ ಹೊಟ್ಟೆ ಒಟ್ಟೆ ಮಾಡಿ ಪುರ್ರನೆ ಹಾರಿಬಿಟ್ಟೆ
ಅನ್ನುತ್ತಾ ಹಕ್ಕಿ ಸೆಟ್ಟಿಹೊಟ್ಟೆಗೆ ನಿಜಕ್ಕೂ ಒಟ್ಟೆ ಮಾಡಿ ಪುರ್ರನೆ ಹಾರಿ ಹೋಯಿತು.

ಸೆಟ್ಟಿಯ ಅವಸ್ಥೆ ಮುಂದೇನಾಯಿತೆಂಬುದರ ಬಗ್ಗೆ  ಮಾಹಿತಿ ಇಲ್ಲ !

********************

ಇದು ರಮ್ಯ ಬಾಲ್ಯಕಾಲದಲ್ಲಿ ನಮ್ಮನ್ನು ರಂಜಿಸುತ್ತಿದ್ದ ಅನೇಕ ಕಥೆಗಳಲ್ಲೊಂದು. ಇಲ್ಲಿ ಸರಪಣಿ ರೂಪದಲ್ಲಿರುವ ಘಟನೆಗಳಿಗೆ ಹೊಸ ಕೊಂಡಿ ಸೇರ್ಪಡೆಯಾದಾಗ  ಪ್ರತಿ ಸಲ ಹಿಂದಿನ ಘಟನೆಗಳೂ ಪುನರಾವರ್ತನೆಗೊಳ್ಳುವುದರಿಂದ ಕೇಳಿಸಿಕೊಳ್ಳುವ ಮಕ್ಕಳಿಗೆ ನೆನಪಿಟ್ಟುಕೊಳ್ಳಲು ಸುಲಭವಾಗುತ್ತದೆ. ಪರಿಸರದ ಅನೇಕ ವಸ್ತುಗಳ, ಚಟುವಟಿಕೆಗಳ ಪರಿಚಯವೂ ಆಗುತ್ತದೆ.

ಸಸೇಮಿರಾ ಸಂದರ್ಭದಲ್ಲಿ ಈಗಾಗಲೇ ಉಲ್ಲೇಖಿಸಿದಂತೆ ನಮ್ಮ ತಂದೆಯವರು ಗಹಗಹಿಸಿ ನಗುವ ರುಂಡಗಳ ಕಥೆ, ಮರದ ಮೇಲೆ ಬೆಳೆಯುವ ಸಿಹಿ ಅಪ್ಪಗಳ ಕಥೆ, ರಾಜ, ಇಲಿ ಮತ್ತು ಟೊಪ್ಪಿಯ ಕಥೆ ಮುಂತಾದವುಗಳನ್ನು ಹೇಳಿದರೆ ತಾಯಿಯವರು  ಕಬ್ಬಿನಮಾಡು, ದೋಸೆಯ ಹೆಂಚು, ಬೆಲ್ಲದ ಗೋಡೆಯ ಮನೆಯೊಳಗೆ ಮರಿ ಇಟ್ಟಿರುವ ಬೆಕ್ಕಿನ ಕಥೆ, ಸಪ್ತಸಾಗರದಾಚೆಯ ದ್ವೀಪದಲ್ಲಿರುವ ಪಚ್ಚೆ ಗಿಳಿಯೊಳಗೆ ಜೀವ ಇರುವ ರಾಕ್ಷಸನ ಕಥೆ, ಗುಬ್ಬಚ್ಚಿಯ ಮೊಟ್ಟೆಗಳನ್ನು ಕದ್ದು ತಿನ್ನುವ ಕಾಗೆಯ ಕಥೆಗಳನ್ನು ಹೇಳುತ್ತಿದ್ದರು. ಆದರೆ ಇವುಗಳೆಲ್ಲ ನಮ್ಮ ಮಾತೃಭಾಷೆ ಚಿತ್ಪಾವನಿ ಮರಾಠಿಯಲ್ಲೇ ಇರುತ್ತಿದ್ದವು.  ಆದರೆ ಈ ಸತ್ಯೆನೆಲಾ ಪಾಕಿ ಕಥೆಯ ಸರಪಣಿ ಮಾತ್ರ ಕನ್ನಡದಲ್ಲಿ ಇದ್ದು ಉಳಿದ ಭಾಗ ಮಾತ್ರ ಚಿತ್ಪಾವನಿ ಮರಾಠಿಯಲ್ಲಿ ಇರುತ್ತಿತ್ತು. ನಮ್ಮ ತಾಯಿಯವರೊಡನೆ ಪ್ರತಿ ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಕಥೆಯನ್ನು ಮೊದಲ ಬಾರಿ ಕೇಳಿದ್ದೆಂದು ನೆನಪು.


* ಸತ್ಯೆನೆಲಾ ಪಾಕಿ = ಸತ್ತಿ ಏನ್ಲಾ ಪಕ್ಷಿಯೇ

ಈ ಕಥೆಯನ್ನು ಆಡಿಯೊ ರೂಪದಲ್ಲಿ ಇಲ್ಲಿ ಕೇಳಬಹುದು.







Wednesday 5 July 2017

ವಿಜಯನಗರದ ವೀರ ಪುತ್ರ


ಮನದಲ್ಲಿ ಉಳಿದಂಥ ಹಾಡೊಂದೆ ಒಂದು
ಮರೆಯಾಗಿ ಹೋದದ್ದು ನೋಡೆಷ್ಟು ಎಂದು!

ಒಂದು ತಾಯಿಯ 5 ಮಕ್ಕಳಲ್ಲಿ ಒಬ್ಬ ಅತಿ ಪ್ರಸಿದ್ಧನಾದರೆ ಇನ್ನುಳಿದವರು ಎಷ್ಟೇ ಪ್ರತಿಭಾವಂತರಾಗಿದ್ದರೂ ಹಿನ್ನೆಲೆಯಲ್ಲೇ ಉಳಿಯುತ್ತಾರೆ.  ತಾರೆಗಳ ಸ್ವಯಂಪ್ರಭೆ ಎಷ್ಟಿದ್ದರೂ ಹುಣ್ಣಿಮೆ ಚಂದ್ರನ ಎದುರು ಅವು ಮಂಕಾಗುತ್ತವೆ.  ಅದೇ ರೀತಿ ಯಾವುದೇ  ಚಿತ್ರದ ಒಂದು ಹಾಡು ಅತಿ ಜನಪ್ರಿಯವಾದರೆ  ಉಳಿದವು ಕ್ರಮೇಣ ಮರೆಯಾಗಿ ಹೋಗುತ್ತವೆ.  ಹೀಗಾಗಿ ಬೇಡರ ಕಣ್ಣಪ್ಪ ಅಂದರೆ ಶಿವಪ್ಪ ಕಾಯೊ ತಂದೆ, ಭೂ ಕೈಲಾಸ ಅಂದರೆ ರಾಮನ ಅವತಾರ,  ನ್ಯಾಯವೇ ದೇವರು ಅಂದರೆ ಆಕಾಶವೆ ಬೀಳಲಿ ಮೇಲೆ, ಮಿಸ್ ಲೀಲಾವತಿ ಅಂದರೆ ದೋಣಿ ಸಾಗಲಿ, ಸಂತ ತುಕಾರಾಂ ಅಂದರೆ ಜಯತು ಜಯ ವಿಠಲ, ಸೊಸೆ ತಂದ ಸೌಭಾಗ್ಯ ಅಂದರೆ ರವಿವರ್ಮನ ಕುಂಚದ ಕಲೆ ಇತ್ಯಾದಿ ಮಾತ್ರ ನೆನಪಾಗುತ್ತವೆ ಹೊರತು ಆ ಚಿತ್ರಗಳ ಬೇರೆ ಹಾಡುಗಳಲ್ಲ. ಇದೇ ರೀತಿ ವಿಜಯನಗರದ ವೀರ ಪುತ್ರ ಅಂದೊಡನೆ ಅಪಾರ ಕೀರ್ತಿ ಗಳಿಸಿ ಮೆರೆವ ಹಾಡೊಂದೇ ಮನಸ್ಸಿಗೆ ಬರುವುದು.

1962ರಲ್ಲಿ ಬಿಡುಗಡೆಯಾದ ವಿಜಯನಗರದ ವೀರ ಪುತ್ರ ಚಿತ್ರದಲ್ಲಿ ಅಪಾರ ಕೀರ್ತಿ ಅಲ್ಲದೆ ಇನ್ನೂ 6 ಅತಿ ಮಧುರ ಹಾಡುಗಳಿವೆ. 60ರ ದಶಕದಲ್ಲಿ ಇವುಗಳೆಲ್ಲವೂ ಆಕಾಶವಾಣಿ ಬೆಂಗಳೂರು, ಧಾರವಾಡ ನಿಲಯಗಳಲ್ಲಿ ಕೇಳಲು ಸಿಗುತ್ತಿದ್ದರೂ ಕ್ರಮೇಣ ಜನಮಾನಸದಿಂದ ಮರೆಯಾದವು.

ವಿಜಯನಗರದ ವೀರ ಪುತ್ರ ಆರ್. ನಾಗೇಂದ್ರ ರಾಯರ home production ಆಗಿದ್ದು ಮೊದಲ ಬಾರಿಗೆ ಅವರ ಪುತ್ರ ಆರ್. ಎನ್. ಸುದರ್ಶನ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಆರ್.ಎನ್. ಕೃಷ್ಣ ಪ್ರಸಾದ್ ಛಾಯಾಗ್ರಹಣದ ಜವಾಬ್ದಾರಿ ವಹಿಸಿದರೆ ಕಥೆ, ಸಂಭಾಷಣೆ ಮತ್ತು ಹಾಡುಗಳು ಆರ್.ಎನ್. ಜಯಗೋಪಾಲ್ ಅವರದಾಗಿದ್ದವು.  ಸಂಗೀತ ನಿರ್ದೇಶನ ಮಾಡಿದವರು ದಕ್ಷಿಣದ ಶಂಕರ್ ಜೈಕಿಶನ್ ಎಂದು ಖ್ಯಾತರಾಗಿದ್ದ ವಿಶ್ವನಾಥನ್ ರಾಮಮೂರ್ತಿ.  ಇದಕ್ಕೂ ಮುಂಚೆ ಭಕ್ತ ಮಾರ್ಕಂಡೇಯ ಚಿತ್ರಕ್ಕೆ ಸಂಗೀತ ನೀಡಿದ್ದ ಅವರದ್ದು ವಿಶ್ವನಾಥನ್ ರಾಮಮೂರ್ತಿ ಹೆಸರಲ್ಲಿ ಇದು ಕನ್ನಡದ ಕೊನೆಯ ಚಿತ್ರ.  ಮುಂದೆ ರಾಮಮೂರ್ತಿ ಅವರಿಂದ ಬೇರ್ಪಟ್ಟು ಎಂ.ಎಸ್. ವಿಶ್ವನಾಥನ್ ಆಗಿ ಅನೇಕ ಕನ್ನಡ ಚಿತ್ರಗಳಿಗೆ  ಸಂಗೀತ ನೀಡಿದ್ದು ಗೊತ್ತೇ ಇದೆ.

ವಿಜಯನಗರದ ಬೀದಿ ಬದಿಗಳಲ್ಲಿ ಮಾರಲ್ಪಡುತ್ತಿದ್ದವು ಎನ್ನಲಾದ ಮುತ್ತು ರತ್ನಗಳಷ್ಟೇ ಮೌಲ್ಯಯುತವಾದ ಆ ಚಿತ್ರದ ಎಲ್ಲ ಹಾಡುಗಳನ್ನು ಈಗ ಕೇಳೋಣ. ಹಾಡುಗಳಲ್ಲಿ ಏಕತಾನತೆ ಬರದಂತಿರಲು   ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ, ಎಸ್.ಜಾನಕಿ, ಪಿ.ಲೀಲ, ಪೀಠಾಪುರಂ ನಾಗೇಶ್ವರ ರಾವ್,  ಎಲ್.ಆರ್.ಈಶ್ವರಿ, ಜಮುನಾರಾಣಿ ಮತ್ತು ಮನಮೋಹನ್ ಠಾಕುರ್ ಎಂಬ ನವ ಗಾಯಕ ಇವರನ್ನೊಳಗೊಂಡ ವೈವಿಧ್ಯಮಯ ಗಾಯಕ ಗಾಯಕಿಯರ ಗಡಣವನ್ನೇ ಬಳಸಿಕೊಳ್ಳಲಾಗಿತ್ತು. ಹಾಡು ಕೇಳುತ್ತಾ ಜೊತೆಯಲ್ಲಿ ಓದಿಕೊಂಡು ಆನಂದ ದ್ವಿಗುಣಪಡಿಸಿಕೊಳ್ಳಲು ಮೂಲ ಹಾಡಿನ ಪುಸ್ತಕ ಲಭ್ಯವಿಲ್ಲದ್ದರಿಂದ ನಾನೇ ಒಂದು ಪದ್ಯಾವಳಿಯನ್ನು  ವಿಶೇಷವಾಗಿ ಸಿದ್ಧಪಡಿಸಿದ್ದೇನೆ. ಕ್ಲಿಕ್ಕಿಸಿ scroll ಮಾಡಿ.





ಮಧುರ ಮೋಹನ ವೀಣಾ ವಾದನ
ಪಿ.ಸುಶೀಲ ಹಾಡಿರುವ ಇದು ವೀಣೆಯನ್ನೇ ಕೇಂದ್ರವಾಗಿಟ್ಟುಕೊಂಡು ರಚಿತವಾದ ಹಾಡು.   ಕೆಲವು ಸಾಲುಗಳ ಕೊನೆಯ ದೀರ್ಘ  sustain noteಗಳನ್ನು ಅವರು ಶ್ರುತಿಯೊಂದಿಗೆ ಲೀನಗೊಳಿಸಿದ ಪರಿ ಬಲು ಆಪ್ಯಾಯಮಾನ. ಒಂದು ಕಾಲದಲ್ಲಿ  ವಿಶ್ವನಾಥನ್ ರಾಮಮೂರ್ತಿ ಅವರ  ಸಹಾಯಕನಾಗಿದ್ದ ಜಿ.ಕೆ. ವೆಂಕಟೇಶ್ ಅವರೇ ಈ ಹಾಡಿನಲ್ಲಿ ವೀಣೆ ನುಡಿಸಿರಬಹುದು ಎಂದು ನನ್ನ ಊಹೆ.  ಪಖಾವಜ್, ತಬ್ಲಾಗಳ ಜತೆ  ಕೆಲವು ಕಡೆ ಹಾಡಿನ ನುಡಿಗಳನ್ನು ಯಥಾವತ್ತಾಗಿ ಅನುಕರಿಸುವ ತಬ್ಲಾ ತರಂಗದ ಪ್ರಯೋಗವೂ ಬಲು ಸುಂದರ.  ವೀಣೆಗೆ ಒಂಟಿತನ ಕಾಡಬಾರದೆಂದು ಎರಡನೆ ಚರಣದಲ್ಲಿ ವೇಣುವಿನ ಜತೆಯನ್ನೂ ಒದಗಿಸಲಾಗಿದೆ.  ಜಯಗೋಪಾಲ್ ಅವರು ಸಾಧ್ಯವಾದಲ್ಲೆಲ್ಲ ದ್ವಿತೀಯಾಕ್ಷರ ಪ್ರಾಸ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ.



ಎನ್ಮನ ಮಂದಿರದೇ
ಪಿ.ಬಿ.ಶ್ರೀನಿವಾಸ್ ಮತ್ತು ಪಿ. ಲೀಲ ಜೊತೆಯಾಗಿ ಹಾಡಿರುವುದು ಬಲು ಕಮ್ಮಿ. ಅವರಿಬ್ಬರ ಧ್ವನಿಯಲ್ಲಿ  ಈ ಹಾಡಲ್ಲದೆ  ನನಗೆ ಗೊತ್ತಿರುವುದು  ಗಂಡೊಂದು ಹೆಣ್ಣಾರು ಚಿತ್ರದ ಒಂದು ಅಣಕವಾಡು ಮತ್ತು ನಮೋ ನಮೋ ಶ್ರೀ ಕೃಷ್ಣ ಮುರಾರಿ ಎಂಬ ಕೃಷ್ಣ ಪಾರಿಜಾತ ಪ್ರಸಂಗದ ಹಾಡು ಮಾತ್ರ.  ಬಿ.ಸರೋಜಾದೇವಿ ಅವರಿಗೆ ಯಾವಾಗಲೂ ಪಿ.ಸುಶೀಲ ಅವರೇ ಹಾಡುವುದು ವಾಡಿಕೆ.  ಇಲ್ಲಿ ಅವರಿಗೆ ಪಿ.ಲೀಲ ಧ್ವನಿಯಾದದ್ದು ಇನ್ನೊಂದು ವಿಶೇಷ. ಈ ಹಾಡಿನಲ್ಲಿ ಸಾಹಿತ್ಯ ಭಾಗ ಹೆಚ್ಚಿಲ್ಲದಿದ್ದುದರಿಂದ ದೀರ್ಘ ಆಲಾಪನೆಗಳಿವೆ.  ಚರಣದ ನಂತರ ಪುನಃ ಪಲ್ಲವಿ ಬರುವಾಗ ಚರಣದ  ಕೊನೆಯ ಸಾಲನ್ನೇ ಪಲ್ಲವಿಯ ಮೊದಲ ಸಾಲಾಗಿ ಬಳಸಿಕೊಳ್ಳುವ ವಿಶೇಷ ತಂತ್ರ ನಾನು ಈ ಹಾಡಲ್ಲಿ ಮಾತ್ರ ಗಮನಿಸಿದ್ದು. ಇದು ವೇದ ಪಠಣದಲ್ಲಿ ಪ್ರಯೋಗಿಸಲ್ಪಡುವ ಜಟೆ ಎಂಬ ಪದ್ಧತಿಯನ್ನು ಹೋಲುತ್ತದೆ.   ಕನ್ನಡ ಚಿತ್ರಗಳಲ್ಲಿ ಆಗಿನ ಕಾಲಕ್ಕೆ ಅಪರೂಪವಾಗಿದ್ದ ಹವಾಯಿಯನ್ ಗಿಟಾರ್ ಬಳಕೆ ಈ ಹಾಡಲ್ಲಿದೆ. ಕೊಳಲೂ ಜತೆಗಿದೆ.  ತಾಳವಾದ್ಯವಾಗಿ ತಬ್ಲಾವನ್ನು ವೈವಿಧ್ಯಮಯವಾಗಿ ನುಡಿಸಲಾಗಿದೆ.  ಕೊನೆ ಭಾಗದಲ್ಲಿ  harmonic counter melody ರೂಪದ ಆಲಾಪ ಇದೆ..



ಮಧುಬನದೆ ಹೃದಯವಿದು
ಎಸ್.ಜಾನಕಿ ಧ್ವನಿಯಲ್ಲಿರುವ ಇದು ಜಾನಪದ, ಪಾಶ್ಚಾತ್ಯ ಮತ್ತು ಕಥಕ್ ನೃತ್ಯ ಸಂಗೀತ ಶೈಲಿಗಳ  ಸಂಗಮದಂತಿದೆ. ಅದಕ್ಕೆ ಅನುಗುಣವಾಗಿ ತಬ್ಲಾ, ಢೋಲಕ್, ವಿವಿಧ ರೀತಿಯ ಡೋಲುಗಳು, ಚೌಡಿಕಿಯಂಥ ಜಾನಪದ ತಾಳ ವಾದ್ಯ, ಗಿಟಾರ್, ಕೊಳಲು, ಮ್ಯಾಂಡೊಲಿನ್, ಸಾರಂಗಿ,  ಕಥಕ್ ನೃತ್ಯದ ಬೋಲ್‌  ಇತ್ಯಾದಿಗಳ ಸಂಗಮ ಇಲ್ಲಿದೆ.  ಕೃಷ್ಣನ ಕುರಿತಾದ ತಿಶ್ರ ನಡೆಯ ಈ ಹಾಡಲ್ಲಿ  ಇರುವುದು ದೀರ್ಘ ಪಲ್ಲವಿ ಮತ್ತು ಅದಕ್ಕಿಂತಲೂ ದೀರ್ಘವಾದ ಒಂದು ಚರಣ ಮಾತ್ರ.



ದಾರಿಲಿ ನಿಂತಿಹುದೇಕೆ
ಬೇರೆ ಯಾವ ಚಿತ್ರಗೀತೆಗಳಲ್ಲೂ ಕೇಳ ಸಿಗದಂತಹ  ವಿಶಿಷ್ಟ ರಿದಂ ಪಿ.ಸುಶೀಲ ಮತ್ತು ಮನಮೋಹನ್ ಠಾಕುರ್ ಎಂಬ ನವ ಗಾಯಕ ಹಾಡಿರುವ  ಈ ಹಾಡಿನಲ್ಲಿದೆ.  ಜಾನಪದ ಶೈಲಿಯ ವಾದ್ಯಗಳನ್ನೇ ಬಳಸಲಾಗಿದೆ.  ರಿದಂ ಜತೆಗೆ  whistleನಂತಹ ಸದ್ದು ಮೇಳೈಸಿರುವುದು ಹಾಡಿನ ಅಂದವನ್ನು ಹೆಚ್ಚಿಸಿದೆ. ಆ ಮೇಲೆ ಎಲ್ಲೂ ಹೆಸರು ಕೇಳಿ ಬರದ ಮನಮೋಹನ್ ಠಾಕುರ್  ಬದಲಿಗೆ ಪ್ರಸಿದ್ಧ ಗಾಯಕರು ಇದನ್ನು ಹಾಡುತ್ತಿದ್ದರೆ   ಇದೂ ಇತರ ಸಾಮಾನ್ಯ ಚಿತ್ರಗೀತೆಗಳ ಸಾಲಿಗೇ ಸೇರಿಬಿಡುತ್ತಿತ್ತೋ ಏನೋ. ಇಲ್ಲಿ ಸಂಗೀತ ನಿರ್ದೇಶಕರಾದ ವಿಶ್ವನಾಥನ್ ರಾಮಮೂರ್ತಿ ಅವರು  ಶಂಕರ್ ಜೈಕಿಶನ್ ಅವರ ಜಹಾಂ ಮೈಂ ಜಾತೀ ಹೂಂ ವಹೀಂ ಚಲೆ ಆತೆ ಹೋ  ಹಾಡಿನಿಂದ  ಸ್ಫೂರ್ತಿ ಪಡೆದಿದ್ದಾರೇನೋ ಅನ್ನಿಸುತ್ತದೆ.  ಚಿತ್ರದ ಸನ್ನಿವೇಶದಲ್ಲೂ ಅದೇ ರೀತಿ ನಾಯಕ ನಾಯಕಿ ಒಂದು ಪ್ರದರ್ಶನವನ್ನು ನೋಡುತ್ತಾ ಆ ಮೇಲೆ ತಾವೇ ಆ ಪಾತ್ರಗಳಾಗುವ ತಂತ್ರವನ್ನು ಉಪಯೋಗಿಸಲಾಗಿದೆ.  ಧಾರವಾಡ ಆಕಾಶವಾಣಿಯಿಂದ ಈ ಹಾಡು ಆಗಾಗ ಕೇಳಿ ಬರುತ್ತಿತ್ತು.



ವೈಯಾರ ತೋರುತ
ಆರ್.ನಾಗೇಂದ್ರರಾಯರು ಕನಸಿನ ಸನ್ನಿವೇಶವೊಂದನ್ನು ಸೃಷ್ಟಿಸಿ ತಮಗಾಗಿ ರೂಪಿಸಿಕೊಂಡ ಹಾಡು ಇದು.  ಹಳ್ಳಿಯೂರುಗಳ ವಾಲಗದವರು ಉಪಯೋಗಿಸುವ ಸಮ್ಮೇಳವನ್ನು ಹೋಲುವ ತಾಳವಾದ್ಯದ ಬಳಕೆ ಇದರ ವಿಶೇಷ.  ಕೆ. ಜಮುನಾರಾಣಿ ಸಂಗಡಿಗರೊಂದಿಗೆ ಹಾಡಿದ್ದಾರೆ.  ಧ್ವನಿಮುದ್ರಿಕೆಯಲ್ಲಿರುವ ಹಾಡಿನಲ್ಲಿ ಯಾವುದೇ prelude, interludeಗಳಿಲ್ಲದೇ ಇರುವುದು ಗಮನಾರ್ಹ. ಬಳಸಲಾದ ಕೋರಸ್ ಶಂಕರ್ ಜೈಕಿಶನ್ ಶೈಲಿಯನ್ನು ನೆನಪಿಸುತ್ತದೆ. ಬೆಂಗಳೂರು ಆಕಾಶವಾಣಿಯಿಂದ ಇದು ಆಗಾಗ ಬಿತ್ತರಗೊಳ್ಳುತ್ತಿತ್ತು.



ಮಾತಿನ ಮಲ್ಲ
ಎಲ್.ಆರ್.ಈಶ್ವರಿ ಮತ್ತು ಕನ್ನಡದ ಮನ್ನಾಡೆ ಪೀಠಾಪುರಂ ನಾಗೇಶ್ವರ ರಾವ್ ಧ್ವನಿಯಲ್ಲಿರುವ  ಈ ಹಾಡು ಬಲು ಉಲ್ಲಾಸ ಭರಿತ. ಎರಡೇ ಚರಣಗಳಾದರೂ ಅವು ಸುದೀರ್ಘವಾಗಿರುವುದರಿಂದ ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನಾವರಿಸಿತ್ತಿದು.   ನರಸಿಂಹರಾಜು ತಮ್ಮ ಉಬ್ಬು ಹಲ್ಲುಗಳನ್ನೇ ಬಂಡವಾಳವಾಗಿಟ್ಟುಕೊಂಡು ಮೆರೆದವರು.  ಆ ಹಲ್ಲುಗಳ ಉಲ್ಲೇಖವೂ ಇದರಲ್ಲಿದೆ. ಎರಡನೇ ಚರಣದ ಕವ್ವಾಲಿ  ಶೈಲಿ ಬಲು ಆಕರ್ಷಕ. ಹಾಡಿನ ಕೊನೆಗೆ ಬರುವ ಹೆಣ್ಣಿಗೆ ಗಂಡು ಗಂಡಿಗೆ ಹೆಣ್ಣು ಸುಖ ಸಂಸಾರದ ಎರಡು ಕಣ್ಣು ಎಂಬ ಮಾತೂ ಒಪ್ಪತಕ್ಕದ್ದೇ.     ಮ್ಯಾಂಡೊಲಿನ್, ಗಿಟಾರ್, ಕೊಳಲು, ಧೋಲಕ್, ಡೋಲುಗಳ ಸುಂದರ ಸಂಗಮವಿಲ್ಲಿದೆ.   ಖಳನಾಯಕರ ಅಡ್ಡೆಗೆ ನಾಯಕನ ಕಡೆಯವರು ಕಲಾವಿದರಂತೆ ವೇಷ ಮರೆಸಿ ಲಗ್ಗೆಯಿಡುವ ಸಂದರ್ಭದಲ್ಲಿದು ಬಳಕೆಯಾಗಿದೆ.  ಈ ಪರಂಪರೆ ಈಗಿನ ಚಿತ್ರಗಳಲ್ಲೂ ಮುಂದುವರೆದಿದ್ದು ಉಳಿದಂತೆ ಅತಿ ಬುದ್ಧಿವಂತರಾಗಿರುವ ಖಳನಾಯಕನ ಕಡೆಯವರಿಗೆ  ವೇಷಮರೆಸಿ ಬಂದ ನಾಯಕನ ಬಗ್ಗೆ ಕೊಂಚವೂ ಅನುಮಾನ ಯಾಕೆ ಮೂಡುವುದಿಲ್ಲ ಎಂದು ನನಗಂತೂ ಇನ್ನೂ ತಿಳಿದಿಲ್ಲ. ಈ ಹಾಡಿನ  ಮಾತಿನ ಮಲ್ಲ ಮತ್ತು ಹಿಂದಿ ಹಾಡೊಂದರ ಕಾನ್ ಮೆಂ ಝುಮ್ಕಾ ಸಾಲುಗಳು ನಿಮಗೆ ಒಂದೇ ರೀತಿ ಕೇಳಿಸುತ್ತವೆಯೇ?




ಅಪಾರ ಕೀರ್ತಿ
ಅಪಾರ ಪ್ರಸಿದ್ಧಿಯನ್ನು ಪಡೆದು ಚಿತ್ರದ ಇತರ ಹಾಡುಗಳು ಹಿನ್ನೆಲೆಗೆ ಸರಿಯುವಂತೆ ಮಾಡಿದ ಇದರ ಬಗ್ಗೆ ಹೆಚ್ಚೇನೂ ಹೇಳಬೇಕಾದ ಅಗತ್ಯವೇ ಇಲ್ಲ. ಯಾರಾದರೂ ಹಾಡಿಕೊಳ್ಳಬಹುದಾದ ಸರಳ ಟ್ಯೂನ್, ನಾಡಿನ ಹಿರಿಮೆಯನ್ನು ಸಾರುವ ಸಾಹಿತ್ಯ, ನೆನಪಿಟ್ಟುಕೊಳ್ಳಲು ಸುಲಭವಾದ  ಚಿಕ್ಕ ಚಿಕ್ಕ ಪ್ರಾಸಬದ್ಧ ಸಾಲುಗಳು, ಆಕರ್ಷಕ interlude, ಕವಾಯತಿಗೆ ಹೊಂದಿಕೆಯಾಗುವ rhythm pattern ಇತ್ಯಾದಿ ಅಂಶಗಳು    ಪಿ.ಬಿ.ಶ್ರೀನಿವಾಸ್ ಅವರಿಗೆ ಅಪಾರ ಕೀರ್ತಿ ತಂದುಕೊಟ್ಟ ಈ ಹಾಡಿನ ಜನಪ್ರಿಯತೆಗೆ ಕಾರಣವಾಗಿರಬಹುದು. ಹಿಂದಿನ ಕಾಲದಲ್ಲಿ  ಸಿನಿಮಾ ಸಂಗೀತಕ್ಕೆ ಶಾಲೆಗಳಲ್ಲಿ ಪ್ರವೇಶವಿಲ್ಲದಿದ್ದರೂ ಈ ಹಾಡು ಆ ನಿಷೇಧಕ್ಕೆ ಒಂದು ಅಪವಾದವಾಗಿ ಶಾಲಾ ವಾರ್ಷಿಕೋತ್ಸವಗಳಲ್ಲಿ ಲೇಜಿಮ್ ನೃತ್ಯಕ್ಕೆ ಬಳಕೆಯಾಗುತ್ತಿತ್ತು.   Interludeನಲ್ಲಿ  ಶಿಳ್ಳೆಯನ್ನು ಬಳಸಿಕೊಂಡದ್ದು ಆ ಕಾಲಕ್ಕೆ ಹೊಸ ಪ್ರಯೋಗವಾಗಿತ್ತು.  ಯುದ್ಧಕಾಲದಲ್ಲಿ ಕಹಳೆ ಮೊಳಗುವುದು ಸಾಮಾನ್ಯ.  ಆದರೆ ದಿಕ್ಕು ದಿಕ್ಕಿನಲ್ಲಿ  ಶಾಂತಿ ಸುಖದ  ಕಹಳೆಯನ್ನು ಕೇಳಿಸಿದ್ದು  ಜಯಗೋಪಾಲ್ ಅವರ ಕಡೆಯಿಂದ ಒಂದು ಹೊಸ ಪ್ರಯೋಗ.  ಇದರ ಎರಡನೇ ಚರಣದಲ್ಲಿ ಬರುವ ಒಂದು ಸಾಲನ್ನು ನಾನು ಬಹಳ ಸಮಯ ‘ಜೀವಿಗೆ ತಾ ನೀಡುವನು ಧರ್ಮ ದಧೀಕ್ಷ’ ಎಂದು ಕೇಳಿಸಿಕೊಳ್ಳುತ್ತಿದ್ದೆ.  ಇಂದ್ರನಿಗೆ ವಜ್ರಾಯುಧ ತಯಾರಿಸಲು ತನ್ನ ಬೆನ್ನೆಲುಬನ್ನು ನೀಡಿದ ದಧೀಚಿ ಮಹರ್ಷಿಗೆ ದಧೀಕ್ಷನೆಂಬ ಒಬ್ಬ ತಮ್ಮನಿರಬೇಕು.  ಆತ ಜೀವಿಗಳಿಗೆ ಧರ್ಮ ನೀಡುತ್ತಾನೆ ಅಂದರೆ ಬೋಧಿಸುತ್ತಾನೆ ಎಂದು ನನ್ನದೇ ಅರ್ಥವನ್ನೂ ಕಲ್ಪಿಸಿಕೊಳ್ಳುತ್ತಿದ್ದೆ. ಇಲ್ಲಿ ದೀಕ್ಷೆ ಪದವನ್ನು ಉತ್ತರ ಕರ್ನಾಟಕ ಶೈಲಿಯಲ್ಲಿ  ದೀಕ್ಷಾ ಎಂದು ಬಳಸಲಾಗಿದೆ ಎನ್ನುವುದು ನನ್ನ ತಲೆಗೆ ಹೊಳೆಯುತ್ತಿರಲಿಲ್ಲ!
ರೇಡಿಯೋದಲ್ಲಿ ಕೇಳುವಾಗ ಇರದ ಆಲಾಪದೊಂದಿಗೆ ಇಲ್ಲಿ ಹಾಡು ಆರಂಭವಾಗುತ್ತದೆ.