Monday 15 April 2019

ಗಗನವು Yellow ಭೂಮಿಯೂ Yellow!



ಇದು ಕಾಮಾಲೆ ಕಣ್ಣಿನವರಿಗೆ ಕಂಡದ್ದಲ್ಲ. Flower ಒಂದು near ಬಂದು touchಇತು ಎನ್ನೆದೆಯ ಎಂದೆಲ್ಲ ಹಾಡಿಕೊಳ್ಳುವ ಎಷ್ಟೋ ವರ್ಷ ಮೊದಲೇ ಗೆಜ್ಜೆಪೂಜೆ ಚಿತ್ರದ ಗಗನವು ಎಲ್ಲೋ ಹಾಡನ್ನು ಕೇಳುವಾಗ ನನ್ನ ಮನಸ್ಸಿನಲ್ಲಿ ಮೂಡುತ್ತಿದ್ದ ಚಿತ್ರ ಇದು! ಸಂಜೆಯ ಹೊತ್ತಲ್ಲಿ ಗಗನವು yellow ಆಗಬಹುದು.  ಆದರೆ ಭೂಮಿಯು brown ಆಗಬೇಕಲ್ಲ ಎಂದೂ ನಾನು ತಮಾಷೆಗಾಗಿ ಹೇಳುವುದಿತ್ತು.  1970ರ ಚಿತ್ರಗಳಲ್ಲೆಲ್ಲ ಒಂದಕ್ಕಿಂತ ಹೆಚ್ಚು ಒಳ್ಳೊಳ್ಳೆ ಹಾಡುಗಳಿದ್ದರೂ ಅರಸಿನ ಕುಂಕುಮದ ಇಳಿದು ಬಾ ತಾಯಿ, ಬಾಳು ಬೆಳಗಿತು ಚಿತ್ರದ ಚೆಲುವಾದ ಮುದ್ದಾದ,  ಭೂಪತಿ ರಂಗದ ಹಸುವಿನ ವೇಷದ ಹೆಬ್ಬುಲಿ ನೀನು, ದೇವರ ಮಕ್ಕಳು ಚಿತ್ರದ ಓ ಅಯ್ಯಾ ಅಮ್ಮಯ್ಯಾ, ಬೋರೆ ಗೌಡ ಬೆಂಗಳೂರಿಗೆ ಬಂದ ಚಿತ್ರದ ಅಲ್ಲಿ ಇಲ್ಲಿ ಹುಡುಕುತ,  ಲಕ್ಷ್ಮೀ ಸರಸ್ವತಿಯ ಚಂದಿರ ಭೂಮಿಗೆ, ಮಿ ರಾಜಕುಮಾರ್ ಚಿತ್ರದ ಗಂಗಿ ನಿನ್ ಮೇಲ್ ನಂಗೆ, ನನ್ನ ತಮ್ಮದ ಇದೇ ಹೊಸ ಹಾಡು, ಪರೋಪಕಾರಿಯ ಹೋದರೆ ಹೋಗು ನನಗೇನು, ಸೀತಾ ಚಿತ್ರದ ಬರೆದೆ ನೀನು ಮತ್ತು ಮದುವೆಯ ಈ ಬಂಧ, ಕೃಷ್ಣದೇವರಾಯದ ತಿರುಪತಿ ಗಿರಿವಾಸ, ಬಹು  ಜನ್ಮದ, ಶರಣು ವಿರೂಪಾಕ್ಷ ಮತ್ತು ಕೃಷ್ಣನ ಹೆಸರೇ ಲೋಕಪ್ರಿಯ ಮುಂತಾಗಿ ಒಂದು ಚಿತ್ರದ ಒಂದೋ ಎರಡೋ ಹಾಡುಗಳು ಮಾತ್ರ ಹೆಚ್ಚಾಗಿ ರೇಡಿಯೋದಲ್ಲಿ ಕೇಳಿಬರುತ್ತಿದ್ದವು.  ಆದರೆ ಅದೇ ವರ್ಷ ಬಿಡುಗಡೆಯಾದ ಗೆಜ್ಜೆಪೂಜೆಯ ಎಲ್ಲ ಆರು ಹಾಡುಗಳು ಪದೇ ಪದೇ ಪ್ರಸಾರವಾಗುತ್ತಿದ್ದುದು ವಿಶೇಷ. ವಿಜಯನಾರಸಿಂಹ ಅವರ ಪ್ರೌಢ ಸಾಹಿತ್ಯದ ಪಂಚಮ ವೇದದ ಎರಡೂ ವರ್ಶನ್ ಮತ್ತು ಮಗುವೇ ನಿನ್ನ ಹೂ ನಗೆ,  ಉದಯ ಶಂಕರ್ ಅವರ ಹೆಜ್ಜೆ ಹೆಜ್ಜೆಗೂ ಹಾಗೂ ಜಯಗೋಪಾಲ್ ಅವರ ಲೇಖನಿಯಿಂದ ಮೂಡಿದ ಗಗನವು ಎಲ್ಲೋ ಹಾಗೂ ಚಿತ್ರದಲ್ಲಿ ಬಳಸಿಕೊಳ್ಳದ ಒಂದು ದಿನ ರಾತ್ರಿಯಲಿ ಕಂಡೆ ಕನಸೊಂದ ಇವೆಲ್ಲವೂ ಸಮಾನ ಜನಪ್ರಿಯತೆ ಗಳಿಸಿದ್ದವು. ಶಾರದೆಯನ್ನು  ಕುರಿತಾದ ಅಷ್ಟೊಂದು ಚಂದದ ಈ ಹಾಡನ್ನು ಬಳಸಿಕೊಳ್ಳದಿರಲು ಕಾರಣವೇನಿರಬಹುದೆಂಬ ಕುತೂಹಲ ಬಹಳ ಕಾಲದಿಂದ ನನ್ನಲ್ಲಿತ್ತು.  ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭೇಟಿಯಾದ ಆ ಹಾಡಿನ ಗಾಯಕಿ ಬಿ.ಕೆ. ಸುಮಿತ್ರಾ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ ಚಿತ್ರದ ನಾಯಕಿಯ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡ ಬಾಲಕಿಗೆ ಹಾಡಿಗೆ ಅಭಿನಯಿಸುವಷ್ಟು ಲಯ ಜ್ಞಾನ ಇಲ್ಲದಿದ್ದುದೇ ಇದಕ್ಕೆ ಕಾರಣ ಎಂದರು.  ಚಿತ್ರದಲ್ಲಿ ಇಲ್ಲದಿದ್ದರೇನಂತೆ. ಜಯಗೋಪಾಲ್ ಅವರ ಸಾಹಿತ್ಯ ಆ ಹಾಡನ್ನು ಕೇಳಿದಾಗ ನಮ್ಮ ಮನಸ್ಸಲ್ಲಿ ಶಾರದೆಯ ದಿವ್ಯಸ್ವರೂಪ ತಾನಾಗಿಯೇ ಮೂಡುವಂತೆ ಮಾಡಿದೆ.  ಈ ಚಿತ್ರಕ್ಕೆ ಅನೇಕ ಪ್ರಶಸ್ತಿಗಳು ದೊರಕಿದ್ದಲ್ಲದೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪ್ರದರ್ಶಿತವಾಗಿತ್ತು.  ಚಲನಚಿತ್ರೋತ್ಸವಗಳಿಗೆ ಕಳಿಸುವ ಚಿತ್ರಗಳಿಂದ ಸಾಮಾನ್ಯವಾಗಿ ಹಾಡುಗಳನ್ನು ಕತ್ತರಿಸಲಾಗುತ್ತದೆ.  ಆದರೆ ಈ ಚಿತ್ರವನ್ನು ಕಳಿಸುವಾಗ ವಿಶೇಷವಾಗಿ ಪಂಚಮ ವೇದದ ಪಿ.ಬಿ.ಎಸ್ ವರ್ಶನನ್ನು ಉಳಿಸಿಕೊಳ್ಳಲಾಗಿತ್ತಂತೆ.  ‘ವಿದೇಶದಲ್ಲಿ ಮೊತ್ತ ಮೊದಲ ಬಾರಿಗೆ ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ ಮೊಳಗಲಿರುವ ಕನ್ನಡ ಹಾಡು’ ಎಂಬ ಶೀರ್ಷಿಕೆಯ ಸುದ್ದಿ ಆಗ ಪತ್ರಿಕೆಗಳಲ್ಲೆಲ್ಲ ಪ್ರಕಟವಾಗಿತ್ತು.  ಈ ಚಿತ್ರದಲ್ಲಿ ವಿವಿಧ ಭಾವಗಳ ನಾಲ್ಕು ಹಾಡುಗಳನ್ನು ಹಾಡುವ ಅವಕಾಶ ಎಸ್. ಜಾನಕಿ ಅವರಿಗೆ ಸಿಕ್ಕಿತು.

ಆಗ ನಾನು ಉಜಿರೆ ಕಾಲೇಜಲ್ಲಿ ಓದುತ್ತಿದ್ದೆ.  ಸಮೀಪದ ಬೆಳ್ತಂಗಡಿಯಲ್ಲಿ  ಸಿನಿಮಾ ಟಾಕೀಸ್ ಇದ್ದರೂ ಒಂದೇ ಒಂದು ಸಿನಿಮಾ ಅಲ್ಲಿ ನೋಡಬಾರದು ಎಂದು ನನಗೆ ನಾನೇ  ನಿರ್ಬಂಧ ವಿಧಿಸಿಕೊಂಡಿದ್ದೆ.  ಆದರೆ  ಗೆಜ್ಜೆಪೂಜೆ ಚಿತ್ರ ಬಂದಾಗ ಆ ನಿರ್ಬಂಧ ತಾನಾಗಿ ಸಡಿಲವಾಯಿತು.  ಮಟ ಮಟ ಮಧ್ಯಾಹ್ನ  ಸೈಕಲ್ ತುಳಿದುಕೊಂಡು ಹೋಗಿ ಆ ಚಿತ್ರದ ಮ್ಯಾಟಿನಿ ಶೋ ನೋಡಿದೆ.  ಚಿತ್ರ ನೋಡಿ ಬಂದ ಮೇಲೆ ಬಹಳ ದಿನಗಳು ಬೆಂಬಿಡದ ಗುಂಗಾಗಿ ನನ್ನನ್ನು ಕಾಡಿದ ಹಾಡು ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ.  ಕಥೆಗೆ ನೇರವಾಗಿ ಸಂಬಂಧಿಸಿದ್ದು ಮನಸ್ಸಿಗೆ ನಾಟುವಂಥ ರೀತಿಯಲ್ಲಿ ಚಿತ್ರೀಕರಿಸಲ್ಪಟ್ಟದ್ದು ಇದಕ್ಕೆ ಕಾರಣ ಇರಬಹುದು.

ಈಗಲೂ ಗೆಜ್ಜೆಪೂಜೆ ಚಿತ್ರದ  ಎಲ್ಲ ಹಾಡುಗಳು ಆಸಕ್ತಿಯಿಂದ ಕೇಳಲ್ಪಡುತ್ತವಾದರೂ ಗಗನವು ಎಲ್ಲೋ ಇತ್ತೀಚಿನ ದಿನಗಳಲ್ಲಿ  ಹೆಚ್ಚು ಚಲಾವಣೆಯಲ್ಲಿದೆ.  ಟಿ.ವಿ. ರಿಯಾಲಿಟಿ ಶೋಗಳು ಆರಂಭವಾದ ಮೇಲಂತೂ ಸ್ಪರ್ಧಿಗಳ ನೆಚ್ಚಿನ ಹಾಡಾಗಿದೆ ಇದು. ಇದರ ಜನಪ್ರಿಯತೆ ಯಕ್ಷಗಾನ ರಂಗಕ್ಕೂ ವ್ಯಾಪಿಸಿ ಅಗ್ನಿನಕ್ಷತ್ರ ಎಂಬ ಪ್ರಸಂಗದಲ್ಲಿ ಇದರ ಅಂಶವನ್ನು ಅಳವಡಿಸಲಾಗಿದೆ!  ಮಂದ್ರದ ನಿಷಾದದಿಂದ ತಾರ ಸಪ್ತಕದ ಪಂಚಮದ ವರೆಗಿನ ಹರಹು ಇರುವ ಈ ಹಾಡಿನ ರೇಂಜ್ ಏನೂ ಹೆಚ್ಚಿಲ್ಲ. ಆದರೂ D sharp ಶ್ರುತಿಯಲ್ಲಿ ಮಧ್ಯ ಮತ್ತು ತಾರ ಸಪ್ತಕಗಳಲ್ಲೇ ಹೆಚ್ಚು ಸಂಚಾರವಿರುವುದರಿಂದ ಹಾಗೂ ತಾರ ಪಂಚಮಕ್ಕೆ ಹೋಗಿ sustain ಮಾಡಬೇಕಾದ ದೀರ್ಘ ಆಲಾಪ ಇರುವುದರಿಂದ ಹೆಚ್ಚಿನವರಿಗೆ ಈ ಹಾಡಿನ ನಿರ್ವಹಣೆ ಸವಾಲೆನಿಸುತ್ತದೆ. ಈ ಆಲಾಪ ಹಾಡಿನ ಹೈಲೈಟ್ ಕೂಡ.  ಉಳಿದಂತೆ ಈ ಹಾಡಿನ ಸ್ವರ ಸಂಚಾರ ಸರಳ ಮತ್ತು ಸುಲಭ.

ಲಘು ಧಾಟಿಯ ಸಿನಿಮಾ ಹಾಡುಗಳಿಗೆ ಶಾಸ್ತ್ರೀಯ ಸಂಗೀತದ ಕಠಿಣ ಕಟ್ಟುಪಾಡುಗಳೇನೂ ಇರುವುದಿಲ್ಲ. ಸ್ವತಃ ಸಂಗೀತ ನಿರ್ದೇಶಕರೂ ಸಾಮಾನ್ಯವಾಗಿ ಇಂಥ ರಾಗ ಬಳಸಿ ಈ ಹಾಡು ಮಾಡಿದೆ ಎಂದು ಹೇಳುವುದಿಲ್ಲ. ಆದರೂ ಇಂಥ ಮಾಧುರ್ಯ ಭರಿತ ಹಾಡು ಕಿವಿಗೆ ಬಿದ್ದಾಗ ಇದು ಯಾವ ರಾಗವನ್ನು ಆಧರಿಸಿರಬಹು ಎಂಬ  ಜಿಜ್ಞಾಸೆ  ಸಂಗೀತಾಸಕ್ತರಲ್ಲಿ ಮೂಡುತ್ತದೆ.  ಮೇಲ್ನೋಟಕ್ಕೆ ಈ ಗಗನವು ಎಲ್ಲೋ ಹಾಡು  ಭೀಮ್ ಪಲಾಸ್ ಅರ್ಥಾತ್ ಅಭೇರಿ ರಾಗದಲ್ಲಿದೆ ಎಂದು ಅನ್ನಿಸಿದರೂ ಸೂಕ್ಷ್ಮವಾಗಿ  ಪರಿಶೀಲಿಸಿದಾಗ  ಧೈವತ ಸ್ವರ ಇದರಲ್ಲಿ ಎಲ್ಲೂ ಇಲ್ಲದಿರುವುದು ಗಮನಕ್ಕೆ ಬರುತ್ತದೆ.  ವಾಸ್ತವವಾಗಿ ಇದು ಸ ಗ2 ಮ1 ಪ ನಿ2 ಸ - ಸ ನಿ2 ಪ ಮ1 ಗ2 ರಿ2 ಸ ಸ್ವರಗಳನ್ನು ಹೊಂದಿದ ಅಗ್ನಿಕೋಪ ಎಂಬ ಖರಹರಪ್ರಿಯ ಜನ್ಯ ರಾಗವನ್ನು ಹೋಲುತ್ತದೆ.  ಒಟ್ಟಲ್ಲಿ ಸಿನಿಮಾ ಹಾಡೊಂದು  ಇಂಥ ರಾಗದಲ್ಲಿದೆ ಎಂದು ನಿರ್ದಿಷ್ಟವಾಗಿ ಹೇಳುವುದಕ್ಕಿಂತ ಹೀಗೊಂದು ರಾಗದ ಛಾಯೆ ಇದೆ ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳುವುದು ಒಳ್ಳೆಯದು ಎಂದು ನನ್ನ ಅಭಿಪ್ರಾಯ.

ಪಂಖ್ ಹೋತೇ ತೊ ಉಡ್ ಆತೀ ರೇ ಹಾಡಿನ ಲಯ ಮತ್ತು ಆಲಾಪ ಹಾಗೂ ಕಾಂಟೋಂಸೆ ಖೀಂಚ್ ಕೆ ಯೆ ಆಚಲ್ ಹಾಡಿನ ಉತ್ಸಾಹಗಳನ್ನು ಮನದಲ್ಲಿರಿಸಿ ವಿಜಯಭಾಸ್ಕರ್ ಈ ಹಾಡನ್ನು ಸಂಯೋಜಿಸಿರಬಹುದು. ಎಸ್. ಜಾನಕಿ ಜೊತೆಗೆ ಹಾಡು ಪೂರ್ತಿ ತಬ್ಲಾವೂ ವಿಜೃಂಭಿಸಿದೆ. ಇಂಥ ಶ್ರೀಮಂತ ಸಂಯೋಜನೆಗಳನ್ನು ತೆರೆಯ ಮೇಲೆ ನಿರ್ವಹಿಸುವುದು ನಿರ್ದೇಶಕರಿಗೆ ಮತ್ತು ನಟರಿಗೆ ಯಾವಾಗಲೂ ಒಂದು ಸವಾಲು. ಈ ಹಾಡಿನಲ್ಲಿರುವಂತೆ   ಸುದೀರ್ಘ interludeಗಳು ಇದ್ದರಂತೂ ಅವರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ.  ನಿರ್ಮಾಪಕರ ಬಜೆಟ್ ಅಂಕುಶ ಬೇರೆ ಇರುತ್ತದೆ.  ಆದ್ದರಿಂದ ಎಷ್ಟೋ ಸಲ ತೆರೆಯ ಮೇಲೆ ತೋರಿಸಿದ್ದಕ್ಕಿಂತ ನಮ್ಮ ಕಲ್ಪನೆಯ ದೃಶ್ಯಗಳು ಹೆಚ್ಚು ರಮ್ಯವಾಗಿರುತ್ತವೆ.  ಈ ಹಾಡೂ ಇದಕ್ಕೆ ಹೊರತಲ್ಲ.

ನಾವು ರೇಡಿಯೋದಲ್ಲಿ ಕೇಳುತ್ತಾ ಬಂದಿರುವ ಧ್ವನಿಮುದ್ರಿಕೆಯಲ್ಲಿರುವ ಹಾಡಿಗೂ ಚಿತ್ರದಲ್ಲಿ ಅಳವಡಿಸಿರುವ ವರ್ಶನ್ನಿಗೂ ಸ್ವಲ್ಪ ವ್ಯತ್ಯಾಸವಿದೆ.  ಧ್ವನಿಮುದ್ರಿಕೆಯಲ್ಲಿರುವ prelude ಚಿತ್ರದಲ್ಲಿಲ್ಲ.  ಅಲ್ಲಿ ನಾಯಕನ ನಾತಿಚರಾಮಿ ಎಂಬ ವಚನಕ್ಕೆ  ಹಾಡನ್ನು ನೇರವಾಗಿ ಜೋಡಿಸಲಾಗಿದೆ.  ಚಿತ್ರದಲ್ಲಿ ಎರಡನೆ ಚರಣದ ಸಾಲುಗಳೂ bridge musicನೊಂದಿಗೆ ಪುನರಾವರ್ತನೆ  ಆಗುತ್ತವೆ.  ‘ವಚನವ ಕೇಳಿ’ ಸಾಲು ಎಲ್ಲ ಕಡೆ ಗ2 ಪ ನಿ2 ಪ ನೀ2 ನೀ2 ಇದ್ದದ್ದು  ಚಿತ್ರದ ವರ್ಶನ್ನಿನಲ್ಲಿ ಕೊನೆಗೆ ಸ ಗ2 ಪ ಮ2 ಪಾ ಪಾ ಎಂದು ಮಾರ್ಪಾಟಾಗುತ್ತದೆ.

ಈ ಎರಡೂ ಅವತರಣಿಕೆಗಳನ್ನು ಇಲ್ಲಿ ಆಲಿಸಬಹುದು.






ಸಂಗೀತ : ವಿಜಯಭಾಸ್ಕರ್
ರಚನೆ : ಆರ್.ಎನ್. ಜಯಗೋಪಾಲ್
ಗಾಯಕಿ : ಎಸ್. ಜಾನಕಿ


ಗಗನವು ಎಲ್ಲೊ ಭೂಮಿಯು ಎಲ್ಲೊ
ಒಂದೂ ಅರಿಯೇ ನಾ
ಎನಗೆ ನೀ ನೀಡಿದ ವಚನವ ಕೇಳಿ
ತೇಲಿ ತೇಲಿ ಹೋದೆ ನಾ 

ನೂತನ ಜಗದಾ ಬಾಗಿಲು ತೆರೆಯಿತು
ಮನವನು ಕವಿದಾ ತೆರೆಯೂ ಸರಿಯಿತು
ಕಂಗಳು ಒಲವಿನ ಕಥೆಯಾ ಬರೆಯಿತು
ಕಾಲ್ಗಳು ಹರುಷದಿ ಕುಣಿಕುಣಿದಾಡಿತು 

ಪ್ರೇಮವಸಂತದ ರಾಗವು ಮಿಡಿಯಿತು
ಆಶಾಗಾನದ ಪಲ್ಲವಿ ಹಾಡಿತು
ನವಜೀವನದ ಜ್ಯೋತಿಯು ಬೆಳಗಿತು
ಉಲ್ಲಾಸದಿ ಮನ ನಲಿನಲಿದಾಡಿತು
***********************

ಈ ಹಾಡನ್ನು ಸಿನಿಮಾದಲ್ಲಿ ನೋಡಿಯೇ ಇರುತ್ತೀರಿ. ಈಗ ಈ  ಕಾಲ್ಪನಿಕ  ವೀಡಿಯೊ ನೋಡಿ.



ಯಕ್ಷಗಾನದಲ್ಲಿ ಗಗನವು ಎಲ್ಲೋ!




ಈ ಹಾಡನ್ನು ಕೊಳಲಿನಲ್ಲಿ ನುಡಿಸಿರುವ ವೀಡಿಯೊ



ಈ ಹಾಡಿನ notatations ಬೇಕಿದ್ದವರು ಸ್ವರಲಿಪಿ ವಿಭಾಗ ನೋಡಬಹುದು.


ಮಾಹಿತಿ ತುಣುಕು:  ಆ ದೇವರೆ ನುಡಿದ ಮೊದಲ ನುಡಿಯಲ್ಲಿ ಬರುವ ‘ಪ್ರೇಮವೆಂಬ’ ಎಂಬುದು ‘ಗಗನವು ಎಲ್ಲೋ’ದ ತದ್ರೂಪು!