Thursday 7 September 2017

ಬಾಗಿಲನು ತೆರೆದ ದಾಸರ ಪದ



ಬಾಗಿಲನು ತೆರೆದು - 1960ರಲ್ಲಿ ತೆರೆ ಕಂಡ ಭಕ್ತ ಕನಕದಾಸ ಚಿತ್ರದ ಈ ದಾಸರ ಪದ  ಪಿ.ಬಿ.ಶ್ರೀನಿವಾಸ್ ಅವರಿಗೆ ಮೊದಲ ಬಾರಿ ರಾಜ್ ಕುಮಾರ್ ಅವರ ಎಲ್ಲ ಹಾಡುಗಳನ್ನು ಹಾಡಿ ಕನ್ನಡದ ಮುಖ್ಯ ಗಾಯಕನಾಗಿ ನೆಲೆ ಕಂಡುಕೊಳ್ಳುವ,  ಎಂ.ವೆಂಕಟರಾಜು ಅವರಿಗೆ ಮೊತ್ತ ಮೊದಲ ಬಾರಿ  ಸಂಗೀತ ನಿರ್ದೇಶಕನಾಗುವ ಮತ್ತು ನಮಗೆಲ್ಲ ಅನವರತ ಮಧುರ ಗೀತೆಗಳನ್ನಾಲಿಸುವ ಅವಕಾಶದ ಬಾಗಿಲು ತೆರೆಯಿತು.

ಹಿಂದಿ ಹಾಗೂ ಇತರ ಭಾಷೆಗಳಂತೆ ಕನ್ನಡದಲ್ಲೂ ಅಲಿಖಿತ ನಿಯಮಗಳು ಹರಳುಗಟ್ಟತೊಡಗಿದ್ದು 60ರ ದಶಕದ ಆರಂಭದಲ್ಲಿ.  ಅಲ್ಲಿವರೆಗೆ  ಇಂಥ ನಾಯಕನಿಗೆ ಇಂಥ ಗಾಯಕನೇ ಹಾಡಬೇಕೆನ್ನುವ ರಿವಾಜು ಇರಲಿಲ್ಲ.  ಕನ್ನಡದಲ್ಲೂ ರಾಜ್ ಅವರಿಗೆ ಸಿ.ಎಸ್. ಜಯರಾಮನ್, ಪೀಠಾಪುರಂ ನಾಗೇಶ್ವರ ರಾವ್, ಘಂಟಸಾಲ  ಮುಂತಾದ ವಿವಿಧ ಗಾಯಕರು ಹಾಡುತ್ತಿದ್ದರು.   ಭಕ್ತ ಕನಕದಾಸದ ಎಲ್ಲ ಹಾಡುಗಳನ್ನು ರಘುನಾಥ ಪಾಣಿಗ್ರಾಹಿ (ಖ್ಯಾತ ಒಡಿಸ್ಸಿ ಪಟು ಸಂಯುಕ್ತಾ ಪಾಣಿಗ್ರಾಹಿಯವರ ಪತಿ) ಅವರು ಹಾಡುವುದೆಂದಿತ್ತಂತೆ. ಆದರೆ  ಕೊನೆ ಗಳಿಗೆಯಲ್ಲಿ ಈ ನಿರ್ಧಾರ ಬದಲಾಗಿ ಪಿ.ಬಿ.ಎಸ್ ಅವರಿಗೆ ಆ ಅವಕಾಶ ದೊರೆತು ರಾಜ್ ಜೊತೆ ಸುದೀರ್ಘ ಶರೀರ - ಶಾರೀರ ಸಂಬಂಧ ಬೆಳೆಯಲು ನಾಂದಿಯಾಯಿತು. ಆ ಮೇಲಂತೂ ಕೆಲವು ಅಪವಾದಗಳನ್ನು ಹೊರತು ಪಡಿಸಿದರೆ ಕನ್ನಡದ ಕುಮಾರತ್ರಯರಿಗೂ ಪಿ.ಬಿ.ಎಸ್ ಅವರೇ ಧ್ವನಿಯಾದರು.

ಭಕ್ತ ಕನಕದಾಸ ಚಿತ್ರದ ಎಲ್ಲ ಹಾಡುಗಳೂ ಅತಿ ಮಧುರವಾಗಿದ್ದರೂ ಅವುಗಳ ಪೈಕಿ  ಕಲಶಪ್ರಾಯವಾಗಿ ಹೊಮ್ಮಿದ್ದು ಬಾಗಿಲನು ತೆರೆದು.  ಚಲನಚಿತ್ರ ರಂಗದಲ್ಲಿ ಸಾಮಾನ್ಯವಾಗಿ ಸಂಗೀತ ನಿರ್ದೇಶಕರು ಮೊದಲು ಡಮ್ಮಿ ಸಾಹಿತ್ಯದೊಡನೆ ಹಾಡೊಂದರ ಟ್ಯೂನ್ ಸಿದ್ಧಪಡಿಸಿ ಗೀತ ರಚನಕಾರರು ಅದಕ್ಕೆ ಹೊಂದುವ ಸಾಹಿತ್ಯ ರಚಿಸುತ್ತಾರೆ.  ಆದರೆ ಇಲ್ಲಿ ಆಗಲೇ ಎಷ್ಟೋ ವಿದ್ವಾಂಸರು ಶತಮಾನಗಳಿಂದ ಸಂಪ್ರದಾಯಬದ್ಧವಾಗಿ ಹಾಡಿಕೊಂಡು ಬಂದಿದ್ದ ದಾಸರ ಕೀರ್ತನೆಯನ್ನು ವಿಭಿನ್ನವಾಗಿ ಪ್ರಸ್ತುತ ಪಡಿಸುವ ಸವಾಲು ವೆಂಕಟರಾಜು ಅವರ ಎದುರಿಗಿತ್ತು.  ಅವರ ಈ ನ ಭೂತೋ ನ ಭವಿಷ್ಯತಿ ಎಂಬಂಥ  ಸಂಯೋಜನೆಯನ್ನು   ಪಿ.ಬಿ.ಶ್ರೀನಿವಾಸ್ ಕಲ್ಲೂ ಕರಗುವಂತೆ ಆರ್ದ್ರವಾಗಿ  ಹಾಡಿ ಅಜರಾಮರಗೊಳಿಸಿದರು.  (ಚಿತ್ರದ ಟೈಟಲ್ಸ್‌ನಲ್ಲಿ ಅವರ ಹೆಸರು ಪಿ.ಬಿ.ಶ್ರೀನಿವಾಸನ್ ಎಂದು ಉಲ್ಲೇಖಿಸಲ್ಪಟ್ಟಿತ್ತು!)


ಇದರ ರಾಗ ಸಂಯೋಜನೆ ಒಂದು ರೀತಿ tricky ಅನಿಸುವ ರೀತಿಯಲ್ಲಿದೆ.  ಒಂದು ಕೋನದಲ್ಲಿ ನೋಡಿದರೆ ಹಿಂದೋಳ ಅಥವಾ ಮಾಲಕೌಂಸ್ ಮುಖ್ಯ ರಾಗವಾಗಿ ನಡುವೆ  ಚಂದ್ರಕೌಂಸ್ ಇತ್ಯಾದಿ ಛಾಯೆ ಗೋಚರಿಸುತ್ತದೆ.  ಇನ್ನೊಂದು ಕೋನದಲ್ಲಿ ನೋಡಿದರೆ ಶುದ್ಧ ಧನ್ಯಾಸಿ, ಭೀಮ್ ಪಲಾಸ್, ಸುಮನೇಶ ರಂಜಿನಿ, ಮಧುವಂತಿ ಇವುಗಳ ಮಿಶ್ರಣವಾಗಿ ಕಾಣುತ್ತದೆ. ಬಾಗಿಲನು ತೆರೆದು ಎಂಬುದನ್ನು ನೀಸಾ ಗಸ ಸಾನೀ ಸ ಸ ಸಾ ಎಂದು ಹಾಡಿದರೆ ಹಿಂದೋಳ, ಮಾಪಾ ನಿಪ ಪಾಮಾ ಪ ಪ ಪಾ ಎಂದು ಹಾಡಿದರೆ ಶುದ್ಧ ಧನ್ಯಾಸಿ. ಹಿಂದೋಳ ಅಂದುಕೊಂಡರೆ ಮೂಲ ಹಾಡು A Sharp ಶ್ರುತಿಯಲ್ಲಿದೆ.  ಶುದ್ಧ ಧನ್ಯಾಸಿ ಅಂದುಕೊಂಡರೆ F ಶ್ರುತಿಯಲ್ಲಿ. ಚಿತ್ರಗೀತೆಗಳಲ್ಲಿ ಪುರುಷ ಧ್ವನಿಗೆ  A Sharp ಶ್ರುತಿ ಆಯ್ದುಕೊಳ್ಳುವುದು ಕಮ್ಮಿ.  ಹೀಗಾಗಿ ಮುಖ್ಯ ರಾಗ ಶುದ್ಧ ಧನ್ಯಾಸಿ ಅಂದುಕೊಳ್ಳುವುದೇ ಸೂಕ್ತ.  ನನ್ನದು ಅದೇ ಆಯ್ಕೆ.  ಇತರ ರಾಗಗಳ ಛಾಯೆ ಕಾಣಿಸಿಕೊಳ್ಳುವುದು interlude ಮತ್ತು ಚರಣ ಭಾಗದಲ್ಲಿ.

ಇದಕ್ಕೆ ಅಳವಡಿಸಿದ ಜಂಪೆ ತಾಳದ ನಡೆ  ಕೂಡ ಅಷ್ಟೇ  tricky. ಕೆಲವು ಪದಗಳು ಸಮದಲ್ಲಿ ಎತ್ತುಗಡೆಯಾದರೆ  ಇನ್ನು ಕೆಲವು ಒಂದಕ್ಷರ ಬಿಟ್ಟು.  ಆದರೆ ನಿರ್ದಿಷ್ಟ pattern ಇಲ್ಲ. ಹೀಗಾಗಿ ಬಹುತೇಕ ಗಾಯಕರು / ವಾದಕರು ಈ ಹಾಡನ್ನು ಯಥಾವತ್ ಮರುಸೃಷ್ಟಿಗೊಳಿಸುವಲ್ಲಿ ಸೋಲುತ್ತಾರೆ.  ‘ಮಾತ್ರೆ ಲೆಕ್ಕ ತಪ್ಪಿದರೆ ತಾಳಕೆ ಸಿಗದು..’ ಅನ್ನುವ ಪರಿಸ್ಥಿತಿ.  ಅದಕ್ಕೆ ಅನೇಕರು ಒಂದೆರಡು ಸಾಲು ಮೂಲಕ್ಕೆ ನಿಷ್ಠರಾಗಿದ್ದು ನಂತರ ತಮ್ಮ ಸ್ವಂತ ಶೈಲಿಯಲ್ಲಿ ಹಾಡುತ್ತಾರೆ. ಗೋಡೆ ಕಟ್ಟುವಾಗ ಕಲ್ಲುಗಳನ್ನು ನೇರವಾಗಿ ಒಂದರ ಮೇಲೆ ಇನ್ನೊಂದಿಡದೆ ಸ್ವಲ್ಪ offset ಇರುವಂತೆ ಮಾಡಿ ಬಲವರ್ಧನೆ ಮಾಡುವಂತೆ ಈ ರೀತಿಯ ತಾಳದ offset  pattern ಮತ್ತು ರಾಗಗಳ ಹದವಾದ ಮಿಶ್ರಣದ plastering  ಈ ಹಾಡಿನ ಬಾಳ್ವಿಕೆ ಮೇಲೆ ಧನಾತ್ಮಕ ಪರಿಣಾಮ ಬೀರಿರಬಹುದೇನೋ ಎಂದು ನನಗನ್ನಿಸುವುದಿದೆ!


ಚಿತ್ರಗೀತೆಯಾದರೂ  ಆಕಾಶವಾಣಿ ಬೆಂಗಳೂರಿನ ಗೀತಾರಾಧನ ಕಾರ್ಯಕ್ರಮದಲ್ಲಿ ಸ್ಥಾನ ಪಡೆಯುತ್ತಿದ್ದುದು ಇದಕ್ಕೆ ಸಂದ ಗೌರವ. ಅನೇಕ ಶಾಸ್ತ್ರೀಯ ನೃತ್ಯಪಟುಗಳೂ ಒಂದು ಚರಣದ ವರೆಗೆ ಇದೇ ಧಾಟಿಯನ್ನು ಉಳಿಸಿಕೊಂಡು ಈ ಹಾಡನ್ನು ರಂಗದಲ್ಲಿ ಬಳಸಿಕೊಳ್ಳುವುದುಂಟು.  ಆದರೆ ಹಾಡುವವರು ಮೂಲದಲ್ಲಿರುವ ಇತರ ರಾಗಗಳ ಛಾಯೆ ಹೊಮ್ಮಿಸುವಲ್ಲಿ ಸೋತು ಅಲ್ಲಿ ಏಕತಾನತೆ ಕಾಣಿಸಿಕೊಳ್ಳುತ್ತದೆ.  ನೃತ್ಯ ಪ್ರದರ್ಶನದಲ್ಲಿ ಅನಿವಾರ್ಯವಾದ ಪುನರಾವರ್ತನೆ ಕೂಡ ಇದಕ್ಕೆ ಇನ್ನೊಂದು ಕಾರಣ. 


ಮೊದಲು ಟಿ.ಚಲಪತಿ ರಾವ್ ಅವರ ಸಹಾಯಕರಾಗಿದ್ದ ಎಂ. ವೆಂಕಟರಾಜು  ಅತ್ಯುತ್ತಮ ಆರ್ಕೆಷ್ಟ್ರಾ ಬಳಕೆಗೆ   ಪ್ರಸಿದ್ಧರು. ಆರ್ಕೆಷ್ಟ್ರಾ ನಿರ್ವಹಣೆಯಲ್ಲಿ ಅವರ ಬಲಗೈ ಆಗಿದ್ದವರು ಅಚ್ಯುತನ್ ಎಂಬ ಅರೇಂಜರ್.  ಈ ಹಾಡಲ್ಲಿ ತಾಳವಾದ್ಯವಾಗಿ ತಬ್ಲಾ ಇದ್ದು triangle ಬಳಸಿ ಭಜನೆ ತಾಳದ ಪರಿಣಾಮ ಉಂಟು ಮಾಡಲಾಗಿದೆ.  Vibra phone, ಸಿತಾರ್, ಗ್ರೂಪ್ ವಯಲಿನ್ಸ್, ಚೇಲೊ, ಸೊಲೊ ವಯಲಿನ್, ಕೊಳಲುಗಳನ್ನು ಸುಂದರವಾಗಿ ಬಳಸಲಾಗಿದೆ. ಆದಿಮೂಲ ಎಂದು,  ಬಿಡದೆ ನಿನ್ನನು ಭಜಿಸೆ ಮತ್ತು ಭಕ್ತ ವತ್ಸಲ ನಿನಗೆ ಭಾಗಗಳಲ್ಲಿ ನೀಡಲಾದ ಒಂದು ತಾಳದಷ್ಟು pause ಹಾಡಿನ ಅಂದ ಹೆಚ್ಚಿಸಿದೆ. ಹಾಡಿನ ಚಿತ್ರಣದಲ್ಲಿ ಒಳಗೊಂಡಿರುವ ಕೊರಡೆ ಏಟುಗಳನ್ನು ಲಯಬದ್ಧವಾದ cymbals ನಾದಕ್ಕೆ ಹೊಂದಿಸಲಾಗಿದೆ. ಮೂರು ಚರಣಗಳಿರುವಾಗ ಒಂದು ಮತ್ತು ಮೂರನೇ ಚರಣ ಒಂದು ರೀತಿ, ಎರಡನೇ ಚರಣ ಬೇರೊಂದು ರೀತಿ  ಇರುವ ಸಂಪ್ರದಾಯವನ್ನೂ ಇಲ್ಲೂ ಪಾಲಿಸಲಾಗಿದೆ.  ಮೂರು ಚರಣಗಳಿಗಿಂತ ಮುನ್ನ ಬರುವ interludeಗಳೂ ವಿಭಿನ್ನವಾಗಿವೆ. ಸಿತಾರ್, ವಯಲಿನ್ಸ್ ಇತ್ಯಾದಿಗಳನ್ನೊಳಗೊಂಡು ಮಂದಿರದ ಘಂಟಾನಾದದೊಂದಿಗೆ ಕೊನೆಗೊಳ್ಳುವ  climax ಭಾಗದ ಸಂಯೋಜನೆಯಂತೂ ಅತ್ಯದ್ಭುತ.

ಚಿತ್ರದಲ್ಲಿ ಈ ಹಾಡು ಆರಂಭವಾಗುವುದಕ್ಕೆ  ಮೊದಲು ಬರುವ ದೀನ ನಾನು ಸಮಸ್ತ ಲೋಕಕೆ ದಾನಿ ನೀನು ಎಂಬ ಉಗಾಭೋಗ ಶೈಲಿಯಲ್ಲಿ ಹಾಡಲಾದ ಭಾಗ ಟಿ.ವಿ., ಅಂತರ್ಜಾಲ ಯುಗ ಆರಂಭವಾದ ಮೇಲೆ ಈ ಹಾಡಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.  ಆದರೆ ಮೊದಲು ರೇಡಿಯೊದಲ್ಲಿ ಕೇಳಿ ಬರುತ್ತಿದ್ದ ಗ್ರಾಮೊಫೋನ್ ರೆಕಾರ್ಡ್ versionನಲ್ಲಿ ಇದು ಇರಲಿಲ್ಲ.  ವಾಸ್ತವವಾಗಿ ಈ  ಭಾಗ  ಕನಕದಾಸ ವಿರಚಿತ ಭಾಮಿನಿ ಷಟ್ಪದಿ ಛಂದಸ್ಸಿನ  ಹರಿಭಕ್ತಿಸಾರದ  49ನೆಯ ಪದ್ಯ. ಇಲ್ಲಿ 3 - 4 ಮಾತ್ರೆಗಳ ಹರಹು ಮತ್ತು ಆದಿ ಪ್ರಾಸ ಇರುವುದನ್ನು ಗಮನಿಸಬಹುದು. ಈ ವಿಚಾರದ ಮೇಲೆ ಬೆಳಕು ಚೆಲ್ಲಿದ ನಾರಾಯಣೀ ದಾಮೋದರ್ ಅವರಿಗೆ ನಾನು ಕೃತಜ್ಞ.

ದೀನ ನಾನು ಸಮಸ್ತ ಲೋಕಕೆ
ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು
ಏನ ಬಲ್ಲೆನು ನಾನು ನೆರೆ ಸು
ಜ್ಞಾನಮೂರುತಿ ನೀನು ನಿನ್ನ ಸ
ಮಾನರುಂಟೇ ದೇವ ರಕ್ಷಿಸು ನಮ್ಮನನವರತ

ಹಾಡಿನ ಸಂಯೋಜನೆಯಲ್ಲಿ ಪದಗಳನ್ನು ಅನಿರ್ದಿಷ್ಟ patternನಲ್ಲಿ 5 ಅಕ್ಷರದ ಜಂಪೆ ತಾಳಕ್ಕೆ ಹೊಂದಿಸಿದ್ದನ್ನು ಇಲ್ಲಿ ಗಮನಿಸಿ.

ಬಾಗಿಲನು | ತೆರೆದು || ಸೇವೆಯನು | ಕೊಡೊ ಹರಿಯೆ ||
,ಬಾಗಿಲನು | ತೆರೆದು || ಸೇವೆಯನು | ಕೊಡೊ ಹರಿಯೆ ||
,ಕೂಗಿದರೂ | ,ಧ್ವನಿ ಕೇಳ || ಲಿಲ್ಲವೇ | ,ನರಹರಿಯೆ ||
ಬಾಗಿಲನು | ತೆರೆದು ||

,ಪರಮಪದ | ದೊಳಗೆ ವಿಷ || ಧರನ ತಲ್ | ಪದಲಿ ನೀ ||
,ಸಿರಿಸಹಿತ | , ಕ್ಷೀರವಾ || ರಿಧಿಯೊಳಿರ | ಲು.....||
,ಕರಿರಾಜ | ಕಷ್ಟದಲಿ  || ,ಆದಿ ಮೂ | ಲ ಎಂದು  || ...  ||
,ಕರೆಯಲಾ | ಕ್ಷಣ ಬಂದು ||
,ಒದಗಿದೆಯೋ |,ನರಹರಿಯೇ ||
ಬಾಗಿಲನು | ತೆರೆದು ||

,ಕಡುಕೋಪ | ದಿಂ ಖಳನು || ,ಖಡ್ಗವನೆ | ಪಿಡಿದು ||
,ನಿನ್ನೊಡೆಯ | ,ಎಲ್ಲಿಹನು  || ಎಂದು ನುಡಿ | ಯೇ  ||
,ಧೃಢ ಭಕುತಿ | ಯಲಿ ಶಿಶುವು || ,ಬಿಡದೆ ನಿ | ನ್ನನು ಭಜಿಸೇ || ..  ||
,ಸಡಗರದಿ | ಸ್ತಂಭದಿಂ || ,ದೊಡೆದೆ | ,ನರಹರಿಯೇ ||
ಬಾಗಿಲನು | ತೆರೆದು ||

,ಯಮಸುತನ | ರಾಣಿಗೆ ಅ|| ಕ್ಷಯ ವಸನ | ವ ಇತ್ತೆ  ||
,ಸಮಯದಲಿ | , ಅಜಮಿಳನ ||ಪೊರೆದೆ |...  ||
,ಸಮಯಾಸ | ಮಯವುಂಟೆ || ,ಭಕ್ತವ | ತ್ಸಲ | ನಿನಗೆ..|| ...||
,ಕಮಲಾಕ್ಷ | ,ಕಾಗಿನೆಲೆ || ಯಾದಿ ಕೇ | ಶವನೇ || 
,ಬಾಗಿಲನು | ತೆರೆದು || ಸೇವೆಯನು | ಕೊಡೊ ಹರಿಯೆ ||
,ಬಾಗಿಲನು | ತೆರೆದು || ಸೇವೆಯನು | ಕೊಡೊ ಹರಿಯೆ ||
,ಕೂಗಿದರೂ | ,ಧ್ವನಿ ಕೇಳ || ಲಿಲ್ಲವೇ | ,ನರಹರಿಯೆ ||
ಬಾಗಿಲನು | ತೆರೆದು ||
ಬಾಗಿಲನು | ತೆರೆದು ||
ಬಾಗಿಲನು | ತೆರೆದು ||
ಸೇವೆಯನು | ಕೊಡೊ ಹರಿಯೇ ||

ಇಲ್ಲಿ ಆದಿ ಪ್ರಾಸದ ಜೊತೆ ಅಲ್ಲಲ್ಲಿ ಒಳ ಪ್ರಾಸವೂ ಇರುವುದನ್ನು ಗಮನಿಸಬಹುದು. 17ನೇ ಶತಮಾನದಲ್ಲೇ ಕನಕದಾಸರು ಬಳಸಿರುವ ಭಾಷೆ ಈಗಿನ ಆಧುನಿಕ ಕನ್ನಡವನ್ನು  ಹೋಲುವುದು ಅಚ್ಚರಿ ಮೂಡಿಸುತ್ತದೆ. 19ನೇ ಶತಮಾನದ ಎಷ್ಟೋ ದಾಖಲೆಗಳಲ್ಲಿ ಖಂಡಿತವಾಗಿಯೂ ಇಷ್ಟು ಸ್ಪಷ್ಟವಾದ ಸರಳ ಕನ್ನಡ ಇರಲಿಕ್ಕಿಲ್ಲ.

ಕೇಳಿದಷ್ಟೂ ಇನೂ ಇನ್ನೂ ಕೇಳಬೇಕೆನ್ನಿಸುವ ಈ ಹಾಡನ್ನು ಈಗ ಒಂದೆರಡು ಸಾಲುಗಳ ಪೂರ್ವಭಾವೀ ಡಯಲಾಗ್ ಸಮೇತ ಇನ್ನೊಮ್ಮೆ ಆಲಿಸಿ.  ಬಿಕ್ಕಳಿಕೆ, ನಿಟ್ಟುಸಿರುಗಳಿಲ್ಲದೆ ಗಾಯನದಲ್ಲೇ ಪಿ.ಬಿ.ಎಸ್ ಅವರು ವಿಷಾದ ಭಾವ ಅಭಿವ್ಯಕ್ತಗೊಳಿಸಿರುವುದನ್ನು ಅನುಭವಿಸಿ.






ಇದೇ ಹಾಡನ್ನು ವೇದಿಕೆಯೊಂದರಲ್ಲಿ ನಾನು ನುಡಿಸಿದ್ದು ಹೀಗೆ.



3 comments:

  1. ಒಂದು ಅದ್ಭುತ ಗೀತೆಯ ಕುರಿತಾದ ಸಮಗ್ರ ಮಾಹಿತಿ, ವಿಶ್ಲೇಷಣೆ. ಹಲವು ಆಯಾಮಗಳಿಂದ ಈ ಸುಂದರ ಗೀತೆಯನ್ನು ಗ್ರಹಿಸಿರುವ ಪರಿ ಶ್ಲಾಘನೀಯ. ಸಂಗೀತ ನಿರ್ದೇಶಕ ಎಂ.ವೆಂಕಟರಾಜು ಅವರ ಭಾವಚಿತ್ರ ನಾನು ಮೊದಲ ಬಾರಿಗೆ ನೋಡಿದ್ದು. ಈ ಎಲ್ಲದಕ್ಕೂ ನಿಮಗೆ ವಂದನೆಗಳು.

    Singer Srinath (FB)

    ReplyDelete
  2. ಅದ್ಭುತ ವಿವರಣೆ. ಲೇಖನ ಇಷ್ಟವಾಗುವುದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಕನಕದಾಸ ಚಿತ್ರದ ನಿರ್ದೇಶಕ Y R ಸ್ವಾಮಿ ಅವರು ಸಾಕ್ಷಾತ್ ಎದ್ದು ಬಂದಿದ್ದರೂ ಇಷ್ಟೊಂದು ಮಾಹಿತಿ ಕೊಡುತ್ತಿರಲಿಲ್ಲ. ಅಕಾಲಿಕ ಮರಣಕ್ಕೀಡಾಗಿ ಬಹಳ ಚಿಕ್ಕ ವಯಸ್ಸಿನಲ್ಲೇ ಅನೇಕ, ಸುಮಧುರ ಗೀತೆಗಳನ್ನು ನೀಡಿದ ವೆಂಕಟರಾಜು ಅವರು ಹೇಗಿದ್ದರೂ ಎನ್ನುವ ಕುತೂಹಲವನ್ನು , ನೀವು ಭಾವ ಚಿತ್ರ ತೋರಿಸುವುದರ ಮೂಲಕ ತಣಿಸಿದ್ದೀರಿ. ಕ್ರಿಯಾಶೀಲ ವ್ಯಕ್ತಿಗಳು ಭೂಮಿ ಮೇಲೆ ಇನ್ನಷ್ಟು ದಿನ ಇರಬೇಕು. ಅವರ ರಾಗ ಸಂಯೋಜನೆಯನ್ನು ಯಾರಾದರೂ ಮರೆಯಲಾದೀತೆ? ಕನಕದಾಸ ಹಾಡುಗಳೇ, ಜೀವನ ತರಂಗದ ಹಾಡುಗಳೇ ಸಾಕು. ( ಮನದಿ ಮುನಿಸೇ ತರವೇನು ) !! ಎರಡನೆಯದಾಗಿ ಸಂಗೀತ ಪ್ರಿಯರಿಗಂತೂ ಊಟವನ್ನು ಕಲೆಸಿ, ಎದುರಿಗೆ ಇಟ್ಟಿದ್ದೀರಾ - ಯಾವ ರಾಗ, ಯಾವ ಛಾಯೆ, ಯಾವ ತಾಳ.. ಹೀಗೇ.. ಇನ್ನೇನು ಬೇಕು, ಲೇಖನ ಮೆಚ್ಚಿಗೆ ಆಗಲು? ಜೊತೆಗೆ ಹರಿಭಕ್ತಸಾರದ ಎಷ್ಟನೆಯ ಪದ್ಯ, ಛಂದಸ್ಸು, ಇತ್ಯಾದಿ... ನಿಮಗೆ ಒಂದು ಸಲಾಂ. ಒಂದು ವಿಷಯವಂತೂ ಸತ್ಯ. ನಾನು ಅನೇಕ ಬಾರಿ ಶ್ರೀಕೃಷ್ಣ ಮಠದಲ್ಲಿ ಕಣ್ಣು ಮುಚ್ಚಿ ಈ ಹಾಡು ಹೇಳಿದ್ದೇನೆ. ಕನಕದಾಸರನ್ನು ನೋಡುವ ಯೋಗ್ಯತೆ ನನಗಿಲ್ಲದಿದ್ದರು, ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ರಾಜ್ಕುಮಾರ್ ಮೂಲಕ ದಾಸರನ್ನು ನೋಡುವುದು, ದೇವರಾಣೆಗೂ ಸತ್ಯ !!

    Saraswathi Vattam (FB)

    ReplyDelete
  3. ಬಾಗಿಲನು ತರೆದಾಗ ಇಷ್ಟೊಂದು, ಎಷ್ಟೊಂದು ವಿಷಯಗಳ ಹರಹು . ಬಾಗಿಲು ಕುಸುರಿಕೆತ್ತನೆ ಚಂದಾತಿ ಚಂದ ಅಂದುಕೊಂಡ ನಮ್ಮಂತವರಿಗೆ
    ಬಾಗಿಲಿನ ಒಳಗೆ ರಾಗಮಾಲಿಕೆಯ ನವರತ್ನ ಮಾಲೆ ತೋರಿಸಿದಿರಿ.
    ವೆಂಕಟರಾಜು,p. b. s. ಕಾಕತ್ಕರ್ ನಿಮಗೆ ಬಹು ನಮನ.

    ಪ್ರಕಾಶ ಹೆಬ್ಬಾರ್ (FB)

    ReplyDelete

Your valuable comments/suggestions are welcome