
ಚಾಂದ್ರಮಾನ ಪ್ರಕಾರ ಚೈತ್ರ ವೈಶಾಖಗಳೆಂದರೆ ವಸಂತ ಋತು. ಸೌರಮಾನ ಪ್ರಕಾರ ಮೇಷ ವೃಷಭ ಮಾಸಗಳು ವಸಂತ ಋತು. ಆದರೆ ಪ್ರಕೃತಿ ಚಾಂದ್ರಮಾನ ಪಂಚಾಂಗವನ್ನೂ ನೋಡುವುದಿಲ್ಲ, ಸೌರಮಾನ ಪಂಚಾಂಗವನ್ನೂ ನೋಡುವುದಿಲ್ಲ. ಅದು ನೋಡುವುದು ಸೂರ್ಯನ ಸುತ್ತ ವಾರ್ಷಿಕ ಚಲನೆಯ ಪಥದಲ್ಲಿ ಭೂಮಿ ಎಲ್ಲಿದೆ ಎಂದು, ಅಥವಾ ಭೂಮಿಯಲ್ಲಿರುವ ನಾವು ಗ್ರಹಿಸುವಂತೆ ಸೂರ್ಯ ತನ್ನ ವಾರ್ಷಿಕ 360 ಡಿಗ್ರಿ ಚಲನೆಯಲ್ಲಿ ಈಗ ಎಲ್ಲಿದ್ದಾನೆ ಎಂದು ಮಾತ್ರ.
ಸೂರ್ಯ ಕ್ರಾಂತಿವೃತ್ತದಲ್ಲಿ ತನ್ನ ವಾರ್ಷಿಕ ಪರಿಭ್ರಮಣೆ ಆರಂಭಿಸುವ ಶೂನ್ಯ ಡಿಗ್ರಿಯ ವಸಂತ ವಿಷುವತ್ ಬಿಂದುವಿನಿಂದ 30 ಡಿಗ್ರಿ ಹಿಂದಕ್ಕೆ ಅಂದರೆ 270 ಡಿಗ್ರಿಯಲ್ಲಿ ಇರುವಾಗ (360-30=270) ಪ್ರಕೃತಿಯಲ್ಲಿ ವಸಂತದ ಲಕ್ಷಣಗಳು ಕಾಣಿಸತೊಡಗುತ್ತವೆ. ಇಲ್ಲಿಂದ ಮುಂದೆ ಚಲಿಸುತ್ತಾ ವಸಂತ ವಿಷುವತ್ ದಾಟಿ ಎಪ್ರಿಲ್ 20ಕ್ಕೆ 30 ಡಿಗ್ರಿ ಬಿಂದುವನ್ನು ತಲುಪುವ ವರೆಗೆ ವಸಂತ ಋತು. ಮುಂದೆ ಜೂನ್ 21ರ ವರೆಗೆ ಅತಿಯಾದ ಸೆಕೆಯ ಗ್ರೀಷ್ಮ ಋತು. ಅಗಸ್ಟ್ 23ರ ವರೆಗೆ ಮಳೆಯು ಇಳೆಯನ್ನು ತಂಪಾಗಿಸುವ ವರ್ಷಾ ಋತು. ನಂತರ ಅಕ್ಟೋಬರ್ 23ರ ವರೆಗೆ ಸಮ ಶೀತೋಷ್ಣದ ಶರದೃತು. ಆ ಮೇಲೆ ಡಿಸೆಂಬರ್ 22ರ ವರೆಗೆ ವಾತಾವರಣ ತಂಪಾಗುತ್ತಾ ಹೋಗುವ ಹೇಮಂತ ಋತು. ಕೊನೆಯಲ್ಲಿ ಫೆಬ್ರವರಿ 18ರ ವರೆಗೆ ಮೈ ಕೊರೆಯುವ ಚಳಿ ಇರಬೇಕಾದ ಶಿಶಿರ ಋತು. ಸೂರ್ಯನ ಸುತ್ತ ಭೂಮಿಯ ಪರಿಬ್ರಮಣವನ್ನು ಪರಿಗಣಿಸುವುದರಿಂದ ಇದು ಸಾಯನ (ಚಲನೆಯಿಂದೊಡಗೂಡಿದ) ಪದ್ಧತಿಯ ಲೆಕ್ಕಾಚಾರ.
ಹಾಗಿದ್ದರೆ ಪಂಚಾಂಗಗಳೊಂದಿಗಿನ ಋತುಗಳ ತಾಳ ಮೇಳ ಏಕೆ ತಪ್ಪಿತು? ಒಂದು ಕಾಲದಲ್ಲಿ ಉತ್ತರಾಯಣಾರಂಭದಂದು ದಶಂಬರದಲ್ಲಿ ಇರುತ್ತಿದ್ದ ಮಕರ ಸಂಕ್ರಾಂತಿ ಈಗ ಜನವರಿ ಮಧ್ಯಭಾಗಕ್ಕೆ ತಲುಪಲು ಕಾರಣವಾದ ಭೂಮಿಯ ಓಲಾಡುವಿಕೆಯಿಂದ ಉಂಟಾಗುವ recession of equinoxes ವಿದ್ಯಮಾನವೇ ಇದಕ್ಕೂ ಕಾರಣ. ಏಕೆಂದರೆ ಸೂರ್ಯನ ಸುತ್ತ ಭೂಮಿಯ ಚಲನೆಯನ್ನು ಗಣನೆಗೆ ತೆಗೆದುಕೊಳ್ಳದ ನಿರಯನ ಪದ್ಧತಿಯ ಸೌರಮಾನದಲ್ಲಿ ಮೇಷ ವೃಷಭಾದಿ ಎರಡು ಮಾಸಗಳಿಗೊಂದರಂತೆ ವಸಂತ ಗ್ರೀಷ್ಮಾದಿ ಋತುಗಳಿರುತ್ತವೆ.
ನಿರಯನ ಪದ್ಧತಿಯ ಸೌರಮಾನದಲ್ಲಿ ಸೂರ್ಯನ ವಾರ್ಷಿಕ ಚಲನೆಯನ್ನು ಮೇಷ ರಾಶಿಯಿಂದ ಲೆಕ್ಕ ಹಾಕಲಾಗುತ್ತಿದ್ದು ಕಾಂತಿವೃತ್ತದಲ್ಲಿ ಅದರ ಆರಂಭ ಬಿಂದುವನ್ನು ಮೇಷಾದಿ ಅನ್ನಲಾಗುತ್ತದೆ. ಈಗ ಇದು ವಸಂತ ವಿಶುವತ್ ಬಿಂದುವಿಗಿಂತ ಸುಮಾರು 24.2 ಡಿಗ್ರಿ ಹಿಂದಕ್ಕಿದೆ. ಈ ವ್ಯತ್ಯಾಸವನ್ನು ಅಯನಾಂಶ ಎನ್ನುತ್ತಾರೆ. ಅಯನಾಂಶ ಗಣನೆಯ ಲಾಹಿರಿ, ರಾಮನ್ ಮುಂತಾದ ಬೇರೆ ಬೇರೆ ಪದ್ಧತಿಗಳಲ್ಲಿ ಏಕ ರೂಪತೆ ಇಲ್ಲ. ಬಹುತೇಕ ಆನ್ ಲೈನ್ ಪಂಚಾಂಗಗಳು ಲಾಹಿರಿ ಪದ್ಧತಿಯನ್ನು ಅನುಸರಿಸುತ್ತವೆ.
ಕ್ರಿಸ್ತ ಶಕ 285ರಲ್ಲಿ ವಸಂತ ವಿಷುವತ್ ಮತ್ತು ಮೇಷಾದಿ ಬಿಂದುಗಳು ಒಂದೇ ಆಗಿದ್ದವು. ಅಂದರೆ ಆಗ ಅಯನಾಂಶ ಶೂನ್ಯವಾಗಿತ್ತು. ಆಗ ಉತ್ತರಾಯಣ ಆರಂಭ ಮತ್ತು ಮಕರ ಮಾಸ ಆರಂಭ ಒಟ್ಟಿಗೆ ಆಗುತ್ತಿತ್ತು.
ವೇದಗಳ ಕಾಲವೆನ್ನಲಾದ ಕ್ರಿಸ್ತ ಪೂರ್ವ 1893ರಲ್ಲಿ ಮೇಷಾದಿ ಬಿಂದು ಸಾಯನ ಪದ್ಧತಿ ಪ್ರಕಾರ ವಸಂತ ಋತು ಆರಂಭ ಆಗುವ 330 ಡಿಗ್ರಿಯಲ್ಲಿ ಇತ್ತು. ಅಂದರೆ ಆಗ ಅಯನಾಂಶ ಮೈನಸ್ 30 ಡಿಗ್ರಿ. ವಸಂತ ವಿಷುವತ್ ವಸಂತ ಋತುವಿನ ಮಧ್ಯದಲ್ಲಿ ಬರುತ್ತಿತ್ತು.
ಚಾಂದ್ರಮಾನಕ್ಕೂ ಪ್ರಕೃತಿಯ ಬದಲಾವಣೆಗಳಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಚಾಂದ್ರ ಮಾಸಗಳು ಸೌರ ಸಂಕ್ರಾಂತಿಗಳಿಗೆ ತಳುಕು ಹಾಕಿಕೊಂಡಿರುವುದರಿಂದ ಚೈತ್ರ ವೈಶಾಖ ವಸಂತ ಋತು, ಜ್ಯೇಷ್ಠ ಆಷಾಢ ಗ್ರೀಷ್ಮ ಋತು ಎಂದು ನಾವು ಸಂಜೆಯ ಬಾಯಿಪಾಠದಲ್ಲಿ ಹೇಳುತ್ತೇವೆ. ಇಲ್ಲಿ ಇನ್ನೊಂದು ಸ್ವಾರಸ್ಯವೂ ಇದೆ. ಚಾಂದ್ರ ಮಾಸದಲ್ಲಿ ಕಮ್ಮಿ ದಿನಗಳಿರುವುದರಿಂದ ವಸಂತ ಮಾಸ ಆರಂಭವಾಗುವ ಯುಗಾದಿಯು ಹಿಂದೆ ಬರುತ್ತಾ ಮೂರನೆಯ ವರ್ಷಕ್ಕಾಗುವಾಗ ನಿಜವಾದ ವಸಂತ ಆರಂಭವಾಗುವ ಫೆಬ್ರವರಿ 18ಕ್ಕೆ ಸಾಕಷ್ಟು ಸಮೀಪ ಬರುತ್ತದೆ. ಆದರೆ ಆ ವರ್ಷ ಅಧಿಕ ಮಾಸವೊಂದನ್ನು ಸೇರಿಸಿ ಮತ್ತೆ ಅದನ್ನು ಮುಂದೆ ದೂಡಲಾಗುವುದರಿಂದ ಚಾಂದ್ರ ಚೈತ್ರ ಆರಂಭವಾಗುವಷ್ಟರಲ್ಲಿ ನಿಜವಾದ ಗ್ರೀಷ್ಮ ಋತು ಆರಂಭವಾಗಲು ಕೆಲವೇ ದಿನಗಳು ಉಳಿದಿರುತ್ತವೆ. ಚೈತ್ರ ವೈಶಾಖಗಳ ವಸಂತ ಮುಗಿಯಲಿಕ್ಕಾಗುವಾಗ ಕೊಡೈಕ್ಕನಾಲ್, ಊಟಿಗಳಂತಹ ತಂಪು ಪ್ರದೇಶಗಳ ಹೊರತು ಬೇರೆಡೆ ವಸಂತದ ಯಾವ ಲಕ್ಷಣವೂ ಇರುವುದಿಲ್ಲ. ಸೆಕೆಗಾಲ, ಮಳೆಗಾಲ, ಚಳಿಗಾಲಗಳೂ ಋತುಗಳ ಅನುಸಾರ ಇರುವುದಿಲ್ಲ.
2020ರಿಂದ 2029ರ ವರೆಗಿನ ವರ್ಷಗಳ ಯುಗಾದಿ ದಿನಾಂಕಗಳು ಸಾಯನ ವಸಂತಾರಂಭದ ಸಮೀಪಕ್ಕೆ ಹೋಗುತ್ತಿರುವ ಚಾಂದ್ರ ಯುಗಾದಿಯನ್ನು ಅಧಿಕ ಮಾಸ ಹೇಗೆ ಮತ್ತೆ ದೂರಕ್ಕೊಯ್ಯುತ್ತದೆ ಎಂದು ಇಲ್ಲಿ ನೋಡಬಹುದು.


ಕುತೂಹಲಕಾರಿ ಅಂಶಗಳು.
- ಕ್ರಾಂತಿ ವೃತ್ತದಲ್ಲಿ (ecliptical) ಸೂರ್ಯನ ವಾರ್ಷಿಕ ಪಯಣ ಭೂಮಿಯಿಂದ ನೋಡಿದಂತೆ ಪಶ್ಚಿಮದಿಂದ ಪೂರ್ವಕ್ಕೆ ದಿನಕ್ಕೆ ಸುಮಾರು ಒಂದು ಡಿಗ್ರಿ. 30 ಡಿಗ್ರಿಯ ರಾಶಿಯನ್ನು ಒಂದು ತಿಂಗಳಲ್ಲಿ ಹಾದುಹೋಗುತ್ತಾನೆ. 12 ರಾಶಿಗಳನ್ನು ಕ್ರಮಿಸಿ ಮತ್ತೆ ಮೂಲ ಸ್ಥಾನಕ್ಕೆ ಬರಲು ಒಟ್ಟು 12 ತಿಂಗಳು.
- ಇದರಿಂದಾಗಿ ಆತನ ದೈನಿಕ ಪೂರ್ವ ಪಶ್ಚಿಮ ಪಯಣ ಕೊಂಚ ನಿಧಾನವಾದಂತೆನಿಸಿ ದಿನದ ಅವಧಿ 4 ನಿಮಿಷ ಹೆಚ್ಚಾಗುತ್ತದೆ. ಇದು ಪೂರ್ವದಿಂದ ಪಶ್ಚಿಮಕ್ಕೆ ವೇಗವಾಗಿ ಚಲಿಸುತ್ತಿರುವ ಟ್ರೈನಿನಲ್ಲಿ ಚಹಾ ಮಾರುವವನು ಪಶ್ಚಿಮದಿಂದ ಪೂರ್ವಕ್ಕೆ ನಡೆದುಕೊಂಡು ಹೋದಂತೆ! ಒಂದು ವೇಳೆ ಭೂಮಿ ಸೂರ್ಯನ ಸುತ್ತ ಚಲಿಸದಿರುತ್ತಿದ್ದರೆ ಅಂದರೆ ಪಶ್ಚಿಮದಿಂದ ಪೂರ್ವಕ್ಕೆ ಸೂರ್ಯನ ವಾರ್ಷಿಕ ಚಲನೆ ಇರದಿರುತ್ತಿದ್ದರೆ ದಿನದ ಅವಧಿ 23 ಗಂಟೆ 56 ನಿಮಿಷ ಆಗಿರುತ್ತಿತ್ತು.
- ಭೂಮಿ ತನ್ನ ಅಕ್ಷದಲ್ಲಿ ತಿರುಗದಿರುತ್ತಿದ್ದರೆ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ 6 ತಿಂಗಳಲ್ಲಿ ಪೂರ್ವದಲ್ಲಿ ಅಸ್ತನಾಗುತ್ತಿದ್ದ.
- ಭೂಮಿ ಸೂರ್ಯನ ಸುತ್ತ ತಿರುಗುವುದರಿಂದ ನಾವು ದಿನವೂ ಆತನ ಬೇರೆ ಬೇರೆ ಪಾರ್ಶ್ವ ನೋಡುವುದು. ಒಮ್ಮೆ ನೋಡಿದ ಪಾರ್ಶ್ವ ಮತ್ತೆ ಕಾಣಿಸುವುದು ಒಂದು ವರ್ಷದ ನಂತರ.
- ಚಿದಂಬರ ಕಾಕತ್ಕರ್.
ಮಾಹಿತಿಗೆ ಧನ್ಯವಾದ .
ReplyDelete