Monday, 24 December 2018

ಹೀಗಿದ್ದರು ರಫಿ


ಮರೆಯಾಗಿ ದಶಕಗಳೇ ಸಂದರೂ ಇಂದಿಗೂ ಮಧುರ ಚಿತ್ರ ಸಂಗೀತಪ್ರಿಯರ ಮನವನ್ನು ಆಳುತ್ತಿರುವ ಮಹಮ್ಮದ್ ರಫಿ ಬಗ್ಗೆ ಪತ್ರಿಕೆಗಳಲ್ಲಿ ಬಂದದ್ದು ಬಲು ಕಮ್ಮಿ. ಯಾವ ಪತ್ರಕರ್ತನಿಗೂ ಅವರ ಸಂದರ್ಶನ ನಡೆಸಲು ಸಾಧ್ಯವಾಗಿರಲಿಲ್ಲ.  ಎಂಥೆಂಥವರಿಗೋ ಗಾಳ ಹಾಕಿ interview ನಡೆಸಿ ರೇಡಿಯೊ ಸಿಲೋನಿಗಾಗಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ ಅಮೀನ್ ಸಯಾನಿ ಕೈಗೂ ಅವರು ಸಿಕ್ಕಿರಲಿಲ್ಲ.  ಬರ್ಮನ್ ದಾದಾ ದಿವಂಗತರಾದಾಗ ರಫಿಯ ಧ್ವನಿಯಲ್ಲಿ ಒಂದೆರಡು ವಾಕ್ಯಗಳನ್ನಷ್ಟೇ ಧ್ವನಿಮುದ್ರಿಸಿ ಪ್ರಸಾರ ಮಾಡಲು ಅವರಿಗೆ ಸಾಧ್ಯವಾಗಿತ್ತು.  ಒಮ್ಮೆ ರಫಿ ಲಂಡನ್ ಪ್ರವಾಸಗೈದಿದ್ದಾಗ  ಬಿ.ಬಿ.ಸಿ. ಹಿಂದಿ ವಿಭಾಗದವರು ಅವರೊಡನೆ ಮಾತುಕತೆ ನಡೆಸಿ ಪ್ರಸಾರ ಮಾಡುವಲ್ಲಿ ಸಫಲರಾಗಿದ್ದರು.  ಉಳಿದಂತೆ ರಫಿ  ತಾನಾಯಿತು ತನ್ನ ಹಾಡುಗಾರಿಕೆಯಾಯಿತು ಎಂದು   ನಿರ್ಲಿಪ್ತರಾಗಿ ಇದ್ದವರು.

ಹೀಗಿರುವಾಗ 1970ರ ದಶಕದಲ್ಲಿ  ಶಮಾ ಎಂಬ ಪ್ರಸಿದ್ಧ ಉರ್ದು ಪತ್ರಿಕೆಯಲ್ಲಿ ರಫಿಯ ಮನದಾಳದ ಮಾತುಗಳನ್ನೊಳಗೊಂಡ  ಲೇಖನವೊಂದು ಪ್ರಕಟವಾಯಿತು.  ಅದರ ಕನ್ನಡ ಭಾವಾನುವಾದ ಇಲ್ಲಿದೆ.

ಒಂದು ಕಾರ್ಯಕ್ರಮದಲ್ಲಿ ಸೈಗಲ್ ಹಾಡುತ್ತಿರುವಾಗ ವಿದ್ಯುತ್ ಕೈ ಕೊಟ್ಟಿತು.  ಆಗ ರಫಿ ಮೈಕ್ ಇಲ್ಲದೆಯೇ ಉಚ್ಚ ಕಂಠದಲ್ಲಿ  ಹಾಡಿ ಜನರನ್ನು ರಂಜಿಸಿದರು ಎಂಬ  ಜನಜನಿತ ಕತೆಯ ಉಲ್ಲೇಖ ಇದರಲ್ಲಿಲ್ಲದಿರುವುದು ಗಮನಾರ್ಹ.

***********

ಅಮೃತಸರ ಜಿಲ್ಲೆಯ ಕೋಟ್ಲಾ ಸುಲ್ತಾನ್ ಸಿಂಗ್ ಎಂಬಲ್ಲಿ ನೆಲೆಸಿದ್ದ ನಮ್ಮದು ತೀರಾ ಸಂಪ್ರದಾಯಸ್ಥ ಕುಟುಂಬ. ಹಾಡು, ಸಂಗೀತಗಳಿಗೆ ಮನೆಯಲ್ಲಿ ಸ್ಥಾನವೇ ಇರಲಿಲ್ಲ.  ನನ್ನ ತಂದೆ ಹಾಜಿ ಅಲಿ ಮೊಹಮ್ಮದ್ ಸಾಹೇಬರು ತುಂಬಾ ಮಡಿವಂತಿಕೆಯುಳ್ಳವರಾಗಿದ್ದರು. ಅವರ ಹೆಚ್ಚಿನ ಸಮಯ ಆಧ್ಯಾತ್ಮದಲ್ಲೇ ಕಳೆಯುತ್ತಿತ್ತು.  ನಾನು ಏಳರ ವಯಸ್ಸಿನಲ್ಲೇ ಗುಣುಗುಣಿಸಲು ಆರಂಭಿಸಿದ್ದೆ.  ಸಹಜವಾಗಿಯೇ ನಾನಿದನ್ನು ತಂದೆಯವರ ಕಣ್ತಪ್ಪಿಸಿ ಮಾಡುತ್ತಿದ್ದೆ.  ವಾಸ್ತವವಾಗಿ ನನಗೆ ಈ ಹಾಡುವ ಹುಚ್ಚು ಹಿಡಿಯಲು ಓರ್ವ ಫಕೀರ ಕಾರಣ. ‘ಖೇಲನ್ ದೇ ದಿನ್ ಚಾರನೀ ಮಾಯೇ ಖೇಲನ್ ದೇ.." ಎಂದು ಹಾಡುತ್ತಾ ಆತ ಜನರನ್ನು ರಂಜಿಸುತ್ತಿದ್ದ.   ಅವನು ಹೀಗೇ ಹಾಡುತ್ತಿದ್ದರೆ ಅದನ್ನೇ ಪುನರಾವರ್ತಿಸುತ್ತಾ ನಾನು ಅವನ ಹಿಂದೆ ದೂರ ದೂರದ ವರೆಗೆ ಹೋಗುತ್ತಿದ್ದೆ.

ಬರಬರುತ್ತಾ ನನ್ನ ಧ್ವನಿ ಊರಿನವರಿಗೆ ಇಷ್ಟವಾಗತೊಡಗಿತು.  ನಾನು ಕದ್ದು ಮುಚ್ಚಿ ಹಾಡುತ್ತಿದ್ದುದನ್ನು ಅವರೆಲ್ಲ ಖುಶಿಯಿಂದ ಕೇಳುತ್ತಿದ್ದರು.

ಒಮ್ಮೆ ನನಗೆ ಲಾಹೋರಿಗೆ ಹೋಗುವ ಅವಕಾಶ ಬಂದೊದಗಿತು.  ಅಲ್ಲಿ ಯಾವುದೋ ಒಂದು ಕಾರ್ಯಕ್ರಮದಲ್ಲಿ  ಅಂದು ಪ್ರಸಿದ್ಧರಾಗಿದ್ದ  ಮಾಸ್ಟರ್ ನಜೀರ್ ಮತ್ತು  ಸ್ವರ್ಣಲತಾ ಎಂಬ ಕಲಾವಿದರ ಗಾಯನವಿತ್ತು. ಆಗ 15ರ ಹರೆಯದವನಾದ  ನನ್ನನ್ನೂ ಒಂದೆರಡು ಹಾಡು ಹಾಡುವಂತೆ ಕೇಳಿಕೊಳ್ಳಲಾಯಿತು. ನನ್ನ ಹಾಡು ನಜೀರ್ ಸಾಹೇಬರಿಗೆ ತುಂಬಾ ಇಷ್ಟವಾಯಿತು.  ಆಗ ಅವರು ಲೈಲಾ ಮಜನೂ  ಎಂಬ ಚಿತ್ರ ತಯಾರಿಯಲ್ಲಿ ತೊಡಗಿದ್ದರು.   ಆ ಚಿತ್ರಕ್ಕಾಗಿ ಹಾಡುವಂತೆ ನನ್ನನ್ನವರು ಕೇಳಿಕೊಂಡರು.  ಆದರೆ ತಕ್ಷಣ ಅವರ ಕೋರಿಕೆಯನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ‘ನೀವು ತಂದೆಯವರನ್ನು ಒಪ್ಪಿಸುವುದಾದರೆ ನಾನು ಹಾಡಲು ಸಿದ್ಧ’ ಎಂದು ನಾನಂದೆ.  ಊಹಿಸಿದ್ದಂತೆ ಮೊದಲು ತಂದೆಯವರು ಇದಕ್ಕೆ ಸುತರಾಂ ಒಪ್ಪಲಿಲ್ಲ. ಆದರೆ ನನ್ನ ಹಿರಿಯಣ್ಣ ಹಾಜಿ ಮಹಮ್ಮದ್ ದೀನ್ ಅದೇನೋ ಜಾದೂ ಮಾಡಿ ಲೈಲಾ ಮಜನೂ ಚಿತ್ರದಲ್ಲಿ ಹಾಡಲು ಕೊನೆಗೂ ತಂದೆಯವರ ಅನುಮತಿ ಕೊಡಿಸಿಯೇ ಬಿಟ್ಟ. ಈ ಚಿತ್ರದ ಮೂಲಕ ನನ್ನ ಧ್ವನಿ ಮೊತ್ತಮೊದಲು ಜನರನ್ನು ತಲುಪಿತು. ನಂತರ ಗಾವ್ ಕೀ ಗೋರಿ ಚಿತ್ರದಲ್ಲೂ ನಾನು ಕೆಲವು ಹಾಡುಗಳನ್ನು ಹಾಡಿದೆ. ಆದರೆ ನಿಜ ಅರ್ಥದಲ್ಲಿ ನನ್ನ ಯಶಸ್ಸಿನ ಪಯಣ ಜುಗ್ನೂ ಚಿತ್ರದ ಹಾಡುಗಳಿಂದ ಆರಂಭವಾಯಿತು. ನಂತರ ನನಗೆ ಚಿತ್ರಗಳಲ್ಲಿ ನಟಿಸುವ ಹುಚ್ಚೂ ಆರಂಭವಾಯಿತು.  ಆದರೆ  ಮುಖಕ್ಕೆ ‘ಸುಣ್ಣ’ ಹಚ್ಚಿಕೊಳ್ಳಬೇಕಾದ  ಈ ಕಾಯಕ ನನಗೆ ಹಿಡಿಸಲಿಲ್ಲ. ಆದರೂ ಚಿತ್ರಗಳಲ್ಲಿ ನಟಿಸುವಂತೆ ಮತ್ತು ಸಂಗೀತ ನಿರ್ದೇಶಕನಾಗುವಂತೆ ನನಗೆ ಆಹ್ವಾನ ಬರತೊಡಗಿತು.  ಆದರೆ ಗಾಯನವೇ ನನ್ನ ಕ್ಷೇತ್ರ ಮತ್ತು ನನ್ನ ಜೀವನ ಎಂದು ನಾನಾಗಲೇ ನಿರ್ಧರಿಸಿ ಆಗಿತ್ತು.  ಈ ಪಯಣ 60ರ ದಶಕದ ಕೊನೆವರೆಗೆ ನಿರ್ವಿಘ್ನವಾಗಿ ಸಾಗಿತು.

ಆರಾಧನಾ ಚಿತ್ರದ ಎರಡು ಹಾಡುಗಳನ್ನು ಧ್ವನಿ ಮುದ್ರಿಸಿ ನಾನು ಮೊದಲ ಹಜ್ ಯಾತ್ರೆಗೆ ತೆರಳಿದೆ.   ಈ ಸಂದರ್ಭದಲ್ಲಿ ಹಾಡು ಹಾಡಿ ಸಂಪತ್ತು ಗಳಿಸುವುದು ಪಾಪ ಕಾರ್ಯವೆಂದು ಕೆಲವರು ನನಗೆ ಉಪದೇಶಿಸಿದರು.  ನನಗೂ ಅದು ಹೌದೆನ್ನಿಸಿತು.  ಅಲ್ಲಾಹುವಿನ ಧ್ಯಾನ ಮಾಡುತ್ತಾ ಮುಂದಿನ ಜೀವನ ಕಳೆಯಬೇಕೆಂದು ನನಗನ್ನಿಸತೊಡಗಿತು.  ಹೀಗಾಗಿ ಹಜ್ ಯಾತ್ರೆಯಿಂದ ಮರಳಿದ ಮೇಲೆ ನಾನು ಹಾಡುವುದನ್ನು ಕಮ್ಮಿ ಮಾಡಿದೆ.  ನನ್ನ ಮಾರ್ಕೆಟ್ ಬಿದ್ದು ಹೋಯಿತು ,  ನನ್ನನ್ನು ಈಗ ಯಾರೂ ಕೇಳುವುದೂ ಇಲ್ಲ ಎಂದು ಈ ಸಮಯದಲ್ಲಿ ಕೆಲವರು ಪುಕಾರು ಹಬ್ಬಿಸತೊಡಗಿದರು.  ಆದರೆ ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕರು ಹಾಡುವಂತೆ ನನ್ನನ್ನು ಒತ್ತಾಯಿಸುತ್ತಲೇ ಇದ್ದರು.  ಆ ಒಂದೆರಡು ವರ್ಷ ಕೆಲವು ದೊಡ್ಡ ಚಿತ್ರಗಳಲ್ಲಿ ನನ್ನ ಧ್ವನಿ ಗೈರಾಗಿದ್ದುದನ್ನು ನೀವು ಗಮನಿಸಿರಬಹುದು.  ಆದರೆ ಸಂಗೀತ ನಿರ್ದೇಶಕ ನೌಶಾದ್ ನನ್ನನ್ನು ಮತ್ತೆ ಗಾಯನದತ್ತ ಎಳೆದುಕೊಂಡು ಬಂದರು.  ‘ನಿಮ್ಮ  ಧ್ವನಿ ದೇಶದ ಜನತೆಯ ಸೊತ್ತು.  ಅದನ್ನು ಅವರಿಂದ ಕಿತ್ತುಕೊಳ್ಳುವ ಹಕ್ಕು ನಿಮಗಿಲ್ಲ’ ಎಂಬ ಅವರ ವಾದವನ್ನು ನಾನು ತಳ್ಳಿಹಾಕಲಾರದೆ ಮತ್ತೆ ಹಾಡತೊಡಗಿದೆ ಮತ್ತು ಕೊನೆ ಉಸಿರಿರುವವರೆಗೂ ಅದನ್ನು ಬಿಡುವುದಿಲ್ಲ ಎಂದು ನಿರ್ಧರಿಸಿದೆ.  

ನನಗೆ ಚಲನಚಿತ್ರಗಳನ್ನು ನೋಡುವ ಅಭ್ಯಾಸವೇ ಇಲ್ಲವೆಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅನಿವಾರ್ಯವಾಗಿ ಚಿತ್ರ ನೋಡುವ ಸಂದರ್ಭ ಬಂದರೆ ನಾನು ಟಾಕಿಸಲ್ಲೇ ನಿದ್ದೆ ಮಾಡಿಬಿಡುತ್ತೇನೆ!  ನಾನು ಆಸಕ್ತಿಯಿಂದ ಪೂರ್ತಿ ನೋಡಿದ ಚಿತ್ರ ಎಂದರೆ ಅದು  ಶೋಲೆ ಮಾತ್ರ. ಅದರ ಸ್ಟಂಟ್ ದೃಶ್ಯಗಳು ನನಗೆ ಇಷ್ಟವಾದವು. 

ಜನರಿಗೆ ಇಷ್ಟವಾದ ಹಾಡುಗಳೇ ನನಗೂ ಇಷ್ಟ.  ನನ್ನ ಹಾಡು ಜನಪ್ರಿಯವಾದಾಗ ನನ್ನ ಶ್ರಮ ಸಾರ್ಥಕವಾಯಿತು ಎಂದು ನನಗನ್ನಿಸುತ್ತದೆ.  ದುಲಾರಿ ಚಿತ್ರದ ಸುಹಾನಿ ರಾತ್ ಢಲ್ ಚುಕೀ ನನಗೆ ತುಂಬಾ ಇಷ್ಟವಾದ ಹಾಡು.



ನೀಲ್ ಕಮಲ್ ಚಿತ್ರದ ಬಾಬುಲ್ ಕೀ ದುವಾಯೆಂ ಲೇತಿ ಜಾ ಹಾಡಿನ ರೆಕಾರ್ಡಿಂಗ್ ನಡೆಯುತ್ತಿರುವಾಗ  ಎರಡು ದಿನಗಳಲ್ಲಿ ನಡೆಯಲಿದ್ದ ನನ್ನ ಮಗಳ ಮದುವೆಯ ದೃಶ್ಯಗಳು ಪೂರ್ವಭಾವಿಯಾಗಿ ನನಗೆ ಗೋಚರಿಸಿದವು.  ರೆಕಾರ್ಡಿಂಗ್ ಮುಗಿಯುವ ವರೆಗೂ ನನ್ನ ಕಣ್ಣುಗಳಿಂದ ಅಶ್ರುಧಾರೆ ಹರಿಯುತ್ತಲೇ ಇತ್ತು.


ಕೆಲವು ನೆನಪುಗಳು ಜೀವನ ಪೂರ್ತಿ ನಮ್ಮೊಡನಿರುತ್ತವೆ.  ಒಮ್ಮೆ ನಾನು ಕಶ್ಮೀರ್ ಕೀ ಕಲಿ ಚಿತ್ರದ ಹಾಡಿನ ರೆಕಾರ್ಡಿಂಗಲ್ಲಿ ವ್ಯಸ್ತನಾಗಿದ್ದೆ.  ಆ ಹೊತ್ತಿಗೆ  ಪುಟ್ಟ ಮಗುವಿನಂತೆ ಕುಣಿದಾಡುತ್ತಾ ಅಲ್ಲಿಗೆ ಅಲ್ಲಿಗೆ ಬಂದ ಶಮ್ಮಿ ಕಪೂರ್ ಮಗುವಿನದೇ ಧ್ವನಿಯಲ್ಲಿ  ‘ರಫಿ ಜೀ ರಫಿ ಜೀ, ಈ ಹಾಡಿಗೆ ನಾನು ಕುಣಿದು ಕುಫ್ಫಳಿಸುತ್ತಾ ನಟಿಸುವವನಿದ್ದೇನೆ.  ಆ ಚೇಷ್ಟೆಗಳನ್ನೆಲ್ಲ ಹಾಡಿನಲ್ಲಿ ತುಂಬಿ ಪ್ಲೀಸ್’ ಎಂದು ಗೋಗರೆದರು.  ಆ ಹಾಡೇ ಸುಭಾನಲ್ಲಾ ಹಸೀಂ ಚೆಹರಾ.



***********
BBCಯಿಂದ ಪ್ರಸಾರವಾಗಿದ್ದ interview.  ಹಾಡುವಾಗ ಆಕಾಶದೆತ್ತರಕ್ಕೆ ಏರುತ್ತಿದ್ದ ಅವರ ಧ್ವನಿ ಇಲ್ಲಿ ಮಾತನಾಡುವಾಗ ಎಷ್ಟು down to earth ಇದೆ ನೋಡಿ.



Thursday, 22 November 2018

ಪ್ರೇಮ ಕಾವ್ಯದ ಸಿಹಿ ಬರಹ



ಜೊ ವಾದಾ ಕಿಯಾ ವೊ  ಮತ್ತು ಬಹಾರೊ ಫೂಲ್ ಬರ್‌ಸಾವೋ ಇವೆರಡು ಮೊದಲ ಸಲ ರೇಡಿಯೋದಲ್ಲಿ ಕೇಳಿದ ಕೂಡಲೇ ನನ್ನ Top Ten ಹಾಡುಗಳ ಪಟ್ಟಿಗೆ  ಸೇರಿ ಇನ್ನೂ ಅಲ್ಲೇ ಉಳಿದಿರುವ  ಹಿಂದಿ ಹಾಡುಗಳು.  ಕನ್ನಡದಲ್ಲಿ ನನ್ನಿಂದ ಈ ಗೌರವ ಗಳಿಸಿದ ಏಕೈಕ ಹಾಡು ವಿರಹ ನೂರು ನೂರು ತರಹ.  ಇದನ್ನು ನಾನು ಮೊದಲು ಕೇಳಿದ್ದು ರೇಡಿಯೋದಲ್ಲಲ್ಲ, 4-11-1973ರ ಭಾನುವಾರದಂದು ಮಂಗಳೂರಿನ ಜ್ಯೋತಿ ಟಾಕಿಸಿನಲ್ಲಿ. ಅದೇ ಶುಕ್ರವಾರ ಬಿಡುಗಡೆಯಾಗಿದ್ದ ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಮ್ಯಾಟಿನಿ ನೋಡಲು ಸಹೋದ್ಯೋಗಿಗಳೊಂದಿಗೆ ಹೋಗಿದ್ದಾಗ ಚಿತ್ರ ಆರಂಭವಾಗುವ ಮೊದಲು ಈ ಹಾಡು ಹಾಕಿದ್ದರು.  ಕೈಯಲ್ಲಿ ಚಿತ್ರದ ಪದ್ಯಾವಳಿ ಇದ್ದುದರಿಂದಷ್ಟೇ ಇದು ಅದೇ ಚಿತ್ರದ ಹಾಡು ಎಂದು ನನಗೆ ಗೊತ್ತಾದದ್ದು. ಕನ್ನಡ  ಚಿತ್ರಗಳ ಮಟ್ಟಿಗೆ ಅಂದು ಇದು ಅಪರೂಪದ ಸಂಗತಿಯಾಗಿತ್ತು.  ಚಿತ್ರ ಬಿಡುಗಡೆ ಆಗಿ ಕೆಲವು ತಿಂಗಳುಗಳ ಬಳಿಕವಷ್ಟೇ ಗ್ರಾಮೊಫೋನ್ ರೆಕಾರ್ಡುಗಳು ತಯಾರಾಗುತ್ತಿದ್ದ ಕಾಲ ಅದು.


ಕೆಲ ವರ್ಷಗಳ ಹಿಂದೆ ಭಾರತೀಸುತ ಅವರ ಎಡಕಲ್ಲು ಗುಡ್ಡದ ಮೇಲೆ ಕಾದಂಬರಿ ಸುಧಾದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದುದನ್ನು ಒಂದೂ ಕಂತು ಬಿಡದೆ ಓದಿದ್ದೆ.  ಜಿ.ಕೆ. ಸತ್ಯ ಅವರು ಚಿತ್ರಿಸುತ್ತಿದ್ದ ಮಾಧವಿ ಮತ್ತು ದೇವಕಿಯರ ಚೆಲುವು, ನಂಜುಂಡನ ಕಟ್ಟುಮಸ್ತಾದ ದೇಹ ಆ ಧಾರಾವಾಹಿಯ ಹೈಲೈಟ್ ಆಗಿದ್ದವು.  ಚಿತ್ರದಲ್ಲಿ ಆ ಪಾತ್ರಗಳು ಹೇಗೆ ಮೂಡಿ ಬಂದಿವೆ ಎಂದು ತಿಳಿಯುವ ಕುತೂಹಲವಿತ್ತು.  ತೆರೆಯ ಮೇಲಿನ ಮಾಧವಿ ಮತ್ತು ದೇವಕಿ ಸುಮಾರಾಗಿ ಜಿ.ಕೆ. ಸತ್ಯ ಅವರು ಚಿತ್ರಿಸಿದಂತೆಯೇ  ಇದ್ದರೂ ನಂಜುಂಡ ವ್ಯತಿರಿಕ್ತವಾಗಿ ಕಂಡ.  ನನಗೆ ಕಥೆ ಮೊದಲೇ ಗೊತ್ತಿದ್ದುದರಿಂದ ಮುಂಬರುವ ಸನ್ನಿವೇಶಗಳನ್ನು ಮೊದಲೇ ಹೇಳುತ್ತಾ ಅಕ್ಕಪಕ್ಕದಲ್ಲಿ ಕೂತಿದ್ದ ಸಹೋದ್ಯೋಗಿಗಳಿಗೆ ಕಿರಿಕಿರಿ ಉಂಟುಮಾಡಿದ್ದೆ!

ಅದು ವರೆಗಿನ ಎಲ್ಲ ಪುಟ್ಟಣ್ಣ ಕಣಗಾಲ್ ಚಿತ್ರಗಳಿಗೆ ವಿಜಯಭಾಸ್ಕರ್ ಅವರದೇ ಸಂಗೀತ ಇರುತ್ತಿದ್ದುದು.  ಇದು ಶ್ರೀಕಾಂತ್  & ಶ್ರೀಕಾಂತ್  ತಯಾರಿಕೆಯಾದ್ದರಿಂದ ಆ ಸಂಸ್ಥೆಯೊಂದಿಗೆ ನಕ್ಕರೆ ಅದೇ ಸ್ವರ್ಗದ ಕಾಲದಿಂದಲೂ ಒಡನಾಡಿಯಾಗಿದ್ದ ಎಂ. ರಂಗರಾವ್ ಅವರು ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿರಬಹುದು. 

ಆಗಿನ್ನೂ ನಾನು ಶಾಸ್ತ್ರೀಯವಾಗಿ ಕೊಳಲು ಅಭ್ಯಾಸ ಆರಂಭಿಸಿರಲಿಲ್ಲ. ರಾಗ, ತಾಳ, ಶ್ರುತಿ ಅಂದರೆ ಏನೆಂದು ಗೊತ್ತಿರಲಿಲ್ಲ.   ಆದರೂ ನಾನೇ ತಯಾರಿಸಿದ್ದ  ಕೊಳಲಿನಲ್ಲಿ ಏಕಪಾಠಿಯಂತೆ ಒಮ್ಮೆ ಕೇಳಿದ ಹಾಡುಗಳನ್ನು ನುಡಿಸಬಲ್ಲವನಾಗಿದ್ದೆ. ಈ ಹಾಡಿನ ಆರಂಭದ ‘ವಿರಹಾ.....’  ಎಂಬ ಸಾಲಿನಲ್ಲಿ ಅದ್ಭುತ ಮಾಂತ್ರಿಕ  ಶಕ್ತಿ ಇದೆ. ನಾನು ಎಂದಾದರೂ  ಕೊಳಲಿನಲ್ಲಿ ಆ ಸಾಲು ನುಡಿಸಿದರೆ ಅದು ಎಂಥವರನ್ನೂ ಆಕರ್ಷಿಸುತ್ತಿತ್ತು.  ಒಮ್ಮೆ ಮಿತ್ರರೊಬ್ಬರ ರೂಮಲ್ಲಿ ಇದನ್ನು ನುಡಿಸಿದಾಗ ಅಕ್ಕಪಕ್ಕದ ಮನೆಯವರು ಇದು ಯಾವ ಸ್ಟೇಶನ್ ಎಂದು ಹುಡುಕಲು ತಮ್ಮ ರೇಡಿಯೊ ಬಿರಡೆ ತಿರುಗಿಸತೊಡಗಿದರಂತೆ!  ಆಗ ನಾನು ಶಾಲೆಗಳ ವಾರ್ಷಿಕೋತ್ಸವಗಳಿಗೆ ಕೊಳಲು ನುಡಿಸಲು ಹೋಗುವುದಿತ್ತು.  ನಾಟಕದ ದೃಶ್ಯಗಳ ಮಧ್ಯೆ ಇತರ ಜನಪ್ರಿಯ ಹಾಡುಗಳ ಜೊತೆಗೆ ಇದನ್ನೂ  ತಪ್ಪದೆ ನುಡಿಸುತ್ತಿದ್ದೆ.   ಒಂದು ಕಡೆ ಈ ಹಾಡಿನ ಆರಂಭದ ಆಲಾಪವನ್ನು ಕೇಳಿದ ಹಿರಿಯರೊಬ್ಬರು ಬಂದು ನಿಮ್ಮ ಕೊಳಲ ಧ್ವನಿ ಟಿ.ಆರ್. ಮಹಾಲಿಂಗಂ ಅವರ ಶೈಲಿಯನ್ನು ನೆನಪಿಸುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು!  

ಭೀಮ್ ಪಲಾಸ್ ರಾಗಾಧಾರಿತವಾದ ಈ ಹಾಡು ಕೇಳಲು ಬಲು ಮಧುರವಾದರೂ  8 ಅಕ್ಷರದ ಏಕತಾಳದ ಅತಿ ಕ್ಲಿಷ್ಟ ಲಯದಲ್ಲಿ ಸಂಯೋಜಿಸಲ್ಪಟ್ಟಿದೆ ಎಂದು ಶಾಸ್ತ್ರೀಯ ಸಂಗೀತದ ಆ ಆ ಈ ಕಲಿತ ಮೇಲೆ ನನಗೆ ಮನವರಿಕೆಯಾಯಿತು.  ಸಾಮಾನ್ಯವಾಗಿ ಹಾಡುಗಳು ತಾಳದ ಸಮದಲ್ಲಿ ಆರಂಭವಾಗುತ್ತವೆ.  ಇನ್ನು ಕೆಲವು ತಾಳದಲ್ಲಿ ಒಂದೋ ಎರಡೋ ಅಕ್ಷರ ಬಿಟ್ಟು ಅತೀತದಲ್ಲಿ ಅಥವಾ ಅಪರೂಪಕ್ಕೆ ತಾಳಕ್ಕಿಂತ  ಕೆಲವು ಅಕ್ಷರ ಮೊದಲು ಅನಾಗತದಲ್ಲಿ ಆರಂಭವಾಗುತ್ತವೆ.  ಆದರೆ ಈ ಹಾಡಲ್ಲಿ ಸಮ, ಅತೀತ ಮತ್ತು ಅನಾಗತ ಮೂರೂ ಇವೆ!   ಪಲ್ಲವಿ ಮೊದಲ ಸಾಲು ಆರಂಭವಾಗುವುದು ತಾಳಕ್ಕಿಂತ ಎರಡಕ್ಷರ ಮೊದಲು ಅನಾಗತದಲ್ಲಿ.  ಎರಡನೇ ಸಾಲು ತಾಳದ ಸಮದಲ್ಲಿ.  ಚರಣ ತಾಳದಿಂದ ಮೂರಕ್ಷರ ಬಿಟ್ಟು ಅತೀತದಲ್ಲಿ.  ಈ ಹಾಡಿನ ಅಕ್ಕ ಅನ್ನಬಹುದಾದ ಭೀಮ್ ಪಲಾಸ್ ರಾಗದ್ದೇ ಆದ ಹೂವು ಚೆಲುವೆಲ್ಲ ನಂದೆಂದಿತು ಕೂಡ ತಾಳದ ಇದೇ ಅಚ್ಚಿನಲ್ಲಿ  ಸಂಯೋಜಿತವಾಗಿರುವುದು.

ಸಿನಿಮಾ ಸಂಗೀತವೆಂದರೆ ಅಲ್ಲಿ ರಾಗ, ತಾಳ, ಲಯ ಏನೂ ಇರುವುದಿಲ್ಲ ಎಂದು ಸಂಕುಚಿತ ಮನೋಭಾವದ ಕೆಲವರು  ಮೂಗು ಮುರಿಯುವುದುಂಟು.  ಆದರೆ ವಾಸ್ತವದಲ್ಲಿ ಅದು ಬೇಕಿದ್ದರೆ ಒಂದು ಕ್ಯಾಬರೇ ಹಾಡೇ ಆಗಿದ್ದರೂ ಸಂಗೀತದ ಎಲ್ಲ ನಿಯಮಗಳನ್ನೂ ಪಾಲಿಸಿರುತ್ತದೆ.  ತಾಳ ಮತ್ತು ಲಯಕ್ಕಂತೂ ಹೆಚ್ಚೇ ಪ್ರಾಧಾನ್ಯ ನೀಡಲಾಗಿರುತ್ತದೆ.  ಆದರೆ ಏಕೋ ಈ ಹಾಡಲ್ಲಿ ಆ ನಿಟ್ಟಿನಲ್ಲಿ ಸ್ವಲ್ಪ ಎಡವಟ್ಟಾಗಿದೆ!

ಪಲ್ಲವಿ ಮತ್ತು ಒಂದನೇ ಚರಣ  ಮುಗಿಯುವ ವರೆಗೆ ಅನಾಗತ, ಸಮ, ಅತೀತ ನಿಯಮಗಳನ್ನು ಪಾಲಿಸುತ್ತಾ 8 ಅಕ್ಷರದ ಏಕತಾಳದಲ್ಲಿ ಸಲೀಸಾಗಿ ಸಾಗುವ ಹಾಡು ಎರಡನೇ ಗಂಧರ್ವ ಲೋಕದಲ್ಲಿ ಚರಣದ ಆಲಾಪ ಮತ್ತು ಕೋರಸ್ ಭಾಗದ ನಂತರ ಅರ್ಧ ತಾಳ ಅಂದರೆ 4 ಮಾತ್ರೆಗಳಷ್ಟು  drift ಆಗಿ ಕೊನೆ ವರೆಗೆ ಹಾಗೇಯೇ ಮುಂದುವರಿಯುತ್ತದೆ!  ಇದೊಂದು ಬಲು ಅಪರೂಪದ ವಿದ್ಯಮಾನ.   ಸಂಗೀತ ನಿರ್ದೇಶಕರಿಗೆ, ಹಾಡಿದವರಿಗೆ, arrangersಗೆ, ತಾಳ ವಾದ್ಯಗಳನ್ನು ನುಡಿಸಿದವರಿಗೆ ಖಂಡಿತವಾಗಿ ಇದು ಗೊತ್ತಾಗಿರುತ್ತದೆ.  ಆದರೆ ಉಳಿದಂತೆ ಅತಿ ಶ್ರೇಷ್ಠವಾಗಿ  ಮೂಡಿ ಬಂದ  ಹಾಡು ಇನ್ನೊಂದು ಟೇಕ್ ಮಾಡಿದರೆ ಅಷ್ಟು ಚೆನ್ನಾಗಿ ಬರಲಾರದು ಎಂದೆನ್ನಿಸಿ ಹಾಗೆಯೇ ಉಳಿಸಿಕೊಂಡಿರಬಹುದೇನೋ ಎಂದು ನನ್ನ ಊಹೆ.   ಇದೊಂದು ತಾಂತ್ರಿಕ ಅಂಶವೇ ಹೊರತು ಹಾಡಿನ ಮೌಲ್ಯ ಇದರಿಂದ ಒಂದಿನಿತೂ ಕಮ್ಮಿಯಾಗಿಲ್ಲ.  ಸಾಮಾನ್ಯ ಕೇಳುಗರಿಗೆ ಇದು ಗೊತ್ತೂ ಆಗುವುದಿಲ್ಲ.  ಆಸಕ್ತಿ ಇದ್ದವರು ಬೇಕಿದ್ದರೆ ತಾಳ ಹಾಕುತ್ತಾ ಹಾಡು ಕೇಳಿ ಪರೀಕ್ಷಿಸಬಹುದು.  ಎರಡನೆ ಚರಣ ಭಾಗದ ಸ್ವರಲಿಪಿಯಲ್ಲೂ ಇದನ್ನು ಸ್ಪಷ್ಟವಾಗಿ ಗುರುತಿಸಬಹುದು.


ಹಾಡು ಕೇಳಲು ಬಾಣದ ಗುರುತಿನ ಮೇಲೆ ಕ್ಲಿಕ್ಕಿಸಿ.




ವೀರ ಕೇಸರಿಯ ಹಾಡನ್ನು ತಪ್ಪಾಗಿ  ಮೆಲ್ಲುಸಿರೇ ಸವಿಗಾನ ಎಂದಂತೆ ಈ ಹಾಡಿನ ಮೊದಲ ಸಾಲು  ವಿರಹ ನೋವು ನೂರು ತರಹ ಎಂದು ವಾದಿಸುವವರೂ ಇದ್ದಾರೆ! ಸರಿಯಾಗಿ ಗಮನಿಸದಿದ್ದರೆ ಕೆಲವೊಮ್ಮೆ ಅದು ನೋರು ನೂರು ತರಹ ಎಂದು ಕೇಳಿಸುವುದು ಹೌದು.  ಆದರೆ ಹೆಡ್ ಫೋನ್ ಹಾಕಿಕೊಂಡರೆ ನೂರು ನೂರು ಎಂದೇ ಸ್ಪಷ್ಟವಾಗಿ ಕೇಳಿಸುತ್ತದೆ.

ಕೆಲವರಿಗೆ ಈ ಹಾಡಿನಲ್ಲಿ ನೈನೋಂ ಮೆಂ ಬದ್‌ರಾ ಛಾಯೆಯ ಛಾಯೆ ಕಾಣಿಸುವುದುಂಟು. ಅದೇ ರಾಗ, ಸುಮಾರಾಗಿ ಅದೇ ಮೀಟರ್ ಇರುವುದರಿಂದ ಹೀಗನ್ನಿಸಬಹುದೇ ಹೊರತು ಧಾಟಿಯಲ್ಲಿ ಎಲ್ಲೂ ಹೋಲಿಕೆ ಕಂಡು ಬರುವುದಿಲ್ಲ.
ನಾನು ಕಾರ್ಯಕ್ರಮವೊಂದರಲ್ಲಿ ನುಡಿಸಿದ ಈ ಹಾಡಿನ ಸಂಯೋಜಿತ ವೀಡಿಯೊ ಇಲ್ಲಿ ನೋಡಬಹುದು. ಆಹ್ಲಾದಕರ ಆಡಿಯೊ ಅನುಭವಕ್ಕಾಗಿ ಹೆಡ್‌ಫೋನ್ ಬಳಸಿ.



Tuesday, 6 November 2018

ಹಬ್ಬ ತಂದ ಮಿಠಾಯಿ ಸುಬ್ಬ


ಕಾಲಗರ್ಭದಲ್ಲಿ ಅಡಗಿ ಹೋಗಿರುವ ಬಲು ಅಪರೂಪದ ಹಳೆಯ ಹಾಡುಗಳನ್ನು ಹುಡುಕಿ ಕೇಳಿಸುವುದು  ಯಾವಾಗಲೂ ನನ್ನ ಪ್ರಯತ್ನವಾಗಿರುತ್ತದೆ. ಇಂಥ ಹಾಡುಗಳು ಎಲ್ಲರಿಗೂ ಇಷ್ಟವಾಗಲಾರವಾದರೂ ಒಂದು ದಾಖಲೆಯ ರೂಪದಲ್ಲಿ ಇರಲಿ ಎಂಬ ದೃಷ್ಟಿಯಿಂದ ನಾನು ಈ ಕೆಲಸ ಮಾಡುತ್ತೇನೆ. ಎಡ್ವಾನ್ಸ್ ಬುಕಿಂಗ್ ಮಾಡಿ ಸಿನಿಮಾ ಟಾಕೀಸಿಗೆ ಹೋದಾಗ ಅಲ್ಲಿ ಜನಸಂದಣಿಯೇ ಇಲ್ಲದಿರುವಂತೆ ಅಥವಾ ಬಸ್ಸಿನ ಸೀಟು ರಿಸರ್ವ್ ಮಾಡಿಸಿ ಹೋದಾಗ ಎಲ್ಲ ಸೀಟುಗಳು ಖಾಲಿ ಇರುವಂತೆ ಕೆಲವು ಸಲ ನಾನು ಕಷ್ಟ ಪಟ್ಟು ಹುಡುಕಿ ಹಾಕಿದ ಹಾಡಿನ ಇಡೀ ಸಿನಿಮಾವೇ ಅಂತರ್ಜಾಲದಲ್ಲಿ ಸುಲಭವಾಗಿ ಲಭ್ಯವಾಗಿ ನನ್ನ ಒಣ ಪ್ರತಿಷ್ಠೆ ಠುಸ್ಸೆನ್ನುವುದೂ ಇದೆ! ಈಗ ನಾನು ಕೇಳಿಸಲಿರುವ ಹಾಡು ಅಂತರ್ಜಾಲಕ್ಕೆ ಪಾತಾಳ ಗರಡಿ ಹಾಕಿ ಶೋಧಿಸಿದರೂ ಸದ್ಯಕ್ಕಂತೂ ಎಲ್ಲೂ ಸಿಗಲಾರದು ಎಂಬ ನಂಬಿಕೆ ನನ್ನದು. 

ಕಾಡಿಗೆ ಮಾರುವ ಸುರ್ಮಾ ಮೇರಾ ನಿರಾಲಾ,  ಬೋರೆ ಹಣ್ಣುಗಳನ್ನು ಮಾರುವ ಬೇರ್‍ ಲ್ಯೋ ಮೇವಾ ಗರೀಬೋಂ ಕಾ, ಬಳೆಗಳನ್ನು ಮಾರುವ ಲೇ ಲೋ ಚೂಡಿಯಾಂ ನೀಲಿ ಪೀಲಿ ಲಾಲ್ ಹರಿ ಆಸ್‌ಮಾನಿ,  ಸಿಯಾಳ ಮಾರುವ ಯೇಲೋರೇ ಲೇಲೋ ಬಾಬು ಪೀ ಲೋ ನಾರಿಯಲ್ ಪಾನಿ,  ಚಹಾ ಮಾರುವ ಆಹೇಂ ನ ಭರ್ ಠಂಡಿ ಠಂಡಿ ಗರಮ್ ಗರಮ್ ಚಾಯ್ ಪೀಲೆ, ಮೊಬೈಲ್ ಹೋಟೇಲಿನ ಆಯಾ ಮೈ ಲಾಯಾ ಚಲ್‌ತಾ ಫಿರ್‌ತಾ ಹೋಟಲ್, ಖಾಲಿ ಬಾಟ್ಲಿಗಳನ್ನು ಮಾರುವ ಖಾಲಿ ಡಬ್ಬಾ ಖಾಲಿ ಬೋತಲ್ ಲೇಲೆ ಮೇರೆ ಯಾರ್ ಮುಂತಾದವು  ವಿವಿಧ ವಸ್ತುಗಳನ್ನು ವಿಕ್ರಯಿಸುವ ಹಿಂದಿಯ ಕೆಲವು ಹಾಡುಗಳು.  ಇದೇ ರೀತಿ ಕನ್ನಡದಲ್ಲಿ  ವರದಕ್ಷಿಣೆ ಚಿತ್ರದ ಸುಂದರ್ ಟೂತ್ ಪೌಡರ್, ಪರೋಪಕಾರಿ ಚಿತ್ರದ ಬೇಕೆ ಐಸ್ ಕ್ರೀಮ್, ದೇವರ ಮಕ್ಕಳು ಚಿತ್ರದ ಬೇಕೇನು ಸಾಮಾನು ನೋಡು ನೋಡು, ದುಡ್ಡೇ ದೊಡ್ಡಪ್ಪ  ಚಿತ್ರದ ಸೋ ಸೋ ಸೋ ಡಾ ಡಾ ಡಾ, ದಾಹ ಚಿತ್ರದ ಬಳೆಗಾರ ಚೆನ್ನಯ್ಯ ಇತ್ಯಾದಿಗಳ ಸಾಲಿನಲ್ಲಿ ಬಂದದ್ದೇ 1965ರ ಅಮರಜೀವಿ ಚಿತ್ರದ ಮಿಠಾಯಿ ಮಾರುವ ಸುಬ್ಬನ ಹಾಡು.

ಈಗ ಈ ಚಿತ್ರದ ಹಳ್ಳಿಯೂರ ಹಮ್ಮೀರ ಹಾಡು ಮಾತ್ರ ಕೇಳಲು ಸಿಗುತ್ತಿದೆ.  ನಮ್ಮ ಅಂದಿನ ನ್ಯಾಶನಲ್ ಎಕ್ಕೋ ರೇಡಿಯೋದ ದಿನಗಳಲ್ಲಿ ಈಗ ಆಕಾಶವಾಣಿ ಧಾರವಾಡ ಇರುವ ಮೀಟರಿನಲ್ಲಿ ಅತಿ ಸ್ಪಷ್ಟವಾಗಿ ಕೇಳುತ್ತಿದ್ದ ಭದ್ರಾವತಿ ನಿಲಯದಿಂದ ಈ ಚಿತ್ರದ   ಎಲ್ಲ ಹಾಡುಗಳು  ದಿನ ನಿತ್ಯ ಎಂಬಂತೆ ಪ್ರಸಾರವಾಗುತ್ತಿದ್ದವು. ಅವುಗಳ ಪೈಕಿ ಭಲಾರೆ ಹೆಣ್ಣೆ ಮತ್ತು ಈ ಮಿಠಾಯಿ ಸುಬ್ಬನ ಹಾಡು ನನಗೆ ಅತಿ ಪ್ರಿಯವಾಗಿದ್ದವು. ಈಗ ಆ ಭಲಾರೆ ಹೆಣ್ಣು ಎಲ್ಲಿ ಕಾಣೆಯಾಗಿದ್ದಾಳೆಂದು ಗೊತ್ತಿಲ್ಲ.

ಅಮರಜೀವಿ ಚಿತ್ರದ್ದು ಒಂದು ವಿಶೇಷ ಇದೆ.  ಚಿತ್ರೀಕರಣ ಆರಂಭವಾದಾಗ ಇದರ ಹೆಸರು ಹಳ್ಳಿಯ ಹುಡಿಗಿ ಎಂದಾಗಿತ್ತು! ಆ ಹೆಸರಿನೊಂದಿಗೆ ಚಿತ್ರದ ಜಾಹೀರಾತೂ ಬಿಡುಗಡೆಯಾಗಿತ್ತು. ಆಗ ಚಿಂದೋಡಿ ಲೀಲಾ ಅಭಿನಯಿಸುತ್ತಿದ್ದ, ಬಹುಶಃ ಗುಬ್ಬಿ ಕಂಪನಿಯ ಇದೇ ಹೆಸರಿನ ನಾಟಕ ಬಲು ಪ್ರಸಿದ್ಧವಾಗಿತ್ತು. ಆವರ ಆಕ್ಷೇಪದಿಂದ ಹೆಸರು ಬದಲಾಯಿತೇ ಎಂದು ಗೊತ್ತಿಲ್ಲ.  ಈ ಚಿತ್ರ ಆ ನಾಟಕವನ್ನಾಧರಿಸಿದ್ದೇ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಹಿಂದಿಯಲ್ಲೂ ಚಿತ್ರಗಳ ಹೆಸರು ಬದಲಾವಣೆಯಾದ ಉದಾಹರಣೆಗಳಿವೆ.  ಶಮ್ಮಿ ಕಪೂರ್ ಅಭಿನಯದ ಜಂಗ್ಲಿಗೆ ಮೊದಲು ಮಿಸ್ಟರ್ ಹಿಟ್ಲರ್ ಎಂದು ಹೆಸರಿಡಲಾಗಿತ್ತಂತೆ. ಮರೋ ಚರಿತ್ರದ ಹಿಂದಿ ಅವತರಣಿಕೆ ಮೊದಲು ಏಕ್ ನಯಾ ಇತಿಹಾಸ್ ಆಗಿದ್ದದ್ದು ನಂತರ ಏಕ್ ದೂಜೆ ಕೇ ಲಿಯೆ ಎಂದು ಬದಲಾಯಿತು.  ಅದರ ಒಂದು ಹಾಡಲ್ಲಿ ಏಕ್ ನಯಾ ಇತಿಹಾಸ್ ಬನಾಯೇಂಗೆ ಎಂಬ ಸಾಲು ಇರುವುದನ್ನು ಗಮನಿಸಬಹುದು.


ರಾಜಾ ಶಂಕರ್, ಹರಿಣಿ, ನರಸಿಂಹರಾಜು ಮುಂತಾದವರ ತಾರಾಗಣವಿದ್ದು ವಿಜಯಭಾಸ್ಕರ್ ಸಂಗೀತವಿದ್ದ ಅಮರಜೀವಿ ಚಿತ್ರದ ಮಿಠಾಯಿ ಸುಬ್ಬನ ಹಾಡು ಹಾಡಿದ್ದು ನಾನು ಕನ್ನಡದ ಮನ್ನಾಡೆ ಎಂದು ಕರೆಯುವ ಪೀಠಾಪುರಂ ನಾಗೇಶ್ವರ ರಾವ್. ಒಂದು ಕಾಲದಲ್ಲಿ ರಾಜ್ ಕುಮಾರ್ ದನಿಯಾಗಿ ಅಣ್ಣ ತಂಗಿ ಚಿತ್ರದ ಕಂಡರೂ ಕಾಣದ್ ಹಾಂಗೆ ಎಂದು ಹಾಡಿದ್ದ ಇವರು ಆ ಮೇಲೆ ಕನ್ನಡ, ತೆಲುಗು ಎರಡೂ ಭಾಷೆಗಳಲ್ಲಿ ಹಿನ್ನೆಲೆ ಮತ್ತು ಕಾಮಿಡಿ ಹಾಡುಗಳಿಗೆ ಸೀಮಿತರಾದರು. 70ರ ದಶಕದಲ್ಲಿ ಹೀರೋಗಳೇ ಕಾಮಿಡಿ ಮಾಡತೊಡಗಿ ಒಂದೆರಡು ಕಂಠಗಳೇ ಎಲ್ಲ ರೀತಿಯ ಹಾಡುಗಳನ್ನು ಹಾಡುವ ಪರಂಪರೆ ಆರಂಭವಾದ ಪರಿಣಾಮ  ತನ್ನ ಸಮಕಾಲೀನ ಅನೇಕ ಗಾಯಕರಂತೆ ಇವರೂ ಮರೆಯಾಗಿ ಹೋದರು.

50-60ರ  ದಶಕಗಳಲ್ಲಿ ಹಾಡುಗಳಿಗೆ ವೈವಿಧ್ಯ ಒದಗಿಸುತ್ತಿದ್ದ ಗಾಯಕ ಗಾಯಕಿಯರ ಗಡಣವನ್ನು ಈ ಚಿತ್ರದಲ್ಲಿ ನೋಡಬಹುದು.  ಮಧ್ಯದ ಸಾಲಿನಲ್ಲಿ ಟೈ ಧರಿಸಿದವರು ಪೀಠಾಪುರಂ.


ಅಮರಜೀವಿ ಚಿತ್ರದ ಜಾಹೀರಾತಲ್ಲಿ ಹೆಸರಿರುವ ಕಣಗಾಲ್ ಪ್ರಭಾಕರ ಶಾಸ್ತ್ರಿ, ಕು.ರ.ಸೀ ಮತ್ತು ಎಸ್.ಕೆ. ಕರೀಂ ಖಾನ್ ಅವರ ಪೈಕಿ ಕೈಲಾಸಂ ಶೈಲಿಯ ಈ ಹಾಡಿನ ರಚನೆ ಯಾರದ್ದೆಂದು ಗೊತ್ತಿಲ್ಲ.  ಇಲ್ಲಿ ಬಣ್ಣಿಸಲಾಗಿರುವ ವಿವಿಧ ಪ್ರಾಣಿಗಳ ಆಕಾರದ ಮಿಠಾಯಿಗಳು, ಬಿಸ್ಕತ್ತುಗಳು ಮಕ್ಕಳಿಗೆ ಯಾವಾಗಲೂ ಪ್ರಿಯವೇ.  ನಾವೆಲ್ಲರೂ ಚಿಕ್ಕಂದಿನಲ್ಲಿ ಇಷ್ಟ ಪಟ್ಟವರೇ.  ಒಬ್ಬ ಹಳ್ಳಿಗಾಡಿನ street singer ಶೈಲಿಗೆ ಸರಿಹೊಂದುವಂತೆ   ಜಾನಪದ ಮೂಲದ ವಾದ್ಯಗಳನ್ನೇ ಬಳಸಿ ವಿಜಯಭಾಸ್ಕರ್ ಸಂಯೋಜಿಸಿದ ಈ ಹಾಡನ್ನು ಈಗ ಆಲಿಸೋಣ.  ನೀವು 1960ಕ್ಕಿಂತ ಮೊದಲು ಜನಿಸಿದವರಾಗಿದ್ದು ಬಾಲ್ಯದಲ್ಲಿ ರೇಡಿಯೋ ಕೇಳುವ ಹವ್ಯಾಸ ಉಳ್ಳವರಾಗಿದ್ದರೆ ಒಂದು ಕ್ಷಣ ಅಂದಿನ ಕಾಲವನ್ನು ಮರು ಜೀವಿಸೋಣ.




ಸುಬ್ಬ ಬಂದ ಹಬ್ಬ ತಂದ
ಮಿಠಾಯಿ ಮಾರ್ತಾ ಮಂದ್ಯಾಗೆ
ಮಂಡ್ಯ ಸಕ್ರೆ ದಂಡ್ಯಾಗ್ ಬೆರ್ಸಿ
ತಂದಿವ್ನಿಲ್ಗೆ ನಿಮ್ಗಾಗೆ

ಇದೋ ನೋಡಿ ರಂಭಾ ಮಿಠಾಯಿ
ವಾರೆ ನೋಟ ಕಣ್ಣಾಗೈತೆ
ಕಣ್ಣಿಗ್ ಕಟ್ಟೊ ಬಣ್ಣ ಐತೆ
ಇದನು ತಿಂದ್ರೆ ಹಲ್ದಿಲ್ದಿದ್ರೂ
ಬಾಯ್ನಾಗೆ ಹಾಗೇ ಕರಗ್ ಹೋಗ್ತೈತೆ
ಹನುಮ ತಿಂದ ಗುಡ್ಡವ ತಂದ
ಭೀಮ ತಿಂದ ಕೀಚಕ್ನ ಕೊಂದ
ಅದ್ನೇ ತಂದಿವ್ನಿ ನಿಮ್ಗಾಗೆ

ಇದೋ ನೋಡಿ ಕಡ್ಡಿ ಚಿಕ್ಕ
ಇವ್ನು ಬಲು ಘಾಟಿ ಪಕ್ಕಾ
ಇವ್ನನ್ ಬಿಟ್ರೆ ಮತ್ತೆ ಸಿಕ್ಕ
ಕುದ್ರೆ ಬೇಕೋ ಆನೆ ಬೇಕೋ
ಮರ ಏರೊ ಮಂಗ ಬೇಕೋ
ಇಲ್ವೆ ಜಂಬದ್ ಕೋಳಿ ಬೇಕೊ
ನಿಂಗ ತಿಂದು ಸಂಗ ಬಿಟ್ಟ
ಮುದ್ದ ತಿನ್ನೋಕ್ ಒದ್ದಾಡ್ಬಿಟ್ಟ
ಮತ್ತೆ ಸಿಗ್ದು ಮುಗ್ದ್ ಹೋದ್ ಮ್ಯಾಗೆ


* * * * * *
11-Apr-2020

ಹಳೆ ಧ್ವನಿಮುದ್ರಿಕೆಗಳ ಸಂಗ್ರಾಹಕ ಬಿ.ಆರ್. ಉಮೇಶ್ ಒದಗಿಸಿದ ಡಿಸ್ಕ್ ಲೇಬಲ್ ಈ ಹಾಡು ಗೀತಪ್ರಿಯ ಅವರ ರಚನೆ ಎಂದು ಖಚಿತ ಪಡಿಸಿತು.  ದೂರದ ಕಲ್ಕತ್ತಾದಲ್ಲಿ ಗ್ರಾಮೊಫೋನ್ ಡಿಸ್ಕುಗಳು ತಯಾರಾಗುತ್ತಿದ್ದುದರಿಂದ ಕನ್ನಡ, ಇಂಗ್ಲಿಶ್ ಎರಡರಲ್ಲೂ ‘ಸುಬ ಬಾಂದ’ ಎಂದು ಮುದ್ರಿತವಾಗಿರುವುದನ್ನು ಗಮನಿಸಬಹುದು!





Monday, 29 October 2018

ಪೋಸ್ಟ್ ಮಾಸ್ತರರ ಮಸ್ತ್ ಮೆಲೊಡಿ


ಹಂಸಗೀತೆಯ ನಂತರ ಗಡ್ಡ ಬೆಳೆಸಿ ಅವಧೂತರಂತಾಗಿ ತನ್ನನ್ನು ಸಂಪೂರ್ಣವಾಗಿ ಕಲಾತ್ಮಕ ಚಿತ್ರಗಳಿಗೆ ಮುಡಿಪಾಗಿರಿಸಿದ ಗಣಪತಿ ವೆಂಕಟರಮಣ ಅಯ್ಯರ್ ಅಂದರೆ ಜಿ.ವಿ. ಅಯ್ಯರ್ 50ರ ದಶಕದಿಂದಲೂ ಕಮರ್ಷಿಯಲ್ ಚಿತ್ರಗಳಲ್ಲಿ ನಿರ್ಮಾಪಕನಾಗಿ, ನಿರ್ದೇಶಕನಾಗಿ, ನಟನಾಗಿ, ಗೀತ ರಚನಾಕಾರನಾಗಿ ಸಕ್ರಿಯರಾಗಿದ್ದವರು. 60ರ ದಶಕದಲ್ಲಿ ತಾಯಿ ಕರುಳು, ಬಂಗಾರಿ, ಲಾಯರ್ ಮಗಳು ಮುಂತಾದ ಚಿತ್ರಗಳ ಸಾಲಿನಲ್ಲಿ 1964ರಲ್ಲಿ ಅವರು ನಿರ್ಮಿಸಿ ನಿರ್ದೇಶಿಸಿದ ಒಂದು ಸದಭಿರುಚಿಯ ಚಿತ್ರ ಪೋಸ್ಟ್ ಮಾಸ್ಟರ್.

  
ಅಯ್ಯರ್ ಅವರ ಹಿಂದಿನ ಕೆಲವು ಚಿತ್ರಗಳಲ್ಲೂ ನಾಯಕಿಯಾಗಿದ್ದ ವಂದನಾ, ವೀರ ಸಂಕಲ್ಪದ ಮೂಲಕ ಬೆಳ್ಳಿತೆರೆಗೆ ಪರಿಚಯಿಸಲ್ಪಟ್ಟಿದ್ದ ಬಿ.ಎಂ. ವೆಂಕಟೇಶ್, ಟಿ.ಎನ್. ಬಾಲಕೃಷ್ಣ ಮುಂತಾದವರ ತಾರಾಗಣವಿದ್ದ ಈ ಚಿತ್ರದ ಪ್ರಮುಖ ಆಕರ್ಷಣೆ ಪೋಸ್ಟ್ ಮಾಸ್ತರರ ಪಾತ್ರದಲ್ಲಿ ಅಭಿನಯಿಸಿದ ಹಿರಿಯ ಪೋಷಕ ನಟ ಬಿ.ಕೆ. ಈಶ್ವರಪ್ಪ. ಕೆ.ಎಸ್. ಅಶ್ವಥ್ ಅವರಂತೆಯೇ ಸಹಜ ಅಭಿನಯಕ್ಕೆ ಹೆಸರಾಗಿದ್ದ  ಇವರು ಸಂಭಾಷಣೆ ಹೇಳುವ ರೀತಿ ಬಲು ಚಂದ.  ಕೆಲವು ಕೋನಗಳಲ್ಲಿ ಬಿ.ಆರ್. ಪಂತುಲು ಅವರಂತೆ ಕಾಣುತ್ತಿದ್ದ  ಇವರ ಬಗ್ಗೆ  ಹೆಚ್ಚಿನ ಮಾಹಿತಿ ಲಭ್ಯವಿಲ್ಲ.  ಯಾವ ಪತ್ರಿಕೆಯಲ್ಲೂ ಇವರ ಬಗ್ಗೆ ಓದಿದ ನೆನಪಿಲ್ಲ. 70ರ ದಶಕ ಕಾಲಿರಿಸುತ್ತಿದ್ದಂತೆ ಹಿನ್ನೆಲೆಗೆ ಸರಿಯತೊಡಗಿದ ಇವರು ಹೊಂಬಿಸಿಲು ಚಿತ್ರದಲ್ಲೊಮ್ಮೆ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

ಕಥಾ ಸಾರಾಂಶ
ಪೋಸ್ಟ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆನಂದತೀರ್ಥರಾಯರು ಶಿಸ್ತಿನ ಸಿಪಾಯಿ.  ಕಚೇರಿಗೆ ಯಾರಾದರೂ ಒಂದು ನಿಮಿಷ ತಡವಾಗಿ ಬಂದರೂ ಸಹಿಸುವವರಲ್ಲ. ಲೆಕ್ಕಾಚಾರದಲ್ಲಿ ಕಟ್ಟುನಿಟ್ಟು.  ಸರಿಯಾದ ಸಮಯಕ್ಕೆ ಬಂದು ಸರಿಯಾದ ಕೆಲಸ ಮಾಡುವುದಕ್ಕೆ ಸರಕಾರ ತಮಗೆ ಸಂಬಳ ಕೊಡುವುದು ಎಂದು ನಂಬಿದ್ದವರು.  ಹೆಂಡತಿ, ಮಗಳು ರೂಪಾ ಮತ್ತು ಇಬ್ಬರು ಪುಟ್ಟ ಗಂಡು ಮಕ್ಕಳ ಸುಖಿ ಸಂಸಾರ ಇವರದ್ದು.  ಮಗಳು ರೂಪಾ ತನ್ನ ಕಚೇರಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಜಯಣ್ಣನನ್ನು ಪ್ರಿತಿಸುತ್ತಿರುವುದು ಗೊತ್ತಾದ ರಾಯರು ಒಮ್ಮೆ ಸಿಟ್ಟಿಗೆದ್ದರೂ ಸರ್ವದಾ ಆಕೆಯ ಕ್ಷೇಮವನ್ನೇ ಬಯಸುತ್ತಿದ್ದ ಅವರು ಈ ಸಂಬಂಧಕ್ಕೆ ಒಪ್ಪಿ ನಿಶ್ಚಿತಾರ್ಥವನ್ನೂ ನೆರವೇರಿಸಿದರು. ಒಂದು ದಿನ  ಜಯಣ್ಣನ ಸುಪುರ್ದಿನಲ್ಲಿದ್ದ ಕಚೇರಿಯ ಹತ್ತು ಸಾವಿರ ರೂಪಾಯಿಗಳನ್ನು ಆತನ ಆಶ್ರಯದಾತನಾಗಿದ್ದ ಚಿಕ್ಕಪ್ಪ  ಅಪಹರಿಸಿದ. ಮರು ದಿನ ಪೋಸ್ಟ್ ಮಾಸ್ಟರ್   ಜನರಲ್ ಇನ್ಸ್‌ಪೆಕ್ಷನ್‌ಗಾಗಿ ಬರುವವರಿದ್ದರು.  ಧನ ದುರುಪಯೋಗದ ಅಪರಾಧಕ್ಕೆ ತನ್ನ ಅಳಿಯನಾಗುವವ ಜೈಲು ಪಾಲಾದರೆ ತನ್ನ ಮುದ್ದಿನ ಮಗಳ ಬಾಳು ಮೂರಾಬಟ್ಟೆಯಾಗುತ್ತದೆ ಎಂದೆಣಿಸಿದ  ಪೋಸ್ಟ್ ಮಾಸ್ಟರ್ ಆನಂದತೀರ್ಥರಾಯರು ಅಪವಾದವನ್ನು ತಾನು ಹೊತ್ತು ಕಚೇರಿಯಲ್ಲೊಂದು ಪತ್ರ ಬರೆದಿಟ್ಟು ರಾತೋ ರಾತ್ರಿ ಊರು ಬಿಟ್ಟು ಹೊರಟು ಹೋದರು.  ಆನಂದತೀರ್ಥರಾಯರು ನಿರಪರಾಧಿ, ತಪ್ಪು ತನ್ನದೇ ಎಂದು ಜಯಣ್ಣ ಹೇಳಿದಾಗ ಮನೆಯವರಿಗೆ ಇದ್ದುದರಲ್ಲೇ ಸ್ವಲ್ಪ ಸಮಾಧಾನವಾಯಿತು.  ಇತ್ತ ಕಡೆ ರೈಲು ನಿಲ್ದಾಣವೊಂದರಲ್ಲಿ ಮಲಗಿದ್ದ ಆನಂದತೀರ್ಥರಾಯರ ಚೀಲವನ್ನು ಕಳ್ಳನೊಬ್ಬ ಲಪಟಾಯಿಸಿ ಓಡುವಾಗ ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಹತನಾದ.  ಚೀಲದಲ್ಲಿದ್ದ ಬಟ್ಟೆ ಬರೆಗಳ ಆಧಾರದಿಂದ ಸತ್ತದ್ದು ಆನಂದತೀರ್ಥರಾಯರೇ ಎಂದು ನಿರ್ಧರಿಸಲಾಯಿತು.  ಮನೆಯವರಿಗೂ ಸುದ್ದಿ ಮುಟ್ಟಿತು.  ಆದರೆ  ಅವರು ಧೈರ್ಯಗೆಡದೆ ಆನಂದತೀರ್ಥರಾಯರು ಕಲಿಸಿದ್ದ ಆದರ್ಶದಂತೆ ನಡೆದು ಬದುಕು ಸಾಗಿಸತೊಡಗಿದರು.  ಮಗಳು ರೂಪಾ ತನ್ನ ಜವಾಬ್ದಾರಿಗಳು ಮುಗಿಯದೆ ಜಯಣ್ಣನನ್ನು ಮದುವೆಯಾಗಲು ನಿರಾಕರಿಸಿದಳು. ತಾನು ಏನಾದರೂ ಸಾಧಿಸಬೇಕೆಂದು ಜಯಣ್ಣ ಪೈಲಟ್ ಆಗಿ ಸೇನೆಯಲ್ಲಿ ಭರ್ತಿ ಆದ. ರಾಯರ ಪತ್ನಿಯು ಕೊರಗಿ ಕೊರಗಿ ದೃಷ್ಟಿ ಕಳೆದುಕೊಂಡಳು. ಹುಡುಗರು ದೊಡ್ಡವರಾಗಿ ಒಬ್ಬ ಸ್ಕೂಲ್ ಇನ್ಸ್ಪೆಕ್ಟರ್ ಮತ್ತು ಇನ್ನೊಬ್ಬ ಸಂಗೀತಕಾರನಾದ. ಹೀಗಿರುತ್ತ ಒಂದು ದಿನ ಜಯಣ್ಣ ವೈರಿಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಎಂಬ ಟೆಲಿಗ್ರಾಮ್ ಬಂತು.

ಊರೂರು ಅಲೆಯುತ್ತಿದ್ದ  ಆನಂದತೀರ್ಥರಾಯರು ಸಹೃದಯಿ ಪೋಲೀಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಆಶ್ರಯ ಪಡೆದರು. ಅವರ ಮಗಳಲ್ಲಿ ರೂಪಾಳನ್ನು ಕಂಡ ರಾಯರ ಮನಸ್ಸಿಗೆ ನೆಮ್ಮದಿ ಸಿಕ್ಕಿತು.  ಅಲ್ಲಿಯ ಶಾಲೆಯಲ್ಲಿ ಜವಾನನ ಕೆಲಸವನ್ನೂ ಮಾಡತೊಡಗಿ ಎಲ್ಲರ ಅಚ್ಚುಮೆಚ್ಚಿನವರಾದರು. ಒಂದು ದಿನ ತನ್ನ ಮಗನೇ ಇನ್ಸ್ಪೆಕ್ಟರ್ ಆಗಿ ಆ ಶಾಲೆಗೆ ಬಂದದ್ದನ್ನು ಕಂಡ ರಾಯರು ತನ್ನ ಗುರುತು ತಿಳಿಸದೆ ಮನದಲ್ಲೇ ಹಿರಿಹಿರಿ ಹಿಗ್ಗಿದರು.

ರಾಯರ ಪತ್ನಿಯ ದೃಷ್ಟಿ ಮರಳಿತೆ? ಜಯಣ್ಣ ನಿಜವಾಗಿಯೂ ಸತ್ತಿದ್ದನೇ? ರಾಯರು ಮತ್ತೆ ಮನೆಗೆ ಬಂದರೇ? ಒಡೆದ ಕುಟುಂಬ ಒಂದಾಯಿತೇ?  ಇವೆಲ್ಲವನ್ನೂ ಬೆಳ್ಳಿಪರದೆಯ ಮೇಲೆ ನೋಡಿ.
* * * * * *

ಜಿ.ವಿ.ಅಯ್ಯರ್ ಅವರ ಹಿಂದಿನ ಚಿತ್ರಗಳಿಗೆಲ್ಲ ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶನವಿರುತ್ತಿತ್ತು.  ಆದರೆ ಪೋಸ್ಟ್ ಮಾಸ್ಟರ್ ಚಿತ್ರಕ್ಕೆ ಸಂಗೀತ ನೀಡಿದವರು ವಿಜಯಭಾಸ್ಕರ್. ಗೀತೆಗಳನ್ನು ಬರೆದವರು ಸ್ವತಃ ಜಿ.ವಿ. ಅಯ್ಯರ್.  ಈ ಚಿತ್ರದ ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ ಹಾಡಂತೂ ನಾಡಗೀತೆಯೇ ಆಗಿ ಹೋಗಿದೆ.  ಮುತ್ತಿನ ನತ್ತೊಂದು ಮತ್ತು ನಾನೆಷ್ಟೋ ಸಲ ನೋಡಿದ ಚಂದ್ರ ಹಾಡುಗಳೂ ಸಾಕಷ್ಟು ಜನಪ್ರಿಯವಾಗಿದ್ದವು.  ಆದರೆ ಆ ಚಿತ್ರದ  ಎರಡು ಶ್ರೇಷ್ಠ  ಗೀತೆಗಳು ಯಾವುವೆಂದು ಈಗ ನೋಡೋಣ.

ಇಂದೇನು ಹುಣ್ಣಿಮೆಯೊ
ಪಿ.ಬಿ.ಶ್ರೀನಿವಾಸ್ ಮತ್ತು ಎಸ್. ಜಾನಕಿ ಅವರ ಸರ್ವಕಾಲಿಕ ಶ್ರೇಷ್ಠ  ಯುಗಳಗೀತೆಗಳ ಸಾಲಿಗೆ ಸೇರಬೇಕಾದ ಡ್ರೀಮ್ ಸೀಕ್ವೆಂಸಿನ ಈ ಹಾಡಿಗೆ ವಿಜಯಭಾಸ್ಕರ್ ಯಮನ್ ಕಲ್ಯಾಣ್ ರಾಗವನ್ನು ಮೂಲವಾಗಿಟ್ಟುಕೊಂಡು ಕನಸಿನ ಲೋಕದ  ಸಂಗೀತವನ್ನೇ ಸಂಯೋಜಿಸಿದ್ದಾರೆ.  ಸಾಹಿತ್ಯದ ಭಾಗ ಹೆಚ್ಚೇನೂ ಇರದ ಇದರ 27 ಸೆಕೆಂಡಿನಷ್ಟು ದೀರ್ಘ preludeನಲ್ಲಿ ಸಿತಾರ್, ಮ್ಯಾಂಡೊಲಿನ್, ಗ್ರೂಪ್ ವಯಲಿನ್ಸ್, ಸುರ್ ಬಹಾರ್, ಕೊಳಲು-ಕ್ಲಾರಿನೆಟ್, ವೈಬ್ರಾಫೋನ್‌ಗಳಿಗೆ ಹಿನ್ನೆಲೆಯಾಗಿ waltz ಶೈಲಿಯಲ್ಲಿ ಗಿಟಾರ್ ರಿದಂ ಇದೆ.  ಪಿ.ಬಿ.ಎಸ್ ಅವರ ಮೃದು ಮಧುರ ದನಿಯಲ್ಲಿ ಪಲ್ಲವಿ ಆರಂಭವಾಗುತ್ತಿದ್ದಂತೆ ತಬ್ಲಾದ ದಾದ್ರಾ ಠೇಕಾ  ಜೊತೆಗೂಡುತ್ತದೆ. ಹಿನ್ನೆಲೆಯಲ್ಲಿ ವಯಲಿನ್‌ಗಳ ಕೌಂಟರ್ ಮೆಲೊಡಿ ಸಾಗುತ್ತಿರುತ್ತದೆ. ಪಿ.ಬಿ.ಎಸ್ ಸಾಲುಗಳು ಮುಗಿಯುತ್ತಿದ್ದಂತೆ ಜಾನಕಿ ಪಲ್ಲವಿಯನ್ನು ಮುಂದುವರಿಸುತ್ತಾರೆ. ಮತ್ತೆ ಗಿಟಾರಿನ waltz ರಿದಂ ಜೊತೆ ವಯಲಿನ್ಸ್, ವೈಬ್ರಾಫೋನ್‌, ಕೊಳಲು-ಕ್ಲಾರಿನೆಟ್, ಮ್ಯಾಂಡೊಲಿನ್‌ಗಳ ಸಂಗಮದ  BGM ಮುಗಿಯುತ್ತಿದ್ದಂತೆ ಹಾಡಿನ ಗತಿ ಒಮ್ಮಿಂದೊಮ್ಮೆಗೆ ಢೋಲಕ್‌ನ 6/8 ಪ್ಯಾಟರ್ನಿಗೆ ಬದಲಾಗಿ ಕೇಳುಗರಿಗೆ ವಿಶಿಷ್ಠ ಅನುಭವ ಒದಗಿಸುತ್ತದೆ.  ಪಿ.ಬಿ.ಎಸ್ ಅವರೇ ಹಾಡುವ ಮೊದಲ ಚರಣಕ್ಕೆ ಜಾನಕಿ ಆಲಾಪದ counter ಮೂಲಕ ಜೊತೆ ನೀಡುತ್ತಾರೆ. ಚರಣ ಮುಗಿದ ಮೇಲೆ ಪಲ್ಲವಿಯ ಕಿರು ಅಂಶ ಮಾತ್ರ ಪುನರಾವೃತ್ತಿಯಾಗುತ್ತದೆ.  BGM ನಂತರ  ಎರಡನೆ ಚರಣವನ್ನು  ಜಾನಕಿ ಹಾಡುವಾಗ  ಪಿ.ಬಿ.ಎಸ್ ಆಲಾಪದ counter ಒದಗಿಸುತ್ತಾರೆ.  ನಿಲ್ಲು ನೀ ನಿಲ್ಲು ನೀ ನೀಲವೇಣಿ, ಇವಳು ಯಾರು ಬಲ್ಲೆಯೇನು, ರವಿವರ್ಮನ ಕುಂಚದ ಬಲೆ, ಪಾಡಾದ ಪಾಟ್ಟೆಲ್ಲಾಂ ಪಾಡವಂದಾಳ್ ಮುಂತಾದ ಹಾಡುಗಳಲ್ಲಿದ್ದಂತೆ ಗಾಯಕರ ಹಾಡುಗಳಿಗೆ ಗಾಯಕಿ ಆಲಾಪ್‌ನ counter ಜೊತೆ ಕೊಡುವುದೇ ಹೆಚ್ಚು.  ಈ ರೀತಿ ಗಾಯಕಿಯ ಸಾಲುಗಳಿಗೆ ಗಾಯಕ ಆಲಾಪ್ ಮೂಲಕ ಜೊತೆಯಾಗುವುದು ಬಲು ಕಮ್ಮಿ.  ಹಿಂದಿಯಲ್ಲಿ ಲೀಡರ್ ಚಿತ್ರದ ದಯ್ಯಾರೆ ದಯ್ಯಾ ಎಂಬ ಆಶಾ ಭೋಸ್ಲೆ ಹಾಡಿಗೆ ರಫಿ ಆಲಾಪ್ ಮಾತ್ರ ಹಾಡಿದ ಇಂತಹ ಒಂದು ಉದಾಹರಣೆ ಇದೆ.  ಹಾಡಿನ ಕೊನೆಯಲ್ಲಿ ಪಲ್ಲವಿಯನ್ನು ಜೊತೆಯಾಗಿ ಹಾಡುವಾಗ ಒಂದೆಡೆ ಉದ್ಯಾನದಲ್ಲಿ ನಡೆಯುತ್ತಿದ್ದವರು ಕವಲೊಡೆದ ದಾರಿಯಲ್ಲಿ ಕೊಂಚ ದೂರ ಬೇರೆ ಬೇರೆಯಾಗಿ ಸಾಗಿ ಮತ್ತೆ ಒಟ್ಟಿಗೆ ನಡೆದಂತೆ ವಿಭಿನ್ನ ರೀತಿಯಲ್ಲಿ ಹಾಡಿ ಮತ್ತೆ ಜೊತೆಗೂಡುತ್ತಾರೆ.

ಇತ್ತೀಚಿನ ವರೆಗೆ ಪೋಸ್ಟ್ ಮಾಸ್ಟರ್ ರಾಜ್ ಅವರ ಚಿತ್ರವೆಂದೇ ಅಂದುಕೊಂಡಿದ್ದೆ!  ಈ ಹಾಡು ಕೇಳುವಾಗಲೆಲ್ಲ ರಾಜ್ ಅವರ ಮುಖವೇ ಕಣ್ಣೆದುರು ಬರುತ್ತಿತ್ತು.  ಅಂತರ್ಜಾಲದಲ್ಲಿ ಚಿತ್ರ ನೋಡಿದ ಮೇಲಷ್ಟೇ ಇದು ಬಿ.ಎಂ. ವೆಂಕಟೇಶ್ ಮತ್ತು ವಂದನಾ ಅವರ ಮೇಲೆ ಚಿತ್ರೀಕರಿಸಲಾದ ಹಾಡು ಎಂದು ತಿಳಿದದ್ದು.


ಇಂದೇನು ಹುಣ್ಣಿಮೆಯೊ
ರತಿದೇವಿ ಮೆರವಣಿಯೊ
ಆಕಾಶದ ಏಳು ಬಣ್ಣಗಳ ಮೇಳವೊ |
ನವರಾಗ ಪಲ್ಲವಿಯೊ
ಸವಿಮಾತ ಹೊಗಳಿಕೆಯೊ
ಯೌವನದ ಕಲ್ಪನೆಯ ಕವಿಯಾಸೆ ಹೂಮಳೆಯೊ
ನವರಾಗ ಪಲ್ಲವಿಯೊ ||

ನೆಲಹೊತ್ತ ಹೂ ತೇರೆ
ನಲ್ಲನೆದೆ ಹೊಂದೇರೆ
ಇಲ್ಲದಿರೆ ನೀ ಮುಂದೆ
ಎಲ್ಲ ಹಗಲಿನ ತಾರೆ |

ಹರೆಯದ ನಾವೆಯಲಿ
ಸರಸ ಸಲ್ಲಾಪದಲಿ
ನಡೆಸುವ ಅಂಬಿಗನ
ಕರಪಿಡಿಯೆ ಜೋಕಾಲಿ |

ನವರಾಗ ಪಲ್ಲವಿಯೊ
ಇಂದೇನು ಹುಣ್ಣಿಮೆಯೊ
ರತಿದೇವಿ ಮೆರವಣಿಯೊ
ಆಕಾಶದ ಏಳು ಬಣ್ಣಗಳ ಮೇಳವೊ
ಇಂದೇನು ಹುಣ್ಣಿಮೆಯೊ ||

ಎರಡು ರೆಂಬೆಯ ನಡುವೆ ಬೆಳೆದ
ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ಹೆಣ್ಣು ಒಪ್ಪಿಸುವ ಹಾಡುಗಳನ್ನು ಗಾಯಕಿಯರೇ ಹಾಡುವುದು. ಆದರೆ ಈ ಅಪರೂಪದ ಹಾಡನ್ನು ಭಾವಪೂರ್ಣವಾಗಿ ಹಾಡಿದ್ದು ರಘುನಾಥ ಪಾಣಿಗ್ರಾಹಿ. ಆ ಮೇಲೆ ನೀಲ್ ಕಮಲ್ ಚಿತ್ರದಲ್ಲಿ ರಫಿ ಹಾಡಿದ ಇಂಥದೇ ಹಾಡು ಬಾಬುಲ್ ಕೀ ದುವಾಯೇ ಲೇತಿ ಜಾ ಕೂಡ ಜನಪ್ರಿಯವಾಯಿತು. ಜಿ.ಕೆ. ವೆಂಕಟೇಶ್, ಟಿ.ಜಿ. ಲಿಂಗಪ್ಪ ಮುಂತಾದವರ ನಿರ್ದೇಶನದಲ್ಲಿ ಪಾಣಿಗ್ರಾಹಿ ಅವರ ಕೆಲವು ಹಾಡುಗಳಿದ್ದರೂ ವಿಜಯಭಾಸ್ಕರ್ ಇವರಿಂದ ಹಾಡಿಸಿದ್ದು ಕಮ್ಮಿ.  ಮನ ಮೆಚ್ಚಿದ ಮಡದಿ ಚಿತ್ರದ ಲವ್ ಲವ್ ಎಂದರೇನು ಹಾಡಿಗೆ ಪದ್ಯಾವಳಿಯಲ್ಲಿ ಇವರ ಹೆಸರಿದ್ದರೂ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಹಾಡಿದ ವರ್ಷನ್ ಇದೆ.  60ರ ದಶಕದಲ್ಲಿ ಒಡಿಸ್ಸಿ  ಕಲಾವಿದೆ ಸಂಯುಕ್ತಾ ಅವರನ್ನು ಮದುವೆಯಾದ ಮೇಲೆ ಇವರು ಚಿತ್ರರಂಗಕ್ಕೆ ವಿದಾಯ ಹೇಳಿ ನೃತ್ಯರಂಗಕ್ಕೆ ತಮ್ಮನ್ನು ಮುಡಿಪಾಡಿಗಿಸಿಕೊಂಡರು.


ಆಶ್ಚರ್ಯವೆಂದರೆ ಇಷ್ಟು ಸುಂದರವಾದ ಈ ಹಾಡು ಪೋಸ್ಟ್ ಮಾಸ್ಟರ್ ಚಿತ್ರದ್ದೆಂದು ನೆನಪಿರುವುದಿರಲಿ,  ಹೀಗೊಂದು ಹಾಡು ಇದೆಯೆಂದೇ ನನಗೆ ಮರೆತು ಹೋಗಿತ್ತು!    Pathos ಮೂಡಿಗೆ ಸರಿ ಹೊಂದುವಂತೆ ಭೈರವಿ ಥಾಟಿನಲ್ಲಿ ಏಳು ಅಕ್ಷರದ ತ್ರಿಪುಟ ತಾಳದಲ್ಲಿ ಸಂಯೋಜಿಸಲ್ಪಟ್ಟಿರುವ ಹಾಡು ಶಹನಾಯಿಯ ರೋದನದೊಂದಿಗೆ ಆರಂಭವಾಗಿ ಸರೋದ್, ವಯಲಿನ್‌ಗಳ ಹಿಮ್ಮೇಳದೊಂದಿಗೆ ಮುಂದುವರಿಯುತ್ತದೆ.  ಸಾಲುಗಳ ಮಧ್ಯೆ ಬಾಂಸುರಿಯ ಪೂರಕ bridge noteಗಳು ಇವೆ. ಎರಡನೆ ಚರಣ ಮೊದಲಿನದಕ್ಕಿಂತ ಮೇಲಿನ ಸ್ಥಾಯಿಯಲ್ಲಿ ಆರಂಭವಾಗುತ್ತದೆ.  ಈ ಹಾಡನ್ನು ಕಂಪೋಸ್ ಮಾಡುವಾಗ ಕಾಬುಲಿವಾಲಾ ಚಿತ್ರದ ಏ ಮೆರೇ ಪ್ಯಾರೇ ವತನ್ ವಿಜಯಭಾಸ್ಕರ್ ಮನದಲ್ಲಿದ್ದಿರಬಹುದು ಎಂದು ನನ್ನ ಊಹೆ.

ಹಾಡಿನ  ಸಾಹಿತ್ಯ ಬಲು ಅರ್ಥಪೂರ್ಣವಾಗಿದೆ. ಮದುವೆಯಾಗಿ ಗಂಡನ ಮನೆಗೆ ಹೊರಟು ನಿಂತ ಹೆಣ್ಣನ್ನು ತಂದೆ ತಾಯಿಗಳೆಂಬ ಎರಡು ರೆಂಬೆಗಳ ನಡುವೆ ಬೆಳೆದ ಒಂಟಿ ಗುಲಾಬಿಗೆ ಹೋಲಿಸುವ ರಮ್ಯ ಕಲ್ಪನೆ ಇಲ್ಲಿದೆ.  ಆ ಹೂವನ್ನು ಮುಡಿದ ನಲ್ಲನ ಮನೆಗೆ ಆಕೆ ಮುದದಿಂದ ತೆರಳುತ್ತಾಳೆ.  ಗಂಡಸರೆಂದಾದರೂ ಗುಲಾಬಿ ಹೂ ಮುಡಿಯುವುದುಂಟೇ. ಆದರೆ ಕವಿ ಕಲ್ಪನೆಯಲ್ಲಿ ಎಲ್ಲವೂ ಸಾಧ್ಯ. ಈ ಸಾಲುಗಳಲ್ಲಿ ಇನ್ನೊಂದು ಸೂಕ್ಷ್ಮವೂ ಇದೆ.  ತಂದೆ ತಾಯಿಗಳನ್ನು ಅಗಲಿ ಗಂಡನ ಮನೆಗೆ ಹೋಗುವ ಹೆಣ್ಣು ರೋದಿಸುವುದು ಹಿಂದೆ ಇದ್ದ ಪರಿಪಾಠ.  ಆಗ ಬಲು ಚಿಕ್ಕ ವಯಸ್ಸಿನಲ್ಲೇ ವಿವಾಹವಾಗುತ್ತಿದ್ದುದರಿಂದ ಅದು ಸಹಜವೂ ಹೌದು.  ಆದರೆ ಈಗ ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ತಲುಪಿದ ಮೇಲೆಯೇ ಮದುವೆಯಾಗುವುದರಿಂದ ಇಲ್ಲಿ ಹೇಳಿದಂತೆ ಮುದದಿಂದಲೇ ಗಂಡನ ಮನೆಗೆ ತೆರಳುತ್ತಾರೆ!

ಈಗ ಎರಡು ರೆಂಬೆಗಳ ನಡುವಿನ ಎಲೆಗಳ ನಡುವೆ ಅಡಗಿ ಕುಳಿತಿದ್ದ ಈ ಬಿಡಿ ಗುಲಾಬಿಯ ಸೌಂದರ್ಯವನ್ನು ಆಸ್ವಾದಿಸೋಣ.


ಎರಡು ರೆಂಬೆಯ ನಡುವೆ ಬೆಳೆದ
ಬಿಡಿ ಗುಲಾಬಿಯ ಹೂವಿದು
ಮುಡಿದ ನಲ್ಲನ ಮನೆಗೆ ಒಲಿದು
ಮುದದಿ ತೆರಳುತಲಿರುವುದು


ನಡೆದ ದಾರಿಗೂ ನಡೆವ ದಾರಿಗೂ
ಬಹಳ ಅಂತರವಿರುವುದು
ಮೆಲ್ಲ ನಡಿಯಿಡು ಸಹನೆ ಕಳೆಯದೆ
ಎಲ್ಲರೊಡನಿರು ವಿನಯದೆ

ಮಡಿಲ ತುಂಬಿದ ಗುಣದ ಬಾಗಿಲ
ಎಡೆ ಬಿಡದೆ ಕಾಪಾಡಿಕೋ
ಕರುಣೆ ತುಂಬಿದ ರಸದ ಕನ್ನಡಿ
ನಿನ್ನ ಹೃದಯವ ಮಾಡಿಕೊ

* * *

ಪೋಸ್ಟ್ ಮಾಸ್ಟರ್ ಚಿತ್ರ ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು.  ನಾನು ದುಡಿದ ಅಂಚೆ ತಂತಿ ಇಲಾಖೆಯೊಂದಿಗೆ ನಂಟು ಹೊಂದಿದ ಈ ಚಿತ್ರ ನನಗೆ ಹೆಚ್ಚು ಆಪ್ತವೆನಿಸಿತು!

ಪುಟ್ಟ ಬಾಲಕ ತನ್ನ ಮನೆಯ ಬಗ್ಗೆ ಬರೆದ ಪ್ರಬಂಧವೊಂದನ್ನು ಮನೆಯವರೆಲ್ಲರೂ relay ಮಾದರಿಯಲ್ಲಿ ಒಬ್ಬೊಬ್ಬರಾಗಿ ಓದುವ  ವಿಶಿಷ್ಟ ದೃಶ್ಯವೊಂದನ್ನು ಇಲ್ಲಿ ನೋಡಬಹುದು.



Wednesday, 26 September 2018

ಇಲ್ಲೂ ಇರುವೆ ಅಲ್ಲೂ ಇರುವೆ


ಹಾಗೆ ಜೇನು ತೊಟ್ಟಿಕ್ಕುವಂತೆ ಮಧುರವಾಗಿ ಹಾಡಿದರೆ ಇರುವೆ ಮುತ್ತದಿದ್ದೀತೆ? ಪಿ.ಬಿ. ಶ್ರೀನಿವಾಸ್ ಹಾಡಿದರೆ ಇಲ್ಲೂ ಇರುವೆ, ಜಾನಕಿ ಹಾಡಿದರೆ ಅಲ್ಲೂ ಇರುವೆ.  ಇಷ್ಟು ವರ್ಷಗಳಾದರೂ ಇನ್ನೂ ಕೇಳುತ್ತಾ ಇರುವ  ನಮ್ಮೆಲ್ಲರ ಮನದಲ್ಲೂ ತುಂಬಿರುವೆ.   ‘ಇದೇನಿದು ಇರುವೆ ಇರುವೆ ಎಂದು ಕೊರೆಯುತಲಿರುವೆ’ ಎಂದು ನೀವು ಕುತೂಹಲದ ಇರುವೆ ಬಿಟ್ಟುಕೊಂಡು ಪ್ರಶ್ನೆ ಎಸೆಯಬೇಕಾಗಿಲ್ಲ.  ನಾನೀಗ ಕನ್ನಡದ ಎರಡನೇ ದೋ ಪಹಲೂ ವಾಲಾ ಗೀತ್  ಬಗ್ಗೆ ಬರೆಯಲಿರುವೆ.

ಆಗಲೇ ಅವಳಿ ಹಾಡುಗಳು ಲೇಖನದಲ್ಲಿ ಉಲ್ಲೇಖಿಸಿದಂತೆ ಹಿಂದಿಯಲ್ಲಿ 50ರ ದಶಕದಿಂದಲೂ ಆಗಾಗ ಒಂದೇ ಹಾಡನ್ನು ಇಬ್ಬರಿಂದ ಬೇರೆ ಬೇರೆಯಾಗಿ ಹಾಡಿಸುವ ‘ದೋ ಪಹಲೂ ವಾಲೇ ಗೀತ್ ’ ಪದ್ಧತಿ ಬೆಳೆದು ಬಂದಿತ್ತು.  ರೇಡಿಯೋ ಸಿಲೋನಿನಲ್ಲಿ ಇಂತಹ ಹಾಡುಗಳಿಗೇ ಮೀಸಲಾದ ‘ದೋ ಪಹಲೂ ದೋ ರಂಗ್ ದೋ ಗೀತ್’ ಎಂಬ ಸಾಪ್ತಾಹಿಕ ಕಾರ್ಯಕ್ರಮವೂ ಇತ್ತು.  ಕನ್ನಡದಲ್ಲಿ  1961ರಲ್ಲಿ ಬಂದ ಕಣ್ತೆರೆದು ನೋಡು ಚಿತ್ರಕ್ಕಾಗಿ ಒಮ್ಮೆ ಪಿ.ಬಿ.ಶ್ರೀನಿವಾಸ್ ಒಬ್ಬರೇ ಹಾಗೂ ಇನ್ನೊಮ್ಮೆ ಅವರ ಜೊತೆ ಬೆಂಗಳೂರು ಲತಾ ಹಾಡಿದ್ದ ಬಂಗಾರದೊಡವೆ ಬೇಕೆ ಹಾಡು ಇಂತಹ ಮೊದಲ ಪ್ರಯತ್ನ.   ನಂತರ ಬಂದದ್ದೇ  1966ರಲ್ಲಿ ಬಿಡುಗಡೆಯಾದ ಬದುಕುವ ದಾರಿ ಚಿತ್ರದ ಇರುವೆ ಹಾಡು. ಚಂದ್ರ ಕುಮಾರ ಚಿತ್ರದ ಅರ್ಧ ಕೆಲಸ ಮುಗಿಸುವಷ್ಟರಲ್ಲಿ ಅಕಾಲ ಮೃತ್ಯುವಿಗೀಡಾದ  ಎಂ. ವೆಂಕಟರಾಜು ಅವರ ಸ್ಥಾನವನ್ನು ತುಂಬಿ ಆ ಚಿತ್ರದ ಉಳಿದ ಹಾಡುಗಳನ್ನು ಸಂಯೋಜಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ  ತೆಲುಗಿನಲ್ಲಿ ಅದಾಗಲೇ ಪ್ರಸಿದ್ಧರಾಗಿದ್ದ ಟಿ.ಚಲಪತಿ ರಾವ್ ಈ ಚಿತ್ರದ ಸಂಗೀತ ನಿರ್ದೇಶಕರು.  ಅಷ್ಟರಲ್ಲೇ ಮನೆ ಅಳಿಯ ಚಿತ್ರದಲ್ಲಿ  ಸುಪರ್ ಹಿಟ್  ಗೀತೆಗಳನ್ನು ನೀಡಿ ಅವರು ಕನ್ನಡಿಗರ ಮನ ಗೆದ್ದಿದ್ದರು. ಮಾವನ ಮಗಳು ಚಿತ್ರದ ನಾನೇ ವೀಣೆ ನೀನೇ ತಂತಿಯ ರೂವಾರಿಯೂ ಅವರೇ.  ತೆಲುಗಿನ ಬ್ರತುಕು ತೆರವು ಮತ್ತು ಹಿಂದಿಯ ಜೀನೆ ಕೀ ರಾಹ್ ಚಿತ್ರಗಳ ಶೀರ್ಷಿಕೆಯನ್ನು ಹೋಲುತ್ತಿದ್ದರೂ ಕನ್ನಡದ ಬದುಕುವ ದಾರಿಗೂ ಅವುಗಳಿಗೂ ಯಾವ ಸಂಬಂಧವೂ ಇಲ್ಲ ಅನ್ನಲಾಗಿದೆ. ಅನ್ನಲಾಗಿದೆ ಏಕೆಂದರೆ ನಾನು ಆ ಚಿತ್ರ ನೋಡಿಲ್ಲ ಮತ್ತು  ನೋಡಬೇಕೆಂದರೆ ಈಗ ಅದು ಲಭ್ಯವೂ ಇಲ್ಲ. ಕಲ್ಯಾಣ್ ಕುಮಾರ್, ಜಯಲಲಿತಾ, ವಂದನಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರವನ್ನು ನಿರ್ದೇಶಿಸಿ ಕೆಲವು ಹಾಡುಗಳನ್ನೂ ಬರೆದವರು ಹುಣಸೂರು ಕೃಷ್ಣಮೂರ್ತಿ. ಇವರೊಂದಿಗೆ ಕು.ರ.ಸೀ ಕೂಡ ಕೆಲವು ಹಾಡುಗಳನ್ನು ಬರೆದಿದ್ದು ಕುಯಲಿನ್, ಆರುದ್ರ,  ದತ್ತ ಮತ್ತು ಭಾಸ್ಕರನ್ ಅವರು ವಿವಿಧ ಭಾಷೆಗಳಲ್ಲಿ ಬರೆದ ಭಾವೈಕ್ಯ ಸಾರುವ ಒಂದು ಹಾಡೂ ಇತ್ತೆಂದು ದಾಖಲೆಗಳು ಹೇಳುತ್ತವೆ.  ಚಿತ್ರದಲ್ಲಿದ್ದ ಎಂಟು ಹಾಡುಗಳಲ್ಲಿ  ಆಗಾಗ ಕೇಳಲು ಸಿಗುತ್ತಿದ್ದುದು ಕವ್ವಾಲಿ ಶೈಲಿಯ ಮಾಗೀ ಕಾಲ ಸಾಯಂಕಾಲ ಮತ್ತು  ಇರುವೆ ಹಾಡು ಮಾತ್ರ.



ಇಲ್ಲೂ ಇರುವೆ ಅಲ್ಲೂ ಇರುವೆ
ಪಲ್ಲವಿ ಭಾಗದಲ್ಲಿ ಮೋಹನದಂತೆ ಭಾಸವಾಗಿ ಚರಣದಲ್ಲಿ  ಮ1, ದ2, ನಿ2 ಸ್ವರಗಳನ್ನೂ ಸೇರಿಸಿಕೊಂಡು ಹರಿಕಾಂಬೋಜಿಯಾಗಿ  ಪರಿವರ್ತಿತವಾಗುವ ಈ ಹಾಡಿನ ಪಿ.ಬಿ.ಎಸ್  ಮತ್ತು  ಎಸ್. ಜಾನಕಿ ವರ್ಷನ್‌ಗಳ ಧಾಟಿ ಒಂದೇ ಆಗಿದೆ. ಬಿಳಿ 3 ಅಂದರೆ E ಶ್ರುತಿಯಲ್ಲಿರುವ ಜಾನಕಿ ಹಾಡು ಕೊಂಚ ವೇಗವಾಗಿದ್ದು ಸಿತಾರ್, ಕ್ಲಾರಿನೆಟ್, ಅಕಾರ್ಡಿಯನ್, ಕೊಳಲುಗಳನ್ನು ಹಿನ್ನೆಲೆ ವಾದ್ಯಗಳಾಗಿ ಹೊಂದಿ ತಬ್ಲಾ ತಾಳವಾದ್ಯದೊಂದಿಗೆ ದೇಸಿ ರಂಗು ಹೊಂದಿರುತ್ತಿದ್ದ  ಅಂದಿನ  ಬಹುತೇಕ ಚಿತ್ರಗೀತೆಗಳ ಮಾದರಿಯಲ್ಲೇ ಇದೆ.  ಆದರೆ ಮಳೆ ಹನಿಗಳು ತೊಟ್ಟಿಕ್ಕುವಂತೆ ಭಾಸವಾಗುವ ಪಿಯಾನೋ ಹಿನ್ನೆಲೆಯೊಂದಿಗೆ   ವಿಳಂಬ ಕಾಲದಲ್ಲಿ ಪಿ.ಬಿ.ಎಸ್ ಅವರು C sharp ಶ್ರುತಿಯ ಮಂದ್ರ ಪಂಚಮದಲ್ಲಿ ಹಾಡಿನ ಎತ್ತುಗಡೆ ಮಾಡುತ್ತಲೇ ಕೇಳುಗರನ್ನು clean bowled ಮಾಡಿ ಬಿಡುತ್ತಾರೆ.  ಗಿಟಾರ್, ಬೊಂಗೋ, ಡಬಲ್ ಬಾಸ್, ಅಕಾರ್ಡಿಯನ್, ತಬ್ಲಾಗಳ ಸಂಗಮದೊಡನೆ ಅದೇ ವಿಳಂಬ ಗತಿಯಲ್ಲಿ ಪೂರ್ವ ಪಶ್ಚಿಮಗಳ ಸಮ್ಮಿಶ್ರ ಛಾಯೆಯೊಡನೆ  ಹಾಡು ಮುಂದುವರೆದು ನಮ್ಮನ್ನು ಇನ್ಯಾವುದೋ ಲೋಕಕ್ಕೆ ಕರೆದೊಯ್ಯುತ್ತದೆ.  ಜಾನಕಿ ಮತ್ತು ಪಿ.ಬಿ.ಎಸ್ ಹಾಡುಗಳ ಮೂರನೇ ಚರಣ ಭಿನ್ನವಾಗಿದೆ. ಹುಣಸೂರರ ಸಾಹಿತ್ಯ ಪದ ಲಾಲಿತ್ಯ ಹೊಂದಿದ್ದರೂ ಹಾಡಿನ ಒಟ್ಟು ಆಶಯ ಸುಲಭದಲ್ಲಿ ಅರ್ಥವಾಗುವುದಿಲ್ಲ.  ‘ಇಲ್ಲೂ ಇರುವೆ ಅಲ್ಲೂ ಇರುವೆ ’ ಎಂದು ಯಾರು ಹೇಳುತ್ತಿರುವುದು ಎಂಬುದು ಕೇಳುಗರಿಗೆ ಸ್ಪಷ್ಟವಾಗುವುದಿಲ್ಲ. ಚೆಲುವು, ಮನಸ್ಸು, ಪ್ರೀತಿ, ಮಾಧುರ್ಯ ಹೀಗೆ ತಮ್ಮ ತಮ್ಮ ಭಾವಕ್ಕೆ ತಕ್ಕ ಉತ್ತರ ಹುಡುಕಬೇಕಾಗುತ್ತದೆ.


ಮೇಲಿನ ಚಿತ್ರದಲ್ಲಿ ಕಾಣುವ ಈ ಹಾಡಿನ ದೃಶ್ಯದಲ್ಲಿ ಪಿಯಾನೋ ಎದುರು ಕುಳಿತಿರುವ ಕಲ್ಯಾಣ್ ಕುಮಾರ್ ದೋಸ್ತ್ ದೋಸ್ತ್ ನ ರಹಾದ ರಾಜ್ ಕಪೂರ್ ಥರ ಕಾಣಿಸುತ್ತಾರಲ್ಲವೇ.

ಜಾನಕಿ ಧ್ವನಿಯಲ್ಲಿರುವ ಹಾಡು ಅಂತರ್ಜಾಲದಲ್ಲೂ ಲಭ್ಯವಿದೆ.  ಆದರೆ ಪಿ.ಬಿ.ಎಸ್ ವರ್ಷನ್ ಕೆಲವು ಆಕಾಶವಾಣಿ ನಿಲಯಗಳಿಂದ ಎಂದಾದರೊಮ್ಮೆ ಮಾತ್ರ   ಕೇಳಲು ಸಿಗುತ್ತಿತ್ತು.  ಇನ್ನು ಆ ಚಿಂತೆ ಇಲ್ಲ.   ನಿಮಗಾಗಿ ಎರಡು ಆವೃತ್ತಿಗಳೂ  ಸಾಹಿತ್ಯದೊಂದಿಗೆ ಇಲ್ಲಿವೆ.  ಬೇಕಿದ್ದಾಗ ಆಲಿಸಿ ಸಂತೋಷ ಪಡಬಹುದು.  ಆಡಿಯೊ ಪ್ಲೇಯರ್ ಪೂರ್ತಿ ಕಾಣಿಸಿಕೊಳ್ಳುವ ವರೆಗೆ ತಾಳ್ಮೆ ಇರಲಿ.

ಪಿ.ಬಿ.ಶ್ರೀನಿವಾಸ್



ಇಲ್ಲೂ ಇರುವೆ ಅಲ್ಲೂ ಇರುವೆ
ಎಲ್ಲ ಕಡೆ ನಾ ತುಂಬಿರುವೆ
ತುಂಬಿರುವೆ

ಚೆಲುವಿನ ಹೊಳೆಯಲಿ ಮಿಂದಿರುವೆ
ಒಲುವಿನ ಭಾರದೆ ಬಾಗಿರುವೆ
ರಸಿಕರ ಕಣ್ಣಿಗೆ ಕಾಣಿಸುವೆ...ಕಾಣಿಸುವೆ

ಬೆಳಗುವ ಬಾನಿನ ಬೆಳಕಾಗಿ
ಹೊಳೆಯುವ ಹೆಣ್ಣಿನ ಕಣ್ಣಾಗಿ
ಕಲರವದ ಹೊಳೆಯಾಗಿ (2)
ಕುಳಿತಿಹೆ ಸೊಗಸಿನ ಸೆಲೆಯಾಗಿ.. ಸೆಲೆಯಾಗಿ

ಯೌವನ ಕಾಲದ ಕನಸಾಗಿ
ಕವಿಗಳ ಕಾವ್ಯದ ರಸವಾಗಿ
ವಿಕಸಿತ ಕುಸುಮದ ಮಧುವಾಗಿ (2)
ಕಾದಿಹೆ ಬಾರಾ ನಿನಗಾಗಿ...ನಿನಗಾಗಿ

ಎಸ್. ಜಾನಕಿ



ಇಲ್ಲೂ ಇರುವೆ ಅಲ್ಲೂ ಇರುವೆ
ಎಲ್ಲ ಕಡೆ ನಾ ತುಂಬಿರುವೆ
ತುಂಬಿರುವೆ

ಚೆಲುವಿನ ಹೊಳೆಯಲಿ ಮಿಂದಿರುವೆ
ಒಲುವಿನ ಭಾರದೆ ಬಾಗಿರುವೆ
ರಸಿಕರ ಕಣ್ಣಿಗೆ ಕಾಣಿಸುವೆ...ಕಾಣಿಸುವೆ

ಬೆಳಗುವ ಬಾನಿನ ಬೆಳಕಾಗಿ
ಹೊಳೆಯುವ ಹೆಣ್ಣಿನ ಕಣ್ಣಾಗಿ
ಕಲರವದ ಹೊಳೆಯಾಗಿ (2)
ಕುಳಿತಿಹೆ ಸೊಗಸಿನ ಸೆಲೆಯಾಗಿ.. ಸೆಲೆಯಾಗಿ

ಎದೆಯೊಳಗೇನೋ ಹೊಸಗಾನ
ಅದರೊಳು ಪ್ರೇಮದ ಸಂಧಾನ
ಬಯಸುತ ಹೃದಯದ ಸಮ್ಮಿಲನ (2)
ಕಾದಿಹೆ ಬಾರಾ ಓ ಜಾಣ ... ಓ ಜಾಣ


Monday, 17 September 2018

ವಿರಸವೆಂಬ ವಿಷ


ಒಂದಲ್ಲ ಒಂದು ಸಂದರ್ಭದಲ್ಲಿ ವಿರಸವೆಂಬ ವಿಷಕ್ಕೆ ಬಲಿಯಾಗದವರು ಯಾರೂ ಇರಲಾರರು. ಕೆಲವು ಸಲ ಈ ವಿರಸದ ವಿಷ ದೀರ್ಘಕಾಲೀನ ಪರಿಣಾಮ ಬೀರುವಂಥದ್ದಿರಬಹುದು.  ಇನ್ನು ಕೆಲವು ಸಲ ಸರಸವೆಂಬ  ಅಮೃತದ ಪ್ರಭಾವದಿಂದ ವಿರಸದ  ವಿಷ ಸರ್ರನೆ ಇಳಿದು ಹೋಗಲೂಬಹುದು.  ನಮ್ಮ ನಿಮ್ಮಂಥ ಜನಸಾಮಾನ್ಯರ ಸರಸ ವಿರಸಗಳಿಂದ ಬೇರೆಯವರ ಮೇಲೆ ಹೆಚ್ಚು ಪರಿಣಾಮವೇನೂ ಆಗದು. ಆದರೆ ಸಾರ್ವಜನಿಕ ಕ್ಷೇತ್ರದಲ್ಲಿರುವ ಪ್ರಸಿದ್ಧರು ವಿರಸವೆಂಬ ವಿಷಕ್ಕೆ ಬಲಿಯಾದಾಗ ಆ ಕ್ಷೇತ್ರದ ಚಿತ್ರಣವೇ ಬದಲಾಗಬಹುದು.  ಹಿಂದಿ ಚಿತ್ರರಂಗದಲ್ಲಿ ಇಂಥ ಅನೇಕ ಘಟನೆಗಳು ನಡೆದಿವೆ.

ಲತಾ ಮಂಗೇಷ್ಕರ್ - ಓ.ಪಿ. ನಯ್ಯರ್


ಎಲ್ಲರಿಗೂ ಗೊತ್ತಿರುವಂತೆ ಹಿಂದಿ ಚಿತ್ರರಂಗದಲ್ಲಿ ಲತಾ ಮಂಗೇಷ್ಕರ್ ಅವರಿಂದ ಒಂದೂ ಹಾಡು ಹಾಡಿಸದೆ  ಎರಡು ದಶಕಗಳ ಕಾಲ ಮಿಂಚಿದವರು ಓ.ಪಿ. ನಯ್ಯರ್. ತನ್ನ ಸಂಗೀತಕ್ಕೆ ಗೀತಾ ದತ್ತ್, ಶಂಶಾದ್ ಬೇಗಂ, ಆಶಾ ಭೋಸ್ಲೆಯಂಥವರ  seductive ಧ್ವನಿ ಹೊಂದುತ್ತದೆಯೇ ಹೊರತು   ಲತಾ ಅವರ ಪೈಲಟ್ ಪೆನ್ನಿನ ತೆಳು ಗೆರೆಯಂಥ ಧ್ವನಿ ಅಲ್ಲ ಎನ್ನುವುದಷ್ಟೇ ಇದಕ್ಕೆ ಕಾರಣವೇ ಹೊರತು ಬೇರೇನೂ ಅಲ್ಲ ಎಂದು ಓ.ಪಿ. ನಯ್ಯರ್ ಹೇಳಿದರೂ ಇದನ್ನು ನಂಬುವುದು ಕಷ್ಟ.  ಲತಾ ಮಂಗೇಷ್ಕರ್ ಹೇಳುವ ಪ್ರಕಾರ ಅವರಿಗಾಗಿ 1952ರ ಆಸ್‌ಮಾನ್ ಎಂಬ ಚಿತ್ರದಲ್ಲಿ  ನಯ್ಯರ್ ಒಂದು ಹಾಡು ಕಂಪೋಸ್ ಮಾಡಿದ್ದರು.  ಆದರೆ ಆಗ ಲತಾ ಟಾನ್ಸಿಲ್ಸ್ ಬೇನೆಯಿಂದ ಬಳಲುತ್ತಿದ್ದುದರಿಂದ ರೆಕಾರ್ಡಿಂಗಿಗೆ ಹೋಗಲಾಗಲಿಲ್ಲ.  ಆ ಹಾಡನ್ನು ರಾಜಕುಮಾರಿ ಅವರಿಂದ ಹಾಡಿಸಲಾಯಿತು. ಅಹಂಗೆ ಸ್ವಲ್ಪ ಹೆಚ್ಚೇ ಪ್ರಾಮುಖ್ಯ ಕೊಡುತ್ತಿದ್ದ ನಯ್ಯರ್ ಇದನ್ನು ಗಂಭೀರವಾಗಿ ಪರಿಗಣಿಸಿ  ಮತ್ತೆಂದೂ ಲತಾ ಅವರನ್ನು ಕರೆಯುವ ಗೋಜಿಗೆ ಹೋಗದಿರಲು ನಿಶ್ಚಯಿಸಿರಬಹುದು.  ಇದಕ್ಕೆ ಪೂರಕವಾಗಿ 1954ರಲ್ಲಿ ಇನ್ನೊಂದು ಘಟನೆ ನಡೆಯಿತು.  ರೋಶನ್ ಅವರು 3 ಲತಾ ಹಾಡುಗಳನ್ನು ಧ್ವನಿಮುದ್ರಿಸಿದ್ದ ಮೆಹಬೂಬಾ ಮತ್ತು ನೌಶಾದ್ ಅವರ ಸಹಾಯಕ ಮಹಮ್ಮದ್ ಶಫಿ ಎನ್ನುವವರು 3 ಹಾಡುಗಳನ್ನು ಧ್ವನಿಮುದ್ರಿಸಿದ್ದ ಮಂಗೂ ಎಂಬ ಎರಡು ಚಿತ್ರಗಳ ನಿರ್ಮಾಪಕರು ಯಾವುದೋ ಕಾರಣಕ್ಕೆ ಆ ಸಂಗೀತ ನಿರ್ದೇಶಕರನ್ನು ಅರ್ಧಕ್ಕೆ ಕೈಬಿಟ್ಟುದರಿಂದ ಓ.ಪಿ. ನಯ್ಯರ್ ಅವರಿಗೆ ಆ ಅರೆ ಬರೆ ಕೆಲಸ ಉಳಿದ ಚಿತ್ರಗಳು ದೊರೆತವು.  ತಾನು ಉಳಿದುಕೊಂಡಿದ್ದ ಹೋಟೆಲಿನ ಬಾಡಿಗೆಯನ್ನು ಕೊಡಲೂ ಕಾಸಿಲ್ಲದ ನಯ್ಯರ್ ಅವರ ಪಾಲಿಗೆ  ಇದು ಹಸಿದವನಿಗೆ ಸಿಕ್ಕಿದ ಮೃಷ್ಟಾನ್ನದಂತಾಯಿತು.  ಆದರೆ ಅಷ್ಟರಲ್ಲಿ ಅನಿಲ್ ಬಿಸ್ವಾಸ್, ನೌಶಾದ್ ಮತ್ತು ಲತಾ ಮಂಗೇಷ್ಕರ್ ನಯ್ಯರ್ ಬಳಿ ಬಂದು ‘ಈಗಾಗಲೇ ಇವರಿಬ್ಬರು ಅರ್ಧ ಕೆಲಸ ಮಾಡಿದ ಚಿತ್ರಗಳನ್ನು ಅವರ ಅನುಮತಿ ಇಲ್ಲದೆ ನೀವು ತೆಗೆದುಕೊಂಡದ್ದು ತಪ್ಪು’ ಎಂದು ತಗಾದೆ ತೆಗೆದರು. ಅದಕ್ಕೆ ನಯ್ಯರ್ ‘ಇದರಲ್ಲಿ ನನ್ನ ತಪ್ಪೇನಿದೆ. ನಾನೇನು ಅವರನ್ನು ಚಿತ್ರದಿಂದ ತೆಗೆಯುವಂತೆ ಹೇಳಲಿಲ್ಲ. ನನಗೀಗ ಜರೂರಾಗಿ ಹಣದ ಅವಶ್ಯಕತೆ ಇದೆ. ನನ್ನ ಹೋಟೆಲ್ ಬಿಲ್ಲನ್ನು ನೀವು ಮೂವರು ಪಾವತಿಸುವುದಾದರೆ ನಾನು ಚಿತ್ರಗಳನ್ನು ಬಿಡಲು ಸಿದ್ದ’ ಎಂದು ಖಡಕ್ ಉತ್ತರ ನೀಡಿದರು.  ಇದನ್ನು ಕೇಳಿದ ಮೂವರೂ ಬಂದ ದಾರಿಗೆ ಸುಂಕ ಇಲ್ಲ ಎಂದು ಮರುಮಾತಾಡದೆ ಹಿಂತಿರುಗಿದರು.  ಈ ಘಟನೆ ಅವರ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸಿರಬಹುದು.

ಅದು ವರೆಗೆ ಲತಾ ಮಂಗೇಷ್ಕರ್ ಹಾಡುಗಳಿಲ್ಲದ ಯಾವುದೇ ಚಿತ್ರ ನಿರ್ಮಿಸದಿದ್ದ   ಬಿ.ಆರ್. ಛೋಪ್ರಾ ಪಂಜಾಬ್ ಪೃಷ್ಟಭೂಮಿಯ ನಯಾ ದೌರ್ ಚಿತ್ರಕ್ಕೆ ಓ.ಪಿ. ನಯ್ಯರ್  ಸಂಗೀತ ಬೇಕೆಂದು ನಿರ್ಧರಿಸಿದರು. ಲತಾ ಜೊತೆ  ಭಿನ್ನಾಭಿಪ್ರಾಯವೇನಾದರೂ ಇದ್ದರೆ ತಾನು ಮಧ್ಯಸ್ತಿಕೆ ವಹಿಸುವುದಾಗಿ ಛೋಪ್ರಾ  ಹೇಳಿದಾಗ ‘ಅಂಥದ್ದೇನೂ ಇಲ್ಲ. ತನ್ನ ಟ್ಯೂನ್‌ಗಳಿಗೆ ಲತಾಧ್ವನಿ ಹೊಂದುವುದಿಲ್ಲ ಅಷ್ಟೇ’ ಎಂದು ಹಳೆ ರಾಗ ಹಾಡಿದ  ನಯ್ಯರ್ ಆ ಚಿತ್ರ ಬಿಡಲು ತಯಾರಾದರೇ ಹೊರತು ತನ್ನ ಪಟ್ಟು ಬಿಡಲಿಲ್ಲ.  ಬೇರೆ ಉಪಾಯವಿಲ್ಲದೆ ಛೋಫ್ರಾ ಅವರು ಒಪ್ಪಲೇಬೇಕಾಯಿತು.  ಈ ಚಿತ್ರ ಹಾಗೂ ಅದರ ಸಂಗೀತ ಜಯಭೇರಿ ಬಾರಿಸಿ ಅದುವರೆಗೆ ದ್ವಿತೀಯ ದರ್ಜೆ ಹಾಡುಗಳನ್ನು ಮಾತ್ರ ಹಾಡುತ್ತಿದ್ದ ಆಶಾ ಭೋಸ್ಲೆ ನಾಯಕಿಯ ಗಾಯಕಿಯಾಗಿ ಪದೋನ್ನತಿ ಹೊಂದಿ ಮುಂಚೂಣಿಗೆ ಬಂದರು.  ಇದರ ಇನ್ನೊಂದು ಫಲಶ್ರುತಿಯಾಗಿ ಮುಂದೆ ಬಿ.ಆರ್. ಫಿಲ್ಮ್ಸ್ ನಿರ್ಮಿಸಿದ ಚಿತ್ರಗಳಲ್ಲಿ ಅನೇಕ ವರ್ಷ  ಲತಾ ಧ್ವನಿ ಇರಲಿಲ್ಲ. ಅಷ್ಟೇ ಅಲ್ಲ ಛೋಪ್ರಾ ಜೊತೆ ನಿಕಟ ಸಂಬಂಧ ಹೊಂದಿದರೆಂಬ ಕಾರಣಕ್ಕೆ ಸಂಗೀತ ನಿರ್ದೇಶಕ ರವಿ ಅವರ ಇತರ ಚಿತ್ರಗಳಲ್ಲೂ ಲತಾಗಿಂತ ಆಶಾ ಹಾಡುಗಳೇ ಹೆಚ್ಚು ಕೇಳಿಸಿದವು.

ತನ್ನ ಉತ್ತುಂಗದ ದಿನಗಳ ನಶೆ ಇಳಿದ ಮೇಲೆ ಓ.ಪಿ. ನಯ್ಯರ್ ಕೆಲವು ಇಂಟರ್‍ವ್ಯೂಗಳಲ್ಲಿ ‘ನನ್ನ ಚಿತ್ರಗಳಲ್ಲಿ ಲತಾ ಹಾಡದಿದ್ದರೇನಂತೆ.  ಗಾಯಕಿಯರಲ್ಲಿ ಯಾವಾಗಲೂ ಅವರೇ ನಂಬರ್ ವನ್’ ಎಂದು ಹೇಳಿದ್ದಿದೆ.  ಅಷ್ಟೇ ಅಲ್ಲ ತನ್ನ ಅತಿ ಮೆಚ್ಚಿನದೆಂದು ಬರಸಾತ್ ಚಿತ್ರದ ಜಿಯಾ ಬೇಕರಾರ್ ಹೈ ಛಾಯಿ ಬಹಾರ್ ಹೈ ಹಾಡನ್ನು ಕೇಳಿಸಿದ್ದಿದೆ.  ಹಾಗೆಯೇ ಲತಾ ಮಂಗೇಷ್ಕರ್ ಕೂಡ ‘ನಯ್ಯರ್ ಅವರ ಸಂಗೀತಕ್ಕೆ ಬಹುಶಃ ನನ್ನ ಧ್ವನಿ ಹೊಂದುತ್ತಿರಲಿಲ್ಲ ಎಂದು ನನಗೂ ಈಗ ಅನ್ನಿಸುತ್ತಿದೆ’ ಎಂದು ಹೇಳಿ ಅವರ ನಿರ್ದೇಶನದಲ್ಲಿ ಆಶಾ ಹಾಡಿದ ಯೆ ಹೈ ರೇಶ್ಮೀ ಜುಲ್ಫೋಂ ಕಾ ಅಂಧೇರಾ ನ ಘಬರಾಯಿಯೆ ಹಾಡನ್ನು ಹೊಗಳಿದ್ದಿದೆ.

ಅಂತೂ ನಯ್ಯರ್ ಸಂಗೀತದಲ್ಲಿ ಲತಾ ಹಾಡೊಂದೂ ಮೂಡಿ ಬರಲಿಲ್ಲ.  ಆದರೆ ಅಂಥ ಹಾಡುಗಳು ಇರುತ್ತಿದ್ದರೆ ಹೇಗಿರುತ್ತಿದ್ದವು ಎಂಬ ಕುತೂಹಲ ಇದ್ದರೆ ನಯ್ಯರ್ ಅವರ ಸಹಾಯಕನಾಗಿದ್ದು ಅವರದೇ ಶೈಲಿಯಲ್ಲಿ ಶಿಕಾರಿ ಚಿತ್ರಕ್ಕಾಗಿ ಜಿ.ಎಸ್ ಕೊಹ್ಲಿ ಅವರು ಸಂಯೋಜಿಸಿದ   ಉಷಾ ಮಂಗೇಷ್ಕರ್- ಲತಾ ಮಂಗೇಷ್ಕರ್ ಜೊತೆಯಾಗಿ ಹಾಡಿದ ಈ ಹಾಡನ್ನು ಕೇಳಬಹುದು.


ಲತಾ ಮಂಗೇಷ್ಕರ್ - ಎಸ್.ಡಿ ಬರ್ಮನ್



ಹೌದು, ವಯಸ್ಸಲ್ಲಿ ಪಿತೃ ಸಮಾನರಾಗಿದ್ದ ಎಸ್.ಡಿ. ಬರ್ಮನ್ ಮತ್ತು ಲತಾ ನಡುವೆಯೂ ವಿರಸ ಮೂಡಿತ್ತು.  1957ರ ಮಿಸ್ ಇಂಡಿಯಾ ಚಿತ್ರಕ್ಕಾಗಿ ಬರ್ಮನ್ ದಾದಾ  ಲತಾ ಧ್ವನಿಯಲ್ಲಿ ಒಂದು ಹಾಡನ್ನು ಧ್ವನಿಮುದ್ರಿಸಿ OK  ಮಾಡಿದ್ದರು. ಆದರೆ ಅದೇನನ್ನಿಸಿತೋ,  ಅದನ್ನು ಇನ್ನೊಮ್ಮೆ ಧ್ವನಿ ಮುದ್ರಿಸುವ ಇಚ್ಛೆ ಅವರಿಗಾಯಿತು.  ಇದನ್ನು ತಿಳಿಸಲು ತನ್ನಲ್ಲಿಗೆ ಬಂದ ವ್ಯಕ್ತಿಯ   ಬಳಿ ಒಂದು ವಾರ ತನಗೆ ಆಗಲೇ ವಹಿಸಿಕೊಂಡ ರೆಕಾರ್ಡಿಂಗುಗಳು ಇರುವುದರಿಂದ ತಕ್ಷಣಕ್ಕೆ ತನಗೆ ಬರಲು ಸಾಧ್ಯವಾಗದು ಎಂದು ಲತಾ ಹೇಳಿದರಂತೆ.  ಆ ವ್ಯಕ್ತಿ ಇದನ್ನು ಸ್ವಲ್ಪ ಉಪ್ಪು ಖಾರ ಹಚ್ಚಿ ಬರ್ಮನ್ ದಾದಾಗೆ ಹೇಳಿದಾಗ ಅವರು ಸಿಟ್ಟುಗೊಂಡು ಆ ಹಾಡನ್ನು ಆಶಾ ಭೋಸ್ಲೆಯ ಧ್ವನಿಯಲ್ಲಿ ಧ್ವನಿಮುದ್ರಿಸಿಕೊಂಡರು.  ಆ ವ್ಯಕ್ತಿ ಮತ್ತೆ ಲತಾ ಬಳಿ ಬಂದು  ‘ಇನ್ನು ದಾದಾ ನಿಮ್ಮಿಂದ ಹಾಡಿಸುವುದಿಲ್ಲವಂತೆ’ ಎಂದು ಹೇಳಿ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದ.  ಆಗ ಲತಾ  ‘ಅವರಿಗೇಕೆ ಕಷ್ಟ.  ನಾನೇ ಅವರ ಹಾಡುಗಳನ್ನು ಹಾಡುವುದಿಲ್ಲ’ ಅಂದರು.  ಕೊನೆಗೆ 1962ರಲ್ಲಿ  ಮೆಹಮೂದ್ ಅವರ ಛೋಟೆ ನವಾಬ್ ಚಿತ್ರಕ್ಕಾಗಿ  ಪ್ರಥಮ ಬಾರಿಗೆ ಆರ್.ಡಿ ಬರ್ಮನ್ ಸಂಗೀತ ನಿರ್ದೇಶನ ಮಾಡಲು ಹೊರಟಾಗ ದಾದಾ ಬರ್ಮನ್ ಲತಾಗೆ ಫೋನ್ ಮಾಡಿ ‘ಲೊತಾ, ಪೊಂಚಮ್ ಮ್ಯೂಸಿಕ್ ಡೈರೆಕ್ಟರ್ ಬನ್ ಗಯಾ ಹೈ. ಮೈ ಕಹತಾ ಹೂಂ ತೂ ಉಸ್ ಕೆ ಲಿಯೆ ಗಾ’ ಅಂದರಂತೆ.  ಇದನ್ನೇ ಕಾಯುತ್ತಿದ್ದ ಲತಾ ಕೂಡಲೇ ಒಪ್ಪಿ ಘರ್ ಆಜಾ ಘಿರ್ ಆಯೆ ಬದರಾ ಸಾವರಿಯಾ ಹಾಡನ್ನು ಹಾಡುವ ಮೂಲಕ ಈ ವಿರಸಕ್ಕೆ ತೆರೆ ಬಿತ್ತು.  ದಾದಾ ಬರ್ಮನ್ ಕೂಡ ತನ್ನ ಸಂಗೀತ ನಿರ್ದೇಶನದ  ಬಂದಿನಿ ಚಿತ್ರಕ್ಕಾಗಿ ಗುಲ್ಜಾರ್ ಮೊತ್ತಮೊದಲು ಬರೆದ ಮೊರಾ ಗೋರಾ ರಂಗ್ ಲೈ ಲೈ ಮೊಹೆ ಶಾಮ್  ರಂಗ್ ದೈ ದೈ ಗೀತೆಯನ್ನು ಲತಾ ಅವರಿಂದ ಹಾಡಿಸಿದರು. ಆ ಮೇಲೆ  ಅವರ ಸಂಗೀತದಲ್ಲಿ ಸಾಲು ಸಾಲಾಗಿ ಸುಮಧುರ ಲತಾ ಗೀತೆಗಳು  ಬರತೊಡಗಿದವು.  ಆದರೆ 5 ವರ್ಷ ಅವರಿಬ್ಬರ ನಡುವೆ ಇದ್ದ ವಿರಸದ ವಿಷ ಆಗಲೇ ಓ.ಪಿ. ನಯ್ಯರ್ ಮೂಲಕ ಮುಂಚೂಣಿಗೆ ಬರತೊಡಗಿದ್ದ ಆಶಾ ಭೋಸ್ಲೆಗೆ ಅಮೃತತುಲ್ಯವಾಗಿ ಪರಿಣಮಿಸಿ ಎಸ್.ಡಿ. ಬರ್ಮನ್ ಅವರ ಅನೇಕ ಹಾಡುಗಳು ಅವರ ಕಂಠದಲ್ಲಿ ಮೂಡಿಬರುವಂತಾಯಿತು.  ಮಂಗಳೂರು ಆಕಾಶವಾಣಿಯ ಟೆಲಿಫೋನ್ ಸಂದರ್ಶನವೊಂದರಲ್ಲಿ ನಾನು ಈ ವಿಷಯ ಪ್ರಸ್ತಾಪಿಸಿದ್ದನ್ನು ಇಲ್ಲಿ ಕೇಳಬಹುದು.



ಲತಾ ಮಂಗೇಷ್ಕರ್ - ಆಶಾ ಭೋಸ್ಲೆ



ತನ್ನ ಸ್ವಂತ ತಂಗಿ ಆಶಾ ಭೋಸ್ಲೆಯೊಡನೆ ಕೂಡ ಲತಾಗೆ ವಿರಸವುಂಟಾಗಿತ್ತು.  ಆಶಾ 14-15ರ ಎಳೆ ಪ್ರಾಯದಲ್ಲೇ ಲತಾ ಅವರ ಸೆಕ್ರೆಟರಿ ಆಗಿದ್ದ ಮೂವತ್ತರ ಹರೆಯದ ಗಣಪತ್ ರಾವ್ ಭೋಸ್ಲೆಯೊಡನೆ ಓಡಿ ಹೋಗಿ ಯಾರಿಗೂ ಹೇಳದೆ ಮದುವೆ ಮಾಡಿಕೊಂಡದ್ದೇ ಈ ವಿರಸಕ್ಕೆ ಹೇತು. ಆಶಾಗೆ ಮನಸ್ಸಿದ್ದರೂ ಗಣಪತ್ ರಾವ್ ಲತಾ ಅವರಿಂದ ದೂರವೇ ಇರುವಂತೆ ಒತ್ತಡ ಹೇರುತ್ತಿದ್ದರು ಎಂದು ಲತಾ ಅವರ ಅಂಬೋಣ.  ಆಶಾಗೆ ಮಕ್ಕಳು ಮರಿ ಆದ ಮೇಲೆ ಮನೆಯ ಇತರ ಸದಸ್ಯರೊಂದಿಗೆ ರಾಜಿ ಆಯಿತು.  ಇಬ್ಬರು ಸೇರಿ ಅನೇಕ ಯುಗಳ ಗೀತೆಗಳನ್ನು ಹಾಡಿದರೂ ಅನೇಕ ವರ್ಷ ಲತಾ ಜೊತೆ ಆಕೆಗೆ ಮಾತುಕತೆ ಇರಲಿಲ್ಲವಂತೆ.  ಕೊನೆಗೆ 1960ರಲ್ಲಿ ಭೋಸ್ಲೆಯೊಂದಿಗಿನ ಸಂಬಂಧ ಕಡಿದುಹೋದ ಮೇಲಷ್ಟೇ ಅವರಿಬ್ಬರಿಗೆ ರಾಜಿಯಾಗಿ ಅವರನ್ನು ಮನೆಗೆ ಸೇರಿಸಿಕೊಂಡದ್ದು.

ಲತಾ - ರಫಿ



ಸೂರ್ಯಂಗೂ ಚಂದ್ರಂಗೂ ಮುನಿಸು ಬಂದ ಹಾಗೆ ಹಿನ್ನೆಲೆ ಗಾಯಕರ ಷಹನ್‌ಷಾಹ ರಫಿ ಮತ್ತು ಹಿನ್ನೆಲೆ ಗಾಯಕಿಯರ ಮಲ್ಲಿಕಾ ಲತಾ ಅವರ ನಡುವೆ ಹಾಡುಗಳ ರಾಯಲ್ಟಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿ ವಿರಸ ಉಂಟಾಗಿತ್ತು.   ಹಾಡುಗಳ ಜನಪ್ರಿಯತೆಯಲ್ಲಿ ಹಾಡುಗಾರರ ಪಾತ್ರವೂ ಇದ್ದು ರೆಕಾರ್ಡುಗಳ ಮಾರಾಟದಿಂದ ಸಿಗುವ ರಾಯಲ್ಟಿಯಲ್ಲಿ  ಗಾಯಕರಿಗೂ ಪಾಲು ಸಿಗಬೇಕು ಎಂದು ಲತಾ ಅವರ ಅಭಿಪ್ರಾಯವಾಗಿತ್ತು. ಮುಕೇಶ್, ತಲತ್ ಮಹಮೂದ್ ಮುಂತಾದ ಇತರ ಗಾಯಕರ ಸಹಮತವೂ ಇದಕ್ಕಿತ್ತು.  ಆದರೆ ಒಮ್ಮೆ ಹಾಡಿ ನಿರ್ಮಾಪಕರಿಂದ ಸಂಭಾವನೆ ಪಡೆದರೆ ನಮಗೂ ಹಾಡಿಗೂ ಸಂಬಂಧವೇ ಇಲ್ಲ ಎಂದು ರಫಿಯ ವಾದವಾಗಿತ್ತು.  ರಾಯಲ್ಟಿ ಕೊಡುವುದಿದ್ದರೂ ಗ್ರಾಮಫೋನ್ ಕಂಪೆನಿಯವರು ಕೊಡಬೇಕೆಂದು ನಿರ್ಮಾಪಕರೂ, ನಿರ್ಮಾಪಕರು ಕೊಡಬೇಕೆಂದು  ಗ್ರಾಮಫೋನ್ ಕಂಪೆನಿಯವರೂ ವಾದಿಸುತ್ತಿದ್ದರು.  ಹೀಗಿರುವಾಗ ರಾಯಲ್ಟಿ ವಿಷಯ ಇತ್ಯರ್ಥವಾಗುವವರೆಗೆ ಸಿನಿಮಾಗಳಿಗೆ ಹಾಡಿದರೂ ಗ್ರಾಮಫೋನ್ ರೆಕಾರ್ಡುಗಳಿಗೆ ನಾವು ಯಾರೂ ಹಾಡಬಾರದು ಎಂದು ಲತಾ ಬಣ ನಿರ್ಧರಿಸಿತು.  ಆಗ ರೆಕಾರ್ಡುಗಳಿಗಾಗಿ ಬೇರೆಯಾಗಿಯೇ ಹಾಡುವ ಪದ್ಧತಿ ಇತ್ತು.  ಹೀಗಾಗಿ ಪ್ರೇಮಪತ್ರ ಎಂಬ ಚಿತ್ರದ ರೆಕಾರ್ಡುಗಳೇ ಬರಲಿಲ್ಲ.  ಆದರೆ ಕೆಲವು ಗಾಯಕರು ರೆಕಾರ್ಡುಗಳಿಗೂ ಹಾಡತೊಡಗಿದರು.  ಮತ್ತೆ ಹಾಡುಗಾರರ ಎಸೋಸಿಯೇಶನಿನ ಮೀಟಿಂಗ್ ಕರೆಯಲಾಯಿತು.  ಸಾಕಷ್ಟು ಚರ್ಚೆ ನಡೆದು ಆಗ ಅತಿ ಹೆಚ್ಚು ಹಾಡುಗಳನ್ನು ಹಾಡುತ್ತಿದ್ದ  ರಫಿ ಅವರೊಡನೆ ‘ನೀವೇನು ಹೇಳುತ್ತೀರಿ’ ಎಂದು ಮುಕೇಶ್ ಕೇಳಿದಾಗ ಅವರು ಲತಾ ಕಡೆಗೆ ಕೈ ತೋರಿಸಿ ‘ಅಲ್ಲಿ ಮಹಾರಾಣಿ ಕೂತಿದ್ದಾರಲ್ಲ, ಅವರನ್ನೇ ಕೇಳಿ’ ಅಂದರಂತೆ.  ಇದರಿಂದ ಲತಾ ಕೆರಳಿ ಮಾತಿಗೆ ಮಾತು ಬೆಳೆದಾಗ ಎಂದೂ ತಾಳ್ಮೆ ಕಳೆದುಕೊಳ್ಳದ  ರಫಿ ಅಂದೇಕೋ ‘ಹಾಗಿದ್ದರೆ ನಾನಿನ್ನು ನಿಮ್ಮ ಜೊತೆ ಹಾಡುವುದಿಲ್ಲ’ ಅಂದು ಬಿಟ್ಟರು.  ‘ಓಹೋ, ಹಾಗೇನು’ ಎಂದ ಲತಾ ಸಭಾತ್ಯಾಗ ಮಾಡಿ ಪ್ರಮುಖ ಸಂಗೀತ ನಿರ್ದೇಶಕರೆಲ್ಲರಿಗೆ ಫೋನ್ ಮಾಡಿ ರಫಿ ಜೊತೆ ಡ್ಯುಯಟ್ ಹಾಡಲು ತನ್ನನ್ನು ಕರೆಯದಿರುವಂತೆ ಸೂಚಿಸಿದರು.  ಇದು ನಡೆದದ್ದು 1964ರಲ್ಲಿ.  ಹೀಗಾಗಿ ಆವೊ ಪ್ಯಾರ್ ಕರೇಂ ಚಿತ್ರದ ತುಮ್ ಅಕೇಲೇ ತೊ ಕಭೀ ಬಾಗ್ ಮೆಂ ಆಯಾ ನ ಕರೊ ಹಾಡು ಅವರಿಬ್ಬರು ಸೇರಿ ಹಾಡಿದ ಕೊನೆಯ ಹಾಡಾಯಿತು.  ಮುಂದೆ ಸುಮಾರು ಎರಡು ವರ್ಷ ಅವರು ಜೊತೆಯಾಗಿ ಹಾಡಲಿಲ್ಲ.  ಆದರೆ ಇದರಿಂದಾಗಿ ಲತಾ ಹಾಡುಗಳು ಕಮ್ಮಿಯಾದವೇ ಹೊರತು ಜನಪ್ರಿಯತೆಯ ತುತ್ತತುದಿಯಲ್ಲಿದ್ದ ರಫಿಯ ಮೇಲೆ ಯಾವ ಪರಿಣಾಮವೂ ಆಗಲಿಲ್ಲ.  ರಫಿಯೊಡನೆ ಹೆಚ್ಚು ಹೆಚ್ಚು ಹಾಡುವ ಅವಕಾಶ ದೊರಕಿ ಆಶಾ ಭೋಸ್ಲೆಯ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದದ್ದಷ್ಟೇ ಅಲ್ಲದೆ ಸುಮನ್ ಕಲ್ಯಾಣ್‌ಪುರ್ ಅವರ ಅದೃಷ್ಟವೂ ಮತ್ತಷ್ಟು ಖುಲಾಯಿಸಿತು. ಶಾರದಾ ಎಂಬ ಹೊಸ ಗಾಯಕಿಯೂ ಕಾಣಿಸಿಕೊಂಡರು.  ಕೊನೆಗೆ 1966ರಲ್ಲಿ ಜೈಕಿಶನ್ ಅವರ ಮಧ್ಯಸ್ತಿಕೆಯಿಂದ ಸಂಧಾನವೇರ್ಪಟ್ಟು ಪಲ್‌ಕೊಂ ಕೀ ಛಾವೊ ಮೆಂ ಎಂಬ ಚಿತ್ರಕ್ಕೆಂದು ಅವರಿಬ್ಬರ ಧ್ವನಿಯಲ್ಲಿ ಯುಗಳಗೀತೆಯೊಂದರ .ಧ್ವನಿಮುದ್ರಣವಾಯಿತು.  ಆದರೆ ಆ ಚಿತ್ರವಾಗಲಿ ಆ ಹಾಡಾಗಲಿ ಬೆಳಕು ಕಾಣದೆ ಇದ್ದುದರಿಂದ ಶಂಕರ್ ಜೈಕಿಶನ್ ಅವರ ಸಂಗೀತವೇ ಇದ್ದ  ಗಬನ್ ಚಿತ್ರದ ತುಮ್ ಬಿನ್ ಸಜನ್ ಬರ್‌ಸೆ ನಯನ್ ಹಾಡು  ರಫಿ-ಲತಾ ವಿರಸದ ನಂತರ ಜೊತೆಯಾಗಿ ಹಾಡಿದ ಮೊದಲ ಹಾಡೆಂದು ದಾಖಲಾಯಿತು. ಸಚಿನ್ ದೇವ್ ಬರ್ಮನ್ ಸಂಗೀತದ ಜ್ಯುಯಲ್ ತೀಫ್ ಚಿತ್ರದ ದಿಲ್ ಪುಕಾರೇ ಹಾಡು ಅವರ ವಿರಸದ ನಂತರದ ಮೊದಲ ಹಾಡೆಂದು ಕೆಲವರು ತಪ್ಪಾಗಿ ಉಲ್ಲೇಖಿಸುವುದಿದೆ.  ಸಂಧಾನಕ್ಕೆ ಮೊದಲು ತಪ್ಪೊಪ್ಪಿಗೆಯ ಪತ್ರವೊಂದನ್ನು ರಫಿ ಅವರಿಂದ ಬರೆಸಿಕೊಂಡಿದ್ದೆ ಎಂಬ ವಿವಾದಾತ್ಮಕ ಹೇಳಿಕೆಯೊಂದನ್ನು ಲತಾ ಇತ್ತೀಚೆಗೆ ನೀಡಿದ್ದರು.  ಆದರೆ ಈ ವಿರಸದಿಂದ ಎಳ್ಳಷ್ಟೂ ಜನಪ್ರಿಯತೆ ಕಳೆದುಕೊಳ್ಳದ ರಫಿ ಈ ರೀತಿ ಪತ್ರ ಬರೆದು ಕೊಟ್ಟರು ಅಂದರೆ ಯಾರೂ ನಂಬುವ ಮಾತಲ್ಲ.  ಲತಾ ರಫಿ ವಿರಸದ ಸಮಯದಲ್ಲಿ ಲವ್ ಇನ್ ಟೋಕಿಯೋ ಚಿತ್ರದಲ್ಲಿ ಅವರು ಬೇರೆಬೇರೆಯಾಗಿ ಹಾಡಿದ್ದ ಓ ಮೇರೆ ಶಾಹೆಖುಬಾ ಹಾಡನ್ನು ರೇಡಿಯೊ ಸಿಲೋನಿನವರು ಎರಡು ರೆಕಾರ್ಡುಗಳನ್ನು ಬಳಸಿ ಈ ರೀತಿ ಯುಗಳಗೀತೆಯಾಗಿಸಿ ಪ್ರಸಾರ ಮಾಡುತ್ತಿದ್ದರು.


ಲತಾ ಮಂಗೇಷ್ಕರ್ - ಸಿ. ರಾಮಚಂದ್ರ



50ರ ದಶಕದಲ್ಲಿ ಅನಾರ್ಕಲಿ, ಆಜಾದ್, ಅಲಬೇಲಾ ಮುಂತಾದ  ಬಹಳಷ್ಟು ಚಿತ್ರಗಳಲ್ಲಿ ತನಗೆ ಮಧುರ ಗೀತೆಗಳನ್ನು ಹಾಡಲು ಅವಕಾಶ ನೀಡಿದ್ದ ಸಂಗೀತ ನಿರ್ದೇಶಕ ಸಿ. ರಾಮಚಂದ್ರ ಅವರ ನಂಟನ್ನು  ಲತಾ 1958ರ ಅಮರದೀಪ್ ಚಿತ್ರದ ನಂತರ ಕಡಿದುಕೊಂಡರು. ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ ರೆಕಾರ್ಡಿಸ್ಟ್ ಒಬ್ಬರನ್ನು ಲತಾ ಕೋರಿಕೆಯಂತೆ ಸಿ. ರಾಮಚಂದ್ರ ಅವರು ಕೈಬಿಡಲು ನಿರಾಕರಿಸಿದ್ದೇ ಇದಕ್ಕೆ ಕಾರಣ.  ಕಾಲಕ್ಕೆ ತಕ್ಕ ಕೋಲ ಕಟ್ಟುವಲ್ಲಿ ಸೋತ ಸಿ. ರಾಮಚಂದ್ರ ಅವರ ವೃತ್ತಿಜೀವನವೂ ನಂತರ ಅವನತಿಯ ಹಾದಿ ಹಿಡಿಯಿತು. ಆದರೆ 1962ರ ಚೀನಾ ಯುದ್ಧದ ಸಂದರ್ಭದಲ್ಲಿ ಕವಿ ಪ್ರದೀಪ್ ಅವರು ಬರೆದ ಏ ಮೇರೆ ವತನ್ ಕೆ ಲೋಗೊ ಹಾಡಿಗೆ ಸ್ವರ ಸಂಯೋಜಿಸುವ ಸುವರ್ಣಾವಕಾಶವೊಂದು ಅವರ ಪಾಲಿಗೆ  ಒದಗಿಬಂತು. 1963ರ ಗಣರಾಜ್ಯೋತ್ಸವದಂದು ಜವಾಹರಲಾಲ್ ನೆಹರೂ ಅವರ ಉಪಸ್ಥಿತಿಯಲ್ಲಿ ಪ್ರಸ್ತುತಪಡಿಸಲುದ್ದೇಶಿಸಿದ್ದ  ಈ ಹಾಡನ್ನು ಆಶಾ ಭೋಸ್ಲೆ ಹಾಡುವುದೆಂದು ನಿಶ್ಚಯವಾಗಿ ರಿಹರ್ಸಲ್ ಕೂಡ ನಡೆಯಿತು. ಆದರೆ ರಾಷ್ಟ್ರೀಯ ವೇದಿಕೆಯೊಂದರಲ್ಲಿ ಮಿಂಚುವ ಅವಕಾಶವನ್ನು ಕಳೆದುಕೊಳ್ಳಲು ಸಿದ್ಧರಿಲ್ಲದ ಲತಾ ತನ್ನ ಪ್ರತಿಷ್ಠೆಯನ್ನು ಬದಿಗಿಟ್ಟು ಸಿ. ರಾಮಚಂದ್ರ ಅವರೊಂದಿಗೆ ರಾಜಿ ಮಾಡಿಕೊಂಡು ಆ ಹಾಡು ತನ್ನದಾಗುವಂತೆ ಮಾಡಿಕೊಳ್ಳುವಲ್ಲಿ ಸಫಲರಾದರು.  ಅದರ ಧ್ವನಿಮುದ್ರಿಕೆ ತಯಾರಾಗಿ ಚಲನಚಿತ್ರ ಗೀತೆಗಳಂತೆ ಬಲು ಜನಪ್ರಿಯವೂ ಆಯಿತು. ಆದರೆ ಈ ಮರು ಮೈತ್ರಿ ಕೇವಲ ತಾತ್ಕಾಲಿಕವಾಗಿತ್ತು.  ನಂತರದ ವರ್ಷಗಳಲ್ಲಿ ಸಿ.ರಾಮಚಂದ್ರ ಅವರ ಹೆಚ್ಚು ಚಿತ್ರಗಳೇನೂ ಬರಲಿಲ್ಲ.  ಬಂದ ಒಂದರಲ್ಲೂ ಲತಾ ಧ್ವನಿ ಇರಲಿಲ್ಲ.




ಓ.ಪಿ. ನಯ್ಯರ್ - ಗುರುದತ್



Mr and Mrs55, ಆರ್ ಪಾರ್,  ಸಿ.ಐ.ಡಿ ಮುಂತಾದ ಚಿತ್ರಗಳ ಮೂಲಕ ನಯ್ಯರ್ ಅವರ ಯಶಸ್ಸಿಗೆ ಕಾರಣರಾದ ಗುರುದತ್ ಅವರ ಚಿತ್ರಗಳಿಂದ ಆ ಮೇಲೆ ನಯ್ಯರ್ ಸಂಗೀತ ಮಾಯವಾಗಿ ಆ ಸ್ಥಾನಕ್ಕೆ ಚೌದವೀಂ ಕಾ ಚಾಂದ್ ಚಿತ್ರದ ಮೂಲಕ ರವಿ ಮತ್ತು ಪ್ಯಾಸಾ, ಕಾಗಜ್ ಕೆ ಫೂಲ್ ಚಿತ್ರಗಳ ಮೂಲಕ ಎಸ್.ಡಿ ಬರ್ಮನ್ ಬಂದರು.  ಸಿ.ಐ.ಡಿ ಹಿಟ್ ಆದರೆ ನಯ್ಯರ್, ವಹೀದಾ ರಹಮಾನ್ ಮತ್ತು ರಾಜ್ ಖೋಸ್ಲಾ ಅವರಿಗೆ ಹೊಸ ಕಾರುಗಳನ್ನು ನೀಡುವುದಾಗಿ ಘೋಷಿಸಿದ್ದ ಗುರುದತ್ ಉಳಿದಿಬ್ಬರಿಗೆ ಮಾತ್ರ ಕೊಟ್ಟು ತನಗೆ ಮೋಸ ಮಾಡಿದ್ದು ಇದಕ್ಕೆ ಕಾರಣ ಎಂದು ನಯ್ಯರ್ ಹೇಳುತ್ತಾರೆ.  ಆದರೆ ಬಹಾರೇಂ ಫಿರ್ ಭೀ ಆಯೇಂಗೀ ಚಿತ್ರಕ್ಕೆ ಕೆಲವು ಹಾಡುಗಳನ್ನು ಧ್ವನಿಮುದ್ರಿಸುವಷ್ಟರಲ್ಲಿ ಅಸೌಖ್ಯಕ್ಕೆ ಒಳಗಾದ ಎಸ್.ಡಿ ಬರ್ಮನ್ ಸ್ಥಾನಕ್ಕೆ ಮತ್ತೆ ನಯ್ಯರ್ ಅವರನ್ನು ಕರೆತರುವ ಮೂಲಕ ಈ ಮೈತ್ರಿ ಮತ್ತೆ ಚಿಗುರೊಡೆಯಿತು.  ಆದರೆ ದುರದೃಷ್ಟವಶಾತ್ ಆ ಚಿತ್ರ ಸಂಪೂರ್ಣವಾಗುವ ಮುನ್ನವೇ ಗುರುದತ್ ಇಹಲೋಕ ತ್ಯಜಿಸಿದರು.

ಓ.ಪಿ. ನಯ್ಯರ್ - ರಫಿ



ರಫಿ ಹಾಡುಗಳಿಂದಲೇ ತಾನು ಕೀರ್ತಿಯ ಉತ್ತುಂಗಕ್ಕೇರಿದ್ದರೂ 1966ರ ಲವ್ ಎಂಡ್ ಮರ್ಡರ್ ಎಂಬ ಚಿತ್ರದ  ಒಂದು ರೆಕಾರ್ಡಿಂಗಿಗೆ ಕೊಂಚ ತಡವಾಗಿ ಬಂದರೆಂಬ ಕ್ಷುಲ್ಲಕ ಕಾರಣಕ್ಕಾಗಿ ಅವರೊಡನೆ ವಿರಸ ಕಟ್ಟಿಕೊಂಡ ನಯ್ಯರ್ ನಡೆಯನ್ನು ತಾನು ಕುಳಿತಿರುವ ಗೆಲ್ಲಿಗೇ ಕೊಡಲಿಯೇಟು ಹಾಕಿಕೊಂಡಂತೆ ಅನ್ನಬೇಕೋ, ವಿನಾಶ ಕಾಲೇ ವಿಪರೀತ ಬುದ್ಧಿ ಅನ್ನಬೇಕೋ ತಿಳಿಯದು. ಆದರೂ ಅಷ್ಟರಲ್ಲೇ ರೆಕಾರ್ಡ್ ಆಗಿದ್ದ ಕೆಲವು ರಫಿ ಹಾಡುಗಳು ಬಹಾರೇ ಫಿರ್ ಭೀ ಆಯೇಂಗೀ, ಯೆ ರಾತ್ ಫಿರ್ ನ ಆಯೇಗಿ , ಸಾವನ್ ಕೀ ಘಟಾ, ಹಮ್ ಸಾಯಾ ಮುಂತಾದ ಚಿತ್ರಗಳಲ್ಲಿ ಮುಂದಿನ ಒಂದೆರಡು ವರ್ಷ ಕೇಳಲು ಸಿಕ್ಕಿದವು.  ಆ ಮೇಲೆ ಅವರ ಸ್ಥಾನಕ್ಕೆ ಮಹೇಂದ್ರ ಕಪೂರ್ ಅವರನ್ನು ಕರೆತಂದು ಕೆಲವು ಸಿ ಗ್ರೇಡ್ ಸಿನಿಮಾಗಳಲ್ಲಿ ಒಳ್ಳೆಯ ಹಾಡುಗಳನ್ನು ನೀಡುವ  ಪ್ರಯತ್ನ ಮಾಡಿದರೂ ಅವರೆಂದೂ ಮತ್ತೆ ಮೊದಲಿನ ಓ.ಪಿ. ನಯ್ಯರ್ ಆಗಲಿಲ್ಲ.  ಮತ್ತೆ ರಫಿಯೊಡನೆ ರಾಜಿ ಮಾಡಿಕೊಂಡದ್ದೂ ಅವರಿಗೆ ನೆರವಾಗಲಿಲ್ಲ.

ಓ.ಪಿ. ನಯ್ಯರ್ - ಆಶಾ



1960ರಲ್ಲಿ ತನ್ನ ಪತಿ ಭೋಸ್ಲೆ ಅವರೊಂದಿಗಿನ ನಂಟು ಕಡಿದುಕೊಂಡ ಆಶಾ ಜೊತೆ ಸಂಗೀತ ಸಂಬಂಧ ಮಾತ್ರವಲ್ಲದೆ ವೈಯುಕ್ತಿಕ ಬಂಧವನ್ನೂ ಬೆಳೆಸಿಕೊಂಡ ನಯ್ಯರ್ 60ರ ದಶಕದಲ್ಲಿ ಅವರ ಪ್ರತಿಭೆಯ ವಜ್ರವನ್ನು ಸಾಣೆ ಹಿಡಿಯುವ ಜೋಹರಿಯಾದರು. ಆದರೆ ಆ ವಜ್ರವನ್ನೆಲ್ಲಿ ಕಳೆದುಕೊಳ್ಳುತ್ತೇನೋ ಎಂಬ ಭಯದಿಂದ ತನ್ನ ಆರಂಭದ ದಿನಗಳ ಯಶಸ್ಸಿಗೆ ಕಾರಣರಾಗಿದ್ದ ಅನನುಕರಣೀಯ ಧ್ವನಿಯೊಡತಿ ಗೀತಾ ದತ್ ಮತ್ತು ಟೆಂಪಲ್ ಬೆಲ್‌ನಂಥ ಕಂಚಿನ ಕಂಠದ ಗಾಯಕಿ ಎಂದು  ಎಂದು ತಾನೇ ಹೊಗಳುತ್ತಿದ್ದ ಶಂಶಾದ್ ಬೇಗಂ ಅವರನ್ನು ಮರೆತೇ ಬಿಟ್ಟರು.  ಕಷ್ಟ ಕಾಲದಲ್ಲಿದ್ದ ಗೀತಾ ದತ್ ಒಮ್ಮೆ ಈ ಬಗ್ಗೆ ನಯ್ಯರ್ ಅವರನ್ನು ಕೇಳಿಯೂ ಇದ್ದರಂತೆ.  ಆದರೆ ನಯ್ಯರ್ ಮನೆದೇವರ ಸಹಮತಿಯಿಲ್ಲದೆ  ಏನೂ ಮಾಡಲಾರದ ಸ್ಥಿತಿಯಲ್ಲಿದ್ದರು. ಎಷ್ಟೋ ವರ್ಷಗಳ ನಂತರ ಕಿಸ್ಮತ್ ಚಿತ್ರದಲ್ಲಿ ಕಜ್‌ರಾ ಮುಹಬ್ಬತ್ ವಾಲಾ ಹಾಡಿಗೆ ಮಾತ್ರ ಶಂಷಾದ್ ಧ್ವನಿಯನ್ನು ಮತ್ತೆ ಬಳಸಿಕೊಳ್ಳಲು ಅವರಿಗೆ ಸಾಧ್ಯವಾಯಿತು. ಆದರೆ  1972ರ ಪ್ರಾಣ್ ಜಾಯೇ ಪರ್ ವಚನ್ ಜಾಯೇ ಚಿತ್ರದ ನಂತರ ಆಶಾ ಭೋಸ್ಲೆಯೊಂದಿಗಿನ ಅವರ ಸಂಬಂಧವೂ ಹಠಾತ್ತಾಗಿ ಕಡಿದು ಹೋಗಿ ಅವರ ಸಂಗೀತದಲ್ಲಿ ಟೊಳ್ಳಾದ ಡೋಲುಗಳು ಮಾತ್ರ ಉಳಿದವು.  ವಿಪರ್ಯಾಸವೆಂದರೆ ಆ ಚಿತ್ರದ ಚೈನ್ ಸೆ ಹಮ್ ಕೊ ಕಭೀ ಆಪ್ ನೆ ಜೀನೆ ನ ದಿಯಾ ಹಾಡಿಗೆ ಆ ವರ್ಷದ ಫಿಲ್ಮ್ ಫೇರ್ ಅವಾರ್ಡ್ ದೊರಕಿತು.  ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಶಾ ಬರದಿದ್ದರೂ ನಯ್ಯರ್ ಆ ಪ್ರಶಸ್ತಿ ಸ್ವೀಕರಿಸಿ ಬರುತ್ತಾ ಅದನ್ನು ಕಾರಿನಿಂದ  ಹೊರಕ್ಕೆಸೆದು ಅದು ನೆಲಕ್ಕೆ ಬಿದ್ದ ಸದ್ದು ಕೇಳಿ ಸಂತಸಪಟ್ಟರಂತೆ. ಆದರೆ ಈ ಘಟಸ್ಪೋಟಕ್ಕೆ ಕಾರಣವೇನೆಂಬುದು ನಿಗೂಢ. ಇಲ್ಲಿ ಬರೆಯಲಾಗದ ಘಟನೆಯೊಂದು ಇದಕ್ಕೆ ಹೇತು ಎಂದು ಕೆಲವರ ಊಹೆ. ಈಗಲೂ ಆಶಾ ಭೋಸ್ಲೆ ತನ್ನ ಯಶಸ್ಸಿಗೆ ಕಾರಣರಾದವರನ್ನು ನೆನಪಿಸಿಕೊಳ್ಳುವಾಗ ತಪ್ಪಿಯೂ ನಯ್ಯರ್ ಅವರ ಉಲ್ಲೇಖ ಮಾಡುವುದಿಲ್ಲ.  ಆದರೆ ನಯ್ಯರ್ ಕೊನೆ ವರೆಗೂ ಆಶಾ ಧ್ವನಿಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಲೇ ಇದ್ದರು!

ಲತಾ ಮಂಗೇಷ್ಕರ್ - ಶಂಕರ್ - ರಾಜಕಪೂರ್



ಲತಾ ರಫಿ ವಿರಸದ ಸಮಯದಲ್ಲಿ  ತಿತ್‌ಲಿ ಉಡಿ ಖ್ಯಾತಿಯ ಶಾರದಾ  ಶಂಕರ್ ಜೈಕಿಶನ್ ಪಾಳೆಯವನ್ನು ಸೇರಲು ಕಾರಣ ರಾಜಕಪೂರ್. ಟೆಹರಾನ್‌ನಲ್ಲಿ ಶ್ರೀಚಂದ್ ಆಹೂಜಾ ಎಂಬವರ ಪಾರ್ಟಿಯೊಂದರಲ್ಲಿ ಆಕೆ ಹಾಡಿದ್ದನ್ನು ಕೇಳಿದ ರಾಜ್ ಆಕೆಯನ್ನು ಮುಂಬಯಿಗೆ ಕರೆತಂದು ತನ್ನ ಚಿತ್ರಗಳಲ್ಲಿ ಬಳಸಿಕೊಳ್ಳುವ ಉದ್ದೇಶದಿಂದ ಶಂಕರ್ ಅವರಿಗೆ ಪರಿಚಯಿಸಿದರು. ಶಂಕರ್  ಸೂಕ್ತ ತರಬೇತಿ ಮೂಲಕ ಆಕೆಯ ವಿಶಿಷ್ಟ ಧ್ವನಿಯನ್ನು ತಿದ್ದಿ ತೀಡಿ ಗುಮ್‌ನಾಮ್, ಸೂರಜ್, ಅರೌಂಡ್ ದ ವರ್ಲ್ಡ್, ಶತ್ರಂಜ್ ಮುಂತಾದ ಚಿತ್ರಗಳಲ್ಲಿ ಆಕೆಯಿಂದ ಹಿಟ್ ಹಾಡುಗಳನ್ನು ಹಾಡಿಸಿದರು. ರಾಜ್ ಕಪೂರ್ ಅವರ magnum opus ಮೇರಾ ನಾಮ್ ಜೋಕರ್ ಚಿತ್ರಕ್ಕೂ ಆಕೆಯ ಹಾಡುಗಳನ್ನು ಧ್ವನಿಮುದ್ರಿಸಿಕೊಳ್ಳಲಾಯಿತು.  ಅದುವರೆಗೆ ರಾಜ್ ಚಿತ್ರಗಳಿಗೆ ಅನಿವಾರ್ಯವೇ ಆಗಿದ್ದ ಲತಾಗೆ ಸಹಜವಾಗಿಯೇ ಇದು ರುಚಿಸಲಿಲ್ಲ.  ರಾಜ್, ಶಂಕರ್ ಇಬ್ಬರಿಂದಲೂ ದೂರ ಇರಲು ನಿರ್ಧರಿಸಿದ ಲತಾ ಜೋಕರ್ ಮತ್ತು ಕಲ್ ಆಜ್ ಔರ್ ಕಲ್ ಚಿತ್ರಗಳಲ್ಲಿ ಹಾಡಲಿಲ್ಲ.  ಜೋಕರ್ ವ್ಯಾವಹಾರಿಕವಾಗಿ ದಯನೀಯವಾಗಿ ಸೋತು ರಾಜ್ ಹೊಸ ಜನಾಂಗದ ಬಾಬ್ಬಿ ನಿರ್ಮಾಣಕ್ಕೆ ಕೈ ಹಾಕಿದಾಗ ಅವರಿಗೆ ಜೈಕಿಶನ್ ನಿಧನದಿಂದ ಒಬ್ಬಂಟಿಯಾಗಿದ್ದ ಶಂಕರ್ ಮತ್ತು ಲತಾ ಇವರಿಬ್ಬರಲ್ಲಿ ಒಬ್ಬರನ್ನು ಆಯ್ದುಕೊಳ್ಳುವ ಸಂದಿಗ್ಧ ಎದುರಾಗಿರಬಹುದು. ವ್ಯಾವಹಾರಿಕವಾಗಿ  ಎರಡನೇ ಆಯ್ಕೆ ಸೂಕ್ತವೆನ್ನಿಸಿ ಅವರು ಶಂಕರ್ ಅವರನ್ನು ಕೈಬಿಟ್ಟಿರಬಹುದು ಎಂದು ಊಹಿಸಬೇಕಾಗುತ್ತದೆ.  ಕೆಲ ವರ್ಷಗಳ ನಂತರ ಶಂಕರ್ ಮತ್ತು ಲತಾ ಮಂಗೇಷ್ಕರ್ ಮಧ್ಯೆ ರಾಜಿ ಆಗಿ ಅವರು  ಸನ್ಯಾಸಿ ಮುಂತಾದ ಚಿತ್ರಗಳಲ್ಲಿ ಹಾಡಿದರೂ ಇದು ಶಂಕರ್ ಅವರಿಗೆ ಅಷ್ಟೇನೂ ಪ್ರಯೋಜನಕಾರಿ ಆಗಲಿಲ್ಲ.



ಮೇರಾ ನಾಮ್ ಜೋಕರ್‌ಗಾಗಿ ಶಾರದಾ ಅವರ ಧ್ವನಿಯಲ್ಲಿ ಧ್ವನಿಮುದ್ರಿಸಲಾಗಿದ್ದ ಆದರೆ ಚಿತ್ರದಲ್ಲಿ ಸೇರ್ಪಡೆಯಾಗದ ಬೇರೆಲ್ಲೂ ಕೇಳಲು ಸಿಗದ ಹಾಡು  ಇಲ್ಲಿದೆ.


ಶಂಕರ್ - ಜೈಕಿಶನ್



ತಮ್ಮ ವೃತ್ತಿ ಜೀವನದ ಉತ್ತರಾರ್ಧದಲ್ಲಿ  ಶಂಕರ್ ಮತ್ತು ಜೈಕಿಶನ್ ನಡುವೆಯೂ ಬೂದಿ ಮುಚ್ಚಿದ ಕೆಂಡದಂಥ ವಿರಸ ಹೊಗೆಯಾಡಲು ಶುರು ಮಾಡಿತ್ತು. ಮೊದಲ ಒಂದೆರಡು ಚಿತ್ರಗಳ  ನಂತರ ಕೆಲಸದ ಹೊರೆ ಹೆಚ್ಚಾದ  ಕಾರಣ ಶಂಕರ್ ಮತ್ತು ಜೈಕಿಶನ್ ಚಿತ್ರಗಳ ಹಾಡುಗಳನ್ನು ಹಂಚಿಕೊಂಡು ಬೇರೆಬೇರೆಯಾಗಿ ಕಂಪೋಸಿಂಗ್ ಮಾಡುತ್ತಿದ್ದರು.  ಆದರೆ ಹೊರ ಜಗತ್ತಿಗೆ ಯಾವುದು ಶಂಕರ್ ಹಾಡು ಯಾವುದು ಜೈಕಿಶನ್ ಹಾಡು ಎಂದು ತಿಳಿಯುತ್ತಿರಲಿಲ್ಲ.  ಕೆಲವರು ಶೈಲೇಂದ್ರ ಬರೆದ ಹಾಡುಗಳನ್ನು ಶಂಕರ್ ಸಂಯೋಜಿಸುತ್ತಿದ್ದರು  ಮತ್ತು ಹಸರತ್ ಜೈಪುರಿ ಬರೆದ ಹಾಡುಗಳು ಜೈಕಿಶನ್ ಅವರದಾಗಿರುತ್ತಿದ್ದವು ಎಂದು ಊಹಿಸುವುದಿತ್ತು. ಆದರೆ ಇದು ಸಂಪೂರ್ಣ ಸತ್ಯವಲ್ಲ ಎಂದು ಮುಂದೆ ತಿಳಿಯಿತು.  1964ರ ಸಂಗಂ ಸಂಗೀತ ಅಭೂತಪೂರ್ವ ಯಶಸ್ಸು ಕಂಡಾಗ ಫಿಲ್ಮ್ ಫೇರ್ ಇಂಟರ್‌ವ್ಯೂ ಒಂದರಲ್ಲಿ ಆ ಚಿತ್ರದ ಯೆ ಮೇರಾ ಪ್ರೇಮ್ ಪತ್ರ ಪಢ್ ಕರ್ ತನ್ನ ಸಂಯೋಜನೆ  ಎಂದು ಜೈಕಿಶನ್ ಜಗಜ್ಜಾಹೀರುಗೊಳಿಸಿದ್ದು ಶಂಕರ್ ಅವರಿಗೆ ಇಷ್ಟವಾಗಲಿಲ್ಲ.  ಪ್ರೇಮ್ ಪತ್ರ ಮತ್ತು ಮೇರೇ ಮನ್ ಕೀ ಗಂಗಾ  ಆ ವರ್ಷದ ವಾರ್ಷಿಕ ಬಿನಾಕಾ ಗೀತ್ ಮಾಲಾದ ಟಾಪ್ ಹಾಡುಗಳಾದಾಗ ಶಂಕರ್ ಅವರಿಗೆ ಇನ್ನಷ್ಟು ಮುನಿಸು ಬಂದು ‘ಈ ಎರಡು ಹಾಡುಗಳು ಟಾಪ್ ಎಂದು ಯಾರು ನಿಮಗೆ ಹೇಳಿದ್ದು.  ಸಂಗಂ ಚಿತ್ರದ ಶ್ರೇಷ್ಠ ಹಾಡು ದೋಸ್ತ್ ದೋಸ್ತ್ ನ ರಹಾ’ ಎಂದು ಅಮೀನ್ ಸಯಾನಿಯನ್ನು ತರಾಟೆಗೆ ತೆಗೆದುಕೊಂಡರಂತೆ.  ಇದರಿಂದ ಹಸರತ್ ಬರೆದ ಪ್ರೇಮ್ ಪತ್ರ ಮತ್ತು ಶೈಲೇಂದ್ರ ಬರೆದ ಮೇರೆ ಮನ್ ಕೀ ಗಂಗಾ ಎರಡೂ ಜೈಕಿಶನ್ ಸಂಯೋಜನೆಗಳೆಂದೂ ದೋಸ್ತ್ ದೋಸ್ತ್ ಶಂಕರ್ ಅವರದೆಂದೂ ತಿಳಿಯುವಂತಾದುದಷ್ಟೇ ಅಲ್ಲದೆ ಅವರಿಬ್ಬರ ನಡುವಿನ ಶೀತಲ ಸಮರದ ಸೂಚನೆಯೂ ಸಿಕ್ಕಿತು. ಶಂಕರ್ ಅವರು ಹೊಸ ಗಾಯಕಿ ಶಾರದಾ ಅವರನ್ನು ಪರಿಚಯಿಸಿದ್ದೂ ಜೈಕಿಶನ್‌ಗೆ ಇಷ್ಟವಿರಲಿಲ್ಲ ಎನ್ನಲಾಗಿದೆ.  ಆದರೆ ವ್ಯವಹಾರ ನಿಪುಣರಾಗಿದ್ದ   ಜೈಕಿಶನ್ ಈ ವಿರಸದಿಂದ ತಮ್ಮ ವೃತ್ತಿಜೀವನಕ್ಕೆ ಹಾನಿಯಾಗದಂತೆ  ನೋಡಿಕೊಂಡರು.  ಅತಿಯಾದ ಕುಡಿತದಿಂದ ಲಿವರ್ ಸಿರೋಸಿಸ್‍ಗೆ ಒಳಗಾಗಿ 1971ರಲ್ಲಿ 42 ವರ್ಷ ವಯಸ್ಸಿನ ಜೈಕಿಶನ್ ತೀರಿಕೊಂಡ ಮೇಲೆ ಸ್ವಭಾವತಃ ಮುಂಗೋಪಿಯೂ ಆಗಿದ್ದು ವ್ಯವಹಾರ ಸೂಕ್ಷ್ಮಗಳನ್ನು ಅರಿಯದಿದ್ದ ಶಂಕರ್ ಕ್ರಮೇಣ ಹಿನ್ನೆಲೆಗೆ ಸರಿಯತೊಡಗಿದರು. ಅವರು ಸಂಗೀತ ನೀಡಬೇಕಿದ್ದ ಜಿ.ಪಿ. ಸಿಪ್ಪಿ ಅವರಂಥವರ ಚಿತ್ರಗಳು ಇತರರ ಪಾಲಾದವು. ಸಾಲದ್ದಕ್ಕೆ ಏರಿದ ಏಣಿಯನ್ನು ಒದ್ದಂತೆ ರಾಜಕಪೂರ್ ಕೂಡ ಅವರ  ಕೈಬಿಟ್ಟು ಬಾಬ್ಬಿ ಚಿತ್ರಕ್ಕೆ ಲಕ್ಷ್ಮೀಕಾಂತ್ ಪ್ಯಾರೆಲಾಲ್ ಅವರನ್ನು ಬಳಸಿಕೊಂಡರು. ಕೊನೆಯ ದಿನಗಳಲ್ಲಿ ಬಹುತೇಕ ಅನಾಮಿಕರಾಗಿ ಬದುಕಿದ ಶಂಕರ್ 1987ರಲ್ಲಿ ಇಹಲೋಕ ತ್ಯಜಿಸಿದ ವಿಷಯ ಪ್ರಪಂಚಕ್ಕೆ ತಿಳಿದದ್ದು ಅವರ ಅಂತಿಮ ಸಂಸ್ಕಾರ ನಡೆದ ನಂತರ.

ಎಸ್.ಡಿ. ಬರ್ಮನ್ - ಆರ್.ಡಿ. ಬರ್ಮನ್



ತ್ರಿಪುರಾದ ರಾಜಮನೆತನಕ್ಕೆ ಸೇರಿದ ಸಚಿನ್ ದೇವ್ ಬರ್ಮನ್ ತನ್ನ ಸ್ವಂತ ಮಗ ಸೇರಿದಂತೆ ಯಾರಿಗೂ ಸೊಪ್ಪು ಹಾಕದ ಮಹಾ ಸ್ವಾಭಿಮಾನಿಯಾಗಿದ್ದರು.  70ರ ದಶಕದಲ್ಲಿ ಆರ್.ಡಿ. ಬರ್ಮನ್ ಅವರಿಗೂ ತುಂಬಾ ಚಿತ್ರಗಳು ಸಿಗತೊಡಗಿದ್ದವು. ಆದರೂ ದಾದಾ ಅವರ ಚಿತ್ರಗಳಲ್ಲಿ ಪಂಚಮ್ ಸಹಾಯಕ ಸಂಗೀತ ನಿರ್ದೇಶಕರೆಂದು ಗುರುತಿಸಿಕೊಳ್ಳುತ್ತಿದ್ದರು.  ಇಬ್ಬರಿಗೂ  ಬಾಸು ಚಕ್ರವರ್ತಿ, ಮನೋಹಾರಿ ಮತ್ತು ಮಾರುತಿ ರಾವ್ ಅವರೇ ಅರೇಂಜರ್ ಆಗಿದ್ದರು.  ದಾದಾ ಬರ್ಮನ್ ದೇವಾನಂದ್ ಅವರ ತೇರೆ ಮೇರೆ ಸಪ್‌ನೆ ಚಿತ್ರದ ಕೆಲಸ ಮಾಡುತ್ತಿದ್ದಾಗ ಪಂಚಮ್ ಈ ಸಹಾಯಕರನ್ನೆಲ್ಲ ಜೆಮಿನಿಯ ಲಾಖೋಂ ಮೆ ಏಕ್ ಚಿತ್ರದ ರೆಕಾರ್ಡಿಂಗಿಗಾಗಿ ಮದರಾಸಿಗೆ ಕರಕೊಂಡು ಹೋದರು.  ಇದರಿಂದ ಕೆರಳಿದ ದಾದಾ ಬರ್ಮನ್ ಪಂಚಮ್ ಸೇರಿದಂತೆ ಆ ಎಲ್ಲರನ್ನು ತನ್ನ ತಂಡದಿಂದ ಹೊರಗೆ ಹಾಕಿದರು.  ಹೀಗಾಗಿ  ನಂತರದ  ಎಲ್ಲ ಚಿತ್ರಗಳಲ್ಲಿ ಅವರ ಪತ್ನಿ ಮೀರಾ ಬರ್ಮನ್  ಸಹಾಯಕಿಯಾಗಿಯೂ  ಅರುಣ್-ಅನಿಲ್  ಅನ್ನುವವರು ಅರೇಂಜರ್ಸ್ ಆಗಿಯೂ ಕಾಣಿಸಿಕೊಳ್ಳತೊಡಗಿದರು.

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರಸಂಗೀತ ಕ್ಷೇತ್ರದಲ್ಲೂ ಇಂತಹ ಸರಸ ವಿರಸದ ಘಟನೆಗಳು ಅನೇಕ ಇರಬಹುದು.  ಅವುಗಳ ಬಗ್ಗೆ ಅಧಿಕೃತ ಮಾಹಿತಿ ಇಲ್ಲದ್ದರಿಂದ ಇಲ್ಲಿ ಉಲ್ಲೇಖಿಸಿಲ್ಲ.
* * * * * * * * *

ಇದು ಜೂನ್ 2021ರ  ಉತ್ಥಾನ ಮಾಸಪತ್ರಿಕೆಯಲ್ಲಿ ಚಂದಮಾಮ ಪುಟಗಳ ಮಾದರಿಯಲ್ಲಿ ಪ್ರತೀ ಪುಟಗಳಲ್ಲಿ ಚಿತ್ರಗಳ ಅಳವಡಿಕೆಯೊಂದಿಗೆ ಹತ್ತು ಪುಟಗಳ ಲೇಖನವಾಗಿ ಪ್ರಕಟವಾಯಿತು.

 




 

Saturday, 18 August 2018

ಮೋಡಿ ಮಾಡಿದ ಬೇಡಿ ಬಂದವಳ ಹಾಡುಗಳು


1968 ಎಪ್ರಿಲ್ ತಿಂಗಳ ಒಂದು  ಸುಧಾ  ಸಂಚಿಕೆಯಲ್ಲಿದ್ದ ಈ ಸುದ್ದಿ ತುಣುಕನ್ನು ಆಗ ಓದಿದವರಿಗೆ ಬೇಡಿ ಬಂದವಳು ಚಿತ್ರಕ್ಕಾಗಿ ಧ್ವನಿಮುದ್ರಿಸಲ್ಪಟ್ಟಿರುವ ಈ ಏಳು ಸ್ವರದ ಹಾಡು ಹೇಗಿರಬಹುದೆಂಬ ಕಲ್ಪನೆಯೂ ಇದ್ದಿರಲಾರದು.  ಮುಂದೊಂದು ದಿನ ಇದು ಮಾತ್ರವಲ್ಲ,  ಇಲ್ಲಿ ಉಲ್ಲೇಖಿಸಲ್ಪಟ್ಟಿರದ ಆ ಚಿತ್ರದ ಇನ್ನೊಂದು ಹಾಡು ಕೂಡ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆಯಲಿವೆ ಎಂದು ಕೂಡ ಯಾರೂ ಗ್ರಹಿಸಿರಲಾರರು. ಆ ಇನ್ನೊಂದು ಹಾಡು ನೀರಿನಲ್ಲಿ ಅಲೆಯ ಉಂಗುರ ಎಂದು ನೀವು ಸರಿಯಾಗಿ ಊಹಿಸಿದಿರಿ. ಎವರ್ ಗ್ರೀನ್ ಹಾಡುಗಳ ಸಾಲಿಗೆ ಸೇರಿದ  ಏಳು ಸ್ವರದ ವಿಜ್ಞಾನಗಾನ ಮತ್ತು ಉಂಗುರದ ಪ್ರೇಮಾಯಣದ ಜೊತೆಗೆ ಆ ಚಿತ್ರದಲ್ಲಿ ಇನ್ನೂ ನಾಲ್ಕು ಹಾಡುಗಳಿದ್ದು ಇಲಿಗಳು ಮತ್ತು ಬೆಕ್ಕಿನ ಕಥನಗಾನವಾದ ಒಂದಾನೊಂದು ಊರು ಸ್ವಲ್ಪ ಮಟ್ಟಿಗೆ ಮೆಚ್ಚುಗೆ ಗಳಿಸಿದರೂ ಕನ್ನಡದಾ ತಾಯೆ, ಯೌವನ ಮೂಡಿದೆ ಮತ್ತು ಟೈಟಲ್ ಹಾಡು ಬೇಡಿ ಬಂದವಳು ಜನಪ್ರಿಯತೆಯ  ಓಟದಲ್ಲಿ ಹಿಂದೆ ಉಳಿದವು.  ಚಿತ್ರಮಂದಿರದಲ್ಲಿ ಈ ಹಾಡುಗಳನ್ನು ನೋಡಿ ಆಲಿಸಲು ಮುಂದಿನ ಒಂದೇ ತಿಂಗಳಲ್ಲಿ ಅಂದರೆ ಮೇ 1968ರಲ್ಲಿ ಸಾಧ್ಯವಾಗಿತ್ತಾದರೂ ಅಂದಿನ ದಿನಗಳಲ್ಲಿ ಕನ್ನಡ ಹಾಡುಗಳ ಮಟ್ಟಿಗೆ ಸಾಮಾನ್ಯವಾಗಿದ್ದಂತೆ ರೇಡಿಯೋದಲ್ಲಿ ಕೇಳಲು ಕೆಲವು ತಿಂಗಳುಗಳು ಬೇಕಾದವು.  ಅದೃಷ್ಟವಶಾತ್ ವಾರ್ಷಿಕ ಖರೀದಿಗಾಗಿ  ಅಣ್ಣನೊಡನೆ ಬಂದಿದ್ದ ನನಗೆ ಮಂಗಳೂರಿನ ರಾಮಕಾಂತಿ ಟಾಕೀಸಲ್ಲಿ  ಈ ಚಿತ್ರ ವೀಕ್ಷಿಸುವ ಅವಕಾಶ ಸಿಕ್ಕಿತ್ತು.

ಮೇಲಿನ ಸುದ್ದಿ ತುಣುಕಲ್ಲಿ ಕಾಣುವಂತೆ ಈ ಚಿತ್ರಕ್ಕೆ ಸಂಭಾಷಣೆ ಮತ್ತು ಹಾಡುಗಳನ್ನು ಬರೆದವರು ಆರ್.ಎನ್. ಜಯಗೋಪಾಲ್ ಹಾಗೂ ಸಂಗೀತ ನಿರ್ದೇಶನ ಮಾಡಿದವರು ಆರ್. ಸುದರ್ಶನಂ.  ಈ ಸುದರ್ಶನಂ ಅವರನ್ನು ಅನೇಕರು ಜಯಗೋಪಾಲ್ ಅವರ ಸೋದರ ಆರ್.ಎನ್. ಸುದರ್ಶನ್ ಎಂದು ತಪ್ಪಾಗಿ ತಿಳಿಯುವುದಿದೆ. ಆರ್ ಮತ್ತು ಸುದರ್ಶನ್ ಇಬ್ಬರಲ್ಲೂ common ಆದ್ದರಿಂದ ಈ ಗೊಂದಲ. ಕೆಲವು ಹಾಡುಗಳನ್ನು ಹಾಡಿರುವರಾದರೂ ಆರ್.ಎನ್. ಸುದರ್ಶನ್ ಎಂದೂ ಸಂಗೀತ ನಿರ್ದೇಶನ ಮಾಡಿಲ್ಲ.  ಸಂಗೀತ ನಿರ್ದೇಶಕ ಆರ್. ಸುದರ್ಶನಂ ಅವರನ್ನು ಹಿಂದಿಯ ಸಚಿನ್ ದೇವ್ ಬರ್ಮನ್ ಅವರಂತೆ ದಕ್ಷಿಣ ಭಾರತ ಚಿತ್ರಸಂಗೀತದ ಭೀಷ್ಮ ಪಿತಾಮಹ ಎಂದರೆ ತಪ್ಪಾಗಲಾರದು.  ಇವರು 1940ರ ದಶಕದಿಂದ 70ರ ದಶಕದ ಮಧ್ಯ ಭಾಗದ ವರೆಗೆ ಈ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದವರು.  ಬರ್ಮನ್ ಅವರಂತೆಯೇ ಇವರು ಕೂಡ ವರ್ಷಕ್ಕೆ ಒಂದೋ ಎರಡೋ ಚಿತ್ರಗಳಿಗೆ ಮಾತ್ರ  ಸಂಗೀತ ನೀಡುತ್ತಿದ್ದುದು.  ಆದರೆ ತನ್ನ ಬಹುತೇಕ ಚಿತ್ರಗಳಲ್ಲಿ ಒಂದಾದರೂ ಎವರ್ ಗ್ರೀನ್ ಹಾಡು ಇರುತ್ತಿದ್ದುದು ಇವರ ಹೆಗ್ಗಳಿಕೆ.  ಎ.ವಿ.ಎಂ ಸ್ಟುಡಿಯೋದ ಆಸ್ಥಾನ  ಸಂಗೀತ ನಿರ್ದೇಶಕರಾಗಿದ್ದ ಇವರು ಆ ಸಂಸ್ಥೆಯ ಬಹುಪಾಲು ಚಿತ್ರಗಳಿಗೆ ಸಂಗೀತ ಒದಗಿಸಿದರು. ಆರಂಭದ ಕೆಲ ವರ್ಷ  ಕಿರಿಯ ಸೋದರ ಆರ್. ಗೋವರ್ಧನ್ ಕೂಡ ಇವರ ಜೊತೆಗಿದ್ದರು.  ಕನ್ನಡ ಚಿತ್ರರಂಗದ ಶೈಶವಾವಸ್ಥೆಯಲ್ಲಿ ಎಲ್ಲರೂ ಹಿಂದಿಯ ಪ್ರಸಿದ್ಧ ಟ್ಯೂನುಗಳಿಗೇ ಮೊರೆ ಹೋಗುತ್ತಿದ್ದಾಗ ಮೊತ್ತ ಮೊದಲು ಸ್ವಂತ ಧಾಟಿಗಳ ರುಚಿ ತೋರಿಸಿದವರು ಇವರೇ.  ಪಿ.ಬಿ. ಶ್ರೀನಿವಾಸ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಜಾತಕ ಫಲ ಚಿತ್ರದ ಈ ಮೂಢತನವಿದೇಕೆ ಹಿಂದಿ ಧಾಟಿ ಹೊಂದಿದ್ದರೂ ಚಿಂತಿಸದಿರು ರಮಣಿ ಅವರ ಸ್ವಂತ ಟ್ಯೂನ್ ಆಗಿತ್ತು.  1950ರ ದಶಕದಲ್ಲಿ ಕನ್ನಡಕ್ಕೆ ರಾಜಕುಮಾರ್ ಅವರನ್ನು ಕೊಟ್ಟ ಬೇಡರ ಕಣ್ಣಪ್ಪ, ಕಲ್ಯಾಣ್ ಕುಮಾರ್ ಅಭಿನಯದ ಸದಾರಮೆ, ಆರ್. ನಾಗೇಂದ್ರ ರಾವ್ ಮುಖ್ಯ ಭೂಮಿಕೆಯಲ್ಲಿದ್ದ ಆದರ್ಶ ಸತಿ,   ರಾಜಕುಮಾರ್ ರಾವಣನಾಗಿ ಅಭಿನಯಿಸಿದ್ದ ಭೂ ಕೈಲಾಸ ಮುಂತಾದ ಇವರ ಸಂಗೀತವಿದ್ದ ಪ್ರತೀ ಚಿತ್ರದಲ್ಲಿ  chart buster ಹಾಡುಗಳು ಇದ್ದದ್ದು ಗೊತ್ತೇ ಇದೆ. ಈ ಪರಂಪರೆ 60ರ ದಶಕದಲ್ಲೂ ಮುಂದುವರಿದು ಮಿಸ್. ಲೀಲಾವತಿ, ಪ್ರೇಮಮಯಿ, ಅರುಣೋದಯ, ನಾವೀಗ ಚರ್ಚಿಸುತ್ತಿರುವ ಬೇಡಿ ಬಂದವಳು, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ,  ಮೂರುವರೆ ವಜ್ರಗಳು, ಭಾರತದ ರತ್ನ ಮುಂತಾದ ಚಿತ್ರಗಳಲ್ಲೂ ಹಿಟ್ ಹಾಡುಗಳಿದ್ದವು.


ಸಿ.ಎಸ್. ಜಯರಾಮನ್, ಸೀರ್ಕಾಳಿ ಗೋವಿಂದರಾಜನ್,  ಟಿ. ಎಂ. ಸೌಂದರರಾಜನ್  ಮುಂತಾದ ಕನ್ನಡಕ್ಕೆ ಅಪರೂಪದವರಾದ ಗಾಯಕರ ಧ್ವನಿಯಲ್ಲಿ ಹಿಟ್ ಗೀತೆಗಳನ್ನು ನೀಡಿದ್ದು ಇವರ ವಿಶೇಷತೆ.  ಪ್ರೇಮಮಯಿ ಚಿತ್ರದಲ್ಲಿ ಜೇಸುದಾಸ್ ಅವರ ಧ್ವನಿಯನ್ನು ರಾಜ್ ಅವರಿಗೆ ಬಳಸಿದವರು ಇವರು.  ಆ ಚಿತ್ರದ ಟೂ ಟೂ ಟೂ ಬೇಡಪ್ಪ ಮತ್ತು ಹೆಣ್ಣೆ ನಿನ್ನ ಕಣ್ಣ ನೋಟ ಹಾಡುಗಳು ಹಿಟ್ ಆದರೂ ನಂತರ ರಾಜ್ ಅವರ ಧ್ವನಿಯಾಗಿ  ಪಿ.ಬಿ.ಎಸ್ ಅವರೇ ಮುಂದುವರಿದರು.  ಘಂಟಸಾಲ ಕೂಡ ರಾಜ್ ಅವರಿಗೆ ಅನೇಕ ಹಿಟ್ ಹಾಡುಗಳನ್ನು ಹಾಡಿದರೂ ಪಿ.ಬಿ.ಎಸ್ ಸ್ಥಾನಕ್ಕೆ ಚ್ಯುತಿ ಬಂದಿರಲಿಲ್ಲ ಅಲ್ಲವೇ.  ದೋಣಿ ಸಾಗಲಿ ಹಾಡಿಗೆ ಎಸ್. ಜಾನಕಿ ಜೊತೆಗೆ ರಾಮಚಂದ್ರ ರಾವ್ ಎಂಬ ಅಜ್ಞಾತ ಗಾಯಕನನ್ನು ಬಳಸಿಯೂ ಅದನ್ನು ಜನಪ್ರಿಯತೆಯ ತುತ್ತತುದಿಗೇರಿಸಿದ್ದು ಇವರ ಸಾಧನೆ.

ಹೆಚ್ಚಿನ ಸಂಖ್ಯೆಯಲ್ಲಿ  ತಮಿಳು ಚಿತ್ರಗಳಿಗೆ ಹಾಗೂ ಒಂದೆರಡು  ಹಿಂದಿ ಚಿತ್ರಗಳಿಗೂ ಇವರು ಸಂಗೀತ ನಿರ್ದೇಶನ ಮಾಡಿದ್ದಾರೆ.  ಎ.ವಿ.ಎಂ. ನ ಕೆಲವು ಚಿತ್ರಗಳು ಹಿಂದಿಯಲ್ಲಿ ಮರು ನಿರ್ಮಾಣಗೊಂಡಾಗ ಸಂಗೀತ ನಿರ್ದೇಶಕರು ಬದಲಾದರೂ ಕೆಲವು ಹಾಡುಗಳಿಗೆ ಇವರ ಮೂಲ  ಧಾಟಿಯನ್ನು ಉಳಿಸಿಕೊಂಡದ್ದಿದೆ. ಮೈ ಚುಪ್ ರಹೂಂಗಿ ಚಿತ್ರದ ತುಮ್ಹೀ ಹೊ ಮಾತಾ, ಮೈ ಭೀ ಲಡಕೀ ಹೂಂ ಚಿತ್ರದಲ್ಲಿ ಪಿ.ಬಿ.ಎಸ್ ಮತ್ತು ಲತಾ ಮಂಗೇಶ್ಕರ್ ಹಾಡಿದ ಚಂದಾ ಸೆ ಹೋಗಾ ವೊ ಪ್ಯಾರಾ ಮತ್ತು ಅದೇ ಚಿತ್ರದ ಕೃಷ್ಣಾ ಓ ಕಾಲೇ ಕೃಷ್ಣಾ ಇದಕ್ಕೆ ಒಂದೆರಡು ಉದಾಹರಣೆಗಳು.

ಇಂಥ ಪ್ರತಿಭಾವಂತ ತನ್ನ 54ರ ವಯಸ್ಸಲ್ಲಿ 24ರ ಹುಮ್ಮಸ್ಸನ್ನುಳಿಸಿಕೊಂಡು ಸೃಷ್ಟಿಸಿದ ಬೇಡಿ ಬಂದವಳು ಚಿತ್ರದ ಎರಡು ಹಾಡುಗಳತ್ತ ಈಗ ಗಮನ ಹರಿಸೋಣ.

ಏಳು ಸ್ವರವು ಸೇರಿ ಸಂಗೀತವಾಯಿತು.



ಓರ್ವ ನುರಿತ ಅಧ್ಯಾಪಕರೂ  ಈ ಹಾಡಿನಷ್ಟು ಪರಿಣಾಮಕಾರಿಯಾಗಿ ವಿಜ್ಞಾನ ಪಾಠ ಮಾಡಲಾರರೇನೋ! ಅದೂ ಒಮ್ಮೆ ಕೇಳಿದರೆ ಸುಲಭವಾಗಿ ಕಂಠಪಾಠವಾಗಬಹುದಾದ ಸರಳ ಶಬ್ದಗಳಲ್ಲಿ. ಶಂಕರಾಭರಣದ ಆರೋಹಣ ಅವರೋಹಣದ ಸ್ವರಗಳೊಂದಿಗೆ ಆರಂಭವಾಗುವ  ಹಾಡಲ್ಲಿ ಆ ರಾಗದ ಜೊತೆಗೆ ಅಲ್ಲಲ್ಲಿ ಅನ್ಯ ಸ್ವರಗಳಾಗಿ ರಿ1 ಮತ್ತು ನಿ2 ಕೂಡ ಬಳಕೆಯಾಗಿವೆ. ತಿಶ್ರ ನಡೆಯ 6/8 ರಿದಂ ಹೊಂದಿರುವ ಇದು ಮಕ್ಕಳೂ ಸುಲಭವಾಗಿ ಹಾಡಲಾಗುವಂತೆ  ಹೆಚ್ಚು ಮುರ್ಕಿ, ಗಮಕಗಳಿಲ್ಲದ ರೀತಿಯಲ್ಲಿ ಸಂಯೋಜಿಸಲ್ಪಟ್ಟಿದೆ.  ಹಾಡಿನ ಮೊದಲ ಎರಡು ಸಾಲುಗಳಿಗೆ ಗಿಟಾರ್ ಮತ್ತು ಗೆಜ್ಜೆಯ ಹಿಮ್ಮೇಳ ಮಾತ್ರವಿದ್ದು ಆ ಮೇಲೆ ಢೋಲಕ್, ತಬ್ಲಾ  ಸೇರಿಕೊಳ್ಳುತ್ತವೆ.  ಸರಳವಾದ interludeಗೆ ಹಿನ್ನೆಲೆಯಾಗಿ ಗಿಟಾರ್ ಮಾತ್ರ ಇದೆ.  Interludeನ ಉತ್ತರಾರ್ಧ ಕುಲವಧು ಚಿತ್ರದ ತಾಯೆ ಬಾರ ಮೊಗವ ತೋರ ಹಾಡನ್ನು ನೆನಪಿಸುವಂತಿದೆ.  ಎರಡನೆಯ ಚರಣದ ಮುನ್ನವೂ ಅದೇ interlude ಬಳಕೆಯಾಗಿದೆ.




ಏಳು ಸ್ವರ ಮತ್ತು ಏಳು ಬಣ್ಣಗಳನ್ನು ಬಣ್ಣಿಸುವ ಇಂತಹುದೇ ಸಾಲುಗಳನ್ನು ಜಯಗೋಪಾಲ್ ಈ ಮೊದಲೇ ಇನ್ನೊಂದು ಹಾಡಿನಲ್ಲಿ  ಬಳಸಿದ್ದರು. ಒಂದು ಹಾಡಿನ ಟ್ಯೂನ್ ಇನ್ನೊಂದು ಹಾಡಿನಲ್ಲಿ ಇಣುಕುವುದುಂಟು.  ಆದರೆ ಒಂದರ ಸಾಹಿತ್ಯದ ಸಾಲು ಇನ್ನೊಂದರಲ್ಲಿ ಕಾಣಿಸುವುದು ಅಪರೂಪ.  ಪಿ.ಬಿ.ಎಸ್ ಧ್ವನಿಯಲ್ಲಿರುವ ಆ ತುಣುಕನ್ನು ಆಲಿಸಿ ಯಾವ ಹಾಡೆಂದು ಗುರುತಿಸಿ.




ನೀರಿನಲ್ಲಿ ಅಲೆಯ ಉಂಗುರ




ಈ ಹಾಡನ್ನಂತೂ ನೀವೆಲ್ಲ ನೂರಾರು ಬಾರಿ ಕೇಳಿದ್ದೀರಿ, ಈಗಲೂ ಕೇಳುತ್ತಲೇ ಇದ್ದೀರಿ.  ಈ ಹಾಡಿನ ರಚನೆಯ ಕುರಿತು ಅನೇಕ ಕತೆಗಳನ್ನೂ ಓದಿದ್ದೀರಿ.  ಆ ಕತೆಗಳಲ್ಲಿ ಜಯಗೋಪಾಲ್ ಅವರು ಹಾಡು ಬರೆಯುವಾಗ ಪದಗಳು ಹೊಳೆಯದಿದ್ದರೆ ಕೈ ಬೆರಳ ಉಂಗುರ ತಿರುಗಿಸುತ್ತಿದ್ದರು ಮತ್ತು ಈ ಹಾಡು ಬರೆಯುವ ದಿನ ಅವರು ಉಂಗುರ ಮರೆತು ಬಂದಿದ್ದರು ಎಂಬ ಅಂಶ ಸತ್ಯವೆಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.  ಅಂದು ತಿರುಗಿಸಲು ಕೈಯಲ್ಲಿ ಉಂಗುರವಿಲ್ಲದ್ದರಿಂದ 26 ಉಂಗುರಗಳನ್ನು ಬಳಸಿ ಅವರು ಈ ಹಾಡು ರಚಿಸಿದರು!  ಬೇಕಿದ್ದರೆ ಹಾಡು ಕೇಳುತ್ತಾ ಎಣಿಸಿ ನೋಡಿ.  ತನ್ನಲ್ಲಿಲ್ಲದ ಉಂಗುರ ಆ ಪ್ರೇಮಿಗಳಿಗೇಕೆ ಎಂದೆಣಿಸಿ ಬೆರಳಿನಲ್ಲಿ ಚಿನ್ನದುಂಗುರ ಎಂದು ಬರೆಯಬಹುದಾಗಿದ್ದ  ಸಾಲನ್ನು ಅವರು ಬರೆಯಲಿಲ್ಲ!  ಪ್ರಾಸಕ್ಕೆ ಮತ್ತು ಲಯಕ್ಕೆ ಹೊಂದಿಸಲು ಸಂಚರ ಮತ್ತು ಗುಂಗುರ ಎಂಬ ಎರಡು ಪದಗಳನ್ನು ಟಂಕಿಸುವ ಸ್ವಾತಂತ್ರ್ಯವನ್ನೂ ಅವರು ವಹಿಸಿದ್ದಾರೆ.


ಆರ್. ಸುದರ್ಶನಂ  ಅವರಂತೂ ತನ್ನ ಜೀವಮಾನದ ಶ್ರೇಷ್ಠ ನಿರ್ವಹಣೆ ಎನ್ನುವಂಥ ರೀತಿಯಲ್ಲಿ ಈ ಹಾಡಿನ ರಾಗ ಸಂಯೋಜನೆ ಮಾಡಿದ್ದಾರೆ.  ನಠಭೈರವಿ ರಾಗದ ಸ ರಿ2 ಗ2 ಮ1 ಪ  ದ1  ನಿ2  ಸ್ವರಗಳನ್ನು ಮುಖ್ಯವಾಗಿಟ್ಟುಕೊಂಡು ಹೆಚ್ಚುವರಿಯಾಗಿ ಮ2 ಮತ್ತು   ದ2 ಸ್ವರಗಳನ್ನೂ ಬಳಸಲಾಗಿದೆ.  ಈ ಹಾಡು ಕೂಡ ತಿಶ್ರ ಜಾತಿಯ 6/8 ನಡೆಯಲ್ಲಿದ್ದು ಜನಪ್ರಿಯ swing ರೀತಿಯ ರಿದಂ ಹೊಂದಿದೆ. ಈ swing ನಡೆಗೆ ಹೊಂದುವಂತೆ ಜಯಗೋಪಾಲ್ ಅವರು  ಗುರು ಲಘು, ಗುರು ಲಘು ಮಾತ್ರಾಕಾಲ ಅಂದರೆ 2 - 1. 2 - 1 ಅಕ್ಷರಕಾಲದ ಪದಗಳನ್ನೇ ಹೆಚ್ಚು ಬಳಸಿದ್ದು ಹಾಡಿಗೆ ಹೆಚ್ಚಿನ ಮೆರುಗು ನೀಡಿದೆ. ಉದಾ : ಭೂ(2) ಮಿ(1)  ಮೇ(2)  ಲೆ(1) ಹೂ(2) ವಿ(1) ನುಂ(2) ಗು(1) ರ. ಈ ಹಾಡಲ್ಲಿ ಕೆಲವೆಡೆ ಬೇಕರಾರ್ ಕರಕೆ ಹಮೆ ಯೂ ನ ಜಾಯಿಯೇ, ಕಿಸೀ ಕಿ ಮುಸ್ಕುರಾಹಟೋಂಪೆ ಹೋ ನಿಸಾರ್ ಅಥವಾ ತುಟಿಯ ಮೇಲೆ ತುಂಟ ಕಿರುನಗೆ ಹಾಡುಗಳ ಛಾಯೆ ಗೋಚರಿಸಿದರೆ ಆಶ್ಚರ್ಯವಿಲ್ಲ. ಏಕೆಂದರೆ ಆ ಹಾಡುಗಳೂ swing  ಮಾದರಿಯಲ್ಲೇ ಇರುವುದು. ಕೊಳವೊಂದರಲ್ಲಿ ಕಲ್ಲೆಸೆದಾಗ ನೀರಿಲ್ಲೇಳುವ ಅಲೆಗಳ ಉಂಗುರದ ಅನುಭವ ನೀಡುವ ಗಿಟಾರ್ ಮತ್ತು ಕೊಳಲುಗಳ preludeನೊಂದಿಗೆ ಹಾಡು ಆರಂಭವಾಗುತ್ತದೆ. ಪಲ್ಲವಿ ಭಾಗಕ್ಕೆ ಬೊಂಗೋ ಮತ್ತು ಚರಣ ಭಾಗಕ್ಕೆ ತಬ್ಲಾ ಹಿನ್ನೆಲೆ ಇದೆ.  ಗಿಟಾರ್ ಮತ್ತು ಅಕಾರ್ಡಿಯನ್ ಬಳಕೆ extra ordinary.  ಮೂರು ಚರಣಗಳಿಗೆ ಬೇರೆ ಬೇರೆ interlude ಇದೆ. ಮೊದಲ interludeನಲ್ಲಿ ಗಿಟಾರ್ ಮತ್ತು ಗೆಜ್ಜೆಯ ಸದ್ದಿನ ಸಂಗಮ ಆ ಚರಣದಲ್ಲಿ ಬರುವ ಅಂದಿಗೆಯ ಉಲ್ಲೇಖಕ್ಕೆ ಮುನ್ನುಡಿ ಬರೆಯುತ್ತದೆ. ಎರಡನೇ ಚರಣದ ಧಾಟಿ ಒಂದು ಮತ್ತು ಮೂರನೆಯದಕ್ಕಿಂತ ಭಿನ್ನವಾಗಿದೆ. ಸಿನಿಮಾದಲ್ಲಿರುವ  ಹಾಡಿನ ಚರಣಗಳ ಮೊದಲ ಎರಡು ಸಾಲುಗಳ ಪುನರಾವರ್ತನೆ  ಗ್ರಾಮಫೋನ್ ಅಥವಾ ರೇಡಿಯೊದಲ್ಲಿ ಕೇಳಿ ಬರುವ ವರ್ಶನ್‍ನಲ್ಲಿಲ್ಲ.   ಪುನರಾವರ್ತನೆಯಾಗುವ ಸಾಲುಗಳನ್ನು ಕೊಂಚ ಭಿನ್ನವಾಗಿ ಹಾಡುವ ರಫಿ ಸ್ಟೈಲನ್ನು ಪಿ.ಬಿ.ಎಸ್ ಮತ್ತು ಪಿ.ಸುಶೀಲಾ ಇಬ್ಬರೂ ಅನುಸರಿಸಿದ್ದಾರೆ.  ಪುನರಾವರ್ತನೆಯಾಗುವ ಸಾಲಿನ ಕೊನೆಯನ್ನು ಮುಂದಿನ ಸಾಲಿನ ಎತ್ತುಗಡೆಗೆ ಸರಿಯಾಗುವಂತೆ ಮಾರ್ಪಡಿಸಿ ಹಾಡಿದ ರೀತಿ ಅನನ್ಯ.  ಸಾಮಾನ್ಯವಾಗಿ ಇದನ್ನು ಹಿನ್ನೆಲೆ ವಾದ್ಯಗಳು ಮಾಡುತ್ತವೆ. ಪಲ್ಲವಿ ಮತ್ತು ಚರಣಗಳ ಕೊನೆಯಲ್ಲಿ ಬರುವ ಸಾ  ನೀ  ದಾ  ಪಾ  ಸ್ವರಸ್ಥಾನಗಳ phrase ಅತ್ಯಾಕರ್ಷಕವಾಗಿದ್ದು ಹಾಡಿನ ಹೈ ಲೈಟ್ ಅನ್ನಬಹುದು.  ಈಗ ಸಿನಿಮಾದಲ್ಲಿರುವ ಹಾಡಿನ ವರ್ಷನ್ ಇಲ್ಲಿ ಕೇಳಿ.



ಕಲ್ಯಾಣ್ ಕುಮಾರ್ ಚಂದ್ರಕಲಾ ಅಭಿನಯದ ಸದಭಿರುಚಿಯ ಸಿನಿಮಾ ಬೇಡಿ ಬಂದವಳು ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು  ಈ ಚಿತ್ರದ ಮೇಲೆ ಕ್ಲಿಕ್ಕಿಸಿ ವೀಕ್ಷಿಸಬಹುದು.
https://youtu.be/Sqy4yja-O04


***********************************

ಇನ್ನು ಮುಂದಿನ ಭಾಗ  ಸ್ವರಲಿಪಿಯಲ್ಲಿ ಆಸಕ್ತಿಯಿದ್ದು ಈ ಹಾಡುಗಳನ್ನು ಕಲಿಯಬಯಸುವವರಿಗೆ ಮಾತ್ರ.

ಏಳು ಸ್ವರವು ಸೇರಿ
ಮುಖ್ಯ ರಾಗ ಶಂಕರಾಭರಣ - ಸ ರಿ2 ಗ3 ಮ1 ಪ ದ2 ನಿ3
ಅನ್ಯ ಸ್ವರಗಳು  ರಿ1 ಮತ್ತು ನಿ2
ಪ್ರತಿ ಸಾಲು ತಿಶ್ರ ನಡೆಯ 24 ಅಕ್ಷರಗಳನ್ನು ಹೊಂದಿದೆ.


ನೀರಿನಲ್ಲಿ ಅಲೆಯ ಉಂಗುರ
ಮುಖ್ಯ ರಾಗ : ನಠಭೈರವಿ ಸ ರಿ2 ಗ2 ಮ1 ಪ ದ1 ನಿ2
ಅನ್ಯ ಸ್ವರಗಳು  ಮ2 ಮತ್ತು  ದ2
ಇಲ್ಲೂ ಪ್ರತಿ ಸಾಲು ತಿಶ್ರ ನಡೆಯ 24 ಅಕ್ಷರಗಳನ್ನು ಹೊಂದಿದೆ.

Wednesday, 11 July 2018

ಚೆನ್ನ ಚೆನ್ನೆಯರ ನೆಚ್ಚಿನದಾಗಿದ್ದ ಚೆನ್ನೆಮಣೆ



ಜ್ಯೇಷ್ಠ ಮಾಸದ ಹುಣ್ಣಿಮೆಯಂದು ಆಚರಿಸಲ್ಪಡುವ ವಟಸಾವಿತ್ರಿ ಹಬ್ಬ ಬಂತೆಂದರೆ ನಮಗೆಲ್ಲ ಆಗ ಬಲು ಹಿಗ್ಗು.  ಮನೆಯ ಮಹಿಳೆಯರೆಲ್ಲ ಆಲದ ಮರದ ಗೆಲ್ಲೊಂದನ್ನು ನೆಟ್ಟ ತುಳಸಿ ಕಟ್ಟೆಯ ಸುತ್ತಲೂ   ಕೂತು ಪೂಜೆ ಮಾಡುವ ಅಂದ ಒಂದೆಡೆಯಾದರೆ  ಆ ದಿನದ ವಿಶೇಷವಾದ ಹಲಸಿನ ಹಣ್ಣಿನ ಉಂಬರದ ನಿರೀಕ್ಷೆ ಇನ್ನೊಂದೆಡೆ.   ಇವೆಲ್ಲಕ್ಕಿಂತ ಮಿಗಿಲಾಗಿ ಈ ಹಿಗ್ಗನ್ನು ಮತ್ತಷ್ಟು ಹಿಗ್ಗಿಸುತ್ತಿದ್ದುದು ಅಂದಿನಿಂದ ಎರಡು ತಿಂಗಳು ಅಂದರೆ ಶ್ರಾವಣ ಮಾಸದ ನೂಲ ಹುಣ್ಣಿಮೆ ವರೆಗೆ ಚೆನ್ನೆಮಣೆ ಆಡಲು ಸಿಗುತ್ತಿದ್ದ ರಹದಾರಿ.  ನನಗೆ ತಿಳಿದ ಮಟ್ಟಿಗೆ ಈ ರೀತಿ ಸಮಯ ಸೀಮೆಯ ಕಟ್ಟುಪಾಡು ಇದ್ದ ಆಟ ಚೆನ್ನೆಮಣೆ ಮಾತ್ರ.



ಚೆನ್ನೆಮಣೆಯು  ಮರದಿಂದ ಮಾಡಲ್ಪಡುತ್ತಿದ್ದು  ಎರಡೂ ಬದಿಗಳಲ್ಲಿ ಏಳು ಏಳು ಗುಳಿಗಳನ್ನು ಹೊಂದಿರುತ್ತದೆ.  ಎಡ ಮತ್ತು ಬಲ ಬದಿಗಳಲ್ಲಿ ಆಟಕ್ಕೆ ಬಳಸುವ ಕೆಂಪಗಿನ ಮಂಜುಟ್ಟಿ ಯಾ ಕೆಂಪು  ಮೈಗೆ ಕಪ್ಪು ಟೊಪ್ಪಿ ಇರುವ ಗುಲಗಂಜಿಯಂಥ ಬೀಜಗಳನ್ನು ಸಂಗ್ರಹಿಸಿಡಲು ಅನುಕೂಲವಾಗುವ ದೊಡ್ಡ ಖಾನೆಗಳಿರುತ್ತವೆ.  ಚೆನ್ನೆಮಣೆಯು ಸಾಮಾನ್ಯವಾಗಿ ಇಬ್ಬರು ಎದುರು ಬದುರು ಕುಳಿತು ಆಡುವಂಥದಾಗಿದ್ದು ತಮ್ಮ ತಮ್ಮ ಎಡಗಡೆಯ ಖಾನೆಯನ್ನು ಈ ಉದ್ದೇಶಕ್ಕೆ ಬಳಸಬೇಕು. ಚೆನ್ನೆಮಣೆಯ ಆಟಗಳಲ್ಲಿ ಅನೇಕ ವಿಧಗಳಿದ್ದು ಹೆಚ್ಚಿನವು ಚದುರಂಗದಂತೆ ಬುದ್ಧಿಮತ್ತೆಯನ್ನು ಬಳಸಿ ಆಡುವಂಥವು.  ಕವಡೆಗಳನ್ನು ಬಳಸಿ  ಅದೃಷ್ಟದಾಟ ಆಡುವ ಪದ್ಧತಿಯೂ ಇದೆ.  ನಾವು ಆಡುತ್ತಿದ್ದ  ಬುದ್ಧಿಮತ್ತೆಯ ಸರಳ ಆಟ ಮತ್ತು ಕವಡೆ ಬಳಸುವ ಅದೃಷ್ಟದಾಟದ ವಿವರಗಳು ಇಲ್ಲಿವೆ.

ಬುದ್ಧಿಮತ್ತೆಯ ಸರಳ ಆಟ

ಚೆನ್ನೆಮಣೆಯ ಎಡ ಮತ್ತು ಬಲ ಖಾನೆಗಳಲ್ಲಿ ತಲಾ 28 ಮಂಜುಟ್ಟಿಗಳನ್ನು ಹಾಕಿಡಲಾಗಿರುತ್ತದೆ. ಎದುರು ಬದುರು ಕುಳಿತ ಇಬ್ಬರು ಆಟಗಾರರೂ ತಮ್ಮ ಎಡಬದಿಯ ಸಂಗ್ರಹಾಗಾರದಿಂದ ಒಂದೊಂದು ಮನೆಯಲ್ಲಿ 4ರಂತೆ  ತಮ್ಮ ಬದಿಯ ಏಳೂ  ಮನೆಗಳಲ್ಲಿ ಈ ಮಂಜುಟ್ಟಿಗಳನ್ನು ಹಾಕಬೇಕು.  ಯಾರು ಆಟ ಪ್ರಾರಂಭಿಸುವುದೆಂದು ಪರಸ್ಪರ ಸಹಮತಿಯಿಂದ ನಿರ್ಧರಿಸಿಕೊಳ್ಳಬೇಕು. ಆಟ ಪ್ರಾರಂಭಿಸುವವರು ತನ್ನ ಏಳು ಮನೆಗಳ ಪೈಕಿ ಇಷ್ಟ ಬಂದ ಮನೆಯಿಂದ ಎಲ್ಲ ಬೀಜಗಳನ್ನು ಮುರಿದುಕೊಂಡು ಎಡದಿಂದ ಬಲಕ್ಕೆ ಒಂದೊಂದು ಬೀಜದಂತೆ ಹಾಕುತ್ತಾ ಹೋಗಬೇಕು. ತನ್ನ ಬದಿಯ  ಮನೆಗಳನ್ನು ದಾಟಿದ ಮೇಲೆ ಎದುರು ಬದಿಯ ಮನೆಗಳನ್ನು ಬಲದಿಂದ ಎಡಕ್ಕೆ ಕ್ರಮಿಸಬೇಕು. ಅಂದರೆ ಇದು ಅಪ್ರದಕ್ಷಿಣಾಕಾರದ ಪ್ರಕ್ರಿಯೆ.   ಕೈಯಲ್ಲಿದ್ದ ಬೀಜಗಳು ಮುಗಿದೊಡನೆ ಮುಂದಿನ ಮನೆಯಲ್ಲಿರುವ ಬೀಜಗಳನ್ನು ಮುರಿದುಕೊಂಡು ಮುಂದುವರಿಯಬೇಕು.  ಈ ರೀತಿ ಕೈಯ ಬೀಜಗಳು ಮುಗಿದಾಗ ಮುಂದಿನ ಮನೆ ಖಾಲಿಯಾಗಿದ್ದರೆ ಅದರ ಮುಂದಿನ ಮನೆಯಲ್ಲಿರುವ ಬೀಜಗಳೆಲ್ಲ ಆಡುತ್ತಿರುವವರಿಗೆ ಸೇರುತ್ತವೆ.   ಅವನ್ನು ಎತ್ತಿಕೊಂಡು ತನ್ನ ಎಡಬದಿಯ ಖಾನೆಯಲ್ಲಿ ಹಾಕಿಕೊಳ್ಳಬೇಕು. ಒಂದು ವೇಳೆ ಮುಂದಿನ ಎರಡು ಅಥವಾ ಹೆಚ್ಚು ಮನೆಗಳು ಖಾಲಿ ಇದ್ದರೆ ಆಟಗಾರನಿಗೆ ಏನೂ ಸಿಗುವುದಿಲ್ಲ. ಇದನ್ನು ಢುಕ್ಕುವುದು ಎನ್ನುತ್ತಾರೆ. ಆಟಗಾರನು ಈ ರೀತಿ ಢುಕ್ಕಿದಾಗ ಎದುರಾಳಿಯು ‘ಢುಕ್ ಮಂಡೂಕ್ ಢುಕ್’ ಎಂದು ಹೇಳಿ ಸಂಭ್ರಮಿಸುವುದಿದೆ.   ಈಗ ಎದುರಾಳಿಯ  ಸರದಿ.  ಅವರು ಕೂಡ ತನ್ನ ಬದಿಯ ಇಷ್ಟ ಬಂದ ಮನೆಯಿಂದ ಬೀಜಗಳನ್ನು ಮುರಿದುಕೊಂಡು ಇದೇ ರೀತಿ ಆಟ ಮುಂದುವರಿಸಬೇಕು.  ಹೀಗೆ ಆಟ ಸಾಗುತ್ತಾ ಇರುವಾಗ ಯಾವುದಾದರೂ ಮನೆಯಲ್ಲಿ ಒಂದು ಬೀಜ ಇದ್ದರೆ ಅದಕ್ಕೆ ಕಲ್ಲು ಎಂದೂ, ಎರಡು ಬೀಜ ಇದ್ದರೆ ದುಕ್ಕುಲ ಎಂದೂ,  ಮೂರು ಬೀಜಗಳು ಇದ್ದರೆ ತಿಕ್ಕುಲ ಎಂದೂ, ನಾಲ್ಕು ಬೀಜಗಳು ಜಮೆಯಾದರೆ  ತಿಸ್ತಿ ಎಂದೂ, ನಾಲ್ಕಕ್ಕಿಂತ ಹೆಚ್ಚಿದ್ದರೆ ಘರೊ ಎಂದೂ ಹೆಸರು. ಈ ಘರೊ ಚೆನ್ನೆಮಣೆಯ ಗುಳಿಯನ್ನು ಮೀರಿ ಮತ್ತೂ ಬೆಳೆದರೆ ಅದನ್ನು ಫೆರ್ಗ ಎನ್ನುವುದೂ ಇದೆ.  ಇಂತಹ ಫೆರ್ಗವೇನಾದರೂ  ತಿನ್ನಲು ಸಿಕ್ಕಿದರೆ ಆಗುವ ಆನಂದ ಅನನ್ಯ.   ತಿಸ್ತಿ ತಯಾರಾದ ತಕ್ಷಣ ಆಯಾ ಮನೆಯ ಒಡೆಯರು ಅದನ್ನು ಎತ್ತಿಕೊಂಡು ತಮ್ಮ ಸಂಗ್ರಹಾಗಾರಕ್ಕೆ ಸೇರಿಸಿಕೊಳ್ಳಬೇಕು.  ಹೀಗೆ ಮಾಡಲು ಮರೆತು ಆಟ ಮುಂದುವರೆದಾಗ ಅದರಲ್ಲಿ ಇನ್ನೊಂದು ಬೀಜವೇನಾದರೂ ಬಿದ್ದರೆ ಆ ತಿಸ್ತಿ ಕೊಳೆತು ಹೋಗುತ್ತದೆ ಹಾಗೂ ಆ ಮನೆಯೊಡೆಯ ಅದರ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತಾನೆ.   ಈ ರೀತಿ ಸಾಗುತ್ತಾ ಸಾಗುತ್ತಾ ಚೆನ್ನೆಮಣೆಯಲ್ಲಿ ಬರೇ ಮೂರು ಅಥವಾ ಅದಕ್ಕಿಂತ ಕಮ್ಮಿ ಬೀಜಗಳು ಉಳಿದರೆ ಅಲ್ಲಿಗೆ  ಒಂದು ಆಟ ಮುಗಿಯಿತು. ಕೊನೆಯಲ್ಲಿ ಮೂರು ಉಳಿದಾಗ ಎರಡು ಮೊದಲು ಆಡಿದವರಿಗೆ ಮತ್ತು ಒಂದು ಇನ್ನೊಬ್ಬರಿಗೆ.  ಎರಡು ಉಳಿದರೆ ಇಬ್ಬರಿಗೂ ಒಂದೊಂದು.  ಒಂದೇ ಉಳಿದರೆ ಅದು ಮೊದಲು ಆಡಿದವರಿಗೆ.

ಈ ಹಂತದಲ್ಲಿ ಸಹಜವಾಗಿಯೇ ಒಬ್ಬರ ಸಂಗ್ರಹದಲ್ಲಿ ಹೆಚ್ಚು ಇನ್ನೊಬ್ಬರ ಸಂಗ್ರಹದಲ್ಲಿ ಕಮ್ಮಿ ಬೀಜಗಳು ಇರುತ್ತವೆ.  ಈಗ ತಮ್ಮ ತಮ್ಮ ಬದಿಯ ಮನೆಗಳಲ್ಲಿ ನಾಲ್ಕರಂತೆ ಬೀಜಗಳನ್ನು ಹಾಕುತ್ತಾ ಹೋಗುವಾಗ ಕಮ್ಮಿ ಸಂಗ್ರಹವಿದ್ದವರ ಕೆಲವು ಮನೆಗಳು ಖಾಲಿ ಉಳಿಯುತ್ತವೆ. ಈ ರೀತಿ ನಾಲ್ಕು ಬೀಜಗಳು ಸಿಗದೆ ಖಾಲಿ ಉಳಿದ ಮನೆಗಳನ್ನು ಫೊತ್ತು ಅನ್ನುತ್ತಾರೆ.  ಈ ಫೊತ್ತುಗಳನ್ನು ಸುಲಭವಾಗಿ ಗುರುತಿಸಲಾಗುವಂತೆ ಅವುಗಳಲ್ಲಿ ಇತರ ಬಣ್ಣದ ಯಾವುದಾದರೂ ಕಾಯಿಗಳನ್ನೋ ಅಥವಾ ಕಾಗದದ ಚೂರನ್ನೋ ಇರಿಸುವುದು ವಾಡಿಕೆ.  ಹಿಂದಿನ  ಆಟ ಪ್ರಾರಂಭಿಸಿದವರ ಎದುರಾಳಿ ಈ ಸಲ  ಪ್ರಾರಂಭಿಸುತ್ತಾರೆ.  ಆಟ ಹಿಂದಿನಂತೆಯೇ ಮುಂದುವರೆಯುತ್ತದೆ.  ಬೀಜಗಳನ್ನು ಹಾಕುತ್ತಾ ಹೋಗುವಾಗ ಖಾಲಿ ಮನೆ ಅರ್ಥಾತ್ ಫೊತ್ತುಗಳಲ್ಲಿ ತಪ್ಪಿಯೂ ಬೀಳಬಾರದು.  ಒಂದು ವೇಳೆ ಬಿದ್ದರೆ ‘ಫೊತ್ತದಿ ಕಲ್ಲು ಥಾಪ್ಯಾಂ’  ಎಂದು ಹೇಳಿ ಆ ಬೀಜವನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕು ಫೊತ್ತದ  ಒಡೆಯನಿಗೆ ಸಿಕ್ಕುತ್ತದೆ.  ಈ ಆಟ ಮುಗಿದಾಗ ಆಗಲೇ ಫೊತ್ತುಗಳನ್ನು ಹೊಂದಿದ್ದವನಿಗೆ ಅವುಗಳ ಸಂಖ್ಯೆ ಜಾಸ್ತಿಯೂ ಆಗಬಹುದು ಅಥವಾ ಫೊತ್ತುಗಳು ಇನ್ನೊಂದು ಬದಿಗೆ ವರ್ಗಾವಣೆಯೂ ಆಗಬಹುದು!

ಈ ರೀತಿ ಏಳುಬೀಳುಗಳೊಂದಿಗೆ ಆಟ ಸಾಗಿ ಸಾಗಿ ಕೊನೆಗೆ ಯಾರದಾದರೂ ಎಲ್ಲ ಏಳು ಮನೆಗಳು ಫೊತ್ತುಗಳಾದರೆ ಅವರು ಸೋತಂತೆ.  ಆಗ ಗೆದ್ದವರು ಚೆನ್ನೆಮಣೆಯನ್ನು  ಎತ್ತಿ ಸೋತವರ ಮುಖದೆದುರು ಆರತಿ ಬೆಳಗಿದಂತೆ ಆಡಿಸುತ್ತಾ ‘ಮಂಗನ ಮೋರೆಗೆ ಮರದ ಕೊದಂಟಿಗೆ ಮಂಗಳಂ ಜಯ ಮಂಗಳಂ’  ಎಂದು ಹಂಗಿಸಿ ಜಗಳಕ್ಕೆ ನಾಂದಿ ಆಗುವುದೂ ಇತ್ತು.

ಈ ಆಟದಲ್ಲಿ ಕೈಯಲ್ಲಿರುವ ಬೀಜಗಳು ಮುಗಿದಾಗ ಏನು ಲಭಿಸುತ್ತದೆ ಎನ್ನುವುದು ಎಷ್ಟು ಫೊತ್ತುಗಳಿರುವಾಗ ಯಾವ ಮನೆಯಿಂದ ಆಟ ಪ್ರಾರಂಭಿಸಲಾಗುತ್ತದೆ ಎನ್ನುವುದರ ಮೇಲೆ ಹೊಂದಿಕೊಂಡಿರುತ್ತದೆ.  ಅನುಭವಿ ಆಟಗಾರರು ಈ ಹಿಕ್ಮತ್ತುಗಳನ್ನು ನೆನಪಿಟ್ಟುಕೊಂಡು ಎದುರಾಳಿಗಳನ್ನು ಸುಲಭವಾಗಿ ಸೋಲಿಸಬಲ್ಲವರಾಗಿರುತ್ತಾರೆ.

ಇದು ನಾವು ಆಡುತ್ತಿದ್ದ ಸರಳ ಆಟ.  ಖಾಲಿ ಮನೆಯ ಮುಂದಿನ ಬೀಜಗಳನ್ನು ತೆಗೆದುಕೊಳ್ಳುವಾಗ ಅದರ ವಿರುದ್ಧ ದಿಕ್ಕಿನಲ್ಲಿ ಇರುವ ಮನೆಯ ಬೀಜಗಳನ್ನೂ ತೆಗೆದುಕೊಳ್ಳುವ ಜೋಡುಮನೆ ಆಟ, ಒಂದು ಮನೆಯಲ್ಲಿ ಹೆಚ್ಚು ಹೆಚ್ಚು ಬೀಜಗಳನ್ನು ಸೇರಿಸುತ್ತಾ  ಹೋಗುವ ಬಂದಿ ಆಟ, ಮೂರು ಜನ ಸೇರಿ ಆಡುವ ರಾಜ ಮತ್ತು ಒಕ್ಕಲುಗಳ ಆಟವನ್ನೂ ಕೆಲವರು ಆಡುತ್ತಿದ್ದರು. 


ಎಕ್ಕಾಟಿ ಎಂಬ ಅದೃಷ್ಟದ ಆಟ

ಇದು ಏಳು ಕವಡೆಗಳನ್ನು ಬಳಸಿ ಆಡುವಂಥದ್ದು.  ಇದರಲ್ಲಿ ಬುದ್ಧಿಮತ್ತೆಯ ಯಾವ ಪಾತ್ರವೂ ಇಲ್ಲ.  ಎಲ್ಲ ಅದೃಷ್ಟದ್ದೇ ಆಟ.  ಇಬ್ಬರು ಆಟಗಾರರ ಸಂಗ್ರಹಾಗಾರಗಳಲ್ಲೂ ತಲಾ 28 ಬೀಜಗಳಿರುತ್ತವೆ. ಆಡುವವರು ಏಳೂ ಕವಡೆಗಳನ್ನು ಕೈಗಳೊಳಗೆ ಚೆನ್ನಾಗಿ ಆಡಿಸಿ ಎಸೆದಾಗ ಎಷ್ಟು ಕವಡೆಗಳು ಮೇಲ್ಮುಖವಾಗಿ ಬೀಳುತ್ತವೋ ಅವರ ಬದಿಯ ಆ ಸಂಖ್ಯೆಯ ಮನೆಯಲ್ಲಿ ಅವರ ಸಂಗ್ರಹದಿಂದ ಒಂದು ಬೀಜ ಹಾಕಬೇಕು. ಆದರೆ ಇದನ್ನು ಆರಂಭಿಸಬೇಕಾದರೆ ಒಂದು ಕವಡೆ ಮೇಲ್ಮುಖವಾಗಿ ಬೀಳುವ ವರೆಗೆ ಕಾಯಬೇಕು. ಒಂದು ವೇಳೆ ಎಲ್ಲ ಕವಡೆಗಳು ಕೆಳಮುಖವಾಗಿ ಬಿದ್ದರೆ ಮೂರನೆ ಮನೆಯಲ್ಲಿ ಒಂದು ಬೀಜ ಹಾಕಬೇಕು. ಎಲ್ಲ ಕವಡೆಗಳು ಕೆಳಮುಖವಾಗಿ ಬೀಳುವುದನ್ನು ಕಪ್ಪಾಲ ಅಥವಾ  ಬೊಕ್ಕಾ ಎಂದೂ, ಮೇಲ್ಮುಖವಾಗಿ ಬೀಳುವುದನ್ನು ರಥವೆಂದೂ ಕರೆಯುತ್ತಾರೆ.  ಮೂರು ಕವಡೆಗಳು ಮೇಲ್ಮುಖವಾಗಿ ಬಿದ್ದರೆ ಆಟ ಎದುರಿನವರಿಗೆ ವರ್ಗಾವಣೆಯಾಗುತ್ತದೆ.  ಅವರೂ ಅದೇ ರೀತಿ ಆಡುತ್ತಾ ಮೇಲ್ಮುಖವಾಗಿ ಬಿದ್ದ ಕವಡೆಗಳ ಅನುಸಾರ ಮನೆಗಳಲ್ಲಿ ಬೀಜ ತುಂಬುತ್ತಾ ಹೋಗಬೇಕು.  ಅವರಿಗೆ ಮೂರು ಬಿದ್ದೊಡನೆ ಮತ್ತೆ ಆಟ ಈ ಕಡೆಯವರಿಗೆ.  ಈ ರೀತಿ ಆಡುತ್ತಾ ಒಬ್ಬರ ಎಲ್ಲ ಬೀಜಗಳು ಮನೆಗಳಲ್ಲಿ ಸೇರಿದ ಮೇಲೆ ಬಿದ್ದ ಕವಡೆಗಳ ಆಧಾರದಲ್ಲಿ ಎದುರಾಳಿಯ ಮನೆಗಳಿಂದ ಒಂದೊಂದೇ ಬೀಜವನ್ನು ತೆಗೆಯುತ್ತಾ ಹೋಗಬೇಕು. ಆದರೆ ಇದಕ್ಕೂ ಒಮ್ಮೆ ಒಂದು ಬೀಳುವ ವರೆಗೆ ಕಾಯಬೇಕು.   ಮೂರು ಬಿದ್ದಾಗ ಆಟ ವರ್ಗಾವಣೆ.  ಯಾರು ಬೀಜಗಳೆಲ್ಲ ಮೊದಲು ಖಾಲಿ ಮಾಡುತ್ತಾರೋ ಅವರು ಗೆದ್ದಂತೆ.  ಗೆದ್ದವವರ ಮನೆಗಳಲ್ಲಿ ಎಷ್ಟು ಬೀಜಗಳು ಉಳಿದಿರುತ್ತವೋ ಸೋತವರು ಅಷ್ಟು ಹೊಲಸಿನ ಹೆಡಿಗೆಗಳನ್ನು ಹೊತ್ತಂತೆ ಎಂದು ಅರ್ಥ!

ಮುಗಿಯದ ಆಟ

ಕೆಲವು ಸಲ ಚೆನ್ನೆಮಣೆ ಆಡಲು ಜೊತೆಗಾರರು ಯಾರೂ ಸಿಗದ ಸಂದರ್ಭಗಳು ಬರುತ್ತವೆ.  ಅಕ್ಕ, ತಂಗಿ, ಅಣ್ಣ, ತಮ್ಮಂದಿರನ್ನು ಕರೆದರೆ ‘ನಿನಗೆ ಮೂರೂ ಹೊತ್ತು ಚೆನ್ನೆಮಣೆಯೇ ಆಯಿತು. ನಮಗೆ ಬೇರೆ ಕೆಲಸಗಳಿವೆ. ಹೋಗಾಚೆ’  ಎಂದು ಬೈದು ಕಳಿಸುತ್ತಾರೆ.  ಅದಕ್ಕೂ ಪರಿಹಾರವಿದೆ.  ಚೆನ್ನೆಮಣೆಯ ಗುಳಿಗಳಲ್ಲಿ ಎಡದಿಂದ 7,6,5,4,3,2,1,7,6,5,4,3,2,1 ಅಥವಾ 2,1,0,1,0,1,0,1,0,1,0,1,0,1 ಬೀಜಗಳನ್ನು ಹಾಕಿ ಎಡದ ಮೊದಲ ಮನೆಯಿಂದ ಆಡಲು ಆರಂಭಿಸಿದರೆ ಖಾಲಿ ಮನೆಗಳನ್ನು ಎದುರಿಸುವ ಪ್ರಸಂಗವೇ ಬರದೆ ಸಾಕೆನಿಸುವವರೆಗೆ ಒಬ್ಬರೇ ನಿರಂತರವಾಗಿ ಆಡುತ್ತಲೇ ಇರಬಹುದು! ಇದನ್ನು ಚಿತ್ಪಾವನಿ ಭಾಷೆಯಲ್ಲಿ ಅಢುಕತ್ಸಾಳಂ ಅನ್ನುತ್ತಾರೆ.  ಈ ಅಂತ್ಯರಹಿತ ಆಟವನ್ನು ಅಶೋಕವನದಲ್ಲಿ ಒಬ್ಬಂಟಿಯಾಗಿದ್ದ ಸೀತೆ ಆಡುತ್ತಿದ್ದಳು ಎನ್ನಲಾಗಿದ್ದು ಕೆಲವೆಡೆ ಇದನ್ನು ಸೀತೆ ಆಟ ಎಂದೇ ಕರೆಯಲಾಗುತ್ತದೆ.  ಕೆಲವು ಪ್ರದೇಶಗಳಲ್ಲಿ ಇದಕ್ಕೆ ಬೀಳದ ಅಜ್ಜಿ ಆಟ ಎಂಬ ಹೆಸರೂ ಇದೆಯಂತೆ.

ಮನರಂಜನೆಯ ಜೊತೆಗೆ ಬುದ್ಧಿಗೆ ಕಸರತ್ತನ್ನೂ ಕೊಡುವ ಚೆನ್ನೆಮಣೆ ಆಟ ಆಡುವುದನ್ನು ಮಕ್ಕಳಿಗೆ ಕಲಿಸಿ ಕೊಟ್ಟರೆ ಅವರು ಸ್ಮಾರ್ಟ್ ಫೋನ್, ವೀಡಿಯೊ ಗೇಮ್‌ಗಳ ಗುಂಗಿನಿಂದ ಹೊರ ಬರಲು ಸಹಾಯವಾಗಬಹುದು.

ಇಲ್ಲಿ ಬಳಸಿದ ಅನೇಕ ಶಬ್ದಗಳು ನಮ್ಮ ಚಿತ್ಪಾವನಿ ಭಾಷೆಯ ಮೂಲದವು.  ಪ್ರಾದೇಶಿಕವಾಗಿ ಈ ಪದಗಳು ಹಾಗೂ ಆಡುವ ರೀತಿಯಲ್ಲಿ ಭಿನ್ನತೆ ಇರಬಹುದು.ಈ ಪದಗಳಿಗೆ ಸಮಾನಾರ್ಥಕ ಕನ್ನಡ ಪದಗಳು ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.

Sunday, 17 June 2018

ಘಂಟೆಯ ಕಂಠದ ಘಂಟಸಾಲ




ವೆಂಕಟೇಶ್ವರ ರಾವ್ ಹಾಡಿದ ನಿಮ್ಮ ಇಷ್ಟದ ಹಾಡು ಯಾವುದು ಎಂದು ನಿಮ್ಮನ್ನು ಕೇಳಿದರೆ "ಯಾರ್ರೀ ಅದು ವೆಂಕಟೇಶ್ವರ ರಾವ್?" ಎಂದು ನೀವು ಮರು ಪ್ರಶ್ನೆ ಎಸೆಯುವುದು ಖಂಡಿತ.  ಅದೇ ಘಂಟಸಾಲ ಹಾಡಿದ್ದು ಅಂದರೆ ಕ್ಷಣವೂ ತಡ ಮಾಡದೆ  ಶಿವಶಂಕರಿ ಎಂದೋ ಬಾಳೊಂದು ನಂದನ ಎಂದೋ  ಉತ್ತರ ಬಂದೀತು.  ಒಂದು ವೇಳೆ ಮೆಲ್ಲುಸಿರೇ ಸವಿಗಾನ ಎಂದೇನಾದರೂ ನೀವು  ಹೇಳಿದರೆ ನಾನು ಮತ್ತೆ "ರೀ, ಅದು ರೇ ಅಲ್ಲ ರೀ" ಎಂದು ಎಚ್ಚರಿಸಬೇಕಾದೀತು!

ಘಂಟಸಾಲ ಎಂದೇ ಪ್ರಸಿದ್ಧರಾದ ಘಂಟಸಾಲ ವೆಂಕಟೇಶ್ವರ ರಾವ್ ಅವರನ್ನು ಕುರಿತ ಈ ಬರಹ ಈ ಹಿಂದಿನ ಮುರಿಯದ ಮನೆಯ ಮರೆಯಾದ ಗೀತಗುಚ್ಛದ sequel ಅರ್ಥಾತ್ ಮುಂದುವರಿದ ಭಾಗ ಅಂದರೆ ತಪ್ಪಾಗಲಾರದು.  ಯಾವುದಾದರೂ ಒಂದು ವಿಷಯದ ಬಗ್ಗೆ ಬರೆದರೆ ಉಳಿದವರು ಅದನ್ನೊಮ್ಮೆ ಓದಿ ಮರೆತರೂ ನಾನು ಮತ್ತೂ ಕೆಲವು ದಿನ ಅದೇ ಗುಂಗಿನಲ್ಲಿರುತ್ತೇನೆ.  ಆ ವಿಷಯಕ್ಕೆ ಸಂಬಂಧಿಸಿದ ವಿಷಯಗಳ ಹುಡುಕಾಟ ಮುಂದುವರೆಸಿ ಹೊಸತೇನಾದರೂ ಸಿಕ್ಕಿದರೆ ಅದನ್ನು ಲೇಖನಕ್ಕೆ ಸೇರಿಸುವುದೂ ಇದೆ.  ಮುರಿಯದ ಮನೆ  ಇತರ ಭಾಷೆಗಳಲ್ಲೂ ತಯಾರಾಗಿತ್ತಲ್ಲವೇ.  ಅದರ ಹಿಂದಿ ರೂಪ ಖಾನ್‌ದಾನ್ ಚಿತ್ರವನ್ನು ಅಂತರ್ಜಾಲದಲ್ಲಿ ವೀಕ್ಷಿಸುತ್ತಿರುವಾಗ ರಫಿ ಮತ್ತು ಆಶಾ ಭೋಸ್ಲೆ ಹಾಡಿದ ಪ್ರಸಿದ್ಧ ಹಾಡು ಬಡಿ ದೇರ್ ಭಯೀ ನಂದ್ ಲಾಲಾ ಆರಂಭವಾಗುವುದಕ್ಕಿಂತ ಮೊದಲು ಘಂಟಸಾಲ ಹಾಡಿರುವ ಶ್ಲೋಕವೊಂದು ಇರುವುದು ಕಂಡು ಆಶ್ಚರ್ಯಚಕಿತನಾಗಿ ಆ ವಿಷಯವನ್ನು ಕೂಡಲೇ face bookನಲ್ಲಿ ಹಂಚಿಕೊಂಡೆ. ಹೆಚ್ಚಿನವರಿಗೆ ಅದು ಗಮನಿಸಲು ಯೋಗ್ಯವಾದ ವಿಷಯವೆಂದು ಅನ್ನಿಸದಿದ್ದರೂ ಇಂತಹ ವಿಚಾರಗಳಲ್ಲಿ ನನಗೆ ಸಮಾನಾಂತರ ತರಂಗಾಂತರ ಹೊಂದಿರುವ face book ಗೆಳೆಯ ಸುದರ್ಶನ ರೆಡ್ಡಿ ಅವರಲ್ಲಿ ಕಿಡಿಯೊಂದು ಹೊತ್ತಿಕೊಂಡಿತು.  ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಘಂಟಸಾಲ ಬಗ್ಗೆ ಬಹಳಷ್ಟು ಮಾಹಿತಿ  ಒದಗಿಸಿದರು.  ಆ ಕಿಡಿ ನನ್ನಲ್ಲಿ ಜ್ವಾಲೆಯಾಗಿ ಹಬ್ಬಿ ಈ ಲೇಖನಕ್ಕೆ ಕಾರಣವಾಯಿತು!

ನಮ್ಮ ಮನೆಗೆ 1962ರಲ್ಲಿ ರೇಡಿಯೋ ಬಂದಾಗ ಆಗ ಪ್ರತಿ ಸೋಮವಾರ ರಾತ್ರೆ  8ರಿಂದ  8-30ರ ವರೆಗೆ ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾಗುತ್ತಿದ್ದ ನಿಮ್ಮ ಮೆಚ್ಚಿನ ಚಿತ್ರಗೀತೆಗಳು ಕಾರ್ಯಕ್ರಮದ ಮುಖಾಂತರ ಮೊತ್ತ ಮೊದಲು ನನ್ನ ಕಿವಿಗೆ ಬಿದ್ದ ಕನ್ನಡ ಹಾಡು ಓಹಿಲೇಶ್ವರ ಚಿತ್ರಕ್ಕಾಗಿ ಘಂಟಸಾಲ ಹಾಡಿದ ಈ ದೇಹದಿಂದ ದೂರನಾದೆ ಏಕೆ ಆತ್ಮನೆ.  ಆ ಧ್ವನಿ ಕೇಳಿದ ಕೂಡಲೇ ಇದು ತುಂಬುಗಲ್ಲದ ವ್ಯಕ್ತಿಯೊಬ್ಬರು ಹಾಡಿದ ಹಾಡು ಎಂದು ನನಗನ್ನಿಸಿತ್ತು!   ಎಸ್. ಜಾನಕಿ ಹಾಡಿದ  ಹಾಡುಗಳನ್ನು ಕೇಳಿದಾಗಲೂ ನನಗೆ ಹಾಗೆಯೇ ಅನ್ನಿಸುವುದು. ಎಲ್. ಆರ್. ಈಶ್ವರಿ ಅವರ ಹಾಡುಗಾರಿಕೆಯಲ್ಲಿ ತುಂಟತನ ಅಂತರ್ಗತವಾಗಿರುವ ಹಾಗೆ ಇವರಿಬ್ಬರ ಧ್ವನಿಯಲ್ಲಿ ಒಂದು ಮುದ್ದುತನವಿದೆ.

1945ರಲ್ಲಿ ಸ್ವರ್ಗ ಸೀಮಾ ಎಂಬ ಚಿತ್ರದಲ್ಲಿ ಓ ನಾ ರಾಜಾ ಎಂಬ ಹಾಡಿನ ಮೂಲಕ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದ ಇವರ ಹೆಸರು 1950ರ ವರೆಗೆ ಜಿ. ವೆಂಕಟೇಶ್ವರ ರಾವ್ ಅಥವಾ ಘಂಟಸಾಲ ವೆಂಕಟೇಶ್ವರ ರಾವ್ ಎಂದೇ ಉಲ್ಲೇಖಿಸಲ್ಪಡುತ್ತಿತ್ತು.  ಅವರು ಪ್ರಥಮವಾಗಿ ಸಂಗೀತ ನಿರ್ದೇಶನ ಮಾಡಿದ ಮನ ದೇಶಂ, ನಂತರದ ಕೀಲು ಗುರ್ರಂ, ಶಾವುಕಾರು ಚಿತ್ರಗಳ ಟೈಟಲ್‌ಗಳನ್ನು ನೋಡಿದರೆ ಈ ವಿಷಯ ವೇದ್ಯವಾಗುತ್ತದೆ.  1951ರಲ್ಲಿ ಬಂದ ಪಾತಾಳ ಭೈರವಿ ಚಿತ್ರದಲ್ಲಿ ಮೊತ್ತಮೊದಲು ಅವರ ಹೆಸರು ಹ್ರಸ್ವವಾಗಿ ಘಂಟಸಾಲ ಎಂದು ನಮೂದಿಸಲ್ಪಟ್ಟಿರುವುದು ಕಂಡು ಬರುತ್ತದೆ. ಅಲ್ಲಿಂದ ಮುಂದೆ ಈಗಿನ ಗಾಯಕರ ನಾಲ್ಕು ಪಟ್ಟು ಧ್ವನಿಭಾರವುಳ್ಳ, ಗುಡಿ ಗೋಪುರಗಳ ಘಂಟಾನಾದದಂಥ ಅವರ ಕಂಚಿನ ಕಂಠಕ್ಕೆ ಘಂಟಸಾಲ ಎಂಬ ನಾಲ್ಕಕ್ಷರದ ಘನ ನಾಮಧೇಯ ಅನ್ವರ್ಥವೇ ಆಗಿ ಹೋಯಿತು. ಚಿತ್ರರಂಗದಲ್ಲಿ ಚಾಲ್ತಿಯಲ್ಲಿರಲು ಚಿಕ್ಕ ಹೆಸರೇ ತಕ್ಕುದೆಂದು ಅವರೇ ಸ್ವತಃ ನಿರ್ಧರಿಸಿದರೋ ಅಥವಾ ಇನ್ಯಾರಾದರೂ ಈ ಬಗ್ಗೆ ಸಲಹೆ ನೀಡಿದರೋ ಎನ್ನುವ ಬಗ್ಗೆ ಮಾಹಿತಿ ಇಲ್ಲ.



4-12-1922ರಂದು ಆಂಧ್ರದ ಗುಡಿವಾಡ ಸಮೀಪದ ಚೌಟಪಲ್ಲಿ ಎಂಬಲ್ಲಿ ಜನಿಸಿದ ಅವರಿಗೂ ಸಮೀಪದ ಘಂಟಸಾಲ ಎಂಬ ಊರಿಗೂ ಯಾವ  ನೇರವಾದ ಸಂಬಂಧವೂ ಇಲ್ಲವಂತೆ.  ಪುರಾತನ ಕಾಲದಲ್ಲಿ ಅವರ ಕುಟುಂಬದವರು ಅಲ್ಲಿ ನೆಲೆಸಿದ್ದರಿಂದ ಈ ಘಂಟಸಾಲ ಎಂಬ ಹೆಸರು ಅವರ ವಂಶಕ್ಕೆ ಅಂಟಿಕೊಂಡಿತು ಎಂದು ಹೇಳಲಾಗುತ್ತದೆ.  ಅಂತೂ ಆ  ಊರಿಗೆ   ಜಗದ್ವಿಖ್ಯಾತವಾಗುವ ಯೋಗವಿತ್ತು!

ಅವರಿಗೆ ಸಂಗೀತ ತಂದೆಯಿಂದಲೇ ಬಳುವಳಿಯಾಗಿ ಬಂದಿತ್ತು.  ಯೌವನದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸವನ್ನೂ ಅನುಭವಿಸಿದ್ದರು.  ಈ ರಾಜಕೀಯ ತನಗಲ್ಲವೆಂದು ನಿರ್ಧರಿಸಿದ ಅವರು ಬಳಿಕ ವಿವಿಧ ಗುರುಗಳ ಬಳಿ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿ ವಿಜಯನಗರಂ ಸಂಗೀತ ನೃತ್ಯ ಕಾಲೇಜಿನಿಂದ ವಿದ್ವತ್ ಪದವಿ ಪಡೆದರು. ವಿದ್ಯಾಭ್ಯಾಸ ಕಾಲದಲ್ಲಿ  ವಾರಾನ್ನ, ಭಿಕ್ಷಾನ್ನಗಳಿಗೂ ಮೊರೆ ಹೋಗಬೇಕಾಗಿ ಬಂದಿತ್ತಂತೆ. ವಿದ್ವತ್ ಪದವಿ ಪಡೆದ ಮೇಲೆ ಕೆಲಕಾಲ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನೀಡಿದ ಅವರು ತನ್ನದೇ ತಂಡ ಕಟ್ಟಿಕೊಂಡು ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಸಂಗೀತ ಗೋಷ್ಟಿಗಳನ್ನು ನಡೆಸುತ್ತಿದ್ದರು.  ಅವರ ಕಂಠದಲ್ಲಿದ್ದ ಮಾಧುರ್ಯವನ್ನು ಗುರುತಿಸಿದ ಸಮುದ್ರಾಲ ಸೀನಿಯರ್ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷಿಸುವಂತೆ ಅವರಿಗೆ ಸಲಹೆ ನೀಡಿದರು.  ಆರಂಭದಲ್ಲಿ ಕೋರಸ್ ಗಾಯಕನಾಗಿ ಚಿತ್ರರಂಗಕ್ಕೆ ಅಡಿಯಿಸಿದ ಅವರು ಹಂತಹಂತವಾಗಿ ಮೇಲೇರತೊಡಗಿದರು. ಆಗಲೇ ಹೇಳಿದಂತೆ ಸ್ವರ್ಗ ಸೀಮಾ ಎಂಬ ಚಿತ್ರದಲ್ಲಿ ಓ ನಾ ರಾಜಾ ಎಂಬ ಹಾಡಿನ ಮೂಲಕ ಗಾಯಕನಾಗಿ 1949ರಲ್ಲಿ ಎನ್.ಟಿ. ರಾಮ ರಾವ್ ಅವರ ಪ್ರಥಮ ಚಿತ್ರ ಮನ ದೇಶಂ ಮೂಲಕ ಸಂಗೀತ ನಿರ್ದೇಶನ ಕ್ಷೇತ್ರಕ್ಕೂ ಕಾಲಿರಿಸಿ ತ್ರಿವಿಕ್ರಮನಾಗಿ ಬೆಳೆದರು.  ಹಿಂದಿಯ ಹೇಮಂತ್ ಕುಮಾರ್ ಮೊದಲಾದ ಗಾಯಕರೂ ಸಂಗೀತ ನಿರ್ದೇಶನ ಮಾಡಿದ್ದಿದೆ.  ಆದರೆ ನಂಬರ್ ವನ್ ಗಾಯಕನೊಬ್ಬ ಇತರ ಸಮಕಾಲೀನ ದಿಗ್ಗಜ ಸಂಗೀತಗಾರರಿಗೆ ಸರಿಸಾಟಿಯಾದ ನಂಬರ್ ವನ್ ಸಂಗೀತ ನಿರ್ದೇಶಕನೂ ಆದ ಉದಾಹರಣೆ ಇನ್ಯಾವ ಚಿತ್ರರಂಗದಲ್ಲೂ ಸಿಗಲಾರದು.  ಇತರ ಸಂಗೀತ ನಿರ್ದೇಶನದ ಚಿತ್ರಗಳಲ್ಲಿ ಎಷ್ಟು ಮಧುರಾತಿ ಮಧುರ ಗೀತೆಗಳನ್ನು ಹಾಡಿದರೋ ಅಷ್ಟೇ ಸುಮಧುರ ಗೀತೆಗಳನ್ನು  ತನ್ನ ಸಂಗೀತ ನಿರ್ದೇಶನದ ಚಿತ್ರಗಳಲ್ಲಿ ಹಾಡಿದ / ಹಾಡಿಸಿದ ಹೆಗ್ಗಳಿಕೆ ಅವರದು. ಎಲ್ಲ ಗಾಯಕ ಗಾಯಕಿಯರೊಡನೆ ಅವರು ಹಾಡಿದ್ದರೂ ಸುಶೀಲ ಮತ್ತು ಪಿ. ಲೀಲ ಅವರೊಂದಿಗಿನ ಹಾಡುಗಳು ಹೆಚ್ಚು ಜನಪ್ರಿಯ.

ಘಂಟಸಾಲ  ಹಾಡಿರುವ ಸಾವಿರಾರು ಗೀತೆಗಳಲ್ಲಿ ಹುಡುಕಿದರೂ ಒಂದು ಜೊಳ್ಳು ಸಿಗಲಾರದು.  ತಾನು ಸ್ವತಃ ಸಂಗೀತ ನಿರ್ದೇಶಕನಾಗಿದ್ದುದರಿಂದ ಇತರರ ಹಾಡುಗಳಲ್ಲೂ ಹೆಚ್ಚು ಹೆಚ್ಚು ಮಾಧುರ್ಯ ತುಂಬಲು ಅವರಿಗೆ ಸಾಧ್ಯವಾಗುತ್ತಿತ್ತೋ ಏನೋ.  ಈ ಲೇಖನಕ್ಕಾಗಿ ಅಂತರ್ಜಾಲವನ್ನು ಜಾಲಾಡುತ್ತಿರುವಾಗ ತೆಲುಗಿನಲ್ಲಿ ಇತರ ಭಾಷೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಸ್ತ್ರೀಯ ಸಂಗೀತವನ್ನು ಆಧರಿಸಿದ ಗೀತೆಗಳಿರುವುದು ಗಮನಕ್ಕೆ ಬಂತು.  ಶಾಸ್ತ್ರೀಯ ಸಂಗೀತದಲ್ಲಿ ನುರಿತ ಅನೇಕ ಸಂಗೀತ ನಿರ್ದೇಶಕರನ್ನು  ಹೊಂದಿರುವುದು ಮಾತ್ರವಲ್ಲ, ಅದನ್ನು ಅರೆದು ಕುಡಿದ ಘಂಟಸಾಲ ಅವರಂಥ ಗಾಯಕ  ಅವರಿಗೆ ದೊರಕಿದ್ದು ಇದಕ್ಕೆ ಮುಖ್ಯ ಕಾರಣ ಎಂದು ನನಗನ್ನಿಸಿತು.

1947ರ ಯೋಗಿ ವೇಮನ ಚಿತ್ರದ ಒಂದು ಹಾಡಿನಲ್ಲಿ  ಅವರು  ನೃತ್ಯದ ನಟ್ಟುವಾಂಗ ವಾದಕನಾಗಿ ಕಾಣಿಸಿಕೊಂಡಿದ್ದರು.  1960ರ ವೆಂಕಟೇಶ್ವರ ಮಹಾತ್ಮ್ಯಂ ಚಿತ್ರದಲ್ಲಿ   ಅವರು ತಿರುಪತಿ ದೇವಳದ ಗರ್ಭಗುಡಿಯ ಎದುರು ಕುಳಿತು ಹಾಡುವ ದೃಶ್ಯವಿದೆ.  15ನೇ ಶತಮಾನದ  ಸಂತ ಅನ್ನಮಯ್ಯ ಅರ್ಥಾತ್ ಅನ್ನಮಾಚಾರ್ಯರನ್ನು  ಹೊರತು ಪಡಿಸಿದರೆ ವೆಂಕಟೇಶ್ವರನ ಎದುರು ಕುಳಿತು ಹಾಡುವ ಸೌಭಾಗ್ಯ ಸಿಕ್ಕಿದ್ದು ಇವರಿಗೆ ಮಾತ್ರವಂತೆ.



ಚಿತ್ರರಂಗದೊಡನೆ ಸಂಬಂಧ ಹೊಂದಿರುವುದರಿಂದ ಶ್ರೇಷ್ಠ ಶಾಸ್ತ್ರೀಯ ಸಂಗೀತ ವಿದ್ವಾಂಸನಾಗಿದ್ದರೂ ಇತರ ಸಮಕಾಲೀನ ಶಾಸ್ತ್ರೀಯ ಸಂಗೀತ ಕಲಾವಿದರು ಇವರಿಗೆ ಸೂಕ್ತ ಮನ್ನಣೆ ಕೊಡುತ್ತಿರಲಿಲ್ಲವಂತೆ.  ಆದರೆ 1959ರಲ್ಲಿ ಬಂದ ಜಯಭೇರಿ ಚಿತ್ರದ    ಅದುವರೆಗೆ ಕೇಳದ ರಾಗದಲ್ಲಿದ್ದ ರಸಿಕ ರಾಜ ತಗುವಾರಮು ಎಂಬ ಶಾಸ್ತ್ರೀಯ ಹಾಡಿನಲ್ಲಿ ಇವರ ನಿರ್ವಹಣೆಯನ್ನು ನೋಡಿದ ಮೇಲೆ ಅವರೆಲ್ಲ ಚಿತ್ ಆಗಿ ತಮ್ಮ ಅಭಿಪ್ರಾಯ ಬದಲಿಸಿದರೆಂದು ಪ್ರತೀತಿ.  ಆ ಚಿತ್ರದ ಸಂಗೀತ ನಿರ್ದೇಶಕ ಪೆಂಡ್ಯಾಲ ನಾಗೇಶ್ವರ ರಾವ್ ಆರೋಹಣದಲ್ಲಿ ಕಾನಡಾ ಮತ್ತು ಅವರೋಹಣದಲ್ಲಿ ಚಕ್ರವಾಕ  ಸ್ವರಗಳನ್ನು ಹೊಂದಿಸಿ ಸಂಯೋಜಿಸಿದ  ಈ ಹೊಸ ರಾಗಕ್ಕೆ ವಿಜಯಾನಂದ ಚಂದ್ರಿಕಾ ಎಂಬ ಹೆಸರು ಕೊಟ್ಟಿದ್ದರು. ಜಗದೇಕವೀರನ ಕಥೆ ಚಿತ್ರದ ಹಿಂದುಸ್ತಾನಿ ಶೈಲಿಯ ಶಿವಶಂಕರಿ  ಮತ್ತು ಶುದ್ಧ ಕರ್ನಾಟಕ ಸಂಗೀತ ಶೈಲಿಯ ಈ ಹಾಡು, ಇವುಗಳ ಮೂಲಕ ಎರಡೂ ಪದ್ಧತಿಗಳಲ್ಲಿ ತನ್ನ ಪಾಂಡಿತ್ಯವೆಂತಹುದು  ಎಂದು  ಘಂಟಸಾಲ ಜಗತ್ತಿಗೆ ಜಾಹೀರುಪಡಿಸಿದರು.  ಈ ರಸಿಕ ರಾಜ ಹಾಡು ಕೂಡ ಶಿವಶಂಕರಿಯಂತೆಯೇ ರಿಯಲ್ ಟೈಮ್ ಶೋಗಳಲ್ಲಿ ಭಾಗವಹಿಸುವ ಯುವ ಕಲಾವಿದರ ಮೆಚ್ಚಿನದಾಗಿದ್ದು ಅನೇಕರು ಇವುಗಳನ್ನು ಚೆನ್ನಾಗಿಯೇ ಹಾಡುತ್ತಾರೆ.



ಈ ಜಯಭೇರಿ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲು ನಾನು ಪ್ರಯತ್ನಿಸುತ್ತಿದ್ದಾಗ ಅರಸುತ್ತಿದ್ದ ಬಳ್ಳಿಯೊಂದು ಕಾಲಿಗೆ ತೊಡರಿತು.  ಪಿ. ಬಿ. ಶ್ರೀನಿವಾಸ್ ಮತ್ತು ಘಂಟಸಾಲ ಜೊತೆಯಾಗಿ ಹಾಡಿದ ಹಾಡು ಯಾವುದಾದರೂ ಇದೆಯೇ ಎಂದು ತುಂಬಾ ಸಮಯದಿಂದ ನಾನು ಹುಡುಕುತ್ತಿದ್ದೆ. ಈ ಚಿತ್ರದಲ್ಲಿ  ಮದಿ ಶಾರದಾ ದೇವಿ ಮಂದಿರಮೇ ಎಂಬ ಹಾಡಿನಲ್ಲಿ ಘಂಟಸಾಲ ಜೊತೆಗೆ ಪಿ. ಬಿ. ಶ್ರೀನಿವಾಸ್ ತಾನೇ ತೆರೆಯ ಮೇಲೆ ಕಾಣಿಸಿಕೊಂಡು ಹಾಡಿರುವುದನ್ನು ತಿಳಿದು ನನ್ನ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ಇನ್ನೊಬ್ಬ ಗಾಯಕ ರಘುನಾಥ ಪಾಣಿಗ್ರಾಹಿ ಕೂಡ ಕಾಣಿಸಿಕೊಂಡ ಈ  ಹಾಡಿನಲ್ಲಿ ಪಿ.ಬಿ.ಎಸ್  ವೀಣೆ ನುಡಿಸುವ ದೃಶ್ಯವೂ ಇದೆ!  ಆದರೆ ಎಳೆ ಪ್ರಾಯ ಮತ್ತು ಪಾತ್ರಕ್ಕೆ ತಕ್ಕ ವೇಷ ಭೂಷಣ ಧರಿಸಿರುವುದರಿಂದ ಅವರನ್ನು ಗುರುತಿಸುವುದು ಸ್ವಲ್ಪ ಕಷ್ಟ.  ಆರಂಭದ ಶ್ಲೋಕವನ್ನು ಹಾಡಿದವರು ಬಾಲಮುರಳಿಕೃಷ್ಣ.



ಗ್ರಾಮೊಫೋನ್‍ಗಳ ಕಾಲದ ಯಾವುದೇ ಸಮಾರಂಭಗಳಲ್ಲಿ ಧ್ವನಿವರ್ಧಕದ ಮೂಲಕ ಮೊದಲು ಕೇಳಿಬರುತ್ತಿದ್ದುದು ವಿನಾಯಕ ಚೌತಿ ಚಿತ್ರದಲ್ಲಿ ಅವರು ಹಾಡಿದ ವಾತಾಪಿ ಗಣಪತಿಂ ಮತ್ತು ಅದೇ ರೆಕಾರ್ಡಿನ ಇನ್ನೊಂದು ಬದಿಯಲ್ಲಿದ್ದ ದಿನಕರಾ ಶುಭಕರಾ ಹಾಡುಗಳು. ಅವರ ಅನೇಕ ಪ್ರೈವೇಟ್ ಧ್ವನಿಮುದ್ರಿಕೆಗಳೂ ಪ್ರಸಿದ್ಧವಾಗಿದ್ದು ಭಗವದ್ಗೀತೆಯ ಆಯ್ದ  107 ಶ್ಲೋಕಗಳನ್ನು ಸುಶ್ರಾವ್ಯವಾಗಿ ಹಾಡಿ ತಾನೇ ಅರ್ಥ ವಿವರಣೆ ನೀಡಿದ LP ಬಲು ಜನಪ್ರಿಯ. ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ ಎಂದು ಅವರ ಗೀತಾ ಪಾರಾಯಣ ಆರಂಭವಾದರೆ ಆ ಸ್ಥಳದಲ್ಲಿ ಮರಾಠಾ ದರ್ಬಾರ್ ಅಗರಬತ್ತಿ ತಾನಾಗಿ ಹೊತ್ತಿಕೊಂಡಂತಾಗಿ ದೈವೀಕ ವಾತಾವರಣ ಸೃಷ್ಠಿಯಾಗುತ್ತದೆ.  ಇಲ್ಲಿ ಅವರು ಬಳಸಿರುವ ರಾಗಗಳೆಲ್ಲವನ್ನೂ ಗುರುತಿಸಲು ಸಾಧ್ಯವಾದರೆ ಕರ್ನಾಟಕ ಸಂಗೀತದ ಬಗ್ಗೆ ಪಿ.ಹೆಚ್. ಡಿ ಪ್ರಬಂಧವನ್ನೇ ಬರೆಯಬಹುದು!



ಅವರು ತೆಲುಗು ಚಿತ್ರಸಂಗೀತದ ಕುಲದೇವರಾದರೂ ದಕ್ಷಿಣದ ಇತರ ಭಾಷೆಗಳ ಪಂಚಾಯತನದಲ್ಲೂ ಅವರಿಗೆ ಆದರದ ಸ್ಥಾನವಿತ್ತು. ಕನ್ನಡದಲ್ಲಿ ಸ್ವಲ್ಪ ಹೆಚ್ಚೇ ಇತ್ತು.  ಕನ್ನಡದಲ್ಲಿ ಅವರು ಹಾಡಿದ, ಸಂಗೀತ ನೀಡಿದ ಚಿತ್ರಗಳ ಸಂಖ್ಯೆ ಸೀಮಿತವಾದರೂ ಎಂದಾದರೊಮ್ಮೆ ಸೌಂದರರಾಜನ್ ಅಥವಾ ಸಿರ್ಕಾಳಿ ಗೋವಿಂದರಾಜನ್ ಹಾಡಿದಾಗ ಅನ್ನಿಸುತ್ತಿದ್ದಂತೆ ಬೇರೆ ಭಾಷೆಯವರಾರೋ ಹಾಡಿದರು ಅನ್ನಿಸುತ್ತಿರಲಿಲ್ಲ.  ಹಳೆಯ ತಲೆಮಾರಿನ ಸಂಗೀತ ನಿರ್ದೇಶಕರೆಲ್ಲರೂ 1956ರಿಂದ ಅವರ ಪ್ರತಿಭೆ ಬಳಸಿಕೊಂಡರೂ ಯಾಕೋ ರಾಜನ್ ನಾಗೇಂದ್ರ ನಿರ್ದೇಶನದಲ್ಲಿ ಅವರು ಒಂದೂ ಕನ್ನಡ ಹಾಡು ಹಾಡಿಲ್ಲ.   ಕನ್ನಡದಲ್ಲಿ ಅವರು ಎಸ್. ಜಾನಕಿ ಅವರೊಡನೆಯೂ ಒಂದೇ ಒಂದು ಹಾಡು ಹಾಡದಿರುವುದು ಗಮನ ಸೆಳೆಯುವ ಅಂಶ. ಸೋದರಿ, ಓಹಿಲೇಶ್ವರ ಕಾಲದಿಂದ ಆಗಾಗ ರಾಜಕುಮಾರ್ ಧ್ವನಿಯಾಗುತ್ತಿದ್ದ ಅವರು ರಾಜ್ ಮತ್ತು ಪಿ.ಬಿ.ಸ್  ಅವರ ನಡುವೆ ಶರೀರ - ಶಾರೀರ ಸಂಬಂಧ ನೆಲೆಗೊಂಡ ನಂತರವೂ ಅನೇಕ ಬಾರಿ ಅವರಿಗಾಗಿ ಹಾಡಿದಾಗ ಅಸಹಜ ಎಂದೇನೂ ಅನ್ನಿಸುತ್ತಿರಲಿಲ್ಲ.  ಡಬ್ಬಿಂಗ್ ಚಿತ್ರಗಳನ್ನು ಹೊರತುಪಡಿಸಿದರೆ ಕನ್ನಡದಲ್ಲಿ ಅವರು ಮೊತ್ತ ಮೊದಲು ಸಂಗೀತ ನಿರ್ದೇಶನ ಮಾಡಿದ ಚಿತ್ರ ವಾಲ್ಮೀಕಿ.  1970ರಲ್ಲಿ ಕೊನೆಯದಾಗಿ ನನ್ನ ತಮ್ಮ ಚಿತ್ರಕ್ಕೆ  ಸಂಗೀತ ನಿರ್ದೇಶನ  ಮಾಡಿದರೂ ತಾನು ಒಂದೂ ಹಾಡು ಹಾಡದೆ ಪಿ.ಬಿ.ಎಸ್ ಧ್ವನಿಯನ್ನು ಬಳಸಿಕೊಂಡಿದ್ದರು. ಧರ್ಮಸ್ಥಳ ಮಹಾತ್ಮೆಯ ಜಯ ಜಯ ಲೋಕಾವನ ಹಾಡು 1975ರ ಮಹದೇಶ್ವರ ಪೂಜಾಫಲ ಚಿತ್ರದಲ್ಲಿ ಮರುಬಳಕೆಯಾಗಿತ್ತು.

ಅವರ ಪ್ರಮುಖ ಕನ್ನಡ ಚಿತ್ರಗಳ ವಿವರಗಳುಳ್ಳ ready reckoner ರೀತಿಯ ತಖ್ತೆಯೊಂದನ್ನು ಇಲ್ಲಿ ನೋಡಬಹುದು. ಆಯಾ ಚಿತ್ರಗಳ ಒಂದೊಂದು ಪ್ರಾತಿನಿಧಿಕ ಹಾಡಿನ ಉಲ್ಲೇಖವೂ ಇದೆ. ಈ ಪಟ್ಟಿ ಪರಿಪೂರ್ಣವೆಂದು ನಾನು ಹೇಳಲಾರೆ.  ಪಾಂಡವ ವನವಾಸಮು, ಸಂಪೂರ್ಣ ರಾಮಾಯಣದಂತಹ ಇನ್ನೂ ಕೆಲವು ಡಬ್ಬಿಂಗ್ ಚಿತ್ರಗಳು ಇರಬಹುದು.  ಕನ್ನಡದ ಅವರ ಹಾಡುಗಳೆಲ್ಲವೂ ಅತಿ ಪ್ರಸಿದ್ಧವಾಗಿದ್ದು ಅಂತರ್ಜಾಲದಲ್ಲೂ ಸುಲಭವಾಗಿ ಸಿಗುವುದರಿಂದ ಇಲ್ಲಿ ಯಾವುದನ್ನೂ ಕೇಳಿಸುವುದಿಲ್ಲ.



ದೀರ್ಘ ಕಾಲ ಅನಾರೋಗ್ಯದಿಂದ ಬಳಲಿ  11 ಫೆಬ್ರವರಿ1974ರಂದು ನಿಧನರಾದಾಗ ಅವರಿಗೆ ಕೇವಲ 52ರ ವಯಸ್ಸು.  ಹೀಗಾಗದಿರುತ್ತಿದ್ದರೆ  ಕನಿಷ್ಠ ಮುಂದಿನ ಇನ್ನೂ ಇಪ್ಪತ್ತು ವರುಷ ಅವರ ಸಾರ್ವಭೌಮತ್ವವನ್ನು ಯಾರೂ ಕಸಿಯಲು ಸಾಧ್ಯವಾಗುತ್ತಿರಲಿಲ್ಲ.  ಘಂಟಸಾಲ ಇಲ್ಲದೆ ದಶಕಗಳೇ ಸಂದು ಹೋದರೂ ಅಭಿಮಾನಿಗಳ ಹೃದಯದಲ್ಲಿ ಅವರ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಾಗಿಲ್ಲ.  ತೆಲುಗು ಚಿತ್ರ ಸಂಗೀತದಲ್ಲಿ ಪ್ರಥಮ 100 ಸ್ಥಾನಗಳು ಅವರಿಗೇ.  101ರಿಂದ ಇತರರ ಗಣನೆ ಆರಂಭವಾಗುತ್ತದೆ ಎಂದು ಅವರ ಕಟ್ಟಾ ಅಭಿಮಾನಿಗಳು ಹೇಳುವುದಿದೆ. ಸಂಗೀತದ ಶೋ ರೂಮ್‌ಗಳ  ತೆಲುಗು ವಿಭಾಗದಲ್ಲಿ ಇಂದಿಗೂ ಅರ್ಧಕ್ಕಿಂತ ಹೆಚ್ಚಿನ ಶೆಲ್ಫುಗಳು ಅವರಿಗೇ  ಮೀಸಲಾಗಿರುತ್ತವೆ.  ಘಂಟಸಾಲ ಮಾಸ್ಟರ್ ಹೆಸರು ಹೇಳಿಕೊಂಡು ಬದುಕು ಕಟ್ಟಿಕೊಂಡವರು ಅಸಂಖ್ಯ ಮಂದಿ ಇದ್ದಾರೆ.