Monday, 29 October 2018

ಪೋಸ್ಟ್ ಮಾಸ್ತರರ ಮಸ್ತ್ ಮೆಲೊಡಿ


ಹಂಸಗೀತೆಯ ನಂತರ ಗಡ್ಡ ಬೆಳೆಸಿ ಅವಧೂತರಂತಾಗಿ ತನ್ನನ್ನು ಸಂಪೂರ್ಣವಾಗಿ ಕಲಾತ್ಮಕ ಚಿತ್ರಗಳಿಗೆ ಮುಡಿಪಾಗಿರಿಸಿದ ಗಣಪತಿ ವೆಂಕಟರಮಣ ಅಯ್ಯರ್ ಅಂದರೆ ಜಿ.ವಿ. ಅಯ್ಯರ್ 50ರ ದಶಕದಿಂದಲೂ ಕಮರ್ಷಿಯಲ್ ಚಿತ್ರಗಳಲ್ಲಿ ನಿರ್ಮಾಪಕನಾಗಿ, ನಿರ್ದೇಶಕನಾಗಿ, ನಟನಾಗಿ, ಗೀತ ರಚನಾಕಾರನಾಗಿ ಸಕ್ರಿಯರಾಗಿದ್ದವರು. 60ರ ದಶಕದಲ್ಲಿ ತಾಯಿ ಕರುಳು, ಬಂಗಾರಿ, ಲಾಯರ್ ಮಗಳು ಮುಂತಾದ ಚಿತ್ರಗಳ ಸಾಲಿನಲ್ಲಿ 1964ರಲ್ಲಿ ಅವರು ನಿರ್ಮಿಸಿ ನಿರ್ದೇಶಿಸಿದ ಒಂದು ಸದಭಿರುಚಿಯ ಚಿತ್ರ ಪೋಸ್ಟ್ ಮಾಸ್ಟರ್.

  
ಅಯ್ಯರ್ ಅವರ ಹಿಂದಿನ ಕೆಲವು ಚಿತ್ರಗಳಲ್ಲೂ ನಾಯಕಿಯಾಗಿದ್ದ ವಂದನಾ, ವೀರ ಸಂಕಲ್ಪದ ಮೂಲಕ ಬೆಳ್ಳಿತೆರೆಗೆ ಪರಿಚಯಿಸಲ್ಪಟ್ಟಿದ್ದ ಬಿ.ಎಂ. ವೆಂಕಟೇಶ್, ಟಿ.ಎನ್. ಬಾಲಕೃಷ್ಣ ಮುಂತಾದವರ ತಾರಾಗಣವಿದ್ದ ಈ ಚಿತ್ರದ ಪ್ರಮುಖ ಆಕರ್ಷಣೆ ಪೋಸ್ಟ್ ಮಾಸ್ತರರ ಪಾತ್ರದಲ್ಲಿ ಅಭಿನಯಿಸಿದ ಹಿರಿಯ ಪೋಷಕ ನಟ ಬಿ.ಕೆ. ಈಶ್ವರಪ್ಪ. ಕೆ.ಎಸ್. ಅಶ್ವಥ್ ಅವರಂತೆಯೇ ಸಹಜ ಅಭಿನಯಕ್ಕೆ ಹೆಸರಾಗಿದ್ದ  ಇವರು ಸಂಭಾಷಣೆ ಹೇಳುವ ರೀತಿ ಬಲು ಚಂದ.  ಕೆಲವು ಕೋನಗಳಲ್ಲಿ ಬಿ.ಆರ್. ಪಂತುಲು ಅವರಂತೆ ಕಾಣುತ್ತಿದ್ದ  ಇವರ ಬಗ್ಗೆ  ಹೆಚ್ಚಿನ ಮಾಹಿತಿ ಲಭ್ಯವಿಲ್ಲ.  ಯಾವ ಪತ್ರಿಕೆಯಲ್ಲೂ ಇವರ ಬಗ್ಗೆ ಓದಿದ ನೆನಪಿಲ್ಲ. 70ರ ದಶಕ ಕಾಲಿರಿಸುತ್ತಿದ್ದಂತೆ ಹಿನ್ನೆಲೆಗೆ ಸರಿಯತೊಡಗಿದ ಇವರು ಹೊಂಬಿಸಿಲು ಚಿತ್ರದಲ್ಲೊಮ್ಮೆ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

ಕಥಾ ಸಾರಾಂಶ
ಪೋಸ್ಟ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆನಂದತೀರ್ಥರಾಯರು ಶಿಸ್ತಿನ ಸಿಪಾಯಿ.  ಕಚೇರಿಗೆ ಯಾರಾದರೂ ಒಂದು ನಿಮಿಷ ತಡವಾಗಿ ಬಂದರೂ ಸಹಿಸುವವರಲ್ಲ. ಲೆಕ್ಕಾಚಾರದಲ್ಲಿ ಕಟ್ಟುನಿಟ್ಟು.  ಸರಿಯಾದ ಸಮಯಕ್ಕೆ ಬಂದು ಸರಿಯಾದ ಕೆಲಸ ಮಾಡುವುದಕ್ಕೆ ಸರಕಾರ ತಮಗೆ ಸಂಬಳ ಕೊಡುವುದು ಎಂದು ನಂಬಿದ್ದವರು.  ಹೆಂಡತಿ, ಮಗಳು ರೂಪಾ ಮತ್ತು ಇಬ್ಬರು ಪುಟ್ಟ ಗಂಡು ಮಕ್ಕಳ ಸುಖಿ ಸಂಸಾರ ಇವರದ್ದು.  ಮಗಳು ರೂಪಾ ತನ್ನ ಕಚೇರಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಜಯಣ್ಣನನ್ನು ಪ್ರಿತಿಸುತ್ತಿರುವುದು ಗೊತ್ತಾದ ರಾಯರು ಒಮ್ಮೆ ಸಿಟ್ಟಿಗೆದ್ದರೂ ಸರ್ವದಾ ಆಕೆಯ ಕ್ಷೇಮವನ್ನೇ ಬಯಸುತ್ತಿದ್ದ ಅವರು ಈ ಸಂಬಂಧಕ್ಕೆ ಒಪ್ಪಿ ನಿಶ್ಚಿತಾರ್ಥವನ್ನೂ ನೆರವೇರಿಸಿದರು. ಒಂದು ದಿನ  ಜಯಣ್ಣನ ಸುಪುರ್ದಿನಲ್ಲಿದ್ದ ಕಚೇರಿಯ ಹತ್ತು ಸಾವಿರ ರೂಪಾಯಿಗಳನ್ನು ಆತನ ಆಶ್ರಯದಾತನಾಗಿದ್ದ ಚಿಕ್ಕಪ್ಪ  ಅಪಹರಿಸಿದ. ಮರು ದಿನ ಪೋಸ್ಟ್ ಮಾಸ್ಟರ್   ಜನರಲ್ ಇನ್ಸ್‌ಪೆಕ್ಷನ್‌ಗಾಗಿ ಬರುವವರಿದ್ದರು.  ಧನ ದುರುಪಯೋಗದ ಅಪರಾಧಕ್ಕೆ ತನ್ನ ಅಳಿಯನಾಗುವವ ಜೈಲು ಪಾಲಾದರೆ ತನ್ನ ಮುದ್ದಿನ ಮಗಳ ಬಾಳು ಮೂರಾಬಟ್ಟೆಯಾಗುತ್ತದೆ ಎಂದೆಣಿಸಿದ  ಪೋಸ್ಟ್ ಮಾಸ್ಟರ್ ಆನಂದತೀರ್ಥರಾಯರು ಅಪವಾದವನ್ನು ತಾನು ಹೊತ್ತು ಕಚೇರಿಯಲ್ಲೊಂದು ಪತ್ರ ಬರೆದಿಟ್ಟು ರಾತೋ ರಾತ್ರಿ ಊರು ಬಿಟ್ಟು ಹೊರಟು ಹೋದರು.  ಆನಂದತೀರ್ಥರಾಯರು ನಿರಪರಾಧಿ, ತಪ್ಪು ತನ್ನದೇ ಎಂದು ಜಯಣ್ಣ ಹೇಳಿದಾಗ ಮನೆಯವರಿಗೆ ಇದ್ದುದರಲ್ಲೇ ಸ್ವಲ್ಪ ಸಮಾಧಾನವಾಯಿತು.  ಇತ್ತ ಕಡೆ ರೈಲು ನಿಲ್ದಾಣವೊಂದರಲ್ಲಿ ಮಲಗಿದ್ದ ಆನಂದತೀರ್ಥರಾಯರ ಚೀಲವನ್ನು ಕಳ್ಳನೊಬ್ಬ ಲಪಟಾಯಿಸಿ ಓಡುವಾಗ ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಹತನಾದ.  ಚೀಲದಲ್ಲಿದ್ದ ಬಟ್ಟೆ ಬರೆಗಳ ಆಧಾರದಿಂದ ಸತ್ತದ್ದು ಆನಂದತೀರ್ಥರಾಯರೇ ಎಂದು ನಿರ್ಧರಿಸಲಾಯಿತು.  ಮನೆಯವರಿಗೂ ಸುದ್ದಿ ಮುಟ್ಟಿತು.  ಆದರೆ  ಅವರು ಧೈರ್ಯಗೆಡದೆ ಆನಂದತೀರ್ಥರಾಯರು ಕಲಿಸಿದ್ದ ಆದರ್ಶದಂತೆ ನಡೆದು ಬದುಕು ಸಾಗಿಸತೊಡಗಿದರು.  ಮಗಳು ರೂಪಾ ತನ್ನ ಜವಾಬ್ದಾರಿಗಳು ಮುಗಿಯದೆ ಜಯಣ್ಣನನ್ನು ಮದುವೆಯಾಗಲು ನಿರಾಕರಿಸಿದಳು. ತಾನು ಏನಾದರೂ ಸಾಧಿಸಬೇಕೆಂದು ಜಯಣ್ಣ ಪೈಲಟ್ ಆಗಿ ಸೇನೆಯಲ್ಲಿ ಭರ್ತಿ ಆದ. ರಾಯರ ಪತ್ನಿಯು ಕೊರಗಿ ಕೊರಗಿ ದೃಷ್ಟಿ ಕಳೆದುಕೊಂಡಳು. ಹುಡುಗರು ದೊಡ್ಡವರಾಗಿ ಒಬ್ಬ ಸ್ಕೂಲ್ ಇನ್ಸ್ಪೆಕ್ಟರ್ ಮತ್ತು ಇನ್ನೊಬ್ಬ ಸಂಗೀತಕಾರನಾದ. ಹೀಗಿರುತ್ತ ಒಂದು ದಿನ ಜಯಣ್ಣ ವೈರಿಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಎಂಬ ಟೆಲಿಗ್ರಾಮ್ ಬಂತು.

ಊರೂರು ಅಲೆಯುತ್ತಿದ್ದ  ಆನಂದತೀರ್ಥರಾಯರು ಸಹೃದಯಿ ಪೋಲೀಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಆಶ್ರಯ ಪಡೆದರು. ಅವರ ಮಗಳಲ್ಲಿ ರೂಪಾಳನ್ನು ಕಂಡ ರಾಯರ ಮನಸ್ಸಿಗೆ ನೆಮ್ಮದಿ ಸಿಕ್ಕಿತು.  ಅಲ್ಲಿಯ ಶಾಲೆಯಲ್ಲಿ ಜವಾನನ ಕೆಲಸವನ್ನೂ ಮಾಡತೊಡಗಿ ಎಲ್ಲರ ಅಚ್ಚುಮೆಚ್ಚಿನವರಾದರು. ಒಂದು ದಿನ ತನ್ನ ಮಗನೇ ಇನ್ಸ್ಪೆಕ್ಟರ್ ಆಗಿ ಆ ಶಾಲೆಗೆ ಬಂದದ್ದನ್ನು ಕಂಡ ರಾಯರು ತನ್ನ ಗುರುತು ತಿಳಿಸದೆ ಮನದಲ್ಲೇ ಹಿರಿಹಿರಿ ಹಿಗ್ಗಿದರು.

ರಾಯರ ಪತ್ನಿಯ ದೃಷ್ಟಿ ಮರಳಿತೆ? ಜಯಣ್ಣ ನಿಜವಾಗಿಯೂ ಸತ್ತಿದ್ದನೇ? ರಾಯರು ಮತ್ತೆ ಮನೆಗೆ ಬಂದರೇ? ಒಡೆದ ಕುಟುಂಬ ಒಂದಾಯಿತೇ?  ಇವೆಲ್ಲವನ್ನೂ ಬೆಳ್ಳಿಪರದೆಯ ಮೇಲೆ ನೋಡಿ.
* * * * * *

ಜಿ.ವಿ.ಅಯ್ಯರ್ ಅವರ ಹಿಂದಿನ ಚಿತ್ರಗಳಿಗೆಲ್ಲ ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶನವಿರುತ್ತಿತ್ತು.  ಆದರೆ ಪೋಸ್ಟ್ ಮಾಸ್ಟರ್ ಚಿತ್ರಕ್ಕೆ ಸಂಗೀತ ನೀಡಿದವರು ವಿಜಯಭಾಸ್ಕರ್. ಗೀತೆಗಳನ್ನು ಬರೆದವರು ಸ್ವತಃ ಜಿ.ವಿ. ಅಯ್ಯರ್.  ಈ ಚಿತ್ರದ ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ ಹಾಡಂತೂ ನಾಡಗೀತೆಯೇ ಆಗಿ ಹೋಗಿದೆ.  ಮುತ್ತಿನ ನತ್ತೊಂದು ಮತ್ತು ನಾನೆಷ್ಟೋ ಸಲ ನೋಡಿದ ಚಂದ್ರ ಹಾಡುಗಳೂ ಸಾಕಷ್ಟು ಜನಪ್ರಿಯವಾಗಿದ್ದವು.  ಆದರೆ ಆ ಚಿತ್ರದ  ಎರಡು ಶ್ರೇಷ್ಠ  ಗೀತೆಗಳು ಯಾವುವೆಂದು ಈಗ ನೋಡೋಣ.

ಇಂದೇನು ಹುಣ್ಣಿಮೆಯೊ
ಪಿ.ಬಿ.ಶ್ರೀನಿವಾಸ್ ಮತ್ತು ಎಸ್. ಜಾನಕಿ ಅವರ ಸರ್ವಕಾಲಿಕ ಶ್ರೇಷ್ಠ  ಯುಗಳಗೀತೆಗಳ ಸಾಲಿಗೆ ಸೇರಬೇಕಾದ ಡ್ರೀಮ್ ಸೀಕ್ವೆಂಸಿನ ಈ ಹಾಡಿಗೆ ವಿಜಯಭಾಸ್ಕರ್ ಯಮನ್ ಕಲ್ಯಾಣ್ ರಾಗವನ್ನು ಮೂಲವಾಗಿಟ್ಟುಕೊಂಡು ಕನಸಿನ ಲೋಕದ  ಸಂಗೀತವನ್ನೇ ಸಂಯೋಜಿಸಿದ್ದಾರೆ.  ಸಾಹಿತ್ಯದ ಭಾಗ ಹೆಚ್ಚೇನೂ ಇರದ ಇದರ 27 ಸೆಕೆಂಡಿನಷ್ಟು ದೀರ್ಘ preludeನಲ್ಲಿ ಸಿತಾರ್, ಮ್ಯಾಂಡೊಲಿನ್, ಗ್ರೂಪ್ ವಯಲಿನ್ಸ್, ಸುರ್ ಬಹಾರ್, ಕೊಳಲು-ಕ್ಲಾರಿನೆಟ್, ವೈಬ್ರಾಫೋನ್‌ಗಳಿಗೆ ಹಿನ್ನೆಲೆಯಾಗಿ waltz ಶೈಲಿಯಲ್ಲಿ ಗಿಟಾರ್ ರಿದಂ ಇದೆ.  ಪಿ.ಬಿ.ಎಸ್ ಅವರ ಮೃದು ಮಧುರ ದನಿಯಲ್ಲಿ ಪಲ್ಲವಿ ಆರಂಭವಾಗುತ್ತಿದ್ದಂತೆ ತಬ್ಲಾದ ದಾದ್ರಾ ಠೇಕಾ  ಜೊತೆಗೂಡುತ್ತದೆ. ಹಿನ್ನೆಲೆಯಲ್ಲಿ ವಯಲಿನ್‌ಗಳ ಕೌಂಟರ್ ಮೆಲೊಡಿ ಸಾಗುತ್ತಿರುತ್ತದೆ. ಪಿ.ಬಿ.ಎಸ್ ಸಾಲುಗಳು ಮುಗಿಯುತ್ತಿದ್ದಂತೆ ಜಾನಕಿ ಪಲ್ಲವಿಯನ್ನು ಮುಂದುವರಿಸುತ್ತಾರೆ. ಮತ್ತೆ ಗಿಟಾರಿನ waltz ರಿದಂ ಜೊತೆ ವಯಲಿನ್ಸ್, ವೈಬ್ರಾಫೋನ್‌, ಕೊಳಲು-ಕ್ಲಾರಿನೆಟ್, ಮ್ಯಾಂಡೊಲಿನ್‌ಗಳ ಸಂಗಮದ  BGM ಮುಗಿಯುತ್ತಿದ್ದಂತೆ ಹಾಡಿನ ಗತಿ ಒಮ್ಮಿಂದೊಮ್ಮೆಗೆ ಢೋಲಕ್‌ನ 6/8 ಪ್ಯಾಟರ್ನಿಗೆ ಬದಲಾಗಿ ಕೇಳುಗರಿಗೆ ವಿಶಿಷ್ಠ ಅನುಭವ ಒದಗಿಸುತ್ತದೆ.  ಪಿ.ಬಿ.ಎಸ್ ಅವರೇ ಹಾಡುವ ಮೊದಲ ಚರಣಕ್ಕೆ ಜಾನಕಿ ಆಲಾಪದ counter ಮೂಲಕ ಜೊತೆ ನೀಡುತ್ತಾರೆ. ಚರಣ ಮುಗಿದ ಮೇಲೆ ಪಲ್ಲವಿಯ ಕಿರು ಅಂಶ ಮಾತ್ರ ಪುನರಾವೃತ್ತಿಯಾಗುತ್ತದೆ.  BGM ನಂತರ  ಎರಡನೆ ಚರಣವನ್ನು  ಜಾನಕಿ ಹಾಡುವಾಗ  ಪಿ.ಬಿ.ಎಸ್ ಆಲಾಪದ counter ಒದಗಿಸುತ್ತಾರೆ.  ನಿಲ್ಲು ನೀ ನಿಲ್ಲು ನೀ ನೀಲವೇಣಿ, ಇವಳು ಯಾರು ಬಲ್ಲೆಯೇನು, ರವಿವರ್ಮನ ಕುಂಚದ ಬಲೆ, ಪಾಡಾದ ಪಾಟ್ಟೆಲ್ಲಾಂ ಪಾಡವಂದಾಳ್ ಮುಂತಾದ ಹಾಡುಗಳಲ್ಲಿದ್ದಂತೆ ಗಾಯಕರ ಹಾಡುಗಳಿಗೆ ಗಾಯಕಿ ಆಲಾಪ್‌ನ counter ಜೊತೆ ಕೊಡುವುದೇ ಹೆಚ್ಚು.  ಈ ರೀತಿ ಗಾಯಕಿಯ ಸಾಲುಗಳಿಗೆ ಗಾಯಕ ಆಲಾಪ್ ಮೂಲಕ ಜೊತೆಯಾಗುವುದು ಬಲು ಕಮ್ಮಿ.  ಹಿಂದಿಯಲ್ಲಿ ಲೀಡರ್ ಚಿತ್ರದ ದಯ್ಯಾರೆ ದಯ್ಯಾ ಎಂಬ ಆಶಾ ಭೋಸ್ಲೆ ಹಾಡಿಗೆ ರಫಿ ಆಲಾಪ್ ಮಾತ್ರ ಹಾಡಿದ ಇಂತಹ ಒಂದು ಉದಾಹರಣೆ ಇದೆ.  ಹಾಡಿನ ಕೊನೆಯಲ್ಲಿ ಪಲ್ಲವಿಯನ್ನು ಜೊತೆಯಾಗಿ ಹಾಡುವಾಗ ಒಂದೆಡೆ ಉದ್ಯಾನದಲ್ಲಿ ನಡೆಯುತ್ತಿದ್ದವರು ಕವಲೊಡೆದ ದಾರಿಯಲ್ಲಿ ಕೊಂಚ ದೂರ ಬೇರೆ ಬೇರೆಯಾಗಿ ಸಾಗಿ ಮತ್ತೆ ಒಟ್ಟಿಗೆ ನಡೆದಂತೆ ವಿಭಿನ್ನ ರೀತಿಯಲ್ಲಿ ಹಾಡಿ ಮತ್ತೆ ಜೊತೆಗೂಡುತ್ತಾರೆ.

ಇತ್ತೀಚಿನ ವರೆಗೆ ಪೋಸ್ಟ್ ಮಾಸ್ಟರ್ ರಾಜ್ ಅವರ ಚಿತ್ರವೆಂದೇ ಅಂದುಕೊಂಡಿದ್ದೆ!  ಈ ಹಾಡು ಕೇಳುವಾಗಲೆಲ್ಲ ರಾಜ್ ಅವರ ಮುಖವೇ ಕಣ್ಣೆದುರು ಬರುತ್ತಿತ್ತು.  ಅಂತರ್ಜಾಲದಲ್ಲಿ ಚಿತ್ರ ನೋಡಿದ ಮೇಲಷ್ಟೇ ಇದು ಬಿ.ಎಂ. ವೆಂಕಟೇಶ್ ಮತ್ತು ವಂದನಾ ಅವರ ಮೇಲೆ ಚಿತ್ರೀಕರಿಸಲಾದ ಹಾಡು ಎಂದು ತಿಳಿದದ್ದು.


ಇಂದೇನು ಹುಣ್ಣಿಮೆಯೊ
ರತಿದೇವಿ ಮೆರವಣಿಯೊ
ಆಕಾಶದ ಏಳು ಬಣ್ಣಗಳ ಮೇಳವೊ |
ನವರಾಗ ಪಲ್ಲವಿಯೊ
ಸವಿಮಾತ ಹೊಗಳಿಕೆಯೊ
ಯೌವನದ ಕಲ್ಪನೆಯ ಕವಿಯಾಸೆ ಹೂಮಳೆಯೊ
ನವರಾಗ ಪಲ್ಲವಿಯೊ ||

ನೆಲಹೊತ್ತ ಹೂ ತೇರೆ
ನಲ್ಲನೆದೆ ಹೊಂದೇರೆ
ಇಲ್ಲದಿರೆ ನೀ ಮುಂದೆ
ಎಲ್ಲ ಹಗಲಿನ ತಾರೆ |

ಹರೆಯದ ನಾವೆಯಲಿ
ಸರಸ ಸಲ್ಲಾಪದಲಿ
ನಡೆಸುವ ಅಂಬಿಗನ
ಕರಪಿಡಿಯೆ ಜೋಕಾಲಿ |

ನವರಾಗ ಪಲ್ಲವಿಯೊ
ಇಂದೇನು ಹುಣ್ಣಿಮೆಯೊ
ರತಿದೇವಿ ಮೆರವಣಿಯೊ
ಆಕಾಶದ ಏಳು ಬಣ್ಣಗಳ ಮೇಳವೊ
ಇಂದೇನು ಹುಣ್ಣಿಮೆಯೊ ||

ಎರಡು ರೆಂಬೆಯ ನಡುವೆ ಬೆಳೆದ
ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ಹೆಣ್ಣು ಒಪ್ಪಿಸುವ ಹಾಡುಗಳನ್ನು ಗಾಯಕಿಯರೇ ಹಾಡುವುದು. ಆದರೆ ಈ ಅಪರೂಪದ ಹಾಡನ್ನು ಭಾವಪೂರ್ಣವಾಗಿ ಹಾಡಿದ್ದು ರಘುನಾಥ ಪಾಣಿಗ್ರಾಹಿ. ಆ ಮೇಲೆ ನೀಲ್ ಕಮಲ್ ಚಿತ್ರದಲ್ಲಿ ರಫಿ ಹಾಡಿದ ಇಂಥದೇ ಹಾಡು ಬಾಬುಲ್ ಕೀ ದುವಾಯೇ ಲೇತಿ ಜಾ ಕೂಡ ಜನಪ್ರಿಯವಾಯಿತು. ಜಿ.ಕೆ. ವೆಂಕಟೇಶ್, ಟಿ.ಜಿ. ಲಿಂಗಪ್ಪ ಮುಂತಾದವರ ನಿರ್ದೇಶನದಲ್ಲಿ ಪಾಣಿಗ್ರಾಹಿ ಅವರ ಕೆಲವು ಹಾಡುಗಳಿದ್ದರೂ ವಿಜಯಭಾಸ್ಕರ್ ಇವರಿಂದ ಹಾಡಿಸಿದ್ದು ಕಮ್ಮಿ.  ಮನ ಮೆಚ್ಚಿದ ಮಡದಿ ಚಿತ್ರದ ಲವ್ ಲವ್ ಎಂದರೇನು ಹಾಡಿಗೆ ಪದ್ಯಾವಳಿಯಲ್ಲಿ ಇವರ ಹೆಸರಿದ್ದರೂ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಹಾಡಿದ ವರ್ಷನ್ ಇದೆ.  60ರ ದಶಕದಲ್ಲಿ ಒಡಿಸ್ಸಿ  ಕಲಾವಿದೆ ಸಂಯುಕ್ತಾ ಅವರನ್ನು ಮದುವೆಯಾದ ಮೇಲೆ ಇವರು ಚಿತ್ರರಂಗಕ್ಕೆ ವಿದಾಯ ಹೇಳಿ ನೃತ್ಯರಂಗಕ್ಕೆ ತಮ್ಮನ್ನು ಮುಡಿಪಾಡಿಗಿಸಿಕೊಂಡರು.


ಆಶ್ಚರ್ಯವೆಂದರೆ ಇಷ್ಟು ಸುಂದರವಾದ ಈ ಹಾಡು ಪೋಸ್ಟ್ ಮಾಸ್ಟರ್ ಚಿತ್ರದ್ದೆಂದು ನೆನಪಿರುವುದಿರಲಿ,  ಹೀಗೊಂದು ಹಾಡು ಇದೆಯೆಂದೇ ನನಗೆ ಮರೆತು ಹೋಗಿತ್ತು!    Pathos ಮೂಡಿಗೆ ಸರಿ ಹೊಂದುವಂತೆ ಭೈರವಿ ಥಾಟಿನಲ್ಲಿ ಏಳು ಅಕ್ಷರದ ತ್ರಿಪುಟ ತಾಳದಲ್ಲಿ ಸಂಯೋಜಿಸಲ್ಪಟ್ಟಿರುವ ಹಾಡು ಶಹನಾಯಿಯ ರೋದನದೊಂದಿಗೆ ಆರಂಭವಾಗಿ ಸರೋದ್, ವಯಲಿನ್‌ಗಳ ಹಿಮ್ಮೇಳದೊಂದಿಗೆ ಮುಂದುವರಿಯುತ್ತದೆ.  ಸಾಲುಗಳ ಮಧ್ಯೆ ಬಾಂಸುರಿಯ ಪೂರಕ bridge noteಗಳು ಇವೆ. ಎರಡನೆ ಚರಣ ಮೊದಲಿನದಕ್ಕಿಂತ ಮೇಲಿನ ಸ್ಥಾಯಿಯಲ್ಲಿ ಆರಂಭವಾಗುತ್ತದೆ.  ಈ ಹಾಡನ್ನು ಕಂಪೋಸ್ ಮಾಡುವಾಗ ಕಾಬುಲಿವಾಲಾ ಚಿತ್ರದ ಏ ಮೆರೇ ಪ್ಯಾರೇ ವತನ್ ವಿಜಯಭಾಸ್ಕರ್ ಮನದಲ್ಲಿದ್ದಿರಬಹುದು ಎಂದು ನನ್ನ ಊಹೆ.

ಹಾಡಿನ  ಸಾಹಿತ್ಯ ಬಲು ಅರ್ಥಪೂರ್ಣವಾಗಿದೆ. ಮದುವೆಯಾಗಿ ಗಂಡನ ಮನೆಗೆ ಹೊರಟು ನಿಂತ ಹೆಣ್ಣನ್ನು ತಂದೆ ತಾಯಿಗಳೆಂಬ ಎರಡು ರೆಂಬೆಗಳ ನಡುವೆ ಬೆಳೆದ ಒಂಟಿ ಗುಲಾಬಿಗೆ ಹೋಲಿಸುವ ರಮ್ಯ ಕಲ್ಪನೆ ಇಲ್ಲಿದೆ.  ಆ ಹೂವನ್ನು ಮುಡಿದ ನಲ್ಲನ ಮನೆಗೆ ಆಕೆ ಮುದದಿಂದ ತೆರಳುತ್ತಾಳೆ.  ಗಂಡಸರೆಂದಾದರೂ ಗುಲಾಬಿ ಹೂ ಮುಡಿಯುವುದುಂಟೇ. ಆದರೆ ಕವಿ ಕಲ್ಪನೆಯಲ್ಲಿ ಎಲ್ಲವೂ ಸಾಧ್ಯ. ಈ ಸಾಲುಗಳಲ್ಲಿ ಇನ್ನೊಂದು ಸೂಕ್ಷ್ಮವೂ ಇದೆ.  ತಂದೆ ತಾಯಿಗಳನ್ನು ಅಗಲಿ ಗಂಡನ ಮನೆಗೆ ಹೋಗುವ ಹೆಣ್ಣು ರೋದಿಸುವುದು ಹಿಂದೆ ಇದ್ದ ಪರಿಪಾಠ.  ಆಗ ಬಲು ಚಿಕ್ಕ ವಯಸ್ಸಿನಲ್ಲೇ ವಿವಾಹವಾಗುತ್ತಿದ್ದುದರಿಂದ ಅದು ಸಹಜವೂ ಹೌದು.  ಆದರೆ ಈಗ ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ತಲುಪಿದ ಮೇಲೆಯೇ ಮದುವೆಯಾಗುವುದರಿಂದ ಇಲ್ಲಿ ಹೇಳಿದಂತೆ ಮುದದಿಂದಲೇ ಗಂಡನ ಮನೆಗೆ ತೆರಳುತ್ತಾರೆ!

ಈಗ ಎರಡು ರೆಂಬೆಗಳ ನಡುವಿನ ಎಲೆಗಳ ನಡುವೆ ಅಡಗಿ ಕುಳಿತಿದ್ದ ಈ ಬಿಡಿ ಗುಲಾಬಿಯ ಸೌಂದರ್ಯವನ್ನು ಆಸ್ವಾದಿಸೋಣ.


ಎರಡು ರೆಂಬೆಯ ನಡುವೆ ಬೆಳೆದ
ಬಿಡಿ ಗುಲಾಬಿಯ ಹೂವಿದು
ಮುಡಿದ ನಲ್ಲನ ಮನೆಗೆ ಒಲಿದು
ಮುದದಿ ತೆರಳುತಲಿರುವುದು


ನಡೆದ ದಾರಿಗೂ ನಡೆವ ದಾರಿಗೂ
ಬಹಳ ಅಂತರವಿರುವುದು
ಮೆಲ್ಲ ನಡಿಯಿಡು ಸಹನೆ ಕಳೆಯದೆ
ಎಲ್ಲರೊಡನಿರು ವಿನಯದೆ

ಮಡಿಲ ತುಂಬಿದ ಗುಣದ ಬಾಗಿಲ
ಎಡೆ ಬಿಡದೆ ಕಾಪಾಡಿಕೋ
ಕರುಣೆ ತುಂಬಿದ ರಸದ ಕನ್ನಡಿ
ನಿನ್ನ ಹೃದಯವ ಮಾಡಿಕೊ

* * *

ಪೋಸ್ಟ್ ಮಾಸ್ಟರ್ ಚಿತ್ರ ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು.  ನಾನು ದುಡಿದ ಅಂಚೆ ತಂತಿ ಇಲಾಖೆಯೊಂದಿಗೆ ನಂಟು ಹೊಂದಿದ ಈ ಚಿತ್ರ ನನಗೆ ಹೆಚ್ಚು ಆಪ್ತವೆನಿಸಿತು!

ಪುಟ್ಟ ಬಾಲಕ ತನ್ನ ಮನೆಯ ಬಗ್ಗೆ ಬರೆದ ಪ್ರಬಂಧವೊಂದನ್ನು ಮನೆಯವರೆಲ್ಲರೂ relay ಮಾದರಿಯಲ್ಲಿ ಒಬ್ಬೊಬ್ಬರಾಗಿ ಓದುವ  ವಿಶಿಷ್ಟ ದೃಶ್ಯವೊಂದನ್ನು ಇಲ್ಲಿ ನೋಡಬಹುದು.



8 comments:

  1. ಮುಖ್ಯ ಪಾತ್ರಧಾರಿ ನಟ ಈಶ್ವರಪ್ಪನವರು ಎಂದು ತಿಳಿದೇ ಇರಲಿಲ್ಲ! ಬಿ ಆರ್ ಪಂತುಲು ಎಂದೇ ತಿಳಿದಿದ್ದೆ!

    Kiran Surya(FB)

    ReplyDelete
  2. ಧನ್ಯವಾದಗಳು. ರಘುನಾಥ್ ಪಾಣಿಗ್ರಾಹಿಯವರು ಹಾಡಬೇಕಾದ ಭಕ್ತ ಕನಕದಾಸ ಹಾಡುಗಳು ಅವರ ನಿರ್ಗಮನದಿಂದ ಪಿ.ಬಿ.ಶ್ರೀನಿವಾಸರ ಪಾಲಿಗೆ ಬಂತು ಎಂದು ಓದಿದ ನೆನಪು.
    ಅಳಿದುಹೋಗಲಿದ್ದ ಕಥಕ್ ಕಲೆಯನ್ನು ಎತ್ತಿ ನಿಲ್ಲಿಸಲು ಬದುಕು, ಪ್ರತಿಭೆ ಮುಡುಪಾಗಿಟ್ಟ ಸಂತ ಈ ರಘುನಾಥ ಪಾಣಿಗ್ರಾಹಿ.
    ಅರಿಶಿನ ಕುಂಕುಮದ "ಗೂಡಿನಲೀ ಒಂದು ಬಾನಾಡಿ" ಇವರ ದನಿಯಲ್ಲಿಯೇ ಇದೆ.ಅದೂ ವಿಜಯಭಾಸ್ಕರ್ ಸಂಗೀತ. ಇವರ ದನಿಯ ರೇಂಜ್ ಬಹಳ ವಿಸ್ತಾರವಾದದ್ದು ಮತ್ತು ವಿಶಿಷ್ಟ ಗುಣದ್ದು.

    Sudarshan Gururaja Rao(FB)

    ReplyDelete
    Replies
    1. ಗೂಡಿನಲಿ ಒಂದು ಬಾನಾಡಿ ಚಿನ್ನದ ಗೊಂಬೆ ಚಿತ್ರದ್ದು. ಟಿ.ಜಿ. ಲಿಂಗಪ್ಪ ಸಂಗೀತ.

      Delete
    2. ಓಹೋ.. music India ದಲ್ಲಿ ಅರಿಶಿನ ಕುಂಕುಮದ ಹೆಸರಲ್ಲಿದೆ.

      Sudarshan Gururaja Rao(FB)

      Delete
    3. ಸರಿಯಾಗಿ ಪರಿಶೀಲಿಸದೆ ತಪ್ಪು ಮಾಹಿತಿ ದಾಖಲಿಸುತ್ತಾರೆ.

      Delete
  3. ಚಿದಂಬರ್ ರವರೆಗೆ ಪೋಸ್ಟ್ ಮಾಸ್ಟರ್ ಚಿತ್ರದ ಇಂದೇನು ಹುಣ್ಣಿಮೆಯೊ ಹಾಡು ಹಿಂದಿ ಚಿತ್ರ ಚೌದುವೀಕಾ ಚಾಂದ್ ಚಿತ್ರದ ಟೈಟಲ್ ಸಾಂಗ್ ತರ ಇಲ್ಲವೇ ?

    ReplyDelete
    Replies
    1. ನೀವು ಹೇಳಿದ ಮೇಲೆ ಮೊದಲ ಸಾಲಲ್ಲಿ ಅಲ್ಪ ಹೋಲಿಕೆ ಇದೆ ಎಂದು ನನಗೂ ಅನ್ನಿಸುತ್ತಿದೆ. ಆದರೆ ಎರಡೂ ಹಾಡುಗಳ ತಾಳ, ಮೀಟರ್ ಬೇರೆ ಬೇರೆ ಆದ್ದರಿಂದ ಇದು ಗಮನಕ್ಕೆ ಬರುವುದಿಲ್ಲ.

      Delete
  4. Sir,

    Dhanyavaadagalu post master chitrada eradu rembeya naduve beleda haadu kelisiddakkaagi

    ReplyDelete

Your valuable comments/suggestions are welcome