Sunday 10 June 2018

ಮುರಿಯದ ಮನೆಯ ಮರೆಯಾದ ಗೀತಗುಚ್ಛ


ಮುರಿಯದ ಚಿತ್ರ ಎಂಬ ಶೀರ್ಷಿಕೆ ಹೊಂದಿದ ಚಿತ್ರ ವಿಮರ್ಶೆಯೊಂದು ಗೋಕುಲ ವಾರಪತ್ರಿಕೆಯಲ್ಲಿ ಪ್ರಕಟವಾದದ್ದು ನನಗಿನ್ನೂ ನೆನಪಿದೆ. ಸೆನ್ಸಾರಿನವರು ಕತ್ತರಿಯನ್ನು ಕೈಗೆತ್ತಿಕೊಳ್ಳಲು ಅವಕಾಶವೇ ಕೊಡದ ಮುರಿಯದ ಮನೆ ಚಿತ್ರವನ್ನು ಕುರಿತಾಗಿತ್ತದು. 1964ರಲ್ಲಿ ಬಿಡುಗಡೆಯಾದ ಸದಭಿರುಚಿಯ ಈ ಚಿತ್ರ ಒಂದು ದೃಶ್ಯವೂ ಕತ್ತರಿಸಲ್ಪಡದೆ ಸೆನ್ಸಾರಲ್ಲಿ ತೇರ್ಗಡೆಯಾಗಿತ್ತಂತೆ.  ರಾಜಕುಮಾರ್, ಜಯಂತಿ, ಅಶ್ವಥ್, ಉದಯಕುಮಾರ್, ಬಾಲಕೃಷ್ಣ, ಪಂಢರಿ ಬಾಯಿ ಮುಖ್ಯ ಪಾತ್ರಗಳಲ್ಲಿದ್ದ ಈ ಚಿತ್ರದಲ್ಲಿ ಅತಿಥಿ ಕಲಾವಿದನ ನೆಲೆಯಲ್ಲಿ ನರಸಿಂಹರಾಜು ಕೂಡ ಇದ್ದರು. ಅಂದಿನ ದಿನಗಳಲ್ಲಿ ಬಾಕ್ಸಾಫೀಸಿನ ಟ್ರಂಪ್ ಕಾರ್ಡ್ ಆಗಿದ್ದ ಅವರು ಅತಿಥಿ ಆದರೂ ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದರು. ಗುಬ್ಬಿ ಕಂಪನಿಯ ನಾಟಕರತ್ನ ಜಿ.ಹೆಚ್. ವೀರಣ್ಣ ಮತ್ತಿತರರು ಕರ್ನಾಟಕ ಫಿಲಂಸ್  ಲಾಂಛನದಲ್ಲಿ ತಯಾರಿಸಿದ ಈ ಚಿತ್ರಕ್ಕೆ ವೈ.ಆರ್. ಸ್ವಾಮಿ ನಿರ್ದೇಶನವಿತ್ತು. ಕು.ರ. ಸೀತಾರಾಮ ಶಾಸ್ತ್ರಿ ಸಂಭಾಷಣೆ ಮತ್ತು ಗೀತೆ ಬರೆದಿದ್ದರು.  ಅವರ ಸಂಭಾಷಣೆ ಬಾಯಿಂದ ನಿರರ್ಗಳವಾಗಿ ಹೊರಡಬೇಕಾದರೆ ಕಲಾವಿದರ ನಾಲಗೆ ತುಂಬಾ ಹರಿತವಾಗಿರಬೇಕಾಗುತ್ತದೆ. ಈ ಚಿತ್ರದಲ್ಲಿ ನಟಿಸಿದವರೆಲ್ಲರೂ ರಂಗಭೂಮಿಯ ಹಿನ್ನೆಲೆಯುಳ್ಳವರಾಗಿದ್ದು ಹರಿತ ನಾಲಗೆಯವರೇ ಆಗಿದ್ದರು.  ವಿಶೇಷವಾಗಿ ರಾಜಕುಮಾರ್ ಮತ್ತು ಅಶ್ವಥ್ ಅವರು ಗ್ರಾಮೀಣ ಸೊಗಡಿನ  ಸಂಭಾಷಣೆಗಳನ್ನು ನಿರ್ವಹಿಸಿದ ರೀತಿ ಅನನ್ಯ.  ಯೂಟ್ಯೂಬಿನಲ್ಲಿ ಲಭ್ಯವಿರುವ ಈ ಚಿತ್ರವನ್ನು ಸಂಭಾಷಣೆಗಳಿಗಾಗಿಯೇ ಒಮ್ಮೆ ಅಗತ್ಯ ನೋಡಿ.

ಆಗಿನ ಕಾಲದಲ್ಲಿ ದಕ್ಷಿಣ ಭಾರತದ ಅನೇಕ ಚಿತ್ರಗಳು ದೇಶದ ಬೇರೆ ಬೇರೆ ಭಾಷೆಗಳಲ್ಲಿ ತಯಾರಾಗಿ ನಿಜ ಅರ್ಥದಲ್ಲಿ ರಾಷ್ಟ್ರೀಯ ಭಾವೈಕ್ಯ ಸಾಧಿಸುತ್ತಿದ್ದವು.  ಮುರಿಯದ ಮನೆ ಕೂಡ  ತಮಿಳಿನಲ್ಲಿ ಭಾಗ ಪಿರಿವಿನೈ ಎಂಬ ಹೆಸರಲ್ಲಿ ಶಿವಾಜಿ ಗಣೇಶನ್ ಮತ್ತು ಬಿ.ಸರೋಜಾದೇವಿ ತಾರಾಗಣದೊಂದಿಗೆ 1959ರಲ್ಲಿ ತೆರೆ ಕಂಡಿತ್ತು,  1961ರಲ್ಲಿ ತಯಾರಾದ  ಕಲಸಿವುಂಟೆ ಕಲದು ಸುಖಮ್ ತೆಲುಗು ಚಿತ್ರದಲ್ಲಿ  ಎನ್.ಟಿ.ಆರ್ ಮತ್ತು ಸಾವಿತ್ರಿ ನಟಿಸಿದ್ದರು.  ಆ ಮೇಲೆ 1965ರಲ್ಲಿ ಸುನೀಲ್ ದತ್ತ್ ಮತ್ತು ನೂತನ್ ನಟಿಸಿದ ಹಿಂದಿಯ ಖಾನ್‌ದಾನ್ ವರ್ಣದಲ್ಲಿ ನಿರ್ಮಾಣವಾಯಿತು. ತಮಿಳಿನಲ್ಲಿ ವಿಶ್ವನಾಥನ್ ರಾಮಮೂರ್ತಿ, ತೆಲುಗಿನಲ್ಲಿ ಮಾಸ್ಟರ್ ವೇಣು ಮತ್ತು ಹಿಂದಿಯಲ್ಲಿ ರವಿ ಅವರ ಸಂಗೀತವಿತ್ತು. 1977ರಲ್ಲಿ ಶ್ರೀದೇವಿ ಮತ್ತು ಕಮಲಹಾಸನ್ ನಟಿಸಿದ್ದ ನಿರಕುಡಮ್ ಮಲಯಾಳಮ್ ಚಿತ್ರ ಕೂಡ ಇದೇ ಕಥೆ ಹೊಂದಿತ್ತು ಎನ್ನಲಾಗಿದೆ.  ಕನ್ನಡ ಚಿತ್ರವನ್ನು ಹೊರತುಪಡಿಸಿ ಉಳಿದೆಲ್ಲ ಅವತರಣಿಕೆಗಳನ್ನು ಎ. ಭೀಮ್ ಸಿಂಗ್  ಅವರೇ ನಿರ್ದೇಶಿಸಿದ್ದು ಗಮನಾರ್ಹ. ಹಿಂದಿಯ ಖಾನ್‌ದಾನ್ ಚಿತ್ರದ ಬಡಿ ದೇರ್ ಭಯೀ ನಂದ್‌ಲಾಲಾ ಹಾಡಿಗಿಂತ ಮೊದಲು ಬರುವ ಪರಿತ್ರಾಣಾಯ ಸಾಧೂನಾಂ ಶ್ಲೋಕವನ್ನು ಘಂಟಸಾಲ ಹಾಡಿರುವುದನ್ನು ಯಾರೂ ಗಮನಿಸಿದಂತಿಲ್ಲ. ದಕ್ಷಿಣದಲ್ಲಿ  ನಾಯಕನ ವಾಮ ಹಸ್ತ ಬಾಧಿತವಾಗಿದ್ದದ್ದು ಉತ್ತರದಲ್ಲಿ ದಕ್ಷಿಣವಾದುದನ್ನು ಕೆಳಗಿನ ಚಿತ್ರದಲ್ಲಿ ನೋಡಬಹುದು!


ಕರ್ನಾಟಕ ಫಿಲಂಸ್ ಈ ಮೊದಲು ನಿರ್ಮಿಸಿದ್ದ ಜೇನುಗೂಡು ಚಿತ್ರದ ಜೇನಿನಂಥ ಹಾಡುಗಳಿಗೆ ಸರಿಸಮವೆನ್ನಲಾಗದಿದ್ದರೂ ಈ ಚಿತ್ರವೂ ವಿಜಯಾ ಕೃಷ್ಣಮೂರ್ತಿ ಸಂಗೀತ ನಿರ್ದೇಶನದಲ್ಲಿ 6 ಸುಂದರ ಗೀತೆಗಳನ್ನು ನಮಗೆ ಕೊಟ್ಟಿತ್ತು.  ಕೊಂಚ ಬೇರೆಯೇ  ಸ್ವಾದದ ಈ ಹಾಡುಗಳಿಗೆ ಸಿಗಬೇಕಾದಷ್ಟು ಮಾನ್ಯತೆ  ಸಿಗಲಿಲ್ಲವೆಂದೇ ಹೇಳಬೇಕಾಗುತ್ತದೆ.  ಸಂಬಂಧಿಸಿದವರ ಅವಜ್ಞೆಯಿಂದ ಇಂದು ಅನೇಕ ಚಿತ್ರಗಳ  ಹಾಡುಗಳು ನಮಗೆ ಸಿಗುತ್ತಿಲ್ಲ.  ಆದರೆ ಕೆಲವು ಹಾಡುಗಳು ಲಭ್ಯವಿದ್ದರೂ ಅವಜ್ಞೆಗೊಳಗಾಗುತ್ತಿವೆ.  ಇವು ಅಂಥವೇ ಎಂದು ನನ್ನ ಅನಿಸಿಕೆ.

1964ರಲ್ಲಿ ನಾನು 8ನೇ ಕ್ಲಾಸಲ್ಲಿರುವಾಗ ಉಡುಪಿ, ಮಲ್ಪೆ, ಮಂಗಳೂರು ಪ್ರವಾಸದ ಸಂದರ್ಭದಲ್ಲಿ ಒಂದು ದಿನ  ಜ್ಯೋತಿ ಟಾಕೀಸಿನಲ್ಲಿ  ಈ ಚಿತ್ರವನ್ನೂ ಮರುದಿನ ಸೆಂಟ್ರಲ್ ಟಾಕೀಸಿನಲ್ಲಿ ಸಂಗಂ ಚಿತ್ರವನ್ನೂ ನೋಡಿದ್ದೆ.  ಆ ಮೇಲೆ 80ರ ದಶಕದಲ್ಲಿ ಕನ್ನಡ ಟಿ.ವಿ. ಪ್ರಸಾರ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಸಮಯದಲ್ಲಿ ಇಲಾಖಾ ತರಬೇತಿಯೊಂದರ ಸಲುವಾಗ ಅಲ್ಲಿಗೆ ಹೋಗುವ ಸಂದರ್ಭ ಬಂದಿತ್ತು  ಬೆಂಗಳೂರು ದೂರದರ್ಶನದಿಂದ ವಾರಕ್ಕೊಂದು ಕನ್ನಡ ಚಿತ್ರ ಪ್ರಸಾರವಾಗುವ ವಿಷಯ ಗೊತ್ತಿದ್ದುದರಿಂದ ಟೇಪ್ ರೆಕಾರ್ಡರನ್ನೂ ಜೊತೆಗೊಯ್ದಿದ್ದೆ. ಟ್ರೈನಿಂಗ್ ಸೆಂಟರಿನ ಹಾಸ್ಟೆಲಿನಲ್ಲಿ ಟಿ.ವಿ ಇರುವ ವಿಷಯ ಗೊತ್ತಿತ್ತು.  (ಬೆಂಗಳೂರು ವಿವಿಧಭಾರತಿಯಿಂದ ಪ್ರಸಾರವಾಗುವ ಹಳೆ ಚಿತ್ರಗೀತೆಗಳನ್ನು ಧ್ವನಿಮುದ್ರಿಸಿಕೊಳ್ಳುವ ಉದ್ದೇಶವೂ ಇತ್ತು. ವಾಸ್ತವವಾಗಿ ಈ ಹಿಂದೆ ತಾಂತ್ರಿಕ ಹುದ್ದೆಗೆ ಆಯ್ಕೆಯಾದಾಗ ಹಳೆಯ ಚಿತ್ರಗೀತೆಗಳನ್ನು ನಿಯಮಿತವಾಗಿ ಪ್ರಸಾರ ಮಾಡುತ್ತಿದ್ದ ಕನ್ನಡ ವಿವಿಧಭಾರತಿಯನ್ನು ಆಲಿಸುವ ಸಲುವಾಗಿಯೇ ಬೆಂಗಳೂರಿನಲ್ಲಿ ಪೋಸ್ಟಿಂಗ್ ಮಾಡಿಸಿಕೊಳ್ಳಲು ನಾನು ಪ್ರಯತ್ನಿಸಿದ್ದುಂಟು!  ಆದರೆ ಆ ಸಮಯದಲ್ಲಿ ಅಲ್ಲಿ ಖಾಲಿ ಹುದ್ದೆ ಇಲ್ಲದ್ದರಿಂದ ಇದು ಸಾಧ್ಯವಾಗಿರಲಿಲ್ಲ). ಆ ವಾರಾಂತ್ಯದ ಚಿತ್ರ  ಮುರಿಯದ ಮನೆ ಎಂದು ತಿಳಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.  ಆದರೆ ದುರದೃಷ್ಟವಶಾತ್ ಅಲ್ಲಿದ್ದ ಟಿ.ವಿ.ಯಲ್ಲಿ ಧ್ವನಿಮುದ್ರಣ ಮಾಡುವ ಸಲುವಾಗಿ  ನೇರವಾಗಿ ಟೇಪ್ ರೆಕಾರ್ಡರನ್ನು ಕನೆಕ್ಟ್ ಮಾಡುವ ವ್ಯವಸ್ಥೆಯೇ ಇರಲಿಲ್ಲ.  ಆದರೇನಂತೆ. ಅಲ್ಲಿಯ ವಾಚ್‌ಮನ್ ತಂದುಕೊಟ್ಟ ಒಂದು ಎತ್ತರವಾದ ಸ್ಟೂಲಿನ ಮೇಲೆ ಟಿ.ವಿ.ಯ ಎದುರು ಟೇಪ್ ರೆಕಾರ್ಡರನ್ನು ಇರಿಸಿ ಹಾಗೆಯೇ ಹಾಡುಗಳನ್ನೆಲ್ಲ ಧ್ವನಿಮುದ್ರಿಸಿಕೊಂಡಿದ್ದೆ.  ಹಾಡುಗಳು ಬರುವಾಗೆಲ್ಲ  ಮೌನವಾಗಿದ್ದು ಅಲ್ಲಿದ್ದ ಟಿ.ವಿ. ವೀಕ್ಷಕರು ಸಹಕರಿಸಿದ್ದರು! ಆ ಕ್ಯಾಸೆಟ್ ಈಗಲೂ ನನ್ನ ಬಳಿ ಇದೆ.

ಇನ್ನೀಗ ಒಂದೊಂದೇ ಹಾಡಿನ ವಿಶೇಷಗಳನ್ನು ವಿಶ್ಲೇಷಿಸುತ್ತಾ ಆಲಿಸುವ ಸಮಯ. ಚಿತ್ರದ ತಾರಾಗಣ, ತಾಂತ್ರಿಕ ವರ್ಗ, ಕಥಾ ಸಾರಾಂಶ ಮತ್ತು ಹಾಡುಗಳು ಇರುವ ಪದ್ಯಾವಳಿ ಇಲ್ಲಿದೆ.  ಹಾಡು ಕೇಳುವಾಗ scroll ಮಾಡುತ್ತಾ  ಸಾಹಿತ್ಯ ಓದಿಕೊಳ್ಳಬಹುದು.

 ಹಾಡುಗಳ ಪುಸ್ತಕ  ಓದಲು ಅದರ ಮೇಲೊಮ್ಮೆ ಕ್ಲಿಕ್ಕಿಸಿ scroll ಮಾಡಿ.

1. ನಮ್ಮೂರ ಚೆನ್ನಯ್ಯ ಮನ್ಮಥ ಮಾರ

ಕನ್ನಡ ಚಿತ್ರಗಳಲ್ಲಿ ಕೃಷ್ಣ ಜನ್ಮಾಷ್ಟಮಿ, ನವರಾತ್ರಿ,  ಶಿವರಾತ್ರಿ, ದೀಪಾವಳಿ  ಇತ್ಯಾದಿ ಸಂದರ್ಭಗಳಿಗೆ ಸಂಬಂಧಿಸಿದ ಹಾಡುಗಳು ಮೊದಲಿನಿಂದಲೂ ಸಾಕಷ್ಟು ಇವೆ.  ಆದರೆ ಗಣಪನನ್ನು ಕುರಿತ ಹಾಡುಗಳು ಇಲ್ಲವೆನ್ನುವಷ್ಟು ಕಮ್ಮಿ.  70ರ ದಶಕದ ನಂತರ ಗಜಮುಖನೆ ಗಣಪತಿಯೆ, ಶರಣು ಶರಣಯ್ಯ ಶರಣು ಬೆನಕ, ಶರವು ಮಹಾ ಗಣಪತಿ ಮುಂತಾದ ಚಲನಚಿತ್ರೇತರ ಗೀತೆಗಳು ಹಾಗೂ ಒಂದೆರಡು ಚಿತ್ರಗೀತೆಗಳೂ ಬಂದವೆನ್ನಿ.  ಈ ಹಾಡು ಆದಿಪೂಜಿತ ಗಣಪನ ಪ್ರಾರ್ಥನೆಯೊಂದಿಗೆ ಆರಂಭವಾಗುವುದರಿಂದ ಗಣಪನ ಉಲ್ಲೇಖವಿರುವ ಮೊದಲ ಚಿತ್ರಗೀತೆ ಎನ್ನಬಹುದೇನೋ.  ವಾಸ್ತವವಾಗಿ ಇದು ಹಳ್ಳಿಯ ಪಡ್ಡೆ ಹುಡುಗಿಯರು ಚಿತ್ರದ ನಾಯಕನನ್ನು ರೇಗಿಸಿ ಗೋಳಾಡಿಸುವ ಸಮೂಹಗೀತೆ.  ಘಂಟಸಾಲ ಮತ್ತು ಎಲ್.ಆರ್. ಈಶ್ವರಿ ಮುಖ್ಯ ಗಾಯಕರು.   ಇವರಿಬ್ಬರು ಜೊತೆಯಾಗಿ ಹಾಡಿದ ಬೇರೆ ಯಾವುದೇ ಕನ್ನಡ ಚಿತ್ರಗೀತೆ ನನಗೆ ನೆನಪಾಗುತ್ತಿಲ್ಲ. ಘಂಟಸಾಲ ಅವರು ಎಸ್. ಜಾನಕಿಯೊಂದಿಗೂ ಯಾವುದೇ ಕನ್ನಡ ಚಿತ್ರಗೀತೆ ಹಾಡಿದಂತಿಲ್ಲ. ಅವರು ಹೆಚ್ಚಾಗಿ ಪಿ. ಲೀಲಾ ಹಾಗೂ ಪಿ. ಸುಶೀಲಾ ಅವರೊಂದಿಗೆ ಹಾಡುತ್ತಿದ್ದುದು. ಈ ಹಾಡಿನ  ಸಾಹಿತ್ಯದಲ್ಲಿ ಬಾಯಾಳಿ ಬಜಾರಿಗಳು, ನಾಚಿಕೆಗೆಟ್ಟ ನೇಣಿತನ ಮುಂತಾದ ಅಪರೂಪದ ಪದಪ್ರಯೋಗಗಳಿವೆ.  ಹಾಡಿನ interludeನಲ್ಲಿ ಜಿಸ್ ದೇಶ್ ಮೆಂ ಗಂಗಾ ಬಹತೀ ಹೈ ಚಿತ್ರದ ಹಮ್ ಭೀ ಹೈಂ ತುಂ ಭೀ ಹೋ ಹಾಡಿನ ಕಂಡೂ ಕಾಣದ ಛಾಯೆ ಇದೆ.


2. ಕೇದಿಗೆ ಹೂ ಮುಡಿದು

ಈ ಒಂದು ಹಾಡಿಗೆ ಮಾತ್ರ ತಮಿಳು ಮತ್ತು ತೆಲುಗು ಅವತರಣಿಕೆಗಳಲ್ಲಿದ್ದ ಮೂಲ ಧಾಟಿಯನ್ನೇ ಉಳಿಸಿಕೊಳ್ಳಲಾಗಿದೆ.  ಪಿ.ಬಿ. ಶ್ರೀನಿವಾಸ್, ಪಿ.ಸುಶೀಲಾ ಹಾಡಿದ್ದಾರೆ.   ಶ್ರುತಿಮಾಡುವ ಸುತ್ತಿಗೆಯನ್ನು ತಬಲಾದ ಮೇಲೆ ಎಳೆದು ಹೊರಡಿಸಿದ ಧ್ವನಿ, ಕೊಳಲುಗಳು ಮತ್ತು ಹಳ್ಳಿಗಾಡಿನ ರೈತನ ಆಲಾಪಗಳೇ ಹಿನ್ನೆಲೆ ಸಂಗೀತ. ಸಾಲಿನ ಕೊನೆಯ ಪದವನ್ನು ಇನ್ನೊಬ್ಬರು ಪುನರುಚ್ಚರಿಸುವ ಪರಿ ಗಮನ ಸೆಳೆಯುತ್ತದೆ.  ಜಾನಪದ ಸೊಗಡಿನ ಸಂಗೀತದೊಂದಿಗೆ  ಅರ್ಥಪೂರ್ಣ ಸಾಹಿತ್ಯವೂ ಮೇಳೈಸಿದೆ.  ತೌರಿನಿಂದ ತಂದ ನೂರು ನಗ, ಕೊಳಗ ತುಂಬಾ ತಂದ ತಮ್ಮನ ಹಣ ತಂದು ಮನೆ ತುಂಬಿದರೆ ಚಂದವೋ ಅಥವಾ ಮರ್ವಾದೆ, ಮಾನಗಳು ಅಂದವೋ ಎಂದು ನಾಯಕ ಕೇಳಿದ್ದಕ್ಕೆ ನನಗೆ ಮಾನವೇ ಆಭರಣ,  ಮರ್ವಾದೆಯೇ ಹೊರೆ ಚಿನ್ನ ಎಂದು ನಾಯಕಿ ನುಡಿಯುತ್ತಾಳೆ.  ಹೋಲಿಕೆಗಾಗಿ ಕೊನೆ ಭಾಗದಲ್ಲಿ ತಮಿಳಿನಲ್ಲಿ ಟಿ.ಎಮ್. ಸೌಂದರರಾಜನ್ ಮತ್ತು ಪಿ. ಲೀಲಾ, ತೆಲುಗಿನಲ್ಲಿ ಘಂಟಸಾಲ ಮತ್ತು ಪಿ.ಸುಶೀಲಾ ಹಾಡಿದ ತುಣುಕುಗಳನ್ನು  ಸೇರಿಸಲಾದ ಈ ಹಾಡನ್ನು ಈಗ ಆಲಿಸಿ.  ಹಿಂದಿಯ ಖಾನ್‌ದಾನ್ ಚಿತ್ರದಲ್ಲಿ ಈ ಸನ್ನಿವೇಶದ ಹಾಡು ನೀಲ್ ಗಗನ್ ಪರ್ ಉಡ್‌ತೇ ಬಾದಲ್.


3. ಚಿನ್ನದಂತಹ ಬಾಳುವೆಯಲ್ಲಿ

ಒಂದಾಗಿದ್ದ ಮನೆ ಕುತಂತ್ರಿಯೊಬ್ಬನ ಕಾರಸ್ಥಾನದಿಂದ  ಎರಡಾಗಿ ಒಡೆಯುವ ಸಂದರ್ಭದ ಹಿನ್ನೆಲೆ ಹಾಡಿದು.  ಪಿ.ಬಿ.ಶ್ರೀನಿವಾಸ್ ಹಾಡಿದ್ದಾರೆ. ತಬ್ಲಾ, ಸಾರಂಗಿ, ಕೊಳಲು, ಸಿತಾರ್ ಇತ್ಯಾದಿಗಳ ಸರಳ ಹಿನ್ನೆಲೆ ಇದೆ. ಅಂದಿನ ದಿನಗಳಲ್ಲಿ ವಿವಿಧಭಾರತಿಯ ಮಧುರಗೀತಂ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು ಇದು. ಬೇರೆ ನಿಲಯಗಳಿಂದ ಕೇಳಿದ್ದು ನೆನಪಿಲ್ಲ. ವಿರಸವೆಂಬ ವಿಷಕೆ ಬಲಿಯಾಗದಿರು,  ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದು ಹಾಡಿನ ತಾತ್ಪರ್ಯ.


4.  ಅಂದಚಂದವೇತಕೆ ಅಂತರಂಗ ದೈವಕೆ

ಒಲಿದು ಬಂದು ಕೈ ಹಿಡಿದಾಕೆಗೆ ಅಂಗವಿಕಲನಾದ ತಾನು ಏನು ತಾನೇ ಕೊಡಬಲ್ಲೆ ಎಂದು ಪತಿಯು ಕೊರಗಿದಾಗ ಜೀವನದಲ್ಲಿ ಬಾಹ್ಯ ಅಂದ ಚಂದವೇ ಎಲ್ಲವೂ ಅಲ್ಲ, ಎಂದಿಗೂ ಮಾಸದಿರುವಂಥ ಅಂತರಂಗದ ಚೆಲುವು ಇರುವಾಗ ಚಿಂತೆ ಏಕೆ ಎಂದು ನವವಧುವು ಸಂತೈಸುವ ಪಿ.ಸುಶೀಲಾ ಧ್ವನಿಯಲ್ಲಿರುವ ಮಧುರ ಹಾಡಿದು. ಈ ಹಾಡು ಕೇಳಿದಾಗಲೆಲ್ಲ ನನಗೆ ಉಜಿರೆ ಹಾಸ್ಟೆಲ್ ನೆನಪಾಗುತ್ತದೆ.  ಓದಲೆಂದು ಪುಸ್ತಕ ಹಿಡಿದು ಹಾಸ್ಟೆಲ್ ಬಳಿಯ ಗುಡ್ಡಕ್ಕೆ ಹೋದಾಗ ಅನೇಕ ಸಲ ಅನತಿ ದೂರದ ಉಜಿರೆ ಪೇಟೆಯಿಂದ ಅಲ್ಲಿಯ ತುಳಸಿ ಸೌಂಡ್ ಸಿಸ್ಟಂನವರು ಧ್ವನಿವರ್ಧಕದಲ್ಲಿ ನುಡಿಸುತ್ತಿದ್ದ ಈ ಹಾಡು ತೇಲಿಬರುತ್ತಿತ್ತು.   ಹಿಂದಿಯಲ್ಲಿ ಈ ಸನ್ನಿವೇಶಕ್ಕಿರುವ ತುಮ್ಹೀ ಮೇರೆ ಮಂದಿರ್ ತುಮ್ಹೀ ಮೇರಿ ಪೂಜಾ ಅತಿ ಜನಪ್ರಿಯ.  ಈ ಹಾಡಿನಲ್ಲಿರುವ ಮಂದಿರ್, ಪೂಜಾ, ದೇವತಾ ಮುಂತಾದ ಪದಗಳಿಂದಾಗಿ ಇದನ್ನು ಕೆಲವು ನಿಲಯದವರು ಭಕ್ತಿಗೀತೆಗಳ ಕಾರ್ಯಕ್ರಮದಲ್ಲಿ ಕೇಳಿಸುವುದುಂಟು!


5.  ಮೊಲ್ಲೆ ಮಲರಿ ಘಮಿಸುತಿರೆ

ಇದೊಂದು ಬಹಳ ಅಂದರೆ ಬಹಳ ಅಪರೂಪದ ಹಾಡು.  ಅನೇಕರು ಇದುವರೆಗೆ ಕೇಳಿಯೇ ಇರಲಿಕ್ಕಿಲ್ಲ.  ಕನ್ನಡದಲ್ಲಿ ಎಲ್.ಆರ್. ಈಶ್ವರಿ ಧ್ವನಿಯಲ್ಲಿರುವ ಮೊಟ್ಟಮೊದಲ ಕ್ಯಾಬರೆ ಶೈಲಿಯ ಈ ಹಾಡು ಅವರ ಯಾವ ಆಲ್ಬಂನಲ್ಲೂ ಇದ್ದಂತಿಲ್ಲ. ಯಾವ ಆರ್ಕೆಷ್ಟ್ರಾದವರೂ ಇದನ್ನು ಹಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಆಕಾಶವಾಣಿಯಲ್ಲಂತೂ ಅಂದಿನ ಕಾಲದಲ್ಲಿ ಒಮ್ಮೆಯೂ ಪ್ರಸಾರವಾಗಿರಲಿಲ್ಲ. ಆಗ ಆಯ್ಕೆ ಸಮಿತಿಯೊಂದು ಅನುಮತಿ ನೀಡಿದ ಹಾಡುಗಳಷ್ಟೇ ಆಕಾಶವಾಣಿಯಲ್ಲಿ ಬಿತ್ತರಗೊಳ್ಳುತ್ತಿದ್ದವು. ಆಕ್ಷೇಪಾರ್ಹ ಅಂಶಗಳೇನಾದರೂ ಕಂಡುಬಂದ ಗೀತೆಗಳನ್ನು ತಡೆ ಹಿಡಿಯಲಾಗುತ್ತಿತ್ತು. ಆದರೆ ಈ ಹಾಡಿನ ಪ್ರಥಮ ಪದವನ್ನು ಒತ್ತಕ್ಷರ ರಹಿತವಾಗಿ ಓದಿದ ಹೊರತು ಖಂಡಿತವಾಗಿಯೂ ಇದರಲ್ಲಿ ಯಾವುದೇ ಆಕ್ಷೇಪಾರ್ಹ ಪದ ಇಲ್ಲ.    ನಾನು ಥಿಯೇಟರಲ್ಲಿ ಸಿನಿಮಾ ನೋಡುವಾಗ ಕೇಳಿದವನು   ಮತ್ತೆ ಈ ಹಾಡು ಕೇಳಿದ್ದು ಆ ದಿನ ಬೆಂಗಳೂರು ದೂರದರ್ಶನದಲ್ಲಿ  ಚಿತ್ರ ಪ್ರಸಾರವಾದಾಗಲೇ. ಕ್ಯಾಬರೆ ಹಾಡಾದರೂ ಅತ್ಯುತ್ಕೃಷ್ಟ ಸಾಹಿತ್ಯ ಹೊಂದಿದೆ ಇದು. ಅರಳಿ ನಿಂತ ಹೂವನ್ನು ಬಯಸದ ಹೆಣ್ಣು, ಒಲಿದು ಬಂದ ಹೆಣ್ಣನ್ನು ಬಯಸದ ಗಂಡು ಎಲ್ಲೂ ಇಲ್ಲ.  ಹರೆಯ ಇರುವಾಗ ಸಗ್ಗ, ಆ ಮೇಲೆ ಜರೆಯ ಕಗ್ಗ ಮಾತ್ರ    ಎಂದು ಕು.ರ.ಸೀ ಇಲ್ಲಿ ಕಾವ್ಯಮಯವಾಗಿ ಹೇಳಿದ್ದಾರೆ.  ಮೊಲ್ಲೆ ಮಲರಿ ಘಮಿಸುತಿರೆ ಭ್ರಮಿಸಿ ಬಯಸದಿಹ ಹೆಣ್ಣಾರೋ ನಲ್ಲೆ ಬಳುಕಿ ಬಳಿಗೆ ಬರೆ ಒಲಿಸಿ ನಲಿಸದಿಹ ಗಂಡಾರೋ ಎಂಬ ಟಂಗ್ ಟ್ವಿಸ್ಟರ್ ರೀತಿಯ ಅರ್ಥಗರ್ಭಿತ ಸಾಲುಗಳ ಪಲ್ಲವಿಯನ್ನು ಈ ಹಾಡು ಹೊಂದಿದೆ. ನೀವೂ ಇದನ್ನೊಮ್ಮೆ ವೇಗವಾಗಿ ಹೇಳಲು ಪ್ರಯತ್ನಿಸಬಹುದು. ಚರಣಗಳ ಕೊನೆಗೆ ತೆರೆಯ ಮೇಲೆ ನರಸಿಂಹರಾಜು rap ಶೈಲಿಯಲ್ಲಿ ಹೇಳುವ ಬಂದೆ ಬಂದೆ ಬಂದೆ ಇಡ್ಲಿ ದೋಸೆ ಕಾಫಿ ಚಹ ತಂದೆ ತಂದೆ ಕೋ ಕೋ ಕೋ ಮತ್ತು ಕೊಟ್ಟೆ ಕೊಟ್ಟೆ ಕೊಟ್ಟೆ ತಿಂಡಿ ತೀರ್ಥ ತಿಂದ ಬಿಲ್ಲು ಬಿಟ್ಟೆ ಬಿಟ್ಟೆ ಕೈ ಕೈ ಕೈ ಅನ್ನುವ ಸಾಲುಗಳು ಈ ಹಾಡಿನ ಹೈಲೈಟ್.  ಈ ಸಾಲುಗಳನ್ನು ಹೇಳಿದವರು ಜೆ.ವಿ. ರಾಘವುಲು, ಎ.ಎಲ್. ರಾಘವನ್ ಇವರ ಪೈಕಿ ಯಾರು ಎಂದು ಸ್ಪಷ್ಟವಾಗುತ್ತಿಲ್ಲ.  ವಿವರಗಳಲ್ಲಿ ರಾಘವ ಎಂದಷ್ಟೇ ಇದೆ.  ಆಕರ್ಷಕ ಜಾಸ್ ಶೈಲಿಯ ಸಂಯೋಜನೆಯಲ್ಲಿ Come Septembar, Tequila ಇತ್ಯಾದಿ ಪ್ರಸಿದ್ಧ ಪಾಶ್ಚಾತ್ಯ ಸಂಯೋಜನೆಗಳ ಛಾಯೆ ಕಾಣಿಸುತ್ತದೆ. Interlude ಭಾಗದ ಗಿಟಾರ್ ಸೊಲೋ ಕೇಳಲು ಆಕರ್ಷಕವಾಗಿದೆ.  ಕೆಲವು ವರ್ಷಗಳ ನಂತರ ಬಂದ ಕು.ರ.ಸೀ ಅವರೇ ಬರೆದು ಎಲ್.ಆರ್. ಈಶ್ವರಿ  ಹಾಡಿದ ದೂರದಿಂದ ಬಂದಂಥ ಸುಂದರಾಂಗ ಜಾಣದಲ್ಲೂ ಇದೇ ಶೈಲಿಯನ್ನು ಗುರುತಿಸಬಹುದು.


ಈ ಹಾಡಿನ ವೀಡಿಯೊದಲ್ಲಿ  01.12 ನಿಮಿಷಕ್ಕೆ ನರಸಿಂಹರಾಜು ಅವರ free style cross leg dance ವೀಕ್ಷಿಸಿ!.



6. ಮತಿಹೀನ ನಾನಾಗೆ ತಂದೆ

ಇದು ಈ ಗೀತಗುಚ್ಛದ ಅತ್ಯಂತ ಸುಂದರ ಹಾಡು. ಪಿ.ಬಿ. ಶ್ರೀನಿವಾಸ್ ಅವರ ಅತ್ಯುತ್ತಮ ಹಾಡುಗಳ ಪಟ್ಟಿಗೆ ಸೇರಬೇಕಾದದ್ದು. ಪಿ.ಬಿ.ಎಸ್ ಧ್ವನಿಯನ್ನು ಜೆಮಿನಿಯ ಎಸ್.ಎಸ್. ವಾಸನ್  ಮೊದಲ ಸಲ ಕೇಳಿದಾಗಲೇ  ಗುರುತಿಸಿದ್ದ  ಕಲ್ಲನ್ನೂ ಕರಗಿಸಬಲ್ಲ  ಆರ್ದ್ರ ಭಾವಕ್ಕೆ ಈ ಹಾಡೊಂದು ಉತ್ತಮ ಉದಾಹರಣೆ.  ಸ್ವತಃ arranger ಆಗಿದ್ದ ವಿಜಯಾ ಕೃಷ್ಣಮೂರ್ತಿ ತನ್ನ orchestration ಕೌಶಲ್ಯವನ್ನು ಇಲ್ಲಿ ಧಾರೆಯೆರೆದಿದ್ದಾರೆ.  ಪುಟ್ಟ ಮಕ್ಕಳ ಆಟವನ್ನು  ಸಂಕೇತಿಸುವ tinkling ಧ್ವನಿಯೊಂದಿಗೆ ಆರಂಭವಾಗುವ ಹಾಡು ಪಲ್ಲವಿ ಭಾಗ ಮುಗಿಯುವಲ್ಲಿವರೆಗೆ  ಅದೇ ಹಿನ್ನೆಲೆಯೊಂದಿಗೆ ಯಾವುದೇ ತಾಳವಾದ್ಯಗಳಿಲ್ಲದೆ ಮುಂದುವರಿಯುತ್ತದೆ. ವಿಷಾದ ಭಾವಕ್ಕೆ ಪೂರಕವಾದ ಗ್ರೂಪ್ ವಯಲಿನ್ಸ್, ಗಿಟಾರ್, ಸಿತಾರ್ , ಕೊಳಲು, ಕ್ಲಾರಿನೆಟ್ ಇತ್ಯಾದಿಗಳುಳ್ಳ ಕೌಂಟರ್ ಮೆಲೊಡಿ ಸಹಿತವಾದ interludeನ ನಂತರ ಚರಣ ಆರಂಭವಾಗುವಾಗ ತಬ್ಲಾ ಸೇರಿಕೊಳ್ಳುತ್ತದೆ.  ಚರಣ ಪುನರಾವರ್ತನೆಯಾಗುವ ಮೊದಲು ಚಿಕ್ಕ bridge music ಇದೆ.  ಎರಡನೆ interlude ಮೊದಲಿನದಕ್ಕಿಂತ ಭಿನ್ನವಾಗಿದೆ.  ಜೋಗುಳಕ್ಕೆ ಈ ರೀತಿಯ ಘನ orchestra ಬಳಸುವ ಪ್ರಯೋಗವನ್ನು ಆ ಮೇಲೆ ಶಂಕರ್ ಜೈಕಿಶನ್ ಕೂಡ ಬ್ರಹ್ಮಚಾರಿ ಚಿತ್ರದ ಮೈ ಗಾವೂಂ ತುಮ್ ಸೋ ಜಾವೊ ಹಾಡಿನಲ್ಲಿ ಮಾಡಿದರು. ನಾಂದಿಯ ಹಾಡೊಂದು ಹಾಡುವೆ, ದೇವರ ಮಕ್ಕಳು ಚಿತ್ರದ ಹಾದಿ ಹೂವು ನೀ ಮಗುವೆ, ಸನಾದಿ ಅಪ್ಪಣ್ಣದ ನಾನೆ ತಾಯಿ ನಾನೆ ತಂದೆ ಪಿ.ಬಿ.ಎಸ್ ಅವರ ಇದೇ ಶೈಲಿಯ ಇತರ ಗೀತೆಗಳು.  ನಿರಾಸೆ ಮೂಡಿಸುವ ಸಂಗತಿ ಎಂದರೆ ಅಂದ ಚಂದವೇತಕೆ ಮತ್ತು ಈ ಹಾಡು ಯೂಟ್ಯೂಬಲ್ಲಿರುವ ಚಿತ್ರದ ಪ್ರತಿಯಲ್ಲಿ ಇಲ್ಲದಿರುವುದು. 


4 comments:

  1. ಬಹಳ ಸೊಗಸಾದ ಬರಹ, ಸರ್! ದೂರದರ್ಶನದಲ್ಲಿ ಈ ಚಿತ್ರ ನೋಡಿದ ನೆನಪು ಇತ್ತಾದರೂ, ಇಷ್ಟೆಲ್ಲಾ ಸೂಕ್ಷ್ಮಗಳನ್ನು ಗುರುತಿಸುವ ಕಲೆ ಇರಲಿಲ್ಲ! ಬರೇ "ಮೊಂಡುಗೈ, ಮೊಂಡುಗೈ" ಎಂದು ಹೆಂಗಳೆಯರು ಛೇಡಿಸುವ, ಸಿಕ್ಕಿಕೊಂಡಿದ್ದ ಗಾಳಿಪಟ ತರಲು ವಿದ್ಯುತ್ ತಂತಿ ಮುಟ್ಟಿ ಕೈ ಸೊಟ್ಟಗಾಗುವ, ಕಡೆಯಲ್ಲಿ ಅದೇ ವಿದ್ಯುತ್ ಸ್ಪರ್ಶದಿಂದ ಕೈ ನೆಟ್ಟಗಾಗುವ ದೃಶ್ಯಗಳು ಮಾತ್ರ ನೆನಪಿದ್ದವು. ಪೂರ್ಣ ಚಿತ್ರ ಸ್ಮೃತಿಪಟಲದಲ್ಲಿ ಮೂಡಿದಂತಾಯಿತು!

    Kiran Surya (FB)

    ReplyDelete
  2. ನಿಮ್ಮ ಈ ಲೇಖನಗಳನ್ನು ಅಂದಿನ ಸಾಹಿತಿಗಳು,ಸಂಗೀತ ನಿರ್ದೇಶಕರು,ಹಾಡುಗಾರರು ನೋಡಿದ್ದರೆ ಖಂಡಿತವಾಗಿ ಅವರಿಗೆ ತಮ್ಮ ಜನ್ಮ ಸಾರ್ಥಕವಾಯಿತು ಎಂಬ ಭಾವನೆ ಬರುತ್ತಿತ್ತು! ಈ ಮಾತುಗಳಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.

    Krishna Prasad (FB)

    ReplyDelete
  3. Tongue Twister ಹಾಡು ನಾನು ಕೇಳಿರ್ಲಿಲ್ಲ...
    ತುಂಬಾ ಒಳ್ಳೆದುಂಟು ...
    ಲೇಖನ ಯಥಾಪ್ರಕಾರ ಫಸ್ಟ್ ಕ್ಲಾಸ್...

    Moorthy Deraje (FB)

    ReplyDelete
  4. ಈ ಚಿತ್ರ ತುಂಬಾ ಹಿಂದೆ ನೋಡಿದ್ದೆ....ನಿಮ್ಮ ಲೇಖನ ಚಿತ್ರದ ನೆನಪು ಮರುಕಳಿಸಿತು

    ReplyDelete

Your valuable comments/suggestions are welcome