ಹಾಗೆ ಜೇನು ತೊಟ್ಟಿಕ್ಕುವಂತೆ ಮಧುರವಾಗಿ ಹಾಡಿದರೆ ಇರುವೆ ಮುತ್ತದಿದ್ದೀತೆ? ಪಿ.ಬಿ. ಶ್ರೀನಿವಾಸ್ ಹಾಡಿದರೆ ಇಲ್ಲೂ ಇರುವೆ, ಜಾನಕಿ ಹಾಡಿದರೆ ಅಲ್ಲೂ ಇರುವೆ. ಇಷ್ಟು ವರ್ಷಗಳಾದರೂ ಇನ್ನೂ ಕೇಳುತ್ತಾ ಇರುವ ನಮ್ಮೆಲ್ಲರ ಮನದಲ್ಲೂ ತುಂಬಿರುವೆ. ‘ಇದೇನಿದು ಇರುವೆ ಇರುವೆ ಎಂದು ಕೊರೆಯುತಲಿರುವೆ’ ಎಂದು ನೀವು ಕುತೂಹಲದ ಇರುವೆ ಬಿಟ್ಟುಕೊಂಡು ಪ್ರಶ್ನೆ ಎಸೆಯಬೇಕಾಗಿಲ್ಲ. ನಾನೀಗ ಕನ್ನಡದ ಎರಡನೇ ದೋ ಪಹಲೂ ವಾಲಾ ಗೀತ್ ಬಗ್ಗೆ ಬರೆಯಲಿರುವೆ.
ಆಗಲೇ ಅವಳಿ ಹಾಡುಗಳು ಲೇಖನದಲ್ಲಿ ಉಲ್ಲೇಖಿಸಿದಂತೆ ಹಿಂದಿಯಲ್ಲಿ 50ರ ದಶಕದಿಂದಲೂ ಆಗಾಗ ಒಂದೇ ಹಾಡನ್ನು ಇಬ್ಬರಿಂದ ಬೇರೆ ಬೇರೆಯಾಗಿ ಹಾಡಿಸುವ ‘ದೋ ಪಹಲೂ ವಾಲೇ ಗೀತ್ ’ ಪದ್ಧತಿ ಬೆಳೆದು ಬಂದಿತ್ತು. ರೇಡಿಯೋ ಸಿಲೋನಿನಲ್ಲಿ ಇಂತಹ ಹಾಡುಗಳಿಗೇ ಮೀಸಲಾದ ‘ದೋ ಪಹಲೂ ದೋ ರಂಗ್ ದೋ ಗೀತ್’ ಎಂಬ ಸಾಪ್ತಾಹಿಕ ಕಾರ್ಯಕ್ರಮವೂ ಇತ್ತು. ಕನ್ನಡದಲ್ಲಿ 1961ರಲ್ಲಿ ಬಂದ ಕಣ್ತೆರೆದು ನೋಡು ಚಿತ್ರಕ್ಕಾಗಿ ಒಮ್ಮೆ ಪಿ.ಬಿ.ಶ್ರೀನಿವಾಸ್ ಒಬ್ಬರೇ ಹಾಗೂ ಇನ್ನೊಮ್ಮೆ ಅವರ ಜೊತೆ ಬೆಂಗಳೂರು ಲತಾ ಹಾಡಿದ್ದ ಬಂಗಾರದೊಡವೆ ಬೇಕೆ ಹಾಡು ಇಂತಹ ಮೊದಲ ಪ್ರಯತ್ನ. ನಂತರ ಬಂದದ್ದೇ 1966ರಲ್ಲಿ ಬಿಡುಗಡೆಯಾದ ಬದುಕುವ ದಾರಿ ಚಿತ್ರದ ಇರುವೆ ಹಾಡು. ಚಂದ್ರ ಕುಮಾರ ಚಿತ್ರದ ಅರ್ಧ ಕೆಲಸ ಮುಗಿಸುವಷ್ಟರಲ್ಲಿ ಅಕಾಲ ಮೃತ್ಯುವಿಗೀಡಾದ ಎಂ. ವೆಂಕಟರಾಜು ಅವರ ಸ್ಥಾನವನ್ನು ತುಂಬಿ ಆ ಚಿತ್ರದ ಉಳಿದ ಹಾಡುಗಳನ್ನು ಸಂಯೋಜಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ ತೆಲುಗಿನಲ್ಲಿ ಅದಾಗಲೇ ಪ್ರಸಿದ್ಧರಾಗಿದ್ದ ಟಿ.ಚಲಪತಿ ರಾವ್ ಈ ಚಿತ್ರದ ಸಂಗೀತ ನಿರ್ದೇಶಕರು. ಅಷ್ಟರಲ್ಲೇ ಮನೆ ಅಳಿಯ ಚಿತ್ರದಲ್ಲಿ ಸುಪರ್ ಹಿಟ್ ಗೀತೆಗಳನ್ನು ನೀಡಿ ಅವರು ಕನ್ನಡಿಗರ ಮನ ಗೆದ್ದಿದ್ದರು. ಮಾವನ ಮಗಳು ಚಿತ್ರದ ನಾನೇ ವೀಣೆ ನೀನೇ ತಂತಿಯ ರೂವಾರಿಯೂ ಅವರೇ. ತೆಲುಗಿನ ಬ್ರತುಕು ತೆರವು ಮತ್ತು ಹಿಂದಿಯ ಜೀನೆ ಕೀ ರಾಹ್ ಚಿತ್ರಗಳ ಶೀರ್ಷಿಕೆಯನ್ನು ಹೋಲುತ್ತಿದ್ದರೂ ಕನ್ನಡದ ಬದುಕುವ ದಾರಿಗೂ ಅವುಗಳಿಗೂ ಯಾವ ಸಂಬಂಧವೂ ಇಲ್ಲ ಅನ್ನಲಾಗಿದೆ. ಅನ್ನಲಾಗಿದೆ ಏಕೆಂದರೆ ನಾನು ಆ ಚಿತ್ರ ನೋಡಿಲ್ಲ ಮತ್ತು ನೋಡಬೇಕೆಂದರೆ ಈಗ ಅದು ಲಭ್ಯವೂ ಇಲ್ಲ. ಕಲ್ಯಾಣ್ ಕುಮಾರ್, ಜಯಲಲಿತಾ, ವಂದನಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರವನ್ನು ನಿರ್ದೇಶಿಸಿ ಕೆಲವು ಹಾಡುಗಳನ್ನೂ ಬರೆದವರು ಹುಣಸೂರು ಕೃಷ್ಣಮೂರ್ತಿ. ಇವರೊಂದಿಗೆ ಕು.ರ.ಸೀ ಕೂಡ ಕೆಲವು ಹಾಡುಗಳನ್ನು ಬರೆದಿದ್ದು ಕುಯಲಿನ್, ಆರುದ್ರ, ದತ್ತ ಮತ್ತು ಭಾಸ್ಕರನ್ ಅವರು ವಿವಿಧ ಭಾಷೆಗಳಲ್ಲಿ ಬರೆದ ಭಾವೈಕ್ಯ ಸಾರುವ ಒಂದು ಹಾಡೂ ಇತ್ತೆಂದು ದಾಖಲೆಗಳು ಹೇಳುತ್ತವೆ. ಚಿತ್ರದಲ್ಲಿದ್ದ ಎಂಟು ಹಾಡುಗಳಲ್ಲಿ ಆಗಾಗ ಕೇಳಲು ಸಿಗುತ್ತಿದ್ದುದು ಕವ್ವಾಲಿ ಶೈಲಿಯ ಮಾಗೀ ಕಾಲ ಸಾಯಂಕಾಲ ಮತ್ತು ಇರುವೆ ಹಾಡು ಮಾತ್ರ.
ಇಲ್ಲೂ ಇರುವೆ ಅಲ್ಲೂ ಇರುವೆ
ಪಲ್ಲವಿ ಭಾಗದಲ್ಲಿ ಮೋಹನದಂತೆ ಭಾಸವಾಗಿ ಚರಣದಲ್ಲಿ ಮ1, ದ2, ನಿ2 ಸ್ವರಗಳನ್ನೂ ಸೇರಿಸಿಕೊಂಡು ಹರಿಕಾಂಬೋಜಿಯಾಗಿ ಪರಿವರ್ತಿತವಾಗುವ ಈ ಹಾಡಿನ ಪಿ.ಬಿ.ಎಸ್ ಮತ್ತು ಎಸ್. ಜಾನಕಿ ವರ್ಷನ್‌ಗಳ ಧಾಟಿ ಒಂದೇ ಆಗಿದೆ. ಬಿಳಿ 3 ಅಂದರೆ E ಶ್ರುತಿಯಲ್ಲಿರುವ ಜಾನಕಿ ಹಾಡು ಕೊಂಚ ವೇಗವಾಗಿದ್ದು ಸಿತಾರ್, ಕ್ಲಾರಿನೆಟ್, ಅಕಾರ್ಡಿಯನ್, ಕೊಳಲುಗಳನ್ನು ಹಿನ್ನೆಲೆ ವಾದ್ಯಗಳಾಗಿ ಹೊಂದಿ ತಬ್ಲಾ ತಾಳವಾದ್ಯದೊಂದಿಗೆ ದೇಸಿ ರಂಗು ಹೊಂದಿರುತ್ತಿದ್ದ ಅಂದಿನ ಬಹುತೇಕ ಚಿತ್ರಗೀತೆಗಳ ಮಾದರಿಯಲ್ಲೇ ಇದೆ. ಆದರೆ ಮಳೆ ಹನಿಗಳು ತೊಟ್ಟಿಕ್ಕುವಂತೆ ಭಾಸವಾಗುವ ಪಿಯಾನೋ ಹಿನ್ನೆಲೆಯೊಂದಿಗೆ ವಿಳಂಬ ಕಾಲದಲ್ಲಿ ಪಿ.ಬಿ.ಎಸ್ ಅವರು C sharp ಶ್ರುತಿಯ ಮಂದ್ರ ಪಂಚಮದಲ್ಲಿ ಹಾಡಿನ ಎತ್ತುಗಡೆ ಮಾಡುತ್ತಲೇ ಕೇಳುಗರನ್ನು clean bowled ಮಾಡಿ ಬಿಡುತ್ತಾರೆ. ಗಿಟಾರ್, ಬೊಂಗೋ, ಡಬಲ್ ಬಾಸ್, ಅಕಾರ್ಡಿಯನ್, ತಬ್ಲಾಗಳ ಸಂಗಮದೊಡನೆ ಅದೇ ವಿಳಂಬ ಗತಿಯಲ್ಲಿ ಪೂರ್ವ ಪಶ್ಚಿಮಗಳ ಸಮ್ಮಿಶ್ರ ಛಾಯೆಯೊಡನೆ ಹಾಡು ಮುಂದುವರೆದು ನಮ್ಮನ್ನು ಇನ್ಯಾವುದೋ ಲೋಕಕ್ಕೆ ಕರೆದೊಯ್ಯುತ್ತದೆ. ಜಾನಕಿ ಮತ್ತು ಪಿ.ಬಿ.ಎಸ್ ಹಾಡುಗಳ ಮೂರನೇ ಚರಣ ಭಿನ್ನವಾಗಿದೆ. ಹುಣಸೂರರ ಸಾಹಿತ್ಯ ಪದ ಲಾಲಿತ್ಯ ಹೊಂದಿದ್ದರೂ ಹಾಡಿನ ಒಟ್ಟು ಆಶಯ ಸುಲಭದಲ್ಲಿ ಅರ್ಥವಾಗುವುದಿಲ್ಲ. ‘ಇಲ್ಲೂ ಇರುವೆ ಅಲ್ಲೂ ಇರುವೆ ’ ಎಂದು ಯಾರು ಹೇಳುತ್ತಿರುವುದು ಎಂಬುದು ಕೇಳುಗರಿಗೆ ಸ್ಪಷ್ಟವಾಗುವುದಿಲ್ಲ. ಚೆಲುವು, ಮನಸ್ಸು, ಪ್ರೀತಿ, ಮಾಧುರ್ಯ ಹೀಗೆ ತಮ್ಮ ತಮ್ಮ ಭಾವಕ್ಕೆ ತಕ್ಕ ಉತ್ತರ ಹುಡುಕಬೇಕಾಗುತ್ತದೆ.
ಮೇಲಿನ ಚಿತ್ರದಲ್ಲಿ ಕಾಣುವ ಈ ಹಾಡಿನ ದೃಶ್ಯದಲ್ಲಿ ಪಿಯಾನೋ ಎದುರು ಕುಳಿತಿರುವ ಕಲ್ಯಾಣ್ ಕುಮಾರ್ ದೋಸ್ತ್ ದೋಸ್ತ್ ನ ರಹಾದ ರಾಜ್ ಕಪೂರ್ ಥರ ಕಾಣಿಸುತ್ತಾರಲ್ಲವೇ.
ಜಾನಕಿ ಧ್ವನಿಯಲ್ಲಿರುವ ಹಾಡು ಅಂತರ್ಜಾಲದಲ್ಲೂ ಲಭ್ಯವಿದೆ. ಆದರೆ ಪಿ.ಬಿ.ಎಸ್ ವರ್ಷನ್ ಕೆಲವು ಆಕಾಶವಾಣಿ ನಿಲಯಗಳಿಂದ ಎಂದಾದರೊಮ್ಮೆ ಮಾತ್ರ ಕೇಳಲು ಸಿಗುತ್ತಿತ್ತು. ಇನ್ನು ಆ ಚಿಂತೆ ಇಲ್ಲ. ನಿಮಗಾಗಿ ಎರಡು ಆವೃತ್ತಿಗಳೂ ಸಾಹಿತ್ಯದೊಂದಿಗೆ ಇಲ್ಲಿವೆ. ಬೇಕಿದ್ದಾಗ ಆಲಿಸಿ ಸಂತೋಷ ಪಡಬಹುದು. ಆಡಿಯೊ ಪ್ಲೇಯರ್ ಪೂರ್ತಿ ಕಾಣಿಸಿಕೊಳ್ಳುವ ವರೆಗೆ ತಾಳ್ಮೆ ಇರಲಿ.
ಪಿ.ಬಿ.ಶ್ರೀನಿವಾಸ್
ಇಲ್ಲೂ ಇರುವೆ ಅಲ್ಲೂ ಇರುವೆ
ಎಲ್ಲ ಕಡೆ ನಾ ತುಂಬಿರುವೆ
ತುಂಬಿರುವೆ
ಚೆಲುವಿನ ಹೊಳೆಯಲಿ ಮಿಂದಿರುವೆ
ಒಲುವಿನ ಭಾರದೆ ಬಾಗಿರುವೆ
ರಸಿಕರ ಕಣ್ಣಿಗೆ ಕಾಣಿಸುವೆ...ಕಾಣಿಸುವೆ
ಬೆಳಗುವ ಬಾನಿನ ಬೆಳಕಾಗಿ
ಹೊಳೆಯುವ ಹೆಣ್ಣಿನ ಕಣ್ಣಾಗಿ
ಕಲರವದ ಹೊಳೆಯಾಗಿ (2)
ಕುಳಿತಿಹೆ ಸೊಗಸಿನ ಸೆಲೆಯಾಗಿ.. ಸೆಲೆಯಾಗಿ
ಯೌವನ ಕಾಲದ ಕನಸಾಗಿ
ಕವಿಗಳ ಕಾವ್ಯದ ರಸವಾಗಿ
ವಿಕಸಿತ ಕುಸುಮದ ಮಧುವಾಗಿ (2)
ಕಾದಿಹೆ ಬಾರಾ ನಿನಗಾಗಿ...ನಿನಗಾಗಿ
ಎಸ್. ಜಾನಕಿ
ಇಲ್ಲೂ ಇರುವೆ ಅಲ್ಲೂ ಇರುವೆ
ಎಲ್ಲ ಕಡೆ ನಾ ತುಂಬಿರುವೆ
ತುಂಬಿರುವೆ
ಚೆಲುವಿನ ಹೊಳೆಯಲಿ ಮಿಂದಿರುವೆ
ಒಲುವಿನ ಭಾರದೆ ಬಾಗಿರುವೆ
ರಸಿಕರ ಕಣ್ಣಿಗೆ ಕಾಣಿಸುವೆ...ಕಾಣಿಸುವೆ
ಬೆಳಗುವ ಬಾನಿನ ಬೆಳಕಾಗಿ
ಹೊಳೆಯುವ ಹೆಣ್ಣಿನ ಕಣ್ಣಾಗಿ
ಕಲರವದ ಹೊಳೆಯಾಗಿ (2)
ಕುಳಿತಿಹೆ ಸೊಗಸಿನ ಸೆಲೆಯಾಗಿ.. ಸೆಲೆಯಾಗಿ
ಎದೆಯೊಳಗೇನೋ ಹೊಸಗಾನ
ಅದರೊಳು ಪ್ರೇಮದ ಸಂಧಾನ
ಬಯಸುತ ಹೃದಯದ ಸಮ್ಮಿಲನ (2)
ಕಾದಿಹೆ ಬಾರಾ ಓ ಜಾಣ ... ಓ ಜಾಣ
No comments:
Post a Comment
Your valuable comments/suggestions are welcome